ಗುರುವಾರ, ಆಗಸ್ಟ್ 15, 2013

ಹೆದ್ದಾರಿಗಳೆಂಬ ನರಕದ ಹಾದಿಗಳು


ಒಂದು ದೇಶದ ಆಧುನಿಕತೆಯ ಅಭಿವೃದ್ಧಿಯ ಮಂತ್ರಗಳು ಎಂದರೆ, ರಾಷ್ಟ್ರೀಯ ಹೆದ್ದಾರಿ, ಸೇತುವೆಗಳು ಮತ್ತು ನಗರಾಭಿವೃದ್ಧಿ. ಇದು ಪಾಶ್ಚಿಮಾತ್ಯ ಜಗತ್ತು ತೃತೀಯ ಜಗತ್ತಿನ ರಾಷ್ಟ್ರಗಳಿಗೆ ಹೇಳಿಕೊಟ್ಟಿರುವ ಆಧುನಿಕತೆಯ ಪಾಠ. ಏಕೆಂದರೆ, ಅಭಿವೃದ್ಧಿಯ ಹೆಸರಿನಲ್ಲಿ ಕೈಗೊಳ್ಳುವ ಕಾಮಗಾರಿಗಳು, ರಾಜಕಾರಣಿಗಳಿಗೆ ಸದಾ ಹಾಲು ಕರೆಯುವ ಹಸುಗಳಾದರೆ, ರಾಜಕೀಯ ಪಕ್ಷಗಳಿಗೆ ಬಂಡವಾಳವಿಲ್ಲದೆ, ದೇಣಿಗೆಯ ಹೆಸರಿನಲ್ಲಿ ಲಾಭ ತಂದುಕೊಡುವ ಉದ್ದಿಮೆಗಳು. ಹಾಗಾಗಿ ದೇಶದಲ್ಲಿ ಬರಗಾಲವಿರಲಿ, ಅತೀವೃಷ್ಟಿಯಿರಲಿ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮಾತ್ರ ನಿರಂತರ ನಡೆಯುತ್ತಿರಬೇಕು. ಉಳ್ಳವರು ಕುಡಿದ ನೀರು ಹೊಟ್ಟೆಯಲ್ಲಿ ಅಲುಗಾಡದ ಹಾಗೆ ದೇಶದ ರಸ್ತೆಗಳು ಇರಬೇಕು.
 ಸರ್ಕಾರಗಳು ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳಿಂದ ಎಷ್ಟು ಮಂದಿಗೆ ಉಪಯೋಗವಾಗುತ್ತದೆ ಎಂಬುದು ಮುಖ್ಯವಲ್ಲ, ಆಳುವ ಸರ್ಕಾರಗಳಿಗೆ ಮತ್ತು ಪಕ್ಷಗಳಿಗೆ  ಯೋಜನೆ ಎಷ್ಟು ಹಣ ತಂದುಕೊಡುತ್ತದೆ ಎಂಬುದು ಮುಖ್ಯವಾಗಿದೆ. ಇಂತಹ ಅವಿವೇಕದ ನಿರ್ಧಾರಗಳಿಂದ ಜಗತ್ತಿನ ಜೀವರಾಶಿಗಳಿಗೆ, ಪರಿಸರಕ್ಕೆ, ಹಳ್ಳಿಗಳಿಗೆ, ಅಲ್ಲಿನ ಜೀವಗಳಿಗೆ ಆಗುತ್ತಿರುವ ತೊಂದರೆಗಳಿಗೆ ಕಿವಿಗೊಡುವ ಮನುಷ್ಯರನ್ನು ನಾವೀಗ ಈ ಜಗತ್ತಿನಲ್ಲಿ ಹುಡುಕಬೇಕಾದ ಸ್ಥಿತಿ. ಕಳೆದ ಹದಿನೈದು ವರ್ಷಗಳಲ್ಲಿ ಭಾರತದ ಮಹಾನಗರಗಳನ್ನು ಜೋಡಿಸುವ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ದೇಶಾದ್ಯಂತ ನೆಲಸಮವಾದ ಮರಗಳಿಗೆ, ಆ ಮರಗಳನ್ನು ಆಶ್ರಯಿಸಿದ್ದ ಪ್ರಾಣಿ ಪಕ್ಷಿ ಸಂಕುಲಗಳ ದುರಂತದ ಕಥೆಗೆ ಲೆಕ್ಕವಿಟ್ಟವವರಿಲ್ಲ. ಇಂತಹ  ಪ್ರಶ್ನೆಯೇ ಈಗ ಮೂರ್ಖತನದ ಅಥವಾ ಸಿನಿಕತನದ ವರ್ತನೆಯೆನೋ ಎಂಬಂತಾಗಿದೆ.

ನಾನು ಪದೇ ಪದೇ ಓಡಾಡುತ್ತಿರುವ ಬಂಗಳೂರು- ಮುಂಬೈನ ರಾಷ್ಟ್ರೀಯ ಹೆದ್ದಾರಿ ನಂಬರ್ ನಾಲ್ಕರಲ್ಲಿ ಮರಗಳಿಲ್ಲದ ರಸ್ತೆಯಲ್ಲಿ ಸಂಚರಿಸುವಾಗ ನರಕದ ರಸ್ತೆಯಲ್ಲಿ ಅಥವಾ ಸ್ಮಶಾನದಲ್ಲಿ ನಿರ್ಮಿಸಿರುವ ರಸ್ತೆಯಲ್ಲಿ ಹೋಗುತ್ತಿದ್ದೇನೆ ಎಂಬ ಅನುಭವವಾಗುತ್ತದೆ. ಗಂಟೆಗಟ್ಟಲೆ ಗೆಳೆಯರ ಕಾರಿನಲ್ಲಿ ಪ್ರಯಾಣಿಸುವಾಗ ಹುಬ್ಬಳ್ಳಿಯಿಂದ ಬೆಂಗಳೂರಿನುದ್ದಕ್ಕೂ, ಇಲ್ಲವೆ, ಧಾರವಾಡದಿಂದ ಮುಂಬೈನಗರದುದ್ದಕ್ಕೂ   ನೆರಳಿನಲ್ಲಿ ವಿಶ್ರಮಿಸಿಕೊಳ್ಳಲು ಮರಗಳಿಲ್ಲ, ನಾವು ಹೆದ್ದಾರಿಯಲ್ಲಿರುವ ಡಾಬಾಗಳನ್ನು ಆಶ್ರಯಿಸಬೇಕು. ಇದು, ರಾಷ್ಟ್ರೀಯ ಹೆದ್ದಾರಿ ನಂಬರ್ ನಾಲ್ಕರ ಕಥೆ ಮಾತ್ರವಲ್ಲ. ದೇಶದ ಎಲ್ಲಾ ಹೆದ್ದಾರಿಗಳ ಕಥೆಯೂ ಹೌದು. ಹೆದ್ದಾರಿಗಳ ನಡುವೆ ಇದ್ದ ಹಳ್ಳಿಗಳ ಹೃದಯವನ್ನು ಸೀಳಿ ಎರಡು ಭಾಗ ಮಾಡುವುದರ ಜೊತೆಗೆ ಹಳ್ಳಿಯ ಜನರ ಮುಕ್ತ ಓಡಾಟಕ್ಕೆ ನಿರ್ಭಂಧ ಹೇರುವ ತಡೆಗೋಡೆ ನಿರ್ಮಿಸಿಸಲಾಗಿದೆ. ರಸ್ತೆಯ ಈ ಬದಿಯ ಮನೆಯಿಂದ ಆ ಬದಿಯ ಮನೆಗೆ ತೆರಳಲು ಕಿಲೋಮೀಟರ್ ಸುತ್ತಿ ಬಳಸಿ ಬರಬೇಕಾದ ಸ್ಥಿತಿ. ಹಾಗಾಗಿ ರಸ್ತೆಯಂಚಿನ ಗ್ರಾಮಗಳ ಚಹರೆಗಳೆಲ್ಲಾ ಬದಲಾಗಿದ್ದು, ಅಸ್ತಿತ್ವ ಕಳೆದುಕೊಂಡ ಹಳ್ಳಿಗಳು ಈಗ ಬರೀ ಅಸ್ತಿಪಂಜರಗಳಾಗಿವೆ.
1998 ರಲ್ಲಿ ಎನ್.ಡಿ.ಎ. ಮೈತ್ರಿಕೂಟದ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ದೇಶದ ಮಹಾನಗರಗಳಾದ ದೆಹಲಿ-ಕೊಲ್ಕತ್ತ, ಮುಂಬೈ-ಚೆನ್ನೈ ನಗರಗಳನ್ನು ಹೆದ್ದಾರಿ ಮೂಲಕ ಬೆಸೆಯಲು ಆರಂಭಿಸಿದ ಸುವರ್ಣ ಚತುಷ್ಪಥ ರಸ್ತೆಯ ಈ ಯೋಜನೆ  ವಿನ್ಯಾಸ ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಹೋಯಿತು. 30 ಸಾವಿರ ಕೋಟಿಯ ನಾಲ್ಕು ರಸ್ತೆಗಳ 70 ಸಾವಿರದ 934 ಕಿಲೋಮೀಟರ್ ರಸ್ತೆಯನ್ನು ದೇಶಾದ್ಯಂತ ಅಭಿವೃದ್ಧಿ ಪಡಿಸಲು ನಿರ್ಧರಿಸಲಾಯಿತು. ಎರಡನೇ ಹಂತದಲ್ಲಿ ಉತ್ತರದ ಶ್ರೀನಗರದಿಂದ ದಕ್ಷಿಣದ ಕನ್ಯಾಕುಮಾರಿಯವರೆಗೆ, ಮತ್ತು ಪೂರ್ವದ ಅರುಣಾಚಲ ಪ್ರದೇಶದಿಂದ ಪಶ್ಚಿಮದ ಗುಜರಾತಿನ ಪೋರ್ ಬಂದರ್ ವರೆಗೆ ಹೆದ್ದಾರಿ ರಸ್ತೆಗಳನ್ನು ಬೆಸೆಯಲು ಯೋಜನೆ ಕೈಗೊಳ್ಳಲಾಯಿತು. ಈ ಯೋಜನೆಯ ರಸ್ತೆ ಅಗಲೀಕರಣದ ನೆಪದಲ್ಲಿ ದೇಶಾದ್ಯಂತ ನೆಲಕ್ಕುರುಳಿದ ಶತಮಾನಗಳ ಇತಿಹಸವಿದ್ದ ಮರಗಳ ಮಾರಣಹೋಮ ಅಭಿವೃದ್ಧಿಯ ಹೆಸರಿನಲ್ಲಿ ನಡೆದು ಹೋಯಿತು. ರಸ್ತೆಯಂಚಿನಲ್ಲಿದ್ದ ಮರಗಳು ಕೇವಲ ನೆರಳು ನೀಡುವ ಮರಗಳಷ್ಟೇ ಆಗಿರಲಿಲ್ಲ, ಅವುಗಳಿಂದ ಪರಿಸರಕ್ಕೆ ಆಗುತ್ತಿದ್ದ ಲಾಭ, ಮರಗಳಲ್ಲಿ ಗೂಡು ಕಟ್ಟಿ ಆಶ್ರಯಿಸಿದ್ದ ಪಕ್ಷಿ ಸಂಕುಲ, ಹಣ್ಣುಗಳಿಗಾಗಿ ಮರಗಳತ್ತ ಬರುತ್ತಿದ್ದ ಪ್ರಾಣಿ ಪಕ್ಷಿಗಳು ( ಮಂಗ, ಅಳಿಲು, ಗಿಣಿ, ಕೊಕ್ಕರೆ, ಹದ್ದು, ಮೈನಾ, ಮುಂತಾದ ಜೀವ ಸಂಕುಲಗಳು) ಇವುಗಳ ಕುರಿತು ಯಾರೂ ಯೋಚಿಸಲಿಲ್ಲ. ಇಂತಹ ರಸ್ತೆಗಳ ನಿರ್ಮಾಣದಿಂದ ವಾಹನಗಳ ಮುಖಾ ಮುಖಿ ಡಿಕ್ಕಿಯಲ್ಲಿ ಸಂಭವಿಸುತ್ತಿದ್ದ ಅಪಘಾತಗಳು ತಪ್ಪಿದವು ಆದರೆ ಇತರೆ ಅಪಘಾತಗಳ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಸುಗಮ ಸಂಚಾರದಿಂದ  ಸಮಯ ಉಳಿತಾಯ ಎನ್ನುವುದು ಈಗ  ಕೇವಲ ಭ್ರಮೆ.ಯಾಗಿದೆ.
ಈ ಮೊದಲು ಹುಬ್ಬಳ್ಳಿಯಿಂದ ಬೆಂಗಳೂರಿಗೆ ಕಾರಿನಲ್ಲಿ ಒಂಬತ್ತು ಗಂಟೆಯ ಪ್ರಯಾಣವಾಗಿತ್ತು. (ಬಸ್ ನಲ್ಲಿ ಹತ್ತು ಗಂಟೆ) ಈಗ ಸುಮಾರು ಏಳು ಗಂಟೆ ಅವಧಿಗೆ ಇಳಿದಿದೆ.  ನೆಲಮಂಗಲ ದಿಂದ ಮುವತ್ತು  ಕಿಲೋಮೀಟರ್ ದೂರದ ಬೆಂಗಳೂರು ಹೃದಯ ಭಾಗದ ಮೆಜಸ್ಷಿಕ್ ತಲುಪಲು ಎರಡು ಗಂಟೆ ಅವಧಿ ಬೇಕು. ಐದು ಗಂಟೆಯಲ್ಲಿ 395 ಕಿ.ಮಿ. ಚಲಿಸುವ ಪ್ರಯಾಣಿಕ,ನಂತರ ಎರಡು ಗಂಟೆಯಲ್ಲಿ ಕೇವಲ 30 ಕಿ.ಮಿ. ಚಲಿಸುವ ಒತ್ತಡಕ್ಕೆ ಸಿಲುಕುತ್ತಾನೆ. ಸಮಯದ ಉಳಿತಾಯದಲ್ಲಿ ಸಿಕ್ಕ ಲಾಭಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು ಎಂಬ ಸಂಗತಿ ನಮ್ಮ ಅರಿವಿಗೆ ಬರುವುದಿಲ್ಲ. ಏಕೆಂದರೆ, ಇದರ ನಡುವೆ ಹೆದ್ದಾರಿ ಶುಲ್ಕ ಎಂಬ ಮೈ ಚರ್ಮ ಸುಲಿಯುವ ಪದ್ಧತಿಯೊಂದು ಜಾರಿಗೆ ಬಂದಿದೆ. ಹುಬ್ಬಳ್ಳಿಯಿಂದ ಬೆಂಗಳೂರಿಗೆ ಕನಿಷ್ಟ 10 ಕಡೆ ನಾವು ಒಂದುಸಾವಿರ ರೂಪಾಯಿ ಶುಲ್ಕ ಪಾವತಿಸಬೇಕು. ಡೀಸಲ್ ಗೆ ಒಂದೂವರೆ ಸಾವಿರವಾದರೆ, ರಸ್ತೆ ಶುಲ್ಕಕ್ಕೆ ಒಂದು ಸಾವಿರ  ಇದು ಆಳುವ ಸರ್ಕಾರಗಳು ನಮ್ಮ ಅರಿವಿಗೆ ಬಾರದಂತೆ ನಮ್ಮನ್ನು ಸುಲಿಯುವ ಬಗೆ.



ದೆಹಲಿ- ಕೊಲ್ಕತ್ತ ನಡುವಿನ 1465 ಕಿ.ಮಿ. ದೂರದ ಗ್ರಾಂಡ್ ಟ್ರಕ್ ರೋಡ್ (ಜಿ.ಟಿ.ರೋಡ್) ಎಂಬ ಇತಿಹಾಸ ಪ್ರಸಿದ್ಧ ರಸ್ತೆಯಿದೆ. 1772ರಲ್ಲಿ ಬ್ರಿಟೀಷರ ಈಸ್ಟ್ ಇಂಡಿಯ ಕಂಪನಿಗೆ ನೆರವಾಗಲು, ಕೊಲ್ಕತ್ತದಿಂದ ದೆಹಲಿವರೆಗೆ ಮೊಗಲ್ ದೊರೆ ಶೇರ್ ಷಾ ನಿರ್ಮಾಣ ಮಾಡಿದ ಈ ರಸ್ತೆ, ಕೊಲ್ಕತ್ತ- ಬಾರ್ತಿ- ವಾರಣಾಸಿ, ಅಲಹಾಬಾದ್ ಕಾನ್ಪುರ ಮಥುರ-ಆಗ್ರಾ. ಹರ್ಯಾಣ  ಮೂಲಕ ದೆಹಲಿಯನ್ನು ಕೂಡುತ್ತದೆ. ರಾಷ್ಟ್ರೀಯ ಹೆದ್ದಾರಿ ನಂಬರ 2 ಹೆಸರಿನ ಈ ರಸ್ತೆಯ ಅಗಲೀಕರಣಕ್ಕಾಗಿ ಸುಮಾರು 18 ಲಕ್ಷ ಮರಗಳನ್ನು ನೆಲಕ್ಕುರುಳಿಸಲಾಯಿತೆಂದು ಅಂದಾಜಿಸಲಾಗಿದೆ. ಬಿಹಾರದ ಹಜಾರಿ ಬಾಗ್ ಪಟ್ಟಣದಿಂದ ರಾಂಚಿ ನಗರದವರೆಗೆ 110 ಕಿಲೋಮೀಟರ್ ರಸ್ತೆ ಅಗಲೀಕರಣಕ್ಕೆ ಜಾರ್ಕಾಂಡ್ ನ ಅರಣ್ಯ ಪ್ರದೇಶದಲ್ಲಿ 56 ಸಾವಿರ ಬೃಹತ್ ಮರಗಳನ್ನು ತೆರವುಗೊಳಿಸಲಾಯಿತು.
ಮೇಘಾಲಯದಲ್ಲಿ ರಾಷ್ಟ್ರೀಯ ಹೆದ್ದಾರಿ 44 ರ ರಸ್ತೆ ಅಗಲೀಕರಣಕ್ಕೆ ಅಭಯಾರಣ್ಯದಲ್ಲಿ  ಕೇವಲ ಹತ್ತು ಕಿಲೋ ಮೀಟರ್ ದೂರಕ್ಕೆ 4800 ಮರಗಳನ್ನು ಕಡಿಯಲಾಗಿದೆ.  ಅತಿ ಕಡಿಮೆ ಮರಗಳಿರುವ ಗುಜರಾತ್ ರಾಜ್ಯದ ಜುನಾಗಡ್ ಜಿಲ್ಲೆಯಲ್ಲಿ ಜತೆಪುರ್ ಮತ್ತು ರಾಜ್ ಕೋಟ್ ನಡುವಿನ 100 ಕಿಲೋ ಮೀಟರ್ ಉದ್ದದ ರಸ್ತೆಯ ಅಗಲೀಕರಣಕ್ಕೆ 3ಸಾವಿರ ಮರಗಳು ಆಹುತಿಯಾದವು.

ಇತ್ತಿಚೇಗೆ ಸರ್ಕಾರಗಳು ಮತ್ತು ರಸ್ತೆ ನಿರ್ಮಾಣ ಕಂಪನಿಗಳ ನಡುವೆ ಅಪವಿತ್ರ ಮೈತ್ರಿ ಏರ್ಪಡುತ್ತಿದ್ದು, “ ನಿರ್ಮಿಸು, ನಿರ್ವಹಿಸು, ಹಸ್ತಾಂತರಿಸು ಎಂಬ ಯೋಜನೆ ಜಾರಿಗೆ ಬಂದಿದೆ.( B.T.O.)  ಎಷ್ಟೋ ಕಂಪನಿಗಳು ನಿಗಧಿತ ಅವಧಿ ಮುಗಿದಿದ್ದರೂ ಸರ್ಕಾರಕ್ಕೆ ರಸ್ತೆ ಅಥವಾ ಸೇತುವೆಗಳನ್ನು ಒಪ್ಪಿಸದೆ. ಶುಲ್ಕ ವಸೂಲಿ ಮಾಡುತ್ತಿವೆ. ಈ ಅಕ್ರಮ ವಸೂಲಾತಿಯಲ್ಲಿ ಕಂಪನಿ ಮತ್ತು ಸರ್ಕಾರಗಳು ಹಾಗೂ ರಾಜಕೀಯ ಪಕ್ಷಗಳಿಗೆ ಸಮ ಪಾಲಿದೆ. ಈ ಕಾರಣಕ್ಕಾಗಿ ದೇಶದ ಎಲ್ಲಾ ರಾಜಕೀಯ ಪಕ್ಷಗಳು( ಎಡ ರಂಗದ ಪಕ್ಷ ಗಳು ಹೊರತು ಪಡಿಸಿ) ಮಾಹಿತಿ ಹಕ್ಕು ಕಾಯ್ದೆ ಅಡಿಯಿಂದ ತಮ್ಮ ತಮ್ಮ ರಾಜಕೀಯ ಪಕ್ಷಗಳನ್ನು ಕಾಪಾಡಿಕೊಳ್ಲಲು ಹೊಸ ಮಸೂದೆಗೆ ಮುಂದಾಗಿವೆ.  ಯು.ಪಿ.ಎ. ಮೈತ್ರಿಕೂಟದ ಕಾಂಗ್ರೇಸ್ ನೇತೃತ್ವದ ಕೇಂದ್ರ ಸರ್ಕಾರ ಆತ್ಮ ಸಾಕ್ಷಿ,ಯ ಪ್ರಜ್ಙೆ ಇಲ್ಲದಂತೆ ಈದಿನ ಪತ್ರಿಗಳ ಮುಖಪುಟದಲ್ಲಿ 67 ನೇ ಸ್ವಾತಂತ್ರ್ಯದಿನಾಚರಣೆಯ ಅಂಗವಾಗಿ ಜಾಹಿರಾತು ಬಿಡುಗಡೆ ಮಾಡಿದೆ. ಅದರಲ್ಲಿರುವ ಘೋಷಣಾ ವಾಖ್ಯವೆಂದರೆ, “ ನಮ್ಮ ಪಾಲಿನ ಅಧಿಕಾರವನ್ನು ಪಡೆದುಕೊಳ್ಳುವುದೇ ಹಕ್ಕುಗಳಲೆಲ್ಲಾ ಮೂಲಭೂತ ಹಕ್ಕಾಗಿದೆ” ಪಾರದರ್ಶಕತೆಯೇ ಇಲ್ಲದ ಇಂತಹ ಪಕ್ಷಗಳಿಂದ ಅಥವಾ ಸರ್ಕಾರಗಳಿಂದ ನಾವು ಏನು ನಿರೀಕ್ಷಿಸಲು ಸಾಧ್ಯ?  ಇದನ್ನು  ಪ್ರಜಾಪ್ರಭುತ್ವದ ವ್ಯಂಗ್ಯ ಎಂದೇ ನಾವು ಕರೆಯಬೇಕಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ