ಇದು
ಈ ದೇಶಕ್ಕೆ ಅಂಟಿದ ಶಾಪ ಅಥವಾ ಶಾಶ್ವತ ಸಾಮೂಹಿಕ ಸನ್ನಿ ಎಂದರೆ ತಪ್ಪಾಗಲಾರದು. ಬಹು ಭಾಷೆ, ಬಹು ಸಂಸ್ಕೃತಿ ಮತ್ತು
ಬಹು ಧರ್ಮಗಳ ನಾಡಾದ ಭಾರತವಿಂದು ಧರ್ಮ ಮತ್ತು ದೇಶ ಭಕ್ತಿಯ ನೆಪದಲ್ಲಿ ಹರಿದು ಛಿದ್ರವಾಗಿದೆ. ವೈಚಾರಿಕ
ಅಥವಾ ಬೌದ್ಧಿಕ ಸಂಘರ್ಷಕ್ಕೆ ಸಾವಿರಾರು ವರ್ಷಗಳ ಇತಿಹಾಸವಿರುವ ಈ ದೇಶದಲ್ಲಿ ಈಗ ಮನುಷ್ಯ- ಮನುಷ್ಯನ
ನಡುವೆ ಸಂವಹನದ ಹಾದಿಗಳೆಲ್ಲಾ ಮುಚ್ಚಿಹೋಗಿ ಎಲ್ಲರೂ ಕತ್ತಿ ಹಿರಿದು ನಿಂತಿದ್ದಾರೆ. ಇನ್ನೊಂದು ಜಾತಿ
ಅಥವಾ ಧರ್ಮದ ಸಂಸ್ಕೃತಿ ಅಂದರೆ, ಅದು ಆಹಾರವಿರಬಹುದು, ಉಡುಪಿನ ಸಂಸ್ಕೃತಿಯಿರಬಹುದು ಅವುಗಳ ಮೇಲೆ
ನಿರಂತರ ದಾಳಿ ನಡೆಸುವುದರ ಮೂಲಕ ಭಾರತದ ಸಂವಿಧಾನದ ಮೂಲ ಆಶಯಗಳಿಗೆ ತಿಲಾಂಜಲಿ ನೀಡಲಾಗಿದೆ. ಮನಸ್ಸು
ಮತ್ತು ಮನಸ್ಸುಗಳ ನಡುವೆ, ಮನೆ ಮತ್ತು ಮನೆಗಳ ನಡುವೆ ಇದ್ದ ಪ್ರೀತಿ, ನಂಬಿಕೆ, ವಿಶ್ವಾಸಗಳು ಮುರಿದು
ಬಿದ್ದಿವೆ. ಮನುಷ್ಯನೊಬ್ಬ ತನ್ನಂತೆ ಉಸಿರಾಡುವ, ಇನ್ನೊಬ್ಬನ್ನು
ನಡುರಸ್ತೆಯಲ್ಲಿ ಧರ್ಮದ ಹೆಸರಿನಲ್ಲಿ ಅಥವಾ ಗೋ ರಕ್ಷಣೆಯ ಹೆಸರಿನಲ್ಲಿ ಇಲ್ಲವೇ, ಲವ್ ಜಿಹಾದ್ ಅಥವಾ
ಜಾತಿಯ ನೆಪದಲ್ಲಿ ಇರಿದು ಕೊಲ್ಲುವ ಕಾಲಘಟ್ಟದಲ್ಲಿ ನಾವು ಬದುಕುತ್ತಿದ್ದೇವೆ.. ಕಳೆದ ಮೂರು ವರ್ಷಗಳಲ್ಲಿ
ಭಾರತದುದ್ದಕ್ಕೂ ಅಲ್ಪ ಸಂಖ್ಯಾತರ ಮೇಲೆ ನಡೆದ ದಾಳಿಯ ಸ್ವರೂಪವನ್ನು ಕೂಲಂಕುಶವಾಗಿ ಅವಲೋಕಿಸಿದರೆ,
ನಾವು ಜಗತ್ತಿನ ಅತಿ ದೊಡ್ಡ ಪ್ರಜಾ ಪ್ರಭುತ್ವ ವ್ಯವಸ್ಥೆ ಇರುವ ರಾಷ್ಟ್ರದಲ್ಲಿ ಬದುಕುತ್ತಿದ್ದೇವೆ
ಎಂಬ ನಂಬಿಕೆ ಕಾಲು ಕೆಳಗಿನ ನೆಲದಂತೆ ಕುಸಿಯುತ್ತಿದೆ.
ಭಾರತದಲ್ಲಿ
ವೈಚಾರಿಕ ಸಂಘರ್ಷ ಇಂದು ಬಿನ್ನೆಯದಲ್ಲ; ಅದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕ್ರಿಸ್ತ ಪೂರ್ವ
ಆರು ನೂರು ವರ್ಷಗಳ ಹಿಂದೆ ಗೌತಮ ಬುದ್ಧನಿಗಿಂತಲೂ ಮೊದಲು ಈ ದೇಶದಲ್ಲಿ ಆಸ್ತಿಕವಾದ ಮತ್ತು ನಾಸ್ತಿಕವಾದ (ಭೌತಿಕವಾದ)
ನಡುವೆ ನಂಬಿಕೆಯ ವಿಚಾರದಲ್ಲಿ ಸಂಘರ್ಷವಿತ್ತು. ವೇದ,ಉಪನಿಷತ್ತುಗಳ ಕಾಲದಲ್ಲಿ ಯಜ್ಞ, ಯಾಗಗಳು ಮತ್ತು
ಬ್ರಾಹ್ಮಣರ ಪ್ರಾಣಿಬಲಿಗಳನ್ನು ಉಗ್ರವಾಗಿ ಖಂಡಿಸಿದ ಚಾರ್ವಾಕನಂತಹ ವಿಚಾರವಾದಿಯ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ
ಮುಕ್ತವಾದ ಅವಕಾಶವಿತ್ತು. ಹಾಗಾಗಿ ಈ ನೆಲದಲ್ಲಿ ಲೋಕಾಯುತ ದರ್ಶನ ವೆಂಬ ವಾಸ್ತವವಾದವೊಂದು ಬೆಳೆದು
ಬರಲು ಸಾಧ್ಯವಾಯಿತು.
ಕ್ರಿಸ್ತಪೂರ್ವ
ಆರನೇ ಶತಮಾನದಲ್ಲಿ ಬದುಕಿದ್ದ ಬುದ್ಧನ ಕಾಲದಲ್ಲಿ ಭಾರತದಲ್ಲಿ ಅಸ್ತಿತ್ವದಲ್ಲಿದ್ದ ಬ್ರಾಹ್ಮಣಗಳು ಎಂಬ ರ್ಶನ ಅಥವಾ ಸಿದ್ಧಾಂತಕ್ಕೆ
ವಿರುದ್ಧವಾಗಿ ಒಟ್ಟು ಅರವತ್ತೇರಡು ಸಿದ್ಧಾಂತಗಳು
ಅಸ್ತಿತ್ವಲ್ಲಿದ್ದವು. ಇವುಗಳಲ್ಲಿ ಆರು ದರ್ಶನಗಳು ಅತಿ ಮುಖ್ಯ ದರ್ಶನಗಳಾಗಿದ್ದವು. ಪುರಾಣ ಕಸ್ಸಪನ
ಅಕ್ರಿಯವಾದ, ಮಖಾಲಿ ಘೋಷಾಲನ ನಿಯತಿವಾದ, ಅಜಿತ ಕೇಶಕಂಬಲ ಎಂಬಾತನ ಉಚ್ಛೇದವಾದ, ಪಕುಧ ಕಚ್ಚಯಾನ ಎಂಬುವನು
ಪ್ರತಿಪಾದಿಸಿದ ಅನ್ಯೋನ್ಯವಾದ,ಸಂಜಯ ಬೇಲಪತ್ತ ಎಂಬಾತನ ವಿಕ್ಷೇಪವಾದ ಮತ್ತು ಮಹಾವೀರನು ಪ್ರಸ್ತುತಪಡಿಸಿದ
ಚಾತುರ್ಯಾಮ ಸಂವರವಾದ ಅಂದರೆ, ಕೊಲ್ಲದಿರುವುದು, ಕಳ್ಳತನ ಮಾಡದಿರುವುದು, ಆಸೆಯನ್ನು ಹೊಂದದಿರುವುದು
ಹಾಗೂ ಬ್ರಹ್ಮಚರ್ಯೆಯನ್ನು ಪಾಲಿಸುವುದು ಇವುಗಳು ಅಸ್ತಿತ್ವದಲ್ಲಿದ್ದವು. ಪರಸ್ಪರ ವಿಚಾರಗಳಲ್ಲಿ ಮತ್ತು
ನಂಬಿಕೆಗಳಲ್ಲಿ ಭಿನ್ನತೆ ಇದ್ದರೂ ಸಹ ಈ ಪಂಥಗಳು ಕತ್ತಿ ಹಿರಿದು ಹೋರಾಡಲಿಲ್ಲ. ಅಥವಾ ಪರಸ್ಪರ ಅವಹೇಳನ
ಮಾಡುತ್ತಾ ಹಿಂಸೆಯನ್ನು ಪ್ರಚೋದಿಸಲಿಲ್ಲ. ಇಂತಹ ಭವ್ಯ ಇತಿಹಾಸವಿರುವ ಈ ನೆಲದಲ್ಲಿ ಇಂದು ದೇಶಭಕ್ತಿ
ಎಂಬುದು ಪ್ರತಿಯೊಬ್ಬ ಮನುಷ್ಯ ತನ್ನ ಜೀವವನ್ನು ಪಣಕ್ಕೊಡ್ಡುವ ಸ್ಥಿತಿ ಬಂದೊದಗಿದೆ. ಈ ಸಂದರ್ಭದಲ್ಲಿ
ನನ್ನ ಕವಿಮಿತ್ರ ಪೀರ್ ಭಾಷ ಬರೆದ ಕವಿತೆಯ ಸಾಲುಗಳು ನೆನಪಾಗುತ್ತಿವೆ.
ಅಕ್ಕಾ
ಸೀತಾ, ನಾವಿಬ್ಬರೂ ಇಲ್ಲಿ ಕಳಂಕಿತರು/ ನೀನು ಪಾವಿತ್ರ್ಯಕ್ಕೆ, ನಾನು ದೇಶಭಕ್ತಿಗೆ/ ಪ್ರತಿದಿನ ಇಲ್ಲಿ
ಕೊಂಡ ಹಾಯಬೇಕು?
ಈ
ಕವಿತೆಯ ಸಾಲುಗಳು ಈ ದೇಶ ತಲುಪಿರುವ ಅಧೋಗತಿಗೆ ಮತ್ತು ಇಲ್ಲಿನ ಜನರ ಭೌದ್ಧಿಕ ದಿವಾಳಿತನಕ್ಕೆ ಸಾಕ್ಷಿ
ಎಂಬಂತಿವೆ.
ನಮ್ಮ
ನೆರೆಯ ಆಂಧ್ರಪ್ರದೇಶದ ಚಿಂತಕ ಹಾಗೂ ಹೈದರಾಬಾದಿನ ಮೌಲನಾ ಅಜಾದ್ ಉರ್ದು ವಿಶ್ವ ವಿದ್ಯಾಲಯದ ಪ್ರಾಧ್ಯಾಪಕರಾದ
ಪ್ರೊ.ಕಂಚನ ಐಲಯ್ಯ ಅವರು ಕಳೆದ ವಾರ ಹಿಂದೂ ಇಂಗ್ಲೀಷ್ ದಿನಪತ್ರಿಕೆಯಲ್ಲಿ ಬರೆದ “ ಆರ್ ವಿ ನೇಶನ್
ಆಫ್ ಹೈಪರ್ ನ್ಯಾಷನಲಿಸ್ಟ್?” ಎಂಬ ಲೇಖನದಲ್ಲಿ 2014 ರಿಂದ ಭಾರತದಲ್ಲಿ ಅಸಹಿಷ್ಣುತೆ ಹೇಗೆ ಮನೆ ಮಾಡಿಕೊಂಡಿತು
ಎಂಬುದರ ಬಗ್ಗೆ ವಿವರವಾಗಿ ಬೆಳಕು ಚಲ್ಲಿದ್ದಾರೆ. “ನಾಲ್ಕು ವರ್ಷದ ಹಿಂದೆ ಭಾರತೀಯ ಜನತಾ ಪಕ್ಷವು
ನರೇಂದ್ರಮೋದಿಯವರನ್ನು ಪ್ರಧಾನ ಮಂತ್ರಿ ಅಭ್ಯರ್ಥಿ
ಎಂದು ಘೋಷಣೆ ಮಾಡಿದ ನಂತರ ಈ ದೇಶದಲ್ಲಿ ದೇಶಭಕ್ತಿ ಎಂಬ ಪರಿಕಲ್ಪನೆಯ ಬದಲಾಯಿತು. ಮಾಧ್ಯಮಗಳ ಮೂಲಕ
ಮತ್ತು ಸಾಮಾಜಿಕ ತಾಣಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡು, ಕಾಂಗ್ರೇಸ್ ಪಕ್ಷವು ಮುಸ್ಲಿಂ
ಸಮುದಾಯವನ್ನು ಓಲೈಸುತ್ತಿದೆ , ಅಲ್ಪ ಸಂಖ್ಯಾತರನ್ನು ಬೆಂಬಲಿಸುತ್ತಾ ಜಾತಿಯ ಮನೋಭಾವವನ್ನು ಗಟ್ಟಿಗೊಳಿಸುತ್ತಿದೆ
ಎಂದು ಹೇಳುವುದರ ಮೂಲಕ ಬಿ.ಜೆ.ಪಿ.ಯನ್ನು ಅಧಿಕಾರಕ್ಕೆ ತಂದರೆ, ಸಮಾನ ನಾಗರೀಕ ಹಕ್ಕನ್ನು ಜಾರಿಗೊಳಿಸುತ್ತೆವೆ,
ಗುಜರಾಜ್ ಮಾದರಿಯ ಅಭಿವೃದ್ಧಿಯನ್ನು ಜಾರಿಗೊಳಿಸುತ್ತೇವೆ
ಎಂಬ ಉನ್ಮಾದದ ಮಾತುಗಳ ಮೂಲಕ ಹದಿ ಹರೆಯದ ಯುವಕರ ಮನಸ್ಸನ್ನು ಕಲುಷಿತಗೊಳಿಸಲಾಯಿತು.
2014
ರಲ್ಲಿ ನರೇಂದ್ರಮೋದಿಯವರ ನೇತೃತ್ವದಲ್ಲಿ ಬಿ.ಜೆ.ಪಿ. ಪಕ್ಷವು ದೇಶದಲ್ಲಿ ಅಧಿಕಾರಕ್ಕೆ ಬಂದ ನಂತರ,
ದೇಶಾದ್ಯಂತ ಅಸಹಿಷ್ಣುತೆ ತಲೆ ಎತ್ತಿತು. ಹೈದರಾಬಾದ್
ವಿ.ವಿ.ಯ ವೇಮಲ ಪ್ರಕರಣ, ದೆಹಲಿಯ ಜವಹರಲಾಲ್ ನೆಹರೂ ವಿ.ವಿ. ಕನಃಯ್ಯ ಪ್ರಕರಣ ಸಾವುಗಳಿಗೆ ಸಾಕ್ಷಿಯಾಗಿದೆ.
ಮಹಾರಾಷ್ಟ್ರದ ಶಿವಸೇನೆಯ ಮಾದರಿಯಲ್ಲಿ ಉಗ್ರವಾದವನ್ನು ಧರ್ಮದ ಹೆಸರಿನಲ್ಲಿ ಹರಿಯಬಿಟ್ಟ ಕಾರಣ ಗೋರಕ್ಷಕರೆಂಬ ಗೂಂಡಾ ಪಡೆ ದೇಶಾದ್ಯಂತ ತಲೆ ಎತ್ತಿತು. ಉತ್ತರ
ಪ್ರದೇಶ, ರಾಜಸ್ಥಾನ, ಹರಿಯಾಣ, ಕರ್ನಾಟಕ ಸೇರಿದಂತೆ ಹಲವೆಡೆ ಗೋವು ಸಾಗಿಸುತ್ತಿದ್ದವರ ಮೇಲೆ ಮಾರಣಾಂತಿಕ
ಹಲ್ಲೆಯನ್ನು ಮಾಡಲಾಯಿತು. ಜೊತೆಗೆ ಕೊಲ್ಲಲಾಯಿತು.
ಉತ್ತರ ಪ್ರದೇಶದ ದಾದ್ರಿ ಎಂಬ ಹಳ್ಳಿ ಮುಸ್ಲಿಂ ನ ಮನೆಯಲ್ಲಿ ಗೋಮಾಂಸ ಇಡಲಾಗಿದೆ ಎಂಬ ಗಾಳಿ
ಸುದ್ದಿಯನ್ನು ನಂಬಿ ಮನೆಯ ಯಜಮಾನನ್ನು ನಿರ್ಧಯವಾಗಿ ಕೊಲ್ಲಲಾಯಿತು. ಹೀಗೆ ಸವಿವರವಾಗಿ ದಾಖಲಿಸಿದ್ದಾರೆ.
ತನ್ನದೇಶದ
ಬಡತನದ ಬಗ್ಗೆ ಒಂದಿಷ್ಟು ಕಾಳಜಿ ಮತ್ತು ವಿವೇಕವಿಲ್ಲದ ಅನಿಷ್ಠ ರಾಜಕಾರಣಿಗಳಿಂದಾಗಿ ಪಾಕಿಸ್ತಾನದಲ್ಲಿ
ಭಾರತದ ವಿರುದ್ಧ ಭಯೋತ್ಪಾದನೆ ತಲೆ ಎತ್ತಿತು. ಇಲ್ಲಿ ಭಾರತದಲ್ಲಿ ಪಾಕಿಸ್ತಾನದ ಮೇಲೆ ದ್ವೇಷ ಸಾಧಿಸುವುದೆಂದರೆ,
ಮುಸ್ಲಿಂರ ಮೇಲೆ ಹಗೆತನವನ್ನು ಸಾಧಿಸುವುದು ಎಂಬಂತಾಗಿದೆ.. ಇದರ ಜೊತೆಗೆ ಇದು ದೇಶಭಕ್ತಿಗೆ ಮತ್ತು ಧರ್ಮಕ್ಕೆ ನೀಡುವ ಗೌರವ ಎಂಬ ಅಪಕ್ವ
ಪರಿಕ್ಲಪನೆಯನ್ನು ದೇಶದ್ಯಾಂತ ಹರಡಲಾಗುತ್ತಿದೆ. ಇದರ ಪರಿಣಾಮವಾಗಿ ಕಲ್ಬುರ್ಗಿ, ದಾಬೋಲ್ಕರ್, ಪನ್ಸಾರೆ
ಯಂತಹ ವಿಚಾರವಾದಿಗಳು ಧರ್ಮದ ಅನಿಷ್ಟಗಳ ಬಗ್ಗೆ ಧ್ವನಿ ಎತ್ತಿದ ಒಂದೇ ಕಾರಣಕ್ಕಾಗಿ ಅವರನ್ನು ಹತ್ಯೆ
ಮಾಡಲಾಯಿತು. ಇದೀಗ ಮಾದ್ಯಮಗಳು ಮತ್ತು ಪತ್ರಕರ್ತರ ವಿರುದ್ಧ ದಾಳಿ ಹಾಗೂ, ಜೀವ ಬೆದರಿಕೆಯನ್ನು ಹಾಕಲಾಗುತ್ತಿದೆ.
ಈ
ಜಗತ್ತಿನಲ್ಲಿ ಯಾವುದೇ ವಿಚಾರ, ವ್ಯಕ್ತಿ, ಅಥವಾ ಅಧಿಕಾರ, ಸಿಂಹಾಸನಗಳು ಶಾಶ್ವತವಲ್ಲ. ಜಗತ್ತನ್ನು
ಮಣಿಸಲು ಹೊರಟ ಸರ್ವಾಧಿಕಾರಿಗಳು ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ. ಧರ್ಮ ಅಥವಾ ವ್ಯಕ್ತಿ ಪೂಜೆಯಂತಹ
ಅಭಿಮಾನ ಇಲ್ಲವೇ ಆರಾಧನಾ ಸಂಸ್ಕೃತಿಯು ನಮ್ಮಲ್ಲಿ ಕುರುಡು ನಂಬಿಕೆಗಳನ್ನು ಬೆಳಸಬಹುದೇ ಹೊರತು ನಾಗರೀಕ
ಪ್ರಜ್ಞೆಯನ್ನು ಬೆಳಸುವುದಿಲ್ಲ. ಅಮೇರಿಕಾದಲ್ಲಿ ನಿಗ್ರೂ ಗಳ ಅಂದರೆ ಕರಿಯರ ವಿರುದ್ಧ ಬಿಳಿಯರ ಆಕ್ರೋಶ
ಮುಗಿಲು ಮುಟ್ಟಿದ್ದ ಸಂದರ್ಭದಲ್ಲಿ ಕರಿಯರಿಗೆ ಎಲ್ಲಾ ವಿಧವಾದ ಹಕ್ಕುಗಳನ್ನು ದಯಪಾಲಿಸಿ ಅಂತಿಮವಾಗಿ
1962 ರಲ್ಲಿ ಹಂತಕರ ಗುಂಡಿಗೆ ಬಲಿಯಾದ ಅಂದಿನ ಅದ್ಯಕ್ಷರಾಗಿದ್ದ ಜಾನ್ ಎಫ್. ಕೆನಡಿಯವರು ತಾವು ಸಾಯುವ
ಮುನ್ನ ಹೇಳಿದ್ದ “ ನಾವೆಲ್ಲಾ ಆ ದೇವರ ಸೃಷ್ಟಿ. ಇದರಲ್ಲಿ ಕಪ್ಪು-ಬಿಳುಪು ಎಂಬ ತಾರತಮ್ಯವಿರಬಾರದು.
ಎಲ್ಲರ ಮೈ ನಲ್ಲಿ ಹರಿಯುವುದು ಒಂದೇ ರೀತಿಯ ರಕ್ತ” ಎಂಬ ಮೌಲ್ಯಯುತವಾದ ಮಾತುಗಳು ಸಧ್ಯದ ಸ್ಥಿತಿಯಲ್ಲಿ
ಭಾರತಕ್ಕೆ ಹೇಳಿ ಮಾಡಿಸಿದಂತಿವೆ. ನಾವು ದೇಶಭಕ್ತರಾಗುವ ಮುನ್ನ ಅಪ್ಪಟ ಮನುಷ್ಯರಾಗಬೇಕಿದೆ.
(ಕರಾವಳಿ ಮುಂಜಾವು ದಿನಪತ್ರಿಕೆಯ " ಜಗದಗಲ" ಅಂಕಣಕ್ಕಾಗಿ ಬರೆದ ಲೇಖನ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ