ಕಲ್ಲಿದ್ದಲು ಗಣಿ ನಿಕ್ಷೇಪಗಳ
ಹಂಚಿಕೆಯಲ್ಲಿ ನಡೆದಿರುವ ಮೋಸ, ವಂಚನೆ ಕುರಿತು ಕಳೇದ ಒಂದು ವರ್ಷದಿಂದ ಸುಪ್ರೀಂ ಕೋರ್ಟ್ನ ಕಣ್ಗಾವಲಿನಲ್ಲಿ ಸಿ.ಬಿ.ಐ. ತನಿಖೆ ನಡೆಸುತ್ತಿದೆ. ವರದಿ
ಬಹಿರಂಗವಾಗುತ್ತಿದ್ದಂತೆ ದೇಶದ ಪ್ರಮುಖ ರಾಜಕಾರಣಿಗಳ ಮುಖವಾಡ ಕಳಚಿ ಬೀಳಲಿದೆ. ಕಲ್ಲಿದ್ದಲು
ಗಣಿಯ ಸಂಪತ್ತು ದೋಚುವ ವಿಚಾರದಲ್ಲಿ ಅಧಿಕಾರಸ್ತ ರಾಜಕಾರಣಿಗಳು ಮತ್ತು ಉದ್ಯಮಿಗಳ ಅಪವಿತ್ರ ಮೈತ್ರಿ ಭಾರತದ ರಾಜಕೀಯ ಮತ್ತು ಸಾಮಾಜಿಕ
ಬದುಕಿನಲ್ಲಿ ಹೊಸ ಸಂಗತಿಯೇನಲ್ಲ. ಆದರೇ, ಈ ನೆಲದ ನಿಜವಾರಸುದಾರರಾದ ಆದಿವಾಸಿಗಳನ್ನು ನಮ್ಮ
ಸರ್ಕಾರಗಳು ಹೇಗೆ ವಂಚಿಸಬಲ್ಲವು ಎಂಬುದಕ್ಕೆ ಒಂದು ಸತ್ಯ ಘಟನೆಯನ್ನು ನಿಮ್ಮದೆರು
ಅನಾವರಣಗೊಳಿಸುತ್ತಿದ್ದೇನೆ.
ಕಳೆದ ಎರಡು ವರ್ಷಗಳಿಂದ
ಮಧ್ಯಪ್ರದೇಶ ಮತ್ತು ಛತ್ತೀಸ್ಗಡ ರಾಜ್ಯಗಳ ಅರಣ್ಯ ಪ್ರದೇಶ ನನಗೀಗ ಅಪರಿಚಿತವಾಗಿ ಉಳಿದಿಲ್ಲ.
ನಕ್ಷಲ್ ಕಥನದ ಮಾಹಿತಿಗಾಗಿ ಎರಡು ಬಾರಿ ಅಲ್ಲಿಗೆ ಬೇಟಿ ನೀಡಿದ್ದೆ. ಅನಂತರ ಕಳೆದ ಒಂದು
ವರ್ಷದಿಂದ ನನ್ನ ಮಗ ಅನನ್ಯ ಇದೇ ಅರಣ್ಯಪ್ರದೇಶದ ಅಭಯಾರಣ್ಯದಲ್ಲಿರುವ ಕೇಂದ್ರ ಸರ್ಕಾರದ
ಅರಣ್ಯಾಧಿಕಾರಿಗಳ ತರಬೇತಿ ಕೇಂದ್ರದಲ್ಲಿ ವಲಯ
ಅರಣ್ಯಾಧಿಕಾರಿಯಾಗಿ ತರಬೇತಿ ಪಡೆಯುತ್ತಿದ್ದಾನೆ. ಅವನ ಬೇಟಿಯ ನೆಪದಲ್ಲಿ ಕಳೆದ ಒಂಬತ್ತು ತಿಂಗಳಲ್ಲಿ
ಮತ್ತೆ ಎರಡು ಬಾರಿ ಬೇಟಿ ನೀಡಿದ್ದೀನಿ. ಪ್ರತಿ ಬೇಟಿಯಲ್ಲಿ ಅಲ್ಲಿನ ಆದಿವಾಸಿಗಳ ಅಬಿವೃದ್ಧಿಗಾಗಿ
ಶ್ರಮಿಸುತ್ತಿರುವ ಅನೇಕ ಸ್ವಯಂ ಸೇವಾ ಸಂಘಟನೆಗಳು, ಆ ಪ್ರದೇಶದಲ್ಲಿ ನಡೆಯುತ್ತಿರುವ ಅನೇಕ ವಂಚನೆಗಳನ್ನು ದಾಖಲೆಗಳ ಮೂಲಕ
ನನ್ನೆದೆರು ಅನಾವರಣಗೊಳಿಸುತ್ತಾ ಬಂದಿವೆ. ಅನಕ್ಷರಸ್ತರನ್ನು, ಮುಗ್ಧರನ್ನು ನಮ್ಮನ್ನಾಳುವ
ಸರ್ಕಾರಗಳು ಹೀಗೂ ವಂಚಿಸಬಲ್ಲವೆ?, ವಂಚನೆಗಳಿಗೆ ಇಷ್ಟೊಂದು ಮುಖಗಳಿವೆಯಾ? ಎಂದು ನನಗೆ ಆಶ್ಚರ್ಯವಾಗುತ್ತದೆ.
ಈ ದೇಶದ ಶೇಕಡ 90 ರಷ್ಟು
ಕಲ್ಲಿದ್ದಲು ಮತ್ತು ಶೇಕಡ 55 ರಷ್ಟು ಇತರೆ
ಲೋಹಗಳ ನಿಕ್ಷೇಪ ಭಾರತದ ಆದಿವಾಸಿಗಳು ನೆಲೆಗೊಂಡಿರುವ ಅರಣ್ಯಗಳಲ್ಲಿ ಶೇಖರಗೊಂಡಿವೆ. ಈ ವಾಸ್ತವ
ಸಂಗತಿ ಆದಿವಾಸಿಗಳ ಪಾಲಿಗೆ ಕಂಟಕವಾಗಿದೆ. ದೇಶದ ಶೇಕಡ 60ರಷ್ಟು ಕಲ್ಲಿದ್ದಲು ನಿಕ್ಷೇಪ,
ಛತ್ತೀಸ್ಗಡ ರಾಜ್ಯದ ಅರಣ್ಯದಲ್ಲಿದ್ದು ಅನೇಕ ಕಂಪನಿಗಳು ಇಲ್ಲಿಗೆ ಲಗ್ಗೆ ಇಟ್ಟಿವೆ, ಅನೇಕ ಉದ್ದಿಮೆಗಳು
ರಾಜಕಾರಣಿಗಳೊಂದಿಗೆ ಶಾಮೀಲಾಗಿದ್ದು, ಯಾವ ಅಳುಕಿಲ್ಲದೆ ಅರಣ್ಯ ಭೂಮಿಯನ್ನು ಕಬಳಿಸುತ್ತಿವೆ.
ಈಗಾಗಲೇ 70 ಖಾಸಾಗಿ
ಕಂಪನಿಗಳು, ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆಗೆ ಛತ್ತೀಸ್ ಗಡ ರಾಜ್ಯಕ್ಕೆ
ಕಾಲಿಟ್ಟಿವೆ. ಅನಂತ್ ಗ್ರೂಪ್ ಆಫ್ ಕಂಪನೀಸ್ ಎಂಬ ಸಂಸ್ಥೆಗೆ ರಾಜ್ಯ ಸರ್ಕಾರ 358 ಹೆಕ್ಟೇರ್
ಪ್ರದೇಶವನ್ನು ಮಂಜೂರು ಮಾಡಿದೆ. ಇದರಲ್ಲಿ ಆದಿವಾಸಿಗಳಿಗೆ ಸೇರಿದ 58 ಹೆಕ್ಟೇರ್ ಅರಣ್ಯಪ್ರದೇಶವೂ
ಸೇರಿದೆ, ಶಾರದಾ ಎನರ್ಜಿ ಲಿಮಿಟೆಡ್ ಎಂಬ ಸಂಸ್ಥೆ ಅಕ್ರಮವಾಗಿ ಆದಿವಾಸಿಗಳ ಹೆಸರಿನಲ್ಲಿ 24
ಹೆಕ್ಟೇರ್ ಪ್ರದೇಶವನ್ನು ಖರೀದಿಸಿದೆ, (ಆದಿವಾಸಿಗಳ ಭೂಮಿಯನ್ನು ಇತರೆ ಯಾರೂ ಖರೀದಿಸದಂತೆ
ಕೇಂದ್ರ ಸರ್ಕಾರದ ಕಾನೂನು ಜಾರಿಯಲ್ಲಿದೆ) ಮಹಾರಾಷ್ಟ್ರದ ಔರಂಗಾಬಾದ್ ಮೂಲದ ವಿಡಿಯೋಕಾನ್
ಕಂಪನಿಗೆ ಆದಿವಾಸಿ ಮುಖಂಡನೊಬ್ಬ ಕಮಿಷನ್ ಹಣದ ಆಸೆಗಾಗಿ ಹನ್ನೆರೆಡು ಆದಿವಾಸಿ ಕುಟುಂಬಗಳ 160
ಹೆಕ್ಟೇರ್ ಅರಣ್ಯ ಪ್ರದೇಶವನ್ನು ಖರೀದಿಸಿದ್ದಾನೆ. ಇವೆಲ್ಲವೂ ಕಲ್ಲಿದ್ದಲು ನಿಕ್ಷೇಪ ಇರುವ
ಪ್ರದೇಶಗಳು.
ಇದು ಖಾಸಾಗಿ ಕಂಪನಿಗಳು
ವಂಚಿಸುವ ಬಗೆಯಾದರೆ, ಸ್ವತಃ ಛತ್ತೀಸ್ ಗಡ ಸರ್ಕಾರವೇ ಆದಿವಾಸಿಗಳನ್ನು ವಂಚಿಸಲು ಇದೀಗ
ಮುಂದಾಗಿದೆ. ಸರ್ಗುಜ ಜಿಲ್ಲೆಯ ಪ್ರೇಮ್ ನಗರ ಬ್ಲಾಕ್ (ತಾಲ್ಲೂಕು) ನಲ್ಲಿ ಶೆಕಡ 61 ರಷ್ಟು
ಬುಡಕಟ್ಟು ಜನಾಂಗಗಳು ವಾಸಿಸುವ 15 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ಅರಣ್ಯ
ಪ್ರದೇಶದಲ್ಲಿ, ಛತ್ತೀಸಗಡ ಸರ್ಕಾರ ಮತ್ತು ಜಗತ್ತಿನ ಅತಿದೊಡ್ಡ ರೈತರ ಸಹಕಾರಿ ಸಂಸ್ಥೆಯಾದ ಇಪ್ಕೊ
ಸಂಸ್ಥೆಗಳು ಜಂಟಿಯಾಗಿ 4.500 ಕೋಟಿ ಬಂಡವಾಳದಲ್ಲಿ 1320 ಮೆಗಾವ್ಯಾಟ್ ಉತ್ಪಾದನೆಗೆ ಮುಂದಾಗಿವೆ.
ತಮ್ಮ ಭೂಮಿಯಲ್ಲಿ ಕಲ್ಲಿದ್ದಲು ನಿಕ್ಷೇಪ ತೆಗೆಯಲು ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರ ಜೊತೆ
ಮಾತುಕತೆ ನಡೆಸಿದ ಮುಖ್ಯಮಂತ್ರಿ ಡಾ.ರಮಣಸಿಂಗ್ ಈ ಪ್ರದೇಶವನ್ನು ನೆರೆಯ ಬಿಲಾಯ್ ಕೈಗಾರಿಕಾ
ನಗರದಂತೆ ಪರಿವರ್ತಿಸುತ್ತೇನೆ, ಶಾಲಾ, ಕಾಲೇಜುಗಳು, ಅತ್ತ್ಯುತ್ತಮ ದರ್ಜೆಯ ಆಸ್ಪತ್ರೆಗಳು ತಲೆ
ಎತ್ತುತ್ತವೆ, ಎಕರೆಗೆ ಕೇವಲ ಐವತ್ತು ಸಾವಿರ ಬೆಲೆ ಬಾಳುವ ಭೂಮಿ ನಂತರ 10 ಲಕ್ಷ ಬೆಲೆ ಬಾಳಲಿದೆ
ಎಂದು ಆಮೀಷ ತೋರಿದರು. ಅಲ್ಲಿನ ಆದಿವಾಸಿ ರೈತರು ಯಾವುದೇ ಆಮೀಷಕ್ಕೆ ಬಲಿ ಬೀಳಲಿಲ್ಲ. ಭೂಮಿ
ನೀಡಲು ನಿರಾಕರಿಸಿದರು, ಜೊತೆಗೆ ಸಂವಿಧಾನದ 73 ಮತ್ತು 74ನೇ ತಿದ್ದುಪಡಿ ಸ್ಥಳೀಯ ಗ್ರಾಮ
ಪಂಚಾಯಿತಿಗಳಿಗೆ ನೀಡಿರುವ ಸಾರ್ವಭೌಮ ಹಕ್ಕುಗಳನ್ನು ಬಳಸಿ, ನಮ್ಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ
ನಮ್ಮ ಅನುಮತಿ ಇಲ್ಲದೆ ಯಾವುದೇ ಗಣಿಗಾರಿಕೆ ನಡೆಯಬಾರದು ಎಂಬ ನಿರ್ಣಯ ತೆಗೆದುಕೊಂಡರು.
ಗ್ರಾಮಪಂಚಾಯಿತಿಗಳ
ನಿರ್ಣಯವನ್ನು ಮಣಿಸಲು ಛತ್ತೀಸ್ ಗಡದ ಬಿ.ಜೆ.ಪಿ. ಸರ್ಕಾರದ ಮುಖ್ಯಮಂತ್ರಿ ರಮಣಸಿಂಗ್ ಬಳಸಿದ ವಾಮಮಾರ್ಗ ಮಾತ್ರ
ಪ್ರಜಾಪ್ರಭುತ್ವದ ಮಾಲ್ಯಗಳಿಗೆ ಧಕ್ಕೆ ತರುವಂತಹದ್ದು. ತನ್ನ ಸಚಿವ ಸಂಪುಟದಲ್ಲಿ 15 ಗ್ರಾಮ
ಪಂಚಾತಿಗಳನ್ನು ನಗರ ಸಭಾ ಪಂಚಾಯಿತಿಗಳಾಗಿ ಪರಿವರ್ತಿಸಿ, ಅವುಗಳ ಹಕ್ಕನ್ನು ಮೊಟಕುಗೊಳಿಸಲಾಯಿತು.
ಕೇವಲ ಐದು ಸಾವಿರ ಜನಸಂಖ್ಯೆ ಇರುವ ಗ್ರಾಮಪಂಚಾಯಿತಿಗಳು ಛತ್ತೀಸ್ ಗಡದ ಸರ್ಕಾರದಲ್ಲಿ ನಗರ ಸಬೆ
ಪಂಚಾಯಿತಿಗಳಾಗಿವೆ. ಇದಕ್ಕೆ ಮುಖ್ಯಮಂತ್ರಿ ರಮಣ್ ಸಿಂಗ್ ನೀಡಿದ ಉತ್ತರ ಹೀಗಿದೆ “ ಗ್ರಾಮ ಪಂಚಾಯಿತಿಗಳಿಗೆ
ಕುಡಿಯುವ ನೀರು, ರಸ್ತೆ, ಆರೋಗ್ಯ, ಶಿಕ್ಷಣ ಮುಂತಾದ ಸೌಲಭ್ಯ ಒದಗಿಸಲು ನಗರ ಸಭೆಗಳನ್ನಾಗಿ ಪರಿವರ್ತಿಸಲಾಗಿದೆ, ಇದು
ಆದಿವಾಸಿಗಳಿಗೆ ಸರ್ಕಾರ ನಿಡಿದ ಉಡೂಗರೆ” ಇದು ದೇಶಭಕ್ತರ ಪಕ್ಷದಿಂದ ಬಂದ ಮುಖ್ಯಮಂತ್ರಿಯೊಬ್ಬನ
ಮಾತು.
ಸರ್ಕಾರದ ನಿರ್ಣಯವನ್ನು
ಪ್ರತಿಭಟಿಸಿದ ಸಾವಿರಾರು ಆದಿವಾಸಿ ರೈತರು, ತಮ್ಮ ತಲೆಗೂದಲು, ಮೀಸೆಗಳನ್ನು ಬೋಳಿಸಿಕೊಂಡು ,
ರಾಜ್ಯಪಾಲ ಎಂ.ಎಲ್ ನರಸಿಂಹನ್ ಅವರಿಗೆ 2008 ರಲ್ಲಿ ಮನವಿ ಸಲ್ಲಿಸಿದರು.
ಕುತೂಹಲದ ಸಂಗತಿಯೆಂದರೇ, ಈ ಪ್ರದೇಶದ
450 ಚದುರ ಕಿಲೋಮೀಟರ್ ಅರಣ್ಯವನ್ನು ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಆನೆಗಳ ಕಾರಿಡಾರ್
ಎಂದು ಘೋಷಿಸಿತ್ತು. ಹುಲಿ, ಚಿರತೆ, ಐದು ಬಗೆಯ ವಿಶಿಷ್ಟ ಪತಂಗಗಳು, 15 ಬಗೆಯ ಸಸ್ತನಿ
ಪ್ರಾಣಿಗಳು ಈ ಪ್ರದೇಶದಲ್ಲಿವೆ.ಸರ್ಗುಜ ಜಿಲ್ಲೆಯ ಪೂರ್ವ ಕರ್ಯ, ಹಾಗೂ ಕಂಟೆಬಸೇನ್, ಹಸ್ ಡೆಯಾ
ನದಿತೀರದ ಪ್ರಾಂತ್ಯದಲ್ಲಿ ಶೇಕಡ 80 ರಷ್ಟು ಅರಣ್ಯವಿರುವುದನ್ನು ಈ ಪ್ರದೇಶದಲ್ಲಿ ಸಮೀಕ್ಷೆ
ನಡೆಸಿದ ಹೈದರಾಬಾದಿನ ತಾರಾ ವಿಜ್ಞಾನ ಸಂಸ್ಥೆ ದೃಢಪಡಿಸಿದೆ. 70 ಸಾವಿರ ಗಿಡಗಳನ್ನು
ವಿರಳವಾಗಿರುವ ಅರಣ್ಯ ಪ್ರದೇಶದಲ್ಲಿ ನೆಡುವಂತೆ
ಕೇಂದ್ರ ಸರ್ಕಾರಕ್ಕೆ ಈ ಸಂಸ್ಥೆ ಶಿಫಾರಸ್ಸು
ಮಾಡಿತ್ತು.
ಇದೀಗ ರಾಜಸ್ಥಾನದ ಕಾಂಗ್ರೆಸ್
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಇಲ್ಲಿ ತಯಾರಾಗುವ ವಿದ್ಯುತ್ ಅನ್ನು ಖರೀದಿಸಲು ಛತ್ತೀಸ್ ಗಡ
ಮತ್ತು ಇಪ್ಕೊ ಸಂಸ್ಥೆ ಜೊತೆ ಒಪ್ಪಂಧ ಮಾಡಿಕೊಂಡಿದ್ದಾರೆ, ಹಾಗಾಗಿ ಅವರು ಕೇಂದ್ರದ ಮೇಲೆ ಒತ್ತಡ
ಹೇರಿ ಮೀಸಲು ಅರಣ್ಯ ಪ್ರದೇಶದ 450 ಚದುರ ಕಿ.ಮಿ.ವ್ಯಾಪ್ತಿಯನ್ನು ಕುಗ್ಗಿಸಲು ಪ್ರಯತ್ನ
ನಡೆಸಿದ್ದಾರೆ. ಆದರೆ, ಛತ್ತೀಸ್ಗಡದ ಆದಿವಾಸಿ ರೈತರು ಮಾತ್ರ ಕಳೆದ ಐದು ವರ್ಷಗಳಿಂದ ನಿರಂತರವಾಗಿ
ಕಲ್ಲಿದ್ದಲು ಗಣಿಗಾರಿಕೆ ವಿರುದ್ದ ಹೋರಾಟ ಮುಂದುವರಿಸಿದ್ದಾರೆ. ಅವರ ಶ್ರಮ, ಪ್ರತಿಭಟನೆ, ಹೋರಾಟ
ಎಲ್ಲವೂ ಇಲ್ಲಿ ಅರಣ್ಯ ರೋಧನ ದಂತೆ ಕಂಡುಬರುತ್ತಿದೆ. ಪ್ರತಿದಿನ ಛತ್ತೀಸ್ ಗಡ ಅರಣ್ಯದ ಒಡಲು
ಬಗೆದು ತೆಗೆದ ಕಲ್ಲಿದ್ದಲು ದೇಶಾದ್ಯಂತ ರವಾನೆಯಾಗುತ್ತಿದೆ. ಭಾರತೀಯ ಮಧ್ಯ ರೈಲ್ವೆ ಕಲ್ಲಿದ್ದಲು
ಸಾಗಾಣಿಕೆಗಾಗಿ, ಮಧ್ಯಭಾರತದಲ್ಲಿ ಪ್ರಯಾಣಿಕರ ರೈಲ್ವೆ ಮಾರ್ಗದ ಪಕ್ಕದಲ್ಲಿ ಸರಕು ಸಾಗಾಣಿಕೆ
ರೈಲುಗಳಿಗಾಗಿ ಪ್ರತ್ಯೇಕ ಎರಡು ಮಾರ್ಗಗಳನ್ನು ಸೃಷ್ಟಿಸಿದೆ. ಛತ್ತೀಸ್ ಗಡದಲ್ಲಿ ನಡೆಯುವ
ಕಲ್ಲಿದ್ದಲ ಗಣಿಗಾರಿಗಳು, ಮಹಾರಾಷ್ಟ್ರದ ಗಡಿ ಜಿಲ್ಲೆ ಚಂದ್ರಾಪುರ್ ಜಿಲ್ಲೆಯಲ್ಲಿ ಇರುವ 24
ಕಲ್ಲಿದ್ದಲು ಸಂಸ್ಕರಣ ಘಟಕಗಳು ಎಲ್ಲವೂ ಭಾರತದ ಪ್ರಮುಖ ರಾಜಕಾರಣಿಗಳ ಒಡೆತನದಲ್ಲಿವೆ.
ಅಭಿವೃದ್ದಿಯೆಂಬ ವಿಕೃತಿಯ ನೆಪದಲ್ಲಿ ಪರಿಸರವನ್ನು, ಆದಿವಾಸಿ ರೈತರನ್ನು ಸದ್ದಿಲ್ಲದೆ
ಶೋಷಿಸುತ್ತಿರುವ ಈಗಿನ ಭಾರತದ ವ್ಯವಸ್ಥೆಯಲ್ಲಿ,
ಅರ್ಥಶಾಸ್ತ್ರದ ವಿದ್ಯಾರ್ಥಿಯಾಗಿ, ಸಂಶೋಧಕನಾಗಿ ತೊಡಗಿಸಿಕೊಂಡಿರುವ ನನಗೆ ಅಭಿವೃದ್ಧಿಯ ಶಬ್ಧ
ಕೇಳಿದರೆ, ಆತಂಕ ಶುರುವಾಗುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ