ಸೋಮವಾರ, ಮೇ 20, 2013

ಮಲೀನ ಗಂಗೆಯ ಗಾಥೆ-1





1990 ರಿಂದ 2000 ದ ಇಸವಿಯವರೆಗೆ ಪತ್ರಿಕೋದ್ಯಮ ಬಿಟ್ಟು ಊರಿನಲ್ಲಿ ವಾಸವಾಗಿದ್ದೆ. 2005ರಲ್ಲಿ ನರ್ಮದಾ ನದಿಗೆ ನಿರ್ಮಿಸಲಾದ  ಅಣೆಕಟ್ಟು ಮತ್ತು ಮುಳುಗಡೆಯಿಂದ ಸಂತ್ರಸ್ತರಾದ ರೈತರ ಬವಣೆ ಕುರಿತು ಲೇಖಕಿ ಅರುಂಧತಿ ರಾಯ್ ಬರೆದ “The greter common Good”  ಎಂಬ ಕೃತಿಯನ್ನು ಓದುತ್ತಿದ್ದೆ. ಲೇಖಕಿ ತನ್ನ ಕೃತಿಗೆ ಬರೆದ ಪ್ರಸ್ತಾವನೆಯಲ್ಲಿ  “ ಈ ಕ್ಷಣಕ್ಕೆ ನನ್ನ ಕೃತಿಯನ್ನು ನೀವು ಕೆಳಗಿಟ್ಟರೂ ಚಿಂತೆಯಿಲ್ಲ ಆದರೆ, ಪೆಟ್ರಿಕ್ ಮ್ಯಾಕುಲೆಯವರ “ Silenced Rivers” ಕೃತಿಯನ್ನು ಓದಲು ಮರೆಯಬೇಡಿ” ಎಂದು ಬರೆದಿದ್ದ  ಮಾತು ನನ್ನನ್ನು ಆ ಕ್ಷಣಕ್ಕೆ ಹಿಡಿದು ನಿಲ್ಲಿಸಿಬಿಟ್ಟಿತು. ಆ ಕೃತಿಗಾಗಿ ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿರುವ ಓರಿಯಂಟ್  ಲಾಂಗ್ ಮನ್ ಪ್ರಕಾಶನ ಸಂಸ್ಥೆಗೆ ಐದು ಬಾರಿ ಬೇಟಿನೀಡಿದ್ದೆ. ನನ್ನ ಕುತೂಹಲ, ನಿರಾಶೆ ನೋಡಲಾರದೆ. ಪ್ರಕಾಶನ ಸಂಸ್ಥೆ ಒಂದು ಪುಸ್ತಕವನ್ನು ಹೈದರಾಬಾದಿನಿಂದ ತರಿಸಿಕೊಟ್ಟಿತು. ಆ ವೇಳೆಗೆ ಕೃತಿಗಳು ಮುಗಿದುಹೋಗಿದ್ದವು. ಮರು ಮುದ್ರಣಗೊಂಡಿರಲಿಲ್ಲ. ಆ ಕೃತಿಯನ್ನು ಓದಿದ ನಂತರ ನದಿಗಳ ಕುರಿತು ನನ್ನ ಮನೋಭಾವ ಬದಲಾಯಿತು. ಅಣೆಕಟ್ಟುಗಳ ನೆಪದಲ್ಲಿ ಜಗತ್ತಿನ ಜೀವನದಿಗಳನ್ನು ಕೊಲ್ಲುವ ಬಗೆ, ಆಳುವ ಸರ್ಕಾರಗಳ ಬ್ರಹ್ಮಾಂಡ ಭ್ರಷ್ಟಾಚಾರ, ಮುಗ್ಧಜನರಿಗೆ ಆದ ವಂಚನೆಗಳು, ಅತಂತ್ರರಾದ ಆದಿವಾಸಿಗಳು, ಮುಳುಗಡೆಯಾದ ಅರಣ್ಯಪ್ರದೇಶ ಹೀಗೆ ಸತತ ಇಪ್ಪತ್ತು ವರ್ಷ ಜಗತ್ತನ್ನು ಸುತ್ತಿ ನದಿಗಳ ನೋವಿನ ಕಥನವನ್ನು ದಾಖಲಿಸಿದ್ದಾನೆ. ಈ ಕೃತಿಯಿಂದ ಪ್ರೇರಣೆಗೊಂಡು ನಾನು ಇತ್ತೀಚೆಗೆ “ ಜೀವನದಿಗಳ ಸಾವಿನ ಕಥನ” ಎಂಬ ಕೃತಿಯನ್ನು ಬರೆದೆ.

ನನ್ನ ಪಾಲಿಗೆ ನದಿಗಳೆಂದರೆ, ಒಂದು ರೀತಿ ವ್ಯಸನದಂತಾಗಿದೆ. ದೇಶದ ಅನೇಕ ನದಿಗಳನ್ನು ಹಿಂಬಾಲಿಸಿಕೊಂಡು ಹುಚ್ಚನಂತೆ ಅಲೆದಾಡಿದ್ದುಂಟು. ಕಾಶ್ಮೀರದ ಜೀಲಂ, ಪಂಜಾಬಿನ ಸೆಟ್ಲೇಜ್, ಅಸ್ಸಾಮಿನ ಬ್ರಹ್ಮಪುತ್ರ, ಮಧ್ಯಭಾರತದ ನರ್ಮದಾ ಇವುಗಳನ್ನು ಹೊರತುಪಡಿಸಿ ಉಳಿದ ಯಾವ ನದಿಗಳು ನನ್ನ ಪಾಲಿಗೆ ಅಪರಿಚಿತವಾಗಿ ಉಳಿದಿಲ್ಲ. ಭಾರತದ ನದಿಗಳಲ್ಲಿ ಕಾವೇರಿ, ಗೋದಾವರಿ, ಗಂಗಾ ನದಿಗಳ ಮೇಲೆ ನನಗೆ ಇನ್ನಿಲ್ಲದ ಮೋಹ. ಕಾವೇರಿಯನ್ನು ಭಾಗಮಂಡಲದ ತಲಕಾವೇರಿಯಿಂದ ತಮಿಳುನಾಡಿನ ಕಾವೇರಿಪಟ್ಟಣದ ಪೂಂಪುಹಾರ್ ಬಳಿ ಸಮುದ್ರ ಸೇರುವವರೆಗೆ ಹಿಂಬಾಲಿಸಿದ್ದೇನೆ. ಗೋದಾವರಿಯನ್ನು ಮಹಾರಾಷ್ಟ್ರದ ನಾಸಿಕ್ ಬಳಿಯ ತ್ರಯಂಭಕೇಶ್ವರದಿಂದ ಹಿಡಿದು ಆಂಧ್ರದ ರಾಜಮಂಡ್ರಿಯವರೆಗೆ ಬೆಂಬತ್ತಿದ್ದೇನೆ. ಅದೇ ರೀತಿ  ಉತ್ತರಾಂಚಲದ ರುದ್ರಪ್ರಯಾಗದದಿಂದ ಹಿಡಿದು ಪಶ್ಚಿಮ ಬಂಗಾಳದ ಕೊಲ್ಕತ್ತ ನಗರದವರೆಗೆ ಸುಧೀರ್ಘ 2.500 ಕಿಲೋಮೀಟರ್ ವರೆಗೆ, ಮೋಹಿಸಿದ ಹುಡುಗಿಯನ್ನು ಬೆನ್ನು ಹತ್ತುವ ಹುಚ್ಚು ಪ್ರೇಮಿಯ ಹಾಗೆ ಸತತ ನಾಲ್ಕು ವರ್ಷಗಳ ಕಾಲ ಗಂಗಾ ನದಿಯ ತಟದ ಉದ್ದಕ್ಕೂ ತಿರುಗಾಡಿ ಎದೆಭಾರವಾಗುವಷ್ಟು ನೋವನ್ನು ತುಂಬಿಕೊಂಡು ಬಂದಿದ್ದೇನೆ.

ಇಂದು ದೇಶದ ಮಹಾನಗರಗಳ ನಡುವೆ ಹರಿದು ಅವಶೇಷಗಳಂತೆ ಕಾಣುವ ಹಾಗೂ   ಕಾಣೆಯಾದ ನದಿಗಳ ಇತಿಹಾಸವ ಒಂದು ಸಂಪುಟವಾಗಬಲ್ಲದು. ಬೆಂಗಳೂರಿನ ವೃಷಭಾವತಿ, ಚೆನ್ನೈ ನಗರದ ಕೂವಂ ಮತ್ತು ಅಡ್ಯಾರ್ ನದಿಗಳು, ಮಧುರೈ ನಗರದ ವೈಗೈ ನದಿ, ಅಹಮದಾಬಾದ್ ನಡುವೆ ಇರುವ ಸಬರಮತಿ, ಗೋವಾದ ಪಣಜಿ ಸಮೀಪ ಹರಿಯುವ ಮಾಂಡೊವಿ, ದೆಹಲಿ ಮತ್ತು ಆಗ್ರಾ ನಗರಗಳ ತಟದಲ್ಲಿ ಹರಿಯುವ ಯುಮುನಾ. ಹೈದರಾಬಾದಿನ ಮೂಸಾ ನದಿ ಇವುಗಳನ್ನು ಗಮನಿಸಿದರೆ, ಇವುಗಳು ನದಿಗಳಾ?  ಅಥವಾ ಮಹಾನ್ ಗಟಾರಗಳೊ? ಎಂಬ ಸಂಶಯ ಉಂಟಾಗುತ್ತದೆ.
ಇವೊತ್ತಿನ ದಿನಗಳಲ್ಲಿ ಪರಿಸರ ಕುರಿತು ಮಾತನಾಡುವುದು ಅಥವಾ ಬರೆಯುವುದು ಸಿನಿಕತನವೆಂಬಂತೆ ತೋರುತ್ತದೆ. ಆಧುನಿಕ ಬದುಕಿನ ಉಪಭೋಗದಲ್ಲಿ ಮುಳುಗಿ ಏಳುವವರ ದೃಷ್ಟಿಯಲ್ಲಿ ಪಕೃತಿ ಇರುವುದೆ; ನಮ್ಮ ವೈಯಕ್ತಿಕ ಭೋಗಕ್ಕೆ ಎಂಬಂತಾಗಿದೆ. ಈ ದಿನಗಳಲ್ಲಿ  ನಾವು ಜಗತ್ತನ್ನು ನೋಡಲು ದೇಹಕ್ಕೆ  ಇರುವ ಎರಡು ಕಣ್ಣುಗಳಷ್ಟೇ ಸಾಲದು, ಹೃದಯದ ಒಳಗಣ್ಣನ್ನು ತೆರೆದು ನೋಡಬೇಕಾಗಿದೆ. ಈ ನದಿಗಳಿಗೆ ಮಾತು ಅಥವಾ ಅಕ್ಷರ ಬಂದಿದ್ದರೆ, ಲಿಖಿತ ಇಲ್ಲವೆ ಮೌಖಿಕ ಪಠ್ಯದ ರೂಪದಲ್ಲಿ ಮನುಕುಲದ ಬೃಹತ್ ಹೀನ ಚರಿತ್ರೆಯೊಂದು ಈ ಜಗತ್ತಿನಲ್ಲಿ ಸೃಷ್ಟಿಯಾಗುತ್ತಿತ್ತು.

ಮನುಷ್ಯನ ಏಳುಬೀಳುಗಳಿಗೆ, ಸಾಮ್ರಾಜ್ಯದ ಉದಯ ಮತ್ತು ಪತನಗಳಿಗೆ, ಅರಮನೆ ಮತ್ತು ಗುಡಿಸಲುಗಳ ದುಃಖ ದುಮ್ಮಾನಗಳಿಗೆ, ಜನಸಾಮಾನ್ಯರ ನಿಟ್ಟುಸಿರುಗಳಿಗೆ ಮೌನ ಸಾಕ್ಷಿಯಾಗಿ, ಶತಮಾನಗಳುದ್ದಕ್ಕೂ   ತಣ್ಣಗೆ ಹರಿದ ನದಿಗಳ ಒಡಲೊಳಗೆ ಎಂತಹ ಚರಿತ್ರೆಗಳಿರಬಹುದು? ಒಮ್ಮೆ ಯೋಚಿಸಿನೋಡಿ. ಇಂತಹ ಬೃಹತ್ ಚರಿತ್ರೆಯನ್ನು ತನ್ನೊಡಲೊಳಗೆ ಪೋಷಿಸಿಕೊಂಡು ಬಂದಿರುವ  ನಮ್ಮ ಗಂಗಾ ನದಿಯ ದುರಂತ ಕಥನ ಅಕ್ಷರ ಮತ್ತು ಮಾತಿಗೆ ಮೀರುವಂತಹದ್ದು. ಜಗತ್ತಿನ ಮಹಾ ನದಿಗಳಾದ ನೈಲ್ ಮತ್ತು ಅಮೆಜಾನ್ ನದಿಗಳ ಜೊತೆ ಪ್ರಖ್ಯಾತಿ ಹೊಂದಿರುವ ಗಂಗಾ ನದಿಗೆ ಅಂಟಿಕೊಂಡ ಪುರಾಣ ಕಥೆಗಳು, ಐತಿಹ್ಯಗಳು, ಧಾರ್ಮಿಕ ನಂಬಿಕೆಗಳು, ಅದರ ಆಳ, ಉದ್ದ, ವಿಸ್ತಾರ ಇವೆಲ್ಲವೂ ಶಾಪವಾಗಿ ಪರಿಣಮಿಸಿದವು

ಸಮುದ್ರ ಮಟ್ಟದಿಂದ 12 ಸಾವಿರ ಎತ್ತರದ ಹಿಮಾಲಯ ತಪ್ಪಲಲ್ಲಿ ಹುಟ್ಟಿ, 255 ಕಿಲೋಮೀಟರ್ ಉದ್ದ ಕೆಳ ಭಾಗಕ್ಕೆ ಭಾಗಿರಥಿ ನದಿಯಾಗಿ ಹರಿದು, ಉತ್ತರಕಾಂಡದ ರುದ್ರಪ್ರಯಾಗದ ಸಮೀಪ ಅಲಕನಂದಾ  ಮತ್ತು ಮಂದಾಕಿನಿ ನದಿಗಳನ್ನು ಕೂಡಿಕೊಂಡು ಗಂಗಾನದಿಯಾಗಿ ಹರಿಯುತ್ತದೆ. ನಂತರ ಅಲಹಾಬಾದ್ ನಗರದಲ್ಲಿ ಮತ್ತೊಂದು ಪ್ರಮುಖ ನದಿಯಾದ ಯಮುನೆಯನ್ನು ಸೇರಿಕೊಂಡು, 2500 ಕಿಲೋ ಮೀಟರ್ ಉದ್ದ ಹರಿಯುವ ಗಂಗಾ ನದಿ ಈ ದೇಶದ 42 ಕೋಟಿ ಜನರ ಜೀವನಾಡಿಯಾಗಿದೆ. ಪ್ರತಿ ದಿನ ಈ ನದಿಯಲ್ಲಿ ಒಂದುಕೋಟಿ ಹಿಂದೂ ಭಕ್ತರು ಪವಿತ್ರ ಸ್ನಾನದ ಹೆಸರಿನಲ್ಲಿ ಮುಳುಗಿ ಏಳುತ್ತಿದ್ದಾರೆ. ತಾನು ಹರಿಯುವ ನಾಲ್ಕು ರಾಜ್ಯಗಳಾದ ಉತ್ತರಕಾಂಡ, ಉತ್ತರಪ್ರದೇಶ, ಬಿಹಾರ, ಪಶ್ಚಿಮ ಬಂಗಾಳದ ಜನರ ನೀರಿನ ದಾಹ ತೀರಿಸಿ, ಅವರ ನೆಲಗಳಿಗೆ ನೀರುಣಿಸಿ, ಅವರು ವಿಸರ್ಜಿಸಿದ ಮಲ, ಮೂತ್ರ ಮತ್ತು ಅಪಾಯಕಾರಿ ವಿಷಯುಕ್ತ ತ್ಯಾಜ್ಯಗಳನ್ನು ಹೊತ್ತು ಕಡಲು ಸೇರುವ ಗಂಗಾ ನದಿ ಈಗ ಜೀವನದಿಯಾಗುವ ಬದಲು ವಿಷಕನ್ಯೆಯಂತಹ ನದಿಯಾಗಿದೆ.
ಕಳೆದ 25 ವರ್ಷಗಳಲ್ಲಿ ನದಿಗೆ ಸೇರುತ್ತಿರುವ ತ್ಯಾಜ್ಯ ಮೂರು ಸಾವಿರ ಪಟ್ಟು ಹೆಚ್ಚಾಗಿದೆ. ಈ ಕೆಳಗಿನ ಅಂಶಗಳು  ನಮ್ಮನ್ನು ಬೆಚ್ಚಿ ಬೀಳಿಸುತ್ತದೆ.
ಪ್ರತಿ ದಿನ ಉತ್ತರಕಾಂಡದ 14 ಮಹಾನ್ ಚರಂಡಿ ಅಥವಾ ಗಟಾರಗಳಿಂದ 440 ದಶಲಕ್ಷ ಲೀಟರ್ ಕೊಳಚೆ ನೀರು, 42 ಟನ್ ಕಸ ಹಾಗೂ ಉತ್ತರ ಪ್ರದೇಶದ 45 ಗಟಾರಗಳಿಂದ 3289 ದಶಲಕ್ಷ ಲೀಟರ್ ಕೊಳಚೆ ಮತ್ತು 761 ಟನ್ ಕಸ ಗಂಗೆಯ ಒಡಲು ಸೇರುತ್ತಿದೆ. ಅದೇ ರೀತಿ ಬಿಹಾರದಲ್ಲಿ 25 ಗಟಾರಗಳಿಂದ 579 ದಶಲಕ್ಷ ಲೀಟರ್ ಕೊಳಚೆ ಮತ್ತು 99 ಟನ್ ಕಸ, ಮತ್ತು ಪಶ್ಚಿಮ ಬಂಗಾಳ ರಾಜ್ಯದ 54 ಗಟಾರಗಳಿಂದ 1779 ದಶಲಕ್ಷ ಲೀಟರ್ ಕೊಳಚೆ, 97 ಟನ್ ಕಸ ನದಿಗೆ ಸೇರುತ್ತಿದೆ. ಇದರಿಂದಾಗಿ ನದಿಯ ನೀರಿನಲ್ಲಿ ಆಮ್ಲಜನಕದ ಬಿಡುಗಡೆಯ ಪ್ರಮಾಣ  ಮೈನಸ್ ಆರಕ್ಕೆ ಕುಸಿದಿದೆ.

ಗಂಗಾ ನದಿಯ ಒಡಲು ಸೇರುತ್ತಿರುವ  ಕೊಳಚೆ ನೀರು ಮತ್ತು ವಿಷಯುಕ್ತ ವಸ್ತುಗಳಲ್ಲಿ ಜವಳಿ ಉದ್ಯಮದಿಂದ ಶೇಕಡ 2, ಚರ್ಮ ಹದ ಮಾಡುವ ಕೈಗಾರಿಕೆಗಳಿಂದ ಶೇಕಡ 5, ಸಕ್ಕರೆ ಕಾರ್ಖಾನೆಗಳಿಂದ ಶೇಕಡ 19, ರಸಾಯನಿಕ ಕಾರ್ಖಾನೆಗಳಿಂದ ಶೇಕಡ 20 , ಮದ್ಯಸಾರ ತಯಾರಿಸುವ ಡಿಸ್ಟಲರಿಗಳಿಂದ ಶೇಕಡ 7 ರಷ್ಟು, ಕಾಗದ ಕಾರ್ಖಾನೆಗಳಿಂದ ಶೇಕಡ 40 ರಷ್ಟು, ಆಹಾರ ಮತ್ತು ತಂಪು ಪಾನಿಯ ಘಟಕಗಳಿಂದ ಶೇಕಡ 1 ರಷ್ಟು ಮತ್ತು ಇತರೆ ಘಟಕಗಳಿಂದ ಶೇಕಡ 6 ರಷ್ಟು ಪಾಲು ಇದೆ ಎಂದು ವಿಜ್ಙಾನಿಗಳು ಅಧ್ಯಯನದಿಂದ ದೃಢಪಡಿಸಿದ್ದಾರೆ. ಹೀಗಾಗಿ ದಿವೊಂದಕ್ಕೆ 138 ಮಹಾನ್ ಚರಂಡಿಯ ಕಾಲುವೆಗಳಿಂದ 6087 ದಶಲಕ್ಷ ಲೀಟರ್ ಕೊಳಚೆ ಮತ್ತು 999 ಟನ್ ಕಸ ಗಂಗಾ ನದಿಯ ಪಾಲಾಗುತ್ತಿದೆ ಎಂದು ಅಂದಾಜಿಸಲಾಗಿದೆ.


ನಮ್ಮನ್ನಾಳುವ ಸರ್ಕಾರಗಳಿಗೆ ಕೈಗಾರಿಕಾ ನೀತಿಯಲ್ಲಿ ಕಡಿವಾಣವಿಲ್ಲದ ಅವಿವೇಕತನ ಮತ್ತು ಸಾಮಾಜಿಕ ಹಾಗೂ ಧಾರ್ಮಿಕ ನಂಬಿಕೆಗಳು ಗಂಗಾನದಿಯ ಪಾಲಿಗೆ ಶತ್ರುಗಳಾಗಿವೆ. ಅಕ್ರಮ ಸಂತಾನದಿಂದ ಹುಟ್ಟಿದ ಹಸುಗೂಸುಗಳು, ಸತ್ತು ಹೋದ ದನಕರುಗಳ ಕಳೆಬರಗಳು ಹಾಗೂ ಗಂಗಾ ನದಿಗೆ ಎಸೆದರೆ, ಸತ್ತವರು ಸ್ವರ್ಗ ಸೇರುತ್ತಾರೆ ಎಂಬ ಮೂಡ ನಂಬಿಕೆಗಳಿಂದ ನದಿಗೆ ಬಿಸಾಡಿದ ಹೆಣಗಳು ಇವೆಲ್ಲವನ್ನೂ ನೋಡಿದರೆ, ಪುಣ್ಯ ನದಿ ಎನಿಸಿಕೊಳ್ಳುವ, ಪಾಪನಾಶಿನಿ ಎನ್ನುವ ಗಂಗೆಯ ನೀರನ್ನು ಕೊಲ್ಕತ್ತ ನಗರದ ಬಳಿ ಕೈಯಿಂದ ಮುಟ್ಟಲು ಅಸಹ್ಯವಾಗುತ್ತದೆ. ರುದ್ರಪ್ರಯಾಗದ ಬಳಿ ಸ್ಪಟಿಕದ ನೀರಿನಂತೆ ಹರಿಯುವ ಗಂಗಾನದಿ, ಕೊಲ್ಕತ್ತ ನಗರದ ತಟದಲ್ಲಿ ಹೂಗ್ಲಿ ನದಿ ಹೆಸರಿನಲ್ಲಿ ಕಪ್ಪಗೆ ಹರಿಯುತ್ತದೆ. ಕೊಲ್ಕತ್ತದ ಹೌರ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಅಥವಾ ಬೇಲೂರು ಮಠದ ರಾಮಕೃಷ್ಣ ಆಶ್ರಮದ ಹಿಂದೆ ಹರಿಯುವ ನದಿಯ ನೀರು ನೋಡಿದಾಗ ಕಣ್ಣಲ್ಲಿ ನೀರು ಬರುತ್ತದೆ.
       ( ಮುಂದುವರಿಯುವುದು)


2 ಕಾಮೆಂಟ್‌ಗಳು: