ಭಾನುವಾರ, ಆಗಸ್ಟ್ 11, 2013

ಎಮು ಪಕ್ಷಿಗಳ ಸಾಕಣೆಯಲ್ಲಿ ಹೈರಾಣಾದವರು

ದೇಶದ ಗ್ರಾಮೀಣ ಭಾಗದ ರೈತರನ್ನು ಮತ್ತು ಮುಗ್ಧಜನರನ್ನು ವಂಚಿಸಲು ಸಮಾಜದಲ್ಲಿ ಹೊಸ ಹೊಸ ಆಯುಧಗಳು ಉತ್ಪತ್ತಿಯಾಗುತ್ತಲೇ ಇವೆ. ಈ ಆಯುಧಗಳು ಎಷ್ಟು ಸೂಕ್ಷ್ಮವಾಗಿವೆ ಎಂದರೆ, ಗಾಯದ ಗುರುತಾಗಲಿ, ನೋವಾಗಲಿ, ಸೋರುವ ನೆತ್ತರಿನ ಗುರುತಾಗಲಿ ಸಿಗದಂತೆ ನಮ್ಮನ್ನು ಸದ್ದಿಲ್ಲದೆ, ಸುದ್ಧಿಮಾಡದೆ,  ಕೊಲ್ಲಬಲ್ಲವು. ಇವುಗಳ ಜೊತೆಗೆ ಮನುಷ್ಯರ ಆಸೆ, ಆಕಾಂಕ್ಷೆಯನ್ನು ಮತ್ತು ಬಡತನವನ್ನು ಬಂಡವಾಳ ಮಾಡಿಕೊಂಡು ವಂಚಿಸುವ ನೂತನ ಜಗತ್ತೊಂದು ಪ್ರತಿ ವರ್ಷ ನಮ್ಮೆದುರು ಹೊಸ ರೂಪ ತಾಳುತ್ತಿದೆ. ಅಂತಹ ರೂಪಗಳಲ್ಲಿ ಈಗ ಎಮು ಎಂಬ ಪಕ್ಷಿಗಳ ಸಾಕಾಣಿಕೆಯ ಕರ್ಮಕಾಂಡವೂ ಒಂದು.
ಕಳೆದ ಹತ್ತು ವರ್ಷಗಳ ಹಿಂದೆ ಕರ್ನಾಟಕದ ರೈತರು ಸೆರಿದಂತೆ ಕೇರಳ ಮತ್ತು ತಮಿಳುನಾಡು ರೈತರು ವೆನಿಲಾ ಬೆಳೆ ತೆಗೆದು ಕೈ ಸುಟ್ಟಿಕೊಂಡರು. ಈ ವಂಚನೆಯ ಜಗತ್ತು ಮರೆಯಾಗುವ ಮುನ್ನವೇ ಹೊಸ ಜಗತ್ತು ನಮ್ಮೆದುರು ಸೃಷ್ಟಿಯಾಗಿದೆ. ವರ್ತಮಾನದ ಬದುಕಿನಲ್ಲಿ ಗಾಳಿ ಸುದ್ಧಿಯನ್ನು ನಂಬುವ ಜನರ ತಲೆಗೆ ಟೋಪಿ ಹಾಕುವ ಕಾಯಕ ಕಷ್ಟವೇನಲ್ಲ. ಈಗ ಇದೇ ರೈತರು ದಕ್ಷಿಣ ಭಾರತದಲ್ಲಿ ಎಮು ಪಕ್ಷಿಗಳ ಸಾಕಾಣಿಕೆಯ ಕೇಂದ್ರ ಸ್ಥಾಪಿಸಿ ಬರೋಬ್ಬರಿ ಸುಮಾರು ಐದು ಸಾವಿರ ಕೋಟಿ ಹಣ ಕಳೆದುಕೊಂಡಿದ್ದಾರೆ.

ಕಳೆದ ವರ್ಷ ಇದೇ ಆಗಸ್ಟ್ ತಿಂಗಳಿನಲ್ಲಿ ನಾನು ಐದು ದಿನಗಳ ಕಾಲ ತಮಿಳುನಾಡು ಪ್ರವಾಸದಲ್ಲಿದ್ದೆ. ಮಹದೇಶ್ವರ ಬೆಟ್ಟದ ಮಾರ್ಗವಾಗಿ, ಮೆಟ್ಟೂರು, ಭವಾನಿ ನೋಡಿಕೊಂಡು, ಈರೋಡಿನಲ್ಲಿ ದ್ರಾವಿಡ ಚಳವಳಿಯ ಸಂಸ್ಥಾಪಕ ಪೆರಿಯಾರ್ ರಾಮಸ್ವಾಮಿಯವರ ಮನೆಗೆ ಬೇಟಿ ನೀಡಿ, ನಂತರ ಪಳನಿಯತ್ತ ಪ್ರಯಾಣಿಸುತ್ತಿದ್ದೆ. ಬಸ್ ನಲ್ಲಿ ಪ್ರಯಾಣಿಸುತ್ತಿರುವಾಗ ಪ್ರತಿ ಹಳ್ಳಿ. ಪಟ್ಟಣಗಳಲ್ಲಿ ತಮ್ಮ ಮನೆಯ ಬದಿಯಲ್ಲಿ  ಬಿಸಿಲಿಗೆ ತೆಂಗಿನ ಗರಿಯ ಚಪ್ಪರ ಹಾಕಿ 10 ರಿಂದ 20 ಪಕ್ಷಿಗಳನ್ನು ಸಾಕುತ್ತಿರುವುದು ಕಂಡು ಬಂತು. ನನಗೆ ಆಸ್ಟ್ರೀಚ್ ಪಕ್ಷಿ ಮತ್ತು ಟರ್ಕಿ ಕೋಳಿಗಳ ಪರಿಚಯವಿತ್ತು. ಆದರೆ, ಇವುಗಳಿಗಿಂತ ಭಿನ್ನವಾಗಿ ಪಕ್ಷಿಗಳಿರುವುದನ್ನು ನೋಡಿ ಸಹಜ ವಾಗಿ ಕುತೂಹಲವುಂಟಾಗಿತ್ತು. ಪಳನಿಯಿಂದ ಮಧುರೈ ನಗರಕ್ಕೆ ಹೊರಟಾಗ ಮತ್ತೆ ಇದೇ ರೀತಿಯ ಪಕ್ಷಿಗಳನ್ನು ನೋಡಿ ತಮಿಳುನಾಡಿನಲ್ಲಾಗಿರುವ ಹೊಸ ಬದಲಾವಣೆಯನ್ನು ಅರಿಯುವ ಕುತೂಹಲ ಉಂಟಾಯಿತು. ಮಧುರೈ ನಗರದಲ್ಲಿ ನಾನು ಸಾಮಾನ್ಯವಾಗಿ ಉಳಿದುಕೊಳ್ಳುವ ಹೋಟೆಲ್ ಅಭಿಮಾನ್ ನ ಮೇನೇಜರ್ ಮಾಣಿಕ್ಯಂ ನನ್ನು ಕುತೂಹಲದಿಂದ ಈ ಬಗ್ಗೆ ವಿಚಾರಿಸಿದೆ. ಆತ ನಮ್ಮ ಉದಯ ಟಿ.ವಿ. ಮಾತೃಸಂಸ್ಥೆಯಾದ ಸನ್ ಟಿ.ವಿ.ಯ ಛಾನಲ್ ಗಳಿಗೆ ಮಧುರೈ ಜಿಲ್ಲೆಯ ವಿತರಕ ಹಾಗಾಗಿ ಆತನಿಗೆ ಅಲ್ಲಿನ ಗ್ರಾಮೀಣ ಪ್ರದೇಶದ ಅನುಭವ ದಟ್ಟವಾಗಿದೆ.. ನನ್ನ ಮಾತು ಕೇಳಿದೊಡನೆ ನಗತೊಡಗಿದ ಮಾಣಿಕ್ಯಂ ಹೇಳಿದ ಮಾತುಗಳು ಮರ್ಮಕ್ಕೆ ತಾಗುವಂತಿದ್ದವು. “ ಸಾರ್, ಚೈನ್ ಸಿಸ್ಟಂ ಯೋಜನೆಗಳು ಮತ್ತು ನಕಲಿ ಮಾಲುಗಳ ತಯಾರಿಕೆಯಲ್ಲಿ ತಮಿಳಿನ ಜನ ದೇಶಕ್ಕೆ ಪ್ರಸಿದ್ಧರು. ಆದರೆ,  ಈಗ ನೋಡಿ, ತಮಿಳರ ಹಣೆಗೆ ನೆರೆಯ  ಆಂದ್ರದ ಜನ ಎಮು ಪಕ್ಷಿಗಳ ನೆಪದಲ್ಲಿ ಉಂಡೆ ನಾಮ ಹಚ್ಚುತ್ತಿದ್ದ್ದಾರೆ” ಎಂದು ನಗಾಡಿದ. ಅವನ ಮಾತುಗಳಲ್ಲಿ ಯಾವುದೇ ಅತಿಶಯೋಕ್ತಿ ಇರಲಿಲ್ಲ.
ಆಸ್ಟ್ರೇಲಿಯಾ ಮೂಲದ ಎಮು ಪಕ್ಷಿ ನಮ್ಮ ಕೋಳಿಯ ಹಾಗೆ ಹಾರಲಾರದ ಪ್ರಾಣಿ. ಇದರ ಮಾಂಸದಲ್ಲಿ ಅತಿ ಕಡಿಮೆ ಕೊಬ್ಬಿನ ಅಂಶವಿರುವುದರಿಂದ ಆ ದೇಶದಲ್ಲಿ ಇದರ ಮಾಂಸಕ್ಕೆ ಅಪಾರವಾದ ಬೇಡಿಕೆಯಿದೆ. ಜೊತೆಗೆ ಇದರ ಚರ್ಮಕ್ಕೂ ಬೇಡಿಕೆಯಿದ್ದು, ಎಮು ಪಕ್ಷಿಯ ಮಾಂಸದ ಕೊಬ್ಬಿನ ಅಂಶದಿಂದ ತಯಾರಾದ ಎಣ್ಣೆಯನ್ನು ಸೌಂದರ್ಯ ಸಾಧನಗಳ ತಯಾರಿಕೆಯಲ್ಲಿ ಬಳಸಲಾಗುತ್ತಿದೆ.
ಭಾರತಕ್ಕೆ 1996 ರಲ್ಲಿ ಆಂಧ್ರದ ಕಾಕಿನಾಡ ಜಿಲ್ಲೆಯ ಮೂಲಕ ಪ್ರಥಮವಾಗಿ ಎಮು ಪಕ್ಷಿ ಪರಿಚಯವಾಯಿತು. ಭಾರತದಲ್ಲಿ ದಿನೇ ದಿನ ಮಾಂಸಕ್ಕೆ ಬೇಡಿಕೆ ಹೆಚ್ಚಾಗುತ್ತಿದ್ದು ಈ ಪಕ್ಷಿಗಳನ್ನು ಮಾಂಸದ ಉದ್ದೇಶಕ್ಕೆ, ಟರ್ಕಿ ಕೋಳಿಗಳ ರೀತಿಯಲ್ಲಿ ಅಥವಾ ಮೊಲಗಳ ಹಾಗೆ ಬೆಳಸುವುದರ ಮೂಲಕ. ಎಮು ಪಕ್ಷಿಗಳ ಮಾಂಸದ  ಬಗ್ಗೆ ಪ್ರಚಾರ ಮಾಡಿದ್ದರೆ ಯಾವುದೆ ಅನಾಹುತ ಸಂಭವಿಸುತ್ತಿರಲಿಲ್ಲ. ಆದರೆ ತಮಿಳುನಾಡು ಮತ್ತು ಆಂಧ್ರದಲ್ಲಿ ಸೃಷ್ಟಿಯಾದ ಅನೇಕ ಬೋಗಸ್ ಕಂಪನಿಗಳು, ಎಮು ಪಕ್ಷಿಗಳನ್ನು ಆಸ್ಟೇಲಿಯಾದಿಂದ ತಂದು ಪರಿಚಯಿಸುವ ಬದಲು, ಅವುಗಳ ಸಂತತಿಯನ್ನು ಅಭಿವೃದ್ದಿಪಡಿಸಲು  ಇಲ್ಲಿನ ರೈತರಿಗೆ ಆಮೀಷ ತೋರಿಸತೊಡಗಿದವು.
ರೈತರು, ಕಂಪನಿಗೆ ಒಂದೂವರೆ ಲಕ್ಷ ರೂಪಾಯಿ ಠೇವಣಿ ಇಟ್ಟು , ಮೂರು ಜೊತೆ ಎಮು ಪಕ್ಷಿಗಳನ್ನು ಸಾಕಿದರೆ, ತಿಂಗಳಿಗೆ ಆರು ಸಾವಿರ ಹಣ ಮತ್ತು ವರ್ಷಕ್ಕೆ ಇಪ್ಪತ್ತು ಸಾವಿರ ಬೋನಸ್ ನಿಡುವುದಾಗಿ ಕಂಪನಿಗಳು ಪ್ರಚಾರ ಮಾಡಿದವು. ಕಂಪನಿಗಳ ಪ್ರಚಾರಕ್ಕೆ ಜನ ಮುಗಿಬಿದ್ದರು. ಎಮು ಪಕ್ಷಿಗಳ ಮೊಟ್ಟೆಗಳನ್ನು ತಲಾ ಎಂಟನೂರುಗಳಿಗೆ ಕಂಪನಿಗಳು ಆರಂಭದಲ್ಲಿ ಕೊಳ್ಳತೊಡಗಿದವು. ಎರಡು ಮೂರು ವರ್ಷಗಳ ಅವಧಿಯ ನಂತರ  ಎಮು ಪಕ್ಷಿಗಳನ್ನು ಮತ್ತು ಮೊಟ್ಟೆಗಳನ್ನು ವಾಪಸ್ ಕೊಳ್ಳಲಾಗುವುದು ಹಾಗೂ ಠೇವಣಿ ಹಣ ಹಿಂತಿರುಗಿಸಲಾಗುವುದು ಎಂಬ ಕಂಪನಿಗಳ ಮಾತು ನಂಬಿದ ಜನ ಮುಗಿಬಿದ್ದು ಒಂದೂವರೆ ಲಕ್ಷದಿಂದ ಹತ್ತು ಲಕ್ಷದವರೆಗೆ ಬಂಡವಾಳ ಹೂಡಿ ಎಮು ಸಾಕಾಣಿಕೆಯಲ್ಲಿ ತೊಡಗಿದರು. ಮೊದಲು ತಮಿಳುನಾಡಿನ ಈರೋಡ್ ಜಿಲ್ಲೆಯ ಪೆರೆಂದುರೈ ಎಂಬ ಊರಿನಲ್ಲಿ ಸುಸಿ ಎಮು ಪಾರ್ಮ್ ಎಂಬ ಬೋಗಸ್ ಕಂಪನಿಯಿಂದ ಆರಂಭವಾದ ಈ ಹುಚ್ಚು ಸಾಂಕ್ರಮಿಕ ರೋಗದಂತೆ ಎಲ್ಲೆಡೆ ಹಬ್ಬಿತು. ಹೀಗೆ ತಮಿಳುನಾಡು, ಆಂಧ್ರ, ಕೇರಳ, ಕರ್ನಾಟಕದಲ್ಲಿ ಸುಮಾರು 20 ಸಾವಿರ ಕುಟುಂಬಗಳು ಎಮು ಸಾಕಾಣಿಕೆಯಲ್ಲಿ ಬಂಡವಾಳ ತೊಡಗಿಸಿ ಇದೀಗ  ಅತಂತ್ರವಾಗಿವೆ.
ದಕ್ಷಿಣ ಕರ್ನಾಟಕದ ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ ಜಿಲ್ಲೆಗಳಿಗೆ ನೆರೆಯ ತಮಿಳುನಾಡಿನ ಧರ್ಮಪುರಿ ಜಿಲ್ಲೆಯಿಂದ ಎಮು ಸಾಕಾಣಿಕೆ ಪರಿಚಯವಾದರೆ, ಉತ್ತರ ಕರ್ನಾಟಕದ ಬಳ್ಳಾರಿ, ಕೊಪ್ಪಳ, ಹಾವೇರಿ ಮತ್ತು ಬೆಳಗಾವಿ ಮುಂತಾದ ಜಿಲ್ಲೆಗಳಿಗೆ ಆಂಧ್ರ ಕಂಪನಿಗಳಿಂದ ಎಮು ಸಾಕಾಣಿಕೆಯ ಪ್ರವೃತ್ತಿ  ಹರಡಿದೆ. ಈಗ ಮೊಟ್ಟೆಗಳು ಮಾರಾಟವಾಗತ್ತಿಲ್ಲ. ಎಮು ಪಕ್ಷಿಗಳಿಗೆ ಬೇಡಿಕೆಯಿಲ್ಲ, ಕಂಪನಿಗಳು ತಮ್ಮ ನಾಮ ಫಲಕಗಳನ್ನು ಮಗುಚಿಹಾಕಿ ರಾತ್ರೋ ರಾತ್ರಿ ಕಾಣೆಯಾಗಿವೆ. ಈಗ ರೈತರು ತಾವು ಸಾಕಿರುವ ನೂರಾರು ಎಮು ಪಕ್ಷಿಗಳಿಗೆ ಆಹಾರ ಒದಗಿಸಲಾಗಿದೆ ಹೈರಾಣಾಗಿದ್ದಾರೆ.


ಎಮು ಪಕ್ಷಿಗಳ ಮಾಂಸ ಬಳಕೆ ಕುರಿತಂತೆ ವ್ಯವಸ್ತಿತ ಪ್ರಚಾರ ಮಾಡಿದ್ದರೆ, ಇಂತಹ ದುರಂತ ಸಂಭವಿಸುತ್ತಿರಲಿಲ್ಲ ಎಂದು ಚೆನ್ನೈ ನಗರದ ಮದ್ರಾಸ್ ವಿ.ವಿ.ಯ ಕುಕ್ಕುಟ ವಿಜ್ಙಾನ ವಿಭಾಗದ ಮುಖ್ಯಸ್ಥರಾದ ಡಾ.ಎನ್. ರಾಮಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.  ಎಮು ಪಕ್ಷಿಗಳ ಅವೈ ಜ್ಙಾನಿಕ ಸಾಕಾಣಿಕೆಯಿಂದ ದಕ್ಷಿಣ ಭಾರತದಲ್ಲಿ ಸುಮಾರು ಐದು ಸಾವಿರ ಕೋಟಿ ಹಣವನ್ನು ಗ್ರಾಮೀಣ ಭಾಗದ ಮುಗ್ಧ ಜನರು ಕಳೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ