ಶುಕ್ರವಾರ, ಮೇ 5, 2017

ಕುಡಿಯುವ ನೀರಿಗೆ ಪರ್ಯಾಯ ವ್ಯೆವಸ್ಥೆ ಪಾತಾಳಗಂಗೆಯಲ್ಲ, ಪ್ರಾಚೀನ ಪುಷ್ಕರಣಿಗಳು ಮಾತ್ರ


ಕರ್ನಾಟಕದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಕುಡಿಯುವ ನೀರಿನ ಅಭಾವ ತಲೆದೋರಿದೆ. ಮಲೆನಾಡಿನ ಪ್ರದೇಶವವೂ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನೀರಿನ ಸೆಲೆಗಳು ಬತ್ತಿಹೋಗಿವೆ. ಜಲಮೂಲಗಳ ತಾಣಗಳಾದ ಕೆರೆ ಕಟ್ಟೆಗಳು ಹೂಳಿನಿಂದ ತುಂಬಿ ಬರಿದಾಗಿವೆ. ಕೊಳವೆ ಬಾವಿಗಳಲ್ಲಿ ಶೇಕಡ 80 ರಷ್ಟು ಭಾಗ ಒಣಗಿ ನಿಂತಿವೆ. ಗ್ರಾಮೀಣ ಪ್ರದೇಶಗಳಲ್ಲಿ ಜನರಷ್ಟೇ ಅಲ್ಲ, ಪಶು ಪ್ರಾಣಿಗಳು ಸಹ ನೀರಿಗಾಗಿ ಪರಿತಪಿಸುತ್ತಿವೆ. ಇಂತಹ ಸಂಕಷ್ಟದ ಸಮಯದಲ್ಲಿ ನಮ್ಮ ಕೆರೆ ಕಟ್ಟೆಗಳನ್ನು ಹಾಗೂ ಪ್ರಾಚೀನ ಕಾಲದ ಕಲ್ಯಾಣಿ ಅಥವಾ ಪುಷ್ಕರಣಿಗಳ  ಹೂಳೆತ್ತಿ ಅವುಗಳನ್ನು ಪುನಶ್ಚೇತನಗೊಳಿಸಬೇಕು ಎಂಬ ಪರಿಜ್ಞಾನ ನಮ್ಮ ಜನ ಸಮುದಾಯದಲ್ಲಿ  ನಿಧಾನವಾಗಿ ಮೂಡಿ ಬರುತ್ತಿದೆ.
ಇಂತಹ ಸಂಕಷ್ಟದ ಸಮಯದಲ್ಲಿ ಕನ್ನಡ ಚಿತ್ರರಂಗದ ನಟ ಯಶ್ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಹಳ್ಳಿಗಳಲ್ಲಿರುವ  ಕೆರೆ ಕಟ್ಟೆಗಳ ಹೂಳೆತ್ತಲು ಕೈ ಜೋಡಿಸಿದ್ದಾರೆ. ಇವುಗಳ ಜೊತೆಗೆ ಸರ್ಕಾರದ ನೆರವಿಗಾಗಿ ಕಾಯದೆ ಗ್ರಾಮಸ್ಥರು ತಾವೇ ಶ್ರಮದಾನದ ಮೂಲಕ ಕೆರೆ ಕಟ್ಟೆಗಳ ಹೂಳು ತೆಗೆದು ನೀರು ಸಂಗ್ರಹಿಸಲು ಮುಂದಾಗಿದ್ದಾರೆ. ಶಿರಸಿ ನಗರದ ಆನೆಹೊಂಡವನ್ನು ಅಲ್ಲಿನ ನಾಗರೀಕರು ಸ್ವಚ್ಛಗೊಳಿಸುವುದರ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಪ್ರಕೃತಿಯ ಕೊಡುಗೆಗಳಲ್ಲಿ ಅತ್ಯಮೂಲ್ಯವಾದ ಮಳೆ ನೀರನ್ನು ಸಂಗ್ರಹಿಸಲು ಉದಾಸೀನ ತೋರುವುದರ ಜೊತೆಗೆ, ನೀರಿನ ತಾಣಗಳನ್ನು ಸಂರಕ್ಷಿಸುವಲ್ಲಿ ನಾವು ತೋರಿದ ಸೋಮಾರಿತನ ಫಲವೆಂಬಂತೆ ಎಲ್ಲಡೆ ನೀರಿನ ಹಾಹಾಕಾರ ಎದ್ದಿದೆ. ಜೊತೆಗೆ ಇದೀಗ ನೀರಿನ ಮಹತ್ವ ಕೂಡ ಅರಿವಾಗಿದೆ.
ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಕುಡಿಯುವ ನೀರಿಗಾಗಿ ಭೂಮಿಯಿಂದ ಹತ್ತಾರು ಕಿಲೋಮೀಟರ್ ಕೆಳಗಿರುವ ಪಾತಾಳದ ನೀರನ್ನು ಮೇಲೆತ್ತಲು ಸರ್ಕಾರದ ವತಿಯಿಂದ ಯೋಜನೆ ರೂಪಿಸಲಾಗುತ್ತಿದೆ ಎಂಬ ಅವಿವೇಕದ ಮಾತನ್ನು ನಮ್ಮ ಗ್ರಾಮೀಣಾಭಿವೃದ್ಧಿ ಖಾತೆಯ ಸಚಿವ ಹೆಚ್.ಕೆ.ಪಾಟೀಲ್ ಹೇಳಿದ್ದಾರೆ. ಇದಕ್ಕೆ ನಾಡಿನಾದ್ಯಂತ ಪ್ರಜ್ಞಾವಂತರು ಹಾಗೂ ಇಲ್ಲಿನ ನೆಲ-ಜಲದ ಬಗ್ಗೆ ಕಾಳಜಿಯುಳ್ಳ ಪರಿಸರವಾದಿಗಳು ತೀವ್ರವಾದ ಪ್ರತಿಭಟನೆ ಸಲ್ಲಿಸಿದ್ದಾರೆ. ಅಮೇರಿಕಾದ ಸಂಸ್ಥೆಯೊಂದು ಇಂತಹ ಭೂಮಿಯ ಒಡಲು ಬಗೆಯುವ ಪ್ರಸ್ತಾವನೆಯನ್ನು ಕರ್ನಾಟಕದ ಮುಂದಿಟ್ಟು ಹಲವು ಕೋಟಿ ರೂಪಾಯಿಗಳ ಯೋಜನೆಯನ್ನು ಸಿದ್ಧಪಡಿಸಿದೆ. ಭೂಮಿಯ ಅಡಿಯಲ್ಲಿ ಸಾಗರೋಪಾದಿಯಲ್ಲಿ ನೀರು ಇರುವುದು ನಿಜ. ಆದರೆ ಈ ನೀರು ಕುಡಿಯಲು ಯೋಗ್ಯ ಎಂಬುದಕ್ಕೆ ಯಾವುದೇ ಖಾತ್ರಿಯಲ್ಲ.  ಈ ಹಿಂದೆ ಮೋಡಗಳಿಂದ ಮಳೆ ತರಿಸುವ ನೆಪದಲ್ಲಿ ದುಡ್ಡು ಎತ್ತುವ ಯೋಜನೆಯೊಂದನ್ನು ಕರ್ನಾಟಕದಲ್ಲಿ ಜಾರಿಗೆ ತರಲಾಗಿತ್ತು. ಈಗಿನ ರಾಜಕಾರಣಿಗಳಲ್ಲಿ ಸಭ್ಯ, ಸಜ್ಜನ ಮತ್ತು ಪ್ರಜ್ಞಾವಂತ ರಾಜಕಾರಣಿ ಎನಿಸಿರುವ ಹೆಚ್.ಕೆ. ಪಾಟೀಲರು ಇಂತಹ ಮೂರ್ಖ ಯೋಜನೆಗೆ ಅನುಮತಿ ನೀಡಲು ಹೊರಟಿರುವುದು ನಿಜಕ್ಕೂ ಆಶ್ಚರ್ಯಕರ ಸಂಗತಿ.
ಕುಡಿಯುವ ನೀರಿನ ಬರ ನೀಗಿಸಲು, ಅರಬ್ ಮತ್ತು ಇಸ್ರೇಲ್ ಮುಂತಾದ ರಾಷ್ಟ್ರಗಳಲ್ಲಿ ಸಮುದ್ರದ ಉಪ್ಪು ನೀರನ್ನು ಕುಡಿಯುವ ನೀರಾಗಿ ಪರಿವರ್ತಿಸುವ ಘಟಕಗಳು ಸ್ಥಾಪನೆಯಾಗಿರುವುದು ಸಚಿವರಿಗೆ ತಿಳಿದಂತೆ ಕಾಣುವುದಿಲ್ಲ. ನಮ್ಮ ನೆರೆಯ ತಮಿಳುನಾಡಿನ ರಾಜಧಾನಿ ಚೆನ್ನೈ ನಗರದಲ್ಲಿ ಇಂತಹ ಘಟಕಗಳು ಈಗಾಗಲೇ ಅಸ್ತಿತ್ವಕ್ಕೆ ಬಂದಿವೆ.ಸಮುದ್ರದ ನೀರನ್ನು ಸಂಸ್ಕರಿಸುವುದು ಕೊಂಚ ದುಬಾರಿ ಎನಿಸಿದರೂ ಸಹ ಪ್ರತಿ ವರ್ಷ ಪುಕ್ಕಟೆಯಾಗಿ ಧರೆಗೆ ಬಿದ್ದು ಹರಿದು ಹೋಗುವ ಮಳೆ ನೀರನ್ನು ಹಿಡಿದಿಡಲು ನಾವು ಏನು ಕ್ರಮ ಕೈಗೊಂಡಿದ್ದೀವಿ ಎಂಬುದರ ಕುರಿತು ಸಚಿವರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.
ಭಾರತದಲ್ಲಿ ಅತ್ಯಂತ ಕಡಿಮೆ ಮಳೆ ಬೀಳುವ ರಾಜ್ಯಗಳು ಎನಿಸಿಕೊಂಡಿರುವ ಗುಜರಾತ್ ಮತ್ತು ರಾಜಸ್ಥಾನದಲ್ಲಿ ಅಲ್ಲಿನ ಜನತೆ ಮಳೆ ನೀರು ಸಂಗ್ರಹಿಸಿಕೊಂಡು ಬದುಕು ಕಟ್ಟಿಕೊಂಡಿರುವ ಸಾಹಸಮಯ ಯಶೋಗಾಥೆ ಕರ್ನಾಟಕಕ್ಕೆ ಮಾತ್ರವಲ್ಲ, ಇಡೀ ಭಾರತ ದೇಶಕ್ಕೆ ಮಾದರಿಯಾಗುವಂತಹದ್ದು. ಇತ್ತೀಚೆಗಿನ ದಿನಗಳಲ್ಲಿ ಗ್ರಾಮಪಂಚಾಯಿತಿಗಳಿಂದ ಹಿಡಿದು, ತಾಲ್ಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಹಾಗೂ ವಿಧಾನಸಭೆಯ ಜನಪ್ರತಿನಿಧಿಗಳು ಅಧ್ಯಯನ ಪ್ರವಾಸದ ಹೆಸರಿನಲ್ಲಿ ಗೋವಾದಿಂದ ಹಿಡಿದು ಥಾಯ್ಲೆಂಡ್, ಬಾಂಕಾಕ್ ಹಾಗೂ ಮಲೇಷಿಯಾಗಳಿಗೆ ಪ್ರವಾಸ ಹೋಗಿ ಅಲ್ಲಿನ ಬಾರ್ ಗಳಲ್ಲಿ  ಕುಡಿದು ಕುಪ್ಪಳಿಸಿ ಬರುತ್ತಿದ್ದಾರೆ. ಇಂತಹ ಮಾನಗೆಟ್ಟ ಮೋಜಿನ ಪ್ರವಾಸಕ್ಕೆ ಕರ್ನಾಟಕ ಸರ್ಕಾರ ಕೊಟ್ಯಾಂತರ ರೂಪಾಯಿಗಳನ್ನು ವ್ಯಯ ಮಾಡುತ್ತಿದೆ. ಮೋಜಿಗಾಗಿ ಹಾತೊರೆಯುವ ಜನಪ್ರತಿನಿಧಿಗಳೆಂಬ ಅವಿವೇಕಿಗಳನ್ನು ಗುಜರಾತ್ ಮತ್ತು ರಾಜಸ್ಥಾನ ರಾಜ್ಯಗಳಿಗೆ ಪ್ರವಾಸ ಕಳಿಸಿದರೆ, ಅವರ ತಲೆಯಲ್ಲಿ ತುಂಭಿರುವ ಅಜ್ಞಾನವೆಂಬ ಹೂಳು  ಖಾಲಿಯಾಗಿ ಸರ್ಕಾರ ವ್ಯಯ ಮಾಡುವ ಹಣಕ್ಕೆ ಒಂದಿಷ್ಟು ಗೌರವ ಬರುತ್ತದೆ.
ಇಡೀ ಜಗತ್ತಿನಾದ್ಯಂತ ಎಲ್ಲಿ ಗಮನಿಸಿದರೂ ಸಹ ಮನುಷ್ಯನ ನಾಗರೀಕತೆ ಉಗಮವಾಗಿರುವುದು  ನದಿ ತೀರದಲ್ಲಿ ಎಂಬುದು ನಮಗೆ ಇತಿಹಾಸದ ಪಠ್ಯಗಳಿಂದ ತಿಳಿಯುತ್ತದೆ. ಮನುಷ್ಯನ ಮೂಲಭೂತ ಬೇಡಿಕೆಗಳಲ್ಲಿ ಆಹಾರದಷ್ಟೇ ಮಹತ್ವ ಪಡೆದಿದ್ದ ಕುಡಿಯುವ ನೀರಿನ ಕುರಿತು ನಮ್ಮ ಪೂರ್ವಿಕರಿಗೆ ಅಪಾರವಾದ ತಿಳುವಳಿಕೆಯಿತ್ತು. ಹಾಗಾಗಿ ಇಡೀ ಸಮುದಾಯಕ್ಕೆ ನೆರವಾಗುವ ದೃಷ್ಟಿಕೋನದಿಂದ ತಾವು ನಿರ್ಮಿಸುತ್ತಿದ್ದ ದೇವಾಲಯಗಳ ಬಳಿ ಬಾವಿಗಳನ್ನು ಮತ್ತು ಪುಷ್ಕರಣಿಗಳನ್ನು ನಿರ್ಮಿಸುತ್ತಿದ್ದರು. ಕ್ರಿ.ಶ. ಐದನೆಯ ಶತಮಾನದಿಂದ ಆಚರಣಗೆ ಬಂದ ಈ ಸಂಪ್ರದಾಯ ದೇಶಾದ್ಯಂತ ರಾಜ್ಯಗಳನ್ನಾಡಿದ ಅನೇಕ ರಾಜಮನೆತನಗಳ ಮೂಲಕವೂ ಮುಂದುವರಿಯಿತು. ಅತಿ ಕಡಿಮೆ ಬೀಳುವ ಉತ್ತರ ಭಾರತದ ಪೂರ್ವ ಭಾಗದ ರಾಜಸ್ಥಾನ, ಗುಜರಾತ್, ಮಧ್ಯಭಾರತದ ಮಧ್ಯಪ್ರದೇಶ ಮತ್ತು ಉತ್ತರದ ದೆಹಲಿ ನಗರಗಳು ಸೇರಿದಂತೆ ದಕ್ಷಿಣ ಭಾರತದ ಕರ್ನಾಟಕ, ಆಂಧ್ರ, ತಮಿಳುನಾಡು ಮತ್ತು ಕೇರಳದಲ್ಲಿ ಸಮುದಾಯಕ್ಕೆ ವರ್ಷಪೂರ್ತಿ ನೀರು ಒದಗಿಸುತ್ತಿದ್ದ ಪುಷ್ಕರಣಿಗಳು ಹಾಗೂ ನೂರಾರು ಮೆಟ್ಟಿಲುಗಳಿರುವ ತೆರದ ಬಾವಿಗಳನ್ನು ನಾವು ಕಾಣಬಹುದು. ಇವೆಲ್ಲವೂ ಮಳೆ ನೀರನ್ನು ಸಂಗ್ರಹಿಸಿ ಇಡುವ ಅಪೂರ್ವ ಜಲತಾಣಗಳಾಗಿದ್ದವು. ಜೊತೆಗೆ ಭೂಮಿಯ ಅಂತರ್ಜಲ ಹೆಚ್ಚಿಸುವಲ್ಲಿ ಸಹಕಾರಿಯಾಗಿದ್ದವು.
ಹಿಂದಿಯಲ್ಲಿ ಬಾವಲಿ, ಬಾವಡಿ, ಗುಜರಾತಿಯಲ್ಲಿ ವಾವ್, ಮರಾಠಿಯಲ್ಲಿ ಬರವ್ ಎಂತಲೂ ಕನ್ನಡದಲ್ಲಿ ಕಲ್ಯಾಣಿ ಅಥವಾ ಪುಷ್ಕರಣಿ ಎಂದು ಕರೆಸಿಕೊಳ್ಳುತ್ತಿದ್ದ ಇಂತಹ ನೂರಾರು ಜಲತಾಣಗಳನ್ನು ಇಂದಿಗೂ ಸಹ ನಾವು ಎಲ್ಲೆಡೆ ಕಾಣಬಹುದು. ರಾಜಸ್ಥಾನದಲ್ಲಿ ಪ್ರತಿಯೊಂದು ಹಳ್ಳಿಯಲ್ಲೂ ತಮ್ಮ ತಮ್ಮ ಮನೆಗಳ ಬಳಿ ವರ್ಷ ಪೂರ್ತಿ ಬಳಕೆಗೆ ಆಗುವಷ್ಟು ಮಳೆ ನೀರನ್ನು ಹಿಡಿದಿಟ್ಟು ಕಾಪಾಡಿಕೊಳ್ಳುವ ವ್ಯೆವಸ್ಥೆ ಜಾರಿಯಲ್ಲಿದೆ. ಇದಲ್ಲದೆ, ರೈತರು ತಮ್ಮ ಜಮೀನುಗಳು ಕಣಗಳ ಮಾದರಿಯಲ್ಲಿ ಜಮೀನನ್ನು ಸಮತಟ್ಟು ಮಾಡಿ, ಬಿದ್ದ ಮಳೆ ನೀರನ್ನು ನೆಲದ ಅಡಿ ನಿರ್ಮಿಸಿಲಾದ ಬೃಹತ್ ತೊಟ್ಟಿಗಳಲ್ಲಿ ಸಂಗ್ರಹಿಸಿ, ಈ ನೀರನ್ನು ಬೇಸಾಯಕ್ಕೆ ಬಳಸುತ್ತಾರೆ. ಇಂತಹ ಜ್ಞಾನ ಪರಂಪರೆಯನ್ನು ನಾವು ಇದೀಗ ಪುನರುಜ್ಜೀವನಗೊಳಿಸಬೇಕಿದೆ.
ರಾಜಸ್ಥಾನದ ಜೋದಪುರ ಮತ್ತು ಜೈಸಲ್ಮೇರ್ ಎಂಬ ಮರಳುಗಾಡಿನ ಎತ್ತರದ ದಿಬ್ಬದ ನಿರ್ಮಿಸಲಾಗಿರುವ ಕೋಟೆಗಳಲ್ಲಿ ಆಗಿನ ರಾಜ ಮಹಾರಾಜರು ಮಳೆ ನೀರು ಸಂಗ್ರಹಕ್ಕೆ ಮಾಡಿಕೊಂಡಿದ್ದ ವ್ಯವಸ್ಥೆ ಆಧುನಿಕ ತಂತ್ರಜ್ಞಾನಕ್ಕೆ ಸವಾಲು ಎಸೆಯುವಂತಿದೆ. ಹಿಂದೂ ರಾಜಮನೆತನಗಳು ನಿರ್ಮಿಸಿದ ಅರಮನೆಗಳು ಮತ್ತು ಪುಷ್ಕರಣಿಗಳನ್ನು, ನಂತರ ರಾಜ್ಯವಾಳಿದ ಮೊಗಲ್ ದೊರೆಗಳು ಸಹ ಅಭಿವೃದ್ಧಿ ಪಡಿಸಿದ್ದಾರೆ. ಕೆಲವು ಬೃಹತ್ ಪುಷ್ಕರಣಿಗಳು ವಿಶಾಲವಾಗಿದ್ದು, ಹಲವು ಹಂತಗಳಲ್ಲಿ ನಿರ್ಮಿಸಲಾಗಿದ್ದು, ಕೆಳಗಡೆ ರಾಜ ಮತ್ತು ರಾಣಿಯರು ಬಿರು ಬೇಸಿಗೆಯ ಕಾಲದಲ್ಲಿ ವಿಶ್ರಾಂತಿ ಪಡೆಯಲು ಕೊಠಡಿಗಳನ್ನು ಸಹ ನಿರ್ಮಿಸಲಾಗಿದೆ, ಇಂತಹ ಪುಷ್ಕರಣೆಯ ಒಳಗಡೆ ವಾತಾವಾರಣದ ಉಷ್ಣಾಂಶ ನೆಲದ ಮೇಲಿನ ಉಷ್ಣಾಂಶಕ್ಕಿಂತ ಐದರಿಂದ ಆರು ಡಿಗ್ರಿ ಸೆಲ್ಸಿಯಸ್ ಕಡಿಮೆ ಇರುತ್ತಿತ್ತು ಎಂದು ಹೇಳಲಾಗಿದೆ.
ಏಕಕಾಲಕ್ಕೆ ನೀರಿನ ವ್ಯವಸ್ಥೆ ಮತ್ತು ವಾತಾವರಣದ ಉಷ್ಣಾಂಶವನ್ನು ಕಾಪಾಡುತ್ತಿದ್ದ ಇಂತಹ ಜಲಮೂಲ ತಾಣಗಳು ಇಂದಿಗೂ ಸಹ ನಮ್ಮೆದುರು ಸಾಕ್ಷಿಯೆಂಬಂತೆ ಜೀವಂತವಾಗಿವೆ.. ಗುಜರಾತಿನ ರಾಣಿ ಕಿ ವಾವ್, ರೂಡಾಬಾಯಿ ವಾವ್, ರಾಜಸ್ಥಾನದ ಜೊಧಪುರದ ತೂರ್ ಜಿ ಭವನ್, ದೆಹಲಿಯ ಜಂತರ್ ಮಂತರ್ ಪ್ರದೇಶದಲ್ಲಿರುವ ಅಗ್ರಸೇನ್ ಬಾವಲಿ, ಕರ್ನಾಟಕದ ಹಂಪಿಯ ಮಹಾನವಮಿ ದಿಬ್ಬದ ಬಳಿ ಇರುವ ಪುಷ್ಕರಣಿ, ಲಕ್ಕುಂಡಿಯ ಬಳಿ ಇರುವ ಪುಷ್ಕರಣಿ, ಕನಕಗಿರಿಯ ವೆಂಕಟಪ್ಪನಾಯ್ಕನ ಕೊಳ, ಐಹೊಳೆಯ ಮಲ್ಲಿಕಾರ್ಜುನ ದೇಗುಲದ ಬಳಿ ಇರುವ ಪುಷ್ಕರಣಿ, ಮೇಲುಕೋಟೆಯ ಪುಷ್ಕರಣಿ ಹಾಗೂ ಅಕ್ಕ ತಂಗಿಯರ ಕೊಳ ಹಾಗೂ ಮೊಗಲ್ ಸಾಮ್ರಾಜ್ಯದ ಆಳ್ವಿಕೆಯಲ್ಲಿ ನಿರ್ಮಿತವಾದ  ದೆಹಲಿಯ ನಿಜಾಮುದ್ದೀನ್ ಪೂರ್ವ ಭಾಗದ ಹುಮಾಯುನ್ ಗುಮ್ಮಟದ ಬಳಿ ಇರುವ ಕೊಳ, ಆಗ್ರಾದ ತಾಜ್ ಮಹಲ್ ಬಳಿಯ ಮೆಹತಾಬ್ ಬಾಗ್ , ಶ್ರೀನಗರದ ಶಾಲಿಮಾರ್ ಬಾಗ್, ಅಹಮ್ಮದಾಬಾದಿನ ಖುಶ್ರು ಬಾಗ್ ಹೆಸರಿನ ಹೂ ದೋಟಗಳಿಗೆ ನೀರುಣಿಸಲು ನಿರ್ಮಿಸಿದ ಕೊಳಗಳು ನಮ್ಮೆದುರಿಗೆ ಸಾಕ್ಷಿಯಾಗಿವೆ.
ಇಂತಹ ಲಕ್ಷಾಂತರ ಜಲಮೂಲ ತಾಣಗಳು ನಮ್ಮ ಕಣ್ಣೆದುರಿಗೆ ಇದ್ದು, ಅವುಗಳು ಬಳಕೆಯಾಗದೆ, ಹೂಳು ಮತ್ತು ಕಸಕಡ್ಡಿಯಿಮದ ತುಂಬಿ ಹೋಗಿವೆ. ಎಲ್ಲೋ ಇರುವ ಪಾತಾಳ ಗಂಗೆಯ ಬಗ್ಗೆ ಯೋಚಿಸುವುದನ್ನು ಕೈ ಬಿಟ್ಟು, ಕಣ್ಣೆದುರುವ ಇರುವ ಜಲದ ತಾಣಗಳನ್ನು ಅಭಿವೃದ್ದಿಪಡಿಸಿದರೆ, ಕುಡಿಯುವ ನೀರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು.
(ಕರಾವಳಿ ಮುಂಜಾವು ದಿನಪತ್ರಿಕೆಯ "ಜಗದಗಲ" ಅಂಕಣಕ್ಕೆ ಬರೆದ ಲೇಖನ)



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ