Friday, 28 April 2017

ದಿಲ್ಲಿಯಲ್ಲಿ ಅನ್ನದಾತರ ಆಕ್ರಂಧನ
ದೆಹಲಿಯ ಜಂತರ್ ಮಂತರ್ ಪ್ರದೇಶದಲ್ಲಿ ನಲವತ್ತು ದಿನಗಳ ಕಾಲ  ತಮಿಳುನಾಡು ರೈತರು  ನಿರಂತರವಾಗಿ ನಡೆಸಿದ ವಿಶಿಷ್ಟವಾದ ಅರಬೆತ್ತಲೆಯ ಪ್ರತಿಭಟನೆಯು ಇಡೀ ಭಾರತ ಮಾತ್ರವಲ್ಲ, ಜಗತ್ತಿನ ಮಾಧ್ಯಮಗಳ ಗಮನ ಸೆಳೆಯಿತು. ಪ್ರಧಾನಿ ನರೇಂದ್ರಮೋದಿಯವರನ್ನು ಭೇಟಿ ಮಾಡಬೇಕು ಎನ್ನುವ ರೈತರ ಏಕೈಕ ಗುರಿ  ಮಾತ್ರ ಈಡೇರಲಿಲ್ಲ. 23-4-16 ರಂದು  ನೀತಿ ಆಯೋಗದ ಸಭೆಗಾಗಿ ದೆಹಲಿಗೆ ಆಗಮಿಸಿದ್ದ ತಮಿಳುನಾಡಿನ ನೂತನ ಮುಖ್ಯಮಂತ್ರಿ ಎಂ. ಪಳನಿ ಅವರ ಮನವಿಯ ಮೇರೆಗೆ ರೈತರು ತಮ್ಮ ಪ್ರತಿಭಟನೆಯನ್ನು ಸ್ಥಗಿತಗೊಳಿಸಿದರು.  ಮನುಷ್ಯನ ತಲೆ ಬುರುಡೆ ಹಾಗೂ ಮೂಳೆಗಳೊಂದಿಗೆ ಆರಂಭವಾದ ರೈತರ  ಪ್ರತಿಭಟನೆ, ಅರ್ಧ ಮೀಸೆ ಮತ್ತು ತಲೆ ಬೋಳಿಸಿಕೊಳ್ಳುವುದು, ಸುಟ್ಟ ಇಲಿ ತಿನ್ನುವುದು, ಅರೆ ಬೆತ್ತಲೆ ಪ್ರದರ್ಶನ ಇವುಗಳಿಂದ ಮುಂದುವರಿದು ಮೂತ್ರ ಕುಡಿಯುವವರೆಗೂ ನಡೆಯಿತು.
ಕಳೆದ ನಾಲ್ಕು ವರ್ಷಗಳಿಂದ ಭೀಕರ ಬರಗಾಲದಿಂದ ತತ್ತರಿಸಿರುವ ತಮಿಳುನಾಡಿನಲ್ಲಿ ರೈತರು ಮಾಡಿರುವ ಸುಮಾರು ನಲವತ್ತು ಸಾವಿರ ಕೋಟಿ ರೂಪಾಯಿಗಳ ಕೃಷಿ ಸಾಲವನ್ನು ಮನ್ನಾ ಮಾಡಬೇಕೆಂಬುದು ರೈತರ ಬೇಡಿಕೆಯಾಗಿತ್ತು. ವಾಸ್ತವವಾಗಿ ಇದು ತಮಿಳುನಾಡು ರಾಜ್ಯ ಸರ್ಕಾರಕ್ಕೆ ಸೇರಿದ ವಿಷಯವಾಗಿದ್ದರೂ ಸಹ, ಕೇಂದ್ರದ ಅನುದಾನವಿಲ್ಲದೆ ನಾವೇನು ಮಾಡಲು ಬರುವುದಿಲ್ಲ ಎಂದು ತಮಿಳುನಾಡು ಸರ್ಕಾರ ಕೈಚೆಲ್ಲಿದ್ದರಿಂದ ರೈತರು ನೇರವಾಗಿ ದೆಹಲಿಗೆ ಬಂದು ಧರಣಿ ಕೂತರು. ಇದೇ ವೇಳೆಗೆ ಉತ್ತರ ಪ್ರದೇಶದಲ್ಲಿ ಆದಿತ್ಯನಾಥ ಯೋಗಿ ನೇತೃತ್ವದ  ಬಿ.ಜೆ.ಪಿ. ಸರ್ಕಾರ ಅಲ್ಲಿನ ರೈತರ ಸಾಲವನ್ನು ಮನ್ನಾ ಮಾಡಿದ್ದರಿಂದ ಇಂತಹದ್ದೇ ಅವಕಾಶ ತಮಿಳುನಾಡು ರೈತರಿಗೆ ದೊರೆಯಬೇಕು ಎಂಬುದು ರಾಧಾಕೃಷ್ಣನ್ ನೇತೃತ್ವದ ರೈತ ಸಂಘಟನೆಯ ಆಸೆಯಾಗಿತ್ತು. ಆದರೆ, ಈ ರೈತರು ನಡೆಸಿದ ಪ್ರತಿಭಟನೆ ಮಾತ್ರ ನಿಜಕ್ಕೂ ಇಡೀ ರೈತ ಸಮುದಾಯ ತಲೆ ತಗ್ಗಿಸುವಂತಹ ರೀತಿಯಲ್ಲಿತ್ತು.

ಏಕೆಂದರೆ, ಎಂತಹದ್ದೇ ಕಷ್ಟ ಕಾರ್ಪಣ್ಯಗಳ ನಡುವೆ, ಬಿಸಿಲು ಬಿರುಗಾಳಿ, ಮಳೆಗಳ ಮಧ್ಯೆ, ಭೂಮಿಯ ಮೇಲಿನ ನಂಬಿಕೆ ಕಳೆದುಕೊಳ್ಳದ ಈ ದೇಶದ ರೈತ ಎಂದಿಗೂ ಯಾರ ಮುಂದೆಯೂ ದೈನೆಸಿ ಸ್ಥಿತಿಯಲ್ಲಿ ಕೈಯೊಡ್ಡಿ ಬೇಡಿದವನಲ್ಲ. ತಾನು ಬೆಳೆದದ್ದನ್ನು ಅಥವಾ ಬೇಯಿಸಿದ್ದನ್ನು ಇತರರೊಂದಿಗೆ ಹಂಚಿಕೊಂಡು ಉಣ್ಣುತ್ತಾ, ಬಡತನದ ನಡುವೆಯೂ ಘನತೆಯ ಬದುಕು ಕಟ್ಟಿಕೊಂಡು ಬದುಕಿದವನು. ಆದರೆ, ಕಳೆದ ಎರಡು ದಶಕದ ಅವಧಿಯಲ್ಲಿ ಆತನ ಬದುಕು ಮೂರಾಬಟ್ಟೆಯಾಗಿದೆ. ಸಾಂಪ್ರದಾಯಿಕ ಕೃಷಿ ಮತ್ತು ಆಧುನಿಕತೆಯ ತಂತ್ರಜ್ಞಾನ ಹಾಗೂ ಹೈಬ್ರಿಡ್ ಬೀಜಗಳು, ರಸಾಯನಿಕ ಗೊಬ್ಬರಗಳು, ಕೀಟನಾಶಕಗಳು ಮತ್ತು  ನೀರು ಬಾರದ ಕೊಳವೆ ಬಾವಿಗಳು ಎಂಬ  ಸುಳಿಯೊಳಗೆ ಸಿಲುಕಿ , ಸಾಲವೆಂಬ ಶೂಲವನ್ನು ಎದೆಗೆ ಇಕ್ಕಿಸಿಕೊಂಡು ಹೈರಾಣಾಗಿದ್ದಾನೆ. ಯಾವ ರಾಜಕೀಯ ಪಕ್ಷಗಳಿಂದಾಗಲಿ, ಸರ್ಕಾರಗಳಿಂದಾಗಲಿ ಅಥವಾ ಸಂಘಟನೆಗಳಿಂದಾಗಲಿ ಅವನಿಗೆ ಮೋಕ್ಷವೆಂಬುದು ಕೇವಲ ಭ್ರಮೆಯ ಮಾತಾಗಿದೆ. ಭಾರತದ ಪ್ರಪಥಮ ಸಂಘಟಿತ ರೈತರ ಹೋರಾಟ ಎನಿಸಿಕೊಂಡ ಬಿಹಾರದ ಚಂಪಾರಣ್ಯ ಸತ್ಯಾಗ್ರಹಕ್ಕೆ ಇದೀಗ ಶತಮಾನ ತುಂಬಿದೆ.(1917 ರ ಹೋರಾಟ) ಈ ಹೋರಾಟದ ಯಶಸ್ಸನ್ನು ನಾವು ಒಂದಿಷ್ಟು ಪರಾಮರ್ಶೆಗೆ ಒಡ್ಡಿದರೆ ಕಗ್ಗತ್ತಲ ಕಾಡಿನಲ್ಲಿ ಕಳೆದು ಹೋಗಿರುವ ರೈತ ಸಮುದಾಯಕ್ಕೆ ಒಂದಿಷ್ಟು ಬೆಳಕಿನ ಹಾದಿ ತೋರಬಹುದು
1915 ರಲ್ಲಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಿಂತಿರುಗಿದ ಗಾಂಧೀಜಿಯವರು, ಭಾರತವನ್ನು ಅರ್ಥಮಾಡಿಕೊಳ್ಳುವ ದೃಷ್ಟಿಯಿಂದ .ತಮ್ಮ ಪತ್ನಿ ಕಸ್ತೂರಬಾ ಜೊತೆ ಭಾರತ ಪ್ರವಾಸ ಕೈಗೊಂಡಿದ್ದರು. 1917 ರಲ್ಲಿ ಉತ್ತರ ಪ್ರದೇಶದ ಲಕ್ನೊ ನಗರದಲ್ಲಿ ನಡೆಯುತ್ತಿದ್ದ ಕಾಂಗ್ರೇಸ್ ಅಧಿವೇಶನದಲ್ಲಿ ಪಾಲ್ಗೊಂಡಿದ್ದ ಗಾಂಧೀಜಿಯವರನ್ನು ಭೇಟಿ ಮಾಡಿದ ಚಂಪಾರಣ್ಯದ ರೈತರು, ಬ್ರಿಟಿಷ್ ಸರ್ಕಾರ ಹಾಗೂ ಶ್ರೀಮಂತ ರೈತರು ನೀಲಿ ಬೆಳೆ ಬೆಳೆಯುವಂತೆ ತಮ್ಮ ಮೇಲೆ ಹೇರುತ್ತಿರುವ ಒತ್ತಡದ ಬಗ್ಗೆ ವಿವರಿಸಿ, ನಾವು ನಡೆಸುತ್ತಿರುವ ಹೋರಾಟಕ್ಕೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು. ಆಗಿನ ಯುವ ವಕೀಲರಾಗಿದ್ದ ರಾಜೇಂದ್ರ ಪ್ರಸಾದ್ ಜೊತೆ ಚಂಪಾರಣ್ಯಕ್ಕೆ ಭೇಟಿ ನೀಡಿದ ಗಾಂಧೀಜಿಯವರು ಅಲ್ಲಿನ ರೈತರ ಬವಣೆಯನ್ನು ಕೂಲಂಕುಶವಾಗಿ ಗಮನಿಸಿದರು. ರೈತರ ಮೇಲಿನ ದಬ್ಬಾಳಿಕೆಗೆ ಆ ಪ್ರದೇಶದ ರೈತರ ಬಡತನ, ಅನಕ್ಷರತೆ, ಮೌಡ್ಯ ಮತ್ತು ಆರೋಗ್ಯದಲ್ಲಿ ಶುಚಿತ್ವ ಇಲ್ಲದಿರುವಿಕೆ ಇವುಗಳನ್ನು ಸಹ ಅವರು ಮನಗಂಡರು. ನಂತರ ಏಕಕಾಲಕ್ಕೆ ಬ್ರಿಟಿಷರ ವಿರುದ್ಧ ಹೋರಾಡುತ್ತಲೇ ರೈತರ ದೌರ್ಬಲ್ಯಗಳನ್ನು ಸರಿಪಡಿಸಿ, ಉತ್ತಮ ಬದುಕು ಬದುಕುವಂತೆ ಮಾಡಿದರು. ಚಂಪಾರಣ್ಯ ಸತ್ಯಾಗ್ರಹ ಗಾಂಧೀಜಿಯವರ ಪಾಲಿಗೆ ಕೇವಲ ಹೋರಾಟ ಮಾತ್ರವಾಗಿರದೆ ನಿಜ ಭಾರತದ ದರ್ಶನವಾಗಿತ್ತು.

ಶತಮಾನ ಕಳೆದರೂ ಸಹ ಭಾರತದ ರೈತರ ಪರಿಸ್ಥಿತಿ ಇಂದಿಗೂ ಬದಲಾಗಿಲ್ಲ,  ರೈತರ ಮೇಲಿನ ವ್ಯೆವಸ್ಥೆಯ ಕ್ರೌರ್ಯ ಮತ್ತು ದಬ್ಬಾಳಿಕೆ ಕೂಡ ನಿಂತಿಲ್ಲ. ಅದೇ ರೀತಿ ರೈತರ ಹೋರಾಟವೂ ನಿಂತಿಲ್ಲ. ಜೊತೆಗೆ ಆಯಾ ಕಾಲಘಟ್ಟಕ್ಕೆ ತಕ್ಕಂತೆ ಆಯುಧಗಳಂತೆ ಬದಲಾಗಬೇಕಿದ್ದ ರೈತರ ಹೋರಾಟದ ಸ್ವರೂಪ ಬದಲಾಗಿಲ್ಲ. ಆಶ್ಚರ್ಯಕರ ಸಂಗತಿಯೆಂದರೆ, ಕರ್ನಾಟಕದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಎಂಬ ಸಂಘಟನೆಯೊಂದು ಸಾಂಸ್ಥಿಕ ರೂಪ ತಳೆಯುವ ಮೊದಲು ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಮಲೆನಾಡಿನ ಶಿವಮೊಗ್ಗ ಮುಂತಾದ ಕಡೆ ಪ್ರಾಂತೀಯ ರೈತ ಹೋರಾಟದ ಸಮಿತಿಗಳಿದ್ದವು. ಪ್ರೊ. ಎಂ.ಡಿ. ನಂಜುಂಡಸ್ವಾಮಿ,  ಹೆಚ್.ಎಸ್.ರುದ್ರಪ್ಪ. ಎಂ.ಡಿ.ಸುಂದರೇಶ್, ಮಂಜುನಾಥ ದತ್ತ, ಮುಂತಾದ ನಾಯಕರು ಪ್ರಬಲ ರೈತ ಸಂಘಟನೆಯನ್ನು ಕಟ್ಟಲು ಪ್ರೇರೇಪಣೆ ಸಿಕ್ಕಿದ್ದು ತಮಿಳುನಾಡು ರೈತರಿಂದ ಎಂಬುದು ಗಮನಾರ್ಹ ಸಂಗತಿ. 1980 ರ ಸೆಪ್ಟಂಬರ್ ತಿಂಗಳಿನಲ್ಲಿ ಶಿವಮೊಗ್ಗ ನಗರಕ್ಕೆ ಭೇಟಿ ನೀಡಿದ್ದ “ತಮಿಳ್ ವ್ಯವಸಾಯಿಗಳ್ ಸಂಘಂ “ ಸಂಘಟನೆಯ ಮುಖ್ಯಸ್ಥ  ನಾರಾಯಣಸ್ವಾಮಿ ನಾಯ್ಡು ಅವರು ಮಾಡಿದ ಭಾಷಣ ಮತ್ತು ನೀಡಿದ ಸಲಹೆಗಳು ( ಹಸಿರು ಟವಲ್ ಅಥವಾ ಶಾಲು) ಕರ್ನಾಟಕದಲ್ಲಿ ಪ್ರಬಲ ರೈತ ಸಂಘಟನೆ ಬೆಳೆಯಲು ಸಾಧ್ಯವಾಯಿತು. ಇದಾದ ಆರು ವರ್ಷಗಳ ನಂತರ ಉತ್ತರ ಪ್ರದೇಶದ ಮಹೇಂದ್ರ ಸಿಂಗ್ ಟಿಕಾಯತ್ ಕರ್ನಾಟಕದಿಂದ ಸ್ಪೂರ್ತಿಗೊಂಡು ಉತ್ತರ ಭಾರತದಲ್ಲಿ ಭಾರತೀಯ ಕಿಸಾನ್ ಯುನಿಯನ್ ಎಂಬ ಸಂಘಟನೆ ರೂಪಿಸಿದರು. ಹೀಗೆ ಭಾರತದಾದ್ಯಂತ ಹಲವಾರು ಪ್ರಬಲ ರೈತ ಸಂಘಟನೆಗಳು ಜೀವಂತವಾಗಿದ್ದರೂ ಸಹ ರೈತರ ಬದುಕು ಹಸನಾಗಲಿಲ್ಲ.
ಇದಕ್ಕೆ ಪರ್ಯಾಯ ಎಂಬಂತೆ ಯಾವೊಂದು ಸಂಘಟನೆಗಳು ಅಥವಾ ಸರ್ಕಾರಗಳನ್ನು ನಂಬದೆ ಇಲ್ಲವೆ ಆಶ್ರಯಿಸದೆ ಭೂಮಿಯನ್ನು ಮತ್ತು ಬೇಸಾಯವನ್ನು ನಂಬಿ ಘನತೆಯ ಹಾಗೂ ನೆಮ್ಮದಿಯ ಬದುಕು ಕಂಡಿರುವ ಸಾವಿರಾರು ರೈತರ ಉದಾಹರಣೆಗಳು ನಮ್ಮಲ್ಲಿವೆ. ಈ ವರ್ಷ ಕರ್ನಾಟಕದಲ್ಲಿ ತಲೆದೂರಿರುವ  ಭೀಕರ ಬರಗಾಲದ ಹಿನ್ನಲೆಯಲ್ಲಿ ರೈತರಿಗೆ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ಪ್ರಜಾವಾಣಿ ಪತ್ರಿಕೆಯು ಆರಂಭಿಸಿರುವ ಅಭಿಯಾನದಲ್ಲಿ ದಿನಕ್ಕೊಂದು ರೈತರ ಯಶೋಗಾಥೆ ಪ್ರಕಟವಾಗುತ್ತಿದೆ. ಈ ಯಶಸ್ವಿ ರೈತರು ಕೃಷಿ ಹೊಂಡದ ಮೂಲಕ ಮಳೆ ನೀರನ್ನು ಹಿಡಿದಿಟ್ಟು ಬರಗಾಲದಲ್ಲೂ ಬೆಳೆ ತೆಗೆಯುತ್ತಿದ್ದಾರೆ. ಯಾವುದೇ ವಾಣಿಜ್ಯ ಬೆಳೆಯ ಮೋಹಕ್ಕೆ ಒಳಗಾಗದೆ, ಅನೇಕ ಪಾರಂಪರಿಕ ಬೆಳೆಗಳು, ಪರ್ಯಾಯ ಕೃಷಿ ಮತ್ತು ಹೈನುಗಾರಿಕೆ, ಕೋಳಿಸಾಗಾಣಿಕೆ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಸ್ವಾತಂತ್ರ್ಯಾನಂತರ ಭಾರತದಲ್ಲಿ  ನಮ್ಮನ್ನಾಳಿದ ಮತ್ತು ಆಳುತ್ತಿರುವ ಸರ್ಕಾರಗಳಿಂದ ನಿರಂತರವಾಗಿ ಕಡೆಗಣಿಸಲ್ಪಟ್ಟ  ಕ್ಷೇತ್ರವೆಂದರೆ, ಅದು ಕೃಷಿ ಕ್ರೇತ್ರ ಮಾತ್ರ. ಇವೊತ್ತಿಗೂ ರೈತ ತಾನು ಬೆಳೆದ ಕೃಷಿ ಉತ್ಪನ್ನಗಳಿಗೆ ನಿರ್ಧಿಷ್ಟ ಬೆಲೆ ಕಟ್ಟುವ ಹಕ್ಕನ್ನು ಹೊಂದಿಲ್ಲವೆಂದರೆ ಇದಕ್ಕಿಂತ ದುರಂತ ಮತ್ತೊಂದಿಲ್ಲ. ಒಬ್ಬ ಗುಂಡು ಸೂಜಿ ತಯಾರಕನಿಗೆ ಮತ್ತು ಪಾದರಕ್ಷೆ ತಯಾರು ಮಾಡುವವನಿಗೆ ತನ್ನ ವಸ್ತುಗಳಿಗೆ ಬೆಲೆ ಕಟ್ಟಲು ಇರುವ ಸ್ವಾತಂತ್ರ್ಯ ಈ ದೇಶದ ಅನ್ನದಾತ ಎನಿಸಿಕೊಂಡ ರೈತನಿಗಿಲ್ಲ. ಅಂತಹ ಸ್ವಾತಂತ್ರ್ಯವಿದ್ದರೆ ಇಂದು ತಮಿಳುನಾಡು ರೈತರು ಅರೆ ಬೆತ್ತಲೆಯಲ್ಲಿ ದಯನೀಯವಾದ ಸ್ತಿತಿಯಲ್ಲಿ 43 ಸೆಂಟಿಗ್ರೇಡ್ ಉಷ್ಣಾಂಶದ ದೆಹಲಿಯ ಬೀದಿಯಲ್ಲಿ ಕೂರಬೇಕಾದ ಸ್ಥಿತಿ ಒದಗಿ ಬರುತ್ತಿರಲಿಲ್ಲ. ದೇಶದ ಯಾವುದೋ ಮೂಲೆಯಿಂದ ಯಾರೋ ಒಬ್ಬ ಬಾಲಕಿ ಅಥವಾ ಬಾಲಕ ಪತ್ರ ಬರೆದರೆ ರೋಮಾಂಚನಗೊಳ್ಳುವ ನಮ್ಮ ಪ್ರಧಾನ ಮಂತ್ರಿಗೆ ನಲವತ್ತು ದಿನಗಳ ಕಾಲ ಬಿಸಿಲಲ್ಲಿ ಕುಳಿತ ರೈತರನ್ನು  ಭೇಟಿ ಮಾಡಿ ಸಾಂತ್ವನ ಹೇಳುವ ಹೃದಯವೂ ಇಲ್ಲವೆಂದರೆ,ಇದು ಈ ನಾಡಿನ ದುರಂತವೆ ಸರಿ..
ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಯೋಗಿ ಅಲ್ಲಿನ ರೈತರ ಸಾಲ ಮನ್ನಾ ಮಾಡಿದ ಘಟನೆ ಕುರಿತು ಅತೃಪ್ತಿ ವ್ಯಕ್ತ ಪಡಿಸಿರುವ ರಿಸರ್ವ್ ಬ್ಯಾಂಕ್ ಗೌರ್ನರ್ ಊರ್ಜಿತ್ ಪಟೇಲ್ “ ಇದು ಒಳ್ಳೆಯ ಬೆಳವಣಿಗೆಯಲ್ಲ, ಇನ್ನು ಮುಂದೆ ರೈತರು ತಾವು ಪಡೆದ ಕೃಷಿ ಸಾಲವನ್ನು ಮರು ಪಾವತಿಸದೆ ಇರುವಂತಹ ಮನೋಭಾವವನ್ನು ಬೆಳೆಸಿಕೊಳ್ಳುತ್ತಾರೆ” ಎಂದಿದ್ದಾರೆ. ಇಂತಹ ಮಾತನ್ನಾಡುವ ಮಹಾಶಯನಿಗೆ “ನಿಮ್ಮ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ವಸೂಲಿಯಾಗದ ಸಾಲದ ಮೊತ್ತ ಹದಿನಾಲ್ಕು ಲಕ್ಷ ಕೋಟಿ ಇದೆಯೆಲ್ಲಾ! ಇದು ಒಳ್ಳೆಯ ಬೆಳವಣಿಗೆಯಾ” ಎಂದು ಕೆಳಬೇಕಿದೆ. ಕಿಂಗ್ ಫಿಷರ್ ನ ವಿಜಯ ಮಲ್ಯ ನಂತಹವರಿಗೆ ಯಾವ ವಿಶ್ವಾರ್ಹತೆಯ ಮೇಲೆ ಸಾಲ ಕೊಟ್ಟಿರಿ? ಪ್ರಧಾನಿಗೆ ಆಪ್ತನಾಗಿರುವ ಅದಾನಿ ಗ್ರೂಪ್ ನ ಸ್ಥಾಪಕ ಗೌತಮ್ ಶಾಂತಿಲಾಲ್ ಅದಾನಿ ಎಂಬ ಗುಜರಾತಿನ ಮಾರವಾಡಿಗೆ ಬರೋಬ್ಬರಿ 90 ಸಾವಿರ ಕೋಟಿ ಸಾಲ ನೀಡಿರುವ ನೀವು ಅದರ ಅಂಕಿ ಅಂಶಗಳನ್ನು ಮಾಹಿತಿ ಹಕ್ಕಿನ ಅಡಿ ನಾಗರೀಕರಿಗೆ ನೀಡಲು ಏಕೆ ನಿರಾಕರಿಸುತ್ತಿದ್ದೀರಿ? ಎಂಬ ಪ್ರಶ್ನೆಗಳನ್ನು ನಾವೀಗ ರೈತ ಸಮುದಾಯದ ಪರವಾಗಿ ಕೇಳಬೇಕಾಗಿದೆ. ರೈತರನ್ನು  ಹಾಗೂ ವಾಣಿಜ್ಯೋದ್ಯಮಿಗಳನ್ನು ಬೇರೆ ಬೇರೆ ದೃಷ್ಟಿಕೋನದಿಂದ ನೋಡುವ ಮನೋಭಾವವನ್ನು ನಮ್ಮನ್ನಾಳುವ ಸರ್ಕಾರಗಳು ಬದಲಿಸಿಕೊಳ್ಳುವವರೆಗೆ ಭಾರತದ ಕೃಷಿಕನ ಬದುಕು ಹಸನಾಗಲಾರದು. ಈ ಕಾರಣದಿಂದಾಗಿ ಇತ್ತೀಚೆಗೆ ಬಹುತೇಕ ಮಂದಿ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಜೊತೆಗೆ ಕೆಟ್ಟು ಪಟ್ಟಣ ಸೇರು ಎಂಬ ಮಾತಿನಂತೆ ನಗರದತ್ತ ಮುಖಮಾಡಿದ್ದಾರೆ.
(ಕರಾವಳಿ ಮುಂಜಾವು ದಿನಪತ್ರಿಕೆಯ " ಜಗದಗಲ" ಅಂಕಣಕ್ಕೆ ಬರೆದ ಲೇಖನ)No comments:

Post a Comment