Friday, 26 May 2017

ಭಾರತದ ರಕ್ತಸಿಕ್ತ ನಕ್ಸಲ್ ಹೋರಾಟಕ್ಕೆ ಐವತ್ತು ವರ್ಷ


ಭಾರತದ ಸಾಮಾಜಿಕ ಮತ್ತು ರಾಜಕೀಯ ಬದುಕಿನಲ್ಲಿ ಅಲ್ಲೋಲ ಕಲ್ಲೋಲವೆಬ್ಬಿಸಿ ಇದೀಗ ಹಿಂಸೆ ಮತ್ತು ನೆತ್ತರಿನ ನದಿಯಲ್ಲಿ ಮಿಂದೇಳುತ್ತಿರುವ ನಕ್ಸಲ್ ಹೋರಾಟಕ್ಕೆ ಇದೇ ಮೇ  25 ರಂದು  ಐವತ್ತು ವರ್ಷ ತುಂಬಿತು. ಪಶ್ಚಿಮ ಬಂಗಾಳದ ಉತ್ತರ ಭಾಗದ ಡಾರ್ಜಿಲಿಂಗ್ ಗಿರಿಧಾಮದ ಬಳಿಯ ಸಿಲಿಗುರಿ ಎಂಬ ಪಟ್ಟಣದ ಸಮೀಪವಿರುವ ನಕ್ಸಲ್ ಬಾರಿ ಎಂಬ ಆದಿವಾಸಿಗಳು ಮತ್ತು ಕೃಷಿಕೂಲಿ ಕಾರ್ಮಿಕರು ವಾಸಿಸುತ್ತಿರುವ ಈ ಹಳ್ಳಿಯಲ್ಲಿ 1967 ರ ಮೇ ತಿಂಗಳಿ 23 ರಂದು ಪೊಲೀಸರು ಮತ್ತು ಆದಿವಾಸಿಗಳ ನಡುವಿನ  ಸಂಘರ್ಷದಲ್ಲಿ     ಆದಿವಾಸಿಗಳ ಬಿಲ್ಲಿನ ಬಾಣಕ್ಕೆ ತುತ್ತಾಗಿ ಪ ಸೋನಮ್ ವಾಂಗಡೆ ಎಂಬ ಪೊಲೀಸ್ ಅಧಿಕಾರಿ ಪ್ರಾಣ ಕಳೆದುಕೊಂಡನು..ಇದಕ್ಕೆ ಪ್ರತಿಯಾಗಿ ಹೆಚ್ಚಿನ ಪೊಲೀಸ್ ತುಕುಡಿಯೊಂದಿಗೆ  ಮೇ 25 ರಂದು ಹಳ್ಳಿಗೆ ಆಗಮಿಸಿದ ಪೊಲೀಸರು  ಒಂಬತ್ತು ಮಂದಿ ಆದಿವಾಸಿಗಳನ್ನು ಬಂದೂಕಿನ  ಮೂಲಕ ಬಲಿ ತೆಗೆದುಕೊಂಡಿದ್ದರು. ಅಮಾಯಕರಾದ ಏಳು ಮಂದಿ ಮಹಿಳೆಯರು ಮತ್ತು ಇಬ್ಬರು ಮಕ್ಕಳನ್ನು ಕೊಂದು ಹಾಕುವುದರ ಮೂಲಕ ಹೋರಾಟದ ಹಾದಿಯನ್ನು ಹಿಂಸೆಗೆ ನೂಕಿದರು. ಅಂದು ಹಿಂಸೆಯ ಮೂಲಕ ನೆಲಕ್ಕೆ ಬಿದ್ದ ನೆತ್ತರು ಇಂದಿಗೂ ಸಹ ಭಾರತದ ವಿವಿಧ ರಾಜ್ಯಗಳಲ್ಲಿ ವಿಶೇಷವಾಗಿ ಛತ್ತೀಸ್ ಗಡ್, ಮಹಾರಾಷ್ಟ್ರ, ಆಂಧ್ರಪ್ರದೇಶ ರಾಜ್ಯಗಳಲ್ಲಿ ನೆತ್ತರಿನ ಹೊಳೆಯಾಗಿ ಹರಿಯುತ್ತಿದೆ.
ನ್ಯಾಯಯುತವಾಗಿ ಮತ್ತು ಸೈದ್ಧಾಂತಿಕವಾಗಿ ಕೃಷಿ ಕೂಲಿ ಕಾರ್ಮಿಕರು  ಕಿಸಾನ್ ಸಭಾ ಎಂಬ ಸಂಘಟನೆಯ ಮೂಲಕ ನಡೆಸುತ್ತಿದ್ದ ಹಕ್ಕಿನ ಹೋರಾಟಕ್ಕೆ ಈ ಮೂಲಕ ರಕ್ತ ಸಿಕ್ತ ಅಧ್ಯಾಯವೊಂದು ಸೇರ್ಪಡೆಗೊಂಡಿತು.  ಹಿಮಾಲಯದ ತಪ್ಪಲಿನ ತೆಹ್ರಿ ಪ್ರಾಂತ್ಯಕ್ಕೆ ಸೇರಿರುವ ನಕ್ಸಲ್ ಬಾರಿ ಎಂಬ ಹೆಸರಿ ಈ ಹಳ್ಳಿಯು ಪಶ್ಚಿಮಕ್ಕೆ ನೇಪಾಳದ ಗಡಿ ಪ್ರದೇಶವನ್ನು, ಮತ್ತು ಮಿಚಿ ಎಂಬ ನದಿಯನ್ನು ಹೊಂದಿದ್ದು, ತನ್ನ ಸುತ್ತ ಮುತ್ತಲಿನ ಹಸಿರು ಭತ್ತದ ಗದ್ದೆಗಳು ಮತ್ತು ಚಹಾ ತೋಟಗಳಿಂದ ಆವೃತ್ತಗೊಂಡಿದೆ.ಅತಿ ಹೆಚ್ಚು ಕೃಷಿ ಕೂಲಿ ಕಾರ್ಮಿಕರು ಮತ್ತು ಚಹಾ ತೋಟದ ಕಾರ್ಮಿಕರು ವಾಸಿಸುತ್ತಿರುವ ಈ ಪುಟ್ಟ ಹಳ್ಳಿಯಲ್ಲಿ ಇವೊತ್ತಿಗೂ ಸಹ ಬಡತನವೆಂಬುದು ತನ್ನ ಕಾಲು ಮುರಿದುಕೊಂಡು  ಅಲ್ಲಿಯೇ ತಳವೂರಿದೆ. 
ಚಾರು ಮುಂಜುಂದಾರ್ ಎಂಬ ಶ್ರೀಮಂತ ಜಮೀನ್ದಾರ್ ಕುಟುಂಬಕ್ಕೆ ಸೇರಿದ ಆದರ್ಶಯುವಕ ಮತ್ತು ಜಂಗಲ್ ಸಂತಾಲ್ ಎಂಬ ಬುಡಕಟ್ಟು ಜನಾಂಗದ ಯುವಕ ಈ ಇಬ್ಬರೂ ಸೇರಿ ಗುತ್ತಿಗೆ ಆಧಾರದ ಮೇಲೆ  ಜಮೀನ್ದಾರರ ಗದ್ದೆಗಳಲ್ಲಿ ಭತ್ತ ಬೆಳೆಯುತ್ತಿದ್ದ ಕೃಷಿ ಕಾರ್ಮಿಕರಿಗೆ ಭತ್ತದ ಫಸಲಿನಲ್ಲಿ ಹೆಚ್ಚಿನ ಪಾಲು ದೊರಕಿಸಿಕೊಡಲು ಶ್ರಿಮಂತ ಜಮೀನ್ದಾರರ ವಿರುದ್ಧ ಹುಟ್ಟು ಹಾಕಿದ ಹೋರಾಟವು   ನಕ್ಸಲ್ ಹೋರಾಟ ಎಂಬ ಹೆಸರು ಬರಲು ಕಾರಣವಾಯಿತು. ಇದರ ನೆನಪಿಗೆ ಎಂಬಂತೆ ನಕ್ಸಲ್ ಬಾರಿ ಹಳ್ಳಿಯ ಶಾಲೆಯ ಸಮೀಪ ಲೆನಿನ್, ಸ್ಟಾಲಿನ್, ಮಾವೊ, ಚಾರು ಮುಂಜುಂದಾರ್ ಹೀಗೆ ಅನೇಕ ಪ್ರತಿಮೆಗಳನ್ನು ನಿಲ್ಲಿಸಲಾಗಿದೆ. ಶಾಂತಿ ಮುಂಡ ಎಂಬ ಎಪ್ಪತ್ತು ನಾಲ್ಕು ವರ್ಷದ ವೃದ್ಧೆಯಾಗಿರುವ ಹೋರಾಟಗಾರ್ತಿಯು ಇಂದಿಗೂ ಜೀವಂತವಾಗಿದ್ದು  ಎದೆಯೊಳಗೆ ಅಂದಿನ ಹೋರಾಟದ ನೆನಪುಗಳನ್ನು ಹಸಿರಾಗಿ ಇರಿಸಿಕೊಂಡಿದ್ದಾಳೆ.
ಐವತ್ತು ಸುಧೀರ್ಘ ಹೋರಾಟದಲ್ಲಿ ಅನೇಕ ಹೋರಾಟಗಾರು ತಮ್ಮ ತ್ಯಾಗ ಬಲಿದಾನಗಳ ಮೂಲಕ ಇತಿಹಾಸ ಸೇರಿ ಹೋಗಿದ್ದಾರೆ. ಇವರಲ್ಲಿ ಪ್ರಮುಖವಾಗಿ ಎದ್ದು ಕಾಣುವ ಹೆಸರುಗಳೆಂದರೆ, ಪಶ್ಚಿಮ ಬಂಗಾಳದ ಚಾರು ಮುಜಂದಾರ್, ಕನು ಸನ್ಯಾಲ್, ಜಂಗಲ್ ಸಂತಾಲ್,  ಮತ್ತು ಆಂಧ್ರಪ್ರದೇಶದ ವೆಂಪಟಾಪು ಸತ್ಯನಾರಾಯಣ ಮತ್ತು ಪಂಚಡಿ ಕೃಷ್ಣಮೂರ್ತಿ, ಆದಿಬಟ್ಲಂ ಕೈಲಾಸಂ, ಕೊಂಡಪಲ್ಲಿ ಸೀತಾರಾಮಯ್ಯ, ಸತ್ಯಮೂರ್ತಿ, ಮಲ್ಲೋಜಲ ಕೋಟೇಶ್ವರ ರಾವ್(,ಕಿಷನ್ ಜಿ) ರಾಮಕೃಷ್ಣ   ಹೀಗೆ ಅನೇಕರನ್ನು ಹೆಸರಿಸಬಹುದು.
ಈ ನಾಯಕರೆಲ್ಲಾ ತಮ್ಮ ಸೈದ್ಧಾಂತಿಕ ಹೋರಾಟ ಮತ್ತು ಹಲವು ಭಿನ್ನಾಭಿಪ್ರಾಯಗಳ ನಡುವೆಯೂ ಸರ್ಕಾರ ಮತ್ತು ಸಮಾಜದ ಮುಖ್ಯವಾಹಿನಿಯ ಗಮನಕ್ಕೆ ಬಾರದೆ ಉಳಿದು ಹೋಗಿದ್ದ ಆದಿವಾಸಿಗಳು ಮತ್ತು ಶ್ರೀಮಂತ ಜಮೀನ್ದಾರರ ಕಪಿಮುಷ್ಟಿಯಲ್ಲಿ ನಲುಗಿ ಹೋಗಿದ್ದ ಕೃಷಿ ಕಾರ್ಮಿಕರ ಬವಣೆಗಳತ್ತ ಎಲ್ಲರೂ ತಿರುಗಿ ನೋಡುವಂತೆ ನೋಡುವಂತೆ ಮಾಡಿದ್ದು ಈ ಹೋರಾಟದ ಏಕೈಕ ಯಶಸ್ಸು ಎಂದರೆ ತಪ್ಪಾಗಲಾರದು.
ಐವತ್ತು ವರ್ಷಗಳ ಸುಧೀರ್ಘ ಇತಿಹಾಸ ವಿರುವ ನಕ್ಸಲ್ ಹೋರಾಟ ಕಳೆದ ಎರಡು ದಶಕಗಳ ಹಿಂದೆಯೇ ಹಂತ ಹಂತವಾಗಿ ದಾರಿ ತಪ್ಪತೊಡಗಿತು. ನಾಯಕರ ನಡುವಿನ ಆಂತರೀಕ ಭಿನ್ನಾಭಿಪ್ರಾಯ, ಹೋರಾಟವನ್ನು ಬದ್ಧತೆ ಮತ್ತು ಕಳಕಳಿಯಿಂದ ಮುನ್ನೆಡೆಸುತ್ತಿದ್ದ ನಾಯಕರ ಸಾವು ಹಾಗೂ ಕೆಲವರು ಅನಾರೋಗ್ಯ ಮತ್ತು ಇನ್ನಿತರೆ ಕಾರಣಗಳಿಂದ ಭ್ರಮನಿರಸನಗೊಂಡು ಚಳುವಳಿಯಿಂದ ವಿಮುಖರಾಗತೊಡಗಿದು. ಇದನ್ನು ದುರುಪಯೋಗಪಡಿಸಿಕೊಂಡ ಹಾಗೂ ಯಾವುದೇ ರೀತಿಯ ಶಿಕ್ಷಣ ಅಥವಾ ಸೈದ್ಧಾಂತಿಕ ಹಿನ್ನಲೆಯಿಲ್ಲದೆ ಮೂರು ದಶಕಗಳ ಹಿಂದೆ ಹೋರಾಟಕ್ಕೆ ದುಮಿಕಿದ ಆದಿವಾಸಿ ಯುವಕರು ಈಗ ನಾಯಕರಾಗಿ ಬಂದೂಕನ್ನು ಕೈಗೆತ್ತಿಕೊಂಡಿದ್ದಾರೆ.. ಹಾಗಾಗಿ ಈಗಿನ ನಕ್ಸಲ್ ಹೋರಾಟವು ಹಿಂಸೆಯ ಪ್ರತಿರೂಪವಾಗಿದೆ.

ಈಗ ಹಿಂಸೆಯ ಹಾದಿಯನ್ನು ತುಳಿದಿರುವ ನಕ್ಸಲ್ ಹೋರಾಟವನ್ನು ಗಮನಿಸಿದರೆ ಅಥವಾ ಐವತ್ತು ವರ್ಷಗಳ ಹಿಂದೆ ಆ ನಾಯಕರು ತಮ್ಮ ಬದುಕನ್ನು ತ್ಯಾಗ ಮಾಡಿದ ರೀತಿಯನ್ನು ಅವಲೋಕಿಸಸಿದರೆ, ಮನಸ್ಸು ಮೌನದಿಂದ ಮುದುಡಿ ಹೋಗುತ್ತದೆ. ನಕ್ಸಲ್ ಬಾರಿ ಹಳ್ಳಿಯ ಘಟನೆಯಿಂದ  ಹೋರಾಟವನ್ನು ತೀವ್ರಗೊಳಿಸಿದ ಚಾರು ಮುಜುಂದಾರ್ ನನ್ನು 1972 ರಲ್ಲಿ ಬಂಧಿಸಿದ ಕೊಲ್ಕತ್ತ ನಗರದ ಪೊಲೀಸರು ಅಲ್ಲಿನ   ( ಲಾಲ್  ಬಜಾರ್ ಎಂಬ ಠಾಣೆಯಲ್ಲಿ ಜುಲೈ 28 ರಂದು ಹಿಂಸೆಯನ್ನು ನೀಡಿ ಕೊಂದು ಹಾಕಿದರು. ಅವರ ಪತ್ನಿ ಶೀಲಾ ಮುಂಜುಂದಾರ್ ಒಬ್ಬ ಎಲ್.ಐ.ಸಿ. ಏಜೆಂಟ್ ಆಗಿ ಕೆಲಸ ಮಾಡುತ್ತಾ  ತಮ್ಮ ಇಬ್ಬರು ಮಕ್ಕಳನ್ನು ಸಾಕಿ ಬೆಳಸಿದರು. ಅಜಿತ್ ಮುಜಂದಾರ್ ಸಿಲುಗುರಿ ಪಟ್ಟಣದಲ್ಲಿ ವಾಸವಾಗಿದ್ದುಕೊಂಡು ಚಹಾ ತೋಟದ ಕಾರ್ಮಿಕರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಮಗಳು ಡಾ.ಅನಿತಾ ಮುಂಜುಂದಾರ್ ಕೊಲ್ಕತ್ತ ನಗರದಲ್ಲಿ ವೈದ್ಯೆಯಾಗಿ ಕಾರ್ಯನಿರ್ವಹಿಸುತ್ತಾ ಅವರೂ ಸಹ ಕಾರ್ಮಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಜಂಗಲ್ ಸಂತಾಲ್ ಎಂಬ ನಾಯಕ ತನ್ನ ಬಹಳಷ್ಟು ಆಯಸ್ಸನ್ನು ಸೆರೆಮನೆಯಲ್ಲಿ ಕಳೆದು ಬಿಡುಗಡೆಯಾಗಿ ಹೊರಬರುವ ವೇಳೆಗೆ ಸಂಘಟನೆಯು ಹೊಡೆದು ಹಲವು ಚೂರುಗಳಾಗಿ ಸಿಡಿದು ಹೋಗಿತ್ತು. ಇದರಿಂದ ಭ್ರಮನಿರಸನಗೊಂಡ ಸಂತಾಲ್ ನಾಲ್ವರು ಪತ್ನಿಯರನ್ನು ಸಾಕಲಾರದೆ, ಕುಡಿತದ ಚಟಕ್ಕೆ ಬಲಿಯಾಗಿ ಅನಾಮಿಕನಂತೆ ಸತ್ತು ಹೋದನು.


ವೃತ್ತಿಯಲ್ಲಿ ಸರ್ಕಾರಿ ನೌಕರನಾಗಿದ್ದು, ಚಾರು ಮುಂಜಂದಾರ್ ಸ್ನೇಹದಿಂದ ಹೋರಾಟಕ್ಕೆ  ದುಮುಕಿದ್ದ ಕನು ಸನ್ಯಾಲ್ ಹಿಂಸೆಯ ಹೋರಾಟವನ್ನು ವಿರೋಧಿಸುತ್ತಾ ಹಲವು ದಶಕಗಳ ಕಾಲ ಸಂಘಟನೆಯನ್ನು ಜೀವಂತವಿಟ್ಟಿದ್ದರು. ಪಶ್ಚಿಮ ಬಂಗಳದ ಸರ್ಕಾರ ಎಲ್ಲಾ ಮೊಕದ್ದಮೆಗಳನ್ನು ಹಿಂತೆಂಗೆದುಕೊಂಡು ಅವರನ್ನು ಬಿಡುಗಡೆಗೊಳಿಸಿದಾಗ ಸಿಲುಗುರಿಯ ತನ್ನ ಹಳ್ಳಿಗೆ ಹೋಗಿ ಗುಡಿಸಲು ಕಟ್ಟಿಕೊಂಡು , ಚಹಾ ತೋಟದ ಕಾರ್ಮಿಕರು ಪ್ರತಿ ತಿಂಗಳು ಕೊಡುತ್ತಿದ್ದ ಆರುನೂರು ರೂಪಾಯಿಗಳ ದೇಣಿಗೆಯಲ್ಲಿ ಎರಡು ಊಟ ಮತ್ತು ಎರಡು ಚಹಾ ದೊಂದಿಗೆ ಬದುಕಿದ್ದರು. ವೃದ್ಧಾಪ್ಯದ ದಿನಗಳಲ್ಲಿ ಕಾಯಿಲೆಗಳಿಗೆ ಔಷಧ ಕೊಳ್ಳಲು ಹಣವಿಲ್ಲದೆ, ಯಾರನ್ನೂ ಆಶ್ರಯಿಸಬಾರದು ಎಂದು 2010 ರ ಮಾರ್ಚ್ ತಿಂಗಳಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡರು.ಇದಕ್ಕೂ ಮುನ್ನ ಆಗಿನ ಎಡರಂಗ ಪಕ್ಷದ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಸರ್ಕಾರದಿಂದ ತಿಂಗಳಿಗೆ ಮೂರು ಸಾವಿರ ರುಪಾಯಿ ವೃದ್ಧಾಪ್ಯ ವೇತನವನ್ನು ಮಂಜೂರು ಮಾಡಿದಾಗ ಕನು ಸನ್ಯಾಲ್ ಅದನ್ನು ನಿರಾಕರಿಸಿದ್ದರು. “ಯಾವ ವ್ಯವಸ್ಥೆಯ ವಿರುದ್ಧ ನಾನು ಹೋರಾಟ ಮಾಡಿದ್ದನೋ, ಅಂತಹ ಸರ್ಕಾರದ ಬಿಕ್ಷೆ ನನಗೆ ಬೇಕಾಗಿಲ್ಲ” ಎಂಬಂತಹ ಧೀರತನದ ಮಾತನ್ನಾಡಿದ್ದರು.
ಇನ್ನೂ ಮಲ್ಲೋಜಲ ಕೋಟೇಶ್ವರ ರಾವ್ ಎಂಬ ಮೂಲ ಹೆಸರಿನ ಹಾಗೂ ಹೋರಾಟದಲ್ಲಿ ಕಿಶನ್ ಜಿ. ಎಂಬ ನಾಯಕ ಮೂಲತಃ ಆಂಧ್ರಪ್ರದೇಶದ ಕರೀಂನಗರ ಜಿಲ್ಲೆಯ ಪೆದ್ದಂಪಲ್ಲಿ ಎಂಬ ಹಳ್ಳಿಯವರು. ವಿಜ್ಞಾನ ಪದವೀಧರ ಆಗಿದ್ದ ಇವರು 1973ರಲ್ಲಿ  ನಕ್ಸಲ್ ಹೋರಾಟಕ್ಕೆ ದುಮುಕಿ ನಿರಂತರ ಮೂರು ದಶಕಗಳ ಕಾಲ ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್ ರಾಜ್ಯದಲ್ಲಿ ಹೊರಾಟವನ್ನು ಮುನ್ನಡೆಸಿದವರು .2010 ರಲ್ಲಿ ಟಾಟಾ ಕಂಪನಿ ಪಶ್ಚಿಮ ಬಂಗಾಳದ ನಂದಿ ಮತ್ತು ಸಿಂಗೂರ್ ಗ್ರಾಮದಲ್ಲಿ ನ್ಯಾನೊ ಕಾರು ತಯಾರಿಕಾ ಘಟಕಕ್ಕೆ ರೈತರ ಭೂಮಿಯನ್ನು ಕಸಿದಾಗ ಕಂಪನಿಯನ್ನು ಅಲ್ಲಿಂದ ಕಾಲ್ತೆಗೆಯುವಂತೆ ಮಾಡುವುದರ ಜೊತೆಗೆ, ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೇಸ್ ಗೆ ಬೆಂಬಲ ವ್ಯಕ್ತ ಪಡಿಸಿ, 35 ವರ್ಷಗಳ ಅಧಿಕಾರದಲ್ಲಿ ಸಿ.ಪಿ.ಎಂ. ಪಕ್ಷವನ್ನು ಅಧಿಕಾರದಿಂದ ಕೆಳೆಗಿಳಿಯುವಂತೆ ಮಾಡಿದರು. ನಂತರ 2011 ರ ನವಂಬರ್ ತಿಂಗಳಿನಲ್ಲಿ ಅದೇ ಪಶ್ಚಿಮ ಬಂಗಾಳದ ಅರಣ್ಯ ಪ್ರದೇಶದಲ್ಲಿ ಕೇಂದ್ರ ನಕ್ಸಲ್ ನಿಗ್ರಹ ಪಡೆಯ ಗುಂಡಿಗೆ ಬಲಿಯಾದರು.
ಆ ವೇಳೆಗೆ ಮುಖ್ಯಮಂತ್ರಿಯಾಗಿದ್ದ ಮಮತಾ ಬ್ಯಾನರ್ಜಿ ಕಿಸನ್ ಜಿ ಶವವನ್ನು ವಿಶೇಷ ಅಂಬುಲೇನ್ಸ್  ಮೂಲಕ  ಆಂಧ್ರದ ಅವರ ಹುಟ್ಟೂರಿಗೆ ಕಳಿಸಿಕೊಟ್ಟಿದ್ದರು. ಹೋರಾಟಗಾರನಾಗಿ ಹುಟ್ಟೂರು ತೊರೆದಿದ್ದ ಕಿಶನ್ ಜಿ. 38 ವರ್ಷಗಳ ನಂತರ ಹೆಣವಾಗಿ ವಾಪಸ್ ಹಳ್ಳಿಗೆ ಬಂದಾಗ. ಅವರ ಅಂತ್ಯಕ್ರಿಯೆಯಲ್ಲಿ ಆ ದಿನ 45 ಸಾವಿರ ಮಂದಿ ಪಾಲ್ಗೊಂಡಿದ್ದರು. ಹೀಗೆ ಕೊಂಡಪಲ್ಲಿ, ಅವರ ಸಹವರ್ತಿ ಸತ್ಯಮುರ್ತಿ, ಮುಂತಾದ ಅನೇಕ ನಾಯಕರು  ತಮ್ಮ ಜೀವವನ್ನು ಮತ್ತು ಬದುಕನ್ನು ತ್ಯಾಗ ಮಾಡಿದ ನಕ್ಸಲ್ ಹೋರಾಟ ಈಗ ಮೂರಾ ಬಟ್ಟೆಯಾಗಿದೆ.( ಆಸಕ್ತರು  ಭಾರತದ ನಕ್ಸಲ್ ಇತಿಹಾಸ ಕುರಿತು ನಾನು ಬರೆದಿರುವ ಹಾಗೂ 2013 ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ “ ಎಂದೂ ಮುಗಿಯದ ಯುದ್ಧ’ ಎಂಬ ಕೃತಿಯನ್ನು ಗಮನಿಸಬಹುದು. ಪ್ರಕಾಶಕರು- ಸಪ್ನ ಬುಕ್ ಹೌಸ್, ಬೆಂಗಳೂರು)
ಮೊನ್ನೆ ಮೇ 25 ರಂದು ನಕ್ಸಲ್ ಬಾರಿ ಹಳ್ಳಿಯ ಪ್ರಾಥಮಿಕ ಶಾಲೆಯ ಬಳಿ ನಿಲ್ಲಿಸಲಾಗಿರುವ ನಾಯಕರ ಪ್ರತಿಮೆಗಳಿಗೆ ಹೊಸದಾಗಿ ಕೆಂಪು ಬಣ್ಣ ಬಳಿದು, ಆ ದಿನ ಸಿಲುಗುರಿ ಹಾಗೂ ಸುತ್ತಮುತ್ತಲಿನ ಕಾರ್ಮಿಕರು ಸಭ ಸೇರಿ ಹುತಾತ್ಮ ನಾಯಕರಿಗೆ ಗೌರವ ಸಲ್ಲಿಸಿದರು. ಅದಕ್ಕೂ ಮುನ್ನ ಕಳೆದ ತಿಂಗಳು ನಕ್ಸಲ್ ಬಾರಿ ಹಳ್ಳಿಗೆ ಭೇಟಿ ನೀಡಿದ್ದ ರಾಷ್ಟ್ರೀಯ ಬಿ.ಜೆ.ಪಿ. ಅಧ್ಯಕ್ಷ ಅಮಿತಾ ಷಾ ಅವರ ಗಮನ ಸೆಳೆಯಲು ಗೋಡೆಯ ಮೇಲೆ ಬರೆಯಲಾಗಿದ್ದ ಎಲ್ಲಾ  ಬರಹಗಳನ್ನು ಸುಣ್ಣ ಬಳಿದು ಅಳಿಸಿ ಹಾಕಲಾಯಿತು. ಒಂದು ಉದಾತ್ತ  ಧ್ಯೇಯದೊಂದಿಗೆ  ಆರಂಭಗೊಂಡು ಹಿಂಸೆಯ ಹಾದಿಯಲ್ಲಿ ಸಾಗಿ ಅಂತ್ಯಗೊಂಡಂತೆ ಕಾಣುತ್ತಿರುವ ನಕ್ಸಲ್ ಹೋರಾಟವನ್ನು ಯಶಸ್ವಿ ಹೋರಾಟ ಎಂದು ಕರೆಯಬೇಕೆ? ಅಥವಾ ದುರಂತದ ಹೋರಾಟ ಎನ್ನಬೇಕೆ? ಇದು ಈಗ ನಮ್ಮ ಮುಂದಿರುವ ಪ್ರಶ್ನೆಯಾಗಿದೆ.

(ಚಿತ್ರದಲ್ಲಿರುವವರು, ಮೇಲಿನಿಂದ ಕೆಳಕ್ಕೆ 1) ಚಾರುಮುಜುಂದಾರ್, 2) ಕನುಸನ್ಯಾಲ್, 3) ಕಿಶನ್ ಜಿ)

(ಕರಾವಳಿ ಮುಂಜಾವು ದಿನಪತ್ರಿಕೆಯ "ಜಗದಗಲ" ಅಂಕಣಕ್ಕೆ ಬರೆದ ಲೇಖನ)

No comments:

Post a Comment