ಗುರುವಾರ, ನವೆಂಬರ್ 16, 2017

ಕರ್ನಾಟಕ ಸಂಗೀತಕ್ಕೆ ನಾವಿನ್ಯತೆ ತಂದುಕೊಟ್ಟ ಅರಿಯಕುಡಿ ರಾಮಾನುಜಾ ಅಯ್ಯಂಗಾರ್


ಕರ್ನಾಟಕ ಸಂಗೀತದಲ್ಲಿ ಸಂಪ್ರದಾಯ ಮತ್ತು ಪರಿಶುದ್ಧತೆಯ ಲಯಬದ್ಧವಾದ ಸಂಗೀತ ಹಾಗೂ ಬದ್ಧತೆಯ ಜೊತೆಗೆ ಗಮಕಶುದ್ಧತೆಗೆ ಆದ್ಯತೆಯನ್ನು ನೀಡಿ ಸಂಗೀತವನ್ನು ಹೊಸ ಎತ್ತರಕ್ಕೆ ಕೊಂಡೊಯ್ದವರಲ್ಲಿ ಅರಿಯಕುಡಿ ರಾಮಾನುಜಾ ಅಯ್ಯಂಗಾರ್ ಬಹು ಮುಖ್ಯರು. 1910-20 ದಶಕದಲ್ಲಿ ಎಂಟತ್ತು ಗಂಟೆಗಳ ಕಾಲ ನಿರಂತರವಾಗಿ ರಾತ್ರಿಯ ಸಂಗೀತ ಕಚೇರಿಗಳಲ್ಲಿ ಕಲಾವಿದರು ಪ್ರಸ್ತುತ ಪಡಿಸುತ್ತದ್ದ ವಾಗ್ಗೇಯಕಾರರ ಕೃತಿಗಳೆಂದರೆ, ಕೇವಲ ಮೂರು ನಾಲ್ಕಕ್ಕೆ ಸೀಮಿತವಾಗಿರುತ್ತಿತ್ತುಇಡೀ ಸಂಗೀತ ಕಚೇರಿಯನ್ನು ರಾಗಾಲಾಪನೆಗೆ, ಕಲ್ಪನಾಸ್ವರಗಳಿಗೆ ಮತ್ತು ನೆರವಲ್ ಗೆ ಕಲಾವಿದರು ತಮ್ಮ ಸಮಯವನ್ನು ಮೀಸಲಾಗಿಡುತ್ತಿದ್ದರು. ಇಲ್ಲಿ ಸಂಗೀತದ ಸೌಂದರ್ಯ ಅಥವಾ ವಾಗ್ಗೇಯಕಾರರ ಕೃತಿಗಳ ಮಹತ್ವಕ್ಕಿಂತ ಗಾಯಕರ ಹಾಗೂ ಪಕ್ಕವಾದ್ಯ ಕಲಾವಿದರ ಪ್ರತಿಭಾ ಪ್ರದರ್ಶನಕ್ಕೆ ಹೆಚ್ಚಿನ ಆದ್ಯತೆ ದೊರೆತು ನಿಜವಾದ ಸಂಗೀತ ಹಿನ್ನಲೆಗೆ ಸರಿಯುತ್ತಿತ್ತು. ಕೇವ¯ ಸಂಗೀತಾಸಕ್ತರ ಸ್ವತ್ತಾಗಿದ್ದ ಕರ್ನಾಟಕ ಸಂಗೀತವನ್ನು ಜನಸಾಮಾನ್ಯರ ಬಳಿ ಕೊಂಡೊಯ್ಯುವ ನಿಟ್ಟಿನಲ್ಲಿ ಅರಿಯಕುಡಿಯವರು ಮಾಡಿದ ಪ್ರಯೋಗ ಅಂದರೆ, ಕಚೇರಿಯ ಅವಧಿಯನ್ನು ಮೂರರಿಂದ ನಾಲ್ಕು ಗಂಟೆಗೆ ಇಳಿಸಿ, ಹೆಚ್ಚಿನ ಕೃತಿಗಳಿಗೆ ಮತ್ತು ರಾಗಗಳಿಗೆ ಅವಕಾಶ ಮಾಡಿಕೊಟ್ಟರಲ್ಲದೆ, ಕಛೇರಿಯಲ್ಲಿ ದೇವರನಾಮ, ಕೀರ್ತನೆ, ತಿಲ್ಲಾನ, ಪದಂ ಮತ್ತು ಜಾವಳಿ ಇವುಗಳಿಗೆ ಅವಕಾಶ ಕಲ್ಪಿಸುವುದರ ಮೂಲಕ ಕರ್ನಾಟಕ ಸಂಗೀತವನ್ನು ಜನಪ್ರಿಯಗೊಳಿಸಿದರು. ಕಾರಣಕ್ಕಾಗಿ ಅವರನ್ನು ಆಧುನಿಕ ಕರ್ನಾಟಕದ ಸಂಗೀತದ ಪಿತಾಮಹಾ ಎಂದು ಸಂಗೀತ ಲೋಕದಲ್ಲಿ ಕರೆಯಲಾಗಿದೆ.
ಅರಿಯಕುಡಿ ರಾಮಾನುಜನ್ ಕರ್ನಾಕಟ ಸಂಗೀತವನ್ನು ಪ್ರವೇಶಿಸುವ ವೇಳೆಗೆ ದಿಗ್ಗಜರು ಎನಿಸಿಕೊಂಡ ಪಟ್ಟಣಂ ಸುಬ್ರಮಣ್ಯಮ ಅಯ್ಯರ್, ಮಹಾವೈದ್ಯನಾಥ ಅಯ್ಯರ್, ಪುಷ್ಪವನಂ ಅಯ್ಯರ್, ವೀಣಾ ಧನಮ್ಮಾಳ್, ಟೈಗರ್ ವರದಾಚಾರ್, ಕಾಂಚಿಪುರಂ ನೈನಾಪಿಳ್ಳೈ, ಮುಸುರಿ ಸುಬ್ರವ್ಮಣಂ ಅಯ್ಯರ್, ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಹಾಗೂ ಅವರ ಗುರುಗಳಾದ ಪೂಚ್ಚಿ ಶ್ರೀನಿವಾಸ ಅಯ್ಯಂಗಾರ್ ಇಂತಹ ಮಹಾನ್ ಕಲಾವಿದರು ಸಂಗೀತ ಕ್ಷೇತ್ರದಲ್ಲಿ ತಮ್ಮ  ಸಂಗೀತ ಶ್ರೀಮಂತಿಕೆಯನ್ನು ಪ್ರದರ್ಶಿಸಿ ಅತ್ಯಂತ ಹೆಚ್ಚು ಪ್ರಭಾವಶಾಲಿಯಾಗಿದ್ದರು. ಇಂತಹ ಮಹಾನುಭಾವರು ಉಳಿಸಿಕೊಂಡು ಬಂದಿದ್ದ ಸಂಗೀತ ಕಚೇರಿಯ ಪದ್ಧತಿಯನ್ನು ಬದಲಾವಣೆ ಮಾಡುವುದು ಸುಲಭದ ಸಂಗತಿಯಾಗಿರಲಿಲ್ಲ. ಆದರೆ, ತಮ್ಮ ನಾಲ್ಕನೆಯ ವಯಸ್ಸಿನಿಂದ; ಮುವತ್ತನೆಯ ವಯಸ್ಸಿನವರೆಗೆ ಸತತ ಇಪ್ಪತ್ತಾರುವ ವರ್ಷಗಳ ಕಾಲ ಸಂಗೀತವನ್ನು ಧ್ಯಾನಿಸಿ, ಅದನ್ನು ಉಸಿರಾಗಿಸಿಕೊಂಡು ಬಂದಿದ್ದ ಅರಿಯಕುಡಿಯವರೆಗೆ ಶುದ್ಧ ಹಾಗೂ ಸಾಂಪ್ರದಾಯಿಕ ಸಂಗೀತ ಹೇಗಿರಬೇಕು ಎಂಬ ಸ್ಪಷ್ಟ ಕಲ್ಪನೆಯಿತ್ತು. ಎಲ್ಲಕ್ಕಿಂತ ಹೆಚ್ಚಾಗಿ, ತ್ರಿಮೂರ್ತಿ ವಾಗ್ಗೇಯಕಾರರಾದ ತ್ಯಾಗರಾಜರು, ದೀಕ್ಷಿತರು ಮತ್ತು ಶ್ಯಾಮಾಶಾಸ್ತ್ರಿಗಳ ಕೃತಿಗಳನ್ನು ಅರೆದು ಕುಡಿದಂತಿದ್ದ ಅವರಿಗೆ; ಎಲ್ಲಾ ಕೃತಿಗಳಿಗೆ ಹಾಗೂ ಸಂಗೀತದ ಎಲ್ಲಾ ರಾಗಗಳಿಗೂ ಕಚೇರಿಗಳಲ್ಲಿ ಪ್ರಾಧಾನ್ಯತೆ ನೀಡಬೇಕು ಎಂಬ ಆಸೆಗಿಂತ ಹೆಚ್ಚಾಗಿ ಛಲವಿತ್ತು. ಅದನ್ನು ಮಾಡಿತೋರಿಸುವುದರ ಜೊತೆಗೆ ನಿರಂತರ ಐವತ್ತು ವರ್ಷಗಳ ಕಾಲ ತಾವು ನೀಡಿದ ಸಂಗೀತ ಕಚೇರಿಗಳಲ್ಲಿ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದರು. ಅರಿಯಕುಡಿ ರಾಮಾನುಜಾ ಅಯ್ಯಂಗಾರ್ ಅವರ ಸಂಗೀತ ಕಚೇರಿಯೆಂದರೆ, ಕೇವಲ ಪ್ರತಿಭಾ ಪ್ರದರ್ಶನ ಅಥವಾ ತೋರಿಕೆಯ ಕಾರ್ಯಕ್ರಮವಾಗುತ್ತಿರಲಿಲ್ಲ. ಅದು ಶುದ್ಧ ಸಂಗೀತದ ಕಚೇರಿಯಾಗಿರುತ್ತಿತ್ತು. 1950-60 ದಶಕದಲ್ಲಿ ತಮಿಳುನಾಡಿನಲ್ಲಿ ಅರಿಯಕುಡಿಯವ ಗಾಯನ, ಟಿ.ಚೌಡಯ್ಯನವರ ಪಿಟಿಲು ವಾದನ ಮತ್ತು ಪಾಲ್ಘಾಟ್ ಮಣಿ ಅಯ್ಯರ್ ಅವರ ಮೃದಂಗವಾದನ ಕಚೇರಿ ಎಂದರೆ, ಸಾಕು ತ್ರಿಮೂರ್ತಿಗಳ ಕಾರ್ಯಕ್ರಮಕ್ಕೆ ಎಂಟರಿಂದ ಹತ್ತು ಸಾವಿರ ಮಂದಿ ಸಂಗೀತ ರಸಿಕರು ನೆರೆಯುತ್ತಿದ್ದರು.

ಅರಿಯಕುಡಿ ರಾಮಾನ್ಮಜಾ ಅಯ್ಯಂಗಾರ್ ಅವರದು ಬಾಲ್ಯದಿಂದಲೂ ಸಾಂಪ್ರದಾಯಕವಾದ ಶ್ರದ್ಧೆಯ ಬದುಕು. ಪ್ರತಿಯೊಂದು ವಿಷಯದಲ್ಲಿ ಅಚ್ಚುಕಟ್ಟುತನವಿರಬೇಕೆಂಬುದು ಅವರ ಹಂಬಲ. ಇದನ್ನು ನಿರಂತರವಾಗಿ ಅವರು ತಮ್ಮ ಬದುಕಿನುದ್ದಕ್ಕೂ ಕಾಪಾಡಿಕೊಂಡಿ ಬಂದರು. ಇದಕ್ಕೆ ಹಿನ್ನಲೆಯಾಗಿ ಅವರು ಹುಟ್ಟಿ ಬೆಳೆದು ಬಂದ ಕುಟುಂಬದ ಪರಿಸರವೂ ಹಾಗಿತ್ತು. ಅವರ ತಂದೆ ತಿರುವೆಂಗಡತ್ತಂ ಅಯ್ಯಂಗಾರ್, ವೇದ,ಶಾಸû್ರಗಳು, ಸಂಸ್ಕತ ಮತ್ತು ಜೋತಿಷ್ಯದ ವಿದ್ವಾಂಸರಾಗಿ ಹೆಸರು ಮಾಡಿದ್ದರು. ತಮ್ಮ ಹುಟ್ಟೂರಾದ ರಾಮನಾಥಪ್ಮರಂ ಜಿಲ್ಲೆಯ  ಅರಿಯಕುಡಿ ಸಮೀಪದ ದೇವಕೋಟೆ ಎಂಬಲ್ಲಿ ವಾಸವಾಗಿದ್ದ ಕುಟುಂಬ ಅನುಕೂಲಸ್ಥ ಕುಟುಂಬವಾಗಿತ್ತು. 1889 ರಲ್ಲಿ ಜನಿಸಿದ ರಾಮಾನುಜಾ ಅಯ್ಯಂಗಾರ್ರವರಿಗೆ ಬಾಲ್ಯದಲ್ಲಿಯೇ ಸಂಗೀತದ ಒಲವಿದ್ದ ಕಾರಣ, ಅವರ ತಂದೆಯವರು ಮನೆಯಲ್ಲಿ ಸಂಗೀತ ಶಿಕ್ಷಣ ವ್ಯವಸ್ಥೆ ಮಾಡಿದ್ದರುಪುದುಕೋಟೈನಲ್ಲಿ ವಾಸಿಸುತ್ತಿದ್ದ ಮಲಯಪ್ಪ ಅಯ್ಯರ್ ಎಂಬ ಸಂಗೀತ ವಿದ್ವಾಂಸರನ್ನು ತಮ್ಮ ಮನೆಗೆ ಬರಮಾಡಿಕೊಂಡ ತಿರುವೆಂಗಡತ್ತಂ ಮಗನಿಗೆ ಸಂಗೀತ ಶಿಕ್ಷಣ ನೀಡಲು ಆರಂಭಿಸಿದರು. ಅರಿಯಕುಡಿಯವರ ಹನ್ನೊಂದನೆಯ ವಯಸ್ಸಿನಲ್ಲಿ ಉಪನಯನ ಮತ್ತು ವೇದಭ್ಯಾಸ ಮಾಡಿಸಿ, ಸಂಪೂರ್ಣವಾಗಿ ಸಂಗೀತದಲ್ಲಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಟ್ಟರು. ಬಾಲಕ ರಾಮಾನ್ಮಜಾ ಅಯ್ಯಂಗಾರ್ ಅವರ ಹಾಡುಗಳನ್ನು ಗಮನಿಸಿದ್ದ ವಿದ್ವಾಂಸರಾದ ಮುತ್ತಯ್ಯ ಭಾಗವರ್ ಒಮ್ಮೆ ಅರಿಯಕುಡಿಯವರನ್ನು ಸೇತ್ತೂರು ಜಮೀನ್ದಾರ್ ಬಳಿ ಕರೆದೊಯ್ದು ಹಾಡು ಹೇಳಿಸಿದಾಗ, ಜಮೀನ್ದಾರ ಅರಿಯಕುಡಿಯವರ ಸಂಗೀತ ಕೇಳಿ ನೂರು ರೂಪಾಯಿ ಇನಾಮು ನೀಡಿದ್ದರು.
ಮೂರು ವರ್ಷಗಳ ಕಾಲ ಮನೆಯಲ್ಲಿ ಶಿಕ್ಷಣ ಪಡೆದ ಮಗನನ್ನು ತಿರುವೆಂಗಡತ್ತಂ ರವರು ತಿರುಚರಾಪಳ್ಳಿಗೆ ಕರೆದೊಯ್ದು ಅಲ್ಲಿನ ಶ್ರೀರಂಗಂ ನಲ್ಲಿ ವಾಸಿಸುತ್ತಿದ್ದ ನಾಮಕ್ಕಲ್ ನರಸಿಂಹ ಅಯ್ಯಂಗಾರ್ ರವರ ಬಳಿ ಹೆಚ್ಚಿನ ಶಿಕ್ಷಣಕ್ಕಾಗಿ ವ್ಯವಸ್ಥೆ ಮಾಡಿದರು. ನರಸಿಂಹಯ್ಯಂಗಾರ್ ಕಾಲಕ್ಕೆ ಪಲ್ಲವಿ ಅಯ್ಯಂಗಾರ್ ಎಂದು ತಮಿಳುನಾಡಿನಲ್ಲಿ ಪ್ರಸಿದ್ಧಿಯಾಗಿದ್ದರು. ಅವರ ಬಳಿ ಎರಡು ವರ್ಷ ಶಿಕ್ಷಣ ಪಡೆದ ಅರಿಯಕುಡಿಯವರು, ನಂತರ ಪೂಚಿ ಶ್ರೀನಿವಾಸ ಅಯ್ಯಂಗಾರ್ ಬಳಿ ಅಭ್ಯಾಸ ಮಾಡಿದರು. ಅರಿಯಕುಡಿಯವರಿಗೆ ಸ್ವತಂತ್ರವಾಗಿ ಸಂಗೀತ ಕಚೇರಿ ನಿಡುವ ಅವಕಾಶ ಒಮ್ಮೆ ಅನಿರೀಕ್ಷಿತವಾಗಿ ಒದಗಿ ಬಂದಿತು.  1912 ರಲ್ಲಿ ಅವರ ತಂದೆ ತಿರುವೆಂಡತ್ತಂ ಕುರಿತು ಅಪಾರ ಗೌರವ ಇಟ್ಟುಕೊಂಡಿದ್ದ ದೇವಕೋಟೆಯ ಶ್ರೀಮಂತ ಸೋಮಸುಂದರಂ ಎಂಬುವರು ತಮ್ಮ ಪುತ್ರಿಯ ವಿವಾಹ ಸಂದರ್ಭದಲ್ಲಿ ಅರಿಯಕುಡಿಯವರ ಸಂಗೀತದ ಗುರುಗಳಾದ ಪೂಚ್ಚಿ ಶ್ರೀನಿವಾಸ ಅಯ್ಯಂಗಾರ್ ಅವರ ಸಂಗೀತ ಕಚೇರಿಯನ್ನು ಏರ್ಪಡಿಸಿದ್ದರು. ಗುರುವಿನ ಗಾಯನವಾದ ಬಳಿಕ ಶಿಷ್ಯನಾದ ಅರಿಯಕುಡಿಯು ಸ್ವಲ್ಪ ಹೊತ್ತು ಸಂಗೀತ ಕಚೇರಿ ನಡೆಸಿಕೊಡಬೇಕೆಂದು ಎಲ್ಲಾ ಹಿರಿಯರಿಂದ ಬೇಡಿಕೆ ಬಂದಾಗ, ಗುರುವಿನ ಅಪ್ಪಣೆ ಪಡೆದ ಅರಿಯಕುಡಿಯುವರು ಜೀವನದಲ್ಲಿ ಪ್ರಥಮವಾಗಿ ಸಂಗೀತ ಕಾರ್ಯಕ್ರಮ ನೀಡುವುದರ ಮೂಲಕ ಎಲ್ಲರಿಂದ ಪ್ರಶಂಸೆಗೆ ಪಾತ್ರರಾದರು. ಆನಂತರವೂ ಅವರು ಗುರುವಿನ ಬಳಿ ಶಿಕ್ಷಣ ಪಡೆಯುತ್ತಾ, ನಮ್ಮ ಕನ್ನಡಿಗರಾದ ಭೈರವಿ ಕೆಂಪೇಗೌಡರನ್ನು ಒಳಗೊಂಡು, ಅನೇಕ ಸಂಗೀತ ವಿದ್ವಾಂಸರ ಕಚೇರಿಯಲ್ಲಿ ಪಾಲ್ಗೊಳ್ಳುತ್ತಾ ಸಂಗೀತವನ್ನು ಮನನ ಮಾಡಿಕೊಂಡರು. 1918 ರಲ್ಲಿ ತಿರುವಯ್ಯಾರಿನಲ್ಲಿ ನಡೆಯುವ ತ್ಯಾಗರಾಜರ ಆರಾಧನೆಯಲ್ಲಿ ಪ್ರಪಥಬಾರಿಗೆ ಸ್ವಂತಂತ್ರ ಸಂಗೀತ ಕಚೇರಿಯನ್ನು ನಡೆಸಿಕೊಟ್ಟರು.

ಇತ್ತ ಮದ್ರಾಸ್ ನಗರದಲ್ಲಿ ದೇವಸ್ಥಾನ, ರಾಜಾಶ್ರಯಗಳಿಂದ ಸಂಗಿತವನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಅನೇಕ ಸ್ವತಂತ್ರ ಗಾನಸಭಾಗಳು ಹುಟ್ಟಿಕೊಂಡಿದ್ದ ಕಾರಣದಿಂದಾಗಿ ಅರಿಯಕುಡಿ ರಾಮಾನ್ಮಜಾ ಅಯ್ಯಮಗಾರ್ ರವರಿಗೆ ನಿರಂತರವಾಗಿ ಕಾರ್ಯಕ್ರಮಗಳು ದೊರೆಯತೊಡಗಿದವುಕಚೇರಿಯ ಸ್ವರೂಪದಲ್ಲಿ ಮಹತ್ತರವಾದ ಬದಲಾವಣೆಗಳನ್ನು ಮಾಡಿಕೊಂಡು ಹಾಡುತ್ತಿದ್ದ ಅರಿಯಕುಡಿಯವರು ಬೇಡಿಕೆಯ ಕಲಾವಿದರಾದರು. ಅವರು ಕೃತಿ, ರಾಗ, ಸ್ವರ, ಪಲ್ಲವಿ, ಹೀಗೆ ಯಾವುದನ್ನೇ ಅವರು ಹಾಡಿದರೂ ಸಹ ಅವುಗಳಲ್ಲಿ  ಅವರ ಸ್ವಂತಿಕೆಯ ಛಾಪು ಎದ್ದುಕಾಣುತ್ತಿತ್ತು. ಸಂಗೀತ ಕೃತಿಯ ಯಾವುದೇ ಸಾಹಿತ್ಯವನ್ನು ಅವರು ಅನಾವಶ್ಯಕವಾಗಿ ವಿಸ್ತರಿಸಿ ಹಾಡುತ್ತಿರಲಿಲ್ಲ. ಸಂಪ್ರದಾಯವನ್ನು ಕಾಪಾಡಿಕೊಂಡು, ಗಮಕಯುಕ್ತವಾಗಿರುತ್ತಿತ್ತು. ರಾಗಗಳ ಆಲಾಪನೆಯನ್ನು ಮೂರು ಅಥವಾ ನಾಲ್ಕು ನಿಮಿಷಕ್ಕೆ ಸೀಮಿತಗೊಳಿಸುತ್ತಿದ್ದರು. ಸಾಮಾನ್ಯವಾಗಿ ವರ್ಣದೊಂದಿಗೆ ಕಚೇರಿ ಆರಂಬಿಸುತ್ತಿದ್ದ ಅವರು; ಅದೇ ರಾಗದಲ್ಲಿ ರಾಗ,ತಾನ ಪಲ್ಲವಿಯನ್ನು ಹಾಡುತ್ತಿದ್ದರು. ಮಧ್ಯಮಕಾಲ, ಶುದ್ಧ ಮದ್ಯಮ, ಪ್ರತಿ ಮಧ್ಯಮ ಕೃತಿಗಳು, ವಿಳಂಬಕಾಲದ ಕೃತಿಗಳನ್ನು ಸಮಯೋಚಿತವಾಗಿ ಹಾಡುತ್ತಾ ಎಲ್ಲಾ ವರ್ಗದ ರಸಿಕರನ್ನು ಮೆಚ್ಚಿಸುತ್ತಿದ್ದರು ಜೊತೆಗೆ ಸಂಗೀತದ ಎಲ್ಲಾ ವಾಗ್ಗೇಯಕಾರರ ಕೃತಿಗಳಿಗೆ ಆದ್ಯತೆಯನ್ನು ನೀಡುತ್ತಿದ್ದರು. ಇವುಗಳಲ್ಲದೆ, ಕಚೇರಿಯ ಕೊನೆಯ ಭಾಗದಲ್ಲಿ ದೇವರನಾಮ, ತಿಲ್ಲಾ, ಪದಂ, ಜಾವಳಿ ಹಾಗೂ ತಮಿಳಿನ ತಿರುಪ್ಪಾವೈಗಳು ಇರುತ್ತಿದ್ದವು. 1967ರಲ್ಲಿ ನಿಧನರಾದ ಅರಿಯಕುಡಿ ರಾಮಾನುಜಾ ಅಯ್ಯಂಗಾರ್; ತಮಿಳುನಾಡಿನಲ್ಲಿ ಸಂಗೀತ ಕಲಾನಿಧಿ ಪ್ರಶಸ್ತಿಮೈಸೂರು ಸಂಸ್ಥಾನದ ಆಸ್ಥಾನ ವಿದ್ವಾನ್ ಹೀಗೆ ಅನೇಕ ಗೌರವಗಳಿಗೆ ಪಾತ್ರರಾಗಿದ್ದರು. ಅವರು ಕರ್ನಾಟಕ ಸಂಗೀತಕ್ಕೆ ನಿರ್ಮಿಸಿಕೊಟ್ಟ ಚೌಕಟ್ಟು ಇಂದಿಗೂ ಸಹ ಅಲಿಖಿತ ಸಂವಿಧಾನದಂತೆ ಸಂಗೀತ ಕಚೇರಿಯಲ್ಲಿ  ಬಳಕೆಯಾಗುತ್ತಿರುವುದು ವಿಶೇಷವಾಗಿದೆ.
( ವಾರ್ತಾ ಭಾರತಿ ದಿನಪತ್ರಿಕೆಯ “ ಸ್ವರ ಸನ್ನಿಧಿ” ಅಂಕಣ ಬರಹ)


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ