ಭಾನುವಾರ, ನವೆಂಬರ್ 8, 2015

ಬಿಹಾರ ಚುನಾವಣೆ- ಮಂತ್ರವಾಗದ ಮೋದಿಯವರ ಮಾತುಗಳು



ಕಳೆದ ಒಂದೂವರೆ ವರ್ಷದ ಹಿಂದೆ ಕೇಂದ್ರದಲ್ಲಿ ಆಡಳಿತದ ಚುಕ್ಕಾಣಿ ಹಿಡಿದ ನರೇಂದ್ರ ಮೋದಿಯವರು ತಾವಾಡುವ ಮಾತುಗಳಲ್ಲಿ ಅಪಾರ ನಂಬಿಕೆಯಿಟ್ಟವರು. ಇದೇ ನೆಲೆಯಲ್ಲಿ ಇಡೀ ದೇಶದಲ್ಲಿ ಬಿ.ಜೆ.ಪಿ. ಪಕ್ಷದ ಸಾಮ್ರಾಜ್ಯವನ್ನು ವಿಸ್ತರಿಸುವ ಕನಸು ಕಂಡವರು. ಆದರೆ, ಅವರ ಕನಸಿನ ಕುದುರೆಯ ನಾಗಾಲೋಟಕ್ಕೆ ಬಿಹಾರದಲ್ಲಿ ಜೆ.ಡಿ.ಯು. ಪಕ್ಷದ ನಿತೀಶ್ ಕುಮಾರ್ ಭದ್ರವಾದ ಕಡಿವಾಣ ಹಾಕಿದ್ದಾರೆ. ಭಾರತದ  ಪ್ರಧಾನಿಯಾದ ನಂತರ ನರೇಂದ್ರ ಮೋದಿಯವರಿಗೆ ಇದು ಎರಡನೆಯ ಬಾರಿ ಆಗುತ್ತಿರುವ  ಮುಖಭಂಗ. ಕೇಂದ್ರಾಡಳಿತ ಪ್ರದೇಶವಾದ ದೆಹಲಿಯ ಚುನಾವಣೆಯಲ್ಲಿ ಅಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಮೋದಿಯವರಿಗೆ ಚುನಾವಣೆಯಲ್ಲಿ ಮಣ್ಣು ಮುಕ್ಕಿಸಿದ್ದರು. ಈ ಸೋಲಿನ ಹಿನ್ನಲೆಯಲ್ಲಿ ಭಾರಿ ಸಿದ್ಧತೆ ಮತ್ತು ಚಾಣಕ್ಷ ನಡೆಗಳ ಮೂಲಕ ಬಿಹಾರದ ಚುನಾವಣೆಗೆ ಇಳಿದ ಮೋದಿ ಮತ್ತು ಅವರ ಆಪ್ತ ಅಮಿತ್ ಷಾ ಅವರ ಮೋಡಿಗೆ ಮತ್ತು ಆಮೀಷಕ್ಕೆ ಬಿಹಾರದ ಜನತೆ ಮರುಳಾಗಲಿಲ್ಲ. ಚುನಾವಣೆಗೆ ಮುನ್ನ ನರೇಂದ್ರ ಮೋದಿಯವರು  ಬಿಹಾರ ರಾಜ್ಯಕ್ಕೆ ಘೋಷಿಸಿದ ಒಂದು ಕಾಲು ಲಕ್ಷ ಕೋಟಿಯ ವಿಶೇಷ ಪ್ಯಾಕೇಜ್ ಗೆ ಅಲ್ಲಿನ ಮತದಾರರು ಚುನಾವಣಾ ಫಲಿತಾಂಶದ ಮೂಲಕ ಬೆನ್ನು ತಿರುಗಿಸಿದ್ದಾರೆ. ಕಣ್ಣಿಗೆ ಕಾಣದ ಕನಸಿನ ಗೋಪುರಕ್ಕಿಂತ ಕಣ್ಣೆದುರುವ ಇರುವ  ನೈಜವಾದ ಪುಟ್ಟ ಗುಡಿಸಲು ನಮಗೆ ಮುಖ್ಯ ಎಂಬ ಸಂದೇಶವನ್ನು ಮೊದಿಗೆ ರವಾನಿಸಿದ್ದಾರೆ.
ಬಿಹಾರ ಚುನಾವಣೆಯಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆ.ಡಿ.ಯು. ಮತ್ತು , ಲಾಲು ಪ್ರಸಾದರ ಆರ್.ಜೆ.ಡಿ ಹಾಗೂ ಕಾಂಗ್ರೇಸ್ ಪಕ್ಷ ಇವುಗಳ ಮೈತ್ರಿ ಕೂಟದ ಈ ಗೆಲವು ಎನ್.ಡಿ.ಎ. ಮೈತ್ರಿ ಕೂಟಕ್ಕೆ ಹಲವಾರು ಎಚ್ಚರಿಕೆಯ ಸಂದೇಶಗಳನ್ನು ಹಾಗೂ ಬಡ ಭಾರತೀಯನ ಮನದಾಳದ ಇಂಗಿತವನ್ನು ರವಾನಿಸಿವೆ. ಹಲವಾರು ಜ್ವಲಂತ ಸಮಸ್ಯೆಗಳ ನಡುವೆ ಅಂದರೆ, ಹಸಿವು, ಕುಡಿಯುವ ಶುದ್ಧನೀರು, ಆರೋಗ್ಯ, ಶಿಕ್ಷಣ ಹಾಗೂ ವಸತಿ ಇವುಗಳು ನಮಗೆ ಮುಖ್ಯವೇ ಹೊರತು, ನೀವು ಪ್ರತಿಪಾದಿಸುತ್ತಿರುವ ಅಥವಾ ಈ ದೇಶದ ಸಮಾಜದ ಮುಖ್ಯವಾಹಿನಿಗೆ ತಂದು ಚರ್ಚಿಸುತ್ತಿರುವ ಗೋ ಮಾಂಸ ಸೇವನೆ ಅಥವಾ ಭಗವದ್ಗೀತೆ ಮಾತ್ರ ಹಿಂದೂ ಪವಿತ್ರ ಗ್ರಂಥ ಇಂತಹ ಕ್ಷುಲ್ಲಕ ಸಂಗತಿಗಳು ನಮಗೆ ಮುಖ್ಯವಲ್ಲ ಎಂದು ಕಪಾಳಕ್ಕೆ ಹೊಡೆದಂತೆ ಮತದಾರರು ಪ್ರತಿಕ್ರಿಯಿಸಿರುವುದನ್ನು ನಾವು ಬಿಹಾರ ಚುನಾವಣೆಯ ಫಲಿತಾಂಶದಲ್ಲಿ ಕಾಣಬಹುದು.

ಗ್ರಾಮಗಳ ಮತ್ತು ಬಡವರು ಹಾಗೂ ಹಿಂದುಳಿದ ವರ್ಗದವರ ತೊಟ್ಟಿಲಿನಂತಿರುವ ಬಹು ಸಂಸ್ಕೃತಿ ಹಾಗೂ ಬಹು ಮುಖಿ ಸಮಾಜವನ್ನು ಒಳಗೊಂಡಿರುವ ಭಾರತಕ್ಕೆ ಬೇಕಾಗಿರುವುದು ಮೇಕಿಂಗ್ ಇಂಡಿಯವೂ ಅಲ್ಲ, ಅಥವಾ ಡಿಜಿಟಲ್ ಇಂಡಿಯವೂ ಅಲ್ಲ, ಇದಕ್ಕಿಂತ ಮುಖ್ಯವಾಗಿ ಉಳ್ಳವರ ಭಾರತದೊಳಗೆ ಇಲ್ಲದವರ ಭಾರತದಲ್ಲಿ ಎಲ್ಲ ಧರ್ಮ ಮತ್ತು ಜಾತಿಗಳ ನಡುವೆ ಸಹಬಾಳ್ವೆ ಹಾಗೂ ಹಸಿವು, ನೀರಡಿಕೆಯ ನಡುವೆಯೂ ಭೂಮಿಯನ್ನು ಹಾಸಿಗೆಯನ್ನಾಗಿ ಮಾಡಿ, ಆಕಾಶವನ್ನು ಹೊಂದಿಕೆಯನ್ನಾಗಿಸಿಕೊಂಡಿರುವ ನಮಗೆ ನೆಮ್ಮದಿಯ ಹಾಗೂ ಭಯ ಮುಕ್ತ ಭಾರತ ಮುಖ್ಯ ಎಂಬುದನ್ನು ಅಪಾರ ಸಂಖ್ಯೆ ಬಡವರು ಮತ್ತು ಅನಕ್ಷಸ್ತರು ಇರುವ ಬಿಹಾರ ರಾಜ್ಯ ಮೋದಿಯವರಿಗೆ ಮನವರಿಕೆ ಮಾಡಿಕೊಟ್ಟಿದೆ.
ಕಳೆದ ಒಂದೂವರೆ ವರ್ಷದ ಅವಧಿಯ ಆಳ್ವಿಕೆಯಲ್ಲಿ, ಸಾಕ್ಷಿ ಮಹಾರಾಜ್, ಆದಿತ್ಯ ಯೋಗಿನಾಥ್,ನಂತಹ ಕ್ರಿಮಿನಲ್ ಹಿನ್ನಲೆಯುಳ್ಳ ಸಂಸತ್ ಸದಸ್ಯರನ್ನೂ ಒಳಗೊಂಡತೆ ದೇಶದ ಸಂಘಪರಿವಾರದ  ಅನೇಕ ಹರುಕು ಬಾಯಿ ದಾಸರಿಗೆ ಮಾತನಾಡಲು ಅವಕಾಶ ಕೊಟ್ಟು, ಮೌನಕ್ಕೆ ಜಾರುವುದರ ಜೊತೆಗೆ ವಿದೇಶ ಸುತ್ತುತ್ತಾ, ಅಂತರಾಷ್ಟ್ರೀಯ ಮಟ್ಟದಲ್ಲಿ ನಾಯಕನೆಂದು ಪ್ರತಿ ಬಿಂಭಿಸಿಕೊಳ್ಳುವುದನ್ನು ಬಿಟ್ಟು “ ನಾನು ಭಾರತದ ಪ್ರಧಾನಿ” ಎಂಬುದನ್ನು ಈಗಲಾದರೂ ಮೋದಿ ಮನವರಿಕೆ ಮಾಡಿಕೊಳ್ಳಬೇಕಿದೆ. ಜೊತೆಗೆ ತಾವು ಈವರೆಗೆ ಘೋಷಿಸಿರುವ ಸ್ಮಾರ್ಟ್ ಸಿಟಿ ಯೋಜನೆಗಳಿಂದ ಹಿಡಿದು, ಮೇಕಿಂಗ್ ಇಂಡಿಯ, ಡಿಜಿಟಲ್ ಇಂಡಿಯ ಇವೆಲ್ಲವೂ ಕಾರ್ಪೋರೇಟ್ ಜಗತ್ತಿನ ಸಾಮ್ರಾಜ್ಯವನ್ನು ವಿಸ್ತರಿಸುವ ಯೋಜನೆಗಳೇ ಹೊರತು ಭಾರತದ ಹಳ್ಳಿಗಳ ಅಥವಾ ಬಡವರನ್ನು ಉದ್ಧಾರ ಮಾಡುವ ಯೋಜನೆಗಳಲ್ಲ ಎಂದು ಮೋದಿ ಮತ್ತು ಅವರ ಬಣ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಿದೆ.
ಇನ್ನೂ ಬಿಹಾರದ ಚುನಾವಣೆಯ ಫಲಿತಾಂಶವನ್ನು ವಿಶ್ಲೇಷಿಸಿದಾಗ, ಮೋದಿಯ ಮಾತುಗಳಿಗಿಂತ ನಿತೀಶ್ ಕುಮಾರ್ ರವರ ಶುದ್ಧ ಚಾರಿತ್ರ್ಯ ಹಾಗೂ ಎಂತಹವ ಎದೆಗೂ ತಾಕುವಂತಹ ಅವರ ಶುದ್ಧವಾದ ಮನದಾಳದ ಮಾತುಗಳು ಜಯಕ್ಕೆ ಪೂರಕವಾದ ವಾತಾವರಣವನ್ನು ಸೃಷ್ಟಿಸಿದವು. ಇದಕ್ಕಿಂತ ಮುಖ್ಯವಾಗಿ ಮೋದಿಯ  ಆರ್ಭಟ ಮತ್ತು ಪ್ರಚಾರದ ಅಬ್ಬರದ ನಡುವೆ ಮತಗಳು ಹಂಚಿ ಹೋಗಬಾರದೆಂದು ನಿತೀಶ್ ಕುಮಾರ್ ಜೊತೆ ಕೈ ಜೋಡಿಸಿದ ಲಾಲು ಪ್ರಸಾದ್ ರವರ ಜಾಣ ನಡೆಯನ್ನು ಮತ್ತು ರಾಷ್ಟ್ರೀಯ ಪಕ್ಷವಾಗಿದ್ದರೂ ಮೋದಿಯವರನ್ನು ಮಣಿಸಲು ಹಿರಿತನ, ಕಿರಿತನ ಮುಖ್ಯವಲ್ಲ ಎಂದು ನಿತಿಶ್-ಲಾಲು ಜೋಡಿಗೆ ಬೆನ್ನೆಲುಬಾಗಿ ನಿಂತ ಕಾಂಗ್ರೇಸ್ ಪಕ್ಷದ ನಿಲುವನ್ನೂ ಸಹ ನಾವು ಅಬಿನಂದಿಸಬೇಕಿದೆ.


ನರೇಂದ್ರ ಮೋದಿ ಮತ್ತು ಅವರ ಸಂಘ ಪರಿವಾರದ ಪುರುಷೋತ್ತಮರು ಇನ್ನಾದರೂ ಈ ದೇಶಕ್ಕೆ ಉಳ್ಳವರ ಭಾರತ ಮುಖ್ಯವೂ ಅಥವಾ ಇಲ್ಲದವರ ಭಾರತ ಮುಖ್ಯವೂ ಎಂಬುದನ್ನು ನಿದ್ರೆಯಿಲ್ಲದ ರಾತ್ರಿಯನ್ನು ಕಳೆಯುವಾಗ ಯೋಚಿಸಿದರೆ ಒಳಿತು. ಏಕೇಂದರೆ, ಯಾರು ಏನನ್ನು ತಿನ್ನುತ್ತಾರೆ, ಏನನ್ನು ವಿಸರ್ಜಿಸುತ್ತಾರೆ ಎಂಬುವುದು ಮುಖ್ಯವಲ್ಲ. ಯಾರು ಏನನ್ನೂ ಕುಡಿಯದೆ, ತಿನ್ನದೆ ಮಲಗುತ್ತಾರಲ್ಲಾ ಅವರ ಕುರಿತು ಯೋಚಿಸುವುದು ಮನುಕುಲಕ್ಕೆ ಒಳಿತು. ಈ ದೇಶದ ಅನೇಕ ಮಹನೀಯರು ಮತ್ತು ದಾರ್ಶನೀಕರು ನಮ್ಮ ಬಿಟ್ಟು ಹೋಗಿರುವ ಸಂದೇಶಗಳಲ್ಲಿ ಇದು ಮುಖ್ಯವಾದುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ