ಕೃಪಾಕರ್-ಸೇನಾನಿ
ಎಂಬ ಈ ಅಪರೂಪದ ಗೆಳೆಯರ ಜೋಡಿ ಇತ್ತೀಚೆಗಿನ ದಿನಗಳಲ್ಲಿ
ಜಾಗತಿಕ ಮಟ್ಟದ ವನ್ಯಜೀವಿ ಛಾಯಾಗ್ರಹಣ ಮತ್ತು ಸಾಕ್ಷ್ಯ ಚಿತ್ರಚಿತ್ರಗಳ ನಿರ್ಮಾಣದಲ್ಲಿ
ಮುಂಚೂಣಿಯಲ್ಲಿದ್ದಾರೆ. ಸದಾ ಸುದ್ದಿ ಮತ್ತು ಪ್ರಚಾರದ ಜಗತ್ತಿನಿಂದ ದೂರವಿದ್ದುಕೊಂಡು ಒಂದು ಅಂತರವನ್ನು
ಕಾಯ್ದುಕೊಂಡು ಬಂದಿರುವ ಈ ಮಿತ್ರರು ಮಾತಿಗಿಂತ ಹೆಚ್ಚಾಗಿ ಕೃತಿಯಲ್ಲಿ ನಂಬಿಕೆಯಿಟ್ಟವರು.
ತಮ್ಮ
ಜೀವನದ ಅರ್ಧ ಆಯುಷ್ಯವನ್ನು ದಕ್ಷಿಣ ಭಾರತದ ಕಾಡುಗಳ ನಡುವೆ ಅಲೆದಾಡುತ್ತಾ, ಅಲ್ಲಿನ ಜೀವಸಂಕಲುಗಳನ್ನು
ಅಧ್ಯಯನ ಮಾಡುತ್ತಾ. ನಿಸರ್ಗದ ಜೊತೆ ನಿರಂತರ ಅನುಸಂಧಾನ ನಡೆಸುತ್ತಾ ಬಂದಿರುವ ಇವರು ಹೊರಜಗತ್ತಿಗೆ
ಪ್ರಸಿದ್ಧ ವನ್ಯಜೀವಿ ಛಾಯಾಗ್ರಾಹಕರು ಎಂದಷ್ಟೇ ಪರಿಚಿತರು. ಆದರೆ, ಇವರ ಜೊತೆ ಮಾತಿಗೆ ಕುಳಿತರೆ ನಿಸರ್ಗದ
ಚಟುವಟಿಯನ್ನು, ಋತುಮಾನಗಳ ಪ್ರಕ್ರಿಯೆಯನ್ನು ಮತ್ತು ಪ್ರಾಣಿ ಪಕ್ಷಿಗಳಿಂದ ಹಿಡಿದು, ನಾವು ನಡೆದಾಡುವ
ನೆಲದ ಮೇಲಿನ ಹಾಗೂ ನಮ್ಮ ಪಾದದಡಿಯ ಗರಿಕೆ ಹುಲ್ಲಿನಿಂದ ಹಿಡಿದು, ನೆಲದ ಮೇಲಿನ ಅತ್ಯಂತ ಕಿರಿಯ ಇರುವೆ ಹಾಗೂ ದೈತ್ಯ ಜೀವಿ ಆನೆ
ಇವುಗಳ ಜೀವನ ಕ್ರಮ ಮತ್ತು ವರ್ತನೆಗಳ ಕುರಿತಂತೆ ಅಧಿಕೃತವಾಗಿ
ಮಾತನಾಡಬಲ್ಲ ಭಾರತದ ಕೆಲವೇ ಕೆಲವು ತಜ್ಞರಲ್ಲಿ ಕೃಪಾಕರ್ ಮತ್ತು ಸೇನಾನಿ ಪ್ರಮುಖರಾಗಿದ್ದಾರೆ.
ಕಾಡು ನಾಯಿಗಳ ಕುರಿತಂತೆ ಬಂಡಿಪುರದ ಅರಣ್ಯದಲ್ಲಿ
ಸತತ ಹದಿನೈದು ವರ್ಷಗಳ ಅಧ್ಯಯನ ಹಾಗೂ ತೋಳಗಳ ಕುರಿತಂತೆ ಉತ್ತರ ಕರ್ನಾಟಕದಲ್ಲಿ ಐದಾರು ವರ್ಷಗಳ ಅಧ್ಯಯನದ
ಮೂಲಕ ಇವರು ನಿರ್ಮಿಸಿದ ಈ ಎರಡು ಸಾಕ್ಷ್ಯಚಿತ್ರಗಳು ಈಗಾಗಲೇ ಜಗತ್ತಿನಾದ್ಯಂತ ಪ್ರಸಾರವಾಗಿವೆ. ಮನುಷ್ಯರಿಂದ
ಸದಾ ದೂರವಿರುವ ಕಾಡು ನಾಯಿಗಳ ಕುರಿತು ಚಿತ್ರ ನಿರ್ಮಿಸಲು ಜಗತ್ತಿನ ಅತಿ ಶ್ರೇಷ್ಟ ವನ್ಯ ಜೀವಿ ಛಾಯಾಗ್ರಾಹಕರು
ಪ್ರಯತ್ನ ಪಟ್ಟು ವಿಫಲರಾದ ಇತಿಹಾಸವನ್ನು ಬೆನ್ನಿಗೆ ಕಟ್ಟಿಕೊಂಡು ಕಾಡುನಾಯಿಗಳ ಬೆನ್ನುಹತ್ತಿ ಅವುಗಳ
ಕುರಿತಂತೆ ಸಮಗ್ರ ಚಿತ್ರಣವನ್ನು ಜಗತ್ತಿಗೆ ನೀಡಿದ ಅಪ್ರತಿಮ ಸಾಹಾಸಿಗರು ಇವರು. ಕೃಪಾಕರ್-ಸೇನಾನಿ
ನಿರ್ಮಿಸಿದ ದ ಪ್ಯಾಕ್ ಎಂಬ ಹೆಸರಿನ 47 ನಿಮಿಷಗಳ
ಕಾಡುನಾಯಿಗಳ ಜೀವನ ಕ್ರಮದ ಕುರಿತ ಅಧ್ಯಯನದ ಸಾಕ್ಷ್ಯ ಚಿತ್ರ ನಿಜಕ್ಕೂ ಒಂದು ದೃಶ್ಯ ಕಾವ್ಯವಾಗಿ ಮೂಡಿ
ಬಂದಿದೆ. ಕೇವಲ ನಲವತ್ತೇಳು ನಿಮಿಷದ ಒಂದು ಸಾಕ್ಷ್ಯಚಿತ್ರಕ್ಕಾಗಿ ಈ ಇಬ್ಬರು ಗೆಳೆಯರು ಸತತ ಹದಿನೈದು
ವರ್ಷಗಳ ಕಾಲ ಕಾಡು ಮೇಡುಗಳಲ್ಲಿ ಕಳೆದು ಹೋಗಿದ್ದರು. ಹಗಲು -ಇರುಳೆನ್ನದೆ, ಮಳೆ ಬಿಸಿಲೆನ್ನೆದು,
ಮಳೆಗಾಲ, ಚಳಿಗಾಲಗಳನ್ನು ಲೆಕ್ಕಿಸದೆ, ಬಿದಿರು ಮೆಳೆಯ ಮರೆಯಲ್ಲಿ, ಕಾಡುಗಲ್ಲುಗಳು ಮತ್ತು ಪೊಟರೆಗಳ
ಆಶ್ರಯದಲ್ಲಿ ಕುಳಿತು ಮನುಷ್ಯರನ್ನು ಕಂಡರೆ ಓಡಿ ಹೋಗುವ. ಕಾಡುನಾಯಿಗಳ ಬೇಟೆಯ ಕ್ರಮ ಮತ್ತು ಅವುಗಳ
ಗುಂಪು ಜೀವನ ಶೈಲಿ, ಸಂತಾನೋತ್ಪತ್ತಿ ಇಂತಹ ವಿವರಗಳನ್ನು ಸೆರೆ ಹಿಡಿದಿರುವ ಬಗೆ ಅನನ್ಯವಾದುದು. ಇವರ ಶ್ರಮಕ್ಕೆ ಪ್ರತಿಫಲವೆಂಬಂತೆ
ಈ ಚಿತ್ರಕ್ಕೆ ಜಗತ್ತಿನ ಪ್ರತಿಷ್ಟಿತ ಗ್ರೀನ್ ಆಸ್ಕರ್ ಪ್ರಶಸ್ತಿ ಲಭ್ಯವಾಯಿತು. ಈ ಪ್ರಶಸ್ತಿಯನ್ನು
ಪಡೆದ ಮೊದಲ ಭಾರತೀಯರು ಮಾತ್ರವಲ್ಲದೆ, ಏಷ್ಯ ರಾಷ್ಟ್ರಗಳ ಪ್ರಥಮ ವನ್ಯಜೀವಿ ಛಾಯಾಗ್ರಾಹಕರು ಎಂಬ ಕೀರ್ತಿಗೆ
ಕೃಪಾಕರ್-ಸೇನಾನಿ ಪಾತ್ರರಾಗಿರುವುದು ವಿಶೇಷ. ಈ ಕಾರಣಕ್ಕಾಗಿ ಈ ಚಿತ್ರವು ಪ್ರಾನ್ ಮತ್ತು ಜರ್ಮನಿಯಲ್ಲಿ ಪ್ರಸಾರವಾಗುವುದರ ಜೊತೆಗೆ
ಪ್ರಾನ್ಸ್ ಚಿತ್ರೋತ್ಸವದಲ್ಲಿ ಅತ್ಯುತ್ತಮ ಪ್ರಕೃತಿ ಸಾಕ್ಷ ಚಿತ್ರ ಪ್ರಶಸ್ತಿ, ಜಪಾನಿನ ವನ್ಯಜೀವಿ
ಚಲನಚಿತ್ರೋತ್ಸ್ವದಲ್ಲಿ ಅತ್ಯುತ್ತಮ ಕಥಾ ಪ್ರಶಸ್ತಿ,ಏಷ್ಯನ್ ಟೆಲಿವಿಷನ್ ಅವಾರ್ಡ್ ಸ್ಪರ್ಧೆಯಲ್ಲಿ
ಅತ್ಯುತ್ತಮ ವನ್ಯ ಜೀವಿ ಕಾರ್ಯಕ್ರಮ ಎಂಬ ಪ್ರಶಸ್ತಿ, ಇಂಗ್ಲೇಂಡಿನ ಬ್ರಿಸ್ಟಲ್ ನಗರದಲ್ಲಿ ನಡೆದ ಚಿತ್ರೋತ್ಸವದಲ್ಲಿ
ಪಾಂಡ ಪ್ರಶಸ್ತಿಗೆ ಪಾತ್ರವಾಯಿತು. ಇವರ ಸಾಕ್ಷ್ಯ
ಚಿತ್ರಗಳು ಅಂತರಾಷ್ಟ್ರೀಯ ಮಟ್ಟದ ಬಿ.ಬಿ.ಸಿ. ಛಾನಲ್, ಡಿಸ್ಕವರಿ ಹಾಗೂ ಜಿಯೊ, ಟೈಮ್ಸ್ ಛಾನಲ್ ಗಳಲ್ಲಿ ಪ್ರಸಾರವಾಗಿರುವು ಇವರ ಪ್ರತಿಭೆಗೆ ಸಾಕ್ಷಿಯಾಗಿವೆ.
ಭಾರತದ ವನ್ಯಜೀವಿಗಳ ಸಾಕ್ಷ್ಯ ಚಿತ್ರದಲ್ಲಿ
1970 ಮತ್ತು 80 ರ ದಶಕದಲ್ಲಿ ಬೇಡಿ ಸಹೋದರರು ( ನರೇಶ್
ಮತ್ತು ರಾಜೇಶ್ ಬೇಡಿ) ಎಂಬ ಜೋಡಿ ಹೆಸರು ಮಾಡಿತ್ತು. ಅವರುಗಳ ನಂತರ, ಅರಣ್ಯ ಜೀವಿಗಳ ಅಧ್ಯಯನದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಕೀತಿ ಕೃಪಾಕರ್
ಮತ್ತು ಸೇನಾನಿಯವರದು. ಇವರ ಸುಧೀರ್ಘ ಎನ್ನ ಬಹುದಾದ ಮುವತ್ತು ವರ್ಷಗಳ ಅಧ್ಯಯನ ಫಲವಾಗಿ ಈ ಇಬ್ಬರೂ
ಗೆಳೆಯರು ಇಲ್ಲಿನ ನೆಲ, ಜಲ, ಗಾಳಿ ಮಾತ್ರವಲ್ಲದೆ, ಸಕಲೆಂಟು ಜೀವರಾಶಿಗಳಿಂದ ಹಿಡಿದು ವನ್ಯಜೀವಿಗಳಾದ ಆನೆ, ಹುಲಿ, ಚಿರತೆ, ಜಿಂಕೆ ಮತ್ತು
ಅಲ್ಲಿನ ತರಾವರಿ ಪಕ್ಷಿ ಸಂಕುಲ ಕುರಿತು ಅಪಾರವಾದ ಒಳನೋಟಗಳನ್ನು ದಕ್ಕಿಸಿಕೊಂಡ ಕಾಡಿನ ತಪಸ್ವಿಗಳಂತೆ
ನಮಗೆ ಕಾಣುತ್ತಾರೆ.
ಮೈಸೂರಿನವರಾದ ಕೃಪಾಕರ್, ಬನುಮಯ್ಯ ಕಾಲೇಜಿನಿಂದ
ಬಿ.ಬಿ.ಎಂ ಪದವಿ ಪಡೆದವರು. ಜೊತೆಗೆ ಕ್ರಿಕೇಟ್ ನಲ್ಲಿ ಮೈಸೂರು ವಿ.ವಿ.ಯನ್ನು ಪ್ರತಿನಿಧಿಸುತ್ತಿದ್ದ
ಆಟಗಾರರಾಗಿದ್ದರು. ಸೇನಾನಿಯವರು ಕುವೆಂಪು ರವರ ಪತ್ನಿ
ಹೇಮಾವತಿಯವರ ಸಹೋದರಿಯ ಪುತ್ರ. ಸಿವಿಲ್ ಇಂಜಿನಿಯರಿಂಗ್ ಪದವೀಧರರು. ಈ ಇಬ್ಬರೂ ಗೆಳೆಯರನ್ನು ಆತ್ಮವೊಂದೇ,
ದೇಹ ಎರಡು ಎಂಬಂತೆ ಒಂದುಗೂಡಿಸಿದ್ದು ನಿಸರ್ಗದ ಮೇಲಿನ ಪ್ರೀತಿ ಮತ್ತು ಛಾಯಾಗ್ರಹಣದ ಹವ್ಯಾಸ. ಆರಂಭದಲ್ಲಿ
ಹಕ್ಕಿಗಳ ಚಿತ್ರ ತೆಗೆಯುವುದು, ಅವುಗಳ ಸಂಸಾರ, ಸಂತಾನೋತ್ಪತ್ತಿ ಇವುಗಳ ಕುರಿತು ದಾಖಲಿಸುತ್ತಿದ್ದ
ಈ ಜೋಡಿ ಬಂಡಿಪುರ ಆರಣ್ಯ ದಾಟಿದ ನಂತರ ಸಿಗುವ ಮದುಮಲೈ ಅರಣ್ಯಕ್ಕೆ ಕಾಲಿಟ್ಟ ನಂತರ ಇವರ ಚಿಂತನಾಕ್ರಮವೇ
ಬದಲಾಗಿ ಹೋಯಿತು ನಂತರದ ದಿನಗಳಲ್ಲಿ ಬಂಡಿಪುರ ಅರಣ್ಯದ ಸಮೀಪ ಮನೆ ಮಾಡಿಕೊಂಡಿಕೊಂಡು, ಇಪ್ಪತ್ತು ಎಕರೆ
ಕುರುಚಲು ಕಾಡಿನ ಬಂಜರು ಭೂಮಿಯನ್ನು ಖರೀದಿಸಿ, ಅರಣ್ಯದೊಳಗಿನ ಜೀವಜಗತ್ತಿನೊಂದಿಗೆ ತಾವೂ ಲೀನವಾಗಿ
ಹೋದರು.
1987 ರಲ್ಲಿ ಪ್ರಥಮವಾಗಿ ನಾನು ಮಿತ್ರ ಡಾ.ಕೆ.ಪುಟ್ಟಸ್ವಾಮಿ ಅವರ ಮನೆಯಲ್ಲಿ
ಕೃಪಾಕರ್ ಮತ್ತು ಸೇನಾನಿಯವರನ್ನು ಭೇಟಿಯಾದೆ. ಮಂಡ್ಯ
ಜಿಲ್ಲೆಯ ಸುತ್ತ ಮುತ್ತಲಿನ ಪ್ರದೇಶಗಳ ಹಕ್ಕಿಗಳ ಕುರಿತಂತೆ
ಚಿತ್ರಗಳನ್ನು ದಾಖಲಿಸುತ್ತಿದ್ದ ಸಂದರ್ಭದಲ್ಲಿ ಕಪ್ಪು ಬಿಳುಪಿನ ಕಚ್ಚಾ ಫಿಲಂ ಕೊರತೆಯಿಂದಾಗಿ ನೂರು
ಅಡಿ ಫಿಲಂ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದ ಇವರು
ಜೆ.ಪಿ.ನಗರದಲ್ಲಿದ್ದ ಕೆ.ಪುಟ್ಟಸ್ವಾಮಿಯವರ ಮನೆಗೆ ಬಂದಿದ್ದಾಗ ಪರಿಚಯವಾಯಿತು. ಆಶ್ಚರ್ಯಕರ ಸಂಗತಿಯೆಂದರೆ,
ಈ ಮೂರು ದಶಕಗಳಲ್ಲಿ ಜಗತ್ತು ನಂಬಲಾರದಷ್ಟು ಬದಲಾಗಿದೆ. ನನ್ನ ಗೆಳೆಯರು ಮತ್ತು ಅವರ ವ್ಯಕ್ತಿತ್ವ
ಹಾಗೂ ಚಹರೆಗಳು ಗುರುತು ಹಿಡಿಯರಾದಷ್ಟು ಬದಲಾಗಿವೆ. ಆದರೆ, ಕೃಪಾಕರ್-ಸೇನಾನಿಯವರ ವ್ಯಕ್ತಿತ್ವದಲ್ಲಾಗಲಿ, ಅವರ ನಡೆ
ಮತ್ತು ನುಡಿಗಳಲ್ಲಾಗಲಿ ಪ್ರಾಣಿ, ಪಕ್ಷಿಗಳ ಮೇಲಿನ , ಅವರ ಬದ್ಧತೆಯಲ್ಲಾಗಲಿ ಕಿಂಚಿತ್ತೂ ಬದಲಾಗಿಲ್ಲ. ನಿಸರ್ಗದ
ಜೊತೆಗಿನ ಒಡನಾಟದಲ್ಲಿ ಈ ಇಬ್ಬರೂ ಮಿತ್ತರೂ ಹೆಚ್ಚು
ಮಾಗಿದ್ದಾರೆ. ಅತ್ಯಂತ ವಾಸ್ತವದ ನೆಲೆಯಲ್ಲಿ ಜಗತ್ತನ್ನು ನೋಡುವ, ಪರಿಭಾವಿಸುವ ಅನುಭಾವ ಲೋಕದ ಮನೋಭಾವ ಮತ್ತು ಗ್ರಹಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇಂತಹ ಒಳನೋಟಗಳಿಂದಾಗಿ ಅವರು ನಿಸರ್ಗ ಕುರಿತಂತೆ
ಭಿನ್ನವಾಗಿ ಆಲೋಚಿಸಲು ಮತ್ತು ಗ್ರಹಿಸಲು ಸಾಧ್ಯವಾಯಿತು ಜೊತೆಗೆ ಅರಣ್ಯ ರಕ್ಷಣೆಗೆ ವಿಭಿನ್ನ ಹಾದಿಯನ್ನು ತುಳಿಯಲು ಸಹಾಯಕವಾಯಿತು.
ಬಂಡಿಪುರ ಅರಣ್ಯದ ಪ್ರವೇಶ ದ್ವಾರದ ಬಳಿ ಇರುವ
ಮೇಲುಕಾಮನಹಳ್ಳಿಯಲ್ಲಿ ಕೃಪಾಕರ್ ಮತ್ತು ಸೇನಾನಿ ವನ್ಯ ಜೀವಿಗಳ ಅಧ್ಯಯನಕ್ಕಾಗಿ ನೆಲೆ ನಿಂತಾಗ, ಅವರಿಗೆ
ಅಲ್ಲಿನ ವಾಸ್ತವ ಅರಿವಾಗತೊಡಗಿತು. ಅರಣ್ಯದ ಸುತ್ತ
ಮುತ್ತಲಿನ ಹಳ್ಳಿಗಳ ಜನರು ದಿನ ನಿತ್ಯದ ಉರುವಲು ಕಟ್ಟಿಗೆಗಾಗಿ ಅರಣ್ಯವನ್ನು ಅವಲಮಬಿಸಿದ್ದರು. ಇದು
ಅಂತಿಮವಾಗಿ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಹಳ್ಳಿಯ ಜನರ ನಡುವಿನ ಕಲಹ ಮತ್ತು ಸಂಘರ್ಷಕ್ಕೆ ಕಾರಣವಾಯಿತು. ಸೌದೆ ಮತ್ತು ಕಾಡು ಪ್ರಾಣಿಗಳ ಬೇಟೆಗೆ ಹೋದವರಲ್ಲಿ
ಕೆಲವು ಕಿಡಿಗೇಡಿಗಳು ಸಿಬ್ಬಂದಿಯ ಮೇಲಿನ ಸಿಟ್ಟಿಗೆ
ಅರಣ್ಯಕ್ಕೆ ಬೆಂಕಿ ಹಚ್ಚಿ ಪರಾರಿಯಾಗುತ್ತಿದ್ದರು. ಇಂತಹ ಸಂಘರ್ಷಕ್ಕೆ ಇತಿಶ್ರೀ ಹಾಡುವ ನಿಟ್ಟಿನಲ್ಲಿ ಈ ಇಬ್ಬರೂ ಗೆಳೆಯರು ಸುತ್ತ ಮುತ್ತಲಿನ ಹಳ್ಳಿಗಳ ಜನರ ಮನವೊಲಿಸಿ
"ನಮ್ಮ ಸಂಘ" ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದು ಮಾತ್ರವಲ್ಲದೆ. ಉರುವಲು ಕಟ್ಟಿಗೆಗಾಗಿ
ಅರಣ್ಯವನ್ನು ಆಶ್ರಯಿಸುವುದನ್ನು ತಪ್ಪಿಸಲು ಎಲ್ಲರಿಗೂ ಅಡುಗೆ ಅನಿಲ ಹಾಗೂ ಒಲೆಯನ್ನು ವಿತರಿಸಿದರು.
ಸರ್ಕಾರದ ನೆರವಿಲ್ಲದೆ, ತಮ್ಮ ಅನೇಕ ಗೆಳೆಯರ ಸಹಕಾರದಿಂದ ಆರಂಭಿಸಿದ ಈ ಆಂಧೋಲನವನ್ನು ಕರ್ನಾಟಕ ಅರಣ್ಯ
ಇಲಾಖೆ ಇತ್ತೀಚೆಗಿನ ವರ್ಷಗಳಲ್ಲಿ ತನ್ನ ಕಾರ್ಯಕ್ರಮದಲ್ಲಿ ಅಳವಡಿಸಿಕೊಂಡಿದೆ. ಅರಣ್ಯದಂಚಿನ ಗ್ರಾಮಗಳ
ಜನತೆಗೆ ಆರುನೂರು ರೂಪಾಯಿ ಸಬ್ಸಿಡಿ ದರದಲ್ಲಿ ಎರಡು ಅಡುಗೆ ಅನಿಲ ಸಿಲೆಂಡರ್ ಹಾಗೂ ಒಲೆಯನ್ನು ವಿತರಿಸುತ್ತಿದೆ.
ಆದರೆ, ಕೃಪಾಕರ್ ಮತ್ತು ಸೇನಾನಿಯವರು ದೇಶ ವಿದೇಶಗಳಲ್ಲಿರುವ ತಮ್ಮ ಗೆಳೆಯರ ಮೂಲಕ ಒಟ್ಟು 194 ಹಳ್ಳಿಗಳಲ್ಲಿ 2.900 ಕುಟುಂಬಗಳಿಗೆ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ಕಲ್ಪಿಸಿ,
ಅರಣ್ಯ ರಕ್ಷಣೆಗೆ ಮುಂದಾದ ಕಾರ್ಯವೈಖರಿ ಇಡೀ ದೇಶಕ್ಕೆ ಮಾದರಿಯಾಯಿತು.
ನಿಸರ್ಗದ ಮೇಲಿನ ಇಂತಹ ಶ್ರದ್ಧೆ ಮತ್ತು ಪ್ರೀತಿಯಿಂದ
ಹಲವು ದಶಕಗಳ ಕಾಲ ಕಳೆದ ಈ ಜೋಡಿ ಇತ್ತೀಚೆಗೆ ಹೊರತಂದಿರುವ " "ಕೆನ್ನಾಯಿಯ ಜಾಡು ಹಿಡಿದು"
ಕೃತಿ ಕೃಪಾಕರ್-ಸೇನಾನಿಯವರ ಕಾಡಿನ ಅನುಭವ ಮಾತ್ರವಾಗಿರದೆ, ನಿಸರ್ಗವನ್ನು ಅರಿಯಲು ಜನಸಾಮಾನ್ಯರಿಗೆ
ಮಾರ್ಗದರ್ಶನ ನೀಡುವ ಅತ್ಯಮೂಲ್ಯ ಕೃತಿಯಾಗಿದೆ. ಯಾವುದೇ ಪ್ರಚಾರದ ಹಂಗಿಲ್ಲದೆ, ತೇಜಸ್ವಿಯರ ಕೃತಿಗಳನ್ನು
ಪ್ರಕಟಿಸುವ ಪ್ರಸಿದ್ಧ ಮೈಸೂರಿನ ಪುಸ್ತಕ ಪ್ರಕಾಶನದ ಮೂಲಕ ಬಿಡುಗಡೆಯಾಗಿರುವ ಈ ಕೃತಿಯ ಲೇಖನಗಳು ಈಗಾಗಲೇ
ಪ್ರಜಾವಾಣಿ ಪತ್ರಿಕೆಯಲ್ಲಿ ಸರಣಿ ಲೇಖನ ರೂಪದಲ್ಲಿ ಪ್ರಕಟವಾಗಿದ್ದವು. ಆದರೆ, ಈ ಕೃತಿಯಲ್ಲಿ ಪ್ರಾಣಿಗಳ
ಛಾಯಾಚಿತ್ರಗಳನ್ನು ಬಳಸುವುದರ ಬದಲಾಗಿ ನಲವತ್ತು ಸಾವಿರ ಖರ್ಚು ಮಾಡಿ ಕಲಾವಿದರೊಬ್ಬರ ಕೈಯಲ್ಲಿ ನೂರಾರು
ಚುಕ್ಕಿ ಚಿತ್ರಗಳನ್ನು ಸಿದ್ಧಪಡಿಸಿ ಬಳಸಿರುವುದು, ಪುಸ್ತಕದ ಒಳಪುಟಗಳ ಅಂದವನ್ನು ಹೆಚ್ಚಿಸಿದೆ. ಜೊತೆಗೆ
ಯಾವುದೇ ಅಹಂ ಇಲ್ಲದೆ, ನಿರ್ಭಾವುಕ ಶೈಲಿಯಲ್ಲಿ ಮತ್ತು ಕೆಲವು ಕಡೆ ಅನುಭಾವಿ ಸಂತನ ಶೈಲಿಯಲ್ಲಿ ಹಾಗೂ
ಹಾಸ್ಯ ಮಿಶ್ರಿತ ಶೈಲಿಯಲ್ಲಿ ಕಾಡಿನ ಅನುಭವಗಳನ್ನು ದಾಖಲಿಸಿರುವುದರಿಂದ ಓದುಗರಿಗೆ ಆಪ್ತತೆಯ ಅನುಭವವಾಗುತ್ತದೆ.
ಈ ಕೃತಿಯಲ್ಲಿನ ಕೆಲವು ಅಧ್ಯಾಯಗಳನ್ನು ಓದುತ್ತಿದ್ದರೆ, ವಿಶೇಷವಾಗಿ " ಬೊಮ್ಮ ಎಂಬ ಜೆನ್ ಗುರು"
ಓದುವಾಗ ನಮಗೆ ತೇಜಸ್ವಿಯವರ ಕರ್ವಾಲೊ ಕೃತಿಯ ಮುಂದಿನ ಭಾಗವನ್ನು ಓದುತ್ತಿದ್ದೇವೆ ಎಂಬ ಅನುಭವವಾಗುತ್ತದೆ.
ಮಂದಣ್ಣನಿಗೆ ಪ್ರತಿಯಾಗಿ ಈ ಕೃತಿಯಲ್ಲಿ ಬೊಮ್ಮ ಇದ್ದರೆ, ತೇಜಸ್ವಿಯವರ ಬದಲಾಗಿ ಕೃಪಾಕರ್ ಮತ್ತು ಸೇನಾನಿ
ಇದ್ದಾರೆ.
ಇಲ್ಲಿ ಯಾರೂ ಮುಖ್ಯರಲ್ಲ, ಅಮುಖ್ಯರಲ್ಲ ಎಂಬ
ಅಧ್ಯಾಯದಲ್ಲಿ ತಾವು ಖರೀದಿಸಿದ ಭೂಮಿಯಲ್ಲಿ ಆಗುವ ನೈಸರ್ಗಿಕ ಬದಲಾವಣೆಯನ್ನು ಲೇಖಕರು ಅತ್ಯಂತ ಉತ್ಕೃಷ್ಟವಾದ
ಮತ್ತು ಪ್ರೌಢಿಮಯಿಂದ ಕೂಡಿದ ಭಾಷೆಯಲ್ಲಿ ಹಿಡಿದಿಟ್ಟಿರುವುದು ನಿಸರ್ಗ ಕುರಿತಂತೆ ಕಾವ್ಯವೊಂದನ್ನು
ಓದಿದಂತಾಗುತ್ತದೆ. ಬೇಸಿಗೆಯಲ್ಲಿ ಕಸದ ಕಡ್ಡಿಯಂತೆ ಬಿದ್ದಿದ್ದ ಹುಲ್ಲಿನ ಬೀಜದ ಕಡ್ಡಿಯೊಂದು ಮುಂಗಾರಿನ ಮೊದಲ ಮಳೆಗೆ ಬಿರಿದು,
ನೀರಿನಲ್ಲಿ ನಾಟ್ಯವಾಡುತ್ತಾ, ಬೀಜವನ್ನು ಭೂಮಿಗೆ ಬಿತ್ತುವ ಪರಿಯನ್ನು ಬಣ್ಣಿಸಿರುವುದು ಲೇಖಕರಿಬ್ಬರ
ಒಳನೋಟಕ್ಕೆ ಸಾಕ್ಷಿಯಂತಿದೆ. ಅದೇ ರೀತಿ ಕಣ್ಣರಿಯದೊಡೆಂ
ಕರುಳರಿಯದೆ ಅಧ್ಯಾಯದಲ್ಲಿ ದಕ್ಷಿಣ ಭಾರತದ ದೇವಸ್ಥಾನಗಳಿಗೆ
ಕೊಡುಗೆಯ ಮೂಲಕ ಅಗಲಿದ್ದ ತಾಯಿ ಮತ್ತು ಮರಿಯಾನೆ ಇಪ್ಪತ್ತು
ವರ್ಷಗಳ ನಂತರ ವೈದ್ಯಕೀಯ ಶುಶ್ರೂಷೆ ಶಿಬಿರಲ್ಲಿ ಭೇಟಿಯಾದಾಗ ಅವುಗಳ ವರ್ತನೆಗೆ ಮತ್ತು ಕಣ್ಣೀರಿಗೆ
ಸಾಕ್ಷಿಯಾಗಿದ್ದ ಕೃಪಾಕರ್ ಮತ್ತು ಸೇನಾನಿಯವರು ಹೃದಯಕ್ಕೆ ಹತ್ತಿರವಾದ ಭಾಷೆಯಲ್ಲಿ ತಾಯಿ ಮಗಳ ಸಂಗಮವನ್ನು
ಬಣ್ಣಿಸುವಾಗ ನಮ್ಮ ಕಣ್ಣುಗಳು ಒದ್ದೆಯಾಗುತ್ತವೆ
.
.
ಕಾಡುನಾಯಿಗಳ ಅಧ್ಯಯನ ಕುರಿತಂತೆ ಹಲವಾರು ಅಧ್ಯಾಯಗಳು
ಈ ಕೃತಿಯಲ್ಲಿದ್ದು ಈ ಇಬ್ಬರೂ ಛಾಯಾಗ್ರಾಹಕರು ವರ್ಷಗಟ್ಟಲೆ ಅವುಗಳ ಬೆನ್ನತ್ತಿ ದಾಖಲಿಸಿರುವ ರೀತಿ
ಅದರಲ್ಲೂ ವಿಶೇಷವಾಗಿ ಸೋಲೊ ಎಂದು ಲೇಖಕರು ಹೆಸರಿಟ್ಟಿದ್ದ ಗಂಡು ಜಾತಿಯ ಕಾಡುನಾಯಿಯ ಕಥನ ಮತ್ತು ಕೆನ್ನಾಯಿ
ಎಂಬ ಹೆಣ್ಣು ನಾಯಿಯ ಕುರಿತ ವಿವರಗಳ ಅಧ್ಯಾಯಗಳು ಓದುಗರ ಮನದಲ್ಲಿ ಶಾಸ್ವತವಾಗಿ ಉಳಿಯಬಲ್ಲ ಅಧ್ಯಾಯಗಳು.
ವಿದಾಯ ಎಂಬ ಅಂತಿಮ ಅಧ್ಯಾಯವು ಲೇಖಕರು ಮತ್ತು ಕಾಡುನಾಯಿಗಳ ನಡುವೆ ಉಂಟಾಗಿದ್ದ ಭಾವನಾತ್ಮಕ ಸಂಬಂಧಕ್ಕೆ
ರುಜುವಾತು ಎಂಬಂತಿದೆ. ವರ್ಷಗಟ್ಟಲೆ ಕಾಡು ನಾಯಿಗಳ
ಹಿಂದೆ ಬಿದ್ದು ಅಲೆದ ಪರಿಣಾಮವೆಂಬಂತೆ ಮನುಷ್ಯ ಲೋಕದಿಂದ ದೂರವಿರುತ್ತಿದ್ದ ಕಾಡು ನಾಯಿಗಳು ಲೇಖಕರು
ಅರಣ್ಯದಿಂದ ಹೊರಡುವಾಗ ಅವರ ವಾಹನದ ಮುಂದೆ ಬಂದು ಕುಳಿತುಕೊಳ್ಳುವುದನ್ನು ಓದುವಾಗ "ಜಗತ್ತಿನ
ಅತ್ಯಂತ ಕ್ರೂರ ಮತ್ತು ಅಪಾಯಕಾರಿ ಪ್ರಾಣಿ ಮನುಷ್ಯ ನಿಜ. ಆದರೆ, ಅಂತಹ ಮನುಷ್ಯರು ನಾವಲ್ಲ"
ಎಂಬುದನ್ನು ಕೃಪಾಕರ್-ಸೇನಾನಿ ಜೋಡಿ ಕಾಡಿನಾಯಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎನಿಸುತ್ತದೆ.
ಒಮ್ಮೆ ತೇಜಸ್ವಿಯವರು ನದಿಗೆ ಗಾಳ ಎಸೆದು ಕುಳಿತು
ಮಾತನಾಡುತ್ತಾ, " ಅಲ್ರಯ್ಯಾ,ನಾನು ನೋಡಿದ ಕಾಡಿರಲಿ, ನೀವು ನೋಡುತ್ತಿರುವ ಕಾಡು, ನೀವು ಬರೆಯುತ್ತಿರುವ
ಕಾಡಿನ ಕಥೆಗಳನ್ನು ಮುಂದೊಮ್ಮೆ ಜನರು ಬರೀ ಸುಳ್ಳು ಅಥವಾ ಕಾಲ್ಪನಿಕ ಕಥೆಗಳು ಎಂದು ಹೇಳಬಹುದು. ಆಗ
ಏನ್ ಮಾಡ್ತಿರಿ ನೋಡೋಣ" ಎಂಬ ಮಾತುಗಳನ್ನು ಕೃತಿಯ ಪ್ರಸ್ತಾವನೆ ಮಾತುಗಳಲ್ಲಿ ಕೃಪಾಕರ್ ಮತ್ತು
ಸೇನಾನಿಯವರು ದಾಖಲಸಿರುವುದು ನಾವು ಬದುಕುತ್ತಿರುವ ಇಂದಿನ ಅಭಿವೃದ್ಧಿಯ ಅಂಧಯುಗಕ್ಕೆ ಹೇಳಿ ಮಾಡಿಸಿದಂತಿವೆ. ಹಾಗಾಗಿ
ಈ ಕೃತಿ ಕೇವಲ ಸಮಯ ಕೊಲ್ಲುವ ಅಥವಾ ಮನರಂಜನೆಗಾಗಿ ಓದುವ ಕೃತಿಯಾಗಿರದೆ, ಓದಿ ನಂತರವೂ ನಮ್ಮ ಸಂಗ್ರಹದಲ್ಲಿ
ಕಾಪಾಡಿ ಇಟ್ಟುಕೊಳ್ಳಬೇಕಾದ ಹಾಗೂ ನಮ್ಮ ಮುಂದಿನ ತಲೆಮಾರಿಗೆ ಪರಿಸರದ ಕಥೆಯನ್ನು ದಾಟಿಸಬೇಕಾದ ಮಹತ್ವದ
ಕೃತಿ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ..
(ಚಿತ್ರಗಳು- ಕೃಪಾಕರ- ಸೇನಾನಿ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ