Tuesday, 12 November 2013

ಕನ್ನಡದ ಕಷ್ಟದ ದಿನಗಳು


ಪ್ರತಿ ನವಂಬರ್ ತಿಂಗಳು ಬಂತೆಂದರೆ, ಎಲ್ಲರಲ್ಲೂ ಕನ್ನಡದ ಪ್ರಜ್ಙೆ ಆವರಿಸಿಕೊಳ್ಳತ್ತದೆ. ಇಡೀ ತಿಂಗಳು ಕನ್ನಡದ ಅಸ್ಮಿತೆ ಕುರಿತ ಚಿಂತನೆಗಳು ಆರಂಭಗೊಳ್ಳುತ್ತವೆ. ಇಂತಹ ಉತ್ಸಾಹ ಮತ್ತು ಸಂಭ್ರಮಗಳ ನಡುವೆ ಕನ್ನಡ ಭಾಷೆ ಮತ್ತು ಪ್ರಜ್ಙೆ ನಮ್ಮ ಅರಿವಿಗೆ ಬಾರದಂತೆ ಸೆವೆಯುತ್ತಿದೆ. ಅದರ ಬೇರುಗಳು ಒಳಗೊಳಗೆ ಒಣಗುತ್ತಿವೆ. ಇಂತಹ ವಾಸ್ತವ ಸಂಗತಿಗಳನ್ನು ನಾವು ಮರೆ ಮಾಚುತ್ತಾ, ಆವೇಶ ಮತ್ತು ಘೋಷಣೆಗಳ ಮೂಲಕ ಕನ್ನಡತನವನ್ನು ಕಾಪಾಡಿಕೊಳ್ಳಲು ಯತ್ನಿಸುತ್ತಿದ್ದೆವೆ.
ನನ್ನ ಆತ್ಮೀಯ ಗೆಳೆಯರಾದ ಹಾಗೂ ಕಥೆಗಾರರೂ, ಪ್ರಬಂಧಕಾರರಾದ ವೆಂಕಟೇಶ ಮಾಚಕನೂರು ಎಂಬುವರು ಹಿರಿಯ ಕೆ.ಎ.ಎಸ್ ಅಧಿಕಾರಿಯಾಗಿ, ಹಲವು ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ  ನಂತರ, ನಾಲ್ಕು ವರ್ಷಗಳ ಕಾಲ ಉತ್ತರ ಕರ್ನಾಟಕದ ಶಿಕ್ಷಣ ಇಲಾಖೆಯ ಆಯುಕ್ತರಾಗಿ ಸೇವೆ ಸಲ್ಲಿಸಿ ಕಳೆದ ಮೇ ತಿಂಗಳಿನಲ್ಲಿ ನಿವೃತ್ತರಾದರು. ಓರ್ವ ಕನ್ನಡ ಪ್ರೇಮಿಯಾಗಿ, ನಿಷ್ಟಾವಂತ ಅಧಿಕಾರಿಯಾಗಿ ಅವರು ಉತ್ತರ ಕರ್ನಾಟಕದ ಹನ್ನೊಂದು ಜಿಲ್ಲೆಗಳನ್ನು ತಿರುಗುತ್ತಾ, ಸರ್ಕಾರಿ ಶಾಲೆಗಳಲ್ಲಿ ಕನ್ನಡವನ್ನು ಜೀವಂತವಾಗಿಡಲು ಶ್ರಮಿಸಿದ ರೀತಿ ನಿಜಕ್ಕೂ ಅಚ್ಚರಿಯಾಗುತ್ತದೆ. ಪ್ರತಿವಾರ ತಾಲ್ಲೂಕು ಮಟ್ಟದಲ್ಲಿ ಶಿಕ್ಷಕರ ಸಭೆ ಏರ್ಪಡಿಸಿ, ಧಾರವಾಡದಿಂದ ಲೇಖಕರನ್ನು ಕರೆದೊಯ್ದು ಅವರಿಂದ ಕನ್ನಡ ಸಾಹಿತ್ಯ ಚರಿತ್ರೆ ಕುರಿತು ಉಪನ್ಯಾಸ ಏರ್ಪಡಿಸಿದರು. ನಂತರ ಪ್ರತಿ ಬೇಸಿಗೆ ರಜೆಯಲ್ಲಿ ಪ್ರತಿ ಶಿಕ್ಷಕ ಕನಿಷ್ಟ ನಾಲ್ಕು ಕನ್ನಡದ ಪುಸ್ತಕಗಳನ್ನು ಓದಿಕೊಂಡು ಬಂದು ಅವುಗಳ ಕುರಿತು ಸಭೆಯಲ್ಲಿ ಮಾತನಾಡುವಂತೆ ನಿಯಮ ಜಾರಿಗೆ ತಂದರು. ಬೆಳಗಾವಿ ಜಿಲ್ಲೆಯ ಗಡಿಭಾಗದಲ್ಲಿ ಮರಾಠಿ ಶಾಲೆಗಳ ಎದುರು ಕನ್ನಡ ಸರ್ಕಾರಿ ಶಾಲೆಗಳು ಸೊರಗುತ್ತಿರುವುದಕ್ಕೆ, ಮತ್ತು ಕನ್ನಡದ ಮಕ್ಕಳು ಮೂಲ ಸೌಲಭ್ಯಗಳ ಕೊರತೆ( ಶಿಕ್ಷಕರು, ಕಟ್ಟಡ ಇತ್ಯಾದಿ) ಯಿಂದ ಮರಾಠಿ ಶಾಲೆಗೆ ದಾಖಲಾಗುತ್ತಿರುವುದನ್ನು ಕಂಡು ನೊಂದುಕೊಂಡರು.
ಕಳೆದ ಮೂರು ತಿಂಗಳ ಹಿಂದೆ ಸುಪ್ರೀಂ ಕೋರ್ಟ್ ಪ್ರಾಥಮಿಕ ಶಿಕ್ಷಣ ಯಾವ ಭಾಷೆಯಲ್ಲಿ ಇರಬೇಕು ಎಂಬುದರ ಬಗ್ಗೆ ಕಾರಣ ಕೇಳಿ ಪ್ರತಿ ರಾಜ್ಯ ಸರ್ಕಾರಕ್ಕೆ ನೋಟೀಸ್ ಜಾರಿ ಮಾಡಿದಾಗ, ಸರ್ಕಾರ ನಿದ್ರೆಯಲ್ಲಿರುವಾಗ, ತಾವೇ ಸ್ವತಃ ಓಡಾಡಿ ಮಾನಸಿಕ ತಜ್ಙರು ಮತ್ತು ಮಕ್ಕಳ ತಜ್ಙರ ಸಲಹೆಗಳ ಆಧಾರದ ಮೇಲೆ ಮಾತೃಭಾಷೆಯಲ್ಲಿ ಶಿಕ್ಷಣ ಇರಬೇಕು ಎಂಬ ಪತ್ರವನ್ನು ಸಿದ್ಧ ಪಡಿಸಿ, ಅದನ್ನು ನಾಡಿನ ಎಲ್ಲಾ ಹಿರಿಯ ಚೇತನಗಳಿಗೆ ಕಳುಹಿಸಿ ಅವರ ಅಭಿಪ್ರಾಯ ಪಡೆಯುವಲ್ಲಿ ಯಶಸ್ವಿಯಾದರು. ನಂತರ ಕಳೆದ ತಿಂಗಳು ಚೆನ್ನೈ ನಗರದಲ್ಲಿ ನಡೆದ ಕೇಂದ್ರ ಸಾಹಿತ್ಯ ಅಕಾಡೆಮಿಯ ಸಭೆಯಲ್ಲಿ ಡಾ. ಕಲ್ಬುರ್ಗಿ ಮತ್ತು ಡಾ. ಕಂಬಾರ ಅವರ ಮೂಲಕ ಮಂಡಿಸಿ, ಭಾರತೀಯ ಇತರೆ ಭಾಷೆಯ ಲೇಖಕರಿಂದ ಗೊತ್ತುವಳಿ ಪಾಸು ಮಾಡುವಲ್ಲಿ ಯಶಸ್ವಿಯಾದರು.
ಒಬ್ಬ ನಿವೃತ್ತ ಅಧಿಕಾರಿ ಕನ್ನಡದ ಏಳಿಗೆ ಮತ್ತು ಅದರ ಭವಿಷ್ಯದ ಬಗ್ಗೆ ಏಕಾಂಗಿಯಾಗಿ ಹೋರಾಡುತ್ತಿರುವ ವೈಖರಿ ಹಾಗೂ  ಕಳೆದ ನಾಲ್ಕೈದು ಧಶಕದಿಂದ ಕನ್ನಡವನ್ನು ಗುತ್ತಿಗೆ ತೆಗೆದುಕೊಂಡು ಗಾಳಿಯಲ್ಲಿ ಕತ್ತಿ ಝಳಪಿಸುತ್ತಿರುವವರನ್ನು ಒಟ್ಟಿಗೆ ಇಟ್ಟು ತುಲನೆ ಮಾಡಿದಾಗ ಕನ್ನಡದ ಪರ ಹೋರಾಟ ಎಂಬುದು  ಹಲವರ ಪಾಲಿಗೆ ವ್ಯಸನ, ವೃತ್ತಿ ಅಥವಾ ದಂಧೆಯಾಗಿದೆ ಅನಿಸುತ್ತದೆ. ಕುವೆಂಪು ಅವರ ಕನ್ನಡ ನಾಡಗೀತೆಯಲ್ಲಿ ರಾಜ್ಯದ ಎಲ್ಲಾ ಅರಸ ಮನೆತನಗಳ ಹೆಸರಿಲ್ಲ ಆದ್ದರಿಂದ ಅದನ್ನು ತೆಗೆದು ಹಾಕಬೇಕು ಎಂದು ಒತ್ತಾಯಿಸಿ ನಿರಂತರ ಹೇಳಿಕೆ ನೀಡಿದರೆ ಕನ್ನಡ ಉದ್ಧಾರವಾಗುತ್ತದೆ ಪಾಟೀಲಪುಟ್ಟಪ್ಪ ನಂಬಿದ್ದಾರೆ. ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಕತ್ತೆ, ಕೋಣ, ಕುರಿ, ಮೇಕೆ ಇವುಗಳನ್ನು ಕರೆ ತಂದು ತಮಟೆ ಬಾರಿಸಿ, ತನ್ನ ತೋರು ಬೆರಳನ್ನು ಸುದ್ಧಿ ಛಾನಲ್ ಗಳ ಎದುರು  ಮಂತ್ರ ಹಾಕುವವನಂತೆ ಒದರಿ ಬಿಟ್ಟರೆ ಕನ್ನಡಕ್ಕೆ ಅಪಾಯವಿಲ್ಲ ಎಂದು ವಾಟಾಳ್ ನಾಗರಾಜ್ ನಂಬಿದ್ದಾರೆ. ಇನ್ನೂ ಹೆಗಲ ಮೇಲೆ ಕನ್ನಡದ ಒಂದು ಪಟ್ಟಿಯೊಂದನ್ನು ಹಾಕಿಕೊಂಡು ಪ್ರತಿಭಟನೆ ನಡೆಸಿದರೆ, ಕನ್ನಡ ಭಾಷೆ ಸಂಸ್ಕೃತಿ ನಮ್ಮ ಸುಪರ್ಧಿಯಲ್ಲಿ ಸುರಕ್ಷಿತವಾಗಿದೆ ಎಂದು ನಂಬಿಕೊಂಡಿರುವ ಅನೇಕ ಕನ್ನಡ ಪರ ಸಂಘಟನೆಗಳಿವೆ. ವಾಸ್ತವವಾಗಿ ಇದು ಬೇರು ಸತ್ತು ಹೋದ ಗಿಡದ ಕಾಂಡಕ್ಕೆ ಹಾರೈಕೆ ಮಾಡಿದಂತೆ. ಇದರಾಚೆಗೆ ನಾವು ಯೋಚಿಸಬೇಕಾದ ಸುಡುವ ಕೆಂಡದಂತಹ
ಕಟು ಸತ್ಯಗಳಿವೆ.
ಬೆಂಗಳೂರಿನ ನವಕರ್ನಾಟಕ ಪ್ರಕಾಶನದ ಶ್ರೀ ಉಡುಪ, ಮತ್ತು ಶಿವಮೊಗ್ಗದ ಅಹರ್ನಿಶಿ ಪ್ರಕಾಶನದ ಶ್ರೀಮತಿ ಅಕ್ಷತಾ ಹುಂಚದಕಟ್ಟೆ ಇವರಿಬ್ಬರೂ ಕನ್ನಡ ಪುಸ್ತಕಗಳ ಮಾರಾಟ ಕುರಿತಂತೆ ವ್ಯಕ್ತ ಪಡಿಸಿರುವ ಅನುಭವಗಳು ಕನ್ನಡದ ಭವಿಷ್ಯಕ್ಕೆ ಕನ್ನಡಿ ಹಿಡಿದಂತಿವೆ. ಕನ್ನಡ ಪುಸ್ತಕ ಕೊಂಡು ಓದುವವರು  ವಯಸ್ಸು ಸರಾ ಸರಿ 40 ಆಸು ಪಾಸಿನದು. ಎಂಬ ಇವರ ಅನಿಸಿಕೆಯನ್ನು ಇಟ್ಟುಕೊಂಡು ಯೋಚಿಸಿದಾಗ, ಇದು  ಕಳೆದ  ಎರಡು ಮೂರು ದಶಕಗಳಿಂದ ಹಳ್ಳಿಗಳಿಂದ ಹಿಡಿದು ನಗರದವರೆಗೆ ನಾಯಿಕೊಡೆಯಂತೆ ಹುಟ್ಟಿಕೊಂಡ ಇಂಗ್ಲೀಷ್ ಮಾಧ್ಯಮ ಶಾಲೆಗಳ ಪ್ರಭಾವ ಎಂದು ಖಚಿತವಾಗಿ ಹೇಳಬಹುದು.

ಇತ್ತೀಚೆಗೆ ಇಂಗ್ಲೀಷ್ ಮಾಧ್ಯಮ ಶಾಲೆಗಳನ್ನು ಹುಟ್ಟು ಹಾಕುವುದನ್ನು ಉದ್ಯೋಗ ಮಾಡಿಕೊಂಡಿರುವ ಹಲವರು, ಕನ್ನಡಿಗರ ಎದೆಯಲ್ಲಿ ಬಣ್ಣ ಬಣ್ಣದ ಕನಸಿನ ಬೀಜಗಳನ್ನು ಬಿತ್ತಿ, ಹಣಸುಲಿಗೆ ಮಾಡುತ್ತಿದ್ದಾರೆ. ಕನ್ನಡದ ಮಾಧ್ಯಮದಲ್ಲಿ, ಅಥವಾ ಸರ್ಕಾರಿ ಶಾಲೆಯಲ್ಲಿ ನಮ್ಮ ಮಕ್ಕಳನ್ನು ಓದಿಸುವುದು ಅಪಮಾನಕರ ಎಂಬ ಭಾವನೆ ಈಗಾಗಲೆ ಎಲ್ಲೆಡೆ ಹರಡಿದೆ. ನಮ್ಮ ಅರಿವಿಗೆ ಭಾರದಂತೆ ಶಿಕ್ಷಣ ವ್ಯವಸ್ಥೆಯಲ್ಲಿ ಕನ್ನಡ ಭಾಷೆಗೆ ಇದ್ದ ಮಾನ್ಯತೆಗಳು ಪಲ್ಲಟಗೊಳ್ಳತ್ತಿವೆ.. ಹತ್ತನೇ ತರಗತಿಯಲ್ಲಿ ಕೇವಲ ಐವತ್ತು  ಅಂಕಗಳಿಗೆ ಸೀಮಿತವಾಗಿದ್ದ ಹಿಂದಿ ಭಾಷೆಯ ಅಂಕಗಳನ್ನು ನೂರಕ್ಕೆ ಏರಿಸಲಾಗಿದೆ. ಹಲವು ವಿಶ್ವ ವಿದ್ಯಾಲಯಗಳಲ್ಲಿ ಬಿ.ಕಾಂ. ಪದವಿಗೆ ಇದ್ದ ಕನ್ನಡ ಭಾಷೆಯ ಪತ್ರಿಕೆಯನ್ನು ತೆಗೆದು ಹಾಕಲಾಗಿದೆ. ಇಂತಹ ಸಂಗತಿಗಳು ಹೊರಜಗತ್ತಿನ ಅರಿವಿಗೆ ಬಾರದಂತೆ ನಡೆಯುತ್ತಿರುವ ಕ್ರಿಯೆಗಳು.
ಕನ್ನಡ ಪ್ರಭ ದಿನಪತ್ರಿಕೆ ಕಳೆದ ನವಂಬರ್ ಒಂದರಿಂದ ಕರ್ನಾಟಕ ರಾಜ್ಯದ ಜಿಲ್ಲೆಗಳ ಕನ್ನಡ ಶಾಲೆಗಳ ಸ್ಥಿತಿ ಗತಿ ಕುರಿತು ಪ್ರತಿ ನಿತ್ಯ ಸಮೀಕ್ಷಾ ವರದಿಯನ್ನು ಪ್ರಕಟಿಸುತ್ತಿದೆ. ಹಲವು ಜಿಲ್ಲೆಗಳಲ್ಲಿ ನೂರಕ್ಕೂ ಹೆಚ್ಚು ಕನ್ನಡ ಶಾಲೆಗಳು ಮುಚ್ಚಿರುವುದು ಧೃಡಪಟ್ಟಿದೆ. ಇನ್ನಿತರೆ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆಯಿಂದಾಗಿ ಪ್ರಾಥಮಿಕ ಶಾಲೆಗಳನ್ನು ಪಕ್ಕದೂರಿನ ಶಾಲೆಗಳ ಜೊತೆ ವಿಲೀನ ಗೊಳಿಸಲಾಗಿದೆ. ಉಳ್ಳವರಿಗಷ್ಟೇ ಶಿಕ್ಷಣ ಎಂಬಂತಿರುವ ಈ ದಿನಗಳಲ್ಲಿ ಬಡವರ ಮಕ್ಕಳ ಶಿಕ್ಷಣದ ಭವಿಷ್ಯವೇನು? ಇಂಗ್ಲೀಷ್ ಮಾಧ್ಯಮದ ಮೋಹದಲ್ಲಿ ನಮ್ಮ ಮಕ್ಕಳನ್ನು ಕನ್ನಡದ ಸಂಸ್ಕೃತಿಯಿಂದ ಹೊರದಬ್ಬುತ್ತಿರುವ ನಮ್ಮ ಫೋಷಕರಿಗೆ ಬುದ್ಧಿ ಹೇಳುವರು ಯಾರು?

ಹತ್ತನೇಯ ತರಗತಿಯವರೆಗೆ ವಿದ್ಯಾರ್ಥಿಯು ಯಾವುದೇ ಮಾಧ್ಯಮದಲ್ಲಿ ಓದಿದರೂ ಕೂಡ ಅವನಿಗೆ/ಳಿಗೆ ಕನಿಷ್ಟ ಕನ್ನಡ ಭಾಷೆಯನ್ನು ಒಂದು ವಿಷಯವಾಗಿ ಓದಲೇಬೇಕೆಂಬ ನಿಯಾಮವನ್ನು ಸರ್ಕಾರ ಕಡ್ಡಾಯಗೊಳಿಸಬೇಕು.  ಆದರೆ, ಈ ನಿಯಮವನ್ನು ಜಾರಿಗೆ ತರುವ ಇಚ್ಛಾಶಕ್ತಿ ಯಾರಿಗೂ ಇದ್ದಂತಿಲ್ಲ. ನ್ಯಾಯಾಲಯದ ಮುಂದಿರುವ ಯಾವುದೇ ಕನ್ನಡದ ನೆಲ-ಜಲ- ಭಾಷೆಯ ಸಮಸ್ಯೆಗಳನ್ನು ಕರ್ನಾಟಕದ ಇತಿಹಾಸದಲ್ಲಿ ನಮ್ಮನ್ನಾಳಿದ ಯಾವ ಸರ್ಕಾರಗಳು ಗಂಭೀರವಾಗಿ ಪರಿಗಣಿಸಿದ ಉದಾಹರಣೆಗಳೂ ಸಹ ಇಲ್ಲ. ಬಹುತೇಕ ರಾಜ್ಯದ ಪ್ರಭಾವಿ ಶಿಕ್ಷಣ ಸಂಸ್ಥೆಗಳು ಎಲ್ಲಾ ಪಕ್ಷಗಳ ರಾಜಕಾರಣಿಗಳ ಹಿಡಿತಲ್ಲಿರುವುದರಿಂದ ನಾವು ಇವರಿಂದ ಕನ್ನಡದ ಭವಿಷ್ಯದ ಬಗ್ಗೆ  ಏನನ್ನೂ ತಾನೆ ನಿರೀಕ್ಷಿಸಲು ಸಾಧ್ಯ? ಕನ್ನಡದ ಭಾಷೆ ಮತ್ತು ಸಂಸ್ಕೃತಿಯ ಅಳಿವು-ಉಳಿವಿನ ಪ್ರಶ್ನೆ ನಾವು ಊಹಿಸಿರುವುದಕ್ಕಿಂತ ಗಂಭೀರವಾಗಿವೆ ಎಂಬುದನ್ನು ನಾವು ಮನಗಾಣಬೇಕಾದ ಕಷ್ಟದ ದಿನಗಳಿವು.

No comments:

Post a Comment