ಶುಕ್ರವಾರ, ಜೂನ್ 16, 2017

ವಿಶ್ವವನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ಟ್ರಂಪ್ ಎಂಬ ಮಹಾಶಯ


ಜಾಗತಿಕ ಹವಾಮಾನ ವೈಪರಿತ್ಯ ತಡೆ ಕುರಿತ ಒಪ್ಪಂಧಕ್ಕೆ ಸಹಿ ಹಾಕಿದ್ದ ಅಮೇರಿಕಾ ದೇಶವು ಇದೀಗ ಒಪ್ಪಂಧದಿಂದ ಹಿಂದೆ ಸರಿದಿದೆ. ಕಳೆದ ತಿಂಗಳು ಸಿಯಾಟಲ್ ನಗರದಲ್ಲಿ ನಡೆದ  ಪ್ಯಾರಿಸ್ ಒಪ್ಪಂಧ ಕುರಿತ ನಡೆದ ಮಾತುಕತೆಯ ಸಂದರ್ಭದಲ್ಲಿ ಈಗಿನ ಅಮೇರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ತನ್ನ ತಿಕ್ಕಲುತನದ  ನಡೆಯನ್ನು ಅನಾವರಣಗೊಳಿಸುವುದರ ಮೂಲಕ ಇಡೀ ಜಗತ್ತಿನ ಜೀವಸಂಕುಲಗಳಿಗೆ ಅಪಾಯ ತಂದೊಡ್ಡಿದ್ದಾನೆ.
2015 ರ ಡಿಸಂಬರ್ ತಿಂಗಳಿನಲ್ಲಿ ಪ್ರಾರಿಸ್ ನಗರದಲ್ಲಿ ನಡೆದ ಐತಿಹಾಸಿಕ ಸಭೆಯಲ್ಲಿ ಅಂದಿನ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮ, ಭಾರತದ ಪ್ರಧಾನಿ ನರೇಂಧ್ರಮೋದಿ ಮತ್ತು ಚೀನಾ ಅಧ್ಯಕ್ಷ ಜಿಯಾಂಗ್  ಸೇರಿದಂತೆ ಜಗತ್ತಿನ 196 ರಾಷ್ಟ್ರಗಳು  ಒಪ್ಪಂಧಕ್ಕೆ ಸಹಿ ಹಾಕಿದ್ದವು. ಈ ಐತಿಹಾಸಿಕ ನಿರ್ಣಯದ ಮೂಲಕ ಜಾಗತಿಕ ತಾಪಮಾನವು ಮುಂದಿನ ಐವತ್ತು ವರ್ಷಗಳಲ್ಲಿ ಎರಡು ಡಿಗ್ರಿ ಸೆಲ್ಸಿಯಸ್ ಗಿಂತ ಮೀರಬಾರದು ಮತ್ತು  ಸಾಂಪ್ರದಾಯಕ ಇಂಧನಗಳಿಗೆ (ಕಲ್ಲಿದ್ದಲು, ಪೆಟ್ರೋಲಿಯಂ ಇತ್ಯಾದಿ) ಪರ್ಯಾಯವಾಗಿ ನವೀಕರಿಸಬಹುದಾದ ಮತ್ತು ನೈಸರ್ಗಿಕವಾಗಿ ದೊರೆಯುವ ಇಂಧನಗಳನ್ನು ( ಸೂರ್ಯನ ಶಾಖದಿಂದ ಮತ್ತು ಗಾಳಿಯಿಂದ ವಿದ್ಯುತ್ ಇತ್ಯಾದಿ) ಬಳಸುವುದರ ಮೂಲಕ ವಾತಾವಾರಣಕ್ಕೆ ಉಗುಳುವ ಕಾರ್ಬನ್ ಡೈ ಆಕ್ಸೈಡ್ (ಇಂಗಾಲಾಮ್ಲ) ಇದರ ಪರಿಣಾಮವನ್ನು ಕಡಿತಗೊಳಿಸಬೇಕು ಎಂಬ ನಿರ್ಧಾರಕ್ಕೆ ಬರಲಾಗಿತ್ತು.
ವೃತ್ತಿಯಲ್ಲಿ ಒಬ್ಬ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದುಕೊಂಡು, ಬಂಡವಾಳಶಾಹಿ ಜಗತ್ತಿನ ಪ್ರತಿನಿಧಿಯಂತೆ ಕಾಣುವ ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಎಂಬ ಮಹಾಶಯನಿಗೆ  ಯಾವುದೇ ರಾಜಕೀಯ ಮುತ್ಸದಿತನ ಇದ್ದಂತಿಲ್ಲ. ಜಾಗತೀಕಮಟ್ಟದಲ್ಲಾಗಲಿ ಅಥವಾ ರಾಷ್ಟ್ರಮಟ್ಟದಲ್ಲಾಗಲಿ ರಾಜಕೀಯ ತೀರ್ಮಾನಗಳನ್ನು ತೆಗೆದುಕೊಳ್ಳುವಾಗ ಅವುಗಳಿಂಧಾಗುವ ರಾಜಕೀಯ , ಸಾಮಾಜಿಕ ಹಾಗೂ ಆರ್ಥಿಕ ಪರಿಣಾಮಗಳ ಕುರಿತಂತೆ ಯೋಚಿಸುವ ಜ್ಞಾನವಿಲ್ಲ. ಈತ ಅಮೇರಿಕಾ ಅದ್ಯಕ್ಷನಾದ ಮೇಲೆ ತೆಗೆದುಕೊಂಡ ನಿಲುವುಗಳಿಂದಾಗಿ ಭಾರತದ ಮಾಹಿತಿ ತಂತ್ರಜ್ಞಾನದ ಮೇಲೆ ಬಿದ್ದಿರುವ ಹೊಡೆತ, ಹಾಗೂ ರಷ್ಯಾ ಮತ್ತು ಚೀನಾಗಳಂತಹ ರಾಷ್ಟ್ರಗಳ ಜೊತೆ ವ್ಯವಹರಿಸುತ್ತಿರುವ ವೈಖರಿ ಹಾಗೂ ಅರಬ್ ರಾಷ್ಟ್ರಗಳ ಜೊತೆಗಿನ ಸಂಬಂಧ ಇವೆಲ್ಲವೂ ಗೊಂದಲದ ಗೂಡಾಗಿವೆ. 2012 ರ ಸಮಯದಲ್ಲಿ ಜಾಗತಿಕ ಹವಾಮಾನ ವೈಪರಿತ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಂತರಾಷ್ಟ್ರಿಯ ಮಟ್ಟದಲ್ಲಿ ಒಪ್ಪಂಧಕ್ಕೆ ಬರಬೇಕು ಎಂಬ ಒತ್ತಡಗಳು ಕೇಳಿಬಂದ ಸಂದರ್ಭದಲ್ಲಿ “ಇದೊಂದು ಸುಳ್ಳು ವದಂತಿ” ಎಂದು ಈತ ಪ್ರತಿಕ್ರಿಯೆ ನೀಡಿದ್ದ. ಅದರಂತೆ ಈಗ ಅಧ್ಯಕ್ಷನಾದ ನಂತರ ಮನುಕುಲವಷ್ಟೇ ಅಲ್ಲದೆ, ಜೀವಸಂಕುಲಕ್ಕೆ ನೆರವಾಗಬಹುದಾದ ಪ್ಯಾರಿಸ್ ಒಪ್ಪಂಧವನ್ನು ವದಂತಿಯ ರೂಪದಲ್ಲಿ ತಳ್ಳಿಹಾಕಿದ್ದಾನೆ. ತಲೆತುಂಬಾ ಲಾಭಕೋರತನವನ್ನು ತುಂಬಿಕೊಂಡು, ಅಭಿವೃದ್ಧಿಯ ಹೆಸರಿನಲ್ಲಿ ನೈಸರ್ಗಿಕ ಕೊಡುಗೆಗಳನ್ನು ಮಾರಣಹೋಮ ಮಾಡುತ್ತಿರುವ ಇಂತಹ ದುರಹಂಕಾರಿಗಳು ಮತ್ತು ಅಭಿವೃದ್ಧಿ ಹೊಂದಿದ ಶ್ರೀಮಂತ ಕೈಗಾರಿಕಾ ರಾಷ್ಟ್ರಗಳಿಗೆ ಕಡಿವಾಣ ಹಾಕುವುದು ಅತ್ಯಗತ್ಯವಾಗಿದೆ. ವಾತಾವರಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ  ಹೊಗೆ ಉಗುಳುತ್ತಿರುವ ರಾಷ್ಟ್ರಗಳಲ್ಲಿ ಅಮೇರಿಕಾ ಪ್ರಥಮ ಸ್ಥಾನದಲ್ಲಿದ್ದರೆ, ಚೀನಾವು ದ್ವಿತೀಯ ಸ್ಥಾನದಲ್ಲಿದೆ. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವೆನಿಸಿದ ಭಾರತವು ಮೂರನೇಯ ಸ್ಥಾನದಲ್ಲಿದೆ.
ಹಲವು ವರ್ಷಗಳ ಕಾಲ ನೆನಗುದಿಗೆ ಬಿದ್ದಿದ್ದ ಹವಾಮಾನ ವೈಪರಿತ್ಯ ತಡೆಯ ಒಪ್ಪಂಧದಲ್ಲಿ ಇರುವ ಪ್ರಮುಖ ವಿಷಯಗಳನ್ನು ಸಂಕ್ಷಿಪ್ತವಾಗಿ ಹೀಗೆ ವಿವರಿಸಬಹುದು. ವಾತಾವರಣದಲ್ಲಿ ಹಸಿರು ಮನೆಯ ಅನಿಲಗಳು ಎಂದು ಕರೆಸಿಕೊಳ್ಳುವ ಒಜೋನ್  ಅಥವಾ ನೀರಿನ ಆವಿ (02) ಇಂಗಾಲಮ್ಲ ( CH2) ಮಿಥೇನ್(CH4) ನೈಟ್ರಸ್ ಆಕ್ಷೈಡ್(N2O) ಇವೆಲ್ಲವೂ ಸಹಜವಾಗಿ ನೀರಿನಿಂದ, ಜಾನುವಾರುಗಳು ಮತ್ತು ಕೃಷಿ ತ್ಯಾಜ್ಯದಿಂದ ಮತ್ತು  ನಿಸರ್ಗ ಅಥವಾ ವಾತಾವರಣ  ಇವುಗಳಿಂದ ಉತ್ಪತ್ತಿಯಾಗಿ ಭೂಮಿಯ ಮೇಲಿನ ಉಷ್ಣತೆಯನ್ನು ಸಮತೋಲನದಲ್ಲಿ ಇಡಲು ಸಹಕಾರಿಯಾಗಿದ್ದವು.  ಆದರೆ, ಇಪ್ಪತ್ತನೇಯ ಶತಮಾನದಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ ಉಂಟಾದ ಕ್ಷಿಪ್ರ ಬೆಳವಣಿಗೆ ಮತ್ತು ಸಾರಿಗೆ ಕ್ಷೇತ್ರದಲ್ಲಿ ಆದ ಬದಲಾವಣೆಯಿಂದಾಗಿ ವಿದ್ಯುತ್ ಉತ್ಪಾದನೆಗಾಗಿ ಕಲ್ಲಿದ್ದಲುಗಳ ಬಳಕೆ ಮತ್ತು ಸಾರಿಗೆ ಕ್ಷೇತ್ರದ ವಾಹನಗಳು ಮತ್ತು ಕೈಗಾರಿಕೆಗಳಲ್ಲಿ ಬಳಸುವ ಪೆಟ್ರೋಲಿಯಂ ಉತ್ಪನ್ನಗಳ ಮಿತಿಮೀರಿದ ಬಳಕೆಯಿಂದಾಗಿ ವಾತಾವರಣಕ್ಕೆ ಸೇರುತ್ತಿರುವ ಕಾರ್ಬನ್ ಡೈ ಆಕ್ಷೈಡ್ ಮತ್ತು ನೈಟ್ರಸ್ ಆಕ್ಷೈಡ್ ಇವುಗಳಿಂದಾಗ ಹವಾಗುಣದಲ್ಲಿ ಏರುಪೇರಾಗುತ್ತಿದೆ. ಭೂಮಿಯ ಮೇಲಿನ ಉಷ್ಣತೆ ನಿರೀಕ್ಷಿತ ಪ್ರಮಾಣಕ್ಕಿಂತ ಹೆಚ್ಚಾಗುತ್ತಿದೆ. ಇತ್ತೀಚೆಗಿನ ದಿನಗಳಲ್ಲಿ ರಸಾಯಿನಿಕ ಗೊಬ್ಬರಗಳು ಮತ್ತು ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಿದ್ದು, ವಾತಾವರಣಕ್ಕೆ ಬಿಡುಗಡೆಯಾಗುತ್ತಿರುವ ಮಿಥೇನ್ ಅನಿಲವು ಹವಾಮಾನ ವೈಪರಿತ್ಯಕ್ಕೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಅಪಾಯಕಾರಿಯಾಗಿದೆ. ಇದು ಕಾರ್ಬನ್ ಡೈ ಆಕ್ಷೈಡ್ ಗಿಂತ ಶೇಕಡ 21 %ರಷ್ಟು ಮತ್ತು ನೈಟ್ರಸ್ ಆಕ್ಷೈಡ್ ಗಿಂತ ಶೇಕಡ 30% ರಷ್ಟು ಹೆಚ್ಚು ಪ್ರಭಾವಶಾಲಿಯಾಗಿದೆ.
2005 ರಿಂದ 2015 ರ ಅವಧಿಯ ನಡುವೆ ನೈಟ್ರಸ್ ಆಕ್ಷೈಡ್ ಪ್ರಮಾಣವು ಜಾಗತಿಕವಾಗಿ ಹೆಚ್ಚಾಗಿರುವುದನ್ನು ನಾಸಾ ಉಪಗ್ರಹಗಳು ಸೆರೆ ಹಿಡಿದಿರುವ ಭೂಮಿಯ ಚಿತ್ರಗಳಿಂದ ದೃಢಪಟ್ಟಿದೆ. ವಾಹನಗಳು, ಕೈಗಾರಿಕೆಗಳು ಮತ್ತು ಕಲ್ಲಿದ್ದಲು ಆಧಾರಿತ ವಿದ್ಯುತ್ ಘಟಕಗಳು ಹೊರಸೂಸುವ ಹೊಗೆಯಲ್ಲಿ ಹಳದಿಮಿಶ್ರಿತ ಕಂದು ಬಣ್ಣದ ಹೊಗೆಯಿಂದಾಗಿ ಗಂಧಕಾಮ್ಲವು ವಾತಾವರಣವನ್ನು ಮಲೀನಗೊಳಿಸುತ್ತಿದೆ. ಜಗತ್ತಿನ ಒಟ್ಟು 195 ದೇಶಗಳಲ್ಲಿ ಅಧ್ಯಯನ ನಡೆಸಲಾಗಿದ್ದು, ಬಂಗ್ಲಾ ದೇಶದ ರಾಜಧಾನಿ ಢಾಕ್ಕಾ ನಗರವು ಜಗತ್ತಿನಲ್ಲಿ ಅತಿ ಹೆಚ್ಚು ನೈಟ್ರೋಜನ್ ಡೈ ಆಕ್ಷೈಡ್ ಅನ್ನು ಹೊರಸುಸುತ್ತಿರುವ ನಗರವಾಗಿದೆ. ಕಯಗಾರಿಕೆಗಳು ಹೆಚ್ಚಾಗಿರುವ ನಗರದಲ್ಲಿ ನಯಟ್ರೋಜನ್ ಡೈ ಆಕ್ಸೈಡ್ ಪ್ರಮಾಣವು ಶೇಕಡ 20 ರಿಂದ ಶೇಕಡ 50 ರಷ್ಟು ಹೆಚ್ಚಾಗಿದ್ದರೆ, ಢಾಕ್ಕಾ ನಗರದಲ್ಲಿ ಶೇಕಡ 79 ರಷ್ಟು ಹೆಚ್ಚಾಗಿದೆ. ಭಾರತದಲ್ಲಿ ಅತಿ ಹೆಚ್ಚು ಕಲ್ಲಿದ್ದಲು ಗಣಿಗಾರಿಕೆ ನಡೆಸುತ್ತಿರುವ ಛತ್ತಿಸ್ ಗಡದ   ವಲಯ ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ಸಂಸ್ಕರಿಸುವ  ಗುಜರಾತಿನ ಜಾಮ್ ನಗರವನ್ನು ಮಾಲಿನ್ಯ ಪ್ರದೇಶಗಳೆಂದು ಗುರುತಿಸಲಾಗಿದೆ. ಜಗತ್ತಿನಾದ್ಯಂತ ಕಲ್ಲಿದ್ದಲು ಮತ್ತು ತೈಲ ಇವುಗಳ ಮೇಲಿನ ಅತಿಯಾದ ಅವಲಂಬನೆಯಿಂದಾಗಿ ಇಡೀ ಮನುಕುಲ ಅಪಾಯದ ಅಂಚಿಗೆ ತಲುಪಿದೆ.
ಈ ಕುರಿತು ಕಳೆದ ಮೂರು ದಶಕಗಳಿಂದ ವಿಶ್ವ ಸಂಸ್ಥೆಯೂ ಸೇರಿದಂತೆ ಹಲವಾರು ಅಂತರಾಷ್ಟ್ರೀಯ ವಿಜ್ಞಾನಿಗಳು ಹವಾಮಾನ ವೈಪರಿತ್ಯ ಕುರಿತು ಜಗತ್ತಿನ ಗಮನ ಸೆಳದಿದ್ದರು. ಭೂಮಿಯ ಮೇಲಿನ ಉಷ್ಣತೆಯಿಂದಾಗಿ ಉತ್ತರ ಮತ್ತು ದಕ್ಷಿಣದ ದ್ರುವ ಪ್ರದೇಶಗಳೂ ಸೇರಿದಂತೆ ಹಿಮಾಲಯದಲ್ಲಿನ ಹಿಮಪರ್ವತಗಳು ಕರಗುತ್ತಿದ್ದು, ಸಮುದ್ರದ ನೀರಿನ ಮಟ್ಟ ಈಗಾಗಲೇ ಹದಿನೇಳು ಸೆಂಟಿಮೀಟರ್ ಏರಿಕೆಯಾಗಿದೆ. ಜೊತೆಗೆ ಋತುಮಾನಗಳಲ್ಲಿ ಏರು ಪೇರು, ಅಕಾಲಿಕ ಮಳೆ, ಚಂಡಮಾರುತಗಳು ಇವುಗಳಿಂದಾಗಿ ಜಾಗತೀಕ ಮಟ್ಟದಲ್ಲಿ ಕೃಷಿ ರಂಗದ ಮೇಲೆ ಅಗಾಧವಾಗಿ ದುಷ್ಪರಿಣಾಮ ಬೀರಿದೆ. ಇಂತಹ ಪ್ರಕೃತಿ ವಿಕೋಪವನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ರಾಷ್ಟ್ರಗಳು ಸಾಂಪ್ರದಾಯಿಕ ಇಂಧನಗಳ ಬದಲಾಗಿ ನವೀಕರಿಸಬಹುದಾದ ಇಂಧನಗಳಿಗೆ ಆದ್ಯತೆ ನೀಡಬೇಕೆಂದು  ಒಪ್ಪಂಧಕ್ಕೆ ಬರಲಾಗಿತ್ತು.
ಒಪ್ಪಂಧದ ಪ್ರಕಾರ ಜಗತ್ತಿನ ಮುಂದುವರಿದ ಕೈಗಾರಿಕಾ ರಾಷ್ಟ್ರಗಳು ಇತರೆ ಹಿಂದುಳಿದ ರಾಷ್ಟ್ರಗಳಿಗೆ ತಂತ್ರಜ್ಞಾನ ಅಳವಡಿಸಿಕೊಳ್ಳಲು ಒಟ್ಟು ಆರು ಲಕ್ಷ, ಅರವತ್ತು ಕೋಟಿ ಡಾಲರ್ ಹಣವನ್ನು ಸಹಾಯಧನವನ್ನಾಗಿ ನೀಡಬೇಕೆಂದು ನಿರ್ಧರಿಸಲಾಗಿತ್ತು.2030 ರ ವೇಳೆಗೆ ಜಗತ್ತಿನಾದ್ಯಂತ ಗಿಡ ಮರಗಳನ್ನು ಬೆಳಸುವುದು ಮತ್ತು ನವೀಕರಿಸಬಹುದಾನ ಇಂಧನಗಳನ್ನುಬಳಸುವುದರ ಮೂಲಕ ಸುಮಾರು ಇನ್ನೂರರಿಂದ ಮುನ್ನೂರು ಕೋಟಿ ಟನ್ ಪ್ರಮಾಣದಷ್ಟು ಇಂಗಾಲಮ್ಲಗಳ ಹೊರಸೂಸುವಿಕೆಯನ್ನು ತಗ್ಗಿಸಬೇಕೆಂದು ಗುರಿ ಹಾಕಿಕೊಳ್ಳಲಾಗಿತ್ತು. ಇದೀಗ ಅಮೇರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮಹಾಶಯನಿಂದಾಗಿ ಜಗತ್ತಿನ ಸುಮಾರು ಏಳನೂರು ಕೋಟಿ ಜನಸಂಖ್ಯೆಗೆ ಮಾತ್ರವಲ್ಲದೆ, ಅಸಂಖ್ಯಾತ ಜೀವಸಂಕುಲಗಳ ಉಳುವಿಗೂ ಕುತ್ತು ಬಂದಿದೆ.
ಈಭೂಮಿಗೆ ಅಥವಾ ಈ ಜಗತ್ತಿಗೆ ನಾವು ಹಕ್ಕುದಾರರಲ್ಲ, ಕೇವಲ ವಾರಸುದಾರರು , ಇಲ್ಲಿ ಉಚಿತವಾಗಿ ದೊರೆಯುವ ನೈಸರ್ಗಿಕ ಕೊಡುಗೆಗಳನ್ನು ಮಿತವಾಗಿ ಬಳಸಿ, ಮುಂದಿನ ತಲೆಮಾರಿಗೆ ಉಳಿಸಿಹೋಗಬೇಕೆಂಬ ವಿವೇಕ ನಮ್ಮಗಳ ತಲೆಯಿಂದ ಅಳಿಸಿಹೋಗಿದೆ. ಇಂತಹ ಅವಿವೇಕ ಅಥವಾ ಅಜ್ಞಾನಕ್ಕೆ ಬೇರೆ ಯಾರಿಂದಲೂ ಬುದ್ದಿ ಕಲಿಸಲು ಸಾಧ್ಯವಿಲ್ಲ. ಆದರೆ,  ಪ್ರಕೃತಿಗೆ ಅಂತಹ ಶಕ್ತಿಯಿದೆ. ಕಳೆದ ಮೂರು-ನಾಲ್ಕು ವರ್ಷಗಳಿಂದ ಕಾಡಿದ ಸತತ ಬರದಿಂದಾಗಿ ಮನುಷ್ಯ ಮರೆತು ಹೋಗಿದ್ದ ಕೆರೆ, ಕಟ್ಟೆ, ಬಾವಿಗಳು ಈ ವರ್ಷ ಆತನ ಜ್ಞಾಪಕಕ್ಕೆ ಬಂದವು. ನೀರನ್ನು ಹಿಡಿದಿಡಬೇಕು, ಮಿತವಾಗಿ ಬಳಸಬೇಕು ಎಂಬ ಅರಿವು ಮೂಡತೊಡಗಿತು. ಇದರ ಪರಿಣಾಮವೆಂಬಂತೆ ಕರ್ನಾಟಕ, ತಮಿಳುನಾಡು, ಆಂಧ್ರ, ಮಹಾರಾಷ್ಟ್ರ ರಾಜ್ಯಗಳಲ್ಲಿ ಜನತೆ ಸರಕಾರದ ಸಹಾಯಕ್ಕೆ ಕಾಯದೆ ತಾವೇ ಹೂಳೆತ್ತಿ ದರು. ಅಂತಹದೊಂದು ಅವಘಡ ಸಧ್ಯದಲ್ಲಿ ಈ ಜಗತ್ತಿಗೆ ಅಪ್ಪಳಿಸಿದರೆ ಆಶ್ಚರ್ಯವಿಲ್ಲ. ಈಗಾಗಲೇ  ಭಾರತದ ಹಲವು ಪ್ರದೇಶಗಳಲ್ಲಿ ಶೇಕಡ 40 ರಿಂದ 45 ಡಿಗ್ರಿ ಸೆಲ್ಸಿಯಸ್ ಇದ್ದ ಉಷ್ಣಾಂಶ ಈ ವರ್ಷ 50 ಡಿಗ್ರಿ ಸೆಲ್ಸಿಯಸ್ ದಾಟಿದೆ. ಇದು ಎಚ್ಚರಿಕೆಯ ಗಂಟೆಯಲ್ಲದೆ ಬೇರೇನೂ ಅಲ್ಲ.


( ಕರಾವಳಿ ಮುಂಜಾವು ದಿನಪತ್ರಿಕೆಯ : ಜಗದಗಲ” ಅಂಕಣ ಬರಹ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ