ಮಂಗಳವಾರ, ಅಕ್ಟೋಬರ್ 1, 2013

ಗಾಂಧಿ ಎಂಬ ಧ್ಯಾನ

ಗಾಂಧೀಜಿ ನಮ್ಮನ್ನಗಲಿ 65 ವರ್ಷ ಕಳೆದರೂ, ಭಾರತದಲ್ಲಿ ಮಾತ್ರವಲ್ಲ ವಿಶ್ವದೆಲ್ಲೆಡೆ ಅನೇಕ ಪ್ರಜ್ಞಾವಂತರಲ್ಲಿ ಇಂದಿಗೂ ಕಾಡುತ್ತಿರುವ ವಿಶಿಷ್ಟ ವ್ಯಕ್ತಿತ್ವ ಅವರದು.
                        ನಮ್ಮ ಬದುಕಿನಲ್ಲಾದ ಬದಲಾವಣೆ, ಆಲೋಚನಾ ಕ್ರಮ, ತಲೆಮಾರುಗಳ ದೃಷ್ಟಿಕೋನದಲ್ಲಿರುವ ಅಂತರ ಹಾಗು ಸ್ಮøತಿಗೆ ತಂದುಕೊಳ್ಳಲಾರದಷ್ಟು ಅಸಹಾಯಕತೆಗೆ ದೂಡಲ್ಪಟ್ಟಿರುವ ಸ್ವಾತಂತ್ರ್ಯ ಹೋರಾಟದ ನೆನಪುಗಳು ಇವೆಲ್ಲವುಗಳ ನಡುವೆಯೂ ಗಾಂಧೀಜಿ ಇನ್ನೂ ಎಲ್ಲರೆದೆಯಲ್ಲಿ ಹಸಿರಾಗಿದ್ದಾರೆ.
                        ಬೆಂಕಿಯಷ್ಟೇ ಮನುಷ್ಯನನ್ನು ಕೊಲ್ಲಬಲ್ಲದು ಎಂದುಕೊಂಡಿದ್ದ ಜಗತ್ತಿಗೆ, ತಣ್ಣಗಿನ ಮಂಜುಗೆಡ್ಡೆಯೂ ಮನುಷ್ಯನನ್ನು ಕೊಲ್ಲಬಲ್ಲದು ಎಂಬುದನ್ನು ತಮ್ಮ ಬದುಕಿನ ಮೂಲಕ ತೋರಿಸಿಕೊಟ್ಟವರು ಗಾಂಧೀಜಿ.
                        20 ನೇ ಶತಮಾನದ ಅದ್ವಿತೀಯ ವ್ಯಕ್ತಿಯಾಗಿ ಲಂಡನ್‍ನ ಟೈಮ್ಸ್ ಪತ್ರಿಕೆ ನಡೆಸಿದ ಸಮೀಕ್ಷೆಯಲ್ಲಿ ಗಾಂಧೀಜಿ ಆಯ್ಕೆಯಾದಾಗ ಯಾರಿಗೂ ಅಚ್ಚರಿಯಾಗಲಿಲ್ಲ. ಅಷ್ಟೇ ಏಕೆ? ಇಂಗ್ಲೀಷ್ ಪಾಕ್ಷಿಕ `ದಿ ವೀಕ್'’ ಪತ್ರಿಕೆಯ ಸಮೀಕ್ಷೆಯಲ್ಲಿ ಇಂದಿನ ಯುವ ಜನಾಂಗ ವಿಶೇಷವಾಗಿ ಉನ್ನತ ವ್ಯಾಸಂಗದಲ್ಲಿ ನಿರತರಾಗಿರುವ ವಿದ್ಯಾರ್ಥಿಗಳು ಗಾಂಧೀಜಿಯ ಬಗ್ಗೆ ಆಸಕ್ತಿ ತಳೆದಿರುವುದು ಕಂಡುಬಂದಿದೆ.
                        ಇಂದಿಗೂ ಅಂತರಾಷ್ಟ್ರೀಯ ಪ್ರಕಾಶನ ಸಂಸ್ಥೆಗಳಲ್ಲಿ ಪ್ರತಿ ವರ್ಷ ಗಾಂಧಿ ಬಗೆಗಿನ ಕೃತಿಗಳ ಲಕ್ಷಾಂತರ ಪ್ರತಿಗಳು ಮಾರಾಟವಾಗುತ್ತಿವೆ. ನಿಧಾನವಾಗಿಯಾದರೂ ಜಗತ್ತಿಗೆ ಗಾಂಧೀಜಿಯಂತಹ ವ್ಯಕ್ತಿತ್ವಗಳು ಅರ್ಥವಾಗುತ್ತಿರುವುದು ಸಮಾಧಾನಕರ ಸಂಗತಿ.
                        ಈ ದೇಶ, ಸಮುದಾಯ, ಸಮಾಜ ದಾರಿಕಾಣದೆ ದಿಕ್ಕೆಟ್ಟಾಗಲೆಲ್ಲಾ ನಮಗೆ ನೆನಪಾಗುವುದು ಗಾಂಧಿ ಮತ್ತು ಅವರ ಚಿಂತನೆಗಳು.
                        1948 ರ ಜನವರಿಯಲ್ಲಿ ಹಂತಕನ ಗುಂಡಿಗೆ ಬಲಿಯಾಗುವ ಮುನ್ನ `ಗಾಂಧಿವಾದ' ಎಂಬುದು ತಲೆಯೆತ್ತಬಾರದು ಎಂದು ಗಾಂಧೀಜಿ ಅಪೇಕ್ಷಿಸಿದ್ದರು. `ಯಾವುದೇ ತತ್ವ-ಸಿದ್ಧಾಂತಗಳನ್ನು ನಾನು ಹುಟ್ಟುಹಾಕಿದೆನೆಂದು ಜಗತ್ತು ಹೇಳಬಾರದು. ಶಾಶ್ವತ ಸತ್ಯಗಳನ್ನು ನಮ್ಮ ದಿನ ನಿತ್ಯದ ಬದುಕು ಮತ್ತು ಸಮಸ್ಯೆಗಳಿಗೆ ನನ್ನದೇ ಆದ ರೀತಿಯಲ್ಲಿ ಅನ್ವಯಿಸಲು ನಾನು ಪ್ರಯತ್ನಿಸಿದೆ ಅಷ್ಟೆ' ಎಂಬುದು ಗಾಂಧಿಯವರ ನಿಲುವಾಗಿತ್ತು.
                        ಮಾನವ ಸಹಜ ಪ್ರವೃತ್ತಿಗಳಾದ ಹಲವಾರು ದೌರ್ಬಲ್ಯಗಳನ್ನು ಹೊಂದಿದ್ದ ಗಾಂಧಿ `ರಾಷ್ಟ್ರಪಿತ'ನೆಂದುಎಲ್ಲರಿಂದ ಕರೆಸಿಕೊಂಡರೂ, ಅವರು ತಮ್ಮ ಕುಟುಂಬದ ಜೊತೆ ಪತಿಯಾಗಿ, ತಂದೆಯಾಗಿ ನಡೆದುಕೊಂಡ ರೀತಿಇಂದಿಗೂ ಚರ್ಚೆಗೆ ಒಳಪಟ್ಟಿದೆ. ದೇಶದ ಹಿತಾಸಕ್ತಿಗಾಗಿ ತಮ್ಮ ಕುಟುಂಬದ ಹಿತಾಸಕ್ತಿಯನ್ನು ಬಲಿಕೊಟ್ಟ ಗಾಂಧೀಜಿಯ ಬದುಕೆಂದರೆ ಅದೊಂದು ರೀತಿ, `ತನ್ನ ಗುಡಿಸಲಿಗೆ ಬೆಂಕಿ ಹಚ್ಚಿಕೊಂಡು ಊರಿಗೇ ಬೆಳಕಾಗುವ ಪರಿ'. ಅಲ್ಲಿ ಸ್ವಾರ್ಥಕ್ಕೆ ಎಡೆಯಿಲ್ಲ.
               
         ಆಫ್ರಿಕಾದ ಡರ್ಬಾನ್ ರೈಲು ನಿಲ್ದಾಣದಲ್ಲಿ ವರ್ಣಬೇಧ ನೀತಿಯ ದೌರ್ಜನ್ಯಕ್ಕೆ ಸಿಲುಕಿ ರೈಲಿನ ಬೋಗಿಯಿಂದ ಹೊರಗೆ ಎಸೆಯಲ್ಪಟ್ಟಾಗ, ಗಾಂಧಿ ಅದರಲ್ಲೂ ಬ್ಯಾರಿಸ್ಟರ್ ಆಗಿದ್ದ ಗಾಂಧಿ ಅದೊಂದು ವೈಯಕ್ತಿಕ ನೋವು-ಅಪಮಾನ ಎಂದು ಭಾವಿಸಿದ್ದರೆ, ದಕ್ಷಿಣ ಆಫ್ರಿಕಾದ ಜನತೆಗೆ ಬಿಳಿಯರಿಂದ ಮೋಕ್ಷವೆಂಬುದು ಸಿಗುತ್ತಲೇ ಇರಲಿಲ್ಲ. ವೈಯಕ್ತಿಕ ನೋವಿಗಿಂತ ಸಮುದಾಯದ ನೋವು ಮುಖ್ಯವೆಂದು ಗಾಂಧಿ ಪರಿಗಣಿಸಿದರು. ಈ ಗುಣವೇ ಅವರನ್ನು ಜಗದ್ವಿಖ್ಯಾತರನ್ನಾಗಿಮಾಡಿತು.
                        ದಕ್ಷಿಣ ಆಫ್ರಿಕಾದ ಅಧ್ಯಕ್ಷರಾಗಿದ್ದ ನೆಲ್ಸನ್ ಮಂಡೇಲಾ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ಥಳೀಯ ಪತ್ರಕರ್ತನೊಬ್ಬ, ಗಾಂಧೀಜಿಯಿಂದಾಗಿ ದಕ್ಷಿಣ ಆಫ್ರಿಕಾದಲ್ಲಿ ಕರಿಯರಿಗೆ ಬಿಳಿಯರಿಂದ ಬಿಡುಗಡೆ ಸಿಕ್ಕಿತು ಎಂದಾಗ,ಮಂಡೇಲಾ ಹೌದು ನೀವು ಆಫ್ರಿಕಾಕ್ಕೆ ಮೋಹನದಾಸ ಕರಮಚಂದ ಗಾಂಧಿಯನ್ನು ಕಳಿಸಿಕೊಟ್ಟಿರಿ, ನಾವು ಅವರನ್ನು ಮಹಾತ್ಮ ಗಾಂಧೀಜಿಯನ್ನಾಗಿ ಕಳಿಸಿಕೊಟ್ಟೆವು ಎಂದು ಅರ್ಥಪೂರ್ಣವಾಗಿ ವ್ಯಾಖ್ಯಾನಿಸಿದ್ದರು.
                        `ಶಕ್ತಿಯೇ ಸರ್ವಸ್ವ' ಎಂದು ನಂಬಿರುವ ಆಧುನಿಕ ಜಗತ್ತಿಗೆ ಗಾಂಧೀಜಿಯ ತತ್ವ ಹಾಗು ಚಿಂತನೆಗಳನ್ನು ಅರಗಿಸಿಕೊಳ್ಳುವುದು ಕಷ್ಟ. ಸಮಾಜದಲ್ಲಿ ಎಲ್ಲರಿಗೂ ಸಮಾನತೆ, ಸಮೃದ್ಧಿ, ನ್ಯಾಯ ದೊರಕಿಸಿ ಕೊಡುವುದು ರಾಮರಾಜ್ಯದ ಕಲ್ಪನೆ. ವ್ಯಕ್ತಿಯೊಬ್ಬನ ಉನ್ನತಿಯ ಜೊತೆಗೆ ಸಮುದಾಯದ ಅಭಿವೃದ್ಧಿಗೆ ಜೀವನಾಂಶ ಒದಗಿಸಿ ಕೊಡುವುದು ಅಗತ್ಯ ಎಂದು ಗೌತಮ ಬುದ್ಧ ಪ್ರತಿಪಾದಿಸಿದ್ದ. ದಾರ್ಶನಿಕ ಜಾನ್ ರಸ್ಕಿನ್ ಸರಳ ಬದುಕು ಅಗತ್ಯವೆಂದು ಒತ್ತಿಹೇಳುತ್ತಾ, ಮನುಷ್ಯನನ್ನು ದುರ್ಬಲಗೊಳಿಸುವ, ಸ್ವಾರ್ಥಿಯನ್ನಾಗಿ ರೂಪಿಸುತ್ತಿರುವ ಆಧುನಿಕ ಅರ್ಥವ್ಯವಸ್ಥೆಯನ್ನು ಟೀಕಿಸಿದ್ದನು. ಇವೆಲ್ಲವುಗಳಿಂದ ಗಾಂಧೀಜಿ ಪ್ರಭಾವಿತರಾಗಿದ್ದರು. ಈ ಕಾರಣಕ್ಕಾಗಿ ನೂರು ವರ್ಷಗಳ (1908) ಹಿಂದೆ ಅವರು ಹಿಂದ್ ಸ್ವರಾಜ್ ಕೃತಿ ಬರೆಯುವ ಮುನ್ನವೇ ಆಧುನಿಕ ಬದುಕಿನ ಎಲ್ಲಾ ಆಡಂಬರಕ್ಕೆ ಬೆನ್ನು ತಿರುಗಿಸಿ,ಪೂರ್ಣತೆಯ ಬದುಕಿನ ಹಾದಿಯ ಅನ್ವೇಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
                        ಬ್ರಿಟೀಷರ ಗುಲಾಮಗಿರಿಯಲ್ಲಿ ಸಿಲುಕಿ ನರಳುತ್ತಿರುವ ಭಾರತಕ್ಕೆ ಹಿಂಸೆ ಮಂತ್ರದಂಡವಲ್ಲ, ಅದಕ್ಕೆ ಪರ್ಯಾಯವಾಗಿ ಭಾರತೀಯ ಸಂಸ್ಕøತಿಯ ಹಿನ್ನೆಲೆಯಲ್ಲಿ ಶ್ರೇಷ್ಟವಾದ ಅಸ್ತ್ರವೊಂದು ಭಾರತಕ್ಕೆ ಬೇಕಾಗಿದೆ ಎಂದು ನಂಬಿದ್ದ ಗಾಂಧಿ, ಅಣುಬಾಂಬ್‍ಗಿಂತ ಪ್ರಭಲವಾದ `ಅಹಿಂಸೆ' ಎಂಬ ಅಸ್ತ್ರವನ್ನು ಜಗತ್ತಿಗೆ ಕೊಟ್ಟರು.
                        ಯಾರನ್ನೂ ಹಿಂಸಿಸದೆ, ತನ್ನನ್ನು ತಾನು ಹಿಂಸಿಸಿಕೊಳ್ಳುವುದರ ಮೂಲಕ (ಉಪವಾಸ, ಧರಣಿ) ಎದುರಾಳಿ ಯ ಮನೋಸ್ಥೈರ್ಯವನ್ನು ಕುಗ್ಗಿಸುವ, ಮಣಿಸುವ ಈ ಅಹಿಂಸಾ ಸತ್ಯಾಗ್ರಹದ ಪರಿಕಲ್ಪನೆ ಗಾಂಧೀಜಿ ಜಗತ್ತಿಗೆನೀಡಿದ ಬಹುದೊಡ್ಡ ಕೊಡುಗೆಯಾಗಿದೆ.
     
                 1960 ರ ದಶಕದಲ್ಲಿ ಇಂಗ್ಲೆಂಡಿನ ಪ್ರಸಿದ್ಧ ಅರ್ಥಶಾಸ್ತ್ರಜ್ಞ `ಶೊಮಾಕರ್' ನನ್ನ ಸಿದ್ಧಾಂತಗಳಲ್ಲಿ ಗಾಂಧೀಜಿಯವರ ಅಹಿಂಸಾ ತತ್ವಗಳನ್ನು ಕಾಣಬಹುದಾಗಿದೆ ಎಂದನಲ್ಲದೆ, ಗಾಂಧಿಯ ತತ್ವಗಳನ್ನು ಪಾಶ್ಚಾತ್ಯ ಬುದ್ಧಿಜೀವಿಗಳಿಗೆಅರ್ಥೈಸಲು ಪ್ರಯತ್ನಿಸಿದ. ಅಷ್ಟೇ ಅಲ್ಲದೆ `ಸಣ್ಣದು ಸುಂದರ' (ಸ್ಮಾಲ್ ಈಸ್ ಬ್ಯೂಟಿಫುಲ್) ಎಂಬ ಅರ್ಥಶಾಸ್ತ್ರದ ಕೃತಿ ರಚಿಸಿ ಜಗತ್ತನ್ನು ತಲ್ಲಣಗೊಳಿಸಿದ. ಶೊಮಾಕರ್ ಗಾಂಧೀಜಿಯವರಿಂದ ಪ್ರಭಾವಿತನಾಗುವಷ್ಟು ಅವರ ತತ್ವ-ಸಿದ್ಧಾಂತಗಳು ಪರಿಣಾಮಕಾರಿಯಾಗಿದ್ದವು. ಅವುಗಳನ್ನು ಅರ್ಥಮಾಡಿಕೊಂಡವರಲ್ಲಿ ಶೊಮಾಕರ್ ಮತ್ತು ಕುಮಾರಪ್ಪಪ್ರಮುಖರು.
                        ಗಾಂಧೀಜಿಯ ಗ್ರಾಮಸ್ವರಾಜ್ಯದ ಪರಿಕಲ್ಪನೆಯಲ್ಲಿ ಜನತಾಂತ್ರಿಕ ರಾಜಕೀಯ ಆಶಯಗಳು ಮತ್ತು ಮಾರುಕಟ್ಟೆ ಆರ್ಥಿಕತೆಯ ಆಶಯಗಳು ಪರಸ್ಪರ ವಿರುದ್ಧ ದಿಕ್ಕಿನ ಭಿನ್ನ ನೆಲೆಗಳಲ್ಲಿ ಚಲಿಸುತ್ತವೆ. ತಮ್ಮ ಏಳಿಗೆಗೆಅವಶ್ಯಕವಾದ ನಿರ್ಧಾರಗಳನ್ನು ಜನರೇ ತೆಗೆದುಕೊಳ್ಳುತ್ತಾರೆ. ಇದು ಜನತಾಂತ್ರಿಕ ವ್ಯವಸ್ಥೆಯಲ್ಲಿ ಮಾತ್ರ ಸಾಧ್ಯ. ಇಂತಹ ಸಾಮೂಹಿಕ ನಿರ್ಧಾರ ತಳಮಟ್ಟದ ಸಮುದಾಯಗಳದ್ದು, ಈ ಪ್ರತಿಕ್ರಿಯೆ ಶಕ್ತಿಶಾಲಿಯಾಗಿರುತ್ತದೆ. ಮಾರುಕಟ್ಟೆ ಆಶಯ ಇದಕ್ಕೆ ತದ್ವಿರುದ್ಧವಾದುದು. ಜನತೆ ತಮ್ಮ ಬದುಕನ್ನು ತಾವೇ ರೂಪಿಸಿಕೊಳ್ಳುವ ಸಾಧ್ಯತೆ ಬಗ್ಗೆ ಚಿಂತಿಸುವುದಾದರೆ, ಮಾರುಕಟ್ಟೆ ವ್ಯವಸ್ಥೆ ಸ್ಥಳೀಯ ನೆಲೆಗಳಿಗೆ ವಿಕೇಂದ್ರೀಕರಣಗೊಳ್ಳುವುದು ಅನಿವಾರ್ಯವಾಗುತ್ತದೆ.
ಇಂತಹ ಸ್ಥಳೀಯ ನೆಲೆಗಳು ಜೀವಂತವಿರುವುದು ದೇಶೀ ಸಂಸ್ಕøತಿಯಲ್ಲಿ ಮಾತ್ರ. ಗ್ರಾಮ ಸಂಸ್ಕøತಿಯು ನಮ್ಮ ಪೂರ್ವಿಕರ ದರ್ಶನದಲ್ಲಿ ಅಡಕವಾಗಿರುವ ಮಾನವೀಯ ಮುಖವುಳ್ಳದ್ದಾಗಿದ್ದು ಅದು ತಲೆಮಾರಿನಿಂದ ತಲೆಮಾರಿಗೆ ಹರಿದು ಬಂದಿದೆ.
ಶೈಕ್ಷಣಿಕ ಅಥವಾ ಅರ್ಹತೆಯ ಹಂಗಿಲ್ಲದ ಜನಪದರ ಪ್ರಾದೇಶಿಕ ತಿಳುವಳಿಕೆಯ ರೂಪವಾದ ದೇಶೀಯ ಪಾರಂಪರಿಕ ವಿಜ್ಞಾನ-ತಂತ್ರಜ್ಞಾನಗಳು ನಮ್ಮ ಪಾಲಿಗೆ ಲೋಕದರ್ಶನಗಳಾಗಿವೆ. ಈ ಸತ್ಯವನ್ನು ಗಾಂಧೀಜಿ ಮನಗಂಡಿದ್ದರು. ನಮ್ಮ ಪೂರ್ವಿಕರ ಈ ಜ್ಞಾನ ಶಾಖೆಗಳ ವೈಶಿಷ್ಟ್ಯವೆಂದರೆ, ಇವುಗಳು ಸ್ಥಳೀಯ ಸಂದರ್ಭ-ಅಗತ್ಯಗಳಿಗೆ ತಕ್ಕಂತೆ ರೂಪಾಂತರಗೊಳ್ಳುವ ಶಕ್ತಿ ಪಡೆದಿವೆ. ಇಂತಹ ಲೋಕವಿದ್ಯೆ ಪೂರ್ಣ ಪ್ರಮಾಣದಲ್ಲಿ ವಿಕಾಸವಾಗಿ, ಕ್ರಿಯಾರೂಪದಲ್ಲಿ ಪ್ರಕಟಗೊಳ್ಳುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾತ್ರ ಎಂಬುದು ಗಾಂಧೀಜಿಯವರ ಅಚಲ ನಂಬಿಕೆಯಾಗಿತ್ತು.
  21 ನೇ ಶತಮಾನದ ಬಂಡವಾಳಶಾಹಿ ಹಾಗು ಮಾರುಕಟ್ಟೆ ಪ್ರಭುತ್ವದ ಏಕಮುಖ ನೀತಿಯ ಕೂಸಾದ ಜಾಗತೀಕರಣ ಪ್ರಭಾವದ ಈ ಸಂದರ್ಭದಲ್ಲಿ ಬೇಸಾಯಗಾರರು, ಕಸುಬುದಾರರು, ದಲಿತರು, ಆದಿವಾಸಿಗಳು, ಮಹಿಳೆಯರು, ಬುಡಕಟ್ಟು ಜನಾಂಗದವರು ಸೇರಿದಂತೆ, ಶೇ.80 ರಷ್ಟು ಗ್ರಾಮಭಾರತದ ಜನತೆ ಈ ಪಾರಂಪರಿಕ ಜ್ಞಾನದಮೂಲ ವಾರಸುದಾರರಾಗಿದ್ದಾರೆ. ಇದನ್ನು ನಿರ್ಲಕ್ಷಿಸಿ, ಗಾಂಧಿಯನ್ನು ಮರೆತು ಆತ್ಮಹತ್ಯೆಯ ಹಾದಿಯಲ್ಲಿ ನಾವು ಸಾಗಿದ್ದೇವೆ.
                        ವರ್ತಮಾನದ ಜಗತ್ತು ಅನುಭವಿಸುತ್ತಿರುವ ಆರ್ಥಿಕ ಹಿಂಜರಿತ, ನಿರುದ್ಯೋಗ, ಬಡತನ, ಭಯೋತ್ಪಾದನೆ, ಹಿಂಸೆ ಇವೆಲ್ಲಕ್ಕೂ ಗಾಂಧೀಜಿಯ ಚಿಂತನೆಗಳಲ್ಲಿ, ಸಿದ್ಧಾಂತಗಳಲ್ಲಿ ಪರಿಹಾರ ಇದೆ ಎಂಬುದನ್ನು ಆಧುನಿಕ ಜಗತ್ತು ಮರೆತಿದೆ.
                        ಗಾಂಧಿಯವರಿಂದ ಪ್ರಭಾವಿತರಾದ ಜೆ.ಸಿ.ಕುಮಾರಪ್ಪ ಬರೆದ ಶಾಶ್ವತ ಅರ್ಥಶಾಸ್ತ್ರ ಎಂಬ ಕೃತಿ ಈ ಕ್ಷಣದಎಲ್ಲಾ ಸವಾಲುಗಳಿಗೆ ಪರಿಹಾರವಾಗಬಲ್ಲದು. ಅದನ್ನು ಅರ್ಥಮಾಡಿಕೊಳ್ಳುವ ಮನಸ್ಸುಗಳು ಬೇಕಾಗಿವೆ ಅಷ್ಟೆ.
                        ತಮಿಳುನಾಡು ಮೂಲದ ಕುಮಾರಪ್ಪ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದ ಪದವಿ ಪಡೆದುಆಧುನಿಕ ಅರ್ಥಶಾಸ್ತ್ರಜ್ಞರಾಗಿ ರೂಪುಗೊಂಡಿದ್ದರು. ಮುಂಬೈ ನಗರದಲ್ಲಿ ಅಕೌಂಟೆಂಟ್ ಆಗಿ ತಮ್ಮದೇ ಸಂಸ್ಥೆ ಸ್ಥಾಪಿಸಿಕೊಂಡಿದ್ದ ಇವರು ಗಾಂಧೀಜಿಯವರ ಸಂಪರ್ಕಕ್ಕೆ ಬಂದ ನಂತರ ತಮ್ಮ ಪಾಶ್ಚಿಮಾತ್ಯ ಶೈಲಿಯ ಉಡುಪಿಗೆ ವಿದಾಯ ಹೇಳಿ ಖಾದಿಗೆ ಶರಣು ಹೋದರು. ಮನುಷ್ಯ ಸಂಪತ್ತು ಸೃಷ್ಟಿಸುವವನು ಮಾತ್ರವಲ್ಲ, ರಾಜಕೀಯ, ಆಧ್ಯಾತ್ಮಿಕ,ನೈತಿಕ ಜವಾಬ್ದಾರಿ ಹೊಂದಿದ ಸಮಾಜದ ಸದಸ್ಯ ಎಂಬುದು ಕುಮಾರಪ್ಪನವರ ನಂಬಿಕೆಯಾಗಿತ್ತು.
           
           ಗಾಂಧೀಜಿಯವರಂತೆ ಅವರಿಗೆ ಹೊಸದಾಗಿ ಹೇಳಲು ಏನೂ ಇರಲಿಲ್ಲ. ನಿಸರ್ಗದಲ್ಲಿ ಜೀವ ಜಂತುಗಳುಹೇಗೆ ಪರಸ್ಪರ ಪರಾವಲಂಬಿಗಳಾಗಿ ಬದುಕುತ್ತವೆ ಎಂಬುದನ್ನು ಗಮನಿಸಿದರು. ಇದರಿಂದ ಮನುಷ್ಯ ಕಲಿಯಬಹುದಾದಪಾಠವನ್ನು ಗ್ರಹಿಸಿದರು. ಪ್ರಕೃತಿ ತನ್ನ ಎಲ್ಲಾ ಘಟಕಗಳ ಸಹಕಾರ ಬಯಸುತ್ತದೆ. ಪ್ರತಿಯೊಂದು ತನ್ನಷ್ಟಕ್ಕೆ ತಾನು ಕೆಲಸ ಮಾಡುತ್ತಾ, ಈ ಪ್ರಕ್ರಿಯೆಯಲ್ಲಿ ಸಮಾಜದ ಬೇರೆ ಬೇರೆ ಘಟಕಗಳು ಅದರದರ ಕೆಲಸ ಮಾಡಲು ಅನುವುಮಾಡಿಕೊಡುತ್ತದೆ. ಓಡಾಡಬಲ್ಲವರು ಓಡಾಡದವರಿಗೆ, ಬುದ್ಧಿ ಇರುವವರು ಬುದ್ಧಿ ಇಲ್ಲದವರಿಗೆ ನೆರವು ನೀಡುವಂತೆ,ನಿಸರ್ಗದಲ್ಲಿ ಪ್ರತಿಯೊಂದೂ ಸಾಮಾನ್ಯ ಉದ್ದೇಶಕ್ಕಾಗಿ ಒಂದನ್ನೊಂದು ಹೊಂದಿಕೊಂಡಿರುತ್ತವೆ. ಹಿಂಸೆ ಎಂಬುದು ಈಸರಪಳಿಯನ್ನು ಒಡೆಯದೆ, ಇವೆಲ್ಲವೂ ಸುಸೂತ್ರವಾಗಿ ನಡೆದಲ್ಲಿ ಶಾಶ್ವತ ಅರ್ಥಶಾಸ್ತ್ರ ಜನ್ಮ ತಾಳುತ್ತದೆ. ಕುಮಾರಪ್ಪನವರು ಶಾಶ್ವತ ಅರ್ಥಶಾಸ್ತ್ರದೊಂದಿಗೆ ನಶ್ವರ ಅರ್ಥಶಾಸ್ತ್ರವನ್ನು ಹೋಲಿಸಿದರು. ದೊಡ್ಡ ಪ್ರಮಾಣದಲ್ಲಿ ರಸಾಯನಿಕಗೊಬ್ಬರ, ಕೀಟ ನಾಶಕ ಬಳಸಿ ಆ ಮೂಲಕ ಅಲ್ಪ ಕಾಲದವರೆಗೆ ಅತಿಹೆಚ್ಚು ಇಳುವರಿ ಪಡೆಯುವ ನಾಟಕೀಯ ದೃಶ್ಯವಾಗಿ ನಶ್ವರ ಅರ್ಥಶಾಸ್ತ್ರ ಗೋಚರಿಸುತ್ತದೆ. ಇದರ ಪರಿಣಾಮವಾಗಿ ಭೂಮಿ ನಾಶವಾಗುತ್ತದೆಂದು, ಆಹಾರದಲ್ಲಿ ಸ್ವಾವಲಂಬಿಯಾಗುವ ಬದಲು ವಾಣಿಜ್ಯ ಬೆಳೆಗಳಿಗೆ ಆದ್ಯತೆ ನೀಡಿದಲ್ಲಿ ಮುಂದಾಗುವ ಅಪಾಯದ ಬಗ್ಗೆ ಅವರುಎಚ್ಚರಿಸಿದ್ದರು.
                        `ಪೂರ್ಣವಾಗಿ ಹಣ ಅಥವಾ ಲೌಕಿಕ ವಸ್ತುಗಳ ಮೌಲ್ಯದ ಆಧಾರದ ಮೇಲೆ ಕಟ್ಟಿದ ಅರ್ಥಶಾಸ್ತ್ರ ಸಮಯಮತ್ತು ಸ್ಥಳೀಯ ವಾಸ್ತವಿಕ ಹಿನ್ನೆಲೆಯನ್ನು ಪಡೆದುಕೊಳ್ಳುವುದಿಲ್ಲ. ಇದರಿಂದ ಹಿಂಸೆ ಮತ್ತು ನಾಶ ಆರಂಭವಾಗಿಜಗತ್ತು ಈ ಸಂಕಷ್ಟದಿಂದ ಪಾರಾಗಲು ಯಾವ ಮಾರ್ಗವೂ ಇರಲಾರದು'. ಇದು ಕುಮಾರಪ್ಪ ಹಾಗು ಗಾಂಧೀಜಿಯ ವರ ಅಚಲ ನಂಬಿಕೆಯಾಗಿತ್ತು.
                        ಆಧುನಿಕ ಜಗತ್ತು ಹಿಂಸೆಗೆ ದೂಡಲ್ಪಟ್ಟಿರುವ ಈ ಸಂದರ್ಭದಲ್ಲಿ, ಸ್ವಾತಂತ್ರ್ಯೋತ್ತರ ಭಾರತದ ರಾಜಕಾರಣದಲ್ಲಿ ಗಾಂಧೀಜಿ ಮತ್ತವರ ಚಿಂತನೆಗಳು ನಿರ್ಲಕ್ಷ್ಯಕ್ಕೊಳಗಾದ ಪರಿಣಾಮದ ಫಲವನ್ನು ನಾವು ಅನುಭವಿಸುತ್ತಿದ್ದೇವೆ. ಸರಳತೆ-ಸಮಾನತೆ- ಸ್ವಾವಲಂಬನೆ ಮುಂತಾದ ಗಾಂಧೀಜಿಯವರ ಪರಿಕಲ್ಪನೆಗಳು ಸನ್ಯಾಸತ್ವದ ಲಕ್ಷಣಗಳಲ್ಲ ಎಂಬುದನ್ನು ಆಧುನಿಕ ಜಗತ್ತು ಅರಿಯಬೇಕಿದೆ.
ಈ ಅರಿವು ನಮ್ಮನ್ನು ಆವರಿಸಿಕೊಂಡಾಗಲೇ ಮಹಾತ್ಮ ಗಾಂಧೀಜಿ ನಮಗೆ ಅರ್ಥವಾಗಲು ಸಾಧ್ಯ.
             
                          (ಮಾಹಿತಿ ಸೌಜನ್ಯ :- ರಜನಿ ಭಕ್ಷಿಯವರ `ಬಾಪು ಕುಟಿ' ಕೃತಿಯಿಂದ)  

(ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು. ಇವರು ಪ್ರಕಟಿಸುರುವ ನನ್ನ ಕೃತಿ” ಗಾಂಧಿ ಎಂಬ ಧ್ಯಾನ” ಪುಸ್ತಕದಿಂದ )



















ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ