ಬುಧವಾರ, ಮಾರ್ಚ್ 26, 2014

ನರೇಂದ್ರಮೋದಿ ಮತ್ತು ಕಾರ್ಪೊರೇಟ್ ಜಗತ್ತು




ಗುಜರಾತಿನ ಮೂರು ಸಾರ್ವತ್ರಿಕ ಚುನಾವಣೆಯಲ್ಲಿ ನರೇಂದ್ರಮೋದಿ ಜಯಗಳಿಸಿ ಮುಖ್ಯ ಮಂತ್ರಿ ಗದ್ದುಗೆ ಏರಿರುವುದು ಅವರ ಭಕ್ತರ ಪಾಲಿಗೆ ರೋಮಾಂಚಕಾರಿಯಾದ ವಿಷಯ ನಿಜ ಆದರೆ, ಭಾರತದ ಇತಿಹಾಸದಲ್ಲಿ ಪಶ್ಚಿಮ ಬಂಗಾಳದ ಜ್ಯೋತಿ ಬಸುರವರು ಆರು ಬಾರಿ ಚುನಾವಣೆಯಲ್ಲಿ ತಮ್ಮ ಸಿ.ಪಿ.ಐ.(ಎಂ) ಪಕ್ಷವನ್ನು ಮುನ್ನಡೆಸಿ ಸತತ 23 ವರ್ಷಗಳ ಕಾಲ ಪಶ್ಚಿಮ ಬಂಗಾಳದ ಮುಖ್ಯ ಮಂತ್ರಿಯಾಗಿದ್ದರು. ಅಸ್ಸಾಮಿನ ತರುಣ್ ಗೋಗಯ್ ನಾಲ್ಕು ಬಾರಿ ಮತ್ತು ಅದೇ ಬಿ.ಜೆ.ಪಿ. ಪಕ್ಷದ ವತಿಯಿಂದ ಮದ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಛತ್ತೀಸ್ ಗಡದಿಂದ ಡಾ.ರಮಣ್ ಸಿಂಗ್ ತಲಾ ಮೂರು ಬಾರಿ ಮುಖ್ಯ ಮಂತ್ರಿಯಾಗಿ ಮುಂದುವರೆದಿದ್ದಾರೆ, ಇವರ ಜೊತೆಗೆ ಮಣಿಪುರದಲ್ಲಿ ಮಣಿಸರ್ಕಾರ್ ಎಂಬ ಸಜ್ಜನ ಹಾಗೂ ಅತ್ಯಂತ ಸರಳ ವ್ಯಕ್ತಿಯೊಬ್ಬರು ನಾಲ್ಕು ಬಾರಿ ಸಿ.ಪಿ.ಐ.(ಎಂ.) ಸರ್ಕಾರದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದೆಹಲಿಯ ಶೀಲಾದಿಕ್ಷೀತ್ ಕೂಡ ಮೂರು ಬಾರಿ ಸತತವಾಗಿ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಯಾಗಿದ್ದವರು.
ಮೋದಿಯವರ ಗುಜರಾತ್ ರಾಜ್ಯದ ಇತಿಹಾಸದಲ್ಲಿ ಮಾಧವಸಿಂಗ್ ಸೋಳಂಕಿ ನಾಲ್ಕು ಬಾರಿ ಮುಖ್ಯ ಮಂತ್ರಿಯಾಗಿ ಸುಧೀರ್ಘ ಸೇವೆ ಸಲ್ಲಿಸಿದ ಖ್ಯಾತಿಗೆ ಪಾತ್ರರಾಗಿದ್ದಾರೆ. ಭಾರತದ ರಾಜಕೀಯ ಇತಿಹಾಸದಲ್ಲಿ ಇಂತಹ ದಾಖಲೆಗಳಿದ್ದರೂ ಸಹ  ತಮ್ಮ ಚುನಾವಣೆಯ ಗೆಲುವುಗಳನ್ನು ಶತಮಾನದ ಸಾಧನೆ ಯೆಂಬಂತೆ ಪ್ರತಿಬಿಂಬಿಸಿಕೊಳ್ಳುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ ಸಂಗತಿ.
ಇಪ್ಪತ್ತೊಂದನೆ ಶತಮಾನದ ಭಾರತದ ಯುಗಪುರುಷ ಎಂಬಂತೆ ಸ್ವಯಂ ಬಿಂಬಿಸಿಕೊಳ್ಳುತ್ತಿರುವ ನರೇಂದ್ರಮೋದಿ ಅವರು ಗುಜರಾತಿನ ಮುಖ್ಯಮಂತ್ರಿಯಾಗುವ ಮುನ್ನ ಇದ್ದ ಅಲ್ಲಿನ ಬೆಳವಣಿಗೆ ಮತ್ತು ಮುಖ್ಯಮಂತ್ರಿಯಾದ ನಂತರ ಆಗಿರುವ ಬೆಳವಣಿಯ ವರದಿ ಈ ಕೆಳಗಿನಂತಿದೆ. ಗಮನಿಸಿ.
ವಿಷಯ                       ಮೋದಿ ಆಳ್ವಿಕೆಗೆ ಮುನ್ನ                ಮೋದಿ ಆಳ್ವಿಕೆಯಲ್ಲಿ
ಮಾನವ ಅಭಿವೃದ್ಧಿ            10 ನೇ ಸ್ಥಾನ (ಭಾರತದಲ್ಲಿ)           11 ನೇ ಸ್ಥಾನ ( 2008 ರಲ್ಲಿ)
ಸಾಕ್ಷರತೆ                      17 ನೇ ಸ್ಥಾನ (20001)                 18 ನೇ ಸ್ಥಾನ ( 2011)
ಕುಡಿಯುವ ನೀರಿನ ಲಭ್ಯತೆ   14 ನೇ ಸ್ಥಾನ                            15ನೇ ಸ್ಥಾನ (2011)
ಕೃಷಿರಂಗದ ಬೆಳವಣಿಗೆ        ಶೇಕಡ 10%                             ಶೇಕಡ 4 %   ( 2011)
ಆರೋಗ್ಯಕ್ಕೆ ವೆಚ್ಚ              6ನೇ ಸ್ಥಾನ (ಭಾರತದಲ್ಲಿ)              17 ನೇ ಸ್ಥಾನ ( 2011ರಲ್ಲಿ)
ಕೃಷಿ ಉತ್ಪಾದನೆ               ಶೇಕಡ 4.7 %                           ಶೆಕಡ 3.4%
ಶಿಕ್ಷಣಕ್ಕೆ ಮಾಡಿದ ವೆಚ್ಚ        6ನೇ ಸ್ಥಾನ (ಭಾರತದಲ್ಲಿ)               16 ನೇ ಸ್ಥಾನ ( 2011ರಲ್ಲಿ)

ಗುಜರಾತಿನ ಬೆಳವಣಿಗೆಯ ಈ ಅಂಕಿ ಅಂಶಗಳು ಮೋದಿಯ ವಿರೋಧಿಗಳು ಸೃಷ್ಟಿ ಮಾಡಿದ ಅಂಕಿ ಅಂಶಗಳಲ್ಲ ಬದಲಾಗಿ ಕಳೆದ ಒಂದು ದಶಕದ ಭಾರತದ ವಿವಿಧ ಇಲಾಖೆಯ ಹಾಗೂ ಸಂಸ್ಥೆಗಳ ವರದಿಗಳು ಹೇಳಿರುವ ಅಂಕಿ ಅಂಶಗಳು.

ಇಂತಹ ವಿಫಲತೆಯನ್ನು ಬೆನ್ನಿಗಿಟ್ಟುಕೊಂಡು, ಕಾರ್ಪೊರೇಟ್ ಸಂಸ್ಥೆಗಳ ಲಾಭಿಯ ಮೂಲಕ ಕಳೆದ ಒಂದು ವರ್ಷದಲ್ಲಿ ಜಾಹಿರಾತಿಗಾಗಿ ಸಾವಿರಾರು ಕೋಟಿ ರೂಪಾಯಿ ಹಣವನ್ನು ಮೋದಿ ವ್ಯಯ ಮಾಡಿದ್ದಾರೆ. ಗುಜರಾತಿನ ಅಭಿವೃದ್ಧಿ ಕುರಿತು ದೇಶಾದ್ಯಂತ ಪತ್ರಿಕೆಗಳಿಗೆ ಪೂರ್ಣ ಮುಖಪುಟದ ಜಾಹಿರಾತು ನೀಡುವ ಅವಶ್ಯಕತೆ ಏನಿತ್ತು? ಕಳದ ವರ್ಷ ಗೋವಾದಲ್ಲಿ ನಡೆದ ಬಿ.ಜೆ.ಪಿ. ಕಾರ್ಯಕಾರಿಣಿ ಸಭೆಯಲ್ಲಿ ಬಿ.ಜೆ.ಪಿ. ಪ್ರಚಾರ ಸಮಿತಿಯ ಅಧ್ಯಕ್ಷರಾದ ನಂತರ ಸೂರಜ್ ಕುಂಡ್ ನಲ್ಲಿ ನಡೆದ ಸಭೆಯಲ್ಲಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ ಮೇಲೆ ನರೇಂದ್ರ ಮೋದಿಯವರು, ದೃಶ್ಯ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಜಾಹಿರಾತುಗಳ ಮತ್ತು ಮುದ್ರಣ ಮಾಧ್ಯಮಗಳ ಜಾಹಿರಾತಿನ ವೆಚ್ಚ ಎಷ್ಟು?  ಗುಜರಾತಿನ ಜನ ನೀಡಿದ ತೆರಿಗೆ ಹಣವನ್ನು ಹೀಗೆ ತನ್ನ ವೈಯಕ್ತಿಕ ಹಿತಾಸಕ್ತಿ ಮತ್ತು ಸಾಧನೆಗೆ ಖರ್ಚು ಮಾಡುವ ನರೇಂದ್ರ ಮೋದಿ, ಇಟಲಿ ಮೂಲದ ಕನ್ನಡಕ, ಸ್ವಿಟ್ಜರ್ ಲ್ಯಾಂಡಿನ ಗಡಿಯಾರ, ಇಂಗ್ಲೆಂಡಿನ ಹತ್ತು ಸಾವಿರ ಮೌಲ್ಯದ ಪೆನ್ ಇಟ್ಟುಕೊಂಡು ಓಡಾಡುತ್ತಾ ರಾಷ್ರಪ್ರೇಮದ ಬಗ್ಗೆ ಸ್ವದೇಶಿ ಜಾಗರಣ್ ಕುರಿತು ಮಾತನಾಡುತ್ತಾರೆ.  ( ಗಮನಿಸಿ-26-3-14 ರ ಕನ್ನಡಪ್ರಭದ ಬೈಟು ಕಾಫಿ ವಿಭಾಗದಲ್ಲಿ ಮೋದಿ ಉಡುಪು ಮತ್ತು ಹವ್ಯಾಸಗಳ ಕುರಿತು ಲೇಖನ ಪ್ರಕಟವಾಗಿದೆ)
ದೇಶದ ಪ್ರಮುಖ ಮಾಧ್ಯಮ ಸಂಸ್ಥೆಗಳು ಈಗಾಗಲೇ ಕಾರ್ಪೊರೇಟ್ ಕುಳಗಳ ಹಿಡಿತಲ್ಲಿರುವುದರಿಂದ ನರೆಂದ್ರಮೋದಿಯವರು ಅವುಗಳ ಮೂಲಕ ತಮ್ಮ ಇಮೇಜ್ ವೃದ್ಧಿಸಿಕೊಳ್ಳುತ್ತಿರುವ ಜೊತೆ ಯಾವುದೇ ರೀತಿಯ ವಿರೋಧಿ ನೆಲೆಯ ಲೇಖನಗಳು ಬಾರದಂತೆ ನೋಡಿಕೊಳ್ಳುತ್ತಿದ್ದಾರೆ. ಈಗಾಗಲೇ ಮೊದಿಯ ವಿರುದ್ಧ ಧ್ವನಿ ಎತ್ತಿದ ಸಂಪಾದಕರು, ಸುದ್ಧಿ ವಿಶ್ಲೇಷಕರು ಮಾಧ್ಯಮ ಸಂಸ್ಥೆಗಳಲ್ಲಿ ತಮ್ಮ ಹುದ್ದೆ ಕಳೆದುಕೊಂಡಿದ್ದಾರೆ. ಈ ಕುರಿತು ಔಟ್ ಲುಕ್ ವಾರಪತ್ರಿಕೆ ಲೇಖನ ಪ್ರಕಟವಾಗಿದ್ದು ಹುದ್ದೆ ಕಳೆದು ಕೊಂಡ ಪತ್ರಕರ್ತರ ವಿವರಗಳಿವೆ.( ಪೆಬ್ರವರಿ 3 2014 ರ ಔಟ್ ಲುಕ್ ಇಂಗ್ಲೀಷ್ ವಾರಪತ್ರಿಕೆ ಗಮನಿಸಿ)
ಮೋದಿ ನೀಡುವ ಜಾಹಿರಾತಿಗಾಗಿ ಮಾಧ್ಯಮಗಳ ಭಟ್ಟಂಗಿತನ ಯಾವ ಹಂತ ತಲುಪಿದೆ ಎಂದರೆ, ಕಳೆದ ಅಕ್ಟೋಬರ್ 27 ರಂದು ಹಿಂದಿ ಭಾಷೆಯ “ದಿವ್ಯ ಬಾಸ್ಕರ”  ಎಂಬ ದಿನಪತ್ರಿಕೆ “ಸರ್ದಾರ್ ವಲ್ಲಬಾಯ್ ಪಟೇಲರ ಅಂತ್ಯಕ್ರಿಯೆಗೆ ನೆಹರೂ ಭಾಗವಹಿಸಿರಲಿಲ್ಲ’ ಎಂಬ ಮುಖಪುಟದ ಲೇಖನವನ್ನು ದಪ್ಪ ಶಿರೋನಾಮೆಯಡಿ  ಪ್ರಕಟಿಸಿತ್ತು. ಪ್ರಜ್ಞಾವಂತ ಓದುಗರು ಪತ್ರಿಕೆಯನ್ನು ತರಾಟೆಗೆ ತೆಗೆದುಕೊಂಡಾಗ ಎರಡು ದಿನಗಳ ನಂತರ ಪತ್ರಿಕೆಯ ಮೂಲೆಯೊಂದರಲ್ಲಿ ತನ್ನ ತಪ್ಪಿಗಾಗಿ ಸಂಪಾದಕ ಮಂಡಳಿ ವಿಷಾದ ವ್ಯಕ್ತಪಡಿಸಿತು. ಸರ್ದಾರ್ ಪ್ರತಿಮೆಗಾಗಿ ಉಕ್ಕು ಮತ್ತು ಕಬ್ಬಿಣ ಸಂಗ್ರಹಿಸುವ ಮೋದಿಯವರ ಪೂರ್ಣ ಪುಟದ ಬಣ್ಣದ ಜಾಹಿರಾತಿನ ಆಸೆಗಾಗಿ ಪತ್ರಿಕೆ ಓದುಗರೆದುರು ಹೀಗೆ  ಬೆತ್ತಲಾಯಿತು.
ಈ ಹಿಂದೆ  ಅಂದರೆ, 2003 ರಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ವರ್ಲ್ಡ್ ಗ್ರೆ ಎಂಬ ಜಾಗತಿಕ ಮಟ್ಟದ ಜಾಹಿರಾತು ಕಂಪನಿಯ ಮೂಲಕ  800 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ಭಾರತ ಬೆಳಗುತ್ತಿದೆ ( India Shining) ಎಂಬ ಜಾಹಿರಾತು ಬಿಡುಗಡೆ ಮಾಡಿದ್ದರು. ಆದರೆ 2004ರ ಚುನಾವಣೆಯಲ್ಲಿ  ಅವರ ನೇತೃತ್ವದ ಎನ್.ಡಿ.ಎ. ಸರ್ಕಾರ ಭಾರತದ ಮತದಾರರ ಮನಗೆಲ್ಲುವಲ್ಲಿ ವಿಫಲವಾಗಿ ಮಕಾಡೆ ಮಲಗಿತು. ಈ ಇತಿಹಾಸವನ್ನು ಮೋದಿಯವರು ಒಮ್ಮೆ ಓದುವುದು ಒಳಿತು. ಹಾಗಾದರೆ, ಗುಜರಾತಿನಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲವೆ? ಹೌದು ಆಗಿದೆ. ಆದರೆ, ಅದು  ಬಂಡವಾಳಶಾಹಿಗಳ ಜಗತ್ತು ಮಾತ್ರ.
ನಮ್ಮ ಉತ್ತರ ಕರ್ನಾಟಕದ ಪ್ರಸಿದ್ಧ ರಂಗ ಕಲಾವಿದ ರಾಜು ತಾಳಿಕೋಟೆಯ ಕಂಪನಿಯ ನಾಟಕವೊಂದರಲ್ಲಿ ಹಾಸ್ಯ ಪಾತ್ರಧಾರಿಯೊಬ್ಬನ ನಾಟಕದ ಡೈಲಾಗ್ ಈ ರೀತಿ ಇದೆ. “ ನೋಡ್ರಿ ಯವ್ವಾ ನಾನು ಹೆಂಗಸರ ಕೂಡಿ (ಜೊತೆ) ಕುಸ್ತಿ ಹಿಡಿಯಕ ಹಿಂದು ಮುಂದು ನೋಡಾಂಗಿಲ್ಲ, ಯಾಕಂದ್ರ ನನಗ  ಕೆಳಕ್ಕೆ ಬಿದ್ರೂ ಲಾಭ ಆಗತೈತಿ, ಮೇಲು ಬಿದ್ದರೂ ಲಾಭ ಆಗತೈತಿ” ಇದೇ ಸೂತ್ರವನ್ನು ಅಳವಡಿಸಿಕೊಂಡಿರುವ ನಮ್ಮ ಭಾರತದ ಟಾಟಾ, ಅಂಬಾನಿ, ಅದಾನಿ ಮುಂತಾದವರು ಗುಜರಾತಿನ ಮೋದಿ ಸಾಮ್ರಾಜ್ಯಕ್ಕೆ ಲಗ್ಗೆ ಇಟ್ಟಿದ್ದಾರೆ. ಗುಜರಾತಿನಲ್ಲಿ ಉದ್ದಿಮೆ ಸ್ಥಾಪನೆಯಾಗಲಿ, ಅಥವಾ ಬಿಡಲಿ, ಬಿಸಾಡುವ ಬೆಲೆಗೆ ಸಿಗುವ ಭೂಮಿ, ಪುಕ್ಕಟೆ ನೀರು, ವಿದ್ಯುತ್ ಅವರಿಗೆ ಮುಖ್ಯವಾಗಿದೆ. ಇದರ ಪರಿಣಾಮವಾಗಿ ಗುಜರಾತಿನ ರೈತರ ಫಲವತ್ತಾದ ಭೂಮಿ ಗಳ ಮೇಲೆ ಬಂಡವಾಳ ಶಾಹಿ ಸಾಮ್ರಾಜ್ಯವೊಂದು ತಲೆ ಎತ್ತಿದೆ. ಇದಕ್ಕೆ ಗುಜರಾತಿನ ಜನ ತೆತ್ತಿರುವ ಬೆಲೆ ಮಾತ್ರ ಅಪಾರವಾದುದು. ಈ ಕುರಿತ ಕೆಲವು ವರದಿಗಳು ಹಾಗೂ  ಮೋದಿಯ ಅಧ್ವಾನಗಳು ಈ ಕೆಳಗಿನಂತಿವೆ…


2008 ರಲ್ಲಿ ಟಾಟಾ ಕಂಪನಿಯು ಪಶ್ಚಿಮ ಬಂಗಾಳದ ಸಿಂಗೂರ್ ಎಂಬಲ್ಲಿ ನ್ಯಾನೊ ಕಾರು ತಯಾರಿಕಾ ಘಟಕಕ್ಕೆ ರಿಯಾಯಿತಿ ದರದಲ್ಲಿ ಭೂಮಿ, ಹಾಗೂ ಅಲ್ಲಿನ ಸರ್ಕಾರದಿಂದ ಬಡ್ಡಿರಹಿತ ಸಾಲ ಮತ್ತು  ಇತರೆ ಸಾಲವನ್ನು ಪಡೆದಾಗ, ಅಲ್ಲಿನ ಜನರ ಆಕ್ರೋಶಕ್ಕೆ ಗುರಿಯಾಯಿತು.   ಅಂತಿಮವಾಗಿ ಟಾಟಾ ಕಂಪನಿ ಅಲ್ಲಿಂದ ಕಾಲ್ತೆಗೆಯಿತು. ಇಂತಹ ಅವಕಾಶಕ್ಕಾಗಿ ಕಾದಿದ್ದ ನರೇಂದ್ರ ಮೋದಿಯವರು ತಾನು ಮತ್ತು ತನ್ನ ಸರ್ಕಾರ ಉದ್ಯಮಸ್ನೇಹಿ ಎಂಬುದನ್ನು ತೋರ್ಪಡಿಸಿಕೊಳ್ಳಲು 2009ರಲ್ಲಿ ಗುಜರಾತಿಗೆ ಟಾಟಾ ಕಂಪನಿಯನ್ನು ಆಹ್ವಾನಿಸಿದರು. ಅಹಮದಾಬಾದ್ ಜಿಲ್ಲೆಯ ಸನದ್ ಎಂಬಲ್ಲಿ 725 ಎಕರೆ ಉತ್ಪಾದನಾ ಘಟಕಕ್ಕೆ ಮತ್ತು ಇತರೆ ವ್ಯವಸ್ಥೆಗೆ( ಕಾರ್ಮಿಕರ ಟೌನ್ ಶಿಪ್) 375 ಒಟ್ಟು 1100 ಎಕರೆ ಪ್ರದೇಶವನ್ನು ಕೇವಲ 400 ಕೋಟಿ 65 ಲಕ್ಷಕ್ಕೆ ಎಂಟು ವರ್ಷಗಳ ಅವಧಿಯಲ್ಲಿ ಕಂತಿನ ರೂಪದಲ್ಲಿ ಪಾವತಿಸುವ ಷರತ್ತಿನಡಿ ನೀಡಿದರು. ಅಲ್ಲದೆ 9,750 ಕೋಟಿ ರುಪಾಯಿ ಸಾಲವನ್ನು 20 ವರ್ಷದ ಅವಧಿಗೆ ವಾರ್ಷಿಕವಾಗಿ ಒಂದು ಕೋಟಿ ರೂಪಾಯಿಗೆ  ಕೇವಲ ನೂರು ರೂಪಾಯಿ ಬಡ್ಡಿದರದಲ್ಲಿ ನೀಡಿದರು.  ಸಿಂಗೂರ್ ನಿಂದ ಯಂತ್ರ ಸಾಮಾಗ್ರಿಗಳನ್ನು ಸಾಗಿಸಲು 700 ಕೋಟಿ ಹಣ ನೀಡಿದ್ದಲ್ಲದೆ, ರಿಯಾಯಿತಿ ದರದಲ್ಲಿ ವಿದ್ಯುತ್ ಮತ್ತು ನೀರು ಒದಗಿಸಿದರು.
ತಿಂಗಳಿಗೆ 30 ಸಾವಿರ ನ್ಯಾನೊ ಕಾರುಗಳು ಉತ್ಪಾದನೆಯಾಗುತ್ತವೆ ಮತ್ತು ಸಾವಿರಾರು ಕುಟುಂಬಗಳಿಗೆ ಉದ್ಯೋಗ ಸಿಗಲಿದೆ ಎಂದು ರತನ್ ಟಾಟ ಘೊಷಿಸಿದ್ದರು. ಆದರೆ, ಇತ್ತೀಚೆಗೆ ನ್ಯಾನೊ ಕಾರುಗಳಿಗೆ ಬೇಡಿಕೆ ಇಲ್ಲವಾದ ಪರಿಣಾಮ ತಿಂಗಳಿಗೆ  ಕೇವಲ 2400 ಕಾರುಗಳು ಮಾತ್ರ ತಯಾರಾಗುತ್ತಿವೆ. ಅವುಗಳಿಗೂ ಸಹ ಬೇಡಿಕೆ ಇಲ್ಲವಾಗಿ ಮುಂದಿನ ದಿನಗಳಲ್ಲಿ ನಾವು ಈ ಕಾರುಗಳನ್ನು ಮಕ್ಕಳ ಆಟಿಕೆ ಸಾಮಾನು ಅಂಗಡಿಗಳಲ್ಲಿ ಕಾಣಬಹುದು. ಇಂತಹ ಒಂದು ವಿಫಲ ಉದ್ದಿಮೆಗಾಗಿ ಗುಜರಾತ್ ಸರ್ಕಾರ ಕಳೆದುಕೊಂಡಿದ್ದು ಬರೋಬ್ಬರಿ 30 ಸಾವಿರ ಕೋಟಿ ರೂಪಾಯಿಗಳು.
ಇದು ನಷ್ಟದ ಕತೆಯಾದರೆ, ಮತ್ತೊಂದು ಕಂಪನಿ ಅದಾನಿ ಗ್ರೂಪ್ ಗೆ ಮೋದಿ ಮಾಡಿಕೊಟ್ಟಿರುವ ಸವಲತ್ತುಗಳು ಎಂತಹವರನ್ನು ದಂಗು ಬಡಿಸುತ್ತವೆ.


ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆಗಾಗಿ, ಗುಜರಾತಿನಲ್ಲಿ ಒಂದು ಚದುರ ಮೀಟರ್ ಅಂದರೆ ಮೂರು ಚದುರ ಅಡಿಯ ಭೂಮಿಯನ್ನು ಒಂದು ರೂಪಾಯಿನಿಂದ ಮುವತ್ತೆರೆಡು ರೂಪಾಯಿ ಬೆಲೆಯಲ್ಲಿ ವಿದ್ಯುತ್ ಘಟಕ ಮತ್ತು ಮುಂಡ್ರಾ ಎಂಬಲ್ಲಿ ಖಾಸಾಗಿ ಬಂದರು ಸ್ಥಾಪನೆಗೆ ನೀಡಲಾಗಿದೆ. 2011 ಮತ್ತು 2012 ರಲ್ಲಿ ಈ ಕಂಪನಿಯಿಂದ ಮೋದಿಯ ಸರ್ಕಾರ ಪ್ರತಿ ಯೂನಿಟ್ ಗೆ 63 ಪೈಸೆ ಹೆಚ್ಚಿನ ದರ ನೀಡಿ 20 ದಶಲಕ್ಷ್ ಯೂನಿಟ್ ಖರೀದಿಸಿದ ಫಲವಾಗಿ ಸರ್ಕಾರದ ಬೊಕ್ಕಸಕ್ಕೆ 1347 ಕೋಟಿ ರೂಪಾಯಿ ನಷ್ಟು ನಷ್ಟ ಉಂಟಾಗಿದೆ ಎಂದು ಸಿ.ಎ.ಜಿ. (Controler and Auditor General of India) ವರದಿಯಲ್ಲಿ ದಾಖಲಾಗಿದೆ. 2002 ರಲ್ಲಿ ಕೇವಲ ಮೂರು ಸಾವಿರ ಕೋಟಿ ರೂಪಾಯಿ ಒಡೆತನದ ಅದಾನಿ ಗ್ರೂಪ್ ಸಂಸ್ಥೆಯ ಆಸ್ತಿ 2013 ರ ವೇಳೆಗೆ 47 ಸಾವಿರ ಕೋಟಿ ರೂಪಾಯಿ ತಲುಪಿದೆ. ಈ ದಿನ ಮೋದಿಯ ಪ್ರಚಾರದ  ವೆಚ್ಚವನ್ನು ಈ ಕಂಪನಿಯು ಭರಿಸುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಅಮೇರಿಕಾದ ಅನಿವಾಸಿ ಭಾರತೀಯರ ಜೊತೆ ಮೋದಿ ನಡೆಸಲು ಉದ್ದೇಶಿಸಿದ್ದ ವಿಡಿಯೋ ಕಾನ್ಪರೆನ್ಸ್ ಸಮಾವೇಶಕ್ಕೆ ಅದಾನಿ ಕಂಪನಿ ಪ್ರಾಯೊಜಕತ್ವ ವಹಿಸಿರುವುದು ಪತ್ತೆಯಾದ, ನಂತರ ನಡೆದ ಪ್ರತಿಭಟನೆಯ ಫಲವಾಗಿ ಕಾರ್ಯಕ್ರಮ ರದ್ದಾಯಿತು.

ಇದೀಗ ದೆಹಲಿ- ಮುಂಬೈ ನಡುವಿನ ಇಂಡಸ್ಟ್ರೀಯಲ್ ಕಾರಿಡಾರ್ ಮಾರ್ಗ ಗುಜರಾತನ್ನು ಹಾಯ್ದು ಹೋಗುವುದರಿಂದ ಅಹಮದಾಬಾದಿನಿಂದ ನೂರು ಕಿಲೊಮೀಟರ್ ದೂರದಲ್ಲಿ ದೊಲಿರಾ ಎಂಬ ಪ್ರದೇಶದಲ್ಲಿ 925 ಚದುರ ಕಿ.ಮಿ. ವ್ಯಾಪ್ತಿಯ 22 ಹಳ್ಳಿಗಳ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲಾಗುತ್ತಿದೆ. ( ವಿವರಗಳಿಗೆ ನೋಡಿ- ಸಿಮೆಂಟ್ ಪಾರ್ ಗ್ರೈನ್? ಲೇಖನ- ಫ್ರಂಟ್ ಲೈನ್ ಪಾಕ್ಷಿಕ ಏಪ್ರಿಲ್ 4-2014) ನರ್ಮದಾ ನದಿಯ ಅಚ್ಚುಕಟ್ಟು ಪ್ರದೇಶಕ್ಕೆ ಓಳಪಡುವ ಈ ಪ್ರದೇಶದ 9.225 ಹೆಕ್ಟೇರ್ ಪ್ರದೇಶದಲ್ಲಿ ರೈತರು ಜೋಳ, ಗೋಧಿ, ಸಾಸಿವೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇತ್ತೀಚೆಗೆ ರೈತರ ಪ್ರತಿಭಟನೆ ತೀವ್ರಗೊಂಡ ಪರಿಣಾಮವಾಗಿ ಗುಜರಾತ್ ಸರ್ಕಾರ ರೈತರಿಗೆ ಹೊಸ ಆದೇಶ ನೀಡಿದೆ. ಸರ್ಕಾರ ರೈತರ ಭೂಮಿಯನ್ನು ವಶಪಡಿಸಿಕೊಳ್ಳುವುದಿಲ್ಲ. ಬದಲಾಗಿ ತಮ್ಮ ಬಳಿ ಇರುವ ಅರ್ಧದಷ್ಟು ಭೂಮಿಯನ್ನು ರೈತರು ತಾವಾಗಿಯೇ ಸರ್ಕಾರಕ್ಕೆ ಒಪ್ಪಿಸಬೇಕು.

ಇಂತಹ ಅಭದ್ರತೆಯ ನಡುವೆ ಗುಜರಾತ್ ರಾಜ್ಯದಲ್ಲಿ ರೈತರ ಮತ್ತು ಜನಸಾಮಾನ್ಯರ ಬದುಕು ದುಸ್ತರವಾಗಿದ್ದು ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ನ್ಯಾಷನಲ್ ಕ್ರೈಮ್ಸ್ ರೆಕಾರ್ಡ್ ಬ್ಯೂರೊ ಸಂಸ್ಥೆಯ 2012 ರ ಅಂಕಿ ಅಂಶಗಳ ಪ್ರಕಾರ, ಆತ್ಮಹತ್ಯೆಯ ಪ್ರಮಾಣ ರಾಷ್ರಮಟ್ಟದಲ್ಲಿ ಸರಾಸಿ 11.2% ಇದ್ದರೆ, ಗುಜರಾತ್ ರಾಜ್ಯದಲ್ಲಿ 11.8% ಇದೆ. ಕಳೆದ ಮೂರು ವರ್ಷಗಳಿಂದ  ಗುಜರಾತಿನಲ್ಲಿ ಪ್ರತಿದಿನ 12 ಆತ್ಮಹತ್ಯೆಗಳು ಜರುಗುತ್ತಿವೆ. ಭಾರತದ ಪ್ರಮುಖ ಮೂರು ನಗರಗಳಲ್ಲಿ ಗುಜರಾತಿನ ರಾಜ್ ಕೋಟ್ ನಗರ ಕೂಡ ಒಂದು.
ಕಳೆದ ಒಂದು ದಶಕದಲ್ಲಿ 641 ರೈತರ ಆತ್ಮಹತ್ಯೆಗಳು ನಡೆದಿವೆ. ಆದರೆ. ಗುಜರಾತಿನ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಮಗನ್ ಪಟೇಲ್ ಹೇಳುವ ಪ್ರಕಾರ ಗುಜರಾತ್ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳನ್ನು ಪೊಲೀಸರು ದಾಖಲೆ ಮಾಡಿಕೊಳ್ಳುತ್ತಿಲ್ಲ.
ಗುಜರಾತ್ ರಾಜ್ಯದ ವಾಸ್ತವ ಅಭಿವೃದ್ಧಿಯ ಚಿತ್ರಣ ಈ ರೀತಿ ಇರುವಾಗ ಅಭಿವೃದ್ಧಿ ಕುರಿತಂತೆ  ಗುಜರಾತ್ ಮಾದರಿ ಎಂದು ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ? ಇದು ಪ್ರಜ್ಞಾವಂತರನ್ನು ಕಾಡುವ ಪ್ರಶ್ನೆ. 


                 

1 ಕಾಮೆಂಟ್‌:

  1. http://kannada.oneindia.in/ ಎನ್ನುವ ಮಸಾಲ ಪತ್ರಿಕೆ 5 ಕೋಟಿ ರೂಪಾಯಿಯ ಪಡೆದು ಬಿಜೆಪಿ ಅದರಲ್ಲೂ ನರೇಂದ್ರ ಮೋದಿಯ ಗುಣ ಗಾನಕ್ಕೆ ತನ್ನ ವೆಬ್ ತಾಣವನ್ನ ಹರಾಜಿಗಿಟ್ಟಿದೆ, ಯಾರಾದ್ರೂ ಇದರಬಗ್ಗೆ ಅನುಮಾನವಿದ್ದರೆ ಯಾವುದಾದರು ಬಿಜೆಪಿ ಪರವಾಗಿರುವ ಲೇಖನಗಳಿಗೆ ನಿಷ್ಟುರವಾಗಿ ಕಾಮೆಂಟ್ ಬರೆಯಿರಿ, ಅದು ಪ್ರಕಟವಾಗುವುದೇ ಇಲ್ಲ, ಅಂದ ಹಾಗೆ ದಿನಕ್ಕೆರಡು ಬಾರಿ ಮೋದಿ ಚಿತ್ರ ಸಹಿತ ವರದಿಗಳನ್ನು ಈ ಪತ್ರಿಕೆ ಕಳೆದ 6 ತಿಂಗಳಿಂದ ಪ್ರಕಟಿಸುತ್ತಿದೆ, ಈ ವೆಬ್ ತಾಣ ಮಾಡುವ ಪೋಲ್ ಗಳೋ ಬಿಜೆಪಿ ಪುಡಾರಿಗಳಿಗೆ ಪ್ರೀತಿ ..

    ಪ್ರತ್ಯುತ್ತರಅಳಿಸಿ