ಭಾನುವಾರ, ಅಕ್ಟೋಬರ್ 22, 2017

ಮಂಜರಿ ಖಟ್ಜು ತೆರೆದಿಟ್ಟ ದೇಶಭಕ್ತರ ಜಾತಕಗಳು


 ಭಾರತದಂತಹ ಜಾತಿ ಪ್ರಧಾನವಾದ ದೇಶದಲ್ಲಿ  ಧರ್ಮಗಳು ಅತ್ಯಂತ ಸೂಕ್ಷ್ಮವಾದ ವಿಷಯವಾಗಿರುವುದರಿಂದ  ಇವುಗಳ ವಿಶ್ಲೇಷಣೆ ಅಥವಾ ಯಾವ ಸಂದರ್ಭದಲ್ಲಿ ಇವುಗಳನ್ನು ಬಳಸಬೇಕು ಎಂಬ ಎಚ್ಚರಿಕೆ ಇರಬೇಕು.  ಎಲ್ಲಾ ರಂಗಗಳ ಮುಂಚೂಣಿಯಲ್ಲಿರುವ ನಾಯಕರಿಗೆ ಸೂಕ್ಷ್ಮತೆ ತಿಳಿದಿತ್ತು. ಜೊತೆಗೆ ಅನೇಕ ಧಾರ್ಮಿಕ ಮುಖಂಡರು, ಮಠಾಧೀಶರು,  ಸ್ವಯಂಘೋಷಿತ ದೇವಮಾನವರೆಂಬ ಸ್ವಾಮೀಜಿಗಳು ಧರ್ಮವನ್ನು ಮನುಷ್ಯನೊಬ್ಬನ ಔನ್ನತ್ಯಕ್ಕೆ ಹಾಗೂ ಸಮುದಾಯದ ಏಳಿಗೆಗೆ ಬಳಸಿಕೊಳ್ಳುತ್ತಿದ್ದರು. ಧರ್ಮ-ಧರ್ಮಗಳ ನಡುವೆ ಅನೇಕ ಭಿನ್ನಾಭಿಪ್ರಾಯಗಳಿದ್ದರೂ ಸಹ ಬಹು ಸಂಸ್ಕತಿಯ ನೆಲವಾದ ಭಾರತದ ನೆಲದಲ್ಲಿ ಒಂದು ರೀತಿಯ ಏಕರೂಪತೆ ಎದ್ದು ಕಾಣುತ್ತಿತ್ತು.
ಧರ್ಮವೆನ್ನುವುದು ಅತ್ಯಂತ ಸೂಕ್ಷ್ಮ ಮತ್ತು ಮನುಷ್ಯನೊಬ್ಬನ ಖಾಸಾಗಿ ನಂಬಿಕೆ ಅಥವಾ ನಡುವಳಿಕೆ ಎಂದು ನಂಬಿಕೊಂಡಿದ್ದ ಭಾರತದಲ್ಲಿ  ಬಹುತೇಕ ರಾಜಕೀಯ ಪಕ್ಷಗಳು ಮತ್ತು ನಾಯಕರು ಧರ್ಮವನ್ನು ಎಂದಿಗೂ ರಾಜಕೀಯದೊಂದಿಗೆ ಬೆರಸದೆ, ಅದನ್ನು ವೈಯಕ್ತಿಕ ಹಿತಾಸಕ್ತಿಗೆ ಬಳಸದೆ ಒಂದು ರೀತಿಯಲ್ಲಿ ನಿರ್ಧಿಷ್ಟ ಅಂತರವನ್ನು ಕಾಯ್ದುಕೊಂಡು ಬಂದಿದ್ದರು. ಆದರೆ, ಕಳೆದ ಕಾಲಶತಮಾನದ ಅವಧಿಯಲ್ಲಿ ಹಿಂದೂ ಧರ್ಮದ ರಕ್ಷಣೆ ಹೆಸರಿನಲ್ಲಿ, ಹಿಂದೂ ರಾಷ್ಟ್ರ ನಿರ್ಮಾಣ ನಮ್ಮ ಮೂಲಗುರಿ ಎಂದು ಹೇಳಿಕೊಳ್ಳುತ್ತಾ, ರಾಜಕೀಯಕ್ಕೆ ಧರ್ಮವನ್ನು ಮತ್ತು ಧರ್ಮಕ್ಕೆ ರಾಜಕೀಯವನ್ನು ಬೆರೆಸುವುದರ ಮೂಲಕ ಭಾರತದ ಬಹುಮುಖಿ ಸಂಸ್ಕತಿಗೆ ಅಪಾಯವನ್ನು  ಒಡ್ಡಲಾಗಿದೆ. ಜೊತೆಗೆ ಎಲ್ಲವನ್ನೂ, ಎಲ್ಲರನ್ನೂ ಏಕರೂಪತೆಗೆ ಒಗ್ಗಿಸಲು ಪ್ರಯತ್ನಿಸುತ್ತಿರುವ ವಿಶ್ವ ಹಿಂದೂ ಪರಿಷತ್, ರಾಷ್ರ್ರೀಯ ಸ್ವಯಂ ಸೇವಾ ಸಂಘಟನೆಗಳ ಇತ್ತೀಚೆಗಿನ ಕಾರ್ಯವೈಖರಿ ಮತ್ತು ಅವುಗಳ ಮರೆ ಮಾಚಿದ ಗೊತ್ತು ಗುರಿಗಳು ಧರ್ಮಾತೀತ ಹಾಗೂ ಜಾತ್ಯಾತೀತವಾಗಿ ಬದುಕುತ್ತಿರುವ ಪ್ರಜ್ಞಾವಂತ ನಾಗರೀಕರಲ್ಲಿ ಆತಂಕವನ್ನು ಸೃಷ್ಟಿ ಮಾಡಿವೆ.
ಸಂಘಟನೆಗಳು ಏನೇ ಹೇಳಿಕೊಳ್ಳಲಿ, ಅವುಗಳ ಕಾರ್ಯವೈಖರಿ ಮತ್ತು ಮರೆ ಮಾಚಿದ ಅಜೆಂಡಾಗಳನ್ನು ಸಾಕ್ಷಾಧಾರಗಳ ಸಮೇತ ದೇಶದ ಇತಿಹಾಸ ಹಾಗೂ ರಾಜಕೀಯ ತಜ್ಞರು ದಾಖಲಿಸುತ್ತಾ ಬಂದಿದ್ದಾರೆ. ಹಾಗಾಗಿ ದೇಶ ಭಕ್ತರ ಹುನ್ನಾರಗಳು ಪ್ರತಿ ಸಂದರ್ಭದಲ್ಲಿಯೂ ಅಂತರಾಷ್ಟ್ರೀಯ ಮಟ್ಟದಲ್ಲಿ ಅನಾವರಣಗೊಳ್ಳುತ್ತಾ ಬಂದಿವೆ. ವಿಷಯದಲ್ಲಿ ಇತಿಹಾಸ ತಜ್ಞರಾದ ರೋಮಿಲಾ ಥಾಪೂರ್, ಕೆ, ಎಂ. ಫಣಿಕ್ಕರ್, ಇರ್ಫಾನ್ ಹಬೀಬ್ ಮತ್ತು ಸಮಾಜಶಾಸ್ತ್ರಜ್ಞರಾದ ಆಶೀಷ್ ನಂದಿ ಹಾಗೂ ರಾಜಕೀಯ ತಜ್ಞೆಯಾಗಿರುವ ಡಾ.ಮಂಜರಿ ಖಟ್ಜು, ಹಾಗೂ ಮೃದುಲಾ ಮುಖರ್ಜಿ ಮತ್ತು ಸುಚೇತಾ ಮಹಾಜನ್ ರಂತಹ ಮಹನೀಯರಿಗೆ ಭಾರತದ ನಾಗರೀಕರು ಋಣಿಯಾಗಿರಬೇಕು.
2008 ರಲ್ಲಿ ಮೃದುಲಾ ಮುಖರ್ಜಿ ಮತ್ತು ಸುಚೇತಾ ಮಹಾಜನ್ ಇವರುಗಳು ದೇಶದ ಅನೇಕ ಇತಿಹಾಸ ತಜ್ಞರ ನೆರವಿನಿಂದಆರ್.ಎಸ್.ಎಸ್. ಸ್ಕೂಲ್ ಟೆಕ್ಟ್ಸ್ ಅಂಡ್ ಮರ್ಡರ್ ಆಫ್ ಮಹಾತ್ಮಎಂಬ ಅಪರೂಪದ ಕೃತಿಯನ್ನು ಸಂಪಾದಿಸಿದ್ದರು. ಉತ್ತರ ಭಾರತದಲ್ಲಿ ಬಿ.ಜೆ.ಪಿ. ಅಧಿಕಾರವಿರುವ ರಾಜ್ಯಗಳಲ್ಲಿ ಮತ್ತು ಆರ್.ಎಸ್.ಎಸ್. ದೇಶಾದ್ಯಂತ ನಡೆಸುತ್ತಿರುವ ಶಾಲೆಗಳ ಪಠ್ಯದಲ್ಲಿ ಇತಿಹಾಸವನ್ನು ತಿರುಚುವುದರ ಮೂಲಕ ಮಕ್ಕಳ ಮನಸ್ಸಿಗೆ ವಿಷವನ್ನು ತುಂಬುತ್ತಿರುವ ಬಗೆಯನ್ನು ಕೃತಿಯಲ್ಲಿ  ತಜ್ಞರು ಹಲವು ಸಾಕ್ಷಧಾರಗಳ ಮೂಲಕ ದಾಖಲಿಸಿದ್ದಾರೆ. ಅದೇ ರೀತಿಯಲ್ಲಿ ಮಹಾತ್ಮ ಗಾಂಧಿಯವರ ಹತ್ಯೆಯಲ್ಲಿ ವೀರ್ಸಾವರ್ಕರ್ ಪಾತ್ರ ಕುರಿತು ನಾಥೂರಾಂ ಗೂಡ್ಸೆಯ ವಕೀಲರ ಹೇಳಿಕೆಯಿಂದ ಹಿಡಿದು, ಕೆಂಪುಕೋಟೆಯ ಆವರಣದಲ್ಲಿ ನಡೆದ ವಿಚಾರಣೆಯ ಮಾಹಿತಿಗಳು ಮತ್ತು ಹತ್ಯೆ ಕುರಿತು ಬಾಂಬೆ ಪೋಲಿಸರು ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದ ಸುಮಾರು 1800 ಪುಟಗಳ ದಾಖಲೆಗಳಲ್ಲಿ ಅಪರೂಪದ ಅಂಕಿ ಅಂಶಗಳನ್ನು ಹೆಕ್ಕಿ ತೆಗೆದು ಸಂಘ ಪರಿವಾರದ ನಿಜವಾದ ಗೊತ್ತು ಗುರಿಗಳನ್ನು ವಿಶ್ಲೇóಷಣೆಗೆ ಒಳಪಡಿಸಿದ್ದಾರೆ. ಇದೀಗ ಅಂತಹದ್ದೇ ಅಧ್ಯಯನದಲ್ಲಿ ನಿರತರಾಗಿರುವ ಹಾಗೂ ಹೈದರಾಬಾದಿನ ವಿಶ್ವ ವಿದ್ಯಾನಿಲಯದಲ್ಲಿ  1992 ರಿಂದ ರಾಜಕೀಯ ಶಾಸ್ತ್ರದ ಪ್ರಾಧ್ಯಾಪಕಿಯಾಗಿರುವ ಡಾ. ಮಂಜುಖಟ್ಜು ಅವರು ಎರಡು ಮಹತ್ವದವಿಶ್ವ ಹಿಂದೂ ಪರಿಷತ್ ಅಂಡ್ ಇಂಡಿಯನ್ ಪೊಲಿಟಿಕ್ಸ್ಹಾಗೂಹಿಂದೂಯಿಸಂ ಡೆಮಾಕ್ರಸಿ”  ಎಂಬ ಕೃತಿಗಳನ್ನು ನಮ್ಮ ಮುಂದಿರಿಸಿದ್ದಾರೆ. ಕಳೆದ ಒಂದು ದಶಕದಿಂದ ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿಪತ್ರಿಕೆಗೆ ನಿರಂತರವಾಗಿ ಬರೆಯುತ್ತಿರುವ ಮಂಜರಿಯುವರು ಧರ್ಮ ಮತ್ತು ಜಾತಿಯ ನೆಲೆಗಳಾಚೆ ನಿಂತು ನಿರುದ್ವಿಗ್ನ ಸ್ಥಿತಿಯಲ್ಲಿ ಯೋಚಿಸುತ್ತಾ, ದೇಶದ ರಾಜಕೀಯ ಮತ್ತು ಸಾಮಾಜಿಕ ಸಂಗತಿಗಳನ್ನು ವಿಶ್ಲೇಷಿಸುವ ಪರಿ ನಿಜಕ್ಕೂ ಶ್ಲಾಘನೀಯವಾದುದು. ( ಇವರಿಗೂ ಮತ್ತು ಸದಾ ವಿವಾದಾತ್ಮಕ ಹೇಳಿಕೆ ನೀಡುವ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೆಯ ಖಟ್ಜು ಅವರಿಗೂ ಯಾವುದೇ ಸಂಬಂಧವಿಲ್ಲ)
ತಮ್ಮ ಮೊದಲ ಕೃತಿಯಲ್ಲಿ ವಿಶ್ವ ಹಿಂದೂ ಪರಿಷತ್ ಅಂಡ್ ಇಂಡಿಯನ್ ಪೊಲಿಟಿಕ್ಸ್ ಕೃತಿಯಲ್ಲಿ ವಿಶ್ವ ಹಿಂದೂ ಪರಿಷತ್ ಪ್ರಾರಂಭವಾದ 1964 ರಿಂದಲೂ ಅದರ ಹೆಜ್ಜೆಯ ಗುರುತುಗಳನ್ನು ದಾಖಲಿಸಿರುವ ಲೇಖಕಿ, 1985 ರಿಂದ ಶ್ರೀರಾಮನ ಹೆಸರನ್ನು ಮುಂಚೂಣಿಗೆ ತಂದು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವ ಯೋಜನೆಯ ಕನಸನ್ನು ಜನಸಾಮಾನ್ಯರ ಎದೆಯಲ್ಲಿ ಬಿತ್ತಿದ ಪರಿಯನ್ನು ಹಾಗೂ ಅಯೋಧ್ಯೆಯಲ್ಲಿ ನಡೆದ ಬಾಬರಿ ಮಸೀದಿ ಧ್ವಂಸದ ಪ್ರಕಟರಣದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಪದಾಧಿಕಾರಿಗಳು ಹಾಗೂ ಅವರುಗಳು ದೇಶದ ಸಾಧು ಮತ್ತು ಸಂತರ ಮೇಲೆ ಬೀರಿದ ಪ್ರಭಾವಗಳನ್ನು ದಾಖಲಿಸಿದ್ದಾರೆ. ಇದರ ಮುಂದುವರಿದ ಭಾಗವಾದ; ಎರಡನೇಯ ಅಧ್ಯಯನ ಕೃತಿಯಲ್ಲಿ ಅಂದರೆ, 2017 ರಲ್ಲಿ ಪ್ರಕಟವಾದ ಹಿಂದೂಯಿಸಂ ಡೆಮಾಕ್ರಸಿ ಕೃತಿಯಲ್ಲಿ 1992 ರಿಂದ 2013 ರವರೆಗೆ ರಾಮಮಂದಿರ ನಿರ್ಮಾಣದ ಯೋಜನೆಯನ್ನು ಜೀವಂತವಾಗಿಡಲು ವಿ.ಹೆಚ್,ಪಿ. ನಡೆಸಿದ ಹೋರಾದಿಂದ ಹಿಡಿದು, 2014 ಸಾರ್ವತ್ರಿಕ ಚುನಾವಣೆಯಲ್ಲಿ ಕೇಂದ್ರದಲ್ಲಿ ಬಿ.ಜೆ.ಪಿ. ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಧಾರ್ಮಿಕರ ಮುಖಂಡರನ್ನು ಸಂಸತ್ತಿಗೆ ಪ್ರತಿನಿಧಿಗಳಾಗಿ ಆಯ್ಕೆ ಮಾಡುವುದರ ಮೂಲಕ ಹಿಂದೂ ರಾಷ್ಟ್ರವಾದಿಗಳು ಅಧಿಕ ಸಂಖ್ಯೆಯಲ್ಲಿ ಇರುವಂತೆ ನೋಡಿಕೊಳ್ಳುವ ಕಾರ್ಯಯೋಜನೆಯನ್ನು ಬಣ್ಣಿಸಿದ್ದಾರೆ. ಯೋಗಿ ಆದಿತ್ಯನಾಥ್, ಸಾಕ್ಷಿ ಮಹಾರಾಜ್, ಉಮಾ ಭಾರತಿ ಹೋಗೆ ಹಲವು ಹೆಸರುಗಳನ್ನು ಮಂಜರಿಯವರು ಪ್ರಸ್ತಾಪಿಸಿದ್ದಾರೆ.
ಮೇಲು ನೋಟಕ್ಕೆ ಆರ್.ಎಸ್.ಎಸ್, ಮತ್ತು ವಿ.ಹೆಚ್,ಪಿ. ಎರಡೂ ಸಂಘಟನೆಗಳು ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಂಘಟನೆಗಳಂತೆ ಹಾಗೂ ಭಾರತೀಯ ಜನತಾ ಪಕ್ಷವು ( ಬಿ.ಜೆ.ಪಿ.) ರಾಜಕೀಯ ಸಂಘಟನೆಯಂತೆ ಕಂಡು ಬಂದರೂ ಸಹ ಮೂರು ಸಂಘಟನೆಗಳ ಹೃದಯ ಮತ್ತು ಮಿದುಳು ಒಂದೇ ಆಗಿದ್ದು, ಯೋಜಿತ ಗುರಿ ಕೂಡ ಒಂದೇ ಆಗಿದೆ ಎನ್ನುವ ಮಂಜರಿ ಖಟ್ಜು ಅವರು, ವಿಶ್ವ ಹಿಂದೂ ಪರಿಷತ್ ದೃಷ್ಟಿಕೋನದಲ್ಲಿ  ಭಾರತಕ್ಕೆ 1947 ರಲ್ಲಿ  ಸ್ವಾತಂತ್ರ್ಯ ಬಂದಿದ್ದರೂ ಸಹ, ಅದು ಹಿಂದೂಗಳಿಗೆ ಸ್ವಾತಂತ್ರ್ಯ ಸಿಕ್ಕಿಲ್ಲ. ಸಂಪೂರ್ಣ ಹಿಂದೂ ರಾಷ್ಟ್ರದ ನಿರ್ಮಾಣವಾಗಿ ರಾಮರಾಜ್ಯ ಸ್ಥಾಪನೆಯಾದಾಗ  ಮಾತ್ರ ಭಾರತದ ಹಿಂದೂಗಳಿಗೆ ಸ್ವಾತಂತ್ರ್ಯ ಸಿಗಲಿದೆ ಎಂಬ ಸಂಘ ಪರಿವಾರದ ಅಜೆಂಡಾವನ್ನು ಅರ್ಥಪೂರ್ಣವಾಗಿ ವಿಶ್ಲೇಷಿಸಿದ್ದಾರೆ. ಕಾರಣಕ್ಕಾಗಿ ವಿಶ್ವ ಹಿಂದೂ ಪರಿಷತ್ ದೇಶಾದ್ಯಂತ ನಡೆಸುತ್ತಿರುವ ಶಿಕ್ಷಣ ಸಂಸ್ಥೆ, ಆರೋಗ್ಯ ಸೇವಾ ಸಂಸ್ಥೆಗಳು, ಆಯೋಜಿಸುತ್ತಿರುವ ಮೇಳಗಳು, ಶಿಬಿರಗಳು, ಯಾತ್ರೆಗಳ ವಿವರನ್ನು ನೀಡುವುದರ ಜೊತೆಗೆ ಭಾರತದ ಮೇಲ್ವರ್ಗ ಮತ್ತು ಮಧ್ಯಮ ವರ್ಗದ ಮನ ಗೆದ್ದಿರುವ ಸಂಘ ಪರಿವಾರ ಇದೀಗ ಹಳ್ಳಿಗಳತ್ತ ಗಮನ ಹರಿಸಿ, ದಲಿತರು ಮತ್ತು ಆದಿವಾಸಿಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿರುವ ಕ್ರಮವನ್ನು ವಿವರಿಸಿದ್ದಾರೆ. ಸದಾ ಅನ್ಯ ಧರ್ಮಿಯರ ಮೇಲೆ ಕೆಂಡ ಕಾರುವುದು, ಅವರ ಆಚರಣೆಗಳನ್ನು ಬಹಿರಂಗವಾಗಿ ಖಂಡಿಸುವುದು ಹಾಗೂ ಅಧಿಕಾರದಿಂದ ದೂರ ಉಳಿದುಕೊಂಡಂತೆ ಇದ್ದರೂ ಸಹ ಆಳುವ ಸರ್ಕಾರದ ಮೇಲೆ ಒತ್ತಡ ಹೇರುವುದರ ಮೂಲಕ ಮಸೂದೆಗಳನ್ನು ಜಾರಿಗೆ ತರುವುದರ ಮೂಲಕ ಅನ್ಯ ಧರ್ಮಗಳು ಮತ್ತು ಸಂಸ್ಕತಿಯ ಮೇಲೆ ಅಧಿಕಾರ ಸ್ಥಾಪಿಸುವ ಹುನ್ನಾರವನ್ನು ಅಂಕಿ ಅಂಶಗಳು ಮತ್ತು ಘಟನೆಗಳ ಮೂಲಕ ಓದುಗರ ಮುಂದಿಟ್ಟಿದ್ದಾರೆ.
ಡಾ. ಮಂಜರಿ ಖಟ್ಜು ಅವರ ಈ ಕೃತಿಗಳು ಕೇವಲ ಸಂಘ ಪರಿವಾರಕ್ಕೆ ಮಾತ್ರವಲ್ಲ, ಜಾತ್ಯಾತೀತ ಅಥವಾ ಧರ್ಮಾತೀತ ಎಂದು ಹೇಳಿಕೊಳ್ಳುವ ಎಲ್ಲಾ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆಯ ಸಂದೇಶದಂತೆ ಇವೆ. ಜಾತಿ ಮತ್ತು ಧರ್ಮವನ್ನು ನಂಬಿ ರಾಜಕಾರಣ ಮಾಡುತ್ತಿರುವ ಇಂದಿನ ರಾಜಕೀಯ ಸನ್ನಿವೇಶದಲ್ಲಿ ಧರ್ಮದ ಅಮಲನ್ನು ಅಥವಾ ಉನ್ಮಾದವನ್ನು ಜನ ಮಾನಸದಲ್ಲಿ  ನಿರಂತರ ಕಾಯ್ದುಕೊಳ್ಳುವುದು ಕಷ್ಟ ಎಂಬುದು ಮನವರಿಕೆಯಾಗುತ್ತದೆ. ಏಕೆಂದರೆ, ಇದೊಂದು ರೀತಿಯಲ್ಲಿ ಹುಲಿಯ ಮೇಲಿನ ಸವಾರಿ ಇದ್ದಂತೆ. ವಿಷದ ಹಾವಿಗೆ ಹಾಲೆರೆದ ಮಾತ್ರಕ್ಕೆ ಅದು ನಮ್ಮನ್ನು ಕಚ್ಚುವುದಿಲ್ಲ ಎಂದು ನಂಬುವುದು ಅವಿವೇಕತನವಾಗುತ್ತದೆ. ಇದಕ್ಕೆ ಉದಾಹರಣೆಯಾಗಿ 2014 ರ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಏರಿದ ನಂತರ ಪ್ರಧಾನಿ ನರೇಂದ್ರ ಮೋದಿಯವರು ನಡೆಸುತ್ತಿರುವ ಕಸರತ್ತುಗಳು ಈಗ ನಮ್ಮೆದುರು ಸಾಕ್ಷಿಯಾಗಿವೆ.

( ಕರಾವಳಿ ಮುಂಜಾವು ಪತ್ರಿಕೆಯಲ್ಲಿ ಪ್ರಕಟವಾದ “ಜಗದಗಲ” ಅಂಕಣ ಬರಹ)

ಬುಧವಾರ, ಅಕ್ಟೋಬರ್ 18, 2017

ನೇಪಾಳದ ಜೀವಂತ ದೇವತೆಗಳ ಕ್ರೌರ್ಯದ ಕಥನ


ಜಗತ್ತಿನ ಏಕೈಕ ಪರಿಪೂರ್ಣವಾದ ಹಿಂದೂ ರಾಷ್ಟ್ರ ಎನಿಸಿರುವ ನಮ್ಮ ನೆರೆಯ ನೇಪಾಳದಲ್ಲಿ ಇಂದಿಗೂ ಆಚರಣೆಯಿರುವ ಪ್ರಾಣಿ ಬಲಿಯ ಪದ್ಧತಿ ಮತ್ತು ಋತುಮತಿಯಾಗದಿರುವ ಹೆಣ್ಣುಮಗಳನ್ನು ಜೀವಂತೆ ದೇವತೆಯಾಗಿ ಆಯ್ಕೆ ಮಾಡಿ ಅವಳನ್ನು ಕುಮಾರಿ ಎಂಬ ಹೆಸರಿನಲ್ಲಿ ಪೂಜಿಸುವ ಕ್ರಮ ಇವೆಲ್ಲವೂ ಇಪ್ಪತ್ತೊಂದನೆಯ ಶತಮಾನದ ನಾಗರೀಕ ಜಗತ್ತು ವಿಸ್ಮಯ ಪಡುವುದರ ಜೊತೆಗೆ ನಾಚಿಕೆಯಿಂದ ತಲೆ ತಗ್ಗಿಸುವಂತೆ ಮಾಡಿದೆ.
ಕಳೆದ ಸೆಪ್ಟಂಬರ್ ಕೊನೆಯ ವಾರದಲ್ಲಿ ನೇಪಾಳದ ಕಠ್ಮಂಡು ನಗರದಲ್ಲಿ ಅಲ್ಲಿನ ಜನತೆ ಮೂರು ವರ್ಷದ ತ್ರಿಷ್ಣಾ ಶಾಕ್ಯ ಎಂಬ ಹೆಣ್ಣು ಮಗಳು ನೂತನ ಕುಮಾರಿಯಾಗಿ ಅರ್ಥಾತ್ ಜೀವಂತ ದೇವತೆಯಾಗಿ ಆಯ್ಕೆ ಮಾಡಿಕೊಂಡಿದೆ. ಇನ್ನು ಮುಂದೆ ಈಕೆ  ಋತುಮತಿಯಾಗುವವರೆಗೂ ಕಠ್ಮಂಡು ನಗರದ ಕೇಂದ್ರಭಾಗದಲ್ಲಿರುವ ದೇವಸ್ಥಾನದ ಅರಮನೆಯಲ್ಲಿ ಜೀವಂತ ದೇವತೆಯಾಗಿದ್ದುಕೊಂಡು, ತನ್ನನ್ನು ಕಾಣಲು ಬರುವ ಭಕ್ತರಿಗೆ ಹರಸಬೇಕು. ತಂದೆ,ತಾಯಿ, ಒಡಹುಟ್ಟಿದ ಸಹೋದರರನ್ನು ತ್ಯೆಜಿಸಿ ಬಂದಿರುವ ಈಕೆಗೆ ತನ್ನ ಜೊತೆ ಇರಲು ಇಬ್ಬರು ಸಹವರ್ತಿಗಳನ್ನು ಅಂದರೆ, ಗೆಳತಿಯರನ್ನು ಆಯ್ಕೆ ಮಾಡಿಕೊಳ್ಳಬಹುದು. ಒಂದು ವರ್ಷದಲ್ಲಿ ಹದಿಮೂರು ಬಾರಿ ತಾನು ಹುಟ್ಟಿ ಬೆಳೆದ ಮನೆಗೆ ಹೋಗಿಬರಬಹುದು. ಆದರೆ, ದೇವತೆಯೆಂದು ಪರಿಗಣಿಸಿರುವ ಕುಮಾರಿಯ ಪಾದಗಳು ಯಾವ ಕಾರಣಕ್ಕೂ ಭೂಮಿಯನ್ನು ಸ್ಪರ್ಶಿಸಕೂಡದು. ಇಂತಹ ವಿಚಿತ್ರ ಆಚರಣೆ ಇರುವ ನೇಪಾಳದಲ್ಲಿ ಬಾಲಕಿಯರನ್ನು ಆಯ್ಕೆ ಮಾಡಿಕೊಳ್ಳುವುದು ಜಗತ್ತಿನ ಅತಿ ದೊಡ್ಡ ದಾರ್ಶನಿಕ ಗೌತಮ ಬುದ್ಧ ಹುಟ್ಟಿ ಬೆಳೆದ ಶಾಕ್ಯ ಎಂಬ ಬುಡಕಟ್ಟು ಸಮುದಾಯದಿಂದ ಎಂಬುದು ಅಚ್ಚರಿಯ ಸಂಗತಿ.
ಇಂತಹ ಪದ್ಧತಿಯು ಹದಿಮೂರನೆಯ ಶತಮಾನದಿಂದ ಆಚರಣೆಗೆ ಬಂದಿತು ಎಂದು ಹೇಳಲಾಗಿದೆ. ಮೊದಲು ಪ್ರತಿ ವರ್ಷ ಕೆಲವು ಸಮುದಾಯಗಳಲ್ಲಿ ಪ್ರತಿ ವರ್ಷ ನವರಾತ್ರಿ ಅಥವಾ ದುರ್ಗಾ ಪೂಜೆಯ ಸಂದರ್ಭಗಳಲ್ಲಿ ಒಂದು ದಿನದ ಮಟ್ಟಿಗೆ ಬಾಲಕಿಯರನ್ನು ದೇವತೆಯನ್ನಾಗಿಸಿ ಮನೆ ಮನೆಗಳಲ್ಲಿ ಪೂಜಿಸುವ ಪದ್ಧತಿ ಇತ್ತು. ಆದರೆ, ಹದಿನೇಳೆನಯ ಶತಮಾನದಿಂದ ರಾಜಮನೆತದಿಂದ ವರ್ಷ ಪೂರ್ತಿ ದೇವತೆಯಾಗಿ ಪೂಜಿಸುವ ಪದ್ಧತಿ ಆಚರಣೆಗೆ ಬಂದಿದೆ ಎಂದು ಇತಿಹಾಸದ ದಾಖಲೆಗಳು ಹೇಳುತ್ತವೆ. ಶಾಕ್ತ ಪಂಥದದೇವಿ ಮಹಾತ್ಮೆಎಂಬ ಪುರಾಣ ಗ್ರಂಥದಲ್ಲಿ ಕುರಿತು ಒಂದಿಷ್ಟು ಮಾಹಿತಿಗಳು ದೊರೆಯುತ್ತವೆ. ಆದರೆ, ಹನ್ನೇರೆಡನೆಯ ಶತಮಾನದಿಂದ ಹದಿನೇಳನೆಯ ಶತಮಾನದವರೆಗೆ ನೇಪಾಳವನ್ನು ಮಲ್ಲ ಸಾಮ್ರಾಜ್ಯದ ಅವಧಿಯಲ್ಲಿ ರೀತಿಯ ಜೀವಂತ ದೇವತೆಗಳ ಪೂಜಾ ಪದ್ಧತಿ ಆಚರಣೆಗೆ ಬಂದಿರುವುದು ದಾಖಲಾಗಿದೆ. ಆದರೆ, ಇದಕ್ಕೆ ನೀಡಿರುವ ಕಾರಣಗಳು ಮಾತ್ರ ಹಲವು ರೂಪದಲ್ಲಿದ್ದು ಮಲ್ಲ ಸಾಮ್ರಾಜ್ಯದ ಹಲವು ದೊರೆಗಳ ಹೆಸರಿನೊಂದಿಗೆ ತಳುಕು ಹಾಕಿಕೊಂಡಿವೆ.
ಒಂದು ಕಥೆಯ ಪ್ರಕಾರ ದೊರೆ ಜಯಪ್ರಕಾಶ ಮಲ್ಲ ಎಂಬ ದೊರೆಯ ಅರಮನೆಗೆ ಸಾಮಾನ್ಯ ಹೆಣ್ಣಿನ ರೂಪದಲ್ಲಿ ಬರುತ್ತಿದ್ದ ಟೆಲಜು ಎಂಬ ದೇವತೆಯು ಪ್ರತಿ ರಾತ್ರಿ ರಾಜನೊಂದಿಗೆ ಪಗಡೆಯಾಟದಲ್ಲಿ ನಿರತಳಾಗುತ್ತಿದ್ದಳು. ಸಂಗತಿಯನ್ನು ಯಾರಿಗೂ ಹೇಳಬಾರದೆಂದು ದೇವತೆ ರಾಜನಿಗೆ ಷರತ್ತು ವಿಧಿಸಿದ್ದಳು. ಒಂದು ರಾತ್ರಿ ರಾಣಿಯು ತನ್ನ ಪತಿಯನ್ನು ಹಿಂಬಾಲಿಸಿಕೊಂಡು ಬಂದು ಅಂತಃಪುರದಲ್ಲಿ ದೃಶ್ಯವನ್ನು ನೋಡಿದ ನಂತರ ಸಿಟ್ಟಿಗೆದ್ದ ದೇವತೆಯು ಅಲ್ಲಿನ ಸಾಮ್ರಾಜ್ಯವನ್ನು ತೊರೆದು ಹೊರಟು ಹೋದಳು. ನಂತರ ದೊರೆಯು ದೇವತೆಯನ್ನು ಸಾಮ್ರಾಜ್ಯವನ್ನು ತೊರೆಯದಂತೆ  ಪ್ರಾರ್ಥಿಸಿಕೊಂಡಾಗ, “ ನೀನು ಶಾಕ್ಯ ಕುಲದ ಒಬ್ಬ ಬಾಲಕಿಯನ್ನು ಆಯ್ಕೆ ಮಾಡಿಕೊಂಡು ಪೂಜಿಸು, ನಾನು ಆಕೆಯ ದೇಹದಲ್ಲಿ ಪ್ರವೇಶ ಪಡೆದು ಜೀವಿಸುತ್ತೇನೆಎಂದು ಅಭಯವಿತ್ತಳಂತೆ.
ಇನ್ನೊಂದು ಕಥೆಯ ಪ್ರಕಾರ, ಮಲ್ಲ ಸಾಮ್ರಾಜ್ಯದ ತ್ರಿಲೋಕ ಮಲ್ಲ ಎಂಬ ರಾಜನು ಪ್ರತಿ ರಾತ್ರಿ ಸ್ತ್ರೀ ರೂಪದ ಟೆಲಜು ಎಂಬ ದೇವತೆಯು ಜೊತೆ ಪಗಡೆಯಾಟದಲ್ಲಿ ನಿರತನಾಗಿರುತ್ತಿದ್ದ. ಒಂದು ರಾತ್ರಿ ಅವಳ ಜೊತೆ ಬಲತ್ಕಾರ ಸಂಭೋಗ ಮಾಡಿದ್ದರಿಂದ ದೇವತೆಯು ಮುನಿಸಿಕೊಂಡು ಸಾಮ್ರಾಜ್ಯವನ್ನು ತೊರೆದು ಹೋದಳು. ರಾಜನು ತಾನು ಮಾಡಿದ ತಪ್ಪನ್ನು ಮನ್ನಿಸು ಎಂದು ದೇವತೆಯಲ್ಲಿ ಪ್ರಾರ್ಥಿಸಿ ಕೊಂಡಾಗ, ಮುಂದೆ ಇಂತಹ ಅನಾಹುತಗಳು ನಡೆಯಬಾರದು ಎಂದು ತೀರ್ಮಾನಿಸಿದ ದೇವತೆಯು ಋತುಮತಿಯಾಗ ಬಾಲಕಿಯನ್ನು ನೀನು ಪೂಜಿಸು, ನಾನು ಅವಳಲ್ಲಿ ಜೀವಿಸಿರುತ್ತೇನೆ. ಆಕೆಯು ಋತುವ್ಮತಿಯಾದ ನಂತರ ಅವಳನ್ನು ತ್ಯೆಜಿಸಿ ಹೊರ ಹೋಗುತ್ತೇನೆ ಎಂದು ತಿಳಿಸಿದಳಂತೆ. ಅದರಂತೆ ಋತುಮತಿಯಾಗದ ಬಾಲಕಿಯರನ್ನು ಜೀವಂತ ದೇವತೆಯಾಗಿ ಪೂಜಿಸುವ ಆಚರಣೆ ನೇಪಾಳದಲ್ಲಿ ಜಾರಿಗೆ ಬಂದಿತು ಎಂದು ಹೇಳಲಾಗುತ್ತಿದೆ. ನೇಪಾಳದ ಹಿಂದುಗಳು ಮತ್ತು ಅಲ್ಲಿನ ಬೌದ್ಧ ಧರ್ಮಿಯರು ಕುಮಾರಿ ಎಂದು ಕರೆಯಲ್ಪಡುವ ಜೀವಂತ ದೇವತೆಯರನ್ನು ಪೂಜಿಸುತ್ತಾರೆ. ಆದರೆ. ನೆರೆಯ ಟಿಬೆಟ್ ಬೌದ್ಧ ಧರ್ಮದ ಅನುಯಾಯಿಗಳು ಇಂತಹ ಆಚರಣೆ ಮತ್ತು ನಂಬಿಕೆಗಳಿಂದ ದೂರವಾಗಿದ್ದು, ಬುದ್ಧನ ಪರಮ ಅನುಯಾಯಿಗಳಾಗಿ ಬೌದ್ಧ ಧರ್ಮಕ್ಕೆ  ನಿಷ್ಠೆಯಿಂದ ಇದ್ದಾರೆ.

ನೇಪಾಳದಲ್ಲಿ ಜೀವಂತ ದೇವತೆಯಾಗಿ ಬಾಲಕಿಯನ್ನು ಆಯ್ಕೆ ಮಾಡುವಾಗ ಹಲವಾರು ಕಟ್ಟು ನಿಟ್ಟಿನ ನಿಯಮಗಳಿವೆ. ಕುರಿತು ಒಂದು ಶೋಧನಾ ಸಮಿತಿಯನ್ನು ರಚಿಸಲಾಗುತ್ತದೆ. ಸಮಿತಿಯ ಸದಸ್ಯರು ಪ್ರಾಥಮಿಕ ಹಂತದಲ್ಲಿ ಹಲವು ಬಾಲಕಿಯರನ್ನು ಆಯ್ಕೆ ಮಾಡಿಕೊಂಡು ಅವರ ಹುಟ್ಟು ಮತ್ತು ಜಾತಕ ಹಾಗೂ ತಂದೆ ತಾಯಿ ಹಾಗೂ ಕೌಟುಂಬಿಕ ಹಿನ್ನಲೆಯನ್ನು ಪರಿಶೀಲಿಸುತ್ತಾರೆ. ಕುಮಾರಿಯಾಗುವ ಬಾಲಕಿಯು ಯಾವುದೇ ವಿಧವಾದ ಕಾಯಿಲೆ ಅಥವಾ ಸೊಂಕು ರೋಗಗಳಿಂದ ಮುಕ್ತವಾಗಿರಬೇಕು, ಆಕೆಯ ಜೀವಿತದಲ್ಲಿ ಒಮ್ಮೆಯು ದೇಹದಿಂದ ಗಾಯದ ರೂಪದಲ್ಲಿ ರಕ್ತ ನೆಲಕ್ಕೆ ಚೆಲ್ಲಿರಬಾರದು, ಆಕೆಯ ಕುತ್ತಿಗೆ ಶಂಕುವಿನ ಆಕಾರದಲ್ಲಿ ಇರಬೇಕು, ದೇಹ ಆಲದ ಮರದಂತೆ, ಕಣ್ಣುಗಳು ಹಸುವಿನ ಕಣ್ಣಿನ ಆಕಾರದಲ್ಲಿ, ತೊಡೆಗಳು ಜಿಂಕೆಯ ತೊಡೆಗಳಂತೆ, ಎದೆಯ ಸಿಂಹದ ಎದೆಯ ರೂಪದಲ್ಲಿ ಮತ್ತು ಧ್ವನಿಯು ಹಂಸ ಪಕ್ಷಿಯ ರೂಪದಲ್ಲಿ ಇರಬೇಕು. ಆಕೆಯ ಬಾಯಿಯ ಎರಡು ದವಡೆಗಳಲ್ಲಿ ಕನಿಷ್ಠ ಇಪ್ಪತ್ತು ಹಲ್ಲುಗಳಿರಬೇಕು, ಕಾರಣಕ್ಕಾಗಿ ಆಯ್ಕೆಯಾಗುವ ಬಾಲಕಿಯನ್ನು ನಗ್ನಗೊಳಿಸಿ, ಆಕೆಯ ಗುಪ್ತಾಂಗದಿಂದ ಹಿಡಿದು, ದೇಹದ ವಿವಿಧ ಅಂಗಗಳನ್ನು ಕೂಲಂಕುಶವಾಗಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ.
ಇಂತಹ ಒಟ್ಟು ಮುವತ್ತಾರು ಪರೀಕ್ಷೆಗಳನ್ನು ಗೆದ್ದು ಬಂದ ಬಾಲಕಿಗೆ ದೇವತೆಯ ಪಟ್ಟವನ್ನು ಕಟ್ಟುಲಾಗುತ್ತದೆ. ಬಾಲಕಿಯು ಋತುಮತಿಯಾದ ಕೂಡಲೇ ಆಕೆಯನ್ನು ದೇವತೆಯ ಸ್ಥಾನದಿಂದ ಕೆಳಕ್ಕಿಳಿಸಲಾಗುತ್ತದೆ. 2008 ರಿಂದ 2014 ರವರೆಗೆ ಮತಿನಾ ಶಾಕ್ಯ ಎಂಬಾಕೆ ಜೀವಂತ ದೇವತೆಯಾಗಿದ್ದಳು. 2014 ರಿಂದ 2017 ರವ ಆಗಸ್ಟ್ ವರೆಗೆ ಪಟನ್ ಕುಮಾರಿ ಎಂಬಾಕೆ ದೇವತೆಯಾಗಿದ್ದು, ಈಗ ಸ್ಥಾನವನ್ನು ತ್ರಿಷ್ಣಾ ಶಾಕ್ಯ ಎಂಬ ಮೂರು ವರ್ಷದ ಬಾಲಕಿ ಅಲಂಕರಿಸಿದ್ದಾಳೆ. ದೇಗುಲದ ಸಮೀಪದಲ್ಲಿ ಇರುವ ರಾಜ್ ಘರ್ ಎಂಬ ನಿವಾಸದಲ್ಲಿ ಇಂತಹ ಜೀವಂತ ದೇವತೆಗಳು ವಾಸವಾಗಿದ್ದುಕೊಂಡು, ರಾಜಮನೆತನದ ಪರಿವಾರದ ಸದಸ್ಯರು ಸೇರಿದಂತೆಭಕ್ತರಿಗೆ ಪ್ರತಿದಿನ ದರ್ಶನ ನೀಡುತ್ತಾರೆ. ಜೀವಂತ ದೇವತೆಗಳ ವಯಸ್ಸಿಗೆ ಅನುಗುಣವಾಗಿ ಇವರನ್ನು ವಿವಿಧ ಹೆಸರಿನಲ್ಲಿ ಕರೆಯಲಾಗುತ್ತದೆ.
ಒಂದನೆಯ ವಯಸ್ಸಿನಲ್ಲಿ ಸಂಧ್ಯಾ, ಎರಡನೆಯ ವಯಸ್ಸಿನಲ್ಲಿ ಸರಸ್ವತಿ, ಮೂರನೆಯ ವಯಸ್ಸಿನಲ್ಲಿ ತ್ರಿದಮೂರ್ತಿ, ನಾಲ್ಕನೆಯ ವಯಸ್ಸಿನಲ್ಲಿ ಕಾಳಿಕಾ, ಐದನೇಯ ವಯಸ್ಸಿಗೆ, ಸುಭಂಗಾ, ಆರನೇ ವಯಸ್ಸಿಗೆ ಉಮಾ, ಏಳನೆಯ ವಯಸ್ಸಿಗೆ ಮಾಲಿನಿ, ಎಂಟಕ್ಕೆ ಕುಚ್ಛಿಕ, ಒಂಬತ್ತಕ್ಕೆ ಕಲಾ ಸಂದರ್ಭಹಾಗೂ ಹತ್ತನೆಯ ವಯಸ್ಸಿಗೆ ಅಪರಾಜಿತ, ಹನ್ನೊಂದನೆಯ ವಯಸ್ಸಿಗೆ ರುದ್ರಣಿ, ಹನ್ನೆರೆಡನೇ ವಯಸ್ಸಿನಲ್ಲಿ ಭೈರವಿ, ಹದಿಮೂರಕ್ಕೆ ಮಹಾಲಕ್ಷ್ಮಿ, ಹದಿನಾಲ್ಕಕ್ಕೆ ಪಿತಾದಾಯಿನಿ, ಹದಿನೈದಕ್ಕೆ ಕ್ಷೇತ್ರಾಗ್ಯ ಎಂತಲೂ  ಮತ್ತು ಹದಿನಾರನೆಯ ವಯಸ್ಸಿನಲ್ಲಿ ಅಂಬಿಕಾ ಎಂತಲೂ ಕರೆಯಲಾಗುತ್ತದೆ. ಆದರೆ, ಸಾಮಾನ್ಯವಾಗಿ ಜೀವಂತ ದೇವತೆಯರುಕುಮಾರಿಯರುಎಂಬ ಹೆಸರಿನಲ್ಲಿ ನೇಪಾಳದಲ್ಲಿ  ಜನಪ್ರಿಯರಾಗಿದ್ದಾರೆ. ಇವರು ಋತುಮತಿಯಾಗಿ ದೇವತೆಯ ಸ್ಥಾನದಿಂದ ಕೆಳಗಿಳಿದ ನಂತರ ಸಾಮಾನ್ಯರಂತೆ ತಮ್ಮ ಕುಟುಂಬದ ಸದಸ್ಯರ ಜೊತೆ ಬದುಕುತ್ತಾರೆ. ಆದರೆ, ವಿವಾಹವಾಗಿ ದಾಂಪತ್ಯದ ಬದುಕು ನಡೆಸುವಂತಿಲ್ಲ. ಮಾಜಿ ಕುಮಾರಿಯರಿಗೆ ದೇವಸ್ಥಾನದ ವತಿಯಿಂದ ಮಾಸಿಕವಾಗಿ ಕೇವಲ ಐವತ್ತು ರೂಪಾಯಿಗಳನ್ನು ಗೌರವ ವೇತನ ನೀಡಲಾಗುತ್ತಿತ್ತು. ಇತ್ತೀಚೆಗೆ ಇದನ್ನು ಸ್ವಲ್ಪ ಮಟ್ಟಿಗೆ ಹೆಚ್ಚಿಸಲಾಗಿದೆ. ಮಾಜಿ ಕುಮಾರಿಯರು ಇತರೆ ಪೂಜೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ದಕ್ಷಿಣೆಯ ರೂಪದಲ್ಲಿ ಸಿಗುವ ಅಲ್ಪ ಸ್ವಲ್ಪ ಹಣದಲ್ಲಿ ಬದುಕುತ್ತಾರೆ.
ಕುಮಾರಿಯಾಗಿ ಆಯ್ಕೆಯಾದ ಬಾಲಕಿಯನ್ನು ದೇವತೆಯ ಸ್ಥಾನಕ್ಕೇರಿಸುವ ದಿನ ನಡೆಯುವ ಆಚರಣೆಯು ಅತ್ಯಂತ ಕ್ರೌರ್ಯ ಮತ್ತು ಭೀಕರತೆಯಿಂದ ಕೂಡಿರುತ್ತದೆ. ದಿನ ಬಾಲಕಿಗೆ ಸ್ನಾನ ಮಾಡಿಸಿ, ಹೊಸ ಉಡಿಗೆಯನ್ನು ತೊಡಿಸಿ, ಆಕೆಯ ಹಣೆಯ ಮೇಲೆ ವಿಭೂತಿಯ ಹಾಗೆ ಹಳದಿ ಪಟ್ಟೆಯನ್ನು ಬಳಿದು ಅದರ ನಡುವೆ ಕಣ್ಣಿನ ಚಿತ್ರವೊಂದನ್ನು ಬಿಡಿಸಲಾಗುತ್ತದೆ. ಅದು ದೇವಿಯ ಮೂರನೆಯ ಕಣ್ಣು ಎಂದು ಬಿಂಬಿಸಲಾಗುತ್ತದೆ. ದಿನ ದೇವತೆಯ ತೃಪ್ತಿಗಾಗಿ ನಡು ಮಧ್ಯರಾತ್ರಿ 108 ಕೋಣಗಳು, ಮೇಕೆಗಳು, ಕೋಳಿಗಳು, ಬಾತುಕೋಳಿಗಳು ಮತ್ತು 108 ಮೊಟ್ಟೆಯನ್ನು ಬಲಿಕೊಡಲಾಗುತ್ತದೆ. ನಂತರ ರಕ್ತದ ಓಕುಳಿಯ ನಡುವೆ ಸಾಲಾಗಿ ಜೋಡಿಸಿಟ್ಟ ಕೋಣ, ಮೇಕೆ, ಕೋಳಿ ಗಳ ರುಂಡಗಳ ನಡುವೆ ಹೊಸದೇವತೆಯು ನಡೆದು ಸಾಗಬೇಕು. ಆಕೆಯ ಪ್ರಾಣಿಬಲಿ, ರಕ್ತ ಇತ್ಯಾದಿ ಸಂಗತಿಗಳ ಕುರಿತಂತೆ ಹೆದರಬಾರದು ಎಂಬ ಕಾರಣಕ್ಕಾಗಿ ಆಚರಣೆಯನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದು ದೇವಸ್ಥಾನದ ಮುಖ್ಯ ಆರ್ಚಕ ಹೇಳುತ್ತಾನೆನಂತರ ಆಕೆಯನ್ನು ರಾಜಘರ್ ಎಂಬ ನಿವಾಸದ ಕೊಠಡಿಯಲ್ಲಿ ಸದಾ ಸಣ್ಣಗೆ ಉರಿಯುವ ಎರಡು ಹಣತೆಗಳ ನಡುವೆ ಕೂರಿಸಲಾಗುತ್ತದೆ. ಬಾಲಕಿ ದೇವತೆಯ ಸ್ಥಾನಕ್ಕೇರಿದ ನಂತರ ಅವಳ ಭವಿಷ್ಯದ ಬದುಕು ಒಂದು ರೀತಿಯಲ್ಲಿ ಮುಚ್ಚಿಹೋಗುತ್ತದೆ. ಆಕೆ ಶಿಕ್ಷಣ, ಸಹಜವಾದ ಬಾಲ್ಯದ ಆಟ-ಪಾಠ ಇವುಗಳಿಂದ ವಂಚಿತಳಾಗುತ್ತಾಳೆ.
ನೇಪಾಳದಲ್ಲಿ 2008 ರವರೆಗೆ ಅರಸೊತ್ತಿಗೆಯ ಆಳ್ವಿಕೆ ಜಾರಿಯಲ್ಲಿತ್ತು. ದೊರೆ ಬೀರೆಂದ್ರ ಹಾಗೂ ಆತನ ಕುಟುಂಬದ ಸದಸ್ಯರು ಕಗ್ಗೊಲೆಯಾದ ನಂತರ; ಅಲ್ಲಿನ ರಾಜಪ್ರಭುತ್ವ ಕೊನೆಗೊಂಡು, ಪ್ರಥಮಬಾರಿಗೆ ಮಾವೋವಾದಿಗೆ ನೇತೃತ್ವದ ಪ್ರಜಾಪ್ರಭುತ್ವ ವ್ಯವಸ್ಥೆಯ ಸರ್ಕಾರ ಅಧಿಕಾರಕ್ಕೆ ಬಂದಿತು. ಆನಂತರವೂ ಇಂತಹ ಅಮಾನುಷ ಪದ್ಧತಿ ಜಾರಿಯಲ್ಲಿರುವುದು ವರ್ತಮಾನದ ದುರಂತವೆಂದು ಬಣ್ಣಿಸಬಹುದು. ಈಗಾಗಲೇ, ಮಕ್ಕಳ ಹಕ್ಕುಗಳ ಸಂಘಟನೆಯ ಕಾರ್ಯಕರ್ತರು ಮತ್ತು ಪ್ರಾಣಿ ದಯಾ ಸಂಘದ ಕಾರ್ಯಕರ್ತರು ಇದರ ವಿರುದ್ಧ ಧ್ವನಿ ಎತ್ತಿದ್ದಾರೆ.
ಇವೆಲ್ಲವುಗಳಿಂತ ನೋವಿನ ಸಂಗತಿಯೆಂದರೆ, ಎರಡೂವರೆ ಸಾವಿರ ವರ್ಷಗಳ ಹಿಂದೆ ಕ್ರಿಸ್ತಪೂರ್ವ ಭಾರತದಲ್ಲಿ ಇಂತಹ ಪ್ರಾಣಿಬಲಿ, ಮೌಡ್ಯ, ಯಜ್ಞ ಇತ್ಯಾದಿಗಳ ಬಗ್ಗೆ ಧ್ವನಿ ಎತ್ತಿ ಲೋಕಕ್ಕೆ ಹೊಸ ಬೆಳಕಿನ ಮಾರ್ಗವನ್ನು ತೋರಿದ ಬುದ್ಧನು ಹುಟ್ಟಿ ಬೆಳೆದ ನಾಡಿನಲ್ಲಿ, ( ನೇಪಾಳದ ಕಠ್ಮಂಡು ಸಮೀಪದ ಕಪಿಲವಸ್ತು) ಜೊತೆಗೆ  ಆತನ ಬುಡಕಟ್ಟು ಸಮುದಾಯದ ಶಾಕ್ಯರ ಕುಲದಲ್ಲಿ ಇಂತಹ ಅನಿಷ್ಠ ಆಚರಣೆ ಜಾರಿಯಲ್ಲಿರುವುದು; ಗೌತಮ ಬುದ್ಧನಿಗೆ ಮಾಡುತ್ತಿರುವ ಅಪಮಾನವೆಂದರೆ, ತಪ್ಪಾಗಲಾರದು.

( ಕರಾವಳಿ ಮುಂಜಾವು ದಿನಪತ್ರಿಕೆಯ ದೀಪಾವಳಿ ವಿಶೇಷ ಸಂಚಿಕೆಗಾಗಿ  ಬರೆದಲೇಖನ)