Sunday, 2 April 2017

ಸಣ್ಣ ಪುಟ್ಟ ಆಸೆಗಳ ಆತ್ಮ ಚರಿತ್ರೆ ಎಂಬ ಪ್ರಯೋಗಶೀಲತೆಯ ಕೃತಿ ಕುರಿತು


ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕಥೆಗಾರರಾಗಿ, ಕಾದಂಬರಿಗಾರ ಮತ್ತು ಪ್ರಬಂಧಕಾರರಾಗಿ ಗುರುತಿಸಿಕೊಂಡಿರುವ ಕೆ.ಸತ್ಯನಾರಾಯಣರವರು ಕಳೆದ ಮೂರು ದಶಕಗಳಿಂದ ತಮ್ಮ ಲವ ಲವಿಕೆಯ ಬರೆವಣಿಗೆ ಮತ್ತು ಪ್ರಯೋಗಶೀಲತೆಯ ಗುಣದ ಮೂಲಕ ಬರಹಗಳಲ್ಲಿ   ವಿಶಿಷ್ಟ ಹೆಜ್ಜೆಯ ಗುರುತುಗಳನ್ನು ದಾಖಲಿಸಿದವರು. ಇಲ್ಲಿಯವರೆಗೆ ವರ್ತಮಾನ ಜಗತ್ತಿನ ಯಾವುದೇ ರೀತಿಯ  ತತ್ವಗಳಿಗೆ ಅಥವಾ ಪಂಥಗಳ ಜೊತೆ ಗುರುತಿಸಿಕೊಳ್ಳದೆ ನಿರಂತರವಾಗಿ ಒಂದು ನಿರ್ಧಿಷ್ಟ ಮಟ್ಟದ  ಅಂತರವನ್ನು ಕಾಯ್ದುಕೊಂಡು ಬಂದಿರುವ ಲೇಖಕರು ಒಬ್ಬ ಸಮಾಜ ವಿಜ್ಞಾನದ ವಿದ್ಯಾರ್ಥಿಯಾಗಿ, ಸಾಹಿತಿಯಾಗಿ ಅವುಗಳನ್ನು ಯಾವುದೇ ರಾಗ ದ್ವೇಷವಿಲ್ಲದೆ ನಿರುದ್ವಿಗ್ನವಾಗಿ ವಿಶ್ಲೇಷಿಸುತ್ತಾ ಬಂದಿದ್ದಾರೆ. ಎಲ್ಲಾ ಸಿದ್ಧಾಂತಗಳಿಗಿಂತ  ಬದುಕಿನಲ್ಲಿ ಜೀವನಾನುಭವ ಮುಖ್ಯ ಎಂದು ನಂಬಿರುವ ಸತ್ಯನಾರಾಯಣರವರು  ಅಕ್ಷರದ ಬಗೆಗಿನ ಪ್ರೀತಿ ಮತ್ತು ಬದ್ಧತೆಯನ್ನು ಜೀವನ ಪೂರ್ತಿ ಕಾಪಾಡಿಕೊಂಡು ಬಂದವರುಹಾಗಾಗಿ ಅವರ ಬಹುತೇಕ ಎಲ್ಲಾ ಬರಹಗಳಲ್ಲಿ ಹೊಸ ಬಗೆಯ ಒಳನೋಟಗಳ ಜೊತೆಗೆ ವೈಚಾರಿಕತೆ ಮತ್ತು ವಿವೇಕ ಇವೆಲ್ಲವೂ ಎದ್ದು ಕಾಣುತ್ತವೆ.   ವೃತ್ತಿಯಲ್ಲಿ ಕೇಂದ್ರ ಆದಾಯ ತೆರಿಗೆ ಇಲಾಖೆಯ ಅಧಿಕಾರಿಯಾಗಿ  ಭಾರತದ  ಬಹು ಮುಖ್ಯನಗರಗಳಲ್ಲಿ ಸೇವೆ ಸಲ್ಲಿಸುತ್ತಾ ಎಲ್ಲಾ ಬಗೆಯ ಭಾಷೆ, ಧರ್ಮ, ಸಂಸ್ಕøತಿಯ ಜೊತೆ ಒಡನಾಡುವುದರ ಮೂಲಕ ಅಪಾರವಾದ ಜೀವನಾನುಭವವನ್ನು ದಕ್ಕಿಸಿಕೊಂಡಿರುವ ಕೆ.ಸತ್ಯನಾರಾಯಾಣರು ಇದೀಗ  ತಮ್ಮ  ನಿವೃತ್ತಿಯ ನಂತರ ಆತ್ಮಕಥೆಯ  ಮೂಲಕ  ವೃತ್ತಿಜೀವನದ ನೆನಪುಗಳು ಹಾಗೂ  ಬಾಲ್ಯದ ನೆನಪುಗಳನ್ನು ಪ್ರತ್ಯೇಕವಾಗಿ  ದಾಖಲಿಸತೊಡಗಿದ್ದಾರೆ. ಈಗಾಗಲೇ   ಆತ್ಮ ಚರಿತ್ರೆಯ ಪ್ರಕಾರದಲ್ಲಿ ಮೊದಲನೆಯ ಭಾಗವಾಗಿನಾವೇನೂ ಬಡವರಲ್ಲಎಂಬ ಕೃತಿಯನ್ನು ಹೊರತಂದು ಸಾಹಿತ್ಯಾಸಕ್ತರ ಗಮನ ಸೆಳದಿರುವ  ಲೇಖಕರು, ಇದೀಗಸಣ್ಣ ಪುಟ್ಟ ಆಸೆಗಳ ಆತ್ಮಚರಿತ್ರೆಎಂಬ ಕೃತಿಯ ಮೂಲಕ ಆತ್ಮ ಚರಿತ್ರೆಯ ಪ್ರಕಾರಕ್ಕೆ ಹೊಸ ಸಾಧ್ಯತೆಯನ್ನು ಸಂಲಗ್ನಗೊಳಿಸಿದ್ದಾರೆ.

ಪ್ರಯೋಗಶೀಲತೆಯು ಕೆ.ಸತ್ಯನಾರಾಯಣರವರ  ಬರಹದ ವೈಶಿಷ್ಟಮತ್ತು ಅವರ ಮನೋಧರ್ಮ ಎನ್ನುವುದಕ್ಕೆ ಕೃತಿ ಕೂಡ  ಸಾಕ್ಷಿಯಾಗಿದೆಭಿನ್ನ ಭಿನ್ನವಾದ ಸಾಹಿತ್ಯಪ್ರಕಾರದಲ್ಲಿ ಕೈ ಆಡಿಸುತ್ತಾ, ಕಥೆ, ವಸ್ತು, ನಿರೂಪಣಾ ಶೈಲಿ  ಹೀಗೆ ಎಲ್ಲವುಗಳಲ್ಲಿ ತಮ್ಮದೇ ಆದ  ಅಸ್ಮಿತೆಯನ್ನು ಕಾಪಾಡಿಕೊಂಡು ಬಂದಿರುವ ಇವರು; ಸೃಜನಶೀಲತೆ ಎನ್ನುವುದು ಮುರಿದು ಕಟ್ಟಲು ಲೇಖಕರಿಗೆ ಇರುವ ಪ್ರಕ್ರಿಯೆ ಎಂದು ನಂಬಿದವರು. ಹಾಗಾಗಿ ಇವರ ಕಥೆ, ಕಾದಂಬರಿಗಳು, ಪ್ರಬಂಧಗಳು ಸದಾ ನವ ನವೀನ ಕಥಾ ವಸ್ತುಗಳಿಂದ ಕೂಡಿರುವುದು ಮಾತ್ರವಲ್ಲದೆ, ಅವುಗಳ ಶೀರ್ಷಿಕೆ ಮತ್ತು ನಿರೂಪಣಾ ಶೈಲಿಗಳಿಂದ ಓದುಗರಿಗೆ ಆಪ್ತವಾಗುತ್ತವೆ. ಅವರ ಪ್ರಯೋಗದ ಮುಂದುವರಿದ ಭಾಗದಂತೆ ಕಾಣುವಸಣ್ಣ ಪುಟ್ಟ ಆಸೆಗಳ ಆತ್ಮ ಚರಿತ್ರೆಕೃತಿಯು  ಹಲವು ಕಾರಣಕ್ಕಾಗಿ ಮುಖ್ಯ ಕೃತಿಯಾಗಿ ನಾವು ಪರಿಗಣಿಸಬೇಕಿದೆ. ಇಂದಿನ ದಿನಮಾನಗಳಲ್ಲಿ ಆತ್ಮ ಚರಿತ್ರೆಗಳೆನ್ನುವುದು  ಬರಹಗಾರರ ಆತ್ಮರತಿಯ ಅತಿರೇಕದ ದಾಖಲೆಗಳನೋ ಎಂಬಂತೆ ಅಥವಾ ತಮ್ಮ ಸಮಕಾಲೀನ ಬರಹಗಾರರ ಬಗ್ಗೆ   ಜೀವಮಾನವಿಡಿ ಕಾಯ್ದಿಟ್ಟುಕೊಂಡು ಬಂದಿದ್ದ ಅಸಹನೆದ್ವೇಷ, ಸಿಟ್ಟು ಇವುಗಳನ್ನು ಹೊರಹಾಕಿ, ಸೇಡು ತೀರಿಸಿಕೊಳ್ಳಬಹುದಾದ ಪ್ರಕ್ರಿಯೆಯ ರೂಪದಂತೆ ಕಾಣುತ್ತಿರುವಾಗ, ಇಂತಹ ತಥಾಕಥಿತ ಮಾರ್ಗವನ್ನು ಸತ್ಯನಾರಾಯಣರು ಇಲ್ಲಿ ತ್ಯೆಜಿಸಿರುವುದು ಮುಖ್ಯ ಅಂಶವಾಗಿದೆ

ಓದುಗರಲ್ಲಿ ಯಾವುದೇ ರೀತಿಯ  ಅನುಕಂಪವನ್ನು ಬಯಸದೆ  ತಮ್ಮ ಬಾಲ್ಯದ ಬವಣೆಗಳನ್ನು ಮತ್ತು ಆಸೆಗಳನ್ನು ಬರೆದಿರುವ ಲೇಖಕರು ಕೃತಿಯುದ್ದಕ್ಕೂ ತಮ್ಮ  ಅನುಭವಗಳನ್ನು ದಾಖಲಿಸುವುದರ ಮೂಲಕಅರೆ, ಇವುಗಳು ನಮ್ಮ ಅನುಭವಗಳಾಗಿವೆಯಲ್ಲ!” ಎಂದು ಓದುಗರು ಅಚ್ಚರಿಪಡವ ರೀತಿಯಲ್ಲಿ ನಿರೂಪಿಸಿದ್ದಾರೆ.

ಕೃತಿಯ ಪ್ರಸ್ತಾವನೆಯಲ್ಲಿ ತಮ್ಮ ಬಾಲ್ಯದ ಸ್ಮತಿಯಾಗಿ ಕಾಡಿದ "ಒಂದು ಬೂರಗ ಮರ ಮತ್ತು ಕಟ್ಟೆಯ "ಕುರಿತು  ಲೇಖಕರು ಬರೆದಿರುವ ಮಾತುಗಳು ಹೀಗಿವೆಬೂರಗದ ಮರದ ಕೆಳಗೆ ದಕ್ಕಿದ ಲೋಕಜ್ಞಾನಕ್ಕೂ, ದೊಡ್ಡ ಕಟ್ಟೆಯಲ್ಲಿ ವ್ಯಕ್ತವಾಗುತ್ತಿದ್ದ ಲೋಕ ಜ್ಞಾನಕ್ಕೂ ಸಂಬಂಧವಿದೆ. ದೊಡ್ಡ ಕಟ್ಟೆಯಲ್ಲಿ ಕೂಡ ವ್ಯಕ್ತವಾಗುದ್ದುದು ಕೂಡ ಸಣ್ಣ ಪುಟ್ಟ ಆಸೆಗಳನ್ನು , ದಾಯಾದಿ ಮತ್ಸರಗಳನ್ನು ಪೂರೈಸಿಕೊಳ್ಳಲಾರದವರು ಬಂದು ಅಡಗಿಕೊಂಡು ಕಾತರಿಸುತ್ತಿದ್ದ ರೀತಿಯೇ, ಮಧ್ಯಾಹ್ನವು ಸಂಜೆಗೆ ಹೊರಳುವ ನೀರವ-ನಿಶ್ಚಲ ಹೊತ್ತಿನಲ್ಲಿ ಬೂರಗದ ಮರದ ಕೆಳಗೆ ನಿಂತ ಆಧ್ಯಾತ್ಮಿಕ ಪಿಪಾಸುಗಳು ಎಷ್ಟೇ ಹೊತ್ತಾದರೂ ಕಾಯುತ್ತಾ ನಿಲ್ಲುವರು. ಸಣ್ಣ ಪುಟ್ಟ ಜನರ ಸಣ್ಣ ಪುಟ್ಟ ಆಕಾಂಕ್ಷೆಗಳು ಎರಡೂ ಕಡೆ ವ್ಯಕ್ತವಾಗುತ್ತಿದ್ದುದೇ ಬೂರಗದ ಮರ ಮತ್ತು  ದೊಡ್ಡ ಕಟ್ಟೆಗೆ ಇರುವ ಆಧ್ಯಾತ್ಮಿಕ ಒಳಸಂಬಂಧವಿರಬಹುದೆ? ಒಳಸಂಬಂಧದ ದೆಸೆಯಿಮದಾಗಿಯೇ ಮರ ಮತ್ತು ಕಟ್ಟೆ ಸಣ್ಣ ಪುಟ್ಟ ಆಸೆಗಳ ಆತ್ಮಚರಿತ್ರೆಯನ್ನು ಬರೆಯುತ್ತಿರುವ ನನಗೆ ಈಗ ಒಟ್ಟಿಗೆ ಒಟ್ಟಂದದಲ್ಲಿ ಕಾಣುತ್ತಿರಬಹುದೆ?’ ಎಂಬ ಅರ್ಥಪೂರ್ಣ ಪ್ರಶ್ನೆಯನ್ನು ಹಾಕಿಕೊಂಡಿದ್ದಾರೆ. ಲೇಖಕರು ತಮ್ಮ ಆತ್ಮ ಚರಿತ್ರೆಯಲ್ಲಿ ದಾಖಲಿಸಿರುವ ಘಟನೆಗಳನ್ನು ಓದುತ್ತಿದ್ದಾಗ ಮಾತು ನಿಜವೆನಿಸುತ್ತದೆ.

ಮಂಡ್ಯನಗರಕ್ಕೆ ಹೊಂದಿಕೊಂಡಂತೆ ಇರುವ ತಾಯಿಯ ಊರು (ಗುತ್ತಲು ಎಂಬ ಗ್ರಾಮ) ಹಾಗೂ ತಂದೆಯ ಊರಾದ ಕೊಪ್ಪ ಗ್ರಾಮವೂ ಒಳಗೊಂಡಂತೆ ಬಾಲ್ಯದಲ್ಲಿ ತಾವು ಓದಿದ ಕೊಳ್ಳೆಗಾಲದ ಸುತ್ತ ಮುತ್ತಲಿನ ಪರಿಸರವನ್ನು ದಾಖಲಿಸಿರುವ ಲೇಖಕರು ಯಾವುದೇ ಮುಜುಗರವಿಲ್ಲದೆ, ಒಂದು ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿ, ಸರ್ಕಾರಿ ನೌಕರರಾಗಿದ್ದ ತಮ್ಮ ತಂದೆಯ ಸೀಮಿತ ಆದಾಯದಲ್ಲಿ ಬದುಕು ಕಟ್ಟಿಕೊಂಡ ಬಗೆಯನ್ನು ಮತ್ತು ತಮ್ಮ ಬಾಲ್ಯದ ಕನಸುಗಳು ಹಾಗೂ ಬವಣೆಗಳನ್ನು ನಿಸ್ಸಂಕೋಚವಾಗಿ ದಾಖಲಿಸಿರುವುದು ಕೃತಿಯ ವಿಶೇಷವಾಗಿದೆ. ಬಾಲಕನಾಗಿದ್ದ ಸಂದರ್ಭದಲ್ಲಿ  ತನ್ನ ವಿಧವೆ ಅಜ್ಜಿಗೆ ಪ್ರತಿ ತಿಂಗಳೂ ಕ್ಷೌರಿಕನೊಬ್ಬ ತಲೆ ಬೋಳಿಸುವ ಕ್ರಿಯೆ ಮತ್ತು  ತಲೆ ಬೋಳಿಸಿದ ನಂತರ ಅಜ್ಜೆಯ ತಲೆಯ ಮೇಲೆ  ಅಲ್ಲಲ್ಲಿ ಕಾಣುವ ರಕ್ತದ ಕಲೆಗಳನ್ನು ಕಂಡು ನೊಂದುಕೊಂಡು, ಮುಂದೆ ಒಳ್ಳೆಯ ಕ್ಷೌರಿಕನಾಗುವ ಕನಸು ಕಾಣುವನಾಪಿತನಾಗುವ ಆಸೆ, ಎಂಬ ಲೇಖನ, ತನ್ನ ಸಹಪಾಠಿಯೊಬ್ಬ ತಂದೆಯ ಆಕಸ್ಮಿಕ ನಿಧನಾನಂತರ ಪೆಟ್ಟಿಗೆ ಅಂಗಡಿ ಮಾಲೀಕನಾದದ್ದನ್ನು ಕಂಡು ತಾನೂ ಮಾಲೀಕನಾಗಬೇಕೆಂದು ಬಯಸುವ ಪ್ರಸಂಗ, ಸಹಪಾಠಿ ಹೆಣ್ಣು ಮಕ್ಕಳ ಮನಗೆಲ್ಲಲು ಪ್ರಯತ್ನಿಸುವ ಬಹು ವಲ್ಲಬನಾಗುವ ಆಸೆ, ತಂದೆ ಹೊಲಿಸಿಕೊಟ್ಟ ಕೆಟ್ಟದಾದ ದೊಗಳ ಕಾಕಿ ಚಡ್ಡಿ ಕುರಿತು ಬರೆದಿರುವನನ್ನ ಚಡ್ಡಿ ಕಳುವಾಗಲಿಎಂಬ ಘಟನೆಗಳ ಕುರಿತಾದ ಬರಹಗಳು ಹೀಗೆ ಇಲ್ಲಿನ ಬಹುತೇಕ ಅನುಭವಗಳು ಓದುಗರ ಮುಖದ ಮೇಲೆ ಮಂದಹಾಸ ಮೂಡಿಸುವುದರ ಜೊತೆಗೆ ನೆನಪಿನಲ್ಲಿ ಬಹುಕಾಲ ಉಳಿಯುತ್ತವೆ. ಎಲ್ಲಾ ವ್ಯಕ್ತಿಗಳಿಗೆ ವಯಸ್ಸಿಗೆ ಸಹಜವಾಗಿ ಬರುವ ಆಸೆಗಳನ್ನು ಯಾವುದೇ ಮುಚ್ಚು ಮರೆಯಿಲ್ಲದೆ ಸತ್ಯನಾರಾಯಣರು ಕೃತಿಯಲ್ಲಿ  ದಾಖಲಿಸುತ್ತಾ ಹೋಗುತ್ತಾರೆ.

ಕೃತಿಯಲ್ಲಿ ಕಾಣುವ ಹೆಂಗಸರಿಂದ ಪಾಠ ಕಲಿಯುವ ಆಸೆ, ಮುಂಗೂದಲು ಸವರಬೇಕು, ಬಾಗಿಲು ರಿಪೇರಿ ಬೇಡವೇ ಬೇಡ, ಕೊನೆ ಪ್ರಯಾಣಿಕನಾಗುವ ಆಸೆ, ಚೀಟಿ ಬರೆದು ಬಿಸಾಕುವ ಆಸೆ, ರೈತನಾಗಬೇಕು, ಬೈತಲೆ ತೆಗೆಯುವ ಆಸೆ, ಸಂಪಾದಕನಾಗುವ ಆಸೆ, ಬಡವನಾಗುವ ಆಸೆ, ಡೈನಮೊ ಸೈಕಲ್ ಆಸೆ, ಬಡ್ಡಿ ಸಾಹುಕಾರನಾಗುವ ಆಸೆ ಹೀಗೆ ನಲವತ್ತು ಬಾಲ್ಯದ ಆಸೆಗಳನ್ನು ಲೇಖಕರು ಕೃತಿಯಲ್ಲಿ ದಾಖಲಿಸಿದ್ದಾರೆ. ಇವುಗಳೆಲ್ಲವೂ ಕೇವಲ ಕೆ.ಸತ್ಯನಾರಾಯಣರ ಆಸೆಗಳಾಗಿರದೆ ನಮ್ಮೆಲ್ಲರ ಬಾಲ್ಯದ ಆಸೆಗಳೂ ಸಹ ಆಗಿದ್ದವು ಎಂಬ ಕಾರಣಕ್ಕಾಗಿ ಕೃತಿಯು ಓದುಗರಿಗೆ ಆಪ್ತವೆನಿಸುತ್ತದೆ. ಆತ್ಮಚರಿತ್ರೆಯನ್ನೂ ಹೀಗೂ ಸಹ ಯಾವುದೇ ರಾಗ ದ್ವೇಷವಿಲ್ಲದೆ ನಿಷ್ಕಲ್ಮಶ ಮನಸ್ಸಿನಿಂದ ಬರೆಯಬಹುದು ಎಂಬುದಕ್ಕೆ ಕೃತಿ ಕನ್ನಡದ ಆತ್ಮಕಥೆಯ ಪ್ರಕಾರಕ್ಕೆ ಹೊಸ ಹೊಳಹು ಮತ್ತು ದಾರಿಯನ್ನು ತೋರಿಸಿರುವುದು ವಿಶೇಷ. ಕೆ.ಸತ್ಯನಾರಾಯಣರು ತಮ್ಮ  ಯಕ್ಷ ಪ್ರಶ್ನೆ ಎಂಬ ಕಥೆಯಲ್ಲಿ ಬದುಕಿನ ಸಾರ್ಥಕತೆಯ ಅಳತೆಗೋಲುಗಳು ಯಾವುವು? ನಾವು ಎಷ್ಟು ವರ್ಷ ಬದುಕಿದೆವು ಎನ್ನುವುದೊ? ಹೇಗೆ ಬದುಕಿದೆವು ಎನ್ನುವುದೊ? ಎಂಬ ಪ್ರಶ್ನೆಗಳನ್ನು ಎತ್ತಿದ್ದರು. ಅದೇ ರೀತಿ ಅವರ ಮತ್ತೊಂದು  “ ಲೇಖಕನ ರಾಜಿನಾಮೆಎಂಬ ಕಥೆಯಲ್ಲಿ ನಾವು ಬರೆದ ಬರೆವಣಿಗೆ ಸಹೃದಯ ಲೇಖಕರ ಸ್ಪಂದನಕ್ಕೆ ಒಳಗಾಗದೆ, ಕಪಾಟುಗಳಲ್ಲಿ ಬರಿದೇ ಗೆದ್ದಲು ಹಿಡಿಯುತ್ತಾ ಹೋದರೆ, ಬರೆವಣಿಗೆಯ ಸಾರ್ಥಕತೆ ಏನು ಎಂಬ ಪ್ರಶ್ನೆಯಿದೆ. ಎಲ್ಲಾ ಪ್ರಶ್ನೆಗಳು ಕೇವಲ ಲೇಖಕರ ಕಥೆಗಳ ಪ್ರಶ್ನೆಯಾಗಿರದೆ, ಅವರ ಬದುಕಿನ ಪ್ರಶ್ನೆಗಳಾಗಿದ್ದವು ಎಂಬುದಕ್ಕೆ  ಆತ್ಮಕಥನದ ಬರಹಗಳು ನಮಗೆ ಪುರಾವೆ ಒದಗಿಸುತ್ತವೆ. ನಿಟ್ಟಿನಲ್ಲಿ ಲೇಖಕರ ಬದುಕು ಮತ್ತು ಬರೆವಣೆಗೆ ಎರಡೂ ಸಾರ್ಥಕವಾಗಿವೆ ಎಂದು ನಿಸ್ಸಂದೇಹವಾಗಿ ಹೇಳಬಹುದು.

( ಸಮಾಹಿತ, ದ್ವೈಮಾಸಿಕ ಸಾಹಿತ್ಯ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
           


No comments:

Post a Comment