ಶುಕ್ರವಾರ, ನವೆಂಬರ್ 17, 2017

ಕೇರಳದ ದೇಗುಲಗಳಲ್ಲಿ ದಲಿತ ಆರ್ಚಕರ ನೇಮಕ: ಸಂಭ್ರಮ ಮತ್ತು ವಾಸ್ತವ


ನಮ್ಮ ನೆರೆಯ ಕೇರಳ ರಾಜ್ಯದಲ್ಲಿ ಅಲ್ಲಿನ ಸರ್ಕಾರದ ಭಾಗವಾಗಿರುವ ಟ್ರಾಂವಂಕೂರ್ ಟೆಂಪಲ್ ಬೋರ್ಡ್ ಎಂಬ ದೇವಸ್ಥಾನಗಳ ಆಡಳಿತ ಮಂಡಳಿಯು  ದಕ್ಷಿಣ ಕೇರಳದಲ್ಲಿರುವ ದೇವಾಸ್ಥಾನಗಳ ಉಸ್ತುವಾರಿಯನ್ನು ಹೊಂದಿದೆ ಮಂಡಳಿಯು ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಯದುಕೃಷ್ಣನ್ ಎಂಬ ದಲಿತ ಯುವಕನನ್ನು ದೇವಸ್ಥಾನವೊಂದಕ್ಕೆ ಆರ್ಚಕನನ್ನಾಗಿ ನೇಮಕ ಮಾಡುವುದರ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸಿದೆ. ದೇಗುಲಕ್ಕೆ ಪ್ರವೇಶವನ್ನು  ನಿರಾಕರಿಸಲ್ಪಟ್ಟಿದ್ದ ಸಮುದಾಯದಿಂದ ಬಂದ ಯುವಕನೊಬ್ಬ ಬೆಳಗಿನ ಜಾವ ನಾಲ್ಕು ಗಂಟೆಗೆ ಎದ್ದು ಸ್ಥಳಿಯ ನದಿಯೊಂದರಲ್ಲಿ ಸ್ನಾನ ಮಾಡಿ, ಶಿವನ ದೇಗುಲದಲ್ಲಿ  ಪೂಜೆ ಸಲ್ಲಿಸುತ್ತಾ; ಪಠಿಸುವ ಗಾಯತ್ರಿ ಮಂತ್ರವು ಅಲ್ಲಿನ ಸಾಮಾಜಿಕ ಬದುಕಿನಲ್ಲಿ ಹೊಸ ಗಾಳಿಯೊಂದನ್ನು ಬೀಸುವಂತೆ ಮಾಡಿದೆ.
ಒಂದು ಸಣ್ಣ ಸಂಚಲನ ಅಥವಾ ಬದಲಾವಣೆ ಎನ್ನಬಹುದಾದ ನೇಮಕ ಅಷ್ಟೇನು ತೃಪ್ತಿಕರ ಸಂಗತಿಯಲ್ಲವೆಂದು  ಅನಿಸಿದರೂ ಕೂಡ; ಮುಂದಿನ ದಿನಗಳಲ್ಲಿ ಇನ್ನಷ್ಟು ಬದಲಾವಣೆಗೆ ನಾಂದಿಯಾಗಬಹುದೆಂಬ ಆಶಯವನ್ನು ನಾವು  ಇಟ್ಟುಕೊಳ್ಳಬಹುದುತ್ರ್ರಿಸೂರು ಜಿಲ್ಲೆಯ ಚಾಲಕ್ಕುಡಿ ಎಂಬ ಊರಿನ ರವಿ ಮತ್ತು ಲೀಲಾ ಎಂಬ ದಲಿತ ವರ್ಗದ ಕೂಲಿಕಾರ ದಂಪತಿಗಳ ಪುತ್ರನಾದ ಯದುಕೃಷ್ಣನ್  ಸಂಸ್ಕತದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಪ್ರತಿಭಾವಂತ ಯುವಕ. ಆನಂತರದ ದಿನಗಳಲ್ಲಿ  ವೇದ ಮಂತ್ರಗಳನ್ನು ಎರ್ನಾಕುಲಂ ತಂತ್ರ ವಿದ್ಯಾ ಪೀಠಂಎಂಬ ಸಂಸ್ಥೆಯಲ್ಲಿ ಅಧ್ಯಯನ ಮಾಡಿ ಒಂದು ರೀತಿಯಲ್ಲಿ ಬ್ರಾಹ್ಮಣ್ಯವನ್ನು ಸಂಪಾದಿಸಿಕೊಂಡವನು.
ಕಳೆದ  ಒಂದು ತಿಂಗಳಿನಿಂದ ಯದುಕೃಷ್ಣನ್ ಕೇರಳದ ಪತನಾಮ್ತಿಪಟ್ಟ ಎಂಬ ಜಿಲ್ಲೆಯ ಕೀಚರಿವೆಲಕ್ಕಡವು ಎಂಬ ಊರಿನಲ್ಲಿ 150 ವರ್ಷಗಳ ಇತಿಹಾಸವಿರುವ ಈಶ್ವರನ ದೇವಸ್ಥಾನದಲ್ಲಿ ಆರ್ಚಕನಾಗಿ ಯಾವುದೇ ಜಾತಿಯ ತರತಮವಿಲ್ಲದೆ ಕಾರ್ಯನಿರ್ವಹಿಸುತ್ತಿದ್ದಾನೆ. ಹುದ್ದೆಗೆ ಮುನ್ನ ಕೃಷ್ಣನ್ ಎರ್ನಾಕುಲಂ ಜಿಲ್ಲೆಯ ವಲಿಯಕುಲಂಗರ ಎಂಬ ಊರಿನ ದೇವಿ ದೇಗುಲದಲ್ಲಿ ಐದು ವರ್ಷ ಆರ್ಚಕ ವೃತ್ತಿಯನ್ನು ಹಾಗೂ ಅದಕ್ಕೂ ಐದು ವರ್ಷ ಸಂಸ್ಕತ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದನು. ಒಂದು ನೋವಿನ ಸಂಗತಿಯೆಂದರೆ, ದಲಿತ ಯುವಕನ ವೇಷ ಮತ್ತು ಆತನ ಶರೀರದ ಮೇಲಿರುವ ಜನಿವಾರ ಹಾಗೂ ವಿಭೂತಿ, ಶ್ರೀಗಂಧದ ಮುದ್ರೆಗಳನ್ನು ನೋಡಿದಾಗ ಯಾವದೇ ರೀತಿಯ  ದಲಿತ ಅಸ್ಮಿತೆ ಚಹರೆಗಳು ಕಂಡು ಬರುವುದಿಲ್ಲ. ಸಾಮಾಜಿಕ ಬದಲಾವಣೆ ದಲಿತನನ್ನು ಬ್ರಾಹ್ಮಣ್ಯಕ್ಕೇರಿಸುವ ಹುನ್ನಾರವೇನೋ? ಎಂಬಂತೆ  ಕಾಣುತ್ತದೆ. ಯದುಕೃಷ್ಣನ್ ಒಬ್ಬ ದಲಿತನಾಗಿ, ಯಾವುದೇ ಸಂಸ್ಕøತದ ವೇದ ಮಂತ್ರಗಳ ಘೋಷಣೆಗಳಿಲ್ಲದೆ, ನಮ್ಮ ಹಿರೆಮಗಳೂರ್ ಕಣ್ಣನ್ ಅಚ್ಚ ಕನ್ನಡದಲ್ಲಿ ಹಿರೇಮಗಳೂರಿನ ದೇವಸ್ಥಾನದಲ್ಲಿ ಪೂಜೆ ಮಾಡುವ ರೀತಿಯಲ್ಲಿ ತನ್ನ  ಮಾತೃ ಭಾಷೆ ಮಲೆಯಾಳಂನಲ್ಲಿ ಪೂಜೆ ಮಾಡುವಂತಾದರೆ, ಸರ್ಕಾರದ ನೇಮಕಾತಿಗೂ ಅರ್ಥ ಬರುತ್ತಿತ್ತು. ಆದರೂ ಕೂಡ ಅಶ್ಪøಶ್ಯತೆ ಕುರಿತಂತೆ ಅತ್ಯಂತ ಹೇಯವಾದ ಮತ್ತು ಹೀನವಾದ ಇತಿಹಾಸವನ್ನು ಹೊಂದಿರುವ ಕೇರಳದಲ್ಲಿ ಇಂತಹ ಒಂದು ಬದಲಾವಣೆಯನ್ನು ನಾವು ಮುಕ್ತ ಮನಸ್ಸಿನಿಂದ ಸ್ವಾಗತಿಸಲೇಬೇಕು. ಏಕೆಂದರೆ, ಪ್ರತಿಯೊಂದು ಮಹಾಯಾನವು ಒಂದು ಪುಟ್ಟ ಹಾಗೂ ದಿಟ್ಟ ಹೆಜ್ಜೆಯಿಂದ ಆರಂಭವಾಗುತ್ತದೆ.
ಕೇರಳದ ಸಾಮಾಜಿಕ ಇತಿಹಾಸದಲ್ಲಿ ಅಲ್ಲಿನ ನಂಬೂದರಿಗಳು, ನಾಯುರ್ಗಳು ಮತ್ತು ಕ್ಷತ್ರಿಯರು ಹಾಗೂ ತಿರುವಾಂಕೂರು ಸಂಸ್ಥಾನದ ದೊರೆಗಳು ಶತ ಶತಮಾನಗಳುದ್ದಕ್ಕೂ ಅಲ್ಲಿನ ಇಳವರ್, ನಾಡಾರ್ ಸೇರಿದಂತೆ ದಲಿತ ಹಿಂದುಳಿದ ವರ್ಗದ ಜನರನ್ನು ಕ್ರೂರವಾಗಿ ಪ್ರಾಣಿಗಳಂತೆ ನಡೆಸಿಕೊಂಡಿದ್ದಾರೆ. ದಲಿತರು ರಸ್ತೆಯಲ್ಲಿ ಉಗುಳಬಾರದು ಎಂಬ ಉದ್ದೇಶದಿಂದ ಕುತ್ತಿಗೆಗೆ ಮಣ್ಣಿನ ಮಡಕೆಯನ್ನು ನೇತು ಹಾಕುವುದರ ಜೊತೆ, ನಡೆದಾಡುವ ರಸ್ತೆಯಲ್ಲಿ ಅವರ ಹೆಜ್ಜೆಯ ಗುರುತುಗಳು ಮೂಡಬಾರದು ಎಂಬ ಉದ್ದೇಶದಿಂದ ಅವರ ಸೊಂಟದ ಹಿಂಭಾಗಕ್ಕೆ ತೆಂಗಿನ ಕಡ್ಡಿಗಳ ಪೊರಕೆಯನ್ನು ಕಟ್ಟಿಕೊಳ್ಳಬೇಕೆಂಬ ನಿಯಮವನ್ನು ಜಾರಿಗೆ ತರಲಾಗಿತ್ತು. ಇದಷ್ಟೇ ಅಲ್ಲದೆ, ಕೀಳು ಜಾತಿಯ ಪುರುಷ ಮತ್ತು ಮಹಿಳೆಯರು ಸೊಂಟದ ಮೇಲ್ಭಾಗದಲ್ಲಿ ಯಾವುದೇ ವಸ್ತ್ರಗಳನ್ನು ತೊಡುವಂತಿರಲಿಲ್ಲ. ಅತ್ಯಂತ ಕ್ರೌರ್ಯ ಎನ್ನಬಹುದಾದ ಇಂತಹ ಅಮಾನುಷ ನಡುವಳಿಕೆಗಳು ತಿರುವಾಂಕರ್ ಸಂಸ್ಥಾನದಲ್ಲಿ ಜಾರಿಯಲ್ಲಿದ್ದು ಗಮನಾರ್ಹ ಸಂಗತಿ. ಕ್ರೈಸ್ತ ಸಮುದಾಯದ ಮಹಿಳೆಯರಿಗೆ ಎದೆಯನ್ನು ಸೆರಗಿನಿಂದ  ಮುಚ್ಚಿಕೊಳ್ಳದಂತೆ  ಕುಪ್ಪುಸಂ ಅಂದರೆ ರವಿಕೆ ತೊಡುವುದಕ್ಕೆ ರಿಯಾಯಿತಿ ನೀಡಲಾಗಿತ್ತು. ಇದಕ್ಕಾಗಿ ಕೆಲವು ವರ್ಗಗಳಿಂದಮುಲP್ಪರಂಅಂದರೆ, ಮೊಲೆ ತೆರಿಗೆ ಎಂದು ವಸೂಲಿ ಮಾಡಲಾಗುತ್ತಿತ್ತು.
ಘನತೆ ಮತ್ತು ಆತ್ಮವಿಶ್ವಾಸವನ್ನು ಕಸಿಯುವಂತಹ ಅಮಾನುಷ ಪದ್ಧತಿಯ ವಿರುದ್ಧ ಕೆಳಜಾತಿಯ ಧೀರ ಮಹಿಳೆ ನಂಗೇಲಿ ಎಂಬಾಕೆ 1803 ರಲ್ಲಿ ತೋರಿದ ಪ್ರತಿಭಟನೆ ಇಡೀ ಜಗತ್ತು ಬೆಚ್ಚಿ ಬೀಳುವಂತೆ ಮಾಡಿತು. “ನಾನು ಇನ್ನು ಮುಂದೆ ಕುಪ್ಪುಸ ತೊಡುತ್ತೇನೆ. ಮೊಲೆ ತೆರಿಗೆ ಕೊಡಲು ಸಿದ್ಧಳಿದ್ದೀನಿ. ತೆರಿಗೆ ತೆಗೆದುಕೊಂಡು ಹೋಗಲು ಮನೆಗೆ ಬನ್ನಿಎಂದು ಸಂಸ್ಥಾನದ ಅಧಿಕಾರಿಗಳಿಗೆ ಆಹ್ವಾನವಿತ್ತ ಆಕೆಯು, ತೆರಿಗೆ ವಸೂಲಿಗಾಗಿ  ಮನೆ ಬಾಗಿಲಿಗೆ ಬಂದ ಅಧಿಕಾರಿಗಳಿಗೆ ತನ್ನೆರೆಡು ಸ್ತನಗಳನ್ನು ಹರಿತವಾದ ಚಾಕುವಿನಿಂದ ಕತ್ತರಿಸಿ, ಅಧಿಕಾರಿಗಳ ಕೈಗೆ ಕೊಟ್ಟು ಇದು ನನ್ನ ಮೊಲೆ ತೆರಿಗೆ ಎಂದು ಪ್ರತಿಭಟಿಸಿ, ತೀವ್ರವಾದ ರಕ್ತಸ್ರಾವದಿಂದ ನಂಗೇಲಿ ಮೃತಪಟ್ಟಳು. ಪತ್ನಿಯ ಸಾವಿನಿಂದ ಕಂಗೆಟ್ಟ ಚಿರುಕಂದನ್ ಎಂಬ ಅವಳ ಪತಿಯೂ ಸಹ ಪತ್ನಿಯ ಚಿತೆಗೆ ಹಾರಿ ಪ್ರಾಣ ಕಳೆದುಕೊಂಡನು. ದಲಿತ ದಂಪತಿಗಳು ತೋರಿದ ಪ್ರತಿಭಟನೆಯು ಇಡೀ  ನಾಗರೀಕ ಜಗತ್ತನ್ನು  ಸಂಪ್ರದಾಯ ಅಥವಾ ಪದ್ಧತಿಯ ಹೆಸರಿನಲ್ಲಿ ಆಚರಣೆಯಲ್ಲಿದ್ದ ಅಲಿಖಿತ ನಿಯಮಗಳ ಕುರಿತು ಮರುಚಿಂತೆನೆಗೆ ದೂಡಿತು. ಇದರ ಫಲವೆಂಬಂತೆ ಕೇರಳದಲ್ಲಿ ಅಯ್ಯನ್ ಕಾಳಿ ಮತ್ತು ನಾರಾಯಣಗುರು ಹಾಗೂ ವಿ.ಟಿ. ಭರತಾದ್ರಿಪಾಡ್ಮುಂತಾದ ಸಮಾಜ ಸುಧಾಕರು ಹುಟ್ಟಿಕೊಳ್ಳಲು ಸಾಧ್ಯವಾಯಿತು.

ಕೇರಳದ ದಲಿತರಿಗೆ ಸ್ವಾಭಿಮಾನದ ಬದುಕನ್ನು ಕಲಿಸಿಕೊಟ್ಟವರಲ್ಲಿ ಅಯ್ಯನ್ ಕಾಳಿ ಪ್ರಮುಖರು. ಅಂಬೇಡ್ಕರ್ ಗೆ ಇದ್ದ ಸ್ವಾಭಿಮಾನ ಮತ್ತು ಆತ್ಮವಿಶ್ವಾಸ ಎರಡನ್ನೂ ಹೊಂದಿದ್ದ ಅಯ್ಯನ್ ಕಾಳಿಯವರನ್ನು ಕೇರಳದ ಅಂಬೇಡ್ಕರ್ ಎಂದು ಕರೆಯಬಹುದು. ತಿರುವನಂತಪುರದ ಸಮೀಪದ ವೆಂಗನೂರು ಎಂಬಲ್ಲಿ ಪುಲಯರ್ ಎಂಬ ದಲಿತ ಸಮುದಾಯಕ್ಕೆ ಸೇರಿದ ಜಾತಿಯಲ್ಲಿ 1863 ರಲ್ಲಿ ಜನಿಸಿದ ಅಯ್ಯನ್ ಕಾಳಿಯವರ ಕುಟುಂಬ ಕಾಲಕ್ಕೆ ಐದು ಎಕರೆ ಭೂಮಿಯನ್ನು ಹೊಂದಿತ್ತು. ಕ್ರೈಸ್ತ ಮಿಷನರಿ ಶಾಲೆಯ ಮೂಲಕ ಶಿಕ್ಷಣಕ್ಕೆ ತೆರೆದುಕೊಂಡ ಅಯ್ಯನ್ ಕಾಳಿಯವರು ಹಿಂದೂ ಧರ್ಮದಲ್ಲಿದ್ದ ಜಾತಿಯ ಅಸಮಾನತೆಗಳ ವಿರುದ್ಧ ಸಿಡಿದೆದ್ದರು. ಹಳ್ಳಿ ಹಳ್ಳಿಗಳಿಗೆ ತೆರಳಿ ಹಾಡು, ಜಾನಪದ ಹಾಡುಗಳ ಮೂಲಕ ಮೇಲ್ಜಾತಿಯವರ ಜಾತಿ ಮನೋಭಾವವನ್ನು ಖಂಡಿಸಿದರು. ಇದು ಸಾಲದೆಂಬಂತೆ ಕೆಳಜಾತಿಯವರು ಸೊಂಟದ ಮೇಲ್ಭಾಗದಲ್ಲಿ ಉಡುಪು ಧರಿಸಬಾರದು ಎಂಬ ನಿಯಮವನ್ನು ವಿರೋಧಿಸಿ, ನಾಯರ್ ಗಳಂತೆ ಮೈ ತುಂಬಾ ವಸ್ತ್ರ ಧರಿಸಿ, ಎತ್ತಿನ ಗಾಡಿಯಲ್ಲಿ ಕುಳಿತು, ಕೆಳಜಾತಿಯವರಿಗೆ ನಿಷೇಧ ಹೇರಿದ್ದ ರಾಜಬೀದಿ ಮತ್ತು ಮಾರುಕಟ್ಟೆ ಪ್ರದೇಶಗಳಲ್ಲಿ ಸಂಚರಿಸಿ ಅಂದಿನ ಸಮಾಜಕ್ಕೆ ಮತ್ತು ಬ್ರಿಟೀಷರ ಮೇಲ್ವಿಚಾರಣೆಯಲ್ಲಿದ್ದ ತಿರುವಾಂಕೂರು ಸಂಸ್ಥಾನಕ್ಕೆ ಬಿಸಿ ಮುಟ್ಟಿಸಿರು. 1941 ರಲ್ಲಿ ನಿಧನರಾದ ಅಯ್ಯನ್ ಕಾಳಿಯವರು ಸ್ವಾತಂತ್ರ್ಯ ಪೂರ್ವದ ಟ್ರಾಂವಂಕೂರ್ ವಿಧಾನ ಸಭೆಯ ಸದಸ್ಯರಾಗಿದ್ದರು. ತಮ್ಮ ಜೀವನ ಪೂರ್ತಿ ದಲಿತೋದ್ಧಾರಕ್ಕೆ ಶ್ರಮಿಸಿದ ಇವರನ್ನು ಕೇರಳದ ಜನತೆ ಮಹಾತ್ಮ ಅಯ್ಯನ್ ಕಾಳಿ ಎಂದು ಗೌರವದಿಂದ ಸ್ಮರಿಸುತ್ತಾರೆ. ಇದರ ಜೊತೆಗೆ 1924-25 ರಲ್ಲಿ ದೇವಸ್ಥಾನಗಳಿಗೆ ಹರಿಜನರ ಪ್ರವೇಶಕ್ಕೆ ಒತ್ತಾಯಿಸಿ; ತಿರುವಾಂಕೂರು ಸಂಸ್ಥಾನದ  ಚಳುವಳಿ ನಡೆಸಿ, ಎರಡು ಬಾರಿ ಬಂಧನಕ್ಕೆ ಒಳಗಾದ ಪೆರಿಯಾರ್ ಹಾಗೂ ವೈಕಂ ಸತ್ಯಾಗ್ರಹ ಎಂದು ಹೆಸರಾದ ಹೋರಾಟಕ್ಕೆ ಬೆಂಬಲ ಸೂಚಿಸಿ ಚಳುವಳಿಯಲ್ಲಿ ಪಾಲ್ಗೊಂಡ ಮಹಾತ್ಮ ಗಾಂಧಿ ಇವರೆಲ್ಲರನ್ನು ನಾವು ಮರೆಯುವಂತಿಲ್ಲ.
ಕೇರಳದ ಆಧುನಿಕ ಸಮಾಜದಲ್ಲಿ ಮೇಲ್ಜಾತಿಯಲ್ಲಿ ಜನಿಸಿ, ಇಡೀ ಬದುಕನ್ನು ದಲಿತರ ಏಳಿಗೆಗಾಗಿ ಶ್ರಮಿಸಿದ ವಿ.ಟಿ.ಭರತಾದ್ರಿಪಾಡ್ ಅವರ ಹೋರಾಟದ ಬದುಕು ಅಸಮಾನ್ಯವಾದುದು. “ ಗಾಯಿತ್ರಿ ಮಂತ್ರ ಜಪಿಸಿದ ಮಾತ್ರಕ್ಕೆ ಅಥವಾ ಮೈ ಮೇಲೆ ಜನಿವಾರ ಹಾಕಿಕೊಂಡು, ಶ್ವೇತ ವರ್ಣದ ಶುಭ್ರ ವಸ್ತ್ರ ಧರಿಸಿದ ಮಾತ್ರಕ್ಕೆ ಸಮಾಜದಲ್ಲಿ ಯಾರೊಬ್ಬರೂ ನೈಪಣ್ಯತೆಯ ಮತ್ತು ಒಳ್ಳೆಯ ವ್ಯೆಕ್ತಿಯಾಗಲು ಸಾಧ್ಯವಿಲ್ಲಎಂದು ಸಾರಿದ ಇವರು ಸಮಾಜ ಸುಧಾರಣೆಗಾಗಿ ಶ್ರಮಿಸುತ್ತಾ, ಹಲವಾರು ಶಿಷ್ಯರನ್ನು ಹುಟ್ಟು ಹಾಕಿದರು. ಅಂತಹವರಲ್ಲಿ ಕೇರಳದ ಮಾಜಿ ಮುಖ್ಯಮಂತ್ರಿ .ಎಂ.ಎಸ್. ನಂಬೂದರಿಪಾಡ್ ಒಬ್ಬರು. ಇವರ ನನ್ನ ಕನಸು ಮತ್ತು ಕಣ್ಣೀರುಎಂಬ ಆತ್ಮಕಥನವು ಆಕ್ಸ್ಪರ್ಡ್ ಯೂನಿರ್ವಸಿಟಿ ಪ್ರೆಸ್ ನಿಂದಮೈ ಟಿಯರ್ಸ್; ಮೈ ಡ್ರೀಮ್ಸ್ಹೆಸರಿನಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಪ್ರಕಟವಾಗಿದೆ. ಜೊತೆಗೆ ಕಲ್ಲಿಕೋಟೆ ಸಮೀಪದ ಫರೂಕಿ ಪದವಿ ಕಾಲೇಜಿನ ಉಪನ್ಯಾಸಕ ಮನ್ಮಥನ್ ಎಂಬುವರು ಕಳೆದ ವರ್ಷ  ಇವರ ಕುರಿತು ಸಂಶೋಧನೆ ನಡೆಸಿ ಪಿ.ಹೆಚ್.ಡಿ. ಪದವಿ ಪಡೆದಿದ್ದಾರೆ.
ಇಂತಹ ಮಹಾನುಭವರ ಶ್ರಮದ ಬೆವರು ಮತ್ತು ಕಣ್ಣಿರಿನ ಫಲವೆಂಬಂತೆ ಇಂದು ಕೇರಳದಲ್ಲಿ ದಲಿತರನ್ನು ಒಪ್ಪಿಕೊಳ್ಳುವ ಸಮಾಜವೊಂದು ನಿರ್ಮಾಣವಾಗಿದೆ. ಇದು ಒಂದು ರೀತಿಯಲ್ಲಿ ಭವಿಷ್ಯ ಕುರಿತಂತೆ ಆಶಾದಾಯಕ ಬೆಳವಣಿಗೆ ಎನ್ನಬಹುದು.

( ಕರಾವಳಿ ಮುಂಜಾವು ಪತ್ರಿಕೆಯ “ಜಗದಗಲ” ಅಂಕಣ ಬರಹ)

1 ಕಾಮೆಂಟ್‌: