ಸೋಮವಾರ, ನವೆಂಬರ್ 16, 2015

ಇಬ್ಬರ ಹೆಂಡಿರ ಮುದ್ದಿನ ಗಂಡ ತಿರುಪತಿ ತಿಮ್ಮಪ್ಪನ ಪ್ರಣಯ ಪ್ರಸಂಗ


 ವರ್ಷದ ಆಗಸ್ಟ್ ತಿಂಗಳಿನ ಮೊದಲ ವಾರ ನಡೆದ ಘಟನೆ ಇದು. ತಮಿಳುನಾಡಿನ ಕುಂಭಕೋಣಂ ನಿಂದ ತಿರುವರೂರು ಜಿಲ್ಲಾ ಕೇಂದ್ರಕ್ಕೆ  ಕಳೆದ ಮೂರು ವರ್ಷಗಳಲ್ಲಿ ನಾಲ್ಕನೆಯ ಬಾರಿ ಭೇಟಿ ನೀಡುತ್ತಿದ್ದೆ. ಆ ಊರಿನಲ್ಲಿ ಸುಮಾರು ಮುವತ್ತು ಎಕರೆ ಪ್ರದೇಶದಲ್ಲಿ ಎದ್ದು ನಿಂತಿರುವ ತ್ಯಾಗೇಶ ಅಥವಾ ತ್ಯಾಗರಾಜರ್ ಎನ್ನುವ ಬೃಹತ್ ದೇಗುಲ ಹಾಗೂ ಆರು ಎಕರೆ ವಿಸ್ತೀರ್ಣದಲ್ಲಿರುವ ಪುಷ್ಕರಣಿಗೆ ತಮಿಳು ನಾಡಿನಲ್ಲಿ ವಿಶಿಷ್ಠ ಸ್ಥಾನವಿದೆ. ತಮಿಳುನಾಡಿನ ಪ್ರಾಚೀನ ಸಂಗೀತ ಮತ್ತು ನೃತ್ಯದ ಅನೇಕ ಪ್ರಕಾರಗಳ ಇತಿಹಾಸವನ್ನು ತನ್ನ ಒಡಲೊಳಗೆ ಇಟ್ಟುಕೊಂಡಿರುವ ಈ ದೇವಸ್ಥಾನವು, ಕರ್ನಾಟಕ ಸಂಗೀತದ ತ್ರಿಮೂರ್ತಿಗಳೆಂದು ಕರೆಯುವ ಶ್ಯಾಮಾಶಾಸ್ತ್ರಿ, ಮುತ್ತುಸ್ವಾಮಿ ದೀಕ್ಷಿತರು ಹಾಗೂ ತ್ಯಾಗರಾಜರ ಪೂರ್ವಿಕರ ನೆಲೆಯೂ ಹೌದು. ಇಲ್ಲಿ ಪ್ರತಿ ಹನ್ನೆರೆಡು ವರ್ಷಕ್ಕೆ ಒಮ್ಮೆ ನಡೆಯುವ ನೂರು ಅಡಿ ಎತ್ತರ ಹಾಗೂ ನಲವತ್ತು ನಾಲ್ಕು ಟನ್ ತೂಕದ ಬೃಹತ್ ರಥೋತ್ಸವ ಕೂಡ ಹೆಸರುವಾಸಿಯಾದುದು. ಒಂಬತ್ತನೇ ಶತಮಾನದಲ್ಲಿ ಚೋಳರಿಂದ ನಿರ್ಮಿತವಾದ ಈ ದೇಗುಲ ನಂತರ ಹದಿನೈದು ಮತ್ತು ಹದಿನಾರನೇ ಶತಮಾನದಲ್ಲಿ ವಿಜಯನಗರದ ಅರಸರಿಂದ ಪುನರ್ ನಿರ್ಮಾಣಗೊಂಡಿದೆ. ಆಗಮ ಶಾಸ್ತ್ರದ ರೀತಿಯಲ್ಲಿ ಬೆಳಿಗ್ಗೆ 5-30 ರಿಂದ ಸಂಜೆ 7 ಗಂಟೆಯವರೆಗೆ ಆರು ವಿವಿಧ ಬಗೆಯ  ಪೂಜೆಗಳು ನಡೆಯುತ್ತವೆ. ಇಲ್ಲಿ ಆಚರಣೆಯಲ್ಲಿದ್ದ ದೇವದಾಸಿಯರ ನೃತ್ಯ ಕೂಡ ಆಗಮ ಶಾಸ್ತ್ರದ ಹಿನ್ನಲೆಯಲ್ಲಿ ರೂಪುಗೊಂಡಿದ್ದು ಎಂಬುದು ನನ್ನ ಅಧ್ಯಯನಕ್ಕೆ ವಿಶೇಷ ಕಾರಣವಾಗಿತ್ತು. ವಾಸ್ತು ಪ್ರಕಾರ ಇರುವ ದೇಗುಲದ ಅಷ್ಟ ದಿಕ್ಕುಗಳನ್ನು ಸೇರಿಸಿ, ಗರ್ಭ ಗುಡಿ ಇರುವ ಸ್ಥಳವನ್ನು ಬ್ರಹ್ಮ ಸ್ಥಳ ಎಂದು ಗುರುತಿಸಿ, ಇವುಗಳನ್ನು ನವ ಕೊಂಡಿಗಳು ಎಂದು ಇಲ್ಲಿ ಗುರುತಿಸಲಾಗಿದೆ. (ಕೊಂಡಿ ಎಂದರೆ, ಒಂದೊಂದು ದಿಕ್ಕನ್ನು ತೋರಿಸುವ ನಿರ್ಧಿಷ್ಟ ಸ್ಥಳ.) ಈ ಒಂಬತ್ತು ಸ್ಥಳಗಳಲ್ಲಿ ನಿಂತು ದೇವದಾಸಿಯರು ನೃತ್ಯ ಮಾಡಬೇಕಿತ್ತು. ಒಂದೊಂದು ಸ್ಥಳದಲ್ಲಿ ನೃತ್ಯದ ಪ್ರಕಾರ ಬದಲಾಗುತ್ತಿತ್ತು. ಅಂತಿಮವಾಗಿ ಬ್ರಹ್ಮ ಸ್ಥಳದ ನೃತ್ಯ ಉಯ್ಯಾಲೆ ರೂಪದ ನೃತ್ಯವಾಗಿರುತ್ತಿತ್ತು. ದೇವರನ್ನು ತೂಗಿ ಮಲಗಿಸುವ ನೃತ್ಯ ಇದಾಗಿತ್ತು ( ಈ ಕುರಿತು ಸವಿವರವಾಗಿ ನನ್ನ ಅಧ್ಯಯನ ಕೃತಿಯಾದ “ಪದಗಳಿವೆ ಎದೆಯಲ್ಲಿ” ಎಂಬ ದಕ್ಷಿಣ ಭಾರತ ದೇವದಾಸಿಯರ ಇತಿಹಾಸ ಕುರಿತ ಪುಸ್ತಕದಲ್ಲಿ ದಾಖಲಿಸುತ್ತಿದ್ದೀನಿ) ಇಂತಹ ಅಪರೂಪದ ವಿವರಗಳನ್ನು ತಮಿಳುನಾಡು ಸರ್ಕಾರವು ತಮಿಳು ಭಾಷೆಗೆ ಶಾಸ್ತ್ರೀಯ ಅಥವಾ ಅಭಿಜಾತ ಭಾಷೆ ಎಂಬ ಮಾನ್ಯತೆ ಸಿಕ್ಕಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರದಿಂದ ಸಿಕ್ಕಿರುವ ಅನುದಾನವನ್ನು ಬಳಸಿಕೊಂಡು ಅನೇಕ ಪ್ರಾಚೀನ ಕೃತಿಗಳನ್ನು ಪ್ರಕಟ ಮಾಡುತ್ತಿದೆ. ತಂಜಾವೂರನ್ನು ಆಳಿದ ಮರಾಠ ದೊರೆ ಶರ್ಪೋಜಿ ಕಾಲದ ಸಂಗೀತದ ಇತಿಹಾಸವನ್ನು ಆಧುನಿಕ ತಮಿಳು ಭಾಷೆಗೆ ಅನುವಾದಿಸಿದ ನಂತರ ನನಗೆ ತಿಳಿಯಿತು. (2015 ರ ಜನವರಿಯಲ್ಲಿ ತಂಜಾವೂರಿನ ತಮಿಳು ವಿಶ್ವ ವಿದ್ಯಾನಿಲಯವು ಅಲ್ಲಿನ ಸಂಗೀತ ಮಹಲ್ ಗ್ರಂಥಾಲಯದಲ್ಲಿದ್ದ ಮೂರು ಸಂಪುಟಗಳನ್ನು ಮೋಡಿ ತಮಿಳು ಭಾಷೆಯಿಂದ ಆಧುನಿಕ ತಮಿಳು ಭಾಷೆಗೆ ಅನುವಾದಿಸಿ ಪ್ರಕಟಿಸಿದೆ)


                                             ( ತಿರುವರೂರು ತ್ಯಾಗರಾಜರ ದೇಗುಲ ಮತ್ತು ರಥ)

ಈ ಮೇಲ್ಕಂಡ ಕಾರಣಗಳಿಂದ ನಾನು ಕುಂಭಕೋಣಂ ನಗರದಿಂದ ತಿರುವರೂರು ಜಿಲ್ಲಾ ಕೇಂದ್ರಕ್ಕೆ ಹೋಗುವಾಗ, ದಾರಿ ಮಧ್ಯೆ ಸುಮಾರು ಹತ್ತು ಕಿಲೋಮಿಟರ್ ದೂರದಲ್ಲಿ ತಿರುಮಲಪುರಂ ಹಾಗೂ ಕೃಷ್ಣರಾಜಪುರಂ ಎಂಬ ತೆಲುಗು ಹೆಸರಿನ ಪ್ರಭಾವದ ಊರುಗಳು ನನ್ನ ಗಮನ  ಸೆಳದಿದ್ದವು. ಜೊತೆಗೆ ಇವೆರೆಡಕ್ಕಿಂತ ಮುಖ್ಯವಾಗಿ “ ನಾಚ್ಛಿಯಾರ್ ಕೋಯಿಲ್ ಅಂದರೆ ನಾಚ್ಛಿಯಾರ್ ದೇವಸ್ಥಾನ ಎಂಬ ಒಬ್ಬ ಹೆಣ್ಣು ಮಗಳ ದೇವಸ್ಥಾನದ ಹೆಸರಿನಲ್ಲಿರುವ ಊರು ನನ್ನ ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. ಈ ಬಗ್ಗೆ ತಂಜಾವೂರಿನ ಸಂಗೀತ ಮಹಲ್ ಗ್ರಂಥಾಲಯದಲ್ಲಿದ್ದ ಕೆಲವು ಅಧಿಕಾರಿಗಳನ್ನು ವಿಚಾರಿಸಿದ್ದೆ. ಅವರಿಗೆ ಸಂಪೂರ್ಣವಾಗಿ ಇತಿಹಾಸ ಗೊತ್ತಿಲ್ಲದಿದ್ದರೂ ಸಹ ತಿರುಪತಿಯಲ್ಲಿರುವ ಶ್ರೀ ವೆಂಕಟೇಶ್ವರನು ಆ ಊರಿನ ಹೆಣ್ಣು ಮಗಳನ್ನು ವಿವಾಹವಾದ ಕಾರಣ ಈ ಹೆಸರು ಬಂದಿದೆ ಎಂಬ ಸುಳಿವು ಕೊಟ್ಟಿದ್ದರು. ಹಾಗಾಗಿ ತಿರುವರೂರಿಗೆ ಹೋಗುವ ಮುನ್ನ ನಾಚ್ಚಿಯಾರ್ ಕೋಯಿಲ್ ಗೆ ಭೇಟಿ ನೀಡಿ ಮಂದೆ ತಿರುವರೂರಿಗೆ ಹೋಗೋಣವೆಂದು ನಿರ್ಧರಿಸಿ ಬಸ್ ಹತ್ತಿದೆ. ಆ ಊರಿನ ಬಸ್ ನಿಲ್ದಾಣದಲ್ಲಿ ನಾನು ಇಳಿದ ನಂತರ ಸ್ಥಳಿಯ ಚಹಾ ಅಂಗಡಿಯವನ ಬಳಿ ತಮಿಳು ಭಾಷೆಯಲ್ಲಿ ಇಲ್ಲಿ ಅಮ್ಮನವರ ದೇವಸ್ಥಾನ ಎಲ್ಲಿದೆ? ಎಂದು ಕೇಳಿದೆ. ಆತ  ಮುಖ್ಯ ರಸ್ತೆಯೊಂದರ ದಕ್ಷಿಣ ದಿಕ್ಕಿಗೆ ಕೈ ತೋರಿಸಿ, “ರಸ್ತೆಯ ಕೊನೆಯಲ್ಲಿ ಒಂದು ಹಳ್ಳ ಹರಿಯುತ್ತಿದೆ ಅಲ್ಲಿದೆ ಹೋಗಿ, ಅಲ್ಲಿ ದೇವಸ್ಥಾನವಿದೆ” ಎಂದ. ನಾನು ಸುಮಾರು ಒಂದು ಕಿಲೋಮೀಟರ್ ನಡೆದು ದೇವಸ್ಥಾನ ತಲುಪಿದಾಗ ನನಗೆ ಅಚ್ಚರಿಯಾಯಿತು. ಸುಮಾರು ಅರವತ್ತು ಅಡಿ ಉದ್ದ ಮತ್ತು ನಲವತ್ತು ಅಡಿ ಜಾಗದಲ್ಲಿ ಹಾಕಲಾಗಿದ್ದ ತೆಂಗಿನ ಗರಿಗಳ ಚಪ್ಪರದ ಕೆಳಗೆ ಮಧ್ಯಭಾಗದಲ್ಲಿ ಸುಮಾರು ಮೂರು ಅಡಿ ಕಟ್ಟೆಯೊಂದರ ಮೇಲೆ ಅತ್ಯಂತ ಸಣ್ಣದೊಂದು ಗುಡಿ ಇತ್ತು. ಚಪ್ಪರದ ಮೂಲೆಯೊಂದರಲ್ಲಿ ಇದ್ದ ಪುಟ್ಟ ಗುಡಿಸಿಲಿನ ಮುಂದೆ ಹಾಕಲಾಗಿದ್ದ ಮರದ ಬೆಂಚ್ ಮೇಲೆ ಸೊಂಟಕ್ಕೆ ಬಿಳಿಯ ಪಂಚೆಯನ್ನು ಸುತ್ತಿಕೊಂಡು ಬರಿ ಮೈಯಲ್ಲಿ ಕುಳಿತ್ತಿದ್ದ ಹಿರಿಯ ವೃದ್ಧನೊಬ್ಬ ಎದ್ದು ಬಂದು ದೇವರಿಗೆ ಮಂಗಳಾರತಿ ಮಾಡಿ ನನ್ನ ಬಳಿ ಬಂದ. ಆರತಿ ತಟ್ಟೆಗೆ ಹತ್ತು ರೂಪಾಯಿ ದಕ್ಷಿಣೆ ಹಾಕುತ್ತಿದ್ದಂತೆ ತಟ್ಟೆಯಲ್ಲಿದ್ದ ವಿಭೋತಿ ತೆಗೆದು ನನ್ನ ಹಣೆಗೆ ಹಚ್ಚಿದ. ನಾನು ದಿಕ್ಕು ತಪ್ಪಿ ಬೇರೆ ದೇವಸ್ಥಾನಕ್ಕೆ ಬಂದಿದ್ದೀನಿ ಎಂಬುವುದು ಖಚಿತವಾಯಿತು. ಅದು ಸುಮಾರು ಬೆಳಿಗ್ಗೆ ಹನ್ನೊಂದು ಗಂಟೆ ಸಮಯ. ನಾನು ಆ ವ್ಯಕ್ತಿಯ ಬಳಿ ನನ್ನ ಪರಿಚಯ ಹೇಳಿಕೊಂಡು “ ನಾನು ನಾಚ್ಛಿಯಾರಮ್ಮನ ದೇವಸ್ಥಾನ ಹುಡುಕಿಕೊಂಡು ಬಂದಿದ್ದೀನಿ ಎಂದು ಹೇಳಿ ಇದು ಯಾವ ಅಮ್ಮನ ದೇವಸ್ಥಾನ ಎಂದು ಕೇಳಿದೆ. “ ಇದು ಆಗಸ ಮಾರಿಯಮ್ಮನ್ ಕೋಯಿಲ್ ಎಂದ. . ( ಆಕಾಶ ಮಾರಿಯಮ್ಮನ ದೇವಸ್ಥಾನ)  ಹಾಗಾದರೆ, ನಾಚ್ಛಿಯಾರ್ ಅಮ್ಮನ್ ಕೋಯಿಲ್ ಎಲ್ಲಿದೆ ಎಂದು ಕೇಳಿದೆ. “ಈ ಊರಿನಲ್ಲಿರುವುದು ನಾಚ್ಛಿಯಾರಮ್ಮ್ನನ ದೇವಸ್ಥಾನವಲ್ಲ, ಅದು ಪೆರುಮಾಳ್ ಕೋಯಿಲ್ ಅಂದರೆ, ವೆಂಕಟೇಶ್ವರನ ದೇವಸ್ಥಾನ. ಇಲ್ಲಿ ಪ್ರಥಮ ಪೂಜೆ ಯಾವಾಗಲೂ ನಾಚ್ಚಿಯಾರ್ ಅಮ್ಮನಿಗೆ ಸಲ್ಲುತ್ತದೆ ನಂತರ ವೆಂಕಟೇಶ್ವರನಿಗೆ ಸಲ್ಲುತ್ತದೆ ಎಂಬ ಕುತೂಹಲಕಾರಿ ಸಂಗತಿಯೊಂದನ್ನು ನನ್ನೆದುರು ಬಿಚ್ಚಿಟ್ಟ. ತೂಕಡಿಸುವವನಿಗೆ ಹಾಸಿಗೆ ಹಾಸಿಕೊಟ್ಟರು ಎಂಬಂತೆ ನನಗೆ ಅಷ್ಟು ಸಾಕಾಯಿತು. ಕೂಡಲೇ  ಅಲ್ಲಿದ್ದ ಬಾಲಕನನ್ನು ಕರೆದು ಪಕ್ಕದ ಹೋಟೆಲ್ ನಿಂದ ಮೂರು ಚಹಾ ತರಲು ಹೇಳಿ ಬೆಂಚಿನ ಮೇಲೆ ಕುಳಿತುಕೊಂಡು  ಆ ಹಿರಿಯ ಜೀವದ ಬಾಯಲ್ಲಿ ತಿರುಪತಿ ತಿಮ್ಮಪ್ಪನ ಪ್ರಣಯ ಪ್ರಸಂಗದ ಕಥೆ ಕೇಳಲು ಕುಳಿತೆ.
ಮಾರಿಯಮ್ಮನ ದೇಗುಲದ ಅರ್ಚಕ ಹಾಗೂ ಹಿರಿಯ ಜೀವ ಜಾನಪದ ಶೈಲಿಯಲ್ಲಿ ನಾಚ್ಛಿಯಾರ್ ಅಮ್ಮನ ಕಥೆಯನ್ನು ಆರಂಭಿಸಿತು. “ ಈ ಊರಿನ ಗುಡ್ಡದ ಪಕ್ಕದಲ್ಲಿ ಒಂದು ಕೊಳವಿತ್ತು. ( ಅದು ಈಗಲೂ ದೇವಸ್ಥಾನದ ಬಳಿ ಇದೆ) ಮಕ್ಕಳಿಲ್ಲದ ಬ್ರಾಹ್ಮಣ  ಗೃಹಿಣಿಯೊಬ್ಬಳು ಒಂದು ದಿನ ಸ್ನಾನ ಮಾಡಲು ಕೊಳದ ಬಳಿ ತೆರಳಿದಾಗ,  ಕೊಳದ ಸೋಪಾನದ ಬಳಿ ಆಗ ತಾನೆ ಜನಿಸಿದ ಹೆಣ್ಣು ಮಗವೊಂದನ್ನು ಯಾರೋ ಒಬ್ಬ ತಾಯಿ ಬಿಟ್ಟು ಹೋಗಿದ್ದಳು. ಮುದ್ದಾದ  ಆ ಮಗುವನ್ನು ನೋಡಿದ  ಗೃಹಿಣಿ ಅದನ್ನು ತಂದು ಸಾಕಿ ಬೆಳಸಿದಳು. ಮುಂದೆ ಆ ಮಗು ಬೆಳೆದು ನಾಚ್ಚಿಯಾರ್ ಹೆಸರಿನಲ್ಲಿ ಯುವತಿಯಾದಳು. ಒಂದು ದಿನ ಆಕಾಶದಲ್ಲಿ ವಾಯು ವಿಹಾರ ಹೊರಟಿದ್ದ ತಿರುಪತಿ ವೆಂಕಟೇಶ್ವರನು ಈ ಯುವತಿಯ ಸೌಂದರ್ಯಕ್ಕೆ ಮರುಳಾಗಿ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದ. ಆಗ ಯುವತಿಯು “ನೀನು ನನ್ನ ಅಮ್ಮನ ಅಪ್ಪಣೆ ಪಡೆಯಬೇಕೆಂದು” ಷರತ್ತು ವಿಧಿಸಿದಳು. ಅದರಂತೆ ವೆಂಕಟೇಶ್ವರಸ್ವಾಮಿಯು ಆಕೆಯ ಅಮ್ಮನ ಬಳಿ ಹೋಗಿ ವಿನಂತಿಸಿಕೊಂಡ. ಆಗ ನಾಚ್ಛಿಯಾರ್ ಅಮ್ಮನ ಸಾಕುತಾಯಿ ಇಕ್ಕಟ್ಟಿಗೆ ಸಿಲುಕಿದಳು. ವೆಂಕಟೇಶ್ವರನಿಗೆ ಈಗಾಗಲೇ ವಿವಾಹವಾಗಿದೆ. ಆದರೂ ನನ್ನ ಮಗಳನ್ನು ಬಯಸುತ್ತಿದ್ದಾನೆ. ವಿವಾಹ ಮಾಡಿಕೊಟ್ಟರೆ, ತಿರುಪತಿಯಲ್ಲಿ ನನ್ನ ಮಗಳು ಸುಖವಾಗಿ ಇರಲಾರಳು. ಆದರೂ ಮಗಳನ್ನು ಕೇಳುತ್ತಿರುವವನು ವೆಂಕಟೇಶ್ವರ ಇಲ್ಲವೆನ್ನಲು ಸಾದ್ಯವಾಗುತ್ತಿಲ್ಲ. ಏನು ಮಾಡಲಿ? ಎಂದು ಯೋಚಿಸಿದಳು. ಕೊನೆಗೆ ಉಪಾಯವೊಂದು ಹೊಳೆದಂತಾಗಿ ಆತನಿಗೆ ಕೆಲವು ಷರತ್ತುಗಳನ್ನು ವಿಧಿಸಿದಳು. “ ವೆಂಕಟೇಶ್ವರಾ, ನಿನಗೆ ನನ್ನ ಮಗಳನ್ನು ಕೊಟ್ಟು ವಿವಾಹ ಮಾಡಿ ಕೊಡುತ್ತೀನಿ. ಆದರೆ, ಆಕೆಯನ್ನು ತಿರುಪತಿಗೆ ಕಳಿಸಿಕೊಡುವುದಿಲ್ಲ. ಮಕ್ಕಳಿಲ್ಲದ ನನಗೆ ಆಕೆ ಸರ್ವಸ್ವ. ಹಾಗಾಗಿ ಆಕೆ ಇಲ್ಲಿಯೇ ಇರಬೇಕು. ಜೊತೆಗೆ ಈ ಊರಿಗೆ ಅವಳ ಹೆಸರನ್ನು ಇಡಬೇಕು” ಎಂದಳು. ನಾಚ್ಛಿಯಾರಮ್ಮನನ್ನು ವಿವಾಹವಾಗಲು ತುದಿಗಾಲಲ್ಲಿ ನಿಂತಿದ್ದ ವೆಂಕಟೇಶ್ವರ ತಕ್ಷಣವೇ ಎಲ್ಲಾ ಷರತ್ತುಗಳನ್ನು ಒಪ್ಪಿಕೊಂಡ. ಅದರಂತೆ ಈ ಊರಿಗೆ ನಾಚ್ಚಿಯಾರಮ್ಮನ ಹೆಸರು ಬಂದಿತು. ಜೊತೆಗೆ ಇಲ್ಲಿ ನಿರ್ಮಾಣವಾಗಿರುವ ಪೆರುಮಾಳ್ ದೇವಸ್ಥಾನದಲ್ಲಿ ಪ್ರಥಮ ಪೂಜೆ ನಾಚ್ಛಿಯಾರ್ ಅಮ್ಮನಿಗೆ ಸಲ್ಲುತ್ತದೆ. ನಂತರ ಅಮ್ಮಾವ್ರ ಗಂಡನಿಗೆ ಸಲ್ಲುತ್ತದೆ’ ಎಂಬ ರೋಚಕವಾದ ಕಥೆಯನ್ನು ಹೇಳಿ ಮುಗಿಸಿದ.

                                             ( ಪೆರುಮಾಳ್ ದೇವಸ್ಥಾನ)

“ ಕಥೈ ಎಪ್ಪಡಿ ಇರುಕ್ಕು ವಾದ್ಯಾರ್?” ( ಕಥೆ ಹೇಗಿದೆ ಗುರುಗಳೆ) ಎಂದು ಎಲೆ ಅಡಿಕೆ ತೆಗೆದು ಬಾಯಲ್ಲಿ ಹಾಕಿಕೊಂಡ ಆ ಹಿರಿಯ ಜೀವ ನನ್ನ ಉತ್ತರಕ್ಕಾಗಿ ಎದುರು ನೋಡಿತು. “ಪೆರಿಯಾರ್ ( ಹಿರಿಯವರೇ) ಕಥೆಯೇನೊ ಚೆನ್ನಾಗಿದೆ. ಆದರೆ ಒಂದು ಪ್ರಶ್ನೆ, ವೆಂಕಟೇಶ್ವರ ಕಪ್ಪು ಬಣ್ಣದ ವ್ಯೆಕ್ತಿ ಅವನನ್ನು ನಿಮ್ಮೂರಿನ ಬ್ರಾಹ್ಮಣ ಸುಂದರಿ ಹೇಗೆ ಒಪ್ಪಿಕೊಂಡಳು? ಜೊತೆಗೆ ದೇವರುಗಳಲ್ಲಿ ತಿರುಪತಿ ತಿಮ್ಮಪ್ಪ ಸೂಪರ್ ಸ್ಠಾರ್ ರಜನಿ ಕಾಂತ್ ಇದ್ದಂಗೆ. ಅವನು ಹೇಗೆ ಪ್ರಥಮ ಪೂಜೆಯನ್ನು ಆಕೆಗೆ ಬಿಟ್ಟುಕೊಟ್ಟು, ಎರಡನೆಯ ಪೂಜೆಗೆ ಒಪ್ಪಿಕೊಂಡ? ಎಂಬ ಪ್ರಶ್ನೆಯನ್ನು ಆ ಹಿರಿಯ ಜೀವದ ಮುಂದಿಟ್ಟೆ.  “ವಾದ್ಯಾರ್, ನಿಮಗೆ ನಮ್ಮ ಹೆಣ್ಣು ಮಕ್ಕಳ ದೌರ್ಬಲ್ಯ ತಿಳಿದಿಲ್ಲ. “ ಸುಂದರಿ, ಜೀವನ ಪೂರ್ತಿ ನಿನ್ನ ಅಂಡನ್ನು ನಾನೇ ತೊಳಿತಿನಿ ಕಣೆ” ಅಂತಾ ಹೇಳಿಬಿಟ್ಟರೆ   ಸಾಕು ಮನಸ್ಸನ್ನು ಕರಗಿಸಿಕೊಂಡು ತಕ್ಷಣ ಒಪ್ಪಿಕೊಂಡು ಬಿಡುತ್ತಾರೆ” ಎಂದು ಬಾಯಲ್ಲಿರುವ ಎಲೆ ಅಡಿಕೆ ರಸ ಗಲ್ಲದ ಮೇಲೆ ಹರಿಯುವಂತೆ ಜೋರಾಗಿ  ನಗೆಯಾಡಿದ. ನಂತರ ತೀರಾ ಗಾಂಭಿರ್ಯದಿಂದ “ ನಿಮಗೊಂದು ಸತ್ಯ ಹೇಳಲಾ? ನಾವು ಗಂಡಸರು ಇದ್ದೀವಿಯಲ್ಲಾ, ಇದು ಹುಟ್ಟು ಹಲಾಲು ಕೋರರ ಸಂತತಿ. ಅಂಡು ತೊಳೆಯುತ್ತೇವೆ ಎಂದು ಅವರನ್ನು ನಂಬಿಸಿ, ವಂಚಿಸಿ ನಾವು ಮದುವೆಯಾಗುತ್ತೀವಿ.  ಆದರೇ,  ನಮ್ಮ ವೃದ್ಧಾಪ್ಯದ ದಿನಗಳಲ್ಲಿ ನಮಗೆ ಹೆಂಡತಿಯರಾಗಿ ಬಂದ ಆ ತಾಯಂದಿರು ನಮ್ಮ ತಿಕ ಮಕ ಎರಡನ್ನೂ ತೊಳೆದು ನಮ್ಮ ಪಾಲಿನ ಅಮ್ಮಂದಿರಾಗಿ ಬಿಡುತ್ತಾರೆ ಎನ್ನುತ್ತಾ ಮೌನಕ್ಕೆ ಜಾರಿತು. ಒಬ್ಬ ಅನಕ್ಷರಸ್ತ ಹಾಗೂ ಅಪಾರ ಜೀವನಾನುಭದ  ವ್ಯೆಕ್ತಿಯೊಬ್ಬನ  ಬಾಯಲ್ಲಿ  ಅನುಭವದ ಮಾತುಗಳು ಅನುಭಾವದ ಮಾತುಗಳಾಗಿ ಮಾರ್ಪಾಡಾಗುವ  ಬಗೆಯನ್ನು ಕಂಡು ನನಗೆ ಆಶ್ಚರ್ಯವಾಯಿತು. “ವಾದ್ಯಾರ್,  ಪೆರುಮಾಳ್ ದೇವಸ್ಥಾನದಲ್ಲಿ ಒಂದು ಗಂಟೆಗೆ ಬಾಗಿಲು ಹಾಕ್ ಬಿಡ್ತಾರೆ. ಮತ್ತೇ ನೀವು ಐದು ಗಂಟೆಯವರೆಗೆ ಕಾಯಬೇಕು ನಡೀರಿ ಬಿಟ್ಟು ಬರ್ತೀನಿ ಎನ್ನುತ್ತಾ ಎದ್ದು ನಿಂತ ಆ ವೃದ್ಧ  ತನ್ನ  ಪಂಚೆ ಬಿಗಿ ಮಾಡಿಕೊಳ್ಳುತ್ತಾ. ನಮ್ಮ ಮಾರಿಯಮ್ಮನೂ, ನಾಚ್ಛಿಯಾರಮ್ಮನೂ ಅಕ್ಕ ತಂಗಿಯರು” ಎಂದಾಗ ನನಗೆ ಆಶ್ಚರ್ಯವಾಯಿತು. ಅದೇಗೆ ಸಾಧ್ಯ? ನಮ್ಮ ಮಾರಿಯಮ್ಮ ಶೂದ್ರ ದೇವತೆ, ನಾಚ್ಛಿಯಾರಮ್ಮ ಬ್ರಾಹ್ಮಣ ದೇವತೆ ಅಲ್ಲವೆ? ಎಂದು ಪ್ರಶ್ನಿಸಿದೆ. ಅದಕ್ಕೂ ಆ ಹಿರಿಯ ಜೀವದ ಎದೆಯೊಳಗೆ  ಉತ್ತರವಿತ್ತು. ವಾದ್ಯಾರ್, ದೇವರಿಗೆ ಜಾತಿ ಎಲ್ಲಿದೆ? ನಾವು ಎಂದಾದರೂ ದೇವರುಗಳ ಜಾತಿ ಧರ್ಮ ನೋಡಿಕೊಂಡು ಕೈ ಮುಗಿತಿವಾ? ಕಣ್ಣಿಗೆ ಕಂಡ ಗುಡಿ ಗೋಪುರಗಳಿಗೆ ಕೈ ಮುಗಿಯುವ ನಮ್ಮೊಳಗೆ ಇಂತಹ ಭೇದ ಭಾವ ಇರಬಾರದು” ಎಂದು ಹೇಳುತ್ತಿದ್ದಂತೆ ನಮ್ಮ ಗ್ರಾಮೀಣ ಜನಪದರ ಜಗತ್ತು ಮತ್ತು ಅವರ ನಂಬಿಕೆಗಳು ಎಷ್ಟೊಂದು ವಿಶಾಲವಾಗಿವೆ ಅನಿಸಿತು. ಆ ಕ್ಷಣಕ್ಕೆ  ನಾವು ವಿಶ್ವ ವಿದ್ಯಾನಿಲಯಗಳಲ್ಲಿ ಕಲಿಯುವುದಕ್ಕಿಂತ ಹೆಚ್ಚಾಗಿ ಇಂತಹ ಮಹಾನುಭಾವರ ಬಳಿ ಕಲಿಯುವುದು ಬಹಳಷ್ಟಿದೆ ಎನಿಸಿತು.


ಸುಮಾರು ಮಧ್ಯಾಹ್ನ 12-40 ರ ಸಮಯಕ್ಕೆ ಮಾರಿಯಮ್ಮನ ದೇವಸ್ಥಾನದಿಂದ ಒಂದು ಕಿಲೊಮೀಟರ್ ದೂರವಿದ್ದ ಪೆರುಮಾಳ್ ದೇವಸ್ಥಾನವನ್ನು ತಲುಪಿದೆ. ಕಡಿದಾದ ಕಲ್ಲಿನ ಗುಡ್ಡವನ್ನು ಹಂತ ಹಂತವಾಗಿ ಕಡಿದು ಸುಮಾರು ಅರವತ್ತು ಅಡಿ ಎತ್ತರದಲ್ಲಿ ನಿರ್ಮಿಸಿರುವ ಗರ್ಭ ಗುಡಿ ಹಾಗೂ ಬೃಹತ್ ದೇವಸ್ಥಾನದ ನಿರ್ಮಾಣ ಅಚ್ಚರಿ ಮೂಡಿಸುತ್ತದೆ. ಈ ದೇಗುಲವು ವಿಜಯ ನಗರ ಅರಸರ ಕಾಲದಲ್ಲಿ ನಿರ್ಮಾಣಗೊಂಡಿದೆ. ಕೋಟೆಯ ಹೆಬ್ಬಾಗಿಲಿನಂತಹ ಮುಖ್ಯ ದ್ವಾರದ ಬಳಿ ಸುಮಾರು 90 ವರ್ಷ ವಯಸ್ಸಿನ ಅಜಾನುಬಾಹು ಮುಖ್ಯ ಅರ್ಚಕರು ಕುರ್ಚಿಯಲ್ಲಿ ಕುಳಿತಿದ್ದರು. ಉತ್ತರ ಭಾರತದಿಂದ ಬಂದಿದ್ದ ಪ್ರವಾಸಿಗರ ತಂಡಕ್ಕೆ ದೇಗುಲದ ಒಳಗೆ ಅವರ  ಸುಮಾರು ನಲವತ್ತು ವಯಸ್ಸಿನ ಪುತ್ರ ಹಾಗೂ  ಅರ್ಚಕ  ಇಂಗ್ಲೀಷ್ ಭಾಷೆಯಲ್ಲಿ ದೇವಸ್ಥಾನ ಇತಿಹಾಸವನ್ನು ವಿವರಿಸುತ್ತಿದ್ದ. ನಾನು ಪರಿಚಯ ಮಾಡಿಕೊಂಡು ಬಂದ ಉದ್ದೇಶವನ್ನು  ವಿವರಿಸಿದೆ. ವೈಷ್ಣವ ಬ್ರಾಹ್ಮಣರಾದ ಹಿರಿಯ ಅರ್ಚಕರು ಹೇಳಿದ ಕಥೆಯಲ್ಲಿ ಅಂತಹ ವೆತ್ಯಾಸವಿರಲಿಲ್ಲ. “ಕೊಳದಲ್ಲಿ ಹೆಣ್ಣು ಮಗು ಸಿಗಲಿಲ್ಲ, ಹೆಣ್ಣು ಮಗು ರೂಪದ ಬೊಂಬೆಯೊಂದು ಸಿಕ್ಕಿತು. ನಂತರ ದೇವರ ಆರ್ಶೀವಾದದಿಂದ ಬೊಂಬೆ ಮಗುವಾಗಿ ಜೀವ ತಳೆದು ಮಕ್ಕಳಿಲ್ಲದ ತಾಯಿಯ ಮಡಿಲು ತುಂಬಿತು” ಎಂದರು. ಜಾನಪದ ಮತ್ತು ವೈಷ್ಣವ ಕಥೆಗೂ ಸ್ವಲ್ಪ ಮಾತ್ರ ವ್ಯೆತ್ಯಾಸವಿತ್ತು.
ನಂತರ ನಿಧಾನವಾಗಿ ಹೆಜ್ಜೆ ಹಾಕುತ್ತಾ ದೇಗುಲದ ಒಳಗೆ ಕರೆದೊಯ್ದು ಅಲ್ಲಿನ ನಾಚ್ಛಿಯಾರಮ್ಮನ ವಿಗ್ರಹ, ವೆಂಕಟೇಶ್ವರ ಮತ್ತು ಪದ್ಮಾವತಿಯ ವಿಗ್ರಹಗಳನ್ನು ತೋರಿಸಿದರು. 


ಜೊತೆಗೆ ಅಪರೂಪದ ಐದು ಅಡಿ ಎತ್ತರದ ಗರುಡ ವಿಗ್ರಹವನ್ನು ಮತ್ತು ಉತ್ಸವ ಮೂರ್ತಿಯಾಗಿ ಬಳಕೆಯಾಗುವ ನಾಚ್ಛಿಯಾರಮ್ಮನ ಮೂರ್ತಿ ಹಾಗೂ ಮೂರ್ತಿಗೆ ಮಾಡುವ ಶೃಂಗಾರ ಇವುಗಳನ್ನು ವಿವರಿಸಿದರು.ನಾನು ಅವರಿಗೆ ನಮಸ್ಕರಿಸಿ ಹೊರಡುವ ವೇಳೆಗೆ ಮಧ್ಯಾಹ್ನ ಒಂದೂವರೆಯಾಗಿತ್ತು. “ ಅಷ್ಟು ದೂರದಿಂದ ಬಂದಿದ್ದೀರಿ ಪ್ರಸಾದ ಸ್ವೀಕರಿಸಿ” ಎನ್ನುತ್ತಾ ಒಂದು ದೊನ್ನೆ ಸಿಹಿ ಪೊಂಗಲ್ ಹಾಗೂ ಒಂದು ದೊನ್ನೆ ವಗ್ಗರಣೆ ಹಾಕಿದ ಮೊಸರನ್ನವನ್ನುನೀಡಿದರು. ಅವುಗಳನ್ನು ಸ್ವೀಕರಿಸಿ, ಆ ಕಾಲದ ದೇವದಾಸಿಯರ ಕುಂಭಾರತಿ ನೃತ್ಯಕ್ಕಾಗಿ ದೇಗುಲದ ಆವರಣದಲ್ಲಿ ನಿರ್ಮಿಸಲಾಗಿದ್ದ ಮಂಟಪದ ಕೆಳೆಗೆ ಕುಳಿತು ಅವುಗಳನ್ನು ತಿಂದು, ನೀರು ಕುಡಿದು, ಅನಿರೀಕ್ಷಿತವಾಗಿ ದಕ್ಕಿದ ಅನ್ನದ ಋಣಕ್ಕಾಗಿ ನಾಚ್ಛಿಯಾರಮ್ಮನಿಗೆ ಮತ್ತು ಅರ್ಚಕರಿಗೆ ನಮಸ್ಕರಿಸಿ, ತಿರುವರೂರಿನತ್ತ ಪ್ರಯಾಣ ಬೆಳಸಿದೆ.

( ವಿ.ಸೂ. ಕುಂಭಕೋಣಂ ನಗರದಿಂದ 11 ಕಿಲೋಮೀಟರ್ ದೂರವಿರುವ ಈ ಊರಿಗೆ ಪ್ರತಿ ಅರ್ಧ ಗಂಟೆಗೆ ಮಿನಿ ಬಸ್ ಗಳು ದೊರೆಯುತ್ತವೆ. ಜೊತೆಗೆ ತಿರುವರೂರಿಗೆ ಹೋಗುವ ಬಸ್ ಗಳಲ್ಲಿಯೂ ಸಹ ಹೋಗಬಹುದು) 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ