ಮಂಗಳವಾರ, ಅಕ್ಟೋಬರ್ 30, 2018

ಕಾಡಿನ ತಪಸ್ವಿಗಳಿಬ್ಬರ ಕಥನ


ಕೃಪಾಕರ್-ಸೇನಾನಿ ಎಂಬ ಈ  ಅಪರೂಪದ ಗೆಳೆಯರ ಜೋಡಿ ಇತ್ತೀಚೆಗಿನ ದಿನಗಳಲ್ಲಿ ಜಾಗತಿಕ ಮಟ್ಟದ   ವನ್ಯಜೀವಿ ಛಾಯಾಗ್ರಹಣ ಮತ್ತು ಸಾಕ್ಷ್ಯ ಚಿತ್ರಚಿತ್ರಗಳ ನಿರ್ಮಾಣದಲ್ಲಿ ಮುಂಚೂಣಿಯಲ್ಲಿದ್ದಾರೆ. ಸದಾ ಸುದ್ದಿ ಮತ್ತು ಪ್ರಚಾರದ ಜಗತ್ತಿನಿಂದ ದೂರವಿದ್ದುಕೊಂಡು ಒಂದು ಅಂತರವನ್ನು ಕಾಯ್ದುಕೊಂಡು ಬಂದಿರುವ ಈ ಮಿತ್ರರು ಮಾತಿಗಿಂತ ಹೆಚ್ಚಾಗಿ ಕೃತಿಯಲ್ಲಿ ನಂಬಿಕೆಯಿಟ್ಟವರು.
ತಮ್ಮ ಜೀವನದ ಅರ್ಧ ಆಯುಷ್ಯವನ್ನು ದಕ್ಷಿಣ ಭಾರತದ  ಕಾಡುಗಳ ನಡುವೆ ಅಲೆದಾಡುತ್ತಾ, ಅಲ್ಲಿನ ಜೀವಸಂಕಲುಗಳನ್ನು ಅಧ್ಯಯನ ಮಾಡುತ್ತಾ. ನಿಸರ್ಗದ ಜೊತೆ ನಿರಂತರ ಅನುಸಂಧಾನ ನಡೆಸುತ್ತಾ ಬಂದಿರುವ ಇವರು ಹೊರಜಗತ್ತಿಗೆ ಪ್ರಸಿದ್ಧ ವನ್ಯಜೀವಿ ಛಾಯಾಗ್ರಾಹಕರು ಎಂದಷ್ಟೇ ಪರಿಚಿತರು. ಆದರೆ, ಇವರ ಜೊತೆ ಮಾತಿಗೆ ಕುಳಿತರೆ ನಿಸರ್ಗದ ಚಟುವಟಿಯನ್ನು, ಋತುಮಾನಗಳ ಪ್ರಕ್ರಿಯೆಯನ್ನು ಮತ್ತು ಪ್ರಾಣಿ ಪಕ್ಷಿಗಳಿಂದ ಹಿಡಿದು, ನಾವು ನಡೆದಾಡುವ ನೆಲದ ಮೇಲಿನ ಹಾಗೂ ನಮ್ಮ ಪಾದದಡಿಯ ಗರಿಕೆ ಹುಲ್ಲಿನಿಂದ ಹಿಡಿದು,  ನೆಲದ ಮೇಲಿನ ಅತ್ಯಂತ ಕಿರಿಯ ಇರುವೆ ಹಾಗೂ ದೈತ್ಯ ಜೀವಿ ಆನೆ ಇವುಗಳ ಜೀವನ ಕ್ರಮ ಮತ್ತು  ವರ್ತನೆಗಳ ಕುರಿತಂತೆ ಅಧಿಕೃತವಾಗಿ ಮಾತನಾಡಬಲ್ಲ ಭಾರತದ ಕೆಲವೇ ಕೆಲವು ತಜ್ಞರಲ್ಲಿ ಕೃಪಾಕರ್ ಮತ್ತು ಸೇನಾನಿ ಪ್ರಮುಖರಾಗಿದ್ದಾರೆ.
ಕಾಡು ನಾಯಿಗಳ ಕುರಿತಂತೆ ಬಂಡಿಪುರದ ಅರಣ್ಯದಲ್ಲಿ ಸತತ ಹದಿನೈದು ವರ್ಷಗಳ ಅಧ್ಯಯನ ಹಾಗೂ ತೋಳಗಳ ಕುರಿತಂತೆ ಉತ್ತರ ಕರ್ನಾಟಕದಲ್ಲಿ ಐದಾರು ವರ್ಷಗಳ ಅಧ್ಯಯನದ ಮೂಲಕ ಇವರು ನಿರ್ಮಿಸಿದ ಈ ಎರಡು ಸಾಕ್ಷ್ಯಚಿತ್ರಗಳು ಈಗಾಗಲೇ ಜಗತ್ತಿನಾದ್ಯಂತ ಪ್ರಸಾರವಾಗಿವೆ. ಮನುಷ್ಯರಿಂದ ಸದಾ ದೂರವಿರುವ ಕಾಡು ನಾಯಿಗಳ ಕುರಿತು ಚಿತ್ರ ನಿರ್ಮಿಸಲು ಜಗತ್ತಿನ ಅತಿ ಶ್ರೇಷ್ಟ ವನ್ಯ ಜೀವಿ ಛಾಯಾಗ್ರಾಹಕರು ಪ್ರಯತ್ನ ಪಟ್ಟು ವಿಫಲರಾದ ಇತಿಹಾಸವನ್ನು ಬೆನ್ನಿಗೆ ಕಟ್ಟಿಕೊಂಡು ಕಾಡುನಾಯಿಗಳ ಬೆನ್ನುಹತ್ತಿ ಅವುಗಳ ಕುರಿತಂತೆ ಸಮಗ್ರ ಚಿತ್ರಣವನ್ನು ಜಗತ್ತಿಗೆ ನೀಡಿದ ಅಪ್ರತಿಮ ಸಾಹಾಸಿಗರು ಇವರು. ಕೃಪಾಕರ್-ಸೇನಾನಿ ನಿರ್ಮಿಸಿದ   ದ ಪ್ಯಾಕ್ ಎಂಬ ಹೆಸರಿನ 47 ನಿಮಿಷಗಳ ಕಾಡುನಾಯಿಗಳ  ಜೀವನ ಕ್ರಮದ ಕುರಿತ ಅಧ್ಯಯನದ  ಸಾಕ್ಷ್ಯ ಚಿತ್ರ ನಿಜಕ್ಕೂ ಒಂದು ದೃಶ್ಯ ಕಾವ್ಯವಾಗಿ ಮೂಡಿ ಬಂದಿದೆ. ಕೇವಲ ನಲವತ್ತೇಳು ನಿಮಿಷದ ಒಂದು ಸಾಕ್ಷ್ಯಚಿತ್ರಕ್ಕಾಗಿ ಈ ಇಬ್ಬರು ಗೆಳೆಯರು ಸತತ ಹದಿನೈದು ವರ್ಷಗಳ ಕಾಲ ಕಾಡು ಮೇಡುಗಳಲ್ಲಿ ಕಳೆದು ಹೋಗಿದ್ದರು. ಹಗಲು -ಇರುಳೆನ್ನದೆ, ಮಳೆ ಬಿಸಿಲೆನ್ನೆದು, ಮಳೆಗಾಲ, ಚಳಿಗಾಲಗಳನ್ನು ಲೆಕ್ಕಿಸದೆ, ಬಿದಿರು ಮೆಳೆಯ ಮರೆಯಲ್ಲಿ, ಕಾಡುಗಲ್ಲುಗಳು ಮತ್ತು ಪೊಟರೆಗಳ ಆಶ್ರಯದಲ್ಲಿ ಕುಳಿತು ಮನುಷ್ಯರನ್ನು ಕಂಡರೆ ಓಡಿ ಹೋಗುವ. ಕಾಡುನಾಯಿಗಳ ಬೇಟೆಯ ಕ್ರಮ ಮತ್ತು ಅವುಗಳ ಗುಂಪು ಜೀವನ ಶೈಲಿ, ಸಂತಾನೋತ್ಪತ್ತಿ ಇಂತಹ ವಿವರಗಳನ್ನು  ಸೆರೆ ಹಿಡಿದಿರುವ ಬಗೆ ಅನನ್ಯವಾದುದು. ಇವರ ಶ್ರಮಕ್ಕೆ ಪ್ರತಿಫಲವೆಂಬಂತೆ ಈ ಚಿತ್ರಕ್ಕೆ ಜಗತ್ತಿನ ಪ್ರತಿಷ್ಟಿತ ಗ್ರೀನ್ ಆಸ್ಕರ್ ಪ್ರಶಸ್ತಿ ಲಭ್ಯವಾಯಿತು. ಈ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯರು ಮಾತ್ರವಲ್ಲದೆ, ಏಷ್ಯ ರಾಷ್ಟ್ರಗಳ ಪ್ರಥಮ ವನ್ಯಜೀವಿ ಛಾಯಾಗ್ರಾಹಕರು ಎಂಬ ಕೀರ್ತಿಗೆ ಕೃಪಾಕರ್-ಸೇನಾನಿ ಪಾತ್ರರಾಗಿರುವುದು ವಿಶೇಷ. ಈ ಕಾರಣಕ್ಕಾಗಿ ಈ ಚಿತ್ರವು  ಪ್ರಾನ್ ಮತ್ತು ಜರ್ಮನಿಯಲ್ಲಿ ಪ್ರಸಾರವಾಗುವುದರ ಜೊತೆಗೆ ಪ್ರಾನ್ಸ್ ಚಿತ್ರೋತ್ಸವದಲ್ಲಿ ಅತ್ಯುತ್ತಮ ಪ್ರಕೃತಿ ಸಾಕ್ಷ ಚಿತ್ರ ಪ್ರಶಸ್ತಿ, ಜಪಾನಿನ ವನ್ಯಜೀವಿ ಚಲನಚಿತ್ರೋತ್ಸ್ವದಲ್ಲಿ ಅತ್ಯುತ್ತಮ ಕಥಾ ಪ್ರಶಸ್ತಿ,ಏಷ್ಯನ್ ಟೆಲಿವಿಷನ್ ಅವಾರ್ಡ್ ಸ್ಪರ್ಧೆಯಲ್ಲಿ ಅತ್ಯುತ್ತಮ ವನ್ಯ ಜೀವಿ ಕಾರ್ಯಕ್ರಮ ಎಂಬ ಪ್ರಶಸ್ತಿ, ಇಂಗ್ಲೇಂಡಿನ ಬ್ರಿಸ್ಟಲ್ ನಗರದಲ್ಲಿ ನಡೆದ ಚಿತ್ರೋತ್ಸವದಲ್ಲಿ  ಪಾಂಡ ಪ್ರಶಸ್ತಿಗೆ ಪಾತ್ರವಾಯಿತು. ಇವರ ಸಾಕ್ಷ್ಯ ಚಿತ್ರಗಳು ಅಂತರಾಷ್ಟ್ರೀಯ ಮಟ್ಟದ ಬಿ.ಬಿ.ಸಿ. ಛಾನಲ್, ಡಿಸ್ಕವರಿ ಹಾಗೂ ಜಿಯೊ, ಟೈಮ್ಸ್  ಛಾನಲ್ ಗಳಲ್ಲಿ ಪ್ರಸಾರವಾಗಿರುವು ಇವರ ಪ್ರತಿಭೆಗೆ ಸಾಕ್ಷಿಯಾಗಿವೆ.

ಭಾರತದ ವನ್ಯಜೀವಿಗಳ ಸಾಕ್ಷ್ಯ ಚಿತ್ರದಲ್ಲಿ  1970 ಮತ್ತು 80 ರ ದಶಕದಲ್ಲಿ ಬೇಡಿ ಸಹೋದರರು ( ನರೇಶ್ ಮತ್ತು ರಾಜೇಶ್ ಬೇಡಿ) ಎಂಬ ಜೋಡಿ ಹೆಸರು ಮಾಡಿತ್ತು. ಅವರುಗಳ ನಂತರ, ಅರಣ್ಯ ಜೀವಿಗಳ ಅಧ್ಯಯನದಲ್ಲಿ  ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಕೀತಿ ಕೃಪಾಕರ್ ಮತ್ತು ಸೇನಾನಿಯವರದು. ಇವರ ಸುಧೀರ್ಘ ಎನ್ನ ಬಹುದಾದ ಮುವತ್ತು ವರ್ಷಗಳ ಅಧ್ಯಯನ ಫಲವಾಗಿ ಈ ಇಬ್ಬರೂ ಗೆಳೆಯರು ಇಲ್ಲಿನ ನೆಲ, ಜಲ, ಗಾಳಿ ಮಾತ್ರವಲ್ಲದೆ, ಸಕಲೆಂಟು ಜೀವರಾಶಿಗಳಿಂದ  ಹಿಡಿದು ವನ್ಯಜೀವಿಗಳಾದ ಆನೆ, ಹುಲಿ, ಚಿರತೆ, ಜಿಂಕೆ ಮತ್ತು ಅಲ್ಲಿನ ತರಾವರಿ ಪಕ್ಷಿ ಸಂಕುಲ ಕುರಿತು ಅಪಾರವಾದ ಒಳನೋಟಗಳನ್ನು ದಕ್ಕಿಸಿಕೊಂಡ ಕಾಡಿನ ತಪಸ್ವಿಗಳಂತೆ ನಮಗೆ ಕಾಣುತ್ತಾರೆ.
ಮೈಸೂರಿನವರಾದ ಕೃಪಾಕರ್, ಬನುಮಯ್ಯ ಕಾಲೇಜಿನಿಂದ ಬಿ.ಬಿ.ಎಂ ಪದವಿ ಪಡೆದವರು. ಜೊತೆಗೆ ಕ್ರಿಕೇಟ್ ನಲ್ಲಿ ಮೈಸೂರು ವಿ.ವಿ.ಯನ್ನು ಪ್ರತಿನಿಧಿಸುತ್ತಿದ್ದ ಆಟಗಾರರಾಗಿದ್ದರು. ಸೇನಾನಿಯವರು  ಕುವೆಂಪು ರವರ ಪತ್ನಿ ಹೇಮಾವತಿಯವರ ಸಹೋದರಿಯ ಪುತ್ರ. ಸಿವಿಲ್ ಇಂಜಿನಿಯರಿಂಗ್ ಪದವೀಧರರು. ಈ ಇಬ್ಬರೂ ಗೆಳೆಯರನ್ನು ಆತ್ಮವೊಂದೇ, ದೇಹ ಎರಡು ಎಂಬಂತೆ ಒಂದುಗೂಡಿಸಿದ್ದು ನಿಸರ್ಗದ ಮೇಲಿನ ಪ್ರೀತಿ ಮತ್ತು ಛಾಯಾಗ್ರಹಣದ ಹವ್ಯಾಸ. ಆರಂಭದಲ್ಲಿ ಹಕ್ಕಿಗಳ ಚಿತ್ರ ತೆಗೆಯುವುದು, ಅವುಗಳ ಸಂಸಾರ, ಸಂತಾನೋತ್ಪತ್ತಿ ಇವುಗಳ ಕುರಿತು ದಾಖಲಿಸುತ್ತಿದ್ದ ಈ ಜೋಡಿ ಬಂಡಿಪುರ ಆರಣ್ಯ ದಾಟಿದ ನಂತರ ಸಿಗುವ ಮದುಮಲೈ ಅರಣ್ಯಕ್ಕೆ ಕಾಲಿಟ್ಟ ನಂತರ ಇವರ ಚಿಂತನಾಕ್ರಮವೇ ಬದಲಾಗಿ ಹೋಯಿತು ನಂತರದ ದಿನಗಳಲ್ಲಿ ಬಂಡಿಪುರ ಅರಣ್ಯದ ಸಮೀಪ ಮನೆ ಮಾಡಿಕೊಂಡಿಕೊಂಡು, ಇಪ್ಪತ್ತು ಎಕರೆ ಕುರುಚಲು ಕಾಡಿನ ಬಂಜರು ಭೂಮಿಯನ್ನು ಖರೀದಿಸಿ, ಅರಣ್ಯದೊಳಗಿನ ಜೀವಜಗತ್ತಿನೊಂದಿಗೆ ತಾವೂ ಲೀನವಾಗಿ ಹೋದರು.
1987 ರಲ್ಲಿ  ಪ್ರಥಮವಾಗಿ ನಾನು ಮಿತ್ರ ಡಾ.ಕೆ.ಪುಟ್ಟಸ್ವಾಮಿ ಅವರ ಮನೆಯಲ್ಲಿ ಕೃಪಾಕರ್ ಮತ್ತು ಸೇನಾನಿಯವರನ್ನು  ಭೇಟಿಯಾದೆ. ಮಂಡ್ಯ ಜಿಲ್ಲೆಯ ಸುತ್ತ ಮುತ್ತಲಿನ ಪ್ರದೇಶಗಳ  ಹಕ್ಕಿಗಳ ಕುರಿತಂತೆ ಚಿತ್ರಗಳನ್ನು ದಾಖಲಿಸುತ್ತಿದ್ದ ಸಂದರ್ಭದಲ್ಲಿ ಕಪ್ಪು ಬಿಳುಪಿನ ಕಚ್ಚಾ ಫಿಲಂ ಕೊರತೆಯಿಂದಾಗಿ ನೂರು ಅಡಿ ಫಿಲಂ  ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದ ಇವರು ಜೆ.ಪಿ.ನಗರದಲ್ಲಿದ್ದ  ಕೆ.ಪುಟ್ಟಸ್ವಾಮಿಯವರ ಮನೆಗೆ  ಬಂದಿದ್ದಾಗ ಪರಿಚಯವಾಯಿತು. ಆಶ್ಚರ್ಯಕರ ಸಂಗತಿಯೆಂದರೆ, ಈ ಮೂರು ದಶಕಗಳಲ್ಲಿ ಜಗತ್ತು ನಂಬಲಾರದಷ್ಟು ಬದಲಾಗಿದೆ. ನನ್ನ ಗೆಳೆಯರು ಮತ್ತು ಅವರ ವ್ಯಕ್ತಿತ್ವ ಹಾಗೂ ಚಹರೆಗಳು ಗುರುತು ಹಿಡಿಯರಾದಷ್ಟು ಬದಲಾಗಿವೆ. ಆದರೆ,  ಕೃಪಾಕರ್-ಸೇನಾನಿಯವರ ವ್ಯಕ್ತಿತ್ವದಲ್ಲಾಗಲಿ, ಅವರ ನಡೆ ಮತ್ತು ನುಡಿಗಳಲ್ಲಾಗಲಿ ಪ್ರಾಣಿ, ಪಕ್ಷಿಗಳ ಮೇಲಿನ ,  ಅವರ ಬದ್ಧತೆಯಲ್ಲಾಗಲಿ ಕಿಂಚಿತ್ತೂ ಬದಲಾಗಿಲ್ಲ. ನಿಸರ್ಗದ ಜೊತೆಗಿನ ಒಡನಾಟದಲ್ಲಿ ಈ ಇಬ್ಬರೂ ಮಿತ್ತರೂ  ಹೆಚ್ಚು ಮಾಗಿದ್ದಾರೆ. ಅತ್ಯಂತ ವಾಸ್ತವದ ನೆಲೆಯಲ್ಲಿ ಜಗತ್ತನ್ನು ನೋಡುವ, ಪರಿಭಾವಿಸುವ ಅನುಭಾವ ಲೋಕದ  ಮನೋಭಾವ ಮತ್ತು ಗ್ರಹಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇಂತಹ ಒಳನೋಟಗಳಿಂದಾಗಿ   ಅವರು ನಿಸರ್ಗ ಕುರಿತಂತೆ ಭಿನ್ನವಾಗಿ ಆಲೋಚಿಸಲು ಮತ್ತು ಗ್ರಹಿಸಲು ಸಾಧ್ಯವಾಯಿತು ಜೊತೆಗೆ  ಅರಣ್ಯ ರಕ್ಷಣೆಗೆ ವಿಭಿನ್ನ ಹಾದಿಯನ್ನು ತುಳಿಯಲು ಸಹಾಯಕವಾಯಿತು.

ಬಂಡಿಪುರ ಅರಣ್ಯದ ಪ್ರವೇಶ ದ್ವಾರದ ಬಳಿ ಇರುವ ಮೇಲುಕಾಮನಹಳ್ಳಿಯಲ್ಲಿ ಕೃಪಾಕರ್ ಮತ್ತು ಸೇನಾನಿ ವನ್ಯ ಜೀವಿಗಳ ಅಧ್ಯಯನಕ್ಕಾಗಿ ನೆಲೆ ನಿಂತಾಗ, ಅವರಿಗೆ ಅಲ್ಲಿನ  ವಾಸ್ತವ ಅರಿವಾಗತೊಡಗಿತು. ಅರಣ್ಯದ ಸುತ್ತ ಮುತ್ತಲಿನ ಹಳ್ಳಿಗಳ ಜನರು ದಿನ ನಿತ್ಯದ ಉರುವಲು ಕಟ್ಟಿಗೆಗಾಗಿ ಅರಣ್ಯವನ್ನು ಅವಲಮಬಿಸಿದ್ದರು. ಇದು ಅಂತಿಮವಾಗಿ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಹಳ್ಳಿಯ ಜನರ ನಡುವಿನ ಕಲಹ ಮತ್ತು ಸಂಘರ್ಷಕ್ಕೆ  ಕಾರಣವಾಯಿತು. ಸೌದೆ ಮತ್ತು ಕಾಡು ಪ್ರಾಣಿಗಳ ಬೇಟೆಗೆ ಹೋದವರಲ್ಲಿ ಕೆಲವು ಕಿಡಿಗೇಡಿಗಳು ಸಿಬ್ಬಂದಿಯ ಮೇಲಿನ ಸಿಟ್ಟಿಗೆ  ಅರಣ್ಯಕ್ಕೆ ಬೆಂಕಿ ಹಚ್ಚಿ ಪರಾರಿಯಾಗುತ್ತಿದ್ದರು. ಇಂತಹ ಸಂಘರ್ಷಕ್ಕೆ ಇತಿಶ್ರೀ ಹಾಡುವ ನಿಟ್ಟಿನಲ್ಲಿ   ಈ ಇಬ್ಬರೂ ಗೆಳೆಯರು ಸುತ್ತ ಮುತ್ತಲಿನ ಹಳ್ಳಿಗಳ ಜನರ ಮನವೊಲಿಸಿ "ನಮ್ಮ ಸಂಘ" ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದು ಮಾತ್ರವಲ್ಲದೆ. ಉರುವಲು ಕಟ್ಟಿಗೆಗಾಗಿ ಅರಣ್ಯವನ್ನು ಆಶ್ರಯಿಸುವುದನ್ನು ತಪ್ಪಿಸಲು ಎಲ್ಲರಿಗೂ ಅಡುಗೆ ಅನಿಲ ಹಾಗೂ ಒಲೆಯನ್ನು ವಿತರಿಸಿದರು. ಸರ್ಕಾರದ ನೆರವಿಲ್ಲದೆ, ತಮ್ಮ ಅನೇಕ ಗೆಳೆಯರ ಸಹಕಾರದಿಂದ ಆರಂಭಿಸಿದ ಈ ಆಂಧೋಲನವನ್ನು ಕರ್ನಾಟಕ ಅರಣ್ಯ ಇಲಾಖೆ ಇತ್ತೀಚೆಗಿನ ವರ್ಷಗಳಲ್ಲಿ ತನ್ನ ಕಾರ್ಯಕ್ರಮದಲ್ಲಿ ಅಳವಡಿಸಿಕೊಂಡಿದೆ. ಅರಣ್ಯದಂಚಿನ ಗ್ರಾಮಗಳ ಜನತೆಗೆ ಆರುನೂರು ರೂಪಾಯಿ ಸಬ್ಸಿಡಿ ದರದಲ್ಲಿ ಎರಡು ಅಡುಗೆ ಅನಿಲ ಸಿಲೆಂಡರ್ ಹಾಗೂ ಒಲೆಯನ್ನು ವಿತರಿಸುತ್ತಿದೆ. ಆದರೆ, ಕೃಪಾಕರ್ ಮತ್ತು ಸೇನಾನಿಯವರು ದೇಶ ವಿದೇಶಗಳಲ್ಲಿರುವ ತಮ್ಮ ಗೆಳೆಯರ ಮೂಲಕ ಒಟ್ಟು 194 ಹಳ್ಳಿಗಳಲ್ಲಿ  2.900 ಕುಟುಂಬಗಳಿಗೆ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ಕಲ್ಪಿಸಿ, ಅರಣ್ಯ ರಕ್ಷಣೆಗೆ ಮುಂದಾದ ಕಾರ್ಯವೈಖರಿ ಇಡೀ ದೇಶಕ್ಕೆ ಮಾದರಿಯಾಯಿತು.
ನಿಸರ್ಗದ ಮೇಲಿನ ಇಂತಹ ಶ್ರದ್ಧೆ ಮತ್ತು ಪ್ರೀತಿಯಿಂದ ಹಲವು ದಶಕಗಳ ಕಾಲ ಕಳೆದ ಈ ಜೋಡಿ ಇತ್ತೀಚೆಗೆ ಹೊರತಂದಿರುವ " "ಕೆನ್ನಾಯಿಯ ಜಾಡು ಹಿಡಿದು" ಕೃತಿ ಕೃಪಾಕರ್-ಸೇನಾನಿಯವರ ಕಾಡಿನ ಅನುಭವ ಮಾತ್ರವಾಗಿರದೆ, ನಿಸರ್ಗವನ್ನು ಅರಿಯಲು ಜನಸಾಮಾನ್ಯರಿಗೆ ಮಾರ್ಗದರ್ಶನ ನೀಡುವ ಅತ್ಯಮೂಲ್ಯ ಕೃತಿಯಾಗಿದೆ. ಯಾವುದೇ ಪ್ರಚಾರದ ಹಂಗಿಲ್ಲದೆ, ತೇಜಸ್ವಿಯರ ಕೃತಿಗಳನ್ನು ಪ್ರಕಟಿಸುವ ಪ್ರಸಿದ್ಧ ಮೈಸೂರಿನ ಪುಸ್ತಕ ಪ್ರಕಾಶನದ ಮೂಲಕ ಬಿಡುಗಡೆಯಾಗಿರುವ ಈ ಕೃತಿಯ ಲೇಖನಗಳು ಈಗಾಗಲೇ ಪ್ರಜಾವಾಣಿ ಪತ್ರಿಕೆಯಲ್ಲಿ ಸರಣಿ ಲೇಖನ ರೂಪದಲ್ಲಿ ಪ್ರಕಟವಾಗಿದ್ದವು. ಆದರೆ, ಈ ಕೃತಿಯಲ್ಲಿ ಪ್ರಾಣಿಗಳ ಛಾಯಾಚಿತ್ರಗಳನ್ನು ಬಳಸುವುದರ ಬದಲಾಗಿ ನಲವತ್ತು ಸಾವಿರ ಖರ್ಚು ಮಾಡಿ ಕಲಾವಿದರೊಬ್ಬರ ಕೈಯಲ್ಲಿ ನೂರಾರು ಚುಕ್ಕಿ ಚಿತ್ರಗಳನ್ನು ಸಿದ್ಧಪಡಿಸಿ ಬಳಸಿರುವುದು, ಪುಸ್ತಕದ ಒಳಪುಟಗಳ ಅಂದವನ್ನು ಹೆಚ್ಚಿಸಿದೆ. ಜೊತೆಗೆ ಯಾವುದೇ ಅಹಂ ಇಲ್ಲದೆ, ನಿರ್ಭಾವುಕ ಶೈಲಿಯಲ್ಲಿ ಮತ್ತು ಕೆಲವು ಕಡೆ ಅನುಭಾವಿ ಸಂತನ ಶೈಲಿಯಲ್ಲಿ ಹಾಗೂ ಹಾಸ್ಯ ಮಿಶ್ರಿತ ಶೈಲಿಯಲ್ಲಿ ಕಾಡಿನ ಅನುಭವಗಳನ್ನು ದಾಖಲಿಸಿರುವುದರಿಂದ ಓದುಗರಿಗೆ ಆಪ್ತತೆಯ ಅನುಭವವಾಗುತ್ತದೆ. ಈ ಕೃತಿಯಲ್ಲಿನ ಕೆಲವು ಅಧ್ಯಾಯಗಳನ್ನು ಓದುತ್ತಿದ್ದರೆ, ವಿಶೇಷವಾಗಿ " ಬೊಮ್ಮ ಎಂಬ ಜೆನ್ ಗುರು" ಓದುವಾಗ ನಮಗೆ ತೇಜಸ್ವಿಯವರ ಕರ್ವಾಲೊ ಕೃತಿಯ ಮುಂದಿನ ಭಾಗವನ್ನು ಓದುತ್ತಿದ್ದೇವೆ ಎಂಬ ಅನುಭವವಾಗುತ್ತದೆ. ಮಂದಣ್ಣನಿಗೆ ಪ್ರತಿಯಾಗಿ ಈ ಕೃತಿಯಲ್ಲಿ ಬೊಮ್ಮ ಇದ್ದರೆ, ತೇಜಸ್ವಿಯವರ ಬದಲಾಗಿ ಕೃಪಾಕರ್ ಮತ್ತು ಸೇನಾನಿ ಇದ್ದಾರೆ.

ಇಲ್ಲಿ ಯಾರೂ ಮುಖ್ಯರಲ್ಲ, ಅಮುಖ್ಯರಲ್ಲ ಎಂಬ ಅಧ್ಯಾಯದಲ್ಲಿ ತಾವು ಖರೀದಿಸಿದ ಭೂಮಿಯಲ್ಲಿ ಆಗುವ ನೈಸರ್ಗಿಕ ಬದಲಾವಣೆಯನ್ನು ಲೇಖಕರು ಅತ್ಯಂತ ಉತ್ಕೃಷ್ಟವಾದ ಮತ್ತು ಪ್ರೌಢಿಮಯಿಂದ ಕೂಡಿದ ಭಾಷೆಯಲ್ಲಿ ಹಿಡಿದಿಟ್ಟಿರುವುದು ನಿಸರ್ಗ ಕುರಿತಂತೆ ಕಾವ್ಯವೊಂದನ್ನು ಓದಿದಂತಾಗುತ್ತದೆ. ಬೇಸಿಗೆಯಲ್ಲಿ ಕಸದ ಕಡ್ಡಿಯಂತೆ ಬಿದ್ದಿದ್ದ  ಹುಲ್ಲಿನ ಬೀಜದ ಕಡ್ಡಿಯೊಂದು ಮುಂಗಾರಿನ ಮೊದಲ ಮಳೆಗೆ ಬಿರಿದು, ನೀರಿನಲ್ಲಿ ನಾಟ್ಯವಾಡುತ್ತಾ, ಬೀಜವನ್ನು ಭೂಮಿಗೆ ಬಿತ್ತುವ ಪರಿಯನ್ನು ಬಣ್ಣಿಸಿರುವುದು ಲೇಖಕರಿಬ್ಬರ ಒಳನೋಟಕ್ಕೆ ಸಾಕ್ಷಿಯಂತಿದೆ.  ಅದೇ ರೀತಿ ಕಣ್ಣರಿಯದೊಡೆಂ ಕರುಳರಿಯದೆ ಅಧ್ಯಾಯದಲ್ಲಿ  ದಕ್ಷಿಣ ಭಾರತದ ದೇವಸ್ಥಾನಗಳಿಗೆ ಕೊಡುಗೆಯ ಮೂಲಕ ಅಗಲಿದ್ದ  ತಾಯಿ ಮತ್ತು ಮರಿಯಾನೆ ಇಪ್ಪತ್ತು ವರ್ಷಗಳ ನಂತರ ವೈದ್ಯಕೀಯ ಶುಶ್ರೂಷೆ ಶಿಬಿರಲ್ಲಿ ಭೇಟಿಯಾದಾಗ ಅವುಗಳ ವರ್ತನೆಗೆ ಮತ್ತು ಕಣ್ಣೀರಿಗೆ ಸಾಕ್ಷಿಯಾಗಿದ್ದ ಕೃಪಾಕರ್ ಮತ್ತು ಸೇನಾನಿಯವರು ಹೃದಯಕ್ಕೆ ಹತ್ತಿರವಾದ ಭಾಷೆಯಲ್ಲಿ ತಾಯಿ ಮಗಳ ಸಂಗಮವನ್ನು ಬಣ್ಣಿಸುವಾಗ ನಮ್ಮ ಕಣ್ಣುಗಳು ಒದ್ದೆಯಾಗುತ್ತವೆ
.
ಕಾಡುನಾಯಿಗಳ ಅಧ್ಯಯನ ಕುರಿತಂತೆ ಹಲವಾರು ಅಧ್ಯಾಯಗಳು ಈ ಕೃತಿಯಲ್ಲಿದ್ದು ಈ ಇಬ್ಬರೂ ಛಾಯಾಗ್ರಾಹಕರು ವರ್ಷಗಟ್ಟಲೆ ಅವುಗಳ ಬೆನ್ನತ್ತಿ ದಾಖಲಿಸಿರುವ ರೀತಿ ಅದರಲ್ಲೂ ವಿಶೇಷವಾಗಿ ಸೋಲೊ ಎಂದು ಲೇಖಕರು ಹೆಸರಿಟ್ಟಿದ್ದ ಗಂಡು ಜಾತಿಯ ಕಾಡುನಾಯಿಯ ಕಥನ ಮತ್ತು ಕೆನ್ನಾಯಿ ಎಂಬ ಹೆಣ್ಣು ನಾಯಿಯ ಕುರಿತ ವಿವರಗಳ ಅಧ್ಯಾಯಗಳು ಓದುಗರ ಮನದಲ್ಲಿ ಶಾಸ್ವತವಾಗಿ ಉಳಿಯಬಲ್ಲ ಅಧ್ಯಾಯಗಳು. ವಿದಾಯ ಎಂಬ ಅಂತಿಮ ಅಧ್ಯಾಯವು ಲೇಖಕರು ಮತ್ತು ಕಾಡುನಾಯಿಗಳ ನಡುವೆ ಉಂಟಾಗಿದ್ದ ಭಾವನಾತ್ಮಕ ಸಂಬಂಧಕ್ಕೆ ರುಜುವಾತು ಎಂಬಂತಿದೆ.   ವರ್ಷಗಟ್ಟಲೆ ಕಾಡು ನಾಯಿಗಳ ಹಿಂದೆ ಬಿದ್ದು ಅಲೆದ ಪರಿಣಾಮವೆಂಬಂತೆ ಮನುಷ್ಯ ಲೋಕದಿಂದ ದೂರವಿರುತ್ತಿದ್ದ ಕಾಡು ನಾಯಿಗಳು ಲೇಖಕರು ಅರಣ್ಯದಿಂದ ಹೊರಡುವಾಗ ಅವರ ವಾಹನದ ಮುಂದೆ ಬಂದು ಕುಳಿತುಕೊಳ್ಳುವುದನ್ನು ಓದುವಾಗ "ಜಗತ್ತಿನ ಅತ್ಯಂತ ಕ್ರೂರ ಮತ್ತು ಅಪಾಯಕಾರಿ ಪ್ರಾಣಿ ಮನುಷ್ಯ ನಿಜ. ಆದರೆ, ಅಂತಹ ಮನುಷ್ಯರು ನಾವಲ್ಲ" ಎಂಬುದನ್ನು ಕೃಪಾಕರ್-ಸೇನಾನಿ ಜೋಡಿ ಕಾಡಿನಾಯಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎನಿಸುತ್ತದೆ.

ಒಮ್ಮೆ ತೇಜಸ್ವಿಯವರು ನದಿಗೆ ಗಾಳ ಎಸೆದು ಕುಳಿತು ಮಾತನಾಡುತ್ತಾ, " ಅಲ್ರಯ್ಯಾ,ನಾನು ನೋಡಿದ ಕಾಡಿರಲಿ, ನೀವು ನೋಡುತ್ತಿರುವ ಕಾಡು, ನೀವು ಬರೆಯುತ್ತಿರುವ ಕಾಡಿನ ಕಥೆಗಳನ್ನು ಮುಂದೊಮ್ಮೆ ಜನರು ಬರೀ ಸುಳ್ಳು ಅಥವಾ ಕಾಲ್ಪನಿಕ ಕಥೆಗಳು ಎಂದು ಹೇಳಬಹುದು. ಆಗ ಏನ್ ಮಾಡ್ತಿರಿ ನೋಡೋಣ" ಎಂಬ ಮಾತುಗಳನ್ನು ಕೃತಿಯ ಪ್ರಸ್ತಾವನೆ ಮಾತುಗಳಲ್ಲಿ ಕೃಪಾಕರ್ ಮತ್ತು ಸೇನಾನಿಯವರು ದಾಖಲಸಿರುವುದು ನಾವು ಬದುಕುತ್ತಿರುವ ಇಂದಿನ  ಅಭಿವೃದ್ಧಿಯ ಅಂಧಯುಗಕ್ಕೆ ಹೇಳಿ ಮಾಡಿಸಿದಂತಿವೆ. ಹಾಗಾಗಿ ಈ ಕೃತಿ ಕೇವಲ ಸಮಯ ಕೊಲ್ಲುವ ಅಥವಾ ಮನರಂಜನೆಗಾಗಿ ಓದುವ ಕೃತಿಯಾಗಿರದೆ, ಓದಿ ನಂತರವೂ ನಮ್ಮ ಸಂಗ್ರಹದಲ್ಲಿ ಕಾಪಾಡಿ ಇಟ್ಟುಕೊಳ್ಳಬೇಕಾದ ಹಾಗೂ ನಮ್ಮ ಮುಂದಿನ ತಲೆಮಾರಿಗೆ ಪರಿಸರದ ಕಥೆಯನ್ನು ದಾಟಿಸಬೇಕಾದ ಮಹತ್ವದ ಕೃತಿ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ..

(ಚಿತ್ರಗಳು- ಕೃಪಾಕರ- ಸೇನಾನಿ)

ಬುಧವಾರ, ಅಕ್ಟೋಬರ್ 10, 2018

ಅಭಿವ್ಯಕಕ್ತಿ ಸ್ವಾತಂತ್ರ್ಯದ ಮೇಲಿನ ಹಲ್ಲೆಯ ಕಪ್ಪು ಇತಿಹಾಸ






ದಿನಾಂಕ 28-8-18 ರ ಬುಧವಾರ ಮಹಾರಾಷ್ಟ್ರ, ದೆಹಲಿ  ಸೇರಿದಂತೆ ದೇಶದ ಹಲವೆಡೆ  ಮಾನವ ಹಕ್ಕು ಹಾಗೂ ಸಾಮಾಜಿಕ ಹೋರಾಟಗಾರ ನಿವಾಸದ ಮೇಲೆ ನಡೆದ ಪೊಲೀಸರ ದಾಳಿ ಹಾಗೂ ಕಾರ್ಯಕರ್ತರ ಬಂಧನ ಭಾರತದ ಪ್ರಜ್ಞಾವಂತ ನಾಗರೀಕರನ್ನು ಬೆಚ್ಚಿ ಬೀಳಿಸಿದೆ.  ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಇಂತಹ ಘಟನೆಗಳು ಹೊಸದೇನಲ್ಲ. ನಮ್ಮನನ್ನಾಳುವ ಸರ್ಕಾರಗಳು ಪಕ್ಷಬೇಧ ವಿಲ್ಲದೆ, ಇಂತಹ ದುಷ್ಕೃತ್ಯಗಳಿಗೆ ಕೈ ಹಾಕುತ್ತಲೇ ಬಂದಿವೆ.
ಇಂದಿರಾಗಾಂಧೀಯವರು1975 ರಲ್ಲಿ ದೇಶಾದ್ಯಂತ ಹೇರಿದ್ದ ತುರ್ತು ಪರಿಸ್ಥಿತಿಯ ಅವಧಿಯಲ್ಲಿ ನಾಗರೀಕ ಹಕ್ಕುಗಳನ್ನು ಮೊಟಕುಗೊಳಿಸಿ, ಅಭಿವ್ಯಕ್ತಿ ಸ್ವಾತಂತ್ರ್ಯದ ಬಾಯಿಗೆ ಬೀಗ ಜಡಿದು, ಬರೆಯುವ ಕೈಗಳಿಗೆ ಕೋಳ ತೊಡಗಿಸಲಾಗಿತ್ತು. 2011 ಮತ್ತು 12 ರ ಡಾ.ಮನಮೋಹನ್ ಸಿಂಗ್ ನೇತೃತ್ವದ ಅವಧಿಯಲ್ಲಿಯೂ ಸಹ ಛತ್ತೀಸ್ ಗಡದ  ಡಾ.ಬಿಯಾಂಕ್ ಸೇನ್ ಮತ್ತು ಮಹಾರಾಷ್ಟ್ರದ ಮೂಲದ ಅರುಣ್ ಫೆರಿರಾ ಮುಂತಾದ ಸಾಮಾಜಿಕ ಹೋರಾಟಗಾರರನ್ನು ಸೆರೆಮನೆಗೆ ತಳ್ಳಿ ಇನ್ನಿಲ್ಲದಂತಹ ಚಿತ್ರ ಹಿಂಸೆ ನೀಡಲಾಗಿತ್ತು. ಇದೀಗ ಜಾಗತಿಕ ಮಟ್ಟದಲ್ಲಿ ಯುಗ ಪುರುಷ ಎಂದು ಬಿಂಬಿಸಿಕೊಳ್ಳುತ್ತಿರುವ ನರೇಂದ್ರ ಮೋದಿಯವರ ಅವಧಿಯಲ್ಲಿ  ಪೊಲೀಸರು   ಅದೇ ಹೀನ ಕೃತ್ಯಕ್ಕೆ ಕೈ ಹಾಕಿ ಸುಪ್ರೀಂ ಕೋರ್ಟಿನಿಂದ ಕಪಾಳ ಮೋಕ್ಷ ಮಾಡಿಸಿಕೊಂಡಿದ್ದಾರೆ.
2012 ರಲ್ಲಿ ಡಾ.ಬಿಯಾಂಕ್ ಸೇನ್ ಅವರನ್ನು ಬಿಡುಗಡೆ ಮಾಡುವ ಸಮಯದಲ್ಲಿ ಅವರ ಮೇಲೆ ಹೊರಿಸಲಾಗಿದ್ದ ಆರೋಪ ಪಟ್ಟಿಯಲ್ಲಿ, ಬಿಯಾಂಕ್ ಅವರ ನಿವಾಸದಲ್ಲಿ  ನಕ್ಸಲ್ ಸಾಹಿತ್ಯ ಹಾಗೂ ಕರಪತ್ರಗಳಿದ್ದವು ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಸುಪ್ರೀಂ ಕೋರ್ಟ್ “ ಗಾಂಧೀಜಿ ಕೃತಿ ಓದುವನನ್ನು ಗಾಂಧಿವಾದಿ ಎಂದು ಏಕೆ ಹಣೆಪಟ್ಟಿ ಕಟ್ಟುತ್ತೀರಿ? ಮಾಕ್ಕ್ಸ್ ಓದುವವನು ಮಾರ್ಕ್ಸ್ ವಾದಿಯಲ್ಲ, ಗಾಂಧಿ ಓದುವವನು ಗಾಂಧಿವಾದಿಯಲ್ಲ” ಎಂದು ಪೊಲೀಸರಿಗೆ ಚಾಟಿ ಏಟು ಬೀಸಿತ್ತು. ಇದೀಗ  ಅದೇ ಸರ್ವೋಚ್ಚ ನ್ಯಾಯಾಲಯ “ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಿನ್ನ ಧ್ವನಿಗಳು ಇರಬಾದೆ? ಇಂತಹ ಭಿನ್ನತೆ ಪ್ರಜಾಪ್ರಭುತ್ವಕ್ಕೆ ಸುರಕ್ಷಾ ಕವಚ ಇದ್ದಂತೆ” ಎಂಬ ಮಹತ್ವದ  ಅಭಿಪ್ರಾಯವನ್ನು ನೀಡುವುದರ ಮೂಲಕ  ಆಳುವ ಸರ್ಕಾರಗಳಿಗೆ ಬಿಸಿ ಮುಟ್ಟಿಸುವುದರ ಜೊತೆಗೆ ಸಂವಿಧಾನದ ಘನತೆಯನ್ನು ಎತ್ತಿ ಹಿಡಿದಿದೆ. ಬಂಧಿತರಾಗಿದ್ದ ಐವರು ಕಾರ್ಯಕರ್ತರನ್ನು ಅವರ ನಿವಾಸದಲ್ಲಿ ಮುಂದಿನ ವಿಚಾರಣೆಯ ತನಕ ( 6-9-18 ರವರೆಗೆ) ಗೃಹಬಂಧನದಲ್ಲಿ ಇರಿಸಬೇಕೆಂದು ಆದೇಶ ನೀಡಿದೆ.
ಆದಿವಾಸಿ ಹಕ್ಕುಗಳಿಗಾಗಿ, ದಮನಿತರ ಪರವಾಗಿ ಹಾಗೂ ಪರಿಸರ ರಕ್ಷಣೆಗಾಗಿ ಹೋರಾಡುತ್ತಿರುವ ಸಾಮಾಜಿಕ ಕಾರ್ಯಕರ್ತರನ್ನು  ವ್ಯವಸ್ಥಿತ ಹುನ್ನಾರ ಹಗೂ   ಕ್ಷುಲ್ಲಕ ಆರೋಪಗಳಿಂದ  ಸದೆಬಡಿಯಲು ಹೊರಟ ಜಗತ್ತಿನ ಎಲ್ಲಾ ಸರ್ಕಾರಗಳು ಮತ್ತು ಸರ್ವಾಧಿಕಾರಿಗಳು ಅಂತಿಮವಾಗಿ ಮಣ್ಣು ಮುಕ್ಕಿದ್ದಾರೆ.  ಇಂತಹ ಸಾರ್ವಕಾಲಿಕ ಸತ್ಯವನ್ನು ನಮ್ಮನ್ನಾಳುವ ದೊರೆಗಳಿಗೆ ಮತ್ತು ಅವರ ಗುಲಾಮರಂತೆ ವರ್ತಿಸುತ್ತಿರುವ ಪೊಲೀಸರಿಗೆ ಮುಟ್ಟಿಸುವ  ಕೆಲಸವನ್ನು  ಈ ದೇಶದ ಪ್ರಜ್ಞಾವಂತ ನಾಗರೀಕರು ಮಾಡಬೇಕಿದೆ. ಇಂತಹ ಕಾರ್ಯವನ್ನು ಡಾ.ಬಿಯಾಂಕ್ ಸೇನ್ ಮತ್ತು ಅರುಣ್ ಫೆರಿರಾ ತಮ್ಮ ಹೋರಾಟಗಳ ಮೂಲಕ ವರ್ತಮಾನದ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಅರುಣ್ ಫೆರಿರಾ ಅವರು ತಮ್ಮ ಬಂಧನದ ಅವಧಿಯಲ್ಲಿ ಅನುಭವಿಸಿದ ಚಿತ್ರಹಿಂಸೆಯನ್ನು ಅತ್ಯಂತ ನಿರ್ಭಾವುಕ ಶೈಲಿಯಲ್ಲಿ ದಾಖಲಿಸಿರುವ “ ಕಲರ್ಸ್ ಆಫ್ ದ ಕೇಜ್ “ ( ಪಂಜರದ ಬಣ್ಣಗಳು) ಕೃತಿ ಓದುಗರನ್ನು ಬೆಚ್ಚಿ ಬೀಳಿಸುವುದರ ಜೊತೆಗೆ ಕಣ್ಣಲ್ಲಿ ನೀರು ತರಿಸುತ್ತದೆ.
ಮುಂಬೈ ನಗರದಲ್ಲಿ ಹುಟ್ಟಿ ಬೆಳೆದ ಅರುಣ್ ಫೆರಿರಾ  ಅಲ್ಲಿನ ಪ್ರತಿಷ್ಠಿತ ಸೆಂಟ್ ಕ್ಷೇವಿಯರ್ ಕಾಲೇಜಿನಲ್ಲಿ ಪದವಿ ಪಡೆದು, ವ್ಯಂಗ್ಯ ಚಿತ್ರಗಾರರಾಗಿ ವೃತ್ತಿಯನ್ನು ಆರಂಭಿಸಿದ್ದರು.  ಮಹಾರಾಷ್ಟ್ರದ ಎಲ್ಲಾ ಪ್ರಗತಿ ಪರ ಸಂಘಟನೆಗಳ ಜೊತೆ ಗುರುತಿಸಿಕೊಂಡವರು. ಜೊತೆಗೆ ಸಂಘಟನೆಗಳ ಸಮಾವೇಶಕ್ಕೆ ಭಿತ್ತಿ ಪತ್ರ, ಕರ ಪತ್ರ, ಬ್ಯಾನರ್ ಇತ್ಯಾದಿಗಳಿಗೆ ಚಿತ್ರ ಬರೆಯುತ್ತಾ, ಸಾಮಾಜಿಕ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದರು. 2007 ರಲ್ಲಿ ಸಮಾವೇಶವೊಂದನ್ನು ಮುಗಿಸಿಕೊಂಡು ಮುಂಬೈ ನಗರಕ್ಕೆ ಹಿಂತಿರುಗಲು ನಾಗಪುರ ರೈಲ್ವೆ ನಿಲ್ದಾಣದಲ್ಲಿ ಕಾಯುತ್ತಿದ್ದ ಅರುಣ್ ಅವರನ್ನು ಸಂಗಡಿಗರೊಂದಿಗೆ ಬಂಧಿಸಿದ ಮಹಾರಾಷ್ಟ್ರ ಪೊಲೀಸರು ಅರುಣ್ ಫೆರಿರಾಗೆ ನಕ್ಸಲ್ ಸಂಘಟನೆಗಳ ಜೊತೆ ಸಂಪರ್ಕ ಹೊಂದಿದ್ದಾನೆ ಎಂಬ ಪಟ್ಟ ಕಟ್ಟಿ ಬರೋಬ್ಬರಿ ನಾಲ್ಕು ವರ್ಷಗಳ ಕಾಲ ನಾಗಪುರದ ಜೈಲಿಗೆ ತಳ್ಳಿದರು.  ಜೈಲಿನಲ್ಲಿ ಇದ್ದುಕೊಂಡು, ಕಾನೂನು ಪದವಿಗಾಗಿ ಶಿಕ್ಷಣ ಪಡೆಯುತ್ತಾ, ಬೇಸಿಗೆಯ ದಿನಗಳಲ್ಲಿ 47 ಡಿಗ್ರಿ ಉಷ್ಣಾಂಶ  ಇರುವ ನಾಗಪುರದಲ್ಲಿ ಕೇವಲ ಒಂದು ಸಣ್ಣ ಕಿಟಿಕಿ ಇದ್ದಅಂಡಾ ಶೆಲ್ ಎಂದು ಕರೆಯಲಾಗುವ ಮೊಟ್ಟೆ ಆಕಾರದ ಕೊಠಡಿಯೊಳಗೆ ಬದುಕಿದ್ದ ಮಾತ್ರವಲ್ಲದೆ, , ಅಲ್ಲಿನ ಕ್ರಿಮಿನಲ್ ಅಪರಾಧಿಗಳ ವರ್ತನೆ, ಪೊಲೀಸ್ ಅಧಿಕಾರಿಗಳ ಲಂಚಾವತಾರ , ಕ್ರೌರ್ಯ ಎಲ್ಲವನ್ನೂ ಈ ಕೃತಿಯಲ್ಲಿ  ತಾವೇ ಸೃಷ್ಟಿಸಿದ ಚಿತ್ರಗಳ ಸಮೇತ ಬಣ್ಣಿಸಿದ್ದಾರೆ. 2011 ರ ಸೆಪ್ಟಂಬರ್ ತಿಂಗಳಿನಲ್ಲಿ ಎಲ್ಲಾ ಆರೋಪಗಳಿಂದ ಖುಲಾಸೆಗೊಂಡು , ಕಾನೂನು ಪದವಿಯ ಜೊತೆ ಜೈಲಿನ ಮುಖ್ಯ ದ್ವಾರದಿಂದ ಹೊರಬಂದು,  ತನಗಾಗಿ ಕಾಯುತ್ತಿದ್ದ ತನ್ನ ತಂದೆ, ತಾಯಿ, ಪತ್ನಿ ಮತ್ತು ಮಗು ಇವರನ್ನು ಭೇಟಿ ಮಾಡುವಷ್ಟರಲ್ಲಿ ಸಾದಾ ಉಡುಗೆಯಲ್ಲಿದ್ದ ಪೊಲೀಸರು ಮತ್ತೇ ಅವರನ್ನು ಬಂಧಿಸಿ, ಹೊಸ ಆರೋಪಗಳನ್ನು ಹೊರಿಸುವುದರ ಮೂಲಕ ಮತ್ತೇ ಅವರನ್ನು ಸೆರೆಮನೆಗೆ ನೂಕಿದರು. ಪೊಲೀಸರ ಎಲ್ಲಾ ಆರೋಪಗಳಿಂದ ಮುಕ್ತವಾಗಲು ಪುನಃ ಒಂದು ವರ್ಷದ ಅವಧಿ ಹಿಡಿಯಿತು. ಯಾವುದೇ ಹುರುಳಿಲ್ಲದ ಆರೋಪಗಳಿಗೆ ಬಲಿಯಾದ ಅರುಣ್ ಫೆರಿರಾ  ಅವರ ಯವ್ವನದ ಐದು ವರ್ಷಗಳು ಸೆರೆಮನೆಯ ಕತ್ತಲ ಕೂಪದಲ್ಲಿ ಕಳೆದು ಹೋದವು. ಇತ್ತ ಮುಂಬೈ ನಗರದಲ್ಲಿ ಅವರ ಕುಟುಂಬದ ಸದಸ್ಯರು ಸಮಾಜದ ಕ್ರೂರ ಕಣ್ಣಿಗೆ ತುತ್ತಾಗಿ ಅಪಮಾನದ ಬೇಗುದಿಯಲ್ಲಿ ಬೆಂದು ಹೋದರು. ಇದು  ಪ್ರಜ್ಞಾವಂತ ನಾಗರೀಕರನ್ನು  ನಮ್ಮನ್ನು ಆಳಿದ ಸರ್ಕಾರಗಳು ಹೇಗೆ ನಡೆಸಿಕೊಳ್ಳುತ್ತಾವೆ ಎಂಬುದಕ್ಕೆ ಒಮದು ಉದಾಹರಣೆ. ಮೊನ್ನೆ ಬಂಧಿತರಾದ ಐವರು ಸಾಮಾಜಿಕ ಕಾರ್ತರಲ್ಲಿ ಅರುಣ್ ಫೆರಿರಾ ಕೂಡ ಒಬ್ಬರಾಗಿದ್ದಾರೆ. ಛತ್ತೀಸ್ ಗಡದಲ್ಲಿ ಮಾನವ ಹಕ್ಕುಗಳ ಪರವಾಗಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದ ಅರುಣ್ ಅವರನ್ನು ಸಹ ಪೊಲೀಸರು ಬಂಧಿಸಿದ್ದಾರೆ. ಯಥಾ ಪ್ರಕಾರ ಅವರ ಮೇಲೆ ದೇಶ ದ್ರೋಹದ ಆರೋಪ ಹೊರಿಸಲಾಗಿದೆ.
ಅರುಣ್ ಫೆರಿರಾ ಅವರಿಗಿಂತ ಭಿನ್ನವಾದ ಕಥೆ ಡಾ.ಬಿಯಾಂಕ್ ಸೇನ್ ಅವರದು. ಪಶ್ಚಿಮ ಬಂಗಾಳ ಮೂಲದ ಸೇನ್ ಅವರು ದೆಹಲಿಯಲ್ಲಿ ಎಂ.ಬಿ. ಬಿ.ಎಸ್. ಪದವಿ ಹಾಗೂ ಸ್ನಾತಕೋತ್ತರ ಪಡವಿ ಪಡೆದು ಮಕ್ಕಳ ತಜ್ಞರಾಗಿ ಹೊರಬಂದ ಅವರು, ಲಕ್ಷಾಂತರ ರೂಪಾಯಿಗಳ ಸಂಬಳ ತೊರೆದು ಮೂರು ದಶಕಗಳ ಹಿಂದೆ ತಮ್ಮ ಪತ್ನಿ ಪ್ರೊ.ಇಲ್ಲಿಯಾ ಸೇನ್ ಜೊತೆ ಛತ್ತೀಸ್ ಗಡದ ರಾಯ್ ಪುರ ನಗರಕ್ಕೆ ಬಂದು ನೆಲೆಸಿದರು. ಆ ಕಾಲದಲ್ಲಿ  ಮಧ್ಯ ಪ್ರದೇಶದ ಭಾಗವಾಗಿದ್ದ ರಾಯ್ ಪುರ್ ಪ್ರದೇಶದ ಸುತ್ತ ಮುತ್ತಲಿನ  ಅರಣ್ಯದ ಆದಿವಾಸಿ ಹಳ್ಳಿಗಳ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದನ್ನು ನೋಡಿದ ಡಾ.ಬಿಯಾಂಕ ಸೇನ್, ಹಳ್ಳಿಗಳಲ್ಲಿ ಸಂಚರಿಸುತ್ತಾ ಮಕ್ಕಳ ಆರೋಗ್ಯ ಸೇವೆಯಲ್ಲಿ ನಿರತರಾಗಿದ್ದರು. ಅವರ ಪತ್ನಿ ಇಲ್ಲಿಯಾ ಸೇನ್ ರವರು ದೆಹಲಿಯ ಜವಹರ್ ಲಾಲ್ ನೆಹರೂ ವಿ.ವಿ. ಹಾಗೂ ಕೊಲ್ಕತ್ತ ನಗರದಲ್ಲಿ ಶಿಕ್ಷಣ ಪಡೆದು ವಾರ್ಧಾ ದಲ್ಲಿರುವ ಮಹಾತ್ಮ ಗಾಂಧಿ ಅಂತರಾಷ್ಟ್ರೀಯ ಹಿಂದಿ ವಿಶ್ವ ವಿದ್ಯಾಲಯದಲ್ಲಿ ಮಹಿಳಾ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಾ, ಪತಿಯ ಜೊತೆ ಛತ್ತಿಸ್ ಗಡ ಅರಣ್ಯದ ಮಹಿಳಾ ಆದಿವಾಸಿಗಳ ಶ್ರೇಯೋಭಿವೃದ್ಧಿಗಾಗಿ ದುಡಿದರು.
2007 ರಲ್ಲಿ ಅರುಣ್ ಫೆರಿರಾ ಬಂಧನವಾದ ಒಂದು ವಾರದ ನಂತರ ಡಾ.ಬಿಯಾಂಕ ಸೇನರನ್ನು ರಾಯಪುರ ನಗರದಲ್ಲಿ ಛತ್ತೀಸ್ ಗಡ ಪೊಲೀಸರು ಬಂಧಿಸಿದರು.  ಸೆರೆಮನೆಯಲ್ಲಿರುವ ನಕ್ಸಲ್ ನಾಯಕರು ಮತ್ತು ಅರಣ್ಯದೊಳಗೆ ಇರುವ ನಕ್ಸಲರು ಇವರ ನಡುವೆ ಸಂವಹನ ದ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಆರೋಪದಡಿ ಬಿಯಾಂಕ್ ಸೇನರನ್ನು ಬಂಧಿಸಿದ ಪೋಲಿಸರು ಅವರಿಗೆ ಛತ್ತೀಸ್ ಗಡ ಹೈ ಕೋರ್ಟಿನಲ್ಲಿ ಜೀವಾವಧಿ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾದರು. ಈ ಸುದ್ಧಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದು, ವಿಶ್ವ ಪ್ರಸಿದ್ಧ ಭಾಷಾ ತಜ್ಞ ನೋಮ್ ಚಾಮ್ ಸ್ಕಿ ಅವರಿಂದ ಹಿಡಿದು, ಅಮಾರ್ತ್ಯ ಸೇನ್, ವಿಶ್ವ ಮಾನವ ಹಕ್ಕುಗಳ ಸಂಘಟನೆ ಹೀಗೆ ಹಲವು ಗಣ್ಯರಿಂದ  ಜಾಗತಿಕ ಮಟ್ಟದಲ್ಲಿತೀವ್ರವಾದ ವಿರೋಧ ವ್ಯಕ್ತವಾಯಿತು. ಅಂತಿಮವಾಗಿ ನಾಲ್ಕು ವರ್ಷಗಳ ನಂತರ 2011 ರಲ್ಲಿ ಸುಪ್ರೀಂಕೋರ್ಟ್ ಮಧ್ಯ ಪ್ರವೇಶದಿಂದಾಗಿ  ಡಾ,ಬಿಯಾಂಕ್ ಸೇನ್ ಹೊರಬರಲು ಸಾಧ್ಯವಾಯಿತು.
ಅವರ ಪತ್ನಿ ಇಲ್ಲಿಯಾ ಸೇನ್ ಅವರು ತಮ್ಮ ಪತಿಯ ಬಂಧನ ಹೋರಾಟ ಹಾಗೂ ತಾವಿಬ್ಬರೂ ಛತ್ತೀಸ್ ಗಡದಲ್ಲಿ ಮೂರು ದಶಕಗಳ ಕಾಲ ಸಲ್ಲಿಸಿದ ನಿಸ್ವಾರ್ಥ ಸೇವೆಯ ಅನುಭವಗಳನ್ನು ತಮ್ಮ “ ಇನ್ ಸೈಡ್ ದ ಛತ್ತೀಸ್ ಗಡ್” ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.  ಇಡೀ ಕೃತಿಯಲ್ಲಿ ಆರಂಭದ ಅಧ್ಯಾಯಗಳಲ್ಲಿ ತಮ್ಮ ಪತಿಯ ಬಿಡುಗಡೆಗಾಗಿ ನಡೆಸಿದ ಹೋರಾಟವನ್ನು ದಾಖಲಿಸಿರುವ ಅವರು, ನಂತರ ಅಧ್ಯಾಯಗಳಲ್ಲಿ ಆದಿವಾಸಿ ಮಹಿಳಾ ಸಮುದಾಯದಲ್ಲಿ ತಾವು ತಂದ ಬದಲಾವಣೆ ಹಾಗೂ ಸುಧಾರಣೆಗಳನ್ನು ದಾಖಲಿಸಿದ್ದಾರೆ. ಈ ಎರಡು ಕೃತಿಗಳು ಆಳುವ ಸರ್ಕಾರಗಳ ಮೊತ್ತೊಂದು ಮುಖವನ್ನು ಸಮರ್ಥವಾಗಿ ಅನಾವರಣಗೊಳಿಸುವುದರ ಜೊತೆಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ವ್ಯವಸ್ಥಿತವಾಗಿ ಹೇಗೆ ದಮನಗೊಳಿಸಲಾಗುತ್ತಿದೆ ಎಂಬುದನ್ನು ತಿಳಿಸಿಕೊಡುತ್ತವೆ.
ನೊಂದವರು, ಬಡವರು, ಆದಿವಾಸಿಗಳು, ಕೂಲಿಕಾರ್ಮಿಕರ ಪರವಾಗಿ ದುಡಿಯವವರಿಗೆ “ನಗರದ ನಕ್ಸಲರು” ಎಂಬ ಹೊಸ ಹಣೆ ಪಟ್ಟಿ ಕಟ್ಟುವವರು ಒಮ್ಮೆ ತಮ್ಮ ಒಳಗಣ್ಣನ್ನು ತೆರೆದು ಆತ್ಮ ಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಬೇಕಿದೆ.
(ಚಿತ್ರಗಳು ಸೌಜನ್ಯ ಟೈಮ್ಸ್ ಆಫ್ ಇಂಡಿಯ ಮತ್ತು ಇಂಡಿಯಾ ಟುಡೆ)

ಮಂಗಳವಾರ, ಅಕ್ಟೋಬರ್ 9, 2018

ಕೆ.ಸತ್ಯನಾರಾಯಣರ ಸ್ಕೂಲು ಬಿಡುವ ಸಮಯ ಪ್ರಭಂಧಗಳ ಕೃತಿ ಕುರಿತು




ಕನ್ನಡದ ಹಿರಿಯ ಕಥಗಾರರೂ, ಕಾದಂಬರಿಕಾರು ಹಾಗೂ ಪ್ರಬಂಧಕಾರರಾಗಿರುವ ಕೆ.ಸತ್ಯನಾರಾಯಣರವರ ಇತ್ತೀಚೆಗಿನ " ಸ್ಕೂಲು ಬಿಡುವ ಸಮಯ" ಪ್ರಬಂಧಗಳ ಕೃತಿಯನ್ನು ಓದುತ್ತಿದ್ದೆ. ವಯಸ್ಸಾಗುತ್ತಿರುವುದು ಸತ್ಯನಾರಾಯಣರಿಗೆ ಮತ್ತು ಅವರೇ ಒಂದು ಪ್ರಬಂಧದಲ್ಲಿ ಹೇಳಿಕೊಂಡಿರುವ ಹಾಗೆ ಕಾಲಕ್ಕೆ ಮತ್ತು ಇತಿಹಾಸಕ್ಕೆ ಹೊರತು ಅವರ ಬರೆವಣಿಗೆಗೆ ಅಲ್ಲ ಎಂದು ಆ ಕ್ಷಣಕ್ಕೆ ಅನಿಸಿತು.
ಕಳೆದ ಮೂರುವರೆ ದಶಕಗಳಿಂದ ನಿರಂತರವಾಗಿ ಬರೆಯುತ್ತಿರುವ ಶ್ರೀ ಕೆ. ಕೆ.ಸತ್ಯನಾರಾಯಣರ  ಬರೆವಣಿಗೆಯಲ್ಲಿ ಎಲ್ಲಿಯೂ ಅಕ್ಷರದ ದಣಿವು ಎಂಬ ಸುಳಿವು ಕಾಣುವುದಿಲ್ಲ. ಏಕೆಂದರೆ, ಅವರ ಕಥೆಗಳಾಗಲಿ,ಕಾದಂಬರಿಗಳಾಗಲಿ ಅಥವಾ ಪ್ರಬಂಧಗಳ ಭಾಷೆಯಲ್ಲಿ ಮತ್ತು ಅಭಿವ್ಯಕ್ತಿಯಲ್ಲಿ ಯಾವುದೇ ಸೋಗಲಾಡಿತನವಾಗಲಿ ಇಲ್ಲವೆ, ಆತ್ಮರತಿಯ ಗುಣಗಳು ಕಾಣುವುದಿಲ್ಲ. ಒಬ್ಬ ಅಗೋಚರ ಓದುಗನನ್ನು ಆತ್ಮಸಂಗಾತನನ್ನಾಗಿ ಮಾಡಿಕೊಂಡು, ಆತ್ಮೀಯವಾಗಿಸಿಕೊಂಡು ತಾವು ಕಂಡ ಲೋಕದ ವ್ಯವಹಾರಗಳನ್ನು ಕಥೆ, ಕಾದಂಬರಿ ಮತ್ತು ಪ್ರಬಂಧಗಳ ರೂಪದಲ್ಲಿ ಅವನಿಗೆ ಅವರು ದಾಟಿಸುವ ಪರಿ ನಿಜಕ್ಕೂ  ಅನನ್ಯವಾದದು.ಕನ್ನಡದ ಸಾಹಿತ್ಯ ಜಗತ್ತು ಅವರನ್ನು ಮಾಸ್ತಿಯವರ ಉತ್ತರಾಧಿಕಾರಿ ಎಂದು ಬಣ್ಣಿಸುತ್ತದೆ. ಮಾಸ್ತಿ ಮತ್ತು ಸತ್ಯನಾರಾಯಣ ಇಬ್ಬರೂ ಸರ್ಕಾರದ ಉನ್ನತಾಧಿಕಾರಿಗಳಾಗಿ ಮುಕ್ತ ಮುನಸ್ಸಿನಿಂದ ತಮ್ಮ ಕಣ್ಣಮುಂದಿನ ಲೋಕವನ್ನು ಗ್ರಹಿಸಿದವರು ನಿಜ. ಆದರೆ, ವಿಷಯಗಳ ಅಭಿವ್ಯಕ್ತಿಯಲ್ಲಿ ಮತ್ತು ತಾವು ನಂಬಿದ ಧರ್ಮ, ಆಚಾರ, ವಿಚಾರಗಳಲ್ಲಿ ಮಾಸ್ತಿಯವರದು ಮಡಿವಂತಿಕೆ ಮನಸ್ಸಾದರೆ, ಸತ್ಯನಾರಾಯಣರದು  ಜಾತಿ, ಧರ್ಮ ಮತ್ತು ಪಂಥಗಳನ್ನು ಮೀರಿದ ಮನಸ್ಸು.
ಕೆ.ಸತ್ಯನಾರಾಯಣರು ಮಂಡ್ಯ ಜಿಲ್ಲೆಯ ಒಂದು ಸಾಧಾರಣ ಗ್ರಾಮದಲ್ಲಿ ( ನನ್ನೂರು ಕೊಪ್ಪ ಗ್ರಾಮದಲ್ಲಿ) ಸಾಮಾನ್ಯ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದವರು. ಹಾಗಾಗಿ ಅವರ ನಡೆ, ನುಡಿಗಳಲ್ಲಿ ಜಾತಿ ಧರ್ಮಗಳನ್ನು ಮೀರಿದ ಗ್ರಾಮೀಣ ಸಂಸ್ಕೃತಿಯ ಕೊಡು ಕೊಳೆಯ ಪ್ರಭಾವ ಎದ್ದುಕಾಣುತ್ತದೆ. ಒಬ್ಬರಿಗೊಬ್ಬರು ಹಂಚಿ ತಿನ್ನುವ, ಕಷ್ಟ ಸುಖಗಳಲ್ಲಿ ಭಾಗಿಯಾಗುವ ಗುಣ  ಗ್ರಾಮ ಸಂಸ್ಕೃತಿಯ ಜೀವನಾಡಿಯಾಗಿದೆ. ತಮ್ಮ ಬಾಲ್ಯದಿಂದಲೂ ಇಂತಹ ಉದಾತ್ತ ಪರಂಮಪರೆಯ ಜೊತೆ ಒಡನಾಡುತ್ತಾ ಬೆಳೆದ ಲೇಖಕರ ಕಥೆಗಳಲ್ಲಿ, ಪ್ರಬಂಧಗಳಲ್ಲಿ ಹಾಗೂ ಅವರ ಕಾದಂಬರಿಯ ಪಾತ್ರಗಳಲ್ಲಿ ಮತ್ತು  ಬಾಲ್ಯದ ನೆನಪುಗಳಲ್ಲಿ ಇಂತಹ ವೈವಿಧ್ಯಮಯ ವಿಷಯಗಳು ಅಪ್ರಜ್ಞಾಪೂರ್ವಕವಾಗಿ ಅಕ್ಷರ ರೂಪ ತಾಳುತ್ತವೆ. ಸತ್ಯನಾರಾಯಣರ ಬರೆವಣಿಗೆಯ ಹಿಂದಿನ ದೊಡ್ಡ ಶಕ್ತಿಯೆಂದರೆ. ಅವರು ಬದುಕನ್ನು ಅಥವಾ ತಮ್ಮ ಕಣ್ಣ ಮುಂದಿನ ಲೋಕವನ್ನು ಯಾವುದೇ ಪೂರ್ವಾಗ್ರಹವಿಲ್ಲದೆ ಗ್ರಹಿಸುವ ಮತ್ತು ವಿಶ್ಲೇಸಿಸುವ ಮನಸ್ಸು ಅವರನ್ನು ಕನ್ನಡ ಸಾಂಸ್ಕೃತಿಕ ಲೋಕದ ಬಹು ಮುಖ್ಯ ಬರಹಗಾರರನ್ನಾಗಿಸಿದೆ. ನಾನು ಹಿರಿಯ ಮಿತ್ರ ಜಯಂತಕಾಯ್ಕಿಣಿ ಅವರಲ್ಲಿಯೂ  ಇಂತಹ ಗುಣವನ್ನು ಕಂಡಿದ್ದೀನಿ. ಈ ಇಬ್ಬರೂ ಬರಹಗಾರರು ಎಂದಿಗೂ ಸಾರ್ವಜನಿಕವಾಗಿ ಅಥವಾ ಖಾಸಾಗಿಯಾಗಿ ಮಿತ್ರಹರ ಜೊತೆ ಒಡನಾಡುವ ಸಂದರ್ಭದಲ್ಲಿ ಉಗ್ರವಾದವನ್ನು ಮಂಡಿಸಿದವರಲ್ಲ ಜೊತೆಗೆ ವ್ಯಗ್ರಗೊಂಡವರಲ್ಲ. ಹೇಳಬೇಕಾದ ನಿಷ್ಟುರ ಸತ್ಯಗಳನ್ನು ತಣ್ಣನೆಯ ಭಾವನೆಯ ಮೂಲಕ  ಅಕ್ಷರಗಳಲ್ಲಿ ಮತ್ತು ಮಾತುಗಳಲ್ಲಿ ದಾಖಲಿಸಿದವರು.
1990ರ ದಶಕದಲ್ಲಿ ಕೈಲಾಸ ಮಾನಸ ಸರೋವರ ಯಾತ್ರೆಯ ಕುರಿತು ಕೆ.ಸತ್ಯನಾರಾಯಣರು ಬರೆದ " ಸದ್ದು, ದೇವರು ಸ್ನಾನ ಮಾಡುತ್ತಿದ್ದಾನೆ" ಎಂಬ ಪ್ರವಾಸ ಕಥ ನಾನು ಓದಿದ ಲೇಖಕರ ಮೊದಲ ಕೃತಿ. ಆನಂತರದ ದಿನಗಳಲ್ಲಿ ಅವರ ನಕ್ಸಲ್ ವರಸೆ, ನಿಮ್ಮ ಮೊದಲ ಪ್ರೇಮಕಥೆ, ಹೆಗ್ಗುರುತು, ಚಿತ್ರಗುಪ್ತನ ಕಥೆಗಳು ಮತ್ತು ಅಮೇರಿಕಾಮನೆ ಕಥಾ ಸಂಕಲಗಳನ್ನು ಹಾಗೂ ಸನ್ನಿಧಾನ, ರಾಜಧಾನಿಯಲ್ಲಿ ಶ್ರೀಮತಿಯರು, ವಿಚ್ಛೇಧನಾ ಪರಿಣಯ ಮತ್ತು ವಿಕಲ್ಪ ಕಾದಂಬರಿಗಳನ್ನು ಓದಿದವನು. ಇಷ್ಟೊಂದು ಸುಲಲಿತವಾಗಿ, ಯಾವುದೇ ರಾಗದ್ವೇಷಕ್ಕೆ ಒಳಗಾಗದೆ, ಕಥನವನ್ನು ಕಟ್ಟಿಕೊಡಲು ಸಾಧ್ಯವೆ? ಎಂದು ನಾನು ಸತ್ಯನಾರಾಯಣರ ಅಭಿವ್ಯಕ್ತಿಯ ಶೈಲಿ ಮತ್ತು ಸರಳ ಭಾಷೆಯನ್ನು ಕಂಡು  ಬೆರಗಾಗಿದ್ದೀನಿ. ಕೇಂದ್ರ ಸರ್ಕಾರದ ಆದಾಯ ತೆರಿಗೆ ಇಲಾಖೆಯಲ್ಲಿ ಉನ್ನತ ಅಧಿಕಾರಿಯಾಗಿ, ಕರ್ನಾಟಕ ಮತ್ತು ಗೋವಾ ರಾಜ್ಯಗಳ ಆಯುಕ್ತರಾಗಿ ಸೇವೆ ಸಲ್ಲಿಸಿ, ದೇಶದ ವಿವಿಧ ನಗರಗಳ ವಿವಿಧ ಭಾಷೆ ಮತ್ತಿ ಸಂಸ್ಕೃತಿಗಳ ಜೊತೆ ನಿರಂತರ ಒಡನಾಡುತ್ತಾ, ತಮ್ಮ ಅನುಭವವನ್ನು ಹೆಚ್ಚಿಸಿಕೊಂಡ ಲೇಖಕರು ತಾವು ಕಂಡುಂಡ ಘಟನೆಗಳನ್ನಾಗಲಿ ಅಥವಾ ವ್ಯಕ್ತಿಗಳನ್ನಾಗಲಿ ಕಥನದ ರೂಪಕ್ಕೆ ಇಳಿಸುವಾಗ ತಾಳುವ ನಿರ್ಭಾವುಕತೆ ಅವರ ಕಥೆ ಮತ್ತು ಕಾದಂಬರಿಗಳ ಘನತೆಯನ್ನು, ತೂಕವನ್ನು ಹೆಚ್ಚಿಸಿವೆ.
ತಮ್ಮ ಆತ್ಮ ಕಥನವನ್ನು ಲೇಖಕರು ಮೂರು ಭಾಗಗಳನ್ನಾಗಿ ಮಾಡಿಕೊಂಡು, ನಾವೇನು ಬಡವರಲ್ಲ, ಸಣ್ಣ ಸಣ್ಣ ಆಸೆಗಳ ಆತ್ಮಚರಿತ್ರೆ ಮತ್ತು ವೃತ್ತಿ ವಿಲಾಸ ಎಂಬ ಶೀರ್ಷಿಕೆಯಡಿ ಕಟ್ಟಿಕೊಟ್ಟಿದ್ದಾರೆ. ವ್ಯಯಕ್ತಿಕ ವ್ಯಸನ, ಆತ್ಮರತಿಯ ವಿಜೃಂಭಣೆ ಮತ್ತು ಬದುಕಿನಲ್ಲಿ ತಮಗೆ ಕೇಡು ಬಯಸಿದವರ ಮೇಲೆ ದ್ವೇಷ ಮತ್ತಿ ಸಿಟ್ಟನ್ನು ಅಕ್ಷರ ರೂಪದಲ್ಲಿ ಕಾರಿಕೊಳ್ಳುವುದು ಆತ್ಮಚರಿತ್ರೆಯ ಗುಣ ಲಕ್ಷಣಗಳು ಎಂಬಂತಿರುವ ಇಂದಿನ ಸನ್ನಿವೇಶದಲ್ಲಿ ಪ್ರತಿಯೊಂದು ಘಟನೆಯಲ್ಲಿ ತಮ್ಮನ್ನು ಸ್ವವಿಮರ್ಶೆಗೆ ಒಡ್ಡಿಕೊಂಡು, ಗೇಲಿ ಮಾಡಿಕೊಳ್ಳುತ್ತಾ ನಿರೂಪಿಸಿರುವ ಬಗೆ ಲೇಖಕರ ಕುರಿತು ಓದುಗರಲ್ಲಿ ಗೌರವ ಉಂಟಾಗುತ್ತದೆ. ಗತ್ತು ಮತ್ತು ಗಂಟುಮೋರೆಯ ಲೇಖಕರಿಗಿಂತ ಸತ್ಯನಾರಾಯಣರವರು ಭಿನ್ನವಾಗಿ ಕಾಣುವುದು ಈ ಕಾರಣಕ್ಕಾಗಿ.


ಪ್ರಬಂಧದ ವಿಷಯಕ್ಕೆ ಬಂದರೆ, ನಾವೆಲ್ಲಾ ಕ್ಷುಲ್ಲಕ ಸಂಗತಿಗಳು ಎಂದು ಪರಿಗಣಿಸದೆ ಬಿಟ್ಟಿರುವ ವಿಷಯಗಳನ್ನು ಎತ್ತಿಕೊಂಡು ಅವರು ಓದುಗರೊಂದಿಗೆ ಆಪ್ತವಾಗಿ ಚರ್ಚಿಸುವ ಶೈಲಿಯಿಂದಾಗಿ ಅವರ ಪ್ರಬಂಧಗಳು ನಮ್ಮ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತವೆ. ಈ ಕೃತಿಯಲ್ಲಿನ ಸ್ಕೂಲು ಬಿಡುವ ಸಮಯ, ನಾವೇಕೆ ನಗುವುದಿಲ್ಲ, ನಿಮ್ಮಮನೆಯ ವಿಳಾಸ, ಕಣ್ಣು ಮಡಗುವುದು, ಭಾನುವಾರದ ಆಟದ ಮೈದಾನ, ಹರಕಲು ಬನಿಯನ್, ಅಭಿಪ್ರಾಯ ಕೋರಿ ಇಂತಹ ಪ್ರಬಂಧಗಳಲ್ಲಿ ಲೇಖಕರು ತಮ್ಮ ಅನುಭವಗಳನ್ನು ತೆಳು ಹಾಸ್ಯದ ಶೈಲಿಯಲ್ಲಿ ಹೇಳುತ್ತಲೇ, ನಾವು ಬದುಕುತ್ತಿರುವ ಆಧುನಿಕ ಬದುಕಿನ ಬವಣೆ ಮತ್ತು ಬಿಕ್ಕಟ್ಟುಗಳನ್ನು ಓದಿಗರೆದೆಗೆ ಚಿಂತನೆಯ ರೂಪದಲ್ಲಿ ವರ್ಗಾಯಿಸುತ್ತಾರೆ. ಸತ್ಯನಾರಾಯಣರ ಪ್ರಬಂಧಗಳ ಗಟ್ಟಿತನದ ಮೂಲವಿರುವುದು ಅವರು ಆಯ್ದುಕೊಂಡ ವಿಷಯ ಮತ್ತು ವ್ಯಾಖ್ಯಾನಿಸುವ ಪರಿಯಲ್ಲಿ.  ಇವೆರೆಡೂ ಓದುಗರಿಗೆ ಆಪ್ತವೆಸಿಸುತ್ತವೆ. ಟೈಮ್ ಪಾಸ್ ಪ್ರಬಂಧಗಳು ಮತ್ತು ಹರಟೆ ಪ್ರಬಂಧಗಳಿಗೆ ಪರ್ಯಾಯವಾಗಿ ಕೆ.ಸತ್ಯನಾರಾಯಣರು ಕಟ್ಟಿಕೊಡುವ ಪ್ರಬಂಧಗಳು ನಮಗೆ ಗೋರೂರು ರಾಮಸ್ವಾಮಿ ಅಯ್ಯಂಗಾರ್ ಅವರ ನಮ್ಮ ಊರಿನ ರಸಿಕರು ಪ್ರಬಂಧಗಳ ಮಾದರಿಯಲ್ಲಿ ನಾವು ಕಳೆದುಕೊಳ್ಳುತ್ತಿರುವ ಮನುಷ್ಯ ಸಂಬಂಧ ಮತ್ತು ಮಾನವೀಯತೆ ಕುರಿತಂತೆ ಪುನರ್ ವ್ಯಾಖ್ಯಾನದಂತೆ ಕಾಣುತ್ತವೆ.
ಕೊನೆಯ ಮಾತು- ಕೃತಿಯಲ್ಲಿನ ಹರಕಲು ಬನಿಯನ್ ಪ್ರಬಂಧ ಓದಿದ ನನ್ನ ಪತ್ನಿ. " ಸ್ವಾಮಿ ನೋಡಪ್ಪ, ಒಂದೇ ಊರಿನ ಒಂದು ಬೀದಿಯ ಆಚೆ-ಈಚೆಗಿನ ಅಣ್ಣ ತಮ್ಮಂದಿರ ಕಥೆಯಂತಿದೆ" ಎಂದು ನಗೆಯಾಡಿದಳು. ಸದಾ ತೂತು ತೂತಾದ ಹರಕಲು ಬನಿಯನ್ ತೊಟ್ಟು ಪತ್ನಿಯಿಂದ ಬೈಸಿಕೊಳ್ಳುವ ಪ್ರಸಂಗವನ್ನು ಸತ್ಯನಾರಾಯಣರು ಸ್ವಾರಸ್ಯಕರವಾಗಿ ಬಣ್ಣಿಸಿದ್ದಾರೆ. ಅವರದು ಬನಿಯನ್ ಕಥೆಯಾದರೆ, ನನ್ನದು ಚಡ್ಡಿಯ ಕಥೆ. ಹಿಂಭಾಗದಲ್ಲಿ ತೂತು ತೂತಾದ ಹಾಗೂ ಎಲಾಸ್ಟಿಕ್ ಕಿತ್ತು ಹೋದ ಚಡ್ಡಿಗಳನ್ನು ಛಲ ಬಿಡದ ತ್ರಿವಿಕ್ರಮನಂತೆ  ತೊಡುವುದು ನನ್ನ ಹವ್ಯಾಸ. ಏಕೆಂದರೆ ಇನ್ನೂರು ರೂಪಾಯಿ ಕೊಟ್ಟು ತಂದ ಚಡ್ಡಿಗಳು ಕನಿಷ್ಟ ಎರಡು ವರ್ಷ ಬಾಳಿಕೆ ಬರಲೇ ಬೇಕು ಎಂದು ತೀರ್ಮಾನಿಸಿ ಅವುಗಳನ್ನು ತೊಡುತ್ತೇನೆ. ಇದಕ್ಕೆ ಪತ್ನಿ ಮತ್ತು ಮಕ್ಕಳ ಆಕ್ಷೇಪ. ಈ ಸಂದರ್ಭದಲ್ಲಿ ನಾನು ಅವರಿಗೆ ಕೊಡುವ ಉತ್ತರವೇನೆಂದರೆ, "ನಾನು ಪ್ಯಾಂಟಿನ ಮೇಲೆ ಅಥವಾ ಮನೆಯಲ್ಲಿ ಪಂಚೆಯ ಮೇಲೆ ಚಡ್ಡಿಗಳನ್ನು ತೊಡುವುದಿಲ್ಲ. ಇದಕ್ಕೆ ನಿಮ್ಮದೇನು ಆಕ್ಷೇಪ?" ಈಗ ಅವುಗಳನ್ನು ನನಗೆ ಸಿಗದಂತೆ ಮರೆ ಮಾಡುವ ತಂತ್ರವವನ್ನು ಉಪಯೋಗಿಸುತ್ತಿದ್ದಾರೆ. ಸತ್ಯನಾರಾಯಣರ ಪ್ರಬಂಧ ಓದುವಾಗ ನಮ್ಮಿಬ್ಬರ ಮೇಲೆ ನನ್ನೂರಿನ ಮಣ್ಣು, ನೀರು ಮತ್ತು ಗಾಳಿಯ ಪ್ರಭಾವ ಇರಬೇಕು ಎಂದು ಭಾವಿಸಿಕೊಂಡೆ.  ನಾವು ಬಿಟ್ಟು ಬಂದ ಊರನ್ನು ಹಾಗೂ  ಮತ್ತೇ ಹಿಂತಿರುಗಿ ಹೋಗಲಾದ ಬಾಲ್ಯವನ್ನು ನೆನೆದು ಕಣ್ಣುಗಳು ಕ್ಷಣ ಕಾಲ ತೇವಗೊಂಡವು. ಇಲ್ಲಿನ  ನಿಲ್ದಾಣಗಳ ಅನೇಕಾಂತವಾದ" ಎಂಬ ಪ್ರಬಂಧದಲ್ಲಿ ಆ ಕಾಲದ ನನ್ನೂರಿನಲ್ಲಿ ಬಸ್ ಪ್ರಯಾಣದ ವೈಖರಿ ಹೇಗಿತ್ತು ಎಂಬುದನ್ನು ಕಟ್ಟಿಕೊಟ್ಟಿದ್ದಾರೆ. 1960 ಮತ್ತು 70 ರ ದಶಕದಲ್ಲಿ ಕೊಪ್ಪ-ಮದ್ದೂರು ನಡುವಿನ 19 ಕಿಲೊಮೀಟರ್ ದೂರಕ್ಕೆ ಒಂದೂವರೆ ಗಂಟೆ ಮತ್ತು ಕೊಪ್ಪ-ಮಂಡ್ಯ ನಡುವಿನ  25 ಕಿಲೋಮೀಟರ್ ದೂರಕ್ಕೆ ಎರಡು ಗಂಟೆಯ  ಪ್ರಯಾವಿತ್ತು ಎಂದರೆ ನೀವು ನಂಬುತ್ತೀರಾ? ಆದರೆ ನಂಬಲೇ ಬೇಕು. ಏಕೆಂದರೆ ನಾನು ಮತ್ತು ಕೆ,ಸತ್ಯನಾರಾಯಣ ಇಬ್ಬರೂ  ಆ ಕಾಲದ ಶ್ರೀ ಲಕ್ಷ್ಮಿ ನರಸಿಂಹ ಪ್ರಸನ್ನ ಶ್ರೀ ಲಕ್ಷ್ಮಿ ವೆಂಕಟೇಶ್ವರ ಹಾಗೂ ಶ್ರೀ ಪಂಚಲಿಂಗೇಶ್ವರ ಮೋಟಾರ್ ಸರ್ವಿಸ್ ಎಂಬ ಬಸ್ ಗಳಲ್ಲಿ ನಿರಂತರ ಪ್ರಯಾಣ ಮಾಡಿದ್ದೇವೆ.

ಇಂತಹ ಕೃತಿಯ ಮೂಲಕ ನಮ್ಮ ಬಾಲ್ಯದ ನೆನಪುಗಳ ಮರೆವಣಿಗೆಯನ್ನುಕಣ್ಣ ಮುಂದೆ ತಂದಿರಿಸಿದ ನನ್ನೂರಿನ ಹಿರಿಯ ಜೀವ ಹಾಗೂ ಅಣ್ಣನಂತಿರುವ ಸತ್ಯನಾರಾಯಣರಿಗೆ ಕೃತಜ್ಞತೆ ಹೇಳುವುದು ಕೃತಕವಾಗಬಹುದೇನೊ? ಎಂಬ ಅಳಕು ಕಾಡುತ್ತಿದೆ. ಆದರೆ, ಇವರನ್ನು ನಿರಂತರ ಬರೆವಣಿಗೆಯಲ್ಲಿ ತೊಡಗಿಸಿರುವ ಬೆಂಗಳೂರಿನ ಅಭಿನವ ಪ್ರಕಾಶನದ ರವಿಕುಮಾರ್, ಪಿ.ಚಂದ್ರಿಕಾ ಮತ್ತು ಕೃಷ್ಣ ಚಂಗಡಿ ಇವರಿಗೆ ನಾನು ಕೃತಜ್ಷತೆ ಹೇಳಲೇ ಬೇಕು.

ಬುಧವಾರ, ಅಕ್ಟೋಬರ್ 3, 2018

ಗಾಂಧಿವಾದಿಯೊಂದಿಗೆ ಮಾತುಕತೆ : ಗಾಂಧಿ ವಿಚಾರಗಳಿಗಿಂತ ಆಚಾರಗಳ ಅನುಷ್ಠಾನ ಮುಖ್ಯ : ಪ್ರಸನ್ನ ಹೆಗ್ಗೋಡು



ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹೆಗ್ಗೋಡು ಎಂಬ ಗ್ರಾಮ  ಭೌಗೂಳಿಕ ನಕ್ಷೆಯಲ್ಲಿ ಒಂದು ಪುಟ್ಟ ಹಳ್ಳಿ. ಆದರೆ, ಇಂದು ಗ್ರಾಮವು  ರಂಗಭೂಮಿ ಚಟುವಟಿಕೆ, ಸಾಹಿತ್ಯ ಮತ್ತು ಸಂಸ್ಕøತಿಗಳ ಚಟುವಟಿಕೆಗಳು ಮತ್ತು ಗಾಂಧಿಜಿಯ ಪರಿಕಲ್ಪನೆಗಳ ಅನುಷ್ಠಾನಗಳ  ಕೇಂದ್ರ ಬಿಂದುವಾಗಿ ಇಡೀ ಭಾರತವನ್ನು ಸೂಜಿಗಲ್ಲಿನಂತೆ  ಆಕರ್ಷಿಸುತ್ತಿದೆ. ಇದಕ್ಕೆ ಕಾರಣ ರಾದವರು ನಾಡಿನ ಸುಪ್ರಸಿದ್ಧ ಸಾಂಸ್ಕøತಿಕ ಚಿಂತಕರಾಗಿದ್ದ ಕೆ.ವಿ. ಸುಬ್ಬಣ್ಣನವರು. ಅವರು ಹುಟ್ಟು ಹಾಕಿದ ಭವ್ಯ ಪರಂಪರೆಯನ್ನು ರಂಗಭೂಮಿ, ಸಾಹಿತ್ಯ ಮತ್ತು ಸಾಂಸ್ಕøತಿಕ ಚಟುವಟಿಕೆಗಳ ಮೂಲಕ ಅವರ ಪುತ್ರ  ಕೆ.ವಿ. ಅಕ್ಷರ ಮುಂದುವರಿಸಿದ್ದಾರೆ. ಅದೇ ರೀತಿ ಹೆಗ್ಗೋಡಿನ ಈಚೆಗಿನ ಭೀಮನಕೋಣೆ ಗ್ರಾಮದಲ್ಲಿ ಚರಕ ಸಂಸ್ಥೆಯನ್ನು ಮತ್ತು ಆಚೆಗಿನ ಊರಾದ ಹೊನ್ನೆಸರದಲ್ಲಿ ಶ್ರಮಜೀವಿಗಳ ಆಶ್ರಮವನ್ನು ಸ್ಥಾಪಿಸುವುದರ ಮೂಲಕ ಸುಪ್ರಸಿದ್ಧ ರಂಗಕರ್ಮಿ ಪ್ರಸನ್ನ ರವರು ಗಾಂಧಿಯವರ ಸಿದ್ಧಾಂತಗಳನ್ನು ಪ್ರಯೋಗದ ಮೂಲಕ ಆಚರಣೆಗೆ ತರುವುದರ ಮೂಲಕ ಮಹಾತ್ಮನ ಚಿಂತನೆಗಳನ್ನು ಜೀವಂತವಾಗಿರಿಸಿದ್ದಾರೆ.
ತಮ್ಮ ವೈಶಿಷ್ಟಪೂರ್ಣ ಚಿಂತನೆಗಳ ಮೂಲಕ ನಾಡಿನ ಗಮನ ಸೆಳೆದಿದ್ದ ಕೆ.ವಿ.ಸುಬ್ಬಣ್ಣನವರು "ಹಳ್ಳಿಯೆಂಬುದು ಮೂಲಭೂತವಾಗಿ ಒಂದು ವಿಶ್ವ" ಎಂಬುದನ್ನು ತಮ್ಮ ಕ್ರಿಯೆಗಳ ಮೂಲಕ ಮಾಡಿ ತೋರಿಸಿಕೊಟ್ಟವರು. ಮುಂಬೈ ಮೂಲದ ಖ್ಯಾತ ರಂಗಕರ್ಮಿ ಅತುಲ್ ತಿವಾರಿಯವರು ಸುಬ್ಬಣ್ಣನವರ  ಹೆಗ್ಗೋಡು ಗ್ರಾಮವನ್ನು ಹೀಗೆ ಬಣ್ಣಿಸಿದ್ದಾರೆ. " ನಾವು ಒಂದಷ್ಟು ಗೆಳೆಯರು ಪ್ರಥಮ ಬಾರಿಗೆ ಹೆಗ್ಗೋಡಿಗೆ ಹೊರಟಾಗ ಮುಂಬೈನಿಂದ ಬೆಂಗಳೂರಿಗೆ ವಿಮಾನ ಪ್ರಯಾಣ ಮಾಡಿದೆವು. ನಂತರ ಬೆಂಗಳೂರಿನಿಂದ ಶಿವಮೊಗ್ಗಕಗಕೆ ರೈಲಿನಲ್ಲಿ ಸಂಚರಿಸಿ, ಅಲ್ಲಿಂದ ಸಾಗರಕ್ಕೆ ಬಸ್ ನಲ್ಲಿ ಪ್ರಯಾಣಿಸಿದೆವು. ಸಾಗರದಿಂದ ಹೆಗ್ಗೋಡಿಗೆ ಎತ್ತಿನ ಬಂಡಿಯಲ್ಲಿ ಪ್ರಯಾಣ ಮಾಡಿ ಊರು ತಲುಪಿದಾಗ  " ಗ್ಲೋಬಲ್ ವಿಲೇಜ್" ಎಂಬ ಪರಿಕಲ್ಪನೆಯನ್ನು ಸುಬ್ಬಣ್ಣನವರು ಅಕ್ಷರಶಃ ಆಚರಣೆಗೆ ತಂದಿದ್ದಾರೆ ಎನಿಸಿತು" ತಿವಾರಿಯವರ   ಮಾತು ರೂಪಕದ ಭಾಷೆಯಂತೆ ಕಂಡು ಬಂದರೂ ಸಹ, ಕೆ.ವಿ.ಸುಬ್ಬಣ್ಣ ಮತ್ತು ಪ್ರಸನ್ನ ರಂತಹ ರಂಗಭೂಮಿಯ ಚಿಂತಕರಿಂದಾಗಿ ಗಾಂಧೀಜಿಯವರು ಕನಿಸಿದ್ದ " ಗ್ರಾಮಭಾರತ" ಹೆಗ್ಗೋಡು ಗ್ರಾಮದಲ್ಲಿ ಸಾಕ್ಷತ್ಕಾರಗೊಂಡಿದೆ ಎನ್ನಬಹುದು.
ಕಳೆದ ಎರಡೂವರೆ ದಶಕಗಳಿಂದ ಪ್ರಸನ್ನ ಹೆಗ್ಗೊಡು ಎಂದು ಚಿರಪರಿಚಿತರಾಗಿರುವ ರಂಗಕರ್ಮಿ ಪ್ರಸನ್ನರವರು ದೇಶಕಂಡ ಅತ್ಯುತ್ತಮ ರಂಗಕರ್ಮಿಗಳಲ್ಲಿ ಒಬ್ಬರು. ಲೇಖಕರಾಗಿ, ನಾಟಕಕಾರರಾಗಿ ಎಡಪಂಥಿಯ ಚಿಂತನೆಗಳೊಂದಿಗೆ ಗುರುತಿಸಿಕೊಂಡು ಸಮುದಾಯ ತಂಡದ ಮೂಲಕ ನೂರಾರು ನಾಟಕಗಳನ್ನು ನಾಡಿಗೆ ನೀಡಿದ್ದಾರೆ.  ತಮ್ಮ ರಂಗಚಟುವಟಿಕೆಯ ನಡುವೆ  ಇಪ್ಪತ್ತೈದು ವರ್ಷಗಳ ಹಿಂದೆ ಹೆಗ್ಗೋಡಿನ ಬಳಿ ಚರಕ ಸಂಸ್ಥೆಯನ್ನು ಆರಂಭಿಸಿ ಕೈ ಮಗ್ಗದ ಉತ್ಪನ್ನಗಳಿಗೆ ಚಾಲನೆ ನೀಡುವುದರ ಮೂಲಕ  ಮಹಿಳಾಸಬಕಲೀಕರಣ, ದೇಶಿವಾದ ಹಾಗೂ ಗ್ರಾಮಾಭಿವೃದ್ಧಿ ಮತ್ತು ಗ್ರಾಮೋದ್ಯೋಗ ಚಟುವಟಿಕೆಗಳಿಗೆ ಒತ್ತು ನೀಡುವುದರೊಂದಿಗೆ ಗಾಂದಿಯವರü ಚಿಂತನೆಗಳಿಗೆ ಮರುಜೀವ ನೀಡಿದ್ದಾರೆ.
ಮಾತು ಮತ್ತು ಕೃತಿಯ ನಡುವೆ ಕಂದಕವಿರಬಾರದೆಂದು ಬಲವಾಗಿ ನಂಬಿರುವ ಪ್ರಸನ್ನರವರು ಸರಳವಾದ ಬದುಕಿಗೆ ತಮ್ಮನ್ನು ಒಗ್ಗಿಸಿಕೊಂಡು ಅಪ್ಪಟ ಗಾಂಧೀಜಿಯ ವಾರಸುದಾರರಂತೆ ಸರಳವಾದ ಮಾರ್ಗದಲ್ಲಿ ಬದುಕುತ್ತಿರುವವರಲ್ಲಿ ಮುಖ್ಯರಾದವರು. ಗಾಂಧಿ ಚಿಂತನೆಗಳೊಂದಿಗೆ ನಿರಂತರ ಅನುಸಂಧಾನ ಮಾಡುತ್ತಿರುವ ಪ್ರಸನ್ನರವರು  ತಮ್ಮ ಪ್ರಯೋಗ ಹಾಗೂ ತಾವು ನಡೆದು ಬಂದ ಹಾದಿಯ ಹೆಜ್ಜೆಯ ಗುರುತುಗಳನ್ನು ಇಲ್ಲಿ  ಮಾತುಗಳ ಮೂಲಕ ಹಂಚಿಕೊಂಡಿದ್ದಾರೆ.

ಪ್ರಶ್ನೆ- ನೀವು ಎಡಪಂಥೀಯ ಚಿಂತಕರಾಗಿ ಗುರುತಿಸಿಕೊಂಡಿದ್ದವರು. ತಟ್ಟನೆ ಗಾಂಧಿಮಾರ್ಗದತ್ತ ಹೊರಳಿದ್ದು ಏಕೆ? ಟರ್ನಿಂಗ್ ಪಾಯಿಂಟ್ ಎನ್ನಬಹುದಾದ ಅನಿರೀಕ್ಷಿತ ತಿರುವಿಗೆ ಪ್ರೇರಣೆಯಾದ ಅಂಶಗಳು ಯಾವುವು?
ಪ್ರಸನ್ನ- ನನ್ನ ಪಾಲಿಗೆ ಇದು ಅನಿರೀಕ್ಷಿತ ತಿರುವೇನಲ್ಲ. ನಾನು ಭಾಗಿಯಾಗಿದ್ದ ಸಮುದಾಯ ನಾಟಕ ಚಳುವಳಿಯಲ್ಲಿ ಇಂತಹ ಅಂಶಗಳು ಒಳಗೊಂಡಿದ್ದವು. ಅಲ್ಲಿ ಎಡಪಂಥೀಯ ಚಿಂತನೆಗಳೊಂದಿಗೆ ಸಮತಾವಾದ, ಸಮಾಜವಾದ ಮತ್ತು ಗಾಂಧಿವಾದದ ತಿರುಳುಗಳು ಮಿಳಿತಗೊಂಡಿದ್ದವು. ಹಾಗಾಗಿ ಗಾಂಧೀಜಿಯವರ ಚಿಂತನೆಗಳ ಕುರಿತಾದ ಒಲವು ನನಗೆ ಮೊದಲಿನಿಂದಲೂ ಇತ್ತು. ಅದೇ ರೀತಿಯಲ್ಲಿ ನನ್ನ ಎಡಪಂಥಿಯ ಚಿಂತಕ ಗೆಳೆಯರೊಂದಿಗಿನ ನನ್ನ ಕೆಲವು  ತಕರಾರುಗಳು ಸಹ ಇದ್ದವು.
ನನಗೆ ಮೂರು ವಿಷಯಗಳಲ್ಲಿ ಎಡಪಂಥಿಯ ಸಿದ್ಧಾಂತಗಳೊಂದಿಗೆ ಭಿನ್ನಾಭಿಪ್ರಾಯವಿದೆ. ಒಂದು ದೇವರು, ಎರಡನೆಯದಾಗಿ ಯಂತ್ರ ಮತ್ತು ಮೂರನೆಯದಾಗಿ ಹಿಂಸೆ. ಇವುಗಳ ಕುರಿತಾಗಿ ಅವರು ಸ್ಪಷ್ಟವಾಗಿಲ್ಲ.
ದೇವರ ಕುರಿತಂತೆ ಅವರಿಗೆ ಖಚಿತ ನಿಲುಗಳಿಲ್ಲ. ಅದೇ ರೀತಿ ಯಂತ್ರ ನಾಗರೀಕತೆ ಕುರಿತಂತೆ ಅವರ ಚಿಂತನೆಗಳಲ್ಲಿ ಗೊಂದಲವಿದೆ. ಅವರ ದೃಷ್ಟಿಕೋನ ಬಂಡವಾಳಶಾಹಿ ಜಗತ್ತು ನಶಿಸಿ, ಕಾರ್ಮಿಕರ ಕೈಗೆ ಪ್ರಭುತ್ವ ದೊರಕಬೇಕೆಂಬುದೇ ಆಗಿದೆ. ಆದರೆ, ಬದಲಾದ ಕಾಲಘಟ್ಟದಲ್ಲಿ ಯಂತ್ರನಾಗರೀಕತೆ ದುಡಿಯುವ ಕೈಗಳಿಂದ ಅನ್ನದ ಬಟ್ಟಲನ್ನು ಕಸಿದುಕೊಳ್ಳುತ್ತಿದೆ ಎಂಬುದನ್ನು ಅವರು ಗಮನಿಸಿಲ್ಲ. ಇವುಗಳ ಜೊತೆಗೆ ದೇಶ ಅತಿ ದೊಡ್ಡ ಸಮಸ್ಯೆಯಾಗಿ ಕಾಡುತ್ತಿರುವ ಹಿಂಸೆಯ ಕುರಿತಾಗಿ ದೇಶದ ಯಾವುದೇ ಎಡರಂಗದ ಸಂಘಟನೆಗಳಿಂದ ಸ್ಪಷ್ಟೀಕರಣ ಬಹಿರಂಗಗೊಂಡಿಲ್ಲ. ನಕ್ಸಲರು ನಡೆಸುತ್ತಿರುವ ಹಿಂಸಾತ್ಮಕ ಚಟುವಟಿಕೆಗಳ ಕುರಿತು ಮೌನ ವಹಿಸಿರುವುದು ನನ್ನ ತಕರಾರಿಗೆ ಮೂಲಕಾರಣವಾಗಿತ್ತು. ಇವಿಷ್ಟನ್ನು ಹೊರತುಪಡಿಸಿದರೆ, ನಾನು ಸಂಪೂರ್ಣವಾಗಿ ಬದಲಾಗಿಲ್ಲ. ಎಲ್ಲಾ ಪ್ರಗತಿಪರ ಸಂಘನೆUಳೊಂದಿಗೆ ನನ್ನ ಬಾಂಧವ್ಯ ಇಂದಿಗೂ ಮುಂದುವರಿದಿದೆ.
ಪ್ರಶ್ನೆ- ನಿಮ್ಮ ಮೇಲೆ ಪ್ರಭಾವಿಸಿದ ಗಾಂಧೀಜಿಯವರ ಚಿಂತನೆಗಳು ಯಾವುವು?
ಪ್ರಸನ್ನ- ಕ್ರೈಸ್ತ ಧರ್ಮದಲ್ಲಿ ನೋವಾ ಎಂಬ ಸಂತನೊಬ್ಬನ ಕಥೆಯೊಂದಿದೆ. ಒಮ್ಮೆ ಜಗತ್ತಿನಲ್ಲಿ ಪ್ರಳಯವಾಗಲು ಆರಂಭಿಸಿತು. ನೋವಾ ದೇವರನ್ನು ಪ್ರಾರ್ಥಿಸತೊಡಗಿದ. ದೇವರು ಪ್ರತ್ಯಕ್ಷನಾಗಿ ಪ್ರಳಯ ಮತ್ತು ಪ್ರವಾಹದಿಂದ ಪಾರಾಗಲು ಅವನಿಗೆÉಂದಿಗೂ ಮುಳಗದ ದೋಣಿಯೊಂದನ್ನು ವರವಾಗಿ ನೀಡಿದನಂತೆ. ನೋವಾ ತಾನೊಬ್ಬನೇ ದೋಣಿಯಲ್ಲಿ ಕುಳಿತು ಪ್ರಯಾಣಿಸಿದೆ, ತನ್ನ ಸುತ್ತ ಮುತ್ತ ಇದ್ದ ಸಕಲೆಂಟು ಜೀವರಾಶಿಗಳನ್ನು ದೋಣಿಯಲ್ಲಿ ಹಾಕಿಕೊಂಡು ಪ್ರಳಯದಿಂದ ಪಾರಾದನು ಎಂಬ ಕಥೆ ನನಗೆ ಯಾವಾಗಲೂ ಮಹಾತ್ಮರನ್ನು ನೆನಪಿಸುತ್ತದೆ. ಗಾಂಧಿ ತಾವು ಬದುಕಿದ್ದ ಕಾಲಘಟ್ಟದಲ್ಲಿ ತಮ್ಮೊಬ್ಬರ ಬಗ್ಗೆ ಅಥವಾ ತಮ್ಮ ಕುಟುಂಬದ ಕುರಿತಾಗಿ ಚಿಂತಿಸಲಿಲ್ಲ. ತಮ್ಮ ಕಣ್ಣೆದುರುಗಿನ ಎಲ್ಲಾ ಸಂಕಟ, ನೋವುಗಳನ್ನು ತನ್ನ ನೋವು ಎಂದು ಪರಿಭಾವಿಸಿದರು. ಅದೇ ರೀತಿ ಅಸಮಾನತೆಯನ್ನು ತನಗಾಗುತ್ತಿರುವ ಅಪಮಾನವೆಂದು ಪರಿಗಣಿಸಿ ಹೋರಾಡಿದರು. ಇದು ನನಗೆ ಬಹಳವಾಗಿ ಕಾಡಿದ ಮತ್ತು ಇಂದಿಗೂ ಕಾಡುತ್ತಿರುವ ಮಹಾತ್ಮನ ಗುಣ.
ಪ್ರಶ್ನೆ- ಗಾಂಧೀಜಿಯವರ ಯಂತ್ರನಾಗರೀಕತೆಯ ವಿರೋಧವನ್ನು ತಪ್ಪಾಗಿ ಗ್ರಹಿಸಿದವರು ಹೆಚ್ಚು ಮಂದಿ ಇದ್ದಾರೆ. ನೀವು " ಯಂತ್ರಗಳನ್ನು ಕಳಚೋಣ  ಬನ್ನಿ" ಎಂಬ ಕೃತಿ ರಚಿಸಿದಾಗ ಅದೇ ವಿರೋಧಾಭಾಸಗಳನ್ನು ಎದುರಿಸಬೇಕಾಯಿತು. ಸಿಂಗರ್ ತನ್ನ ಮಡದಿ ಬಟ್ಟೆಗೆ ಹೊಲಿಗೆ ಹಾಕಲು ಕಷ್ಟಪಡುವುದನ್ನು ನೋಡಲಾರದೆ ಹೊಲಿಗೆ ಯಂತ್ರವನ್ನು ಅವಿಷ್ಕರಿಸಿದ. ಇದನ್ನು ಸ್ವತಃ ಗಾಂಧಿಯವರು ಪ್ರಸ್ತಾಪಿಸಿ ಸಿಂಗರ್ನನ್ನು ಕೊಂಡಾಡಿದ್ದಾರೆ. ಹಾಗಾಗಿ ಗಾಂಧೀಜಿಯವರ ಯಂತ್ರಗಳ ಕುರಿತಾದ ಚಿಂತನೆಗಳನ್ನು ಕಾಲಘಟ್ಟದಲ್ಲಿ ಸಮಾಜಕ್ಕೆ ಮನದಟ್ಟು ಮಾಡಿಕೊಡುವ ಬಗೆ  ಹೇಗೆ?
ಪ್ರಸನ್ನ- ನಾವು ಯಂತ್ರಗಳ ತಾತ್ವಿಕತೆ ಮತ್ತು ಅವುಗಳ ಉಪಯೋಗದ ಸಾಧ್ಯತೆಗಳನ್ನು ಸರಿಯಾದ ನೆಲೆಯಲ್ಲಿ ಗ್ರಹಿಸುವುದರ ಮೂಲಕ ಅರ್ಥಮಾಡಿಕೊಳ್ಳಬೇಕು.  ತಾತ್ವಿಕ ದೃಷ್ಟಿಯಿಂದ ನೋಡಿದಾಗ ಯಂತ್ರಗಳಿಗೆ ಜಾತಿ,ಧರ್ಮ, ಮೇಲು, ಕೀಳು ಎಂಬ ಹಂಗಿಲ್ಲ ಅಥವಾ ಅರಿವಿಲ್ಲ. ವಿಷಯದಲ್ಲಿ ಅವುಗಳು ಮುಕ್ತವಾಗಿವೆ. ಆದರೆ, ಮನುಷ್ಯನ ಲಾಭಕೋರತನದಿಂದಾಗಿ ಅವುಗಳು ದುರುಪಯೋಗವಾಗುತ್ತಿವೆ. ಕಮ್ಯೂನಿಷ್ಟರಿಗೂ ಸಹ ವಿಷಯದಲ್ಲಿ ತಪ್ಪು ಗ್ರಹಿಕೆಗಳಿವೆ. ಬಂಡವಾಳಶಾಹಿಗಳ ಕಪಿಮುಷ್ಟಿಯಿಂದ ಯಂತ್ರಗಳನ್ನು ಬಿಡಿಸಿ ಅವುಗಳನ್ನು ಕಾರ್ಮಿಕರ ಕೈಗೆ ಒಪ್ಪಿಸಬೇಕೆಂದು ಅವರು ಬಯಸುತ್ತಾರೆ. ಆದರೆ, ಇದೇ ಯಂತ್ರಗಳು ದುಡಿಯುವ ಕೈಗಳಿಂದ ಕೆಲಸವನ್ನು ಕಿತ್ತುಕೊಳ್ಳುತ್ತವೆ ಎಂಬುವುದನ್ನು ಅವರು ಯೋಚಿಸುವುದಿಲ್ಲ. ಬಸವಣ್ಣನವರು ಕಾಯಕಕ್ಕೆ ಮಹತ್ವ ನೀಡಿದ ಹಿನ್ನಲೆ ಅಥವಾ ಗಾಂಧೀಜಿಯವರ ಗ್ರಾಮಸ್ವರಾಜ್ಯ ಕಲ್ಪನೆಯ ಹಿನ್ನಲೆಯನ್ನು ನಾವು ಸ್ಪಷ್ಟವಾಗಿ ಗ್ರಹಿಸಬೇಕು.
ಮನುಷ್ಯನ ಅಗತ್ಯತೆಗೆ ಎಂತಹ ಯಂತ್ರಗಳು ಬೇಕು ಎಂಬುದನ್ನುನಾವು ಅರಿತುಕೊಳ್ಳಬೇಕು. ಇಂದು ಯಾವುದೇ ಆಸ್ಪತ್ರೆಗೆ ಹೋಗಿ ನೋಡಿ ಅತ್ಯಾಧುನಿಕ ಯಂತ್ರಗಳು ಕಾಣುತ್ತವೆ. ನೋವಿಲ್ಲದೆ ಶಸ್ತ್ರಚಿಕಿತ್ಸೆ ಮಾಡುವುದರಿಂದ ಹಿಡಿದು ನಮ್ಮ ಅಂಗಾಂಗಗಳನ್ನು ಪರೀಕ್ಷಿಸಿ ಫಲಿತಾಂಶ ನೀಡುವ ಯಂತ್ರಗಳು, ರಕ್ತವನ್ನು ಹೀರಿ ಬೇರ್ಪಡಿಸುವ ಯಂತ್ರಗಳು ಹೀಗೆ ತರಾವರಿ ಯಂತ್ರಗಳು ಕಾಣಸಿಗುತ್ತವೆ. ಆದರೆ, ಇದರ ಅಂತಿಮ ಫಲಿತಾಶ ಏನು ಎಂದರೆ, ಇವುಗಳು ಮನುಷ್ಯನ ಸಾವನ್ನು ಮುಂದೂಡಬಲ್ಲ ಯಂತ್ರಗಳೇ ಹೊರತು ಅವನ ಆರೋಗ್ಯವನ್ನು ಕಾಪಾಡುವ ಅಥವಾ ಸದಾ ಸುಸ್ಥಿಯಲ್ಲಿಡುವ ಯಂತ್ರಗಳಲ್ಲ. ಮನುಷ್ಯನ ಆರೋಗ್ಯವನ್ನು ಸುಸ್ಥಿತಿಯಲ್ಲಿಡುವುದು ದೈಹಿಕ ಶ್ರಮ ಅಂದರೆ, ಕಾಯಕವೇ ಹೊರತು ಯಂತ್ರಗಳಲ್ಲ. ಹಿತಮಿತವಾದ ಆಹಾರ ಸೇವನೆಯಿಂದ ಹಿಡಿದು ಎಲ್ಲಾ ವಿಷಯಗಳಲ್ಲಿ ಮಿತವಾದ ಹಾಗೂ ಸರಳವಾದ ಬದುಕು ಮಾತ್ರ ಮನುಷ್ಯನನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಸುಸ್ಥಿಯಲ್ಲಿ ಇಡಬಲ್ಲವು.
ಉದಾಹರಣೆಗೆ ಹೇಳುವುದಾರೆ, ನಾವೀಗ ಕುಳಿತಿರುವ ಶ್ರಮಜೀವಿ ಆಶ್ರಮದಿಂದ ಹೆಗ್ಗೋಡಿಗೆ ಕೇವಲ ಒಂದು ಕಿಲೊಮೀಟರ್ ಅಂತರವಿದೆ. ಸಾಗರಕ್ಕೆ  ಬಸ್ ಹಿಡಿಯಲು ನಾವು ಇಲ್ಲಿಂದ ಹೆಗ್ಗೋಡಿಗೆ ಹೋಗಲು ದ್ವಿಚಕ್ರ ವಾಹನ ಅಥವಾ ಕಾರು ಬೇಕೆ? ಕಾಲ್ನಡಿಗೆಯಲ್ಲಿ ಕೇವಲ ಐದಾರು ನಿಮಿಷದ  ದೂರದ ಪ್ರಯಾಣಕ್ಕೆ ನಾವು ಯಂತ್ರಗಳ ಮೊರೆ ಹೋಗುತ್ತೇವೆ. ಗಾಂಧೀಜಿಯವರಿಗೆ ಇಂತಹ ವಿಷಯಗಳಲ್ಲಿ ವಿರೋಧವಿತ್ತು. ಅವರ ದೃಷ್ಟಿಯಲ್ಲಿ ಚರಕ, ರಾಟೆ, ಕುಡುಗೋಲು, ನೇಗಿಲು, ಕೈ ಮಗ್ಗ, ಕಂಬಾರಿಕೆಯ ಚಕ್ರ ಇವೆಲ್ಲವೂ ಮನುಷ್ಯನ ಬಹುಪಯೋಗಿ ಯಂತ್ರಗಳಾಗಿದ್ದವು. ಬೃಹತ್ ಯಂತ್ರನಾಗರೀಕತೆ ಮನುಷ್ಯನಿಗಷ್ಟೇ ಅಲ್ಲದೆ, ನಿಸರ್ಗಕ್ಕೆ ಮತ್ತು ಜೀವಸಂಕುಲಕ್ಕೆ ಅಪಾಯಕಾರಿಯಾದುದು ಎಂಬುದು ಅವರ ನಿಲುವಾಗಿತ್ತು.
 

ಪ್ರಶ್ನೆ- ಗಾಂಧೀಜಿಯವರು ಪ್ರತಿಪಾದಿಸಿದ ಸಹಕಾರಿ ತತ್ವ ಮನುಷ್ಯನ ಒಳಿತು ಮತ್ತು ಅಭಿವೃದ್ಧಿಗೆ ಮಾತ್ರವಲ್ಲದೆ, ಸಾಮಾಜಿಕ ಅಭಿವೃದ್ಧಿ ಹಾಗೂ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಮೂಲಾಧಾರ ಎಂಬಂತಿತ್ತು. ಆದರೆ, ಈಗಿನ ಸಹಕಾರ ಸಂಘಗಳು ರಾಜಕೀಯ ಪುಡಾರಿಗಳನ್ನು ಹುಟ್ಟುಹಾಕುವ ಸಂಸ್ಥೆಗಳಾಗಿವೆ.   ಕುರಿತು ನಿಮ್ಮ ಅಭಿಪ್ರಾಯ ಏನು?
ಪ್ರಸನ್ನ- ಸಹಕಾರ ತತ್ವ ಹೊಸದೇನಲ್ಲ. ಅದು ಗಾಂಧೀಜಿಯವರಿಗಿಂತ ಮೊದಲು ಹಲವು ರೂಪಗಳಲ್ಲಿ  ಯುರೋಪ್ ರಾಷ್ಟ್ರಗಳಲ್ಲಿ ಜಾರಿಯಲ್ಲಿತ್ತು. ಸಮತಾವಾದ, ಸಮಾಜವಾದ ಚಿಂತನೆಯ ಬೇರುಗಳು ಇದರಲ್ಲಿ ಅಡಕವಾಗಿವೆ. ನಿಮ್ಮ ಮಾತು ನಿಜ; ಸರ್ಕಾರದ ಮಧ್ಯಪ್ರವೇಶದಿಂದಾಗಿ ಸಹಕಾರಿ ತತ್ವದ ಮೂಲ ಆಶಯಗಳು ಮಣ್ಣು ಪಾಲಾಗಿವೆ. 1947 ನಂತರದ ಭಾರತದಲ್ಲಿ ರೂಪಿತವಾಗಿರುವ ಕಾನೂನುಗಳು ಬಹಳಷ್ಟು ಗಟ್ಟಿಯಾಗಿವೆ. ಅವುಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿದ್ದರೆ,ಇಂದು ನಾವು ಎದುರಿಸುತ್ತಿರುವ ಲಿಂಗ ಅಸಮಾನತೆ, ಅಸ್ಪøಶ್ಯತೆ ಅಥವಾ ಭ್ರಷ್ಟಾಚಾರ ಇಂತಹುಗಳು ಇರುತ್ತಿರಲಿಲ್ಲ. ಗಾಂಧೀಜಿಯವರ ಶಿಷ್ಯ ಹಾಗೂ ಭಾರತ ಕಂಡ ನೈಜ ಅರ್ಥಶಾಸ್ತ್ರಜ್ಞ ಜೆ.ಸಿ. ಕುಮಾರಪ್ಪನವರು ಭಾರತದ ಸಂವಿಧಾನ ಕುರಿತಂತೆ ಒಂದು ಕಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರ ಪ್ರಕಾರ, ನಾಗರೀಕ ಹಕ್ಕುಗಳ ಕುರಿತಾಗಿ ಒತ್ತಿ ಹೇಳಿದ ಸಂವಿಧಾನವು, ಅದೇ ರೀತಿಯಲ್ಲಿ ನಾಗರೀಕರ ಜವಬ್ದಾರಿಗಳ ಕುರಿತಾಗಿ ಒತ್ತಿ ಹೇಳಬೀಕಿತ್ತು ಎಂಬುದು ಅವರ ಅಭಿಪ್ರಾಯವಾಗಿತ್ತು
ಸರ್ಕಾರದ ಹಸ್ತಕ್ಷೇಪವಿಲ್ಲದ ಜಾಗದಲ್ಲಿ ಅನೇಕ ಸಹಕಾರಿ ಸಂಘ ಸಂಸ್ಥೆಗಳು ಇಂದಿಗೂ ಅಸ್ತಿತ್ವದಲ್ಲಿದ್ದು ಮಾದರಿಯಾಗಿವೆ. ಆದರೆ, ಅವುಗಳು ಅಲ್ಲಲ್ಲಿ ಸಣ್ಣಪ್ರಮಾಣದಲ್ಲಿ ಕಂಡು ಬರುತ್ತವೆ. ವಿಶೇಷವಾಗಿ ಉತ್ತರ ಕನ್ನಡ ಜಿಲ್ಲೆ ಹಾಗೂ ಮಲೆನಾಡಿನ ಪ್ರದೇಶಗಳಲ್ಲಿ ಗಾಂಧೀಜಿಯವರ ಆಶಯದಂತೆ ಸಹಕಾರದ ತತ್ವವನ್ನು ಪಾಲಿಸುತ್ತಾ ಯಶಸ್ವಿನ ಮಾರ್ಗದಲ್ಲಿ ಮುಂದುವರಿದಿವೆ.
ಪ್ರಶ್ನೆ_ ಇಂದಿನ ಇಪ್ಪತ್ತೊಂದನೆಯ ಜಾಗತೀರಣದ ಭರಾಟೆಯ ಮಾರುಕಟ್ಟೆಯ ಪ್ರಭುತ್ವದಲ್ಲಿ ಗಾಂಧೀಜಿಯವರ ವಿಚಾರಧಾರೆಗಳನ್ನು ಕಾಪಾಡಿಕೊಳ್ಳುವುದು ಹೇಗೆ? ಮತ್ತು  ಅವುಗಳನ್ನು ಯುವ ತಲೆ ಮಾರಿಗೆ ದಾಟಿಸುವ ಬಗೆ ಹೇಗೆ?
ಪ್ರಸನ್ನ- ನಿಜ ಹೇಳಬೇಕೆಂದರೆ, ಗಾಂಧಿ ವಿಚಾರಧಾರೆಯನ್ನು ಉಪನ್ಯಾಸದ ಮೂಲಕವಾಗಲಿ, ಪುಸ್ತಕದ ಮೂಲಕವಾಗಲಿ ಪ್ರಚಾರ ಮಾಡುವ ಅವಶ್ಯಕತೆ ಇಲ್ಲ. ಅವರ ಆಚಾರಗಳನ್ನು ಅಂದರೆ, ಸಿದ್ಧಾಂತಗಳನ್ನು ಆಚರಣೆಗೆ ತಂದರೆ ಸಾಕು, ಅವುಗಳು ತಂತಾನೆ ವಿಚಾರಗಳಾಗಿ ಪ್ರಸಾರಗೊಳ್ಳುತ್ತವೆ. ಗಾಂಧೀಜಿಯವರು ಮಾತನಾಡಿದ್ದಕ್ಕಿಂತ ಹೆಚ್ಚಾಗಿ ಅವರಿಗೆ ಒಪ್ಪಿಗೆಯಾದ ವಿಚಾರಗಳನ್ನು ಆಚರಣೆಗೆ ತಂದರು. ಕಾರಣಕ್ಕಾಗಿ ನಾನು ಹೇಳುವುದಿಷ್ಟೇ, ಗಾಂಧಿ ಸಾಹಿತ್ಯವನ್ನು ಪ್ರಕಟಿಸುವುದನ್ನು ನಿಲ್ಲಿಸಿದರೆ ಕಾಗದದ ಉಳಿತಾಯದ ಜೊತೆಗೆ ಮರಗಳನ್ನು ನಾವು ಉಳಿಸಬಹುದು.
ಪ್ರಶ್ನೆ- ನಾನು ಗಮನಿಸಿದ ಹಾಗೆ ಈಗಿನ ಯುವತಲೆಮಾರು ಗಾಂಧೀಜಿ ಕುರಿತಂತೆ ತುಂಬಾ ಆಸಕ್ತಿ ತಾಳಿದ್ದಾರೆ. ನಿಮ್ಮ ಅನುಭವಕ್ಕೆ ಇದು ಬಂದಿದೆಯಾ?
ಪ್ರಸನ್ನ- ಹೌದು. ನಮ್ಮಲ್ಲಿಗೆ ನೂರಾರು ಮಂದಿ ಬರುತ್ತಿದ್ದಾರೆ. ಚರಕ ಸಂಸ್ಥೆಗೆ ಹಾಗೂ ಶ್ರಮಜೀವಿಗಳ ಆಶ್ರಮಕ್ಕೆ ಭೇಟಿ ಕೊಟ್ಟು, ಇಲ್ಲಿ ನೇಕಾರಿಕೆ, ಕೈ ಮಗ್ಗ, ಸಹಜ ಕೃಷಿ, ನೈಜ ಬಣ್ಣಗಳ ತಯಾರಿಕೆ, ಗ್ರಾಮಾಭಿವೃದ್ಧಿಯ ಚಟುವಟಿಕೆಗಳು ಇವುಗಳನ್ನು ಆಸಕ್ತಿಯಿಂದ ಗಮನಿಸುತ್ತಿದ್ದಾರೆ. ಜೊತೆಗೆ ಆಶ್ರಮದಲ್ಲಿ ಎರಡು-ಮೂರು ದಿನ ಇದ್ದು ಚಟುವಟಿಕೆಗಳಲ್ಲಿ ತಾವು ಸಹ ಪಾಲ್ಗೊಳ್ಳುತ್ತಿದ್ದಾರೆ.
ಪ್ರಶ್ನೆ- ನೀವು ಆಸಕ್ತರಿಗೆ  ಕುರಿತಂತೆ ನಿರಂತರವಾಗಿ ತರಬೇತಿ ಶಿಬಿರವನ್ನು ಏಕೆ ಏರ್ಪಡಿಸಬಾರದು?
ಪ್ರಸನ್ನ- ನನಗೂ ಆಸಕ್ತಿ ಇದೆ. ಆದರೆ. ಯಾವ ಕಾರಣಕ್ಕೂ  ಅದು ವ್ಯವಹಾರದ ಕಾರ್ಯಕ್ರಮವಾಗಬಾರದು ಎಂದು ನಿರ್ಧರಿಸಿದ್ದೀನಿ. ತಾವಾಗಿಯೇ ಆಸಕ್ತಿ ವಹಿಸಿ ಬರುವ ಉತ್ಸಾಹಿಗಳಿಗೆ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತಿದ್ದೇವೆ. ಇದಕ್ಕಾಗಿ ಶ್ರಮ ಜೀವಿ ಆಶ್ರಮದಲ್ಲಿ ಮುವತ್ತು ಮಂದಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.

 ಪ್ರಶ್ನೆ- ನಿಮ್ಮ ಚರಕ ಸಂಸ್ಥೆ ಕುರಿತು ಹೇಳಿ? ಅದರ ಚಟುವಟಿಕೆಯನ್ನು ರಾಜ್ಯಾದಂತ ವಿಸ್ತರಿಸಬಹುದಲ್ಲವೆ?
ಪ್ರಸನ್ನ- ಚರಕ ಸಂಸ್ಥೆಗೆ 24 ವರ್ಷ ತುಂಬಿ ಇದೀಗ 25 ವರ್ಷಕ್ಕೆ ಕಾಲಿಟ್ಟಿದೆ. ಚರಕ ¸ಂಸ್ಥೆಯು ಪ್ರತ್ಯೇಕ್ಷ ಮತ್ತು ಪರೋಕ್ಷವಾಗಿ ಏಳನೂರು ಮಂದಿಗೆ ಉದ್ಯೋಗ ನೀಡಿದೆ. ಗ್ರಾಮೋದ್ಯೋಗ ಚಟುವಟಿಕೆ ತಂತಾನೆ ಹರಡಬೇಕು.  ಚರಕ ಸಂಸ್ಥೆಯನ್ನು ಅಲ್ಲಿನ ಮಹಿಳೆಯರು ಮತ್ತು ಸಹೋದ್ಯೋಗಿಗಳು ತಮ್ಮ ಸ್ವಂತ ಜವಾಬ್ದಾರಿಯ ಮೇಲೆ ನಿರ್ವಹಿಸುತ್ತಿದ್ದಾರೆ. ಅದರ ವಿಸ್ತರಣೆಗೆ ಹೊರಟರೆ, ಅದಕ್ಕೊಬ್ಬ ಮೇನೇಜರ್, ಸೂಪರ್ ವೈಸರ್ ಹೀಗೆ ವ್ಯಕ್ತಿಗಳು ಬೇಕಾಗುತ್ತದೆ.  ರೀತಿಯಲ್ಲಿ ವಿಸ್ತರಿಸಲು ಹೊರಟರೆ ಚರಕ ಸಂಸ್ಥೆಯು ಸಮಾನತೆ ಆಧಾರ ಮೇಲೆ ಕಟ್ಟಿದ ಸಂಸ್ಥೆಯಾಗುವ ಬದಲು ಕಾರ್ಪೊರೇಟ್ ಸಂಸ್ಥೆಯಾಗುವ ಅಪಾಯವಿದೆ. ಹಾಗಾಗಿ ಅದನ್ನು ಸ್ವಯಂ ಅಭಿವೃದ್ಧಿ ಮತ್ತು ವಿಸ್ತರಿಸಿಕೊಳ್ಳುವ ಸಂಸ್ಥೆಯಾಗಬೇಕೆಂದು ಬಯಸಿದ್ದೇನೆ.
ಪ್ರಶ್ನೆ- ಈಗಿನ ವಾತಾವರಣದಲ್ಲಿ ಕೈಮಗ್ಗ ಉತ್ಪನ್ನಗಳಿಗೆ ಮತ್ತು  ನೇಕಾರಿಕೆ ವೃತ್ತಿಗೆ ಆಶಾದಾಯಕವಾದ ವಾತಾವರಣ ಇದೆಯಾ?

ಪ್ರಸನ್ನ- ಕೈ ಮಗ್ಗದ ಉತ್ಪನ್ನಗಳಿಗೆ ಒಳ್ಳೆಯ ಬೇಡಿಕೆ ಇದೆ. ಇತ್ತೀಚೆಗೆ ಎಲ್ಲರೂ ಆಸಕ್ತಿ ತೋರುತ್ತಿದ್ದಾರೆ. ಉಳಿದ ವೃತ್ತಿಗೆ ಹೋಲಿಸಿದರೆ, ನೇಕಾರಿಕೆ ವೃತ್ತಿಯಿಂದ ಹಲವರು ವಿಮುಖರಾಗುತ್ತಿರುವುದು ನಿಜ. ಆದರೆ, ಮಹಿಳೆಯರು ಹಾಗೂ ಇತರೆ ವರ್ಗದವರು ಅಂದರೆ, ದಲಿತರು ಮತ್ತು ಬ್ರಾಹ್ಮಣರು ಸಹ ಜಾತಿ ಬೇಧವಿಲ್ಲದೆ ಕೈ ಮಗ್ಗ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಏಕೆಂದರೆ, ವೃತ್ತಿ ಮನೆಯೊಳಗೆ ಕುಳಿತು ಮಾಡುವಂತಹದ್ದು. ಸಾಮಾನ್ಯವಾಗಿ ಮಹಿಳೆಯರು ಇಂತಹ ವೃತ್ತಿಗಳನ್ನು ಹೆಚ್ಚು ಇಷ್ಟಪಡುತ್ತಾರೆ. ನೇಕಾರಿಕೆ ವೃತ್ತಿ ತೊರೆದು ಹೋದವರು ಮರಳಿ ಬರುತ್ತಿದ್ದಾರೆ. ಒಂದಿಷ್ಟು ಆದಾಯ ಕಡಿಮೆ ಎನಿಸಿದರೂ ಸಹ ವೃತ್ತಿಯ ಜೊತೆಗೆ ಇತರೆ ಉಪಕಸುಬುಗಳನ್ನು ಮಾಡುವ ಅವಕಾಶ ಇರುವುದರಿಂದ  ಆಶಾದಾಯಕವಾಗಿದೆ. ಆದರೆ, ಕೇಂದ್ರ ಸರ್ಕಾರ ಜಿ.ಎಸ್.ಟಿ. ತೆರಿಗೆಯ ಮೂಲಕ ಸಣ್ಣ ಘಟಕಗಳು ಮತ್ತು ಕೈಮಗ್ಗದ ಉದ್ದಿಮೆದಾರರ ಕುತ್ತಿಗೆ ಹಿಸುಕುತ್ತಿದೆ. ಈಗಿನ ತೆರಿಗೆ ನಿಯಮದಲ್ಲಿ ಒಬ್ಬ ಸಣ್ಣ ಉದ್ದಿಮೆದಾರ ಪಕ್ಕದ ರಾಜ್ಯಕ್ಕೆ ಹೋಗಿ  ತನ್ನ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ನಿಯಮ ಬದಲಾಗಬೇಕು. ಕೈ ಮಗ್ಗದ ಉತ್ಪನ್ನಗಳಿಗೆ ಕೇಂದ್ರ ಸರ್ಕಾರ ತೆರಿಗೆಯಲ್ಲಿ ಸಂಪೂರ್ಣ ರಿಯಾಯಿತಿ ನೀಡಬೇಕಿದೆ. ಇದು ಕೇವಲ  ನನ್ನೊಬ್ಬನ ಬೇಡಿಕೆ ಮಾತ್ರವಾಗಿರದೆ, ಇಡೀ ದೇಶದ  ಸಣ್ಣ ವ್ಯಾಪರಸ್ಥರು ಮತ್ತು ಕೈ ಮಗ್ಗ ಘಟಕಗಳ ಬೇಡಿಕೆಯಾಗಿದೆ.


( ಕರ್ನಾಟಕ ವಾರ್ತಾ ಮತ್ತು ಪ್ರಸಾರ ಇಲಾಖೆಯ ಗಾಂಧೀಜಿ ವಿಶೇಷ ಸಂಚಿಕೆ “ ಜನಪದ “ ಮಾಸಪತ್ರಿಕೆಗಾಗಿ ನಡೆಸಿದ ಸಂದರ್ಶನ)