Monday, 7 October 2013

ಗಾಂಧೀಜಿಯ ನೆಪದಲ್ಲಿ ಶೂ ಮಾಕರ್ ನೆನಪುಗಳು

ಇಪ್ಪತ್ತನೇಯ ಶತಮಾನದಲ್ಲಿ ತನ್ನ ವ್ಯಕ್ತಿತ್ವ ಮತ್ತು ಚಿಂತನೆಗಳಿಂದ ಜಗತ್ತನ್ನು ನಿರಂತರವಾಗಿ ಕಾಡಿದ ವ್ಯಕ್ತಿ ಮಹಾತ್ಮ ಗಾಂಧಿ ಎಂದರೆ, ತಪ್ಪಾಗಲಾರದು. ಮಾರುಕಟ್ಟೆಯ ಪ್ರಭುತ್ವವನ್ನು ನಂಬಿ, ಜಾಗತೀಕರಣದ ಹುಚ್ಚು ಕುದೇರೆಯೇರಿ ಹೊರಟವರೆಲ್ಲಾ ಅಭಿವೃದ್ಧಿಯ ದಾರಿ ತಪ್ಪಿ ಅಂಡಲೆಯುತ್ತಿರುವ ಈ ಇಪ್ಪತ್ತೊಂದನೇಯ ಶತಮಾನದಲ್ಲೂ ನಮಗೆ ಪದೇ ಪದೆ ಗಾಂಧಿ ನೆನಪಾಗುತ್ತಾರೆ. ಹಾಗಾಗಿ ದೆಹಲಿಯ ಸಂಸತ್ ಭವನದ ಸೆಂಟ್ರಿಲ್ ಹಾಲ್ ನಿಂದ ಹಿಡಿದು, ಜಗತ್ತಿನ ದೊಡ್ಡಣ್ಣನಾದ ಅಮೇರಿಕಾದ ನ್ಯೂಯಾರ್ಕ್ ನಗರದ ಯೂನಿಯನ್ ಸ್ಕ್ವೇರ್ ಪಾರ್ಕ್ ವರೆಗೆ ಅವರ ಪ್ರತಿಮೆ, ಭಾವಚಿತ್ರಗಳು, ದೇಶ, ಭಾಷೆ, ಧರ್ಮಗಳ ಹಂಗಿಲ್ಲದೆ ರಾರಾಜಿಸುತ್ತಿವೆ. ಒಂದು ಕಾಲಕ್ಕೆ ಅಪ್ರಸ್ತುತ ಎಂದು ತಿರಸ್ಕರಿಸಲಾಗಿದ್ದ ಅವರ ಚಿಂತನೆಗಳು ಈಗ ದಿಕ್ಕೆಟ್ಟ ಜಗತ್ತಿಗೆ ದಿಕ್ಕು ದಿಶೆಯೇನೊ ಎಂಬಂತೆ ಅನಿಸತೊಡಗಿವೆ. ಈ ಕಾರಣಕ್ಕಾಗಿ ಇಪ್ಪತ್ತನೆಯ ಶತಮಾನದಲ್ಲಿ  ಉಗ್ರವಾದಿತನದಿಂದ ಕೂಡಿವೆ ಎಂದು ಅನಿಸುತ್ತಿದ್ದ ಅವರ ಪರಿಸರಕ್ಕೆ ಪೂರಕವಾದ ಚಿಂತನೆಗಳು, ಇಪ್ಪೊತ್ತೊಂದನೆಯ ಶತಮಾನದಲ್ಲಿ ಹಲವು ರೂಪಗಳಲ್ಲಿ ವಿವಿಧ ವ್ಯಕ್ತಿಗಳ ಚಿಂತನೆಯ ಮೂಲಕ ಹೊಸಹುಟ್ಟು ಪಡೆದಿವೆ.  ಅಂತಹ ವ್ಯಕ್ತಿಗಳಲ್ಲಿ ಗಾಂಧೀಜಿಯ ಚಿಂತನೆಗಳ ವಾರಸುದಾರ ಎಂದು ಕರೆಯಬಹುದಾದ ,ಜರ್ಮನಿ ಮೂಲದ ಅರ್ಥಶಾಸ್ತ್ರಜ್ಙ ಮತ್ತು ಚಿಂತಕ , ಪರಿಸರವಾದಿ ಹೀಗೆ ಹಲವು ವಿಶೇಷಣಗಳನ್ನು ಹೊಂದಿರುವ  ಇ.ಎಫ್. ಶೂಮಾಕರ್ ಒಬ್ಬರು.
ತಾವು ಬರೆದ Small is Beautiful (ಸಣ್ಣದು ಸಂದರ) ಎಂಬ ಕೃತಿಯಿಂದ ವಿಶ್ವ ಮನ್ನಣೆಗಳಿಸಿದ ಶೂ ಮಾಕರ್ ತಮ್ಮ ಬದುಕಿನುದ್ದಕ್ಕೂ ಗಾಂಧೀಜಿಯಂತೆ ನಡೆ ನುಡಿಗಳ ನಡುವೆ ಕಂದಕವಿಲ್ಲದಂತೆ ಬದುಕಿದ ಅಪರೂಪದ ವ್ಯಕ್ತಿ. ತಾವು ತೀರಿ ಹೋದ ಮುವತ್ತೈದು ವರ್ಷಗಳ ನಂತರವೂ (1977) ತಮ್ಮ ಚಿಂತನೆಗಳ ಮೂಲಕ ಆಧುನಿಕ ಜಗತ್ತನ್ನೂ ಸದಾ ಕಾಡುತ್ತಲೇ ಇದ್ದಾರೆ. ಅವರ ಕೃತಿಯನ್ನು (Small is Beautifull) ಇಪ್ಪತ್ತೊಂದನಯ ಶತಮಾನದ ಕ್ಲಾಸಿಕ್ ಕೃತಿ ಎಂದು ಜಗತ್ತು ಪರಿಗಣಿಸಿದೆ. ಬೃಹತ್ ಕೈಗಾರಿಕೆ,  ಮತ್ತು ಬಂಡವಾಳ, ಅತಿ ಹೆಚ್ಚು ಮಾನವನ ಶ್ರಮವನ್ನು ಬೇಡದ ನೂತನ ತಾಂತ್ರಿಕ ಅವಿಷ್ಕಾರ ಇವುಗಳಿಗಿಂತ, ಸ್ಥಳೀಯ ಸಂಪನ್ಮೂಲ, ಸಂಪತ್ತು ಮತ್ತು ಮಾನವ ಶ್ರಮವನ್ನು ಬಳಸಿಕೊಂಡು ಸೃಷ್ಟಿಯಾಗುವ ಸಣ್ಣ ಯೋಜನೆಗಳು ಸೂಕ್ತ ಎಂದು ಶೂಮಾಕರ್ ಪ್ರತಿಪಾದಿಸಿದ್ದರು.
ಹಸಿರು ಚಳವಳಿಯ ಹರಿಕಾರ ಎಂದು ಯುರೋಪ್ ನಲ್ಲಿ ಪ್ರಸಿದ್ಧವಾಗಿರುವ ಶೂ ಮಾಕರ್, 1911 ರಲ್ಲಿ ಜರ್ಮನಿಯ ಬಾನ್ ನಗರದಲ್ಲಿ ಜನಿಸಿದವರು. ಬಾಲ್ಯದಿಂದಲೂ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ, ಶೂಮಾಕರ್, ಜರ್ಮನಿಯ ಅರ್ಥಶಾಸ್ತ್ರಜ್ಞರಾಗಿದ್ದ ರೊಡ್ಸ್ ಹೆಸರಿನಲ್ಲಿ ಸ್ಥಾಪಿಸಿದ್ದ ಸ್ಕಾಲರ್ ಶಿಪ್ ಅನ್ನು ಪಡೆದು, ಇಂಗ್ಲೆಂಡಿನ ಆಕ್ಸ್ಪೆಪರ್ಡ್ ವಿ.ವಿಯಲ್ಲಿ ಪದವಿ ಪಡೆದರು. ಎರಡನೆಯ ಮಹಾಯುದ್ಧದ ವೇಳೆಗೆ ಮುನ್ನ ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ನ ಆಡಳಿತದಲ್ಲಿ ಬದುಕುವುದನ್ನು ವಿರೋಧಿಸಿ, ತನ್ನ ಪತ್ನಿ ಮತ್ತು ಪುಟ್ಟ ಮಗುವಿನೊಡನೆ ಇಂಗ್ಲೆಂಡಿಗೆ ಬಂದು, ತನ್ನ ಜರ್ಮನಿಯ ಪೌರತ್ವವನ್ನು ಮರೆ ಮಾಚಿ, ನಾರ್ಥ್ ಹ್ಯಾಂಪ್ಟನ್ ಷೈರ್ ನಗರದಲ್ಲಿ ಜೇಮ್ಸ್ ಎಂಬ ಬ್ರಿಟೀಷ್ ಹೆಸರಿನಲ್ಲಿ ಕೃಷಿ ತೋಟವೊಂದರ ಕೂಲಿಯಾಳಾಗಿ ಬದುಕು ಕಟ್ಟಿಕೊಂಡವರು.

ಆಕ್ಸ್ ಪರ್ಡ್ ವಿ.ವಿ, ಯಲ್ಲಿ ಓದುತ್ತಿದ್ದಾಗ, ಶೂ ಮಾಕರ್ ನ ಚಿಂತನೆ ಹಾಗೂ ಬುದ್ಧಿವಂತಿಕೆಯನ್ನು ಗಮನಿಸಿದ್ದ ಜಗತ್ ಪ್ರಸಿದ್ಧ ಅರ್ಥಶಾಸ್ತ್ರಜ್ಙರಾದ ಜಾನ್ ಮೇನಾರ್ಡ್ ಕೇನ್ಸ್ , ಇವರಿಗೆ ಆಕ್ಸ್ ಪರ್ಡ್ ವಿ.ವಿ.ಯ ಅರ್ಥಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರ ವಿಭಾಗದಲ್ಲಿ ಕೆಲಸ ಕೊಡಿಸಿದರು. ಆರ್ಥಿಕ ಬೆಳವಣಿಗೆಯ ಹಿನ್ನಡೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಇಂಗ್ಲೆಂಡ್ ಸರ್ಕಾರಕ್ಕೆ , ಮಹತ್ವದ ಸಲಹೆಗಳನ್ನು ನೀಡಿದ ತಜ್ಙರ ತಂಡದಲ್ಲಿ ಶೂ ಮಾಕರ್ ಇದ್ದರೂ ಸಹ, ಅವರು ಜರ್ಮನಿಯ ಮೂಲದವರು ಎಂಬ ಏಕೈಕ ಕಾರಣಕ್ಕಾಗಿ ಅವರಿಗೆ ಸಲ್ಲಬೇಕಾದ ಗೌರವವನ್ನು ತಡೆ ಹಿಡಿಯಲಾಯಿತು. ಆನಂತರ ಕಲ್ಲಿದ್ದಲು ಮಂಡಳಿಯಲ್ಲಿ ಅವರಿಗೊಂದು ಹುದ್ದೆ ನೀಡಲಾಯಿತು. ಆಂತರೀಕವಾಗಿ ಮತ್ತು ಬಹಿರಂಗವಾಗಿ ಹಾಗೂ ನಡೆ ಮತ್ತು ನುಡಿಯಲ್ಲಿ ಕಿಂಚಿತ್ತೂ ಕಂದಕವಿರಬಾರದು ಎಂದು ನಂಬಿದವರು ಶೂ ಮಾಕರ್. ಜಗತ್ತಿನ ಟನ್ ಗಟ್ಟಲೆ ಸಿದ್ಧಾಂತಗಳಿಗಿಂತ ನನಗೆ ಒಂದು ಚಮಚೆಯಷ್ಟು ಪ್ರಯೋಗದಿಂದ ಸಿಗುವ ಫಲಿತಾಂಶ ಮುಖ್ಯ ಎಂದು ಪ್ರತಿಪಾದಿಸಿದವರು. ತಮ್ಮ ಬದುಕಿನುದ್ದಕ್ಕೂ ಹಲವು ಪ್ರಶ್ನೆಗಳನ್ನು ಎತ್ತಿ , ಅವುಗಳಿಗೆ  ಉತ್ತರ ಕಂಡುಕೊಳ್ಳುವುದರ ಮೂಲಕ ಜಗತ್ತಿಗೆ ತಾವು ಕಂಡುಕೊಂಡ ಸತ್ಯಗಳನ್ನು ಪರಿಚಯಿಸಿದರು. ಪಾಶ್ಚಿಮಾತ್ಯ ಧೋರಣೆಯ ಆರ್ಥಿಕ ನೀತಿ, ಬಂಡವಾಳಶಾಹಿಯ ಧೋರಣೆ ಇವೆಲ್ಲವೂ ನಿಸರ್ಗಕ್ಕೆ ಎರವಾಗುವ ಸಂಗತಿಗಳು ಎಂದು ತಿಳಿದಿದ್ದ ಶೂ ಮಾಕರ್, ಪಶ್ಚಿಮ ಜಗತ್ತಿನ ಚಿಂತನಾ ಮಾದರಿಗಳನ್ನು ತಿರಸ್ಕರಿಸುವುದರ ಜೊತೆಗೆ ಪ್ರಶ್ನಿಸಿದರು. ಪ್ರಭುತ್ವದ ಕೈ ಕೆಳಗೆ ರೂಪುಗೊಳ್ಳುವ ಕಾನೂನುಗಳು, ಆರ್ಥಿಕ ನೀತಿ, ವಿಜ್ಙಾನದ ಅವಿಷ್ಕಾರ ಇವೆಲ್ಲವೂ ತಿರಸ್ಕಾರ ಯೋಗ್ಯ ಸಂಗತಿಗಳು ಎಂದು ಶೂ ಮಾಕರ್ ನಂಬಿದ್ದರು.  ನಿಜವಾದ  ಹಣದ ಮೌಲ್ಯ ಯಾವುದು?  ಹಣ ಮತ್ತು ಸಮಯದ ನಡುವಿನ ಸಂಬಂಧವೇನು? ನಿಜವಾದ ಶ್ರಮದ ಮಹತ್ವ ಅಂದರೆ ಏನು? ಅಭಿವೃದ್ಧಿಯ ಅಭಿವೃದ್ಧಿಯ ಅರ್ಥಗಳೇನು? ಇವು ಶೂ ಮಾಕರ್ ಆಧುನಿಕ ಜಗತ್ತಿಗೆ ಎಸೆದ ಸವಾಲುಗಳು. ನಿಸರ್ಗದ ನೈಜ ಕೊಡುಗೆಗಳನ್ನು ಸರಕಿನಂತೆ ನೋಡುವ ಆಧುನಿಕ ಜಗತ್ತಿನ ಆರ್ಥಿಕ ಮನೋಭಾವದ ಬಗ್ಗೆ ಶೂ ಮಾಕರ್ ತೀವ್ರ ಕಳವಳಗೊಂಡಿದ್ದರು. ಹಾಗಾಗಿ ಅವರು ಧ್ಯಾನಿಸುತ್ತಿದ್ದ ಮತ್ತು ರೂಪಿಸುತ್ತಿದ್ದ ಚಿಂತನೆಗಳೆಲ್ಲವೂ ಪರಿಸರಕ್ಕೆ ಎರವಾಗದಂತೆ ಪೂರಕವಾಗಿದ್ದವು. ಕೇವಲ ಮಾತನಾಡುವುದಕ್ಕೆ ಸೀಮಿತವಾಗದೆ, 1931 ರಲ್ಲಿ ಇಂಗ್ಲೆಂಡಿನಲ್ಲಿ ತಮ್ಮ ಮನೆಗೆ ಪ್ರಪಥಮವಾಗಿ ಸೋಲಾರ್ ದೀಪಗಳನ್ನು ಅಳವಡಿಸಿಕೊಂಡಿದ್ದರು. ಜೊತೆಗೆ ತಮ್ಮ ಬಿಡುವಿನ ವೇಳೆಯಲ್ಲಿ ತೋಟದಲ್ಲಿ ಕೆಲಸ ಮಾಡುತ್ತಾ ನಿಸರ್ಗದ ಕೊಡುಗೆಗಳನ್ನು ಗಮನಿಸುತ್ತಿದ್ದರು.
ತಮ್ಮ ಯವ್ವನದ ದಿನಗಳಿಂದ ರೂಡಿಯಲ್ಲಿದ್ದ ನಂಬಿಕೆಗಳನ್ನು, ಆಚರಣೆಗಳನ್ನು ಪ್ರಶ್ನಿಸುತ್ತಾ ಬಂದಿದ್ದ ಶೂ ಮಾಕರ್ ಗೆ ಮನುಷ್ಯ ಮತ್ತು ನಿಸರ್ಗದ ನಡುವಿನ ಕುರಿತಾದ ಚಿಂತನೆಯಲ್ಲಿ ಆಧ್ಯಾತ್ಮಿಕ ಸ್ಪರ್ಶವಿತ್ತು. ಹಾಗಾಗಿ ಅವರು. ಮನುಷ್ಯನ್ ದುರಾಸೆ, ಮಿತಿಯಲ್ಲದೆ ಅನುಭೋಗದ ಪ್ರವೃತ್ತಿ ಇವುಗಳನ್ನು ವಿರೋಧಿಸುತ್ತಿದ್ದರು. ನಿಸರ್ಗದ ಕೊಡುಗೆಗಳಾದ ನೀರು, ಗಾಳಿ, ಮಣ್ಣು, ಹಸಿರು ಇವೆಲ್ಲವೂ ಭೂಮಿಯ ಮೇಲಿರುವ ಪ್ರತಿಯೊಬ್ಬ ಜೀವಿಯ ಹಕ್ಕು ಆದರೆ, ಇವುಗಳು ಈಗ ಉಳ್ಳವರ ಸ್ವತ್ತಾಗಿವೆ ಎಂದು ವ್ಯಾಖ್ಯಾನಿಸುತ್ತಿದ್ದರು. ಸುಸ್ಥಿರ ಅಭಿವೃದ್ಧಿಗೆ ಹೆಚ್ಚು ಮಹತ್ವ ನೀಡಿದ್ದ ಶೂ ಮಾಕರ್, “ ನೀವು ನಿಸರ್ಗದ ಕೊಡುಗೆಗಳಿಗೆ ಪ್ರತಿಯಾಗಿ ಏನೂ ಕೊಡಲಾರದವರಾಗಿದ್ದರೆ, ಅವುಗಳನ್ನು ಅನುಭೋಗಿಸುವ ನೈತಿಕ ಹಕ್ಕು ನಿಮಗಿಲ್ಲ’ ಎಂದು ಭೋಧಿಸುತ್ತಿದ್ದರು. ಇಂಗ್ಲೆಂಡಿನ ಕಲ್ಲಿದ್ದಲು ಮಂಡಳಿಯಲ್ಲಿ ಇದ್ದಕೊಂಡು, 1940 ರ ದಶಕದಲ್ಲಿ, “ಮುಂದಿನ ದಿನಗಳಲ್ಲಿ ತೈಲ ಮತ್ತು ಆಹಾರಕ್ಕಾಗಿ ಮನುಷ್ಯ ಮನುಷ್ಯರ ನಡುವೆ ಯುದ್ಧಗಳು ನಡೆಯುತ್ತವೆ” ಎಂದು ಭವಿಷ್ಯ ನುಡಿದು, ಇವುಗಳ ಬಳಕೆಯಲ್ಲಿ ಮಿತಿ ಇರಬೇಕೆಂದು ಎಚ್ಚರಿಕೆ ನೀಡಿದ್ದರು.

1955 ರಲ್ಲಿ ಆಗಿನ ಬರ್ಮಾ ಸರ್ಕಾರದ ಆಹ್ವಾನದ ಮೇರೆಗೆ ಮೂರು ತಿಂಗಳ ಕಾಲ ಬರ್ಮಾ ದೇಶದಲ್ಲಿ ಪ್ರವಾಸ ಮಾಡಿ ಆ ದೇಶಕ್ಕೆ ಆರ್ಥಿಕ ನೀತಿಯನ್ನು ರೂಪಿಸಿಕೊಟ್ಟರು. ಅಲ್ಲಿನ ಜನಗಳಿಗೆ ಉದ್ಯೋಗ, ಆಹಾರ, ವಸತಿ ಇವುಗಳಿಗೆ ಕೊರತೆಯಾಗದಂತೆ, ಆರ್ಥಿಕ ನೀತಿಗಳು ಇರಬೇಕು ಜೊತೆಗೆ ಪಾಶ್ಚಿಮಾತ್ಯದ ಆಧುನಿಕತೆಯನ್ನು ಒಳಗೊಂಡಿದ್ದು, ಅದು ಯಾವ ಕಾರಣಕ್ಕೂ ಬೌದ್ಧ ಧರ್ಮದ ಸಂಸ್ಕೃತಿಗೆ  ಧಕ್ಕೆಯಾಗದಂತೆ ಇರಬೇಕೆಂಬುದು ಬರ್ಮಾ ಸರ್ಕಾರ ಅಪೇಕ್ಷೆಯಾಗಿತ್ತು. ಆಧುನಿಕತೆ ಮತ್ತು ನಿಸರ್ಗದ ಆರಾಧನೆ ಹಾಗೂ ಅಧ್ಯಾತ್ಮಿಕತೆ ಎರಡನ್ನೂ ಒಳಗೊಂಡಿದ್ದ ಶೂ ಮಾಕರ್ ನ ವರದಿಯನ್ನು ಬರ್ಮಾ ಸರ್ಕಾರ ಪೂರ್ಣ ಮನಸ್ಸಿನಿಂದ ಒಪ್ಪಿಕೊಳ್ಳದಿದ್ದರೂ, ಜಗತ್ತಿನಲ್ಲಿ ಪ್ರಥಮ ಬಾರಿಗೆ “ ಬುದ್ಧನ ಅರ್ಥಶಾಸ್ತ್ರ” ರೂಪುಗೊಳ್ಳಲು ಸಹಕಾರಿಯಾಯಿತು.
ಶೂ ಮಾಕರ್, ಗಾಂಧೀಜಿಯಿಂದ ನೇರ ಪ್ರಭಾವಿತರಾಗದಿದ್ದರೂ, ಅವರ ಚಿಂತನೆ ಮತ್ತು , ನಿಸರ್ಗ ಕುರಿತ ಕಾಳಜಿ ,ಮತ್ತು ಆರ್ಥಿಕ ನೀತಿಗಳಲ್ಲಿನ ದೂರ ದೃಷ್ಟಿಕೋನ ಇವೆಲ್ಲವೂ ಗಾಂಧೀಯವರ ಮುಂದುವರೆದ ಪರಂಪರೆಯ ಭಾಗಗಳೆಂದು ಕರೆಯಬಹುದು. ಗಾಂಧಿ ಹುಟ್ಟಿದ ನೆಲ ಎಂಬ ಕಾರಣಕ್ಕಾಗಿ ಭಾರತದ ಮೇಲೆ ಅಪಾರ ಪ್ರೀತಿ, ಗೌರವ ಮತ್ತು ಕುತೂಹಲ ಇಟ್ಟುಕೊಂಡಿದ್ದ ಶೂ ಮಾಕರ್ 1970 ರಲ್ಲಿ ಭಾರತ ಸರ್ಕಾರದ ಆಹ್ವಾನದ ಮೇರೆಗೆ ಪಂಚವಾರ್ಷಿಕ ಯೋಜನೆಗಳ ಸಲಹಾ ಮಂಡಳಿಯಲ್ಲಿ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದರು.
ಭಾರತಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ ಇಲ್ಲಿನ ಬಡತನ ಮತ್ತು ಬಡವರನ್ನು ನೋಡಿದ ಶೂ ಮಾಕರ್, “ “ಇವರು ತಮ್ಮದಲ್ಲದ ತಪ್ಪಿಗೆ ತಮ್ಮ  ಬದುಕಿನಲ್ಲಿ ಆತ್ಮವಿಶಾಸವನ್ನು ಕಳೆದುಕೊಂಡ ಅಸಹಾಯಕ ಮುಗ್ಧರು,” ಎಂದು ಬಣ್ಣಿಸಿದ್ದರು. ಇವರೊಳಗಿನ ಕರಕುಶಲತೆ, ವೃತ್ತಿ ಕೌಶಲ್ಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗದ ಭಾರತದ ಸರ್ಕಾರದ ಅಸಮರ್ಥತೆಗೆ ತೀವ್ರವಾಗಿ ನೊಂದುಕೊಂಡಿದ್ದರು. ನಂತರ ತಾವೇ ಅಭಿವೃದ್ಧಿ ಪಡಿಸಿದ ಅಂತರ್ಗತ ತಂತ್ರಜ್ಙಾನ ( Inter mediate technology) ವನ್ನು ಭಾರತಕ್ಕೆ ಪರಿಚಯಿಸಿದರು. ಬಡವರಿಗೆ ತಾವಿರುವ ಪ್ರದೇಶಗಳಲ್ಲಿ, ತಮ್ಮ ಪರಿಮಿತಿಯೊಳಗೆ ಇರುವ ಜ್ಙಾನಕ್ಕೆ ಅನುಗುಣವಾಗಿ ಸಿಗುವ ಸಂಪನ್ಮೂಲಗಳನ್ನು ಹೇಗೆ ಪರಿಣಾಮಕಾರಿಯಾಗಿ ಗುಡಿಕೈಗಾರಿಕೆ ಗಳ ಮೂಲಕ ಬಳಸಿಕೊಳ್ಳಬಹುದು ಎಂಬುದನ್ನು ತೋರಿಸಿಕೊಟ್ಟರು. ಹೆಚ್ಚು ಬಂಡವಾಳವನ್ನು ಬೇಡದ ಹಾಗೂ ದುಡಿಯುವ ಕೈಗಳಿಗೆ ಕೆಲಸ ನೀಡುವ ಈ ಪರಿಕಲ್ಪನೆ ಗಾಂಧೀಜಿ ಚಿಂತನೆಗೆ ತೀರಾ ಹತ್ತಿರವಾಗಿತ್ತು, ಬಡ ಕುಶಲ ಕರ್ಮಿಗಳಿಗೆ ನೆರವಾಗುವ ದೃಷ್ಟಿಯಿಂದ ದೆಹಲಿ ಮತ್ತು ಲಕ್ನೊ ನಗರಗಳಲ್ಲಿ “ ಶೂ ಮಾಕರ್ ತರಬೇತಿ ಕೇಂದ್ರಗಳನ್ನುತೆರೆಯಲಾಯಿತು.( ಈ ಕೇಂದ್ರಗಳು ಈಗ ಇಂಗ್ಲೆಂಡ್ ನ ಜೀವಿಕ ಟ್ರಸ್ಟ್ ಮೂಲಕ ನಡೆಯುತ್ತಿವೆ, ಜೀವಿಕ ಟ್ರಸ್ಟ್ ಶೂ ಮಾಕರ್ ಕುಟುಂಬದ ಸದಸ್ಯರು ಸ್ಥಾಪಿಸಿರುವ ಸಂಸ್ಥೆ)
ಶೂ ಮಾಕರ್ ರವರ ಚಿಂತನೆ ಈಗ ನಮ್ಮ ನೆರೆಯ ಬಂಗ್ಲಾದ ಅರ್ಥಶಾಸ್ತ್ರಜ್ಙ ಮಹಮ್ಮದ್ ಯೂನಸ್ ಮೂಲಕ ಮುಂದುವರಿದಿದೆ. ಬಂಗ್ಲಾದ ಕಡುಬಡವರನ್ನು ಗುರುತಿಸಿ ಅವರ ವೃತ್ತಿ ಕೌಶಲ್ಯಕ್ಕೆ ನೆರವಾಗುವುದರ ಮೂಲಕ ಗ್ರಾಮೀಣ ಬ್ಯಾಂಕ್ ಅನ್ನು ಸ್ಥಾಪಿಸಿ, ಇಡೀ ವಿಶ್ವವನ್ನು ತಮ್ಮತ್ತ ತಿರುಗಿ ನೋಡುವಂತೆ ಮಾಡಿದ ಅಪ್ರತಿಮ ಸಾಹಸಿ ಡಾ.ಮಹಮ್ಮದ್ ಯೂನಸ್.
ಮನುಕುಲದ ಒಳಿತಿಗಾಗಿ ಜಾನ್ ರಸ್ಕಿನ್ ಅವರ ಎದೆಯಲ್ಲಿ ಹುಟ್ಟಿಕೊಂಡ ಪ್ರಬುದ್ಧ ಚಿಂತನೆಯೊಂದು, ಗಾಂಧಿಯ ಎದೆಗೆ ಹರಿದು, ಆನಂತರ ಜೆ.ಸಿ. ಕುಮಾರಪ್ಪ, ಶೂಮಾಕರ್ , ಮಹಮ್ಮದ್ ಯೂನಸ್ ಮುಂತಾದ ಮಹಾತ್ಮರ ಎದೆಗೆ ಗುಪ್ತ ನದಿಯಾಗಿ ಹರಿದು, ಈಗಲೂ ಹಲವರ ಎದೆಯೊಳಗೆ ಬತ್ತದ ಗಂಗೆಯಾಗಿ ಹರಿಯುತ್ತಿರುವು ನನ್ನ ಪಾಲಿಗೆ ಸೋಜಿಗದ ಸಂಗತಿಯಾಗಿದೆ.

No comments:

Post a Comment