ಶುಕ್ರವಾರ, ಮೇ 12, 2017

ಇತಿಹಾಸದ ಕಸದ ಬುಟ್ಟಿ ಜಾರುತ್ತಿರುವ ಅಮ್ ಆದ್ಮಿ ಪಕ್ಷ




ಉತ್ತರಪ್ರದೇಶ, ಪಂಜಾಬ್ ಮತ್ತು ಗೋವಾ ರಾಜ್ಯಗಳಿಗೆ ಇತ್ತೀಚೆಗೆ ನಡೆದ ಚುನಾವಣೆಗಳೊಂದಿಗೆ ದೇಶದ ರಾಜಧಾನಿ ದೆಹಲಿಯ ಮಹಾನಗರ ಸಭಾ ಸ್ಥಾನಗಳಿಗೂ ಸಹ ಚುನಾವಣೆ ನಡೆಯಿತು. ದೆಹಲಿಯಲ್ಲಿ ಅಧಿಕಾರ ನಡೆಸುತ್ತಿರುವ ಅರವಿಂದ್ ಕೇಜ್ರಿವಾಲ್ ನೇತೃತ್ವದ ಅಮ್ ಆದ್ಮಿ ಪಕ್ಷ ಕಂಡ ಹೀನಾಯ ಸೋಲು ಭಾರತದ ಪ್ರಜ್ಞಾವಂತ ನಾಗರೀಕರ ಪಾಲಿಗೇನು ಅನಿರೀಕ್ಷಿತವಾಗಿರಲಿಲ್ಲ. ಏಕೆಂದರೆ, ಕಳೆದ ಕೆಲವು ತಿಂಗಳಿನಿಂದ ಈ ಪಕ್ಷದ ಆಂತರೀಕ ವಿದ್ಯಾಮಾನಗಳು ಎಲ್ಲರಲ್ಲೂ ಜಿಗುಪ್ಸೆ ಮೂಡಿಸಿದ್ದವು.  
2015 ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಪ್ರಬಲ ರಾಜಕೀಯ ಪಕ್ಷಗಳಾದ ಕಾಂಗ್ರೇಸ್ ಮತ್ತು ಭಾರತೀಯ ಜನತಾ ಪಕ್ಷ ಗಳನ್ನು ಮಣಿಸಿ ಅಧಿಕಾರದ ಗದ್ದುಗೆಗೆ ಏರಿದ್ದ ಅಮ್ ಆದ್ಮಿ ಪಕ್ಷದ ಗೆಲುವು ಕೇವಲ ಹೊಸದಾಗಿ ಜನಿಸಿದ ಒಂದು ಪಕ್ಷದ ಗೆಲುವು ಮಾತ್ರವಾಗಿರಲಿಲ್ಲ, ಅದು ಭಾರತದ ಶ್ರೀಸಾಮಾನ್ಯನ ಗೆಲುವಾಗಿತ್ತು ಜೊತೆಗೆ ಅವನ ಕನಸಿನ ಭಾರತದ ರಾಜಕಾರಣ ಹೇಗಿರಬೇಕೆಂಬ ಆಕಾಂಕ್ಷೆಯಿತ್ತು. . ಈ ಕಾರಣದಿಂದಾಗಿ ಈ ಚುನಾವಣೆಯ ಫಲಿತಾಂಶ ಭಾರತ ಮಾತ್ರವಲ್ಲದೆ ಜಗತ್ತಿನ ಸುದ್ದಿಮಾಧ್ಯಮಗಳ ಗಮನ ಸೆಳೆದು ಎಲ್ಲೆಡೆ ಚರ್ಚೆಯಾಗಿತ್ತು. ಆದರೆ ಈಗ  ಈ ಎಲ್ಲವೂ ಮಣ್ಣುಪಾಲಾಗಿದೆ.
ಉತ್ತರ ಭಾರತದ ದೆಹಲಿ ಮಾತ್ರವಲ್ಲದೆ, ನೆರೆಯ ಪಂಜಾಬ್, ಹರ್ಯಾಣ, ಉತ್ತರಪ್ರದೇಶ, ರಾಜಸ್ಥಾನ ಮುಂತಾದ ರಾಜ್ಯಗಳಿಗೆ ಅಮ್ ಆದ್ಮಿ ಪಕ್ಷ ವಿಸ್ತರಿಸುವ ಸೂಚನೆ ನೀಡಿದ್ದ ಈ ಪಕ್ಷವು.  ವೃತ್ತಿ ನಿರತರಾಜಕಾರಣಿಗಳನ್ನು ಮತ್ತು ಸಿದ್ಧಾಂತಗಳಿಗೆ ತುಕ್ಕು ಹಿಡಿಸಿಕೊಂಡಿರುವ ಗೊಡ್ಡು ರಾಜಕೀಯ ಪಕ್ಷಗಳನ್ನು ಹಾಗೂ  ಪ್ರಾದೇಶಿಕ ಪಕ್ಷಗಳ ಹೆಸರಿನಲ್ಲಿ ತಮ್ಮ ವಂಶರಾಜಕಾರಣ ಮಾಡುತ್ತಿರುವ ತುಂಡು ಪಾಳೆಗಾರರಂತೆ ಕಾಣುವ ಭ್ರಷ್ಟ ರಾಜಕಾರಣಿಗಳ ನಿದ್ದೆಗೆಡಿಸಿತ್ತು. ಇವರೆಲ್ಲರನ್ನು ಕಸದ ಬುಟ್ಟಿಗೆ ಗುಡಿಸಿಹಾಕಿ  ಭಾರತದ ರಾಜಕೀಯಕ್ಕೆ ಹೊಸ ಭಾಷ್ಯ ಬರೆಯುತ್ತದೆ ಎಂದು ನಂಬಿದ್ದ ಜನರಿಗೆ ಈ ಪಕ್ಷವು ಇದೀಗ ತನ್ನ ಚಿಹ್ನೆಯಾದ ಪೊರಕೆಯನ್ನು ಮತದಾರರ ಕೈಗೆ ಕೊಟ್ಟು ಅವರಿಂದ ಗುಡಿಸಿಕೊಂಡು ಇತಿಹಾಸದ ಕಸದ ಬುಟ್ಟಿಗೆ ಜಮೆಯಾಗುತ್ತಿದೆ.
ಅಮ್ ಆದ್ಮಿ ಪಕ್ಷದಲ್ಲಿ ಕಳೆದ ಹದಿನೈದು ದಿನಗಳಿಂದ ನಡೆಯುತ್ತಿರುವ ರಾಜಕೀಯ ಕ್ಷಿಪ್ರ ಬೆಳವಣಿಗೆಗಳು, ಆರೋಪ, ಪ್ರತ್ಯಾರೋಪಗಳು, ಇವೆಲ್ಲವೂ ಪ್ರಜ್ಞಾವಂತ ನಾಗರೀಕರಲ್ಲಿ ಧಿಗ್ಭ್ರಮೆ ಮತ್ತು ಜಿಗುಪ್ಸೆ ಮೂಡಿಸುವುದರ ಜೊತೆಗೆ ಇನ್ನೆಂದಿಗೂ ಭಾರತದ ಯಾವುದೇ ಪರ್ಯಾಯ ರಾಜಕಾರಣದ ಪ್ರಯೋಗಗಳನ್ನು ನಂಬದಂತೆ ಮಾಡಿದೆ. ನಾಲ್ಕು ವರ್ಷದ ಹಿಂದೆ ಭ್ರಷ್ಟಾಚಾರದ ವಿರುದ್ಧ ಗಾಂದಿವಾದಿ ಅಣ್ಣಾ ಹಜಾರೆ ಆರಂಭಿಸಿದ ಆಂಧೋಲನ ಪರ್ಯಾಯ ರಾಜಕಾರಣದ ಬಗ್ಗೆ ಹೊಸ ಆಸೆ ಮತ್ತು ಭರವಸೆಗಳನ್ನು ಮೂಡಿಸಿತ್ತು. ಅರವಿಂದ್ ಕೇಜ್ರಿವಾಲ್ ಎಂಬ ಸಾಮಾನ್ಯ ಹಿನ್ನಲೆಯಿಂದ ವ್ಯಕ್ತಿ  ಈ ದೇಶದಲ್ಲಿ ಸಾಮಾನ್ಯ ನಾಗರೀಕನೊಬ್ಬ ಮತದಾರರ ವಿಶ್ವಾಸ ಮತ್ತು ಬೆಂಬಲ ಪಡೆದು ರಾಜಕಾರಣದ ದಿಕ್ಕನ್ನು ಬದಲಿಸಬಲ್ಲ ಎಂಬುದನ್ನು ಅಮ್ ಆದ್ಮಿ ಪಕ್ಷದ ಮೂಲಕ ಇಡೀ ಜಗತ್ತಿಗೆ ತೋರಿಸಿಕೊಟ್ಟಿದ್ದರು. ಆದರೆ ಒಬ್ಬ ಜನನಾಯಕನಿಗೆ ಇರಬೇಕಾದ ತಾಳ್ಮೆ,, ಅಧಿಕಾರ ಚಲಾಯಿಸಲು ಇರಬೇಕಾದ ಮುತ್ಸದಿತನ ಇವುಗಳ ಕೊರತೆಯಿಂದಾಗಿ ಮತ್ತು ಪಕ್ಷದ ಸಂಸ್ಥಾಪಕ ಸದಸ್ಯರ ಜೊತೆ ನಡೆದುಕೊಂಡ ಸರ್ವಾಧಿಕಾರಿಯ ವರ್ತನೆಯಿಂದಾಗಿ  ಕೇಜ್ರಿವಾಲ್  ಇಡೀ ಪಕ್ಷವನ್ನು ಅಧಃಪತನದತ್ತ ಕೊಂಡೊಯ್ದು ನಿಲ್ಲಿಸಿದ್ದಾರೆ.. ತಮ್ಮ ತಾತ್ವಿಕ ಭಿನ್ನಾಭಿಪ್ರಾಯಗಳಿಂದ  ಪ್ರೊ. ಯೋಗೇಂದ್ರಯಾದವ್ ಮತ್ತು ಪ್ರಖ್ಯಾತ ವಕೀಲ ಪ್ರಶಾಂತ್ ಭೂಷಣ್ ಇವರುಗಳು ಅಮ್ ಆದ್ಮಿ ಪಕ್ಷದಿಂದ ಹೊರಬಂದ ನಂತರ  ಸ್ಥಾಪಿಸಿದ ಸ್ವರಾಜ್ ಇಂಡಿಯಾ ಎನ್ನುವ ನೂತನ ಪಕ್ಷವು ದೆಹಲಿ ಮಹಾನಗರ ಸಭೆಯ ಚುನಾವಣೆಯಲ್ಲಿ ಶೇಕಡ ಒಂದರಷ್ಟು ಮತವನ್ನು ಪಡೆಯಲು ವಿಫಲವಾಗಿದೆ. 

ಕೇವಲ ಎರಡು ವರ್ಷಗಳ ಹಿಂದೆ ದಿಲ್ಲಿಯ ಮತದಾರರು, ತಾವೇ ಸ್ವತಃ ಹಣ ಹಾಕಿಕೊಂಡು ಚುನಾವಣೆಯ ಪ್ರಚಾರದಲ್ಲಿ ಪಾಲ್ಗೊಂಡು   ಮನೆ ಮನೆಗೆ ಭೇಟಿ ನೀಡಿ ಅಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತ ನೀಡುವಂತೆ ಮತದಾರರಲ್ಲಿ ವಿನಂತಿಸಿಕೊಂಡಿದ್ದರು.ಇವರಲ್ಲಿ ವಿದ್ಯಾರ್ಥಿಗಳು, ಉದ್ಯೋಗಸ್ಥ ಯುವಕರು, ಗೃಹಣಿಯರು, ಪೌರಕಾರ್ಮಿಕರು, ಆಟೋರಿಕ್ಷಾ ಮತ್ತು ಸೈಕಲ್ ರಿಕ್ಷಾ ಚಾಲಕರು ಇದ್ದದ್ದು ವಿಶೇಷವಾಗಿತ್ತು. ಏಕೆಂದರೆ, ಅಮ್ ಆದ್ಮಿ ಪಕ್ಷವು ಜನಸಾಮಾನ್ಯರ ಪಕ್ಷ ಎಂಬ ವಿಶ್ವಾಸವನ್ನು ಮತ್ತು ಭರವಸೆಯನ್ನು ನಾಗರೀಕರಲ್ಲಿ ಮೂಡಿಸಿತ್ತು. ಇದೀಗ ಭ್ರಮನಿರಸನಗೊಂಡಿರುವ ಅದೇ ನಾಗರೀಕರು ಪಕ್ಷವನ್ನು ಬೇರು ಸಮೇತ ಕಿತ್ತೊಗೆಯಲು ಕಾಯುತ್ತಿದ್ದಾರೆ. ಇದು ಒಂದು ಪಕ್ಷದ ಸೋಲು ಮಾತ್ರವಾಗಿರದೆ, ಭಾರತದ ಪ್ರಜ್ಞಾವಂತ ನಾಗರೀಕರ ಪರ್ಯಾಯ ರಾಜಕಾರಣದ ಪ್ರಯೋಗದ ವಿಫಲತೆ ಕೂಡ ಆಗಿದೆ.
.ಅಧಿಕಾರಕ್ಕೆ ಬರುವ ಮುನ್ನ ಅರವಿಂದ ಕೇಜ್ರಿವಾಲರು ಯಾವ ಭ್ರಷ್ಟಾಚಾರದ ವಿರುದ್ಧ ಹೋರಾಡಿದ್ದರೋ, ಈಗ  ಅದೇ ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿ ನ್ಯಾಯಾಲಯದ ಕಟ ಕಟೆಗೆ ಏರುವ ಹಂತ ತಲುಪಿದ್ದಾರೆ.. ಅವರದೇ ಸಚಿವ ಸಂಪುಟದ ಸದಸ್ಯರಾಗಿದ್ದ ಕಪಿಲ್ ಮಿಶ್ರಾ ಎಂಬುವರು ಮುಂಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಭ್ರಷ್ಟಾಚಾರದ ದಾಖಲೆಗಳ ಸಮೇತ ಆರೋಪ ಹೊರಿಸಿ,  ನ್ಯಾಯಾಲಯಕ್ಕೆ ದೂರು ದಾಖಲಿಸಿದ್ದಾರೆ. ಆದರೆ ಈವರೆಗೆ ಕೇಜ್ರಿವಾಲ್ ಈ ಆರೋಪಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಿರಾಕರಿಸಿಲ್ಲ.  ಆದರೆ  ತಮ್ಮ ಸಹೋದ್ಯೋಗಿ ಹಾಗೂ ದೆಹಲಿಯ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಮೂಲಕ  ಆರೋಪವನ್ನು ಅಲ್ಲಗೆಳದಿದ್ದಾರೆ. ಇದರ ಜೊತೆಗೆ ತುರ್ತು ಸಭೆ ನಡೆಸಿ, ಕಪಿಲ್ ಮಿಶ್ರಾ ಅವರನ್ನು ಪಕ್ಷದಿಂದ ಅಮಾನತ್ತುಗೊಳಿಸಿದ್ದಾರೆ.
ದೆಹಲಿಯಲ್ಲಿ ಅಧಿಕಾರಕ್ಕೆ ಬರುವ ಮೊದಲು ಹಾಗೂ ಅಧಿಕಾರಕ್ಕೆ ಬಂದ ಪ್ರಥಮ ವರ್ಷದಲ್ಲಿ ಅರವಿಂದ್ ಕೇಜ್ರಿವಾಲರು ಭ್ರಷ್ಟಾಚಾರ ಕುರಿತಂತೆ ಹೇಳುತ್ತಿದ್ದ ಮಾತುಗಳಿಗೂ ಹಾಗೂ ಈಗಿನ ಅವರ ನಡುವಳಿಕೆಗೂ ಅಜಗಜಾಂತರ ವ್ಯತ್ಯಾಸಗಳು ಎದ್ದು ಕಾಣುತ್ತಿವೆ. ಅತ್ಯಧಿಕ ಸ್ಥಾನಗಳನ್ನು ಗಳಿಸುವುದರ ಮೂಲಕ ದಿಲ್ಲಿಯ ಅದಿಕಾರದ ಗದ್ದುಗೆಗೆ ಏರಿದ ಅಮ್ ಆದ್ಮಿಯ ಪಕ್ಷದ ಶಾಸಕರುಗಳಲ್ಲಿ ಹಲವರು ಒಬ್ಬೊಬ್ಬರಾಗಿ ವಿವಿಧ  ಹಗರಣಗಳಲ್ಲಿ ಸಿಲುಕಿ ಪಕ್ಷಕ್ಕೆ ಕೆಟ್ಟ ಹೆಸರು ತಂದರು. ಕೆಲವರು ಜೈಲು ಪಾಲಾದರೆ, ಇನ್ನು ಹಲವರು ತಮ್ಮ ಶಾಸಕ ಸ್ಥಾನಕ್ಕೆ ಕುತ್ತು ತಂದುಕೊಂಡರು. ಮುಂದಿನ ಸರದಿ ಅರವಿಂದ ಕೇಜ್ರಿವಾಲರದು ಎಂಬಂತಾಗಿದೆ. ಈಗಾಗಲೇ ಅವರ ವಿರುದ್ಧ  ಎಫ್.ಐ.ಆರ್. ದಾಖಲಾಗಿದ್ದು ಸಿ.ಬಿ.ಐ. ತನಿಖೆ ಆರಂಭಿಸಿದೆ. ಆರೋಪ ಸಾಬೀತಾದರೆ, ಅವರನ್ನು ಅಧಿಕಾರದಿಂದ ಕಿತ್ತೊಗೆಯಲು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಅಣ್ಣಾ ಹಜಾರ ಘೋಷಿಸಿದ್ದಾರೆ.
ನಾವು ಕನಸು ಕಾಣುವ ಆದರ್ಶ ಸಮಾಜಕ್ಕೂ ಮತ್ತು ವಾಸ್ತವದ ರಾಜಕಾರಣಕ್ಕೂ ಇರುವ ವ್ಯತ್ಯಾಸ ಇದೀಗ ಅರವಿಂದ ಕೇಜ್ರಿವಾಲರಿಗೆ ಅರ್ಥವಾಗತೊಡಗಿದೆ. ದೇಶದ ಹಲವು ರಾಜಕೀಯ ಪಕ್ಷಗಳಿಗೆ  ದೇಣಿಗೆ ರೂಪದಲ್ಲಿ  ಹರಿದು ಬಂದ ಕಪ್ಪು ಹಣದ ಬಗ್ಗೆ ದೇಶಾದ್ಯಂತ ಸಾರ್ವಜನಿಕ ಸಭೆಗಳಲ್ಲಿ ಧ್ವನಿ ಎತ್ತರಿಸಿ ಮಾತನಾಡಿದ ಅವರು,  ತಮ್ಮ ಅಮ್ ಆದ್ಮಿ ಪಕ್ಷಕ್ಕೆ ದೇಶ, ವಿದೇಶದಿಂದ ದೇಣಿಗೆ ರೂಪದಲ್ಲಿ ಎಷ್ಟು ಹಣ ಬಂದಿದೆ ಎಂಬುದನ್ನು ಈವರೆಗೆ ಬಹಿರಂಗಗೊಳಿಸಿಲ್ಲ. ಇನ್ನೊಬ್ಬರ  ನೈತಿಕತೆ ಕುರಿತು ಮಾತನಾಡುವ ಮುನ್ನ ತಮ್ಮ ವೈಯಕ್ತಿಕ ನೆಲೆಗಟ್ಟು  ನೈತಿಕವಾಗಿ ಎಷ್ಟರ ಮಟ್ಟಿಗೆ ಭದ್ರವಾಗಿದೆ ಎಂದು ಅರವಿಂದ್ ಕೇಜ್ರಿವಾಲ್  ಒಮ್ಮೆ ಪರೀಕ್ಷಿಸಿಕೊಳ್ಳಬೇಕಿತ್ತು.
ದಿಲ್ಲಿಯ ಜನರಿಗೆ ಕೈಗೆಟುಕುವ ದರದಲ್ಲಿ ನೀರು. ವಿದ್ಯುತ್ ಒದಗಿಸುವ ಆಶ್ವಾಸನೆ ನೀಡಿದ್ದರು. ಅಧಿಕಾರಕ್ಕೆ ಬಂದ  ಮೊದಲ ವರ್ಷ ಇಂತಹ ಪ್ರಯತ್ನ ನಡೆಯಿತಾದರೂ  ನಂತರ ಅದು ತಣ್ಣಗಾಯಿತು. ಜನಸಾಮಾನ್ಯರ ಜೊತೆ ಸಮಸ್ಯೆಗಳ ಕುರಿತಾಗಿ ನೇರ ಸಂವಾದ ನಡೆಸುತ್ತೇನೆ ಎಂದು ಬೀದಿಗಿಳಿದ ಅರವಿಂದ ಕೇಜ್ರಿವಾಲರಿಗೆ ಜನರ ಮುತ್ತಿಗೆ ಹಾಗೂ ಬೆಟ್ಟದಷ್ಟು ದೂರುಗಳು ಮತ್ತು ಅಹವಾಲುಗಳು  ಎದುರಾದಾಗ ಆ ಪ್ರಯೋಗವನ್ನು  ಕೈ ಬಿಟ್ಟರು. ಇದೀಗ  ಅವರು ದೆಹಲಿಯ ಲೆಪ್ಟಿನೆಂಟ್ ಗೌರ್ನರ್ ಮತ್ತು ಕೇಂದ್ರ ಸರ್ಕಾರದ ಜೊತೆ ನಿರಂತರ ಸಂಘರ್ಷಕ್ಕೆ ಇಳಿಯುವುದರ ಮೂಲಕ ತಮ್ಮ ರಾಜ್ಯದ ಸಮಸ್ಯೆಗಳು ಹಾಗೂ ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಿದ್ದಾರೆ. ರಾಜಕೀಯ ಪಕ್ಷಗಳ ನಡುವಿನ ತಾತ್ವಿಕ ಅಥವಾ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ನಡುವೆಯೂ ಅಭಿವೃದ್ಧಿಯ ದೃಷ್ಟಿಯಿಂದ ಕೆಲವೊಮ್ಮೆ ಸಹಕಾರ ಸಮನ್ವಯತೆ ಅನಿವಾರ್ಯ ಎಂಬುದನ್ನು ಕೇಜ್ರಿವಾಲ್ ಮನಗಾಣದೆ ಹೋದದ್ದು ಅವರ ರಾಜಕೀಯ ಅಪ್ರಬುದ್ಧತೆಯನ್ನು ಎತ್ತಿ ತೋರಿಸಿತು. ಈ ಎಲ್ಲಾ ಕಾರಣಗಳಿಂದಾಗಿ ಅಮ್ ಆದ್ಮಿ ಪಕ್ಷ ಕುರಿತಂತೆ ದಿಲ್ಲಿಯ ನಾಗರೀಕರೂ ಸೇರಿದಂತೆ ದೇಶದ ಪ್ರಜ್ಞಾವಂತರಲ್ಲಿ ಇದ್ದ ಆಸೆ, ಆಕಾಂಕ್ಷೆಗಳು ಕರಗಿ ಹೋದವು.
ಅಮ್ ಆದ್ಮಿ ಪಕ್ಷದ ವಿಫಲತೆ ಒಂದು ಪಕ್ಷದ ಸೋಲು ಮಾತ್ರ ಆಗಿರದೆ, ಈ ದೇಶದ ಪರ್ಯಾಯ ರಾಜಕಾರಣದ ಪ್ರಯೋಗದ ಸೋಲು ಕೂಡ ಆಗಿದೆ. ಕಳೆದ ಮೂರು ದಶಕಗಳಿಂದ ದೇಶದಲ್ಲಿ ನಿರಂತರವಾಗಿ ನೆಲಕಚ್ಚುತ್ತಿರುವ ಸಾಮಾಜಿಕ ಚಳುವಳಿಗಳ ಸೋಲಿನ ಪಟ್ಟಿಗೆ ಅಮ್ ಆದ್ಮಿ ಪಕ್ಷದ ಹೆಸರು ಸೇರ್ಪಡೆಯಾಗುವುದರ ಮೂಲಕ ಈ ದೇಶದ ಎಲ್ಲಾ ಹೋರಾಟಗಳನ್ನು ಮತ್ತು ಚಳುವಳಿಗಳನ್ನು ನಾಗರೀಕರು ಅನುಮಾನದಿಂದ ನೋಡುವಂತಾಗಿದೆ . ಇನ್ನು ಮುಂದೆ ಯಾರಾದರೂ  ಈ ದೇಶದಲ್ಲಿ  ಪರ್ಯಾಯ ರಾಜಕೀಯ ವ್ಯವಸ್ಥೆಯ ಕುರಿತು ಮಾತನಾಡಿದರೆ, ಅದು ಉಳ್ಳವರ ವ್ಯಸನವಾಗಬಲ್ಲದೇ ಹೊರತು, ಆಚರಣೆಗೆ ತರಬಹುದಾದ ವಾಸ್ತವದ ಮಾತಾಗಲಾರದು.
( ಕರಾವಳಿ ಮುಂಜಾವು ಪತ್ರಿಕೆಯ “ ಜಗದಗಲ” ಅಂಕಣಕ್ಕೆ ಬರೆದ ಲೇಖನ)


1 ಕಾಮೆಂಟ್‌:

  1. ರಾಜಕಾರಣದಲ್ಲೊಂದು ಅದ್ಭುತ ಬದಲಾವಣೆ ಬರಬಹುದೆಂಬ ನಿರೀಕ್ಷೆ ಹೀಗೆ ಹುಸಿಯಾಗಬಹುದೆಂದುಕೊಂಡಿರಲಿಲ್ಲ. ನಿಜಕ್ಕು ಚಳುವಳಿಗಳ ಬಗ್ಗೆ ಅನುಮಾನಿಸುವವರಿಗೆ ಮತ್ತಷ್ಟು ಶಕ್ತಿ ತುಂಬಿದಂತಾಯ್ತು.
    ಅನುಪಮಾ ಪ್ರಸಾದ್

    ಪ್ರತ್ಯುತ್ತರಅಳಿಸಿ