ಗುಜರಾತಿನ ಮುಖ್ಯಮುಂತ್ರಿ
ನರೇಂದ್ರಮೋದಿಯವರು ಪ್ರಖ್ಯಾತ ಹಿಂದಿಚಿತ್ರರಂಗದ ಹಿರಿಯ ನಟ ಅಮಿತಾಬ್ ಬಚ್ಚನ್ ರವರನ್ನು
ಪ್ರವಾಸೋದ್ಯಮದ ರಾಯಭಾರಿಯನ್ನಾಗಿ ಮಾಡಿಕೊಂಡು, ಗುಜರಾತ್ ರಾಜ್ಯವನ್ನು ಧರೆಯ ಮೇಲಿನ ಸ್ವರ್ಗ
ಎಂದು ಪ್ರತಿಬಿಂಬಿಸುವ ಜಾಹಿರಾತನ್ನು ಪ್ರಕಟಿಸುತ್ತಿರುವುದನ್ನು ನಾವು ಮಾದ್ಯಮಗಳಲ್ಲಿ
ನೋಡುತ್ತಿದ್ದೇವೆ. ಅಲ್ಲಿನ ಕಡಲತೀರ, ದ್ವಾರಕದಂತಹ ಸಮುದ್ರದಡಿ ಮುಳುಗಿದ ಅವಶೇಷಗಳು, ಐತಿಹಾಸಿಕ, ಮತ್ತು
ಪೌರಾಣಿಕ ಹಿನ್ನಲೆಯುಳ್ಳ ದೇಗುಲಗಳು, ಗುಜರಾತಿನ ವಿಶಿಷ್ಟ ಸಂಸ್ಕೃತಿ, ಈ ಎಲ್ಲವೂ ಕೂಡ
ಜಾಹಿರಾತಿನಲ್ಲಿ ಗಮನ ಸೆಳೆಯುವಂತವು. ಇದರ
ಕುರಿತು ಎರಡು ಮಾತಿಲ್ಲ. ಆದರೆ, ಇದರ ಜೊತೆ ಜೊತೆಯಲ್ಲಿ ಗುಜರಾತಿನ ಕಡಲ ತೀರದಲ್ಲಿ ನೆಲದ ಮೇಲಿನ
ನರಕವೂ ಕೂಡ ಇದೆ ಎಂಬ ವಿಷಯವನ್ನು ಜಾಹಿರು ಪಡಿಸಿದ್ದರೆ, ಚೆನ್ನಾಗಿರುತ್ತಿತ್ತು.
ಜಗತ್ತಿನಲ್ಲಿ ಹಡಗು ಒಡೆಯುವ
ಅತಿ ದೊಡ್ಡ ಕೇಂದ್ರ, ಇದೇ ಗುಜರಾತಿನ ಕಡಲ ತೀರದ ಅಳಂಗ್ ಎಂಬ ಸ್ಥಳದಲ್ಲಿದೆ. ಮನುಷ್ಯನೊಬ್ಬನ
ಜೀವವನ್ನು ಹೊರತುಪಡಿಸಿ, ಭಾರತದಲ್ಲಿ ಎಲ್ಲವೂ ದುಬಾರಿ ಎಂಬ ಅಂಶವನ್ನು ಮನದಟ್ಟಾಗಬೇಕಾದರೆ,
ಒಮ್ಮೆ ಗುಜರಾತಿನ ಅಳಂಗ್ ಎಂಬ ಬಂದರು ಪ್ರದೇಶವನ್ನು ಹಾಗೂ ಅಲ್ಲಿನ ದುರಂತವನ್ನು ನಾವು ಒಮ್ಮೆ
ಕಣ್ಣಾರೆ ನೋಡಬೇಕು.
ಪಾಶ್ಚಿಮಾತ್ಯ ರಾಷ್ಟ್ರಗಳ
ಪಾಲಿಗೆ ಕಸ ಸುರಿಯುವ ತಿಪ್ಪೆಗುಂಡಿಯಾಗಿರುವ ಭಾರತ ಮತ್ತು ಇಲ್ಲಿನ ಪರಿಸರ ಕುರಿತ
ಅಜ್ಞಾನವೆಂದರೆ, ಎಲ್ಲಿಲ್ಲದ ಮೋಹ. ಭಾರತದಿಂದ ರಫ್ತಾಗುವ ಹಣ್ಣು, ಅಥವಾ ತರಕಾರಿ ಇಲ್ಲವೆ, ಆಹಾರ
ಪದಾರ್ಥಗಳಲ್ಲಿ ಒಂದಿನಿತು ವಿಷಕಾರಿ ಅಂಶ ಕಂಡರೆ ಸಾರಾ ಸಗಟಾಗಿ ತಿರಸ್ಕರಿಸುವ ಈ ರಾಷ್ತ್ರಗಳು
ತಮ್ಮ ನೆಲ, ಜಲ ಹಾಗೂ ಪರಿಸರಕ್ಕೆ ಅಪಾಯವಾಗುವ
ಹಡಗುಗಳನ್ನು ಮಾತ್ರ,ಒಡೆಯುವ ಕ್ರಿಯೆಗೆ ಕೈ ಹಾಕದೆ, ಎಲ್ಲವನ್ನು ತಂದು ಭಾರತದ ಅಳಂಗ್
ಮತ್ತು ಬಂಗ್ಲಾದೇಶದ ಚಿತ್ತಗಾಂಗ್ ಬಂದರಿಗೆ ತಂದು ಬಿಸಾಡಿಹೋಗುತ್ತವೆ,
ಇಲ್ಲಿನ ಅಶಿಕ್ಷಿತ ಕೂಲಿಜನ.
ಬಡತನ ಮತ್ತು ಎರಡನೇ ದರ್ಜೆ ವಸ್ತುಗಳಿಗೆ ಬಲಿಬೀಳುವ ಹಪಾಹಪಿನ ಇಂತಹ ನಮ್ಮ ದೌರ್ಬಲ್ಯಗಳನ್ನು
ಜಗತ್ತಿನ ಮುಂದುವರಿದ ರಾಷ್ತ್ರಗಳು ಬಂಡವಾಳ ಮಾಡಿಕೊಂಡಿವೆ.
ಗುಜರಾತಿನ ಭಾವನಗರದಿಂದ 50
ಕಿಲೋಮೀಟರ್ ದೂರದಲ್ಲಿರುವ ಅಳಂಗ್ ಬಂದರಿನಲ್ಲಿ ಇಪ್ಪತ್ತಕ್ಕೂ ಹೆಚ್ಚು ಕಂಪನಿಗಳು ಹಡಗು ಒಡೆದು
ಹಾಕುವ ಕಾರ್ಯದಲ್ಲಿ ನಿರತವಾಗಿವೆ. ನೆರೆಯ
ಬಿಹಾರ, ಉತ್ತರ ಪ್ರದೇಶ, ರಾಜಸ್ಥಾನದಿಂದ ಬಂದ ಅನಕ್ಷರಸ್ತ ಕೂಲಿಕಾರ್ಮಿಕರು ಇಲ್ಲಿನ ಶೆಡ್ಡುಗಳಲ್ಲಿ
ವಾಸಿಸುತ್ತಾ ದಿನವೊಂದಕ್ಕೆ 200 ರೂಪಾಯಿನಿಂದ 300 ರೂಪಾಯಿಗಳಿಗೆ ದುಡಿಯುತ್ತಿದ್ದಾರೆ.
ಉದ್ಯೊಗ ಕುರಿತ ಯಾವ
ಸುರಕ್ಷತೆಯಾಗಲಿ, ಭದ್ರತೆಯಾಗಲಿ ಇಲ್ಲಿ ಇಲ್ಲ. ಸುಮಾರು 18 ಸಾವಿರ ಪುರುಷರು ಮತ್ತು 3 ಸಾವಿರ
ಮಹಿಳೆಯರೂ ದುಡಿಯುತ್ತಿರುವ ಅಳಂಗ್ ಬಂದರಿನಲ್ಲಿ
ಪ್ರತಿ ತಿಂಗಳು ಆಕಸ್ಮಿಕ ಅಪಘಾತಗಳಿಂದ ಸರಾಸರಿ 9 ಮಂದಿ ಸಾವನ್ನಪ್ಪುತ್ತಿದ್ದಾರೆ. ಇದು
ಗಣಿಗಾರಿಕೆಯಲ್ಲಿ ತೊಡಗಿಕೊಂಡಿರುವ ಕೂಲಿ ಕಾರ್ಮಿಕರ ಸಾವಿನ ಸಂಖ್ಯೆಗಿಂತ ಶೇಕಡ ಆರು ಪಟ್ಟು
ಹೆಚ್ಚಿದೆ. ಇದಲ್ಲದೆ, ಅಪಾಯಕಾರಿ ರಸಾಯನಿಕ ವಸ್ತುಗಳು ಮತ್ತು ವಿವಿಧ ಬಗೆಯ ತೈಲ ಅಥವಾ
ತ್ಯಾಜ್ಯವಸ್ತುಗಳನ್ನು ಸಾಗಿಸಿ ಹಳೆಯದಾದ ಹಡಗುಗಳನ್ನು ಒಡೆಯುವಾಗ ಹೊರ ಹೊಮ್ಮಿದ ವಿಷಾನಿಲಗಳಿಗೆ
ಮತ್ತು ಹಡಗಿನ ವಿವಿಧ ಭಾಗಗಳನ್ನು ಗ್ಯಾಸ್ ಕಟ್ಟರ್ ಮೂಲಕ ಕತ್ತರಿಸುವಾಗ ಉತ್ಪಾದನೆಯಾಗುವ ವಿಷದ
ಗಾಳಿಗೆ ತೆರದುಕೊಂಡ ಫಲವಾಗಿ ಇಲ್ಲಿನ ಕಾರ್ಮಿಕರು ಶ್ವಾಸಕೋಶದ ಕಾಯಿಲೆಗೆ ತುತ್ತಾಗುತ್ತಿದ್ದಾರೆ.
ಹಡಗಿನ ಒಳಾಂಗಣವನ್ನು ಕಲ್ನಾರು ಮತ್ತು ಪೈಬರ್ ಗಳಿಂದ ವಿನ್ಯಾಸಗೊಳಿಸಿರುವುದರಿಂದ ಬೆಂಕಿಯ ಶಾಖಕ್ಕೆ
ಉರಿಯುವ ಕಲ್ನಾರಿನಲ್ಲಿ ವಿಷಾನಿಲ ಹೊರಬರುತ್ತಿದ್ದು, ಇದನ್ನು ಉಸಿರಾಡುವ ಗಾಳಿಯ ಮೂಲಕ
ಸೇವಿಸುತ್ತಿರುವ ಇಲ್ಲಿನ ಕಾರ್ಮಿಕರಿಗೆ ಇದರ ಬಗ್ಗೆ ಅರಿವಿಲ್ಲ.
ಭಾರತದಲ್ಲಿ ಅತಿಹೆಚ್ಚು
ವೇಗವಾಗಿ ಏಡ್ಸ್ ಕಾಯಿಲೆಯನ್ನು ಹರಡುವುದರಲ್ಲಿ ಇಲ್ಲಿನ ಕಾರ್ಮಿಕರು ಲಾರಿ ಚಾಲಕರ ಜೊತೆ ಸ್ವರ್ಧೆಗೆ
ಇಳಿದವರಂತೆ ಕಾಣುತ್ತಾರೆ. ತಿಂಗಳುಗಟ್ಟಲೆ ತಮ್ಮ ಸಂಸಾರದಿಂದ ದೂರವಿದದ್ದು. ದಿನವಿಡಿ ಮೈ
ಮುರಿಯುವಂತೆ ದುಡಿಯುವ ಇವರಿಗೆ ಏಕೈಕ ಮನರಂಜನೆಯೆಂದರೆ, ಅಗ್ಗದ ಸೆಕ್ಸ್ ಮತ್ತು ತಂಬಾಕು. (
ಗುಜರಾತ್ ನಲ್ಲಿ ಮದ್ಯಪಾನ ನಿಷೇಧ ಜಾರಿಯಲ್ಲಿದೆ) ತಮಗೆ ಅರಿವಿಲ್ಲದೆ ಅಂಟಿಸಿಕೊಂಡ ಈ ಏಡ್ಸ್
ಕಾಯಿಲೆಯನ್ನು ತಮ್ಮ ಪತ್ನಿಯರಿಗೂ ಅಂಟಿಸಿ, ತಾವು ಯಾವ ಕಾಯಿಲೆಯಿಂದ ನರಳುತ್ತಿದ್ದವೆ? ಅಥವಾ
ಸಾಯುತ್ತಿದ್ದೆವೆ? ಎಂಬುದನ್ನು ತಿಳಿಯಲಾರದ ನತದೃಷ್ಟರು ಇವರು.
ಇದು ಕಾರ್ಮಿಕರ ನೋವಿನ
ಕಥನವಾದರೆ, ಅಲ್ಲಿನ ಸಮುದ್ರ ತಿರದ ಪರಿಸರದ ಕಥನ ತೀರಾ ಶೋಚನೀಯವಾಗಿದೆ,ಅಳಂಗ್ ಕಡಲ ತೀರದ ಉತ್ತರದಿಂದ ದಕ್ಷಿಣ ಭಾಗದ 50 ಕಿಲೋಮೀಟರ್
ಉದ್ದ ಹಾಗೂ ಸಮುದ್ರದ ನೀರಿನೊಳಗೆ 20 ಕಿಲೋಮಿಟರ್ ಉದ್ದದವರೆಗೆ ನೀರು ಮತ್ತು ಕಡಲ ತೀರ ತೈಲ ಹಾಗೂ ರಸಾಯನಿಕ ಟ್ಯಾಂಕರ್
ಗಳ ಹಡಗುಗಳನ್ನು ಒಡೆದ ಪರಿಣಾಮ ಕಪ್ಪಾಗಿದೆ. ನೀರಿನಲ್ಲಿ ತೈಲ ಮತ್ತು ಗ್ರೀಸ್ ಜಿಡ್ಡು ತೇಲುತ್ತಿದೆ.
ಇದರಿಂದಾಗಿ ಇಲ್ಲಿ ಯಾವ ಸಮುದ್ರ ಜೀವಿಗಳಿಗೂ ಉಳಿಗಾಲವಿಲ್ಲದಂತಾಗಿದೆ.
ಇಲ್ಲಿ ಒಡೆದು ಹಾಕಿದ ಹಡಗಿನ
ಕಬ್ಬಿಣದ ಭಾಗಗಳು, ಮೋಟಾರ್ ಸೇರಿದಂತೆ ಕೆಲವು ಭಾಗಗಳು ಮರು ಉಪಯೋಗಕ್ಕೆ ಮಾರುಕಟ್ಟೆಗೆ
ಸಾಗಲ್ಪಡುತ್ತವೆ. ತೀರಾ ತುಕ್ಕು ಹಿಡಿದ ಪ್ಲಾಸ್ಟಿಕ್ ಮತ್ತು ಕಬ್ಭಿಣದಂತ ವಸ್ತುಗಳು ಮಾತ್ರ ಮರುಬಳಕೆಯ
ಕಚ್ಚಾವಸ್ತುಗಳಾಗಿ ಕಾರ್ಖಾನೆಗೆ ಸಾಗಿಸಲ್ಪಡುತ್ತವೆ.
ಅಳಂಗ್ ಬಂದರು ಜಗತ್ತಿನ
ಅತಿದೊಡ್ಡ ಹಡಗುಗಳನ್ನು ಒಡೆಯುವ ಕೇಂದ್ರವಾಗಿದೆ, (ಚಿತ್ತಗಾಂಗ್ ಎರಡನೇಯದು) ಇಲ್ಲಿ ಹಡಗುಗಳನ್ನು
ಒಡೆಯುವ ಮುನ್ನ ಪರಿಸರಕ್ಕೆ ಸಂಬಂಧ ಪಟ್ಟಂತೆ, ಭಾರತದ ಅರಣ್ಯ ಮತ್ತು ಪರಿಸರ ಇಲಾಖೆಯ ಕೆಲವು
ನಿಯಾಮಗಳನ್ನು ಪಾಲಿಸಬೇಕು. ಆದರೆ ಇಲ್ಲಿ ಎಲ್ಲವನ್ನು ಗಾಳಿಗೆ ತೂರಲಾಗಿದೆ. ವಿದೇಶಗಳಿಂದ
ಭಾರತಕ್ಕೆ ಬರುವ ಹಡಗುಗಳು ಮೊದಲು ಪರಿಸರ ಇಲಾಖೆಯ ಅನುಮತಿ ಪಡೆಯಬೇಕು. ಆದರೆ, ಅಮೇರಿಕಾದಂತಹ
ದೊಡ್ಡಣ್ಣ ಭಾರತದ ನಿಯಾಮಾವಳಿಗಳನ್ನು ಗಾಳಿಗೆ ತೂರಿದ ದಾಖಲೆಗಳಿವೆ.
1997ರ ಆಗಸ್ಟ್ 5 ರಂದು
ಭಾರತದಲ್ಲಿರುವ ಅಮೇರಿಕಾ ರಾಯಭಾರಿ ಎರಡು ಅಪಾಯಕಾರಿ ರಸಾಯನಿಕ ವಸ್ತುಗಳನ್ನು ಸಾಗಿಸುತ್ತಿದ್ದ
ಹಡಗುಗಳನ್ನು ಒಡೆದು ಹಾಕಲು, ಭಾರತದ ಪ್ರವೇಶಕ್ಕೆ ಅನುಮತಿ ಕೋರಿದ್ದರು. ಭಾರತದ ಪರಿಸರ ಇಲಾಖೆ
ಅನುಮತಿ ನಿರಾಕರಿಸಿತ್ತು. ಆದರೆ, ಸೆಪ್ಟಂಬರ್ ತಿಂಗಳಿನಲ್ಲಿ ಈ ಎರಡು ಹಡಗುಗಳು ಅಳಂಗ್
ಬಂದರಿನಲ್ಲಿ ಲಂಗರು ಹಾಕಿದ್ದವು. 8 ಸಾವಿರ ಮೆಟ್ರಿಕ್ ಟನ್ ತೂಕದ ಓವರ್ ಸೀಸ್ ವೆಲ್ದೆಜ್ ಮತ್ತು
15 ಸಾವಿರದ 700 ಮೆಟ್ರಿಕ್ ಟನ್ ತೂಕದ ಕಿಟ್ಟನಿಂಗ್ ಎಂಬ ಈ ಹಡಗುಗಳ ಬಗ್ಗೆ ಮಾದ್ಯಮದಲ್ಲಿ
ವರದಿಯಾಗಿ, ಆನಂತರ ಲೊಕಸಭೆಯಲ್ಲಿ ಪ್ರಸ್ತಾಪವಾದ ಮೇಲೆ ತನಿಖೆ ನಡೆಸಲಾಯಿತು. ಇಂತಹ ಘಟನೆಗಳು ಮೇಲಿಂದ ಮೇಲೆ
ನಡೆದ ಫಲವಾಗಿ 2006 ರಲ್ಲಿ ಕೇಂದ್ರ ಸರ್ಕಾರ, ಪರಿಸರ ಇಲಾಖೆಯ ಕಾರ್ಯದರ್ಶಿ ನೇತ್ರತ್ವದಲ್ಲಿ
ಉನ್ನತ ಮಟ್ಟದ ಸಮಿತಿ ರಚಿಸಿತ್ತು. ಅಳಂಗ್ ಬಂದರಿನ ಪರಿಸರ ರಕ್ಷಣೆ ಬಗ್ಗೆ ಮತ್ತು ಅಲ್ಲಿನ
ಕಾರ್ಮಿಕರ ಸುರಕ್ಷತೆ ಬಗ್ಗೆ ಅಧ್ಯಯನ ಮಾಡಿದ ಸಮಿತಿ, ಏಳು ಶಿಫಾರಸ್ಸುಗಳನ್ನು ಜಾರಿಗೆ ತರಲು ಕೇಂದ್ರಕ್ಕೆ ಮನವಿ ಮಾಡಿತ್ತು. ಅದರಂತೆ
ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಹಲಾವಾರು ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಸಧ್ಯಕ್ಕೆ
ಇವೆಲ್ಲವೂ ಕಾಗದದ ಮೇಲೆ ಮಾತ್ರ ಜಾರಿಯಲ್ಲಿವೆ. ಸ್ಥಳಿಯ ಅಧಿಕಾರಿಗಳು ಮತ್ತು ರಾಜಕಾರಣಿಗಳಿಗೆ ನೀಡಲಾಗುವ
ಲಂಚದ ಆಮೀಷದ ಮೂಲಕ ಪರಿಸಕ್ಕೆ ಎರವಾಗುವ ಎಲ್ಲಾ ಕಾರ್ಯಗಳು ಅಳಂಗ್ ಬಂದರಿನಲ್ಲಿ ಎಗ್ಗಿಲ್ಲದೆ
ನಡೆಯುತ್ತಿವೆ.
ಇತ್ತೀಚೆಗೆ ಇಂಗ್ಲೆಂಡ್ನ ಬ್ಲೂ
ಲೇಡಿ ಮತ್ತು ಪ್ರಾನ್ಸ್ ನ ಕ್ಲೆಮೆನ್ಸಿ ಎಂಬ ಎರಡು ಯುದ್ದ ನೌಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ,
ಭಾರತದಲ್ಲಿ ಎಂತಹಾ ಗಂಭೀರ ವಿಷಯಗಳಾದರೂ ಸರಿ. ಅವುಗಳಿಗೆ ಒಂದು ಆಯೋಗ ಅಥವಾ ಸಮಿತಿ ರಚಿಸಿ,
ಅವುಗಳ ವರದಿಯನ್ನು ಅಧಿಕಾರಸ್ತರು ತಮ್ಮ ಅಂಡುಗಳ
ಅಡಿ ಹಾಕಿ ಕುಳಿತರೆ, ಕೆಲಸ ಮುಗಿಯುತ್ತದೆ ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ