ಪ್ರತಿ ವರ್ಷ ಅಕ್ಟೋಬರ್ 16
ರಂದು ವಿಶ್ವ ಆಹಾರ ದಿನಾಚರಣೆ. ಉಳಿದ
ಆಚರಣೆಗಳಂತೆ 16 ರಂದು ಸಹ ಹಸಿವಿನ ಬಗ್ಗೆ ಹಾಗೂ ಹಸಿದು ಮಲಗಿದವರ ಕುರಿತು,
ಜಾಗತಿಕ ಮಟ್ಟದಲ್ಲಿ ಪಂಚತಾರಾ ಹೋಟೆಲುಗಳ ಹವಾನಿಯಂತ್ರಣ
ಕೊಠಡಿಗಳಲ್ಲಿ ಸಾಂಪ್ರದಾಯಕ ಚರ್ಚೆ ನಡೆಯುತ್ತದೆ. ಈಗಾಗಲೇ, ಇಟಲಿಯ ರೋಮ್
ನಗರದಲ್ಲಿ ಕಳೆದ ವಾರದಿಂದ ವಿಶ್ವ ಸಂಸ್ಥೆಯ ಆಶ್ರಯದಲ್ಲಿ ಜಾಗತಿಕ ಹಸಿವು ಮತ್ತು ಹೆಚ್ಚುತ್ತಿರುವ
ಜನಸಂಖ್ಯೆಗೆ ಅನುಗುಣವಾಗಿ ಆಹಾರ ಧಾನ್ಯಗಳನ್ನು ಉತ್ಪಾದಿಸುವ ಕುರಿತು ಜಾಗತಿಕ ಮಟ್ಟದ ಚರ್ಚೆ
ಆರಂಭಗೊಂಡಿದೆ.
ಜಗತ್ತಿನಲ್ಲಿ ಇರುವ 700 ಕೋಟಿ
ಜನಸಂಖ್ಯೆ, ಮುಂದಿನ 2050 ರ
ವೇಳೆಗೆ 900 ಕೋಟಿಗೆ ಏರಲಿದೆ. ಸಧ್ಯದ ಸ್ಥಿತಿಯಲ್ಲಿ ಜಗತ್ತಿನ ಅರವತ್ತು ರಾಷ್ಟ್ರಗಳಲ್ಲಿ
ಸುಮಾರು 87 ಕೋಟಿ ಜನ ಹಸಿವಿನಿಂದ ಒಂದೊತ್ತಿನ ಊಟದಲ್ಲಿ ಬದುಕು ದೂಡುತ್ತಿದ್ದಾರೆ.
ಕಳೆದ 2008 ರಿಂದ ಜಾಗತಿಕ ಮಟ್ಟದಲ್ಲಿ ಗೋಧಿಯ ಬೆಲೆ ಶೇಕಡ 130
ರಷ್ಟು, ಅಕ್ಕಿ ಬೆಲೆ ಶೇಕಡ 71ರಷ್ಟು ಮತ್ತು ಬೇಳೆಕಾಳುಗಳು ಮತ್ತು
ತರಕಾರಿ, ಹಣ್ಣುಗಳ ಬೆಲೆ ಶೇಕಡ 87 ರಷ್ಟು ದುಬಾರಿಯಾಗಿದೆ.
ಆಹಾರ ಪದಾರ್ಥಗಳ ಮಿತಿಯಿಲ್ಲದ ಬೆಲೆ ಏರಿಕೆಯಿಂದಾಗಿ ಜಗತ್ತಿನ ಹಸಿವು
ನೀಗಿಸಲು ವಿಶ್ವಸಂಸ್ಥೆ ಜಗತ್ತಿನ ಅರವತ್ತು ರಾಷ್ಟ್ರಗಳಲ್ಲಿ ವಾರ್ಷಿಕವಾಗಿ 61 ಕೋಟಿ,
30
ಲಕ್ಷ ಡಾಲರ್ ಹಣವನ್ನು ವ್ಯಯಮಾಡುತ್ತಿದೆ. 2030 ರ ವೇಳೆಗೆ ಇದರ ಪ್ರಮಾಣ 100 ಕೋಟಿ
ಡಾಲರ್ ಮೀರಬಹುದೆಂದು ಅಂದಾಜಿಸಲಾಗಿದೆ. 2008 ರಲ್ಲಿ 36 ರಾಷ್ಟ್ರಗಳು
ಮಾತ್ರ ಆಹಾರದ ಕೊರತೆ ಎದುರಿಸುತ್ತಿದ್ದವು. 2012 ರ ಅಂತ್ಯದ ವೇಳೆಗೆ ಈ ಪ್ರಮಾಣ 66
ರಾಷ್ಟ್ರಗಳಿಗೆ ವಿಸ್ತರಣೆಯಾಗಿದೆ. ಈಗಿನ ಜಾಗತಿಕ ಆಹಾರದ ಬೇಡಿಕೆಯನ್ನು ಗಮನಿಸಿದರೆ,
2030
ರ ವೇಳೆಗೆ ಶೇಕಡ 50 ರಷ್ಟು ಆಹಾರ ಮತ್ತು ಶೇಕಡ 87ರಷ್ಟು
ಮಾಂಸಕ್ಕೆ ಬೇಡಿಕೆಯುಂಟಾಗಬಹುದೆಂದು ಅಂದಾಜಿಸಲಾಗಿದೆ.
ಜಗತ್ತನ್ನು ಸದಾ ತನ್ನ ಹಿಡಿತದಲ್ಲಿ
ಇಟ್ಟುಕೊಂಡು, ತನ್ನ ಮೂಗಿನ ನೇರಕ್ಕೆ ನಿಯಾಮಾವಳಿ ರೂಪಿಸುವ ದೊಡ್ಡಣ್ಣನಾದ ಅಮೇರಿಕಾ
ದೇಶದಲ್ಲಿ ಐದು ಕೋಟಿ ಜನತೆ ತಮ್ಮ ಅವಶ್ಯಕತೆಗೆ ತಕ್ಕಂತೆ ಆಹಾರ ಕೊಳ್ಳಲು ಅಸಮರ್ಥರಾಗಿದ್ದಾರೆ.
ಒಂದು ಕೋಟಿ, ಎಪ್ಪತ್ತು ಲಕ್ಷ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.
ಇದು ನಾವು ಬದುಕುತ್ತಿರುವ ವರ್ತಮಾನದ
ಜಗತ್ತಿನ ವೈರುಧ್ಯವೆಂದರೆ, ಅತಿಶಯೋಕ್ತಿಯಾಗಲಾರದು. ಒಂದೆಡೆ ಹಸಿದು
ಮಲಗಿದವರು, ಇನ್ನೊಂದೆಡೆ ತಿಂದದ್ದನ್ನು ಜೀರ್ಣಿಸಲಾರದೆ, ಒದ್ದಾಡುವ
ಜನತೆ. ಪ್ರತಿ ವರ್ಷ ಜಾಗತಿಕ ಮಟ್ಟದಲ್ಲಿ 17 ಕೋಟಿ ಜನತೆ ಸ್ಥೂಲದೇಹಿಗಳಾಗಿ ಆರೋಗ್ಯ
ಸಮಸ್ಯೆಯಿಂದ ಬಳಲುತ್ತಿದ್ದಾರೆ. ಯುರೋಪ್ ರಾಷ್ಟ್ರಗಳು ಸೇರಿದಂತೆ, ಅಮೇರಿಕಾದಲ್ಲಿ
ಇವರ ಪ್ರಮಾಣ ಹೆಚ್ಚಾಗಿದೆ. ಇದೀಗ ಮೆಕ್ಷಿಕೊ ದೇಶದಲ್ಲಿ ಶೇಕಡ 70 ರಷ್ಟು,
ಬ್ರೆಜಿಲ್
ನಲ್ಲಿ ಶೇಕಡ 48 ರಷ್ಟು ಮತ್ತು ಚೀನಾದಲ್ಲಿ ಶೇಕಡ 28 ಹಾಗೂ
ಭಾರತದಲ್ಲಿ ಶೇಕಡ 18 ರ ಪ್ರಮಾಣದಲ್ಲಿ ಸ್ಥೂಲದೇಹಿಗಳ ಪ್ರಮಾಣ ಹೆಚ್ಚುತ್ತಿದೆ.
ಇಷ್ಟೆಲ್ಲಾ ವೈರುದ್ಯ ಮತ್ತು ಸಮಸ್ಯೆಗಳ
ನಡುವೆಯೂ ಆಹಾರ ಉತ್ಪಾದನೆಯನ್ನು ದ್ವಿಗುಣಗೊಳಿಸುವ ದೃಷ್ಟಿಯಿಂದ 1960 ರ
ದಶಕದಲ್ಲಿ ಹೈಬ್ರಿಡ್ ಬೀಜಗಳ ಮೂಲಕ ಕೃಷಿ ಉತ್ಪಾದನೆಯನ್ನು ಜಾಗತಿಕ ಮಟ್ಟದಲ್ಲಿ ಹೆಚ್ಚಿಸಲಾಯಿತು.
1970
ರ ದಶಕದಲ್ಲಿ ಭಾರತಕ್ಕೆ ಪರಿಚಯಿಸಲಾದ ಹಸಿರುಕ್ರಾಂತಿಯ ಪ್ರತಿಫಲ ಕೇವಲ ಕೆಲವೇ ವರ್ಷಗಳಿಗೆ ಮಾತ್ರ
ಸೀಮಿತವಾಯಿತು. ಆರಂಭದಲ್ಲಿ ಅಧಿಕ ಇಳುವರಿ ನೀಡಿದ ಆಹಾರ ಬೆಳೆಗಳು, ನಿರಂತರ
ರಸಾಯನಿಕ ಗೊಬ್ಬರಗಳ ಬಳಕೆಯಿಂದ ಭೂಮಿಯ ಫಲವತ್ತತೆ ನಾಶವಾಗುವುದರ ಜೊತೆಗೆ ಇಳುವರಿ ನೀಡುವಲ್ಲಿ
ವಿಫಲವಾದವು. ಜೊತೆಗೆ ಕ್ರಮೇಣ ಕೀಟ ಭಾಧೆಗೆ
ತುತ್ತಾಗಿ ಇಳುವರಿ ಕ್ಷೀಣಿಸತೊಡಗಿತು. ಇಂದಿಗೂ ಸಹ ಜಗತ್ತಿನಲ್ಲಿ ಶೇಕಡ 25
ರಷ್ಟು ಆಹಾರ ಬೆಳೆ ಕ್ರಿಮಿ ಕೀಟಗಳ ಪಾಲಾಗುತ್ತಿದೆ.
ಅಭಿವೃಧ್ಧಿಶೀಲ ರಾಷ್ಟ್ರಗಳಲ್ಲಿ
ಉತ್ಪಾದಿಸಲಾಗುತ್ತಿರುವ ಆಹಾರ ಬೆಳೆಗಳು ವೈಜ್ಙಾನಿಕ ಸಂಸ್ಕರಣೆಯ ಕೊರತೆಯಿಂದಾಗ ಶೇಕಡ 37
ರಷ್ಟು ಆಹಾರ ಧಾನ್ಯ ಪೋಲಾಗುತ್ತಿದೆ. ಆಹಾರ ಉತ್ಪಾದನೆಗಾಗಿ ಇಷ್ಟೇ ಪ್ರಮಾಣದಲ್ಲಿ ಬಳಸಲಾದ ನೀರು,
ಬೀಜ,
ರಸಾಯನಿಕ
ಗೊಬ್ಬರ ಮತ್ತು ಮಾನವ ಶ್ರಮ ಕೂಡ ವ್ಯರ್ಥ ಎಂದು ನಾವು ಭಾವಿಸಬೇಕು. ಇಂತಹ ಸಮಸ್ಯೆ ಮತ್ತು
ಸವಾಲುಗಳು ಜಾಗತಿಕ ಮಟ್ಟದಲ್ಲಿ ಎದುರಾಗಿರುವಾಗ, ಜಗತ್ತಿನ ಹಸಿವು ನೀಗಿಸುವ ಪ್ರಶ್ನೆ
ಪ್ರತಿ ದಿನ ನಮ್ಮೆದುರು ಬೃಹದಾಕಾರವಾಗಿ ಬೆಳೆಯುತ್ತಿದೆ.
ಇತ್ತೀಚೆಗಿನ ವರ್ಷಗಳಲ್ಲಿ ಭಾರತವೂ
ಸೇರಿದಂತೆ, ಹಲವು ರಾಷ್ಟ್ರಗಳಲ್ಲಿ ಆಹಾರ ಧಾನ್ಯಗಳನ್ನು ಬಡವರಿಗೆ ಸಬ್ಸಿಡಿ ರೂಪದಲ್ಲಿ
ವಿತರಿಸುವುದಕ್ಕೆ ಜಾಗತೀಕರಣದ ಗರ್ಭಗುಡಿಯಾದ “ ವಿಶ್ವ ವಾಣ್ಯಿಜ್ಯ ಸಂಘಟನೆ “ ತನ್ನ
ಅಸಮಾಧಾನ ಮತ್ತು ಅಸಹನೆಯನ್ನು ವ್ಯಕ್ತಪಡಿಸಿದೆ. ವರ್ತಮಾನದ ಜಾಗತಿಕ ಬಡತನಕ್ಕೆ ತಾನು ರೂಪಿಸಿದ, ಬಂಡವಾಳಶಾಹಿ
ಪ್ರಭುತ್ವ ಮತ್ತು ಮಾನವೀಯ ಮುಖವಿಲ್ಲದ ಮಾರುಕಟ್ಟೆ ನೀತಿ ಕಾರಣ ಎಂಬ ಸತ್ಯವನ್ನು ಅರಿವಿಗೆ
ತಂದುಕೊಳ್ಳಲಾರದಷ್ಟು. ವಿಸ್ಮøತಿಗೆ ದೂಡಲ್ಪಟ್ಟಿರುವ ಅಭಿವೃದ್ದಿ ಹೊಂದಿದ
ಶ್ರೀಮಂತ ರಾಷ್ಟಗಳಿಗೆ ಜಗತ್ತಿನ ಬಡತನ ನಿವಾರಣೆಗಿಂತ, ಈ ನೆಲದ ಮೇಲಿನ
ಬಡವರ ನಿವಾರಣೆ ಮುಖ್ಯ ಗುರಿಯಾಗಿರುವಂತೆ ತೋರುತ್ತದೆ.
ಜಾಗತಿಕವಾಗಿ ಜಾರಿಗೆ ತಂದ ಹಲವು ತಪ್ಪು
ಆರ್ಥಿಕ ನೀತಿಗಳಿಂದಾಗಿ ಬಡರಾಷ್ಟ್ರಗಳು ಮತ್ತು ಅಲ್ಲಿನ ಬಡವರು ಇಂದು ತಲೆದಂಡವಾಗುತ್ತಿದ್ದಾರೆ.
ವಿಶ್ವ ಆಹಾರ ಸಂಘಟನೆ ಪ್ರಕಟಿಸಿರುವ ಜಾಗತಿಕ ಆಹಾರ ಭದ್ರತೆಯ ಸೂಚ್ಯಂಕ ವರ್ತಮಾನದ ಹಸಿವಿನ
ಸಂಕಟಗಳನ್ನು ನಮ್ಮೆದುರು ಅನಾವರಣಗೊಳಿಸಿದೆ. 2010 ರಿಂದ 2012 ರ ವರೆಗಿನ
ಅಧ್ಯಯನದ ಪ್ರಕಾರ ಭಾರತವೂ ಸೇರಿದಂತೆ ಶೇಕಡ 15 ರಷ್ಟು ಮಾತ್ರ ಬಡಜನತೆಗೆ ಆಹಾರ
ಭದ್ರತೆ ಒದಗಿಸಲಾಗಿದೆ. ಅಂದರೆ, 85 ಕೋಟಿ, 20 ಲಕ್ಷ ಜನತೆ
ಸಬ್ಸಿಡಿ ರೂಪದಲ್ಲಿ ಆಹಾರ ಧಾನ್ಯಗಳು ದೊರೆಯುತ್ತಿವೆ. ಏಷ್ಯಾ ಫೆಸಿಪಿಕ್ ರಾಷ್ಟ್ರಗಳಲ್ಲಿ
ಹಸಿವಿನಿಂದ ಬಳಲುತ್ತಿದ್ದವರ ಸಂಖ್ಯೆ 73 ಕೋಟಿ, 9 ಲಕ್ಷದಿಂದ 56 ಕೋಟಿ
3
ಲಕ್ಷಕ್ಕೆ ಇಳಿಕೆಯಾಗಿದೆ. ಆದರೆ, ಆಫ್ರಿಕಾ ರಾಷ್ಟ್ರಗಳಲ್ಲಿ 17 ಕೋಟಿ
50
ಲಕ್ಷದಿಂದ 32 ಕೋಟಿ 9 ಲಕ್ಷಕ್ಕೆ ಏರಿಕೆಯಾಗಿದೆ. ಇಲ್ಲಿನ
ಅಭಿವೃದ್ದಿಯ ಸೂಚ್ಯಂಕ 2004-6 ರ ನಡುವೆ ಶೇಕಡ 13 ರಷ್ಟು
ಇದ್ದದ್ದು, 2010-12 ರ ವೇಳೆಗೆ ಕೇವಲ ಶೇಕಡ 16 ಕ್ಕೆ ಮಾತ್ರ ಏರಿಕೆಯಾಗಿದೆ.
ಇವೊತ್ತಿನ ದಿನಗಳಲ್ಲಿ ಅಭಿವೃದ್ಧಿ ಎಂಬ
ಶಬ್ಧ ತನ್ನ ಮೂಲ ಅರ್ಥವನ್ನು ಕಳೆದುಕೊಂಡು,
ನಾಲ್ಕು
ಜನ ಉಳ್ಳವರ ಸವಲತ್ತಿಗಾಗಿ ನಲವತ್ತು ಜನರ ಬದುಕನ್ನು ಬಲಿ ಕೊಡುವ ಪ್ರಕ್ರಿಯೆಯೇನೊ
ಎಂಬಂತಾಗಿದೆ. ಆಹಾರ ಭದ್ರತೆಯ ಬಗ್ಗೆ ತುಟಿಯಂಚಿನ
ಮಾತುಗಳನ್ನಾಡುವ ಜನ. ಮತ್ತು ಜಾಗತಿಕರಣವನ್ನು ಪ್ರತಿಪಾದಿಸುವ ರಾಷ್ಟ್ರಗಳು ಹಾಗೂ ಅವುಗಳ
ನೇತಾರರು ಇಂದಿನ ಕೃಷಿಚಟುವಟಿಕೆಯ ಮೂಲ ಆಧಾರವಾದ ಬೀಜಗಳ ಮೇಲಿನ ಹಕ್ಕು ಕೈ ಯಾರ ಬಳಿ ಇದೆ ಎಂಬುದನ್ನು ಮರೆ ಮಾಚುತ್ತಾರೆ,
ನೈಸರ್ಗಿಕ
ಕೊಡುಗೆಯಾದ ಕುಡಿಯುವ ನೀರಿನ ಮೇಲೆ ಪ್ರಭುತ್ವ ಸಾಧಿಸ ಹೊರಟ ಇಂತಹ ಸ್ವಾರ್ಥ ಜಗತ್ತಿನ ಬಗ್ಗೆ
ನಮ್ಮ ನಮ್ಮ ಅಲೋಚನೆಗಳನ್ನು ಬದಲಾಯಿಸಿಕೊಳ್ಳದಿದ್ದರೆ, ಇನ್ನು ಕೇವಲ
ಇಪ್ಪತ್ತೈದು ವರ್ಷಗಳಲ್ಲಿ ಈ ಜಗತ್ತಿನಲ್ಲಿ ಬಾಯಿಲ್ಲದ ಬಡವರಿಗೆ, ಜಾಗವಿರುವುದಿಲ್ಲ.
ಕೇವಲ ಸಾಮಥ್ರ್ಯವಿದ್ದವರಷ್ಟೇ ಬದುಕಬೇಕಾದ ಜಗತ್ತಾಗಿ ಇದು ಪರಿವರ್ತನೆ ಹೊಂದುತ್ತದೆ. ಪ್ರತಿದಿನ
ಅಪೌಷ್ಟಿಕತೆಯಿಂದಾಗಿ 46 ಸಾವಿರ ಮಕ್ಕಳು ಜಗತಿನಾದ್ಯಂತ ಸಾಯುತ್ತಿರುವುದು ಈ ನಂಬಿಕೆಯನ್ನು
ಮತ್ತಷ್ಟು ಬಲಗೊಳಿಸುತ್ತಿದೆ.
ಇತ್ತಿಚೆಗೆ ಬಡವರ ಹಸಿವು ನೀಗಿಸಲು ಭಾರತದಲ್ಲಿ
ಜಾರಿಗೆ ಬಂದ ಆಹಾರ ಭದ್ರತೆ ಮಸೂದೆ ಕುರಿತಂತೆ ಕುಹಕದ ಮಾತುಗಳು ಕೇಳಿಬಂದವು. ಇಂತಹ ಕೀಳು ಅಭಿರುಚಿಯ ಮಾತನಾಡುವ ಜನ,
ಜನತೆಯ
ಹಸಿವು ನೀಗಿಸುವುದು ಅನ್ನವೆ ಹೊರತು ಚಿನ್ನವಲ್ಲ ಎಂಬ ವಾಸ್ತವವನ್ನು ಮರೆಯುತ್ತಾರೆ. ಭಾರತದಂತ
ದೇಶ ಪ್ರತಿ ವರ್ಷ ಒಂದು ಸಾವಿರ ಟನ್ ಚಿನ್ನವನ್ನು ಆಮದು ಮಾಡಿಕೊಳ್ಳುತ್ತದೆ ಎಂಬ ಅಂಶ ಇವರಿಗೆ
ಅಪಮಾನದ ಸಂಗತಿ ಎನಿಸುವುದಿಲ್ಲ, ಆದರೆ, ಬಡವರಿಗೆ
ಸಬ್ಸಿಡಿ ರೂಪದಲ್ಲಿ ಆಹಾರ ವಿತರಿಸಿದರೆ, ಇವರ ಕಣ್ಣು ಕೆಂಪಾಗುತ್ತವೆ.
ದೇಶದ ಒಟ್ಟು 121 ಕೋಟಿ
ಜನಸಂಖ್ಯೆಯಲ್ಲಿ ಒಟ್ಟಾರೆ ಶೇಕಡ 67 ರಷ್ಟು ಜನತೆ ತಮ್ಮ ಅವಶ್ಯಕತೆಗೆ ತಕ್ಕಂತೆ
ಆಹಾರ ಪದಾರ್ಥಗಳನ್ನು ಕೊಳ್ಳಲು ಅಸಮರ್ಥರಾಗಿದ್ದಾರೆ. ಇವರಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಶೇಕಡ 75
ಮತ್ತು ನಗರ ಪ್ರದೇಶಗಳಲ್ಲಿ ಶೇಕಡ 50 ರಷ್ಟು ಇದ್ದಾರೆ. ಅಂದರೆ, ದೇಶದ
ಜನಸಂಖ್ಯೆಯ ಮುಕ್ಕಾಲು ಭಾಗ ಎಂದು ಹೇಳಬಹುದು. 1990 ದಶಕದಿಂದ
ಭಾರತದಲ್ಲಿ ಜಾರಿಗೆ ಬಂದ ಉದಾರೀಕರಣ ಮತ್ತು ಜಾಗತೀಕರಣದ ಪ್ರಭಾವದಿಂದ ಸಾಮಾಜಿಕ ನ್ಯಾಯ ಎಂಬ
ಪರಿಕಲ್ಪನೆ ಮತ್ತು ಆದರ್ಶ ಮರೆಯಾಗತೊಡಗಿದೆ. ಬಹುತೇಕ ಬಡವರು, ಕೃಷಿಕರು ಮತ್ತು
ಕೂಲಿಕಾರರು ವಾಸಿಸುವ ಗ್ರಾಮಾಂತರ ಪ್ರದೇಶಗಳು ನಿರಂತರ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಬಡವವರು
ಬಡವರಾಗಿ ಉಳಿದಿದ್ದಾರೆ, ಶ್ರೀಮಂತರ ಸಂಪತ್ತು ಪ್ರತಿ ವರ್ಷ ವೃದ್ಧಿಸುತ್ತಲೇ ಇದೆ. ಇಂತಹ ಅಸಮರ್ಪಕ
ಬೆಳವಣಿಗಳ ಹಿಂದೆ ತಪ್ಪು ರಾಜಕೀಯ ನೀತಿಗಳಿವೆ ಎಂಬುದನ್ನು ಸಧ್ಯದ ಸ್ಥಿತಿಯಲ್ಲಿ ಯಾರೂ
ಒಪ್ಪುವುದಿಲ್ಲ. ಈ ದಿನಗಳಲ್ಲಿ ಬಡವರಿಗೆ ನೀಡುತ್ತಿರುವ ಸಬ್ಸಿಡಿ, ಇತರೆ
ಸವಲತ್ತುಗಳ ಹಿಂದಿರುವ ರಾಜಕೀಯ ಓಲೈಕೆಯನ್ನು ನಾವು ತಳ್ಳಿ ಹಾಕಲಾಗದು.
ಬಡತನವನ್ನು ಕೇವಲ ಆರ್ಥಿಕ ಮಾನದಂಡದಿಂದ
ಅಳೆಯುವ ಬದಲು. ಹಲವು ಆಯಾಮಗಳಿಂದ ಗುರುತಿಸಬೆಕಾಗುತ್ತದೆ. ಬಡವರ ಹಸಿವು, ಅವರು
ಬಳಸುವ ಅಹಾರದ ಪ್ರಮಾಣ, ಸಿಗುತ್ತಿರುವ ಆರೋಗ್ಯ, ಶಿಕ್ಷಣ, ವಸತಿ ಸವಲತ್ತುಗಳು
ಇವುಗಳನ್ನು ಪರಿಗಣನೆ ತೆಗೆದುಕೊಂಡರೆ, ಭಾರತದ ಸ್ಥಿತಿ ಗತಿ ತೀರಾ ಶೋಚನೀಯವಾಗಿದೆ,
2010
ರಲ್ಲಿ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ, ಜಗತ್ತಿನ 185
ರಾಷ್ಟ್ರಗಳಲ್ಲಿ 119 ನೇ ಸ್ಥಾನದಲ್ಲಿದ್ದ ಭಾರತ, 1012 ರಲ್ಲಿ 134 ನೇ
ಸ್ಥಾನಕ್ಕೆ ಕುಸಿದಿದೆ. ಜಾಗತಿಕ ಹಸಿವು ಸೂಚ್ಯಂಕದ ಪ್ರಕಾರ ಏಷ್ಯಾ ರಾಷ್ಟ್ರಗಳಲ್ಲಿ ಭಾರತದ ಸ್ಥಾನ 29
ನೇಯದು.
ಇಂತಹ ಆತಂಕಕಾರಿ ಬೆಳವಣಿಗೆಗಳ ನಡುವೆ, ದೇಶದಲ್ಲಿ
ಜಾರಿಗೆ ಬಂದ ಆಹಾರ ಭದ್ರತೆ ಮಸೂದೆಯಿಂದಾಗಿ ಒಟ್ಟು 87 ಕೋಟಿ,
30
ಲಕ್ಷ ಜನತೆ ಸಬ್ಸಿಡಿ ರೂಪದಲ್ಲಿ ಆಹಾರ ಪಡೆಯುತ್ತಿದ್ದಾರೆ. ಅಸಮರ್ಪಕವಾಗಿರುವ ಸಾರ್ವಜನಿಕ ಪಡಿತರ ಪದ್ದತಿಯನ್ನು ಪರಿಣಾಮಕಾರಿಯಾಗಿ
ಪರಿಷ್ಕರಿಸಿ, ಅಹಾರ ಪದಾರ್ಥಗಳು ಕಾಳಸಂತೆಯ ಪಾಲಾಗದಂತೆ ನೋಡಿಕೊಂಡು, ಬಡವರಿಗೆ
ತಲುಪುವಂತೆÀ ಮಾಡುವುದು ನಮ್ಮ ಸರ್ಕಾರಗಳ ನೈತಿಕ ಜವಾಬ್ದಾರಿಯಾಗಿದೆ.
ಜಗತ್ತಿನ ಅಸಹಾಯಕ ಜನರ ಹಸಿವು ನೀಗಿಸುವ
ಇಂತಹ ಕಾರ್ಯಕ್ರಮಗಳು ತಾತ್ಕಾಲಿಕ
ಕ್ರಿಯೆಗಳಾಗಿರಬೇಕೇ ಹೊರತು, ಇವು ಶಾಶ್ವತ .ಕಾರ್ಯಕ್ರಮಗಳಾಗಬಾರದು.
ಇವು ಶಾಶ್ವತ ಪ್ರಕ್ರಿಯೆಯಾದರೆ, ಬಡವರನ್ನು ಬಡವರನ್ನಾಗಿ ಇಡುವ ಮತ್ತು ಕಾಪಾಡುವ
ಹುನ್ನರಗಳಾಗಿ ಗಟ್ಟಿಯಾಗುತ್ತಾ ಹೊಗುತ್ತವೆ. ಹಾಗಾಗಿ ಬಡವರ ಹಸಿವು ನೀಗಿಸುವುದರ ಜೊತೆ ಜೊತೆಗೆ
ಅವರಿಗೆ ಸೌಲಭ್ಯಗಳು, ಸವಲತ್ತುಗಳನ್ನು ಒದಗಿಸಿ ಕೊಡುವುದರ ಮೂಲಕ ಬಡತನದ ಕೂಪದಿಂದ ಮೇಲೆತ್ತುವ ಕ್ರಿಯೆ ನಿರಂತರ
ಜಾರಿಯಲ್ಲಿರಬೇಕು. ಆಗ ಮಾತ್ರ ಈ ಜಗತ್ತಿನಲ್ಲಿ ಮತ್ತು ಈ ದೇಶದಲ್ಲಿ ಹಸಿವಿನ ಆಕ್ರಂದನಗಳು ನಿಲ್ಲಬಹುದು.