ಭಾರತದ
ಪ್ರಧಾನಿ ನರೇಂದ್ರ ಮೋದಿಯವರಿಗೆ ಇದು
ಸಂಕಷ್ಟದ ಕಾಲ ಮಾತ್ರವಲ್ಲ, ಸಂದಿಗ್ಧ
ಮತ್ತು ಸವಾಲಿನ ಕಾಲವೂ ಹೌದು.
ಅವರು ತಮ್ಮ ರಾಜಕೀಯ ಜೀವನದಲ್ಲಿ
ಇಂತಹ ಸವಾಲುಗಳನ್ನು ನಿರೀಕ್ಷಿಸಿರಲಿಲ್ಲ. “ ಮಾತು ಬೆಳ್ಳಿ, ಮೌನ
ಬಂಗಾರ” ಎಂಬ ನಾಣ್ಣುಡಿಯನ್ನು ಮೋದಿಯವರು
ಈಗಲಾದರೂ ತಮ್ಮ ಬದುಕಿಗೆ ಅಳವಡಿಸಿಕೊಳ್ಳುವುದು
ಸೂಕ್ತ. 2014 ರ ಸಾರ್ವತ್ರಿಕ ಚುನಾವಣೆಯ
ಸಂದರ್ಭದಲ್ಲಿ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ
ಬಿಂಬಿಸಲ್ಪಟ್ಟಿದ್ದ ನರೇಂದ್ರ ಮೋದಿಯವರು ಚುನಾವಣಾ
ಪ್ರಚಾರದ ಸಂದರ್ಭದಲ್ಲಿ ಹಾಗೂ ಪ್ರಧಾನಿಯಾದ ನಂತರ
ನೋಟುಗಳ ಮೇಲೆ ನಿಷೇಧ ಹೇರಿದ
ಸಂದರ್ಭದಲ್ಲಿ ಆಡಿದ ಮಾತುಗಳನ್ನು ಈ
ದೇಶದ ಜನತೆ ಮರೆತಿರಬಹುದು. ಆದರೆ,
ಅರ್ಥಶಾಸ್ತ್ರದ ವಿದ್ಯಾರ್ಥಿ ಹಾಗೂ ಸಂಶೋಧಕನಾಗಿರುವ ನಾನು
ಮರೆಯಲು ಸಾಧ್ಯವಿಲ್ಲ. ಹಾಗಾಗಿ ಇಲ್ಲಿ ಮೋದಿಯವರ
ಕುರಿತು ಯಾವುದೇ ರಾಗ ದ್ವೇಷವಿಲ್ಲದೆ
ಅವರ ಮೂರು ವರ್ಷದ ಆಡಳಿತ
ಅವಧಿಯ ಆರ್ಥಿಕ ಬೆಳವಣಿಗೆಯನ್ನು
ವಿಮರ್ಶೆಯ ಒರೆಗಲ್ಲಿಗೆ ಒಡ್ಡಿದ್ದೀನಿ.
ಭಾರತದ
ಆರ್ಥಿಕ ದುಸ್ಥಿತಿಗೆ ಕಾಂಗ್ರೇಸ್ ನೇತೃತ್ವದ ಯು.ಪಿ.ಎ.
ಸರ್ಕಾರ ನೇರ ಜವಬ್ದಾರಿ ಎಂದು
ಆರೋಪ ಹೊರಿಸಿದ್ದ ನರೇಂದ್ರ ಮೋದಿಯವರು, ದೇಶದ
ಒಳಿತಿಗಾಗಿ ನಾನು ವಿಷ ಕುಡಿಯಲು
ಸಿದ್ಧ ಎಂದು ಘೋಷಿಸಿದ್ದರು. ವಾಸ್ತವವಾಗಿ
ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರದ
ಮೊದಲ ಅವಧಿಯಲ್ಲಿ ಇಡೀ ಜಗತ್ತು ತಿರುಗಿ
ನೋಡುವಂತೆ ಭಾರತವು ಆರ್ಥಿಕವಾಗಿ ಅಭಿವೃದ್ಧಿಚಿiÀುನ್ನು ಹೊಂದಿತ್ತು. ಆದರೆ,
ಎರಡನೆಯ ಅವಧಿಯಲ್ಲಿ ಆರ್ಥಿಕ ಬೆಳವಣಿಗೆಯನ್ನು ಮತ್ತು
ಪಾರದರ್ಶಕವಾದ ಆಡಳಿತವನ್ನು ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ. ಕಲ್ಲಿದ್ದಲು
ಹಗರಣ, ದೂರ ಸಂಪರ್ಕ ಇಲಾಖೆಯ
ಸ್ಪೆಕ್ಟ್ರಂ ಹಗರಣ, ಸೋನಿಯಾ ಗಾಂಧಿಯವರ
ಅಳಿಯ ರಾಬರ್ಟ್ವಾದ್ರಾನ ಭೂ
ಹಗರಣ ಹೀಗೆ ಅನೇಕ ಭ್ರಷ್ಟಾಚಾರದಲ್ಲಿ
ಯು.ಪಿ.ಎ. ಸರ್ಕಾರ
ಮುಳುಗಿರುವಾಗ; ಪ್ರಧಾನಿಯಾಗಿದ್ದ ಡಾ. ಮನಮೋಹನ್ ಸಿಂಗ್ ಮೌನಕ್ಕೆ ಶರಣಾಗುವುದರ ಮೂಲಕ ದೇಶವನ್ನು
ಅಧಃಪತನದತ್ತ ದೂಡಿದರು. ಭಾರತದ
ಈ ಇಬ್ಬರು ಪ್ರಧಾನಿಗಳ
ನಡುವೆ ಹೇಳಿಕೊಳ್ಳುವಂತಹ ವೆತ್ಯಾಸವೇನಿಲ್ಲ; ಅಂದಿನ ಪ್ರಧಾನಿ ಮನಮೋಹನ್
ಸಿಂಗ್ ಏನನ್ನೂ
ಮಾತನಾಡದೆ ಕೆಟ್ಟರು, ಈಗಿನ ಪ್ರಧಾನಿ ಮಾತನಾಡುತ್ತಾ
ಕೆಟ್ಟರು. ಈ ಎರಡೂ ಪರಿಣಾಮಗಳಿಂದ
ಭಾರತದ ಜನತೆ ಮಾತ್ರ ಅತಂತ್ರರಾದರು.
ವರ್ಷಕ್ಕೆ ಒಂದು ಕೋಟಿ ಉದ್ಯೋಗ
ಸೃಷ್ಟಿ ಮಾಡಲಾಗುವುದೆಂದು ತಮ್ಮ
ಎದೆಯನ್ನು 56 ಇಂಚಿಗೆ ಉಬ್ಬಿಸಿ ನರೇಂದ್ರ ಮೋದಿಯವರು ಹೇಳಿದ್ದರು.
ಆದರೆ, ಈಗ ಭಾರತದಲ್ಲಿ ಪ್ರತಿ
ತಿಂಗಳು ಹತ್ತು ಲಕ್ಷ ಮಂದಿ
ಯುವಕರು ಉದ್ಯೋಗ ಮಾರುಕಟ್ಟೆಗೆ ಪ್ರವೇಶಿಸುತ್ತಿದ್ದಾರೆ.
ಅವರಲ್ಲಿ ಕೇವಲ ಎರಡು ಲಕ್ಷ
ಮಂದಿಗೆ ಮಾತ್ರ ಉದ್ಯೋಗ ದೊರೆಯುತ್ತಿದೆ
ಎಂದು ಅವರದೇ ನೃತೃತ್ವದ ಕೇಂದ್ರ
ಸರ್ಕಾರದ ಆರ್ಥಿಕ ಸಮೀಕ್ಷೆಯ ವರದಿ
ಹೇಳುತ್ತಿದೆ. ಶೇಕಡ 97 ರಷ್ಟು ಇಂಜಿನಿಯರ್
ಪದವೀಧರರು ನಿರುದ್ಯೋಗಿಗಳಾಗಿರುವುದು ಆತಂಕದ ಸಂಗತಿಯಾಗಿದೆ. ತಮ್ಮ
ಆಡಳಿತದ ಅವಧಿಯಲ್ಲಿ ಸಾವಿರ ಮತ್ತು ಐನೂರು
ಮುಖಬೆಲೆಯ ನೋಟುಗಳನ್ನು
ನಿಷೇಧಿಸಿ, ಕಪ್ಪಹಣವನ್ನು ನಿಯಂತ್ರಿಸುತ್ತೀನಿ ಎಂದು ಹೇಳಿ ಹೊರಟ
ಮೋದಿಯವರ ಈ
ಯೋಜನೆಯು ಜಾಗತಿಕ ಮಟ್ಟದಲ್ಲಿ ನೆಗೆಪಾಟಲಿಗೆ
ಈಡಾಯಿತು. ಜೊತೆಗೆ ಭಾರತದ ಆರ್ಥಿಕ
ಬೆಳೆವಣಿಗೆಯನ್ನು ಹತ್ತು ವರ್ಷದ ಹಿಂದಕ್ಕೆ
ಕೊಂಡೊಯ್ಯಿತು. ಈ ಯೋಜನೆ ವಿಫಲವಾದರೆ,
ನನ್ನನ್ನು ಸುಟ್ಟು ಬಿಡಿ ಎಂದು
ಆವೇಶದಿಂದ ಮಾತನಾಡಿದ್ದ ಇದೇ ಪ್ರಧಾನಿ ಮೋದಿಯವರು
ಇತ್ತೀಚೆಗೆ ತಮ್ಮ ವಿವಿಧ ಇಲಾಖೆಗಳ
ಕಾರ್ಯದರ್ಶಿಗಳ ಸಭೆಯಲ್ಲಿ ಮಾತನಾಡುತ್ತಾ, ಆಡಳಿತದಲ್ಲಿನ ಕೆಲವು ಗುಂಪು ನಮ್ಮನ್ನು
ಶಕ್ತಿ ಹೀನರನ್ನಾಗಿ ಮಾಡುತ್ತಿವೆ ಎಂಬ ಮಾತನ್ನಾಡುವುದರ ಮೂಲಕ
ತಮ್ಮ ಸೋಲನ್ನು ಒಪ್ಪಿಕೊಂಡಿದ್ದಾರೆ. ಅವರು
ಘೋಷಿಸಿದ್ದ ಮೇಕಿಂಗ್ ಇಂಡಿಯಾ, ಡಿಜಿಟಲ್
ಇಂಡಿಯಾ, ಸ್ಮಾರ್ಟ್ಸಿಟಿ, ನಮಾಮಿಗಂಗಾ, ಸ್ವಚ್ಛ
ಭಾರತ್ ಈ
ಎಲ್ಲಾ ಯೋಜನೆಗಳು ಆಕರ್ಷಕವಾಗಿ ಕಂಡರೂ ಸಹ ಎಲ್ಲವೂ ಫಲ ನೀಡುವಲ್ಲಿ
ವಿಫಲವಾಗಿವೆ. ಈ ಕಾರಣಕ್ಕಾಗಿ ಆರ್ಥಿಕ
ತಜ್ಞ ಪ್ರವೀಣ್ ಚಕ್ರವರ್ತಿ ಎಂಬುವರು
“ ಭಾರತದ ಆರ್ಥಿಕತೆ ಸಂಪೂರ್ಣವಾಗಿ ನೆಲ ಕಚ್ಚಿದೆ” ಎಂದು
ಬಿ.ಬಿ.ಸಿ. ಸುದ್ದಿ
ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
ಜೊತೆಗೆ ನೋಟು ನಿಷೇಧ ಮತ್ತು ಜಿ.ಎಸ್.ಟಿ.
ಇವುಗಳ ಪರಿಣಾಮವಾಗಿ ದೇಶದ ಆರ್ಥಿಕತೆಗೆ ಹಿನ್ನಡೆಯಾಗಿದೆ
ಎಂದು ಸ್ವತಃ ಅರ್ಥಸಚಿವ ಅರುಣ್ ಜೇಟ್ಲಿ ಒಪ್ಪಿಕೊಂಡಿದ್ದಾರೆ.
ಭಾರತದ
ಆರ್ಥಿಕ ಅಭಿವೃದ್ಧಿ ಎನ್ನುವುದು ಸರ್ದಾರ್ ವಲ್ಲಬಾಯ್ ಪಟೇಲ್ ಪ್ರತಿಮೆ,
ಶ್ರೀರಾಮನ ಪ್ರತಿಮೆ ಅಥವಾ ಮಂದಿರ
ನಿರ್ಮಾಣದ ಆಮೀಷ ತೋರಿಸಿ, ಗಾಳಿಯಲ್ಲಿ
ಗೋಪುರ ನಿರ್ಮಿಸುವ ಯೋಜನೆಗಳಲ್ಲ ಎಂಬ ವಾಸ್ತವ ವನ್ನು
ನರೇಂದ್ರಮೋದಿಯವರು ಈಗಲಾದರೂ ಅರಿಯಬೇಕಿದೆ. ಜೊತೆಗೆ
ಒಳ್ಳೆಯ ರಾಜಕೀಯ ಮತ್ತು ಆರ್ಥಿಕ
ತಜ್ಞರನ್ನು ತನ್ನ ಸುತ್ತ ಮುತ್ತ
ಇರಿಸಿಕೊಂಡು ವಾಸ್ತವಿಕ ನೆಲೆಗಟ್ಟಿನಿಂದ ಕೂಡಿದ ಸಲಹೆಗಳನ್ನು ಮತ್ತು
ಕಾರ್ಯರೂಪಕ್ಕೆ ತರಲು ಸಾಧ್ಯವಾಗುವ ಯೋಜನೆಗಳನ್ನು
ಮಾತ್ರ ಅನುಷ್ಠಾನಕ್ಕೆ ತರಲು ಗಂಭೀರವಾಗಿ ಯೋಚಿಸಬೇಕಿದೆ.
ಹಿಂದಿನ ರಿಸರ್ವ್ ಬ್ಯಾಂಕಿನ
ಗವರ್ನರ್ ರಘರಾಂ ರಾಜನ್ ರವರ
ಸಲಹೆಗಳನ್ನು ಕೇಳಿದ್ದರೆ ಅಥವಾ ಮೋದಿಯವರು ಅವರನ್ನು
ಆ ಹುದ್ದೆಯಲ್ಲಿ ಇನ್ನೊಂದು
ಅವಧಿಗೆ ಮುಂದುವರಿಸಿದ್ದರೆ, ಇಂತಹ ಮುಜುಗರದ ಸಂಗತಿಗಳನ್ನು
ಎದುರಿಸಬೇಕಾಗಿರಲಿಲ್ಲ. ರಘುರಾಂ
ರಾಜನ್ ರವರು ತಮ್ಮ ಇತ್ತೀಚೆಗಿನ
“ಐ ಡು, ವಾಟ್ ಐ
ಡು” ಎಂಬ ಕೃತಿಯಲ್ಲಿ ಭಾರತದ
ಆರ್ಥಿಕ ರಂಗದ ತಪ್ಪು ಹೆಜ್ಜೆಗಳನ್ನು
ಗುರುತಿಸಿ ವ್ಯಾಖ್ಯಾನಿಸಿದ್ದಾರೆ.
2020 ನೇ ವರ್ಷಕ್ಕೆ ಒಟ್ಟು ರಾಷ್ಟ್ರೀಯ
ಉತ್ಪನ್ನದಲ್ಲಿ ( ಜಿಡಿಪಿಯಲ್ಲಿ)
ಉತ್ಪಾದನಾ ವಲಯದಿಂದ ಶೇಕಡ 25 ರಷ್ಟು
ಪಾಲು ಇರಬೇಕೆಂದು ಮೋದಿ ನೇತೃತ್ವದ ಸರ್ಕಾರ
ಗುರಿಹಾಕಿಕೊಂಡಿತ್ತು. ಆದರೆ, ಈಗಿನ ಉತ್ಪಾದನಾ
ವಲಯದ ಬೆಳವಣಿಗೆ ಕೇವಲ 1.6 ರಷ್ಟು ಮಾತ್ರ ಇದೆ. (2014 ರಿಂದ
17 ರವರೆಗೆ ಶೇಕಡ 15 ರಷ್ಟು ಗುರಿ ಸಾಧಿಸಬೇಕೆಂದು ನಿರ್ಧರಿಸಲಾಗಿತ್ತು. ಇತ್ತೀಚೆಗೆ ಜಾರಿಗೆ ತಂದ ಸರಕು
ಮತ್ತು ಸೇವಾ ತೆರಿಗೆಯ ನಿಯಮದಿಂದ
ಉತ್ಪಾದನಾ ವಲಯದ ಮೇಲೆ ದೊಡ್ಡ
ಪೆಟ್ಟು ಬಿದ್ದಿದೆ. ವಿಶೇಷವಾಗಿ ಗುಡಿ ಕೈಗಾರಿಕೆಗಳ ಉತ್ಪನ್ನಗಳು,
ನೇಕಾರಿಕೆ ಹಾಗೂ ಕಟ್ಟಡ ನಿರ್ಮಾಣ
ಹಾಗೂ ಕೃಷಿ ಉತ್ಪನ್ನ ವಲಯಗಳಲ್ಲಿ
ಯಾವುದೇ ರೀತಿಯ ಆಸಕ್ತಿದಾಯಕ ಬೆಳವಣಿಗೆಗಳು
ಕಂಡು ಬರುತ್ತಿಲ್ಲ. ಕರಕುಶಲ ವಸ್ತುಗಳ ಮೇಲೆ
ಶೇಕಡ 5 ರಷ್ಟು ಮಾತ್ರ ತೆರಿಗೆ
ವಿಧಿಸಲಾಗಿದ್ದರೂ ಸಹ, ಅವುಗಳನ್ನು ತಯರಿಸುವ
ಯಂತ್ರಗಳು ಅಂದರೆ, ಕೈ ಮಗ್ಗದ
ಬಿಡಿಭಾಗಗಳ ಮೇಲೆ ಶೇಕಡ 12 ರಿಂದ
18 ರಷ್ಟು ತೆರಿಗೆ ವಿಧಿಸಿರುವುದರಿಂದ ಭಾರತದಲ್ಲಿ
ಕೈ ಮಗ್ಗದ ಉತ್ಪನ್ನಗಳಲ್ಲಿ ಮುಂಚೂಣಿಯಲ್ಲಿದ್ದ
ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಒಡಿಸ್ಸಾ ಮತ್ತು ಬನಾರಸ್
ರೇಷ್ಮೆ ಸೀರೆಗಳಿಗೆ ಪ್ರಸಿದ್ಧವಾಗಿದ್ದ ವಾರಣಾಸಿ ಹೀಗೆ ಅನೇಕ
ರಾಜ್ಯಗಳಲ್ಲಿ ನೇಕಾರರು ಬೀದಿಗೆ ಬಿದ್ದಿದ್ದಾರೆ.
ಭಾರತದಲ್ಲಿ
ಈಗ ಕೇವಲ ವಿದ್ಯಾವಂತ ನಿರುದ್ಯೋಗಿಗಳ
ಸಮಸ್ಯೆ ಮಾತ್ರವಲ್ಲ, ಕರಕುಶಲಕರ್ಮಿಗಳು ಸಹ ಆರ್ಥಿಕ ಬೆಳವಣಿಗೆಯ
ಹಿಂಜರಿತದಿಂದ ದುಡಿಯುವ ಕೈಗಳಿಗೆ ಕೆಲಸವಿಲ್ಲದೆ
ಕಂಗಾಲಾಗಿದ್ದಾರೆ. ಜಮ್ಮು, ಕಾಶ್ಮೀರ ಅತ್ಯಂತ
ಹೆಚ್ಚು ನಿರುದ್ಯೋಗಿಗಳ ರಾಜ್ಯವಾಗಿದೆ. ಇವೆಲ್ಲಕ್ಕಿಂತ ಹೆಚ್ಚಾಗಿ ಉದ್ಯೋಗದಲ್ಲಿ ಮಹಿಳೆಯರ ಪ್ರಮಾಣ ವರ್ಷದಿಂದ
ವರ್ಷಕ್ಕೆ ಕುಸಿಯುತ್ತಿದೆ. ಶಿಕ್ಷಣ ಹಾಗೂ ಸಂಶೋಧನಾ
ಕ್ಷೇತ್ರ ಕುಂಠಿತಗೊಂಡಿದೆ. ದೇಶದ ಅತಿದೊಡ್ಡ ವಿಶ್ವ
ವಿದ್ಯಾನಿಲಯವೆಂದು ಪ್ರಸಿದ್ಧಿ ಪಡೆದಿದ್ದ ದೆಹಲಿಯ ಜವಹರಲಾಲ್ ವಿ.ವಿ.ಯ ಪ್ರಾಧ್ಯಾಪಕರ
ಮೇಲೆ ಕೆಲವು ನಿಯಮಗಳನ್ನು ಜಾರಿಗೊಳಿಸಿದ
ಪರಿಣಾಮವಾಗಿ ವರ್ಷವೊಂದಕ್ಕೆ ಒಂದು ಸಾವಿರ ವಿದ್ಯಾರ್ಥಿಗಳು
ವಿವಿಧ ವಿಷಯದ ಮೇಲೆ ಪಿ.ಹೆಚ್.ಡಿ. ಅಧ್ಯಯನ
ಮಾಡುತ್ತಿದ್ದರು. ಈಗ ಅಭ್ಯರ್ಥಿಗಳ ಸಂಖ್ಯೆ
ಕೇವಲ 194 ಕ್ಕೆ ಕುಸಿದಿದೆ.
ಭಾರತದ
ಅಭಿವೃದ್ಧಿಯ ತಳಪಾಯ ಅಥವಾ ಬೆನ್ನೆಲಬು
ಎಂದು ಕರೆಯಲಾಗುತ್ತಿದ್ದ ಕೃಷಿ ವಯಲಯದ ಬಿಕ್ಕಟ್ಟಿಗೆ
ಯಾವುದೇ ಪರಿಹಾರವಿಲ್ಲದಂತಾಗಿದೆ. ಈ ದೇಶದಲ್ಲಿ ಶೇಕಡ
60 ರಿಂದ 70 ರವರೆಗೆ ಪ್ರತ್ಯೇಕ್ಷವಾಗಿ ಅಥವಾ
ಪರೋಕ್ಷವಾಗಿ ಉದ್ಯೋಗ ನೀಡುತ್ತಿದ್ದ ಕೃಷಿರಂಗ
ಕಳೆದ ಹತ್ತು ವರ್ಷಗಳ ಅವಧಿಯಲ್ಲಿ
ಸ್ಮಶಾನ ಸದೃಶ್ಯ ರೂಪದಲ್ಲಿದೆ. ಸಧ್ಯಕ್ಕೆ
ಶೋಚನೀಯ ಸ್ಥಿತಿಯಲ್ಲಿರುವ ಕೃಷಿರಂಗವನ್ನು ಸದೃಢಗೊಳಿಸಿ, ರೈತರ ಆದಾಯವನ್ನು ಇಮ್ಮುಡಿಗೊಳಿಸಬೇಕಾದರೆ,
ಮುಂದಿನ ಐದು ವರ್ಷಗಳ ಅವಧಿಯಲ್ಲಿ
4 ಲಕ್ಷ 63 ಸಾವಿರ ಕೋಟಿ ರೂಪಾಯಿಗಳನ್ನು
ವಿನಿಯೋಗಿಸಬೇಕೆಂದು ತಜ್ಞರು ಅಂದಾಜಿಸಿದ್ದಾರೆ. ವಿಶೇಷವಾಗಿ
ನೀರಾವರಿ ಯೋಜನೆಗಳಿಗೆ ಹಾಗೂ ಕೈಗೆಟುಕುವ ಬೆಲೆಯಲ್ಲಿ
ಬಿತ್ತನೆ ಬೀಜ, ಗೊಬ್ಬರ ಇವುಗಳು
ದೊರೆಯುವಂತೆ ಮಾಡುವುದರ ಜೊತೆಗೆ ಸೂಕ್ತ ಮಾರುಕಟ್ಟೆಯ
ವ್ಯವಸ್ಥೆಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕಾಗಿದೆ.
ಆದರೆ, ವೇಗದ ರೈಲು, ಕಾರಿಡಾರ್
ರಸ್ತೆಗಳು ಮತ್ತು ಮೇಲ್ಸೇತುವೆ ಇವುಗಳಿಗೆ
ನೀಡಿರುವ ಆದ್ಯತೆಯನ್ನು ಪ್ರದಾನಿಯವರು ಭಾರತದ ಗ್ರಾಮೀಣ ಭಾಗಕ್ಕೂ
ನೀಡುವುದರ ಮೂಲಕ ಪಟ್ಟಣ ಮತ್ತು
ನಗರಗಳತ್ತ ವಲಸೆ ಹೋಗುತ್ತಿರುವ ಜನತೆಯನ್ನು
ತಡೆಯಬೇಕಿದೆ. ಇಂದಿನ ಭಾರತದ ನಗರಗಳು
ಎದುರಿಸುತ್ತಿರುವ ಕಸವಿಲೆವಾರಿ, ಸಂಚಾರದ ಅವ್ಯವಸ್ಥೆ ಹಾಗೂ
ಕುಡಿಯುವ ನೀರಿನ ಸಮಸ್ಯೆಗಳನ್ನು ಅವಲೋಕಿಸಿದರೆ,
ಸ್ಮಾರ್ಟ್ ಸಿಟಿಗಳನ್ನಾಗಿ ಮಾಡುವುದರ ಬದಲಾಗಿ ನಗರಕ್ಕೆ ಬರುವವರ
ವಲಸೆಯನ್ನು ತಡೆಯುವುದಕ್ಕೆ ಆದ್ಯತೆ ನೀಡಬೇಕು. ಕೇವಲ,
ಮಾಹಿತಿ ತಂತ್ರಜ್ಞಾನ ಕ್ರೇತ್ರ, ಸೇವಾ ವಲಯ ಅಥವಾ
ಉತ್ಪಾದನಾ ವಲಯಗಳಿಂದ ಮಾತ್ರ ಉದ್ಯೋಗ ಸಮಸ್ಯೆ
ನಿವಾರಣೆಯಾಗುವುದಿಲ್ಲ. ಇವುಗಳಿಗೆ ನೀಡುತ್ತಿರುವ ಆದ್ಯತೆಯನ್ನು ಕೃಷಿ ಮತ್ತು ಗುಡಿ
ಕೈಗಾರಿಕಾ ಕ್ರೇತ್ರಕ್ಕೆ ನೀಡಿದಾಗ ಮಾತ್ರ ನಿರುದ್ಯೋಗ
ಸಮಸ್ಯೆಗೆ ಒಂದಿಷ್ಟು ಪರಿಹಾರ ದೊರಕಬಹುದು. ಇದು
ಈಗ ಕೇವಲ ಭಾರತದ ಸಮಸ್ಯೆಯಾಗಿ
ಉಳಿದಿಲ್ಲ, ಜಾಗತೀಕರಣ ಮತ್ತು ಮುಕ್ತ ಮಾರುಕಟ್ಟೆಯ
ವ್ಯವಸ್ಥೆಯ ಫಲವಾಗಿ ಮರೆಮಾಚಿದ ಬಂಡವಾಳಶಾಹಿ
ವ್ಯವಸ್ಥೆ ಮುಂಚೂಣಿಗೆ ಬಂದ ಫಲವಾಗಿ ಜಾಗತಿಕ
ಸಮಸ್ಯೆಯಾಗಿ ಕಾಡುತ್ತಿದ್ದೆ. ಈ ಸಮಸ್ಯೆಯಲ್ಲಿ ಗ್ರೀಸ್
ರಾಷ್ಟ್ರ ಪ್ರಥಮ ಸ್ಥಾನದಲ್ಲಿದ್ದರೆ, ಭಾರತ
ಐದನೆಯ ಸ್ಥಾನದಲ್ಲಿದೆ. ಮುಂದಿನ ವರ್ಷ ಚುನಾವಣೆ
ಎದುರಿಸಬೇಕಾಗಿರುವ ಮೋದಿಯವರು ಭಾರತವನ್ನು ಯಾವ ದಿಕ್ಕಿನತ್ತ ಕೊಂಡೊಯ್ಯಬಲ್ಲರು?
ಎಂಬುದಕ್ಕೆ ಯಾವುದೇ ಆಶಾದಾಯಕ ಬೆಳವಣಿಗೆಗಳು
ಕಾಣುತ್ತಿಲ್ಲ.
( ಕರಾವಳಿ ಮುಂಜಾವು ದಿನಪತ್ರಿಕೆಯ “ ಜಗದಗಲ” ಅಂಕಣ
ಬರಹ)