ಬುಧವಾರ, ಅಕ್ಟೋಬರ್ 10, 2018

ಅಭಿವ್ಯಕಕ್ತಿ ಸ್ವಾತಂತ್ರ್ಯದ ಮೇಲಿನ ಹಲ್ಲೆಯ ಕಪ್ಪು ಇತಿಹಾಸ






ದಿನಾಂಕ 28-8-18 ರ ಬುಧವಾರ ಮಹಾರಾಷ್ಟ್ರ, ದೆಹಲಿ  ಸೇರಿದಂತೆ ದೇಶದ ಹಲವೆಡೆ  ಮಾನವ ಹಕ್ಕು ಹಾಗೂ ಸಾಮಾಜಿಕ ಹೋರಾಟಗಾರ ನಿವಾಸದ ಮೇಲೆ ನಡೆದ ಪೊಲೀಸರ ದಾಳಿ ಹಾಗೂ ಕಾರ್ಯಕರ್ತರ ಬಂಧನ ಭಾರತದ ಪ್ರಜ್ಞಾವಂತ ನಾಗರೀಕರನ್ನು ಬೆಚ್ಚಿ ಬೀಳಿಸಿದೆ.  ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಇಂತಹ ಘಟನೆಗಳು ಹೊಸದೇನಲ್ಲ. ನಮ್ಮನನ್ನಾಳುವ ಸರ್ಕಾರಗಳು ಪಕ್ಷಬೇಧ ವಿಲ್ಲದೆ, ಇಂತಹ ದುಷ್ಕೃತ್ಯಗಳಿಗೆ ಕೈ ಹಾಕುತ್ತಲೇ ಬಂದಿವೆ.
ಇಂದಿರಾಗಾಂಧೀಯವರು1975 ರಲ್ಲಿ ದೇಶಾದ್ಯಂತ ಹೇರಿದ್ದ ತುರ್ತು ಪರಿಸ್ಥಿತಿಯ ಅವಧಿಯಲ್ಲಿ ನಾಗರೀಕ ಹಕ್ಕುಗಳನ್ನು ಮೊಟಕುಗೊಳಿಸಿ, ಅಭಿವ್ಯಕ್ತಿ ಸ್ವಾತಂತ್ರ್ಯದ ಬಾಯಿಗೆ ಬೀಗ ಜಡಿದು, ಬರೆಯುವ ಕೈಗಳಿಗೆ ಕೋಳ ತೊಡಗಿಸಲಾಗಿತ್ತು. 2011 ಮತ್ತು 12 ರ ಡಾ.ಮನಮೋಹನ್ ಸಿಂಗ್ ನೇತೃತ್ವದ ಅವಧಿಯಲ್ಲಿಯೂ ಸಹ ಛತ್ತೀಸ್ ಗಡದ  ಡಾ.ಬಿಯಾಂಕ್ ಸೇನ್ ಮತ್ತು ಮಹಾರಾಷ್ಟ್ರದ ಮೂಲದ ಅರುಣ್ ಫೆರಿರಾ ಮುಂತಾದ ಸಾಮಾಜಿಕ ಹೋರಾಟಗಾರರನ್ನು ಸೆರೆಮನೆಗೆ ತಳ್ಳಿ ಇನ್ನಿಲ್ಲದಂತಹ ಚಿತ್ರ ಹಿಂಸೆ ನೀಡಲಾಗಿತ್ತು. ಇದೀಗ ಜಾಗತಿಕ ಮಟ್ಟದಲ್ಲಿ ಯುಗ ಪುರುಷ ಎಂದು ಬಿಂಬಿಸಿಕೊಳ್ಳುತ್ತಿರುವ ನರೇಂದ್ರ ಮೋದಿಯವರ ಅವಧಿಯಲ್ಲಿ  ಪೊಲೀಸರು   ಅದೇ ಹೀನ ಕೃತ್ಯಕ್ಕೆ ಕೈ ಹಾಕಿ ಸುಪ್ರೀಂ ಕೋರ್ಟಿನಿಂದ ಕಪಾಳ ಮೋಕ್ಷ ಮಾಡಿಸಿಕೊಂಡಿದ್ದಾರೆ.
2012 ರಲ್ಲಿ ಡಾ.ಬಿಯಾಂಕ್ ಸೇನ್ ಅವರನ್ನು ಬಿಡುಗಡೆ ಮಾಡುವ ಸಮಯದಲ್ಲಿ ಅವರ ಮೇಲೆ ಹೊರಿಸಲಾಗಿದ್ದ ಆರೋಪ ಪಟ್ಟಿಯಲ್ಲಿ, ಬಿಯಾಂಕ್ ಅವರ ನಿವಾಸದಲ್ಲಿ  ನಕ್ಸಲ್ ಸಾಹಿತ್ಯ ಹಾಗೂ ಕರಪತ್ರಗಳಿದ್ದವು ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಸುಪ್ರೀಂ ಕೋರ್ಟ್ “ ಗಾಂಧೀಜಿ ಕೃತಿ ಓದುವನನ್ನು ಗಾಂಧಿವಾದಿ ಎಂದು ಏಕೆ ಹಣೆಪಟ್ಟಿ ಕಟ್ಟುತ್ತೀರಿ? ಮಾಕ್ಕ್ಸ್ ಓದುವವನು ಮಾರ್ಕ್ಸ್ ವಾದಿಯಲ್ಲ, ಗಾಂಧಿ ಓದುವವನು ಗಾಂಧಿವಾದಿಯಲ್ಲ” ಎಂದು ಪೊಲೀಸರಿಗೆ ಚಾಟಿ ಏಟು ಬೀಸಿತ್ತು. ಇದೀಗ  ಅದೇ ಸರ್ವೋಚ್ಚ ನ್ಯಾಯಾಲಯ “ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಿನ್ನ ಧ್ವನಿಗಳು ಇರಬಾದೆ? ಇಂತಹ ಭಿನ್ನತೆ ಪ್ರಜಾಪ್ರಭುತ್ವಕ್ಕೆ ಸುರಕ್ಷಾ ಕವಚ ಇದ್ದಂತೆ” ಎಂಬ ಮಹತ್ವದ  ಅಭಿಪ್ರಾಯವನ್ನು ನೀಡುವುದರ ಮೂಲಕ  ಆಳುವ ಸರ್ಕಾರಗಳಿಗೆ ಬಿಸಿ ಮುಟ್ಟಿಸುವುದರ ಜೊತೆಗೆ ಸಂವಿಧಾನದ ಘನತೆಯನ್ನು ಎತ್ತಿ ಹಿಡಿದಿದೆ. ಬಂಧಿತರಾಗಿದ್ದ ಐವರು ಕಾರ್ಯಕರ್ತರನ್ನು ಅವರ ನಿವಾಸದಲ್ಲಿ ಮುಂದಿನ ವಿಚಾರಣೆಯ ತನಕ ( 6-9-18 ರವರೆಗೆ) ಗೃಹಬಂಧನದಲ್ಲಿ ಇರಿಸಬೇಕೆಂದು ಆದೇಶ ನೀಡಿದೆ.
ಆದಿವಾಸಿ ಹಕ್ಕುಗಳಿಗಾಗಿ, ದಮನಿತರ ಪರವಾಗಿ ಹಾಗೂ ಪರಿಸರ ರಕ್ಷಣೆಗಾಗಿ ಹೋರಾಡುತ್ತಿರುವ ಸಾಮಾಜಿಕ ಕಾರ್ಯಕರ್ತರನ್ನು  ವ್ಯವಸ್ಥಿತ ಹುನ್ನಾರ ಹಗೂ   ಕ್ಷುಲ್ಲಕ ಆರೋಪಗಳಿಂದ  ಸದೆಬಡಿಯಲು ಹೊರಟ ಜಗತ್ತಿನ ಎಲ್ಲಾ ಸರ್ಕಾರಗಳು ಮತ್ತು ಸರ್ವಾಧಿಕಾರಿಗಳು ಅಂತಿಮವಾಗಿ ಮಣ್ಣು ಮುಕ್ಕಿದ್ದಾರೆ.  ಇಂತಹ ಸಾರ್ವಕಾಲಿಕ ಸತ್ಯವನ್ನು ನಮ್ಮನ್ನಾಳುವ ದೊರೆಗಳಿಗೆ ಮತ್ತು ಅವರ ಗುಲಾಮರಂತೆ ವರ್ತಿಸುತ್ತಿರುವ ಪೊಲೀಸರಿಗೆ ಮುಟ್ಟಿಸುವ  ಕೆಲಸವನ್ನು  ಈ ದೇಶದ ಪ್ರಜ್ಞಾವಂತ ನಾಗರೀಕರು ಮಾಡಬೇಕಿದೆ. ಇಂತಹ ಕಾರ್ಯವನ್ನು ಡಾ.ಬಿಯಾಂಕ್ ಸೇನ್ ಮತ್ತು ಅರುಣ್ ಫೆರಿರಾ ತಮ್ಮ ಹೋರಾಟಗಳ ಮೂಲಕ ವರ್ತಮಾನದ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಅರುಣ್ ಫೆರಿರಾ ಅವರು ತಮ್ಮ ಬಂಧನದ ಅವಧಿಯಲ್ಲಿ ಅನುಭವಿಸಿದ ಚಿತ್ರಹಿಂಸೆಯನ್ನು ಅತ್ಯಂತ ನಿರ್ಭಾವುಕ ಶೈಲಿಯಲ್ಲಿ ದಾಖಲಿಸಿರುವ “ ಕಲರ್ಸ್ ಆಫ್ ದ ಕೇಜ್ “ ( ಪಂಜರದ ಬಣ್ಣಗಳು) ಕೃತಿ ಓದುಗರನ್ನು ಬೆಚ್ಚಿ ಬೀಳಿಸುವುದರ ಜೊತೆಗೆ ಕಣ್ಣಲ್ಲಿ ನೀರು ತರಿಸುತ್ತದೆ.
ಮುಂಬೈ ನಗರದಲ್ಲಿ ಹುಟ್ಟಿ ಬೆಳೆದ ಅರುಣ್ ಫೆರಿರಾ  ಅಲ್ಲಿನ ಪ್ರತಿಷ್ಠಿತ ಸೆಂಟ್ ಕ್ಷೇವಿಯರ್ ಕಾಲೇಜಿನಲ್ಲಿ ಪದವಿ ಪಡೆದು, ವ್ಯಂಗ್ಯ ಚಿತ್ರಗಾರರಾಗಿ ವೃತ್ತಿಯನ್ನು ಆರಂಭಿಸಿದ್ದರು.  ಮಹಾರಾಷ್ಟ್ರದ ಎಲ್ಲಾ ಪ್ರಗತಿ ಪರ ಸಂಘಟನೆಗಳ ಜೊತೆ ಗುರುತಿಸಿಕೊಂಡವರು. ಜೊತೆಗೆ ಸಂಘಟನೆಗಳ ಸಮಾವೇಶಕ್ಕೆ ಭಿತ್ತಿ ಪತ್ರ, ಕರ ಪತ್ರ, ಬ್ಯಾನರ್ ಇತ್ಯಾದಿಗಳಿಗೆ ಚಿತ್ರ ಬರೆಯುತ್ತಾ, ಸಾಮಾಜಿಕ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದರು. 2007 ರಲ್ಲಿ ಸಮಾವೇಶವೊಂದನ್ನು ಮುಗಿಸಿಕೊಂಡು ಮುಂಬೈ ನಗರಕ್ಕೆ ಹಿಂತಿರುಗಲು ನಾಗಪುರ ರೈಲ್ವೆ ನಿಲ್ದಾಣದಲ್ಲಿ ಕಾಯುತ್ತಿದ್ದ ಅರುಣ್ ಅವರನ್ನು ಸಂಗಡಿಗರೊಂದಿಗೆ ಬಂಧಿಸಿದ ಮಹಾರಾಷ್ಟ್ರ ಪೊಲೀಸರು ಅರುಣ್ ಫೆರಿರಾಗೆ ನಕ್ಸಲ್ ಸಂಘಟನೆಗಳ ಜೊತೆ ಸಂಪರ್ಕ ಹೊಂದಿದ್ದಾನೆ ಎಂಬ ಪಟ್ಟ ಕಟ್ಟಿ ಬರೋಬ್ಬರಿ ನಾಲ್ಕು ವರ್ಷಗಳ ಕಾಲ ನಾಗಪುರದ ಜೈಲಿಗೆ ತಳ್ಳಿದರು.  ಜೈಲಿನಲ್ಲಿ ಇದ್ದುಕೊಂಡು, ಕಾನೂನು ಪದವಿಗಾಗಿ ಶಿಕ್ಷಣ ಪಡೆಯುತ್ತಾ, ಬೇಸಿಗೆಯ ದಿನಗಳಲ್ಲಿ 47 ಡಿಗ್ರಿ ಉಷ್ಣಾಂಶ  ಇರುವ ನಾಗಪುರದಲ್ಲಿ ಕೇವಲ ಒಂದು ಸಣ್ಣ ಕಿಟಿಕಿ ಇದ್ದಅಂಡಾ ಶೆಲ್ ಎಂದು ಕರೆಯಲಾಗುವ ಮೊಟ್ಟೆ ಆಕಾರದ ಕೊಠಡಿಯೊಳಗೆ ಬದುಕಿದ್ದ ಮಾತ್ರವಲ್ಲದೆ, , ಅಲ್ಲಿನ ಕ್ರಿಮಿನಲ್ ಅಪರಾಧಿಗಳ ವರ್ತನೆ, ಪೊಲೀಸ್ ಅಧಿಕಾರಿಗಳ ಲಂಚಾವತಾರ , ಕ್ರೌರ್ಯ ಎಲ್ಲವನ್ನೂ ಈ ಕೃತಿಯಲ್ಲಿ  ತಾವೇ ಸೃಷ್ಟಿಸಿದ ಚಿತ್ರಗಳ ಸಮೇತ ಬಣ್ಣಿಸಿದ್ದಾರೆ. 2011 ರ ಸೆಪ್ಟಂಬರ್ ತಿಂಗಳಿನಲ್ಲಿ ಎಲ್ಲಾ ಆರೋಪಗಳಿಂದ ಖುಲಾಸೆಗೊಂಡು , ಕಾನೂನು ಪದವಿಯ ಜೊತೆ ಜೈಲಿನ ಮುಖ್ಯ ದ್ವಾರದಿಂದ ಹೊರಬಂದು,  ತನಗಾಗಿ ಕಾಯುತ್ತಿದ್ದ ತನ್ನ ತಂದೆ, ತಾಯಿ, ಪತ್ನಿ ಮತ್ತು ಮಗು ಇವರನ್ನು ಭೇಟಿ ಮಾಡುವಷ್ಟರಲ್ಲಿ ಸಾದಾ ಉಡುಗೆಯಲ್ಲಿದ್ದ ಪೊಲೀಸರು ಮತ್ತೇ ಅವರನ್ನು ಬಂಧಿಸಿ, ಹೊಸ ಆರೋಪಗಳನ್ನು ಹೊರಿಸುವುದರ ಮೂಲಕ ಮತ್ತೇ ಅವರನ್ನು ಸೆರೆಮನೆಗೆ ನೂಕಿದರು. ಪೊಲೀಸರ ಎಲ್ಲಾ ಆರೋಪಗಳಿಂದ ಮುಕ್ತವಾಗಲು ಪುನಃ ಒಂದು ವರ್ಷದ ಅವಧಿ ಹಿಡಿಯಿತು. ಯಾವುದೇ ಹುರುಳಿಲ್ಲದ ಆರೋಪಗಳಿಗೆ ಬಲಿಯಾದ ಅರುಣ್ ಫೆರಿರಾ  ಅವರ ಯವ್ವನದ ಐದು ವರ್ಷಗಳು ಸೆರೆಮನೆಯ ಕತ್ತಲ ಕೂಪದಲ್ಲಿ ಕಳೆದು ಹೋದವು. ಇತ್ತ ಮುಂಬೈ ನಗರದಲ್ಲಿ ಅವರ ಕುಟುಂಬದ ಸದಸ್ಯರು ಸಮಾಜದ ಕ್ರೂರ ಕಣ್ಣಿಗೆ ತುತ್ತಾಗಿ ಅಪಮಾನದ ಬೇಗುದಿಯಲ್ಲಿ ಬೆಂದು ಹೋದರು. ಇದು  ಪ್ರಜ್ಞಾವಂತ ನಾಗರೀಕರನ್ನು  ನಮ್ಮನ್ನು ಆಳಿದ ಸರ್ಕಾರಗಳು ಹೇಗೆ ನಡೆಸಿಕೊಳ್ಳುತ್ತಾವೆ ಎಂಬುದಕ್ಕೆ ಒಮದು ಉದಾಹರಣೆ. ಮೊನ್ನೆ ಬಂಧಿತರಾದ ಐವರು ಸಾಮಾಜಿಕ ಕಾರ್ತರಲ್ಲಿ ಅರುಣ್ ಫೆರಿರಾ ಕೂಡ ಒಬ್ಬರಾಗಿದ್ದಾರೆ. ಛತ್ತೀಸ್ ಗಡದಲ್ಲಿ ಮಾನವ ಹಕ್ಕುಗಳ ಪರವಾಗಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದ ಅರುಣ್ ಅವರನ್ನು ಸಹ ಪೊಲೀಸರು ಬಂಧಿಸಿದ್ದಾರೆ. ಯಥಾ ಪ್ರಕಾರ ಅವರ ಮೇಲೆ ದೇಶ ದ್ರೋಹದ ಆರೋಪ ಹೊರಿಸಲಾಗಿದೆ.
ಅರುಣ್ ಫೆರಿರಾ ಅವರಿಗಿಂತ ಭಿನ್ನವಾದ ಕಥೆ ಡಾ.ಬಿಯಾಂಕ್ ಸೇನ್ ಅವರದು. ಪಶ್ಚಿಮ ಬಂಗಾಳ ಮೂಲದ ಸೇನ್ ಅವರು ದೆಹಲಿಯಲ್ಲಿ ಎಂ.ಬಿ. ಬಿ.ಎಸ್. ಪದವಿ ಹಾಗೂ ಸ್ನಾತಕೋತ್ತರ ಪಡವಿ ಪಡೆದು ಮಕ್ಕಳ ತಜ್ಞರಾಗಿ ಹೊರಬಂದ ಅವರು, ಲಕ್ಷಾಂತರ ರೂಪಾಯಿಗಳ ಸಂಬಳ ತೊರೆದು ಮೂರು ದಶಕಗಳ ಹಿಂದೆ ತಮ್ಮ ಪತ್ನಿ ಪ್ರೊ.ಇಲ್ಲಿಯಾ ಸೇನ್ ಜೊತೆ ಛತ್ತೀಸ್ ಗಡದ ರಾಯ್ ಪುರ ನಗರಕ್ಕೆ ಬಂದು ನೆಲೆಸಿದರು. ಆ ಕಾಲದಲ್ಲಿ  ಮಧ್ಯ ಪ್ರದೇಶದ ಭಾಗವಾಗಿದ್ದ ರಾಯ್ ಪುರ್ ಪ್ರದೇಶದ ಸುತ್ತ ಮುತ್ತಲಿನ  ಅರಣ್ಯದ ಆದಿವಾಸಿ ಹಳ್ಳಿಗಳ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದನ್ನು ನೋಡಿದ ಡಾ.ಬಿಯಾಂಕ ಸೇನ್, ಹಳ್ಳಿಗಳಲ್ಲಿ ಸಂಚರಿಸುತ್ತಾ ಮಕ್ಕಳ ಆರೋಗ್ಯ ಸೇವೆಯಲ್ಲಿ ನಿರತರಾಗಿದ್ದರು. ಅವರ ಪತ್ನಿ ಇಲ್ಲಿಯಾ ಸೇನ್ ರವರು ದೆಹಲಿಯ ಜವಹರ್ ಲಾಲ್ ನೆಹರೂ ವಿ.ವಿ. ಹಾಗೂ ಕೊಲ್ಕತ್ತ ನಗರದಲ್ಲಿ ಶಿಕ್ಷಣ ಪಡೆದು ವಾರ್ಧಾ ದಲ್ಲಿರುವ ಮಹಾತ್ಮ ಗಾಂಧಿ ಅಂತರಾಷ್ಟ್ರೀಯ ಹಿಂದಿ ವಿಶ್ವ ವಿದ್ಯಾಲಯದಲ್ಲಿ ಮಹಿಳಾ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಾ, ಪತಿಯ ಜೊತೆ ಛತ್ತಿಸ್ ಗಡ ಅರಣ್ಯದ ಮಹಿಳಾ ಆದಿವಾಸಿಗಳ ಶ್ರೇಯೋಭಿವೃದ್ಧಿಗಾಗಿ ದುಡಿದರು.
2007 ರಲ್ಲಿ ಅರುಣ್ ಫೆರಿರಾ ಬಂಧನವಾದ ಒಂದು ವಾರದ ನಂತರ ಡಾ.ಬಿಯಾಂಕ ಸೇನರನ್ನು ರಾಯಪುರ ನಗರದಲ್ಲಿ ಛತ್ತೀಸ್ ಗಡ ಪೊಲೀಸರು ಬಂಧಿಸಿದರು.  ಸೆರೆಮನೆಯಲ್ಲಿರುವ ನಕ್ಸಲ್ ನಾಯಕರು ಮತ್ತು ಅರಣ್ಯದೊಳಗೆ ಇರುವ ನಕ್ಸಲರು ಇವರ ನಡುವೆ ಸಂವಹನ ದ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಆರೋಪದಡಿ ಬಿಯಾಂಕ್ ಸೇನರನ್ನು ಬಂಧಿಸಿದ ಪೋಲಿಸರು ಅವರಿಗೆ ಛತ್ತೀಸ್ ಗಡ ಹೈ ಕೋರ್ಟಿನಲ್ಲಿ ಜೀವಾವಧಿ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾದರು. ಈ ಸುದ್ಧಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದು, ವಿಶ್ವ ಪ್ರಸಿದ್ಧ ಭಾಷಾ ತಜ್ಞ ನೋಮ್ ಚಾಮ್ ಸ್ಕಿ ಅವರಿಂದ ಹಿಡಿದು, ಅಮಾರ್ತ್ಯ ಸೇನ್, ವಿಶ್ವ ಮಾನವ ಹಕ್ಕುಗಳ ಸಂಘಟನೆ ಹೀಗೆ ಹಲವು ಗಣ್ಯರಿಂದ  ಜಾಗತಿಕ ಮಟ್ಟದಲ್ಲಿತೀವ್ರವಾದ ವಿರೋಧ ವ್ಯಕ್ತವಾಯಿತು. ಅಂತಿಮವಾಗಿ ನಾಲ್ಕು ವರ್ಷಗಳ ನಂತರ 2011 ರಲ್ಲಿ ಸುಪ್ರೀಂಕೋರ್ಟ್ ಮಧ್ಯ ಪ್ರವೇಶದಿಂದಾಗಿ  ಡಾ,ಬಿಯಾಂಕ್ ಸೇನ್ ಹೊರಬರಲು ಸಾಧ್ಯವಾಯಿತು.
ಅವರ ಪತ್ನಿ ಇಲ್ಲಿಯಾ ಸೇನ್ ಅವರು ತಮ್ಮ ಪತಿಯ ಬಂಧನ ಹೋರಾಟ ಹಾಗೂ ತಾವಿಬ್ಬರೂ ಛತ್ತೀಸ್ ಗಡದಲ್ಲಿ ಮೂರು ದಶಕಗಳ ಕಾಲ ಸಲ್ಲಿಸಿದ ನಿಸ್ವಾರ್ಥ ಸೇವೆಯ ಅನುಭವಗಳನ್ನು ತಮ್ಮ “ ಇನ್ ಸೈಡ್ ದ ಛತ್ತೀಸ್ ಗಡ್” ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.  ಇಡೀ ಕೃತಿಯಲ್ಲಿ ಆರಂಭದ ಅಧ್ಯಾಯಗಳಲ್ಲಿ ತಮ್ಮ ಪತಿಯ ಬಿಡುಗಡೆಗಾಗಿ ನಡೆಸಿದ ಹೋರಾಟವನ್ನು ದಾಖಲಿಸಿರುವ ಅವರು, ನಂತರ ಅಧ್ಯಾಯಗಳಲ್ಲಿ ಆದಿವಾಸಿ ಮಹಿಳಾ ಸಮುದಾಯದಲ್ಲಿ ತಾವು ತಂದ ಬದಲಾವಣೆ ಹಾಗೂ ಸುಧಾರಣೆಗಳನ್ನು ದಾಖಲಿಸಿದ್ದಾರೆ. ಈ ಎರಡು ಕೃತಿಗಳು ಆಳುವ ಸರ್ಕಾರಗಳ ಮೊತ್ತೊಂದು ಮುಖವನ್ನು ಸಮರ್ಥವಾಗಿ ಅನಾವರಣಗೊಳಿಸುವುದರ ಜೊತೆಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ವ್ಯವಸ್ಥಿತವಾಗಿ ಹೇಗೆ ದಮನಗೊಳಿಸಲಾಗುತ್ತಿದೆ ಎಂಬುದನ್ನು ತಿಳಿಸಿಕೊಡುತ್ತವೆ.
ನೊಂದವರು, ಬಡವರು, ಆದಿವಾಸಿಗಳು, ಕೂಲಿಕಾರ್ಮಿಕರ ಪರವಾಗಿ ದುಡಿಯವವರಿಗೆ “ನಗರದ ನಕ್ಸಲರು” ಎಂಬ ಹೊಸ ಹಣೆ ಪಟ್ಟಿ ಕಟ್ಟುವವರು ಒಮ್ಮೆ ತಮ್ಮ ಒಳಗಣ್ಣನ್ನು ತೆರೆದು ಆತ್ಮ ಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಬೇಕಿದೆ.
(ಚಿತ್ರಗಳು ಸೌಜನ್ಯ ಟೈಮ್ಸ್ ಆಫ್ ಇಂಡಿಯ ಮತ್ತು ಇಂಡಿಯಾ ಟುಡೆ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ