ಕನ್ನಡದ
ಹಿರಿಯ ಕಥಗಾರರೂ, ಕಾದಂಬರಿಕಾರು ಹಾಗೂ ಪ್ರಬಂಧಕಾರರಾಗಿರುವ ಕೆ.ಸತ್ಯನಾರಾಯಣರವರ ಇತ್ತೀಚೆಗಿನ
" ಸ್ಕೂಲು ಬಿಡುವ ಸಮಯ" ಪ್ರಬಂಧಗಳ ಕೃತಿಯನ್ನು ಓದುತ್ತಿದ್ದೆ. ವಯಸ್ಸಾಗುತ್ತಿರುವುದು
ಸತ್ಯನಾರಾಯಣರಿಗೆ ಮತ್ತು ಅವರೇ ಒಂದು ಪ್ರಬಂಧದಲ್ಲಿ ಹೇಳಿಕೊಂಡಿರುವ ಹಾಗೆ ಕಾಲಕ್ಕೆ ಮತ್ತು ಇತಿಹಾಸಕ್ಕೆ
ಹೊರತು ಅವರ ಬರೆವಣಿಗೆಗೆ ಅಲ್ಲ ಎಂದು ಆ ಕ್ಷಣಕ್ಕೆ ಅನಿಸಿತು.
ಕಳೆದ
ಮೂರುವರೆ ದಶಕಗಳಿಂದ ನಿರಂತರವಾಗಿ ಬರೆಯುತ್ತಿರುವ ಶ್ರೀ ಕೆ. ಕೆ.ಸತ್ಯನಾರಾಯಣರ ಬರೆವಣಿಗೆಯಲ್ಲಿ ಎಲ್ಲಿಯೂ ಅಕ್ಷರದ ದಣಿವು ಎಂಬ ಸುಳಿವು ಕಾಣುವುದಿಲ್ಲ.
ಏಕೆಂದರೆ, ಅವರ ಕಥೆಗಳಾಗಲಿ,ಕಾದಂಬರಿಗಳಾಗಲಿ ಅಥವಾ ಪ್ರಬಂಧಗಳ ಭಾಷೆಯಲ್ಲಿ ಮತ್ತು ಅಭಿವ್ಯಕ್ತಿಯಲ್ಲಿ
ಯಾವುದೇ ಸೋಗಲಾಡಿತನವಾಗಲಿ ಇಲ್ಲವೆ, ಆತ್ಮರತಿಯ ಗುಣಗಳು ಕಾಣುವುದಿಲ್ಲ. ಒಬ್ಬ ಅಗೋಚರ ಓದುಗನನ್ನು
ಆತ್ಮಸಂಗಾತನನ್ನಾಗಿ ಮಾಡಿಕೊಂಡು, ಆತ್ಮೀಯವಾಗಿಸಿಕೊಂಡು ತಾವು ಕಂಡ ಲೋಕದ ವ್ಯವಹಾರಗಳನ್ನು ಕಥೆ, ಕಾದಂಬರಿ
ಮತ್ತು ಪ್ರಬಂಧಗಳ ರೂಪದಲ್ಲಿ ಅವನಿಗೆ ಅವರು ದಾಟಿಸುವ ಪರಿ ನಿಜಕ್ಕೂ ಅನನ್ಯವಾದದು.ಕನ್ನಡದ ಸಾಹಿತ್ಯ ಜಗತ್ತು ಅವರನ್ನು ಮಾಸ್ತಿಯವರ
ಉತ್ತರಾಧಿಕಾರಿ ಎಂದು ಬಣ್ಣಿಸುತ್ತದೆ. ಮಾಸ್ತಿ ಮತ್ತು ಸತ್ಯನಾರಾಯಣ ಇಬ್ಬರೂ ಸರ್ಕಾರದ ಉನ್ನತಾಧಿಕಾರಿಗಳಾಗಿ
ಮುಕ್ತ ಮುನಸ್ಸಿನಿಂದ ತಮ್ಮ ಕಣ್ಣಮುಂದಿನ ಲೋಕವನ್ನು ಗ್ರಹಿಸಿದವರು ನಿಜ. ಆದರೆ, ವಿಷಯಗಳ ಅಭಿವ್ಯಕ್ತಿಯಲ್ಲಿ
ಮತ್ತು ತಾವು ನಂಬಿದ ಧರ್ಮ, ಆಚಾರ, ವಿಚಾರಗಳಲ್ಲಿ ಮಾಸ್ತಿಯವರದು ಮಡಿವಂತಿಕೆ ಮನಸ್ಸಾದರೆ, ಸತ್ಯನಾರಾಯಣರದು ಜಾತಿ, ಧರ್ಮ ಮತ್ತು ಪಂಥಗಳನ್ನು ಮೀರಿದ ಮನಸ್ಸು.
ಕೆ.ಸತ್ಯನಾರಾಯಣರು
ಮಂಡ್ಯ ಜಿಲ್ಲೆಯ ಒಂದು ಸಾಧಾರಣ ಗ್ರಾಮದಲ್ಲಿ ( ನನ್ನೂರು ಕೊಪ್ಪ ಗ್ರಾಮದಲ್ಲಿ) ಸಾಮಾನ್ಯ ಬ್ರಾಹ್ಮಣ
ಕುಟುಂಬದಲ್ಲಿ ಜನಿಸಿದವರು. ಹಾಗಾಗಿ ಅವರ ನಡೆ, ನುಡಿಗಳಲ್ಲಿ ಜಾತಿ ಧರ್ಮಗಳನ್ನು ಮೀರಿದ ಗ್ರಾಮೀಣ
ಸಂಸ್ಕೃತಿಯ ಕೊಡು ಕೊಳೆಯ ಪ್ರಭಾವ ಎದ್ದುಕಾಣುತ್ತದೆ. ಒಬ್ಬರಿಗೊಬ್ಬರು ಹಂಚಿ ತಿನ್ನುವ, ಕಷ್ಟ ಸುಖಗಳಲ್ಲಿ
ಭಾಗಿಯಾಗುವ ಗುಣ ಗ್ರಾಮ ಸಂಸ್ಕೃತಿಯ ಜೀವನಾಡಿಯಾಗಿದೆ.
ತಮ್ಮ ಬಾಲ್ಯದಿಂದಲೂ ಇಂತಹ ಉದಾತ್ತ ಪರಂಮಪರೆಯ ಜೊತೆ ಒಡನಾಡುತ್ತಾ ಬೆಳೆದ ಲೇಖಕರ ಕಥೆಗಳಲ್ಲಿ, ಪ್ರಬಂಧಗಳಲ್ಲಿ
ಹಾಗೂ ಅವರ ಕಾದಂಬರಿಯ ಪಾತ್ರಗಳಲ್ಲಿ ಮತ್ತು ಬಾಲ್ಯದ
ನೆನಪುಗಳಲ್ಲಿ ಇಂತಹ ವೈವಿಧ್ಯಮಯ ವಿಷಯಗಳು ಅಪ್ರಜ್ಞಾಪೂರ್ವಕವಾಗಿ ಅಕ್ಷರ ರೂಪ ತಾಳುತ್ತವೆ. ಸತ್ಯನಾರಾಯಣರ
ಬರೆವಣಿಗೆಯ ಹಿಂದಿನ ದೊಡ್ಡ ಶಕ್ತಿಯೆಂದರೆ. ಅವರು ಬದುಕನ್ನು ಅಥವಾ ತಮ್ಮ ಕಣ್ಣ ಮುಂದಿನ ಲೋಕವನ್ನು
ಯಾವುದೇ ಪೂರ್ವಾಗ್ರಹವಿಲ್ಲದೆ ಗ್ರಹಿಸುವ ಮತ್ತು ವಿಶ್ಲೇಸಿಸುವ ಮನಸ್ಸು ಅವರನ್ನು ಕನ್ನಡ ಸಾಂಸ್ಕೃತಿಕ
ಲೋಕದ ಬಹು ಮುಖ್ಯ ಬರಹಗಾರರನ್ನಾಗಿಸಿದೆ. ನಾನು ಹಿರಿಯ ಮಿತ್ರ ಜಯಂತಕಾಯ್ಕಿಣಿ ಅವರಲ್ಲಿಯೂ ಇಂತಹ ಗುಣವನ್ನು ಕಂಡಿದ್ದೀನಿ. ಈ ಇಬ್ಬರೂ ಬರಹಗಾರರು ಎಂದಿಗೂ
ಸಾರ್ವಜನಿಕವಾಗಿ ಅಥವಾ ಖಾಸಾಗಿಯಾಗಿ ಮಿತ್ರಹರ ಜೊತೆ ಒಡನಾಡುವ ಸಂದರ್ಭದಲ್ಲಿ ಉಗ್ರವಾದವನ್ನು ಮಂಡಿಸಿದವರಲ್ಲ
ಜೊತೆಗೆ ವ್ಯಗ್ರಗೊಂಡವರಲ್ಲ. ಹೇಳಬೇಕಾದ ನಿಷ್ಟುರ ಸತ್ಯಗಳನ್ನು ತಣ್ಣನೆಯ ಭಾವನೆಯ ಮೂಲಕ ಅಕ್ಷರಗಳಲ್ಲಿ ಮತ್ತು ಮಾತುಗಳಲ್ಲಿ ದಾಖಲಿಸಿದವರು.
1990ರ
ದಶಕದಲ್ಲಿ ಕೈಲಾಸ ಮಾನಸ ಸರೋವರ ಯಾತ್ರೆಯ ಕುರಿತು ಕೆ.ಸತ್ಯನಾರಾಯಣರು ಬರೆದ " ಸದ್ದು, ದೇವರು
ಸ್ನಾನ ಮಾಡುತ್ತಿದ್ದಾನೆ" ಎಂಬ ಪ್ರವಾಸ ಕಥ ನಾನು ಓದಿದ ಲೇಖಕರ ಮೊದಲ ಕೃತಿ. ಆನಂತರದ ದಿನಗಳಲ್ಲಿ
ಅವರ ನಕ್ಸಲ್ ವರಸೆ, ನಿಮ್ಮ ಮೊದಲ ಪ್ರೇಮಕಥೆ, ಹೆಗ್ಗುರುತು, ಚಿತ್ರಗುಪ್ತನ ಕಥೆಗಳು ಮತ್ತು ಅಮೇರಿಕಾಮನೆ
ಕಥಾ ಸಂಕಲಗಳನ್ನು ಹಾಗೂ ಸನ್ನಿಧಾನ, ರಾಜಧಾನಿಯಲ್ಲಿ ಶ್ರೀಮತಿಯರು, ವಿಚ್ಛೇಧನಾ ಪರಿಣಯ ಮತ್ತು ವಿಕಲ್ಪ
ಕಾದಂಬರಿಗಳನ್ನು ಓದಿದವನು. ಇಷ್ಟೊಂದು ಸುಲಲಿತವಾಗಿ, ಯಾವುದೇ ರಾಗದ್ವೇಷಕ್ಕೆ ಒಳಗಾಗದೆ, ಕಥನವನ್ನು
ಕಟ್ಟಿಕೊಡಲು ಸಾಧ್ಯವೆ? ಎಂದು ನಾನು ಸತ್ಯನಾರಾಯಣರ ಅಭಿವ್ಯಕ್ತಿಯ ಶೈಲಿ ಮತ್ತು ಸರಳ ಭಾಷೆಯನ್ನು ಕಂಡು
ಬೆರಗಾಗಿದ್ದೀನಿ. ಕೇಂದ್ರ ಸರ್ಕಾರದ ಆದಾಯ ತೆರಿಗೆ
ಇಲಾಖೆಯಲ್ಲಿ ಉನ್ನತ ಅಧಿಕಾರಿಯಾಗಿ, ಕರ್ನಾಟಕ ಮತ್ತು ಗೋವಾ ರಾಜ್ಯಗಳ ಆಯುಕ್ತರಾಗಿ ಸೇವೆ ಸಲ್ಲಿಸಿ,
ದೇಶದ ವಿವಿಧ ನಗರಗಳ ವಿವಿಧ ಭಾಷೆ ಮತ್ತಿ ಸಂಸ್ಕೃತಿಗಳ ಜೊತೆ ನಿರಂತರ ಒಡನಾಡುತ್ತಾ, ತಮ್ಮ ಅನುಭವವನ್ನು
ಹೆಚ್ಚಿಸಿಕೊಂಡ ಲೇಖಕರು ತಾವು ಕಂಡುಂಡ ಘಟನೆಗಳನ್ನಾಗಲಿ ಅಥವಾ ವ್ಯಕ್ತಿಗಳನ್ನಾಗಲಿ ಕಥನದ ರೂಪಕ್ಕೆ
ಇಳಿಸುವಾಗ ತಾಳುವ ನಿರ್ಭಾವುಕತೆ ಅವರ ಕಥೆ ಮತ್ತು ಕಾದಂಬರಿಗಳ ಘನತೆಯನ್ನು, ತೂಕವನ್ನು ಹೆಚ್ಚಿಸಿವೆ.
ತಮ್ಮ
ಆತ್ಮ ಕಥನವನ್ನು ಲೇಖಕರು ಮೂರು ಭಾಗಗಳನ್ನಾಗಿ ಮಾಡಿಕೊಂಡು, ನಾವೇನು ಬಡವರಲ್ಲ, ಸಣ್ಣ ಸಣ್ಣ ಆಸೆಗಳ
ಆತ್ಮಚರಿತ್ರೆ ಮತ್ತು ವೃತ್ತಿ ವಿಲಾಸ ಎಂಬ ಶೀರ್ಷಿಕೆಯಡಿ ಕಟ್ಟಿಕೊಟ್ಟಿದ್ದಾರೆ. ವ್ಯಯಕ್ತಿಕ ವ್ಯಸನ,
ಆತ್ಮರತಿಯ ವಿಜೃಂಭಣೆ ಮತ್ತು ಬದುಕಿನಲ್ಲಿ ತಮಗೆ ಕೇಡು ಬಯಸಿದವರ ಮೇಲೆ ದ್ವೇಷ ಮತ್ತಿ ಸಿಟ್ಟನ್ನು
ಅಕ್ಷರ ರೂಪದಲ್ಲಿ ಕಾರಿಕೊಳ್ಳುವುದು ಆತ್ಮಚರಿತ್ರೆಯ ಗುಣ ಲಕ್ಷಣಗಳು ಎಂಬಂತಿರುವ ಇಂದಿನ ಸನ್ನಿವೇಶದಲ್ಲಿ
ಪ್ರತಿಯೊಂದು ಘಟನೆಯಲ್ಲಿ ತಮ್ಮನ್ನು ಸ್ವವಿಮರ್ಶೆಗೆ ಒಡ್ಡಿಕೊಂಡು, ಗೇಲಿ ಮಾಡಿಕೊಳ್ಳುತ್ತಾ ನಿರೂಪಿಸಿರುವ
ಬಗೆ ಲೇಖಕರ ಕುರಿತು ಓದುಗರಲ್ಲಿ ಗೌರವ ಉಂಟಾಗುತ್ತದೆ. ಗತ್ತು ಮತ್ತು ಗಂಟುಮೋರೆಯ ಲೇಖಕರಿಗಿಂತ ಸತ್ಯನಾರಾಯಣರವರು
ಭಿನ್ನವಾಗಿ ಕಾಣುವುದು ಈ ಕಾರಣಕ್ಕಾಗಿ.
ಪ್ರಬಂಧದ ವಿಷಯಕ್ಕೆ ಬಂದರೆ, ನಾವೆಲ್ಲಾ ಕ್ಷುಲ್ಲಕ ಸಂಗತಿಗಳು ಎಂದು ಪರಿಗಣಿಸದೆ ಬಿಟ್ಟಿರುವ ವಿಷಯಗಳನ್ನು ಎತ್ತಿಕೊಂಡು ಅವರು ಓದುಗರೊಂದಿಗೆ ಆಪ್ತವಾಗಿ ಚರ್ಚಿಸುವ ಶೈಲಿಯಿಂದಾಗಿ ಅವರ ಪ್ರಬಂಧಗಳು ನಮ್ಮ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತವೆ. ಈ ಕೃತಿಯಲ್ಲಿನ ಸ್ಕೂಲು ಬಿಡುವ ಸಮಯ, ನಾವೇಕೆ ನಗುವುದಿಲ್ಲ, ನಿಮ್ಮಮನೆಯ ವಿಳಾಸ, ಕಣ್ಣು ಮಡಗುವುದು, ಭಾನುವಾರದ ಆಟದ ಮೈದಾನ, ಹರಕಲು ಬನಿಯನ್, ಅಭಿಪ್ರಾಯ ಕೋರಿ ಇಂತಹ ಪ್ರಬಂಧಗಳಲ್ಲಿ ಲೇಖಕರು ತಮ್ಮ ಅನುಭವಗಳನ್ನು ತೆಳು ಹಾಸ್ಯದ ಶೈಲಿಯಲ್ಲಿ ಹೇಳುತ್ತಲೇ, ನಾವು ಬದುಕುತ್ತಿರುವ ಆಧುನಿಕ ಬದುಕಿನ ಬವಣೆ ಮತ್ತು ಬಿಕ್ಕಟ್ಟುಗಳನ್ನು ಓದಿಗರೆದೆಗೆ ಚಿಂತನೆಯ ರೂಪದಲ್ಲಿ ವರ್ಗಾಯಿಸುತ್ತಾರೆ. ಸತ್ಯನಾರಾಯಣರ ಪ್ರಬಂಧಗಳ ಗಟ್ಟಿತನದ ಮೂಲವಿರುವುದು ಅವರು ಆಯ್ದುಕೊಂಡ ವಿಷಯ ಮತ್ತು ವ್ಯಾಖ್ಯಾನಿಸುವ ಪರಿಯಲ್ಲಿ. ಇವೆರೆಡೂ ಓದುಗರಿಗೆ ಆಪ್ತವೆಸಿಸುತ್ತವೆ. ಟೈಮ್ ಪಾಸ್ ಪ್ರಬಂಧಗಳು ಮತ್ತು ಹರಟೆ ಪ್ರಬಂಧಗಳಿಗೆ ಪರ್ಯಾಯವಾಗಿ ಕೆ.ಸತ್ಯನಾರಾಯಣರು ಕಟ್ಟಿಕೊಡುವ ಪ್ರಬಂಧಗಳು ನಮಗೆ ಗೋರೂರು ರಾಮಸ್ವಾಮಿ ಅಯ್ಯಂಗಾರ್ ಅವರ ನಮ್ಮ ಊರಿನ ರಸಿಕರು ಪ್ರಬಂಧಗಳ ಮಾದರಿಯಲ್ಲಿ ನಾವು ಕಳೆದುಕೊಳ್ಳುತ್ತಿರುವ ಮನುಷ್ಯ ಸಂಬಂಧ ಮತ್ತು ಮಾನವೀಯತೆ ಕುರಿತಂತೆ ಪುನರ್ ವ್ಯಾಖ್ಯಾನದಂತೆ ಕಾಣುತ್ತವೆ.
ಪ್ರಬಂಧದ ವಿಷಯಕ್ಕೆ ಬಂದರೆ, ನಾವೆಲ್ಲಾ ಕ್ಷುಲ್ಲಕ ಸಂಗತಿಗಳು ಎಂದು ಪರಿಗಣಿಸದೆ ಬಿಟ್ಟಿರುವ ವಿಷಯಗಳನ್ನು ಎತ್ತಿಕೊಂಡು ಅವರು ಓದುಗರೊಂದಿಗೆ ಆಪ್ತವಾಗಿ ಚರ್ಚಿಸುವ ಶೈಲಿಯಿಂದಾಗಿ ಅವರ ಪ್ರಬಂಧಗಳು ನಮ್ಮ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತವೆ. ಈ ಕೃತಿಯಲ್ಲಿನ ಸ್ಕೂಲು ಬಿಡುವ ಸಮಯ, ನಾವೇಕೆ ನಗುವುದಿಲ್ಲ, ನಿಮ್ಮಮನೆಯ ವಿಳಾಸ, ಕಣ್ಣು ಮಡಗುವುದು, ಭಾನುವಾರದ ಆಟದ ಮೈದಾನ, ಹರಕಲು ಬನಿಯನ್, ಅಭಿಪ್ರಾಯ ಕೋರಿ ಇಂತಹ ಪ್ರಬಂಧಗಳಲ್ಲಿ ಲೇಖಕರು ತಮ್ಮ ಅನುಭವಗಳನ್ನು ತೆಳು ಹಾಸ್ಯದ ಶೈಲಿಯಲ್ಲಿ ಹೇಳುತ್ತಲೇ, ನಾವು ಬದುಕುತ್ತಿರುವ ಆಧುನಿಕ ಬದುಕಿನ ಬವಣೆ ಮತ್ತು ಬಿಕ್ಕಟ್ಟುಗಳನ್ನು ಓದಿಗರೆದೆಗೆ ಚಿಂತನೆಯ ರೂಪದಲ್ಲಿ ವರ್ಗಾಯಿಸುತ್ತಾರೆ. ಸತ್ಯನಾರಾಯಣರ ಪ್ರಬಂಧಗಳ ಗಟ್ಟಿತನದ ಮೂಲವಿರುವುದು ಅವರು ಆಯ್ದುಕೊಂಡ ವಿಷಯ ಮತ್ತು ವ್ಯಾಖ್ಯಾನಿಸುವ ಪರಿಯಲ್ಲಿ. ಇವೆರೆಡೂ ಓದುಗರಿಗೆ ಆಪ್ತವೆಸಿಸುತ್ತವೆ. ಟೈಮ್ ಪಾಸ್ ಪ್ರಬಂಧಗಳು ಮತ್ತು ಹರಟೆ ಪ್ರಬಂಧಗಳಿಗೆ ಪರ್ಯಾಯವಾಗಿ ಕೆ.ಸತ್ಯನಾರಾಯಣರು ಕಟ್ಟಿಕೊಡುವ ಪ್ರಬಂಧಗಳು ನಮಗೆ ಗೋರೂರು ರಾಮಸ್ವಾಮಿ ಅಯ್ಯಂಗಾರ್ ಅವರ ನಮ್ಮ ಊರಿನ ರಸಿಕರು ಪ್ರಬಂಧಗಳ ಮಾದರಿಯಲ್ಲಿ ನಾವು ಕಳೆದುಕೊಳ್ಳುತ್ತಿರುವ ಮನುಷ್ಯ ಸಂಬಂಧ ಮತ್ತು ಮಾನವೀಯತೆ ಕುರಿತಂತೆ ಪುನರ್ ವ್ಯಾಖ್ಯಾನದಂತೆ ಕಾಣುತ್ತವೆ.
ಕೊನೆಯ
ಮಾತು- ಈ ಕೃತಿಯಲ್ಲಿನ ಹರಕಲು
ಬನಿಯನ್ ಪ್ರಬಂಧ ಓದಿದ ನನ್ನ
ಪತ್ನಿ. " ಸ್ವಾಮಿ ನೋಡಪ್ಪ, ಒಂದೇ
ಊರಿನ ಒಂದು ಬೀದಿಯ ಆಚೆ-ಈಚೆಗಿನ ಅಣ್ಣ ತಮ್ಮಂದಿರ ಕಥೆಯಂತಿದೆ" ಎಂದು ನಗೆಯಾಡಿದಳು. ಸದಾ ತೂತು ತೂತಾದ
ಹರಕಲು ಬನಿಯನ್ ತೊಟ್ಟು ಪತ್ನಿಯಿಂದ ಬೈಸಿಕೊಳ್ಳುವ ಪ್ರಸಂಗವನ್ನು ಸತ್ಯನಾರಾಯಣರು ಸ್ವಾರಸ್ಯಕರವಾಗಿ
ಬಣ್ಣಿಸಿದ್ದಾರೆ. ಅವರದು ಬನಿಯನ್ ಕಥೆಯಾದರೆ, ನನ್ನದು ಚಡ್ಡಿಯ ಕಥೆ. ಹಿಂಭಾಗದಲ್ಲಿ ತೂತು ತೂತಾದ
ಹಾಗೂ ಎಲಾಸ್ಟಿಕ್ ಕಿತ್ತು ಹೋದ ಚಡ್ಡಿಗಳನ್ನು ಛಲ ಬಿಡದ ತ್ರಿವಿಕ್ರಮನಂತೆ ತೊಡುವುದು ನನ್ನ ಹವ್ಯಾಸ. ಏಕೆಂದರೆ ಇನ್ನೂರು ರೂಪಾಯಿ ಕೊಟ್ಟು
ತಂದ ಚಡ್ಡಿಗಳು ಕನಿಷ್ಟ ಎರಡು ವರ್ಷ ಬಾಳಿಕೆ ಬರಲೇ ಬೇಕು ಎಂದು ತೀರ್ಮಾನಿಸಿ ಅವುಗಳನ್ನು ತೊಡುತ್ತೇನೆ.
ಇದಕ್ಕೆ ಪತ್ನಿ ಮತ್ತು ಮಕ್ಕಳ ಆಕ್ಷೇಪ. ಈ ಸಂದರ್ಭದಲ್ಲಿ ನಾನು ಅವರಿಗೆ ಕೊಡುವ ಉತ್ತರವೇನೆಂದರೆ,
"ನಾನು ಪ್ಯಾಂಟಿನ ಮೇಲೆ ಅಥವಾ ಮನೆಯಲ್ಲಿ ಪಂಚೆಯ ಮೇಲೆ ಚಡ್ಡಿಗಳನ್ನು ತೊಡುವುದಿಲ್ಲ. ಇದಕ್ಕೆ
ನಿಮ್ಮದೇನು ಆಕ್ಷೇಪ?" ಈಗ ಅವುಗಳನ್ನು ನನಗೆ ಸಿಗದಂತೆ ಮರೆ ಮಾಡುವ ತಂತ್ರವವನ್ನು ಉಪಯೋಗಿಸುತ್ತಿದ್ದಾರೆ.
ಸತ್ಯನಾರಾಯಣರ ಪ್ರಬಂಧ ಓದುವಾಗ ನಮ್ಮಿಬ್ಬರ ಮೇಲೆ ನನ್ನೂರಿನ ಮಣ್ಣು, ನೀರು ಮತ್ತು ಗಾಳಿಯ ಪ್ರಭಾವ
ಇರಬೇಕು ಎಂದು ಭಾವಿಸಿಕೊಂಡೆ. ನಾವು ಬಿಟ್ಟು ಬಂದ
ಊರನ್ನು ಹಾಗೂ ಮತ್ತೇ ಹಿಂತಿರುಗಿ ಹೋಗಲಾದ ಬಾಲ್ಯವನ್ನು
ನೆನೆದು ಕಣ್ಣುಗಳು ಕ್ಷಣ ಕಾಲ ತೇವಗೊಂಡವು. ಇಲ್ಲಿನ
ನಿಲ್ದಾಣಗಳ ಅನೇಕಾಂತವಾದ" ಎಂಬ ಪ್ರಬಂಧದಲ್ಲಿ ಆ ಕಾಲದ ನನ್ನೂರಿನಲ್ಲಿ ಬಸ್ ಪ್ರಯಾಣದ
ವೈಖರಿ ಹೇಗಿತ್ತು ಎಂಬುದನ್ನು ಕಟ್ಟಿಕೊಟ್ಟಿದ್ದಾರೆ. 1960 ಮತ್ತು 70 ರ ದಶಕದಲ್ಲಿ ಕೊಪ್ಪ-ಮದ್ದೂರು
ನಡುವಿನ 19 ಕಿಲೊಮೀಟರ್ ದೂರಕ್ಕೆ ಒಂದೂವರೆ ಗಂಟೆ ಮತ್ತು ಕೊಪ್ಪ-ಮಂಡ್ಯ ನಡುವಿನ 25 ಕಿಲೋಮೀಟರ್ ದೂರಕ್ಕೆ ಎರಡು ಗಂಟೆಯ ಪ್ರಯಾವಿತ್ತು ಎಂದರೆ ನೀವು ನಂಬುತ್ತೀರಾ? ಆದರೆ ನಂಬಲೇ ಬೇಕು.
ಏಕೆಂದರೆ ನಾನು ಮತ್ತು ಕೆ,ಸತ್ಯನಾರಾಯಣ ಇಬ್ಬರೂ ಆ
ಕಾಲದ ಶ್ರೀ ಲಕ್ಷ್ಮಿ ನರಸಿಂಹ ಪ್ರಸನ್ನ ಶ್ರೀ ಲಕ್ಷ್ಮಿ ವೆಂಕಟೇಶ್ವರ ಹಾಗೂ ಶ್ರೀ ಪಂಚಲಿಂಗೇಶ್ವರ
ಮೋಟಾರ್ ಸರ್ವಿಸ್ ಎಂಬ ಬಸ್ ಗಳಲ್ಲಿ ನಿರಂತರ ಪ್ರಯಾಣ ಮಾಡಿದ್ದೇವೆ.
ಇಂತಹ
ಕೃತಿಯ ಮೂಲಕ ನಮ್ಮ ಬಾಲ್ಯದ ನೆನಪುಗಳ ಮರೆವಣಿಗೆಯನ್ನುಕಣ್ಣ ಮುಂದೆ ತಂದಿರಿಸಿದ ನನ್ನೂರಿನ ಹಿರಿಯ
ಜೀವ ಹಾಗೂ ಅಣ್ಣನಂತಿರುವ ಸತ್ಯನಾರಾಯಣರಿಗೆ ಕೃತಜ್ಞತೆ ಹೇಳುವುದು ಕೃತಕವಾಗಬಹುದೇನೊ? ಎಂಬ ಅಳಕು ಕಾಡುತ್ತಿದೆ.
ಆದರೆ, ಇವರನ್ನು ನಿರಂತರ ಬರೆವಣಿಗೆಯಲ್ಲಿ ತೊಡಗಿಸಿರುವ ಬೆಂಗಳೂರಿನ ಅಭಿನವ ಪ್ರಕಾಶನದ ರವಿಕುಮಾರ್,
ಪಿ.ಚಂದ್ರಿಕಾ ಮತ್ತು ಕೃಷ್ಣ ಚಂಗಡಿ ಇವರಿಗೆ ನಾನು ಕೃತಜ್ಷತೆ ಹೇಳಲೇ ಬೇಕು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ