Friday, 7 April 2017

ಕಾಶ್ಮೀರವೆಂಬ ನೆಲದ ಮೇಲಿನ ನರಕ
ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನಾನು ಕವಿತೆಗಳನ್ನು ಬರೆಯುತ್ತಿದ್ದ ಕಾಲದಲ್ಲಿ “ ಕಾಶ್ಮೀರದ ಹಾಡು” ಎಂಬ ನನ್ನ ಪ್ರಸಿದ್ಧ ಕವಿತೆಯೊಂದರಲ್ಲಿ  ಬರೆದಿದ್ದ ಸಾಲುಗಳಿವು.
ರೆಕ್ಕೆ ಮರೆತ ಹಕ್ಕಿಯ ಹಾಗೆ/ಚಲಿಸದೆ ನಿಂತ ನಾವೆಯ ಹಾಗೆ /ಬದುಕು ಸ್ತಬ್ಧವಾದ ಇಲ್ಲಿ/ನಿತ್ಯ ಸಾವಿನ ಮೆರವಣಿಗೆ./ಬಂದೂಕು ನಳಿಕೆಯ /ಕೆಳಗೆ ನರಳಿ ಹೊರಳಿದ/ಇವರ ಬದುಕ ಬಾಂದಳದಲ್ಲಿ/ಬಾನು ಬೆಳದಿಂಗಳಿಲ್ಲ/ಚೆಂದ್ರ ತಾರೆಯರಂತೂ ಮೊದಲೇ ಇಲ್ಲ/ಗೆಳತೀ/ಕಾಶ್ಮೀರದಲ್ಲೀಗ ಕನಸುಗಳಿಲ್ಲ/ನಮ್ಮ ಕನಸುಗಳಲ್ಲೂ ಕಾಶ್ಮೀರವಿಲ್ಲ.
ಎರಡು ದಶಕಗಳ ನಂತರ ಕಾಶ್ಮೀರ ಕುರಿತು ಅವಲೋಕಿಸಿದಾಗ ಅಲ್ಲಿನ ಸಾಮಾಜಿಕ ಮತ್ತು ರಾಜಕೀಯ ಹಾಗೂ ಧಾರ್ಮಿಕ ಬದುಕಿನಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಪ್ರತಿ ನಿತ್ಯ ಸಾವು, ನೋವು, ಬಂದೂಕಿನ ಗುಂಡಿನ ಮೊರೆತ, ಭಯೋತ್ಪಾದಕರ ದಾಳಿ, ಮುಷ್ಕರ, ಪ್ರತಿಭಟನೆ ಮತ್ತು ಪ್ರಕ್ಷುಬ್ಧತೆ ಇವುಗಳು ಒಂದು ಕಾಲದಲ್ಲಿ ನೆಲದ ಮೇಲಿನ ಸ್ವರ್ಗ ಎನಿಸಿದ್ದ ಕಾಶ್ಮೀರದ ಅವಿಭಾಜ್ಯ ಅಂಗಗಳಾಗಿವೆ. ಹಾಗಾಗಿ ಭಾರತದ ಸರ್ಕಾರ ಮತ್ತು ಇಲ್ಲಿನ ಜನತೆಯ ಜನತೆಯ ಪಾಲಿಗೆ ಕಾಶ್ಮೀರವೆಂಬುದು  ಈಗ ನೆಲದ ಮೇಲಿನ ನರಕವೆಂಬಂತೆ ಕಾಣುತ್ತಿದೆ. 1947 ರ ಸ್ವಾತಂತ್ರ್ಯಾ.ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಈ ಪ್ರದೇಶ ಯಾರಿಗೆ ಸೇರಬೇಕು ಎಂಬುದರ ಕುರಿತಾಗಿ ಉಂಟಾದ ಪ್ರಕ್ಷುಬ್ದ ಪರಿಸ್ಥಿತಿ ಇಂದಿಗೂ ತಣ್ಣಗಾಗಿಲ್ಲ. ಕಾಶ್ಮೀರ ಕಣಿವೆಯಲ್ಲಿರುವ ಬಹು ಸಂಖ್ಯಾತ ಸುನ್ನಿ ಮುಸ್ಲಿಂ ಸಮುದಾಯದಲ್ಲಿ ಈ ಕುರಿತು ಯಾವುದೇ ನಿರ್ಧಾರವಿಲ್ಲದೆ, ಪ್ರತ್ಯೇಕ ಕಾಶ್ಮೀರಿವಾದಿಗಳು ಮತ್ತು ಭಾರತ ಸರ್ಕಾರದ ನಡುವೆ ರಾಜಕೀಯ ದಾಳವಾಗಿದ್ದಾರೆ. ಇನ್ನು ಜಮ್ಮು ಪ್ರದೇಶ ಸೇರಿದಂತೆ ಇತರೆ ಪ್ರದೇಶಗಳಲ್ಲಿ ಶತ ಶತಮಾನ ಕಾಲ ಬದುಕಿದ್ದ ಕಾಶ್ಮೀರಿ ಪಂಡಿತರು ನೆಲೆ ಕಳೆದುಕೊಂಡು ದೆಹಲಿಯ ಬೀದಿಯಲ್ಲಿ ಅನಾಥರಂತೆ ಬದುಕುತ್ತಿದ್ದಾರೆ. ಜಮ್ಮು ಕಾಶ್ಮೀರ ಸೇರಿದಂತೆ ಕೇಂದ್ರ ಸರ್ಕಾರ ಕಾಶ್ಮೀರಿ ಪಂಡಿತರಿಗೆ ಅನೇಕ ಸವಲತ್ತುಗಳನ್ನು ಒದಗಿಸಿ ಕೊಡಲು ಸಿದ್ಧರಿದ್ದರೂ ಸಹ, ಪಾಕ್ ಪ್ರೇರಿತ ಭಯೋತ್ಪಾದಕರ ಭಯದಿಂದಾಗಿ ತಮ್ಮ ತವರು ನೆಲಕ್ಕೆ ಹಿಂತಿರುಗಿ ಬದುಕು ಕಟ್ಟಿಕೊಟ್ಟಲು ಹಿಂಜರಿಯುತ್ತಿದ್ದಾರೆ.
ಈ ದೇಶದ ಸಂವಿಧಾನ ಮತ್ತು ಭಾರತೀಯ ಅಪರಾಧ ಸಂಹಿತೆ ಪುಸ್ತಕಗಳಲ್ಲಿನ  ಯಾವುದೇ ಕಾನೂನು ಅಥವಾ ನಿಯಾಮಾವಳಿಗಳು ಕಾಶ್ಮೀರಿ ಜನತೆಗೆ ಅನ್ವಯವಾಗುವುದಿಲ್ಲ. ಪ್ರತಿಯೊಂದು ಸಂಹಿತೆ “ ಜಮ್ಮು ಕಾಶ್ಮೀರವನ್ನು ಹೊರತು ಪಡಿಸಿ ಬಾರತದ ನಾಗರೀಕರಿಗೆ ಇದು ಅನ್ವಯವಾಗುತ್ತದೆ” ಎಂಬ ವಾಕ್ಯದಿಂದ ಕೊನೆಗೊಳ್ಳುತ್ತದೆ.  ಭಾರತದ ಒಟ್ಟು ಜನ ಸಂಖ್ಯೆಯ ಕೇವಲ ಒಂದು ಭಾಗದಷ್ಟಿರುವ ಕಾಶ್ಮೀರಿ ಜನತೆಗೆ ಕೇಂದ್ರ ಸರ್ಕಾರ ನೀಡುತ್ತಿರುವ ವಿಶೇಷ ಪರಿಹಾರದ ಹೆಸರಿನಲ್ಲಿ ನೀಡುತ್ತಿರುವ  ಆರ್ಥಿಕ ಸವಲತ್ತುಗಳನ್ನು ಗಮನಿಸಿದರೆ, ಈ ಪುಟ್ಟ ರಾಜ್ಯವನ್ನು ನೆರೆಯ ಪಾಕಿಸ್ತಾನಕ್ಕೆ  ಕೊಡುಗೆಯಾಗಿ ನೀಡುವುದು ಒಳಿತು ಎನಿಸುತ್ತದೆ. ಕೇವಲ ಹದಿನಾರು ವರ್ಷಗಳ ಅವಧಿಯಲ್ಲಿ ( 2000 ರಿಂದ 2016 ರವರೆಗೆ) ಜಮ್ಮ ಕಾಶ್ಮೀರದ ಜನತೆಗೆ  ಒಂದು ಲಕ್ಷದ ಹದಿನಾಲಕ್ಷ ಕೋಟಿ ರೂಪಾಯಿಗಳ ವಿಶೇಷ ಅನುದಾನವನ್ನು ಘೊಷಿಸಲಾಗಿದೆ. ಇದರಲ್ಲಿ ಮಿಲಿಟರಿ ಸೇನೆಯ ವೆಚ್ಚವನ್ನು ಸೇರಿಸಲಾಗಿಲ್ಲ. ಅಲ್ಲಿನ ಈಗಿನ ಜನಸಂಖ್ಯೆಗೆ ಈ ಹಣವನ್ನು ಹಂಚಿದರೆ, ಪ್ರತಿ ವ್ಯಕ್ತಿಗೆ ತಲಾ 91 ಸಾವಿರದ 300 ರೂಪಾಯಿ ಸಂದಾಯವಾಗಿದೆ. ( ಜಮ್ಮು ಕಾಶ್ಮೀರದ ಜನಸಂಖ್ಯೆ ಒಂದು ಕೋಟಿ ಇಪ್ಪತ್ತೈದು ಲಕ್ಷ)  ಅಂದರೆ ಭಾರತದ ಜನಸಂಖ್ಯೆಯಲ್ಲಿ ಶೇಕಡ ಒಂದರಷ್ಟು ಭಾಗವಿರುವ ಜನತೆ ಶೇಕಡ ಹತ್ತರಷ್ಟು ಅನುದಾನ ಪಡೆಯುತ್ತಿದ್ದರೆ, ಭಾರತದ ಜನಸಂಖ್ಯೆಯ ಶೇಕಡ ಹದಿಮೂರರಷ್ಟು ಇರುವ ಉತ್ತರ ಪ್ರದೇಶದ ಜನತೆ ಶೇಕಡ 8.2 ರಷ್ಟನ್ನು ಪಡೆಯುತ್ತಿದ್ದಾರೆ.
ಜಮ್ಮು ಕಾಶ್ಮೀರದ ಜನತೆಯ ಬಡತನ ಕುರಿತಂತೆ ಆಶ್ಚರ್ಯಕರ ಅಂಕಿ ಅಂಶಗಳು ಸಮೀಕ್ಷೆಯಿಂದ ಹೊರಬೀಳುತ್ತಿವೆ. 1980 ರಲ್ಲಿ  ಬಡತನದ ರೇಖೆಯ ಕೆಳಗೆ ವಾಸಿಸುತ್ತಿದ್ದವರ ಸಂಖ್ಯೆ ಶೇಕಡ 24.34 ರಷ್ಟು ಇದ್ದದ್ದು, 2000 ದ ಇಸವಿಯ ವೇಳೆಗೆ ಶೇಕಡ 3.48 ಕ್ಕೆ ಇಳಿದಿತ್ತು.  ಕಳೆದೊಂದು ದಶಕದಿಂದ ನಿರಂತರವಾಗಿ ನಡೆಯುತ್ತಿರುವ ಹಿಂಸಾಚಾರದ ಫಲವಾಗಿ ಈಗ ಪುನಃ  ಶೇಕಡ 21.3 ಕ್ಕೆ ಏರಿಕೆಯಾಗಿದೆ..

ಜಮ್ಮು ಕಾಶ್ಮೀರದ ಒಟ್ಟು ವಿಸ್ತೀರ್ಣ 2 ಲಕ್ಷದ 22 ಸಾವಿರದ 236 ಚದುರ ಕಿಲೊಮೀಟರ್. ಇದರಲ್ಲಿ ಭಾರತದ ಹಿಡಿತದಲ್ಲಿ  ಕೇವಲ 1 ಲಕ್ಷದ 1 ಸಾವಿರ 387 ಕಿಲೊಮೀಟರ್ ವ್ಯಾಪ್ತಿ ಪ್ರದೇಶ ಮಾತ್ರ ಉಳಿದಿದೆ. ಇನ್ನುಳಿದ ಪ್ರದೇಶದಲ್ಲಿ ಮುಕ್ಕಾಲು ಪಾಲು ಪಾಕ್ ಆಕ್ರಮಿತ ಕಾಶ್ಮೀರವೆಂದು ಹಾಗೂ ಉಳಿದ ಭಾಗ ಚೀನಾ ಆಕ್ರಮಿತ ಪ್ರದೇಶವೆಂದು ಗುರುತಿಸಲ್ಪಟ್ಟಿದೆ. ಈ ಪ್ರದೇಶಗಳಿಂದ ಚೀನಾ ಮತ್ತು ಪಾಕ್ ಸರ್ಕಾರಗಳು ಭಯೋತ್ಪಾದಕರಿಗೆ ನಿರಂತರವಾಗಿ ನೆರವು ನೀಡುತ್ತಾ ಜಮ್ಮು ಕಾಶ್ಮೀರದಲ್ಲಿ ಹಿಂಸೆ ಮತ್ತು ಭಯೋತ್ಪಾದನೆಯನ್ನು ಹುಟ್ಟು ಹಾಕುತ್ತಿವೆ. ಭಾರತೀಯ ಸೇನಾ ಪಡೆಗೆ ಗಡಿ ಪ್ರದೇಶದಲ್ಲಿ ಪ್ರತಿ ದಿನ ನುಸುಳುವ ಭಯೋತ್ಪಾದಕರನ್ನು ಗುರುತಿಸಿ ಹೊಡೆದು ಉರುಳಿಸುವುದು ನಿತ್ಯ ಕಾಯಕವೆಂಬಂತಾಗಿದೆ. ಇಂತಹ ಹಿಂಸಾ ಚಾರಕ್ಕೆ ಸ್ಥಳೀಯರು ಪ್ರೋತ್ಸಾಹ ನೀಡುತ್ತಿರುವುದನ್ನು ತಳ್ಳಿ ಹಾಕುವಂತಿಲ್ಲ. ಎರಡು ತಿಂಗಳ ಹಿಂದೆ ಶ್ರೀನಗರದಲ್ಲಿ ಹಿಜ್ ಬುಲ್ ಮುಜಾಹಿದ್ದಿನ್ ಸಂಘಟನೆ ಜೊತೆ ಗುರುತಿಸಿಕೊಂಡಿದ್ದ  ಬುರಾನ್ ಮುಜಾಫರ್ ವಾನಿ ಎಂಬ ಇಪ್ಪತ್ತೊಂದು ವಯಸ್ಸಿನ ಯುವಕ ಭದ್ರತಾ ಪಡೆಯ ಗುಂಡಿಗೆ ಬಲಿಯಾದ ನಂತರ ಶ್ರೀನಗರದಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲ ನಡೆದ ಹಿಂಸಾಚಾರದಲ್ಲಿ 43 ಮಂದಿ ಗುಂಡಿಗೆ ಬಲಿಯಾದರು. ನೂರಾರು ಮಂದಿ ಸೇನಾ ಸಿಬ್ಬಂದಿ ಸಿಡಿಸಿದ ರಬ್ಬರ್ ಗುಂಡುಗಳಿಂದ ಗಾಯಗೊಂಡರು. ಭಯೋತ್ಪಾದಕನನ್ನು ಹುತಾತ್ಮನೆಂದು ಸ್ಥಳೀಯರು ಪ್ರತಿಬಿಂಬಿಸಿದರ ಪರಿಣಾಮವಾಗಿ ಯುವಕನ ಕುಟುಂಬಕ್ಕೆ ಕೇಂದ್ರ ಸರ್ಕಾರವು  ಹತ್ತು ಲಕ್ಷ ರೂಪಾಯಿ ಘೋಷಿಸಿ ಹಿಂಸೆಯನ್ನು ತಣ್ಣಾಗಿಸಿತು.
ಕಾಶ್ಮೀರದಲ್ಲಿ ಮುಸ್ಲಿಂ ನಿರುದ್ಯೋಗಿ ಯುವಕರನ್ನು ಸೆಳೆಯುತ್ತಿರುವ ಭಯೋತ್ಪಾನೆಯ ಸಂಘಟನೆಗಳು ಅಲ್ಲಿನ ಯುವಕರ ಕುಟುಂಬಗಳಿಗೆ  ಸುಮಾರು ಐದರಿಂದ  ಹಿಡಿದು ಹತ್ತು ಲಕ್ಷ ರೂಪಾಯಿ ಹಣವನ್ನು ನೀಡಿ ಅವರನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಕರೆದೊಯ್ದು ತರಬೇತಿ ನೀಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಮನೆಯಲ್ಲಿ ಬೆಳೆದು ನಿಂತ ತಂಗಿಯರ ವಿವಾಹದ ಖರ್ಚಿಗಾಗಿ, ಮತ್ತು ಬಡತನದ ಕುಟುಂಬದ ನಿರ್ವಹಣೆಗಾಗಿ ಹಣದ ಆಮೀಷಕ್ಕೆ ಬಲಿಯಾಗುತ್ತಿರುವ  ಮುಗ್ದ ಯುವಕರು ಇಂದು ಭಯೋತ್ಪಾದಕರಾಗಿ ಪರಿವರ್ತನೆ ಹೊಂದಿ ಹುಟ್ಟಿ ಬೆಳದ ತಾಯ್ನಾಡಿನ ವಿರುದ್ಧ ಜೆಹಾದ್ ಹೆಸರಿನಲ್ಲಿ ( ಧರ್ಮ ಯುದ್ಧ) ಬಂದೂಕು ಹಿಡಿದಿರುವುದು ವರ್ತಮಾನ ಭಾರತದ ದುರಂತಗಳಲ್ಲಿ ಒಂದಾಗಿದೆ.
ಇತ್ತೀಚೆಗೆ ಜಮ್ಮು ಕಾಶ್ಮೀರದ ಜ್ವಲಂತ ಸಮಸ್ಯೆಗಳನ್ನು ವಿಷಯವನ್ನಾಗಿ ಇಟ್ಟುಕೊಂಡು ಕಾಶ್ಮೀರಿ ಪಂಡಿತ ಸಮುದಾಯಕ್ಕೆ ಸೇರಿದ ರಾಹುಲ ಪಂಡಿತ ಎಂಬ ಯುವ ಪತ್ರಕರ್ತ ಬರೆದ “ our Moon has Blood Clots” ಎಂಬ  ಆತ್ಮಕಥಾನಕದ  ಕೃತಿ ಹಾಗೂ ಶ್ರೀನಗರದ ಕೇಂದ್ರೀಯ ವಿಶ್ವ ವಿದ್ಯಾನಿಲಯದಲ್ಲಿ ಪತ್ರಿಕೋದ್ಯಮವನ್ನು ಬೋಧಿಸುತ್ತಿರುವ ಯುವ ಉಪನ್ಯಾಸಕ  ಶಹನಾಜ್ ಬಷೀರ್ ಎಂಬಾತ ಬರೆದ “ Scattered Soulsಎಂಬ ಕಥಾ ಸಂಕಲನ ಈ ಎರಡೂ ಕೃತಿಗಳೂ ಕಾಶ್ಮೀರದ ಹಿಂದೂ-ಮುಸ್ಲಿಂ ಸಮುದಾಯದ ನೋವು ಮತ್ತು ಬವಣೆಗಳನ್ನು ನಮ್ಮ ಮುಂದೆ ತೆರದಿಡುತ್ತವೆ.
ಸುಮಾರು  ಮೂರು ವರ್ಷಗಳ ಹಿಂದೆ ಪ್ರಕಟವಾದ  ಹಾಗೂ ದೆಹಲಿಯಲ್ಲಿ ಪತ್ರಕರ್ತನಾಗಿರುವ ರಾಹುಲ ಪಂಡಿತನ ಆತ್ಮಕಥೆಯಲ್ಲಿ ಲೇಖಕನು ಕಾಶ್ಮೀರದ ತನ್ನ ಬಾಲ್ಯದ ದಿನಗಳನ್ನು ಮತ್ತು ಅಲ್ಲಿದ್ದ ಹಿಂದು-ಮುಸ್ಲಿಂ ಸಮುದಾಯದ ಸಹಬಾಳ್ವೆಯನ್ನು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾನೆ.. ಅದೇ ರೀತಿ ಹಂತ ಹಂತ ಮುಸ್ಲಿಂ ಮೂಲಭೂತವಾದಿಗಳ ಕೈಗೆ ಸಿಲುಕಿ ನಲುಗಿ ಹೋದ ಕಾಶ್ಮೀರಿ ಪಂಡಿತ ಕುಟುಂಬಗಳ ಗೋಳಿನ ಕಥೆಯನ್ನು ,ಹಾಗೂ  ಅವರ ವಲಸೆಯ ಅತಂತ್ರ ಬದುಕನ್ನು ಮನ ಮಿಡಿಯುವಂತೆ ದಾಖಲಿಸಿದ್ದಾನೆ. ಈ ಕೃತಿಯ  ಪಸ್ತಾವನೆಯಲ್ಲಿ ರಾಹುಲ ಪಂಡಿತ ದಾಖಲಿಸಿರುವ ಕಾಶ್ಮೀರಿ ಪಂಡಿತರ ಇತಿಹಾಸ ನಿಜಕ್ಕೂ ಅಮೂಲ್ಯವಾದುದು. ಶೈವ ಮತ್ತು ಬೌದ್ಧ ದರ್ಮಕ್ಕೆ ಹಾಗೂ ಹಿಂದೂ ಧರ್ಮದ ಸಂಸ್ಕೃತಿಗೆ ಕಾಶ್ಮೀರಿ ಪಂಡಿತರು ಅಥವಾ ಬ್ರಾಹ್ಮಣರೆಂದು ಗುರುತಿಸಿಕೊಂಡಿರುವ ವಿದ್ವಾಂಸರು ನೀಡಿರುವ ಕೊಡುಗೆಗಳ ವಿವರಗಳನ್ನು ದಾಖಲಿಸಿದ್ದಾನೆ. ಹನ್ನೆರೆಡನೆಯ ಶತಮಾನದಲ್ಲಿ “ರಾಜತರಂಗಿಣಿ” ಎಂಬ ಅಮೂಲ್ಯವಾದ ಹಾಗೂ ಕಾಶ್ಮೀರದ ರಾಜರ ಇತಿಹಾಸವನ್ನು ಹೇಳುವ ಕೃತಿಯನ್ನು ಬರೆದ ಕಲಃಣ, ಹತ್ತನೇ ಶತಮಾನದಲ್ಲಿ ಬದುಕಿದ್ದ ಹಾಗೂ ತಂತ್ರಾಲೋಕ ಮತ್ತು ಅಭಿನವಭಾರತಿ ಎಂಬ  ಭರತನ ನಾಟ್ಯಶಾಸ್ತ್ರದ ಮೇಲೆ ಟಿಪ್ಪಣಿ ಬರೆದ ಅಭಿನವಗುಪ್ತ, ಹನ್ನೊಂದನೆಯ ಶತಮಾನದ ಕವಿ ಹಾಗೂ ಬೃಹತ್ ಕಥಾ ಮಂಜರಿ ಬರೆದ ಕ್ಷೇಮೆಂದ್ರ, “ಕಥಾ ಸರಿತ್ಸಾಗರ” ಬರೆದ ಸೋಮೇಂದ್ರ, ಹೀಗೆ ಪುರಾತನ ವಿದ್ವಾಸರಿಂದ ಹಿಡಿದು, ಕ್ರಿಸ್ತಪೂರ್ವದಲ್ಲಿ ಬೌದ್ಧ ಧರ್ಮದ ವಿಸ್ತರಣೆಗೆ ಶ್ರಮಿಸಿದ ಗುಣವರ್ಮನ್, ಕುಮಾರಜೀವ, ಗುರು ಪದ್ಮಸಂಬ ಹೀಗೆ ಅನೇಕರನ್ನು ಹೆಸರಿಸಿ, ಕಾಶ್ಮೀರದ ಭವ್ಯವಾದ ಗತಕಾಲದ ಇತಿಹಾಸವನ್ನು ನಮ್ಮ ಮುಂದೆ ಇರಿಸಿದ್ದಾನೆ.

ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆಯಾದ ಶಹನಾಜ್ ಬಷೀರ್ ನ  ಕಥಾ ಸಂಕಲನದಲ್ಲಿ ಲೇಖಕ ಯಾವುದೇ ಭಾವೋದ್ವೇಗಕ್ಕೆ ಒಳಗಾಗದೆ, ತಾನು ಕಂಡ ದುರಂತ ಘಟನೆಗಳನ್ನು ಕಥೆಯಾಗಿಸಿದ್ದಾನೆ.. ಕಾಶ್ಮೀರದ ಹಿಂಸಾಚಾರದಲ್ಲಿ ಪರಿಸ್ಥಿತಿಯ ಕೂಸುಗಳಾಗಿ ಛಿದ್ರಗೊಂಡಿರುವ ಮುಸ್ಲಿಂ ಕುಟುಂಬಗಳ ಕಥೆಗಳು ಓದುಗರ ಮನಸ್ಸನ್ನು ಕಲಕುವಂತಿವೆ. ಕಥೆಗಳಷ್ಟೇ ಆಕರ್ಷಕವಾಗಿ ಅವುಗಳಿಗೆ  ನೀಡಿರುವ ಶೀರ್ಷಿಕೆ  ಈ ಕೃತಿಯ ವಿಶೇಷವಾಗಿದೆ.

ಈ ಎರಡೂ ಕೃತಿಗಳು ನಮ್ಮ ಪಾಲಿಗೆ ಕೇವಲ ಸಾಹಿತ್ಯ ಕೃತಿಗಳಾಗಿರದೆ, ಕಾಶ್ಮೀರದ ವಾಸ್ತವ ಸ್ಥಿತಿ ಗತಿಗಳನ್ನು ತರದಿಡುವ ಮಹತ್ವದ ದಾಖಲೆಗಳಂತೆ ತೋರುತ್ತವೆ.. ಇವುಗಳನ್ನು ಆಧಾರವಾಗಿಟ್ಟು ಕಾಶ್ಮಿರದ ಸಮಸ್ಯೆಗೆ ಈ ದೇಶದ ಚಿಂತಕರು, ಮತ್ತು ರಾಜಕೀಯ ಧುರೀಣರು ಪರಿಹಾರ ಹುಡುಕಲು ಈ ಕೃತಿಗಳು ಸಹಾಯಕವಾಗಬಲ್ಲವು.. 
(ಕರಾವಳಿ ಮುಂಜಾವು ದಿನಪತ್ರಿಕೆಯ "ಜಗದಗಲ" ಅಂಕಣಕ್ಕೆ ಬರೆದ ಲೇಖನ)

No comments:

Post a Comment