ಮಂಗಳವಾರ, ಮಾರ್ಚ್ 11, 2014

ಭಾರತದ ಬೌದ್ಧಿಕ ಜಗತ್ತಿನ ಹೊಸಬೆಳಕು- ಪಂಕಜ್ ಮಿಶ್ರ


ಭಾರತೀಯ ಮೂಲದ ಇಂಗ್ಲೀಷ್ ಲೇಖಕ ಹಾಗೂ ಕಳೆದೊಂದು ದಶಕದಿಂದ ಭಾರತದ ಬೌದ್ಧಿಕ ಜಗತ್ತಿನ ಹೊಸ ವಾರಸುದಾರನಂತೆ ಗೋಚರಿಸುತ್ತಿರುವ ಪ್ರತಿಭಾವಂತ ಲೇಖಕ ಪಂಕಜ್ ಮಿಶ್ರಾಗೆ ಮಾರ್ಚ್ ಎಂಟರಂದು ಅಮೇರಿಕಾದ ಪ್ರತಿಷ್ಟಿತ ಸಾಹಿತ್ಯ ಪ್ರಶಸ್ತಿ ದೊರಕಿದೆ. ಅಮೇರಿಕಾದ ವಿಶ್ವವಿದ್ಯಾಲಯ ನೀಡುತ್ತಿರುವ ( Yale university) ಒಂದೂವರೆ ಲಕ್ಷ ಡಾಲರ್ ಮೌಲ್ಯದ ( ಸುಮಾರು 90 ಲಕ್ಷ ರೂಪಾಯಿಗಳು) ಈ ಪ್ರಶಸ್ತಿಗಾಗಿ ಏಳು ರಾಷ್ಟ್ರಗಳ ಎಂಟು ಲೇಖಕರನ್ನು ಮೀರಿಸಿದ ಪಂಕಜ್ ಮಿಶ್ರಾ ಸಾಹಿತ್ಯೇತರ ಕೃತಿಗಳ ವಿಭಾಗದಲ್ಲಿ ತಮ್ಮ ಮಹತ್ವಾಕಾಂಕ್ಷೆಯ ಕೃತಿಯಾದ  From The Ruins Of Empire ಎಂಬ ಕೃತಿಗೆ  ಈ ಬಹುಮಾನ ಪಡೆದಿದ್ದಾರೆ. ಕನ್ನಡದಲ್ಲಿ ““ಸಾಮ್ರಾಜ್ಯದ ಅವಶೇಷಗಳಿಂದ” ಎಂದು ಕರೆಯಬಹುದಾದ ಈ ಕೃತಿಯು 2012 ರಲ್ಲಿ ಪ್ರಕಟವಾಗಿದ್ದು, ಈಗಾಗಲೇ ಜಾಗತಿಕ ಮಟ್ಟದಲ್ಲಿ ಎರಡು ಪ್ರಶಸ್ತಿಗಳನ್ನು ಗಳಿಸಿತ್ತು.
ಎಡ್ವರ್ಡ್ ಸಯ್ಯದ್ ನ ‘ಓರಿಯಂಟಲಿಸಂ” ನಂತರ ಜಗತ್ತಿನ ವಿಚಾರವಂತರ ಗಮನ ಸೆಳೆದ ಈ ಕೃತಿಯಲ್ಲಿ ಪಂಕಜ್ ಮಿಶ್ರ , ಪಾಶ್ಚಿಮಾತ್ಯ ಜಗತ್ತಿನ ಆಕ್ರಮಣದ ವೈಖರಿ, ತಣ್ಣನೆಯ ಕ್ರೌರ್ಯ ಮತ್ತು ಇತಿಹಾಸ ಹಾಗೂ ಪೂರ್ವ ಜಗತ್ತಿನ ಸಂಸ್ಕೃತಿಯೂ ಒಳಗೊಂಡಂತೆ  ದೇಸಿಯ ಜ್ಞಾನಪರಂಪರೆ ಮತ್ತು ಸಾಮ್ರಾಜ್ಯಗಳು ಹೇಗೆ ನಶಿಸಿಹೋದವು ಎಂಬುದನ್ನು  ಆರು ಅಧ್ಯಾಯಗಳನ್ನು ಒಳಗೊಂಡ 299 ಪುಟಗಳ ಕೃತಿಯಲ್ಲಿ ಕಣ್ಣಿಗೆ ಕಟ್ಟುವಂತೆ ಮತ್ತು  ಎದೆಗೆ ನಾಟುವಂತೆ ರಚಿಸಿದ್ದಾನೆ.
 ಕಳೆದೊಂದು ದಶಕದಿಂದ ಜಾಗತೀಕರಣ ಮತ್ತು  ಅದರ ಪ್ರಭಾವದಿಂದಾದ ಜಾಗತಿಕ ಸಾಂಸ್ಕೃತಿಕ ಪಲ್ಲಟಗಳ ಅದ್ಯಯನವನ್ನು ಒಂದು ವ್ಯೆಸನದಂತೆ ಹಚ್ಚಿಕೊಂಡಿರುವ ನನಗೆ, ಜಾಗತೀಕರಣದ ಇತಿಹಾಸವೆಂದರೆ, ಕೇವಲ ಈಸ್ಟ್ ಇಂಡಿಯ ಕಂಪನಿ ಅಥವಾ ಬಹುರಾಷ್ಟ್ರೀಯ ಕಂಪನಿಗಳ ಇತಿಹಾಸ ಮಾತ್ರವಲ್ಲ ಎನ್ನುವುದು  ಬಲವಾದ ನಂಬಿಕೆ. ಈ ದಿಶೆಯ  ನನ್ನ ಅದ್ಯಯನದ ಹುಡುಕಾಟದಲ್ಲಿ ಕಳೆದ ವರ್ಷ ನನಗೆ ಸಿಕ್ಕ ಒಂದು ಅತ್ಯಮೂಲ್ಯ ಕೃತಿ ಇದಾಗಿತ್ತು.
ಉತ್ತರ ಪ್ರದೇಶದ ಝಾನ್ಸಿ ಪಟ್ಟಣದಲ್ಲಿ 1962 ರಲ್ಲಿ ಜನಿಸಿದ ಪಂಕಜ್ ಮಿಶ್ರಾ ಅಲಹಾಬಾದ್ ನಲ್ಲಿ ವಾಣಿಜ್ಯ ವಿಷಯದಲ್ಲಿ ಪದವಿ ಪಡೆದು ನಂತರ ದೆಹಲಿಯ ಜವಹರಲಾಲ್ ವಿ.ವಿ.ಯಲ್ಲಿ ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತ್ತಕೋತರ ಪದವಿ ಪಡೆದವನು, ಆನಂತರ ಹಿಮಾಲಯ ತಪ್ಪಲಿನ ಮಶ್ರೊಬ ಎಂಬ ಹಳ್ಳಿಯಲ್ಲಿ ವಾಸವಾಗಿದ್ದುಕೊಂಡು, ದೆಹಲಿಯ ಪಯೋನಿರ್ ಇಂಗ್ಲೀಷ್ ದಿನಪತ್ರಿಕೆಗೆ ‘ಇಂಡಿಯನ್ ರಿವ್ಯೂ ಆಫ್ ಬುಕ್ಸ್” ಎಂಬ  ಅಂಕಣ ಬರೆಯುತ್ತಾ, ಲೇಖಕನಾಗಿ, ಅಂಕಣಕಾರನಾಗಿ ರೂಪುಗೊಂಡವನು. ತನ್ನ ಮೊದಲ ಕೃತಿ ಹಾಗೂ ಒಂದು ರೀತಿಯಲ್ಲಿ ಪ್ರವಾಸ ಕಥನದಂತಿರುವ ಲೂಧಿಯಾನ ನಗರ ಕುರಿತಂತೆ ಬರೆದಿರುವ “ ಬಟರ್ ಚಿಕನ್” ಕೃತಿಯಲ್ಲಿ ಜಾಗತೀಕರಣದ ಪ್ರಭಾವದಿಂದ ನಮ್ಮ ಆಹಾರ, ಉಡುಪು, ದೇಸಿ ಸಂಸ್ಕೃತಿಗಳು  ಹೇಗೆ ಪಲ್ಲಟಗೊಳ್ಳಬಲ್ಲವು ಎಂಬುದನ್ನು   ಲವಲವಿಕೆಯ ಭಾಷೆಯ ಮೂಲಕ ದಾಖಲಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದನು. 

ಆನಂತರ ಪಂಕಜ್ ಮಿಶ್ರ ಬರೆದ “ ದ ರೊಮಾಂಟಿಕ್ಸ್” ಎಂಬ ಇಂಗ್ಲೀಷ್ ಕಾದಂಬರಿ ಯುರೋಪಿನ ಒಂಬತ್ತು ಭಾಷೆಗಳಿಗೆ ಅನುವಾದಗೊಂಡು ಜಗತ್ತಿನ ಸಾಹಿತ್ಯಾಸಕ್ತರ ಗಮನ ಸೆಳೆಯಿತು. ಈ ಕೃತಿಗೆ ಅಮೇರಿಕಾದ ಲಾಸ್ ಏಸಂಜಲಿಸ್ ಟೈಮ್ಸ್ ಪತ್ರಿಕೆಯ ಪ್ರಶಸ್ತಿ ಕೂಡ ದೊರೆಯಿತು. ಜೊತೆಗೆ ಇಂಗ್ಲೆಂಡಿನ ಲಂಡನ್ ಯೂನಿವರ್ಸಿಟಿ ಕಾಲೇಜಿನಲ್ಲಿ ಪಂಕಜ್ ಮಿಶ್ರಾಗೆ ಸಂದರ್ಶಕ ಪ್ರಾಧ್ಯಾಪಕ ಹುದ್ದೆ ದೊರೆಯಲು ಈ ಕಾದಂಬರಿ ಪರೋಕ್ಷವಾಗಿ ಕಾರಣವಾಯಿತು. ಲಂಡನ್ ನಗರದ ಸಂಪರ್ಕ ಸಿಕ್ಕ ನಂತರ ನಿರಂತರವಾಗಿ  ಲಂಡನ್ನಿನ “ಗಾರ್ಡಿಯನ್” ಪತ್ರಿಕೆ( ಲಂಡನ್ ರಿವ್ಯೂ ಆಫ್ ಬುಕ್ಸ್) ಹಾಗೂ ಅಮೇರಿಕಾದ ನ್ಯೂಯಾರ್ಕ್ ಟೈಮ್ಸ್ ( ನ್ಯೂಯಾರ್ಕ್ ರಿವ್ಯೂ ಆಫ್ ಬುಕ್ಸ್)    ಪತ್ರಿಕೆಗಳಿಗೆ ಲೇಖನ, ಹಾಗೂ ಪುಸ್ತಕ ವಿಮರ್ಶೆ ಬರೆಯುತ್ತಾ, ತನ್ನ ಅಗಾಧ ಓದು ಮತ್ತು ಗ್ರಹಿಕೆಯ ಮೂಲಕ  ಬೆಳೆದ ಪಂಕಜ್ ಮಿಶ್ರಾ ನಿರಂತರವಾಗಿ  ಕೃತಿಗಳ ವಿಮರ್ಶೆ ಮಾಡುತ್ತಾ ಜಾಗತಿಕ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡವನು. ಇದೀಗ ಇಪ್ಪತ್ತೊಂದನೆ  ಶತಮಾನದ ಜಗತ್ತಿನ ನೂರು ಮಂದಿ ಶ್ರೇಷ್ಟ ಚಿಂತಕರಲ್ಲಿ ಪಂಕಜ್ ಮಿಶ್ರ ಕೂಡ ಒಬ್ಬ ಎಂಬ ಪ್ರಶಂಸೆಗೆ ಪಾತ್ರನಾಗಿದ್ದಾನೆ..

ಎಂದಿಗೂ ತಾನೊಬ್ಬ ಲೇಖಕ, ಅಂಕಣಕಾರ, ಕಾದಂಬರಿಕಾರ ಅಥವಾ ಇತಿಹಾಸಕಾರ ಎಂಬ ಯಾವುದೇ  ಹಣೆಪಟ್ಟಿಯನ್ನು  ಹಚ್ಚಿಕೊಳ್ಳದೆ, ಅತ್ಯಂತ ಗಂಭೀರವಾಗಿ ಬರೆವಣಿಗೆಯಲ್ಲಿ ತೊಡಗಿಸಿಕೊಂಡಿರುವ ಪಂಕಜ್ ಮಿಶ್ರ ಕುರಿತು ಭಾರತದ ಸಾಹಿತ್ಯ ಅಥವಾ ಸಾಂಸ್ಕೃತಿಕ ವಲಯದಲ್ಲಿ ಚಿಂತನೆ ನಡೆದದ್ದಾಗಲಿ, ಅಥವಾ ;ಈತನ ಕೃತಿಗಳ ಕುರಿತು ಚರ್ಚೆಯಾಗಲಿ ಇಲ್ಲವೇ ಇಲ್ಲ ಅಥವಾ ತೀರಾ  ಕಡಿಮೆ ಎಂದೇ ಹೇಳಬಹುದು. ಇದು ನನ್ನ ಗ್ರಹಿಕೆಯ ಮಿತಿ ಇದ್ದರೂ ಇರಬಹುದು ಆದರೆ ಹೇಳಲೇಬೇಕಾದ ಕಟು ಸತ್ಯದ ಮಾತಿದು.. ಕಳೆದ ಮೂರು ದಶಕಗಳಿಂದ ಅಂದರೆ 1978 ರಲ್ಲಿ ಪ್ರಕಟವಾದ  ಎಡ್ವರ್ಡ್ ಸಯ್ಯದ್ ನ “ ಓರಿಯಂಟಲಿಸಂ” ಕೃತಿಯನ್ನು ತಮ್ಮ ಭಾಷಣದಲ್ಲಿ ಅಥವಾ ಲೇಖನದಲ್ಲಿ ಉಲ್ಲೇಖಿಸುವುದು ತಮ್ಮ ಜ್ಞಾನದ ಅಥವಾ ಬುದ್ಧಿವಂತಿಕೆಯ ಸಂಕೇತ ಎಂದು ಭ್ರಮಿಸಿರುವ ನಮ್ಮ ಕನ್ನಡದ ಬೌದ್ದಿಕ ಜಗತ್ತು ಒಳಗೊಂಡಂತೆ ಭಾರತದ  ಬೌದ್ಧಿಕ ಜಗತ್ತಿನ ಲೇಖಕರು ಕೂಡಲೇ  ತಮ್ಮ ಭ್ರಮೆಗಳನ್ನು ಕಳಚಿ, ತಮ್ಮ ತಮ್ಮ  ಗ್ರಹಿಕೆಯ ನೆಲೆಗಳನ್ನು ಮತ್ತಷ್ಟು ವಿಸ್ತರಿಸಕೊಳ್ಳಬೇಕಾಗಿದೆ. 

ಪೌರ್ವಾತ್ಯ ರಾಷ್ಟಗಳ ದೃಷ್ಟಿಕೋನದಿಂದ ಪಾಶ್ಚಿಮಾತ್ಯ ಜಗತನ್ನು ನೋಡುವ ಮತ್ತು ವಿಮರ್ಶಿಸುವ ಎಡ್ವರ್ಡ್ ಸಯ್ಯದ್ ನ “ಓರಿಯಂಟಲಿಸಂ” ಮಹತ್ವ ಕೃತಿ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಇದಕ್ಕೂ ಮುನ್ನ 1962 ರಲ್ಲಿ ರಚಿಸಲ್ಪಟ್ಟು, 1964 ರಲ್ಲಿ ಪ್ರಕಟವಾದ ವಿಲಿಯಮ್ ಪಾಫ್ ಮತ್ತು ಎಡ್ವರ್ಡ್ ಸ್ಟಿಲ್ ಮನ್ ( William pfaff and edwerd stilman ) ಬರೆದ “ The politics of Hysterea”  ಎಂಬ ಕೃತಿ ಕುರಿತು ಭಾರತದ ಬೌಧ್ಧಿಕ ಜಗತ್ತು ಏಕೆ  ಇದುವರೆಗೆ ಮೌನವಾಗಿದೆ ಎಂಬುದು ನನಗರ್ಥವಾಗಿಲ್ಲ. ವಸಾಹತುಶಾಹಿಯ ರಕ್ತ ಸಿಕ್ತ ಕೈಗಳ ಅಟ್ಟಹಾಸವನ್ನು ಮತ್ತು ಯೂರೋಪಿನ ಕಪ್ಪು ಇತಿಹಾಸವನ್ನು ದಾಖಲಿಸುವ ಈ ಕೃತಿಯನ್ನಾಗಲಿ ಅಥವಾ  1940 ರ ದಶಕದಲ್ಲಿ ಬಂದ ಆಲ್ಜಿರಿಯಾ ಮೂಲದ ಲೇಖಕ ಪ್ರಾಟ್ಜ್ ಪ್ಯಾನನ್ ಬರೆದ “ ವ್ರೆಚಡ್ ಆಫ್ ದ ಅರ್ಥ್” ( ಭೂಮಿಯ ತಿರಸ್ಕೃತರು) ಕೃತಿಯನ್ನು ಉಲ್ಲೇಖಿಸಿದ್ದು ತೀರಾ ಕಡಿಮೆ ಎಂದು ಹೇಳಬೇಕು. ಹಾಗಾಗಿ ನಾವೀಗ ಎಡ್ವರ್ಡ್ ಸಯ್ಯದ್ ಚಿಂತನೆಗಳಿಂದ ಮುಂದಕ್ಕೆ ಜಗತ್ತು  ಬಹುದೂರ ಸಾಗಿದ್ದು, ವಸಾಹತು ಶಾಹಿಯ ರೂಪವೂ ಸಹ ಜಾಗತೀಕರಣವಾಗಿ ರೂಪುಗೊಂಡಿದೆ ಮತ್ತು , ಅದರ ಸಾಹಿತ್ಯದ ಪರಿಭಾಷೆ ಕೂಡ ಬದಲಾಗಿದೆ ಎಂಬುದನ್ನು ಮನಗಾಣಬೇಕಿದೆ. ಇಂಗ್ಲೀಷ್ ಭಾಷೆಯಲ್ಲಿ “ ಹಿಸ್ಟರಿ ಆಫ್ ವೆಪನ್” ( ಇತಿಹಾಸದ ಆಯುಧ) ಎಂದು ಕರೆಯಲ್ಪಡುತ್ತಿರುವ ಆಧುನಿಕ ಜಗತ್ತಿನ ಪರಿಭಾಷೆಗೆ ನಾವೀಗ ನಮ್ಮ ಕಣ್ಣು, ಕಿವಿಗಳನ್ನು ಮುಕ್ತವಾಗಿ  ತೆರೆದಿಡಬೇಕಾಗಿದೆ.



ಸಧ್ಯದ ಭಾರತದ ಸಮಕಾಲೀನ ಸಮಾಜದ ದುರಂತವೇನೆಂದರೆ, ನಮ್ಮ ಕಣ್ಣೆದುರು ಎರಡು ವಿಭಿನ್ನ ದೃಷ್ಟಿಕೋನದ ಇತಿಹಾಸ ಸೃಷ್ಟಿಯಾಗುತ್ತಿದೆ ಮತ್ತು ವಾಖ್ಯಾನಿಸಲ್ಪಡುತ್ತಿದೆ. ಎಡಪಂಥೀಯ ಚಿಂತನೆಯ ಆಧಾರದ ಮೇಲೆ ರೂಪುಗೊಳ್ಳುತ್ತಿರುವ ಇತಿಹಾಸ ಒಂದು ಭಾಗವಾದರೆ, ಸ್ಥಾಪಿತ ವ್ಯಯಕ್ತಿಕ ಹಿತಾಸಕ್ತಿಗೆ ಅನುಗುಣವಾಗಿ ಬಲಪಂಥಿಯರಿಂದ ಸೃಷ್ಟಿಯಾಗುತ್ತಿರುವ ಇತಿಹಾಸ ಇನ್ನೊಂದು ಕಡೆ ಇದೆ. ಈ ಎರಡರ ನಡುವಿನ  ನಿಜವಾದ ಇತಿಹಾಸ ಯಾವುದು? ಎಂಬುದನ್ನು ಈ ತಲೆಮಾರಿನ ಎದೆಗೆ ತಲುಪಿಸುವ ನೈತಿಕ ಜವಾಬ್ದಾರಿ ನನ್ನ ತಲೆಮಾರಿನ ಲೇಖಕರ ಮೇಲಿದೆ. ಖ್ಯಾತ ಇತಿಹಾಸ  ತಜ್ಞರಾದ ಅಯ್ಯಪ್ಪ ಫಣಿಕ್ಕರ್,  ರೋಮಿಲಾ ಥಾಪರ್ ಮತ್ತು ಇರ್ಫಾನ್ ಹಬೀಬ್ ನಮ್ಮ ನಡುವೆ ಇರುವುದು ಸಮಾಧಾನಕರ ಸಂಗತಿ.

ಈ ನಿಟ್ಟಿನಲ್ಲಿ ಪಂಕಜ್ ಮಿಶ್ರಾ ನ The Ruins Of Empire ಕೃತಿ ಇಪ್ಪತ್ತೊಂದನೆ ಶತಮಾನದ ಮಹತ್ವದ ಕೃತಿ ಎಂದೇ ನನ್ನ ಭಾವನೆ. ಈಸ್ಟ್ ಇಂಡಿಯಾ ಕಂಪನಿಗೆ ಪ್ರಮುಖ ವಾಣಿಜ್ಯ ಬೆಳೆಯಾದ ಹತ್ತಿಯನ್ನು ಬೆಳೆದುಕೊಡುತ್ತಿದ್ದ ಇಂಗ್ಲೆಂಡಿನ ವಸಾಹತು ಪ್ರದೇಶವಾಗಿದ್ದ ಈಜಿಪ್ತ್ ರಾಷ್ಟ್ರದ ಮೇಲೆ 1798 ರಲ್ಲಿ ಪ್ರಾನ್ಸಿನ ನಪೋಲಿಯನ್ ಲಗ್ಗೆ ಹಾಕಿದ ಕಥನ ದೊಂದಿಗೆ ಆರಂಭಗೊಳ್ಳುವ ಕಥನ ಮತ್ತು ಇಸ್ಲಾಂ ಜಗತ್ತು ಪಾಶ್ಚಿಮಾತ್ಯ ಜಗತ್ತನ್ನು ದ್ವೇಷಿಸಲು ಇರುವ ಕಾರಣಗಳ ಇತಿಹಾಸದ ಹುಡುಕಾಟವೂ ಸಹ ಈ ಕೃತಿಯಲ್ಲಿದೆ. ಈವರೆಗೆ 2001 ರ ಸೆಪ್ಟಂಬರ್ ಹನ್ನೊಂದರಂದು ಅಮೇರಿಕಾದ ನ್ಯೂಯಾರ್ಕ್ ನಗರದ ವಿಶ್ವ ವಾಣಿಜ್ಯ ಕೇಂದ್ರ ಮೇಲೆ ನಡೆದ ದಾಳಿಯನ್ನು ಮಾತ್ರ ಗುರುತಿಸುವ ನಮ್ಮ ಇತಿಹಾಸಕಾರರು, ಬರಹಗಾರರು, ಮತ್ತು ಪತ್ರಕರ್ತರು ಅವಶ್ಯವಾಗಿ ಓದಲೇ ಬೇಕಾದ ಕೃತಿಯಿದು. ಈ ಕೃತಿಗೆ ಎಡ್ವರ್ಡ್ ಸಯ್ಯದ್ ನೀಡಿರುವ ಒಂದು ಪ್ರತಿಕ್ರಿಯೆ ಕೃತಿಯ ಮಹತ್ವವನ್ನು ದ್ವಿಗುಣಗೊಳಿಸಿದೆ. ಆಸಕ್ತರು ಪಂಕಜ್ ಮಿಶ್ರಾನ ವೆಬ್ ಸೈಟ್ ತಾಣವನ್ನು ಒಮ್ಮೆ ಗಮನಿಸಬಹುದು. ವಿಳಾಸ- www.pankajmishra.com

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ