Friday, 23 June 2017

ಮಾತೃ ಭಾಷೆಯ ಶಿಕ್ಷಣದ ಅವಸಾನದ ಅಂಚಿನಲ್ಲಿ ನಿಂತು…


ನಮ್ಮೆಲ್ಲರ ಮಾತೃಭಾಷೆಯಾದ ಕನ್ನಡ ಈಗ ಯಾರಿಗೂ ಬೇಡವಾಗಿದೆ. ಇದನ್ನು ಪ್ರಾಥಮಿಕ ಶಿಕ್ಷಣದ ಮೂಲಕ ಪೋಷಿಸಿ ಬೆಳಸಬೇಕಾದ ಸರ್ಕಾರಗಳು ಇತಿಹಾಸದುದ್ದಕ್ಕೂ ತಮ್ಮ ದಿವ್ಯ ನಿರ್ಲಕ್ಷ್ಯವನ್ನು ತೋರಿಸುತ್ತಾ ಬಂದಿವೆ. ಇನ್ನು ಕನ್ನಡ ಸಾಹಿತ್ಯ, ಸಂಸ್ಕೃತಿ,, ಭಾಷೆ ಇವುಗಳ ಕುರಿತಾಗಿ ಧ್ವನಿ ಎತ್ತಬೇಕಾದ ನಾಡಿನ ಹಿರಿಯ ಸಾಹಿತಿಗಳೆಲ್ಲಾ ಮೌನಕ್ಕೆ ಶರಣು ಹೋಗಿದ್ದಾರೆ. ತಮಗೆ ಅರವತ್ತು ವರ್ಷ ತುಂಬುತ್ತಿದ್ದಂತೆ, ಪಂಪ, ನೃಪತುಂಗ, ಬಸವ, ಕನಕ,  ಹೀಗೆ ಹಲವು ಪ್ರಶಸ್ತಿಗಳನ್ನು ಕನವರಿಸುತ್ತಾ, ಸರ್ಕಾರದ ವಿರುದ್ಧ ಧ್ವನಿ ಎತ್ತಿದರೆ, ಪ್ರಶಸ್ತಿ ಕೈ ತಪ್ಪಿ ಹೋಗುವ ಭಯ ಅವರನ್ನು ಆವರಿಸಿಕೊಂಡಿದೆ..
ಇವೆಲ್ಲವುಗಳ ಮೇಲೆ ಗಾಯದ ಮೇಲೆಬರೆ ಎಳೆದಂತೆ. ದೇಶದ ಸರ್ವೋಚ್ಚ ನ್ಯಾಯಾಲಯ ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆಯ ಶಿಕ್ಷಣ ಕಡ್ಡಾಯವಲ್ಲ ಎಂಬ ತಪ್ಪು ತೀರ್ಪು ನೀಡುವುದರ ಮೂಲಕ ಖಾಸಾಗಿ ಶಿಕ್ಷಣ ಸಂಸ್ಥೆಗಳು ಇಂಗ್ಲೀಷ್ ಶಿಕ್ಷಣದ ಹೆಸರಿನಲ್ಲಿ ಅಂಗಡಿಗಳನ್ನು ತೆರದಿಟ್ಟು ಪೋಷಕರನ್ನು ದೋಚಲು ಅವಕಾಶ ಮಾಡಿಕೊಟ್ಟಿದೆ. ಮಗು ತಾನು ಬೆಳೆದಂತೆ ತನ್ನ ಸುತ್ತ ಮುತ್ತಲಿನ ಜಗತ್ತನ್ನು ಗ್ರಹಿಸುವುದು ಮತ್ತು ಮಾತುಗಳನ್ನು ಅರ್ಥಮಾಡಿಕೊಳ್ಳುವುದು ಮಾತೃಭಾಷೆಯ ಮೂಲಕ ಎಂಬ ಮಕ್ಕಳ ತಜ್ಞರ ಹಾಗೂ ಶಿಕ್ಷಣ ತಜ್ಞರ. ಮಾನಸಿಕ ತಜ್ಞರ ಸಲಹೆಗಳನ್ನು ಈ ದೇಶದಲ್ಲಿ ಯಾವೊಂದು ನ್ಯಾಯಾಲಯವಾಗಲಿ ಅಥವಾ ಸರ್ಕಾರವಾಗಲಿ ಅರ್ಥಮಾಡಿಕೊಳ್ಳಲಿಲ್ಲ. ಇದು ಭಾರತದ ದೇಶಿ ಭಾಷೆ ಮತ್ತು ಸಂಸ್ಕೃತಿಗೆ ಒದಗಿ ಬಂದ ಆಪತ್ತು.
ಮಕ್ಕಳಿಗೆ ನೀಡಬೇಕಾದ ಶಿಕ್ಷಣದಲ್ಲಿ ನ್ಯಾಯಾಲಯಗಳು ಮಧ್ಯ ಪ್ರವೇಶ ಮಾಡದಂತೆ ರಾಜ್ಯಗಳ ವಿಧಾನ ಸಭೆಯಲ್ಲಿ ಅಥವಾ ಲೋಕ ಸಭೆಯಲ್ಲಿ ಮಸೂದೆಯೊಂದನ್ನು ಮಂಡಿಸಿ, ಶಿಕ್ಷಣದಲ್ಲಿ  ಮಾತೃಭಾಷೆಯನ್ನು ಪ್ರಥಮ ಭಾಷೆಯಾಗಿ ಬೋಧಿಸುವುದು ಕಡ್ಡಾಯ ಎಂಬ ಕಾನೂನನ್ನು ಜಾರಿಗೆ ತರಬಹುದಾದ ಅವಕಾಶಗಳಿವೆ. ಆದರೆ, ಅಂತಹ ಇಚ್ಚಾಶಕ್ತಿ ಯಾವೊಬ್ಬ ಜನಪ್ರತಿನಿಧಿಗೆ ಅಥವಾ ಸರ್ಕಾರಕ್ಕೆ ಇಲ್ಲವಾಗಿದೆ. ನಮ್ಮ ನೆರೆಯ ತಮಿಳುನಾಡಿನಲ್ಲಿ ಇಂದಿಗೂ ಶಿಕ್ಷಣದಲ್ಲಿ ಮೂರನೆಯ ಭಾಷೆಯಾಗಿ ಹಿಂದಿ ಭಾಷೆಯು ಬಳಕೆಯಲ್ಲಿಲ್ಲ. ಅಲ್ಲಿ ಪ್ರಥಮ ಭಾಷೆಯಾಗಿ ತಮಿಳನ್ನು ಕಡ್ಡಾಯ ಮಾಡಲಾಗಿದೆ. ದ್ವಿತೀಯ ಭಾಷೆಯನ್ನಾಗಿ ಯಾವ ಭಾಷೆಯನ್ನಾದರೂ ಆಯ್ಕೆ ಮಾಡಿಕೊಳ್ಳಬಹುದು. ಹಾಗಾಗಿ ಅಲ್ಲಿನ ಇಂಗ್ಲೀಷ್ ಶಿಕ್ಷಣ ಸಂಸ್ಥೆಗಳಲ್ಲಿ ತಮಿಳು ಭಾಷೆಯನ್ನು ಅಲ್ಲಿನ ಸರ್ಕಾರಿ ಶಾಲೆಗಳ ಮಕ್ಕಳು ಕಲಿಯುತ್ತಿದ್ದಾರೆ.
ತಮಿಳುನಾಡಿನ ಮಾದರಿಯಲ್ಲಿ ಶಿಕ್ಷಣ ನೀತಿಯನ್ನು ಜಾರಿ ಮಾಡಬೇಕಾದ ಕರ್ನಾಟಕ ಸರ್ಕಾರ  ತನ್ನ ಪಂಚೇಂದ್ರಿಯಗಳನ್ನು ಕಳೆದುಕೊಂಡಂತೆ ವರ್ತಿಸುತ್ತಿದೆ. ಇದರ ಜೊತೆಗೆ ಇಲ್ಲಿನ ದಲಿತರು, ಹಿಂದುಳಿದ ವರ್ಗದವರು ಮತ್ತು ಶೂದ್ರರಿಗೆ ಇಂಗ್ಲೀಷ್ ಶಿಕ್ಷಣದಿಂದ ಮಾತ್ರ ನಮ್ಮ ಮಕ್ಕಳಿಗೆ ಮುಕ್ತಿ ಮತ್ತು ಮೋಕ್ಷ ಎಂದು ನಂಬಿರುವುದು. ಬಹು ದೊಡ್ಡ ದುರಂತ.ಕರ್ನಾಟಕ ಸರ್ಕಾರವು ಶಿಕ್ಷಣದ ಹಕ್ಕು ಕಾಯ್ದೆಯಡಿ ( ಆರ್.ಟಿ.ಇ.) ಖಾಸಾಗಿ ಇಂಗ್ಲೀಷ್ ಶಿಕ್ಷಣ ಸಂಸ್ಥೆಗಳಿಗೆ ಬಡ ಮತ್ತು ಮಧ್ಯಮ ವರ್ಗದ ಮಕ್ಕಳನ್ನು ಬಲವಂತವಾಗಿ ನೂಕುತ್ತಿದೆ. ಜೊತೆಗೆ ವಾರ್ಷಿಕವಾಗಿ ಸುಮಾರು ಮುನ್ನೂರು ಕೋಟಿ ರೂಪಾಯಿ ಹಣವನ್ನು ಶುಲ್ಕದ ರೂಪದಲ್ಲಿ ಖಾಸಾಗಿ ಸಂಸ್ಥೆಗಳಿಗೆ ಪಾವತಿಸುತ್ತಾ ಬಂದಿದೆ. ಮಾತೃ ಭಾಷೆಯ ಕುರಿತು ಜ್ಞಾನ ವಿರುವ, ಅಥವಾ ಕನಿಷ್ಠ ವಿವೇಕವಿರುವ ಯಾವೊಬ್ಬ ವ್ಯಕ್ತಿಯೂ ಮಾಡುವ ಕೆಲಸ ಇದಲ್ಲ.
2013 ರಿಂದ 2017 ರವರೆಗೆ ಕರ್ನಾಟಕ ರಾಜ್ಯದಲ್ಲಿ ಎಂಟು ಲಕ್ಷ ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಿಂದ ಇಂಗ್ಲೀಷ್ ಮಾಧ್ಯಮಕ್ಕೆ ವಲಸೆ ಹೋಗಿದ್ದಾರೆ. ಅಂದರೆ, ಸರಾಸರಿ ವರ್ಷವೊಂದಕ್ಕೆ ಎರಡು ಲಕ್ಷ ಮಕಳ್ಳು ಕನ್ನಡ ಶಾಲೆಯನ್ನು ತೊರೆಯುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ, ಇನ್ನೊಂದು ದಶಕದಲ್ಲಿ ಕನ್ನಡ ಶಾಲೆಗಳು ಸಂಪೂರ್ಣ ಮುಚ್ಚಿ ಹೋದರೂ ಆಶ್ಚರ್ಯವಿಲ್ಲ. ಇತ್ತೀಚೆಗೆ ಕನ್ನಡ ಅಬಿವೃದ್ಧಿ ಪ್ರಾಧಿಕಾರ ನಡೆಸಿದ ಅಧ್ಯಯನ ವರದಿಯ ಪ್ರಕಾರ ಒಂದು ವರ್ಷದ ಅವಧಿಯಲ್ಲಿ  ಸರಿಸುಮಾರು ಹತ್ತು ಸಾವಿರ ಕನ್ನಡ ಶಾಲೆಗಳು ಮುಚ್ಚಿ ಹೋಗಿದ್ದರೆ, ಅಷ್ಟೇ  ಸಂಖ್ಯೆಯಲ್ಲಿ ಇಂಗ್ಲೀಷ್ ಶಾಲೆಗಳು ಆರಂಭಗೊಂಡಿವೆ. ಸರ್ಕಾರವೇ ನಡೆಸಿರುವ ಈ ಅಧಿಕೃತ ವರದಿಯು, ನಮ್ಮ ಪೋಷಕರ ಮನಸ್ಥಿತಿಗೆ ಮತ್ತು ಸರ್ಕಾರಗಳ ಇಚ್ಚಾಶಕ್ತಿಯ ಕೊರತೆಗೆ ಕನ್ನಡಿ ಹಿಡಿದಂತಿದೆ. ಕನ್ನಡ ಶಾಲೆಯಿಂದ ಹೋಗುವ ಮಕ್ಕಳ ವಲಸೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಕ್ಕಳಿಗೆ ಒಂದನೆಯ ತರಗತಿಯಿಂದ ಇಂಗ್ಲೀಷ್ ಕಲಿಸಲಾಗುವುದು ಎಂಬ ಅವಿವೇಕದ ಮಾತನ್ನು ಸರ್ಕಾರ ಆಡುತ್ತಿದೆ. ಈಗ ಇರುವ ಶಿಕ್ಷಕರಿಗೆ ಮಾತೃಭಾಷೆಯನ್ನು ಪರಿಣಾಮಕಾರಿಯಾಗಿ ಬೋಧನೆ ಮಾಡಲು ಬರುವುದಿಲ್ಲ, ಇನ್ನೂಇಂಗ್ಲೀಷ್ ಭಾಷೆಯನ್ನು ಹೇಗೆ ಕಲಿಸುತ್ತಾರೆ. ಇಂಗ್ಲೀಷ್ ನಲ್ಲಿ ಪದವಿ, ಮತ್ತು ಬಿ.ಎಡ್. ಮಾಡಿರುವ ಶಿಕ್ಷಕರು ಪ್ರಾಥಮಿಕ ಶಾಲೆಯಲ್ಲಿ ಪಾಠ ಮಾಡಲು ಬರುತ್ತಾರಾ? ಹೋಗಲಿ ಅವರು ಬರಲು ಸಿದ್ದರಿದ್ದರೂ ಸಹ ಅವರ ಶಿಕ್ಷಣದ ಅರ್ಹತೆಗೆ ತಕ್ಕಂತೆ ಸರ್ಕಾರ ವೇತನ ನೀಡಲು ಸಿದ್ಧವಿದೆಯಾ? ಕಳೆದ ಐದಾರು ವರ್ಷಗಳಿಂದ ಕರ್ನಾಟಕದ ಪ್ರಾಥಮಿಕ ಶಾಲೆಗಳು ಹದಿನಾರು ಸಾವಿರ ಶಿಕ್ಷಕರ ಕೊರತೆಯನ್ನು ಎದುರಿಸುತ್ತಿವೆ. ಹತ್ತು ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುತ್ತೇವೆ ಎಂದು ಈ ಸರ್ಕಾರ ಕಳೆದ ಒಂದು ವರ್ಷದಿಂದ ಹೇಳುತ್ತಲೇ ಬಂದಿದೆ. ಆದರೆ ಅದು ಇನ್ನೂ ಜಾರಿಯಾಗಿಲ್ಲ. ಇನ್ನುಇಂಗ್ಲೀಷ್ ಭಾಷೆಯನ್ನು ಕಲಿಸುತ್ತೇವೆ ಎಂಬ ಮಾತು ಕನ್ನಡಿಗರ ಕಿವಿಯ ಮೇಲೆ ಹೂವು ಇಡುವ ಪ್ರಸ್ತಾಪದಂತೆ ಕೇಳಿಸುತ್ತಿದೆ.
ಮಾತೃಭಾಷೆ  ಕುರಿತಂತೆ ಸರ್ಕಾರದ ಅಥವಾ ಸಮಾಜದ ನಿರ್ಲಕ್ಷ್ಯ ಇದೇ ರೀತಿ ಮುಂದುವರಿದರೆ,ಭವಿಷ್ಯದ ಕನ್ನಡದ ಸಾಹಿತ್ಯ ಮತ್ತು ಸಂಸ್ಕೃತಿಯ ಅಸ್ತಿತ್ವದ ಪ್ರಶ್ನೆಯನ್ನು ನಾವು ಎದುರಿಸಬೇಕಾಗುತ್ತದೆ. ಈಗಾಗಲೇ ಕನ್ನಡ ಮಾಧ್ಯಮ ಶಿಕ್ಷಣ ಕುರಿತಂತೆ ಈ ನಾಡಿನ ಶಿಕ್ಷಣ ತಜ್ಞರು ಹಾಗೂ ಚಿಂತಕರು ಅನೇಕ ಸಲಹೆಗಳನ್ನು ನೀಡಿದ್ದಾರೆ. ಶ್ರೀ ಚಂದ್ರಶೇಖರ್ ದಾಮ್ಲೆ, ಶ್ರೀ ವೆಂಕಟೇಶ್ ಮಾಚಕನೂರು ಹಾಗೂ ಕವಿ ಜಿ.ಎಸ್.ಶಿವರುದ್ರಪ್ಪನವರ ಪುತ್ರರಾದ ಜಯದೇವ್ ಹಾಗೂ ಡಿ.ಎಸ್.ನಾಗಭೂಷಣ್, ದೇವನೂರು ಮಹಾದೇವ ಹೀಗೆ ಹಲವಾರು ಚಿಂತಕರು ಕಳೆದ ಎರಡು –ಮೂರು ವರ್ಷಗಳಿಂದ ನಿರಂತರವಾಗಿ ಪತ್ರಿಕೆಗಳಲ್ಲಿ ಬರೆಯುತ್ತಾ, ಮಾತನಾಡುತ್ತಾ ಬಂದಿದ್ದಾರೆ. ಇವರುಗಳ ಜೊತೆಗೆ ಕಳೆದ ಒಂದು ದಶಕದಿಂದ ಬೆಂಗಳೂರಿನಲ್ಲಿ ಬನವಾಸಿ ಬಳಗ ಎಂಬ ತಂಡವನ್ನು ರಚಿಸಿಕೊಂಡು ಕನ್ನಡದ ಅಸ್ಮಿತೆ ಯನ್ನು ಉಳಿಸಿಕೊಳ್ಳಲು ವಸಂತ್ ಶೆಟ್ಟಿ, ಜಿ.ಆನಂದ್ ಮತ್ತು ಕಿರಣ್ ಹಾಗೂ ಗೆಳೆಯ ಶ್ರಮವನ್ನು ನೋಡಿದರೆ  ಆಶ್ಚರ್ಯವಾಗುತ್ತದೆ.
 ಕನ್ನಡ ಪರ ಹೋರಾಟವೆಂದರೆ,  ದಂಧೆಯಾಗಿರುವ, ವಸೂಲಿವೀರರ ಉದ್ಯಮವಾಗಿರುವ ಈ ದಿನಗಳಲ್ಲಿ ತಮ್ಮ ದಿನನಿತ್ಯದ ವೃತ್ತಿ ಹಾಗೂ ವ್ಯವಹಾರಗಳ ಜೊತೆ ಅವರು ಕನ್ನಡವನ್ನು ಉಳಿಸಿಕೊಳ್ಳುವಲ್ಲಿ ಅವರು ಶ್ರಮಿಸುತ್ತಿರುವ ಪರಿ ಅಚ್ಚರಿ ಮೂಡಿಸುತ್ತದೆ. 2007 ರಿಂದ ಸತತವಾಗಿ “ ಏನ್ ಗುರು? ಕಾಫಿ ಆಯ್ತಾ? ಎಂಬ ಹೆಸರಿನಲ್ಲಿ ಬ್ಲಾಗ್ ಆರಂಭಿಸಿ ಕನ್ನಡದ ಬಗ್ಗೆ ಬರೆಯುತ್ತಾ ಬಂದಿರುವ ಈ ಗೆಳೆಯರು  ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದ ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ಜೊತೆಗೆ ಹಲವು ಕಿರುಚಿತ್ರಗಳನ್ನು ನಿರ್ಮಿಸಿ ಸಾಮಾಜಿಕ ತಾಣಗಳಲ್ಲಿ ಹಂಚಿಕೊಳ್ಳುತ್ತಾ ಬಂದಿದ್ದಾರೆ.
                                                  ಜಿ.ಆನಂದ್
ಜಿ.ಆನಂದ್ ಬರೆದಿರುವ “ ಬಾರಿಸು ಕನ್ನಡ ಡಿಂಡಿಮ” ಶೀರ್ಷಿಕೆಯಡಿ ಐದು ಕೃತಿಗಳನ್ನು ಹೊರತಂದಿದ್ದು ಕನ್ನಡ ನಾಡು ನುಡಿ ಕುರಿತು ದಾಖಲಿಸಿರುವ ಅನೇಕ ಚಿಂತನೆಗಳು ಕನ್ನಡಿಗರನ್ನು ಉದ್ದೀಪಿಸುವಂತಿವೆ. ಹಿಂದಿ ಹೇರಿಕೆ ಕುರಿತಂತೆ ಬರೆದಿರುವ ಕೃತಿಯು ಭಾಷೆ ಕುರಿತಂತೆ ಸರ್ಕಾರದ ಎಡವಟ್ಟುಗಳನ್ನು ನಮ್ಮ ಮುಂದೆ ತೆರದಿಡುತ್ತದೆ.
                                                       ವಸಂತ್  ಶೆಟ್ಟಿ
ವಸಂತ ಶೆಟ್ಟಿಯವರು ತಮ್ಮ ಬ್ಲಾಗಿನಲ್ಲಿ, ಒನ್ ಇಂಡಿಯಾ, ಅಂತರ್ಜಾಲ ಪತ್ರಿಕೆಯಲ್ಲಿ ಮತ್ತು ಕನ್ನಡದ ಸಂಜೆ ದಿನಪತ್ರಿಕೆಯೊಂದರಲ್ಲಿ ಬರೆದ ಅಂಕಣ ಬರಹವು “ ಏನ್ ಗುರು ಕಾಫಿ ಆಯ್ತಾ? ಹೆಸರಿನಲ್ಲಿ ಕೃತಿಯ ರೂಪದಲ್ಲಿ ಪ್ರಕಟವಾಗಿದೆ. 420 ಪುಟಗಳಷ್ಟಿರುವ ಈ ಕೃತಿಯ ಬರಹಗಳು  ಕನ್ನಡ ಭಾಷೆಯ ಹಲವಾರು ಮಗ್ಗಲುಗಳನ್ನು ಗಂಭೀರವಾಗಿ ಚರ್ಚಿಸಿವೆ. ವಸಂತ್ ಶೆಟ್ಟಿಯವರು ಕನ್ನಡ –ಸಂಸ್ಕೃತ ನಡುವಿನ ಸಂಬಂಧ, ಆಡು ಭಾಷೆಯ ಕನ್ನಡ, ವ್ಯಾಕರಣ ಇತ್ಯಾದಿಗಳ ಕುರಿತು ವಿದ್ವತ್ ಪೂರ್ಣವಾಗಿ ಚರ್ಚಿಸಿದ್ದಾರೆ.

ಕನ್ನಡ ಭಾಷೆಯನ್ನು ಉಳಿಸಿಕೊಳ್ಳಬೇಕು, ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಇರಬೇಕು ಎಂದು ಶ್ರಮಿಸುತ್ತಿರುವ ಈ ಗೆಳೆಯರ ಪ್ರೀತಿಯು  ನಮ್ಮ ಕನ್ನಡ ನಾಡಿನ ಮಕ್ಕಳ ಪೋಷಕರಿಗೆ ಮತ್ತು ಸರ್ಕಾರಕ್ಕೆ  ಹಾಗೂ ಜನಪ್ರತಿನಿಧಿಗಳಿಗೆ  ಏಕಿಲ್ಲ ಎಂಬ ಪ್ರಶ್ನೆಯು ನಿರಂತರವಾಗಿ ನನನ್ನು ಕಾಡುತ್ತಿದೆ. ಜೊತೆಗೆ ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ವಾಸವಾಗಿರುವ ಸರ್ಕಾರಿ ಕನ್ನಡ ಶಾಲೆಯ ಶಿಕ್ಷಕರು ತಮ್ಮ ಮಕ್ಕಳನ್ನು ಇಂಗ್ಲೀಷ್ ಶಾಲೆಗೆ ಬಿಟ್ಟು ನಂತರ ಮೋಟಾರ್ ಬೈಕ್ ಏರಿ ಹಳ್ಳಿಗಳ ಶಾಲೆಯತ್ತ ಹೋಗುವುದನ್ನು ನೋಡಿದಾಗ ಮನಸ್ಸು ಮುದುಡಿ ಹೋಗುತ್ತದೆ. ಏಕೆಂದರೆ, ಹರ ಕೊಲ್ಲಲ್ ಪರ ಕಾಯ್ವನೆ? ಎಂಬಂತಿದೆ ಕನ್ನಡದ ಸ್ಥಿತಿ.
( ಕರಾವಳಿ ಮುಂಜಾವು ದಿನಪತ್ರಿಕೆಯ " ಜಗದಗಲ" ಅಂಕಣ ಬರಹ)

No comments:

Post a Comment