Tuesday, 25 March 2014

ಗುಜರಾತ್ ಅಭಿವೃದ್ಧಿಯೆಂಬ ಹುಸಿ ಬಸಿರಿನ ಸಂಬ್ರಮ- ಒಂದು


ಕಳೆದ ಒಂದು ವರ್ಷದಿಂದ ಭಾರತವಷ್ಟೇ ಅಲ್ಲ, ಜಾಗತಿಕ ಮಟ್ಟದಲ್ಲಿ ತೀವ್ರವಾಗಿ ಚರ್ಚೆಗೆ ಒಳಪಟ್ಟ ರಾಜಕೀಯ ವ್ಯಕ್ತಿ ಎಂದರೆ, ನರೇಂದ್ರಮೋದಿಯವರು. ಈಗಾಗಲೇ ಭಾರತದ ಭಾವಿ ಪ್ರಧಾನಿ ಎಂದು ಮಾಧ್ಯಮಗಳಲ್ಲಿ ಗುರುತಿಸಿಕೊಮಡಿದ್ದಾರೆ. ಇದಲ್ಲದೆ ವ್ಯವಸ್ಥಿತವಾಗಿ ಸೃಷ್ಟಿಯಾಗಿರುವ ಮೋದಿಯ ಭಜನಾ ಮಂಡಳಿಯಲ್ಲಿ ಏಕಮುಖವಾಗಿ ಹರಿದು ಬರುತ್ತಿರುವ ವಾಕ್ ಪ್ರವಾಹವೆಂದರೆ, ಗುಜರಾತಿನ ಅಭಿವೃದ್ಧಿಯ ಮಂತ್ರ. ಕಳೆದ ಒಂದು ದಶಕದಲ್ಲಿ ಪ್ರಕಟವಾಗಿರುವ ದೇಶದ ಹಾಗೂ ಜಾಗತಿಕ ಮಟ್ಟದ ಅಭಿವೃದ್ಧಿಯ ಸಮೀಕ್ಷಾ ವರದಿಗಳಲ್ಲಾಗಲಿ, ವಿಶ್ವಬ್ಯಾಂಕ್ ಮತ್ತು ಭಾರತದ ಯೋಜನಾ ಮಂಡಳಿಯ ಪರಾಮರ್ಶನ ವರದಿಗಳಲ್ಲಿ ಅಥವಾ ಭಾರತದ ಆರ್ಥಿಕ ಸಮೀಕ್ಷಾ ವರದಿ, ಮಾನವ ಅಭಿವೃಧ್ಧಿಯ ವರದಿಗಳು, ಇವುಗಳಲ್ಲದೆ, ವಿಶ್ವಸಂಸ್ಥೆಯ ಮಕ್ಕಳ ಅಥವಾ ಮಹಿಳಾ ವಿಭಾಗದ ಯಾವ ವರದಿಗಳಲ್ಲೂ ಗುಜರಾತ್ ಅಭಿವೃದ್ಧಿ ಕುರಿತು ಯಾವುದೇ ಪ್ರಸ್ತಾಪವಿಲ್ಲ. ಜೊತೆಗೆ ಸಾಕ್ಷರತೆ, ಆರೋಗ್ಯ, ಶಿಕ್ಷಣ, ಸಾಮಾಜಿಕ ನ್ಯಾಯ , ಬಡತನ ನಿವಾರಣೆ, ಗ್ರಾಮೀಣಾಭಿವೃದ್ಧಿ ಇವುಗಳಲ್ಲಿ ಗುಜರಾತ್ ರಾಜ್ಯವು ಎಲ್ಲಿಯೂ ಮೊದಲನೆಯ ಸ್ಥಾನ ಪಡೆದಿಲ್ಲ ಬದಲಾಗಿ 2001 ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿಯ ಹದಿಮೂರು ವರ್ಷಗಳ ಆಳ್ವಿಕೆಯ ಅವಧಿಯಲ್ಲಿ ಗುಜರಾತಿನ ಬಹುತೇಕ ರಂಗಗಳ ಅಭಿವೃದ್ದಿಯ ಸೂಚ್ಯಂಕ ಕುಸಿದಿದೆ, ಇಲ್ಲವೆ, ಇವರಿಗೂ ಮುನ್ನ ಮುಖ್ಯಮಂತ್ರಿಯಾಗಿದ್ದ ಕೇಶುಪಟೇಲ್ ಆಳ್ವಿಕೆಯಲ್ಲಿ ಸಾಧಿಸಲಾಗಿದ್ದ ಅಭಿವೃದ್ಧಿ ಸೂಚ್ಯಂಕದ ಹಂತಕ್ಕೆ ಸ್ಥಗಿತಗೊಂಡಿವೆ.
ಹಾಗಾದರೆ, ಗುಜರಾತಿನಲ್ಲಿ ಅಭಿವೃದ್ಧಿಯಾಗಿರುವುದು ಏನು? ಮೋದಿಯ ಭಜನಾ ಮಂಡಳಿಯ ಅಥವಾ ಈ ದಿನಗಳಲ್ಲಿ ಸಂಘಪರಿವಾರದ ಭಕ್ತರು ಜಪಿಸುತ್ತಿರುವ “ಗುಜರಾತ್ ಅಭಿವೃದ್ಧಿಯೊಂದೇ ದೇಶಕ್ಕೆ ಮಾದರಿ, ಅದೇ ಆದಿ, ಅದೇ ಅಂತ್ಯ” ಎನ್ನುವ ಮಾತುಗಳು ಸುಳ್ಳಿನ ಕತೆಗಳೆ? ಹೌದು ಇದು ಸುಳ್ಳು ಸೃಷ್ಟಿಗಳ ಸರಮಾಲೆಯ ಕಥನ. ಗುಜರಾತಿನಲ್ಲಿ ಅಭಿವೃದ್ಧಿ ಎಂಬುದು ಸಾಕಾರಗೊಂಡಿದ್ದರೆ, ಅದು ರೈತರ ಫಲವತ್ತಾದ ಭೂಮಿಯ ಮೇಲೆ ವಿಶೇಷ ಬಂಡವಾಳ ಹೂಡಿಕೆ ವಲಯ( Special Investment Region) ಖಾಸಾಗಿರಂಗದ ಕೈಗಾರಿಕೆಗಳು, ಮತ್ತು ಬಂಡವಾಳಶಾಹಿಗಳ ಸಾಮ್ರಾಜ್ಯದ ವಿಸ್ತರಣೆ ಮಾತ್ರ.
2011-12 ರ ಭಾರತದ ಆರ್ಥಿಕ ಸಮೀಕ್ಷಾ ವರದಿಯ ಪ್ರಕಾರ, ದೇಶದಲ್ಲಿ ಬಡತನ ನಿವಾರಣೆಯಲ್ಲಿ ತಮಿಳುನಾಡು ಎಲ್ಲಾ ರಾಜ್ಯಗಳಿಗಿಂತ ಮುಂದಿದೆ. ಸಾಕ್ಷರತೆ ಮತ್ತು ಸಾಮಾಜಿಕ ನ್ಯಾಯ , ಪ್ರವಾಸೊದ್ಯಮ ಅಭಿವೃದ್ಧಿ ಇವುಗಳಲ್ಲಿ ಕೇರಳ ಪ್ರಥಮಸ್ಥಾನದಲ್ಲಿದೆ. ಸಮಗ್ರ ಅಭಿವೃದ್ಧಿ ಹೊಂದಿದ ರಾಜ್ಯಗಳಲ್ಲಿ ಪಂಜಾಬ್ ಪ್ರಥಮ ಸ್ಥಾನದಲ್ಲಿದೆ. ನಂತರ ಗೋವಾ ರಾಜ್ಯವಿದೆ. 2005 ರಲ್ಲಿ ಬಿಹಾರದ ಮುಖ್ಯ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮುಖ್ಯಮಂತ್ರಿ ನಿತೀಶ್ ಕುಮಾರ್ ತನ್ನ ಎಂಟು ವರ್ಷಗಳ ಆಳ್ವಿಕೆಯಲ್ಲಿ ಸಾಧಿಸಿರುವ ಅಭಿವೃದ್ಧಿಯ ಯೋಜನೆಗಳು ಪಂಚವಾರ್ಷಿಕ ಯೋಜನೆಯ ಪರಾಮರ್ಶನ ವರದಿಯಲ್ಲಿ ಪ್ರಶಂಸೆಗೆ ಒಳಪಟ್ಟಿವೆ. ರಾಜ್ಯದ ಒಟ್ಟು ಆಂತರೀಕ ಉತ್ಪಾದನಾ ಬೆಳವಣಿಗೆಯಲ್ಲಿ ಶೇಕಡ 12 ರಷ್ಟು ಬೆಳವಣಿಗೆ ಸಾಧಿಸಿ ದೇಶದ ಪ್ರಗತಿಯ ರಾಜ್ಯಗಳಲ್ಲಿ  ಮುಂಚೂಣಿಯಲ್ಲಿದೆ. 2005 ರಿಂದ 2013 ರ ಅವಧಿಯಲ್ಲಿ ತ್ವರಿತಗತಿಯ ನ್ಯಾಯಾಲಯ ಮತ್ತು ತೀರ್ಪು ಗಳ ಮೂಲಕ ಬಿಹಾರ ರಾಜ್ಯದಲ್ಲಿ 83 ಸಾವಿರ ಗೂಂಡಾಗಳು, ಕ್ರಿಮಿನಲ್ ಗಳು ಸೆರೆಮನೆಗೆ ನೂಕಲ್ಪಟ್ಟಿದ್ದಾರೆ. ಇದು ಸ್ವಾತಂತ್ರ್ಯಾನಂತರದ ಭಾರತದಲ್ಲಿ ರಾಜ್ಯವೊಂದರ ನೂತನ ದಾಖಲೆ. ಅಷ್ಟೇ ಅಲ್ಲ, ಅಲ್ಲಿನ ಜಮೀನ್ದಾರಿ ಪದ್ಧತಿ, ಮತ್ತು ಪಂಚಾಯಿತಿ ಮಟ್ಟದ ಅಮಾನವೀಯ ನೆಲೆಯ ನ್ಯಾಯ ತೀರ್ಪುಗಳನ್ನು ನಿಷೇಧಿಸಿದ್ದಲ್ಲದೆ, ಅಧಿಕಾರ ವಿಕೇಂದ್ರಿಕರಣವನ್ನು ಸ್ಥಾಪಿಸುವ ಸಲುವಾಗಿ ಪರಿಣಾಮಕಾರಿಯಾಗಿ ಜಾರಿಗೆ ಬಂದ ಪಂಚಾಯತ್ ರಾಜ್ ವ್ಯವಸ್ಥೆಯಿಂದಾಗಿ ತಳಮಟ್ಟದ ದೀನ ದಲಿತರಿಗೆ ಅಧಿಕಾರದಲ್ಲಿ ಪಾಲ್ಗೊಳ್ಳುವ ಹಕ್ಕು ದೊರೆತಿದೆ. ಇವೆಲ್ಲವೂ ಜಾಗತಿಕ ಮಟ್ಟದ ಸಮೀಕ್ಷಾ ವರದಿಯಲ್ಲಿ ದಾಖಲಾಗಿವೆ.( ಈ ಕುರಿತು ಮುಂದೆ ಚರ್ಚಿಸಲಾಗುವುದು.) ಯಾವುದೇ ಒಂದು ಅಭಿವೃದ್ಧಿ ಯೋಜನೆ ಅಥವಾ ಸಾಧನೆ ಕಣ್ಣಿಗೆ ಕಾಣುವಂತಿರಬೇಕು. ನಾನು ಈ ಮೇಲೆ ಪ್ರಸ್ತಾಪಿಸಿರುವ ಸಂಗತಿಗಳು ನಮ್ಮ ಕಣ್ಣ ಮುಂದೆ ವಾಸ್ತವ ರೂಪದಲ್ಲಿ ಇವೆ. ಹಾಗಾದರೆ, ಮೋದಿ ಸಾಧಿಸಿದ ಅಭಿವೃದ್ಧಿಯೋಜನೆಗಳು ಯಾವುವು? ಅವು ಎಲ್ಲಿವೆ? ಗುಜರಾತ್ ರಾಜ್ಯದಲ್ಲಿ ಪ್ರತಿಯೊಂದು ಹಳ್ಳಿಗೂ ವಿದ್ಯುತ್ ಸಂಪರ್ಕ ಇದೆ ನಿಜ. ಅದೇ ರೀತಿ ಅಲ್ಲಿನ ರಸ್ತೆಗಳು ಇತರೆ ರಾಜ್ಯಗಳಿಗೆ ಹೋಲಿಸಿದರೆ ಉತ್ತಮ ಗುಣಮಟ್ಟದಲ್ಲಿವೆ. ಆದರೆ ಇದನ್ನು ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಕೇಶುಬಾಯ್ ಪಟೇಲ್ ಅವಧಿಯಲ್ಲಿ ಅವರು ಸಾಧಿಸಿದ್ದ ಯಶೋಗಾಥೆಯ ಯೋಜನೆಗಳು. ಈಗ  ಗುಜರಾತಿನ ಅಭಿವೃದ್ಧಿಯ ಕುರಿತು  ತುತ್ತೂರಿ ಊದುತ್ತಿರುವುದನ್ನು ನೋಡಿದರೆ,ಯಾರದೋ ಬಸಿರಿನ ಮೂಲವನ್ನು ತನ್ನದೆಂದು ಹೇಳಿಕೊಳ್ಳುವ ಹುಂಬುತನಕ್ಕೆ ನರೇಂದ್ರ ಮೋದಿ ಇಳಿದಿದ್ದಾರೆ ಎಂದು ಅನಿಸತೊಡಗಿದೆ. ಕೇಂದ್ರ ಸರ್ಕಾರದ ನೆಹರೂ ನಗರೀಕರಣ ಯೋಜನೆಯಡಿ ಸಾವಿರಾರು ಕೋಟಿ ರೂಪಾಯಿಗಳ ಅನುದಾನದಲ್ಲಿ ಅಭಿವೃದ್ಧಿಪಡಿಸಲಾದ ಅಹಮದಾಬಾದ್ ನಗರದ ಸಾರಿಗೆ. ರಸ್ತೆ, ಮೇಲ್ ಸೇತುವೆ ಇವುಗಳನ್ನು ಧರೆಯ ಮೇಲಿನ ಸ್ವರ್ಗದಂತೆ ಪ್ರತಿಬಿಂಬಿಸಲಾಗುತ್ತಿದೆ. ಅಲ್ಲಿನ ಚೌಕಗಳು, ಮತ್ತು ಸೀಮೆಂಟ್ ರಸ್ತೆ ಇವುಗಳನ್ನು ತಮ್ಮ ತಮ್ಮ ಸಾಮಾಜಿಕ ತಾಣಗಳಲ್ಲಿ ಪ್ರದರ್ಶಿಕೊಂಡು ಹೆಮ್ಮೆ ಪಡುವ ನ.ಮೊ. ಬ್ರಿಗೇಡ್ ಎಂಬ ಭಜನಾ ಮಂಡಳಿಯ ಭಕ್ತರು ಒಮ್ಮೆ ಅಹಮದಾಬಾದಿನ ಲಾಲ್ ಪುರ್, ಜುಹಾ ಪುರ್ ಹಾಗೂ ಇತರೆ ಪ್ರದೇಶಗಳಲ್ಲಿ ಮುಸ್ಲಿಂ ಜನಾಂಗ ಯಾವ ರೀತಿಯಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಬದುಕುತ್ತಿದ್ದಾರೆ ಎಂಬುದನ್ನು ನೋಡಬೇಕಿದೆ.ಒಂದು ಸುಳ್ಳನ್ನು ನೂರು ಬಾರಿ ಪುನರುಚ್ಛರಿಸಿದರೆ, ಅದು ವಾಸ್ತವವಾಗುತ್ತದೆ ಮತ್ತು ಸತ್ಯವಾಗುತ್ತದೆ ಎಂಬ ಗೊಬೆಲ್ ನ ಸಿದ್ಧಾಂತವನ್ನು ಮಾಧ್ಯಮಗಳ ಮೂಲಕ ಮತ್ತು ಜಾಹಿರಾತಿನಲ್ಲಿ ಬಿತ್ತುವ ಭ್ರಮೆಗಳ ಮೂಲಕ ಪರಿಣಾಮಕಾರಿಯಾಗಿ ಜಾರಿಗೆ ತರುತ್ತಿರುವವರಲ್ಲಿ ನರೇಂದ್ರಮೋದಿ ಅಗ್ರ ಗಣ್ಯರು.
ಜಾಹಿರಾತಿನ ಪಿತಾಮಹಾ ಎಂದು ಕರೆಸಿಕೊಳ್ಳುವ ಎಡ್ವರ್ಡ್ ಬೆರ್ನೆಸ್ ( ಈತ ಸಿಗ್ಮಂಡ್ ಪ್ರಾಯ್ಡ್ ನ ಸಂಬಂಧಿ) 1925 ರಲ್ಲಿ Propaganda ಎಂಬ ಕೃತಿಯನ್ನು ರಚಿಸಿದ. ಇದರ ಅರ್ಥ ವ್ಯವಸ್ಥಿತ ಪ್ರಚಾರ ಎನ್ನಬಹುದು. ಈ ಕೃತಿಯ ಕುರಿತು 1997 ರಲ್ಲಿ ಮಾತನಾಡಿರುವ ನಮ್ಮ ನಡುವಿನ ಮನುಕುಲದ ಚಿಂತಕರಲ್ಲಿ ಒಬ್ಬರಾಗಿರುವ ನೋಮ್ ಚೊಮ್ ಸ್ಕಿ  ಈ ಕೃತಿಯ ಮೂಲ ಪಠ್ಯವನ್ನು History Of wepon  ಎಂದು ಕರೆದಿದ್ದಾರೆ. ಈ ಕೃತಿಯ ನಂತರ ಇದೇ ಮಾದರಿಯಲ್ಲಿ ಅನೇಕ ಹೊಸ ಹೊಸ ಚಿಂತನೆಗಳು ಹುಟ್ಟಿಕೊಂಡಿವೆ. ಲೇಖಕ ಎಡ್ವರ್ಡ್ ತನ್ನ ಕೃತಿಯ ಮೊದಲ ಅಧ್ಯಾಯದ ಮೊದಲ ಪ್ಯಾರದಲ್ಲಿ ವ್ಯವಸ್ಥಿತ ಪ್ರಚಾರ ಎಂದರೆ ಏನು? ಅದರ ಪರಿಣಾಮವೇನು? ಎಂಬುದನ್ನು ಹೀಗೆ ವಿವರಿಸುತ್ತಾನೆ.
The conscious and intelligent manipulation of the organized habits and opinions of the masses is an important element in democratic society. Those who manipulate this unseen mechanism of society constitute an invisible government which is the true ruling power of our country.
We are governed, our minds are molded, our tastes formed, our ideas suggested, largely by men we never heard of.  This is a logical result of the way in which our  democratic society is organized.  Vast numbers of human beings must cooperate in this manner if they are to live together as a smoothly functioning society.
Our invisible governer are , in many cases, unaware of the identity of their fellow members in the inner cabinet’


ಈ ವ್ಯವಸ್ಥಿತ ಪ್ರಚಾರದ ಮೂಲ ಮಂತ್ರಗಳನ್ನು ಅರೆದು ಕುಡಿದಂತೆ ಕಾಣುತ್ತಿರುವ ನರೇಂದ್ರ ಮೋದಿ. ತಮ್ಮ ಕುರಿತು ಮತ್ತು ತಮ್ಮ ಅಗೋಚರ ಅಭಿವೃದ್ಧಿ ಕುರಿತು ಸಾಮಾಜಿಕ ತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಬಿಂಬಿಸಿಕೊಳ್ಳುತ್ತಿದ್ದಾರೆ. ಇವರ ನಡೆಗಳು, ಇವರು ಸೃಷ್ಟಿಸಿರುವ ನಕಲಿ ಫೆಸ್ ಬುಕ್ ಖಾತೆಗಳು, ಇ-ಮೈಲ್ ಖಾತೆಗಳು, ಟ್ವಿಟ್ಟರ್ ಫಾಲೊಹರ್ಸ್ ಎಂಬ ಅದೃಶ್ಯ ಹಿಂಬಾಲಕರು ಎಲ್ಲವೂ ಗೋಲ್ ಮಾಲ್ ಎಂಬುದನ್ನು ಕೊಲ್ಕತ್ತ ನಗರದ ಪ್ರಕಾಶನ ಸಂಸ್ಥೆಯ ಶಂಕರ್ ಘೋಸ್ ಎಂಬುವರು ಪ್ರಕಟಿಸಿರುವ “ ಗುಜರಾತ್ ಡೆವಲಪ್ ಮೆಂಟ್ ಮಾಡೆಲ್  ಎ ರಿಯಾಲಿಟಿ ಚೆಕ್” ಎಂಬ ಕೃತಿಯಲ್ಲಿ ಲೇಖಕ ಸಂತೋಷ್ ಕುಮಾರ್ ನೀಡಿರುವ ವಿವರಗಳು ಇವು.
ಗುಜರಾತ್ ಸರ್ಕಾರದ ಮಾಹಿತಿ ತಂತ್ರಜ್ಞಾನದ ಮುಖ್ಯಸ್ಥೆ ರಾಜೀಖ ಕಚೀರಿಯ ಎಂಬಾಕೆ. ನರೇಂದ್ರ ಮೋದಿಯವರಿಗೆ ದೇಶ್ಯಾದ್ಯಂತ 25ಲಕ್ಷ ಟ್ವಿಟ್ಟರ್ ನಲ್ಲಿ ಹಿಂಬಾಲಕರಿದ್ದಾರೆ ಜೊತೆಗೆ ಮೋದಿ ಹೇಳಿಕೆಗಳನ್ನು ಸುಮಾರು ನಾಲ್ಕರಿಂದ ಐದು ಸಾವಿರ ಮಂದಿ ಪುನಃ ಟ್ವಿಟ್ಟರ್ ನಲ್ಲಿ ಪ್ರಕಟಿಸುತ್ತಾರೆ ಎಂದು ಹೇಳಿದ್ದಾರೆ.( ಅಕ್ಟೋಬರ್ 2013ರ ವೇಳೆಗೆ) ಆದರೆ, ಅದೇ ವಿಭಾಗದ ಹೆಸರು ಬಹಿರಂಗ ಪಡಿಸಿದ ಉದ್ಯೋಗಿಯೊಬ್ಬರ ಪ್ರಕಾರ ಶೇಕಡ 40 ರಷ್ಟು ಹಿಂಬಾಲಕರು ನಕಲಿರೂಪದಲ್ಲಿ  ಸೃಷ್ಟಿಯಾದವರು. ಇದನ್ನು ಆಧಾರವಾಗಿ ಇಟ್ಟುಕೊಂಡು, ಅದೇ ತಿಂಗಳಿನಲ್ಲಿ  twitteraudit.com, socialbakers.com, statuspeople.com ಮುಂತಾದ ಸಂಸ್ಥೆಗಳ ಮೂಲಕ ತನಿಖೆಗೆ ಒಳಪಡಿಸಿದಾಗ, ಶೇಕಡ 76 ರಷ್ಟು ನಕಲಿ ಅಕೌಂಟ್ ಗಳೆಂದು , ಶೇಕಡ 18 ರಷ್ಟು ಚಾಲ್ತಿಯಲ್ಲಿ ಇಲ್ಲದ ಅಕೌಂಟ್ ಗಳು ಮತ್ತು ಶೇಕಡ 6 ರಷ್ಟು ಮಾತ್ರ ನಿಜವಾದ ಅಕೌಂಟ್ ಎಂಬುದು ಸಾಭೀತಾಯಿತು.
ಈದಿನಗಳಲ್ಲಿ ಭಾರತದಲ್ಲಿ ನಕಲಿ ಹಿಂಬಾಲಕರು, ನಕಲಿ ಲೈಕ್ ಒತ್ತುವವರು, ಇವುಗಳ ಸೃಷ್ಟಿ ಮತ್ತು ಮಾರಾಟ 18 ಲಕ್ಷ ಡಾಲರ್ ಗಳ ವ್ಯವಹಾರವಾಗಿ ಪರಿವರ್ತನೆ ಹೊಂದಿದೆ. ಉದಾಹರಣೆಗೆ fiverr.com  ಎಂಬ ಕಂಪನಿಯು 300 ರೂಪಾಯಿಗಳಿಗೆ ಒಂದು ಸಾವಿರ ಟ್ವಿಟ್ಟರ್ ನಕಲಿ ಹಿಂಬಾಲಕರನ್ನು ಮಾರಾಟ ಮಾಡುತ್ತಿದೆ.firststeppromotions.com ಎಂಬ ಸಂಸ್ಥೆಯೊಂದು 900 ರುಪಾಯಿಗಳಿಗೆ 500 ಫೇಸ್ ಬುಕ್ ಲೈಕ್ ಗಳನ್ನು ಅಥವಾ ಒಂದು ಸಾವಿರ ಯೂಟ್ಯೂಬ್ ನಕಲಿ ವೀಕ್ಷಕರನ್ನು ಸೃಷ್ಟಿ ಮಾಡಿಕೊಡುತ್ತದೆ. ಭಾರತದ ಕೆಲವು ಕಂಪನಿಗಳು ಸಹ 650 ರೂಪಾಯಿಗೆ ಒಂದು ಸಾವಿರ ಫೇಸ್ ಬುಕ್ ಲೈಕ್ ಗಳು, ಅಥವಾ ಹತ್ತು ಸಾವಿರ ಟ್ವಿಟ್ಟರ್ ಹಿಂಬಾಲಕರನ್ನು ಸೃಷ್ಟಿಸಿ ಕೊಡುತ್ತಿವೆ.ನರೇಂದ್ರ ಮೋದಿಯ ಜನಪ್ರಿಯತೆಯ ರಹಸ್ಯ ಅಡಗಿರುವುದು ಇಂತಹ ಕಾರ್ಯಾಚರಣೆಯಲ್ಲಿ.ಮೋದಿಯ ಜನಪ್ರಿಯತೆಯನ್ನು ವೃದ್ಧಿಸಲು ಆಪ್ಕೊ ಎಂಬ ಅಂತರಾಷ್ಟ್ರೀಯ ಮಟ್ಟದ ಜಾಹಿರಾತು ಏಜನ್ಸಿ ಕೆಲಸ ಮಾಡುತ್ತಿದೆ. ಈ ಸಂಸ್ಥೆಗೆ ಜಾಹಿರಾತು ದರದ ಶೇಕಡ ಹತ್ತರಿಂದ ಹದಿನೈದರಷ್ಟು ಕಮೀಷನ್ ಹಣವಲ್ಲದೆ, ಸಲಹಾ ಶುಲ್ಕವಾಗಿ ಗುಜರಾತ್ ಸರ್ಕಾರ ಪ್ರತಿ ತಿಂಗಳು ಹದಿನೈದು ಲಕ್ಷ ಹಣವನ್ನು ಪಾವತಿಸುತ್ತಿದೆ. ಈ ಸಂಸ್ಥೆ ಮತ್ತು ಮೋದಿ ಜನಪ್ರಿಯತೆ ಕುಸಿಯದಂತೆ ನಿಗಾ ವಹಿಸಲು ನೇಮಕವಾಗಿರುವ ಸದಸ್ಯರ ಸಮಿತಿ, ಅದರ ಕಾರ್ಯವೈಖರಿ ಇವುಗಳನ್ನು ಗಮನಿಸಿದಾಗ, ಮೋದಿಗೆ ಇಷ್ಟೊಂದು ಕಾಣದ ಕೈಗಳಿವೆಯಾ? ಎಂದು ಆಶ್ಚರ್ಯವಾಗುತ್ತದೆ.

                                                                    (ಮುಂದುವರಿಯುವುದು)

No comments:

Post a Comment