ಶುಕ್ರವಾರ, ಮಾರ್ಚ್ 31, 2017

ಸ್ವರಾಜ್ ಇಂಡಿಯ: ಒಂದಿಷ್ಟು ಆಸೆ ಮತ್ತು ಆತಂಕಗಳು


ಇದೇ 25 ರಂದು ಬೆಂಗಳೂರು ನಗರದಲ್ಲಿ ಒಂದು ಅಪರೂಪದ ರಾಜಕೀಯ ವಿದ್ಯಾಮಾನ ಜರುಗಿತು. ಕಳೆದ ಒಂದು ದಶಕದಿಂದ ನಮ್ಮ ನಡುವಿನ ಸೂಕ್ಷ್ಮ ಸಂವೇದನೆಯ ಬರಹಗಾರರಾದ ದೇವನೂರು ಮಹಾದೇವ ಅಧ್ಯಕ್ಷರಾಗಿದ್ದ ಹಾಗೂ ರಾಜಕೀಯವಾಗಿ ಅಷ್ಟೇನೂ ಕ್ರಿಯಾಶೀಲವಾಗಿ  ಇರದಿದ್ದ ಕರ್ನಾಟಕ ಸರ್ವೋದಯ ಪಕ್ಷವು ಅಮ್ ಆದಿ ಪಕ್ಷದಿಂದ ಸಿಡಿದು ಹೊರಬಂದ ದೇಶದ ಅತ್ಯುತ್ತಮ ರಾಜಕೀಯ ಚಿಂತಕರಲ್ಲಿ ಒಬ್ಬರಾದ ಯೋಗೇಂದ್ರ ಯಾದವ್ ಮತ್ತು ಪ್ರಖ್ಯಾತ ವಕೀಲರಾದ ಪ್ರಶಾಂತ್ ಭೂಷಣ್ ಇವರು ನೂತನವಾಗಿ ಹುಟ್ಟು ಹಾಕಿರುವ ಸ್ವರಾಜ್ ಇಂಡಿಯಾ ಪಕ್ಷದೊಂದಿಗೆ ವಿಲೀನಗೊಂಡಿತು.
ಕರ್ನಾಟಕದ ಮಟ್ಟಿಗೆ ಇದೋಂದು ಆಶಾದಾಯಕ ಬೆಳವಣಿಗೆ ಎನ್ನಲೇಬೇಕು. ಈಗಾಗಲೇ ರಾಜ್ಯದ ರಾಜಕೀಯ ಮತ್ತು ಸಾಮಾಜಿಕ ಬದಲಾವಣೆಗಾಗಿ ಮತ್ತು ಶುದ್ಧೀಕರಣಕ್ಕಾಗಿ ಹೋರಾಡುತ್ತಿರುವ ಎಸ್.ಆರ್. ಹಿರೇಮಠ್, ಹೆಚ್,ಎಸ್, ದೊರೆಸ್ವಾಮಿ, ರವಿಕೃಷ್ಣಾರೆಡ್ಡಿ  ಸೇರಿದಂತೆ ಅನೇಕರು ಇದೀಗ ಸ್ವರಾಜ್ ಇಂಡಿಯಾ ಪಕ್ಷದ ಅಭಿಯಾನಕ್ಕೆ ಕೈ ಜೊಡಿಸಿದ್ದಾರೆ. ಇದಕ್ಕೆ ಪೂರಕವಾಗಿ ಹಿರಿಯ ಮಿತ್ರರಾದ ದೇವನೂರು ಮಹಾದೇವು ಹೊಸ ಪಕ್ಷದ ಬಗ್ಗೆ ತಮ್ಮ ಕನಸು ಮತ್ತು ಹಲವು ಯೋಜನೆಗಳನ್ನು ಪತ್ರಿಕೆಗಳ ಮೂಲಕ ಹಂಚಿಕೊಂಡಿದ್ದಾರೆ.( ದಿನಾಂಕ 28-3-17 ರ ಪ್ರಜಾವಾಣಿ)  ಮೂರು ವರ್ಷದ ಹಿಂದೆ ಅಣ್ಣಾ ಹಜಾರೆಯವರು ಭ್ರಷ್ಟಾಚಾರದ ವಿರುದ್ಧ ರಾಷ್ಟ್ರ ಮಟ್ಟದಲ್ಲಿ ಹುಟ್ಟು ಹಾಕಿದ ಹೋರಾಟದ ಇತಿಹಾಸ, ಆನಂತರ ಇದಕ್ಕೆ ಕೈ ಜೋಡಿಸಿದ್ದ ಅರವಿಂದ್ ಕೇಜ್ರಿವಾಲ್ ಇಡೀ ಹೋರಾಟವನ್ನು ಹೈ ಜಾಕ್ ಮಾಡಿ, ಅಮ್ ಆದ್ಮಿ ಪಕ್ಷವನ್ನಾಗಿ ಪರಿವರ್ತಿಸಿದ ರೀತಿಯಿಂದ ಹಿಡಿದು, ಈ ಪಕ್ಷವು ಉಂಟು ಮಾಡಿದ ರಾಜಕಿಯ ಸಂಚಲನ, ಇವುಗಳಿಗೆ ದೇಶದ ಪ್ರಜ್ಞಾವಂತ ನಾಗರೀಕರು ಸಾಕ್ಷಿಯಾಗಿದ್ದಾರೆ.. ಅಮ್ ಆದ್ಮಿ ಪಕ್ಷವು ದೆಹಲಿ ಕೇಂದ್ರಾಡಳಿತ ಪ್ರದೇಶದಲ್ಲಿ ಗೆದ್ದ ಮೇಲೆ ಹೊರಾಟಗಾರರ ನಡುವೆ ಸೃಷ್ಟಿಯಾದ  ಆಂತರೀಕ ಬಿಕ್ಕಟ್ಟು ಮತ್ತು ಕೇಜ್ರಿವಾಲ್ ರವರ ಸರ್ವಾಧಿಕಾರಿಯ ಧೋರಣೆ ಇವುಗಳಿಂದಾಗಿ ಭ್ರಷ್ಟಾಚಾರ ಮುಕ್ತ ಭಾರತದ ಬಗ್ಗೆ ಕನಸ್ಸು ಕಂಡಿದ್ದ ಬಹುತೇಕ ನಾಗರೀಕರು ಭ್ರಮ ನಿರಸನಗೊಂಡರು. ಹಾಗಾಗಿ ಇಂದಿನ ಎಲ್ಲಾ ಬಗೆಯ ಜನಪರ ಹೋರಾಟಗಳನ್ನು ಪ್ರಜ್ಞಾವಂತರು ಸಂಶಯ ದೃಷ್ಟಿಯಿಂದ ನೋಡತೊಡಗಿದ್ದಾರೆ. ಈಗ ಪಕ್ಷ ಮತ್ತು ಸಂಘಟನೆಗಿಂತ ಜನತೆಯ ವಿಶ್ವಾಸವನ್ನು ಗಳಿಸುವುದು ಪ್ರತಿಯೊಂದು ಸಾಮಾಜಿಕ ಹೋರಾಟಕ್ಕೂ ಅಗ್ನಿ ಸಾಕ್ಷಿಯಾಗಿದೆ.
1980 ರಲ್ಲಿ ಕರ್ನಾಟಕದಲ್ಲಿ ರೈತ ಸಂಘಟನೆಯನ್ನು ಹುಟ್ಟು ಹಾಕಿದ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರು ನಂತರದ ದಿನಗಳಲ್ಲಿ ದಿಡೀರನೆ ಲೋಕಸಭೆಗೆ ರೈತ ಸಂಘದ ಅಭ್ಯರ್ಥಿಗಳನ್ನು ನಿಲ್ಲಿಸುವುದಾಗಿ ಘೋಷಿಸಿದ್ದರು. ಇದು ಒಂದು ರೀತಿಯಲ್ಲಿ  ಕಟ್ಟಡವನ್ನು ತಳಪಾಯದ ಮೂಲಕ ಕಟ್ಟುವುದರ ಬದಲಾಗಿ ಮೇಲ್ಚಾವಣೆಯ ಮೂಲಕ ಕಟ್ಟುವ ಅವಸರದ ಪ್ರಯೋಗವಾಗಿತ್ತು. ಅವರಿಗೆ ಯಾರ ಮಾತನ್ನೂ ಕೇಳಿಸಿಕೊಳ್ಳುವ ಸಹನೆಯಾಗಲಿ, ಸಲಹೆಯನ್ನು ವಿಶ್ವಾಸಪೂರ್ವಕವಾಗಿ ತೆಗೆದುಕೊಳ್ಳುವ ಉಧಾರತನವಾಗಲಿ  ಇರಲಿಲ್ಲ. ಅವರೊಳಗೊಬ್ಬ ಅದ್ಭುತ ಸಂಘಟನಗಾರ ಇದ್ದ ಹಾಗೆ, ವಿಧ್ವಂಸಕನೂ ಇದ್ದ. ಇದರಿಂದಾಗಿ ರೈತ ಸಂಘ ಹೋಳಾಗುವುದರ ಜೊತೆಗೆ ಅನೇಕ ಪ್ರಗತಿಪರರು ಅವರ ಜೊತೆಗಿನ ಸಂಪರ್ಕ ಕಡಿದುಕೊಂಡರು. ಇದರಿಂದಾಗಿ ಕರ್ನಾಟಕದ ಬದಲಾವಣೆಗೆ ಇದ್ದ ಅಪೂರ್ವವಾದ ಅವಕಾಶವೊಂದು ಕಳೆದು ಹೋಯಿತು.
ಈ ಎಲ್ಲಾ ಚರಿತ್ರೆಯ ದೋಷಗಳನ್ನು ಮನಗಂಡಿರುವ ಮಹಾದೇವ  ಅವರು ಬಹಳ ಅರ್ಥಪೂರ್ಣವಾಗಿ ಸ್ವರಾಜ್ ಇಂಡಿಯಾ ಪಕ್ಷದ ರೂಪು ರೇಷೆಗಳನ್ನು ತಯಾರಿಸಿದ್ದಾರೆ. ಈ ಅಭಿಯಾನದ ನಾಯಕತ್ವವನ್ನು ಮಹಿಳೆಯರು ಮತ್ತು ಯುವಕರು ವಹಿಸಿಕೊಳ್ಳಬೇಕೆಂದು ನಿರ್ಧರಿಸಿದ್ದಾರೆ. ಜೊತೆಗೆ ಅವರು ಪ್ರಸ್ತಾಪಿಸಿರುವ “ ನಮಗೂ ಒಂದು ದಾರಿಯಿದೆ. ಅದೆಂದರೆ, ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ನಮ್ಮ ಅಸ್ತಿತ್ವವನ್ನು ವ್ಯಾಪಕವಾಗಿ ಸ್ಥಾಪಿಸುವುದು. ಉದಾಹರಣೆಗೆ ರಾಯಚೂರು ಜಿಲ್ಲೆಯಲ್ಲಿ ನವಜೀವನ ಮಹಿಳಾ ಒಕ್ಕೂಟ ಮತ್ತು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಗಳು ಒಗ್ಗೂಡಿ 474 ಗ್ರಾಮ ಪಂಚಾಯಿತಿ ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸಿ 286 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ. ಐದು ಪಂಚಾಯಿತಿಗಳಲ್ಲಿ ಬಹು ಮತ ಪಡೆದಿವೆ. ರಾಜಕಾರಣದ ವಾಸ್ತವಕ್ಕೆ ಹೀಗೆ ತಳಪಾಯ ಕಟ್ಟುವುದು ನಮಗೆ ದಾರಿಯಾಗಬೇಕು. ಹಾಗೇ ಎಲ್ಲಾ ಜನಾಂಧೋಲನಗಳಿಗೂ ಕೂಡ. ಜನವಷ್ಟೇ ಅಲ್ಲ, ಆ ಜನಗಳ ಮತಗಳು ತಮಗಿವೆ ಎಂದದಾಗ ಮಾತ್ರವೇ ಜನಾಂದೋಲನಗಳ ಧ್ವನಿಗೂ ಸತ್ಯ ಬರುತ್ತದೆ” ಎಂಬ ಮಾತುಗಳನ್ನು ಗಮನಿಸಿದಾಗ ಮಹಾದೇವ ಅವರ ಕನಸು ಮತ್ತು ಆಸೆಗಳು ಕಟು ವಾಸ್ತವಗಳಿಂದ ಕೂಡಿವೆ ಎಂದು ನಿಸ್ಸಂದೇಹವಾಗಿ ಹೇಳಬಹುದು.
ಭಾರತದ ಸ್ವಾಂತಂತ್ರ್ಯದ ಹೋರಾಟದ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರು ಸಹ ಇದೇ ಮಾರ್ಗವನ್ನು ಅನುಸರಿಸಿದ್ದರು ಎಂಬುದು ಗಮನಾರ್ಹ ಸಂಗತಿ. 1930 ರ ಉಪ್ಪಿನ ಸತ್ಯಾಗ್ರಹ ಚಳುವಳಿ ನಡೆಯುವವರೆಗೂ ಅವರಿಗೆ ಭಾರತದ ಸ್ವಾತಂತ್ರ್ಯ ಹೋರಾಟದ ಬಗ್ಗೆ ಯಾವುದೇ ಸ್ಪಷ್ಟ ಕಲ್ಪನೆಗಳಿರಲಿಲ್ಲ. 1915 ರಲ್ಲಿ ಅವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಿಂತಿರುಗಿ ನಂತರ  ಅವರು 1917 ರಲ್ಲಿ ನಡೆದ ಚಂಪಾರಣ್ಯ ಸತ್ಯಾಗ್ರಹ, ಖೇಡಾ ರೈತರ ಸತ್ಯಾಗ್ರಹ, ಅಹಮದಾಬಾದ್ ಜವಳಿ ಮಿಲ್ ಕಾರ್ಮಿಕರ ಸತ್ಯಾಗ್ರಹ ಹೀಗೆ ಅನೇಕ ಹೋರಾಟಗಳಲ್ಲಿ ಪಾಲ್ಗೊಂಡರೂ ಸಹ ಅವರಿಗೆ ಭಾರತದ ಸ್ವಾತಂತ್ರ್ಯದ ಹೋರಾಟವನ್ನು ಯಾವ ಮಾರ್ಗದಲ್ಲಿ ಕೊಂಡೊಯ್ಯಬೇಕು ಎಂಬುದರ ಕುರಿತು ನಿರ್ಧಿಷ್ಟ ಕಲ್ಪನೆಗಳಿರಲಿಲ್ಲ. ಏಕೆಂದರೆ, ಅಲ್ಲಿಯವರೆಗೆ ಅವರು ಭಾಗವಹಿಸಿದ್ದ ಸತ್ಯಾಗ್ರಹಗಳು  ಕೇವಲ ನಿರ್ಧಿಷ್ಟ ಸಮುದಾಯಗಳ ( ರೈತರು ಮತ್ತು ಕಾರ್ಮಿಕರು) ಆಶೋತ್ತರಗಳನ್ನು ಈಡೇರಿಸುವುದಕ್ಕೆ ಸೀಮಿತವಾಗಿದ್ದವು.  ಆದರೆ ಭಾರತದ ಸ್ವಾತಂತ್ರ್ಯ ಹೋರಾಟ ಒಳಗೊಳ್ಳಬೇಕಾದ ದೇಶದ ಎಲ್ಲಾ ವರ್ಗ, ಜಾತಿ ಮತ್ತು ಧರ್ಮಗಳ ಜನರನ್ನು ಅವುಗಳು ಒಳಗೊಂಡಿರಲಿಲ್ಲ.. ಗಾಂಧೀಜಿಯವರ ಮೊಮ್ಮಗ ರಾಜ್ ಮೋಹನ್ ಗಾಂಧಿಯವರು ರಚಿಸಿರುವ ಮಹತ್ವದ ಕೃತಿಗಳಲ್ಲಿ ಒಂದಾಗಿರುವ ಸುಮಾರು ಏಳನೂರು ಪುಟಗಳಷ್ಟಿರುವ “ Gandhi: The Man, his people, and the Empire” ಪುಸ್ತಕದ   “ Assault with Salt” ಎಂಬ 31 ಪುಟಗಳಷ್ಟಿರುವ ಉಪ್ಪಿನ ಸತ್ಯಾಗ್ರಹ ಕುರಿತಾದ ಅಧ್ಯಾಯದಲ್ಲಿ ಮಹತ್ವದ ಮಾಹಿತಿಗಳಿವೆ.
1930 ರ ಜನವರಿ 18 ರಂದು  ಅಹಮದಾಬಾದ್ ನಗರದ ಸಬರಮತಿ ಆಶ್ರಮದಿಂದ ಕವಿ ರವೀಂದ್ರನಾಥ ಟ್ಯಾಗೂರ್ ಅವರಿಗೆ ಪತ್ರ ಬರೆದ ಗಾಂಧೀಜಿಯವರು, “ಸ್ವಾತಂತ್ರ್ಯ ಹೋರಾಟ ಕುರಿತಂತೆ “ನಾನಿನ್ನೂ ಕತ್ತಲಿನಲ್ಲಿ ಇದ್ದೀನಿ. ಯಾವೊಂದು ಬೆಳಕಿನ ಹಾದಿ ತೋರುತ್ತಿಲ್ಲ” ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.. ಅದೇ ವರ್ಷ ಪೆಬ್ರವರಿ ತಿಂಗಳಿನಲ್ಲಿ ಬ್ರಿಟೀಷ್ ಸರ್ಕಾರ ಭಾರತೀಯರ ಮೇಲೆ ಉಪ್ಪಿನ ಮೇಲೆ ತೆರಿಗೆ ವಿಧಿಸುತ್ತದೆ. ನೈಸರ್ಗಿಕವಾಗಿ ಉಚಿತವಾಗಿ ದೊರೆಯುವ ಹಾಗೂ ಬಡವ, ಬಲ್ಲಿದ ಎಂಬ ಬೇಧ ಭಾವವಿಲ್ಲದೆ ಎಲ್ಲರೂ ಉಪಯೋಗಿಸುವ ಉಪ್ಪನ್ನು ಯಾರೂ ತಯಾರಿಸಬಾರದು ಎಂಬ ಸರ್ಕಾರದ ನಿಲುವು ಗಾಂಧೀಜಿಯವರ ಪಾಲಿಗೆ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಅಸ್ತ್ರ ಸಿಕ್ಕಂತಾಗುತ್ತದೆ. ಈ ವಿಷಯ ಇಡೀ ಬಹು ಸಂಸ್ಕೃತಿಯ ಭಾರತಕ್ಕೆ ಸಂಬಂಧಪಟ್ಟದ್ದು ಎಂದು ತೀರ್ಮಾನಿಸಿದ ಅವರು ಮಾರ್ಚ್ 12 ರಂದು ಸಬರಮತಿ ಆಶ್ರಮದಿಂದ ಸೂರತ್ ಬಳಿಯ ಕಡಲ ತೀರದ ದಂಡಿಗೆ ಕಾಲ್ನಡಿಗೆಯ ಜಾಥ ಹೊರಟು ಏಪ್ರಿಲ್ ಮೊದಲ ವಾರ ಒಂದು ಹಿಡಿ ಉಪ್ಪನ್ನು ಕೈ ಯಲ್ಲಿ ಎತ್ತಿ ಹಿಡಿಯುವುದರ ಮೂಲಕ ಬ್ರಿಟಿಷ್ ಸಾಮ್ರಾಜ್ಯಕ್ಕೆ ಮೊದಲ ಕೊಡಲಿ ಪೆಟ್ಟು ನೀಡುತ್ತಾರೆ.
241 ಮೈಲು ಉದ್ದದ ಕಾಲ್ನಡಿಗೆಯ ಜಾಥಕ್ಕೆ ತಮ್ಮೊಂದಿಗೆ ಕರೆದೊಯ್ದ 78 ಮಂದಿ ಅನುಯಾಯಿಗಳಿಗೆ ಪ್ರತಿಯೊಬ್ಬರು, ಪೆನ್ಸಿಲ್, ನೋಟ್ ಬುಕ್, ಚರಕ ಮತ್ತು ಹೊದಿಕೆಯನ್ನು ತರಬೇಕೆಂದು ಆದೇಶ ನೀಡುತ್ತಾರೆ.. ಪ್ರತಿ ದಿನ ತಾವು ಉಳಿದುಕೊಳ್ಳುತ್ತಿದ್ದ ಹಳ್ಳಿಗಳಲ್ಲಿ ಅನುಯಾಯಿಗಳನ್ನು ಪ್ರತಿ ಬೀದಿ, ಪ್ರತಿ ಮನೆಗೆ ಕಳುಹಿಸಿ, ಹಳ್ಳಿಯ ಮಾಹಿತಿ ಅಂದರೆ, ರೈತರು, ಕೃಷಿ ಕಾರ್ಮಿಕರು, ವ್ಯಾಪಾರಸ್ಥರು, ದಲಿತರು, ಅವರ  ದುಡಿಮೆ,ಆದಾಯ,ಇತ್ಯಾದಿಗಳ ಮಾಹಿತಿಗಳನ್ನು ಕಲೆ ಹಾಕುತ್ತಾರೆ. ಇದು ಅವರಿಗೆ ಒಂದು ನಾಡನ್ನು ಅರ್ಥಮಾಡಿಕೊಳ್ಳುವ ಕ್ರಿಯೆಯಾಗಿರುತ್ತದೆ. ಇಂತಹದ್ದೇ ಕಾರ್ಯಕ್ರಮವನ್ನು ಇದೀಗ ಸ್ವರಾಜ್ ಇಂಡಿಯಾದ ಕಾರ್ಯಕರ್ತರು ಹಮ್ಮಿಕೊಳ್ಳಬೇಕಿದೆ. ನಗರಗಳಲ್ಲಿ ಕುಳಿತು ಮಾತನಾಡುವ ಬದಲು, ಹಳ್ಳಿ-ಹಳ್ಳಿ ಗಳಿಗೆ ತೆರಳಿ, ಅಲ್ಲಿನ ಜಗುಲಿ, ಅರಳಿ ಕಟ್ಟೆಯ ಮೇಲೆ ಜನರೊಂದಿಗೆ ಕುಳಿತು ಸಾರ್ವತ್ರಿಕಗೊಂಡಿರುವ ಭ್ರಷ್ಟಾಚಾರದ ಬಗ್ಗೆ, ಜನಪ್ರತಿನಿಧಿಗಳ ನಿಷ್ಟ್ರಿಯತೆಯ ಬಗ್ಗೆ, ನಮ್ಮ ಕೇರಿ, ನಮ್ಮ ಊರು, ನಮ್ಮ ಕೆರೆ ನಮ್ಮ ಕಟ್ಟೆಗಳನ್ನು ಉದ್ಧಾರಮಾಡುವ ಕುರಿತು ಮಾತನಾಡಬೇಕಿದೆ. ಯಾವುದೇ ಚಳುವಳಿ ಜನಪರವಾಗಬೇಕಾದರೆ, ಅದು ಮೊದಲು ಜನತೆಯ ಮನಸ್ಸನ್ನು ಮತ್ತು ವಿಶ್ವಾಸವನ್ನು ಗೆಲ್ಲಬೇಕಿದೆ. ನಮ್ಮ ರಾಜಕೀಯ ಪಕ್ಷಗಳು ಚುನಾವಣೆಗಳ ಮುಖಾಂತರ ಹಲವಾರು ಆಮೀಷಗಳನ್ನು ಒಡ್ಡಿ ತಾವು ಭ್ರಷ್ಟವಾಗುದರ ಜೊತೆಗೆ ಜನರ ಮನಸ್ಸನ್ನು ಹೇಗೆ ಭ್ರಷ್ಟಗೊಳಿಸಿವೆ ಎಂಬುದನ್ನು ವಿವರಿಸಬೇಕಿದೆ. ಈ ಕ್ರಿಯೆ ನಿಜಕ್ಕೂ ಎಲ್ಲಾ ಜನಪರ ಸಂಘಟನೆಗಳಿಗೆ ಸವಾಲಿನ ಕೆಲಸವಾಗಿದೆ. ಆದರೆ ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಅನಿವಾರ್ಯವಾಗಿದೆ.

ಕಳೆದ ಮೂರು ದಶಕಗಳಿಂದ ಸಮುದಾಯದ ಏಳಿಗೆಗಿಂತ ತಮ್ಮ ಏಳಿಗೆಯನ್ನು ಕಾಯಕವನ್ನಾಗಿ ಮಾಡಿಕೊಂಡ ಜನನಾಯಕರ ಸ್ವಾರ್ಥದಿಂದಾಗಿ ಜನಪರ ಚಳುವಳಿಗಳು ವಿಪಲಗೊಂಡಿವೆ ಜೊತೆಗೆ ವಿಶ್ವಾಸವನ್ನು ಕಳೆದುಕೊಂಡಿವೆ. ಇವು ಈ ನಾಡಿನ ಎಲ್ಲಾ ಪ್ರಜ್ಞಾವಂತರ ಆತಂಕಕ್ಕೆ ಕಾರಣವಾಗಿದ್ದು. ದೇವನೂರು ಮಹಾದೇವ ಕನಸಿರುವ ಸ್ವರಾಜ್ ಇಂಡಿಯಾ ಅಭಿಯಾನವನ್ನು ಒಂದಿಷ್ಟು ಆಸೆಗಣ್ಣಿನಿಂದ ಮತ್ತು ಆತಂಕದಿಂದ ನೋಡುವಂತಾಗಿದೆ. ಗಾಂಧೀಜಿಯವರು ಬಿಹಾರದ ಚಂಪಾರಣ್ಯದ ಸತ್ಯಾಗ್ರಹದಲ್ಲಿ ಪಾಲ್ಗೊಂಡ ನಂತರವಷ್ಟೇ ಅವರಿಗೆ ಗ್ರಾಮ ಭಾರತದ ಬಡತನ, ಬೌದ್ಧಿಕ ದಾರಿದ್ರ್ಯ, ಅಸ್ಪೃಶ್ಯತೆ, ಅನಾರೋಗ್ಯ ಮತ್ತು ಕೊಳೆತನ ಇವುಗಳ ಪರಿಚಯವಾಯಿತು. ಈ ಹಿನ್ನಲೆಯಲ್ಲಿ ಈಗಿನ ಎಲ್ಲಾ ಬಗೆಯ ಹೋರಾಟಗಳು ಗ್ರಾಮಗಳಿಂದ  ಆರಂಭವಾಗುವುದು ಅನಿವಾರ್ಯವಾಗಿದೆ.
( ಕರಾವಳಿ ಮುಂಜಾವು ಪತ್ರಿಕೆಯ "ಜಗದಗಲ" ಅಂಕಣಕ್ಕೆ ಬರೆದ ಲೇಖನ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ