Friday, 6 October 2017

ದಲಿತರಿಗೆ ಧೀಮಂತಿಕೆಯನ್ನು ತಂದುಕೊಟ್ಟ ಬಿ.ಬಸವಲಿಂಗಪ್ಪ

ಸ್ವಾತಂತ್ರ್ಯಾನಂತರದ ಕರ್ನಾಟಕದ ರಾಜಕೀಯ ಮತ್ತು ಸಾಮಾಜಿಕ ರಂಗದಲ್ಲಿ ಬಿ.ಬಸವಲಿಂಗಪ್ಪನವರ ಹೆಸರು ಎದ್ದು ಕಾಣುವಂತಹದ್ದು. ದಲಿತರು ಮತ್ತು ತಳ ಸಮುದಾಯದ ಜನತೆ ಘನತೆಯಿಂದ ಮತ್ತು ಧೀಮಂತಿಕೆಯಿಂದ ಹೇಗೆ ತಲೆಯೆತ್ತಿ ಬಾಳಬೇಕೆಂದು ತಮ್ಮ ನಡೆ ಮತ್ತು ನುಡಿಗಳ ಮೂಲಕ ತೋರಿಸಿಕೊಟ್ಟ ಕೆಲವೇ ಕೆಲವು ದಲಿತ ನಾಯಕರಲ್ಲಿ ಬಸವಲಿಂಗಪ್ಪನವರ ಹೆಸರು ಸದಾ ಮುಂಚೂಣಿಯಲ್ಲಿರುತ್ತದೆ.
ಇಂದಿನ ದಿನಗಳಲ್ಲಿ ಅಧಿಕಾರಕ್ಕಾಗಿ ಅಥವಾ ಇತರೆ ಸ್ಥಾನಮಾನಕ್ಕಾಗಿ ತಮ್ಮ ದಲಿತ ಅಸ್ಮಿತೆಯನ್ನು ಉಳ್ಳವರ ಪಾದದ ಬಳಿ ಇಟ್ಟು; ದಲಿತರ ಸ್ವಾಭಿಮಾನಕ್ಕೆ ಮತ್ತು  ಅಂಬೇಡ್ಕರ್ ಅವರ ಆಶಯಕ್ಕೆ ಮಸಿ ಬಳಿಯುತ್ತಿರುವ ದಲಿತ ಸಮುದಾಯದ ರಾಜಕೀಯ ನಾಯಕರು ಮತ್ತು ನಿವೃತ್ತ ಅಧಿಕಾರಿಗಳನ್ನು ನೋಡಿದಾಗ, ಇಂತಹ ಅಯೋಗ್ಯರಿಗಾಗಿ ಬಸವಲಿಂಗಪ್ಪನಂತಹವರು ತಮ್ಮ ಜೀವನ, ಸ್ವಾಭಿಮಾನವನ್ನು ಪಣಕ್ಕಿಟ್ಟು ಹೋರಾಡಬೇಕಾಯಿತೆ? ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಕರ್ನಾಟಕದ ರಾಜ್ಯದ ಮುಖ್ಯಮಂತ್ರಿಯಾಗುವ ಎಲ್ಲಾ ಗುಣಗಳು, ಅರ್ಹತೆ ಮತ್ತು ಒಳನೋಟಗಳಿದ್ದ ಬಿ.ಬಸವಲಿಂಗಪ್ಪನವರು ಸ್ಥಾನದಿಂದ ವಂಚಿತರಾದದ್ದು ಇತಿಹಾಸದ ವ್ಯಂಗ್ಯಗಳಲ್ಲಿ ಒಂದು .ಬಸವಲಿಂಗಪ್ಪನವರ ಕುರಿತಂತೆ ನಾನು ಓದುತ್ತಿರುವಧೀಮಂತಎಂಬ ಕೃತಿ ಅವರ ಬಗೆಗಿನ ನನ್ನ ಗೌರವವನ್ನು ಇಮ್ಮುಡಿಗೊಳಿಸಿದೆ.
ಕಳೆದ ಪೆಬ್ರವರಿ ತಿಂಗಳಿನಲ್ಲಿ ಹಂಪಿಯ ಕನ್ನಡ ವಿ.ವಿ.ಯಲ್ಲಿ ಜರುಗಿದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಅಲ್ಲಿನ ಇತಿಹಾಸ ವಿಭಾಗದ ನನ್ನ ಮಿತ್ರರಾದ ಡಾ.ಚಿನ್ನಸ್ವಾಮಿ ಸೋಸಲೆಯವರು ಸಂಪಾದಿಸಿರುವ ರಾಯಲ್ ಆಕಾರದ 890 ಪ್ಮಟಗಳಿರುವ ಕೃತಿಯು ಬಸವಲಿಂಗಪ್ಪನ ಬದುಕು ಮತ್ತು ಸಾಧನೆಯನ್ನು ನಮ್ಮ ಮುಂದೆ ತೆರೆದಿಡುತ್ತದೆ. ಈಗಾಗಲೇ ಮೈಸೂರು ಸಂಸ್ಥಾನದ ಇತಿಹಾಸ, ಅಲ್ಲಿನ ದಿವಾನರಾಗಿದ್ದ ಸರ್. ಮಿರ್ಜಾ ಇಸ್ಮಾಯಿಲ್ ಅವರ ಕುರಿತು ಅತ್ಯುತ್ತಮ ಕೃತಿಗಳನ್ನು ತಂದಿರುವ ಚಿನ್ನಸ್ವಾಮಿಯವರು ಬಹಳಷ್ಟು ಶ್ರಮವಹಿಸಿ ಬಸವಲಿಂಗಪ್ಪನವರ ಸಾಧನೆಗಳನ್ನು ಕಲೆ ಹಾಕಿ, ಇತಿಹಾಸದ ಗರ್ಭದಲ್ಲಿ ಅವರ ಹೆಸರು ಹೂತು ಹೋಗದ ಹಾಗೆ  ಚಿರಸ್ಥಾಯಿಗೊಳಿಸಿದ್ದಾರೆ. ಇದಕ್ಕಾಗಿ ನಾವು ಕನ್ನಡಿಗರು; ವಿಶೇಷವಾಗಿ ದಲಿತರು ಮತ್ತು ಇತರೆ ತಳ ಸಮುದಾಯದವರು ಚಿನ್ನಸ್ವಾಮಿಯವರಿಗೆ ಋಣಿಯಾಗಿರಬೇಕು.
ಬಹಳ ಅಚ್ಚರಿಯ ಸಂಗಂತಿಯೆಂದರೆ, ದಾವಣೆಗರೆ ಮತ್ತು ಹರಿಹರ ಎರಡು ನಗರದ ನೆಲ ಕನ್ನಡದ ಸಾಮಾಜಿಕ ಹೋರಾಟಕ್ಕೆ ಅತ್ಯಮೂಲ್ಯ ಜೀವಿಗಳನ್ನು ನೀಡಿದೆ. ಕನಾಟಕದಲ್ಲಿ ಗಾಂಧಿ ತತ್ವಗಳನ್ನು ಹರಡಲು ಪ್ರಮುಖ ಪಾತ್ರವಹಿಸಿದ ಹಾಗೂ ಕನಾಟಕದ ಗಾಂಧಿ ಎಂದು ಹೆಸರಾದ ಹರ್ಡೇಕರ್ ಮಂಜಪ್ಪನವರು ಸ್ವಾತಂತ್ರ್ಯ ಪುರ್ವದಲ್ಲಿ ಹರಿಹರದ ತುಂಗಾ ನದಿಯ ತೀರದಲ್ಲಿ ಗಾಂಧಿ ಆಶ್ರಮವನ್ನು ತೆರೆದವರು. ಬಿ.ಬಸವಲಿಂಗಪ್ಪನವರು ಇದೇ ಹರಿಹರದಲ್ಲಿ ಹುಟ್ಟಿ ಬೆಳೆದು ಪ್ರಸಿದ್ದರಾದರುಅವÀ ನಂತರ ದಲಿತರಿಗೆ ಸ್ವಾಭಿಮಾನದ ಪ್ರಜ್ಞೆಯ ಜೊತೆಗೆ ಸಂಘಟನೆಯ ಅರಿವು ಮೂಡಿಸಿ, ದಲಿತ ಸಂಘರ್ಷ ಸಮಿತಿಯನ್ನು ಹುಟ್ಟು ಹಾಕಿ, ಬಸವಲಿಂಗಪ್ಪ ಹೊತ್ತಿಸಿದ ಕ್ರಾಂತಿಯ ಕಿಡಿಯನ್ನು ಹೋರಾಟದ ಮತ್ತು ಬೆಳಕಿನ  ದೊಂದಿಯನ್ನಾಗಿ(ಪಂಜು) ಮಾಡಿಕೊಂಡು ಮುನ್ನಡೆಸಿದ ಪ್ರೊ. ಬಿ.ಕೃಷ್ಣಪ್ಪನವರು ಸಹ ಹರಿಹರದಲ್ಲಿ ಹುಟ್ಟಿ ಬೆಳೆದವರು. ಇನ್ನು, ಕರ್ನಾಟಕದ ಮ್ಯಾಂಚಸ್ಟರ್ ಎಂದು ಕಾಲದಲ್ಲಿ ಹತ್ತಿಯ ನೂಲು ಮತ್ತು ಬಟ್ಟೆಗಳ ಗಿರಣಿಗಳಿಗೆ ಪ್ರಸಿದ್ಧಿಯಾಗಿದ್ದ ದಾವಣಗೆರೆಯಲ್ಲಿ ಸಾವಿರಾರು ಗಿರಣಿ ಕಾರ್ಮಿಕರಿಗೆ ನಾಯಕನಾಗಿದ್ದು ಕಮ್ಯೂನಿಷ್ಟ್ ಚಳುವಳಿ ಮತ್ತು ಹೋರಾಟವನ್ನು ಕರ್ನಾಟಕದಲ್ಲಿ ಜೀವಂತವಾಗಿಟ್ಟವರಲ್ಲಿ ಪಂಪಾವತಿ ಕೂಡ ಬಹಳ ಮುಖ್ಯರಾಗಿದ್ದರು. ಅಲ್ಲಿನ ನೂರಾರು ಶ್ರೀಮಂತರು, ಅಡಿಕೆ ವರ್ತಕರು, ಜವಳಿಗಿರಣಿ ಮಾಲಿಕರು, ಲಿಂಗಾಯುತ ಮಠ ಮಾನ್ಯಗಳಿಗೆ ಸೆಡ್ಡು ಹೊಡೆದು ದಾವಣಗೆರೆ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು.
ಬಿ. ಬಸವಲಿಂಗಪ್ಪನವರದು ಬಾಲ್ಯದಿಂದಲೂ ಹೋರಾಟದ ಬದುಕು. ಅವರ ಕುಟುಂಬದ ಪೂರ್ವಿಕರು ಮೂಲತಃ ಬಿಜಾಪುರ ಜಿಲ್ಲೆಯ ಇಚಿಡಿ ತಾಲ್ಲೂಕಿನವರು. ಮೊದಲು ಬಳ್ಳಾರಿ ಜಿಲ್ಲೆಯ ಕೊಟ್ಟಿರಿಗೆ ಬಂದು ಆನಂತರ ಹರಿಹರಕ್ಕೆ ಸ್ಥಳಾಂತಗೊಂಡವರು. ಇವರ ತಂದೆ ಸ್ವತಃ ಬಟ್ಟೆಗಳನ್ನು ನೇಯ್ಗೆ ಮಾಡಿ ಊರೂರು ಸುತ್ತಿ ಮಾರಾಟ ಮಾಡುತ್ತಿದ್ದ ಕಾರಣ ಹರಿಹರ ಹಾಗೂ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಜವಳಿ ಬಸಪ್ಪ ಎಂದು ಪ್ರಸಿದ್ಧಿಯಾಗಿದ್ದರು. ಇವರ ಸಹೋದರ ಹರಿಹರಪ್ಪ ( ಇವರು ಮಾಜಿ ಸಚಿವ ಕೆ.ಹೆಚ್.ರಂಗನಾಥ್ ಅವರ ತಂದೆ) ಇವರು ಸ್ವಾತಂತ್ರ್ಯ ಪೂರ್ವದಲ್ಲೇ ಅಂಬೇಡ್ಕರ್ ಚಿಂತನೆಗಳಿಗೆ ಮಾರುಹೋಗಿ, ದಲಿತರ ಕೈ ಕಾಲುಗಳಿಗೆ ತೊಡಿಸಿರುವ ಸಾಮಾಜಿಕ ಸಂಕೋಲೆಗಳನ್ನು ಕಳಚಿ ಹಾಕಲು ಶಿಕ್ಷಣವೊಂದೇ ಆಯುಧ ಎಂದು ಬಲವಾಗಿ ನಂಬಿದ್ದರು. ಇಂತಹ ಜ್ಞಾನವನ್ನು ತಮ್ಮ ಮಕ್ಕಳಿಗಲ್ಲದೆ, ತಮ್ಮ ಸಹೋದರರ ಮಕ್ಕಳಿಗೂ ಸಹ ಧಾರೆಯೆರದರು. ಇದರ ಫಲವಾಗಿ ದಲಿತ ಕುಟುಂಬದಲ್ಲಿ ಜವಳಿಬಸಪ್ಪ ಮತ್ತು ಸಿದ್ಧಲಿಂಗಮ್ಮ ದಂಪತಿಗಳಿಗೆ 1924 ರಲ್ಲಿ ಜನಿಸಿದ ಬಿ.ಬಸವಲಿಂಗಪ್ಪನವರು ಬಾಲ್ಯದಿಂದಲೂ ಒಳ್ಳೆಯ ಶಿಕ್ಷಣ ಪಡೆಯುವಂತಾಯಿತು. 1930 ರಿಂದ 1938 ರವರೆಗೆ ಹರಿಹರದಲ್ಲಿ ಎಂಟನೆಯ ತರಗತಿಯವರೆಗೆ ಓದಿದ ಅವರು ನಂತರ ತಮ್ಮ ದೊಡ್ಡಪ್ಪ ಹಾಗೂ ಚಿತ್ರದುರ್ಗದಲ್ಲಿ ಶಿರಸ್ತೆದಾರ್ ಆಗಿದ್ದ ಹರಿಹರಪ್ಪ ನವರ ಸಲಹೆ ಮೇರೆಗೆ ಬೆಂಗಳೂರಿಗೆ ಹೋಗಿ ಸ್ವಲ್ಪ ದಿನ ಅಕ್ಕನ ಮನೆಯಲ್ಲಿ ; ನಂತರ ಹಾಸ್ಟಲ್ ನಲ್ಲಿ ಇದ್ದುಕೊಂಡು ಹೈಸ್ಕೂಲ್ ಹಾಗೂ ಇಚಿಟರ್ ಮಿಡಿಯಟ್ ( ಒಂದು ವರ್ಷದ ಪಿ.ಯು.ಸಿ) ಮುಗಿಸಿದರು. ನಂತರ ಮೈಸೂರಿಗೆ ತೆರಳಿ 1945 ರಲ್ಲಿ ಬಿ.. ಪದವಿ ಪಡೆದರು. ಆನಂತರ ಬೆಳಗಾವಿ ನಗರಕ್ಕೆ ಹೋಗಿ ರಾಜಾ ಲಕ್ಷ್ಮಣರಾವ್ ಕಾನೂನು ವಿದ್ಯಾಲಯದಲ್ಲಿ 1948 ರಲ್ಲಿ ಕಾನೂನು ಪದವಿ ಪಡೆದರು. ಮಾಜಿ ಮುಖ್ಯಮಂತ್ರಿ ವಿರೇಂದ್ರ ಪಾಟೀಲ್ ಇದೇ ಸಂದರ್ಭದಲ್ಲಿ ಬಸವಲಿಂಗಪ್ಪನವರ ಸಹಪಾಠಿಯಾಗಿದ್ದರು. ವಿದ್ಯಾಭ್ಯಾಸ ಮುಗಿಸಿದ ನಂತರ ಸ್ವಲ ದಿನ ಹರಿಹರದಲ್ಲಿದ್ದುಕೊಂಡು ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿದ್ದ ಅವರು ಹಳ್ಳಿ ಹಳ್ಳಿಗೆ ತೆರಳಿ ದಲಿತರ ಕೇರಿಯಲ್ಲಿ ನಿಂತು ಮಕ್ಕಳನ್ನು ಶಾಲೆಗೆ ಕಳಿಸುವಂತೆ ಪೋಷಕರ ಮನವೊಲಿಸುತ್ತಿದ್ದರು.
ಬಯಸಿದ್ದರೆ, ಸರ್ಕಾರಿ ಉದ್ಯೋಗ ಪಡೆಯುವ ಅವಕಾಶ ಇದ್ದರೂ ಸಹ, ಅದನ್ನು ನಿರಾಕರಿಸಿ, ಅಂಬೇಡ್ಕರ್ ಆಶಯದಂತೆ ಸಮಾಜ ಸೇವೆ ಮತ್ತು ದಲಿತರ ಉದ್ಧಾರವನ್ನು ತಮ್ಮ ಜೀವನದ ಧ್ಯೇಯವನ್ನಾಗಿ ಮಾಡಿಕೊಂಡ ಬಸವಲಿಂಗಪ್ಪನವರು ಬೆಂಗಳೂರಿಗೆ ತೆರಳಿ ನಿಟ್ಟೂರು ಶ್ರೀನಿವಾಸರಾವ್ ಬಳಿ ವಕೀಲಿ ವೃತ್ತಿಯನ್ನು ಆರಂಬಿಸಿದರು. 1949 ರಲ್ಲಿ ಕಾಂಗ್ರೇಸ್ ಪಕ್ಷವನ್ನು ಸೇರಿ ಪ್ರಥಮಬಾರಿಗೆ ಅಂದಿನ ಬೆಂಗಳೂರು ನಗರ ಸಭೆಗೆ ಸದಸ್ಯರಾಗಿ ಆಯ್ಕೆಯಾದರು. ನಂತರ 1952 ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ತಾಲ್ಲೂಕಿನ ಉತ್ತರ ಹಳ್ಳಿ ಕ್ಷೇತ್ರದಿಂದ ಗೆದ್ದು  ವಿಧಾನ ಸಭೆಗೆ ಪ್ರವೇಶಿಸಿದರು. 1958 ಮೂರನೇ ವಿಧಾನ ಸಭಾ ಚುನಾವಣೆಗೆ ಮರು ಆಯ್ಕೆಯಾಗಿ ಬಿ.ಡಿ.ಜತ್ತಿ ಮಂತ್ರಿ ಮಂಡಲದಲ್ಲಿ ರಾಜ್ಯ ಗೃಹಸಚಿವರಾಗಿ ಕಾರ್ಯನಿರ್ವಹಿಸಿದರು. 1962 ಚುನಾವಣೆಯಲ್ಲಿ ಸೋಲು ಅನುಭವಿಸಿ, ಮತ್ತೇ ವಕೀಲ ವೃತ್ತಿಯನ್ನು ಮುಂದುವರಿಸಿದರು. 1969 ರಲ್ಲಿ ಕಾಂಗ್ರೇಸ್ ಪಕ್ಷ ಇಬ್ಭಾಗವಾದಾಗ ದೇವರಾಜು ಅರಸುರವೊಂದಿಗೆ ಗುರುತಿಸಿಕೊಂಡರು. 1972 ರಲ್ಲಿ ಅರಸು ನೇತೃತ್ವದ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದಾಗ, ಮೂರನೆಯ ಬಾರಿಗೆ ವಿಧಾನ ಸಭೆಗೆ ಆಯ್ಕೆಯಾಗಿದ್ದ ಬಸವಲಿಂಗಪ್ಪನವರು ಪೌರಾಡಳಿತ ಸಚಿವರಾಗಿ ದಲಿತ ಮಲಹೊರುವ ಪದ್ಧತಿಯ ಮೇಲೆ ನಿಷೇಧ ಹೇರುವುದರ ಮೂಲಕ ಕ್ರಾಂತಿಕಾರಕ ಬದಲಾವಣೆಗೆ ನಾಂದಿ ಹಾಡಿದರು. ತಮ್ಮ ಪ್ರಖರ ವೈಚಾರಿಕತೆ, ಪಾರದರ್ಶಕ ನಡುವಳಿಕೆ ಹಾಗೂ ಬಿಚ್ಚು ನುಡಿಗಳಿಗೆ ಹೆಸರಾಗಿದ್ದ ಬಸವಲಿಂಗಪ್ಪನವರು 1973 ನವಂಬರ್ ತಿಂಗಳಿನಲ್ಲಿ ಮೈಸೂರಿನಲ್ಲಿ ನಡೆದ ಸಮಾರಂಭಲ್ಲಿ ( ನನ್ನ ಪತ್ರಕರ್ತ ಮಿತ್ರರಾದ ಎನ್.ಎಸ್.ಶಂಕರ್ ಅವರ ಮಾವ ಸಂಜೀವಯ್ಯನವರು ಮಹಾರಾಜ ಕಾಲೇಜಿನ ಶತಮಾನೋತ್ವವ ಭವನದಲ್ಲಿ ಏರ್ಪಡಿಸಿದ್ದ ಸಾಹಿತ್ಯ ಕುರಿತಾದ ಕಾರ್ಯಕ್ರಮ ಎಂದು ನೆನಪು) ಕನ್ನಡ ಸಾಹಿತ್ಯದಲ್ಲಿ ಸತ್ವ ಅಥವಾ ತಿರುಳಿಗಿಂತ ಹೆಚ್ಚಾಗಿ ಬೂಸಾ ಹೆಚ್ಚಿದೆ ಎಂಬ ಹೇಳಿಕೆಯನ್ನು ನೀಡಿ ವಿವಾದಕ್ಕೆ ಒಳಗಾದರು. ಬಹುತೇಕ ಮಂದಿ ಸಾಹಿತಿಗಳು ಅವರ ವಿರುದ್ಧ ತಿರುಗಿ ಬಿದ್ದು ಬೂಸಾ ಚಳುವಳಿಯನ್ನು ಹುಟ್ಟು ಹಾಕಿದ ಪರಿಣಾಮವಾಗಿ ಡಿಸಂಬರ್  ತಿಂಗಳಿನಲ್ಲಿ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದರು. ಇಡೀ ಕನ್ನಡದ ಸಾಹಿತ್ಯ ಲೋಕ ಬಸವಲಿಂಗಪ್ಪನವರ ವಿರುದ್ಧ ತಿರುಗಿ ಬಿದ್ದಿದ್ದಾಗ ಕುವೆಂಪು ರವರುಬಸವಲಿಂಗಪ್ಪ ಆಡಿರುವ ಮಾತಿನಲ್ಲಿ ಸತ್ಯವಿದೆಎಂಬ ಹೇಳಿಕೆಯನ್ನು ನೀಡುವುದರ ಮೂಲಕ ಚಳುವಳಿಯ ಕಾವನ್ನು ತಣ್ಣಗಾಗಿಸಿದರು.

ಅಧಿಕಾರ ಕಳೆದುಕೊಂಡಿದ್ದ ಬಸವಲಿಂಗಪ್ಪನವರಿಗೆ ಇಂದಿರಾಗಾಂಧಿಯವರು ರಾಷ್ಟೀಯ ಕಾಂಗ್ರೇಸ್ ಸಮಿತಿಯಲ್ಲಿ ಹಿಂದುಳಿದ ವರ್ಗ ಮತ್ತು ಪರಿಶಿಷ್ಠ ಜಾತಿ ವಿಭಾಗದ ವಿಶೇಷ ಪ್ರತಿನಿಧಿಯಾಗಿ ನೇಮಕ ಮಾಡಿದರು.1978 ರಲ್ಲಿ ನಡೆದ ಚುನಾವಣೆಯಲ್ಲಿ ಪುನರಾಯ್ಕೆಯಾದ ಅವರನ್ನು ಅರಸು ರವರು ಕಂದಾಯ ಸಚಿವರನ್ನಾಗಿ ಮಾಡಿದರು. ಅವಧಿಯಲ್ಲಿ ಅವರುಉಳುವವನೆ ಭೂಮಿಯ ಒಡೆಯಕಾನೂನನ್ನು ಜಾರಿಗೆ ತರುವಲ್ಲಿ ಯಶಸ್ವಿಯಾದರು. 1983 ಚುನಾವಣೆಯಲ್ಲಿ ಅವರು ಚುನಾವಣೆಯಲ್ಲಿ ಸೋತರು. 85 ಚುನಾವಣೆಯಲ್ಲಿ ಅವರು ಗೆದ್ದರೂ ಸಹ ಕಾಂಗ್ರೇಸ್ ಅಧಿಕಾರ ಹಿಡಿಯುವಲ್ಲಿ ವಿಫಲವಾಯಿತು. ರಾಮಕೃಷ್ಣ ಹೆಗ್ಡೆಯವರ ಸರ್ಕಾರದಲ್ಲಿ ಬಸವಲಿಂಗಪ್ಪನವರು ವಿರೋಧ ಪಕ್ಷದ ಸ್ಥಾನದಲ್ಲಿ ಕೂರಬೇಕಾಯಿತು. 1989 ಚುನಾವಣೆಯಲ್ಲಿ ಮತ್ತೆ ಯಲಹಂಕ ಕ್ಷೇತದಿಂದ ಗೆದ್ದ ಅವರು, ವೀರೆಂದ್ರ ಪಾಟಿಲ್ ಸರ್ಕಾರದಲ್ಲಿ ಪಂಚಾಯತ್ ಮತ್ತು ಪಶು ಸಂಗೋಪನಾ ಸಚಿವರಾಗಿದ್ದರು. ಆದರೆ, ಅನಿರೀಕ್ಷಿತವಾಗಿ ಮುಖ್ಯಮಂತ್ರಿ ಸ್ಥಾನ ಬದಲಾಗಿ ವಿರೇಂದ್ರಪಾಟೀಲ್ ಸ್ಥಾನಕ್ಕೆ ವೀರಪ್ಪ ಮೊಯ್ಲಿ ಬಂದಾಗ ಅವರು ಸಚಿವ ಸ್ಥಾನದಿಂದ ವಚಿಚಿತರಾದರು. ತನಗಿಂತ ವಯಸ್ಸಿನಲ್ಲಿ, ಅನುಭವದಲ್ಲಿ ಕಿರಿಯನಾದ ವ್ಯಕ್ತಿ ಮುಖ್ಯಮಂತ್ರಿಯಾದದ್ದು ಅವರಿಗೆ ಬೇಸರ ತರಿಸಿತು. ರಾಜಕೀಯದಲ್ಲಿ ಆಸಕ್ತಿ ಕಳೆದುಕೊಂಡು, ತಮ್ಮ ಕೊನೆಯ ದಿನಗಳಲ್ಲಿ ಅವರು ಬೌದ್ಧ ಧರ್ಮದ ಪ್ರಚಾರದಲ್ಲಿ ತೊಡಗಿಕೊಂಡಿದ್ದರು. ಮುಂದಿನ ಡಿಂಸಂಬರ್ ತಿಂಗಳಿಗೆ ಬಸವಲಿಂಗಪ್ಪ ನಿಧನರಾಗಿ 25 ವರ್ಷಗಳಾಗುತ್ತವೆ. (1992)ಆದರೆ, ಅವರು ದಲಿತರಲ್ಲಿ ಮೂಡಿಸಿದ ಸ್ವಾಭಿಮಾನ ಮತ್ತು ಆತ್ಮ ವಿಶ್ವಾಸ ಇಂದಿಗೂ ಸಹ ಅಚ್ಚಳಿಯದೆ ಉಳಿದಿವೆ.
( ಕರಾವಳಿ ಮುಂಜಾವು ಪತ್ರಿಕೆಯ "ಜಗದಗಲ" ಅಂಕಣ ಬರಹ)

1 comment:

  1. ನಿಮ್ಮ ಪ್ರೀತಿ ಪೂರ್ವಕ ಬರವಣಿಗೆಗೆ ಗೌರವ ಪೂರ್ವಕ ವಂದನೆಗಳು

    ReplyDelete