ಸೋಮವಾರ, ನವೆಂಬರ್ 16, 2015

ಇಬ್ಬರ ಹೆಂಡಿರ ಮುದ್ದಿನ ಗಂಡ ತಿರುಪತಿ ತಿಮ್ಮಪ್ಪನ ಪ್ರಣಯ ಪ್ರಸಂಗ


 ವರ್ಷದ ಆಗಸ್ಟ್ ತಿಂಗಳಿನ ಮೊದಲ ವಾರ ನಡೆದ ಘಟನೆ ಇದು. ತಮಿಳುನಾಡಿನ ಕುಂಭಕೋಣಂ ನಿಂದ ತಿರುವರೂರು ಜಿಲ್ಲಾ ಕೇಂದ್ರಕ್ಕೆ  ಕಳೆದ ಮೂರು ವರ್ಷಗಳಲ್ಲಿ ನಾಲ್ಕನೆಯ ಬಾರಿ ಭೇಟಿ ನೀಡುತ್ತಿದ್ದೆ. ಆ ಊರಿನಲ್ಲಿ ಸುಮಾರು ಮುವತ್ತು ಎಕರೆ ಪ್ರದೇಶದಲ್ಲಿ ಎದ್ದು ನಿಂತಿರುವ ತ್ಯಾಗೇಶ ಅಥವಾ ತ್ಯಾಗರಾಜರ್ ಎನ್ನುವ ಬೃಹತ್ ದೇಗುಲ ಹಾಗೂ ಆರು ಎಕರೆ ವಿಸ್ತೀರ್ಣದಲ್ಲಿರುವ ಪುಷ್ಕರಣಿಗೆ ತಮಿಳು ನಾಡಿನಲ್ಲಿ ವಿಶಿಷ್ಠ ಸ್ಥಾನವಿದೆ. ತಮಿಳುನಾಡಿನ ಪ್ರಾಚೀನ ಸಂಗೀತ ಮತ್ತು ನೃತ್ಯದ ಅನೇಕ ಪ್ರಕಾರಗಳ ಇತಿಹಾಸವನ್ನು ತನ್ನ ಒಡಲೊಳಗೆ ಇಟ್ಟುಕೊಂಡಿರುವ ಈ ದೇವಸ್ಥಾನವು, ಕರ್ನಾಟಕ ಸಂಗೀತದ ತ್ರಿಮೂರ್ತಿಗಳೆಂದು ಕರೆಯುವ ಶ್ಯಾಮಾಶಾಸ್ತ್ರಿ, ಮುತ್ತುಸ್ವಾಮಿ ದೀಕ್ಷಿತರು ಹಾಗೂ ತ್ಯಾಗರಾಜರ ಪೂರ್ವಿಕರ ನೆಲೆಯೂ ಹೌದು. ಇಲ್ಲಿ ಪ್ರತಿ ಹನ್ನೆರೆಡು ವರ್ಷಕ್ಕೆ ಒಮ್ಮೆ ನಡೆಯುವ ನೂರು ಅಡಿ ಎತ್ತರ ಹಾಗೂ ನಲವತ್ತು ನಾಲ್ಕು ಟನ್ ತೂಕದ ಬೃಹತ್ ರಥೋತ್ಸವ ಕೂಡ ಹೆಸರುವಾಸಿಯಾದುದು. ಒಂಬತ್ತನೇ ಶತಮಾನದಲ್ಲಿ ಚೋಳರಿಂದ ನಿರ್ಮಿತವಾದ ಈ ದೇಗುಲ ನಂತರ ಹದಿನೈದು ಮತ್ತು ಹದಿನಾರನೇ ಶತಮಾನದಲ್ಲಿ ವಿಜಯನಗರದ ಅರಸರಿಂದ ಪುನರ್ ನಿರ್ಮಾಣಗೊಂಡಿದೆ. ಆಗಮ ಶಾಸ್ತ್ರದ ರೀತಿಯಲ್ಲಿ ಬೆಳಿಗ್ಗೆ 5-30 ರಿಂದ ಸಂಜೆ 7 ಗಂಟೆಯವರೆಗೆ ಆರು ವಿವಿಧ ಬಗೆಯ  ಪೂಜೆಗಳು ನಡೆಯುತ್ತವೆ. ಇಲ್ಲಿ ಆಚರಣೆಯಲ್ಲಿದ್ದ ದೇವದಾಸಿಯರ ನೃತ್ಯ ಕೂಡ ಆಗಮ ಶಾಸ್ತ್ರದ ಹಿನ್ನಲೆಯಲ್ಲಿ ರೂಪುಗೊಂಡಿದ್ದು ಎಂಬುದು ನನ್ನ ಅಧ್ಯಯನಕ್ಕೆ ವಿಶೇಷ ಕಾರಣವಾಗಿತ್ತು. ವಾಸ್ತು ಪ್ರಕಾರ ಇರುವ ದೇಗುಲದ ಅಷ್ಟ ದಿಕ್ಕುಗಳನ್ನು ಸೇರಿಸಿ, ಗರ್ಭ ಗುಡಿ ಇರುವ ಸ್ಥಳವನ್ನು ಬ್ರಹ್ಮ ಸ್ಥಳ ಎಂದು ಗುರುತಿಸಿ, ಇವುಗಳನ್ನು ನವ ಕೊಂಡಿಗಳು ಎಂದು ಇಲ್ಲಿ ಗುರುತಿಸಲಾಗಿದೆ. (ಕೊಂಡಿ ಎಂದರೆ, ಒಂದೊಂದು ದಿಕ್ಕನ್ನು ತೋರಿಸುವ ನಿರ್ಧಿಷ್ಟ ಸ್ಥಳ.) ಈ ಒಂಬತ್ತು ಸ್ಥಳಗಳಲ್ಲಿ ನಿಂತು ದೇವದಾಸಿಯರು ನೃತ್ಯ ಮಾಡಬೇಕಿತ್ತು. ಒಂದೊಂದು ಸ್ಥಳದಲ್ಲಿ ನೃತ್ಯದ ಪ್ರಕಾರ ಬದಲಾಗುತ್ತಿತ್ತು. ಅಂತಿಮವಾಗಿ ಬ್ರಹ್ಮ ಸ್ಥಳದ ನೃತ್ಯ ಉಯ್ಯಾಲೆ ರೂಪದ ನೃತ್ಯವಾಗಿರುತ್ತಿತ್ತು. ದೇವರನ್ನು ತೂಗಿ ಮಲಗಿಸುವ ನೃತ್ಯ ಇದಾಗಿತ್ತು ( ಈ ಕುರಿತು ಸವಿವರವಾಗಿ ನನ್ನ ಅಧ್ಯಯನ ಕೃತಿಯಾದ “ಪದಗಳಿವೆ ಎದೆಯಲ್ಲಿ” ಎಂಬ ದಕ್ಷಿಣ ಭಾರತ ದೇವದಾಸಿಯರ ಇತಿಹಾಸ ಕುರಿತ ಪುಸ್ತಕದಲ್ಲಿ ದಾಖಲಿಸುತ್ತಿದ್ದೀನಿ) ಇಂತಹ ಅಪರೂಪದ ವಿವರಗಳನ್ನು ತಮಿಳುನಾಡು ಸರ್ಕಾರವು ತಮಿಳು ಭಾಷೆಗೆ ಶಾಸ್ತ್ರೀಯ ಅಥವಾ ಅಭಿಜಾತ ಭಾಷೆ ಎಂಬ ಮಾನ್ಯತೆ ಸಿಕ್ಕಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರದಿಂದ ಸಿಕ್ಕಿರುವ ಅನುದಾನವನ್ನು ಬಳಸಿಕೊಂಡು ಅನೇಕ ಪ್ರಾಚೀನ ಕೃತಿಗಳನ್ನು ಪ್ರಕಟ ಮಾಡುತ್ತಿದೆ. ತಂಜಾವೂರನ್ನು ಆಳಿದ ಮರಾಠ ದೊರೆ ಶರ್ಪೋಜಿ ಕಾಲದ ಸಂಗೀತದ ಇತಿಹಾಸವನ್ನು ಆಧುನಿಕ ತಮಿಳು ಭಾಷೆಗೆ ಅನುವಾದಿಸಿದ ನಂತರ ನನಗೆ ತಿಳಿಯಿತು. (2015 ರ ಜನವರಿಯಲ್ಲಿ ತಂಜಾವೂರಿನ ತಮಿಳು ವಿಶ್ವ ವಿದ್ಯಾನಿಲಯವು ಅಲ್ಲಿನ ಸಂಗೀತ ಮಹಲ್ ಗ್ರಂಥಾಲಯದಲ್ಲಿದ್ದ ಮೂರು ಸಂಪುಟಗಳನ್ನು ಮೋಡಿ ತಮಿಳು ಭಾಷೆಯಿಂದ ಆಧುನಿಕ ತಮಿಳು ಭಾಷೆಗೆ ಅನುವಾದಿಸಿ ಪ್ರಕಟಿಸಿದೆ)


                                             ( ತಿರುವರೂರು ತ್ಯಾಗರಾಜರ ದೇಗುಲ ಮತ್ತು ರಥ)

ಈ ಮೇಲ್ಕಂಡ ಕಾರಣಗಳಿಂದ ನಾನು ಕುಂಭಕೋಣಂ ನಗರದಿಂದ ತಿರುವರೂರು ಜಿಲ್ಲಾ ಕೇಂದ್ರಕ್ಕೆ ಹೋಗುವಾಗ, ದಾರಿ ಮಧ್ಯೆ ಸುಮಾರು ಹತ್ತು ಕಿಲೋಮಿಟರ್ ದೂರದಲ್ಲಿ ತಿರುಮಲಪುರಂ ಹಾಗೂ ಕೃಷ್ಣರಾಜಪುರಂ ಎಂಬ ತೆಲುಗು ಹೆಸರಿನ ಪ್ರಭಾವದ ಊರುಗಳು ನನ್ನ ಗಮನ  ಸೆಳದಿದ್ದವು. ಜೊತೆಗೆ ಇವೆರೆಡಕ್ಕಿಂತ ಮುಖ್ಯವಾಗಿ “ ನಾಚ್ಛಿಯಾರ್ ಕೋಯಿಲ್ ಅಂದರೆ ನಾಚ್ಛಿಯಾರ್ ದೇವಸ್ಥಾನ ಎಂಬ ಒಬ್ಬ ಹೆಣ್ಣು ಮಗಳ ದೇವಸ್ಥಾನದ ಹೆಸರಿನಲ್ಲಿರುವ ಊರು ನನ್ನ ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. ಈ ಬಗ್ಗೆ ತಂಜಾವೂರಿನ ಸಂಗೀತ ಮಹಲ್ ಗ್ರಂಥಾಲಯದಲ್ಲಿದ್ದ ಕೆಲವು ಅಧಿಕಾರಿಗಳನ್ನು ವಿಚಾರಿಸಿದ್ದೆ. ಅವರಿಗೆ ಸಂಪೂರ್ಣವಾಗಿ ಇತಿಹಾಸ ಗೊತ್ತಿಲ್ಲದಿದ್ದರೂ ಸಹ ತಿರುಪತಿಯಲ್ಲಿರುವ ಶ್ರೀ ವೆಂಕಟೇಶ್ವರನು ಆ ಊರಿನ ಹೆಣ್ಣು ಮಗಳನ್ನು ವಿವಾಹವಾದ ಕಾರಣ ಈ ಹೆಸರು ಬಂದಿದೆ ಎಂಬ ಸುಳಿವು ಕೊಟ್ಟಿದ್ದರು. ಹಾಗಾಗಿ ತಿರುವರೂರಿಗೆ ಹೋಗುವ ಮುನ್ನ ನಾಚ್ಚಿಯಾರ್ ಕೋಯಿಲ್ ಗೆ ಭೇಟಿ ನೀಡಿ ಮಂದೆ ತಿರುವರೂರಿಗೆ ಹೋಗೋಣವೆಂದು ನಿರ್ಧರಿಸಿ ಬಸ್ ಹತ್ತಿದೆ. ಆ ಊರಿನ ಬಸ್ ನಿಲ್ದಾಣದಲ್ಲಿ ನಾನು ಇಳಿದ ನಂತರ ಸ್ಥಳಿಯ ಚಹಾ ಅಂಗಡಿಯವನ ಬಳಿ ತಮಿಳು ಭಾಷೆಯಲ್ಲಿ ಇಲ್ಲಿ ಅಮ್ಮನವರ ದೇವಸ್ಥಾನ ಎಲ್ಲಿದೆ? ಎಂದು ಕೇಳಿದೆ. ಆತ  ಮುಖ್ಯ ರಸ್ತೆಯೊಂದರ ದಕ್ಷಿಣ ದಿಕ್ಕಿಗೆ ಕೈ ತೋರಿಸಿ, “ರಸ್ತೆಯ ಕೊನೆಯಲ್ಲಿ ಒಂದು ಹಳ್ಳ ಹರಿಯುತ್ತಿದೆ ಅಲ್ಲಿದೆ ಹೋಗಿ, ಅಲ್ಲಿ ದೇವಸ್ಥಾನವಿದೆ” ಎಂದ. ನಾನು ಸುಮಾರು ಒಂದು ಕಿಲೋಮೀಟರ್ ನಡೆದು ದೇವಸ್ಥಾನ ತಲುಪಿದಾಗ ನನಗೆ ಅಚ್ಚರಿಯಾಯಿತು. ಸುಮಾರು ಅರವತ್ತು ಅಡಿ ಉದ್ದ ಮತ್ತು ನಲವತ್ತು ಅಡಿ ಜಾಗದಲ್ಲಿ ಹಾಕಲಾಗಿದ್ದ ತೆಂಗಿನ ಗರಿಗಳ ಚಪ್ಪರದ ಕೆಳಗೆ ಮಧ್ಯಭಾಗದಲ್ಲಿ ಸುಮಾರು ಮೂರು ಅಡಿ ಕಟ್ಟೆಯೊಂದರ ಮೇಲೆ ಅತ್ಯಂತ ಸಣ್ಣದೊಂದು ಗುಡಿ ಇತ್ತು. ಚಪ್ಪರದ ಮೂಲೆಯೊಂದರಲ್ಲಿ ಇದ್ದ ಪುಟ್ಟ ಗುಡಿಸಿಲಿನ ಮುಂದೆ ಹಾಕಲಾಗಿದ್ದ ಮರದ ಬೆಂಚ್ ಮೇಲೆ ಸೊಂಟಕ್ಕೆ ಬಿಳಿಯ ಪಂಚೆಯನ್ನು ಸುತ್ತಿಕೊಂಡು ಬರಿ ಮೈಯಲ್ಲಿ ಕುಳಿತ್ತಿದ್ದ ಹಿರಿಯ ವೃದ್ಧನೊಬ್ಬ ಎದ್ದು ಬಂದು ದೇವರಿಗೆ ಮಂಗಳಾರತಿ ಮಾಡಿ ನನ್ನ ಬಳಿ ಬಂದ. ಆರತಿ ತಟ್ಟೆಗೆ ಹತ್ತು ರೂಪಾಯಿ ದಕ್ಷಿಣೆ ಹಾಕುತ್ತಿದ್ದಂತೆ ತಟ್ಟೆಯಲ್ಲಿದ್ದ ವಿಭೋತಿ ತೆಗೆದು ನನ್ನ ಹಣೆಗೆ ಹಚ್ಚಿದ. ನಾನು ದಿಕ್ಕು ತಪ್ಪಿ ಬೇರೆ ದೇವಸ್ಥಾನಕ್ಕೆ ಬಂದಿದ್ದೀನಿ ಎಂಬುವುದು ಖಚಿತವಾಯಿತು. ಅದು ಸುಮಾರು ಬೆಳಿಗ್ಗೆ ಹನ್ನೊಂದು ಗಂಟೆ ಸಮಯ. ನಾನು ಆ ವ್ಯಕ್ತಿಯ ಬಳಿ ನನ್ನ ಪರಿಚಯ ಹೇಳಿಕೊಂಡು “ ನಾನು ನಾಚ್ಛಿಯಾರಮ್ಮನ ದೇವಸ್ಥಾನ ಹುಡುಕಿಕೊಂಡು ಬಂದಿದ್ದೀನಿ ಎಂದು ಹೇಳಿ ಇದು ಯಾವ ಅಮ್ಮನ ದೇವಸ್ಥಾನ ಎಂದು ಕೇಳಿದೆ. “ ಇದು ಆಗಸ ಮಾರಿಯಮ್ಮನ್ ಕೋಯಿಲ್ ಎಂದ. . ( ಆಕಾಶ ಮಾರಿಯಮ್ಮನ ದೇವಸ್ಥಾನ)  ಹಾಗಾದರೆ, ನಾಚ್ಛಿಯಾರ್ ಅಮ್ಮನ್ ಕೋಯಿಲ್ ಎಲ್ಲಿದೆ ಎಂದು ಕೇಳಿದೆ. “ಈ ಊರಿನಲ್ಲಿರುವುದು ನಾಚ್ಛಿಯಾರಮ್ಮ್ನನ ದೇವಸ್ಥಾನವಲ್ಲ, ಅದು ಪೆರುಮಾಳ್ ಕೋಯಿಲ್ ಅಂದರೆ, ವೆಂಕಟೇಶ್ವರನ ದೇವಸ್ಥಾನ. ಇಲ್ಲಿ ಪ್ರಥಮ ಪೂಜೆ ಯಾವಾಗಲೂ ನಾಚ್ಚಿಯಾರ್ ಅಮ್ಮನಿಗೆ ಸಲ್ಲುತ್ತದೆ ನಂತರ ವೆಂಕಟೇಶ್ವರನಿಗೆ ಸಲ್ಲುತ್ತದೆ ಎಂಬ ಕುತೂಹಲಕಾರಿ ಸಂಗತಿಯೊಂದನ್ನು ನನ್ನೆದುರು ಬಿಚ್ಚಿಟ್ಟ. ತೂಕಡಿಸುವವನಿಗೆ ಹಾಸಿಗೆ ಹಾಸಿಕೊಟ್ಟರು ಎಂಬಂತೆ ನನಗೆ ಅಷ್ಟು ಸಾಕಾಯಿತು. ಕೂಡಲೇ  ಅಲ್ಲಿದ್ದ ಬಾಲಕನನ್ನು ಕರೆದು ಪಕ್ಕದ ಹೋಟೆಲ್ ನಿಂದ ಮೂರು ಚಹಾ ತರಲು ಹೇಳಿ ಬೆಂಚಿನ ಮೇಲೆ ಕುಳಿತುಕೊಂಡು  ಆ ಹಿರಿಯ ಜೀವದ ಬಾಯಲ್ಲಿ ತಿರುಪತಿ ತಿಮ್ಮಪ್ಪನ ಪ್ರಣಯ ಪ್ರಸಂಗದ ಕಥೆ ಕೇಳಲು ಕುಳಿತೆ.
ಮಾರಿಯಮ್ಮನ ದೇಗುಲದ ಅರ್ಚಕ ಹಾಗೂ ಹಿರಿಯ ಜೀವ ಜಾನಪದ ಶೈಲಿಯಲ್ಲಿ ನಾಚ್ಛಿಯಾರ್ ಅಮ್ಮನ ಕಥೆಯನ್ನು ಆರಂಭಿಸಿತು. “ ಈ ಊರಿನ ಗುಡ್ಡದ ಪಕ್ಕದಲ್ಲಿ ಒಂದು ಕೊಳವಿತ್ತು. ( ಅದು ಈಗಲೂ ದೇವಸ್ಥಾನದ ಬಳಿ ಇದೆ) ಮಕ್ಕಳಿಲ್ಲದ ಬ್ರಾಹ್ಮಣ  ಗೃಹಿಣಿಯೊಬ್ಬಳು ಒಂದು ದಿನ ಸ್ನಾನ ಮಾಡಲು ಕೊಳದ ಬಳಿ ತೆರಳಿದಾಗ,  ಕೊಳದ ಸೋಪಾನದ ಬಳಿ ಆಗ ತಾನೆ ಜನಿಸಿದ ಹೆಣ್ಣು ಮಗವೊಂದನ್ನು ಯಾರೋ ಒಬ್ಬ ತಾಯಿ ಬಿಟ್ಟು ಹೋಗಿದ್ದಳು. ಮುದ್ದಾದ  ಆ ಮಗುವನ್ನು ನೋಡಿದ  ಗೃಹಿಣಿ ಅದನ್ನು ತಂದು ಸಾಕಿ ಬೆಳಸಿದಳು. ಮುಂದೆ ಆ ಮಗು ಬೆಳೆದು ನಾಚ್ಚಿಯಾರ್ ಹೆಸರಿನಲ್ಲಿ ಯುವತಿಯಾದಳು. ಒಂದು ದಿನ ಆಕಾಶದಲ್ಲಿ ವಾಯು ವಿಹಾರ ಹೊರಟಿದ್ದ ತಿರುಪತಿ ವೆಂಕಟೇಶ್ವರನು ಈ ಯುವತಿಯ ಸೌಂದರ್ಯಕ್ಕೆ ಮರುಳಾಗಿ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದ. ಆಗ ಯುವತಿಯು “ನೀನು ನನ್ನ ಅಮ್ಮನ ಅಪ್ಪಣೆ ಪಡೆಯಬೇಕೆಂದು” ಷರತ್ತು ವಿಧಿಸಿದಳು. ಅದರಂತೆ ವೆಂಕಟೇಶ್ವರಸ್ವಾಮಿಯು ಆಕೆಯ ಅಮ್ಮನ ಬಳಿ ಹೋಗಿ ವಿನಂತಿಸಿಕೊಂಡ. ಆಗ ನಾಚ್ಛಿಯಾರ್ ಅಮ್ಮನ ಸಾಕುತಾಯಿ ಇಕ್ಕಟ್ಟಿಗೆ ಸಿಲುಕಿದಳು. ವೆಂಕಟೇಶ್ವರನಿಗೆ ಈಗಾಗಲೇ ವಿವಾಹವಾಗಿದೆ. ಆದರೂ ನನ್ನ ಮಗಳನ್ನು ಬಯಸುತ್ತಿದ್ದಾನೆ. ವಿವಾಹ ಮಾಡಿಕೊಟ್ಟರೆ, ತಿರುಪತಿಯಲ್ಲಿ ನನ್ನ ಮಗಳು ಸುಖವಾಗಿ ಇರಲಾರಳು. ಆದರೂ ಮಗಳನ್ನು ಕೇಳುತ್ತಿರುವವನು ವೆಂಕಟೇಶ್ವರ ಇಲ್ಲವೆನ್ನಲು ಸಾದ್ಯವಾಗುತ್ತಿಲ್ಲ. ಏನು ಮಾಡಲಿ? ಎಂದು ಯೋಚಿಸಿದಳು. ಕೊನೆಗೆ ಉಪಾಯವೊಂದು ಹೊಳೆದಂತಾಗಿ ಆತನಿಗೆ ಕೆಲವು ಷರತ್ತುಗಳನ್ನು ವಿಧಿಸಿದಳು. “ ವೆಂಕಟೇಶ್ವರಾ, ನಿನಗೆ ನನ್ನ ಮಗಳನ್ನು ಕೊಟ್ಟು ವಿವಾಹ ಮಾಡಿ ಕೊಡುತ್ತೀನಿ. ಆದರೆ, ಆಕೆಯನ್ನು ತಿರುಪತಿಗೆ ಕಳಿಸಿಕೊಡುವುದಿಲ್ಲ. ಮಕ್ಕಳಿಲ್ಲದ ನನಗೆ ಆಕೆ ಸರ್ವಸ್ವ. ಹಾಗಾಗಿ ಆಕೆ ಇಲ್ಲಿಯೇ ಇರಬೇಕು. ಜೊತೆಗೆ ಈ ಊರಿಗೆ ಅವಳ ಹೆಸರನ್ನು ಇಡಬೇಕು” ಎಂದಳು. ನಾಚ್ಛಿಯಾರಮ್ಮನನ್ನು ವಿವಾಹವಾಗಲು ತುದಿಗಾಲಲ್ಲಿ ನಿಂತಿದ್ದ ವೆಂಕಟೇಶ್ವರ ತಕ್ಷಣವೇ ಎಲ್ಲಾ ಷರತ್ತುಗಳನ್ನು ಒಪ್ಪಿಕೊಂಡ. ಅದರಂತೆ ಈ ಊರಿಗೆ ನಾಚ್ಚಿಯಾರಮ್ಮನ ಹೆಸರು ಬಂದಿತು. ಜೊತೆಗೆ ಇಲ್ಲಿ ನಿರ್ಮಾಣವಾಗಿರುವ ಪೆರುಮಾಳ್ ದೇವಸ್ಥಾನದಲ್ಲಿ ಪ್ರಥಮ ಪೂಜೆ ನಾಚ್ಛಿಯಾರ್ ಅಮ್ಮನಿಗೆ ಸಲ್ಲುತ್ತದೆ. ನಂತರ ಅಮ್ಮಾವ್ರ ಗಂಡನಿಗೆ ಸಲ್ಲುತ್ತದೆ’ ಎಂಬ ರೋಚಕವಾದ ಕಥೆಯನ್ನು ಹೇಳಿ ಮುಗಿಸಿದ.

                                             ( ಪೆರುಮಾಳ್ ದೇವಸ್ಥಾನ)

“ ಕಥೈ ಎಪ್ಪಡಿ ಇರುಕ್ಕು ವಾದ್ಯಾರ್?” ( ಕಥೆ ಹೇಗಿದೆ ಗುರುಗಳೆ) ಎಂದು ಎಲೆ ಅಡಿಕೆ ತೆಗೆದು ಬಾಯಲ್ಲಿ ಹಾಕಿಕೊಂಡ ಆ ಹಿರಿಯ ಜೀವ ನನ್ನ ಉತ್ತರಕ್ಕಾಗಿ ಎದುರು ನೋಡಿತು. “ಪೆರಿಯಾರ್ ( ಹಿರಿಯವರೇ) ಕಥೆಯೇನೊ ಚೆನ್ನಾಗಿದೆ. ಆದರೆ ಒಂದು ಪ್ರಶ್ನೆ, ವೆಂಕಟೇಶ್ವರ ಕಪ್ಪು ಬಣ್ಣದ ವ್ಯೆಕ್ತಿ ಅವನನ್ನು ನಿಮ್ಮೂರಿನ ಬ್ರಾಹ್ಮಣ ಸುಂದರಿ ಹೇಗೆ ಒಪ್ಪಿಕೊಂಡಳು? ಜೊತೆಗೆ ದೇವರುಗಳಲ್ಲಿ ತಿರುಪತಿ ತಿಮ್ಮಪ್ಪ ಸೂಪರ್ ಸ್ಠಾರ್ ರಜನಿ ಕಾಂತ್ ಇದ್ದಂಗೆ. ಅವನು ಹೇಗೆ ಪ್ರಥಮ ಪೂಜೆಯನ್ನು ಆಕೆಗೆ ಬಿಟ್ಟುಕೊಟ್ಟು, ಎರಡನೆಯ ಪೂಜೆಗೆ ಒಪ್ಪಿಕೊಂಡ? ಎಂಬ ಪ್ರಶ್ನೆಯನ್ನು ಆ ಹಿರಿಯ ಜೀವದ ಮುಂದಿಟ್ಟೆ.  “ವಾದ್ಯಾರ್, ನಿಮಗೆ ನಮ್ಮ ಹೆಣ್ಣು ಮಕ್ಕಳ ದೌರ್ಬಲ್ಯ ತಿಳಿದಿಲ್ಲ. “ ಸುಂದರಿ, ಜೀವನ ಪೂರ್ತಿ ನಿನ್ನ ಅಂಡನ್ನು ನಾನೇ ತೊಳಿತಿನಿ ಕಣೆ” ಅಂತಾ ಹೇಳಿಬಿಟ್ಟರೆ   ಸಾಕು ಮನಸ್ಸನ್ನು ಕರಗಿಸಿಕೊಂಡು ತಕ್ಷಣ ಒಪ್ಪಿಕೊಂಡು ಬಿಡುತ್ತಾರೆ” ಎಂದು ಬಾಯಲ್ಲಿರುವ ಎಲೆ ಅಡಿಕೆ ರಸ ಗಲ್ಲದ ಮೇಲೆ ಹರಿಯುವಂತೆ ಜೋರಾಗಿ  ನಗೆಯಾಡಿದ. ನಂತರ ತೀರಾ ಗಾಂಭಿರ್ಯದಿಂದ “ ನಿಮಗೊಂದು ಸತ್ಯ ಹೇಳಲಾ? ನಾವು ಗಂಡಸರು ಇದ್ದೀವಿಯಲ್ಲಾ, ಇದು ಹುಟ್ಟು ಹಲಾಲು ಕೋರರ ಸಂತತಿ. ಅಂಡು ತೊಳೆಯುತ್ತೇವೆ ಎಂದು ಅವರನ್ನು ನಂಬಿಸಿ, ವಂಚಿಸಿ ನಾವು ಮದುವೆಯಾಗುತ್ತೀವಿ.  ಆದರೇ,  ನಮ್ಮ ವೃದ್ಧಾಪ್ಯದ ದಿನಗಳಲ್ಲಿ ನಮಗೆ ಹೆಂಡತಿಯರಾಗಿ ಬಂದ ಆ ತಾಯಂದಿರು ನಮ್ಮ ತಿಕ ಮಕ ಎರಡನ್ನೂ ತೊಳೆದು ನಮ್ಮ ಪಾಲಿನ ಅಮ್ಮಂದಿರಾಗಿ ಬಿಡುತ್ತಾರೆ ಎನ್ನುತ್ತಾ ಮೌನಕ್ಕೆ ಜಾರಿತು. ಒಬ್ಬ ಅನಕ್ಷರಸ್ತ ಹಾಗೂ ಅಪಾರ ಜೀವನಾನುಭದ  ವ್ಯೆಕ್ತಿಯೊಬ್ಬನ  ಬಾಯಲ್ಲಿ  ಅನುಭವದ ಮಾತುಗಳು ಅನುಭಾವದ ಮಾತುಗಳಾಗಿ ಮಾರ್ಪಾಡಾಗುವ  ಬಗೆಯನ್ನು ಕಂಡು ನನಗೆ ಆಶ್ಚರ್ಯವಾಯಿತು. “ವಾದ್ಯಾರ್,  ಪೆರುಮಾಳ್ ದೇವಸ್ಥಾನದಲ್ಲಿ ಒಂದು ಗಂಟೆಗೆ ಬಾಗಿಲು ಹಾಕ್ ಬಿಡ್ತಾರೆ. ಮತ್ತೇ ನೀವು ಐದು ಗಂಟೆಯವರೆಗೆ ಕಾಯಬೇಕು ನಡೀರಿ ಬಿಟ್ಟು ಬರ್ತೀನಿ ಎನ್ನುತ್ತಾ ಎದ್ದು ನಿಂತ ಆ ವೃದ್ಧ  ತನ್ನ  ಪಂಚೆ ಬಿಗಿ ಮಾಡಿಕೊಳ್ಳುತ್ತಾ. ನಮ್ಮ ಮಾರಿಯಮ್ಮನೂ, ನಾಚ್ಛಿಯಾರಮ್ಮನೂ ಅಕ್ಕ ತಂಗಿಯರು” ಎಂದಾಗ ನನಗೆ ಆಶ್ಚರ್ಯವಾಯಿತು. ಅದೇಗೆ ಸಾಧ್ಯ? ನಮ್ಮ ಮಾರಿಯಮ್ಮ ಶೂದ್ರ ದೇವತೆ, ನಾಚ್ಛಿಯಾರಮ್ಮ ಬ್ರಾಹ್ಮಣ ದೇವತೆ ಅಲ್ಲವೆ? ಎಂದು ಪ್ರಶ್ನಿಸಿದೆ. ಅದಕ್ಕೂ ಆ ಹಿರಿಯ ಜೀವದ ಎದೆಯೊಳಗೆ  ಉತ್ತರವಿತ್ತು. ವಾದ್ಯಾರ್, ದೇವರಿಗೆ ಜಾತಿ ಎಲ್ಲಿದೆ? ನಾವು ಎಂದಾದರೂ ದೇವರುಗಳ ಜಾತಿ ಧರ್ಮ ನೋಡಿಕೊಂಡು ಕೈ ಮುಗಿತಿವಾ? ಕಣ್ಣಿಗೆ ಕಂಡ ಗುಡಿ ಗೋಪುರಗಳಿಗೆ ಕೈ ಮುಗಿಯುವ ನಮ್ಮೊಳಗೆ ಇಂತಹ ಭೇದ ಭಾವ ಇರಬಾರದು” ಎಂದು ಹೇಳುತ್ತಿದ್ದಂತೆ ನಮ್ಮ ಗ್ರಾಮೀಣ ಜನಪದರ ಜಗತ್ತು ಮತ್ತು ಅವರ ನಂಬಿಕೆಗಳು ಎಷ್ಟೊಂದು ವಿಶಾಲವಾಗಿವೆ ಅನಿಸಿತು. ಆ ಕ್ಷಣಕ್ಕೆ  ನಾವು ವಿಶ್ವ ವಿದ್ಯಾನಿಲಯಗಳಲ್ಲಿ ಕಲಿಯುವುದಕ್ಕಿಂತ ಹೆಚ್ಚಾಗಿ ಇಂತಹ ಮಹಾನುಭಾವರ ಬಳಿ ಕಲಿಯುವುದು ಬಹಳಷ್ಟಿದೆ ಎನಿಸಿತು.


ಸುಮಾರು ಮಧ್ಯಾಹ್ನ 12-40 ರ ಸಮಯಕ್ಕೆ ಮಾರಿಯಮ್ಮನ ದೇವಸ್ಥಾನದಿಂದ ಒಂದು ಕಿಲೊಮೀಟರ್ ದೂರವಿದ್ದ ಪೆರುಮಾಳ್ ದೇವಸ್ಥಾನವನ್ನು ತಲುಪಿದೆ. ಕಡಿದಾದ ಕಲ್ಲಿನ ಗುಡ್ಡವನ್ನು ಹಂತ ಹಂತವಾಗಿ ಕಡಿದು ಸುಮಾರು ಅರವತ್ತು ಅಡಿ ಎತ್ತರದಲ್ಲಿ ನಿರ್ಮಿಸಿರುವ ಗರ್ಭ ಗುಡಿ ಹಾಗೂ ಬೃಹತ್ ದೇವಸ್ಥಾನದ ನಿರ್ಮಾಣ ಅಚ್ಚರಿ ಮೂಡಿಸುತ್ತದೆ. ಈ ದೇಗುಲವು ವಿಜಯ ನಗರ ಅರಸರ ಕಾಲದಲ್ಲಿ ನಿರ್ಮಾಣಗೊಂಡಿದೆ. ಕೋಟೆಯ ಹೆಬ್ಬಾಗಿಲಿನಂತಹ ಮುಖ್ಯ ದ್ವಾರದ ಬಳಿ ಸುಮಾರು 90 ವರ್ಷ ವಯಸ್ಸಿನ ಅಜಾನುಬಾಹು ಮುಖ್ಯ ಅರ್ಚಕರು ಕುರ್ಚಿಯಲ್ಲಿ ಕುಳಿತಿದ್ದರು. ಉತ್ತರ ಭಾರತದಿಂದ ಬಂದಿದ್ದ ಪ್ರವಾಸಿಗರ ತಂಡಕ್ಕೆ ದೇಗುಲದ ಒಳಗೆ ಅವರ  ಸುಮಾರು ನಲವತ್ತು ವಯಸ್ಸಿನ ಪುತ್ರ ಹಾಗೂ  ಅರ್ಚಕ  ಇಂಗ್ಲೀಷ್ ಭಾಷೆಯಲ್ಲಿ ದೇವಸ್ಥಾನ ಇತಿಹಾಸವನ್ನು ವಿವರಿಸುತ್ತಿದ್ದ. ನಾನು ಪರಿಚಯ ಮಾಡಿಕೊಂಡು ಬಂದ ಉದ್ದೇಶವನ್ನು  ವಿವರಿಸಿದೆ. ವೈಷ್ಣವ ಬ್ರಾಹ್ಮಣರಾದ ಹಿರಿಯ ಅರ್ಚಕರು ಹೇಳಿದ ಕಥೆಯಲ್ಲಿ ಅಂತಹ ವೆತ್ಯಾಸವಿರಲಿಲ್ಲ. “ಕೊಳದಲ್ಲಿ ಹೆಣ್ಣು ಮಗು ಸಿಗಲಿಲ್ಲ, ಹೆಣ್ಣು ಮಗು ರೂಪದ ಬೊಂಬೆಯೊಂದು ಸಿಕ್ಕಿತು. ನಂತರ ದೇವರ ಆರ್ಶೀವಾದದಿಂದ ಬೊಂಬೆ ಮಗುವಾಗಿ ಜೀವ ತಳೆದು ಮಕ್ಕಳಿಲ್ಲದ ತಾಯಿಯ ಮಡಿಲು ತುಂಬಿತು” ಎಂದರು. ಜಾನಪದ ಮತ್ತು ವೈಷ್ಣವ ಕಥೆಗೂ ಸ್ವಲ್ಪ ಮಾತ್ರ ವ್ಯೆತ್ಯಾಸವಿತ್ತು.
ನಂತರ ನಿಧಾನವಾಗಿ ಹೆಜ್ಜೆ ಹಾಕುತ್ತಾ ದೇಗುಲದ ಒಳಗೆ ಕರೆದೊಯ್ದು ಅಲ್ಲಿನ ನಾಚ್ಛಿಯಾರಮ್ಮನ ವಿಗ್ರಹ, ವೆಂಕಟೇಶ್ವರ ಮತ್ತು ಪದ್ಮಾವತಿಯ ವಿಗ್ರಹಗಳನ್ನು ತೋರಿಸಿದರು. 


ಜೊತೆಗೆ ಅಪರೂಪದ ಐದು ಅಡಿ ಎತ್ತರದ ಗರುಡ ವಿಗ್ರಹವನ್ನು ಮತ್ತು ಉತ್ಸವ ಮೂರ್ತಿಯಾಗಿ ಬಳಕೆಯಾಗುವ ನಾಚ್ಛಿಯಾರಮ್ಮನ ಮೂರ್ತಿ ಹಾಗೂ ಮೂರ್ತಿಗೆ ಮಾಡುವ ಶೃಂಗಾರ ಇವುಗಳನ್ನು ವಿವರಿಸಿದರು.ನಾನು ಅವರಿಗೆ ನಮಸ್ಕರಿಸಿ ಹೊರಡುವ ವೇಳೆಗೆ ಮಧ್ಯಾಹ್ನ ಒಂದೂವರೆಯಾಗಿತ್ತು. “ ಅಷ್ಟು ದೂರದಿಂದ ಬಂದಿದ್ದೀರಿ ಪ್ರಸಾದ ಸ್ವೀಕರಿಸಿ” ಎನ್ನುತ್ತಾ ಒಂದು ದೊನ್ನೆ ಸಿಹಿ ಪೊಂಗಲ್ ಹಾಗೂ ಒಂದು ದೊನ್ನೆ ವಗ್ಗರಣೆ ಹಾಕಿದ ಮೊಸರನ್ನವನ್ನುನೀಡಿದರು. ಅವುಗಳನ್ನು ಸ್ವೀಕರಿಸಿ, ಆ ಕಾಲದ ದೇವದಾಸಿಯರ ಕುಂಭಾರತಿ ನೃತ್ಯಕ್ಕಾಗಿ ದೇಗುಲದ ಆವರಣದಲ್ಲಿ ನಿರ್ಮಿಸಲಾಗಿದ್ದ ಮಂಟಪದ ಕೆಳೆಗೆ ಕುಳಿತು ಅವುಗಳನ್ನು ತಿಂದು, ನೀರು ಕುಡಿದು, ಅನಿರೀಕ್ಷಿತವಾಗಿ ದಕ್ಕಿದ ಅನ್ನದ ಋಣಕ್ಕಾಗಿ ನಾಚ್ಛಿಯಾರಮ್ಮನಿಗೆ ಮತ್ತು ಅರ್ಚಕರಿಗೆ ನಮಸ್ಕರಿಸಿ, ತಿರುವರೂರಿನತ್ತ ಪ್ರಯಾಣ ಬೆಳಸಿದೆ.

( ವಿ.ಸೂ. ಕುಂಭಕೋಣಂ ನಗರದಿಂದ 11 ಕಿಲೋಮೀಟರ್ ದೂರವಿರುವ ಈ ಊರಿಗೆ ಪ್ರತಿ ಅರ್ಧ ಗಂಟೆಗೆ ಮಿನಿ ಬಸ್ ಗಳು ದೊರೆಯುತ್ತವೆ. ಜೊತೆಗೆ ತಿರುವರೂರಿಗೆ ಹೋಗುವ ಬಸ್ ಗಳಲ್ಲಿಯೂ ಸಹ ಹೋಗಬಹುದು) 

ಸೋಮವಾರ, ನವೆಂಬರ್ 9, 2015

ಟಿಪ್ಪು ಸುಲ್ತಾನ್- ಅಖಂಡ ಭಾರತದ ಕನಸುಗಾರ


ಟಿಪ್ಪು ಸುಲ್ತಾನ್ ಎಂಬುದು ಕೇವಲ ದೊರೆ ಅಥವಾ ಸಾಮಂತನೊಬ್ಬನ  ಹೆಸರು ಮಾತ್ರವಲ್ಲ, ಅದು ಅಖಂಡ ಭಾರತದ ಕನಸಿನ, ಶೌರ್ಯದ, ಧರ್ಮ ಸಹಿಷ್ಣುತೆಯ, ಮಾದರಿ ಆಡಳಿತದ ಹೀಗೆ ಹಲವು ಸಂಗಮಗಳ ಪ್ರತೀಕ. ಟಿಪ್ಪು ಸುಲ್ತಾನ್  ಸ್ವಾತಂತ್ರ್ಯ ಪೂರ್ವದ ಭಾರತ ದೇಶ ಕಂಡ ಒಬ್ಬ ಅಪ್ರತಿಮ ವೀರ ಸೇನಾನಿ ಹಾಗೂ ಶ್ರೀರಂಗಪಟ್ಟಣದ ದೊರೆ ಮಾತ್ರವಾಗಿರದೆಬ್ರಿಟೀಷ್ ಈಸ್ಟ್ ಇಂಡಿಯ ಕಂಪನಿಯಲ್ಲಿ ನಲುಗುತ್ತಿದ್ದ ಭಾರತವನ್ನು ಅವರ ಕಪಿಮುಷ್ಟಿಯಿಂದ ಬಿಡಿಸಲು ಕನಸು ಕಂಡು ನಿರಂತರ ಅವರೊಂದಿಗೆ ಸೆಣಸಿದ ಕನಸುಗಾರ. ಜೊತೆಗೆ ಹಗಲಿರುಳು ಬ್ರಿಟಿಷರನ್ನು ದುಃಸ್ವಪ್ನದಂತೆ ನಿರಂತರ ಕಾಡಿದ ಅಪ್ರತಿಮ ವೀರಸಾಮಾನ್ಯ ಸಿಪಾಯಿಯೊಬ್ಬನ ಪುತ್ರನಾಗಿ ಜನಿಸಿದ ಟಿಪ್ಪು ಸುಲ್ತಾನ್, ಒಬ್ಬ ದೊರೆಯಾಗಿದ್ದುಕೊಂಡು ಯುದ್ಧಭೂಮಿಯಲ್ಲಿ ಬ್ರಿಟೀಷರ ವಿರುದ್ಧ ಹೋರಾಡುತ್ತಲೇ  ಮಡಿದು ಹುತಾತ್ಮನಾದ ಭಾರತದ ಸ್ವಾತಂತ್ರ್ಯ ಸಂಗ್ರಾಮದ  ಮಹಾ ಯೋಧ. ಬ್ರಿಟೀಷ್ ಆಳ್ವಿಕೆಯ ಭಾರತದಲ್ಲಿ ಮೈಸೂರು ಸೇನೆಗೆ ತನ್ನ ಯುದ್ಧ ತಂತ್ರ, ಸಂಘಟನಾ ಚಾತುರ್ಯದಿಂದಾಗಿÀ ಹೈದರ್ ಆಲಿ ಮತ್ತು ಆತನ ಪುತ್ರ ಟಿಪ್ಪು ಸುಲ್ತಾನ್ ಇಬ್ಬರೂ ಜಾಗತಿಕ ಮನ್ನಣೆ ದೊರಕಿಸಿಕೊಟ್ಟರು. ಅಷ್ಟು ಮಾತ್ರವಲ್ಲದೆ, ಸಿರಿ ಸಂಪತ್ತು, ನೆಮ್ಮದಿ, ಸಹ ಬಾಳ್ವೆ, ಧರ್ಮ ಸಹಿಷ್ಣುತೆಯಲ್ಲಿ ಮೈಸೂರು ಸಂಸ್ಥಾನವನ್ನು ಭಾರತದಲ್ಲಿ ಉತ್ತುಂಗಕ್ಕೇರಿಸಿದ ಮಹಾನ್ ಮಾನವತಾವಾದಿಗಳು.
 ಟಿಪ್ಪು ಸುಲ್ತಾನ್ ಮಡಿದು ಎರಡು ಶತಮಾನ ಕಳೆದರೂ ಸಹ ಇಂದಿಗೂ ತನ್ನ ಹದಿನಾರು ವರ್ಷದ ಅರ್ಥಪೂರ್ಣ ಹಾಗೂ ಘನತೆಯ ಆಳ್ವಿಕೆ ಮತ್ತು  ಶೌರ್ಯ ಇವುಗಳ ಮೂಲಕ ಪ್ರಾತಃಸ್ಮರಣೀಯನಾಗಿದ್ದಾನೆ. ಇದಕ್ಕಿಂತ ಹೆಚ್ಚಾಗಿ ಬ್ರಿಟಿಷರೊಡನೆ ಕಾದಾಡುತ್ತಲೇ ಭಾರತದ ಇತರೆ ಸಂಸ್ಥಾನಗಳನ್ನು ಒಗ್ಗೂಡಿಸಲು ಶ್ರಮಿಸಿದ ಆತನ ಕಾಳಜಿ, ಭಾರತದ ಸಂಸ್ಖøತಿ ಕುರಿತಂತೆ ಆತನಿಗಿದ್ದ ಅತೀವ ಪ್ರೀತಿ ಮತ್ತು ಗೌರವಗಳಿಂದಾಗಿ ಟಿಪ್ಪು ಸುಲ್ತಾನ್ ಇವೊತ್ತಿಗೂ ಭಾರತದ ರಾಜಕಾರಣಕ್ಕೆ ಮಾದರಿಯಾಗಿದ್ದಾನೆ.
ದಕ್ಷಿಣ ಭಾರತದ ರಾಜಕೀಯ ಏಳು ಬೀಳುಗಳ ಇತಿಹಾಸದಲ್ಲಿ ಮೈಸೂರು ಸಂಸ್ಥಾನ ಅಥವಾ ಶ್ರೀರಂಗಪಟ್ಟಣದ ಹೈದರಾಲಿ ಹಾಗೂ ಆತನ ಪುತ್ರ ಟಿಪ್ಪು ಸುಲ್ತಾನ್ ಎರಡು ಹೆಸರುಗಳು ಅಜರಾಮರವಾಗಿ ಉಳಿದು ಹೋಗಿವೆ. ಹೈದರಾಲಿಯು ಯಾವುದೇ ರಾಜ ವಂಶಸ್ಥ ಕುಟುಂಬದಿಂದ ಬಂದವನಲ್ಲ. ಈಗಿನ ಬೆಂಗಳೂರು ಬಳಿಯ  ದೇವನ ಹಳ್ಳಿಯ ಬೂದಿಕೋಟೆಯಲ್ಲಿ 1721 ರಲ್ಲಿ ಸಾಮಾನ್ಯ ಮುಸ್ಲಿಂ ಕುಟುಂಬದಲ್ಲಿ ಜನಿಸಿದವನುಮನೆಯಲ್ಲಿನ  ಬಡತನವನ್ನು ತಾಳಲಾರದೆ, ಆತನ ತಾಯಿಯು ತನ್ನ ಸೋದರಳಿಯನಾದ ಹೈದರ್ ಸಾಬ್ ಮೂಲಕ ಮೈಸೂರು ಸೇನೆಗೆ ತನ್ನ ಇಬ್ಬರು ಮಕ್ಕಳಾದ ಷಹಬಾಚ್ ಮತ್ತು  ಹೈದರಾಲಿಯನ್ನು ಸೇನೆಗೆ ಸೇರಿಸಿದಳು. ಆರಂಭದ ದಿನಗಳಲ್ಲಿ ಮೈಸೂರು ಸೇನೆಯಲ್ಲಿ ಆನೆಯ ಮಾಹುತನಾಗಿ ಯುದ್ಧರಂಗದ ಮುಂಚೂಣಿಯಲ್ಲಿದ್ದು ಕೊಂಡು ಯುದ್ಧ ರಂಗದ ಕಲೆಗಳನ್ನು ಕರಗತ ಮಾಡಿಕೊಂಡ ಹೈದರಾಲಿ, 1749 ರಲ್ಲಿ ಮೈಸೂರು ಸೇನೆಯು ದೇವನಹಳ್ಳಿಗೆ ಮುತ್ತಿಗೆ ಹಾಕಿದಾಗ ತನ್ನ ಪರಾಕ್ರಮವನ್ನು ಅನಾವರಣಗೊಳಿಸುವುದರ ಮೂಲಕ ದೇವನಹಳ್ಳಿಯನ್ನು ಮೈಸೂರು ದೊರೆಗೆ ಗೆದ್ದು ಕೊಟ್ಟನು.
( ಹೈದರಾಲಿ)

1751 ರಲ್ಲಿ ಮೈಸೂರು ದೊರೆ ನಂಜರಾಜನು ತಿರುಚಿನಾಪಳ್ಳಿಗೆ ಮುತ್ತಿಗೆ ಹಾಕಿದಾಗ ಅಲ್ಲಿ ಬ್ರಿಟೀಷರ ಸೈನ್ಯದ ವಿರುದ್ಧ ಮೈಸೂರು ಸೇನೆಗೆ ಸೋಲುಂಟಾಯಿತು. ಆದರೆ, ಯುದ್ಧದಲ್ಲಿ ಹೈದರಾಲಿಗೆ ಯುರೋಪಿಯನ್ನರ ಯುದ್ಧ ತಂತ್ರ, ಕೌಶಲ್ಯ ಹಾಗೂ ಬಂದೂಕು, ಪಿರಂಗಿಗಳ ಬಳಕೆಯ ಪರಿಚಯವಾಯಿತು. ಬಡತನದ ಕಾರಣ ಅನಕ್ಷರಸ್ಥನಾಗಿದ್ದ ಹೈದರಾಲಿಯು ವಿಷಯಗಳನ್ನು ಗ್ರಹಿಸುವುದರಲ್ಲಿ ಸೂಕ್ಷ್ಮ ಹಾಗೂ ಚತುರಮತಿಯಾಗಿದ್ದನು. ಸೋಲಿನಿಂದಾಗಿ ಮೈಸೂರು ಸಂಸ್ಥಾನದಲ್ಲಿ ಅರಾಜಕತೆ ಉಂಟಾದ ಕಾರಣ, ವಂಶಪಾರಂಪರ್ಯವಾಗಿ ದಳವಾಯಿ ಹಾಗೂ ಮಂತ್ರಿ ಸ್ಥಾನ ಪಡೆಯುತ್ತಿದ್ದ ಕೆಲವು ವ್ಯೆಕ್ತಿಗಳ ಕೈಯಲ್ಲಿ ಅಧಿಕಾರದ ಕೇಂದ್ರೀಕೃತವಾಯಿತು, ಇದರಿಂದ ಬೇಸತ್ತ  ಹೈದರಾಲಿಯು 1761 ರಲ್ಲಿ  ಕ್ಷಿಪ್ರ ಕ್ರಾಂತಿಯಮೂಲಕ ಮೈಸೂರು ಅರಮನೆಯ ಆಡಳಿತ ಸೂತ್ರವನ್ನು ತನ್ನ ಕೈಗೆ ತೆಗೆದುಕೊಂಡನು. ವೇಳೆಗೆ ಸೇನೆಯ ದಂಡನಾಯಕನ ಸ್ಥಾನದಲ್ಲಿದ್ದ ಹೈದರಾಲಿ ತಾನು ಮೈಸೂರು ಸಂಸ್ಥಾನದ ದೊರೆ ಅಥವಾ ಒಡೆಯ ಎಂದು ಘೋಷಿಸಿಕೊಳ್ಳದೆ, ಯಾವುದೇ ರೀತಿಯ ರಾಜ ಪೋಷಾಕು ಧರಿಸದೆ, ಮೈಸೂರು ದೊರೆಯನ್ನು ಸಿಂಹಾಸನದ ಮೇಲೆ ಕೂರಿಸಿ, ತಾನು ರಾಜ ಕಾರ್ಯಕರ್ತ ಅಂದರೆ, ರಾಜನ ಪ್ರಧಾನ ಮಂತ್ರಿ ಮತ್ತು ಸೇನಾಧಿಪತಿ ಎಂದು ಬಹಿರಂಗವಾಗಿ ಘೋಷಿಸಿಕೊಂಡನು. ಪ್ರತಿ ವರ್ಷ ಪಾರಂಪರಿಕವಾಗಿ ನಡೆದುಕೊಂಡು ಬಂದಿದ್ದ ದಸರಾ ಹಬ್ಬದ ಆಚರಣೆಗೆ ಸಕಲ ಪ್ರೊತ್ಸಾಹವನ್ನು ನೀಡಿ, ತಾನೂ ಸಹ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದನು. (ಮುಂದಿನ ದಿನಗಳಲ್ಲಿ ಅಂದರೆ ಹೈದರಾಲಿಯ ನಿಧನಾನಂತರ ತನ್ನ ತಂದೆಯ ನಿಲುವಿಗೆ ಭಿನ್ನವಾಗಿ ಚಿಂತಿಸಿದ ಟಿಪ್ಪು ಸುಲ್ತಾನ್ ತಾನು ಮೈಸೂರಿನ ಬಾದಶಹನೆಂದು ಘೋಷಿಸಿಕೊಂಡನು) ಮೈಸೂರಿನ ರಾಜಕೀಯ ಇತಿಹಾಸದಲ್ಲಿ ಹೈದರಾಲಿಯ ಆಡಳಿತಕ್ಕೆ ಮಹತ್ವದ ಸ್ಥಾನವಿದೆ. ನೆರೆಯ ಮರಾಠರು, ಹಾಗೂ ಅಕ್ಕ ಪಕ್ಕದ ಸಂಸ್ಥಾನಗಳ ದಾಳಿ, ಅನೀರಿಕ್ಷಿತವಾಗಿ ಎದುರಾಗುತ್ತಿದ್ದ ಬರ ಮತ್ತು ಅತೀವೃಷ್ಟಿಗಳ ನಡುವೆ ಮೈಸೂರು ಸಂಸ್ಥಾನವನ್ನು ಸುಸ್ಥಿಯಲ್ಲಿ ಇಟ್ಟಿದ್ದನು. ಹೈದರಾಲಿಯು ಮರಣ ಹೊಂದುವ ವೇಳೆಗೆ ಮೈಸೂರು ಸಂಸ್ಥಾನ ವಿಸ್ತಾರಗೊಂಡು ಸುರಕ್ಷಿತವಾಗಿತ್ತು. ಉತ್ತರ ಭಾಗದ ಕೃಷ್ಣಾ ಮತ್ತು ತುಂಗಾಭದ್ರ ವರೆಗೆ ದಕ್ಷಿಣದಲ್ಲಿ ಕೇರಳದ ಮಲಬಾರ್ ವರೆಗೆ, ಪೂರ್ವದಲ್ಲಿ ತಮಿಳುನಾಡಿನ ವೆಲ್ಲೂರು ಪಶ್ಚಿಮದಲ್ಲಿ  ಕೊಡಗು, ಮಂಗಳೂರು, ಭಟ್ಕಳ, ಹೊನ್ನಾವರದವರೆಗೆ ಸಾಮ್ರಾಜ್ಯ ವಿಸ್ತರಣೆಗೊಂಡಿತ್ತು. ಮೈಸೂರು ದೊರೆಗಳ ಆಳ್ವಿಕೆಯಲ್ಲಿ ವಾರ್ಷಿಕವಾಗಿ ನಲವತ್ತು ಲಕ್ಷ ರೂಪಾಯಿ ಆದಾಯವಿದ್ದುದು ಹೈದರಾಲಿ ಆಳ್ವಿಕೆಯಲ್ಲಿ ಒಂದು ಕೋಟಿ ಹತ್ತು ಲಕ್ಷರೂಪಾಯಿವರೆಗೆ ಏರಿತ್ತುಚಿತ್ತೂರಿನ ನರಸಿಂಗರಾಯನ ಪೇಟೆ ಬಳಿ ನಡೆದ ಯುದ್ದದಲ್ಲಿ ಹೈದರಾಲಿಯು 1782 ಡಿಸಂಬರ್ ನಲ್ಲಿ ಮೃತನಾದನು. ಮೊದಲು ಕೋಲಾರದ ಫತೇ ಮಹಮದ್ ಗೋರಿಯ ಬಳಿ ಸಮಾಧಿ ಮಾಡಲಾಗಿದ್ದ ಅವನ ಕಳೇಬರವನ್ನು  ಶ್ರೀರಂಗಪಟ್ಟಣಕ್ಕೆ ತಂದು  ಟಿಪ್ಪುಸುಲ್ತಾನ್ ನಿರ್ಮಿಸಿದ ಬೃಹತ್ ಗೋರಿಯಲ್ಲಿ ಹೂಳಲಾಯಿತು.
ಟಿಪ್ಪುಸುಲ್ತಾನ್ ಆಡಳಿತ ಅವಧಿಯಲ್ಲಿನ ಬಹುತೇಕ ಗುಣಾತ್ಮಕ ಅಂಶಗಳಲ್ಲಿ ಆತನ ತಂದೆ ಹೈದರಾಲಿಯ ಪ್ರಭಾವವಿದೆ. ಹೈದರಾಲಿಯು ಉತ್ತಮ ಯೋಧ, ಆಕ್ರಮಣಶಾಲಿ ಮನೋಭಾವದ ವ್ಯಕ್ತಿತ್ವ, ಉತ್ತಮ ಆಡಳಿತಗಾರ, ಇವೆಲ್ಲವೂ ಟಿಪ್ಪುಸುಲ್ತಾನ್ ಗೆ ತಂದೆಯಿಂದ ಬಳುವಳಿಯಾಗಿ ಬಂದಿದ್ದವು. ಕಾರಣಕ್ಕಾಗಿಹೈದರ್ ನಾಮಕೃತಿ ರಚಿಸಿರುವ ನಲ್ಲಪ್ಪ ಎಂಬ ಅರಮನೆಯ ಇತಿಹಾಸಕಾರ ಹೈದರಾಲಿಯನ್ನುದೈವ ಬ್ರಹ್ಮ, ದ್ವೇಷ ರಹಿತಅಂದರೆ, ಬ್ರಾಹ್ಮಣರ ಕುರಿತು ದ್ವೇಷವಿಲ್ಲದ ದೊರೆ ಎಂದು ಬಣ್ಣಿಸಿದ್ದಾನೆ. ಟಿಪ್ಪುಸುಲ್ತಾನ್ ಅನುಕರಿಸಿದ ರಾಜನೀತಿಯಲ್ಲಿ ಹೈದರಾಲಿಯ ರಾಜನೀತಿಯ ಲಕ್ಷಣಗಳನ್ನು ನಾವು ಕಾಣಬಹುದಾಗಿದೆ. ಹೈದರಾಲಿಯು ತನ್ನ ಪುತ್ರ ಟಿಪ್ಪು ಸುಲ್ತಾನ್ ಬರೆದ ನೀತಿ ಪಾಠದ ಪತ್ರವೊಂದು ಉತ್ತಮ ರಾಜ್ಯಾಡಳಿತಕ್ಕೆ ನೀಡಿದ ಸಂವಿಧಾನದಂತಿದೆ.
ಮಗನೇ ನಾನು ನನ್ನ ಪೂರ್ವಿಕರಿಂದ ಪಡೆಯದ ಒಂದು ಸಾಮ್ರಾಜ್ಯವನ್ನು ನಿನಗೆ ಬಿಡುತ್ತಿದ್ದೇನೆ. ಹಿಂಸೆಯಿಂದ ಗಳಿಸಿದ ರಾಜದಂಡವು ಯಾವಾಗಲೂ ನಶ್ವರವಾದುದು. ನೀನು ನಿನ್ನ ರಾಜ್ಯದ ಆಂತರೀಕ ವ್ಯವಹಾರದಲ್ಲಿ ಎಳ್ಳಷ್ಟೂ ಹೆದರಬೇಕಾಗಿಲ್ಲ. ಆದರೆ, ನಿನ್ನ ದೃಷ್ಟಿಯನ್ನು ಬಹು ದೂರದವರೆಗೆ ಒಯ್ಯುವುದು ಅತ್ಯಾವಶ್ಯಕ. ಮೊಗಲ್ ಸಾಮ್ರಾಜ್ಯವು ಔರಂಗಜೇಬನ ಪತನದಿಂದಾಗಿ ಭಾರತವು ಏಷ್ಯಾದ ಸಾಮ್ರಾಜ್ಯಗಳಲ್ಲಿ ತನ್ನ ಸ್ಥಾನಮಾನಗಳನ್ನು ಕಳೆದುಕೊಂಡಿದೆ. ಸುಂದರನಾಡು ಅಂತಃಕಲಹದಿಂದ ಹರಿದು ಹಂಚಿ ಹೋಗಿದೆ. ಜುನರು ನಾನಾ ಮತಗಳಿಗೆ ಹಂಚಿ ಹೋಗಿದ್ದಾರೆ. ಹಾಗಾಗಿ ದೇಶ ಪ್ರೇಮವನ್ನು ಕಳೆದುಕೊಂಡಿದ್ದಾರೆ. ಹಿಂದುಗಳು ಶಾಸ್ತ್ರಾನುಭವದಿಂದ ಪಡೆದ ಶಾಂತಿಸೂತ್ರದಿಂದ ಮೃದುವಾಗಿ ತಮ್ಮ ನಾಡನ್ನು ರಕ್ಷಿಸಿಕೊಳ್ಳಲು ಅಸಮರ್ಥರಾಗಿದ್ದಾರೆ. ಆದ್ದರಿಂದ ನಾಡು ಪರಕೀಯರಿಗೆ ತುತ್ತಾಗಿದೆ. ಮಗನೇ ನಿನ್ನ ಪ್ರಯತ್ನಗಳನ್ನೆಲ್ಲಾ ಒಗ್ಗೂಡಿಸಿ ಈಗ ಭಾರತದಲ್ಲಿ ಸರ್ವ ಶಕ್ತರಾಗಿರುವ ಇಂಗ್ಲೀಷರನ್ನು ಯುದ್ಧದ ಮೂಲಕ ದುರ್ಬಲಗೊಳಿಸುವುದು ಅತ್ಯಾವಶ್ಯಕ. ಯುರೋಪಿಯನ್ನರಿಗೆ ನಿಖರವಾದ ಚಾತುರ್ಯವಿದೆ ಅವರ ಮೇಲೆ ಯಾವಾಗಲೂ ಅವರ ಅಸ್ತ್ರವನ್ನೇ ಉಪಯೋಗಿಸು. ಪ್ರೆಂಚರ ಸಹಾಯದಿಂದ ಮಾತ್ರ ನೀನು ಅವರನ್ನು ಮಣಿಸಬಲ್ಲೆ. ಪರಾಕ್ರಮವು ನಮ್ಮನ್ನು ಸಿಂಹಾಸನಕ್ಕೆ ಏರಿಸಬಲ್ಲದು. ಆದರೆ, ಚಕ್ರಾಧಿಪತ್ಯ ಕಾಯ್ದುಕೊಳ್ಳಲು ಅದು ಸಾಲದು. ಎಲ್ಲಕ್ಕಿಂತ ಮುಖ್ಯವಾಗಿ ಜನರ ಪುಕ್ಕಲುತನದಿಂದ ನಾವು ಸಿಂಹಾಸನವನ್ನು ಗೆಲ್ಲಬಹುದು, ಆದರೆ ಶೀಘ್ರವಾಗಿ ಅದನ್ನು ಜನರ ಪ್ರೀತಿಗೆ, ಗೌರಕ್ಕೆ ನಾವು ಒಪ್ಪಿಸದೇ ಹೋದಲ್ಲಿ ರಾಜ್ಯವು ನಮ್ಮ ಕೈ ಬಿಟ್ಟು ಹೋಗಬಹುದು

                                                    (ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಸಮಾಧಿಗಳು)
ಟಿಪ್ಪು ಸುಲ್ತಾನ್ ಗೆ ತನ್ನ ತಂದೆ ಹೈದರಾಲಿ ಹಾಕಿಕೊಟ್ಟ ಆಡಳಿತದ ಮಾರ್ಗದರ್ಶಿ ಸೂತ್ರಗಳು ಮೈಸೂರು ಸಂಸ್ಥಾನವನ್ನು ಸದಾ ಸುಸ್ಥಿಯಲ್ಲಿಡಲು ಕಾರಣವಾದವು. ತನ್ನ ಆಡಳಿತಾವಧಿಯಲ್ಲಿ ಬ್ರಿಟೀಷರು ಮಾತ್ರವಲ್ಲದೆ, ಪುಣೆಯ ಮರಾಠು, ಹೈದರಾಬಾದಿನ ನಿಜಾಮರು, ಕೇರಳದ ತಿರುವಾಂಕೂರಿನ ರಾಜ ಇವರ ಜೊತೆ ನಿರಂತರ ಕಾದಾಡುತ್ತಲೇ ಮೈಸೂರು ಸಂಸ್ಥಾನವನ್ನು ಭಾರತದ ಇತರೆ ಸಂಸ್ಥಾನಗಳಿಗಿಂತ ಎತ್ತರಕ್ಕೇರಿಸಿ ಇಡೀ ಜಗತ್ತು ತನ್ನತ್ತ ತಿರುಗಿ ನೋಡುವಂತೆ ಮಾಡಿದ.
1799 ಮೇ ತಿಂಗಳಿನಲ್ಲಿ ಶ್ರೀರಂಗಪಟ್ಟಣದಲ್ಲಿ ನಡೆದ ನಾಲ್ಕನೆಯ ಮೈಸೂರು ಯುದ್ಧದಲ್ಲಿ ಟಿಪ್ಪು ಮಡಿದ ನಂತರ ಆತನ ರಾಜ್ಯಾಡಳಿತ ಮತ್ತು ವ್ಯೆಕ್ತಿತ್ವ ಕುರಿತಂತೆ ಬ್ರಿಟೀಷ್ ವಸಾಹತು ಶಾಹಿ ಕಾಲದ ಬ್ರಿಟೀಷ್ ಇತಿಹಾಸಕಾರರಿಂದ ಚರಿತ್ರೆಯನ್ನು ಸೃಷ್ಟಿಸಲಾಗಿದ್ದು, ಬಹುತೇಕ ಕೃತಿಗಳಲ್ಲಿ ಟಿಪ್ಪು ಸುಲ್ತಾನ್ ನನ್ನು ಮತಾಂಧನೆಂದೂ, ಹಿಂದೂ ಧರ್ಮದ ದ್ವೇಷಿಯೆಂದು ಚಿತ್ರಿಸಲಾಗಿದೆ. ಇದು ಕೇವಲ ಒಂದು ಮಗ್ಗುಲಿನ ಚರಿತ್ರೆಯಾಗಿದೆ. ನಮ್ಮ ಮುಂದಿರುವ ಐತಿಹಾಸಿಕ ದಾಖಲೆಗಳು, ಅನೇಕ ಹಿಂದೂ ದೇವಾಲಯಗಳು, ಕ್ರೈಸ್ತ ಧರ್ಮದ ಪ್ರಾರ್ಥನಾ ಮಂದಿರಗಳು ಟಿಪ್ಪು ಮತ್ತು ಹೈದರಾಲಿಯ ಧರ್ಮ ಸಹಿಷ್ಣುತೆಗೆ ಸಾಕ್ಷಿಗಳಾಗಿವೆ. ಕೊಡಗಿನ ಕೊಡವ ಜನಾಂಗದ ಮೇಲೆ, ಕೇರಳ್ ಮಲಬಾರಿನ ನಾಯರ್ ಗಳ ಮೇಲೆ ಮತ್ತು ಮಂಗಳೂರಿನ ಕ್ಯಾಥೊಲಿಕ್ ಪಂಗಡದ ಕ್ರೈಸ್ತರ ಮೇಲೆ ಟಿಪ್ಪು ಸುಲ್ತಾನ್ ನಿರ್ಧಾಕ್ಷಿಣ್ಯವಾಗಿ ನಡೆದುಕೊಂಡಿರುವುದು ನಿಜವಾದರೂ, ಅದು ಯುದ್ಧ ನೀತಿಯ ಒಂದು ಅಂಗವಾಗಿದೆಯೆ ಹೊರತು, ಧರ್ಮದ ಹಿನ್ನಲೆಯಲ್ಲಿ ಅಲ್ಲ. ಕೇರಳದ ಕೊಚ್ಚಿನ್ ಬಂದರನ್ನು  ತಿರುವಾಂಕೂರು ದೊರೆ ಬ್ರಿಟೀಷರಿಗೆ ನೀಡಿದ್ದುಬ್ರಿಟೀಷ್ ಸೇನೆಯು ಮೈಸೂರಿನ ಮೇಲೆ ಮುತ್ತಿಗೆ ಹಾಕಲು  ಪಿರಿಯಾಪಟ್ಟಣ ಬಳಿ ಬೀಡು ಬಿಟ್ಟಿದ್ದ ಸಮಯದಲ್ಲಿ  ಕೊಡವರು ಅವರಿಗೆ ದಿನಸಿ, ಇನ್ನಿತರೆ ಅವಶ್ಯಕ ವಸ್ತುಗಳನ್ನು ನೀಡುವುದರ ಮೂಲಕ ನೆರವಾದ್ದು ಇವೆಲ್ಲವೂ ಟಿಪ್ಪು ಸುಲ್ತಾನ್ ಸಿಟ್ಟಿಗೆ ಕಾರಣವಾದ ಸಂಗತಿಗಳಾಗಿವೆ. ಕ್ರೈಸ್ತರ ಮೇಲಿನ ಸಿಟ್ಟಿಗೆ ಅವರು ಪರಂಗಿಯರು ಹಾಗೂ ಇಂಗ್ಲೇಂಡ್ ಮೂಲದವರು ಎಂಬುವುದು ಮುಖ್ಯವಾಗಿತ್ತು.


ಟಿಪ್ಪುಸುಲ್ತಾನ್ ತನ್ನ ಹದಿನಾರು ವರ್ಷಗಳ ಆಳ್ವಿಕೆಯಲ್ಲಿ ಮಾಡಿರುವ ಸಾಧನೆಯ ಹೆಜ್ಜೆ ಗುರುತುಗಳು ಇನ್ನೂ  ಹಸಿರಾಗಿ ಉಳಿದಿವೆ. ಅವುಗಳನ್ನು ಪಟ್ಟಿ ಮಾಡುತ್ತಾ ಹೋದರೆಹದಿನೆಂಟನೇ ಶತಮಾನದ ಕಾಲಘಟ್ಟದ ಟಿಪ್ಪು ಸುಲ್ತಾನನಿಗೆ ಇಂತಹ ಒಳನೋಟಗಳು ಇದ್ದವೆ? ಎಂದು ಆಶ್ಚರ್ಯವಾಗುತ್ತದೆ.. ಬಹುಮುಖಿ ಸಂಸ್ಸøತಿಯ ಆರಾಧಕ ಮತ್ತು ಪ್ರತಿನಿಧಿಯಾಗಿದ್ದ ಟಿಪ್ಪು ಸುಲ್ತಾನ್ ಜಾತಿ ಮತ್ತು ಧರ್ಮದಾಚೆಯ ನೆಲೆಯಲ್ಲಿ ನಿಂತು ನಾಡು ಮತ್ತು ನುಡಿಯನ್ನು ಪ್ರೀತಿಸಿದವನು. ಇದಕ್ಕೆ ಮುಖ್ಯ ಕಾರಣವೆಂದರೆ, ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಇವರ ವಂಶಸ್ಥರು ಸೂಫಿ ಸಂತ ಚಿಸ್ತಿ ಬಂಡೆ ನವಾಜ್ ಪರಂಪರೆಯಿಂದ ಬಂದವರಾಗಿದ್ದರು. ಟಿಪ್ಪುವಿನ ಕೆಳಗಿನ ಕ್ರಾಂತಿಕಾರಿ ಆಲೋಚನೆಗಳು ಮತ್ತು ಕಾರ್ಯಗಳು ನಮಗೆ ಇಂದಿಗೂ ಮಾದರಿಯಾಗಿವೆ.




ತನ್ನ ಸಂಸ್ಥಾನದಲ್ಲಿ  ಕೃಷಿಗೆ ಆಧ್ಯತೆ ನೀಡಿ ಶ್ರೀರಂಗಪಟ್ಟಣದ ಬಳಿ ಹರಿಯುವ ಕಾವೇರಿ ನದಿಗೆ ಮೊದಲ ಅಣೆಕಟ್ಟು ನಿರ್ಮಾಣ ಮಾಡಿದನು. ಇದೇ ಜಾಗದಲ್ಲಿ 1924 ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಸರ್. ವಿಶ್ವೇಶ್ವರಯ್ಯನವರ ಮೂಲಕ ಕೃಷ್ಣರಾಜ ಸಾಗರ ಎಂಬ ನೂತನ ಅಣೆಕಟ್ಟು ನಿರ್ಮಾಣ ಮಾಡಿದರು. ಚೀನಾದಿಂದ ರೇಷ್ಮೆ ಆಮದಾಗುತ್ತಿದ್ದನನ್ನು ಕಂಡ ಟಿಪ್ಪು, ಮೊದಲ ಬಾರಿಗೆ ಕನ್ನಡದ ನೆಲದಲ್ಲಿ ರೇಷ್ಮೆ ಬೆಳೆಯನ್ನು ಪರಿಚಯಿಸಿದನು. ಜೊತೆಗೆ ತನ್ನ ತಂದೆಯ ಹೈದರಾಲಿಯ ಕನಸಿನಂತೆ ಬೆಂಗಳೂರು ನಗರದಲ್ಲಿ ಪ್ರಪಥಮ ಜೈವಿಕ ಉದ್ಯಾನವನವನ್ನು ಲಾಲ್ ಬಾಗ್ ಹೆಸರಿನಲ್ಲಿ ಅಭಿವೃದ್ಧಿಪಡಿಸಿದನು. ಟಿಪ್ಪು ಸುಲ್ತಾನ್ ಪರಿಚಯಿಸಿದ ಜಗತ್ತಿನ ವಿವಿಧ ಬಗೆಯ ಮಾವಿನ ಹಣ್ಣುಗಳ ತಳಿಯನ್ನು ಹಾಗೂ ಮಾವಿನ ತೋಟಗಳನ್ನು ನಾವು ಇಂದಿಗೂ ಸಹ ಟಿ.ನರಸಿಪುರ ಮತ್ತು ಮಳ್ಳವಳ್ಳಿ ತಾಲ್ಲೂಕಿನ ಗ್ರಾಮಗಳಲ್ಲಿ ಕಾಣಬಹುದಾಗಿದೆ. ಸದಾ ಹೊಸ ತಂತ್ರಜ್ಞಾನಕ್ಕೆ ತುಡಿಯುತ್ತಿದ್ದ ಅವನು ಭಾರತದಲ್ಲಿ ಮೊದಲ ಬಾರಿಗೆ ಸೇನೆಯಲ್ಲಿ ಪ್ರೆಂಚರ ಸಹಾಯದಿಂದ ಕ್ಷಿಪಣಿ ಮತ್ತು ರಾಕೇಟ್ ಗಳನ್ನು ಬಳಸುವುದರ ಮೂಲಕ ಬ್ರಿಟೀಷರಿಗೆ ಸಿಂಹ ಸ್ವಪ್ನವಾದನು, ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಟಿಪ್ಪುವಿಗೆ ಎಷ್ಟೊಂದು ಆಸಕ್ತಿಯಿತ್ತು ಇತ್ತು ಎಂಬುದಕ್ಕೆ 1786 ಡಿಸಂಬರ್ 29 ರಂದು ಅವನು ಪರ್ಷಿಯನ್ ವಿದ್ವಾಂಸ  ಕಾಸ್ನಿ ಎಂಬಾತನಿಗೆ ಪತ್ರ ಬರೆಯುತ್ತಾಯುರೋಪಿನಿಂದ ಬರುತ್ತಿರುವ ಪುಸ್ತಕವೊಂದು ಶಾಖ ಮಾಪಕವನ್ನು ಕುರಿತ ವಿಷಯವನ್ನು ಒಳಗೊಂಡಿದೆ. ಅದನ್ನು ಪರ್ಷಿಯನ್ ಭಾಷೆಗೆ ಅನುವಾದ ಮಾಡಿ ನನಗೆ ಕಳುಹಿಸಿಕೊಂಡುಎಂದು ಬರೆದಿರುವ ದಾಖಲೆ ಇಂದಿಗೂ ಪತ್ರಾಗಾರದಲ್ಲಿ ಇದೆ.
ಮದ್ಯಪಾನದ ಕಡು ವಿರೋಧಿಯಾಗಿದ್ದ ಟಿಪ್ಪು ಸುಲ್ತಾನ್ ಇದರಿಂದ  ಜನರ ಆರೋಗ್ಯ ಮತ್ತು ನೈತಿಕತೆ ಕುಸಿಯುತ್ತದೆ ಎಂದು ಬಲವಾಗಿ ನಂಬಿದ್ದ ಕಾರಣಕ್ಕಾಗಿ ವಿದೇಶಿಯರನ್ನು ಹೊರತು ಪಡಿಸಿ, ಸ್ಥಳೀಯ ಜನರಿಗೆ ಮದ್ಯ ಮಾರಾಟವನ್ನು ನಿಷೇಧಿಸಿದ್ದ, ಕುರಿತು 1798 ಡಿಸಂಬರ್ 11 ರಂದು ರಾಲಿ ಎಂಬಾತನಿಗೆ ಟಿಪ್ಪು ಸುಲ್ತಾನ್ ಪತ್ರ ಬರೆದಿದ್ದಾನೆ. ನನ್ನ ರಾಜ್ಯದಲ್ಲಿ ಸಂಪೂರ್ಣವಾಗಿ ಮದ್ಯ ಪಾನ ನಿಷೇಧವಾಗುವುದು ನನ್ನ ಹೃದಯಕ್ಕೆ ಸಂತೋಷವಾಗುವ ವಿಚಾರ ಎಂದು ಬಣ್ಣಿಸಿಕೊಂಡಿದ್ದಾನೆ. ಟಿಪ್ಪು ಸುಲ್ತಾನ್ ಸೆರೆ ಹಿಡಿದ ಖೈದಿಗಳಿಗೆ ಚಿತ್ರ ಹಿಂಸೆ ನೀಡುತ್ತಿದ್ದ ಎಂದು ಇತಿಹಾಸದ ಪುಟಗಳಲ್ಲಿ ಆರೋಪಿಸಿಕೊಂಡು ಬರಲಾಗಿದೆ. ಆದರೆ, 1786 ರಲ್ಲಿ ಬ್ರಿಟನ್ ಸೇನೆಯ ಮುಖಂಡ ರಾಬ್ ಸನ್ ಎಂಬಾತ ದಾಖಲಿಸಿರುವ ಬರೆವಣಿಗೆ ರೀತಿ ಇದೆ. “ ಟಿಪ್ಪು ಸಾಹೇಬನು ಕರ್ನಲ್ ಬ್ರೈತ್ ವೈಟ್ ಮತ್ತು ಇತರೆ ಖೈದಿಗಳನ್ನು ತನ್ನ ಬಳಿ ಕರೆತರುವಂತೆ ಆಜ್ಞಾಪಿಸಿ ಅವರುಗಳ ಗಾಯವನ್ನು ಸ್ವತಃ ಪರೀಕ್ಷಿಸಿದನು. ನಂತರ ಗಾಯಾಳುಗಳಿಗೆ ಔಷಧೊಪಚಾರ ಮಾಡಲು ಪ್ರೆಂಚ್ ವೈದ್ಯರೊಡನೆ ಹಳ್ಳಿಗಳಿಗೆ ಕಳಿಸಿಕೊಟ್ಟನು. ಖೈದಿಗಳು ಧರಿಸಲು ನವಿರಾದ ಬೆಳ್ಳನೆಯ ಉಡುಪುಗಳನ್ನು ನೀಡಿದನು. ಗಾಯಗಳಿಗೆ ಪಟ್ಟಿ ಕಟ್ಟಲು ಒರಟು ಬಟ್ಟೆಗಳು ಮತ್ತು ಮುವತ್ತು ಪಗೋಡ ನಾಣ್ಯಗಳನ್ನು ನೀಡಿದನುಬ್ರಿಟೀಷ್ ಸೇನೆಯ ದಂಡನಾಯಕನನ್ನು ಟಿಪ್ಪು ಸುಲ್ತಾನ್ ಬಂಧಿಖಾನೆಯಲ್ಲಿ ಇಟ್ಟಿದ್ದನೇ  ಹೊರತು ನೆಲಮಾಳಿಗೆಯಲ್ಲಿ ಅಲ್ಲಇಂತಹ ಅನೇಕ ಅಮೂಲ್ಯ ದಾಖಲೆಗಳು ಟಿಪ್ಪು ಸುಲ್ತಾನನ ಮಾನವೀಯ ಮುಖಗಳ ಮೇಲೆ ಬೆಳಕು ಚಲ್ಲುತ್ತವೆ.




                                            (ಶೃಂಗೇರಿಯ ಶಾರದಾಂಬೆಯ ದೇಗುಲ ಮತ್ತು ವಿಗ್ರಹ)

ಟಿಪ್ಪು ಸುಲ್ತಾನ್ ಹಿಂದೂ ಧರ್ಮವನ್ನು ಮತ್ತು ಹಿಂದೂಗಳನ್ನು ಎಷ್ಟೊಂದು ಗೌರವ ಮತ್ತು ಭಕ್ತಿಯಿಂದ ಕಾಣುತ್ತಿದ್ದ ಎಂಬುದಕ್ಕೆ 1794 ರಲ್ಲಿ ರೊಡರಿಕ್ ಮೆಕನ್ಜಿ ಎಂಬಾತ ಬರೆದ ಬರೆವಣಿಗೆ ನಮ್ಮೆದುರು ಸಾಕ್ಷಿಯಾಗಿದೆ. ವರ್ಷವೊಂದಕ್ಕೆ ತಮಿಳುನಾಡು ಒಳಗೊಂಡಂತೆ ಮೈಸೂರು ಸಂಸ್ಥಾನದಲ್ಲಿ ಒಟ್ಟು 156 ದೇವಾಸ್ಥಾನಗಳಿಗೆ ಆರ್ಥಿಕ ನೆರವು ನಿಡುತ್ತಿದ್ದ ಸಂಗತಿಗಳು ದಾಖಲಾಗಿವೆ. ಕಾಂಚಿಪುರಂ ದೇವಸ್ಥಾನದ ನಿರ್ಮಾಣಕ್ಕೆ 10 ಸಾವಿರ ಚಿನ್ನದ ನಾಣ್ಯಗಳನ್ನು ಉಡುಗೊರೆಯಾಗಿ ನೀಡಿದ ಸಂಗತಿ, ಮೈಸೂರಿನ ಚಾಮುಂಡೇಶ್ವರಿ ಹಾಗೂ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನಗಳಿಗೆ ಚಿನ್ನ ಹಾಗೂ ಬೆಳ್ಳಿಯ ಪೂಜಾ ಸಾಮಾಗ್ರಿಗಳನ್ನು ನೀಡಿರುವ ವಿಷಯ, ಮೇಲುಕೋಟೆಯ ಚಲುವನಾರಾಯಣಸ್ವಾಮಿ ದೇವಸ್ಥಾನದ ಎರಡು ಪಂಗಡಗಳ ಆರ್ಚಕರ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿ, ದೇಗುಲಕ್ಕೆ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಕೊಡುಗೆಯಾಗಿ ನೀಡಿರುವ ಸಂಗತಿಗಳು ದಾಖಲಾಗಿವೆ. ಇವೆಲ್ಲಕ್ಕಿಂತ ಮುಖ್ಯವಾಗಿ ಮರಾಠರ ದಾಳಿಯಿಂದ ಅಂದರೆ, 1990-92 ನಡುವಿನ ಮೂರನೆಯ ಮೈಸೂರು ಯುದ್ಧದ ಸಮಯದಲ್ಲಿ ಸರ್ದಾರ್ ಪರುಶರಾಂ ಭಾವೂ ಮತ್ತು ಆತನ ಸೇನಾನಿ ಪಟವರ್ಧನ ಇವರುಗಳು ಬಿದನೂರು ಪ್ರಾಂತ್ಯದ ಮೇಲೆ ದಂಡೆತ್ತಿ ಬಂದಾಗ ಶೃಂಗೇರಿ ಶಾರದಾ ಪೀಠದ ಚಿನ್ನಾಭರಣಗಳು ಮತ್ತು ಅರವತ್ತು ಲಕ್ಷ ರೂಪಾಯಿಗಳನ್ನು ದೋಚಿ, ಶಾರದೆಯ ವಿಗ್ರಹವನ್ನು ಭಗ್ನಗೊಳಿಸಿದ್ದರು. ಹಾನಿಗೊಳಗಾದ ಹಾಗೂ ಜಗದ್ಗುರು ಶಂಕರಾಚಾಯ್ರು ಸ್ಥಾಪಿಸಿದ ಶೃಂಗೇರಿಯ ಶಾರದಾ ಪೀಠದ ಶಾರದೆಯ ವಿಗ್ರಹ ಮತ್ತು ದೇಗುಲ ಇವುಗಳ ದುರಸ್ತಿಗೆ ಅಪಾರವಾದ ನೆರವನ್ನು ನೀಡಿ ಶಾರದಾಂಬೆಯ ವಿಗ್ರಹದ ಪುನರ್ ಪ್ರತಿಷ್ಟಾಪನೆಗೆ ಟಿಪ್ಪು ನೆರವಾದನು. ಜೊತೆಗೆ ಶ್ರೀರಂಗಪಟ್ಟಣದಿಂದ ಎರಡು ನೂತನ ಪಲ್ಲಕ್ಕಿಗಳನ್ನು ಕಳುಹಿಸಿ, ಅವುಗಳಲ್ಲಿ ಒಂದನ್ನು ತಾಯಿ ಶಾರದಾಂಬೆಗೆ, ಮತ್ತೊಂದನ್ನು ಜಗದ್ಗುರುಗಳು ಬಳಸಿಕೊಳ್ಳಬೇಕೆಂದು ವಿನಂತಿಸಿಕೊಂಡಿದ್ದನು. ಶೃಂಗೇರಿಯ ಸುತ್ತ ಮುತ್ತ ಇದ್ದ ಬ್ರಾಹ್ಮಣರ ಅಗ್ರಹಾರಗಳ ಅಭಿವೃದ್ಧಿಗೆ ಒತ್ತು ನೀಡುವುದರ ಜೊತೆಗೆ ಶೃಂಗೇರಿ ಮಠದಲ್ಲಿ ಪ್ರತಿನಿತ್ಯ ಒಂದು ಸಾವಿರ ಬ್ರಾಹ್ಮಣರಿಗೆ ಅನ್ನ ದಾಸೋಹ ನಡೆಸುವಂತೆ ವಾರ್ಷಿಕ ಅನುದಾನವನ್ನು ಘೋಷಿಸಿದನು. 1793 ರಲ್ಲಿ ಶೃಂಗೇರಿಯ ಸ್ವಾಮೀಜಿ( ಶ್ರೀ ಸಚ್ಚಿದಾನಂದ ಭಾರತಿ) ಬರೆದಿರುವ ಪತ್ರದಲ್ಲಿ ಟಿಪ್ಪು ಸುಲ್ತಾನನುನೀವು ಜಗದ್ಗುರುಗಳು. ಲೋಕೋದ್ಧಾರಕ್ಕೂ, ಮಾನವ ಕಲ್ಯಾಣಕ್ಕೂ ನೀವು ಯಾವಾಗಲೂ ತಪಸ್ಸನ್ನು ಆಚರಿಸುತ್ತೀರಿ. ನಮ್ಮ ಏಳಿಗೆ ಮತ್ತು ಅಭಿವೃದ್ಧಿಗಾಗಿ ಪ್ರಾರ್ಥಿಸಿ. ನಿಮ್ಮಮತಹ ಪವಿತ್ರ ಜೀವಿಗಳು ಯಾವ ನಾಡಿನಲ್ಲೇ ವಾಸಿಸುತ್ತಿರಲಿ, ನಾಡು ಒಳ್ಳೆಯ ಮಳೆ ಬೆಳೆಗಳಿಂದ ವರ್ಧಿಸುತ್ತದೆಎಂದು ಪ್ರಾರ್ಥಿಸಿಕೊಂಡಿದ್ದಾನೆ. 1792 ರಿಂದ 1798 ರವರೆಗಿನ ಅವಧಿಯಲ್ಲಿ ಟಿಪ್ಪು ಸುಲ್ತಾನ್ ಶೃಂಗೇರಿ ಮಠಕ್ಕೆ ಬರೆದಿರುವ ಪತ್ರಗಳು ಈಗಲೂ ಸಹ ಸುರಕ್ಷಿತವಾಗಿವೆ. ಇದಕ್ಕಿಂತ ಮಹತ್ವದ ಸಂಗತಿಯೆಂದರೆ, ಮೈಸೂರು ನಗರದಲ್ಲಿ ಪ್ರಥಮವಾಗಿ ಕ್ರೈಸ್ತ ಧರ್ಮದ ಜನರ ಪ್ರಾರ್ಥನೆಗಾಗಿ ಟಿಪ್ಪು ಸುಲ್ತಾನ್ ಚರ್ಚ್ ಒಂದನ್ನು ನಿರ್ಮಾಣ ಮಾಡಿರುವುದನ್ನು ಪ್ರಸ್ತಾಪಿಸಿರುವ ಬಿ.. ಸಲಟೋರ್ ಎಂಬ ವಿದ್ವಾಂಸ ಟಿಪ್ಪು ಸುಲ್ತಾನ್ ನನ್ನುಹಿಂದೂ ಧರ್ಮದ ರಕ್ಷಕಎಂದು ಕರೆದಿದ್ದಾನೆ.
ಟಿಪ್ಪುವಿನ ಪರಧರ್ಮ ಸಹಿಷ್ಣುತೆಗೆ ಸಾಕ್ಷಿಯಾಗಿ ಬೆಂಗಳೂರು ನಗರದಲ್ಲಿ ಇರುವ ಬೇಸಿಗೆ ಅರಮನೆಗೆ ಹೊಂದಿಕೊಂಡಂತೆ ಇರುವ ಕೋಟೆ ಶ್ರೀ ವೆಂಕಟೇಶ್ವರ ದೇವಸ್ಥಾನ, ಅನತಿ ದೂರದಲ್ಲಿರುವ ಕೋಟೆ ಆಂಜನೇಯ ದೇವಸ್ಥಾನ ಹಾಗೂ ಶ್ರೀ ರಾಮ ಮಂದಿರ ಇವೆಲ್ಲವೂ ಟಿಪ್ಪುವಿನ ಹೃದಯ ವೈಶಾಲ್ಯತೆಗೆ ಸಾಕ್ಷಿಯಾಗಿವೆ. ಅಷ್ಟೇ ಏಕೆ? 1799 ರಲ್ಲಿ ಟಿಪ್ಪು ಸುಲ್ತಾನ್ ಯುದ್ಧದಲ್ಲಿ ಮಡಿದ ಸಂದರ್ಭದಲ್ಲಿ ಆತನ ಸಂಸ್ಥಾನದ ಮುಖ್ಯ ಮಂತ್ರಿಯಾಗಿದ್ದವರು ದಿವಾನ್ ಪೂರ್ಣಯ್ಯ, ಇವರು ಬ್ರಾಹ್ಮಣರು ಎಂಬುದನ್ನು ನಾವು ಮರೆಯಬಾರದು. ಟಿಪ್ಪು ಸುಲ್ತಾನ್ ಕೋಮುವಾದಿಯಾಗಿದ್ದರೆ, ಓರ್ವ ಬ್ರಾಹಣ ವ್ಯೆಕ್ತಿಗೆ ತನ್ನ ಅಸ್ಥಾನದಲ್ಲಿ ಅತ್ಯುನ್ನುತ ಹುದ್ದೆ ನೀಡಲು ಸಾಧ್ಯವಿತ್ತೆಭಾರತ ಹಾಗೂ ಕರ್ನಾಟಕ ನೆಲ ಕಂಡ ಇಂತಹ ಒಬ್ಬ ಧೀರೋತ್ತಮನನ್ನು ಮತ್ತು ಮಹಾನ್ ಮಾನವತಾವಾದಿಯನ್ನು ಸ್ಮರಣೆ ಮಾಡಿ ಗೌರವಿಸುವುದೆಂದರೆ, ಅದು ನಮ್ಮನ್ನು ನಾವು ಗೌರವಿಸಿಕೊಂಡಂತೆ.


(ಟಿಪ್ಪು ಜಯಂತಿ ಆಚರಣೆ ಅಂಗವಾಗಿ ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆಯ ಕೈ ಪಿಡಿಗೆ ಸಿದ್ಧಪಡಿಸಿದ ಲೇಖನ ಹಾಗೂ ವಾರ್ತಾ ಭಾರತಿ ದಿನ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

ಗಾಂಧೀಜಿಯವರನ್ನು ಅಗ್ನಿ ಪರೀಕ್ಷೆಗೆ ಒಡ್ಡಿದ ಬಂಡಾಯ ಮನೋಭಾವದ ಶಿಷ್ಯ


ಇದು ಮೂರು ತಿಂಗಳ ಹಿಂದಿನ ಸಂಗತಿ. ಮಹಾತ್ಮ ಗಾಂಧಿಯವರ ಶಿಷ್ಯ ಪರಂಪರೆ ಕುರಿತು ನಾನು ಬರೆದ “ ಗಾಂಧಿಗಿರಿಯ ಫಸಲುಗಳು” ಎಂಬ ಕೃತಿಗಾಗಿ ಅವರ ಶಿಷ್ಯರ ಕುರಿತು ಅಧ್ಯಯನದಲ್ಲಿ ನಿರತನಾಗಿದ್ದೆ. ಈ ಸಂದರ್ಭದಲ್ಲಿ ಗಾಂಧಿ ಕುರಿತು ಕಳೆದ ನಲವತ್ತು ವರ್ಷಗಳಿಂದ ಅಧ್ಯಯನದಲ್ಲಿ ನಿರತರಾಗಿರುವ ಆಸ್ಟ್ರೇಲಿಯಾದ ಸಮಾಜ ವಿಜ್ಞಾನಿ ಪ್ರೊ. ಥಾಮಸ್ ವೆಬರ್ ಅವರ “ Gandhi At First Sight”  ಎಂಬ ಕೃತಿ ಓದುತ್ತಿರುವಾಗ ನನಗೆ ಗಾಂಧೀಜಿಯವರ ಬಂಡಾಯ ಶಿಷ್ಯರೊಬ್ಬರ ಪರಿಚಯವಾಯಿತು. ಅವರು ಬಂಗಾಳದ ನಿರ್ಮಲ್ ಕುಮಾರ್ ಬೋಸ್. ಅವರು ಕುರಿತು ನಾನು ಈವರೆಗೆ ಕೇಳಿರಲಿಲ್ಲ, ಜೊತೆಗೆ ಓದಿರಲಿಲ್ಲ. ಗಾಂಧೀಜಿಯವರ ಅಂತಿಮ ವರ್ಷಗಳಲ್ಲಿ ಅಂದರೆ, 1947 ರ ಮೊದಲ ಭಾಗದಲ್ಲಿ ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಗಾಂಧೀಜಿಯವರ ಕಾರ್ಯದರ್ಶಿಯಾಗಿ ಕೆಲಸ ಮಾಡಿದ ಬೋಸ್ ರವರು 1947 ರ ಮಾರ್ಚ್ ತಿಂಗಳಿನಲ್ಲಿ ಗಾಂಧೀಜಿ  ನಡೆಸಿದ ಬ್ರಹ್ಮ ಚರ್ಯ ಪ್ರಯೋಗವನ್ನು ಖಂಡಿಸಿ, ಅವರ ವಿರುದ್ಧ ಸಿಡಿದೆದ್ದವರು. ಜೊತೆಗೆ ತನ್ನ ಮಾನಸಿಕ ಗುರು ಗಾಂಧಿಯವರನ್ನು ಯಾವುದೇ ಮುಲಾಜಿಲ್ಲದೆ ಅಗ್ನಿ ಪರೀಕ್ಷೆಗೆ ಒಳಪಡಿಸಿದವರು.

ಥಾಮಸ್ ವೆಬರ್ ರವರು ನಿರ್ಮಲ ಕುಮಾರ್ ಬೋಸ್ ಬರೆದ “ My Days with Gandhi” ಎಂಬ ಕೃತಿಯನ್ನು ಗಾಂಧಿ ಕುರಿತಂತೆ ಭಾರತದಲ್ಲಿ ಪ್ರಕಟವಾಗಿರುವ ಕ್ಲಾಸಿಕ್ ಕೃತಿ ಎಂದು ಬಣ್ಣಿಸಿದ್ದಾರೆ. 1953 ರಲ್ಲಿ ಪ್ರಕಟವಾಗಿರುವ ಈ ಕೃತಿಯನ್ನು ಓರಿಯಂಟ್ ಬ್ಲಾಕ್ ಸ್ವಾನ್ ಎಂಬ ಪ್ರಕಾಶನ ಸಂಸ್ಥೆ 1974 ಮತ್ತು 1999 ರಲ್ಲಿ ಮರು ಮುದ್ರಣ ಮಾಡಿದೆ. ಎರಡು ತಿಂಗಳ ಹುಡುಕಾಟದ ನಂತರ  ಈ ಕೃತಿ ಕಳೆದ ವಾರ ನನಗೆ ದಕ್ಕಿತು. 260 ಪುಟಗಳ ಈ ಕೃತಿಗೊಂದು ದೊಡ್ಡ ಇತಿಹಾಸವಿದೆ. ಗಾಂಧೀಜಿಯವರ ಬ್ರಹ್ಮ ಚರ್ಯ ಕುರಿತು ಆಕ್ರೋಶ ವ್ಯಕ್ತ ಪಡಿಸಿ, ಅವರ ಆತ್ಮ ಸಾಕ್ಷಿಗೆ ಯಾವೊಬ್ಬ ಶಿಷ್ಯನೂ ಹಾಕಲಾರದಂತಹ ಮಾರ್ಮಿಕ ಪ್ರಶ್ನೆಗಳನ್ನು ಕೇಳಿದ ನಿರ್ಮಲ್ ಕುಮಾರ್ ಬೋಸ್ ಅವರಿಂದ ದೂರವಾದರೂ ಅವರ ಮೇಲಿನ ಗೌರವ ಕಳೆದುಕೊಂಡಿರಲಿಲ್ಲ. 1948 ರಲ್ಲಿ ಗಾಂಧೀಜಿ ಹತ್ಯೆಯಾದ ನಂತರ ಅವರ ನೆನಪಿನಲ್ಲಿ ತಮ್ಮ ಒಡನಾಟದ ನೆನಪುಗಳನ್ನು ಕುರಿತು ಈ ಕೃತಿಯನ್ನು ರಚಿಸಿ, ಗಾಂಧೀಜಿರವರ ಸಾಹಿತ್ಯದ ಪ್ರಕಟಣೆಗೆ ಮೀಸಲಾಗಿರುವ ಅಹಮದಾಬಾದಿನ ನವಜೀವನ ಟ್ರಸ್ಟ್ ಗೆ ಪ್ರಕಟಣೆಗಾಗಿ ಕಳಿಸಿಕೊಟ್ಟರು. ಆದರೆ, “ಬ್ರಹ್ಮ ಚರ್ಯ ಪ್ರಯೋಗ ಕುರಿತಾದ ನಿಮ್ಮ ಹಾಗೂ ಗಾಂಧೀಜಿ ನಡುವೆ ನಡೆದಿರುವ ಪತ್ರ ವ್ಯವಹಾರದ ಭಾಗವನ್ನು ತೆಗೆದು ಹಾಕಿದರೆ ಪ್ರಕಟಿಸುತ್ತೇವೆ” ಎಂಬ ಷರತ್ತನ್ನು ಬೋಸ್ ರವರ ಮುಂದಿಟ್ಟಿತು. ಇದಕ್ಕೆ ಒಪ್ಪದ ನಿರ್ಮಾಲ್ ಕುಮಾರ್ ಬೋಸ್ ಅಂತಿಮವಾಗಿ 1953 ರಲ್ಲಿ ತಾವೇ ಸ್ವತಃ ಪರಕಟಿಸಿದರು. ಥಾಮಸ್ ವೆಬರ್ ಹೇಳಿದಂತೆ ನಿಜಕ್ಕೂ ಈ ಕೃತಿ ಕ್ಲಾಸಿಕ್ ಕೃತಿ ಹೌದು. ಪುಟ 133 ರಿಂದ 178 ರವರೆಗೆ ಸುಮಾರು 35 ಪುಟಗಳಲ್ಲಿ ಹರಡಿರುವ ಬ್ರಹ್ಮ ಚರ್ಯ ಪ್ರಯೋಗ ಕುರಿತಾದ  ಗುರು-ಶಿಷ್ಯರ ವಾದ – ಪ್ರತಿವಾದ ನಿಜಕ್ಕೂ ನಮ್ಮನ್ನು ದಂಗು ಪಡಿಸುತ್ತದೆ. ಕೃತಿಯುದ್ದಕ್ಕೂ ಗಾಂಧೀಜಿ ತಮ್ಮ ಪ್ರಯೋಗಕ್ಕೆ ಬಳಸಿಕೊಂಡ ಮನು ಮತ್ತು ವಿಭಾ ಗಾಂಧಿ ಹಾಗೂ ಅವರ ವೈದ್ಯೆಯಾಗಿದ್ದ ಸುಶೀಲಾ ನಾಯರ್ ರವರನ್ನು  ಎ.ಬಿ.ಸಿ. ಎಂದು ಬೋಸ್ ರವರು, ಅವರ ಮಾನಸಿಕ ತುಮಲಗಳು ಮತ್ತು ಬ್ರಹ್ಮ ಚರ್ಯ ಕುರಿತಂತೆ ಮನೋವಿಶ್ಲೇಷಣೆಗಳನ್ನು ಗಾಂಧಿಯವರ ಮುಂದಿಡುತ್ತಾ, ತಮ್ಮ ಗುರುವನ್ನು ವಿಚಲಿತರನ್ನಾಗಿ ಮಾಡುತ್ತಾರೆ. 


ಆಶ್ಚರ್ಯಕರ ಸಂಗತಿಯೆಂದರೆ, ಗಾಂಧೀಜಿಯವರ ತಮ್ಮ ಮಗನ ವಯಸ್ಸಿನ ಶಿಷ್ಯ ಎತ್ತಿದ ಎಲ್ಲಾ ರೀತಿಯ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸುತ್ತಾ ಹೋಗುತ್ತಾರೆ. ಕೊನೆಗೆ ತಮ್ಮ ಪ್ರಯೋಗ ಕುರಿತಂತೆ ಹರಿಜನ ಪತ್ರಿಕೆಯಲ್ಲಿ ಐದು ಲೇಖನಗಳನ್ನು ಬರೆದು ಪ್ರಕಟಿಸುತ್ತಾರೆ. ಇದೂ ಸಾಲದೆಂಬಂತೆ ತಮ್ಮ ಪ್ರಾರ್ಥನಾ ಸಮಯದಲ್ಲಿ ನಿರ್ಮಲ್ ಕುಮಾರ್ ಎತ್ತಿರುವ ಪ್ರಶ್ನೆಗಳನ್ನು ಪ್ರಸ್ತಾಪಿಸಿ ಅವುಗಳಿಗೆ ವಿವರಣೆ ನಿಡುತ್ತಾರೆ. ಆದರೆ, ಯಾರೊಬ್ಬರೂ ಗಾಂಧೀಜಿಯವರ ವಾದವನ್ನು ಒಪ್ಪುವುದಿಲ್ಲ. ಆದರೆ, ಗಾಂಧೀಜಿಯವರು ತಾವು ಇಂಗ್ಲೇಂಡ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗಲೂ ಇಂತಹ ಪ್ರಯೋಗ ನಡೆಸಿ ಮನಸ್ಸನ್ನು ನಿಗ್ರಹಿಸಿಕೊಳ್ಳುತ್ತಿದ್ದೆ ಎಂದು ಹೇಳಿಕೊಳ್ಳುವುದರ ಮೂಲಕ ತಮ್ಮ ಬ್ರಹ್ಮ ಚರ್ಯೆ ಪ್ರಯೋಗ ಕುರಿತು ಯಾವುದೇ ವಿಷಾದ ವ್ಯಕ್ತ ಪಡಿಸುವುದಿಲ್ಲ.
1992 ರಿಂದ ನಾನು ಗಾಂಧಿ ಕುರಿತಂತೆ ಮಾತನಾಡುತ್ತಾ, ಬರೆಯುತ್ತಾ ಬಂದಿದ್ದೀನಿ. ಆದರೆ, ನನ್ನ ದೃಷ್ಟಿಯಲ್ಲಿ ಪೂನಾ ಒಪ್ಪಂಧ ಮತ್ತು ಬ್ರಹ್ಮ ಚರ್ಯೆಯ ಪ್ರಯೋಗ  ಇವೆರೆಡೂ ಗಾಂಧೀಜಿಯವರ ಬದುಕಿನಲ್ಲಿ ಚಾರಿತ್ರಿಕ ಪ್ರಮಾದಗಳು. ಈ ನನ್ನ ನಂಬಿಕೆ ಮತ್ತಷ್ಟು ಬಲವಾಯಿತು.

ಭಾನುವಾರ, ನವೆಂಬರ್ 8, 2015

ಬಿಹಾರ ಚುನಾವಣೆ- ಮಂತ್ರವಾಗದ ಮೋದಿಯವರ ಮಾತುಗಳು



ಕಳೆದ ಒಂದೂವರೆ ವರ್ಷದ ಹಿಂದೆ ಕೇಂದ್ರದಲ್ಲಿ ಆಡಳಿತದ ಚುಕ್ಕಾಣಿ ಹಿಡಿದ ನರೇಂದ್ರ ಮೋದಿಯವರು ತಾವಾಡುವ ಮಾತುಗಳಲ್ಲಿ ಅಪಾರ ನಂಬಿಕೆಯಿಟ್ಟವರು. ಇದೇ ನೆಲೆಯಲ್ಲಿ ಇಡೀ ದೇಶದಲ್ಲಿ ಬಿ.ಜೆ.ಪಿ. ಪಕ್ಷದ ಸಾಮ್ರಾಜ್ಯವನ್ನು ವಿಸ್ತರಿಸುವ ಕನಸು ಕಂಡವರು. ಆದರೆ, ಅವರ ಕನಸಿನ ಕುದುರೆಯ ನಾಗಾಲೋಟಕ್ಕೆ ಬಿಹಾರದಲ್ಲಿ ಜೆ.ಡಿ.ಯು. ಪಕ್ಷದ ನಿತೀಶ್ ಕುಮಾರ್ ಭದ್ರವಾದ ಕಡಿವಾಣ ಹಾಕಿದ್ದಾರೆ. ಭಾರತದ  ಪ್ರಧಾನಿಯಾದ ನಂತರ ನರೇಂದ್ರ ಮೋದಿಯವರಿಗೆ ಇದು ಎರಡನೆಯ ಬಾರಿ ಆಗುತ್ತಿರುವ  ಮುಖಭಂಗ. ಕೇಂದ್ರಾಡಳಿತ ಪ್ರದೇಶವಾದ ದೆಹಲಿಯ ಚುನಾವಣೆಯಲ್ಲಿ ಅಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಮೋದಿಯವರಿಗೆ ಚುನಾವಣೆಯಲ್ಲಿ ಮಣ್ಣು ಮುಕ್ಕಿಸಿದ್ದರು. ಈ ಸೋಲಿನ ಹಿನ್ನಲೆಯಲ್ಲಿ ಭಾರಿ ಸಿದ್ಧತೆ ಮತ್ತು ಚಾಣಕ್ಷ ನಡೆಗಳ ಮೂಲಕ ಬಿಹಾರದ ಚುನಾವಣೆಗೆ ಇಳಿದ ಮೋದಿ ಮತ್ತು ಅವರ ಆಪ್ತ ಅಮಿತ್ ಷಾ ಅವರ ಮೋಡಿಗೆ ಮತ್ತು ಆಮೀಷಕ್ಕೆ ಬಿಹಾರದ ಜನತೆ ಮರುಳಾಗಲಿಲ್ಲ. ಚುನಾವಣೆಗೆ ಮುನ್ನ ನರೇಂದ್ರ ಮೋದಿಯವರು  ಬಿಹಾರ ರಾಜ್ಯಕ್ಕೆ ಘೋಷಿಸಿದ ಒಂದು ಕಾಲು ಲಕ್ಷ ಕೋಟಿಯ ವಿಶೇಷ ಪ್ಯಾಕೇಜ್ ಗೆ ಅಲ್ಲಿನ ಮತದಾರರು ಚುನಾವಣಾ ಫಲಿತಾಂಶದ ಮೂಲಕ ಬೆನ್ನು ತಿರುಗಿಸಿದ್ದಾರೆ. ಕಣ್ಣಿಗೆ ಕಾಣದ ಕನಸಿನ ಗೋಪುರಕ್ಕಿಂತ ಕಣ್ಣೆದುರುವ ಇರುವ  ನೈಜವಾದ ಪುಟ್ಟ ಗುಡಿಸಲು ನಮಗೆ ಮುಖ್ಯ ಎಂಬ ಸಂದೇಶವನ್ನು ಮೊದಿಗೆ ರವಾನಿಸಿದ್ದಾರೆ.
ಬಿಹಾರ ಚುನಾವಣೆಯಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆ.ಡಿ.ಯು. ಮತ್ತು , ಲಾಲು ಪ್ರಸಾದರ ಆರ್.ಜೆ.ಡಿ ಹಾಗೂ ಕಾಂಗ್ರೇಸ್ ಪಕ್ಷ ಇವುಗಳ ಮೈತ್ರಿ ಕೂಟದ ಈ ಗೆಲವು ಎನ್.ಡಿ.ಎ. ಮೈತ್ರಿ ಕೂಟಕ್ಕೆ ಹಲವಾರು ಎಚ್ಚರಿಕೆಯ ಸಂದೇಶಗಳನ್ನು ಹಾಗೂ ಬಡ ಭಾರತೀಯನ ಮನದಾಳದ ಇಂಗಿತವನ್ನು ರವಾನಿಸಿವೆ. ಹಲವಾರು ಜ್ವಲಂತ ಸಮಸ್ಯೆಗಳ ನಡುವೆ ಅಂದರೆ, ಹಸಿವು, ಕುಡಿಯುವ ಶುದ್ಧನೀರು, ಆರೋಗ್ಯ, ಶಿಕ್ಷಣ ಹಾಗೂ ವಸತಿ ಇವುಗಳು ನಮಗೆ ಮುಖ್ಯವೇ ಹೊರತು, ನೀವು ಪ್ರತಿಪಾದಿಸುತ್ತಿರುವ ಅಥವಾ ಈ ದೇಶದ ಸಮಾಜದ ಮುಖ್ಯವಾಹಿನಿಗೆ ತಂದು ಚರ್ಚಿಸುತ್ತಿರುವ ಗೋ ಮಾಂಸ ಸೇವನೆ ಅಥವಾ ಭಗವದ್ಗೀತೆ ಮಾತ್ರ ಹಿಂದೂ ಪವಿತ್ರ ಗ್ರಂಥ ಇಂತಹ ಕ್ಷುಲ್ಲಕ ಸಂಗತಿಗಳು ನಮಗೆ ಮುಖ್ಯವಲ್ಲ ಎಂದು ಕಪಾಳಕ್ಕೆ ಹೊಡೆದಂತೆ ಮತದಾರರು ಪ್ರತಿಕ್ರಿಯಿಸಿರುವುದನ್ನು ನಾವು ಬಿಹಾರ ಚುನಾವಣೆಯ ಫಲಿತಾಂಶದಲ್ಲಿ ಕಾಣಬಹುದು.

ಗ್ರಾಮಗಳ ಮತ್ತು ಬಡವರು ಹಾಗೂ ಹಿಂದುಳಿದ ವರ್ಗದವರ ತೊಟ್ಟಿಲಿನಂತಿರುವ ಬಹು ಸಂಸ್ಕೃತಿ ಹಾಗೂ ಬಹು ಮುಖಿ ಸಮಾಜವನ್ನು ಒಳಗೊಂಡಿರುವ ಭಾರತಕ್ಕೆ ಬೇಕಾಗಿರುವುದು ಮೇಕಿಂಗ್ ಇಂಡಿಯವೂ ಅಲ್ಲ, ಅಥವಾ ಡಿಜಿಟಲ್ ಇಂಡಿಯವೂ ಅಲ್ಲ, ಇದಕ್ಕಿಂತ ಮುಖ್ಯವಾಗಿ ಉಳ್ಳವರ ಭಾರತದೊಳಗೆ ಇಲ್ಲದವರ ಭಾರತದಲ್ಲಿ ಎಲ್ಲ ಧರ್ಮ ಮತ್ತು ಜಾತಿಗಳ ನಡುವೆ ಸಹಬಾಳ್ವೆ ಹಾಗೂ ಹಸಿವು, ನೀರಡಿಕೆಯ ನಡುವೆಯೂ ಭೂಮಿಯನ್ನು ಹಾಸಿಗೆಯನ್ನಾಗಿ ಮಾಡಿ, ಆಕಾಶವನ್ನು ಹೊಂದಿಕೆಯನ್ನಾಗಿಸಿಕೊಂಡಿರುವ ನಮಗೆ ನೆಮ್ಮದಿಯ ಹಾಗೂ ಭಯ ಮುಕ್ತ ಭಾರತ ಮುಖ್ಯ ಎಂಬುದನ್ನು ಅಪಾರ ಸಂಖ್ಯೆ ಬಡವರು ಮತ್ತು ಅನಕ್ಷಸ್ತರು ಇರುವ ಬಿಹಾರ ರಾಜ್ಯ ಮೋದಿಯವರಿಗೆ ಮನವರಿಕೆ ಮಾಡಿಕೊಟ್ಟಿದೆ.
ಕಳೆದ ಒಂದೂವರೆ ವರ್ಷದ ಅವಧಿಯ ಆಳ್ವಿಕೆಯಲ್ಲಿ, ಸಾಕ್ಷಿ ಮಹಾರಾಜ್, ಆದಿತ್ಯ ಯೋಗಿನಾಥ್,ನಂತಹ ಕ್ರಿಮಿನಲ್ ಹಿನ್ನಲೆಯುಳ್ಳ ಸಂಸತ್ ಸದಸ್ಯರನ್ನೂ ಒಳಗೊಂಡತೆ ದೇಶದ ಸಂಘಪರಿವಾರದ  ಅನೇಕ ಹರುಕು ಬಾಯಿ ದಾಸರಿಗೆ ಮಾತನಾಡಲು ಅವಕಾಶ ಕೊಟ್ಟು, ಮೌನಕ್ಕೆ ಜಾರುವುದರ ಜೊತೆಗೆ ವಿದೇಶ ಸುತ್ತುತ್ತಾ, ಅಂತರಾಷ್ಟ್ರೀಯ ಮಟ್ಟದಲ್ಲಿ ನಾಯಕನೆಂದು ಪ್ರತಿ ಬಿಂಭಿಸಿಕೊಳ್ಳುವುದನ್ನು ಬಿಟ್ಟು “ ನಾನು ಭಾರತದ ಪ್ರಧಾನಿ” ಎಂಬುದನ್ನು ಈಗಲಾದರೂ ಮೋದಿ ಮನವರಿಕೆ ಮಾಡಿಕೊಳ್ಳಬೇಕಿದೆ. ಜೊತೆಗೆ ತಾವು ಈವರೆಗೆ ಘೋಷಿಸಿರುವ ಸ್ಮಾರ್ಟ್ ಸಿಟಿ ಯೋಜನೆಗಳಿಂದ ಹಿಡಿದು, ಮೇಕಿಂಗ್ ಇಂಡಿಯ, ಡಿಜಿಟಲ್ ಇಂಡಿಯ ಇವೆಲ್ಲವೂ ಕಾರ್ಪೋರೇಟ್ ಜಗತ್ತಿನ ಸಾಮ್ರಾಜ್ಯವನ್ನು ವಿಸ್ತರಿಸುವ ಯೋಜನೆಗಳೇ ಹೊರತು ಭಾರತದ ಹಳ್ಳಿಗಳ ಅಥವಾ ಬಡವರನ್ನು ಉದ್ಧಾರ ಮಾಡುವ ಯೋಜನೆಗಳಲ್ಲ ಎಂದು ಮೋದಿ ಮತ್ತು ಅವರ ಬಣ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಿದೆ.
ಇನ್ನೂ ಬಿಹಾರದ ಚುನಾವಣೆಯ ಫಲಿತಾಂಶವನ್ನು ವಿಶ್ಲೇಷಿಸಿದಾಗ, ಮೋದಿಯ ಮಾತುಗಳಿಗಿಂತ ನಿತೀಶ್ ಕುಮಾರ್ ರವರ ಶುದ್ಧ ಚಾರಿತ್ರ್ಯ ಹಾಗೂ ಎಂತಹವ ಎದೆಗೂ ತಾಕುವಂತಹ ಅವರ ಶುದ್ಧವಾದ ಮನದಾಳದ ಮಾತುಗಳು ಜಯಕ್ಕೆ ಪೂರಕವಾದ ವಾತಾವರಣವನ್ನು ಸೃಷ್ಟಿಸಿದವು. ಇದಕ್ಕಿಂತ ಮುಖ್ಯವಾಗಿ ಮೋದಿಯ  ಆರ್ಭಟ ಮತ್ತು ಪ್ರಚಾರದ ಅಬ್ಬರದ ನಡುವೆ ಮತಗಳು ಹಂಚಿ ಹೋಗಬಾರದೆಂದು ನಿತೀಶ್ ಕುಮಾರ್ ಜೊತೆ ಕೈ ಜೋಡಿಸಿದ ಲಾಲು ಪ್ರಸಾದ್ ರವರ ಜಾಣ ನಡೆಯನ್ನು ಮತ್ತು ರಾಷ್ಟ್ರೀಯ ಪಕ್ಷವಾಗಿದ್ದರೂ ಮೋದಿಯವರನ್ನು ಮಣಿಸಲು ಹಿರಿತನ, ಕಿರಿತನ ಮುಖ್ಯವಲ್ಲ ಎಂದು ನಿತಿಶ್-ಲಾಲು ಜೋಡಿಗೆ ಬೆನ್ನೆಲುಬಾಗಿ ನಿಂತ ಕಾಂಗ್ರೇಸ್ ಪಕ್ಷದ ನಿಲುವನ್ನೂ ಸಹ ನಾವು ಅಬಿನಂದಿಸಬೇಕಿದೆ.


ನರೇಂದ್ರ ಮೋದಿ ಮತ್ತು ಅವರ ಸಂಘ ಪರಿವಾರದ ಪುರುಷೋತ್ತಮರು ಇನ್ನಾದರೂ ಈ ದೇಶಕ್ಕೆ ಉಳ್ಳವರ ಭಾರತ ಮುಖ್ಯವೂ ಅಥವಾ ಇಲ್ಲದವರ ಭಾರತ ಮುಖ್ಯವೂ ಎಂಬುದನ್ನು ನಿದ್ರೆಯಿಲ್ಲದ ರಾತ್ರಿಯನ್ನು ಕಳೆಯುವಾಗ ಯೋಚಿಸಿದರೆ ಒಳಿತು. ಏಕೇಂದರೆ, ಯಾರು ಏನನ್ನು ತಿನ್ನುತ್ತಾರೆ, ಏನನ್ನು ವಿಸರ್ಜಿಸುತ್ತಾರೆ ಎಂಬುವುದು ಮುಖ್ಯವಲ್ಲ. ಯಾರು ಏನನ್ನೂ ಕುಡಿಯದೆ, ತಿನ್ನದೆ ಮಲಗುತ್ತಾರಲ್ಲಾ ಅವರ ಕುರಿತು ಯೋಚಿಸುವುದು ಮನುಕುಲಕ್ಕೆ ಒಳಿತು. ಈ ದೇಶದ ಅನೇಕ ಮಹನೀಯರು ಮತ್ತು ದಾರ್ಶನೀಕರು ನಮ್ಮ ಬಿಟ್ಟು ಹೋಗಿರುವ ಸಂದೇಶಗಳಲ್ಲಿ ಇದು ಮುಖ್ಯವಾದುದು.