ಬುಧವಾರ, ಮೇ 22, 2013

ಮಲೀನ ಗಂಗೆಯ ಗಾಥೆ- ಭಾಗ -2


ಭಾರತದ ನಾಲ್ಕು ರಾಜ್ಯಗಳಲ್ಲಿ ( ಇತ್ತೀಚೆಗೆ ಬಿಹಾರದಿಂದ ಪ್ರತ್ಯೇಖವಾದ ಜಾರ್ಖಂಡ್ ಸೇರಿ ಐದುರಾಜ್ಯ) ನಾಲ್ಕು ಕೋಟಿ ಇಪ್ಪತ್ತು ಲಕ್ಷ ಜನತೆಗೆ ನೀರುಣಿಸಿ ಪೊರೆಯುತ್ತಿರುವ ಗಂಗಾ ನದಿಗೆ ಅವಳ ಮಕ್ಕಳು ವಿಷವುಣಿಸುತ್ತಿದ್ದಾರೆ. ಇದು ಒಂದು ರೀತಿಯಲ್ಲಿ ,ಹಾಲುಣಿಸಿದ ಹೆತ್ತ ತಾಯಿಗೆ ಮಕ್ಕಳು ವಿಷವುಣಿಸುವ ದುರಂತ ಕಥನ. ಭಾರತದ ಅಭಿವೃದ್ಧಿಯು ಪಡೆದುಕೊಂಡಿರುವ  ವೇಗ ಮತ್ತು ಧಾರ್ಮಿಕ ಮೌಡ್ಯ  ಈ ಎರಡೂ  ಸಂಗತಿಗಳು ಪರೋಕ್ಷವಾಗಿ ಗಂಗಾ ನದಿಯ ಪತನಕ್ಕೆ ಕಾರಣವಾಗಿವೆ. ಕಲುಷಿತ ಗೊಂಡಿರುವ ಗಂಗಾ ನದಿಯ ಶುದ್ಧೀಕರಣದ ಯೋಜನೆ ಕಳೆದ ಕಾಲು ಶತಮಾನದಿಂದ ನಮ್ಮ ರಾಜಕಾರಣಿಗಳಿಗೆ, ಭ್ರಷ್ಟ ಅಧಿಕಾರಿಗಳಿಗೆ ಲಾಭದಾಯಕ ದಂಧೆಯಾಗಿದೆ. ಹೆಸರಾಂತ ಪತ್ರಕರ್ತ ಪಿ.ಸಾಯಿನಾಥ್ ಹೇಳುತ್ತಾರಲ್ಲ, “ಬರ ಅಂದ್ರೆ ಎಲ್ಲರಿಗೂ ಇಷ್ಟ.” ಹಾಗೆ ನಮ್ಮ ರಸ್ತೆಗಳು ಸದಾ ಕಿತ್ತು ಹೋಗಿರಬೇಕು, ಕೆರೆ, ಕಾಲುವೆ, ಜಲಾಶಯಗಳು ಹೂಳು ತುಂಬಿರಬೇಕು, , ಸರ್ಕಾರಿ ಕಛೇರಿಗಳು ಸೋರುತ್ತಿರಬೇಕು, ಸೇತುವೆಗಳು, ಕುಸಿಯುತ್ತಿರಬೇಕು. ಇವೆಲ್ಲವೂ ನಮ್ಮ ರಾಜಕಾರಣಿಗಳ ಪಾಲಿಗೆ ಸಂಭ್ರಮ ಪಡುವ ಸಂಗತಿಗಳು. ಮಲೀನಗೊಂಡ ಗಂಗಾ ನದಿ ಕೂಡ ತನ್ನ ತಟದಲ್ಲಿರುವ ಜನತೆಗೆ ನೀರುಣಿಸಿದ ಹಾಗೆ, ಕಲುಷಿತಗೊಂಡು , ರಾಜಕಾರಣಿ ಮತ್ತು ಅಧಿಕಾರಿಗಳ ಪಾಲಿಗೆ ಹಣದ ಹೊಳೆಯನ್ನೇ ಹರಿಸುವ  ಅಕ್ಷಯ ಪಾತ್ರೆಯಾಗಿದೆ.
ಗಂಗಾ ನದಿಯ ಹರಿವಿನುದ್ದಕ್ಕೂ ಪ್ರಮುಖ ನದಿಗಳು ಸೇರಿದಂತೆ ಉಪನದಿಗಳು ಸೇರಿ ಸುಮಾರು  ಮುವತ್ತು ನದಿಗಳು ಗಂಗೆಯನ್ನು ಸೇರಿಕೊಳ್ಳುತ್ತಿವೆ. ಇವುಗಳಲ್ಲಿ ಯಮುನಾ, ಗೋಮತಿ, ಆರತಿ, ಭಿಲಾಂಗ್, ರಾಮ್ ಗಂಗಾ, ಭೂರಿಗಂಡತ್, ತಮಸಿ  ದಾಮೋದರ್, ಮಹಾನಂದ, ಗಾಗಾರ, ಸೊನ್, ಕೋಶಿ, ಗಂಡತ್, ಬುಚಿಯ, ನಹರ್, ಕಾಳಿ ಪ್ರಮುಖ ನದಿಗಳು. ಈ ನದಿಗಳು ಸಹ ಕೊಳಚೆಯನ್ನು ತಂದು ಗಂಗಾ ನದಿಗೆ ವಿಲೀನಗೊಳಿಸುತ್ತಿವೆ.
ಇವುಗಳಲ್ಲಿ ಅತ್ಯಂತ ಪ್ರಮುಖ ಕೊಳಚೆ ನದಿಗಳೆಂದರೆ, ಯಮುನಾ, ಗೊಮತಿ, ದಾಮೋದರ್, ಮಹಾನದಿ, ಗಾಗಾರ, ಮತ್ತು ಕೋಶಿ ಮುಖ್ಯವಾದವುಗಳು.


ಹಿಮಾಲಯದ ಯಮುನೋತ್ರಿಯಲ್ಲಿ ಹುಟ್ಟಿ, 1378 ಕಿಲೋಮೀಟರ್ ಉದ್ದ ಹರಿಯುವ ಯಮುನಾ ನದಿ, ದೆಹಲಿ ಮತ್ತು ಆಗ್ರಾ ನದಿಯ ಸಮಸ್ತ ಕೊಳಚೆಯನ್ನು ತಂದು ಅಲಹಾಬಾದಿನ ಸಂಗಮದ ಬಳಿ ಗಂಗೆಯೊಂದಿಗೆ ವಿಲೀನಗೊಳ್ಳುವುದರ ಮೂಲಕ ತನ್ನ ಪಾಲಿನ ವಿಷವನ್ನು ಗಂಗೆಗೆ ಧಾರೆಯೆರೆಯುತ್ತಿದೆ.  ಉತ್ತರ ಪ್ರದೇಶದ ಪಿಬಿಟ್ ಬಳಿಯ ಗೋಮತಿ ತಾಲ್ (ಸರೋವರ) ನಲ್ಲಿ ಹುಟ್ಟುವ ಗೋಮತಿ ನದಿ 600 ಕಿ.ಮಿ.ದೂರ ಹರಿದು ಉತ್ತರ ಪ್ರದೇಶದ ರಾಜಧಾನಿ ಲಕ್ನೋ ನಗರ ಸೇರಿದಂತೆ, ಸುಲ್ತಾನ್ ಪುರ್ , ಭಾನುಪುರ್ ಪಟ್ಟಣಗಳ ಕೊಳಚೆಯನ್ನು ತಂದು ಗಾಜಿಪುರ್ ಬಳಿ ಗಂಗೆಯನ್ನು ಸೇರುತ್ತದೆ.
ಜಾರ್ಖಾಂಡ್ ರಾಜ್ಯದ ಪಾಲಮು ಎಂಬಲ್ಲಿ ಹುಟ್ಟುವ ದಾಮೋದರ್ ನದಿ 600 ಕಿ.ಮಿ. ಹರಿದು, ಜಾರ್ಖಾಂಡ್ ರಾಜ್ಯದ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಳು ಹೊರ ಹಾಕಿದ ಕೊಳಚೆಯನ್ನು ತಂದು ಪಶ್ಚಿಮ ಬಂಗಾಳದ ಹೂಗ್ಲಿ ಬಳಿ ಗಂಗೆಯೊಂದಿಗೆ ಕೂಡಿಕೊಳ್ಳತ್ತದೆ. ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ನಲ್ಲಿ ಜನ್ಮ ತಾಳುವ ಮಹಾನಂದ ನದಿ 360 ಕಿ.ಮಿ. ಹರಿದು ಸಿಲುಗುರಿ ನಗರ ಕೊಳಚೆ ಹೊತ್ತು ಬಂಗ್ಲಾದೇಶದ ಗಡಗಿರಿ ಎಂಬಲ್ಲಿ ಗಂಗಾನದಿಯನ್ನು ಸೇರಿಕೊಳ್ಳತ್ತದೆ.
 ಹಿಮಾಲಯದ ಕಾಲಾಪಾನಿ ಎಂಬಲ್ಲಿ ಹುಟ್ಟುವ ಗಾಗಾರ ನದಿ 323 ಕಿ.ಮಿ. ಹರಿದು ಬಿಹಾರದ ಡೋರಿಗಂಜ್ ಬಳಿ ಗಂಗಾ ನದಿಯನ್ನು ಸೇರಿದರೆ, ಬಿಹಾರದ ದುಃಖದ ನದಿ ಎಂದು ಕರೆಯಲ್ಪಡುವ ಕೋಶಿ ನದಿ, ನೇಪಾಳ ಮತ್ತು ಭಾರತದ ಗಡಿಭಾಗದಲ್ಲಿ ಜನಿಸಿ, 729 ಕಿ.ಮಿ. ಹರಿದು ಗಂಗಾ ನದಿಯೊಂದಿಗೆ ವಿಲೀನಗೊಳ್ಳುತ್ತದೆ. ಈ ಎರಡು ನದಿಗಳಿಂದ ಗಂಗಾ ನದಿಗೆ ಕೊಳಚೆ ಮತ್ತು ಕಸ ಸೇರುತ್ತಿರುವ ಪ್ರಮಾಣದಲ್ಲಿ ಶೇಕಡ 16 ರಷ್ಟು ಕೊಡುಗೆ ಇದೆ. ಹೀಗೆ ಉಪನದಿಗಳ ಕೊಡುಗೆಯ ಜೊತೆಗೆ ವಿಷಕನ್ಯೆಯಾಗಿ ಹರಿಯುತ್ತಿರುವ ಗಂಗಾ ನದಿಯ ಶುದ್ಧೀಕರಣ ಕಾರ್ಯ ಯೋಜನೆ ನಿನ್ನೆ ಮೊನ್ನೆಯದಲ್ಲ. ಇದಕ್ಕೆ 27 ವರ್ಷಗಳ ಸುಧೀರ್ಘ ಇತಿಹಾಸವಿದೆ. 1985 ರಲ್ಲಿ ಅಂದಿನ ಪ್ರದಾನಿ ರಾಜೀವ ಗಾಂಧಿಯವರು ಗಂಗಾ ಕ್ರಿಯಾ ಯೋಜನೆ ( Ganga Action Plan) ಎಂಬ ಯೋಜನೆಯಡಿ ನದಿಯನ್ನು ಶುಚಿಗೊಳಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲು 450 ಕೋಟಿ ರೂ. ಹಣ ನೀಡಿ ಹಸಿರು ನಿಶಾನೆ ತೋರಿಸಿದರು. ಅಂದಿನಿಂದ ಇಂದಿನವರೆಗೆ ಸುಮಾರು 20 ಸಾವಿರ ಕೋಟಿ ರೂಪಾಯಿಗಳನ್ನು ಗಂಗಾ ನದಿಯ ಶುದ್ಧೀಕರಣಕ್ಕಾಗಿ ವೆಚ್ಚ ಮಾಡಲಾಗಿದೆ. ಯೋಜನೆಯ ನೀಲ ನಕ್ಷೆ ತಯಾರಿಸಿ, ಸಲಹೆ ನೀಡುವ ಕಂಪನಿಗಳಿಗೆ 1100 ಕೋಟಿ ರೂಪಾಯಿಗಳನ್ನು ವ್ಯಯಮಾಡಲಾಗಿದೆ.
ಗಂಗಾ ನದಿಯ ತಟದಲ್ಲಿರುವ ನಗರ ಮತ್ತು ಪಟ್ಟಣಗಳ ಕೊಳಚೆ ನೀರನ್ನು ಸಂಸ್ಕರಿಸಿ ನದಿಗೆ ಬಿಡುವುದು, ಕಾರ್ಖಾನೆಗಳ ತ್ಯಾಜ್ಯವನ್ನು ತಡೆಗಟ್ಟುವುದು, ಮತ್ತು ಎಲ್ಲಾ ಪಟ್ಟಣಗಳ ಮತ್ತು ನಗರಗಳ ಒಳಚರಂಡಿಗಳನ್ನು ದುರಸ್ತಿ ಪಡಿಸುವುದು, ಧಾರ್ಮಿಕ ಕ್ಷೇತ್ರಗಳಲ್ಲಿ ಭಕ್ತಾಧಿಗಳಿಂದ ಸೃಷ್ಟಿಯಾಗುವ ಕಸ ಮತ್ತು ಪ್ಲಾಸ್ಟಿಕ್ ಕೈಚೀಲಗಳನ್ನು ಸಂಗ್ರಹಿಸಿ ಸಂಸ್ಕರಿಸುವುದು ಹೀಗೆ ನೂರಾರು ಯೋಜನೆಗಳ ಕನಸುಗಳನ್ನು ಯೋಜನೆಯ ಸಂದರ್ಭದಲ್ಲಿ ಹರಿಯ ಬಿಡಲಾಯಿತು. ಆದರೆ, ಸರ್ಕಾರಗಳ ನಿತ್ಲಕ್ಷ್ಯ ಮತ್ತು ವಿದ್ಯುತ್ ಅಭಾವದಿಂದ ಬಹುತೇಕ ಸಂಸ್ಕರಣಾ ಘಟಕಗಳು ಸ್ಥಗಿತಗೊಂಡಿವೆ.
ಉತ್ತರ ಪ್ರದೇಶದ ಕಾನ್ಪುರದಲ್ಲಿ ಚರ್ಮ ಹದ ಮಾಡುವ ಕೈಗಾರಿಕೆಗಳಿಂದ ಪ್ರತಿದಿನ 42 ದಶಲಕ್ಷ ರಸಾಯನಿಕಯುಕ್ತ ನೀರು ನದಿಗೆ ಸೇರುತ್ತದೆ. ಕಾನ್ಪುರದಲ್ಲಿರುವ ಸಂಸ್ಕರಣಾ ಘಟಕದ ಸಾಮರ್ಥ್ಯ ದಿನವೊಂದಕ್ಕೆ 9 ದಶಲಕ್ಷ ಕೊಳಚೆ ನೀರನ್ನು ಮಾತ್ರ ಸಂಸ್ಕರಿಸಬಲ್ಲದು. ಈ ಕಾರಣಕ್ಕಾಗಿ 2001 ರಲ್ಲಿ ಅಲಹಾಬಾದ್ ಹೈಕೋರ್ಟ್ ನಲ್ಲಿ  ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿಗೆ ಸ್ಪಂದಿಸಿದ ನ್ಯಾಯಾಲಯ ಕಾನ್ಪುರದಲ್ಲಿ 142 ಚರ್ಮ ಹದ ಮಾಡುವ ಕೈಗಾರಿಕೆಗಳನ್ನು ಮುಚ್ಚಿಸಿದೆ.
ಹಿಂದೂ ಧರ್ಮದ ಭಕ್ತರ ಪಾಲಿಗೆ ಸ್ವರ್ಗಕ್ಕೆ ಇರುವ ಏಕೈಕ ಹೆಬ್ಬಾಗಿಲು ಎಂದು ನಂಬಿಕೆ ಪಾತ್ರವಾಗಿರುವ ವಾರಾಣಾಸಿಯಲ್ಲಿ ದಿನವೊಂದಕ್ಕೆ 350 ದಶಲಕ್ಷ ಕೊಳಚೆ ನೀರು ಉತ್ಪಾದನೆಯಾಗುತ್ತಿದೆ. ಸಂಸ್ಕರಿಸುವ ಸಾಮರ್ಥ್ಯ ಕೇವಲ 122 ದಶಲಕ್ಷ ಲೀಟರ್ ಮಾತ್ರ. ಉಳಿದ ನೀರು ನೇರವಾಗಿ ನದಿಯ ಒಡಲು ಸೇರುತ್ತಿದೆ. ಎರಡನಯ ಗಂಗಾ ನದಿಯ ಶುದ್ಧೀಕರಣ ಯೋಜನೆ ಕುಂಟುತ್ತಾ ಸಾಗಿದ ಪರಿಣಾಮ, 2009ರಲ್ಲಿ ಪ್ರದಾನಿ ಡಾ.ಮನಮೋಹನ್ ಸಿಂಗ್ , ಗಂಗಾ ನದಿಯನ್ನು ರಾಷ್ಟ್ರೀಯ ನದಿ ಎಂದು ಘೋಷಿಸಿ, ರಾಷ್ಟ್ರೀಯ ನದಿ ರಕ್ಷಣಾ ಪ್ರಾಧಿಕಾರವನ್ನು ಸ್ಥಾಪಿಸಿದ್ದಾರೆ. ಈ ಮಂಡಳಿಯಲ್ಲಿ 24 ಮಂದಿ ತಜ್ಞರು ಸೇರಿದಂತೆ ಗಂಗಾ ನದಿ ಹರಿಯುವ ಐದು ರಾಜ್ಯಗಳ ಪ್ರದಾನ ಕಾರ್ಯದರ್ಶಿಗಳು, ಕೇಂದ್ರ ನೀರಾವರಿ ಸಚಿವ ಮತ್ತು ಪರಿಸರ ಖಾತೆಯಸಚಿವರು ಸಹ ಸದಸ್ಯರಾಗಿರುತ್ತಾರೆ. 2011 ರಲ್ಲಿ ನದಿ ಶುದ್ಧೀಕರಣಕ್ಕಾಗಿ 14 ಸಾವಿರ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಇದೀಗ ವಿಶ್ವ ಬ್ಯಾಂಕ್ ನಿಂದ ಗಂಗಾ ನದಿಯ ಯೋಜನೆಗೆ ಒಂದು ಲಕ್ಷ ಕೋಟಿ ರೂಪಾಯಿಗಳ  ಸಾಲದ ಒಡಂಬಡಿಕೆ ಏರ್ಪಟ್ಟಿದೆ. ಆದರೆ ನದಿಯ ಚಹರೆಯಾಗಲಿ, ಲಕ್ಷಣವಾಗಲಿ ಬದಲಾಗಲಿಲ್ಲ. ಬದಲಾಗುವುದು ನಮ್ಮ ರಾಜಕಾರಣಿಗಳಿಗೆ ಬೇಕಾಗಿಲ್ಲ. ಏಕೆಂದರೆ, ಜಗತ್ತಿನ ಪ್ರಮುಖ ಐದು ಮಲೀನ ನದಿಗಳಲ್ಲಿ ಒಂದಾಗಿರುವ ಗಂಗಾ ನದಿ ಸದಾ ಹಣದ ಹಾಲು ಕರೆಯುವ ಹಸು. ಭಾರತದ ನದಿಗಳಲ್ಲಿ ಹರಿಯುವ ಕೊಳಚೆ ಮತ್ತು ಕಸ ಕೂಡ ನಮ್ಮ ರಾಜಕಾರಣಿಗಳು, ಪಕ್ಷಗಳಿಗೆ ಲಾಭದಾಯಕ ದಂಧೆಯಾಗಿದೆ.
 ಒಂದು ಕ್ವಾರ್ಟರ್ ಅಗ್ಗದ ಸಾರಾಯಿಗೆ, ಒಂದು ದೊನ್ನೆ ಮಾಂಸಕ್ಕೆ,ಮೂರು ಕಾಸಿನ  ಕಳಪೆ ಸೀರೆಗೆ,ಮತ್ತು  ಐದು ನೂರು ಆರತಿ ತಟ್ಟೆಯ ಕಾಸಿಗೆ ನಮ್ಮ ಜನ ಚುನಾವಣೆಗಳಲ್ಲಿ ಮಾರಾಟವಾಗುತ್ತಿರುವಾಗ, ರಾಜಕಾರಣಿಗಳು ಚುನಾವಣೆಗೆ ಹಾಕಿದ ಬಂಡವಾಳವನ್ನು ಯೋಜನೆ ಮುಖಾಂತರ ಬಡ್ಡಿ ಸಮೇತ ಹಿಂದಕ್ಕೆ ಪಡೆಯುತ್ತಿದ್ದಾರೆ. ಗಂಗೆ ಮಾತ್ರ ಮೌನವಾಗಿ ಮಲೀನಗೊಂಡು ಹರಿಯುತ್ತಿದ್ದಾಳೆ., ಮುಂದೆಯೂ ಹರಿಯುತ್ತಾಳೆ.
                                               (ಮುಗಿಯಿತು)

ಸೋಮವಾರ, ಮೇ 20, 2013

ಮಲೀನ ಗಂಗೆಯ ಗಾಥೆ-1





1990 ರಿಂದ 2000 ದ ಇಸವಿಯವರೆಗೆ ಪತ್ರಿಕೋದ್ಯಮ ಬಿಟ್ಟು ಊರಿನಲ್ಲಿ ವಾಸವಾಗಿದ್ದೆ. 2005ರಲ್ಲಿ ನರ್ಮದಾ ನದಿಗೆ ನಿರ್ಮಿಸಲಾದ  ಅಣೆಕಟ್ಟು ಮತ್ತು ಮುಳುಗಡೆಯಿಂದ ಸಂತ್ರಸ್ತರಾದ ರೈತರ ಬವಣೆ ಕುರಿತು ಲೇಖಕಿ ಅರುಂಧತಿ ರಾಯ್ ಬರೆದ “The greter common Good”  ಎಂಬ ಕೃತಿಯನ್ನು ಓದುತ್ತಿದ್ದೆ. ಲೇಖಕಿ ತನ್ನ ಕೃತಿಗೆ ಬರೆದ ಪ್ರಸ್ತಾವನೆಯಲ್ಲಿ  “ ಈ ಕ್ಷಣಕ್ಕೆ ನನ್ನ ಕೃತಿಯನ್ನು ನೀವು ಕೆಳಗಿಟ್ಟರೂ ಚಿಂತೆಯಿಲ್ಲ ಆದರೆ, ಪೆಟ್ರಿಕ್ ಮ್ಯಾಕುಲೆಯವರ “ Silenced Rivers” ಕೃತಿಯನ್ನು ಓದಲು ಮರೆಯಬೇಡಿ” ಎಂದು ಬರೆದಿದ್ದ  ಮಾತು ನನ್ನನ್ನು ಆ ಕ್ಷಣಕ್ಕೆ ಹಿಡಿದು ನಿಲ್ಲಿಸಿಬಿಟ್ಟಿತು. ಆ ಕೃತಿಗಾಗಿ ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿರುವ ಓರಿಯಂಟ್  ಲಾಂಗ್ ಮನ್ ಪ್ರಕಾಶನ ಸಂಸ್ಥೆಗೆ ಐದು ಬಾರಿ ಬೇಟಿನೀಡಿದ್ದೆ. ನನ್ನ ಕುತೂಹಲ, ನಿರಾಶೆ ನೋಡಲಾರದೆ. ಪ್ರಕಾಶನ ಸಂಸ್ಥೆ ಒಂದು ಪುಸ್ತಕವನ್ನು ಹೈದರಾಬಾದಿನಿಂದ ತರಿಸಿಕೊಟ್ಟಿತು. ಆ ವೇಳೆಗೆ ಕೃತಿಗಳು ಮುಗಿದುಹೋಗಿದ್ದವು. ಮರು ಮುದ್ರಣಗೊಂಡಿರಲಿಲ್ಲ. ಆ ಕೃತಿಯನ್ನು ಓದಿದ ನಂತರ ನದಿಗಳ ಕುರಿತು ನನ್ನ ಮನೋಭಾವ ಬದಲಾಯಿತು. ಅಣೆಕಟ್ಟುಗಳ ನೆಪದಲ್ಲಿ ಜಗತ್ತಿನ ಜೀವನದಿಗಳನ್ನು ಕೊಲ್ಲುವ ಬಗೆ, ಆಳುವ ಸರ್ಕಾರಗಳ ಬ್ರಹ್ಮಾಂಡ ಭ್ರಷ್ಟಾಚಾರ, ಮುಗ್ಧಜನರಿಗೆ ಆದ ವಂಚನೆಗಳು, ಅತಂತ್ರರಾದ ಆದಿವಾಸಿಗಳು, ಮುಳುಗಡೆಯಾದ ಅರಣ್ಯಪ್ರದೇಶ ಹೀಗೆ ಸತತ ಇಪ್ಪತ್ತು ವರ್ಷ ಜಗತ್ತನ್ನು ಸುತ್ತಿ ನದಿಗಳ ನೋವಿನ ಕಥನವನ್ನು ದಾಖಲಿಸಿದ್ದಾನೆ. ಈ ಕೃತಿಯಿಂದ ಪ್ರೇರಣೆಗೊಂಡು ನಾನು ಇತ್ತೀಚೆಗೆ “ ಜೀವನದಿಗಳ ಸಾವಿನ ಕಥನ” ಎಂಬ ಕೃತಿಯನ್ನು ಬರೆದೆ.

ನನ್ನ ಪಾಲಿಗೆ ನದಿಗಳೆಂದರೆ, ಒಂದು ರೀತಿ ವ್ಯಸನದಂತಾಗಿದೆ. ದೇಶದ ಅನೇಕ ನದಿಗಳನ್ನು ಹಿಂಬಾಲಿಸಿಕೊಂಡು ಹುಚ್ಚನಂತೆ ಅಲೆದಾಡಿದ್ದುಂಟು. ಕಾಶ್ಮೀರದ ಜೀಲಂ, ಪಂಜಾಬಿನ ಸೆಟ್ಲೇಜ್, ಅಸ್ಸಾಮಿನ ಬ್ರಹ್ಮಪುತ್ರ, ಮಧ್ಯಭಾರತದ ನರ್ಮದಾ ಇವುಗಳನ್ನು ಹೊರತುಪಡಿಸಿ ಉಳಿದ ಯಾವ ನದಿಗಳು ನನ್ನ ಪಾಲಿಗೆ ಅಪರಿಚಿತವಾಗಿ ಉಳಿದಿಲ್ಲ. ಭಾರತದ ನದಿಗಳಲ್ಲಿ ಕಾವೇರಿ, ಗೋದಾವರಿ, ಗಂಗಾ ನದಿಗಳ ಮೇಲೆ ನನಗೆ ಇನ್ನಿಲ್ಲದ ಮೋಹ. ಕಾವೇರಿಯನ್ನು ಭಾಗಮಂಡಲದ ತಲಕಾವೇರಿಯಿಂದ ತಮಿಳುನಾಡಿನ ಕಾವೇರಿಪಟ್ಟಣದ ಪೂಂಪುಹಾರ್ ಬಳಿ ಸಮುದ್ರ ಸೇರುವವರೆಗೆ ಹಿಂಬಾಲಿಸಿದ್ದೇನೆ. ಗೋದಾವರಿಯನ್ನು ಮಹಾರಾಷ್ಟ್ರದ ನಾಸಿಕ್ ಬಳಿಯ ತ್ರಯಂಭಕೇಶ್ವರದಿಂದ ಹಿಡಿದು ಆಂಧ್ರದ ರಾಜಮಂಡ್ರಿಯವರೆಗೆ ಬೆಂಬತ್ತಿದ್ದೇನೆ. ಅದೇ ರೀತಿ  ಉತ್ತರಾಂಚಲದ ರುದ್ರಪ್ರಯಾಗದದಿಂದ ಹಿಡಿದು ಪಶ್ಚಿಮ ಬಂಗಾಳದ ಕೊಲ್ಕತ್ತ ನಗರದವರೆಗೆ ಸುಧೀರ್ಘ 2.500 ಕಿಲೋಮೀಟರ್ ವರೆಗೆ, ಮೋಹಿಸಿದ ಹುಡುಗಿಯನ್ನು ಬೆನ್ನು ಹತ್ತುವ ಹುಚ್ಚು ಪ್ರೇಮಿಯ ಹಾಗೆ ಸತತ ನಾಲ್ಕು ವರ್ಷಗಳ ಕಾಲ ಗಂಗಾ ನದಿಯ ತಟದ ಉದ್ದಕ್ಕೂ ತಿರುಗಾಡಿ ಎದೆಭಾರವಾಗುವಷ್ಟು ನೋವನ್ನು ತುಂಬಿಕೊಂಡು ಬಂದಿದ್ದೇನೆ.

ಇಂದು ದೇಶದ ಮಹಾನಗರಗಳ ನಡುವೆ ಹರಿದು ಅವಶೇಷಗಳಂತೆ ಕಾಣುವ ಹಾಗೂ   ಕಾಣೆಯಾದ ನದಿಗಳ ಇತಿಹಾಸವ ಒಂದು ಸಂಪುಟವಾಗಬಲ್ಲದು. ಬೆಂಗಳೂರಿನ ವೃಷಭಾವತಿ, ಚೆನ್ನೈ ನಗರದ ಕೂವಂ ಮತ್ತು ಅಡ್ಯಾರ್ ನದಿಗಳು, ಮಧುರೈ ನಗರದ ವೈಗೈ ನದಿ, ಅಹಮದಾಬಾದ್ ನಡುವೆ ಇರುವ ಸಬರಮತಿ, ಗೋವಾದ ಪಣಜಿ ಸಮೀಪ ಹರಿಯುವ ಮಾಂಡೊವಿ, ದೆಹಲಿ ಮತ್ತು ಆಗ್ರಾ ನಗರಗಳ ತಟದಲ್ಲಿ ಹರಿಯುವ ಯುಮುನಾ. ಹೈದರಾಬಾದಿನ ಮೂಸಾ ನದಿ ಇವುಗಳನ್ನು ಗಮನಿಸಿದರೆ, ಇವುಗಳು ನದಿಗಳಾ?  ಅಥವಾ ಮಹಾನ್ ಗಟಾರಗಳೊ? ಎಂಬ ಸಂಶಯ ಉಂಟಾಗುತ್ತದೆ.
ಇವೊತ್ತಿನ ದಿನಗಳಲ್ಲಿ ಪರಿಸರ ಕುರಿತು ಮಾತನಾಡುವುದು ಅಥವಾ ಬರೆಯುವುದು ಸಿನಿಕತನವೆಂಬಂತೆ ತೋರುತ್ತದೆ. ಆಧುನಿಕ ಬದುಕಿನ ಉಪಭೋಗದಲ್ಲಿ ಮುಳುಗಿ ಏಳುವವರ ದೃಷ್ಟಿಯಲ್ಲಿ ಪಕೃತಿ ಇರುವುದೆ; ನಮ್ಮ ವೈಯಕ್ತಿಕ ಭೋಗಕ್ಕೆ ಎಂಬಂತಾಗಿದೆ. ಈ ದಿನಗಳಲ್ಲಿ  ನಾವು ಜಗತ್ತನ್ನು ನೋಡಲು ದೇಹಕ್ಕೆ  ಇರುವ ಎರಡು ಕಣ್ಣುಗಳಷ್ಟೇ ಸಾಲದು, ಹೃದಯದ ಒಳಗಣ್ಣನ್ನು ತೆರೆದು ನೋಡಬೇಕಾಗಿದೆ. ಈ ನದಿಗಳಿಗೆ ಮಾತು ಅಥವಾ ಅಕ್ಷರ ಬಂದಿದ್ದರೆ, ಲಿಖಿತ ಇಲ್ಲವೆ ಮೌಖಿಕ ಪಠ್ಯದ ರೂಪದಲ್ಲಿ ಮನುಕುಲದ ಬೃಹತ್ ಹೀನ ಚರಿತ್ರೆಯೊಂದು ಈ ಜಗತ್ತಿನಲ್ಲಿ ಸೃಷ್ಟಿಯಾಗುತ್ತಿತ್ತು.

ಮನುಷ್ಯನ ಏಳುಬೀಳುಗಳಿಗೆ, ಸಾಮ್ರಾಜ್ಯದ ಉದಯ ಮತ್ತು ಪತನಗಳಿಗೆ, ಅರಮನೆ ಮತ್ತು ಗುಡಿಸಲುಗಳ ದುಃಖ ದುಮ್ಮಾನಗಳಿಗೆ, ಜನಸಾಮಾನ್ಯರ ನಿಟ್ಟುಸಿರುಗಳಿಗೆ ಮೌನ ಸಾಕ್ಷಿಯಾಗಿ, ಶತಮಾನಗಳುದ್ದಕ್ಕೂ   ತಣ್ಣಗೆ ಹರಿದ ನದಿಗಳ ಒಡಲೊಳಗೆ ಎಂತಹ ಚರಿತ್ರೆಗಳಿರಬಹುದು? ಒಮ್ಮೆ ಯೋಚಿಸಿನೋಡಿ. ಇಂತಹ ಬೃಹತ್ ಚರಿತ್ರೆಯನ್ನು ತನ್ನೊಡಲೊಳಗೆ ಪೋಷಿಸಿಕೊಂಡು ಬಂದಿರುವ  ನಮ್ಮ ಗಂಗಾ ನದಿಯ ದುರಂತ ಕಥನ ಅಕ್ಷರ ಮತ್ತು ಮಾತಿಗೆ ಮೀರುವಂತಹದ್ದು. ಜಗತ್ತಿನ ಮಹಾ ನದಿಗಳಾದ ನೈಲ್ ಮತ್ತು ಅಮೆಜಾನ್ ನದಿಗಳ ಜೊತೆ ಪ್ರಖ್ಯಾತಿ ಹೊಂದಿರುವ ಗಂಗಾ ನದಿಗೆ ಅಂಟಿಕೊಂಡ ಪುರಾಣ ಕಥೆಗಳು, ಐತಿಹ್ಯಗಳು, ಧಾರ್ಮಿಕ ನಂಬಿಕೆಗಳು, ಅದರ ಆಳ, ಉದ್ದ, ವಿಸ್ತಾರ ಇವೆಲ್ಲವೂ ಶಾಪವಾಗಿ ಪರಿಣಮಿಸಿದವು

ಸಮುದ್ರ ಮಟ್ಟದಿಂದ 12 ಸಾವಿರ ಎತ್ತರದ ಹಿಮಾಲಯ ತಪ್ಪಲಲ್ಲಿ ಹುಟ್ಟಿ, 255 ಕಿಲೋಮೀಟರ್ ಉದ್ದ ಕೆಳ ಭಾಗಕ್ಕೆ ಭಾಗಿರಥಿ ನದಿಯಾಗಿ ಹರಿದು, ಉತ್ತರಕಾಂಡದ ರುದ್ರಪ್ರಯಾಗದ ಸಮೀಪ ಅಲಕನಂದಾ  ಮತ್ತು ಮಂದಾಕಿನಿ ನದಿಗಳನ್ನು ಕೂಡಿಕೊಂಡು ಗಂಗಾನದಿಯಾಗಿ ಹರಿಯುತ್ತದೆ. ನಂತರ ಅಲಹಾಬಾದ್ ನಗರದಲ್ಲಿ ಮತ್ತೊಂದು ಪ್ರಮುಖ ನದಿಯಾದ ಯಮುನೆಯನ್ನು ಸೇರಿಕೊಂಡು, 2500 ಕಿಲೋ ಮೀಟರ್ ಉದ್ದ ಹರಿಯುವ ಗಂಗಾ ನದಿ ಈ ದೇಶದ 42 ಕೋಟಿ ಜನರ ಜೀವನಾಡಿಯಾಗಿದೆ. ಪ್ರತಿ ದಿನ ಈ ನದಿಯಲ್ಲಿ ಒಂದುಕೋಟಿ ಹಿಂದೂ ಭಕ್ತರು ಪವಿತ್ರ ಸ್ನಾನದ ಹೆಸರಿನಲ್ಲಿ ಮುಳುಗಿ ಏಳುತ್ತಿದ್ದಾರೆ. ತಾನು ಹರಿಯುವ ನಾಲ್ಕು ರಾಜ್ಯಗಳಾದ ಉತ್ತರಕಾಂಡ, ಉತ್ತರಪ್ರದೇಶ, ಬಿಹಾರ, ಪಶ್ಚಿಮ ಬಂಗಾಳದ ಜನರ ನೀರಿನ ದಾಹ ತೀರಿಸಿ, ಅವರ ನೆಲಗಳಿಗೆ ನೀರುಣಿಸಿ, ಅವರು ವಿಸರ್ಜಿಸಿದ ಮಲ, ಮೂತ್ರ ಮತ್ತು ಅಪಾಯಕಾರಿ ವಿಷಯುಕ್ತ ತ್ಯಾಜ್ಯಗಳನ್ನು ಹೊತ್ತು ಕಡಲು ಸೇರುವ ಗಂಗಾ ನದಿ ಈಗ ಜೀವನದಿಯಾಗುವ ಬದಲು ವಿಷಕನ್ಯೆಯಂತಹ ನದಿಯಾಗಿದೆ.
ಕಳೆದ 25 ವರ್ಷಗಳಲ್ಲಿ ನದಿಗೆ ಸೇರುತ್ತಿರುವ ತ್ಯಾಜ್ಯ ಮೂರು ಸಾವಿರ ಪಟ್ಟು ಹೆಚ್ಚಾಗಿದೆ. ಈ ಕೆಳಗಿನ ಅಂಶಗಳು  ನಮ್ಮನ್ನು ಬೆಚ್ಚಿ ಬೀಳಿಸುತ್ತದೆ.
ಪ್ರತಿ ದಿನ ಉತ್ತರಕಾಂಡದ 14 ಮಹಾನ್ ಚರಂಡಿ ಅಥವಾ ಗಟಾರಗಳಿಂದ 440 ದಶಲಕ್ಷ ಲೀಟರ್ ಕೊಳಚೆ ನೀರು, 42 ಟನ್ ಕಸ ಹಾಗೂ ಉತ್ತರ ಪ್ರದೇಶದ 45 ಗಟಾರಗಳಿಂದ 3289 ದಶಲಕ್ಷ ಲೀಟರ್ ಕೊಳಚೆ ಮತ್ತು 761 ಟನ್ ಕಸ ಗಂಗೆಯ ಒಡಲು ಸೇರುತ್ತಿದೆ. ಅದೇ ರೀತಿ ಬಿಹಾರದಲ್ಲಿ 25 ಗಟಾರಗಳಿಂದ 579 ದಶಲಕ್ಷ ಲೀಟರ್ ಕೊಳಚೆ ಮತ್ತು 99 ಟನ್ ಕಸ, ಮತ್ತು ಪಶ್ಚಿಮ ಬಂಗಾಳ ರಾಜ್ಯದ 54 ಗಟಾರಗಳಿಂದ 1779 ದಶಲಕ್ಷ ಲೀಟರ್ ಕೊಳಚೆ, 97 ಟನ್ ಕಸ ನದಿಗೆ ಸೇರುತ್ತಿದೆ. ಇದರಿಂದಾಗಿ ನದಿಯ ನೀರಿನಲ್ಲಿ ಆಮ್ಲಜನಕದ ಬಿಡುಗಡೆಯ ಪ್ರಮಾಣ  ಮೈನಸ್ ಆರಕ್ಕೆ ಕುಸಿದಿದೆ.

ಗಂಗಾ ನದಿಯ ಒಡಲು ಸೇರುತ್ತಿರುವ  ಕೊಳಚೆ ನೀರು ಮತ್ತು ವಿಷಯುಕ್ತ ವಸ್ತುಗಳಲ್ಲಿ ಜವಳಿ ಉದ್ಯಮದಿಂದ ಶೇಕಡ 2, ಚರ್ಮ ಹದ ಮಾಡುವ ಕೈಗಾರಿಕೆಗಳಿಂದ ಶೇಕಡ 5, ಸಕ್ಕರೆ ಕಾರ್ಖಾನೆಗಳಿಂದ ಶೇಕಡ 19, ರಸಾಯನಿಕ ಕಾರ್ಖಾನೆಗಳಿಂದ ಶೇಕಡ 20 , ಮದ್ಯಸಾರ ತಯಾರಿಸುವ ಡಿಸ್ಟಲರಿಗಳಿಂದ ಶೇಕಡ 7 ರಷ್ಟು, ಕಾಗದ ಕಾರ್ಖಾನೆಗಳಿಂದ ಶೇಕಡ 40 ರಷ್ಟು, ಆಹಾರ ಮತ್ತು ತಂಪು ಪಾನಿಯ ಘಟಕಗಳಿಂದ ಶೇಕಡ 1 ರಷ್ಟು ಮತ್ತು ಇತರೆ ಘಟಕಗಳಿಂದ ಶೇಕಡ 6 ರಷ್ಟು ಪಾಲು ಇದೆ ಎಂದು ವಿಜ್ಙಾನಿಗಳು ಅಧ್ಯಯನದಿಂದ ದೃಢಪಡಿಸಿದ್ದಾರೆ. ಹೀಗಾಗಿ ದಿವೊಂದಕ್ಕೆ 138 ಮಹಾನ್ ಚರಂಡಿಯ ಕಾಲುವೆಗಳಿಂದ 6087 ದಶಲಕ್ಷ ಲೀಟರ್ ಕೊಳಚೆ ಮತ್ತು 999 ಟನ್ ಕಸ ಗಂಗಾ ನದಿಯ ಪಾಲಾಗುತ್ತಿದೆ ಎಂದು ಅಂದಾಜಿಸಲಾಗಿದೆ.


ನಮ್ಮನ್ನಾಳುವ ಸರ್ಕಾರಗಳಿಗೆ ಕೈಗಾರಿಕಾ ನೀತಿಯಲ್ಲಿ ಕಡಿವಾಣವಿಲ್ಲದ ಅವಿವೇಕತನ ಮತ್ತು ಸಾಮಾಜಿಕ ಹಾಗೂ ಧಾರ್ಮಿಕ ನಂಬಿಕೆಗಳು ಗಂಗಾನದಿಯ ಪಾಲಿಗೆ ಶತ್ರುಗಳಾಗಿವೆ. ಅಕ್ರಮ ಸಂತಾನದಿಂದ ಹುಟ್ಟಿದ ಹಸುಗೂಸುಗಳು, ಸತ್ತು ಹೋದ ದನಕರುಗಳ ಕಳೆಬರಗಳು ಹಾಗೂ ಗಂಗಾ ನದಿಗೆ ಎಸೆದರೆ, ಸತ್ತವರು ಸ್ವರ್ಗ ಸೇರುತ್ತಾರೆ ಎಂಬ ಮೂಡ ನಂಬಿಕೆಗಳಿಂದ ನದಿಗೆ ಬಿಸಾಡಿದ ಹೆಣಗಳು ಇವೆಲ್ಲವನ್ನೂ ನೋಡಿದರೆ, ಪುಣ್ಯ ನದಿ ಎನಿಸಿಕೊಳ್ಳುವ, ಪಾಪನಾಶಿನಿ ಎನ್ನುವ ಗಂಗೆಯ ನೀರನ್ನು ಕೊಲ್ಕತ್ತ ನಗರದ ಬಳಿ ಕೈಯಿಂದ ಮುಟ್ಟಲು ಅಸಹ್ಯವಾಗುತ್ತದೆ. ರುದ್ರಪ್ರಯಾಗದ ಬಳಿ ಸ್ಪಟಿಕದ ನೀರಿನಂತೆ ಹರಿಯುವ ಗಂಗಾನದಿ, ಕೊಲ್ಕತ್ತ ನಗರದ ತಟದಲ್ಲಿ ಹೂಗ್ಲಿ ನದಿ ಹೆಸರಿನಲ್ಲಿ ಕಪ್ಪಗೆ ಹರಿಯುತ್ತದೆ. ಕೊಲ್ಕತ್ತದ ಹೌರ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಅಥವಾ ಬೇಲೂರು ಮಠದ ರಾಮಕೃಷ್ಣ ಆಶ್ರಮದ ಹಿಂದೆ ಹರಿಯುವ ನದಿಯ ನೀರು ನೋಡಿದಾಗ ಕಣ್ಣಲ್ಲಿ ನೀರು ಬರುತ್ತದೆ.
       ( ಮುಂದುವರಿಯುವುದು)


ಶನಿವಾರ, ಮೇ 18, 2013

ಮಾನ್ಸಂಟೊ ಮಹಾ ಮಾರಿಯ ಕಥನ-3

  1. ಕಳೆದ ಆರು ತಿಂಗಳಿಂದ  ಪಾಶ್ಚಿಮಾತ್ಯ ರಾಷ್ಟ್ರಗಳು ಏಷ್ಯಾ ರಾಷ್ಟ್ರಗಳ ಮೇಲೆ ಶತಮಾನಗಳ ಕಾಲ ನಡೆಸಿದ ದೌರ್ಜನ್ಯ ಕುರಿತಂತೆ ಅಧ್ಯಯನ ಮಾಡುತ್ತಿದ್ದೇನೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿಯಾಗಿರುವ ಲೇಖಕ ಹಾಗೂ ನ್ಯೂಯಾರ್ಕ್ ಟೈಮ್ಸ್ ಮತ್ತು ಗಾರ್ಡಿಯನ್ ಪತ್ರಿಕೆಗಳಿಗೆ ಅಂಕಣಕಾರರಾಗಿರುವ ಪಂಕಜ್ ಮಿಶ್ರಾ ಬರೆದಿರುವ “ From The Ruins Of Empire’ ( The Revolt Against The West And The Remaking of Asaia) ಎಂಬ ಕೃತಿ ಪಶ್ಚಿಮದ ಜಗತ್ತು ನಮ್ಮ ಏಷ್ಯಾ ರಾಷ್ಟ್ರಗಳ ಸಂಸ್ಕೃತಿ ,ಇಲ್ಲಿನ ಸಂಪತ್ತು ಮತ್ತು ಜೀವ ಜಗತ್ತನ್ನು ದೋಚಿದ ಬಗ್ಗೆ ಲೇಖಕ ತುಂಬಾ ರೋಚಕವಾಗಿ  ಬರೆದಿದ್ದಾನೆ.  ಈ ಕೃತಿಯಲ್ಲಿ 18 ನೇ ಶತಮಾನದಲ್ಲಿ ಪ್ರಾನ್ಸಿನ ನೆಪೋಲಿಯನ್, ಈಜಿಪ್ತ ರಾಷ್ಟ್ರದ ಮೇಲೆ ದಂಡೆತ್ತಿ ಹೋಗಿ ಅಲ್ಲಿನ ಇಸ್ಲಾಂ ಧರ್ಮವನ್ನು ಹಾಗೂ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕನ್ನು ಕಲುಷಿತಗೊಳಿಸಿದ ಬಗ್ಗೆ ಕೂಡ ಒಂದು ಅಧ್ಯಾಯವಿದೆ. ಈ ಸಂಗತಿಯನ್ನು ಪಂಕಜ್ ಮಿಶ್ರಾ, ನಮ್ಮ ನಡುವಿನ ಪ್ರಖ್ಯಾತ ಚಿಂತಕ ಎಡ್ವರ್ಡ್ ಸೈಯದ್ ರವರ “ ಓರಿಯಂಟಲಿಸಂ” ಕೃತಿಯಿಂದ ಚರ್ಚೆಗೆ ಎತ್ತಿಕೊಂಡಿದ್ದಾನೆ. ಎಡ್ವರ್ಡ್ ಸೈಯದ್ ಎಲ್ಲಾ ಸಂಗತಿಗಳನ್ನು ಅತ್ಯಂತ  ತಣ್ಣನೆಯ ಧ್ವನಿಯಲ್ಲಿ ಚರ್ಚೆ ಮಾಡಿದರೆ, ಪಂಕಜ್ ಮಿಶ್ರಾ ಅತ್ಯಂತ ಭಾವಾವೇಶದಿಂದ ಚರ್ಚಿಸಿದ್ದಾನೆ. ಈಸ್ಟ್ ಇಂಡಿಯಾ ಕಂಪನಿ, ಪೋರ್ಚುಗೀಸರು, ಡಚ್ಚರು, ಪ್ರೆಂಚರು ಏಷ್ಯಾವನ್ನು ದೋಚಿದ ಸಂಗತಿಯ ವಿವರಗಳನ್ನು ಕೊಡುತ್ತಾ ಹೋಗುವ ಪರಿ ನಮ್ಮನ್ನು ಬೆರುಗುಗೊಳಿಸುತ್ತದೆ.. ಈ ಇಪ್ಪತ್ತೊಂದನೇ ಶತಮಾನದಲ್ಲಿ ನಿಂತು ಅಂದಿನ ಚರಿತ್ರೆಯ ದುರಂತಗಳನ್ನು ಅವಲೋಕಿಸಿದಾಗ, ನನಗೆ ಏನೇನೂ ಬದಲಾವಣೆ ಕಾಣುವುದಿಲ್ಲ. ಅಂದು ಬ್ರಿಟೀಷರು, ಪ್ರೆಂಚರು, ಪೋರ್ಚುಗೀಸರು, ಡಚ್ಚರು ಇದ್ದರು ಇಂದು ಅವರ ಮುಂದುವರಿದ ಸಂತತಿಯ ಹಾಗೆ ಅಥವಾ ಪ್ರತಿನಿಧಿಗಳ ಹಾಗೆ ಬಹುರಾಷ್ಟ್ರೀಯ ಕಂಪನಿಗಳು ಇವೆ ಅಷ್ಟೆ.

    ಬಹು ರಾಷ್ಟ್ರೀಯ ಕಂಪನಿಗಳ ಹುನ್ನಾರಗಳು ಅರ್ಥ ನಾವು ಮಾಡಿಕೊಳ್ಳಲು ಸಾಧ್ಯವಾಗದಷ್ಟು ಸಂಕೀರ್ಣವಾಗಿವೆ. ಉದಾಹರಣೆಗೆ ಮಾನ್ಸಂಟೊ ಅಥವಾ ಇನ್ನಿತರೆ ಕಂಪನಿಗಳು ತಮ್ಮ ಬೀಜ ಸಾಮ್ರಾಜ್ಯದ ವಿಸ್ತಾರಕ್ಕಾಗಿ  ಹೊರಡಿಸಿರುವ ಹೇಳಿಕೆಗಳನ್ನು ಗಮನಿಸಿ. ಜಗತ್ತಿನಲ್ಲಿ ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಧಾನ್ಯಗಳನ್ನು ಬೆಳೆಯಬೇಕು. ಸಾಂಪ್ರದಾಯಕ ಬೀಜಗಳಿಂದ ಆಹಾರ ಉತ್ಪಾದನೆಯನ್ನು ದ್ವಿಗುಣಗೊಳಿಸಲು ಸಾಧ್ಯವಿಲ್ಲ ಹಾಗಾಗಿ ಟರ್ಮಿನೇಟರ್ ತಂತ್ರಜ್ಙಾನ ದಿಂದ ( ನಿರ್ಬೀಜಿಕರಣ) ತಯಾರಿಸಿದ ಹೈಬ್ರಿಡ್ ಬೀಜಗಳು ಮತ್ತು ಜೈವಿಕ ತಂತ್ರಜ್ಞಾನದಿಂದ ತಯಾರಿಸಲಾದ ಕುಲಾಂತರಿ ತಳಿಗಳ ಬೀಜ ಗಳಿಂದ ಕೃಷಿ ಉತ್ಪಾದನೆಯನ್ನು ಹೆಚ್ಚಿಸಿ ಜಗತ್ತಿನ ಹಸಿವನ್ನು ನೀಗಿಸುವುದು ನಮ್ಮ ಗುರಿ ಎಂದು ಬಹುತೇಕ ಕಂಪನಿಗಳು ಹೇಳಿಕೊಂಡಿವೆ, ( ಇವುಗಳಲ್ಲಿ ಮಾನ್ಸಂಟೊ, ಕಾರ್ಗಿಲ್ ಪಿಪ್ಜರ್ ಕಂಪನಿಗಳು ಮುಂಚೂಣಿಯಲ್ಲಿವೆ)
    ಈ ಕಂಪನಿಗಳ ಆಶಯ ನಿಜವೇ ಆಗಿದ್ದರೆ, ಹಸಿವನ್ನು ನೀಗಿಸಲು, ಭತ್ತ, ಗೋಧಿ, ಮೆಕ್ಕೆಜೋಳ ಬೆಳೆಗಳ ಮೇಲೆ ಮಾತ್ರ ತಮ್ಮ ಗಮನವನ್ನು ಕೇಂದ್ರೀಕರಿಸಬೇಕಿತ್ತು. ತರಕಾರಿ ಬೆಳೆಗಳು, ಎಣ್ಣೆಕಾಳು ಬೆಳೆಗಳ ಬೀಜಗಳನ್ನು ಕುಲಾತರ ಗೊಳಿಸುವ ಅಗತ್ಯವೇನಿತ್ತು?

    ಜಗತ್ತಿನ ಕೃಷಿಲೋಕದ ಸರಪಳಿಯ ಕೊಂಡಿಯಾಗಿರುವ ಮತ್ತು ರೈತರ ಜೀವನಾಡಿಯಾಗಿರುವ ಬೀಜ ಸ್ವಾತಂತ್ರ್ಯವನ್ನು ಹರಣ ಮಾಡಿದರೆ, ಈ ಕಂಪನಿಗಳು ಇಡೀ ವಿಶ್ವವನ್ನು ಗೆದ್ದಂತೆ. ಹಾಗಾಗಿ ಜಗತ್ತಿನ ಎಲ್ಲಾ ವಿಧವಾದ ಸಾಂಪ್ರದಾಯಿಕ ಬೀಜಗಳಿಗೆ ಇತರೆ ಪ್ರಾಣಿ ಇಲ್ಲವೆ ಸಸ್ಯ ಪ್ರಭೇದಗಳ ವಂಶವಾಹಿಗಳನ್ನು  ಜೋಡಿಸಿ, ಬೀಜಗಳನ್ನು ನಿರ್ಬೀಜಿಕರಣಗೊಳಿಸುವುರ ಮೂಲಕ ಅವುಗಳ ಪುನರತ್ಪತ್ತಿಯ ಶಕ್ತಿಯನ್ನು ಕೊಲ್ಲಲಾಗುತ್ತಿದೆ.
    ಮಾನ್ಸಂಟೊ ಸೇರಿದಂತೆ ಬಹುರಾಷ್ಟ್ರೀಯ ಕಂಪನಿಗಳದು ಒಂದೇ ಅಜೆಂಡಾ. ಅದು ಜಗತ್ತಿನೆಲ್ಲೆಡೆ, ಏಕರೂಪಿ ಬೆಳೆ ಸಂಸ್ಕೃತಿ,, ಏಕರೂಪಿ ಆಹಾರ ಸಂಸ್ಕೃತಿ, ಏಕರೂಪಿ ಉಡುಪಿನ ಸಂಸ್ಕತಿ ಇರಬೇಕು. ಅಲ್ಲಿ ವೈವಿದ್ಯತೆಗೆ ಅವಕಾಶವಿಲ್ಲ. ಹಾಗಾಗಿ ನಮ್ಮ ಕೈಗೆ  ತಿನ್ನಲು ಪಿಜ್ಜಾ, ಬರ್ಗರ್, ಕೆಂಟುಕಿ ಚಿಕನ್  ಕೊಟ್ಟಿವೆ, ಕುಡಿಯಲು ಪೆಪ್ಸಿ, ಕೊಕಾ ಕೋಲಗಳನ್ನು ನೀಡಿವೆ, ಉಡಲು ಜೀನ್ಸ್, ಬರ್ಮುಡ ಚಡ್ಡಿಗಳಿವೆ. ಇನ್ನೇನು ಬೇಕು? ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಆಧುನಿಕ ತಲೆಮಾರನ್ನು ಗಮನಿಸಿದರೆ ಇದು ಅರ್ಥವಾಗುತ್ತದೆ. ಇದರ ಹಿಂದೆ ಇಡೀ ಜಗತ್ತನ ತಮ್ಮ ಸುಪರ್ದಿಗೆ ತೆಗೆದುಕೊಳ್ಳುವ ಹುನ್ನಾರವಿದೆ. ಅದನ್ನು ಅರ್ಥ ಮಾಡಿಕೊಳ್ಳುವ ಮನಸ್ಸುಗಳು ಬೇಕಾಗಿವೆ. ಹಿಂದಿನ ಕಾಲದಲ್ಲಿ ಒಂದು ರಾಷ್ಟ್ರವನ್ನು ವಶಪಡಿಸಿಕೊಳ್ಳಲು ಅಪಾರ ಪ್ರಮಾಣದ ಸೇನೆ, ಯುದ್ಧ ಸಾಮಾಗ್ರಿಗಳಾದ ಶಸ್ತ್ರಾಸ್ತ್ರಗಳು ಬೇಕಿತ್ತು. ಈಗ ಅವುಗಳ ಅಗತ್ಯವಿಲ್ಲ. ಆಹಾರ ಸಂಸ್ಕೃತಿಯೊಂದನ್ನು ಬದಲಿಸಿದರೆ ಸಾಕು ಇಡೀ ರಾಷ್ಟವನ್ನು ಗೆಲ್ಲಬಹುದು. ಇವೊತ್ತು ಮಾನ್ಸಮಟೊ ಸೇರಿದಂತೆ ಬಹುತೇಕ ಕಂಪನಿಗಳು ಈ ಕೆಲಸವನ್ನು ಅತ್ಯಂತ ಜಾಗರೂಕತೆಯಿಂದ ನಿರ್ವಹಿಸುತ್ತಿವೆ.
    ಭಾರತದಲ್ಲಿ ಅತ್ಯಧಿಕ ಗೋಧಿ ಬೆಳೆಯುವ ಪಂಜಾಬಿನ ರೈತರನ್ನು ದಿಕ್ಕು ತಪ್ಪಿಸುವ ನಿಟ್ಟಿನಲ್ಲಿಯಶಸ್ವಿಯಾದ  ಪೆಪ್ಸಿ ಕಂಪನಿ ಹತ್ತು ವರ್ಷದ ಹಿಂದೆ ಗೋಧಿ ಬದಲಾಗಿ ರಪ್ತು ಆಧಾರಿತ ಯೋಜನೆಯಡಿ ಹಣ್ಣು ತರಕಾರಿ ಬೆಳೆಯಲು ಪ್ರೋತ್ಸಾಹಿಸಿತು. ರೈತರು ಕಂಪನಿಯ ಮಾತುಗಳನ್ನು ನಂಬಿ, ಹೈಬ್ರಿಡ್ ಬೀಜಗಳನ್ನು ಬಿತ್ತಿ, ಅಪಾರ ಮಟ್ಟದ ರಸಾಯನಿಕ ಗೊಬ್ಬರವನ್ನು ಭೂಮಿಗೆ ಸುರಿದು, ಬೆಳೆಗೆ ಕ್ರಿಮಿ ನಾಶಕ ಸಿಂಪಡಿಸಿ ಹಣ್ಣು ತರಕಾರಿಗಳನ್ನು ಬೆಳೆದರು. ಜೊತೆಗೆ ಫಲವತ್ತಾದ ತಮ್ಮ ಭೂಮಿಯನ್ನು ಚೌಳು ಭೂಮಿಯನ್ನಾಗಿ ಪರಿವರ್ತಿಸಿಕೊಂಡರು. ಅಮೇರಿಕಾದಲ್ಲಿ ಅಧಿಕ ಮಟ್ಟದಲ್ಲಿ ಬೆಳೆಯುವ ಗೋಧಿಯನ್ನು ಭಾರತ ಆಮದು ಮಾಡಿಕೊಳ್ಳುವಂತೆ ಮಾಡಲು, ಪಂಜಾಬಿನ ರೈತರಿಂದ ಗೋಧಿ ಬೆಳೆಯನ್ನು ಕೈ ತಪ್ಪಿಸುವ ಹುನ್ನಾರ ಈ ಯೋಜನೆಯ ಹಿಂದೆ ಅಡಗಿತ್ತು.


    ಭಾರತದ ಭ್ರಷ್ಟ ವ್ಯವಸ್ಥೆಯನ್ನು ಸಮರ್ಪಕವಾಗಿ ಬಳಸಿಕೊಳ್ಳತ್ತಿರುವ ಬಹುರಾಷ್ತ್ರೀಯ ಕಂಪನಿಗಳು ಇಲ್ಲಿನ ವಿಜ್ಞಾನಿಗಳನ್ನು ಹಣದ ಆಮೀಷದ ಮೂಲಕ ಭ್ರಷ್ಟರನ್ನಾಗಿ ಮಾಡಿ ಭಾರತದ ಕೃಷಿ ವ್ಯವಸ್ತೆಯ ಅಡಿಪಾಯಕ್ಕೆ ಅಪಾಯವನ್ನು ತಂದೊಡ್ಡಿದ್ದಾರೆ.
    ಭಾರತದಲ್ಲಿ  ರಾಷ್ಟ್ರಿಯ ಜೀವ ವೈವಿಧ್ಯತಾ ಪ್ರಾಧಿಕಾರ ಮಂಡಳಿ ಅಸ್ತಿತ್ವದಲ್ಲಿದ್ದು, ಕೃಷಿ ಅಥವಾ ಜೈವಿಕ ತಂತ್ರಜ್ಙಾನ ಕುರಿತ ಯಾವುದೇ ಪ್ರಯೋಗಕ್ಕೆ ಮುನ್ನ ಈ ಮಂಡಳಿಯಿಂದ ಅನುಮತಿ ಪಡೆಯಬೇಕು. ಆದರೆ, ನಮ್ಮ ಧಾರವಾಡದ ಕೃಷಿ ವಿ.ವಿ.ಯ ವಿಜ್ಞಾನಿಗಳು ಮಾನ್ಸಂಟೊ ಕಂಪನಿಯ ಜೊತೆ ಶಾಮೀಲಾಗಿ ಬಿ.ಟಿ. ಬದನೆ ಪ್ರಯೋಗ ಕೈಗೊಂಡರು. ಇದೇ ರೀತಿ ಕೊಯಮತ್ತೂರಿನ ಕೃಷಿ.ವಿ.ವಿ. ವಿಜ್ಞಾನಿಗಳು ಬಿ.ಟಿ.ಭತ್ತದ ಪ್ರಯೋಗ ಕೈಗೊಂಡರು. ಭಾರತದಲ್ಲಿನ ಕಾನೂನುಗಳು ಸಡಿಲಗೊಂಡಿರುವಾಗ ಮಾನ್ಸಂಟೊ ಕಂಪನಿಗೆ ಇಲ್ಲಿನ ರೈತರು ಮತ್ತು ವಿಜ್ಞಾನಿಗಳು ಪುಟ್ ಬಾಲ್ ಆಟಗಾರನ ಕಾಲ್ಚೆಂಡುಗಳಾಗಿದ್ದಾರೆ.
    ಮಾನ್ಸಂಟೊ ಮತ್ತು ಇತರೆ ಕಂಪನಿಗಳಿಗೆ ನಮ್ಮ ಆಹಾರ ಭೆಳೆಗಳು  ಮತ್ತು ತರಕಾರಿಗಳ ಮೇಲೆ ಮಾತ್ರ ಕಣ್ಣು ಬಿದ್ದಿಲ್ಲ, ನಮ್ಮ ಎಣ್ಣೆಕಾಳುಗಳ ಬೆಳೆಗಳನ್ನು ನಾಶ ಮಾಡಲು ಅವು ಹೊರಟಿವೆ. 1970 ರ ದಶಕದಲ್ಲಿ ಭಾರತಕ್ಕೆ ಅಪರಿಚಿತವಾಗಿದ್ದ ಸೋಯಾ ಅವರೆಯನ್ನು ಈ ಕಂಪನಿಗಳು ಅಮೇರಿಕಾದಿಂದ ತಂದು ಇಲ್ಲಿ ಪರಿಚಯ ಮಾಡಿದವು. ನಿಜಕ್ಕೂ ಇದು ಅನುತ್ಪಾದಕ ಬೆಳೆ ಎಂದರೆ, ತಪ್ಪಾಗಲಾರದು. ಭಾರತದಲ್ಲಿ ಬೆಳೆಯಲಾಗುತ್ತಿರುವ ಸಾಸಿವೆ ಬೆಳೆಯಲ್ಲಿ ಒಂದು ಹೆಕ್ಟೇರ್ ಗೆ 175 ಕೆ.ಜಿ.ಎಣ್ಣೆ ಸಿಗುತ್ತದೆ. ಶೇಂಗಾ ಬೆಳೆಯಿಂದ 150 ಕೆ.ಜಿ. ಎಣ್ಣೆ ಸಿಗುತ್ತಿದೆ, ಸೋಯಾ ಅವರೆಯಿಂದ ಸಿಗುತ್ತಿರುವುದು ಕೇವಲ 115ರಿಂದ 125 ಕೆ.ಜಿ. ಎಣ್ಣೆ ಮಾತ್ರ. ಎಣ್ಣೆ ತೆಗೆದ ನಂತರ ಉಳಿಯುವ ಹಿಂಡಿಯ ಪ್ರಮಾಣ ಸಾಸಿವೆಯಲ್ಲಿ325 ಕೆ.ಜಿ. ಶೇಂಗಾದಲ್ಲಿ 200 ಕೆ.ಜಿ. ಯಾದರೆ, ಸೋಯಾ ಅವರೆಯಲ್ಲಿ 645 ಕೆ.ಜಿ. ಹಿಂಡಿ ಉತ್ಪಾದನೆಯಾಗುತ್ತಿದೆ.

     ಸೋಯಾ ಅವರೆಯ ಹಿಂಡಿಯನ್ನು ಮಾಂಸಕ್ಕಾಗಿ ಬೆಳಸುವ ಗೋವುಗಳ ಆಹಾರವಾಗಿ ಯುರೋಪಿಯನ್ ರಾಷ್ಟ್ರಗಳು ಆಮದು ಮಾಡಿಕೊಳ್ಳುತ್ತಿವೆ. ಅಲ್ಲಿನ ಗೋಮಾಂಸಕ್ಕೆ ಭಾರತದ ರೈತರು ಹಿಂಡಿ ಸರಬರಾಜು ಮಾಡುವ ವ್ಯವಸ್ಥೆಯ ವಿಷವರ್ತುಲಕ್ಕೆ ಸಿಲುಕಿದ್ದಾರೆ. ಖ್ಯಾದ್ಯ ತೈಲದ ಕೊರತೆ ಎದುರಿಸುತ್ತಿರುವ ಭಾರತ ನೆರೆಯ ಇಂಡನೇಷಿಯಾ ದಿಂದ ತಾಳೆ ಎಣ್ಣೆಯನ್ನು( ಪಾಮ್ ಆಯಿಲ್) ಭಾರಿ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿದೆ. ಸೋಯಾ ಅವರೆಯ ಹಿಂಡಿ ರಫ್ತಿನಿಂದ ಸಿಗುವ ಆದಾಯದ ಎಂಟು ಪಟ್ಟು ಹೆಚ್ಚಿನ ಹಣವನ್ನು ತಾಳೆ ಎಣ್ಣೆಯ ಆಮದಿಗಾಗಿ ಸುರಿಯಲಾಗುತ್ತಿದೆ.
    ಮೂಲಭೂತವಾಗಿ ನಾವು ಅರಿಯಬೇಕಾದ ಸತ್ಯವೊಂದಿದೆ. ಯಾವುದೇ ಒಂದು ಅವಿಷ್ಕಾರ ಅಥವಾ ತಂತ್ರಜ್ಙಾನ ಶೂನ್ಯದಿಂದ ಸೃಷ್ಟಿಯಾಗುವುದಿಲ್ಲ. ಈ ದಿನ ಮಾನ್ಸಂಟೊ ಕಂಪನಿ ಬಿ.ಟಿ. ಬೀಜಗಳು ಮತ್ತು ಹೈಬ್ರಿಡ್ ಬಿತ್ತನೆ ಬೀಜಗಳ ಮೇಲೆ ಹಕ್ಕಿನ ಸಾಮ್ಯ ಸ್ಥಾಪಿಸಲು ಹೊರಟಿರುವುದು ಅನೈತಿಕತೆಯ ಪರಮಾವಧಿ.
    ಭೂಮಿಯ ಮೇಲಿನ ಜೀವ ಸಂಪತ್ತು ಮತ್ತು ಸಸ್ಯ ಸಂಪತ್ತಿನ  ತಳಿ ನಕ್ಷೆಯನ್ನು  ಬಿಡಿಸಿ ಅವುಗಳ ವಂಶವಾಹಿ ಕೋಶಗಳನ್ನು ಬೆಸೆದು ಇಲ್ಲವೆ ಕತ್ತರಿಸಿ ಹೊಸ ಬೀಜ ಸೃಷ್ಟಿ ಮಾಡುವುದು ನೈಸರ್ಗಿಕ ನಿಯಮಕ್ಕೆ ವಿರುದ್ದವಾದುದು. ವಿಜ್ಙಾನಿಗಳು ಎರವಲು ಪಡೆದುಕೊಂಡಿರುವ ಸಸ್ಯದ ಕೋಶಗಳು ನಮ್ಮ ಅರಣ್ಯಗಳಲ್ಲಿ ಇರುವ ಅಪರೂಪದ ಗಿಡಗಳ ಜೀವಕೋಶಗಳೇ ಹೊರುತು, ವಿಜ್ಞಾನಿಗಳ ಸ್ವಯಂ ಸೃಷ್ಟಿಯೇನಲ್ಲ. ಇಂತಹ  ಅನೈತಿಕ ಕೃತ್ಯಗಳಿಗೆ ಕಡಿವಾಣ ಹಾಕಲು ನಮಗಿರುವ ಏಕೈಕ ಮಾರ್ಗವೆಂದರೆ, ಕುಲಾಂತರಿ ಬೀಜಗಳು ಮತ್ತು ಇಂತಹ ಬೀಜಗಳನ್ನು ಸೃಷ್ಟಿ ಮಾಡುವ ಕಂಪನಿಗಳನ್ನು ಸಾರಾ ಸಗಟಾಗಿ ತಿರಸ್ಕರಿಸುವುದು. ಇದನ್ನು ಜಗತ್ತಿನ ಅತಿ ಹಿಂದುಳಿದ ರಾಷ್ಟ್ರವಾದ ಆಫ್ರಿಕಾದ ಇಥಿಯೋಪಿಯಾದ ಮಹಿಳೆಯರು ಮಾಡಿ ತೋರಿಸುವುದರ ಮೂಲಕ ನಮಗೆ ಮಾದರಿಯಾಗಿದ್ದಾರೆ.

    ಎಲ್ಲಾ ರೀತಿಯ ಅತ್ಯಾಧುನಿಕ ಬೀಜಗಳನ್ನು ತಿರಸ್ಕರಿಸಿದ ಅಲ್ಲಿನ ಮಹಿಳೆಯರು 1980ರ ದಶಕದಲ್ಲಿ ತಮ್ಮ ದೇಶಿ ಬಿತ್ತನೆ ಬೀಜಗಳನ್ನು ರಕ್ಷಿಸಲು ಬೀಜ ಬ್ಯಾಂಕ್ ಸ್ಥಾಪಿಸಿದರು. ಬ್ಯಾಂಕ್ ಮುಖಾಂತರ ರೈತರ ನಡುವೆ ಬೀಜ ವಿನಿಮಯ ಪದ್ಧತಿ ಮುಂದುವರಿಯಿತು. ನಂತರ ಈ ಚಳವಳಿ ಲ್ಯಾಟಿನ್ ಅಮೇರಿಕಾ ರಾಷ್ಟ್ರಗಳು, ಪೆರು, ಪಿಲಿಫೈನ್ಸ್ ಮುಂತಾದ ರಾಷ್ಟ್ರಗಳಿಗೆ ಹರಡಿ ಆನಂತರ  1990ರ ದಶಕದಲ್ಲಿ ಭಾರತಕ್ಕೆ ಕಾಲಿಟ್ಟಿತು. ಇದೀಗ ದೇಶ್ಯಾದಂತ ಮಹಿಳೆಯರ ನೇತೃತ್ವದಲ್ಲಿ ಸಾವಿರಾರು ಬೀಜಬ್ಯಾಂಕುಗಳು ತಲೆ ಎತ್ತಿ ದೇಶಿ ಬೀಜ ರಕ್ಷಣೆಯಲ್ಲಿ ತೊಡಗಿವೆ. ಜಗತ್ತಿನ ಕೃಷಿ ಪರಂಪರೆಯಲ್ಲಿ ಮಹಿಳೆಯರನ್ನು ಕೃಷಿಚಟುವಟಿಕೆಗಳಿಂದ ದೂರ ಇಟ್ಟ ಫಲವಾಗಿ ಇಷ್ಟೆಲ್ಲಾ ದುರಂತಗಳು ಕೃಷಿ ಲೋಕದಲ್ಲಿ ಸಂಭವಿಸುತ್ತಿವೆ ಎಂಬ ಕಟು ಸತ್ಯವನ್ನು ಕೂಡ ನಾವು ಈ ಸಂದರ್ಭದಲ್ಲಿ  ಮರೆಯಬಾರದು.
                                                   (ಮುಗಿಯಿತು)


ಗುರುವಾರ, ಮೇ 16, 2013

ಮಾನ್ಸಂಟೊ ಮಹಾ ಮಾರಿಯ ಕಥನ-2


1948ರಲ್ಲಿ ಹೈಬ್ರಿಡ್ ತಳಿಗಳ ಸಂಶೋಧನೆ ಮತ್ತು ತಯಾರಿಕೆಗೆ ಮುಂದಾದ ಮಾನ್ಸಂಟೊ ಕಂಪನಿ, 1975 ರಲ್ಲಿ ಜೀವಶಾಸ್ತ್ರದ ಸಂಶೋಧನಾ ಕೇಂದ್ರವೊಂದನ್ನು ಅಮೇರಿಕಾದಲ್ಲಿ  ಆರಂಭಿಸಿತು. 1987ರಲ್ಲಿ ಕುಲಾಂತರಿ ತಳಿಗಳ ಪ್ರಯೋಗಕ್ಕೆ ಇಳಿದು,  1994ರಲ್ಲಿ ಪ್ರಥಮವಾಗಿ ಕುಲಾಂತರಿ ತಳಿಯ ಮೆಕ್ಕೆಜೋಳವನ್ನು ಬಿಡುಗಡೆಮಾಡಿತು. ಅಲ್ಲಿಂದ ಇಲ್ಲಿಯವರೆಗೆ ವಿವಾದಗಳು ಹಾಗೂ ಸೃಷ್ಟಿಯಾದ ಅನೇಕ ಅವಾಂತರಗಳು ಕಂಪನಿಯನ್ನು ಬೆನ್ನಟ್ಟಿಕೊಂಡು ಬಂದಿವೆ.
ಕೆನಡಾದ ಕೃಷಿ ವಿಭಾಗದಲ್ಲಿ ತಜ್ಞರಾಗಿ ಸುಧೀರ್ಘ 35 ವರ್ಷಗಳ ಸೇವೆ ಸಲ್ಲಿಸಿದ, ಡಾ. ಥಿಯನೆ ವ್ರೈನ್ ಎಂಬುವರು, ಕುಲಾಂತರಿ ತಳಿಗಳು ಹೊರಬಿದ್ದಾಗ, ಜಾಗತಿಕ ಮಟ್ಟದಲ್ಲಿ ಮುಂದಾಗುವ ಅನಾಹುತಗಳ ಬಗ್ಗೆ, ವಿಶೇಷವಾಗಿ ಇವುಗಳ ಆಹಾರ ತಿಂದ ಮನುಷ್ಯರು ಮತ್ತು ಪ್ರಾಣಿಗಳ ದೇಹದಲ್ಲಿ ಆಗಬಹುದಾದ ವೆತ್ಯಾಸಗಳ ಕುರಿತು ಬಯೋಟೆಕ್ನಾಲಜಿ ಎಂಬ ಪತ್ರಿಕೆಯಲ್ಲಿ ಎಚ್ಚರಿಕೆ ನೀಡಿದ್ದರು. ಅವರು ನೀಡಿದ್ದ ಎಚ್ಚರಿಕೆಗಳು ಈಗ ನಿಜವಾಗತೊಡಗಿವೆ. ಪ್ರಾಣಿಗಳಲ್ಲಿ ವಿಶೇಷವಾಗಿ ಹಸುಗಳ ಗರ್ಭಧಾರಣೆಯಲ್ಲಿ ವೆತ್ಯಾಸವಾಗಿದೆ. ಮನುಷ್ಯನ ಕಿಡ್ನಿ, ಲಿವರ್,ಹಾಗೂ ದೇಹದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸುವ ಇನ್ಸುಲಿನ್ ಉತ್ಪಾದನಾ ಪ್ರಮಾಣದಲ್ಲಿ ವೆತ್ಯಯ ಉಂಟಾಟಾಗಿರುವುದು ಸಂಶೋಧನೆಯಿಂದ ಕಂಡು ಬಂದಿದೆ. 2011 ರಲ್ಲಿ ಕೆನಡಾದ ಶೇರ್ ಬ್ರೂಕ್ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಗಾದ 93 ಗರ್ಭಿಣೆಯರಲ್ಲಿ 82 ಮಂದಿ ಸ್ತ್ರೀಯರ ರಕ್ತದಲ್ಲಿ ವಿಷಕಾರಿ ಅಂಶಗಳು ಇರುವುದು ದೃಢಪಟ್ಟಿದೆ.


ಇವರೆಲ್ಲಾ G.M Foods ಎಂದು ಕರೆಯಲಾಗುವ ಕುಲಾಂತರಿ ಬೆಳೆಗಳ ತರಕಾರಿ ಹಾಗೂ ಜೋಳವನ್ನು ತಿಂದವರಾಗಿದ್ದರು.( ಕೆಲ್ಲಾಗ್ಸ್ ಕಾರ್ನ್ ಪ್ಲೇಕ್ಸ್) ಈ ಕಾರಣದಿಂದಾಗಿ ಅಮೇರಿಕಾದ “ ಅಮೇರಿಕನ್ ಅಕಾಡೆಮಿ ಆಫ್ ಎನ್ವಿರಾನ್ಮೆಂಟಲ್ ಅಂಡ್ ಮೆಡಿಸನ್ ಎಂಬ ಸಂಸ್ಥೆ ಕುಲಾಂತರಿ ತಳಿಯ ಆಹಾರ ಮತ್ತು ತರಕಾರಿ, ಹಣ್ಣುಗಳನ್ನು ತೀವ್ರವಾಗಿ ಪರೀಕ್ಷೆಗೆ ಒಳಪಡಿಸಬೇಕು ಮತ್ತು ಇಂತಹ ಆಹಾರ ಪದಾರ್ಥಗಳ ಮೇಲೆ ಲೇಬಲ್ ಅಂಟಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದೆ. ಆದರೆ, ಮಾನ್ಸಂಟೊ ಕಂಪನಿ ಇಂತಹ ಪರೀಕ್ಷಗಳ ಅಗತ್ಯವಿಲ್ಲ ಎಂದು ಪ್ರತಿಪಾದಿಸುತ್ತಿದೆ.
ಇಂತಹ ಕಪ್ಪು ಇತಿಹಾಸ ಇರುವ ಮಾನ್ಸಂಟೊ ಕಂಪನಿ ಭಾರತಕ್ಕೆ ಬಂದು ತಳವೂರಿ 64 ವರ್ಷಗಳು ಸಂದಿವೆ. 1949ರಲ್ಲಿ ಸಣ್ಣ ಮಟ್ಟದಲ್ಲಿ ಹೈಬ್ರಿಡ್ ತಳಿಯ ಬೀಜಗಳನ್ನು ಮಾರಾಟ ಮಾಡುವುದರ ಮೂಲಕ ಭಾರತಕ್ಕೆ ಕಾಲಿಟ್ಟ ಮಾನ್ಸಂಟೊ ಕಂಪನಿಯ ವಹಿವಾಟು 1990 ದಶಕದಲ್ಲಿ 250 ಕೋಟಿ ರೂಪಾಯಿ ಇದ್ದದ್ದು, 2012 ರ ವೇಳೆಗೆ 1400 ಕೋಟಿ ರೂಪಾಯಿಗೆ ತಲುಪಿದೆ. ಆರಂಭದಲ್ಲಿ  26 ಮಂದಿ ಇದ್ದ ಉದ್ಯೋಗಿಗಳ ಸಂಖ್ಯೆ 800 ಮಂದಿಗೆ ಹೆಚ್ಚಿದೆ.

ಬಿ.ಟಿ. ತಳಿಯ ಬೀಜಗಳಾದ ಹತ್ತಿ ಮತ್ತು ತರಕಾರಿ ಬೀಜಗಳ ಮೇಲೆ ಸ್ವಾಮ್ಯ ಸಾಧಿಸುವ ನಿಟ್ಟಿನಲ್ಲಿ 1975 ರಲ್ಲಿ ಮಾನ್ಸಂಟೊ ಹೋಲ್ಡಿಂಗ್ ಪ್ರವೈಟ್ ಲಿಮಿಟೆಡ್ ಸಂಸ್ಥೆ ಪ್ರಾರಂಭಿಸಿದ ಕಂಪನಿ, ಆನಂತರ ಭಾರತದಲ್ಲಿ ಬಿತ್ತನೆ ಬೀಜಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಮುಂಚೂಣಿಯಲ್ಲಿದ್ದ ಮಹಾರಾಷ್ಟ್ದ ಜಾಲ್ನ ಎಂಬ ಜಿಲ್ಲಾ ಕೇಂದ್ರದಲ್ಲಿದ್ದ ಮಹಿಕೊ ಎಂಬ ಸಂಸ್ಥೆಯನ್ನು ಖರೀದಿಸಿ, ಭಾರತದ ಬೀಜ ಸಾಮ್ರಾಜ್ಯದ ಮೇಲೆ ತನ್ನ ಅಧಿಪತ್ಯವನ್ನು ಸ್ಥಾಪಿಸಿತು.
2002 ರಲ್ಲಿ ಭಾರತದಲ್ಲಿ ಬಿ.ಟಿ. ಹತ್ತಿಬೆಳೆಯನ್ನು ಪರಿಚಯಿಸಿದ ಮಾನ್ಸಂಟೊ ಕಂಪನಿ ದೇಶಾದ್ಯಂತ ಲಕ್ಷಾಂತರ ಹತ್ತಿ ಬೆಳೆಗಾರರನ್ನು ಸಾಲದ ಸುಳಿಗೆ ಸಿಲುಕಿಸಿ ಸಾವಿಗೆ ಕಾರಣವಾಯಿತು. ಸದ್ಯ ಸ್ಥಿತಿಯಲ್ಲಿ ತಾನೇ ಸ್ವತಃ ಬೀಜ ತಯಾರಿಕೆಯಲ್ಲಿ ತೊಡಗಿರುವುದರ ಜೊತೆಗೆ ಭಾರತದಲ್ಲಿ 45 ಬೀಜ ಕಂಪನಿಗಳಿಗೆ ತನ್ನ ತಂತ್ರಜ್ಙಾನವನ್ನು ವರ್ಗಾಯಿಸಿ, ಅದರಿಂದ ಬರುವ ಲಾಭದಲ್ಲಿ ಶೇಕಡ 80 ರಷ್ಟನ್ನು ರಾಜಧನ (ರಾಯಲ್ಟಿ) ರೂಪದಲ್ಲಿ ಪಡೆಯುತ್ತಿದೆ. ಈ ಕಾರಣದಿಂದ ಭಾರತದ ಬಿತ್ತನೆ ಬೀಜಗಳ ದರ ಶೇಕಡ 200 ರಷ್ಟು ದುಬಾರಿಯಾಗಿದೆ. 2002 ರಲ್ಲಿ ಬಿಡುಗಡೆಯಾದ  ಭಾರತದಲ್ಲಿ ಮಾನ್ಸಂಟೊ ಇಂಡಿಯ ಕಂಪನಿಯ ಹತ್ತು ರೂ. ಮುಖಬೆಲೆಯ  ಶೇರುಗಳು ಆರಂಭದಲ್ಲಿ 438 ರೂಪಾಯಿಗೆ ಮಾರಾಟವಾಗಿದ್ದವು. ನಂತರ ಶೇರಿನ ಬೆಲೆ 2008 ರಲ್ಲಿ 2037 ರೂಪಾಯಿಗೆ ತಲುಪಿತ್ತು. ಇತ್ತೀಚೆಗಿನ ದಿನಗಳಲ್ಲಿ ಕಂಪನಿ ವಿವಾದಕ್ಕೀಡಾದ ಪರಿಣಾಮ, ಪ್ರತಿ ಶೇರಿನ ಬೆಲೆ 582 ರೂಪಾಯಿಗೆ ಕುಸಿದಿದೆ.
ಭಾರತದಲ್ಲಿ 2002ರಲ್ಲಿ ಬಿ.ಟಿ. ಹತ್ತಿ ಬೆಳೆಯನ್ನು ಪರಿಚಯಿಸುವ ಮುನ್ನ  65 ರಿಂದ 70ಲಕ್ಷ ಹೆಕ್ಟೆರ್ ಪ್ರದೇಶದಲ್ಲಿ ದೇಶಿ ಬಿತ್ತನೆ ಬೀಜಗಳ ಮೂಲಕ ಹತ್ತಿಯನ್ನು ವಾಣಿಜ್ಯ ಬೆಳೆಯಾಗಿ ಬೆಳೆಯಲಾಗುತ್ತಿತ್ತು. ಈಗ ಒಂದು ಕೊಟಿ ಹತ್ತು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿ.ಟಿ. ಹತ್ತಿ ಬೆಳೆಯಲಾಗುತ್ತಿದೆ. ಮೊದಲು ಹೆಕ್ಟೇರ್ ಒಂದಕ್ಕೆ 300 ಕೆ.ಜಿ. ಇಳುವರಿ ಇದ್ದದ್ದು, ಉತ್ಪಾದನೆ, ಬಿ.ಟಿ. ಹತ್ತಿಯಿಂದಾಗಿ 500 ಕೆ.ಜಿ.ಗೆ ಏರಿಕೆಯಾಗಿದೆ. ಆದರೆ ಕೃಷಿವೆಚ್ಚ ಮಾತ್ರ ನಾಲ್ಕು ಪಟ್ಟು ದುಪ್ಪಟ್ಟಾಗಿದೆ.
 ಪರಸ್ಪರ ಬೀಜ ವಿನಿಮಯದಿಂದ ಪುಕ್ಕಟೆಯಾಗಿ ಸಿಗುತ್ತಿದ್ದ ಹತ್ತಿ ಬೀಜಕ್ಕೆ ರೈತ ತಲಾ ಒಂದು ಕೆ.ಜಿ.ಗೆ ಒಂದೂವರೆ ಸಾವಿರ ರೂಪಾಯಿ ತೆರಬೇಕಾಗಿದೆ. ಜೊತೆಗೆ ಕಂಪನಿ ತಿಳಿಸಿದ ರೀತಿಯಲ್ಲಿ ಕರಾರುವಕ್ಕಾಗಿ ರಸಾಯನಿಕ ಗೊಬ್ಬರ, ಕೀಟನಾಶಕವನ್ನು ಬಳಸಬೇಕು. ವಿಶೇಷವೆಂದರೇ, ಕಂಪನಿ ಶಿಫಾರಸ್ಸು ಮಾಡುವ ಗೊಬ್ಬರ ಮತ್ತು ರಸಾಯನಿಕ ಔಷಧಗಳೆಲ್ಲವೂ ಮಾನ್ಸಂಟೊ ಕಂಪನಿಯ ಅಂಗಸಂಸ್ಥೆಗಳ ಉತ್ಪನ್ನಗಳಾಗಿರುತ್ತವೆ. ತಾನು ಹೆಚ್ಚುವರಿಯಾಗಿ ಬೆಳೆದ ಇಳುವರಿ ಬೆಳೆಯ ಲಾಭದ ಜೊತೆಗೆ, ಬೆಳೆದ ಫಸಲಿನ ಲಾಭವನ್ನು ಕಂಪನಿಗೆ ತೆರಬೇಕಾದ ಸ್ಥಿತಿ ರೈತನದು. ಇದಕ್ಕೆ ಒಂದು ಉದಾಹರಣೆಯೆಂದರೆ, ಒಂದು ಹೆಕ್ಟೇರದ ಪ್ರದೇಶದ ಕೀಟನಾಶಕಕ್ಕೆ ಮಾನ್ಸಂಟೊ ಕಂಪನಿ ಲೀಟರ್ ಗೆ 800 ರೂಪಾಯಿ ಬೆಲೆಯ ಔಷದವನ್ನು ಶಿಫಾರಸ್ಸು ಮಾಡುತ್ತದೆ. ಇದಕ್ಕೆ ಪ್ರತಿಯಾಗಿ ಆಂಧ್ರದಲ್ಲಿ ಸಹಜ ಕೃಷಿಗೆ ಪ್ರೋತ್ಸಾಹ ಕೊಡುತ್ತಿರುವ ಕೃಷಿ ತಜ್ಞ ರಾಮಾಂಜನೆಯಲು ಎಂಬುವರು, ಸುಮಾರು 2 ಅಡಿ ಅಗಲ-2 ಅಡಿ  ರಟ್ಟಿನ ಮೇಲೆ ಹಳದಿ ಬಣ್ಣದ ಕಾಗದವನ್ನು  ಅಂಟಿಸಿ, ಅದರ ಮೇಲೆ ಬಳಸಿ ಬಿಸಾಡಿದ ವಾಹನಗಳ ಇಂಜಿನ್ ಆಯಿಲ್ ಮತ್ತು ಗ್ರೀಸ್ ಲೇಪಿಸಿ. ಕೀಟಗಳನ್ನು ಆಕರ್ಷಿಸಿ ಕೊಲ್ಲುವ ಸಾಧನವನ್ನು ಕಂಡು ಹಿಡಿದಿದ್ದಾರೆ. ಇದರ ಬೆಲೆ ಕೇವಲ 12 ರೂಪಾಯಿ. ಇಂತಹ ರಟ್ಟುಗಳನ್ನು ಹೊಲದಲ್ಲಿ ಬಳಸಿದ  ರೈತರು ಹತ್ತಿಗೆ ಕಾಂಡ ಕೊರೆಯುವ ಕೀಟವನ್ನು ತಡೆಗಟ್ಟುವಲ್ಲಿ ಶೇಕಡ 85 ರಷ್ಟು ಯಶಸ್ವಿಯಾಗಿದ್ದಾರೆ. ಇಂತಹ ದೇಶಿ ತಂತ್ರಜ್ಞಾನದ ನಡುವೆಯೂ,  ಮತ್ತು  ಮಹಾರಾಷ್ಟ್ರದ ವಿಧರ್ಭ ಪ್ರಾಂತ್ಯ ಮತ್ತು ಅಂಧ್ರದ ಅದಿಲಾಬಾದ್ ಪ್ರಾಂತ್ಯದಲ್ಲಿ ಹತ್ತಿ ಬೆಳೆದ ಲಕ್ಷಾಂತರ ರೈತರು ಕೈ ಸುಟ್ಟಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರೂ, ನಮ್ಮ ರೈತರಿಗೆ ಮಾತ್ರ ಬುದ್ದಿ ಬಂದಂತೆ ಕಾಣುವುದಿಲ್ಲ.
ರೈತರನ್ನು ಬಿ.ಟಿ. ಬೆಳೆಗಳತ್ತ ಸೆಳೆಯಲು ಮಾನ್ಸಂಟೊ ಕಂಪನಿ ಇದೀಗ  ‘ ಡಾ. ದೆಕ್ಲಟ್ ಫಾರಂ ಕೇರ್ “ ಎಂಬ ಸಲಹಾ ಕೇಂದ್ರವನ್ನು ಸ್ಥಾಪಿಸಿದ್ದು, ಈ ಸಂಸ್ಥೆಯೊಂದಿಗೆ ಭಾರತದ 10 ಲಕ್ಷ ರೈತರು ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ,
ಭಾರತದಲ್ಲಿ ಬೆಳೆಯಲಾಗುತ್ತಿರುವ ಬಿ.ಟಿ. ಹತ್ತಿ ಬೆಳೆಯಿಂದಾಗಿ, ಗಾಳಿಯ ಮೂಲಕ ಸಸ್ಯ ಪ್ರಭೇದಗಳಲ್ಲಿ ಏರ್ಪಡುವ ಸ್ವಪರಾಗಸ್ಪರ್ಶ ಮತ್ತು ಜೇನು ನೊಣ ಮುಂತಾದವುಗಳಿಂದ ಏರ್ಪಡುವ ಪರಾಮಸ್ಪರ್ಶದಿಂದಾಗಿ ದೇಶಿಯ ಬೆಳೆಗಳು ಮತ್ತು ಇತರೆ ಸಸ್ಯಗಳಿಗೆ ಕುಲಾಂತರಿ ಸಸ್ಯದ ಜೀವಾಣುಗಳು ಸೇರಿಕೊಂಡು ಸಸ್ಯ ಸಂಪತ್ತು ಮತ್ತು ದೇಶಿ ಅಹಾರ ಬೆಳೆಗಳ ಬಿತ್ತನೆ ಬೀಜಗಳು ಕಲುಷಿತವಾಗಲು ಕಾರಣವಾಗಿವೆ. ಇಂತಹ ಒಂದು ಕಾರಣಕ್ಕಾಗಿ ಐರೋಪ್ಯ ಒಕ್ಕೂಟದ ರಾಷ್ಟ್ರಗಳು ವಿಶ್ವ ವಾಣಿಜ್ಯ ಮಂಡಳಿಯಲ್ಲಿ ಕುಲಾಂತರಿ ತಳಿ ಮತ್ತು ಆಹಾರಗಳಿಗೆ ಅವಕಾಶ ಕೊಡಬಾರದೆಂದು ತಕರಾರು ಸಲ್ಲಿಸಿದ್ದವು. ಆದರೆ, ಈ ಅರ್ಜಿಯನ್ನು ವಿಶ್ವ ವಾಣಿಜ್ಯ ಮಂಡಳಿ( W.T.O.) ತಿರಸ್ಕರಿಸಿತು. ಇಂತಹ ಆಹಾರ ತಿಂದ ಹಸುಗಳು ಹುಚ್ಚು ರೋಗಕ್ಕೆ ಬಲಿಯಾದವು. ಜಗತ್ತಿನ ರಾಷ್ಟ್ರಗಳನ್ನು ತನ್ನ ಹಣದಿಂದ ಮಣಿಸಿರುವ ಮಾನ್ಸಂಟೊ ಕಂಪನಿಯ ಪ್ರತಿ ಹೆಜ್ಜೆ ಗುರುತುಗಳನ್ನು ಗಮನಿಸುವಾಗ, 1955 ರಲ್ಲಿ “ ಟಾಪ್ ಸಾಯಿಲ್ ಅಂಡ್ ಸಿವಿಲೈಜೇಷನ್ ‘ ಎಂಬ ಕೃತಿ ಬರೆದಿರುವ ಟಾಮ್ ಡೆಲ್ ಮತ್ತು ವೆರ್ನಾನ್ ಗಿಲ್ ಕಾರ್ಟರ್ ಎಂಬ ಪ್ರಖ್ಯಾತ ಪರಿಸರ ತಜ್ಞರು, ಹೇಳಿರುವ’ Civilised man was nearly always able to become master of his environment temporarily. His Chief troubles came from his delusions that is temporary master ship was permanent.He thought of him self as “ master of the world’ while failing to understand fully the law of nature.” ಎಂಬ ಮಾತುಗಳು ನೆನಪಾಗುತ್ತಿವೆ,
       ( ಮುಂದುವರಿಯುವುದು)

ಭಾನುವಾರ, ಮೇ 12, 2013

ಮಾನ್ಸಂಟೊ ಮಹಾ ಮಾರಿಯ ಕಥನ- 1


ಅವಿಷ್ಕಾರ, ಅಧಿಕ ಉತ್ಪಾದನೆ ಮತ್ತು  ಅಧಿಕ ಬಳಕೆ ಇವು ತನ್ನ ಗುರಿ ಎಂದು ಘೋಷಿಸಿಕೊಂಡಿರುವ ಬಹುರಾಷ್ಟ್ರೀಯ ಸಂಸ್ಥೆಯಾದ ಮಾನ್ಸಂಟೊ ಕಂಪನಿಯ ಕಾರ್ಯಾಚರಣೆ ಆಧುನಿಕ ಕೃಷಿಜಗತ್ತಿನಲ್ಲಿ ಅನೇಕ ತಲ್ಲಣಗಳನ್ನು ಉಂಟು ಮಾಡಿದೆ. ಕೃಷಿ ಕುರಿತ ಚಟುವಟಿಕೆಗಳಿಗೆ ಪೂರಕವಾಗಿ ಬಿತ್ತನೆ ಬೀಜ, ಕೀಟನಾಶಕಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ, ಶತಮಾನದ ಇತಿಹಾಸವಿರುವ  ಈ ಕಂಪನಿ  ಹೆಚ್ಚುತ್ತಿರುವ ಜಗತ್ತಿನ ಜನಸಂಖ್ಯೆಗೆ ಅನುಗುಣವಾಗಿ ಅಧಿಕ ಆಹಾರ ಬೆಳೆಗಳ ಉತ್ಪಾದನೆಗಾಗಿ  ಕೈಗೊಂಡಿರುವ  ಅನೇಕ ಜೈವಿಕ ತಂತ್ರಜ್ಞಾನದ ಪ್ರಯೋಗಗಳು ವಿವಾದಕ್ಕೆ ಗುರಿಯಾಗಿವೆ. ಮಾನ್ಸಂಟೊ ನಡೆಸುತ್ತಿರುವ ಅನೇಕ ಪ್ರಯೋಗಗಳಲ್ಲಿ ರೈತರ ಹಿತಾಸಕ್ತಿಗಿಂತ ಕಂಪನಿಯ ಹಿತಾಸಕ್ತಿ ಅಡಗಿರುವುದು  ರಹಸ್ಯವಾಗಿ ಉಳಿದಿಲ್ಲ. ಮಾನ್ಸಂಟೊ ಕಂಪನಿ ಸೃಷ್ಟಿಸಿರುವ ಅನೇಕ ಕುಲಾಂತರಿ ಮತ್ತು ತಳಿತಂತ್ರಜ್ಙಾನದ ಆಧಾರದ  ಬಿತ್ತನೆ ಬೀಜಗಳು ಮತ್ತು ಅವುಗಳಿಂದ ಬೆಳೆದ ಅನೇಕ ಆಹಾರ ಮತ್ತು ವಾಣಿಜ್ಯ ಬೆಳೆಗಳು ಪಕೃತಿ ಮೇಲಿನ ಜೈವಿಕ ಜಗತ್ತಿಗೆ ಮತ್ತು   ಜೀವ ವೈವಿಧ್ಯತೆಗೆ ಧಕ್ಕೆ ತಂದಿವೆ.

ಆಧುನಿಕ ಜಗತ್ತಿನಲ್ಲಿ ಮನುಷ್ಯನ ಒಳಿತಿಗಾಗಿ ಅವಿಷ್ಕಾರಗೊಂಡ ಯಾವುದೇ ವಿಜ್ಙಾನದ ತಂತ್ರಜ್ಞಾನವನ್ನು ಈ ಜಗತ್ತು ಕಳೆದ ಶತಮಾನದಿಂದ ಮುಕ್ತವಾಗಿ ಸ್ವೀಕರಿಸಿಕೊಂಡು ಬಂದಿದೆ. ಆದರೆ, ಮನುಕುಲಕ್ಕೆ, ಮತ್ತು ಪರಿಸರಕ್ಕೆ ಎರವಾಗುವ ತಂತ್ರಜ್ಞಾನವನ್ನು ಮಾತ್ರ ವಿಚಾರವಂತರ ಜಗತ್ತು ಪ್ರತಿರೋಧಿಸುತ್ತಲೇ ಬಂದಿದೆ.  ಹಣ, ಅಧಿಕಾರ, ತೋಳ್ಬಲ ಮತ್ತು ಭ್ರಷ್ಟ ಆಡಳಿತ ವ್ಯವಸ್ಥೆಯನ್ನು ಆಮೀಷದ ಮೂಲಕ ಮಣಿಸುತ್ತಾ ಬಂದಿರುವ ಮಾನ್ಸಂಟೊ ಕಂಪನಿಯ ವ್ಯವಹಾರ ಚತುರತೆಗೆ ಅದರ ವಿರೋಧಿಗಳು ಕೂಡ ತಲೆತೂಗಿದ್ದಾರೆ. ಏಕೆಂದರೆ, ಅಂತಹ ವ್ಯವಹಾರಿಕ ಸೂಕ್ಷ್ಮತೆಯನ್ನು ಈ  ಕಂಪನಿ ಮೈಗೂಡಿಸಿಕೊಂಡಿದೆ.
ವ್ಯವಸ್ಥಿತ ಪ್ರಚಾರದ ಮೂಲಕ ಮನಸ್ಸುಗಳನ್ನು ಕಲುಷಿತಗೊಳಿಸಬಹುದೆಂದು 1928ರಲ್ಲಿ ಪ್ರೊಪಗಂಡ(Propaganda)ಎಂಬ ಕೃತಿ ಬರೆದು, ಜಗತ್ತಿನ  ಜಾಹಿರಾತು ವಿಷಯಗಳ ಜನಕ ಎಂದು ಪ್ರಸಿದ್ದೀಯಾಗಿರುವ ಲೇಖಕ  ಎಡ್ವರ್ಡ್ ಬೆರ್ನೆಸ್ ( Edvard Bernyas) ತನ್ನ ಕೃತಿಯಲ್ಲಿ ಹೇಳಿರುವ “ The Conscious and intelligent manipulation of the organized habits and opinions of the masses is an important element in democratic society’ ಎನ್ನುವ ಹಾಗೆ ಎಲ್ಲಾ ಅಂಶಗಳನ್ನು ಚಾಚೂ ತಪ್ಪದೆ ಅನುಕರಿಸಿಕೊಂಡ ಬಂದ ಕಂಪನಿಗಳಲ್ಲಿ ಮಾನ್ಸಂಟೊ ಕಂಪನಿ ಮೊದಲನೇಯದು ಎಂದರೆ, ತಪ್ಪಾಗಲಾರದು.
1901 ರಲ್ಲಿ ಅಮೇರಿಕಾದ ಮಿಸ್ಸೊರಿ ಪ್ರಾಂತ್ಯದ  ಸೆಂಟ್ ಲೂಯಿಸ್ ನಗರದಲ್ಲಿ ಜಾನ್ ಎಫ್ ಕ್ವೀನಿ ಎಂಬಾತನಿಂದ ಆರಂಭಗೊಂಡ ಈ  ಕಂಪನಿ, ಇಂದು ಜಗತ್ತಿನ ಅತಿದೊಡ್ಡ ಹತ್ತು ಬಹುರಾಷ್ರೀಯ ಕಂಪನಿಗಳಲ್ಲಿ ಒಂದು, ಜಾನ್ ಎಫ್ ಕ್ವೀನಿ ಎಂಬಾತ ತನ್ನ ನೆಚ್ಚಿನ ಮಡದಿ ಒಲ್ಗಾ ಮಾನ್ಸಂಟೊ ಹೆಸರಿನಲ್ಲಿ ಈ ಕಂಪನಿಯನ್ನು ಸ್ಥಾಪಿಸಿದಾಗ, ಕೃಷಿ ಚಟುವಟಿಗಳಿಗೆ ಪೂರಕವಾಗುವಂತ ಕೀಟನಾಶಕ, ರಸಗೊಬ್ಬರ, ಬೀಜಗಳ ಸಂಗ್ರಹ ಮತ್ತು ವಿತರಣೆಗೆ ಇವುಗಳಿಗೆ ಅನೂಕೂಲವಾಗುವ ಹಾಗೆ ಗುರಿಯನ್ನು ಹೊಂದಿತ್ತು.. ತನ್ನ ಮೊದಲ ಉತ್ಪಾದನೆಯಾಗಿ ಸಚ್ಚರಿನ್ (Saccharine) ಎಂಬ ಕೀಟನಾಶಕ ರಸಾಯಿನಿಕ ಉತ್ಪಾದನೆಯ ಮೂಲಕ ಕೃಷಿಜಗತ್ತಿಗೆ ಕಾಲಿಟ್ಟ ನಂತರ, ಈ ಕಂಪನಿ ಬೆಳದ ಪರಿ ಮಾತ್ರ ಅಚ್ಚರಿ ಮೂಡಿಸುವಂತಹದ್ದು. 
 ಕೀಟನಾಶಕಗಳ ತಯಾರಿಕೆಯಲ್ಲಿ ಕುಖ್ಯಾತಿ ಗಳಿಸಿರುವ ಈ ಸಂಸ್ಥೆ ತನ್ನ ನೈಜ ಮುಖವಾಡವನ್ನು ಮುಚ್ಚಿಕೊಳ್ಳಲು ಅನೇಕ ಅಂಗ ಸಂಸ್ಥೆಗಳನ್ನು ಸ್ಥಾಪಿಸಿ, ತನ್ನ ಚಕ್ರಾಧಿಪತ್ಯವನ್ನು ಜಗತ್ತಿನಾದ್ಯಂತ ವಿಸ್ತರಿಸಿದೆ. ಡವ್ ಎಂಬ ಪ್ರಸಿದ್ಧ ಕೀಟನಾಶಕ ತಯಾರಿಕೆಯ ಸಂಸ್ಥೆ ಕೂಡ ಮಾನ್ಸಂಟೊ ಕಂಪನಿಯ ಕೂಸು. 1940 ರವರೆಗೆ ಕೇವಲ 480 ಉದ್ಯೋಗಿಗಳನ್ನು ಹೊಂದಿದ್ದ ಮಾನ್ಸಂಟೊ ಈಗ ಜಗತ್ತಿನ 66 ರಾಷ್ರಗಳಲ್ಲಿ ತನ್ನ ಶಾಖೆಗಳನ್ನು ಹೊಂದಿದ್ದು, ಒಟ್ಟು 21, 183 ಉದ್ಯೋಗಿಗಳನ್ನು ಹೊಂದಿದೆ. ಅಮೇರಿಕಾ ರಾಷ್ಟ್ರವೊಂದರಲ್ಲಿ ವಿವಿಧ ನಗರಗಳಲ್ಲಿ ಇರುವ ತಳಿಗಳ ಪ್ರಯೋಗಶಾಲೆಯಲ್ಲಿ ಮತ್ತು ಬಿತ್ತನೆ ಬೀಜ ಹಾಗೂ ಕೀಟನಾಶಕಗಳ ಮಾರುಕಟ್ಟೆಯ ವಿಭಾಗದಲ್ಲಿ 10,227 ಮಂದಿ ಉದ್ಯೋಗಿಗಳು ಸೇವೆ ಸಲ್ಲಿಸುತ್ತಿದ್ದಾರೆ.
1945 ರವರೆಗೆ ಸಚ್ಚರಿನ್, 2 ಮತ್ತು 4D ಎಂಬ ರಸಾಯಿನಿಕ ಹಾಗೂ ಅಪಾಯಕಾರಿ ಕೀಟನಾಶಕಗಳನ್ನು ತಯಾರಿಸುತ್ತಿದ್ದ ಮಾನ್ಸಂಟೊ 1960 ರಲ್ಲಿ ಕೃಷಿ ವಿಭಾಗಗಳನ್ನು ಸ್ಥಾಪಿಸಿ, ಹೈಬ್ರಿಡ್ ಬಿತ್ತನೆ ಬೀಜಗಳ ಪ್ರಯೋಗವನ್ನು ಆರಂಭಿಸಿತು. 1964ರಲ್ಲಿ ಮಾನ್ಸಂಟೊ ಹೆಸರಿನಲ್ಲಿ ಹೈಬ್ರಿಡ್ ಮುಸುಕಿನ ಜೋಳವನ್ನು ಪ್ರಥಮ ಬಾರಿಗೆ ಬಿಡುಗಡೆ ಮಾಡಿತು.  1975 ರಲ್ಲಿ ಜೀವಶಾಸ್ತ್ರ ಕೋಶ ಗಳ ಅಧ್ಯಯನಕ್ಕಾಗಿ ( Cell Biology)  ಪ್ರಯೋಗ ಶಾಲೆಯನ್ನು ಸ್ಥಾಪಿಸಿತು.
ಈ ವೇಳೆಗೆ ಈ ಕಂಪನಿಯ ಅಂಗ ಸಂಸ್ಥೆಯಾದ ಡವ್ ಕಂಪನಿ ತಯಾರಿಸಿದ ಏಜೆಂಟ್ ಆರೆಂಜ್ ಎಂಬ ಕಳೆನಾಶಕ ಔಷಧಿ ಅಮೇರಿಕಾದ ಸೇನೆಯಲ್ಲಿ ಬಳಕೆಯಾಗಿ ಅನೇಕ ದುಷ್ಪರಿಣಾಮಕ್ಕೆ ಕಾರಣವಾಗಿತ್ತು. 1962 ರಿಂದ 1970 ರ ವರೆಗೆ ವಿಯಟ್ನಾ ರಾಷ್ಟ್ರದ ಮೇಲೆ ನಿರಂತರ ಯುದ್ದ ಸಾರಿದ್ದ ಅಮೇರಿಕಾ ದೇಶಕ್ಕೆ ವಿಯಟ್ನಾಂ ಅನ್ನು ಮಣಿಸಲು ಸಾಧ್ಯವಾಗಲಿಲ್ಲ. ವಿಯಟ್ನಾಂ ಯೋಧರು ಅರಣ್ಯದಲ್ಲಿ ಅಡಗಿ ಕುಳಿತು ಗೆರಿಲ್ಲಾ ಯುದ್ದ ತಂತ್ರದ ಮೂಲಕ ಅಮೇರಿಕಾ ಸೇನೆಯ ಯುದ್ಧ ವಿಮಾನಗಳನ್ನು ಮತ್ತು ಹೆಲಿಕಾಪ್ಟರುಗಳನ್ನು ಹೊಡೆದು ಉರುಳಿಸುತ್ತಿದ್ದರು.  ಈ ಸಮಯದಲ್ಲಿ ವಿಯಟ್ನಾಂನ ಅರಣ್ಯದ ಮರಗಳ ಎಲೆಗಳನ್ನು ಉದುರಿಸುವ ತಂತ್ರಜ್ಞಾನ ವಾಗಿ ಅಮೇರಿಕಾ ಸೇನೆ ಏಜೆಂಟ್ ಆರಂಜ್ ಎಂಬ ಅಪಾಯಕಾರಿ ಕಳೆನಾಶಕ ರಸಾಯನಿಕವನ್ನು ಬಳಕೆ ಮಾಡಿತು. ಎಂಟು ವರ್ಷಗಳ ಅವಧಿಯಲ್ಲಿ ಅಮೇರಿಕಾ ಸೇನೆ 70 ದಶಲಕ್ಷ ಲೀಟರ್ ವಿಷಯುಕ್ತ ರಸಾಯನಿಕವನ್ನು ವಿಯಟ್ನಾಂ ಅರಣ್ಯದ ಮೇಲೆ ಸಿಂಪಡಿಸಿತ್ತು. ಆನಂತರ ಉಂಟಾದ ಪರಿಣಾಮ ಮಾತ್ರ ಇಡೀ ಮನುಕುಲ ತಲೆ ತಗ್ಗಿಸುವಂತಹದ್ದು.

 ಈ ರಸಾಯನಿಕ ದ್ರವ ಗಾಳಿ ಮತ್ತು ನೀರಿನಲ್ಲಿ ಬೆರೆತ ಫಲವಾಗಿ ಪ್ರಾಣಿ ಮತ್ತು ಪಕ್ಷಿ ಸಂಕುಲಗಳು ವಿಯಟ್ನಾಂ  ಮತ್ತು ದಕ್ಷಿಣ ಕೋರಿಯಾದಲ್ಲಿ ನಾಶವಾದವು. ಪರಿಸರದಲ್ಲಿ ಮಿಳಿತಗೊಂಡಿದ್ದ ಈ ವಿಷವನ್ನು ಗಾಳಿ ಮತ್ತು ನೀರಿನ ಮೂಲಕ ಸೇವಿಸಿದ ಪರಿಣಾಮ ವಿಯಟ್ನಾಂ ಮನುಕುಲದ ಸಂತತಿಯಲ್ಲಿ ವಿಕೃತ ಶಿಶುಗಳ ಜನನಕ್ಕೆ ಕಾರಣವಾಯಿತು. ಯುದ್ಧ ನಡೆದ ನಲವತ್ತು ವರ್ಷಗಳ ನಂತರವೂ ಮನುಷ್ಯರ ವಂಶವಾಹಿ ಮೂಲಕ ಮುಂದುವರಿದಿರುವ ಈ ವಿಷ , ಇಂದಿಗೂ ವಿಯಟ್ನಾಂನಲ್ಲಿ ಅನೇಕ .ವಿಕೃತ ಮಕ್ಕಳ ಜನನಕ್ಕೆ ಕಾರಣವಾಗಿದೆ.
 ಈ ಸಂದರ್ಭದಲ್ಲಿ  ನಮ್ಮ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ನೆರೆಯ ಕೇರಳದ ಕಾಸರಗೂಡು ಜಿಲ್ಲೆಯಲ್ಲಿ 1980ರ ದಶಕದಲ್ಲಿ ಗೇರು ಮರಗಳ ಮೇಲೆ ಎಂಡೋ ಸಲ್ಫಾನ್ ಎಂಬ ರಸಾಯನಿಕವನ್ನು ಸಿಂಪಡಿಸಿದ ಪರಿಣಾಮ ನಡೆದ ದುರಂತದ ಅಧ್ಯಾಯವನ್ನು ಇಲ್ಲಿ ನೆನೆಯಬಹುದು. ವಿಯಟ್ನಾಂ ಸಂತ್ರಸ್ತರು ಅಂತರಾಷ್ಟ್ರಿಯ ನ್ಯಾಯಾಲಯದಲ್ಲಿ ಮಾನ್ಸಂಟೊ ಕಂಪನಿ ವಿರುದ್ಧ ಪರಿಹಾರಕ್ಕೆ ಮೊಕೊದ್ದಮೆ ದಾಖಲಿಸಿದ ಪರಿಣಾಮ 1984ರಲ್ಲಿ ಮಾನ್ಸಂಟೊ ಮತ್ತು ಡವ್ ಕಂಪನಿಗಳು  180 ದಶಲಕ್ಷ ಡಾಲರ್ ಹಣವನ್ನು ಪರಿಹಾರವಾಗಿ ನೀಡಿದವು. ದಕ್ಷಿಣ ಕೋರಿಯಾ ತನ್ನ ನೆಲದ 6,800 ಸಂತ್ರಸ್ತರ ಪರವಾಗಿ 60 ದಶಲಕ್ಷ ಡಾಲರ್ ಗಾಗಿ ಮೊಕದ್ದಮೆ ದಾಖಲಿಸಿದ್ದು  ವಿಚಾರಣೆ ಮುಂದುವರಿದಿದೆ. ಈ ಘಟನೆ ನಡೆದ ನಂತರ ಮಾನ್ಸಂಟೊ ಕಂಪನಿಯ ತನ್ನ ಏಜೆಂಟ್ ಆರೆಂಜ್ ರಸಾಯಿನಕದ ಬ್ರಾಂಡ್ ಹೆಸರನ್ನು ಬದಲಿಸಿ, ರೌಂಡ್ ಅಪ್ ಹೆಸರಿನಲ್ಲಿ ಕಳೆನಾಶಕ ಔಷಧಿಯನ್ನಾಗಿ ಬಿಡುಗಡೆಮಾಡಿದೆ. ಈಗ ಈ ಅಪಾಯಕಾರಿ ರಸಾಯಿಕ ನಮ್ಮ ಕರ್ನಾಟಕ, ಆಂಧ್ರ, ತಮಿಳುನಾಡು, ಸೇರಿದಂತೆ ಅಧಿಕ ಭತ್ತ ಬೆಳೆಯುವ ಭಾರತದ ರಾಜ್ಯಗಳಲ್ಲಿ ಬಳಕೆಯಾಗುತ್ತಿದೆ.ಇದಲ್ಲದೆ ಯಾವುದೇ ನೈತಿಕತೆ ಇಲ್ಲದೆ ಇತರೆ ಸಂಶೋಧನೆಯ ಜ್ಞಾನವನ್ನು ಕದಿಯುವುದು ಕೂಡ ಈ ಕಂಪನಿಯ ಹವ್ಯಾಸಗಳಲ್ಲಿ ಒಂದು. ಕ್ಯಾಲಿಪೊರ್ನಿಯ ವಿಶ್ವವಿದ್ಯಾಲಯ ಅಭಿವೃದ್ದಿ ಪಡಿಸಿದ್ದ, ಹಸುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಾಲು ಉತ್ಪತ್ತಿ ಮಾಡಬಹುದಾದ ಪೊಸಿಲ್ಯಾಕ್ (Posilac) ಎಂಬ ಹಾರ್ಮೋನನ್ನು ಕದ್ದ ಪರಿಣಾಮವಾಗಿ 100 ದಶಲಕ್ಷ ಡಾಲರ್ ಹಣವನ್ನು ದಂಡವಾಗಿ ಪಾವತಿಸಿದೆ.
ಹೀಗೆ ಅನೇಕ ರಾದ್ಧಾಂತಗಳನ್ನು ಸೃಷ್ಟಿಸಿರುವ ಈ ಕಂಪನಿಯ ಇತಿಹಾಸವನ್ನು ಇತ್ತೀಚೆಗೆ ಅಮೇರಿಕನ್ ಲೇಖಕ F. William engdahl ತನ್ನ ಖಚಿತ ಸಂಶೋಧನೆಯ ಮೂಲಕ ಹೊರತಂದಿರುವ ಬೀಜಗಳ ವಿರೂಪ ಕುರಿತ Seeds of Destrection ಕೃತಿಯಲ್ಲಿ ಅವಲೋಕಿಸಬಹುದು. ಕುಲಾಂತರಿ ತಳಿಗಳ ಆಹಾರವನ್ನು ಸೇವಿಸಿರುವ ಮನುಷ್ಯರು ಮತ್ತು ಪ್ರಾಣಿಗಳು( ಹಸು ಮತ್ತು ಹಂದಿ) ಇವುಗಳಲ್ಲಿ ಆಗಿರುವ ಜೀವಿಕ ಬದಲಾವಣೆಯನ್ನು ತನ್ನ ಕೃತಿಯಲ್ಲಿ ಪರಿಣಾಮಕಾರಿಯಾಗಿ ದಾಖಲಿಸಿದ್ದಾನೆ.


ಹೇರಳವಾದ ಧನ ಸಂಪತ್ತು ಮತ್ತು ವ್ಯವಹಾರದ ಕುಶಲತೆಯನ್ನು ಹೊಂದಿರುವ ಮಾನ್ಸಂಟೊ ಇದೀಗ ಜಗತ್ತಿನ ಹಿರಿಯಣ್ಣ ಎಂದು ನಾವು ಭಾವಿಸುವ ಅಮೇರಿಕಾವನ್ನು ಮಣಿಸಿದೆ. ಮಾನ್ಸಂಟೊ ರಕ್ಷಣಾ ಕಾಯ್ದೆ ಎಂದು ಕರೆಯಬಹುದಾದ H.R.933 ಸೆಕ್ಷನ್ 735 ಎಂಬ ಮಸೂದೆಗೆ ಅದ್ಯಕ್ಷ ಬರಾಕ್ ಒಬಾಮ ಇದೇ ಮಾರ್ಚಿ ಕೊನೆಯ ವಾರದಲ್ಲಿ ಅಂಕಿತ ಹಾಕಿದ್ದಾರೆ. ಈ ಕಾಯ್ದೆ ಅನ್ವಯ ಇನ್ನು ಮುಂದೆ ಮಾನ್ಸಂಟೊ ಕಂಪನಿಯ ಬೀಜಗಳು, ಕ್ರಿಮಿನಾಶಕಗಳನ್ನು ಬಳಸಿದ ಅಥವಾ ಕುಲಾಂತರಿ ತಳಿಗಳ ಆಹಾರ ಸೇವಿಸಿ ತೊಂದರೆಗೊಳಗಾದ ರೈತರು ಇಲ್ಲವೆ, ಗ್ರಾಹಕರು ಪರಿಹಾರಕ್ಕಾಗಿ ಫೆಡರಲ್ ನ್ಯಾಯಾಲಯಗಳಲ್ಲಿ ಮಾನ್ಸಂಟೊ ಕಂಪನಿ ವಿರುದ್ಧ ಮೊಕದ್ದಮೆ ದಾಖಲಿಸುವಂತಿಲ್ಲ. ಇದು ಅಮೇರಿಕನ್ ಸಾವಯವ ಕೃಷಿ ಆಹಾರ ಪದಾರ್ಥಗಳನ್ನು ಬಳಸುತ್ತಿರುವ ಎರಡು ಲಕ್ಷ ಗ್ರಾಹಕರನ್ನು ಕೆರಳಿಸಿದೆ. ಕಳೆದ ಎರಡು ತಿಂಗಳಿಂದ ಮಸೂದೆ ವಾಪಸ್ ಪಡೆಯಲು ಒತ್ತಾಯಿಸಿ, ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟಿಸುವುದರ ಮೂಲಕ ಅಮೇರಿಕನ್ ನಾಗರೀಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
                               (ಮುಂದುವರಿಯುವುದು)

ಶುಕ್ರವಾರ, ಮೇ 10, 2013

ಕಲ್ಲಿದ್ದಲ ಕಪ್ಪು ಚರಿತ್ರೆ

ಕಲ್ಲಿದ್ದಲು ಗಣಿ ನಿಕ್ಷೇಪಗಳ ಹಂಚಿಕೆಯಲ್ಲಿ ನಡೆದಿರುವ ಮೋಸ, ವಂಚನೆ ಕುರಿತು ಕಳೇದ ಒಂದು ವರ್ಷದಿಂದ  ಸುಪ್ರೀಂ ಕೋರ್ಟ್ನ  ಕಣ್ಗಾವಲಿನಲ್ಲಿ ಸಿ.ಬಿ.ಐ. ತನಿಖೆ ನಡೆಸುತ್ತಿದೆ. ವರದಿ ಬಹಿರಂಗವಾಗುತ್ತಿದ್ದಂತೆ ದೇಶದ ಪ್ರಮುಖ ರಾಜಕಾರಣಿಗಳ ಮುಖವಾಡ ಕಳಚಿ ಬೀಳಲಿದೆ. ಕಲ್ಲಿದ್ದಲು ಗಣಿಯ ಸಂಪತ್ತು ದೋಚುವ ವಿಚಾರದಲ್ಲಿ ಅಧಿಕಾರಸ್ತ ರಾಜಕಾರಣಿಗಳು ಮತ್ತು ಉದ್ಯಮಿಗಳ  ಅಪವಿತ್ರ ಮೈತ್ರಿ ಭಾರತದ ರಾಜಕೀಯ ಮತ್ತು ಸಾಮಾಜಿಕ ಬದುಕಿನಲ್ಲಿ ಹೊಸ ಸಂಗತಿಯೇನಲ್ಲ. ಆದರೇ, ಈ ನೆಲದ ನಿಜವಾರಸುದಾರರಾದ ಆದಿವಾಸಿಗಳನ್ನು ನಮ್ಮ ಸರ್ಕಾರಗಳು ಹೇಗೆ ವಂಚಿಸಬಲ್ಲವು ಎಂಬುದಕ್ಕೆ ಒಂದು ಸತ್ಯ ಘಟನೆಯನ್ನು ನಿಮ್ಮದೆರು ಅನಾವರಣಗೊಳಿಸುತ್ತಿದ್ದೇನೆ.

ಕಳೆದ ಎರಡು ವರ್ಷಗಳಿಂದ ಮಧ್ಯಪ್ರದೇಶ ಮತ್ತು ಛತ್ತೀಸ್ಗಡ ರಾಜ್ಯಗಳ ಅರಣ್ಯ ಪ್ರದೇಶ ನನಗೀಗ ಅಪರಿಚಿತವಾಗಿ ಉಳಿದಿಲ್ಲ. ನಕ್ಷಲ್ ಕಥನದ ಮಾಹಿತಿಗಾಗಿ ಎರಡು ಬಾರಿ ಅಲ್ಲಿಗೆ ಬೇಟಿ ನೀಡಿದ್ದೆ. ಅನಂತರ ಕಳೆದ ಒಂದು ವರ್ಷದಿಂದ ನನ್ನ ಮಗ ಅನನ್ಯ ಇದೇ ಅರಣ್ಯಪ್ರದೇಶದ ಅಭಯಾರಣ್ಯದಲ್ಲಿರುವ ಕೇಂದ್ರ ಸರ್ಕಾರದ ಅರಣ್ಯಾಧಿಕಾರಿಗಳ ತರಬೇತಿ ಕೇಂದ್ರದಲ್ಲಿ  ವಲಯ ಅರಣ್ಯಾಧಿಕಾರಿಯಾಗಿ ತರಬೇತಿ ಪಡೆಯುತ್ತಿದ್ದಾನೆ. ಅವನ ಬೇಟಿಯ ನೆಪದಲ್ಲಿ ಕಳೆದ ಒಂಬತ್ತು ತಿಂಗಳಲ್ಲಿ ಮತ್ತೆ ಎರಡು ಬಾರಿ ಬೇಟಿ ನೀಡಿದ್ದೀನಿ. ಪ್ರತಿ ಬೇಟಿಯಲ್ಲಿ ಅಲ್ಲಿನ ಆದಿವಾಸಿಗಳ ಅಬಿವೃದ್ಧಿಗಾಗಿ ಶ್ರಮಿಸುತ್ತಿರುವ ಅನೇಕ ಸ್ವಯಂ ಸೇವಾ ಸಂಘಟನೆಗಳು, ಆ ಪ್ರದೇಶದಲ್ಲಿ  ನಡೆಯುತ್ತಿರುವ ಅನೇಕ ವಂಚನೆಗಳನ್ನು ದಾಖಲೆಗಳ ಮೂಲಕ ನನ್ನೆದೆರು ಅನಾವರಣಗೊಳಿಸುತ್ತಾ ಬಂದಿವೆ. ಅನಕ್ಷರಸ್ತರನ್ನು, ಮುಗ್ಧರನ್ನು ನಮ್ಮನ್ನಾಳುವ ಸರ್ಕಾರಗಳು ಹೀಗೂ ವಂಚಿಸಬಲ್ಲವೆ?, ವಂಚನೆಗಳಿಗೆ ಇಷ್ಟೊಂದು ಮುಖಗಳಿವೆಯಾ? ಎಂದು ನನಗೆ ಆಶ್ಚರ್ಯವಾಗುತ್ತದೆ.
ಈ ದೇಶದ ಶೇಕಡ 90 ರಷ್ಟು ಕಲ್ಲಿದ್ದಲು  ಮತ್ತು ಶೇಕಡ 55 ರಷ್ಟು ಇತರೆ ಲೋಹಗಳ ನಿಕ್ಷೇಪ ಭಾರತದ ಆದಿವಾಸಿಗಳು ನೆಲೆಗೊಂಡಿರುವ ಅರಣ್ಯಗಳಲ್ಲಿ ಶೇಖರಗೊಂಡಿವೆ. ಈ ವಾಸ್ತವ ಸಂಗತಿ ಆದಿವಾಸಿಗಳ ಪಾಲಿಗೆ ಕಂಟಕವಾಗಿದೆ. ದೇಶದ ಶೇಕಡ 60ರಷ್ಟು ಕಲ್ಲಿದ್ದಲು ನಿಕ್ಷೇಪ, ಛತ್ತೀಸ್ಗಡ ರಾಜ್ಯದ ಅರಣ್ಯದಲ್ಲಿದ್ದು ಅನೇಕ ಕಂಪನಿಗಳು ಇಲ್ಲಿಗೆ ಲಗ್ಗೆ ಇಟ್ಟಿವೆ, ಅನೇಕ ಉದ್ದಿಮೆಗಳು ರಾಜಕಾರಣಿಗಳೊಂದಿಗೆ ಶಾಮೀಲಾಗಿದ್ದು, ಯಾವ ಅಳುಕಿಲ್ಲದೆ ಅರಣ್ಯ ಭೂಮಿಯನ್ನು ಕಬಳಿಸುತ್ತಿವೆ.
ಈಗಾಗಲೇ 70 ಖಾಸಾಗಿ ಕಂಪನಿಗಳು, ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆಗೆ ಛತ್ತೀಸ್ ಗಡ ರಾಜ್ಯಕ್ಕೆ ಕಾಲಿಟ್ಟಿವೆ. ಅನಂತ್ ಗ್ರೂಪ್ ಆಫ್ ಕಂಪನೀಸ್ ಎಂಬ ಸಂಸ್ಥೆಗೆ ರಾಜ್ಯ ಸರ್ಕಾರ 358 ಹೆಕ್ಟೇರ್ ಪ್ರದೇಶವನ್ನು ಮಂಜೂರು ಮಾಡಿದೆ. ಇದರಲ್ಲಿ ಆದಿವಾಸಿಗಳಿಗೆ ಸೇರಿದ 58 ಹೆಕ್ಟೇರ್ ಅರಣ್ಯಪ್ರದೇಶವೂ ಸೇರಿದೆ, ಶಾರದಾ ಎನರ್ಜಿ ಲಿಮಿಟೆಡ್ ಎಂಬ ಸಂಸ್ಥೆ ಅಕ್ರಮವಾಗಿ ಆದಿವಾಸಿಗಳ ಹೆಸರಿನಲ್ಲಿ 24 ಹೆಕ್ಟೇರ್ ಪ್ರದೇಶವನ್ನು ಖರೀದಿಸಿದೆ, (ಆದಿವಾಸಿಗಳ ಭೂಮಿಯನ್ನು ಇತರೆ ಯಾರೂ ಖರೀದಿಸದಂತೆ ಕೇಂದ್ರ ಸರ್ಕಾರದ ಕಾನೂನು ಜಾರಿಯಲ್ಲಿದೆ) ಮಹಾರಾಷ್ಟ್ರದ ಔರಂಗಾಬಾದ್ ಮೂಲದ ವಿಡಿಯೋಕಾನ್ ಕಂಪನಿಗೆ ಆದಿವಾಸಿ ಮುಖಂಡನೊಬ್ಬ ಕಮಿಷನ್ ಹಣದ ಆಸೆಗಾಗಿ ಹನ್ನೆರೆಡು ಆದಿವಾಸಿ ಕುಟುಂಬಗಳ 160 ಹೆಕ್ಟೇರ್ ಅರಣ್ಯ ಪ್ರದೇಶವನ್ನು ಖರೀದಿಸಿದ್ದಾನೆ. ಇವೆಲ್ಲವೂ ಕಲ್ಲಿದ್ದಲು ನಿಕ್ಷೇಪ ಇರುವ ಪ್ರದೇಶಗಳು.
ಇದು ಖಾಸಾಗಿ ಕಂಪನಿಗಳು ವಂಚಿಸುವ ಬಗೆಯಾದರೆ, ಸ್ವತಃ ಛತ್ತೀಸ್ ಗಡ ಸರ್ಕಾರವೇ ಆದಿವಾಸಿಗಳನ್ನು ವಂಚಿಸಲು ಇದೀಗ ಮುಂದಾಗಿದೆ. ಸರ್ಗುಜ ಜಿಲ್ಲೆಯ ಪ್ರೇಮ್ ನಗರ ಬ್ಲಾಕ್ (ತಾಲ್ಲೂಕು) ನಲ್ಲಿ ಶೆಕಡ 61 ರಷ್ಟು ಬುಡಕಟ್ಟು ಜನಾಂಗಗಳು ವಾಸಿಸುವ 15 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ಅರಣ್ಯ ಪ್ರದೇಶದಲ್ಲಿ, ಛತ್ತೀಸಗಡ ಸರ್ಕಾರ ಮತ್ತು ಜಗತ್ತಿನ ಅತಿದೊಡ್ಡ ರೈತರ ಸಹಕಾರಿ ಸಂಸ್ಥೆಯಾದ ಇಪ್ಕೊ ಸಂಸ್ಥೆಗಳು ಜಂಟಿಯಾಗಿ 4.500 ಕೋಟಿ ಬಂಡವಾಳದಲ್ಲಿ 1320 ಮೆಗಾವ್ಯಾಟ್ ಉತ್ಪಾದನೆಗೆ ಮುಂದಾಗಿವೆ. ತಮ್ಮ ಭೂಮಿಯಲ್ಲಿ ಕಲ್ಲಿದ್ದಲು ನಿಕ್ಷೇಪ ತೆಗೆಯಲು ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರ ಜೊತೆ ಮಾತುಕತೆ ನಡೆಸಿದ ಮುಖ್ಯಮಂತ್ರಿ ಡಾ.ರಮಣಸಿಂಗ್ ಈ ಪ್ರದೇಶವನ್ನು ನೆರೆಯ ಬಿಲಾಯ್ ಕೈಗಾರಿಕಾ ನಗರದಂತೆ ಪರಿವರ್ತಿಸುತ್ತೇನೆ, ಶಾಲಾ, ಕಾಲೇಜುಗಳು, ಅತ್ತ್ಯುತ್ತಮ ದರ್ಜೆಯ ಆಸ್ಪತ್ರೆಗಳು ತಲೆ ಎತ್ತುತ್ತವೆ, ಎಕರೆಗೆ ಕೇವಲ ಐವತ್ತು ಸಾವಿರ ಬೆಲೆ ಬಾಳುವ ಭೂಮಿ ನಂತರ 10 ಲಕ್ಷ ಬೆಲೆ ಬಾಳಲಿದೆ ಎಂದು ಆಮೀಷ ತೋರಿದರು. ಅಲ್ಲಿನ ಆದಿವಾಸಿ ರೈತರು ಯಾವುದೇ ಆಮೀಷಕ್ಕೆ ಬಲಿ ಬೀಳಲಿಲ್ಲ. ಭೂಮಿ ನೀಡಲು ನಿರಾಕರಿಸಿದರು, ಜೊತೆಗೆ ಸಂವಿಧಾನದ 73 ಮತ್ತು 74ನೇ ತಿದ್ದುಪಡಿ ಸ್ಥಳೀಯ ಗ್ರಾಮ ಪಂಚಾಯಿತಿಗಳಿಗೆ ನೀಡಿರುವ ಸಾರ್ವಭೌಮ ಹಕ್ಕುಗಳನ್ನು ಬಳಸಿ, ನಮ್ಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನಮ್ಮ ಅನುಮತಿ ಇಲ್ಲದೆ ಯಾವುದೇ ಗಣಿಗಾರಿಕೆ ನಡೆಯಬಾರದು ಎಂಬ ನಿರ್ಣಯ ತೆಗೆದುಕೊಂಡರು.
ಗ್ರಾಮಪಂಚಾಯಿತಿಗಳ ನಿರ್ಣಯವನ್ನು ಮಣಿಸಲು ಛತ್ತೀಸ್ ಗಡದ ಬಿ.ಜೆ.ಪಿ. ಸರ್ಕಾರದ  ಮುಖ್ಯಮಂತ್ರಿ ರಮಣಸಿಂಗ್ ಬಳಸಿದ ವಾಮಮಾರ್ಗ ಮಾತ್ರ ಪ್ರಜಾಪ್ರಭುತ್ವದ ಮಾಲ್ಯಗಳಿಗೆ ಧಕ್ಕೆ ತರುವಂತಹದ್ದು. ತನ್ನ ಸಚಿವ ಸಂಪುಟದಲ್ಲಿ 15 ಗ್ರಾಮ ಪಂಚಾತಿಗಳನ್ನು ನಗರ ಸಭಾ ಪಂಚಾಯಿತಿಗಳಾಗಿ ಪರಿವರ್ತಿಸಿ, ಅವುಗಳ ಹಕ್ಕನ್ನು ಮೊಟಕುಗೊಳಿಸಲಾಯಿತು. ಕೇವಲ ಐದು ಸಾವಿರ ಜನಸಂಖ್ಯೆ ಇರುವ ಗ್ರಾಮಪಂಚಾಯಿತಿಗಳು ಛತ್ತೀಸ್ ಗಡದ ಸರ್ಕಾರದಲ್ಲಿ ನಗರ ಸಬೆ ಪಂಚಾಯಿತಿಗಳಾಗಿವೆ. ಇದಕ್ಕೆ ಮುಖ್ಯಮಂತ್ರಿ ರಮಣ್ ಸಿಂಗ್ ನೀಡಿದ ಉತ್ತರ ಹೀಗಿದೆ “ ಗ್ರಾಮ ಪಂಚಾಯಿತಿಗಳಿಗೆ ಕುಡಿಯುವ ನೀರು, ರಸ್ತೆ, ಆರೋಗ್ಯ, ಶಿಕ್ಷಣ ಮುಂತಾದ ಸೌಲಭ್ಯ ಒದಗಿಸಲು  ನಗರ ಸಭೆಗಳನ್ನಾಗಿ ಪರಿವರ್ತಿಸಲಾಗಿದೆ, ಇದು ಆದಿವಾಸಿಗಳಿಗೆ ಸರ್ಕಾರ ನಿಡಿದ ಉಡೂಗರೆ” ಇದು ದೇಶಭಕ್ತರ ಪಕ್ಷದಿಂದ ಬಂದ ಮುಖ್ಯಮಂತ್ರಿಯೊಬ್ಬನ ಮಾತು.
ಸರ್ಕಾರದ ನಿರ್ಣಯವನ್ನು ಪ್ರತಿಭಟಿಸಿದ ಸಾವಿರಾರು ಆದಿವಾಸಿ ರೈತರು, ತಮ್ಮ ತಲೆಗೂದಲು, ಮೀಸೆಗಳನ್ನು ಬೋಳಿಸಿಕೊಂಡು , ರಾಜ್ಯಪಾಲ ಎಂ.ಎಲ್ ನರಸಿಂಹನ್ ಅವರಿಗೆ 2008 ರಲ್ಲಿ ಮನವಿ ಸಲ್ಲಿಸಿದರು.
ಕುತೂಹಲದ ಸಂಗತಿಯೆಂದರೇ, ಈ ಪ್ರದೇಶದ 450 ಚದುರ ಕಿಲೋಮೀಟರ್ ಅರಣ್ಯವನ್ನು ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಆನೆಗಳ ಕಾರಿಡಾರ್ ಎಂದು ಘೋಷಿಸಿತ್ತು. ಹುಲಿ, ಚಿರತೆ, ಐದು ಬಗೆಯ ವಿಶಿಷ್ಟ ಪತಂಗಗಳು, 15 ಬಗೆಯ ಸಸ್ತನಿ ಪ್ರಾಣಿಗಳು ಈ ಪ್ರದೇಶದಲ್ಲಿವೆ.ಸರ್ಗುಜ ಜಿಲ್ಲೆಯ ಪೂರ್ವ ಕರ್ಯ, ಹಾಗೂ ಕಂಟೆಬಸೇನ್, ಹಸ್ ಡೆಯಾ ನದಿತೀರದ ಪ್ರಾಂತ್ಯದಲ್ಲಿ ಶೇಕಡ 80 ರಷ್ಟು ಅರಣ್ಯವಿರುವುದನ್ನು ಈ ಪ್ರದೇಶದಲ್ಲಿ ಸಮೀಕ್ಷೆ ನಡೆಸಿದ ಹೈದರಾಬಾದಿನ ತಾರಾ ವಿಜ್ಞಾನ ಸಂಸ್ಥೆ ದೃಢಪಡಿಸಿದೆ. 70 ಸಾವಿರ ಗಿಡಗಳನ್ನು ವಿರಳವಾಗಿರುವ  ಅರಣ್ಯ ಪ್ರದೇಶದಲ್ಲಿ ನೆಡುವಂತೆ ಕೇಂದ್ರ ಸರ್ಕಾರಕ್ಕೆ ಈ  ಸಂಸ್ಥೆ ಶಿಫಾರಸ್ಸು ಮಾಡಿತ್ತು.
ಇದೀಗ ರಾಜಸ್ಥಾನದ ಕಾಂಗ್ರೆಸ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಇಲ್ಲಿ ತಯಾರಾಗುವ ವಿದ್ಯುತ್ ಅನ್ನು ಖರೀದಿಸಲು ಛತ್ತೀಸ್ ಗಡ ಮತ್ತು ಇಪ್ಕೊ ಸಂಸ್ಥೆ ಜೊತೆ ಒಪ್ಪಂಧ ಮಾಡಿಕೊಂಡಿದ್ದಾರೆ, ಹಾಗಾಗಿ ಅವರು ಕೇಂದ್ರದ ಮೇಲೆ ಒತ್ತಡ ಹೇರಿ ಮೀಸಲು ಅರಣ್ಯ ಪ್ರದೇಶದ 450 ಚದುರ ಕಿ.ಮಿ.ವ್ಯಾಪ್ತಿಯನ್ನು ಕುಗ್ಗಿಸಲು ಪ್ರಯತ್ನ ನಡೆಸಿದ್ದಾರೆ. ಆದರೆ, ಛತ್ತೀಸ್ಗಡದ ಆದಿವಾಸಿ ರೈತರು ಮಾತ್ರ ಕಳೆದ ಐದು ವರ್ಷಗಳಿಂದ ನಿರಂತರವಾಗಿ ಕಲ್ಲಿದ್ದಲು ಗಣಿಗಾರಿಕೆ ವಿರುದ್ದ ಹೋರಾಟ ಮುಂದುವರಿಸಿದ್ದಾರೆ. ಅವರ ಶ್ರಮ, ಪ್ರತಿಭಟನೆ, ಹೋರಾಟ ಎಲ್ಲವೂ ಇಲ್ಲಿ ಅರಣ್ಯ ರೋಧನ ದಂತೆ ಕಂಡುಬರುತ್ತಿದೆ. ಪ್ರತಿದಿನ ಛತ್ತೀಸ್ ಗಡ ಅರಣ್ಯದ ಒಡಲು ಬಗೆದು ತೆಗೆದ ಕಲ್ಲಿದ್ದಲು ದೇಶಾದ್ಯಂತ ರವಾನೆಯಾಗುತ್ತಿದೆ. ಭಾರತೀಯ ಮಧ್ಯ ರೈಲ್ವೆ ಕಲ್ಲಿದ್ದಲು ಸಾಗಾಣಿಕೆಗಾಗಿ, ಮಧ್ಯಭಾರತದಲ್ಲಿ ಪ್ರಯಾಣಿಕರ ರೈಲ್ವೆ ಮಾರ್ಗದ ಪಕ್ಕದಲ್ಲಿ ಸರಕು ಸಾಗಾಣಿಕೆ ರೈಲುಗಳಿಗಾಗಿ ಪ್ರತ್ಯೇಕ ಎರಡು ಮಾರ್ಗಗಳನ್ನು ಸೃಷ್ಟಿಸಿದೆ. ಛತ್ತೀಸ್ ಗಡದಲ್ಲಿ ನಡೆಯುವ ಕಲ್ಲಿದ್ದಲ ಗಣಿಗಾರಿಗಳು, ಮಹಾರಾಷ್ಟ್ರದ ಗಡಿ ಜಿಲ್ಲೆ ಚಂದ್ರಾಪುರ್ ಜಿಲ್ಲೆಯಲ್ಲಿ ಇರುವ 24 ಕಲ್ಲಿದ್ದಲು ಸಂಸ್ಕರಣ ಘಟಕಗಳು ಎಲ್ಲವೂ ಭಾರತದ ಪ್ರಮುಖ ರಾಜಕಾರಣಿಗಳ ಒಡೆತನದಲ್ಲಿವೆ. ಅಭಿವೃದ್ದಿಯೆಂಬ ವಿಕೃತಿಯ ನೆಪದಲ್ಲಿ ಪರಿಸರವನ್ನು, ಆದಿವಾಸಿ ರೈತರನ್ನು ಸದ್ದಿಲ್ಲದೆ ಶೋಷಿಸುತ್ತಿರುವ  ಈಗಿನ ಭಾರತದ ವ್ಯವಸ್ಥೆಯಲ್ಲಿ, ಅರ್ಥಶಾಸ್ತ್ರದ ವಿದ್ಯಾರ್ಥಿಯಾಗಿ, ಸಂಶೋಧಕನಾಗಿ ತೊಡಗಿಸಿಕೊಂಡಿರುವ ನನಗೆ ಅಭಿವೃದ್ಧಿಯ ಶಬ್ಧ ಕೇಳಿದರೆ, ಆತಂಕ ಶುರುವಾಗುತ್ತದೆ.

ಬುಧವಾರ, ಮೇ 8, 2013

ಅಳಂಗ್ ಎಂಬ ನೆಲದ ಮೇಲಿನ ನರಕ


ಗುಜರಾತಿನ ಮುಖ್ಯಮುಂತ್ರಿ ನರೇಂದ್ರಮೋದಿಯವರು ಪ್ರಖ್ಯಾತ ಹಿಂದಿಚಿತ್ರರಂಗದ ಹಿರಿಯ ನಟ ಅಮಿತಾಬ್ ಬಚ್ಚನ್ ರವರನ್ನು ಪ್ರವಾಸೋದ್ಯಮದ ರಾಯಭಾರಿಯನ್ನಾಗಿ ಮಾಡಿಕೊಂಡು, ಗುಜರಾತ್ ರಾಜ್ಯವನ್ನು ಧರೆಯ ಮೇಲಿನ ಸ್ವರ್ಗ ಎಂದು ಪ್ರತಿಬಿಂಬಿಸುವ ಜಾಹಿರಾತನ್ನು  ಪ್ರಕಟಿಸುತ್ತಿರುವುದನ್ನು ನಾವು ಮಾದ್ಯಮಗಳಲ್ಲಿ ನೋಡುತ್ತಿದ್ದೇವೆ. ಅಲ್ಲಿನ ಕಡಲತೀರ, ದ್ವಾರಕದಂತಹ  ಸಮುದ್ರದಡಿ ಮುಳುಗಿದ ಅವಶೇಷಗಳು, ಐತಿಹಾಸಿಕ, ಮತ್ತು ಪೌರಾಣಿಕ ಹಿನ್ನಲೆಯುಳ್ಳ ದೇಗುಲಗಳು, ಗುಜರಾತಿನ ವಿಶಿಷ್ಟ ಸಂಸ್ಕೃತಿ, ಈ ಎಲ್ಲವೂ ಕೂಡ ಜಾಹಿರಾತಿನಲ್ಲಿ  ಗಮನ ಸೆಳೆಯುವಂತವು. ಇದರ ಕುರಿತು ಎರಡು ಮಾತಿಲ್ಲ. ಆದರೆ, ಇದರ ಜೊತೆ ಜೊತೆಯಲ್ಲಿ ಗುಜರಾತಿನ ಕಡಲ ತೀರದಲ್ಲಿ ನೆಲದ ಮೇಲಿನ ನರಕವೂ ಕೂಡ ಇದೆ ಎಂಬ ವಿಷಯವನ್ನು ಜಾಹಿರು ಪಡಿಸಿದ್ದರೆ, ಚೆನ್ನಾಗಿರುತ್ತಿತ್ತು.
ಜಗತ್ತಿನಲ್ಲಿ ಹಡಗು ಒಡೆಯುವ ಅತಿ ದೊಡ್ಡ ಕೇಂದ್ರ, ಇದೇ ಗುಜರಾತಿನ ಕಡಲ ತೀರದ ಅಳಂಗ್ ಎಂಬ ಸ್ಥಳದಲ್ಲಿದೆ. ಮನುಷ್ಯನೊಬ್ಬನ ಜೀವವನ್ನು ಹೊರತುಪಡಿಸಿ, ಭಾರತದಲ್ಲಿ ಎಲ್ಲವೂ ದುಬಾರಿ ಎಂಬ ಅಂಶವನ್ನು ಮನದಟ್ಟಾಗಬೇಕಾದರೆ, ಒಮ್ಮೆ ಗುಜರಾತಿನ ಅಳಂಗ್ ಎಂಬ ಬಂದರು ಪ್ರದೇಶವನ್ನು ಹಾಗೂ ಅಲ್ಲಿನ ದುರಂತವನ್ನು ನಾವು ಒಮ್ಮೆ ಕಣ್ಣಾರೆ ನೋಡಬೇಕು.

ಪಾಶ್ಚಿಮಾತ್ಯ ರಾಷ್ಟ್ರಗಳ ಪಾಲಿಗೆ ಕಸ ಸುರಿಯುವ ತಿಪ್ಪೆಗುಂಡಿಯಾಗಿರುವ ಭಾರತ ಮತ್ತು ಇಲ್ಲಿನ ಪರಿಸರ ಕುರಿತ ಅಜ್ಞಾನವೆಂದರೆ, ಎಲ್ಲಿಲ್ಲದ ಮೋಹ. ಭಾರತದಿಂದ ರಫ್ತಾಗುವ ಹಣ್ಣು, ಅಥವಾ ತರಕಾರಿ ಇಲ್ಲವೆ, ಆಹಾರ ಪದಾರ್ಥಗಳಲ್ಲಿ ಒಂದಿನಿತು ವಿಷಕಾರಿ ಅಂಶ ಕಂಡರೆ ಸಾರಾ ಸಗಟಾಗಿ ತಿರಸ್ಕರಿಸುವ ಈ ರಾಷ್ತ್ರಗಳು ತಮ್ಮ ನೆಲ, ಜಲ ಹಾಗೂ ಪರಿಸರಕ್ಕೆ ಅಪಾಯವಾಗುವ  ಹಡಗುಗಳನ್ನು ಮಾತ್ರ,ಒಡೆಯುವ ಕ್ರಿಯೆಗೆ ಕೈ ಹಾಕದೆ, ಎಲ್ಲವನ್ನು ತಂದು ಭಾರತದ ಅಳಂಗ್ ಮತ್ತು ಬಂಗ್ಲಾದೇಶದ ಚಿತ್ತಗಾಂಗ್ ಬಂದರಿಗೆ ತಂದು ಬಿಸಾಡಿಹೋಗುತ್ತವೆ,
ಇಲ್ಲಿನ ಅಶಿಕ್ಷಿತ ಕೂಲಿಜನ. ಬಡತನ ಮತ್ತು ಎರಡನೇ ದರ್ಜೆ ವಸ್ತುಗಳಿಗೆ ಬಲಿಬೀಳುವ ಹಪಾಹಪಿನ ಇಂತಹ ನಮ್ಮ ದೌರ್ಬಲ್ಯಗಳನ್ನು ಜಗತ್ತಿನ ಮುಂದುವರಿದ ರಾಷ್ತ್ರಗಳು ಬಂಡವಾಳ ಮಾಡಿಕೊಂಡಿವೆ.

ಗುಜರಾತಿನ ಭಾವನಗರದಿಂದ 50 ಕಿಲೋಮೀಟರ್ ದೂರದಲ್ಲಿರುವ ಅಳಂಗ್ ಬಂದರಿನಲ್ಲಿ ಇಪ್ಪತ್ತಕ್ಕೂ ಹೆಚ್ಚು ಕಂಪನಿಗಳು ಹಡಗು ಒಡೆದು ಹಾಕುವ ಕಾರ್ಯದಲ್ಲಿ  ನಿರತವಾಗಿವೆ. ನೆರೆಯ ಬಿಹಾರ, ಉತ್ತರ ಪ್ರದೇಶ, ರಾಜಸ್ಥಾನದಿಂದ ಬಂದ ಅನಕ್ಷರಸ್ತ ಕೂಲಿಕಾರ್ಮಿಕರು ಇಲ್ಲಿನ ಶೆಡ್ಡುಗಳಲ್ಲಿ ವಾಸಿಸುತ್ತಾ ದಿನವೊಂದಕ್ಕೆ 200 ರೂಪಾಯಿನಿಂದ 300 ರೂಪಾಯಿಗಳಿಗೆ ದುಡಿಯುತ್ತಿದ್ದಾರೆ.
ಉದ್ಯೊಗ ಕುರಿತ ಯಾವ ಸುರಕ್ಷತೆಯಾಗಲಿ, ಭದ್ರತೆಯಾಗಲಿ ಇಲ್ಲಿ ಇಲ್ಲ. ಸುಮಾರು 18 ಸಾವಿರ ಪುರುಷರು ಮತ್ತು 3 ಸಾವಿರ ಮಹಿಳೆಯರೂ ದುಡಿಯುತ್ತಿರುವ ಅಳಂಗ್  ಬಂದರಿನಲ್ಲಿ ಪ್ರತಿ ತಿಂಗಳು ಆಕಸ್ಮಿಕ ಅಪಘಾತಗಳಿಂದ ಸರಾಸರಿ 9 ಮಂದಿ ಸಾವನ್ನಪ್ಪುತ್ತಿದ್ದಾರೆ. ಇದು ಗಣಿಗಾರಿಕೆಯಲ್ಲಿ ತೊಡಗಿಕೊಂಡಿರುವ ಕೂಲಿ ಕಾರ್ಮಿಕರ ಸಾವಿನ ಸಂಖ್ಯೆಗಿಂತ ಶೇಕಡ ಆರು ಪಟ್ಟು ಹೆಚ್ಚಿದೆ. ಇದಲ್ಲದೆ, ಅಪಾಯಕಾರಿ ರಸಾಯನಿಕ ವಸ್ತುಗಳು ಮತ್ತು ವಿವಿಧ ಬಗೆಯ ತೈಲ ಅಥವಾ ತ್ಯಾಜ್ಯವಸ್ತುಗಳನ್ನು ಸಾಗಿಸಿ ಹಳೆಯದಾದ ಹಡಗುಗಳನ್ನು ಒಡೆಯುವಾಗ ಹೊರ ಹೊಮ್ಮಿದ ವಿಷಾನಿಲಗಳಿಗೆ ಮತ್ತು ಹಡಗಿನ ವಿವಿಧ ಭಾಗಗಳನ್ನು ಗ್ಯಾಸ್ ಕಟ್ಟರ್ ಮೂಲಕ ಕತ್ತರಿಸುವಾಗ ಉತ್ಪಾದನೆಯಾಗುವ ವಿಷದ ಗಾಳಿಗೆ ತೆರದುಕೊಂಡ ಫಲವಾಗಿ ಇಲ್ಲಿನ ಕಾರ್ಮಿಕರು ಶ್ವಾಸಕೋಶದ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಹಡಗಿನ ಒಳಾಂಗಣವನ್ನು ಕಲ್ನಾರು ಮತ್ತು ಪೈಬರ್ ಗಳಿಂದ ವಿನ್ಯಾಸಗೊಳಿಸಿರುವುದರಿಂದ ಬೆಂಕಿಯ ಶಾಖಕ್ಕೆ ಉರಿಯುವ ಕಲ್ನಾರಿನಲ್ಲಿ ವಿಷಾನಿಲ ಹೊರಬರುತ್ತಿದ್ದು, ಇದನ್ನು ಉಸಿರಾಡುವ ಗಾಳಿಯ ಮೂಲಕ ಸೇವಿಸುತ್ತಿರುವ ಇಲ್ಲಿನ ಕಾರ್ಮಿಕರಿಗೆ ಇದರ ಬಗ್ಗೆ ಅರಿವಿಲ್ಲ.
ಭಾರತದಲ್ಲಿ ಅತಿಹೆಚ್ಚು ವೇಗವಾಗಿ ಏಡ್ಸ್ ಕಾಯಿಲೆಯನ್ನು ಹರಡುವುದರಲ್ಲಿ ಇಲ್ಲಿನ ಕಾರ್ಮಿಕರು ಲಾರಿ ಚಾಲಕರ ಜೊತೆ ಸ್ವರ್ಧೆಗೆ ಇಳಿದವರಂತೆ ಕಾಣುತ್ತಾರೆ. ತಿಂಗಳುಗಟ್ಟಲೆ ತಮ್ಮ ಸಂಸಾರದಿಂದ ದೂರವಿದದ್ದು. ದಿನವಿಡಿ ಮೈ ಮುರಿಯುವಂತೆ ದುಡಿಯುವ ಇವರಿಗೆ ಏಕೈಕ ಮನರಂಜನೆಯೆಂದರೆ, ಅಗ್ಗದ ಸೆಕ್ಸ್ ಮತ್ತು ತಂಬಾಕು. ( ಗುಜರಾತ್ ನಲ್ಲಿ ಮದ್ಯಪಾನ ನಿಷೇಧ ಜಾರಿಯಲ್ಲಿದೆ) ತಮಗೆ ಅರಿವಿಲ್ಲದೆ ಅಂಟಿಸಿಕೊಂಡ ಈ ಏಡ್ಸ್ ಕಾಯಿಲೆಯನ್ನು ತಮ್ಮ ಪತ್ನಿಯರಿಗೂ ಅಂಟಿಸಿ, ತಾವು ಯಾವ ಕಾಯಿಲೆಯಿಂದ ನರಳುತ್ತಿದ್ದವೆ? ಅಥವಾ ಸಾಯುತ್ತಿದ್ದೆವೆ? ಎಂಬುದನ್ನು ತಿಳಿಯಲಾರದ ನತದೃಷ್ಟರು ಇವರು.
ಇದು ಕಾರ್ಮಿಕರ ನೋವಿನ ಕಥನವಾದರೆ, ಅಲ್ಲಿನ ಸಮುದ್ರ ತಿರದ ಪರಿಸರದ ಕಥನ ತೀರಾ ಶೋಚನೀಯವಾಗಿದೆ,ಅಳಂಗ್  ಕಡಲ ತೀರದ ಉತ್ತರದಿಂದ ದಕ್ಷಿಣ ಭಾಗದ 50 ಕಿಲೋಮೀಟರ್ ಉದ್ದ ಹಾಗೂ ಸಮುದ್ರದ ನೀರಿನೊಳಗೆ 20 ಕಿಲೋಮಿಟರ್ ಉದ್ದದವರೆಗೆ  ನೀರು ಮತ್ತು ಕಡಲ ತೀರ ತೈಲ ಹಾಗೂ ರಸಾಯನಿಕ ಟ್ಯಾಂಕರ್ ಗಳ ಹಡಗುಗಳನ್ನು ಒಡೆದ ಪರಿಣಾಮ ಕಪ್ಪಾಗಿದೆ. ನೀರಿನಲ್ಲಿ ತೈಲ ಮತ್ತು ಗ್ರೀಸ್ ಜಿಡ್ಡು ತೇಲುತ್ತಿದೆ. ಇದರಿಂದಾಗಿ ಇಲ್ಲಿ ಯಾವ ಸಮುದ್ರ ಜೀವಿಗಳಿಗೂ ಉಳಿಗಾಲವಿಲ್ಲದಂತಾಗಿದೆ.
ಇಲ್ಲಿ ಒಡೆದು ಹಾಕಿದ ಹಡಗಿನ ಕಬ್ಬಿಣದ ಭಾಗಗಳು, ಮೋಟಾರ್ ಸೇರಿದಂತೆ ಕೆಲವು ಭಾಗಗಳು ಮರು ಉಪಯೋಗಕ್ಕೆ ಮಾರುಕಟ್ಟೆಗೆ ಸಾಗಲ್ಪಡುತ್ತವೆ. ತೀರಾ ತುಕ್ಕು ಹಿಡಿದ ಪ್ಲಾಸ್ಟಿಕ್ ಮತ್ತು ಕಬ್ಭಿಣದಂತ ವಸ್ತುಗಳು ಮಾತ್ರ ಮರುಬಳಕೆಯ ಕಚ್ಚಾವಸ್ತುಗಳಾಗಿ ಕಾರ್ಖಾನೆಗೆ ಸಾಗಿಸಲ್ಪಡುತ್ತವೆ.
ಅಳಂಗ್ ಬಂದರು ಜಗತ್ತಿನ ಅತಿದೊಡ್ಡ ಹಡಗುಗಳನ್ನು ಒಡೆಯುವ ಕೇಂದ್ರವಾಗಿದೆ, (ಚಿತ್ತಗಾಂಗ್ ಎರಡನೇಯದು) ಇಲ್ಲಿ ಹಡಗುಗಳನ್ನು ಒಡೆಯುವ ಮುನ್ನ ಪರಿಸರಕ್ಕೆ ಸಂಬಂಧ ಪಟ್ಟಂತೆ, ಭಾರತದ ಅರಣ್ಯ ಮತ್ತು ಪರಿಸರ ಇಲಾಖೆಯ ಕೆಲವು ನಿಯಾಮಗಳನ್ನು ಪಾಲಿಸಬೇಕು. ಆದರೆ ಇಲ್ಲಿ ಎಲ್ಲವನ್ನು ಗಾಳಿಗೆ ತೂರಲಾಗಿದೆ. ವಿದೇಶಗಳಿಂದ ಭಾರತಕ್ಕೆ ಬರುವ ಹಡಗುಗಳು ಮೊದಲು ಪರಿಸರ ಇಲಾಖೆಯ ಅನುಮತಿ ಪಡೆಯಬೇಕು. ಆದರೆ, ಅಮೇರಿಕಾದಂತಹ ದೊಡ್ಡಣ್ಣ ಭಾರತದ ನಿಯಾಮಾವಳಿಗಳನ್ನು ಗಾಳಿಗೆ ತೂರಿದ ದಾಖಲೆಗಳಿವೆ.
1997ರ ಆಗಸ್ಟ್ 5 ರಂದು ಭಾರತದಲ್ಲಿರುವ ಅಮೇರಿಕಾ ರಾಯಭಾರಿ ಎರಡು ಅಪಾಯಕಾರಿ ರಸಾಯನಿಕ ವಸ್ತುಗಳನ್ನು ಸಾಗಿಸುತ್ತಿದ್ದ ಹಡಗುಗಳನ್ನು ಒಡೆದು ಹಾಕಲು, ಭಾರತದ ಪ್ರವೇಶಕ್ಕೆ ಅನುಮತಿ ಕೋರಿದ್ದರು. ಭಾರತದ ಪರಿಸರ ಇಲಾಖೆ ಅನುಮತಿ ನಿರಾಕರಿಸಿತ್ತು. ಆದರೆ, ಸೆಪ್ಟಂಬರ್ ತಿಂಗಳಿನಲ್ಲಿ ಈ ಎರಡು ಹಡಗುಗಳು ಅಳಂಗ್ ಬಂದರಿನಲ್ಲಿ ಲಂಗರು ಹಾಕಿದ್ದವು. 8 ಸಾವಿರ ಮೆಟ್ರಿಕ್ ಟನ್ ತೂಕದ ಓವರ್ ಸೀಸ್ ವೆಲ್ದೆಜ್ ಮತ್ತು 15 ಸಾವಿರದ 700 ಮೆಟ್ರಿಕ್ ಟನ್ ತೂಕದ ಕಿಟ್ಟನಿಂಗ್ ಎಂಬ ಈ ಹಡಗುಗಳ ಬಗ್ಗೆ ಮಾದ್ಯಮದಲ್ಲಿ ವರದಿಯಾಗಿ, ಆನಂತರ ಲೊಕಸಭೆಯಲ್ಲಿ ಪ್ರಸ್ತಾಪವಾದ ಮೇಲೆ  ತನಿಖೆ ನಡೆಸಲಾಯಿತು. ಇಂತಹ ಘಟನೆಗಳು ಮೇಲಿಂದ ಮೇಲೆ ನಡೆದ ಫಲವಾಗಿ 2006 ರಲ್ಲಿ ಕೇಂದ್ರ ಸರ್ಕಾರ, ಪರಿಸರ ಇಲಾಖೆಯ ಕಾರ್ಯದರ್ಶಿ ನೇತ್ರತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಿತ್ತು. ಅಳಂಗ್ ಬಂದರಿನ ಪರಿಸರ ರಕ್ಷಣೆ ಬಗ್ಗೆ ಮತ್ತು ಅಲ್ಲಿನ ಕಾರ್ಮಿಕರ ಸುರಕ್ಷತೆ ಬಗ್ಗೆ ಅಧ್ಯಯನ ಮಾಡಿದ ಸಮಿತಿ, ಏಳು ಶಿಫಾರಸ್ಸುಗಳನ್ನು  ಜಾರಿಗೆ ತರಲು ಕೇಂದ್ರಕ್ಕೆ ಮನವಿ ಮಾಡಿತ್ತು. ಅದರಂತೆ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಹಲಾವಾರು ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಸಧ್ಯಕ್ಕೆ ಇವೆಲ್ಲವೂ ಕಾಗದದ ಮೇಲೆ ಮಾತ್ರ ಜಾರಿಯಲ್ಲಿವೆ. ಸ್ಥಳಿಯ ಅಧಿಕಾರಿಗಳು ಮತ್ತು ರಾಜಕಾರಣಿಗಳಿಗೆ ನೀಡಲಾಗುವ ಲಂಚದ ಆಮೀಷದ ಮೂಲಕ ಪರಿಸಕ್ಕೆ ಎರವಾಗುವ ಎಲ್ಲಾ ಕಾರ್ಯಗಳು ಅಳಂಗ್ ಬಂದರಿನಲ್ಲಿ ಎಗ್ಗಿಲ್ಲದೆ ನಡೆಯುತ್ತಿವೆ.
ಇತ್ತೀಚೆಗೆ ಇಂಗ್ಲೆಂಡ್ನ ಬ್ಲೂ ಲೇಡಿ ಮತ್ತು ಪ್ರಾನ್ಸ್ ನ ಕ್ಲೆಮೆನ್ಸಿ ಎಂಬ ಎರಡು ಯುದ್ದ ನೌಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ, ಭಾರತದಲ್ಲಿ ಎಂತಹಾ ಗಂಭೀರ ವಿಷಯಗಳಾದರೂ ಸರಿ. ಅವುಗಳಿಗೆ ಒಂದು ಆಯೋಗ ಅಥವಾ ಸಮಿತಿ ರಚಿಸಿ, ಅವುಗಳ ವರದಿಯನ್ನು  ಅಧಿಕಾರಸ್ತರು ತಮ್ಮ ಅಂಡುಗಳ ಅಡಿ ಹಾಕಿ ಕುಳಿತರೆ, ಕೆಲಸ ಮುಗಿಯುತ್ತದೆ ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ.