Thursday, 12 October 2017

ವೃತ್ತಿ ವಿಲಾಸ ಮತ್ತು ಕಾಲುದಾರಿಯ ಕಥನಗಳು ಎಂಬ ಎರಡು ವಿಶಿಷ್ಟ ಆತ್ಮಕಥಾನಕಗಳು

ಕನ್ನಡಲ್ಲಿ ಪ್ರತಿ ವರ್ಷ ಸುಮಾರು ಐದು ಸಾವಿರದಿಂದ ಆರು ಸಾವಿರ ಕೃತಿಗಳು ಪ್ರಕಟವಾಗುತ್ತವೆ ಎಂದು ಹೇಳಲಾಗುತ್ತಿದೆ. ಕನಿಷ್ಠ ಶೇಕಡ ಹತ್ತರಷ್ಟು ಒಳ್ಳೆಯ ಕೃತಿಗಳು ಅಂದರೆ, ಸುಮಾರು ಐನೂರರಿಂದ ಆರನೂರು ಕೃತಿಗಳು ನಮಗೆ ಲಭ್ಯವಾಗಬೇಕಿತ್ತು. ಕನ್ನಡದ ಸಾಹಿತ್ಯ ಮತ್ತು ಸಂಸ್ಕೃತಿಎಂತಹ ಅವಸಾನದ ಅಂಚಿಗೆ ತಲುಪಿದೆ ಎಂದರೆ, ಶೇಕಡ ಒಂದರಷ್ಟು ಅಂದರೆವರ್ಷವೊಂದಕ್ಕೆ ಐವತ್ತರಿಂದ ಅರವತ್ತರಷ್ಟು ಶ್ರೇಷ್ಠ ಕನ್ನಡ ಕೃತಿಗಳು ನಮಗೆ  ಲಭ್ಯವಾಗುತ್ತಿಲ್ಲ.
2017 ಹತ್ತು ತಿಂಗಳ ಅವಧಿಲ್ಲಿ ನಾನು ಇಷ್ಟಪಟ್ಟು ಆಯ್ಕೆ ಮಾಡಿಕೊಂಡು ಓದಿದ ಕೃತಿಗಳೆಂದರೆ, ಕಾವ್ಯ ಕಡಮೆ ಎಂಬ ಹೆಣ್ಣು ಮಗಳಪುನರಪಿಎಂಬ ಕಾದಂಬರಿ, ಸಂಯುಕ್ತಾ ಪುಲಿಗಲ್ ರವರ  “ಪರ್ವತದಲ್ಲಿ ಪವಾಡಎಂಬ ಅನುವಾದ ಕೃತಿ, ವಿಜಯಮ್ಮ ನವರಕುದಿ ಎಸರುಎಂಬ ಆತ್ಮಕಥೆ, ಹೆಚ್.ಆರ್. ಸುಜಾತರವರ  “ನೀಲಿ ನತ್ತಿನ ಮೂಗುಎಂಬ ಪ್ರಬಂಧ ಸಂಕಲನ, ನಟರಾಜು ಬೂದಾಳು ಅವರಕನ್ನಡ ಕಾವ್ಯ ಮೀಮಾಂಸೆ,” ರಹಮತ್ ತರೀಕರೆಯವರಕರ್ನಾಟಕ ಶಾಕ್ತ ಪಂಥಹಾಗೂ ಕೆ.ಸತ್ಯನಾರಾಯಣ ಅವರವೃತ್ತಿವಿಲಾಸಮತ್ತು ಹನೂರು ಕೃಷ್ಣಮೂರ್ತಿಯವರಕಾಲುದಾರಿಯ ಕಥನಗಳುಕೃತಿಗಳನ್ನು ಮಾತ್ರ. ಇದರಾಚೆಗೆ ಓದಿದ ಒಂದೆರೆಡು ಕೃತಿಗಳ ಹೆಸರು ಮತ್ತು ಅವುಗಳಲ್ಲಿದ್ದ ವಸ್ತು ವಿಷಯ ಕೂಡ ನನಗೆ ನೆನಪಿಗೆ ಬರುತ್ತಿಲ್ಲ. ಇದು ನನ್ನ ಮನೋಧರ್ಮ ಅಥವಾ ಅಭಿರುಚಿ ಇಲ್ಲವೆ ಆಸಕ್ತಿಯ ಕಾರಣಗಳಿರಬೇಕು ಎಂದುಕೊಂಡೆ. ನಾನು ವಾಸಿಸುತ್ತಿರುವ ಧಾರವಾಡದ ತೇಜಸ್ವಿನಗರದಲ್ಲಿ ಪ್ರತಿದಿನ ಬೆಳಿಗ್ಗೆ ವಾಕಿಂಗ್ ಸಮಯದಲ್ಲಿ ನನಗೆ ಎದರಾಗುವ ಕನ್ನಡದ ಹಿರಿಯ ಹಾಗೂ  ಅನುಭಾವ ಪ್ರಜ್ಞೆಯ ಕವಿ ಆನಂದ ಝಂಜರವಾಡ ಅವರ ಜೊತೆ ವಿಷಯವನ್ನು ಪ್ರಸ್ತಾಪಿಸಿದೆ. ನೇರ ಹಾಗೂ ನಿಷ್ಟುರ ಅಭಿಪ್ರಾಯಗಳಿಗೆ ಹೆಸರಾಗಿರುವ ಆನಂದರುಕೊಪ್ಪ ಅವರೇ, ನಾನು ಕನ್ನಡದ ಕೃತಿಗಳನ್ನು ಓದುವುದನ್ನು ಬಿಟ್ಟಿದ್ದೀನಿ. ಏಕೆಂದರೆ, ಆತ್ಮ ತೃಪ್ತಿಗಾಗಿ ಬರೆಯುವ ಲೇಖಕರು ಕಡಿಮೆಯಾಗಿದ್ದಾರೆ ಇದಕ್ಕೆ ಬದಲಾಗಿ ಓದುಗರ ಮನರಂಜನೆಗಾಗಿ, ಬೆಸ್ಟ್ ಸೆಲ್ಲರ್ ಕೃತಿಗಳ ಲೇಖಕ ಎಂಬ ಹುಸಿತನದ ಪಟ್ಟಕ್ಕಾಗಿ ಬರೆಯುವ ತೆಲುಗಿನ ಯಂಡಮೂರಿಯಂತೆ ಕನ್ನಡದ ಯಂಡಮೂರಿಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡಿದ್ದಾರೆ ಇಂತಹವರ  ಆತ್ಮ ವಂಚನೆಯ ಕೃತಿಗಳನ್ನು ನಾನು ಏಕೆ ಓದಬೇಕು? ನನ್ನ ಮೇಜಿನ ಮೇಲಿರುವ ಬೇಂದ್ರೆ, ಅಡಿಗರ ಕವಿತೆಗಳು, ಕುವೆಂಪು ಕೃತಿಗಳು, ಅಭಿನವಗುಪ್ತನ ಕಾವ್ಯ ಕುರಿತ ಮೀಮಾಂಸೆ ಮತ್ತು ಮರಾಠಿ ಭಾಷೆಯ ಕೃತಿಗಳು ನನಗೆ ಸಾಕುಎಂದರು. ಅವರ ಮಾತುಗಳನ್ನು ಕೇಳಿದಾಗ ನನಗೆ ಆಶ್ಚರ್ಯವೆನಿಸಲಿಲ್ಲ. ಕನ್ನಡದಲ್ಲಿ ಸಾಹಿತ್ಯಕ್ಕಿಂತ ಕಸ ಹೆಚ್ಚಿನ ಪ್ರಮಾಣದಲ್ಲಿ  ಸೃಷ್ಟಿಯಾಗುತ್ತಿದೆ ಎಂಬುದು ಮನದಟ್ಟಾಯಿತು. ಕನ್ನಡದ ಸಾಹಿತ್ಯ ಕೃತಿಗಳನ್ನು ಹೊರತು ಪಡಿಸಿ, ಪ್ರತಿ ವರ್ಷ ಐವತ್ತಕ್ಕೂ ಹೆಚ್ಚು ಇಂಗ್ಲೀಷ್ ಕೃತಿಗಳನ್ನು ಓದುವ ನನಗೆ ಸ್ವಲ್ಪ ಸಮಾಧಾನವಾಯಿತು. (ಇದೀಗ ಅಂಡಮಾನ್- ನಿಕೋಬಾರ್ ದ್ವೀಪದಲ್ಲಿ ಪ್ರವಾಸೋದ್ಯಮ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಸ್ಥಳಿಯ ಆದಿವಾಸಿಗಳ ಹಾಗೂ ಪರಿಸರದ ಮೇಲಿನ ಮಾರಣಹೋಮದ ಕಥನವನ್ನು ಒಳಗೊಂಡಿರುವ ಹಾಗೂ  ಪಂಕಜ್ ಸೆಕ್ಷಾರಿಯ ಎಂಬ ಪರಿಸರ ವಿಜ್ಞಾನಿ ಬರೆದಐಸ್ ಲ್ಯಾಂಡ್ ಇನ್ ಪ್ಲಕ್ಷ್ಎಂಬ ಕೃತಿಯನ್ನು ಓದುತ್ತಿದ್ದೇನೆ) ಇಂತಹ ಕನ್ನಡ ಸಾಹಿತ್ಯ ಲೋಕದ ನೀರಾಸೆಯ ವಾತಾವರಣದ ನಡುವೆ ಕೆ.ಸತ್ಯನಾರಾಯಣರ ವೃತ್ತಿ ವಿಲಾಸ ಮತ್ತು ಹನೂರು ಕೃಷ್ಣಮೂರ್ತಿಯವರ ಕಾಲುದಾರಿಯ ಕಥನಗಳು ಕೃತಿಗಳು ಭರವಸೆಯ ಬೆಳ್ಳಿಯ ಕಿರಣಗಳಾಗಿ ನಮಗೆ ಗೋಚರಿಸುತ್ತವೆ.
ಕನ್ನಡದಲ್ಲಿ ಬಂದಿರುವ ಆತ್ಮಚರಿತ್ರೆಗಳಿಗಿಂತ ಭಿನ್ನವಾಗಿರುವ ಎರಡು ಕೃತಿಗಳಲ್ಲಿ ಲೇಖಕರು ಇವುಗಳನ್ನು ತಮ್ಮ ಆತ್ಮಕಥಾನಕ ಎಂದು ಕರೆದಿದ್ದರೂ ಸಹ, ಎಲ್ಲಿಯೂ ತಾವು ಮುನ್ನೆಲೆಗೆ ಬಾರದೆ, ತಮ್ಮ ಬದುಕನ್ನು ಕೇವಲ ನೆಪವಾಗಿರಿಸಿಕೊಂಡು, ತಾವು ಬದುಕಿದ ಲೋಕದಲ್ಲಿ ಕಂಡ ಘಟನೆಗಳನ್ನು, ತಮ್ಮ ಅನುಭವಗಳನ್ನು ಅತ್ಯಂತ ನಿರ್ಭಾವುಕರಾಗಿ ಬಣ್ಣಿಸುತ್ತಾ, ತಮ್ಮ ಚಿತ್ತ ಸಮಾಧಾನತೆಯನ್ನು ಕೃತಿಗಳಲ್ಲಿ ಅಭಿವ್ಯಕ್ತಿಗೊಳಿಸಿದ್ದಾರೆ. ಸತ್ಯನಾರಾಯಣರವರ ಕೃತಿಯಲ್ಲಿ ನಾವು ಬದುಕುತ್ತಿರುವ ವರ್ತಮಾನದ ಬದುಕಿನ ಸಭ್ಯ ನಾಗರೀಕರು ಮತ್ತು ಪ್ರಸಿದ್ಧರು ಎನಿಸಿಕೊಂಡ  ಮನುಷ್ಯರ ಪೊಳ್ಳು ಜೀವನದ ಕಥೆಗಳು ಹಾಗೂ  ವಿಕೃತಿಯ ಜೊತೆಗೆ ವಿಲಾಸದ ಕಥೆಗಳಿದ್ದರೆ. ಕೃಷ್ಣಮೂರ್ತಿಯವರ ಕೃತಿಯಲ್ಲಿ ನಮ್ಮ ಕಣ್ಣೆದುರು ಕಳೆದು ಹೋದ ಗ್ರಾಮೀಣ ಬದುಕಿನ ಜಾನಪದ ಜಗತ್ತಿನ ವೈಭವ, ಅಲ್ಲಿನ ನೆಲಮೂಲ ಸಂಸ್ಕತಿ, ಮನುಷ್ಯ-ಮನುಷ್ಯನ ನಡುವಿನ ಕಳ್ಳು ಬಳ್ಳಿಯ ಸಂಬಂಧ, ಪ್ರಾಣಿ ಪಕ್ಷಿಗಳ ಜಗತ್ತು, ನಿರ್ಜನ ಕಾಡು ಮತ್ತು ತೊರೆಗಳು, ತಂಬೂರಿ ಮತ್ತು ಏಕನಾದದ ನೀನಾದದ ಧ್ವನಿ, ಕೊಳಲು, ದಮ್ಮಡಿ, ತಮಟೆ, ಶಂಖ, ಕಂಸಾಳೆ, ಜಾಗಟೆಗಳ ನಾದ ವೈಭವದ ಕಥನಗಳಿವೆ.
ಕಥೆಗಾರರಾಗಿ, ಕಾದಂಬರಿಗಾರರಾಗಿ, ಪ್ರಬಂಧಕಾರರಾಗಿ ಗುರುತಿಸಿಕೊಂಡಿರುವ ಕೆ.ಸತ್ಯನಾರಾಯಣರು ಈಗಾಗಲೇ ತಮ್ಮ ಆತ್ಮ ಕಥನದ ಭಾಗವಾಗಿ ನಾವೇನು ಬಡವರಲ್ಲ ಮತ್ತು ಸಣ್ಣಪುಟ್ಟ ಆಸೆಗಳ ಆತ್ಮ ಚರಿತ್ರೆಯ ಎರಡು ಸಂಪುಟಗಳನ್ನು ಬರೆದು ಪ್ರಕಟಿಸಿದ್ದು, ಅಂತಿಮವಾಗಿ ವೃತ್ತಿ ವಿಲಾಸ ಹೆಸರಿನ ಕೃತಿಯಲ್ಲಿ ತಮ್ಮ ವೃತ್ತಿಯ ಘಟನೆಗಳನ್ನು ದಾಖಲಿಸಿದ್ದಾರೆ. ಲವಲವಿಕೆಯ ಬರೆವಣಿಗೆಗೆ ಹೆಸರಾದ ಸತ್ಯನಾರಾಯಣರವರು ಕೇಂದ್ರ ಆದಾಯ ತೆರಿಗೆ ಇಲಾಖೆಯಲ್ಲಿ ಅಧಿಕಾರಿಯಾಗಿದ್ದುಕೊಂಡು ದೇಶದ ಅನೇಕ ನಗರಗಳಲ್ಲಿ ಸೇವೆ ಸಲ್ಲಿಸಿ, ಕರ್ನಾಟಕ ಮತ್ತು ಗೋವಾ ರಾಜ್ಯಗಳ ತೆರಿಗೆ ಆಯುಕ್ತರಾಗಿ ಕಾರ್ಯನಿರ್ವಹಿಸಿ ನಿವೃತ್ತರಾದರು. ಮೂರೂವರೆ ದಶಕಗಳ ಜೀವನಾನುಭವ, ವಿವಿಧ ಸಂಸ್ಕøತಿ ಹಾಗೂ ಭಾಷೆಗಳಲ್ಲದೆ ಅಲ್ಲಿನ ಜನತೆಯ ಜೊತೆ ಒಡನಾಡಿದ ಅನುಭವ ಕೃತಿಯಲ್ಲಿ ಪ್ರೌಢ ಅಭಿವ್ಯಕ್ತಿಯಾಗಿ ಪ್ರಕಟವಾಗಿದೆ. ಸದಾ ವಾಸ್ತವಿಕ ನೆಲೆಗಟ್ಟಿನಲ್ಲಿ ಮತ್ತು ಮಾನವೀಯ ನೆಲೆಯಲ್ಲಿ ಜೀವನವನ್ನು ನೋಡುವ ಅವರ ದೃಷ್ಟಿಕೋನಕ್ಕೆ ಒಂದು ರೀತಿಯಲ್ಲಿ ಸಂತನ ಗುಣ ಪ್ರಾಪ್ತವಾಗಿದೆ. ಹಾಗಾಗಿ ಕೃತಿಯಲ್ಲಿ ದಾಖಲಾಗಿರುವ ಮೀಟಿಂಗ್ ಮಹಾತ್ಮೆ, ಅರಮನೆಯ ಕ್ರಾಂತಿಕಾರರು ಅಧ್ಯಾಯಗಳಲ್ಲಿ ಅಧಿಕಾರಿಗಳ ವರ್ತನೆ  ಕುರಿತ ಸ್ವ ವಿಮರ್ಶೆ ಹಾಗೂ ಮಂತ್ರಿ ಮಹೋದಯರ ಉದ್ಧಟತನದ ಮಾಹಿತಿಗಳಿ ದ್ದರೆ, ಜವಾನರು ಕುರಿತ ಅಧ್ಯಾಯದಲ್ಲಿ ಮಾನವೀಯ ಗುಣಗಳು ಎದ್ದು ಕಾಣುತ್ತವೆ. ತೆರಿಗೆ ದಾಳಿಅಧಿಕಾರಿಗಳ ಕೌಟುಂಬಿಕ ಜೀವನ, ವರ್ಗಪುರಾಣ, ಇವುಗಳಲ್ಲಿ ಅಧಿಕಾರ ವರ್ಗದ ಬದುಕಿನ ಕ್ರಮವನ್ನು ಅತ್ಯಂತ ನಿರ್ಭಾವುಕರಾಗಿ ಬಣ್ಣಸಿದ್ದಾರೆ. ಓರ್ವ ನಿಷ್ಟಾವಂತ ಅದಿಕಾರಿಯಾಗಿ ಮುಂಬೈ, ಚೆನ್ನೈ, ಹಾಗೂ ಬೆಂಗಳೂರು ನಗರದ ಸಿನಿಮಾ ಮಂದಿಯ ಅಹಂಕಾರವನ್ನು, ಕಪಟ ಬದುಕನ್ನು ತೀರಾ ಹತ್ತಿರದಿಂದ ನೋಡಿದ ಲೇಖಕರು ಕೃತಿಯಲ್ಲಿ ಹಲವು ನಟ ನಟಿಯರ ಇನ್ನೊಂದು ಮುಖವನ್ನು ಯಾವುದೇ ರಾಗದ್ವೇಷವಿಲ್ಲದೆ ದಾಖಲಿಸಿದ್ದಾರೆ. ಜೊತೆಗೆ ಅಧಿಕಾರಿಗಳ ಭ್ರಮೆ ಕಳಚುವಂತಹ; ಮಾಜಿ ಮುಖ್ಯಮಂತ್ರಿ ಜೆ.ಹೆಚ್. ಪಟೇಲರನಮ್ಮ ಮಾತುಗಳನ್ನು ಕೇಳವವರು, ನಮ್ಮ ಮನಸ್ಸಿನ ಮರ್ಮ ಅರಿಯುವವರು, ನಾವು ಹೇಳಿದಂತೆ ಬಾಲ ಅಲ್ಲಾಡಿಸುವವರು ಇಂತಹ ಅಧಿಕಾರಿಗಳು ಬೇಕಿದ್ದರೆ ಅವರನ್ನು ನಮ್ಮ ಕಾಲದಲ್ಲಿ ಹುಡುಕಲು ಕಷ್ಟವಾಗುತ್ತಿತ್ತು. ಏಕೆಂದರೆ, ಅಂತಹ ಅಧಿಕಾರಿಗಳು ಕಡಿಮೆ ಇದ್ದರು. ಈಗೇನು ತೊಂದರೆಯಿಲ್ಲ ರೀತಿಯ ಅಧಿಕಾರಿಗಳೇ ತುಂಬಾ ಇದ್ದು; ನಮ್ಮ ಸೇವೆ ಮಾಡಲು ಅವರಲ್ಲಿ ಪೈಪೋಟಿ ಇದೆ. ತೀರಾ ಕೆಟ್ಟವರು ಮತ್ತು ದುರ್ಬಲರು ಇವರನ್ನು ಆಯ್ಕೆ ಮಾಡಿಕೊಳ್ಳುವದಷ್ಟೇ ನಮ್ಮ ಕೆಲಸಎಂಬ ಮಾರ್ಮಿಕವಾದ ಮಾತನ್ನು ದಾಖಲಿಸಿ ತಮ್ಮೊಳಗಿನ ಪಾರದರ್ಶಕ ಗುಣವನ್ನು ಅನಾವರಣಗೊಳಿಸಿದ್ದಾರೆ.
ಕನ್ನಡದ ಪ್ರಾಧ್ಯಾಪಕರಾಗಿ, ಕತೆಗಾರರಾಗಿ, ಕಾದಂಬರಿಗಾರರಾಗಿ, ಮಿಗಿಲಾಗಿ ಜಾನಪದ ವಿದ್ವಾಂಸರಾಗಿ ಮಲೆ ಮಹದೇಶ್ವರ ಕಾವ್ಯ ಮತ್ತು ಮಂಟೆಸ್ವಾಮಿ ಕಾವ್ಯ ಕುರಿತು ಅಧಿಕೃತವಾಗಿ ಮಾತನಾಡುವ ಹಾಗೂ ಹಳೆಗನ್ನಡ ಕಾವ್ಯ ಕುರಿತು ಅಷ್ಟೇ ನೈಪ್ಮಣ್ಯತೆಯನ್ನು ಸಾಧಿಸಿರುವ ಕೃಷ್ಣಮೂರ್ತಿ ಹನೂರರ ಕೃತಿಯು; ಅವರ ಅಜ್ಞಾತನೊಬ್ಬನ ಆತ್ಮ ಚರಿತ್ರೆ ಎಂಬ ಶ್ರೇಷ್ಠ ಕಾದಂಬರಿಯ ನಂತರ ಬಂದ ಕೃತಿಯಾಗಿದ್ದು ಅದೇ ರೀತಿಯ ಮೌಲಿಕವಾದ ಗುಣವನ್ನು ಹೊಂದಿದೆ. ತಮ್ಮ ಸುಧೀರ್ಘ ನಾಲ್ಕು ದಶಕಗಳ  ಅಧ್ಯಾಪನದ ವೃತ್ತಿಯ ಜೊತೆಗೆ ನಾಡಿನ ಜನಪದರು, ಮೌಖಿಕ ಗಾಯಕರು, ಅವಧೂತರು, ತತ್ವಪದಗಾರರು, ಗ್ರಾಮೀಣ ಜಾನಪದ ಕಲೆಗಳ ಕಲಾವಿದರನ್ನು ಹುಡುಕಿಕೊಂಡು ಕರ್ನಾಟಕವೂ ಸೇರಿದಂತೆ ಇಡೀ ದೇಶದುದ್ದಕ್ಕೂ  ಓಡಾಡಿದ ಅನುಭವ ಕಥನ ಕೃತಿಯಲ್ಲಿ ಮುಪ್ಪುರಿಗೊಂಡಿದೆ. ಚಿತ್ರದುರ್ಗದ ಚಳ್ಳೆಕೆರೆಯಲ್ಲಿ ಆರಂಭಗೊಂಡ ತಮ್ಮ ಉಪನ್ಯಾಸಕ ವೃತ್ತಿಯ ಜೊತೆ ಜೊತೆಗೆ  ಹುಟ್ಟಿಕೊಂಡ ಜಾನಪದ ಜಗತ್ತಿನ ಓಡಾಟ ಅವರ ಜೀವನಾನುಭವವನ್ನು ದಟ್ಟಗೊಳಿಸಿದೆ. ಆದ್ದರಿಂದ ಕಲಾವಿದರ ಕಥೆ ಹೇಳುತ್ತಾ, ಅವರ ಬಾಯಲ್ಲಿ ಜಾನಪದ ಕಥೆಗಳನ್ನು, ಕಾವ್ಯಗಳನ್ನು ಹೊರಹೊಮ್ಮಿಸುತ್ತಾ, ಅವುಗಳ ಜೊತೆಗೆ ತಮ್ಮ ಬಾಲ್ಯದ ಜೀವನಕ್ಕೆ ಕೃಷ್ಣಮೂರ್ತಿಯವರು ಕೃತಿಯಲ್ಲಿ ಜಿಗಿಯುತ್ತಾರೆ. ಕೊಳ್ಳೆಗಾಲ, ಹನೂರು, ಮಲೆ ಮಹಾದೇಶ್ವರ ಬೆಟ್ಟದ ಪರಿಸರ, ಕಾಲದ ದಟ್ಟ ಹಸಿರು, ಕಾನನ, ಜಾತ್ರೆ, ಕೋರಣ್ಯ ಮಾಡುತ್ತಾ, (ಬಿಕ್ಷೆ) ಜನಪಾದ ಕಾವ್ಯಗಳನ್ನು ಹಾಡುತ್ತಾ ಎಲ್ಲರ ಮನೆ ಮತ್ತು ಮನಗಳಿಗೆ ಹಾಡುಗಳನ್ನು ದಾಟಿಸುತ್ತಿದ್ದ ಕಲಾವಿದರ ಕುರಿತು, ಏಕತಾರಿ ಮತ್ತು ಜೊಳಿಗೆ ಹಿಡಿದು ಮನೆ ಮುಂದೆ ನಿಂತು ಅನುಭಾವದ ಲೋಕವನ್ನು ತೆರೆದಿಡುತ್ತಿದ್ದ ತತ್ವಪದಕಾರರ ಬದುಕನ್ನು ಅತ್ಯಂತ ಮಾರ್ಮಿಕವಾಗಿ ಬಣ್ಣಿಸಿದ್ದಾರೆ.

ಕೃತಿಯಲ್ಲಿ ದಾಖಲಾಗಿರುವ ಬೆಳೆಗೆರೆ ಕೃಷ್ಣಶಾಸ್ತ್ರಿಯವರ ಜೊತೆಗಿನ ಓಡಾಟ, ಸಿರಿಯಜ್ಜಿಯ ಹಾಡುಗಾರಿಕೆಯ ಕಥನ, ಹಿನಕಲ್ ಮಾದೇವಯ್ಯನರ ಸಂದರ್ಶನ, ಸಂಗ್ಯಾ-ಬಾಳ್ಯ ನಾಟಕದ ಏಕವ್ಯಕ್ತಿ ಪ್ರದರ್ಶನ ನೀಡುವ ಬಿಜ್ಜೂರು ಬಸವಯ್ಯನ ಬಡತನ ಮತ್ತು ಮುಗ್ದತೆ ಹೀಗೆ ಅನೇಕ ಕಥಾ ಪ್ರಸಂಗಗಳು ಮನಮಿಡಿಯುವಂತಿವೆ. ಒಂದು ಕಡೆ ಮಲೆ ಮಹಾದೇಶ್ವರ ಕಾವ್ಯ ಹಾಡುವ ಮಾದೇವಚಿ್ಯುನವರನ್ನು ಸಂದರ್ಶಿಸುವ ಲೇಖನದಲ್ಲಿ ಮಹದೇಶ್ವರದ ಬೆಟ್ಟದ ಪರಿಸರ ನಾಶದ ಕುರಿತು ಮಾತನಾಡುತ್ತಾ, ಹನೂರು ಅವರುಹಂಗಾದ್ರೆ ಮಾದಯ್ನ ಗಿರಿಲಿ ಉಳಿದಿರದು ಇನ್ನೇನು?” ಎಂಬ ಪ್ರಶ್ನೆಗೆ ಮಾದಯ್ಯ ನೀಡುವ ಉತ್ತರ ಹೀಗಿದೆ, “ ಏನು ಉಳ್ಕಂಡಿಲ್ಲ, ಅಲ್ಲಿ ಉಳಿದಿರದು ಮಾದಯ್ಯ ಒಬ್ನೆಎಂಬ ಮಾತು ನಾವು ಬದುಕುತ್ತಿರುವ ವರ್ತಮಾನದ ಜಗತ್ತು ಆದುನಿಕತೆಯ ಕೊಡಲಿಯಿಂದ ಎಲ್ಲವನ್ನೂ ಕೊಚ್ಚಿಹಾಕುತ್ತಿರುವುದನ್ನು ಪ್ರತಿಧ್ವನಿಸುವ ಮಾತಿನಂತೆ ಕೇಳಿಬರುತ್ತಿದೆ. ವರ್ಷಕ್ಕೆ ಎಷ್ಟಾದರೂ ಕೃತಿಗಳು ಬರಲಿ, ಇಂತಹ ಒಂದು ಕೃತಿ ಓದುಗರನ್ನು ವರ್ಷವಿಡಿ ಕಾಡುವ ಗುಣವನ್ನು ಒಳಗೊಂಡಿದೆ. ಕಾರಣಕ್ಕಾಗಿ ನಾವು ಕೃಷ್ಣಮೂರ್ತಿ ಹನೂರು ಅವರನ್ನು ಅಭಿನಂದಿಸಬೇಕು.No comments:

Post a Comment