ಸೋಮವಾರ, ಫೆಬ್ರವರಿ 2, 2015

ಸರೆಮನೆಯೆಂಬ ಪಂಜರದ ಬಣ್ಣಗಳು



 ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವೆಂಬುದು ನಾಗರೀಕರ ಕೈಗೆ ಸಿಕ್ಕ ಅತಿದೊಡ್ಡ ಆಯುಧ ಎಂದು ಹೇಳಿಕೊಂಡು ಬರಲಾಗಿದೆ. ಅದನ್ನು ನಾವು ಸಹ ನಂಬಿಕೊಂಡು ಬಂದಿದ್ದೇವೆ. ಆದರೆ, ಜಗತ್ತಿನ ಅತ್ಯಂತ ಬಲಿಷ್ಟ ಹಾಗೂ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎನಿಸಿಕೊಂಡ ಭಾರತದಲ್ಲಿ ನಾಗರೀಕ ಹಕ್ಕುಗಳು ಮತ್ತು ಅಭಿವ್ಯಕ್ತ ಸ್ವಾತಂತ್ರ್ಯ ಇವೆರೆಡೂ  ಪೋಲಿಸ್ ಕ್ರೌರ್ಯದ ವ್ಯವಸ್ಥೆಯಡಿಯಲ್ಲಿ ಅವರ ಬೂಟುಗಾಲಿನ ಕೆಳಗೆ ಮತ್ತು ಲಾಠಿಗಳ ನಡುವೆ  ಸಿಲುಕಿ ಹೇಗೆ ವಿಲವಲನೆ ಒದ್ದಾಡುತ್ತಿವೆ ಎಂಬುದನ್ನು ಇತ್ತೀಚೆಗೆ ಇಂಗ್ಲೀಷ್ ನಲ್ಲಿ  ಪ್ರಕಟವಾಗಿರುವ “ಕಲರ್ಸ್ ಆಫ್ ದ ಕೇಜ್” ಎಂಬ ಕೃತಿ ನಮ್ಮೆದುರು ಪರಿಣಾಮಕಾರಿಯಾಗಿ ಅನಾವರಣಗೊಳಿಸಿದೆ.
ಈ ಹಿಂದೆ 1970 ರ ದಶಕದಲ್ಲಿ ಭಾರತಕ್ಕೆ ಪ್ರವಾಸ ಬಂದ ವೇಳೆಯಲ್ಲಿ ಕೊಲ್ಕತ್ತ ನಗರದ ಯುವ ವಿದ್ಯಾರ್ಥಿ ಮುಖಂಡನನ್ನು ಪ್ರೀತಿಸಿ, ನಂತರ ಆತನನ್ನು ವಿವಾಹವಾಗಿ , ಸಿ.ಪಿ.ಐ.(ಎಂ) ಸಂಘಟನೆಯ ಚಳುವಳಿಯಲ್ಲಿ ಭಾಗಿಯಾಗಿದ್ದ ಮೇರಿ ಟೈಲರ್ ಎಂಬಾಕೆ 1977 ರಲ್ಲಿ ತನ್ನ ಪತಿಯೊಂದಿಗೆ ನಕ್ಷಲ್ ಹಣೆಪಟ್ಟಿಯೊಂದಿಗೆ ಬಂಧಿತಳಾಗಿ ಐದು ವರ್ಷಗಳ ಕಾಲ ಪಶ್ಚಿಮ ಬಂಗಾಳದ ಸೆರೆಮನೆಯಲ್ಲಿ ಶಿಕ್ಷೆ ಅನುಭವಿಸದ್ದಳು. ಆನಂತರ ಕೇಂದ್ರ ಸರ್ಕಾರ ಆಕೆಯನ್ನು ಬಿಡುಗಡೆ ಮಾಡಿ ಭಾರತಕ್ಕೆ ಮರಳಿ ಬಾರದಂತೆ ಇಂಗ್ಲೇಂಡಿಗೆ ಗಡಿಪಾರು ಮಾಡಿತ್ತು. ಇಲ್ಲಿಂದ ಬಿಡುಗಡೆಯಾಗಿ ಹೋದ ಆಕೆ ಬರೆದ “ ಮೈ ಇಯರ್ಸ್ ಇನ್  ಆ್ಯನ್ಇಂಡಿಯನ್ ಪ್ರಿಸನ್” ಕೃತಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳದಿತ್ತು.( ಈ ಕೃತಿ ಹಿಂದಿ ಮತ್ತು ಬಂಗಾಳಿ ಭಾಷೆಗೆ ಅನುವಾದಗೊಂಡಿದೆ) 




ನಮ್ಮ ಕರ್ನಾಟಕದಲ್ಲಿ ಬೆಂಗಳೂರು ವಿ.ವಿ.ಯಲ್ಲಿ ಇಂಗ್ಲೀಷ್ ಪ್ರೊಫೆಸರ್ ಆಗಿದ್ದ ನಗರಿ ಬಾಬಯ್ಯನವರು 1987 ರಲ್ಲಿ ಆಂಧ್ರದ ನಕ್ಸಲಿಯರಿಗೆ ಬೆಂಗಳೂರು ನಗರದಲ್ಲಿ ಆಶ್ರಯ ಕಲ್ಪಿಸಿಕೊಟ್ಟಿದ್ದರು ಎಂಬ ಆರೋಪದಡಿ ಆಂಧ್ರಪ್ರದೇಶ ಪೋಲಿಸರಿಂದ ಬಂಧಿತರಾಗಿ ಚಿತ್ರ ಹಿಂಸೆ ಅನುಭವಿಸಿದ್ದರು. ತಮ್ಮ ಅನುಭವವನ್ನು “ ಕಗ್ಗತ್ತಲಲ್ಲಿ 64 ದಿನಗಳು” ಎಂಬ ಕೃತಿಯಲ್ಲಿ ದಾಖಲಿಸಿ, ಆಂಧ್ರ ಪೋಲಿಸರ ರಾಕ್ಷಸಿ ಪ್ರವೃತ್ತಿಯನ್ನು ಸಮರ್ಥವಾಗಿ ಕೃತಿಯಲ್ಲಿ ತೆರದಿಟ್ಟರು. ಈ ಮೂರು ಕೃತಿಗಳು ನಮ್ಮ ಭಾರತದ ಜೈಲುಗಳೆಂಬ ನೆಲದ ಮೇಲಿನ ನರಕಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಪರಿಚಯಿಸಿವೆ. ಜೊತೆಗೆ ಭಾರತದ ನ್ಯಾಯಾಂಗ ಮತ್ತು ಪೋಲಿಸ್ ವ್ಯವಸ್ಥೆಗಳ ಮುಖವಾಡವನ್ನು ಸಹ ಕಳಚಿಹಾಕಿವೆ ಎನ್ನಬಹುದು.
ಸ್ವತಃ ಪೋಲಿಸರ ದೌರ್ಜನ್ಯಕ್ಕೆ ಸಿಲುಕಿ, ತನ್ನದಲ್ಲದ ತಪ್ಪಿಗೆ ನಾಲ್ಕು  ವರ್ಷ ಎಂಟು ತಿಂಗಳಗಳ ಕಾಲ ಮಹಾರಾಷ್ಟ್ರದ ನಾಗಪುರ ಜೈಲಿನ ಕತ್ತಲೆಯ ಕೋಣೆಯಲ್ಲಿ ಬಂಧಿಯಾಗಿ ಹೊರಬಂದ ಮುಂಬೈ ನಗರದ ನಾಗರೀಕ ಹಕ್ಕುಗಳ ಹೋರಾಟಗಾರ ಅರುಣ್ ಪೆರಿರಾ ಎಂಬ ದಿಟ್ಟ ಯುವಕನೊಬ್ಬ ದಿನಚರಿಯ ಪುಟಗಳ ಮಾದರಿಯಲ್ಲಿ ದಾಖಲಿಸಿರುವ ಅನುಭವಗಳನ್ನು ಓದುತ್ತಿದ್ದರೆ, ಈ ಜಗತ್ತು ಇಪ್ಪತ್ತೊಂದನೆಯ ಶತಮಾನಕ್ಕೆ ಕಾಲಿಟ್ಟರೂ ಸಹ, ಭಾರತೀಯ ಪೋಲಿಸ್ ವ್ಯವಸ್ಥೆ ಮತ್ತು ನ್ಯಾಯಾಂಗ ವ್ಯವಸ್ಥೆ ಇನ್ನೂ 19 ನೇಶತಮಾನದ ಬ್ರಿಟೀಷರ ಮನಸ್ಥಿತಿಯಲ್ಲಿ ಇವೆ ಎಂಬುದು ಮನದಟ್ಟಾಗುತ್ತದೆ.
“ಪಂಜರದ ಬಣ್ಣಗಳು “ ಎಂದು ಕನ್ನಡದಲ್ಲಿ ಕರೆಯಬಹುದಾದ ಈ ಕೃತಿಯಲ್ಲಿ ಲೇಖಕ ಅರುಣ್ ಪೆರಿರಾ ತನ್ನ ಕಥೆಯನ್ನು ಮಾತ್ರವಲ್ಲದೆ. ತನ್ನಂತೆ ಸರೆಮನೆಯಲ್ಲಿ ಕೊಳೆತ, ಕೊಳೆಯುತ್ತಿರುವ ಅನೇಕ ಅಮಾಯಕರ ಚಿಂತಾಜನಕವಾದ ಮತ್ತು ಮನಕರಗುವಂತಹ ಕಥೆಗಳನ್ನು ದಾಖಲಿಸಿದ್ದಾನೆ. 1993 ರಲ್ಲಿ ಮುಂಬೈ ನಗರದಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣದ ವೇಳೆಯಲ್ಲಿ ಭಾರತ ಪ್ರವಾಸಕ್ಕೆ ಬಂದು, ಮುಂಬೈ ನಗರದ ಹೋಟೆಲ್ ಒಂದರಲ್ಲಿ ತಂಗಿದ್ದ ಪಾಕಿಸ್ಥಾನದ ಪ್ರಜೆಯೊಬ್ಬ ತನ್ನದಲ್ಲದ ತಪ್ಪಿಗೆ ಮುಂಬೈ ನಗರದ ಪೋಲಿಸರಿಂದ ಬಂಧಿತನಾಗಿ, ಜೀವಾವಧಿ ಶಿಕ್ಷೆ ಅನುಭವಿಸುತ್ತಾ, ಮೌನಕ್ಕೆ ಶರಣಾಗಿರುವ ಕಥನವೂ ಕೃತಿಯಲ್ಲಿ ಅಡಕವಾಗಿದೆ.


ಅರುಣ್ ಪೆರಿರಾ ಮುಂಬೈನಗರದ ಕ್ರಿಶ್ಚಿಯನ್ ಕುಟುಂಬದಲ್ಲಿ ಹುಟ್ಟಿ ಬೆಳೆದು, ಅಲ್ಲಿನ ಪ್ರತಿಷ್ಟಿತ ¸ಸೆಂಟ್ ಕ್ಷೇವಿಯರ್ ಕಾಲೇಜಿನಿಂದ ಪದವಿ ಪಡೆದ ಬುದ್ಧಿವಂತ. ಬಾಲ್ಯದಿಂದಲೂ ಸಮಾಜ ಸೇವೆಯ ಮೂಲಕ ತೊಡಗಿಸಿಕೊಂಡು ಬೆಳೆದ ಪರಿಣಾಮ ಕಾಲೇಜು ದಿನಗಳಲ್ಲಿ ವಿದ್ಯಾರ್ಥಿ ಸಂಘದ ನಾಯಕನಾಗಿ ಹೊರ ಹೊಮ್ಮಿದವನು. ಅನಂತರದ ದಿನಗಳಲ್ಲಿ ಎಡಪಂಥೀಯ ವಿಚಾರಧಾರೆಯಿಂದ ಪ್ರಭಾವಿತನಾಗಿ ನಾಗರೀಕ ಹಕ್ಕುಗಳ ಸ್ವಾತಂತ್ರ್ಯದ ಪರವಾಗಿ ಹೋರಾಡಲು ಅನೇಕ ಯುವಸಂಘನೆಗಳೊಂದಿಗೆ ಗುರುತಿಸಿಕೊಂಡು ಮಹಾರಾಷ್ಟ್ರದಾದ್ಯಂತ ಪಾದರಸದಂತೆ  ಓಡಾಡಿದವನು. ಮುಂಬೈ ನಗರದಲ್ಲಿ ದುಡಿಯುವ ಕಾರ್ಮಿಕರ ಹಕ್ಕುಗಳಿಗಾಗಿ ಪ್ರಕಟವಾಗುವ ಪತ್ರಿಕೆಗೆ ಲೇಖನ ಮತ್ತು ವ್ಯಂಗ್ಯ ಚಿತ್ರವನ್ನು ಸಹ ಬರೆದವನು. ಇಂತಹ  ಅವನ ಕ್ರಿಯಾಶೀಲ ವ್ಯಕ್ತಿತ್ವ  ಮತ್ತು ಚಟುವಟಿಕೆಗಳು ಅಂತಿಮವಾಗಿ ಆತನ  ಭವಿಷ್ಯದ ಬದುಕಿಗೆ ಮುಳುವಾದವು.
2007 ರ ಮೇ ತಿಂಗಳಿನಲ್ಲಿ ನಾಗರಪುರದಲ್ಲಿ ನಡೆಯುತ್ತಿದ್ದ ವಿದ್ಯಾರ್ಥಿ ಸಮ್ಮೇಳದಲ್ಲಿ ಭಾಗವಹಿಸಲು ತೆರಳಿದ್ದ ಅರುಣ್ ಪೆರಿರಾನನ್ನು ಬಂಧಿಸಿದ ಮಹಾರಾಷ್ಟ್ರ ಪೋಲಿಸರು ಮರುದಿನ ಅಪಾಯಕಾರಿ ನಕ್ಸಲ್ ನಾಯಕನನ್ನು ಬಂಧಿಸಲಾಗಿದೆ ಎಂದು ಮಾಧ್ಯಮಗಳಲ್ಲಿ ಹೇಳಿಕೆ ಕೊಟ್ಟರು. ಪೋಲಿಸರ ಈ ನಡುವಳಿಕೆಗಳು ಅರಣ್ ಕುಟುಂಬವನ್ನು ಮುಜಗರಕ್ಕೆ ದೂಡಿತ್ತಲ್ಲದೆ, ಅಪಾರವಾಗಿ ಘಾಸಿಗೊಳಿಸಿತು. ಉಪನ್ಯಾಸಕಿಯಾಗಿದ್ದ ಆತನ ಪತ್ನಿ, ಬಡಾವಣೆಯಲ್ಲಿ ಒಳ್ಳೆಯ ಹೆಸರು ಪಡೆದಿದ್ದ ಆತನ ತಾಯಿ, ತಂದೆ ಸಮಾಜದೆದುರು ತಲೆ ತಗ್ಗಿಸುವಂತಾಯಿತು. ಆದರೆ ಅವರಿಗೆ ಅರುಣ್ ವ್ಯಕ್ತಿತ್ವದ ಬಗ್ಗೆ ಅರಿವಿತ್ತು. ಹಾಗಾಗಿ ಮೌನವಾಗಿ ಎಲ್ಲವನ್ನೂ ನುಂಗಿಕೊಂಡು, ಅರುಣ್ ಹೋರಾಟಕ್ಕೆ ನೈತಿಕವಾಗಿ ಬೆಂಬಲ ಸೂಚಿಸಿದರು.
ಬೇಸಿಗೆಯ ದಿನಗಳಲ್ಲಿ 48 ಸೆಂಟಿಗ್ರೇಡ್ ಉಷ್ಣತೆಗೆ ಏರುವ ನಾಗಪುರದಲ್ಲಿ ಕಿಟಕಿಗಳಿಲ್ಲದ, ಮರಣದಂಡನೆಗೆ ಗುರಿಯಾದ ಮೊಟ್ಟೆಯಾಕಾರದ ಬ್ಯಾರಕ್ ಎಂದು ಕರೆಸಿಕೊಳ್ಳುವ  ಆತನನ್ನು ಕೋಣೆಯಲ್ಲಿ ಇರಿಸಲಾಯಿತು. ಅದಕ್ಕೂ ಮುನ್ನ ಆತನಿಗೆ ನಾನಾ ಬಗೆಯ ಚಿತ್ರ ಹಿಂಸೆಗಳನ್ನು ನೀಡಿ ಆತನ ಅಂತಃಸತ್ವವನ್ನು ಉಡುಗಿಸಲು ಪ್ರಯತ್ನಿಸಲಾಯಿತು.


ಅರುಣ್ ಪೆರಿರಾ, ನಿರ್ಭಾವುಕನಾಗಿ ಜೈಲಿನ ಸ್ಥಿತಿ ಗತಿಗಳನ್ನು ದಾಖಲಿಸಿರುವುದನ್ನು ಓದುತ್ತಾ ಹೋದರೆ ಇಂತಹ ನರಕ ಸದೃಶ್ಯ ಸರೆಮನೆಗಳು ನಮ್ಮ ನಡುವೆ ಇನ್ನೂ ಅಸ್ತಿತ್ವದಲ್ಲಿ ಇರುವುದು ನಿಜವೆ? ಎಂದು  ಅಶ್ಚರ್ಯವಾಗುತ್ತದೆ. ಇಲ್ಲಿನ ಅನುಭವಗಳು ನಿಜಕ್ಕೂ ನಮಗೆ ಶಾಕ್ ಟ್ರೀಟ್ಮೆಂಟ್ ನೀಡಿದ  ಅನುಭವದಂತೆ ಭಾಸವಾಗುತ್ತವೆ. “ವಾರಗಟ್ಟಲೆ ಸ್ನಾನವಿಲ್ಲದೆ, ಶರೀರದ ಬೆವರಿನಿಂದ ತೊಯ್ದ ನನ್ನ ಉಡುಪುಗಳು ಒಣಗಿದಾಗ ಕಾಗದದ ರಟ್ಟಿನಂತಾಗಿದ್ದವು “ ಎನ್ನುವ ಮಾತು, ಕೊಲೆಗಡುಕರ ನಡುವೆ ಒಬ್ಬ ಸೂಕ್ಷ್ಮ ಮನಸ್ಸಿನ ವ್ಯಕ್ತಿ ಬದುಕಬೇಕಾದ  ಅನಿವಾರ್ಯತೆ, ಅಲ್ಲಿನ ಅಧಿಕಾರಿಗಳ ಹಿಂಸಾ ಪ್ರವೃತ್ತಿ ಮತ್ತು ಬ್ರಹ್ಮಾಂಡ ಭ್ರಷ್ಟಾಚಾರ , ಸಹ ಕೈದಿಗಳ ವಿಕೃತ ಮನೋಭಾವ, ಗೂಂಡಾಗಿರಿ ಪ್ರವೃತ್ತಿ, ಇವೆಲ್ಲವನ್ನೂ ಅರಣ್ ಪೆರಿರಾ ಸೂಕ್ಷ್ಮವಾಗಿ ದಾಖಲಿಸಿದ್ದಾರೆ.
ಸಮಾಜಮುಖಿ ಹೋರಾಟಗಾರರನ್ನು ಮತ್ತು ಸಮಾಜದ ಅಂಕು ಡೊಂಕುಗಳನ್ನು ಪ್ರಶ್ನಿಸುವ, ಭ್ರಷ್ಟವ್ಯವಸ್ಥೆಗೆ ಹಾಗೂ ಭ್ರಷ್ಟ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಅಪಾಯವೆನಿಸುವ ಕ್ರಾಂತಿಕಾರಿ ಮನಸ್ಸಿನ ಯುವಕರನ್ನು ಪೊಲೀಸರು ಹೇಗೆ ಮಣಿಸಬಲ್ಲರು ಎಂಬುದನ್ನು ಅರಿಯಲು ನಾವು ಈ ಕೃತಿಯನ್ನು ಓದಲೇಬೇಕು.
ಮಾನವ ಹಕ್ಕುಗಳ ಹೋರಾಟಗಾರ ಪೆರಿರಾ ಜೈಲಿನಿಂದ ಹೊರಬಾರದಂತೆ ಒಂದರಮೇಲೊಂದರಂತೆ ಆರೋಪ ಪಟ್ಟಿಗಳನ್ನು ಮಹಾರಾಷ್ಟ್ರ ಪೊಲೀಸರು ಹೊರಿಸುತ್ತಾ ಹೋಗುತ್ತಾರೆ. ಮಹಾರಾಷ್ಟ್ರ ರಾಜ್ಯದ ನಕ್ಸಲ್ ಪೀಢಿತ ಜಿಲ್ಲೆಯಾದ ಗಢ್ ಚಿರೋಲಿ ಜಿಲ್ಲೆಯಲ್ಲಿ ನಡೆದ ಅನೇಕ ವಿಧ್ವಂಸಕ ಕೃತ್ಯ ಮತ್ತು ಪೊಲೀಸರ ಮೇಲೆ ನಕ್ಸಲರು ನಡೆಸಿದ್ದ ಸಶಸ್ತ್ರದಾಳಿ ಇವುಗಳ ಆರೋಪಗಳನ್ನು ಹೊರಿಸಿ ಮೊಕೊದ್ದಮೆ ದಾಖಲಿಸುತ್ತಾರೆ. ಒಟ್ಟಾರೆ ಜಾಮೀನು ಪಡೆದು ಜೈಲಿನಿಂದ ಹೊರಬರದೆ ಜೀವನವಿಡಿ ಅಲ್ಲಿಯೇ ಕೊಳೆಯಬೇಕೆಂದು ಪೊಲೀಸರ ಹುನ್ನಾರ. ಇಂತಹ ಅನೇಕ ಪ್ರಕರಣಗಳನ್ನು ಕೃತಿಯಲ್ಲಿ ಅರುಣ್ ಪೆರಿರಾ ಉಲ್ಲೇಖಿಸಿದ್ದಾನೆ. ನಕ್ಸಲರ ಜೊತೆ ಸಂಪರ್ಕವಿತ್ತು ಎಂಬ ಏಕೈಕ ಕಾರಣಕ್ಕಾಗಿ ಮಧ್ಯ ಪ್ರದೇಶದ ಬುಡಕಟ್ಟು ಜನಾಂಗದ ಮಹಿಳೆಯ ಮೇಲೆ ಒಟ್ಟು ನೂರಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿರುವುದನ್ನು ಉಲ್ಲೇಖಿಸಿದ್ದಾನೆ.
ತಾವು ನಡೆಸುವ ಭ್ರಷ್ಟಾಚಾರಕ್ಕೆ ಜೈಲು ಸೇರುವ ರಾಜಕಾರಣಿಗಳು ಮತ್ತು ಅನೈತಿಕ ಚಟುವಟಿಕೆ ಮೂಲಕ ಕಾವಿಯೊಂದಿಗೆ ಜೈಲಿಗೆ ಹೋಗುತ್ತಿರುವ ಮಠಾಧೀಶರು ಈ ಲಫಂಗರನ್ನು ಜೈಲಿನ ಹವಾನಯಂತ್ರಣ ವಿ.ಐ.ಪಿ. ಕೋಣೆಯಲ್ಲಿಡುವ ಬದಲು ಸಾಮಾನ್ಯ ಖೈದಿಗಳ ಜೊತೆ ಕೂಡಿ ಹಾಕಿದರೆ ಮಾತ್ರ ಭಾರತದ ಜೈಲುಗಳು ಸುಧಾರಣೆಯಾಗಬಹುದೇನೊ? ಇಡೀ ದೇಶದುದ್ದಕ್ಕೂ ಜೈಲುಗಳು ಕಿಕ್ಕಿರಿದು ತುಂಬಿವೆ. ಹತ್ತು ಮಂದಿಯನ್ನು ಕೂಡಿ ಹಾಕುವ ಕೋಣೆಯಲ್ಲಿ ಐವತ್ತು ಮಂದಿಯನ್ನು ಕೂಡಿ ಹಾಕಲಾಗಿದೆ. ಮಹಿಳಾ ಖೈದಿಗಳು ಅಲ್ಲಿನ ಸಿಬ್ಬಂಧಿ ಮತ್ತು ಅನುಭವಿ ಖೈದಿಗಳ ಲೈಂಗಿಕ ಶೋಷಣೆಗೆ ಒಳಗಾಗುತ್ತಿದ್ದಾರೆ. ಶೇಕಡ ಅರವತ್ತರಷ್ಟು ವಿಚಾರಣಾ ಖೈದಿಗಳು ಹಲವು ವರ್ಷಗಳಿಂದ ವಿಚಾರಣೆಯಿಲ್ಲದೆ ಜೈಲಿನಲ್ಲಿ ಕೊಳೆಯುತ್ತಿದ್ದಾರೆ.ಇವುಗಳ ಕುರಿತು ಯಾರಿಗೂ ಕಾಳಜಿಯಿದ್ದಂತೆ ಇಲ್ಲ. ಏಕೆಂದರೆ ನಮ್ಮ ಕಣ್ಣಿಗೆ ಕಾಣದ, ಕಿವಿಗೆ ಕೇಳದ  ಅದು ನಮ್ಮ ಪಾಲಿಗೆ ಒಂದು ರೀತಿಯ ಅದೃಶ್ಯಲೋಕದಂತಿದೆ. ಹೋರಾಟಗಾರರನ್ನು, ವ್ಯವಸ್ಥೆಯನ್ನು ಪ್ರಶ್ನಿಸುವ ಕ್ರಾಂತಿಕಾರಿ ಯುವ ಮನಸ್ಸುಗಳನ್ನು ಬಂಧನದಲ್ಲಿಟ್ಟು ಕೊಳೆಯಿಸುವ ತಾಣವಾಗಿಬಿಟ್ಟಿದೆ.
ಅರುಣ್ ಪೆರಿರಾ ತನ್ನ ಕೃತಿಯ ಕೊನೆಯ ಅಧ್ಯಾಯದಲ್ಲಿ ಹೀಗೆ ಬರೆದಿದ್ದಾನೆ.” ಎಲ್ಲಾ ಪ್ರಕರಣಗಳಲ್ಲಿ ಖುಲಾಸೆಗೊಂಡು, ಗಢ್ ಚಿರೋಲಿ ಪ್ರಕರಣದಲ್ಲಿ ನ್ಯಾಯಾಲಯದ ಅಂತಿಮ ತೀರ್ಪು ಹೊರ ಬರುವ ದಿನ ನಾನು ಮತ್ತೇ  ನನ್ನ ಪ್ಲಾಸ್ಟಿಕ್ ಬ್ಯಾಗಿನೊಳಕ್ಕೆ ಟೂತ್ ಪೇಸ್ಟ್, ಬ್ರಸ್, ಹವಾಯಿ ಚಪ್ಪಲಿ, ಶರ್ಟ್, ಪ್ಯಾಂಟ್ ತುಂಬಿಕೊಂಡು ಸಿದ್ಧನಾಗಿದ್ದೆ. ಈ ಪ್ರಕರಣದಲ್ಲಿಯೂ ನಾನು ಖುಲಾಸೆಯಾಗುತ್ತೀನಿ ಎಂಬ ಭರವಸೆ ಇತ್ತು. ಆದರೆ ಪೋಲಿಸರು ಮತ್ತೊಂದು ಪ್ರಕರಣದಲ್ಲಿ ಸಿಲುಕಿಸಿ ಪುನಃ ಬಂಧಿಸಿ ಜೈಲಿಗಟ್ಟುತ್ತಾರೆ ಎಂದು ನನ್ನ ಒಳಮನಸ್ಸು ಹೇಳುತ್ತಿತ್ತು. ಆದರೆ ಹಿರಿಯ ಖೈದಿ ಚಂದ್ರು ಬಂದು “ನಿನ್ನನ್ನು ಬಂಧಿಸುವುದಿಲ್ಲ ಹೋಗಿ ಬಾ” ಎಂದ. ನಿನಗೆ ಹೇಗೆ ತಿಳಿಯಿತು ಎಂದು ಕೇಳಿದೆ. ಜೈಲಿನ ಮುಖ್ಯ ಬಾಗಿಲಿನ ಬಳಿ ಆಗತಾನೆ ಕಸ ಗುಡಿಸಿ ಬಂದಿದ್ದ ಆತನಿಗೆ ಪೋಲಿಸರ ಮಾತುಕತೆಯಿಂದ ಈ ವಿಷಯ ತಿಳಿದಿತ್ತು.
                               ( ಜೈಲಿಂದ ಹೊಬಂದ ಕ್ಷಣದಲ್ಲಿ ತಾಯಿಯ ಜೊತೆ ಅರುಣ್ ಪೆರಿರಾ)

ಅರುಣ್ ಪೆರಿರಾ ಸರೆಮನೆಯಿಂದ ಬಿಡುಗಡೆಯಾಗಿ ಮನೆಗೆ ಬಂದ ನಂತರವೂ ಇಲ್ಲಿನ ಹೊರಲೋಕಕ್ಕೆ ಹೊಂದಿಕೊಳ್ಳಲು ಅನುಭವಿಸಿದ ಕಷ್ಟಗಳನ್ನು ಸಹ ವಿವರಿಸಿದ್ದಾನೆ. ಕಿತ್ತು ಹೋದ ಚಪ್ಪಲಿಯ ಉಂಗುಷ್ಟಗಳಿಗೆ  ಖಾಲಿಯಾದ ಪೆನ್ನಿನ ರಿಪಿಲ್ ಗಳ ಪೈಪ್ ಗಳನ್ನು ಬಳಸುತ್ತಿದ್ದ ರೀತಿ ಇವೆಲ್ಲವನ್ನೂ ವಿವರಿಸಿದ್ದಾನೆ. ಸರೆಮನೆಯಲ್ಲಿದ್ದಾಗಲೆ, ಇಂದಿರಾ ಗಾಂಧಿ ಮುಕ್ತ ವಿಶ್ವ ವಿದ್ಯಾನಿಲಯದಲ್ಲಿ ಮಾನವ ಹಕ್ಕುಗಳು ಮತ್ತು ಕಾನೂನುಗಳು ಕುರಿತು ಸ್ನಾತಕೋತ್ತರ ಡಿಪ್ಲಮೊ ಪದವಿ ಪಡೆದ ಪೆರಿರಾ, ಇದೀಗ ಮುಂಬೈ ವಿ.ವಿ.ಯಲ್ಲಿ ಕಾನೂನು ವ್ಯಾಸಂಗ ಮಾಡುತ್ತಿದ್ದಾನೆ.  ತನ್ನಂತೆ ನೊಂದ ಅಮಾಯಕರನ್ನು ಪೋಲಿಸರಿಂದ ರಕ್ಷಿಸಲು ತನ್ನ ಜೀವನವನ್ನು ಮುಡಿಪಾಗಿಡಲು ತೀರ್ಮಾನಿಸಿದ್ದಾನೆ. ಒಟ್ಟಾರೆ ಈ ಕೃತಿ 2014 ರಲ್ಲಿ ಭಾರತದಲ್ಲಿ ಪ್ರಕಟವಾದ ಶ್ರೇಷ್ಠ ಕೃತಿಗಳಲ್ಲಿ ಒಂದಾಗಿದ್ದು, ಪ್ರತಿಯೊಬ್ಬ ಪ್ರಜ್ಞಾವಂತ ನಾಗರೀಕ ಓದಲೇ ಬೇಕಾದ ಕೃತಿಯಾಗಿದೆ.



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ