Friday, 21 April 2017

ಸ್ವಯಂ ಸೇವಾ ಸಂಘಟನೆಗಳ ಮೇಲೆ ಕೇಂದ್ರ ಸರ್ಕಾರದ ಗಧಾ ಪ್ರಹಾರಇದೇ ಏಪ್ರಿಲ್ 16 ರ ಭಾನುವಾರ ದ ಹಿಂದು ಇಂಗ್ಲೀಷ್ ದಿನಪತ್ರಿಕೆಯಲ್ಲಿ ಒರಿಸ್ಸಾ ಮತ್ತು ಜಾರ್ಖಾಂಡ್ ರಾಜ್ಯಗಳ ಅರಣ್ಯಗಳಲ್ಲಿ ಬದುಕುತ್ತಿರುವ ಆದಿವಾಸಿಗಳ ಹಕ್ಕುಗಳ ಪರವಾಗಿ ಕಳೆದ ಒಂದು ದಶಕದಿಂದ ಹೋರಾಡುತ್ತಿರುವ ಎರಡು ಸ್ವಯಂ ಸೇವಾ ಸಂಘಟನೆಗಳು ನಕ್ಸಲ್ ಚಟುವಟಿಕೆಯಲ್ಲಿ ತೊಡಗಿವೆ ಎಂದು ಕೇಂದ್ರ ಗೃಹ ಸಚಿವಾಲಯ ಮಾಡಿರುವ ಗಂಭೀರ ಆರೋಪದ ವರದಿಯೊಂದು ಪ್ರಕಟವಾಯಿತು.  ಒರಿಸ್ಸಾ ಅಥವಾ ಒಡಿಸ್ಸಾ ಎಂದು ಕರೆಸಿಕೊಳ್ಳುವ  ಹಾಗೂ ಬಹುತೇಕ ಹೆಚ್ಚಿನ ಆದಿವಾಸಿಗಳ ಸಮುದಾಯಗಳು ವಾಸಿಸುತ್ತಿರುವ ಈ ರಾಜ್ಯದ ಕಾಳಹಂದಿ ಮತ್ತು ರಾಯಗಡ ಜಿಲ್ಲೆಗಳ ಸರಹದ್ದಿನಲ್ಲಿ ನಿಯಮಗಿರಿ ಎಂಬ ಪರ್ವತ ಶ್ರೇಣಿಯಿದೆ. ಅತ್ಯಧಿಕ ಬಾಕ್ಷೈಟ್ ಅದಿರು ( ಅಲ್ಯೂಮಿನಿಯಂ ತಯಾರಿಕೆಗೆ ಬಳಸುವ ಖನಿಜ ಸಂಪತ್ತು) ಇರುವ ಈ ಪ್ರದೇಶದಲ್ಲಿ  “ದೇವರ ಡೋಂಗ್ರಿಕೊಂಡ” ಎಂಬ ವಿಶಿಷ್ಟ ಆದಿವಾಸಿ ಸಮುದಾಯ ಶತ ಶತಮಾನಗಳಿಂದ ವಾಸಿಸುತ್ತಿದೆ. ಈ ಆದಿವಾಸಿಗಳ  ಹಕ್ಕುಗಳನ್ನು ಸಂರಕ್ಷಿಸುವ ಉದ್ದೇಶದಿಂದ 2005 ರಿಂದ   “ನಿಯಮಗಿರಿ ಸುರಕ್ಷಾ ಸಮಿತಿ”  ಎಂಬ ಸಂಘಟನೆಯೊಂದು ಹೋರಾಟ ಮಾಡುತ್ತಿದೆ.  ಅದೇ ರೀತಿ ಜಾರ್ಖಾಂಡ್ ರಾಜ್ಯದಲ್ಲಿ ಗಣಿಗಾರಿಕೆಯ  ನೆಪದಲ್ಲಿ ಅರಣ್ಯದಲ್ಲಿರುವ ಬುಡಕಟ್ಟು ಜನಾಂಗಗಳ ಒಕ್ಕಲೆಬ್ಬಿಸುವುದರ ವಿರುದ್ಧ ಹೋರಾಡುತ್ತಿರುವ “ವಿಸ್ತಾಪನ್ ವಿರೋಧಿ ಆಂಧೋಲನ್” ಎಂಬ ಸಂಘಟನೆಯು ಸಹ ಕ್ರಿಯಾಶೀಲವಾಗಿದೆ. ಆದಿವಾಸಿಗಳ ಕೃಷಿ ಭೂಮಿಯನ್ನು ಇತರರು ಕೊಳ್ಳುವಂತಿಲ್ಲ ಮತ್ತು ಬೇರೆ ಯಾವುದೇ ಚಟುವಟಿಕೆಗೆ ಉಪಯೋಗಿಸುವಂತಿಲ್ಲ ಎಂದು 1908 ರಲ್ಲಿ ಜಾರಿಗೆ ಬಂದಿದ್ದ ಕಾನೂನನ್ನು ಜಾರ್ಖಾಂಡ್ ಸರ್ಕಾರ ಇದೀಗ ತಿದ್ದುಪಡಿ ಮಾಡಲು ಹೊರಟಿದೆ. ಇಂತಹ ಸರ್ಕಾರದ  ಕೃತ್ಯಗಳನ್ನು  ವಿರೋಧಿಸಿದ ಏಕೈಕ ಕಾರಣಕ್ಕಾಗಿ  ಕೇಂದ್ರ ಸರ್ಕಾರ ಮತ್ತು ಒಡಿಸ್ಸಾ ಹಾಗೂ ಜಾರ್ಖಾಂಡ್ ರಾಜ್ಯ ಸರ್ಕಾರಗಳು “ಈ ಸಂಘಟನೆಗಳು  ಮಾನವ ಹಕ್ಕುಗಳ ರಕ್ಷಣೆಯ ಹೆಸರಿನಲ್ಲಿ ಮಾವೋವಾದಿ ನಕ್ಷಲರ ಹೋರಾಟವನ್ನು ಹುಟ್ಟು ಹಾಕುತ್ತಿವೆ : ಎಂದು ಗಂಭೀರ ಆರೋಪ ಮಾಡುತ್ತಿವೆ.
 ಭಾರತದ ನಕ್ಸಲ್ ಇತಿಹಾಸ ಕುರಿತ “ ಎಂದೂ ಮುಗಿಯದ ಯುದ್ಧ” ಎಂಬ ಕೃತಿ ರಚನೆಯ ಸಂದರ್ಭದಲ್ಲಿ  ಈ ಪ್ರದೇಶಗಳಲ್ಲಿ ಪ್ರವಾಸ ಮಾಡಿದ್ದ ಈ ಲೇಖಕನೂ ಒಳಗೊಂಡಂತೆ ದೇಶದ ಅನೇಕ ಪತ್ರಕರ್ತರು, ಬರಹಗಾರರು ಮತ್ತು ಮಾನವ ಹಕ್ಕು ಹೋರಾಟಗಾರರು ಶಾಂತಿಯುತವಾಗಿ ಅಕ್ರಮ ಗಣಿಗಾರಿಕೆ ವಿರುದ್ಧ ನಡೆಸುತ್ತಿರುವ  ಆದಿವಾಸಿಗಳ ಅನೇಕ ಪ್ರತಿಭಟನಾ ಪ್ರದರ್ಶನಗಳಿಗೆ ಸಾಕ್ಷಿಯಾಗಿದ್ದಾರೆ.  ಶಾಂತಿಯುತವಾಗಿ ಗಾಂಧೀಜಿಯವರ ಅಹಿಂಸಾ ಮಾರ್ಗದಲ್ಲಿ ಹೋರಾಟ ಮಾಡುತ್ತಿರುವ ಇಲ್ಲಿನ ಕಾರ್ಯಕರ್ತರಿಗೆ   ಅಭಿವೃದ್ದಿಯ ವಿರೋಧಿಗಳೆಂದು  ಹಾಗೂ ನಕ್ಸಲ್ ಹೋರಾಟಗಾರರ ಬೆಂಬಲಿಗರೆಂದು ಹಣೆ ಪಟ್ಟಿ ಕಟ್ಟಿರುವ ಕೇಂದ್ರ ಸರ್ಕಾರವು  ಬಂಡವಾಳಶಾಹಿ ಜಗತ್ತಿಗೆ ಕೆಂಪುಗಂಬಳಿಯನ್ನು ಹಾಸುವ ಉದ್ದೇಶದಿಂದ ಇಂತಹ ಸಂಘಟನೆಗಳ ಮೇಲೆ ನಿಷೇಧ ಹೇರಲು  ಹೊರಟಿದೆ. ಇದು ಹುನ್ನಾರವೆಂದು ಘಂಟಾಘೋಷವಾಗಿ ಹೇಳಬಹುದು.
ಒಡಿಸ್ಸಾದ ನಿಯಮಗಿರಿ ಪರ್ವತದ ಡೋಂಗ್ರಿಕೊಂಡ ಆದಿವಾಸಿಗಳ ಹೊರಾಟದ ಕಥೆ ಇಂದು ನಿನ್ನೆಯದಲ್ಲ. ಅದಕ್ಕೆ ಹನ್ನೆರಡು  ವರ್ಷಗಳ ಇತಿಹಾಸವಿದೆ. 2005 ರಲ್ಲಿ ಬಿಜುಪಟ್ನಾಯಕ್ ನೇತೃತ್ವದ ಬಿ.ಜೆ.ಡಿ. ಸರ್ಕಾರವು ಲಂಡನ್ ಮೂಲದ ಹಾಗೂ ಇಂಗ್ಲೇಂಡ್ ನಲ್ಲಿ ಕೇಂದ್ರ ಕಛೇರಿ ಹೊಂದಿರುವ ಬಹುರಾಷ್ಟ್ರೀಯ ಕಂಪನಿಯಾದ ವೇದಾಂತ ರಿಸೋರ್ಸ್ ಲಿಮಿಟೆಡ್ ಎಂಬ ಬೃಹತ್ ಅಲ್ಯೂಮಿನಿಯಂ ತಯಾರಿಕೆಯ ಬಹುರಾಷ್ಟ್ರೀಯ ಸಂಸ್ಥೆಗೆ ಬಾಕ್ಸೈಟ್ ಗಣಿಗಾರಿಕೆಗೆ ಅನುಮತಿ ನೀಡಿತ್ತು. ಈ ಕಂಪನಿಯ ಪ್ರವರ್ತಕ ಅನಿಲ್ ಅಗರ್ ವಾಲ್ ರವರು ಮೂಲತಃ ಬಿಹಾರದವರಾಗಿದ್ದು, ಭಾರತದ ನಾಗರೀಕರಾಗಿದ್ದು ಲಂಡನ್  ನಗರದ ನಿವಾಸಿಯಾಗಿದ್ದಾರೆ ಎಂಬುದು ಮುಖ್ಯವಾಗಿ ಗಮನಿಸಬೇಕಾದ ಸಂಗತಿ. ನಲವತ್ತು ಸಾವಿರ ಕೋಟಿ ರೂಪಾಯಿ ಬಂಡವಾಳದೊಂದಿಗೆ  ಒಡಿಸ್ಸಾದ ನಿಯಮಗಿರಿಯಲ್ಲಿ ಗಣಿಗಾರಿಕೆ ಮತ್ತು ಅಲ್ಯೂಮಿನಿಯಂ ತಯಾರಿಕಾ ಘಟಕವನ್ನು  ಸ್ಥಾಪಿಸಲು ಹೊರಟ ವೇದಾಂತ ಕಂಪನಿಗೆ ಆರಂಭದಲ್ಲಿ ಸ್ಥಳೀಯ ಆದಿವಾಸಿಗಳಿಂದ ತೀವ್ರ ಪ್ರತಿಭಟನೆ ಎದುರಾಯಿತು. ಏಕೆಂದರೆ, ಇಲ್ಲಿ ವಾಸಿಸುತ್ತಿರುವ ಡೋಂಗ್ರಿ ಕೊಂಡ ಆದಿವಾಸಿ ಸಮುದಾಯ ಹೊರ ಜಗತ್ತಿನ ಜೊತೆ ಯಾವುದೇ ಸಂಪರ್ಕವಿಲ್ಲದೆ, ಕೃಷಿ, ಮೀನುಗಾರಿಕೆಯನ್ನು ನಂಬಿಕೊಂಡು, ಅರಣ್ಯದಲ್ಲಿ ಯಥೇಚ್ಚವಾಗಿ ಸಿಗುವ ಹಣ್ಣು ಮತ್ತು ಜೇನುತುಪ್ಪ ಸೆರಿದಂತೆ ಇತರೆ ಅರಣ್ಯದ ಕಿರು ಉತ್ಪನ್ನಗಳನ್ನು ಅರಣ್ಯದಂಚಿನ ರಸ್ತೆಯಲ್ಲಿ ಮತ್ತು ಈ ಮಾರ್ಗದಲ್ಲಿ ಸಾಗುವ ರೈಲು ಪ್ರಯಾಣಿಕರಿಗೆ ಮಾರಾಟ ಮಾಡಿ, ನಿಸರ್ಗದ ಮಕ್ಕಳಂತೆ ಪ್ರಕೃತಿಗೆ ಯಾವುದೇ ರೀತಿಯಲ್ಲಿ ಎರವಾಗದಂತೆ ಬದುಕುತ್ತಿದೆ..

ಬಾಕ್ಸೈಟ್ ಅದಿರು ಗಣಿಗಾರಿಕೆಯಿಂದ ಇಡೀ ನಿಯಮಗಿರಿ ಪರ್ವತವನ್ನು ಕರಗಿಸುವುದರಲ್ಲಿ ಯಾವುದೇ ಸಂಶವಿಲ್ಲ ಎಂದು ಮನಗಂಡ  ಇಲ್ಲಿನ ಆದಿವಾಸಿಗಳು ಗಣಿ ಉದ್ಯಮಕ್ಕೆ ಪ್ರತಿರೋಧ ಒಡ್ಡಿದ ಸಂದರ್ಭದಲ್ಲಿ ಪರಿಸರ ರಕ್ಷಣೆಯಲ್ಲಿ ತೊಡಗಿಕೊಂಡಿರುವ ಲಂಡನ್ ನಗರದ ಸ್ವಯಂ ಸೇವಾ ಸಂಘಟನೆಯ ಕಾರ್ಯಕರ್ತರು ಒಡಿಸ್ಸಾ ರಾಜ್ಯಕ್ಕೆ ಆಗಮಿಸಿ, ಅರಣ್ಯವಾಸಿಗಳಿಗೆ ಕಾನೂನು ಬದ್ಧ ಹೋರಾಟ ಮಾಡಲು ಪ್ರೇರೇಪಣೆ ಮಾಡಿದರು. ಇದಕ್ಕಾಗಿ ಕಾಳಹಂದಿ ಮತ್ತು ರಾಯಗಡ ಜಿಲ್ಲೆಗಳಲ್ಲಿ ಬರುವ  ಹದಿನೇಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆದಿವಾಸಿಗಳನ್ನು ಸಂಘಟಿಸಿ “ ನಿಯಮಗಿರಿ ಸಂರಕ್ಷಣಾ ಸಮಿತಿ” ಎಂಬ ಹೋರಾಟದ ವೇದಿಕೆಯನ್ನು ಹುಟ್ಟು ಹಾಕಿದರು.
ವೇದಾಂತ ಕಂಪನಿ ಮತ್ತು ಆದಿವಾಸಿಗಳ ನಡುವಿನ ಹೋರಾಟವು  ಸುಪ್ರಿಂ ಕೋರ್ಟ್ ಮೆಟ್ಟಿಲು ಏರಿದ ಸಂದರ್ಭದಲ್ಲಿ 2015 ರಲ್ಲಿ ಸುಪ್ರಿಂ ಕೋರ್ಟ್ ಚರಿತ್ರಾರ್ಹವಾದ ತೀರ್ಪು ನೀಡಿತು. ಗಣಿಗಾರಿಕೆಗೆ ಅವಕಾಶ ನೀಡುವ ಹಕ್ಕು ಸ್ಥಳೀಯ ಗ್ರಾಮ ಪಂಚಾಯಿತಿಗಳಿಗೆ ಸೇರಿದೆ ಎಂದು ನ್ಯಾಯಾಲಯ ತಿಳಿಸಿತು. ಅದರಂತೆ ನಿಯಮಗಿರಿ ಪರ್ವತ ತಪ್ಪಲಿನಲ್ಲಿರುವ ಹದಿನೇಳು ಗ್ರಾಮ ಪಂಚಾಯಿತಿಗಳು ಸರ್ವ ಸದಸ್ಯರ ಸಭೆ ನಡೆಸಿ, ಸ್ಥಳೀಯ ಪರಿಸರಕ್ಕೆ ಧಕ್ಕೆ ತರುವ ಹಾಗೂ ಇಲ್ಲಿನ ನೆಲಮೂಲ ನಿವಾಸಿಗಳ ಬದುಕುವ ಹಕ್ಕನ್ನು ಕಸಿದುಕೊಳ್ಳುವ ಗಣಿಗಾರಿಕೆಯ ಚಟುವಟಿಕೆಗೆ ಅವಕಾಶ ಇಲ್ಲ ಎಂಬ ಐತಿಹಾಸಿಕ ನಿರ್ಣಯ ಕೈಗೊಂಡವು. ಈ ತೀರ್ಪಿನ ಅನ್ವಯ ಸುಮಾರು ಆರು ಸಾವಿರ ಕೋಟಿ ಪ್ರಾಥಮಿಕ ಬಂಡವಾಳವನ್ನು ಹೂಡಿದ್ದ ವೇದಾಂತ ಕಂಪನಿಯು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಅಲ್ಲಿಂದ ಕಾಲ್ತೆಗೆಯಿತು.
ಬಹುರಾಷ್ಟ್ರೀಯ ಕಂಪನಿಗಳು ರಾಜಕೀಯ ಪಕ್ಷಗಳಿಗೆ ನೀಡುವ ಯಥೇಚ್ಛವಾದ ದೇಣಿಗೆ ಎಂಬ ಎಂಜಲು ಕಾಸಿಗೆ ಬಲಿ ಬಿದ್ದ ಒಡಿಸ್ಸಾದ ಬಿಜುಪಟ್ನಾಯಕ್ ಸರ್ಕಾರ ಕಳೆದ ವರ್ಷ ತೀರ್ಪನ್ನು ಮರು ಪರಿಶೀಲಿಸಬೇಕೆಂದು ಕಂಪನಿಯ ಪರವಾಗಿ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿದಾಗ ಸರ್ವೋಚ್ಛ ನ್ಯಾಯಾಲಯವು ಅರ್ಜಿಯನ್ನು ತಿರಸ್ಕರಿಸಿತು. ಬೇರೇ ದಾರಿ ಕಾಣದ ಈಗ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರ ಒಟ್ಟುಗೂಡಿ ಮಾನವ ಹಕ್ಕುಗಳು, ಆದಿವಾಸಿಗಳು ಮತ್ತು ಹಿಂದುಳಿದ ವರ್ಗಗಳ ಶ್ರೇಯಸ್ಸಿಗೆ ಹೋರಾಡುತ್ತಿರುವ ಸ್ವಯಂ ಸೇವಾ ಸಂಘಟನೆಗಳ ಮೇಲೆ ಮುಗಿ ಬಿದ್ದಿವೆ.

ನರೇಂದ್ರ ಮೋದಿಯವರು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಮೇಲೆ ವಿದೇಶದಿಂದ ಸಹಾಯ ಧನ ಪಡೆಯುತ್ತಿದ್ದ ಸ್ವಯಂ ಸೇವಾ ಸಂಘಟನೆಗಳ ನೊಂದಣಿಯನ್ನು ರದ್ದುಗೊಳಿಸಲಾಗುತ್ತಿದೆ. ಈವರೆಗೆ ಭಾರತದ ಮುವತ್ತು ಸಾವಿರ ಸ್ವಯಂಸೇವಾ ಸಂಘಟನೆಗಳಲ್ಲಿ ಇಪ್ಪತ್ತು ಸಾವಿರ ಸಂಸ್ಥೆಗಳ ಪರವಾನಗಿಯನ್ನು ರದ್ದು ಪಡಿಸಲಾಗಿದೆ. ಇವುಗಳಲ್ಲಿ ಹನ್ನೊಂದು ಸಾವಿರ ಸಂಸ್ಥೆಗಳು ವಿದೇಶಿ ದೇಣಿಗೆಯನ್ನು ಪಡೆಯುತ್ತಿದ್ದವು. ಕೇಂದ್ರ ಸರ್ಕಾರವು ನಿಷೇಧ ಹೇರಿರುವ ಅರವತ್ತೊಂಬತ್ತು ಸ್ವಯಂ ಸೇವಾಸಂಘಟನೆಗಳಲ್ಲಿ ಮುವತ್ತು ಸ್ವಯಂ ಸೇವಾ ಸಂಘಟನೆಗಳು ಭಾರತದಲ್ಲಿ ಹಿಂದುಳಿದ ಜಾತಿ ಮತ್ತು ವರ್ಗಗಳ ಶಿಕ್ಷಣ, ಆರೋಗ್ಯ  ಮತ್ತು  ವಸತಿ ಮುಂತಾದ ಕ್ರೇತ್ರಗಳಲ್ಲಿ ತೊಡಗಿಸಿಕೊಂಡು ಸೇವೆ ಸಲ್ಲಿಸುತ್ತಿದ್ದವು. ಆಂಧ್ರಪ್ರದೇಶ ರಾಜ್ಯದಲ್ಲಿ ನಿಷೇಧಕ್ಕೆ ಒಳಗಾದ ಹದಿನಾಲ್ಕು ಸಂಘಟನೆಗಳಲ್ಲಿ ಎಂಟು ಸಂಸ್ಥೆಗಳು, ತಮಿಳುನಾಡಿನ ಹನ್ನೆರಡು ಸಂಘಟನೆಗಳಲ್ಲಿ  ಐದು ಸಂಸ್ಥೆಗಳು, ಗುಜರಾತಿನ ಐದು ಸಂಘಟನೆಗಳಲ್ಲಿ ನಾಲ್ಕು ಸಂಸ್ಥೆಗಳು ಬಡವರು ಮತ್ತು ಆದಿವಾಸಿಗಳ ಪರವಾಗಿ ಕಾರ್ಯ ನಿರ್ವಹಿಸುತ್ತಿದ್ದವು.
ಶಿಕ್ಷಣ ಮತ್ತು ಆರೋಗ್ಯ ಮುಂತಾದ ವಲಯಗಳಿಂದ ತಮ್ಮ ಹೊಣೆಗಾರಿಕೆಯನ್ನು ತಪ್ಪಿಸಿಕೊಂಡಿರುವ ದೇಶದ ಬಹುತೇಕ ಸರ್ಕಾರಗಳು ಎಲ್ಲವನ್ನೂ ಖಾಸಾಗಿ ವಲಯಕ್ಕೆ ಒಪ್ಪಿಸಿ, ಬಂಡವಾಳ ಶಾಹಿ ಜಗತ್ತಿನ ಏಜೆಂಟರಂತೆ ಕಾರ್ಯನಿರ್ವಹಿಸುತ್ತಿರುವುದು ಈಗ ರಹಸ್ಯವಾಗಿ ಉಳಿದಿಲ್ಲ.. “ಬಡತನದ ನಿವಾರಣೆ ಎಂದರೆ ಬಡವರ ನಿರ್ಮೂಲನೆ ಎಂಬುದು” ಈಗಿನ  ಜಾಗತೀಕರಣ ವ್ಯವಸ್ಥೆಯ ವೇದ ವ್ಯಾಖ್ಯವಾಗಿದೆ. ಏಕೆಂದರೆ, ಬಡವರು ಉಪಭೂಗದ ಲೋಲುಪತೆಯ ಸಂಸ್ಕೃತಿಯ ಈ ಆಧುನಿಕ ಜಗತ್ತಿನಲ್ಲಿ ಬಹರಾಷ್ಟ್ರೀಯ ಕಂಪನಿಗಳು ತಂದು ಸುರಿಯುತ್ತಿರುವ ಸರಕುಗಳಿಗೆ ಗ್ರಾಹಕರಲ್ಲ. ಹಾಗಾಗಿ ಅವರು ಈ ಆಧುನಿಕ ಜಗತ್ತಿನಲ್ಲಿ ಇರಲು ಅನರ್ಹರು. ಇದು ಇವೊತ್ತಿನ ಜಗದ  ಹೊಸ ನಿಯಮ ಎಂದರೆ, ತಪ್ಪಾಗಲಾರದು.
ಕೊನೆಯ ಮಾತು- ಭಾರತದಲ್ಲಿ ಕಳೆದ ಎರಡು ದಶಕಗಳಿಂದ ಏಡ್ಸ್ ಕಾಯಿಲೆ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸಿರುವ ಬಿಲ್ ಗೆಟ್-ಮಿಲಿಂದ ಟ್ರಸ್ಟ್ ಮೇಲೂ ಕೇಂದ್ರ ಸರ್ಕಾರ ನಿಷೇಧ ಹೇರುವ ಸೂಚನೆಗಳು ಕಾಣುತ್ತಿವೆ. ಈ ನಡುವೆ ಕಳೆದವಾರ  ನಿಯಮಗಿರಿ ಸುರಕ್ಷಾ ಸಮಿತಿಗೆ, ಅಂತರಾಷ್ಟ್ರೀಯ ಮಟ್ಟದ ಪರಿಸರ ಪ್ರಶಸ್ತಿ ಲಭ್ಯವಾಗಿದೆ.
( ಕರಾವಳಿ ಮುಂಜಾವು ಪತ್ರಿಕೆಯ : ಜಗದಗಲ” ಅಂಕಣಕ್ಕಾಗಿ ಬರೆದ ಲೇಖನ)

                                                                                                            No comments:

Post a Comment