Thursday, 20 March 2014

ಖುಷ್ವಂತ್ ಸಿಂಗ್ ಎಂಬ ರಸಿಕ ಖುಷಿಯ ಸಾವು


ಇದು ಕಾಕತಾಳೀಯ ಘಟನೆ ಎಂದು ಕೊಳ್ಳುತ್ತೇನೆ. ದೆಹಲಿಯಲ್ಲಿರುವ ಧಾರವಾಡದ ಹೆಣ್ಣುಮಗಳು, ಸಹೋದರಿ ರೇಣುಕಾ ನಿಡುಗುಂದಿಯವರ ‘ ದಿಲ್ಲಿಯ ದಿನಚರಿ” ಎಂಬ  ಕೃತಿ ಮುಂದಿನ ಮಾರ್ಚ್ 30 ರ ಭಾನುವಾರ ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ. ಅವರಿಗೆ ನಿನ್ನೆ ಬೆಳಿಗ್ಗೆ ಪ್ರತಿಕ್ರಿಯುಸುತ್ತಾ, ಖಷ್ವಂತ್ ಸಿಂಗರ ದಿಲ್ಲಿ ಕಾದಂಬರಿಯ ಬಗ್ಗೆ ಪ್ರಸ್ತಾಪಿಸಿದ್ದೆ. ರಾತ್ರಿ ಮಲಗುವಾಗ  ಖಷ್ವಂತರ ದಿಲ್ಲಿ ಕಾದಂಬರಿ ಮತ್ತು ಅವರು ಅನುವಾದಿಸಿರುವ  ಉಮ್ರಾವೊ ಜಾನ್ ಳ ಆತ್ಮ ಕಥೆ “ ಉಮ್ರಾವೊ ಜಾನ್ ಅದ”  ಕೃತಿಗಳನ್ನು ಮತ್ತೆ ಒಂದು ಬಾರಿ ತಿರುವಿ ಹಾಕಿದೆ.
ಈ ದಿನ ಬೆಳಿಗ್ಗೆ ನನ್ನ ಮೆಚ್ಚಿನ ಪತ್ರಕರ್ತ ಹಾಗೂ ಲೇಖಕ ಖುಷ್ವಂತ್ ಸಿಂಗ್ ದೆಹಲಿಯಲ್ಲಿ ತಮ್ಮ 99 ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಇಡೀ ಬದುಕಿನುದ್ದಕ್ಕೂ  ಪ್ರತಿಯೊಂದು ಕ್ಷಣವನ್ನು ಬಿಡದೆ, ವ್ಯರ್ಥ ಮಾಡದೆ, ಇಂಚು ಇಂಚಾಗಿ ಅನುಭವಿಸಿದ ಜೀವೊವೊಂದು ಭಾರತದಲ್ಲಿ ಇದ್ದರೆ, ಅದು ಖುಷ್ವಂತ್ ಸಿಂಗ್ ಮಾತ್ರ ಎಂಬ ಪ್ರಶಂಸೆಗೆ ಪಾತ್ರರಾಗಿದ್ದ ಈ ರಸಿಕ ವೃದ್ಧ ತಮ್ಮ ಲೇಖನಿಯಲ್ಲೂ ಅದೇ ರಸಿಕತೆ, ರೋಚಕತೆಯನ್ನು ಉಳಿಸಿಕೊಂಡಿದ್ದರು.


ತಮ್ಮ ಬದುಕಿನ ಕೊನೆಯ ದಿನಗಳವರೆಗೂ ಬರೆಯುತ್ತಲೇ ಬದುಕಿದ ಖುಷ್ವಂತ್ ಸಿಂಗ್ ತಮ್ಮ ಕೊನೆಯ ಕೃತಿಯಾದ ಆತ್ಮ ಚರಿತ್ರೆ” ಖುಷ್ವಂತ್ ನಾಮ” ಕೃತಿಯಲ್ಲಿ ಮಾತ್ರ ಆತ್ಮಾವಲೋಕನದ ಮಾತುಗಳನ್ನಾಡಿದ್ದರು. ಸಂದರ್ಭಕ್ಕೆ ತಕ್ಕಂತೆ ಅವರು ನೀಡುತ್ತಿದ್ದ ಗಾಲಿಬ್ ನ ಕವಿತೆಗಳು ಅವರ ಕೃತಿಗಳ, ಲೇಖನದ, ಮಾತುಗಳ ಮೌಲ್ಯವನ್ನು ಹೆಚ್ಚಿಸುತ್ತಿದ್ದವು. ತಮ್ಮ ಜೀವಿತದ ಕೊನೆಯ ಕ್ಷಣಗಳ ಸಂದರ್ಭದಲ್ಲೂ ಸಹ ಅವರು ಗಾಲಿಬ್ ನನ್ನು, ಅವನ ಕವಿತೆಗಳನ್ನು  ಪ್ರಸ್ತಾಪಿಸಿದ್ದಾರೆ.


ಭಾರತದ ಅತ್ಯಂತ ಹಿರಿಯ ಪತ್ರಕರ್ತರು ಹಾಗೂ ನಿರಂತರವಾಗಿ ಬರೆವಣಿಗೆಯನ್ನು ಕಾಯ್ದುಕೊಂಡು ಬಂದವರಲ್ಲಿ ಕುಲದಿಪ್ ನಯ್ಯರ್ ಮತ್ತು ಖುಷ್ವಂತ್ ಸಿಂಗ್ ಪ್ರಮುಖರು. ಈ ಇಬ್ಬರ ಲೇಖನಗಳು ಅಂಕಣಗಳ ರೂಪದಲ್ಲಿ ಭಾರತದ ಹನ್ನೊಂದು ಭಾಷೆಗಳ  ಐವತ್ತಕ್ಕು ಹೆಚ್ಚು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು. ಭಾರತದ ಹೃದಯವೆಂದು ಪರಿಗಣಿಸುವ ದೆಹಲಿ ನಗರದಲ್ಲಿ ಇದ್ದುಕೊಂಡು ಸ್ವಾತಂತ್ರ್ಯಾ ನಂತರದ ಭಾರತ ಮತ್ತು ಅದಕ್ಕೂ ಮುಂಚಿನ ಭಾರತದ ರಾಜಕೀಯ ಮತ್ತು ಸಾಮಾಜಿಕ ಬೆಳವಣಿಗೆಗೆ ಇಬ್ಬರೂ ಸಾಕ್ಷಿಯಾದವರು. ಕುಲದಿಪ್ ನಯ್ಯರ್ ಅವರದು ಗಂಭೀರ ಅಧ್ಯಯನ ಮತ್ತು ಕರಾರುವಕ್ಕಾದ ಮಾಹಿತಿಗಳಿಂದ ಕೂಡಿದ ತೂಕದ ಬರೆವಣಿಗೆಯಾದರೆ, ಖುಷ್ವಂತ್ ಸಿಂಗ್ ಗಂಭೀರ ಸಂಗತಿಗಳನ್ನು ಸಹ ತಮಾಷೆ, ವ್ಯಂಗ್ಯ ಮತ್ತು ರೋಚಕತೆಯಿಂದ ಹೇಳುವ ಸ್ವಭಾದವರು. 1975 ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂದಿ ತುರ್ತು ಪರಿಸ್ತಿತಿಯನ್ನು ಜಾರಿಗೆ ತಂದ ಸಂದರ್ಭದಲ್ಲಿ ಇಂದಿರಾ ಗಾಂದಿಯವರನ್ನು ಸಮರ್ಥಿಸಿಕೊಂಡು ವಿವಾದಕ್ಕೆ ಗುರಿಯಾಗಿದ್ದ ಖುಷ್ವಂತ್ ಸಿಂಗ್, 1984ರ ಅಕ್ಟೋಬರ್ 30 ರಂದು ಇಂದಿರಾ ಕೊಲೆಯಾದ ಸಂದರ್ಭದಲ್ಲಿ, ದೆಹಲಿಯಲ್ಲಿ ನಡೆದ ಸಿಖ್ ಜನಾಂಗದ ನರಮೇಧಕ್ಕೆ ಸಾಕ್ಷಿಯಾದವರು. ಇದಕ್ಕಿಂತ ಹೆಚ್ಚಾಗಿ ಸ್ವತಃ ತಾವೇ ತಮ್ಮ ಕುಟುಂಬದ ಹಾಗೂ ತಮ್ಮ ಜೀವ ಉಳಿಸಿಕೊಳ್ಳಲು ದೆಹಲಿ ನಗರದಲ್ಲಿ   ಕಾಡಿಗೆ ಬಿದ್ದ ಬೆಂಕಿಯಿಂದ ತಪ್ಪಿಸಿಕೊಳ್ಳಲು ಪರದಾಡುವ ಮೂಕ ಪ್ರಾಣಿಗಳಂತೆ ಒದ್ದಾಡಿದವರು. ಈ ಕುರಿತು ಅವರು ಬರೆದಿರುವ ಒಂದು ಲೇಖನ ಅತ್ತುತ್ಯುಮ ಬರೆವಣಿಗೆಗಳಲ್ಲಿ ಒಂದು.


1915 ರ ಪೆಬ್ರವರಿಯಲ್ಲಿ ಇಂದಿನ ಪಾಕಿಸ್ಥಾನದ ಪಂಜಾಬ್ ಪ್ರಾಂತ್ಯದಲ್ಲಿ ಜನಿಸಿದ ಖುಷ್ವಂತ್ ಸಿಂಗ್ ಭಾರತದ  ವಿಭಜನೆಯನ್ನು ಕಣ್ಣಾರೆ ನೋಡಿದವರು ಮತ್ತು  ಅದರ ದುರಂತಕ್ಕೆ ಹಾಗೂ ಕ್ರೌರ್ಯಕ್ಕೆ ಸ್ವತಃ ಬಲಿಯಾದವರು. ಈ ನಿಟ್ಟಿನಲ್ಲಿ ಅವರು ಬರೆದ “ ಟ್ರೈನ್ ಟು ಪಾಕಿಸ್ಥಾನ್” ಎಂಬ ಕೃತಿ, ಭಾರತ ವಿಭಜನೆ ಕುರಿತು ಸಾದತ್ ಹಸನ್ ಮಂಟೋ ಸೃಷ್ಟಿಸಿದ ಕಥೆಗಳ ನಂತರದ ಶ್ರೇಷ್ಠ ಕೃತಿಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.
1970 ರ ದಶಕದಲ್ಲಿ ಟೈಮ್ಸ್ ಅಫ್ ಇಂಡಿಯ ಹೊರತರುತ್ತಿದ್ದ “ ಇಲ್ ಸ್ಟ್ರಡ್ ವೀಕ್ಲಿ ಆಫ್ ಇಂಡಿಯ” ಎಂಬ ವಾರಪತ್ರಿಕೆ ನಮ್ಮ ಕನ್ನಡದವರೇ ಆದ ಎಂ.ವಿ. ಕಾಮತ್ ಸಂಪಾದಕತ್ವದಲ್ಲಿ ನಲುಗಿ ಹೋಗಿತ್ತು. ನನ್ನ ಕಾಲೇಜು ದಿನಗಳಲ್ಲಿ ಆ ಪತ್ರಿಕೆಯನ್ನು ನಾವು ಗೆಳೆಯರು ‘ವೃದ್ದರ ಪಂಚಾಂಗ’ ಎಂದು ಗೇಲಿ ಮಾಡುತ್ತಿದ್ದೆವು. ಆ ಪತ್ರಿಕೆ ನೇತೃತ್ವ ಖುಷ್ವಂತ್ ಸಿಂಗ್ ರ ಕೈಗೆ ಸಿಕ್ಕ ಮೇಲೆ ಅದರ ಸ್ವರೂಪ ಸಂಪೂರ್ಣ ಬದಲಾಗಿ ಭಾರತದ ಶ್ರೇಷ್ಠ ವಾರ ಪತ್ರಿಕೆಯಾಗಿ ರೂಪುಗೊಂಡಿತು. ಅಲ್ಲದೆ ಇಂಡಿಯ ಟುಡೆ, ಸಂಡೆ, ದ ವೀಕ್ ಮುಂತಾದ ವಾರ ಮತ್ತು ಪಾಕ್ಷಿಕ ಪತ್ರಿಕೆಗಳ ಹುಟ್ಟಿಗೆ ಪರೋಕ್ಷವಾಗಿ ಕಾರಣವಾಯಿತು.


ದಿಲ್ಲಿ ನಗರವನ್ನು ನಾಯಕಸಾನಿಗೆ ಹೋಲಿಸಿದ್ದ ಖುಷ್ವಂತ್ ಸಿಂಗ್ ಸ್ವತಃ ಮದಿರೆ ಮತ್ತು ಮಾನಿನಿ ಇವರೆಡರ ಪರಮ ಆರಾಧಕರಾಗಿದ್ದರು. ಇವುಗಳ ಕುರಿತು ಯಾವ ಸೋಗು ಹಾಕದೆ ಬರೆಯುತ್ತಿದ್ದರು. ಅವರ ಲೇಖನಿಯಿಂದ ದೆಹಲಿ ನಗರದ ಅವರ ಅಪಾರ್ಟ್ ಮೆಂಟಿನ ಸಹವಾಸಿಗಳು, ಜವಾನ, ಕಸಗುಡಿಸುವವರು, ಕೊನೆಗೆ ಹಿಜಡಾಗಳು ಹೀಗೆ ಯಾವ ಜನ ಸಾಮಾನ್ಯರು ಅವರಿಂದ ತಪ್ಪಿಸಿಕೊಳ್ಳಲು ಸಾಧ್ಯವಿರಲಿಲ್ಲ. ತಾವು ಬೆತ್ತಲಾಗುತ್ತಾ ಎಲ್ಲರ ಬಾಯಲ್ಲಿ ‘ ರಸಿಕತೆಯ ಮತ್ತು ಕೀಟಲೆಯ ಮುದುಕ” ಎಂದು ರೇಗಿಸಿಕೊಳ್ಳುತ್ತಿದ್ದರು. ಎಲ್ಲವನ್ನು ಲವ ಲವಿಕೆಯಿಂದ ಹಾಸ್ಯ ಪ್ರಜ್ಞೆಯಿಂದ ಬರೆಯುತ್ತಿದ್ದರು. “ ವಯಸ್ಸಾಗುತ್ತಿದ್ದಂತೆ ಸೊಂಟದಲ್ಲಿದ್ದ ಶಕ್ತಿ ನನ್ನ ನಾಲಿಗೆಗೆ ಮತ್ತು ಲೇಖನಿಗೆ ಹರಿದು ಬಂದಿದೆ’ ಎನ್ನುತ್ತಿದ್ದರು. ಕಳೆದ ವರ್ಷ ಅವರಿಗೆ ಹೊಟ್ಟೆ ಕೆಟ್ಟ ಸಂದರ್ಭದಲ್ಲಿ ಅವರ ಪುತ್ರ ರಾಹುಲ್ ( ಇವರು ಹಿಂದೆ ರೀಡರ್ ಡೈಜೆಸ್ಟ್ ಪತ್ರಿಕೆಯ ಸಂಪಾದಕರಾಗಿದ್ದರು) ವೈದರ ಬಳಿ ಕರೆದುಕೊಂಡು ಹೋದಾಗ, ವೈದ್ಯರು ಸಿಂಗ್ ರ ಗುದ ದ್ವಾರ ದ ಮೂಲಕ ಪೈಪ್ ತೂರಿಸಿ ಪರೀಕ್ಷಿದ ಸಂದರ್ಭದಲ್ಲಿ “ ವೈದ್ಯರು ನನ್ನ ಹೊಟ್ಟೆಯೊಳಗಿರುವ ದೆಹಲಿಯ ಕಕ್ಕಸು ಗುಂಡಿಯನ್ನು ಪೈಪ್ ಮೂಲಕ ಕ್ಯಾಮರಾ ತೂರಿಸಿ ವೀಕ್ಷಿಸಿದರು’ ಎಂದು ಬರೆದುಕೊಂಡಿದ್ದರು. ತಮ್ಮ 98 ನೇ ವಯಸ್ಸಿನಲ್ಲಿ  ಇಂತಹ ಹಾಸ್ಯ ಪ್ರಜ್ಞೆಯನ್ನು  ಕಾಪಾಡಿಕೊಂಡು ಬರಲು ಖುಷ್ವಂತರಿಗೆ ಮಾತ್ರ ಸಾಧ್ಯವಿತ್ತು.


ದೇಶ ವಿದೇಶಗಳಲ್ಲಿ ಅಪಾರ ಓದುಗ ಬಳಗವನ್ನು ಹೊಂದಿದ್ದ ಖುಷ್ವಂತ ಸಿಂಗರ  ಕೃತಿಗಳು ಲಕ್ಷ ಗಟ್ಟಲೆ ಮಾರಾಟವಾಗುತ್ತಿದ್ದವು. ಅವರ ‘ ವುಮನ್ ಇನ್ ಮೈ ಲೈಪ್’ ಮತ್ತು ದಿ ಕಂಪನಿ ಆಫ್ ವುಮನ್” ಜನಪ್ರಿಯ ಕೃತಿಗಳಾದರೂ ಅವರ ದಿಲ್ಲಿ, ಟ್ರೈ ನ್ ಟು ಪಾಕಿಸ್ಥಾನ್” ಕೃತಿಗಳು ಮಾತ್ರ  ಅವರ ಹೆಸರನ್ನು ಶಾಶ್ವತವಾಗಿ ಉಳಿಸಬಲ್ಲ ಕೃತಿಗಳಾಗಿವೆ. ಇಂದು ಖುಷ್ವಂತ್ ಸಿಂಗ್ ನಮ್ಮೊಡನಿಲ್ಲ ಆದರೆ. ವಿದ್ಯುತ್ ಬಲ್ಪಿನೊಳಗೆ ಕುಳಿತು ಬರೆಯುತ್ತಿದ್ದ ಸರ್ದಾಜಿಯ ಚಿತ್ರದ ನೆನಪು ಮಾತ್ರ ನಮ್ಮೆದೆಯೊಳಗೆ ಸದಾ ಕಾಲ ಉಳಿಯುತ್ತದೆ.

1 comment:

  1. ಖುಷ್ವಂತ್ ಸಿಂಗರ ಹೆಸರನ್ನು ಮೊದಲು ನೋಡಿದ್ದು ಜೋಕ್ ಪುಸ್ತಕವೊಂದರ ಮೇಲೆ.... ನಂತರದಲ್ಲಿ ರವಿ ಬೆಳಗೆರೆಯವರು ಹಾಯ್ ಬೆಂಗಳೂರಿನಲ್ಲಿ ಪೋಲಿ ತಾತನ ಬಗ್ಗೆ ಬರೆಯುತ್ತಿದ್ದುದನ್ನು ಓದಿದ್ದೆ. ಖುಷ್ವಂತ್ ಸಿಂಗರ ದಿ ಕಂಪನಿ ಆಫ್ ವುಮನ್ ಓದಿದಾಗ ಬೇಸರವೇ ಆಗಿತ್ತು... ಅವರ ನಿಜವಾದ ತಾಕತ್ತಿನ ಅರಿವಾಗಿದ್ದು ಟ್ರೈನ್ ಟು ಪಾಕಿಸ್ತಾನ್ ಮತ್ತು ಕೆಲವು ಲೇಖನಗಳನ್ನು ಓದಿದಾಗ.... ಚೆಂದದ ವಿದಾಯದ ಲೇಖನ ಬರೆದಿದ್ದೀರ...

    ReplyDelete