ಸೋಮವಾರ, ನವೆಂಬರ್ 9, 2015

ಗಾಂಧೀಜಿಯವರನ್ನು ಅಗ್ನಿ ಪರೀಕ್ಷೆಗೆ ಒಡ್ಡಿದ ಬಂಡಾಯ ಮನೋಭಾವದ ಶಿಷ್ಯ


ಇದು ಮೂರು ತಿಂಗಳ ಹಿಂದಿನ ಸಂಗತಿ. ಮಹಾತ್ಮ ಗಾಂಧಿಯವರ ಶಿಷ್ಯ ಪರಂಪರೆ ಕುರಿತು ನಾನು ಬರೆದ “ ಗಾಂಧಿಗಿರಿಯ ಫಸಲುಗಳು” ಎಂಬ ಕೃತಿಗಾಗಿ ಅವರ ಶಿಷ್ಯರ ಕುರಿತು ಅಧ್ಯಯನದಲ್ಲಿ ನಿರತನಾಗಿದ್ದೆ. ಈ ಸಂದರ್ಭದಲ್ಲಿ ಗಾಂಧಿ ಕುರಿತು ಕಳೆದ ನಲವತ್ತು ವರ್ಷಗಳಿಂದ ಅಧ್ಯಯನದಲ್ಲಿ ನಿರತರಾಗಿರುವ ಆಸ್ಟ್ರೇಲಿಯಾದ ಸಮಾಜ ವಿಜ್ಞಾನಿ ಪ್ರೊ. ಥಾಮಸ್ ವೆಬರ್ ಅವರ “ Gandhi At First Sight”  ಎಂಬ ಕೃತಿ ಓದುತ್ತಿರುವಾಗ ನನಗೆ ಗಾಂಧೀಜಿಯವರ ಬಂಡಾಯ ಶಿಷ್ಯರೊಬ್ಬರ ಪರಿಚಯವಾಯಿತು. ಅವರು ಬಂಗಾಳದ ನಿರ್ಮಲ್ ಕುಮಾರ್ ಬೋಸ್. ಅವರು ಕುರಿತು ನಾನು ಈವರೆಗೆ ಕೇಳಿರಲಿಲ್ಲ, ಜೊತೆಗೆ ಓದಿರಲಿಲ್ಲ. ಗಾಂಧೀಜಿಯವರ ಅಂತಿಮ ವರ್ಷಗಳಲ್ಲಿ ಅಂದರೆ, 1947 ರ ಮೊದಲ ಭಾಗದಲ್ಲಿ ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಗಾಂಧೀಜಿಯವರ ಕಾರ್ಯದರ್ಶಿಯಾಗಿ ಕೆಲಸ ಮಾಡಿದ ಬೋಸ್ ರವರು 1947 ರ ಮಾರ್ಚ್ ತಿಂಗಳಿನಲ್ಲಿ ಗಾಂಧೀಜಿ  ನಡೆಸಿದ ಬ್ರಹ್ಮ ಚರ್ಯ ಪ್ರಯೋಗವನ್ನು ಖಂಡಿಸಿ, ಅವರ ವಿರುದ್ಧ ಸಿಡಿದೆದ್ದವರು. ಜೊತೆಗೆ ತನ್ನ ಮಾನಸಿಕ ಗುರು ಗಾಂಧಿಯವರನ್ನು ಯಾವುದೇ ಮುಲಾಜಿಲ್ಲದೆ ಅಗ್ನಿ ಪರೀಕ್ಷೆಗೆ ಒಳಪಡಿಸಿದವರು.

ಥಾಮಸ್ ವೆಬರ್ ರವರು ನಿರ್ಮಲ ಕುಮಾರ್ ಬೋಸ್ ಬರೆದ “ My Days with Gandhi” ಎಂಬ ಕೃತಿಯನ್ನು ಗಾಂಧಿ ಕುರಿತಂತೆ ಭಾರತದಲ್ಲಿ ಪ್ರಕಟವಾಗಿರುವ ಕ್ಲಾಸಿಕ್ ಕೃತಿ ಎಂದು ಬಣ್ಣಿಸಿದ್ದಾರೆ. 1953 ರಲ್ಲಿ ಪ್ರಕಟವಾಗಿರುವ ಈ ಕೃತಿಯನ್ನು ಓರಿಯಂಟ್ ಬ್ಲಾಕ್ ಸ್ವಾನ್ ಎಂಬ ಪ್ರಕಾಶನ ಸಂಸ್ಥೆ 1974 ಮತ್ತು 1999 ರಲ್ಲಿ ಮರು ಮುದ್ರಣ ಮಾಡಿದೆ. ಎರಡು ತಿಂಗಳ ಹುಡುಕಾಟದ ನಂತರ  ಈ ಕೃತಿ ಕಳೆದ ವಾರ ನನಗೆ ದಕ್ಕಿತು. 260 ಪುಟಗಳ ಈ ಕೃತಿಗೊಂದು ದೊಡ್ಡ ಇತಿಹಾಸವಿದೆ. ಗಾಂಧೀಜಿಯವರ ಬ್ರಹ್ಮ ಚರ್ಯ ಕುರಿತು ಆಕ್ರೋಶ ವ್ಯಕ್ತ ಪಡಿಸಿ, ಅವರ ಆತ್ಮ ಸಾಕ್ಷಿಗೆ ಯಾವೊಬ್ಬ ಶಿಷ್ಯನೂ ಹಾಕಲಾರದಂತಹ ಮಾರ್ಮಿಕ ಪ್ರಶ್ನೆಗಳನ್ನು ಕೇಳಿದ ನಿರ್ಮಲ್ ಕುಮಾರ್ ಬೋಸ್ ಅವರಿಂದ ದೂರವಾದರೂ ಅವರ ಮೇಲಿನ ಗೌರವ ಕಳೆದುಕೊಂಡಿರಲಿಲ್ಲ. 1948 ರಲ್ಲಿ ಗಾಂಧೀಜಿ ಹತ್ಯೆಯಾದ ನಂತರ ಅವರ ನೆನಪಿನಲ್ಲಿ ತಮ್ಮ ಒಡನಾಟದ ನೆನಪುಗಳನ್ನು ಕುರಿತು ಈ ಕೃತಿಯನ್ನು ರಚಿಸಿ, ಗಾಂಧೀಜಿರವರ ಸಾಹಿತ್ಯದ ಪ್ರಕಟಣೆಗೆ ಮೀಸಲಾಗಿರುವ ಅಹಮದಾಬಾದಿನ ನವಜೀವನ ಟ್ರಸ್ಟ್ ಗೆ ಪ್ರಕಟಣೆಗಾಗಿ ಕಳಿಸಿಕೊಟ್ಟರು. ಆದರೆ, “ಬ್ರಹ್ಮ ಚರ್ಯ ಪ್ರಯೋಗ ಕುರಿತಾದ ನಿಮ್ಮ ಹಾಗೂ ಗಾಂಧೀಜಿ ನಡುವೆ ನಡೆದಿರುವ ಪತ್ರ ವ್ಯವಹಾರದ ಭಾಗವನ್ನು ತೆಗೆದು ಹಾಕಿದರೆ ಪ್ರಕಟಿಸುತ್ತೇವೆ” ಎಂಬ ಷರತ್ತನ್ನು ಬೋಸ್ ರವರ ಮುಂದಿಟ್ಟಿತು. ಇದಕ್ಕೆ ಒಪ್ಪದ ನಿರ್ಮಾಲ್ ಕುಮಾರ್ ಬೋಸ್ ಅಂತಿಮವಾಗಿ 1953 ರಲ್ಲಿ ತಾವೇ ಸ್ವತಃ ಪರಕಟಿಸಿದರು. ಥಾಮಸ್ ವೆಬರ್ ಹೇಳಿದಂತೆ ನಿಜಕ್ಕೂ ಈ ಕೃತಿ ಕ್ಲಾಸಿಕ್ ಕೃತಿ ಹೌದು. ಪುಟ 133 ರಿಂದ 178 ರವರೆಗೆ ಸುಮಾರು 35 ಪುಟಗಳಲ್ಲಿ ಹರಡಿರುವ ಬ್ರಹ್ಮ ಚರ್ಯ ಪ್ರಯೋಗ ಕುರಿತಾದ  ಗುರು-ಶಿಷ್ಯರ ವಾದ – ಪ್ರತಿವಾದ ನಿಜಕ್ಕೂ ನಮ್ಮನ್ನು ದಂಗು ಪಡಿಸುತ್ತದೆ. ಕೃತಿಯುದ್ದಕ್ಕೂ ಗಾಂಧೀಜಿ ತಮ್ಮ ಪ್ರಯೋಗಕ್ಕೆ ಬಳಸಿಕೊಂಡ ಮನು ಮತ್ತು ವಿಭಾ ಗಾಂಧಿ ಹಾಗೂ ಅವರ ವೈದ್ಯೆಯಾಗಿದ್ದ ಸುಶೀಲಾ ನಾಯರ್ ರವರನ್ನು  ಎ.ಬಿ.ಸಿ. ಎಂದು ಬೋಸ್ ರವರು, ಅವರ ಮಾನಸಿಕ ತುಮಲಗಳು ಮತ್ತು ಬ್ರಹ್ಮ ಚರ್ಯ ಕುರಿತಂತೆ ಮನೋವಿಶ್ಲೇಷಣೆಗಳನ್ನು ಗಾಂಧಿಯವರ ಮುಂದಿಡುತ್ತಾ, ತಮ್ಮ ಗುರುವನ್ನು ವಿಚಲಿತರನ್ನಾಗಿ ಮಾಡುತ್ತಾರೆ. 


ಆಶ್ಚರ್ಯಕರ ಸಂಗತಿಯೆಂದರೆ, ಗಾಂಧೀಜಿಯವರ ತಮ್ಮ ಮಗನ ವಯಸ್ಸಿನ ಶಿಷ್ಯ ಎತ್ತಿದ ಎಲ್ಲಾ ರೀತಿಯ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸುತ್ತಾ ಹೋಗುತ್ತಾರೆ. ಕೊನೆಗೆ ತಮ್ಮ ಪ್ರಯೋಗ ಕುರಿತಂತೆ ಹರಿಜನ ಪತ್ರಿಕೆಯಲ್ಲಿ ಐದು ಲೇಖನಗಳನ್ನು ಬರೆದು ಪ್ರಕಟಿಸುತ್ತಾರೆ. ಇದೂ ಸಾಲದೆಂಬಂತೆ ತಮ್ಮ ಪ್ರಾರ್ಥನಾ ಸಮಯದಲ್ಲಿ ನಿರ್ಮಲ್ ಕುಮಾರ್ ಎತ್ತಿರುವ ಪ್ರಶ್ನೆಗಳನ್ನು ಪ್ರಸ್ತಾಪಿಸಿ ಅವುಗಳಿಗೆ ವಿವರಣೆ ನಿಡುತ್ತಾರೆ. ಆದರೆ, ಯಾರೊಬ್ಬರೂ ಗಾಂಧೀಜಿಯವರ ವಾದವನ್ನು ಒಪ್ಪುವುದಿಲ್ಲ. ಆದರೆ, ಗಾಂಧೀಜಿಯವರು ತಾವು ಇಂಗ್ಲೇಂಡ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗಲೂ ಇಂತಹ ಪ್ರಯೋಗ ನಡೆಸಿ ಮನಸ್ಸನ್ನು ನಿಗ್ರಹಿಸಿಕೊಳ್ಳುತ್ತಿದ್ದೆ ಎಂದು ಹೇಳಿಕೊಳ್ಳುವುದರ ಮೂಲಕ ತಮ್ಮ ಬ್ರಹ್ಮ ಚರ್ಯೆ ಪ್ರಯೋಗ ಕುರಿತು ಯಾವುದೇ ವಿಷಾದ ವ್ಯಕ್ತ ಪಡಿಸುವುದಿಲ್ಲ.
1992 ರಿಂದ ನಾನು ಗಾಂಧಿ ಕುರಿತಂತೆ ಮಾತನಾಡುತ್ತಾ, ಬರೆಯುತ್ತಾ ಬಂದಿದ್ದೀನಿ. ಆದರೆ, ನನ್ನ ದೃಷ್ಟಿಯಲ್ಲಿ ಪೂನಾ ಒಪ್ಪಂಧ ಮತ್ತು ಬ್ರಹ್ಮ ಚರ್ಯೆಯ ಪ್ರಯೋಗ  ಇವೆರೆಡೂ ಗಾಂಧೀಜಿಯವರ ಬದುಕಿನಲ್ಲಿ ಚಾರಿತ್ರಿಕ ಪ್ರಮಾದಗಳು. ಈ ನನ್ನ ನಂಬಿಕೆ ಮತ್ತಷ್ಟು ಬಲವಾಯಿತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ