ಶುಕ್ರವಾರ, ಜೂನ್ 16, 2017

ವಿಶ್ವವನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ಟ್ರಂಪ್ ಎಂಬ ಮಹಾಶಯ


ಜಾಗತಿಕ ಹವಾಮಾನ ವೈಪರಿತ್ಯ ತಡೆ ಕುರಿತ ಒಪ್ಪಂಧಕ್ಕೆ ಸಹಿ ಹಾಕಿದ್ದ ಅಮೇರಿಕಾ ದೇಶವು ಇದೀಗ ಒಪ್ಪಂಧದಿಂದ ಹಿಂದೆ ಸರಿದಿದೆ. ಕಳೆದ ತಿಂಗಳು ಸಿಯಾಟಲ್ ನಗರದಲ್ಲಿ ನಡೆದ  ಪ್ಯಾರಿಸ್ ಒಪ್ಪಂಧ ಕುರಿತ ನಡೆದ ಮಾತುಕತೆಯ ಸಂದರ್ಭದಲ್ಲಿ ಈಗಿನ ಅಮೇರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ತನ್ನ ತಿಕ್ಕಲುತನದ  ನಡೆಯನ್ನು ಅನಾವರಣಗೊಳಿಸುವುದರ ಮೂಲಕ ಇಡೀ ಜಗತ್ತಿನ ಜೀವಸಂಕುಲಗಳಿಗೆ ಅಪಾಯ ತಂದೊಡ್ಡಿದ್ದಾನೆ.
2015 ರ ಡಿಸಂಬರ್ ತಿಂಗಳಿನಲ್ಲಿ ಪ್ರಾರಿಸ್ ನಗರದಲ್ಲಿ ನಡೆದ ಐತಿಹಾಸಿಕ ಸಭೆಯಲ್ಲಿ ಅಂದಿನ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮ, ಭಾರತದ ಪ್ರಧಾನಿ ನರೇಂಧ್ರಮೋದಿ ಮತ್ತು ಚೀನಾ ಅಧ್ಯಕ್ಷ ಜಿಯಾಂಗ್  ಸೇರಿದಂತೆ ಜಗತ್ತಿನ 196 ರಾಷ್ಟ್ರಗಳು  ಒಪ್ಪಂಧಕ್ಕೆ ಸಹಿ ಹಾಕಿದ್ದವು. ಈ ಐತಿಹಾಸಿಕ ನಿರ್ಣಯದ ಮೂಲಕ ಜಾಗತಿಕ ತಾಪಮಾನವು ಮುಂದಿನ ಐವತ್ತು ವರ್ಷಗಳಲ್ಲಿ ಎರಡು ಡಿಗ್ರಿ ಸೆಲ್ಸಿಯಸ್ ಗಿಂತ ಮೀರಬಾರದು ಮತ್ತು  ಸಾಂಪ್ರದಾಯಕ ಇಂಧನಗಳಿಗೆ (ಕಲ್ಲಿದ್ದಲು, ಪೆಟ್ರೋಲಿಯಂ ಇತ್ಯಾದಿ) ಪರ್ಯಾಯವಾಗಿ ನವೀಕರಿಸಬಹುದಾದ ಮತ್ತು ನೈಸರ್ಗಿಕವಾಗಿ ದೊರೆಯುವ ಇಂಧನಗಳನ್ನು ( ಸೂರ್ಯನ ಶಾಖದಿಂದ ಮತ್ತು ಗಾಳಿಯಿಂದ ವಿದ್ಯುತ್ ಇತ್ಯಾದಿ) ಬಳಸುವುದರ ಮೂಲಕ ವಾತಾವಾರಣಕ್ಕೆ ಉಗುಳುವ ಕಾರ್ಬನ್ ಡೈ ಆಕ್ಸೈಡ್ (ಇಂಗಾಲಾಮ್ಲ) ಇದರ ಪರಿಣಾಮವನ್ನು ಕಡಿತಗೊಳಿಸಬೇಕು ಎಂಬ ನಿರ್ಧಾರಕ್ಕೆ ಬರಲಾಗಿತ್ತು.
ವೃತ್ತಿಯಲ್ಲಿ ಒಬ್ಬ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದುಕೊಂಡು, ಬಂಡವಾಳಶಾಹಿ ಜಗತ್ತಿನ ಪ್ರತಿನಿಧಿಯಂತೆ ಕಾಣುವ ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಎಂಬ ಮಹಾಶಯನಿಗೆ  ಯಾವುದೇ ರಾಜಕೀಯ ಮುತ್ಸದಿತನ ಇದ್ದಂತಿಲ್ಲ. ಜಾಗತೀಕಮಟ್ಟದಲ್ಲಾಗಲಿ ಅಥವಾ ರಾಷ್ಟ್ರಮಟ್ಟದಲ್ಲಾಗಲಿ ರಾಜಕೀಯ ತೀರ್ಮಾನಗಳನ್ನು ತೆಗೆದುಕೊಳ್ಳುವಾಗ ಅವುಗಳಿಂಧಾಗುವ ರಾಜಕೀಯ , ಸಾಮಾಜಿಕ ಹಾಗೂ ಆರ್ಥಿಕ ಪರಿಣಾಮಗಳ ಕುರಿತಂತೆ ಯೋಚಿಸುವ ಜ್ಞಾನವಿಲ್ಲ. ಈತ ಅಮೇರಿಕಾ ಅದ್ಯಕ್ಷನಾದ ಮೇಲೆ ತೆಗೆದುಕೊಂಡ ನಿಲುವುಗಳಿಂದಾಗಿ ಭಾರತದ ಮಾಹಿತಿ ತಂತ್ರಜ್ಞಾನದ ಮೇಲೆ ಬಿದ್ದಿರುವ ಹೊಡೆತ, ಹಾಗೂ ರಷ್ಯಾ ಮತ್ತು ಚೀನಾಗಳಂತಹ ರಾಷ್ಟ್ರಗಳ ಜೊತೆ ವ್ಯವಹರಿಸುತ್ತಿರುವ ವೈಖರಿ ಹಾಗೂ ಅರಬ್ ರಾಷ್ಟ್ರಗಳ ಜೊತೆಗಿನ ಸಂಬಂಧ ಇವೆಲ್ಲವೂ ಗೊಂದಲದ ಗೂಡಾಗಿವೆ. 2012 ರ ಸಮಯದಲ್ಲಿ ಜಾಗತಿಕ ಹವಾಮಾನ ವೈಪರಿತ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಂತರಾಷ್ಟ್ರಿಯ ಮಟ್ಟದಲ್ಲಿ ಒಪ್ಪಂಧಕ್ಕೆ ಬರಬೇಕು ಎಂಬ ಒತ್ತಡಗಳು ಕೇಳಿಬಂದ ಸಂದರ್ಭದಲ್ಲಿ “ಇದೊಂದು ಸುಳ್ಳು ವದಂತಿ” ಎಂದು ಈತ ಪ್ರತಿಕ್ರಿಯೆ ನೀಡಿದ್ದ. ಅದರಂತೆ ಈಗ ಅಧ್ಯಕ್ಷನಾದ ನಂತರ ಮನುಕುಲವಷ್ಟೇ ಅಲ್ಲದೆ, ಜೀವಸಂಕುಲಕ್ಕೆ ನೆರವಾಗಬಹುದಾದ ಪ್ಯಾರಿಸ್ ಒಪ್ಪಂಧವನ್ನು ವದಂತಿಯ ರೂಪದಲ್ಲಿ ತಳ್ಳಿಹಾಕಿದ್ದಾನೆ. ತಲೆತುಂಬಾ ಲಾಭಕೋರತನವನ್ನು ತುಂಬಿಕೊಂಡು, ಅಭಿವೃದ್ಧಿಯ ಹೆಸರಿನಲ್ಲಿ ನೈಸರ್ಗಿಕ ಕೊಡುಗೆಗಳನ್ನು ಮಾರಣಹೋಮ ಮಾಡುತ್ತಿರುವ ಇಂತಹ ದುರಹಂಕಾರಿಗಳು ಮತ್ತು ಅಭಿವೃದ್ಧಿ ಹೊಂದಿದ ಶ್ರೀಮಂತ ಕೈಗಾರಿಕಾ ರಾಷ್ಟ್ರಗಳಿಗೆ ಕಡಿವಾಣ ಹಾಕುವುದು ಅತ್ಯಗತ್ಯವಾಗಿದೆ. ವಾತಾವರಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ  ಹೊಗೆ ಉಗುಳುತ್ತಿರುವ ರಾಷ್ಟ್ರಗಳಲ್ಲಿ ಅಮೇರಿಕಾ ಪ್ರಥಮ ಸ್ಥಾನದಲ್ಲಿದ್ದರೆ, ಚೀನಾವು ದ್ವಿತೀಯ ಸ್ಥಾನದಲ್ಲಿದೆ. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವೆನಿಸಿದ ಭಾರತವು ಮೂರನೇಯ ಸ್ಥಾನದಲ್ಲಿದೆ.
ಹಲವು ವರ್ಷಗಳ ಕಾಲ ನೆನಗುದಿಗೆ ಬಿದ್ದಿದ್ದ ಹವಾಮಾನ ವೈಪರಿತ್ಯ ತಡೆಯ ಒಪ್ಪಂಧದಲ್ಲಿ ಇರುವ ಪ್ರಮುಖ ವಿಷಯಗಳನ್ನು ಸಂಕ್ಷಿಪ್ತವಾಗಿ ಹೀಗೆ ವಿವರಿಸಬಹುದು. ವಾತಾವರಣದಲ್ಲಿ ಹಸಿರು ಮನೆಯ ಅನಿಲಗಳು ಎಂದು ಕರೆಸಿಕೊಳ್ಳುವ ಒಜೋನ್  ಅಥವಾ ನೀರಿನ ಆವಿ (02) ಇಂಗಾಲಮ್ಲ ( CH2) ಮಿಥೇನ್(CH4) ನೈಟ್ರಸ್ ಆಕ್ಷೈಡ್(N2O) ಇವೆಲ್ಲವೂ ಸಹಜವಾಗಿ ನೀರಿನಿಂದ, ಜಾನುವಾರುಗಳು ಮತ್ತು ಕೃಷಿ ತ್ಯಾಜ್ಯದಿಂದ ಮತ್ತು  ನಿಸರ್ಗ ಅಥವಾ ವಾತಾವರಣ  ಇವುಗಳಿಂದ ಉತ್ಪತ್ತಿಯಾಗಿ ಭೂಮಿಯ ಮೇಲಿನ ಉಷ್ಣತೆಯನ್ನು ಸಮತೋಲನದಲ್ಲಿ ಇಡಲು ಸಹಕಾರಿಯಾಗಿದ್ದವು.  ಆದರೆ, ಇಪ್ಪತ್ತನೇಯ ಶತಮಾನದಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ ಉಂಟಾದ ಕ್ಷಿಪ್ರ ಬೆಳವಣಿಗೆ ಮತ್ತು ಸಾರಿಗೆ ಕ್ಷೇತ್ರದಲ್ಲಿ ಆದ ಬದಲಾವಣೆಯಿಂದಾಗಿ ವಿದ್ಯುತ್ ಉತ್ಪಾದನೆಗಾಗಿ ಕಲ್ಲಿದ್ದಲುಗಳ ಬಳಕೆ ಮತ್ತು ಸಾರಿಗೆ ಕ್ಷೇತ್ರದ ವಾಹನಗಳು ಮತ್ತು ಕೈಗಾರಿಕೆಗಳಲ್ಲಿ ಬಳಸುವ ಪೆಟ್ರೋಲಿಯಂ ಉತ್ಪನ್ನಗಳ ಮಿತಿಮೀರಿದ ಬಳಕೆಯಿಂದಾಗಿ ವಾತಾವರಣಕ್ಕೆ ಸೇರುತ್ತಿರುವ ಕಾರ್ಬನ್ ಡೈ ಆಕ್ಷೈಡ್ ಮತ್ತು ನೈಟ್ರಸ್ ಆಕ್ಷೈಡ್ ಇವುಗಳಿಂದಾಗ ಹವಾಗುಣದಲ್ಲಿ ಏರುಪೇರಾಗುತ್ತಿದೆ. ಭೂಮಿಯ ಮೇಲಿನ ಉಷ್ಣತೆ ನಿರೀಕ್ಷಿತ ಪ್ರಮಾಣಕ್ಕಿಂತ ಹೆಚ್ಚಾಗುತ್ತಿದೆ. ಇತ್ತೀಚೆಗಿನ ದಿನಗಳಲ್ಲಿ ರಸಾಯಿನಿಕ ಗೊಬ್ಬರಗಳು ಮತ್ತು ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಿದ್ದು, ವಾತಾವರಣಕ್ಕೆ ಬಿಡುಗಡೆಯಾಗುತ್ತಿರುವ ಮಿಥೇನ್ ಅನಿಲವು ಹವಾಮಾನ ವೈಪರಿತ್ಯಕ್ಕೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಅಪಾಯಕಾರಿಯಾಗಿದೆ. ಇದು ಕಾರ್ಬನ್ ಡೈ ಆಕ್ಷೈಡ್ ಗಿಂತ ಶೇಕಡ 21 %ರಷ್ಟು ಮತ್ತು ನೈಟ್ರಸ್ ಆಕ್ಷೈಡ್ ಗಿಂತ ಶೇಕಡ 30% ರಷ್ಟು ಹೆಚ್ಚು ಪ್ರಭಾವಶಾಲಿಯಾಗಿದೆ.
2005 ರಿಂದ 2015 ರ ಅವಧಿಯ ನಡುವೆ ನೈಟ್ರಸ್ ಆಕ್ಷೈಡ್ ಪ್ರಮಾಣವು ಜಾಗತಿಕವಾಗಿ ಹೆಚ್ಚಾಗಿರುವುದನ್ನು ನಾಸಾ ಉಪಗ್ರಹಗಳು ಸೆರೆ ಹಿಡಿದಿರುವ ಭೂಮಿಯ ಚಿತ್ರಗಳಿಂದ ದೃಢಪಟ್ಟಿದೆ. ವಾಹನಗಳು, ಕೈಗಾರಿಕೆಗಳು ಮತ್ತು ಕಲ್ಲಿದ್ದಲು ಆಧಾರಿತ ವಿದ್ಯುತ್ ಘಟಕಗಳು ಹೊರಸೂಸುವ ಹೊಗೆಯಲ್ಲಿ ಹಳದಿಮಿಶ್ರಿತ ಕಂದು ಬಣ್ಣದ ಹೊಗೆಯಿಂದಾಗಿ ಗಂಧಕಾಮ್ಲವು ವಾತಾವರಣವನ್ನು ಮಲೀನಗೊಳಿಸುತ್ತಿದೆ. ಜಗತ್ತಿನ ಒಟ್ಟು 195 ದೇಶಗಳಲ್ಲಿ ಅಧ್ಯಯನ ನಡೆಸಲಾಗಿದ್ದು, ಬಂಗ್ಲಾ ದೇಶದ ರಾಜಧಾನಿ ಢಾಕ್ಕಾ ನಗರವು ಜಗತ್ತಿನಲ್ಲಿ ಅತಿ ಹೆಚ್ಚು ನೈಟ್ರೋಜನ್ ಡೈ ಆಕ್ಷೈಡ್ ಅನ್ನು ಹೊರಸುಸುತ್ತಿರುವ ನಗರವಾಗಿದೆ. ಕಯಗಾರಿಕೆಗಳು ಹೆಚ್ಚಾಗಿರುವ ನಗರದಲ್ಲಿ ನಯಟ್ರೋಜನ್ ಡೈ ಆಕ್ಸೈಡ್ ಪ್ರಮಾಣವು ಶೇಕಡ 20 ರಿಂದ ಶೇಕಡ 50 ರಷ್ಟು ಹೆಚ್ಚಾಗಿದ್ದರೆ, ಢಾಕ್ಕಾ ನಗರದಲ್ಲಿ ಶೇಕಡ 79 ರಷ್ಟು ಹೆಚ್ಚಾಗಿದೆ. ಭಾರತದಲ್ಲಿ ಅತಿ ಹೆಚ್ಚು ಕಲ್ಲಿದ್ದಲು ಗಣಿಗಾರಿಕೆ ನಡೆಸುತ್ತಿರುವ ಛತ್ತಿಸ್ ಗಡದ   ವಲಯ ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ಸಂಸ್ಕರಿಸುವ  ಗುಜರಾತಿನ ಜಾಮ್ ನಗರವನ್ನು ಮಾಲಿನ್ಯ ಪ್ರದೇಶಗಳೆಂದು ಗುರುತಿಸಲಾಗಿದೆ. ಜಗತ್ತಿನಾದ್ಯಂತ ಕಲ್ಲಿದ್ದಲು ಮತ್ತು ತೈಲ ಇವುಗಳ ಮೇಲಿನ ಅತಿಯಾದ ಅವಲಂಬನೆಯಿಂದಾಗಿ ಇಡೀ ಮನುಕುಲ ಅಪಾಯದ ಅಂಚಿಗೆ ತಲುಪಿದೆ.
ಈ ಕುರಿತು ಕಳೆದ ಮೂರು ದಶಕಗಳಿಂದ ವಿಶ್ವ ಸಂಸ್ಥೆಯೂ ಸೇರಿದಂತೆ ಹಲವಾರು ಅಂತರಾಷ್ಟ್ರೀಯ ವಿಜ್ಞಾನಿಗಳು ಹವಾಮಾನ ವೈಪರಿತ್ಯ ಕುರಿತು ಜಗತ್ತಿನ ಗಮನ ಸೆಳದಿದ್ದರು. ಭೂಮಿಯ ಮೇಲಿನ ಉಷ್ಣತೆಯಿಂದಾಗಿ ಉತ್ತರ ಮತ್ತು ದಕ್ಷಿಣದ ದ್ರುವ ಪ್ರದೇಶಗಳೂ ಸೇರಿದಂತೆ ಹಿಮಾಲಯದಲ್ಲಿನ ಹಿಮಪರ್ವತಗಳು ಕರಗುತ್ತಿದ್ದು, ಸಮುದ್ರದ ನೀರಿನ ಮಟ್ಟ ಈಗಾಗಲೇ ಹದಿನೇಳು ಸೆಂಟಿಮೀಟರ್ ಏರಿಕೆಯಾಗಿದೆ. ಜೊತೆಗೆ ಋತುಮಾನಗಳಲ್ಲಿ ಏರು ಪೇರು, ಅಕಾಲಿಕ ಮಳೆ, ಚಂಡಮಾರುತಗಳು ಇವುಗಳಿಂದಾಗಿ ಜಾಗತೀಕ ಮಟ್ಟದಲ್ಲಿ ಕೃಷಿ ರಂಗದ ಮೇಲೆ ಅಗಾಧವಾಗಿ ದುಷ್ಪರಿಣಾಮ ಬೀರಿದೆ. ಇಂತಹ ಪ್ರಕೃತಿ ವಿಕೋಪವನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ರಾಷ್ಟ್ರಗಳು ಸಾಂಪ್ರದಾಯಿಕ ಇಂಧನಗಳ ಬದಲಾಗಿ ನವೀಕರಿಸಬಹುದಾದ ಇಂಧನಗಳಿಗೆ ಆದ್ಯತೆ ನೀಡಬೇಕೆಂದು  ಒಪ್ಪಂಧಕ್ಕೆ ಬರಲಾಗಿತ್ತು.
ಒಪ್ಪಂಧದ ಪ್ರಕಾರ ಜಗತ್ತಿನ ಮುಂದುವರಿದ ಕೈಗಾರಿಕಾ ರಾಷ್ಟ್ರಗಳು ಇತರೆ ಹಿಂದುಳಿದ ರಾಷ್ಟ್ರಗಳಿಗೆ ತಂತ್ರಜ್ಞಾನ ಅಳವಡಿಸಿಕೊಳ್ಳಲು ಒಟ್ಟು ಆರು ಲಕ್ಷ, ಅರವತ್ತು ಕೋಟಿ ಡಾಲರ್ ಹಣವನ್ನು ಸಹಾಯಧನವನ್ನಾಗಿ ನೀಡಬೇಕೆಂದು ನಿರ್ಧರಿಸಲಾಗಿತ್ತು.2030 ರ ವೇಳೆಗೆ ಜಗತ್ತಿನಾದ್ಯಂತ ಗಿಡ ಮರಗಳನ್ನು ಬೆಳಸುವುದು ಮತ್ತು ನವೀಕರಿಸಬಹುದಾನ ಇಂಧನಗಳನ್ನುಬಳಸುವುದರ ಮೂಲಕ ಸುಮಾರು ಇನ್ನೂರರಿಂದ ಮುನ್ನೂರು ಕೋಟಿ ಟನ್ ಪ್ರಮಾಣದಷ್ಟು ಇಂಗಾಲಮ್ಲಗಳ ಹೊರಸೂಸುವಿಕೆಯನ್ನು ತಗ್ಗಿಸಬೇಕೆಂದು ಗುರಿ ಹಾಕಿಕೊಳ್ಳಲಾಗಿತ್ತು. ಇದೀಗ ಅಮೇರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮಹಾಶಯನಿಂದಾಗಿ ಜಗತ್ತಿನ ಸುಮಾರು ಏಳನೂರು ಕೋಟಿ ಜನಸಂಖ್ಯೆಗೆ ಮಾತ್ರವಲ್ಲದೆ, ಅಸಂಖ್ಯಾತ ಜೀವಸಂಕುಲಗಳ ಉಳುವಿಗೂ ಕುತ್ತು ಬಂದಿದೆ.
ಈಭೂಮಿಗೆ ಅಥವಾ ಈ ಜಗತ್ತಿಗೆ ನಾವು ಹಕ್ಕುದಾರರಲ್ಲ, ಕೇವಲ ವಾರಸುದಾರರು , ಇಲ್ಲಿ ಉಚಿತವಾಗಿ ದೊರೆಯುವ ನೈಸರ್ಗಿಕ ಕೊಡುಗೆಗಳನ್ನು ಮಿತವಾಗಿ ಬಳಸಿ, ಮುಂದಿನ ತಲೆಮಾರಿಗೆ ಉಳಿಸಿಹೋಗಬೇಕೆಂಬ ವಿವೇಕ ನಮ್ಮಗಳ ತಲೆಯಿಂದ ಅಳಿಸಿಹೋಗಿದೆ. ಇಂತಹ ಅವಿವೇಕ ಅಥವಾ ಅಜ್ಞಾನಕ್ಕೆ ಬೇರೆ ಯಾರಿಂದಲೂ ಬುದ್ದಿ ಕಲಿಸಲು ಸಾಧ್ಯವಿಲ್ಲ. ಆದರೆ,  ಪ್ರಕೃತಿಗೆ ಅಂತಹ ಶಕ್ತಿಯಿದೆ. ಕಳೆದ ಮೂರು-ನಾಲ್ಕು ವರ್ಷಗಳಿಂದ ಕಾಡಿದ ಸತತ ಬರದಿಂದಾಗಿ ಮನುಷ್ಯ ಮರೆತು ಹೋಗಿದ್ದ ಕೆರೆ, ಕಟ್ಟೆ, ಬಾವಿಗಳು ಈ ವರ್ಷ ಆತನ ಜ್ಞಾಪಕಕ್ಕೆ ಬಂದವು. ನೀರನ್ನು ಹಿಡಿದಿಡಬೇಕು, ಮಿತವಾಗಿ ಬಳಸಬೇಕು ಎಂಬ ಅರಿವು ಮೂಡತೊಡಗಿತು. ಇದರ ಪರಿಣಾಮವೆಂಬಂತೆ ಕರ್ನಾಟಕ, ತಮಿಳುನಾಡು, ಆಂಧ್ರ, ಮಹಾರಾಷ್ಟ್ರ ರಾಜ್ಯಗಳಲ್ಲಿ ಜನತೆ ಸರಕಾರದ ಸಹಾಯಕ್ಕೆ ಕಾಯದೆ ತಾವೇ ಹೂಳೆತ್ತಿ ದರು. ಅಂತಹದೊಂದು ಅವಘಡ ಸಧ್ಯದಲ್ಲಿ ಈ ಜಗತ್ತಿಗೆ ಅಪ್ಪಳಿಸಿದರೆ ಆಶ್ಚರ್ಯವಿಲ್ಲ. ಈಗಾಗಲೇ  ಭಾರತದ ಹಲವು ಪ್ರದೇಶಗಳಲ್ಲಿ ಶೇಕಡ 40 ರಿಂದ 45 ಡಿಗ್ರಿ ಸೆಲ್ಸಿಯಸ್ ಇದ್ದ ಉಷ್ಣಾಂಶ ಈ ವರ್ಷ 50 ಡಿಗ್ರಿ ಸೆಲ್ಸಿಯಸ್ ದಾಟಿದೆ. ಇದು ಎಚ್ಚರಿಕೆಯ ಗಂಟೆಯಲ್ಲದೆ ಬೇರೇನೂ ಅಲ್ಲ.


( ಕರಾವಳಿ ಮುಂಜಾವು ದಿನಪತ್ರಿಕೆಯ : ಜಗದಗಲ” ಅಂಕಣ ಬರಹ)

ಬುಧವಾರ, ಜೂನ್ 7, 2017

ದೇಶ ಭಕ್ತಿಯೆಂದರೆ, ಉನ್ಮಾದವಲ್ಲ



ಇದು ಈ ದೇಶಕ್ಕೆ ಅಂಟಿದ ಶಾಪ ಅಥವಾ ಶಾಶ್ವತ ಸಾಮೂಹಿಕ ಸನ್ನಿ  ಎಂದರೆ ತಪ್ಪಾಗಲಾರದು. ಬಹು ಭಾಷೆ, ಬಹು ಸಂಸ್ಕೃತಿ ಮತ್ತು ಬಹು ಧರ್ಮಗಳ ನಾಡಾದ ಭಾರತವಿಂದು ಧರ್ಮ ಮತ್ತು ದೇಶ ಭಕ್ತಿಯ ನೆಪದಲ್ಲಿ ಹರಿದು ಛಿದ್ರವಾಗಿದೆ. ವೈಚಾರಿಕ ಅಥವಾ ಬೌದ್ಧಿಕ ಸಂಘರ್ಷಕ್ಕೆ ಸಾವಿರಾರು ವರ್ಷಗಳ ಇತಿಹಾಸವಿರುವ ಈ ದೇಶದಲ್ಲಿ ಈಗ ಮನುಷ್ಯ- ಮನುಷ್ಯನ ನಡುವೆ ಸಂವಹನದ ಹಾದಿಗಳೆಲ್ಲಾ ಮುಚ್ಚಿಹೋಗಿ ಎಲ್ಲರೂ ಕತ್ತಿ ಹಿರಿದು ನಿಂತಿದ್ದಾರೆ. ಇನ್ನೊಂದು ಜಾತಿ ಅಥವಾ ಧರ್ಮದ ಸಂಸ್ಕೃತಿ ಅಂದರೆ, ಅದು ಆಹಾರವಿರಬಹುದು, ಉಡುಪಿನ ಸಂಸ್ಕೃತಿಯಿರಬಹುದು ಅವುಗಳ ಮೇಲೆ ನಿರಂತರ ದಾಳಿ ನಡೆಸುವುದರ ಮೂಲಕ ಭಾರತದ ಸಂವಿಧಾನದ ಮೂಲ ಆಶಯಗಳಿಗೆ ತಿಲಾಂಜಲಿ ನೀಡಲಾಗಿದೆ. ಮನಸ್ಸು ಮತ್ತು ಮನಸ್ಸುಗಳ ನಡುವೆ, ಮನೆ ಮತ್ತು ಮನೆಗಳ ನಡುವೆ ಇದ್ದ ಪ್ರೀತಿ, ನಂಬಿಕೆ, ವಿಶ್ವಾಸಗಳು ಮುರಿದು ಬಿದ್ದಿವೆ.  ಮನುಷ್ಯನೊಬ್ಬ ತನ್ನಂತೆ ಉಸಿರಾಡುವ, ಇನ್ನೊಬ್ಬನ್ನು ನಡುರಸ್ತೆಯಲ್ಲಿ ಧರ್ಮದ ಹೆಸರಿನಲ್ಲಿ ಅಥವಾ ಗೋ ರಕ್ಷಣೆಯ ಹೆಸರಿನಲ್ಲಿ ಇಲ್ಲವೇ, ಲವ್ ಜಿಹಾದ್ ಅಥವಾ ಜಾತಿಯ ನೆಪದಲ್ಲಿ ಇರಿದು ಕೊಲ್ಲುವ ಕಾಲಘಟ್ಟದಲ್ಲಿ ನಾವು ಬದುಕುತ್ತಿದ್ದೇವೆ.. ಕಳೆದ ಮೂರು ವರ್ಷಗಳಲ್ಲಿ ಭಾರತದುದ್ದಕ್ಕೂ ಅಲ್ಪ ಸಂಖ್ಯಾತರ ಮೇಲೆ ನಡೆದ ದಾಳಿಯ ಸ್ವರೂಪವನ್ನು ಕೂಲಂಕುಶವಾಗಿ ಅವಲೋಕಿಸಿದರೆ, ನಾವು ಜಗತ್ತಿನ ಅತಿ ದೊಡ್ಡ ಪ್ರಜಾ ಪ್ರಭುತ್ವ ವ್ಯವಸ್ಥೆ ಇರುವ ರಾಷ್ಟ್ರದಲ್ಲಿ ಬದುಕುತ್ತಿದ್ದೇವೆ ಎಂಬ ನಂಬಿಕೆ ಕಾಲು ಕೆಳಗಿನ ನೆಲದಂತೆ ಕುಸಿಯುತ್ತಿದೆ.

ಭಾರತದಲ್ಲಿ ವೈಚಾರಿಕ ಸಂಘರ್ಷ ಇಂದು ಬಿನ್ನೆಯದಲ್ಲ; ಅದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕ್ರಿಸ್ತ ಪೂರ್ವ ಆರು ನೂರು ವರ್ಷಗಳ ಹಿಂದೆ ಗೌತಮ ಬುದ್ಧನಿಗಿಂತಲೂ ಮೊದಲು  ಈ ದೇಶದಲ್ಲಿ ಆಸ್ತಿಕವಾದ ಮತ್ತು ನಾಸ್ತಿಕವಾದ (ಭೌತಿಕವಾದ) ನಡುವೆ ನಂಬಿಕೆಯ ವಿಚಾರದಲ್ಲಿ ಸಂಘರ್ಷವಿತ್ತು. ವೇದ,ಉಪನಿಷತ್ತುಗಳ ಕಾಲದಲ್ಲಿ ಯಜ್ಞ, ಯಾಗಗಳು ಮತ್ತು ಬ್ರಾಹ್ಮಣರ ಪ್ರಾಣಿಬಲಿಗಳನ್ನು ಉಗ್ರವಾಗಿ ಖಂಡಿಸಿದ ಚಾರ್ವಾಕನಂತಹ ವಿಚಾರವಾದಿಯ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮುಕ್ತವಾದ ಅವಕಾಶವಿತ್ತು. ಹಾಗಾಗಿ ಈ ನೆಲದಲ್ಲಿ ಲೋಕಾಯುತ ದರ್ಶನ ವೆಂಬ ವಾಸ್ತವವಾದವೊಂದು ಬೆಳೆದು ಬರಲು ಸಾಧ್ಯವಾಯಿತು.
ಕ್ರಿಸ್ತಪೂರ್ವ ಆರನೇ ಶತಮಾನದಲ್ಲಿ ಬದುಕಿದ್ದ ಬುದ್ಧನ ಕಾಲದಲ್ಲಿ ಭಾರತದಲ್ಲಿ  ಅಸ್ತಿತ್ವದಲ್ಲಿದ್ದ ಬ್ರಾಹ್ಮಣಗಳು ಎಂಬ ರ್ಶನ ಅಥವಾ ಸಿದ್ಧಾಂತಕ್ಕೆ ವಿರುದ್ಧವಾಗಿ ಒಟ್ಟು ಅರವತ್ತೇರಡು  ಸಿದ್ಧಾಂತಗಳು ಅಸ್ತಿತ್ವಲ್ಲಿದ್ದವು. ಇವುಗಳಲ್ಲಿ ಆರು ದರ್ಶನಗಳು ಅತಿ ಮುಖ್ಯ ದರ್ಶನಗಳಾಗಿದ್ದವು. ಪುರಾಣ ಕಸ್ಸಪನ ಅಕ್ರಿಯವಾದ, ಮಖಾಲಿ ಘೋಷಾಲನ ನಿಯತಿವಾದ, ಅಜಿತ ಕೇಶಕಂಬಲ ಎಂಬಾತನ ಉಚ್ಛೇದವಾದ, ಪಕುಧ ಕಚ್ಚಯಾನ ಎಂಬುವನು ಪ್ರತಿಪಾದಿಸಿದ ಅನ್ಯೋನ್ಯವಾದ,ಸಂಜಯ ಬೇಲಪತ್ತ ಎಂಬಾತನ ವಿಕ್ಷೇಪವಾದ ಮತ್ತು ಮಹಾವೀರನು ಪ್ರಸ್ತುತಪಡಿಸಿದ ಚಾತುರ್ಯಾಮ ಸಂವರವಾದ ಅಂದರೆ, ಕೊಲ್ಲದಿರುವುದು, ಕಳ್ಳತನ ಮಾಡದಿರುವುದು, ಆಸೆಯನ್ನು ಹೊಂದದಿರುವುದು ಹಾಗೂ ಬ್ರಹ್ಮಚರ್ಯೆಯನ್ನು ಪಾಲಿಸುವುದು ಇವುಗಳು ಅಸ್ತಿತ್ವದಲ್ಲಿದ್ದವು. ಪರಸ್ಪರ ವಿಚಾರಗಳಲ್ಲಿ ಮತ್ತು ನಂಬಿಕೆಗಳಲ್ಲಿ ಭಿನ್ನತೆ ಇದ್ದರೂ ಸಹ ಈ ಪಂಥಗಳು ಕತ್ತಿ ಹಿರಿದು ಹೋರಾಡಲಿಲ್ಲ. ಅಥವಾ ಪರಸ್ಪರ ಅವಹೇಳನ ಮಾಡುತ್ತಾ ಹಿಂಸೆಯನ್ನು ಪ್ರಚೋದಿಸಲಿಲ್ಲ. ಇಂತಹ ಭವ್ಯ ಇತಿಹಾಸವಿರುವ ಈ ನೆಲದಲ್ಲಿ ಇಂದು ದೇಶಭಕ್ತಿ ಎಂಬುದು ಪ್ರತಿಯೊಬ್ಬ ಮನುಷ್ಯ ತನ್ನ ಜೀವವನ್ನು ಪಣಕ್ಕೊಡ್ಡುವ ಸ್ಥಿತಿ ಬಂದೊದಗಿದೆ. ಈ ಸಂದರ್ಭದಲ್ಲಿ ನನ್ನ ಕವಿಮಿತ್ರ ಪೀರ್ ಭಾಷ ಬರೆದ ಕವಿತೆಯ ಸಾಲುಗಳು ನೆನಪಾಗುತ್ತಿವೆ.
ಅಕ್ಕಾ ಸೀತಾ, ನಾವಿಬ್ಬರೂ ಇಲ್ಲಿ ಕಳಂಕಿತರು/ ನೀನು ಪಾವಿತ್ರ್ಯಕ್ಕೆ, ನಾನು ದೇಶಭಕ್ತಿಗೆ/ ಪ್ರತಿದಿನ ಇಲ್ಲಿ ಕೊಂಡ ಹಾಯಬೇಕು?
ಈ ಕವಿತೆಯ ಸಾಲುಗಳು ಈ ದೇಶ ತಲುಪಿರುವ ಅಧೋಗತಿಗೆ ಮತ್ತು ಇಲ್ಲಿನ ಜನರ ಭೌದ್ಧಿಕ ದಿವಾಳಿತನಕ್ಕೆ ಸಾಕ್ಷಿ ಎಂಬಂತಿವೆ.
ನಮ್ಮ ನೆರೆಯ ಆಂಧ್ರಪ್ರದೇಶದ ಚಿಂತಕ ಹಾಗೂ ಹೈದರಾಬಾದಿನ ಮೌಲನಾ ಅಜಾದ್ ಉರ್ದು ವಿಶ್ವ ವಿದ್ಯಾಲಯದ ಪ್ರಾಧ್ಯಾಪಕರಾದ ಪ್ರೊ.ಕಂಚನ ಐಲಯ್ಯ ಅವರು ಕಳೆದ ವಾರ ಹಿಂದೂ ಇಂಗ್ಲೀಷ್ ದಿನಪತ್ರಿಕೆಯಲ್ಲಿ ಬರೆದ “ ಆರ್ ವಿ ನೇಶನ್ ಆಫ್ ಹೈಪರ್ ನ್ಯಾಷನಲಿಸ್ಟ್?” ಎಂಬ ಲೇಖನದಲ್ಲಿ 2014 ರಿಂದ ಭಾರತದಲ್ಲಿ ಅಸಹಿಷ್ಣುತೆ ಹೇಗೆ ಮನೆ ಮಾಡಿಕೊಂಡಿತು ಎಂಬುದರ ಬಗ್ಗೆ ವಿವರವಾಗಿ ಬೆಳಕು ಚಲ್ಲಿದ್ದಾರೆ. “ನಾಲ್ಕು ವರ್ಷದ ಹಿಂದೆ ಭಾರತೀಯ ಜನತಾ ಪಕ್ಷವು ನರೇಂದ್ರಮೋದಿಯವರನ್ನು  ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ ನಂತರ ಈ ದೇಶದಲ್ಲಿ ದೇಶಭಕ್ತಿ ಎಂಬ ಪರಿಕಲ್ಪನೆಯ ಬದಲಾಯಿತು. ಮಾಧ್ಯಮಗಳ ಮೂಲಕ ಮತ್ತು ಸಾಮಾಜಿಕ ತಾಣಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡು, ಕಾಂಗ್ರೇಸ್ ಪಕ್ಷವು ಮುಸ್ಲಿಂ ಸಮುದಾಯವನ್ನು ಓಲೈಸುತ್ತಿದೆ , ಅಲ್ಪ ಸಂಖ್ಯಾತರನ್ನು ಬೆಂಬಲಿಸುತ್ತಾ ಜಾತಿಯ ಮನೋಭಾವವನ್ನು ಗಟ್ಟಿಗೊಳಿಸುತ್ತಿದೆ ಎಂದು ಹೇಳುವುದರ ಮೂಲಕ ಬಿ.ಜೆ.ಪಿ.ಯನ್ನು ಅಧಿಕಾರಕ್ಕೆ ತಂದರೆ, ಸಮಾನ ನಾಗರೀಕ ಹಕ್ಕನ್ನು ಜಾರಿಗೊಳಿಸುತ್ತೆವೆ, ಗುಜರಾಜ್ ಮಾದರಿಯ  ಅಭಿವೃದ್ಧಿಯನ್ನು ಜಾರಿಗೊಳಿಸುತ್ತೇವೆ ಎಂಬ ಉನ್ಮಾದದ ಮಾತುಗಳ ಮೂಲಕ ಹದಿ ಹರೆಯದ ಯುವಕರ ಮನಸ್ಸನ್ನು ಕಲುಷಿತಗೊಳಿಸಲಾಯಿತು.
2014 ರಲ್ಲಿ ನರೇಂದ್ರಮೋದಿಯವರ ನೇತೃತ್ವದಲ್ಲಿ ಬಿ.ಜೆ.ಪಿ. ಪಕ್ಷವು ದೇಶದಲ್ಲಿ ಅಧಿಕಾರಕ್ಕೆ ಬಂದ ನಂತರ,  ದೇಶಾದ್ಯಂತ ಅಸಹಿಷ್ಣುತೆ ತಲೆ ಎತ್ತಿತು. ಹೈದರಾಬಾದ್ ವಿ.ವಿ.ಯ ವೇಮಲ ಪ್ರಕರಣ, ದೆಹಲಿಯ ಜವಹರಲಾಲ್ ನೆಹರೂ ವಿ.ವಿ. ಕನಃಯ್ಯ ಪ್ರಕರಣ ಸಾವುಗಳಿಗೆ ಸಾಕ್ಷಿಯಾಗಿದೆ. ಮಹಾರಾಷ್ಟ್ರದ ಶಿವಸೇನೆಯ ಮಾದರಿಯಲ್ಲಿ ಉಗ್ರವಾದವನ್ನು ಧರ್ಮದ ಹೆಸರಿನಲ್ಲಿ ಹರಿಯಬಿಟ್ಟ ಕಾರಣ  ಗೋರಕ್ಷಕರೆಂಬ ಗೂಂಡಾ ಪಡೆ ದೇಶಾದ್ಯಂತ ತಲೆ ಎತ್ತಿತು. ಉತ್ತರ ಪ್ರದೇಶ, ರಾಜಸ್ಥಾನ, ಹರಿಯಾಣ, ಕರ್ನಾಟಕ ಸೇರಿದಂತೆ ಹಲವೆಡೆ ಗೋವು ಸಾಗಿಸುತ್ತಿದ್ದವರ ಮೇಲೆ ಮಾರಣಾಂತಿಕ ಹಲ್ಲೆಯನ್ನು ಮಾಡಲಾಯಿತು. ಜೊತೆಗೆ ಕೊಲ್ಲಲಾಯಿತು.  ಉತ್ತರ ಪ್ರದೇಶದ ದಾದ್ರಿ ಎಂಬ ಹಳ್ಳಿ ಮುಸ್ಲಿಂ ನ ಮನೆಯಲ್ಲಿ ಗೋಮಾಂಸ ಇಡಲಾಗಿದೆ ಎಂಬ ಗಾಳಿ ಸುದ್ದಿಯನ್ನು ನಂಬಿ ಮನೆಯ ಯಜಮಾನನ್ನು ನಿರ್ಧಯವಾಗಿ ಕೊಲ್ಲಲಾಯಿತು. ಹೀಗೆ ಸವಿವರವಾಗಿ ದಾಖಲಿಸಿದ್ದಾರೆ.
ತನ್ನದೇಶದ ಬಡತನದ ಬಗ್ಗೆ ಒಂದಿಷ್ಟು ಕಾಳಜಿ ಮತ್ತು ವಿವೇಕವಿಲ್ಲದ ಅನಿಷ್ಠ ರಾಜಕಾರಣಿಗಳಿಂದಾಗಿ ಪಾಕಿಸ್ತಾನದಲ್ಲಿ ಭಾರತದ ವಿರುದ್ಧ ಭಯೋತ್ಪಾದನೆ ತಲೆ ಎತ್ತಿತು. ಇಲ್ಲಿ ಭಾರತದಲ್ಲಿ ಪಾಕಿಸ್ತಾನದ ಮೇಲೆ ದ್ವೇಷ ಸಾಧಿಸುವುದೆಂದರೆ, ಮುಸ್ಲಿಂರ ಮೇಲೆ ಹಗೆತನವನ್ನು ಸಾಧಿಸುವುದು ಎಂಬಂತಾಗಿದೆ.. ಇದರ ಜೊತೆಗೆ ಇದು  ದೇಶಭಕ್ತಿಗೆ ಮತ್ತು ಧರ್ಮಕ್ಕೆ ನೀಡುವ ಗೌರವ ಎಂಬ ಅಪಕ್ವ ಪರಿಕ್ಲಪನೆಯನ್ನು ದೇಶದ್ಯಾಂತ ಹರಡಲಾಗುತ್ತಿದೆ. ಇದರ ಪರಿಣಾಮವಾಗಿ ಕಲ್ಬುರ್ಗಿ, ದಾಬೋಲ್ಕರ್, ಪನ್ಸಾರೆ ಯಂತಹ ವಿಚಾರವಾದಿಗಳು ಧರ್ಮದ ಅನಿಷ್ಟಗಳ ಬಗ್ಗೆ ಧ್ವನಿ ಎತ್ತಿದ ಒಂದೇ ಕಾರಣಕ್ಕಾಗಿ ಅವರನ್ನು ಹತ್ಯೆ ಮಾಡಲಾಯಿತು. ಇದೀಗ ಮಾದ್ಯಮಗಳು ಮತ್ತು ಪತ್ರಕರ್ತರ ವಿರುದ್ಧ ದಾಳಿ ಹಾಗೂ, ಜೀವ ಬೆದರಿಕೆಯನ್ನು ಹಾಕಲಾಗುತ್ತಿದೆ.

ಈ ಜಗತ್ತಿನಲ್ಲಿ ಯಾವುದೇ ವಿಚಾರ, ವ್ಯಕ್ತಿ, ಅಥವಾ ಅಧಿಕಾರ, ಸಿಂಹಾಸನಗಳು ಶಾಶ್ವತವಲ್ಲ. ಜಗತ್ತನ್ನು ಮಣಿಸಲು ಹೊರಟ ಸರ್ವಾಧಿಕಾರಿಗಳು ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ. ಧರ್ಮ ಅಥವಾ ವ್ಯಕ್ತಿ ಪೂಜೆಯಂತಹ ಅಭಿಮಾನ ಇಲ್ಲವೇ ಆರಾಧನಾ ಸಂಸ್ಕೃತಿಯು ನಮ್ಮಲ್ಲಿ ಕುರುಡು ನಂಬಿಕೆಗಳನ್ನು ಬೆಳಸಬಹುದೇ ಹೊರತು ನಾಗರೀಕ ಪ್ರಜ್ಞೆಯನ್ನು ಬೆಳಸುವುದಿಲ್ಲ. ಅಮೇರಿಕಾದಲ್ಲಿ ನಿಗ್ರೂ ಗಳ ಅಂದರೆ ಕರಿಯರ ವಿರುದ್ಧ ಬಿಳಿಯರ ಆಕ್ರೋಶ ಮುಗಿಲು ಮುಟ್ಟಿದ್ದ ಸಂದರ್ಭದಲ್ಲಿ ಕರಿಯರಿಗೆ ಎಲ್ಲಾ ವಿಧವಾದ ಹಕ್ಕುಗಳನ್ನು ದಯಪಾಲಿಸಿ ಅಂತಿಮವಾಗಿ 1962 ರಲ್ಲಿ ಹಂತಕರ ಗುಂಡಿಗೆ ಬಲಿಯಾದ ಅಂದಿನ ಅದ್ಯಕ್ಷರಾಗಿದ್ದ ಜಾನ್ ಎಫ್. ಕೆನಡಿಯವರು ತಾವು ಸಾಯುವ ಮುನ್ನ ಹೇಳಿದ್ದ “ ನಾವೆಲ್ಲಾ ಆ ದೇವರ ಸೃಷ್ಟಿ. ಇದರಲ್ಲಿ ಕಪ್ಪು-ಬಿಳುಪು ಎಂಬ ತಾರತಮ್ಯವಿರಬಾರದು. ಎಲ್ಲರ ಮೈ ನಲ್ಲಿ ಹರಿಯುವುದು ಒಂದೇ ರೀತಿಯ ರಕ್ತ” ಎಂಬ ಮೌಲ್ಯಯುತವಾದ ಮಾತುಗಳು ಸಧ್ಯದ ಸ್ಥಿತಿಯಲ್ಲಿ ಭಾರತಕ್ಕೆ ಹೇಳಿ ಮಾಡಿಸಿದಂತಿವೆ. ನಾವು ದೇಶಭಕ್ತರಾಗುವ ಮುನ್ನ ಅಪ್ಪಟ ಮನುಷ್ಯರಾಗಬೇಕಿದೆ.
(ಕರಾವಳಿ ಮುಂಜಾವು ದಿನಪತ್ರಿಕೆಯ " ಜಗದಗಲ" ಅಂಕಣಕ್ಕಾಗಿ ಬರೆದ ಲೇಖನ)




ಶುಕ್ರವಾರ, ಜೂನ್ 2, 2017

ಭಾರತದ ಕೃಷಿ ಮೇಲಿನ ತೆರಿಗೆ; ಒಂದು ಜಿಜ್ಞಾಸೆ



ಕೃಷಿ ಪ್ರಧಾನವಾದ ಭಾರತದಲ್ಲಿ ಸ್ವಾತಂತ್ರ್ಯಾನಂತರದ ದಿನಗಳಲ್ಲಿ  ಕೃಷಿರಂಗವನ್ನು  ಈವರೆಗೆ ಯಾವ ಸರ್ಕಾರಗಳೂ  ತೆರಿಗೆಗೆ ಒಳಪಡಿಸಿಲ್ಲ. ಆದರೆ, ಇತ್ತೀಚೆಗೆ ಶ್ರೀಮಂತ ರೈತರ ಮೇಲೆ ತೆರಿಗೆ ವಿಧಿಸಬೇಕೆಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಅಧಿಕ ಪ್ರಮಾಣದಲ್ಲಿ ಭೂಮಿಯನ್ನು ಹೊಂದಿರುವ ಮತ್ತು  ಕೃಷಿಯಿಂದ ಲಾಭ ಪಡೆಯುತ್ತಿರುವ ರೈತರು, ವಾಣಿಜ್ಯ ಬೆಳೆಗಳನ್ನು ಬೆಳೆದು ವಾರ್ಷಿಕವಾಗಿ ಹತ್ತು ಲಕ್ಷ ರೂಪಾಯಿಗಿಂದ ಅದಿಕ ಲಾಭ ಪಡೆಯುತ್ತಿರುವ ರೈತರ ಮೇಲೆ ತೆರಿಗೆ ವಿಧಿಸುವುದು ಸೂಕ್ತ ಎಂಬ ಅಭಿಪ್ರಾಯವನ್ನು ಕೆಲವು ಆರ್ಥಿಕ ತಜ್ಞರು ವ್ಯಕ್ತಪಡಿಸಿದ್ದಾರೆ.
ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರದಲ್ಲಿ ಕೃಷಿಯಲ್ಲಿ ತೊಡಗಿಕೊಂಡಿರುವ ಶೇಕಡ ತೊಂಬತ್ತರಷ್ಟು ರೈತರು ಸಣ್ಣ ಹಿಡುವಳಿದಾರರಾಗಿದ್ದಾರೆ.  ಇತ್ತೀಚೆಗಿನ ದಿನಗಳಲ್ಲಿ ನಿರಂತರವಾಗಿ  ಕೃಷಿ ಉತ್ಪಾದನಾ ವೆಚ್ಚವು ಏರಿಕೆಯಾಗುತ್ತಿದೆ. ತಾವು ಬೆಳೆದ ಫಸಲಿಗೆ ಸೂಕ್ತ ಬೆಲೆಯಿಲ್ಲದ ಕಾರಣ ರೈತರು ಆತ್ಮಹತ್ಯೆಯ ಮೂಲಕ ಸಾವಿನ ಮನೆಯ ಕದ ಬಡಿಯುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ರೈತರು ಮಾಡಿದ್ದ ಕೃಷಿ ಸಾಲವು ಬ್ಯಾಂಕುಗಳಲ್ಲಿ ಬಡ್ಡಿಯೊಂದಿಗೆ ಬೆಳೆದು ಇಡೀ ಕುಟುಂಬವನ್ನು ಸಾಲದ ಸುಳಿಯಲ್ಲಿ ಸಿಲುಕಿಸಿದೆ. ಇಂತಹ ಧಾರಣ ಸ್ಥಿತಿಯಲ್ಲಿ ಕೃಷಿಯ ಮೇಲೆ ತೆರಿಗೆ ತರವಲ್ಲ ಎಂಬುದು ಬಹುತೇಕ ತಜ್ಞರ ಅಭಿಪ್ರಾಯವಾಗಿದೆ. ಇದು ಒಪ್ಪತಕ್ಕ ಸಂಗತಿಯೂ ಹೌದು. ಆದರೆ. ಕೃಷಿಯ ಮೂಲಕ ತೆರಿಗೆ ತಪ್ಪಿಸಿಕೊಳ್ಳಲು ದೇಶದ ಶ್ರಿಮಂತ ಉದ್ಯಮಿಗಳು, ಸಿನಿಮಾ ನಟರು, ಕ್ರೀಡಾಪಟುಗಳು, ಭ್ರಷ್ಟ ಅಧಿಕಾರಿಗಳು ಮತ್ತು ರಾಜಕಾರಣಿಗಳು ನೆಪ ಮಾತ್ರಕ್ಕೆ ಒಂದಿಷ್ಟು ಭೂಮಿಯನ್ನು ಹೊಂದುವುದರ ಮೂಲಕ  ಬೇಸಾಯದಲ್ಲಿ   ನಷ್ಟವನ್ನು ತೋರುವುದು ಇಲ್ಲವೆ ಕೃಷಿ ಉತ್ಪನ್ನಗಳ ಮೂಲಕ ಲಕ್ಷಾಂತರ ರೂಪಾಯಿ ಆದಾಯವನ್ನು ತೋರಿಸಿ  ತೆರಿಗೆ ವಿನಾಯಿತಿ ಪಡೆಯುತ್ತಿರುವುದು ಗುಟ್ಟಿನ ಸಂಗತಿಯೇನಲ್ಲ. ಇಂತಹವರ ಮೇಲೆ ಕಡಿವಾಣ ಹಾಕುವ ಬಗೆ ಹೇಗೆ? ಇದು ನಮ್ಮ ಮುಂದಿರುವ ಸವಾಲು.
ಕೆಲವು ಉದ್ಯಮಿಗಳು ಮತ್ತು ಅಧಿಕಾರಿಗಳು ತಾವು ಹೊಂದಿರುವ ಹತ್ತು ಎಕರೆ ಭೂಮಿಯಲ್ಲಿ ವಾರ್ಷಿಕ  ಐವತ್ತು ಲಕ್ಷ ರೂಪಾಯಿಗಳಿಂದ ಒಂದು ಕೋಟಿ ರೂಪಾಯಿವರೆಗೂ ಆದಾಯ ತೋರಿಸಿರುವ ಉದಾಹರಣೆಗಳುಂಟು. ಈ ನಕಲಿ ರೈತರು ಭೂಮಿಗೆ ನೋಟುಗಳನ್ನು ಬಿತ್ತಿ ನೋಟುಗಳನ್ನೇ ಫಸಲುಗಳಾಗಿ ಪಡೆದಿರುವಂತೆ ಕಾಣುತ್ತದೆ. ಅತ್ಯಂತ ಶೋಚನೀಯ ಹಾಗೂ ನಿರಾಶಾದಾಯಕವಾಗಿರುವ ಭಾರತದ ಕೃಷಿಯನ್ನು ಉತ್ತೇಜನಗೊಳಿಸಲು ನೀಡಿರುವ ತೆರಿಗೆ ವಿನಾಯಿತಿಯು ಈ ರೀತಿಯಲ್ಲಿ ಭ್ರಷ್ಟ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಉದ್ಯಮಿಗಳ ಪಾಲಾಗುತ್ತಿರುವುದು ದುರಂತವೇ ಸರಿ.. ಇಂತಹ ವ್ಯವಸ್ಥೆಗೆ ಕಡಿವಾಣ ಹಾಕುವುದು ಇಂದಿನ ಅಗತ್ಯಗಳಲ್ಲಿ ಒಂದಾಗಿದೆ.

ಭಾರತದ ಕೃಷಿ ರಂಗದ ಮೇಲೆ ತೆರಿಗೆ ವಿದಿಸಬೇಕೆ? ಬೇಡವೆ? ಈ ಕುರಿತ ಜಿಜ್ಞಾಸೆ ಇಂದು ನಿನ್ನೆಯದಲ್ಲ. ಬಹಳ ವರ್ಷಗಳಿಂದ ಇದು ಚಾಲ್ತಿಯಲ್ಲಿದೆ.  ಇದಕ್ಕೊಂದು ತಾರ್ಕಿಕ ಅಂತ್ಯವನ್ನು ಕಾಣಿಸಬೇಕಾದ ಅಗತ್ಯವಿದೆ..ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದ ಹಲವಾರು ಸಂಸ್ಥಾನಗಳ ದೊರೆಗಳು ಜಮೀನ್ದಾರರ ಮೇಲೆ ತೆರಿಗೆ ಹಾಕುವ ಪದ್ಧತಿಯನ್ನು ಜಾರಿಗೆ ತಂದಿದ್ದರು.. ಸಾವಿರಾರು ಎಕರೆ ಭೂಮಿಯನ್ನು ಹೊಂದಿದ್ದ ಶ್ರೀಮಂತ ಜಮೀನ್ದಾರರು ಸಣ್ಣ ರೈತರಿಗೆ ಗೇಣಿ ಪದ್ಧತಿಯಲ್ಲಿ ಅಥವಾ ನಿರ್ಧಿಷ್ಟ ಪ್ರಮಾಣದ ಪಾಲು ಪಡೆಯುವ ಷರತ್ತಿನ ಮೇಲೆ ಭೂಮಿಯನ್ನು ನೀಡಿ, ಅದರಿಂದ ಬರುತ್ತಿದ್ದ ಲಾಭದಲ್ಲಿ ಸಂಸ್ಥಾನದ ದೊರೆಗಳಿಗೆ ತೆರಿಗೆ ಪಾವತಿ ಮಾಡುತ್ತಿದ್ದರು. ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿ ಕೂಡ ಇದೇ ಪದ್ಧತಿಯನ್ನು ಅನುಸರಿಸುತ್ತಿತ್ತು. ಆನಂತರ 1925 ರಲ್ಲಿ ಕೃಷಿ ಮೇಲೆ ತೆರಿಗೆ ವಿದಿಸುವ ಸಲುವಾಗಿ ಒಂದು ಸಮಿತಿಯನ್ನು ಸಹ ನೇಮಕ ಮಾಡಿತ್ತು.
ಭಾರತದಲ್ಲಿ 1891 ರಿಂದ 1947 ರ ಅವಧಿಯಲ್ಲಿ ಕೃಷಿಯ ಬೆಳವಣಿಗೆಯನ್ನು ಗಮನಿಸಿದರೆ ಆಶಾದಾಯಕವಾಗಿಲ್ಲ. ವಾರ್ಷಿಕವಾಗಿ ಶೇಕಡ 0.37% ಪ್ರಮಾಣದಲ್ಲಿ ಬೆಳೆದಿದೆ.ಇದರಲ್ಲಿ ಆಹಾರ ಧಾನ್ಯಗಳ ಪ್ರಮಾಣ ಶೇಕಡ 0.11% ರಷ್ಟು ಇದ್ದರೆ, ವಾಣಿಜ್ಯ ಬೆಳೆಗಳ ಪ್ರಮಾಣ ಶೇಕಡ 1.31% ಪ್ರಮಾಣದಲ್ಲಿ ವೃದ್ಧಿಯಾಗಿದೆ.ಇವುಗಳ ನಡುವೆ ದೇಶದ ಜನಸಂಖ್ಯೆಯ ಪ್ರಮಾಣ ಶೇಕಡ 0.67% ರಷ್ಟು ಪ್ರಮಾನದಲ್ಲಿ ಬೆಳದಿದೆ. ಇವೊತ್ತಿಗೂ ಭಾರತದಲ್ಲಿನ ಜನಸಂಖ್ಯೆಯ  ಶೇಕಡ 49.7% ರಷ್ಟು ಮಂದಿ ಕೃಷಿ ರಂಗವನ್ನು ಅವಲಂಬಿಸಿದ್ದಾರೆ.
ಭಾರತದಲ್ಲಿ ಜಾಗತೀಕರಣ ವ್ಯವಸ್ಥೆಯು ಕಾಲಿಟ್ಟ ನಂತರ ನವ ಉದಾರಿಕರಣದ ಯುಗದಲ್ಲಿ  ದೇಶದ ಒಟ್ಟು ಆಂತರೀಕ ಉತ್ಪಾದನೆಯ ( ಜಿ.ಡಿ.ಪಿ.) ಪ್ರಮಾಣದಲ್ಲಿ ಕೃಷಿಯ ಪಾತ್ರ ಗಣನೀಯವಾಗಿ ಕುಸಿಯುತ್ತಾ ಬಂದಿದೆ. 1991 ರಲ್ಲಿ ಕೃಷಿಯ ಪಾತ್ರವು  ಜಿ.ಡಿ.ಪಿ.ಯಲ್ಲಿ ಶೇಕಡ 32% ರಷ್ಟು ಇದ್ದದ್ದು 2016 ರ ವೇಳೆಗೆ ಕೇವಲ ಶೇಕಡ 15% ಕ್ಕೆ ಕುಸಿದಿದೆ. ಈ ಅಂಕಿ ಅಂಶಗಳು ಭಾರತದಲ್ಲಿ ಕೃಷಿ ಲೋಕವು ಶೋಚನೀಯ ಸ್ಥಿತಿಯಲ್ಲಿದೆ ಎಂಬುದನ್ನು ಎತ್ತಿ ತೋರಿಸುತ್ತದೆ. ಈ ಕಾರಣಕ್ಕಾಗಿ  ಕೃಷಿ ಮೇಲಿನ ತೆರಿಗೆ ಎಷ್ಟರ ಮಟ್ಟಿಗೆ ಸೂಕ್ತ ಎಂಬ ಪ್ರಶ್ನೆ ಉದ್ಭವವಾಗುತ್ತದೆ.  ಪ್ರಖ್ಯಾತ ಆರ್ಥಿಕ ವಿದ್ವಾಂಸರಾಗಿದ್ದ ಡಾ.ಅಂಬೆಡ್ಕರ್ ರವರೂ ಸಹ ಕೃಷಿ ಮೇಲೆ ತೆರಿಗೆ ವಿಧಿಸಬೇಕೆಂದು ಸಲಹೆ ನೀಡಿದ್ದರು. ಎರಡರಿಂದ ಐದು ಹೆಕ್ಟೇರ್ ಭೂಮಿ  ( ಒಂದು ಹೆಕ್ಟೇರ್ ಅಂದರೆ ಎರಡೂವರೆ ಎಕರೆ ಭೂಮಿ ಅಥವಾ 100 ಗುಂಟೆ ಜಮೀನು) ಹೊಂದಿರುವ ರೈತರನ್ನು ತೆರಿಗೆಯಿಂದ ಹೊರತು ಪಡಿಸಿ, ಶ್ರೀಮಂತ ಜಮೀನ್ದಾರರ ಮೇಲೆ ತೆರಿಗೆ ವಿಧಿಸಬಹುದು ಎಂಬುವುದು ಅವರ ನಿಲುವಾಗಿತ್ತು.
ಸ್ವಾತಂತ್ರ್ಯಾನಂತರ 1972 ರಲ್ಲಿ ಕೇಂದ್ರ ಸರ್ಕಾರವು ನೇಮಿಸಿದ್ದ ಕೆ.ಎನ್. ರಾಜಾ ನೇತೃತ್ವದ ಸಮಿತಿಯು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿ, ಅಂಬೇಡ್ಕರ್ ಮಾದರಿಯಲ್ಲಿ ಸಲಹೆಯನ್ನು ನೀಡಿತ್ತು. ಆನಂತರ 2002 ರಲ್ಲಿ ನೇಮಕವಾಗಿದ್ದ ಕೇಲ್ಕರ್ ಸಮಿತಿಯು ಶೇಕಡ 95 ರಷ್ಟು ಮಂದಿ ರೈತರು ಪಾರಂಪರಿಕವಾಗಿ ಕೃಷಿಯನ್ನು ಅವಲಬಿಸಿದ್ದು ತೆರಿಗೆಗೆ ಒಳಪಡಲಾರದಷ್ಟು ಕನಿಷ್ಟ ಆದಾಯ ಪಡೆಯುತ್ತಿದ್ದಾರೆ ಎಂಬ ವರದಿಯನ್ನು ನೀಡಿತ್ತು. 2012 ರಲ್ಲಿ ಭಾರತದಲ್ಲಿ ಪ್ರತಿಯಂದು ರೈತ ಕುಟುಂಬದ ಮಾಸಿಕ ಸರಾಸರಿ ಆದಾಯ ಕೇವಲ 6.491 ರುಪಾಯಿ ಇತ್ತು. ಅಂದರೆ ವರ್ಷಕ್ಕೆ ರೈತನೊಬ್ಬನ ಆದಾಯ 75 ಸಾವಿರ ರೂಪಾಯಿ ದಾಟಲಾರದಷ್ಟು ಶೋಚನೀಯ ಸ್ಥಿತಿಯಲ್ಲಿದೆ.
ಈಗ ಕೇಂದ್ರ ಸರ್ಕಾರವು ಗುರುತಿಸಿರುವ ದೊಡ್ಡ ಪ್ರಮಾಣದ ರೈತರು ಮತ್ತು ಶ್ರೀಮಂತ ಪ್ಲಾಂಟೇಶನ್  ಮಾಲೀಕರು  ಇವರುಗಳ  ಸಂಖ್ಯೆ  9 ಲಕ್ಷದ 73 ಸಾವಿರ ಎಂದು ಅಂದಾಜಿಸಲಾಗಿದೆ. ಇವರೆಲ್ಲರೂ ವಾರ್ಷಿಕವಾಗಿ ಐದು ಲಕ್ಷ ರೂಪಾಯಿಗೂ ಮೇಲ್ಪಟ್ಟು ಆದಾಯ ಪಡೆಯುತ್ತಿದ್ದಾರೆ. ಇವರಿಗೆ ತೆರಿಗೆ ವಿಧಿಸಿದರೆ,  ಕೇಂದ್ರ ಸರ್ಕಾರಕ್ಕೆ ಸಿಗಬಹುದಾದ ವಾರ್ಷಿಕ ಆದಾಯ 1.200 ಕೊಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇಲ್ಲಿ ತೆರಿಗೆ ವಿಧಿಸುವ ಮುನ್ನ ಸರ್ಕಾರವು ಮಳೆಯಾಶ್ರಿತ ಒಣ ಭೂಮಿಯ ರೈತರಿಗೆ ರಿಯಾಯಿತಿಯನ್ನು ನೀಡಲೇ ಬೇಕಾಗುತ್ತದೆ. ಕೇವಲ ಮಳೆಯನ್ನು ನಂಬಿ ಬದುಕುವ ಇಂತಹ ರೈತರು ಒಮ್ಮೊಮ್ಮೆ ಎರಡು ಮೂರು ವರ್ಷಗಳ ಕಾಲ ಮಳೆ ಇಲ್ಲದೆ ಬದುಕುವ ಸ್ಥಿತಿ ಇರುತ್ತದೆ. ಜೊತೆಗೆ ನೀರಾವರಿ ಅಥವಾ ವಾಣಿಜ್ಯ ಬೆಳೆ ಬೆಳೆದು ಲಾಬ ತೋರಿಸುತ್ತಿರುವ ರೈತರಲ್ಲಿ ಪಾರಂಪರಿಕವಾಗಿ  ಕೃಷಿಯನ್ನು ವೃತ್ತಿಯನ್ನಾಗಿ ಮಾಡಿಕೊಂಡಿರುವ ರೈತರು ಮತ್ತು ಬೇರೆ ವೃತ್ತಿ ಅಥವಾ ಉದ್ಯೋಗದಲ್ಲಿ ಇದ್ದುಕೊಂಡು ಇತ್ತೀಚೆಗಿನ ವರ್ಷಗಳಲ್ಲಿ ಭೂಮಿಯನ್ನು ಖರೀದಿಸಿ  ರೈತರೆಂಬ ಮುಖವಾಡ ಹಾಕಿಕೊಂಡಿರುವ ಖದೀಮರನ್ನು ಸರ್ಕಾರವು ನಿಖರವಾಗಿ ಗುರುತಿಸಬೇಕು. ಪಾರಂಪರಿಕ ಕೃಷಿಕರಿಗೆ ಐದರ ಬದಲು ಹತ್ತು ಲಕ್ಷ ರೂಪಾಯಿವರೆಗೆ ವರೆಗೆ ವಿನಾಯಿತಿ ನೀಡುವುದು ಒಳಿತು.
ಇವೆಲ್ಲಕ್ಕಿಂತ ಮಿಗಿಲಾಗಿ ಸರ್ಕಾರಗಳು ಕೃಷಿ ರಂಗವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲು ತಮ್ಮ ಯೋಜನೆಗಳಲ್ಲಿ ಆದ್ಯತೆ ನೀಡಬೆಕು. ಭಾರತದ ಯಾವುದೇ ಭಾಗದಲ್ಲಿ ಬೆಳೆದ ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಲೆಯನ್ನು ನಿಗದಿ ಪಡಿಸುವುದರ ಮೂಲಕ  ಎಂತಹದ್ದೇ ಸಮಯದಲ್ಲೂ  ನಿಗದಿ ಪಡಿಸಿದ ಬೆಲೆಗಿಂತ ಕಡಿಮೆ ದರದಲ್ಲಿ ದಲ್ಲಾಳಿಗಳು ಅಥವಾ ಸಗಟು ಮಾರಾಟಗಾರರು ಕೊಳ್ಳುವಂತಿಲ್ಲ ಎಂಬ ನಿಯಮವನ್ನು ಜಾರಿಗೆ ತರಬೇಕಿದೆ.
ನಾವು ಬದುಕುತ್ತಿರುವ  ಈ ಇಪ್ಪತ್ತೊಂದನೆಯ ಶತಮಾನದಲ್ಲಿ ಎಂತಹ ವಿಸ್ಮೃತಿಗೆ ದೂಡಲ್ಪಟ್ಟಿದ್ದೀವಿ ಎಂದರೆ, ಮಲ್ಟಿಪ್ಲೆಕ್ಸ್ ಥಿಯಟರ್ ಗಳಲ್ಲಿ  ಅಥವಾ ಮಾಲ್ ಗಳಲ್ಲಿ ಒಂದು ಲೀಟರ್ ನೀರಿಗೆ 50 ರೂಪಾಯಿ ನೀಡಲು ಸಿದ್ದರಿದ್ದೀವಿ. ಆದರೆ, ರೈತನಿಗೆ ಒಂದು ಲೀಟರ್ ಹಾಲಿಗೆ 30 ರೂಪಾಯಿ ನೀಡಲು ಸಿಡಿಮಿಡಿಗೊಳ್ಳುತ್ತೇವೆ. ಹೋಟೆಲ್ ಗಳಲ್ಲಿ ಒಂದು ಬಟ್ಟಲು ಟಮೊಟೊ ಸೂಪ್ ಕುಡಿದು  ಸದ್ದಿಲ್ಲದೆ 60 ರೂಪಾಯಿ ಪಾವತಿಸುತ್ತೇವೆ. ಆದರೆ, ರೈತ ಬೆಳೆದ ಒಂದು  ಕೆ.ಜಿ. ಟಮೋಟೊ ಗೆ ಹತ್ತು ರೂಪಾಯಿ  ದರ ನೀಡಲು ಹೊಟ್ಟೆಯಲ್ಲಿ ಮಗು ಸತ್ತವರಂತೆ ವರ್ತಿಸುತ್ತೇವೆ. ಕೃಷಿ ಮತ್ತು ಕೃಷಿಕರ ಕುರಿತು ನಮ್ಮ ಧೋರಣೆಗಳು ಎಲ್ಲಿಯವರೆಗೆ ಬದಲಾಗುವುದಿಲ್ಲವೋ, ಅಲ್ಲಿಯವರೆಗೆ  ಈ ದೇಶದ ಕೃಷಿರಂಗಕ್ಕೆ ಭವಿಷ್ಯವಿಲ್ಲ ಎಂಬುವುದು ಸಾರ್ವಕಾಲಿಕ ಸತ್ಯವಾಗಿದೆ. ಈ ಕಾರಣಕ್ಕಾಗಿ ರೈತನ ಮಗ ರೈತನಾಗುವ ಕಾಲ ದೂರ ಸರಿದು ಹಲವು ವರ್ಷಗಳಾದವು. ಎಲ್ಲರೂ ಕೃಷಿಯಿಂದ ವಿಮುಖರಾಗುತ್ತಿರುವ ಈ ದಿನಮಾನಗಳಲ್ಲಿ  ಕೃಷಿಯ ತೆರಿಗೆ ಹಾಕುವುದು ಎಷ್ಟರ ಮಟ್ಟಿಗೆ ಸೂಕ್ತ ಎಂಬುದುರ ಕುರುತು ಗಂಬೀರ ಆಲೋಚನೆಯ ಜೊತೆಗೆ ಎಚ್ಚರಿಕೆಯ ಹೆಜ್ಜೆಯನ್ನು ಇಡಬೇಕಾಗಿದೆ.
( ಮಾಹಿತಿ ಸೌಜನ್ಯ- ಹಿಂದೂ.ದಿನಪತ್ರಿಕೆ, ಚಿತ್ಗಳು-ಸೌಜನ್ಯ-  ಇಂಡಿಯನ್ ಎಕ್ಸ್ ಪ್ರಸ್ ಮತ್ತು ಟೈಮ್ಸ್ ಆಫ್ ಇಂಡಿಯಾ)


( ಕರಾವಳಿ ಮುಂಜಾವು ಪತ್ರಿಕೆಯ " ಜಗದಗಲ" ಅಂಕಣಕ್ಕೆ ನರೆದ ಲೇಖನ)



ಶುಕ್ರವಾರ, ಮೇ 26, 2017

ಭಾರತದ ರಕ್ತಸಿಕ್ತ ನಕ್ಸಲ್ ಹೋರಾಟಕ್ಕೆ ಐವತ್ತು ವರ್ಷ


ಭಾರತದ ಸಾಮಾಜಿಕ ಮತ್ತು ರಾಜಕೀಯ ಬದುಕಿನಲ್ಲಿ ಅಲ್ಲೋಲ ಕಲ್ಲೋಲವೆಬ್ಬಿಸಿ ಇದೀಗ ಹಿಂಸೆ ಮತ್ತು ನೆತ್ತರಿನ ನದಿಯಲ್ಲಿ ಮಿಂದೇಳುತ್ತಿರುವ ನಕ್ಸಲ್ ಹೋರಾಟಕ್ಕೆ ಇದೇ ಮೇ  25 ರಂದು  ಐವತ್ತು ವರ್ಷ ತುಂಬಿತು. ಪಶ್ಚಿಮ ಬಂಗಾಳದ ಉತ್ತರ ಭಾಗದ ಡಾರ್ಜಿಲಿಂಗ್ ಗಿರಿಧಾಮದ ಬಳಿಯ ಸಿಲಿಗುರಿ ಎಂಬ ಪಟ್ಟಣದ ಸಮೀಪವಿರುವ ನಕ್ಸಲ್ ಬಾರಿ ಎಂಬ ಆದಿವಾಸಿಗಳು ಮತ್ತು ಕೃಷಿಕೂಲಿ ಕಾರ್ಮಿಕರು ವಾಸಿಸುತ್ತಿರುವ ಈ ಹಳ್ಳಿಯಲ್ಲಿ 1967 ರ ಮೇ ತಿಂಗಳಿ 23 ರಂದು ಪೊಲೀಸರು ಮತ್ತು ಆದಿವಾಸಿಗಳ ನಡುವಿನ  ಸಂಘರ್ಷದಲ್ಲಿ     ಆದಿವಾಸಿಗಳ ಬಿಲ್ಲಿನ ಬಾಣಕ್ಕೆ ತುತ್ತಾಗಿ ಪ ಸೋನಮ್ ವಾಂಗಡೆ ಎಂಬ ಪೊಲೀಸ್ ಅಧಿಕಾರಿ ಪ್ರಾಣ ಕಳೆದುಕೊಂಡನು..ಇದಕ್ಕೆ ಪ್ರತಿಯಾಗಿ ಹೆಚ್ಚಿನ ಪೊಲೀಸ್ ತುಕುಡಿಯೊಂದಿಗೆ  ಮೇ 25 ರಂದು ಹಳ್ಳಿಗೆ ಆಗಮಿಸಿದ ಪೊಲೀಸರು  ಒಂಬತ್ತು ಮಂದಿ ಆದಿವಾಸಿಗಳನ್ನು ಬಂದೂಕಿನ  ಮೂಲಕ ಬಲಿ ತೆಗೆದುಕೊಂಡಿದ್ದರು. ಅಮಾಯಕರಾದ ಏಳು ಮಂದಿ ಮಹಿಳೆಯರು ಮತ್ತು ಇಬ್ಬರು ಮಕ್ಕಳನ್ನು ಕೊಂದು ಹಾಕುವುದರ ಮೂಲಕ ಹೋರಾಟದ ಹಾದಿಯನ್ನು ಹಿಂಸೆಗೆ ನೂಕಿದರು. ಅಂದು ಹಿಂಸೆಯ ಮೂಲಕ ನೆಲಕ್ಕೆ ಬಿದ್ದ ನೆತ್ತರು ಇಂದಿಗೂ ಸಹ ಭಾರತದ ವಿವಿಧ ರಾಜ್ಯಗಳಲ್ಲಿ ವಿಶೇಷವಾಗಿ ಛತ್ತೀಸ್ ಗಡ್, ಮಹಾರಾಷ್ಟ್ರ, ಆಂಧ್ರಪ್ರದೇಶ ರಾಜ್ಯಗಳಲ್ಲಿ ನೆತ್ತರಿನ ಹೊಳೆಯಾಗಿ ಹರಿಯುತ್ತಿದೆ.
ನ್ಯಾಯಯುತವಾಗಿ ಮತ್ತು ಸೈದ್ಧಾಂತಿಕವಾಗಿ ಕೃಷಿ ಕೂಲಿ ಕಾರ್ಮಿಕರು  ಕಿಸಾನ್ ಸಭಾ ಎಂಬ ಸಂಘಟನೆಯ ಮೂಲಕ ನಡೆಸುತ್ತಿದ್ದ ಹಕ್ಕಿನ ಹೋರಾಟಕ್ಕೆ ಈ ಮೂಲಕ ರಕ್ತ ಸಿಕ್ತ ಅಧ್ಯಾಯವೊಂದು ಸೇರ್ಪಡೆಗೊಂಡಿತು.  ಹಿಮಾಲಯದ ತಪ್ಪಲಿನ ತೆಹ್ರಿ ಪ್ರಾಂತ್ಯಕ್ಕೆ ಸೇರಿರುವ ನಕ್ಸಲ್ ಬಾರಿ ಎಂಬ ಹೆಸರಿ ಈ ಹಳ್ಳಿಯು ಪಶ್ಚಿಮಕ್ಕೆ ನೇಪಾಳದ ಗಡಿ ಪ್ರದೇಶವನ್ನು, ಮತ್ತು ಮಿಚಿ ಎಂಬ ನದಿಯನ್ನು ಹೊಂದಿದ್ದು, ತನ್ನ ಸುತ್ತ ಮುತ್ತಲಿನ ಹಸಿರು ಭತ್ತದ ಗದ್ದೆಗಳು ಮತ್ತು ಚಹಾ ತೋಟಗಳಿಂದ ಆವೃತ್ತಗೊಂಡಿದೆ.ಅತಿ ಹೆಚ್ಚು ಕೃಷಿ ಕೂಲಿ ಕಾರ್ಮಿಕರು ಮತ್ತು ಚಹಾ ತೋಟದ ಕಾರ್ಮಿಕರು ವಾಸಿಸುತ್ತಿರುವ ಈ ಪುಟ್ಟ ಹಳ್ಳಿಯಲ್ಲಿ ಇವೊತ್ತಿಗೂ ಸಹ ಬಡತನವೆಂಬುದು ತನ್ನ ಕಾಲು ಮುರಿದುಕೊಂಡು  ಅಲ್ಲಿಯೇ ತಳವೂರಿದೆ. 
ಚಾರು ಮುಂಜುಂದಾರ್ ಎಂಬ ಶ್ರೀಮಂತ ಜಮೀನ್ದಾರ್ ಕುಟುಂಬಕ್ಕೆ ಸೇರಿದ ಆದರ್ಶಯುವಕ ಮತ್ತು ಜಂಗಲ್ ಸಂತಾಲ್ ಎಂಬ ಬುಡಕಟ್ಟು ಜನಾಂಗದ ಯುವಕ ಈ ಇಬ್ಬರೂ ಸೇರಿ ಗುತ್ತಿಗೆ ಆಧಾರದ ಮೇಲೆ  ಜಮೀನ್ದಾರರ ಗದ್ದೆಗಳಲ್ಲಿ ಭತ್ತ ಬೆಳೆಯುತ್ತಿದ್ದ ಕೃಷಿ ಕಾರ್ಮಿಕರಿಗೆ ಭತ್ತದ ಫಸಲಿನಲ್ಲಿ ಹೆಚ್ಚಿನ ಪಾಲು ದೊರಕಿಸಿಕೊಡಲು ಶ್ರಿಮಂತ ಜಮೀನ್ದಾರರ ವಿರುದ್ಧ ಹುಟ್ಟು ಹಾಕಿದ ಹೋರಾಟವು   ನಕ್ಸಲ್ ಹೋರಾಟ ಎಂಬ ಹೆಸರು ಬರಲು ಕಾರಣವಾಯಿತು. ಇದರ ನೆನಪಿಗೆ ಎಂಬಂತೆ ನಕ್ಸಲ್ ಬಾರಿ ಹಳ್ಳಿಯ ಶಾಲೆಯ ಸಮೀಪ ಲೆನಿನ್, ಸ್ಟಾಲಿನ್, ಮಾವೊ, ಚಾರು ಮುಂಜುಂದಾರ್ ಹೀಗೆ ಅನೇಕ ಪ್ರತಿಮೆಗಳನ್ನು ನಿಲ್ಲಿಸಲಾಗಿದೆ. ಶಾಂತಿ ಮುಂಡ ಎಂಬ ಎಪ್ಪತ್ತು ನಾಲ್ಕು ವರ್ಷದ ವೃದ್ಧೆಯಾಗಿರುವ ಹೋರಾಟಗಾರ್ತಿಯು ಇಂದಿಗೂ ಜೀವಂತವಾಗಿದ್ದು  ಎದೆಯೊಳಗೆ ಅಂದಿನ ಹೋರಾಟದ ನೆನಪುಗಳನ್ನು ಹಸಿರಾಗಿ ಇರಿಸಿಕೊಂಡಿದ್ದಾಳೆ.
ಐವತ್ತು ಸುಧೀರ್ಘ ಹೋರಾಟದಲ್ಲಿ ಅನೇಕ ಹೋರಾಟಗಾರು ತಮ್ಮ ತ್ಯಾಗ ಬಲಿದಾನಗಳ ಮೂಲಕ ಇತಿಹಾಸ ಸೇರಿ ಹೋಗಿದ್ದಾರೆ. ಇವರಲ್ಲಿ ಪ್ರಮುಖವಾಗಿ ಎದ್ದು ಕಾಣುವ ಹೆಸರುಗಳೆಂದರೆ, ಪಶ್ಚಿಮ ಬಂಗಾಳದ ಚಾರು ಮುಜಂದಾರ್, ಕನು ಸನ್ಯಾಲ್, ಜಂಗಲ್ ಸಂತಾಲ್,  ಮತ್ತು ಆಂಧ್ರಪ್ರದೇಶದ ವೆಂಪಟಾಪು ಸತ್ಯನಾರಾಯಣ ಮತ್ತು ಪಂಚಡಿ ಕೃಷ್ಣಮೂರ್ತಿ, ಆದಿಬಟ್ಲಂ ಕೈಲಾಸಂ, ಕೊಂಡಪಲ್ಲಿ ಸೀತಾರಾಮಯ್ಯ, ಸತ್ಯಮೂರ್ತಿ, ಮಲ್ಲೋಜಲ ಕೋಟೇಶ್ವರ ರಾವ್(,ಕಿಷನ್ ಜಿ) ರಾಮಕೃಷ್ಣ   ಹೀಗೆ ಅನೇಕರನ್ನು ಹೆಸರಿಸಬಹುದು.
ಈ ನಾಯಕರೆಲ್ಲಾ ತಮ್ಮ ಸೈದ್ಧಾಂತಿಕ ಹೋರಾಟ ಮತ್ತು ಹಲವು ಭಿನ್ನಾಭಿಪ್ರಾಯಗಳ ನಡುವೆಯೂ ಸರ್ಕಾರ ಮತ್ತು ಸಮಾಜದ ಮುಖ್ಯವಾಹಿನಿಯ ಗಮನಕ್ಕೆ ಬಾರದೆ ಉಳಿದು ಹೋಗಿದ್ದ ಆದಿವಾಸಿಗಳು ಮತ್ತು ಶ್ರೀಮಂತ ಜಮೀನ್ದಾರರ ಕಪಿಮುಷ್ಟಿಯಲ್ಲಿ ನಲುಗಿ ಹೋಗಿದ್ದ ಕೃಷಿ ಕಾರ್ಮಿಕರ ಬವಣೆಗಳತ್ತ ಎಲ್ಲರೂ ತಿರುಗಿ ನೋಡುವಂತೆ ನೋಡುವಂತೆ ಮಾಡಿದ್ದು ಈ ಹೋರಾಟದ ಏಕೈಕ ಯಶಸ್ಸು ಎಂದರೆ ತಪ್ಪಾಗಲಾರದು.
ಐವತ್ತು ವರ್ಷಗಳ ಸುಧೀರ್ಘ ಇತಿಹಾಸ ವಿರುವ ನಕ್ಸಲ್ ಹೋರಾಟ ಕಳೆದ ಎರಡು ದಶಕಗಳ ಹಿಂದೆಯೇ ಹಂತ ಹಂತವಾಗಿ ದಾರಿ ತಪ್ಪತೊಡಗಿತು. ನಾಯಕರ ನಡುವಿನ ಆಂತರೀಕ ಭಿನ್ನಾಭಿಪ್ರಾಯ, ಹೋರಾಟವನ್ನು ಬದ್ಧತೆ ಮತ್ತು ಕಳಕಳಿಯಿಂದ ಮುನ್ನೆಡೆಸುತ್ತಿದ್ದ ನಾಯಕರ ಸಾವು ಹಾಗೂ ಕೆಲವರು ಅನಾರೋಗ್ಯ ಮತ್ತು ಇನ್ನಿತರೆ ಕಾರಣಗಳಿಂದ ಭ್ರಮನಿರಸನಗೊಂಡು ಚಳುವಳಿಯಿಂದ ವಿಮುಖರಾಗತೊಡಗಿದು. ಇದನ್ನು ದುರುಪಯೋಗಪಡಿಸಿಕೊಂಡ ಹಾಗೂ ಯಾವುದೇ ರೀತಿಯ ಶಿಕ್ಷಣ ಅಥವಾ ಸೈದ್ಧಾಂತಿಕ ಹಿನ್ನಲೆಯಿಲ್ಲದೆ ಮೂರು ದಶಕಗಳ ಹಿಂದೆ ಹೋರಾಟಕ್ಕೆ ದುಮಿಕಿದ ಆದಿವಾಸಿ ಯುವಕರು ಈಗ ನಾಯಕರಾಗಿ ಬಂದೂಕನ್ನು ಕೈಗೆತ್ತಿಕೊಂಡಿದ್ದಾರೆ.. ಹಾಗಾಗಿ ಈಗಿನ ನಕ್ಸಲ್ ಹೋರಾಟವು ಹಿಂಸೆಯ ಪ್ರತಿರೂಪವಾಗಿದೆ.

ಈಗ ಹಿಂಸೆಯ ಹಾದಿಯನ್ನು ತುಳಿದಿರುವ ನಕ್ಸಲ್ ಹೋರಾಟವನ್ನು ಗಮನಿಸಿದರೆ ಅಥವಾ ಐವತ್ತು ವರ್ಷಗಳ ಹಿಂದೆ ಆ ನಾಯಕರು ತಮ್ಮ ಬದುಕನ್ನು ತ್ಯಾಗ ಮಾಡಿದ ರೀತಿಯನ್ನು ಅವಲೋಕಿಸಸಿದರೆ, ಮನಸ್ಸು ಮೌನದಿಂದ ಮುದುಡಿ ಹೋಗುತ್ತದೆ. ನಕ್ಸಲ್ ಬಾರಿ ಹಳ್ಳಿಯ ಘಟನೆಯಿಂದ  ಹೋರಾಟವನ್ನು ತೀವ್ರಗೊಳಿಸಿದ ಚಾರು ಮುಜುಂದಾರ್ ನನ್ನು 1972 ರಲ್ಲಿ ಬಂಧಿಸಿದ ಕೊಲ್ಕತ್ತ ನಗರದ ಪೊಲೀಸರು ಅಲ್ಲಿನ   ( ಲಾಲ್  ಬಜಾರ್ ಎಂಬ ಠಾಣೆಯಲ್ಲಿ ಜುಲೈ 28 ರಂದು ಹಿಂಸೆಯನ್ನು ನೀಡಿ ಕೊಂದು ಹಾಕಿದರು. ಅವರ ಪತ್ನಿ ಶೀಲಾ ಮುಂಜುಂದಾರ್ ಒಬ್ಬ ಎಲ್.ಐ.ಸಿ. ಏಜೆಂಟ್ ಆಗಿ ಕೆಲಸ ಮಾಡುತ್ತಾ  ತಮ್ಮ ಇಬ್ಬರು ಮಕ್ಕಳನ್ನು ಸಾಕಿ ಬೆಳಸಿದರು. ಅಜಿತ್ ಮುಜಂದಾರ್ ಸಿಲುಗುರಿ ಪಟ್ಟಣದಲ್ಲಿ ವಾಸವಾಗಿದ್ದುಕೊಂಡು ಚಹಾ ತೋಟದ ಕಾರ್ಮಿಕರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಮಗಳು ಡಾ.ಅನಿತಾ ಮುಂಜುಂದಾರ್ ಕೊಲ್ಕತ್ತ ನಗರದಲ್ಲಿ ವೈದ್ಯೆಯಾಗಿ ಕಾರ್ಯನಿರ್ವಹಿಸುತ್ತಾ ಅವರೂ ಸಹ ಕಾರ್ಮಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಜಂಗಲ್ ಸಂತಾಲ್ ಎಂಬ ನಾಯಕ ತನ್ನ ಬಹಳಷ್ಟು ಆಯಸ್ಸನ್ನು ಸೆರೆಮನೆಯಲ್ಲಿ ಕಳೆದು ಬಿಡುಗಡೆಯಾಗಿ ಹೊರಬರುವ ವೇಳೆಗೆ ಸಂಘಟನೆಯು ಹೊಡೆದು ಹಲವು ಚೂರುಗಳಾಗಿ ಸಿಡಿದು ಹೋಗಿತ್ತು. ಇದರಿಂದ ಭ್ರಮನಿರಸನಗೊಂಡ ಸಂತಾಲ್ ನಾಲ್ವರು ಪತ್ನಿಯರನ್ನು ಸಾಕಲಾರದೆ, ಕುಡಿತದ ಚಟಕ್ಕೆ ಬಲಿಯಾಗಿ ಅನಾಮಿಕನಂತೆ ಸತ್ತು ಹೋದನು.


ವೃತ್ತಿಯಲ್ಲಿ ಸರ್ಕಾರಿ ನೌಕರನಾಗಿದ್ದು, ಚಾರು ಮುಂಜಂದಾರ್ ಸ್ನೇಹದಿಂದ ಹೋರಾಟಕ್ಕೆ  ದುಮುಕಿದ್ದ ಕನು ಸನ್ಯಾಲ್ ಹಿಂಸೆಯ ಹೋರಾಟವನ್ನು ವಿರೋಧಿಸುತ್ತಾ ಹಲವು ದಶಕಗಳ ಕಾಲ ಸಂಘಟನೆಯನ್ನು ಜೀವಂತವಿಟ್ಟಿದ್ದರು. ಪಶ್ಚಿಮ ಬಂಗಳದ ಸರ್ಕಾರ ಎಲ್ಲಾ ಮೊಕದ್ದಮೆಗಳನ್ನು ಹಿಂತೆಂಗೆದುಕೊಂಡು ಅವರನ್ನು ಬಿಡುಗಡೆಗೊಳಿಸಿದಾಗ ಸಿಲುಗುರಿಯ ತನ್ನ ಹಳ್ಳಿಗೆ ಹೋಗಿ ಗುಡಿಸಲು ಕಟ್ಟಿಕೊಂಡು , ಚಹಾ ತೋಟದ ಕಾರ್ಮಿಕರು ಪ್ರತಿ ತಿಂಗಳು ಕೊಡುತ್ತಿದ್ದ ಆರುನೂರು ರೂಪಾಯಿಗಳ ದೇಣಿಗೆಯಲ್ಲಿ ಎರಡು ಊಟ ಮತ್ತು ಎರಡು ಚಹಾ ದೊಂದಿಗೆ ಬದುಕಿದ್ದರು. ವೃದ್ಧಾಪ್ಯದ ದಿನಗಳಲ್ಲಿ ಕಾಯಿಲೆಗಳಿಗೆ ಔಷಧ ಕೊಳ್ಳಲು ಹಣವಿಲ್ಲದೆ, ಯಾರನ್ನೂ ಆಶ್ರಯಿಸಬಾರದು ಎಂದು 2010 ರ ಮಾರ್ಚ್ ತಿಂಗಳಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡರು.ಇದಕ್ಕೂ ಮುನ್ನ ಆಗಿನ ಎಡರಂಗ ಪಕ್ಷದ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಸರ್ಕಾರದಿಂದ ತಿಂಗಳಿಗೆ ಮೂರು ಸಾವಿರ ರುಪಾಯಿ ವೃದ್ಧಾಪ್ಯ ವೇತನವನ್ನು ಮಂಜೂರು ಮಾಡಿದಾಗ ಕನು ಸನ್ಯಾಲ್ ಅದನ್ನು ನಿರಾಕರಿಸಿದ್ದರು. “ಯಾವ ವ್ಯವಸ್ಥೆಯ ವಿರುದ್ಧ ನಾನು ಹೋರಾಟ ಮಾಡಿದ್ದನೋ, ಅಂತಹ ಸರ್ಕಾರದ ಬಿಕ್ಷೆ ನನಗೆ ಬೇಕಾಗಿಲ್ಲ” ಎಂಬಂತಹ ಧೀರತನದ ಮಾತನ್ನಾಡಿದ್ದರು.
ಇನ್ನೂ ಮಲ್ಲೋಜಲ ಕೋಟೇಶ್ವರ ರಾವ್ ಎಂಬ ಮೂಲ ಹೆಸರಿನ ಹಾಗೂ ಹೋರಾಟದಲ್ಲಿ ಕಿಶನ್ ಜಿ. ಎಂಬ ನಾಯಕ ಮೂಲತಃ ಆಂಧ್ರಪ್ರದೇಶದ ಕರೀಂನಗರ ಜಿಲ್ಲೆಯ ಪೆದ್ದಂಪಲ್ಲಿ ಎಂಬ ಹಳ್ಳಿಯವರು. ವಿಜ್ಞಾನ ಪದವೀಧರ ಆಗಿದ್ದ ಇವರು 1973ರಲ್ಲಿ  ನಕ್ಸಲ್ ಹೋರಾಟಕ್ಕೆ ದುಮುಕಿ ನಿರಂತರ ಮೂರು ದಶಕಗಳ ಕಾಲ ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್ ರಾಜ್ಯದಲ್ಲಿ ಹೊರಾಟವನ್ನು ಮುನ್ನಡೆಸಿದವರು .2010 ರಲ್ಲಿ ಟಾಟಾ ಕಂಪನಿ ಪಶ್ಚಿಮ ಬಂಗಾಳದ ನಂದಿ ಮತ್ತು ಸಿಂಗೂರ್ ಗ್ರಾಮದಲ್ಲಿ ನ್ಯಾನೊ ಕಾರು ತಯಾರಿಕಾ ಘಟಕಕ್ಕೆ ರೈತರ ಭೂಮಿಯನ್ನು ಕಸಿದಾಗ ಕಂಪನಿಯನ್ನು ಅಲ್ಲಿಂದ ಕಾಲ್ತೆಗೆಯುವಂತೆ ಮಾಡುವುದರ ಜೊತೆಗೆ, ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೇಸ್ ಗೆ ಬೆಂಬಲ ವ್ಯಕ್ತ ಪಡಿಸಿ, 35 ವರ್ಷಗಳ ಅಧಿಕಾರದಲ್ಲಿ ಸಿ.ಪಿ.ಎಂ. ಪಕ್ಷವನ್ನು ಅಧಿಕಾರದಿಂದ ಕೆಳೆಗಿಳಿಯುವಂತೆ ಮಾಡಿದರು. ನಂತರ 2011 ರ ನವಂಬರ್ ತಿಂಗಳಿನಲ್ಲಿ ಅದೇ ಪಶ್ಚಿಮ ಬಂಗಾಳದ ಅರಣ್ಯ ಪ್ರದೇಶದಲ್ಲಿ ಕೇಂದ್ರ ನಕ್ಸಲ್ ನಿಗ್ರಹ ಪಡೆಯ ಗುಂಡಿಗೆ ಬಲಿಯಾದರು.
ಆ ವೇಳೆಗೆ ಮುಖ್ಯಮಂತ್ರಿಯಾಗಿದ್ದ ಮಮತಾ ಬ್ಯಾನರ್ಜಿ ಕಿಸನ್ ಜಿ ಶವವನ್ನು ವಿಶೇಷ ಅಂಬುಲೇನ್ಸ್  ಮೂಲಕ  ಆಂಧ್ರದ ಅವರ ಹುಟ್ಟೂರಿಗೆ ಕಳಿಸಿಕೊಟ್ಟಿದ್ದರು. ಹೋರಾಟಗಾರನಾಗಿ ಹುಟ್ಟೂರು ತೊರೆದಿದ್ದ ಕಿಶನ್ ಜಿ. 38 ವರ್ಷಗಳ ನಂತರ ಹೆಣವಾಗಿ ವಾಪಸ್ ಹಳ್ಳಿಗೆ ಬಂದಾಗ. ಅವರ ಅಂತ್ಯಕ್ರಿಯೆಯಲ್ಲಿ ಆ ದಿನ 45 ಸಾವಿರ ಮಂದಿ ಪಾಲ್ಗೊಂಡಿದ್ದರು. ಹೀಗೆ ಕೊಂಡಪಲ್ಲಿ, ಅವರ ಸಹವರ್ತಿ ಸತ್ಯಮುರ್ತಿ, ಮುಂತಾದ ಅನೇಕ ನಾಯಕರು  ತಮ್ಮ ಜೀವವನ್ನು ಮತ್ತು ಬದುಕನ್ನು ತ್ಯಾಗ ಮಾಡಿದ ನಕ್ಸಲ್ ಹೋರಾಟ ಈಗ ಮೂರಾ ಬಟ್ಟೆಯಾಗಿದೆ.( ಆಸಕ್ತರು  ಭಾರತದ ನಕ್ಸಲ್ ಇತಿಹಾಸ ಕುರಿತು ನಾನು ಬರೆದಿರುವ ಹಾಗೂ 2013 ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ “ ಎಂದೂ ಮುಗಿಯದ ಯುದ್ಧ’ ಎಂಬ ಕೃತಿಯನ್ನು ಗಮನಿಸಬಹುದು. ಪ್ರಕಾಶಕರು- ಸಪ್ನ ಬುಕ್ ಹೌಸ್, ಬೆಂಗಳೂರು)
ಮೊನ್ನೆ ಮೇ 25 ರಂದು ನಕ್ಸಲ್ ಬಾರಿ ಹಳ್ಳಿಯ ಪ್ರಾಥಮಿಕ ಶಾಲೆಯ ಬಳಿ ನಿಲ್ಲಿಸಲಾಗಿರುವ ನಾಯಕರ ಪ್ರತಿಮೆಗಳಿಗೆ ಹೊಸದಾಗಿ ಕೆಂಪು ಬಣ್ಣ ಬಳಿದು, ಆ ದಿನ ಸಿಲುಗುರಿ ಹಾಗೂ ಸುತ್ತಮುತ್ತಲಿನ ಕಾರ್ಮಿಕರು ಸಭ ಸೇರಿ ಹುತಾತ್ಮ ನಾಯಕರಿಗೆ ಗೌರವ ಸಲ್ಲಿಸಿದರು. ಅದಕ್ಕೂ ಮುನ್ನ ಕಳೆದ ತಿಂಗಳು ನಕ್ಸಲ್ ಬಾರಿ ಹಳ್ಳಿಗೆ ಭೇಟಿ ನೀಡಿದ್ದ ರಾಷ್ಟ್ರೀಯ ಬಿ.ಜೆ.ಪಿ. ಅಧ್ಯಕ್ಷ ಅಮಿತಾ ಷಾ ಅವರ ಗಮನ ಸೆಳೆಯಲು ಗೋಡೆಯ ಮೇಲೆ ಬರೆಯಲಾಗಿದ್ದ ಎಲ್ಲಾ  ಬರಹಗಳನ್ನು ಸುಣ್ಣ ಬಳಿದು ಅಳಿಸಿ ಹಾಕಲಾಯಿತು. ಒಂದು ಉದಾತ್ತ  ಧ್ಯೇಯದೊಂದಿಗೆ  ಆರಂಭಗೊಂಡು ಹಿಂಸೆಯ ಹಾದಿಯಲ್ಲಿ ಸಾಗಿ ಅಂತ್ಯಗೊಂಡಂತೆ ಕಾಣುತ್ತಿರುವ ನಕ್ಸಲ್ ಹೋರಾಟವನ್ನು ಯಶಸ್ವಿ ಹೋರಾಟ ಎಂದು ಕರೆಯಬೇಕೆ? ಅಥವಾ ದುರಂತದ ಹೋರಾಟ ಎನ್ನಬೇಕೆ? ಇದು ಈಗ ನಮ್ಮ ಮುಂದಿರುವ ಪ್ರಶ್ನೆಯಾಗಿದೆ.

(ಚಿತ್ರದಲ್ಲಿರುವವರು, ಮೇಲಿನಿಂದ ಕೆಳಕ್ಕೆ 1) ಚಾರುಮುಜುಂದಾರ್, 2) ಕನುಸನ್ಯಾಲ್, 3) ಕಿಶನ್ ಜಿ)

(ಕರಾವಳಿ ಮುಂಜಾವು ದಿನಪತ್ರಿಕೆಯ "ಜಗದಗಲ" ಅಂಕಣಕ್ಕೆ ಬರೆದ ಲೇಖನ)

ಶುಕ್ರವಾರ, ಮೇ 19, 2017

ಪತ್ರಿಕೋದ್ಯಮದ ಘನತೆಗೆ ಸಂದ ಎರಡು ಪ್ರಶಸ್ತಿಗಳು



ಕನ್ನಡ ಪತ್ರಿಕೋದ್ಯಮ ರಂಗದಲ್ಲಿ ಅತ್ಯುನ್ನತ ಪ್ರಶಸ್ತಿಗಳು ಎಂದು ಪರಿಗಣಿಸಲ್ಪಟ್ಟಿರುವ ಹಾಗೂ  ಕರ್ನಾಟಕ ಸರ್ಕಾರ  ಪ್ರತಿ ವರ್ಷ ನೀಡುತ್ತಿರುವ ಪ್ರತಿಷ್ಟಿತ  ಟಿ.ಎಸ್.ಆರ್  ಹಾಗೂ ಮೊಹರೆ ಹನುಮಂತರರಾಯರ ಸ್ಮಾರಕ ಪ್ರಶಸ್ತಿಗಳು ಈ ಬಾರಿ ಉತ್ತರ ಕನ್ನಡ ಜಿಲ್ಲೆಯ ನೆಲದ ಇಬ್ಬರು ಪ್ರತಿಭಾನ್ವಿತ ಪತ್ರಕರ್ತರಿಗೆ ಸಂದಾಯವಾಗಿರುವುದು ವಿಶೇಷವಾಗಿದೆ. ಜೊತೆಗೆ ವೈಯಕ್ತಿಕವಾಗಿ ನನಗೆ ಅತ್ಯಂತ ಸಮಾಧಾನ ಮತ್ತು ಖುಷಿ ಕೊಟ್ಟಸಂಗತಿಯಾಗಿದೆ. ಏಕೆಂದರೆ. ಪ್ರಶಸ್ತಿ ನೀಡುವವರಿಗೂ ಮತ್ತು ಸ್ವೀಕರಿಸುವ ವ್ಯೆಕ್ತಿಗಳಿಗೂ ಘನತೆ ಎಂಬುದುಇರಬೇಕು ಎಂದು ದೃಢವಾಗಿ ನಂಬಿದವನು ನಾನು. ಪ್ರಶ್ಸಸ್ತಿಗಳು ಅಪಮೌಲ್ಯಗೊಳ್ಳುತ್ತಿರುವ ಈ ದಿನಗಳಲ್ಲಿ ಈ ಎರಡು ಪ್ರಶಸ್ತಿಗಳು  ಅರ್ಹರಿಗೆ  ಸಂದಾಯವಾಗುವುದರ ಮೂಲಕ ತಮ್ಮ ಮೌಲ್ಯವನ್ನು  ಮತ್ತಷ್ಟು ಹೆಚ್ಚಿಸಿಕೊಂಡಿವೆ ಎಂದು ಭಾವಿಸುತ್ತೇನೆ.
ನಾಡಿನ ಹಿರಿಯ ಪತ್ರಕರ್ತರಲ್ಲಿ ಒಬ್ಬರಾಗಿದ್ದು  ಹಾಗೂ ಕಳೆದ  ಮೂರು ದಶಕಗಳಿಂದ ವಿಜ್ಞಾನ ಮತ್ತು ಪರಿಸರ ಕುರಿತ ನನ್ನ ಅಧ್ಯಯನ ಮತ್ತು ಬರೆವಣಿಗೆಗೆ   ಮಾರ್ಗದರ್ಶಕರಂತಿರುವ ನಾಗೇಶ್ ಹೆಗ್ಡೆಯವರಿಗೆ ಟಿ.ಎಸ್.ಆರ್ ಪ್ರಶಸ್ತಿ ಮತ್ತು  ಅದೇ ರೀತಿ  ಮೂರು ದಶಕಗಳಿಂದ ನನ್ನ ಆತ್ಮೀಯ ಮಿತ್ರ,ನಾಗಿ, ಉದಯ  ಟಿ.ವಿ.ಯ ಸಹೋದ್ಯೋಗಿಯಾಗಿ, ಹಾಗೂ  ಖಾಸಾಗಿಯಾಗಿ ಕುಟುಂಬದ ಸದಸ್ಯ ಹೀಗೆ  ಎಲ್ಲವೂ ಆಗಿರುವ ಗಂಗಾಧರ ಹಿರೇಗುತ್ತಿಗೆ ಮೊಹರೆ ಹನುಮಂತರಾಯರ ಸ್ಮಾರಕ ಪ್ರಶಸ್ತಿ ದೊರೆತಿದೆ. ಈ ಎರಡೂ ಪ್ರಶಸ್ತಿಗಳು ತಲಾ ಒಂದು ಲಕ್ಷ ರೂಪಾಯಿ ನಗದು,ಮತ್ತು ಪ್ರಶಸ್ತಿ ಫಲಕಗಳನ್ನು ಒಳಗೊಂಡಿದ್ದು, ಪ್ರತಿ ವರ್ಷ ವಿಧಾನ ಸೌಧದ ಬಾಂಕ್ವೆಂಟ್ ಹಾಲ್ ನಲ್ಲಿ ಮುಖ್ಯಮಂತ್ರಿಗಳ ಮೂಲಕ ವಿತರಿಸಲಾಗುತ್ತದೆ.
ಪ್ರಜಾವಾಣಿ ದಿನಪತ್ರಿಕೆಯನ್ನು ಕಟ್ಟಿ ಬೆಳೆಸಿದ ಸಂಪಾದಕರಲ್ಲಿ ಒಬ್ಬರಾಗಿದ್ದ ಟಿ.ಎಸ್.ರಾಮಚಂದ್ರರಾವ್ ಕನ್ನಡ ಪತ್ರಿಕೋದ್ಯಮ ಕಂಡ ಅಪರೂಪದ ನಿಷ್ಟಾವಂತ ಹಾಗೂ ನಿಷ್ಟುರ ಪತ್ರಕರ್ತರಲ್ಲಿ ಒಬ್ಬರು. ಮಾಜಿಮುಖ್ಯಮಂತ್ರಿ ದೇವರಾಜ ಅರಸ್ ಅವರ ಆತ್ಮೀಯರಲ್ಲಿ ಒಬ್ಬರಾಗಿದ್ದ ಟಿ.ಎಸ್.ಆರ್. ಅವರು ಎಂದಿಗೂ ತಮ್ಮ ಖಾಸಾಗಿ ಗೆಳೆತನವನ್ನು ಪತ್ರಿಕೋದ್ಯಮದಲ್ಲಿ ದುರುಪಯೋಗಪಡಿಸಿಕೊಂಡವರಲ್ಲ. ಅರಸು ಆಡಳಿತದ ಲೋಪ ಧೋಷಗಳನ್ನು ಪತ್ರಿಕೆಯ ಮೂಲಕ ಮುಲಾಜಿಲ್ಲದೆ ಎತ್ತಿ ತೋರಿಸುತ್ತಿದ್ದರು. ಅವರು ಪ್ರಜಾವಾಣಿಯಲ್ಲಿ ಬರೆಯುತ್ತಿದ್ದ “ಛೂಬಾಣ” ಎಂಬ ವ್ಯೆಂಗೋಕ್ತಿಗಳ ಅಂಕಣ ಅತ್ಯಂತ ಜನಪ್ರಿಯವಾಗಿತ್ತು. ಜೊತೆಗೆ ಇಂದಿಗೂ ಆ ಅಂಕಣ ದಂತಕಥೆಯಂತೆ ಪತ್ರಕರ್ತರ ನಡುವೆ ಚರ್ಚೆಯಾಗುತ್ತಿದೆ.
ಪರ್ತಕರ್ತರಿಗೆ ಮನರಂಜನೆ ಇರಬೇಕು, ಜೊತೆಗೆ ಅವರಿಗೊಂದು ಖಾಸಾಗಿತನವಿರಬೇಕು ಎಂದು ಮೊದಲು ಮನಗಂಡವರಲ್ಲಿ ಟಿ.ಎಸ್. ಆರ್. ಪ್ರಮುಖರು.  ಅವರ ಈ ಪ್ರಯತ್ನದಿಂದಾಗಿ 1966 ರಲ್ಲಿ ಬೆಂಗಳೂರಿನ ಕಬ್ಬನ್ ಪಾರ್ಕಿನಲ್ಲಿ ಹೈಕೋರ್ಟ್ ಕಟ್ಟಡದ ಬಲಭಾಗದಲ್ಲಿ “ ಬೆಂಗಳೂರು ಪ್ರೆಸ್ ಕ್ಲಬ್” ಎಂಬ ಪತ್ರಕರ್ತರ ಖಾಸಾಗಿ ತಾಣವೊಂದು ತಲೆಯೆತ್ತಲು ಸಾಧ್ಯವಾಯಿತು.ಇಂದು ಈ ಕ್ಲಬ್ ರಾಜ್ಯದ ಪ್ರತಿಷ್ಟಿತ ಕ್ಲಬ್ ಗಳಲ್ಲಿ ಒಂದಾಗಿದ್ದು, ಬೆಂಗಳೂರುನಗರ ಸುದ್ದಿಮಾಧ್ಯಮಗಳ ಚಟುವಟಿಕೆಯ ತಾಣವಾಗಿದೆ.  ಇಂತಹ ಮಹಾನ್ ಪತ್ರಕರ್ತರ ನೆನಪಿನಲ್ಲಿ ಪತ್ರಿಕೋದ್ಯಮದಲ್ಲಿ  ಅಪ್ರತಿಮ ಸಾಧನೆ ಮಾಡಿದ ನಾಡಿನ ಪತ್ರಕರ್ತನೊಬ್ಬನಿಗೆ ಪ್ರತಿ ವರ್ಷ ಟಿ.ಎಸ್. ಆರ್. ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ಭಾರಿ ನಾಗೇಶ್ ಹೆಗ್ಡೆಯವರಿಗೆ ದೊರೆತಿರುವುದು  ಪತ್ರಿಕೋಧ್ಯಮದ ಘನತೆಗೆ ಸಂದ ಗೌರವವಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲ್ಲೂಕಿನವರಾದ ನಾಗೇಶ್ ಹೆಗ್ಡೆಯವರು  ಶಿರಸಿಯಲ್ಲಿ ವಿಜ್ಞಾನದಲ್ಲಿ ಪದವಿ ಗಳಿಸಿದ ನಂತರ ಪಶ್ಚಿಮ ಬಂಗಾಳದ . ಖರಗ್ ಪುರದ ಐ.ಐ.ಟಿ ಯಲ್ಲಿ ಸ್ನಾತಕೋತ್ತರ ಪದವಿ ಹಾಗೂ ದೆಹಲಿಯ ಜವಹರಲಾಲ್ ನೆಹರೂ ವಿ.ವಿ.ಯಲ್ಲಿ ಎಂ.ಫಿಲ್ ಪಡೆದವರು.  ಉತ್ತರಕಾಂಡದ ನೈನಿತಾಲ್ ಗಿರಿಧಾಮದಲ್ಲಿರುವ ನೈನಿತಾಲ್ ವಿ.ವಿ.ಯಲ್ಲಿ ಪ್ರಾಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದ ನಾಗೇಶ್ ಹೆಗ್ಡೆಯವರು  ಅದೇ ವೃತ್ತಿಯಲ್ಲಿ ಮುಂದುವರಿದಿದ್ದರೆ, ಇಂದು  ಈ ದೇಶದ ಪ್ರಸಿದ್ಧ ವಿಜ್ಞಾನಿಯಾಗಿ ಅಥವಾ ಯಾವುದೋ ಒಂದು ಪ್ರತಿಷ್ಟಿತ ವಿ.ವಿ.ಯ ಕುಲಪತಿಯಾಗಿ ರಾರಾಜಿಸಬಹುದಿತ್ತು. ಆದರೆ ಅವರು ಪತ್ರಿಕೋದ್ಯಮವನ್ನು ಆಯ್ಕೆ ಮಾಡಿಕೊಮಡರು. ಇದನ್ನು ನಾವು ಕನ್ನಡ ಪತ್ರಿಕೋದ್ಯಮದ ಪುಣ್ಯ ಎಂದು ಭಾವಿಸಬಹುದು.  ಪರಿಸರ ಮತ್ತು ಈ ನಾಡಿನ ನೆಲ ಮತ್ತು ಜಲ , ದೇಶಿ ಜ್ಞಾನ ಪರಂಪರೆ ಕುರಿತು ಅವರಿಗಿದ್ದ ಆಸಕ್ತಿಯು ಅವರನ್ನು ಮತ್ತೆ ಹುಟ್ಟಿ ಬೆಳೆದ ಕನ್ನಡ ನಾಡಿಗೆ ಕರೆದುಕೊಂಡು ಬಂದಿತು.

ಪ್ರಜಾವಾಣಿ ಪತ್ರಿಕಾ ಬಳಗವನ್ನು ಸೇರಿ. ಕನ್ನಡಿಗರ ಪಾಲಿಗೆ ಕಬ್ಬಿಣದ ಕಡಲೆಯಂತಿದ್ದ ವಿಜ್ಞಾನದ ಹಾಗೂ ಪರಿಸರದ ವಿಷಯಗಳನ್ನು ಅತ್ಯಂತ ಸರಳವಾಗಿ ನಿರೂಪಿಸುತ್ತಾ  ಬಂದ  ನಾಗೇಶ್ ಹೆಗ್ಡೆಯವರು ಕನ್ನಡ ನಾಡಿನಲ್ಲಿ ಉಂಟು ಮಾಡಿರುವ ಜಾಗೃತಿಯನ್ನು ಅನನ್ಯ ಸಾಧನೆ ಎಂದು ಬಣ್ಣಿಸಬಹುದು. ಒಂದು ಕಾಲದಲ್ಲಿ ಸುಧಾ ಮತ್ತು ಇತರೆ ವಾರಪತ್ರಿಕೆಗಳೆಂದರೆ, ಕಾದಂಬರಿಗಳ ಧಾರವಾಹಿಗಳ ಕಾರಣದಿಂದಾಗಿ ಅವುಗಳು  ಗೃಹಿಣಿಯರ ಪತ್ರಿಕೆಗಳು ಎಂಬ ನಂಬಿಕೆಯಿತ್ತು. ಅಂತಹ ಸಮಯದಲ್ಲಿ ಸುಧಾ ಪತ್ರಿಕೆಯ ಸಂಪಾದಕನ ಸ್ಥಾನದಲ್ಲಿ ಕುಳಿತು ಪತ್ರಿಕೆಯನ್ನು ಅಮೂಲಾಗ್ರವಾಗಿ ಬದಲಾಯಿಸಿ, ವಿಜ್ಞಾನ ಮತ್ತು ಪರಿಸರ, ಪ್ರಾಣಿ, ಪಕ್ಷಿಗಳ ಜಗತ್ತಿನ ವಿಷಯಗಳನ್ನು ಅಡಕಗೊಳಿಸಿ ಎಲ್ಲಾ ವಯೋಮಾನ ಮತ್ತು ವರ್ಗದವರ ಪತ್ರಿಕೆಯಾಗಿ ರೂಪಿಸಿದ ಕೀರ್ತಿ ನಾಗೇಶ್ ಹೆಗ್ಡೆಯವರಿಗೆ ಸಲ್ಲುತ್ತದೆ.
ಯಾವುದೇ ಸದ್ದು ಗದ್ದಲವಿಲ್ಲದೆ, ಎಲೆ ಮರೆಯ ಕಾಯಿಯಂತೆ, ಕಾಡು ಕುಸುಮದಂತೆ ಇರುವ ನಾಗೇಶ್ ಹೆಗ್ಡೆಯವರು ಕೇವಲ ಬರಹದ ಮೂಲಕ ಪರಿಸರದ ಕಾಳಜಿಯನ್ನು ತೋರಿದವರಲ್ಲ. ಸ್ವತಃ ಬದುಕಿನಲ್ಲಿ ಅದನ್ನು ಅಳವಡಿಸಿಕೊಂಡವರು. ಅವರ ಇಂತಹ ಬದ್ಧತೆ ಮತ್ತು ಪಾರದರ್ಶಕವಾದ ಬದುಕು, ಹಾಗೂ ಕಿರಿಯವರನ್ನು ಪ್ರೋತ್ಸಾಹಿಸುವ ಉತ್ಸಾಹ ಇವುಗಳಿಂದಾಗಿ ಇಂದು ಕನ್ನಡ ಪತ್ರಿಕೋದ್ಯಮದಲ್ಲಿ ಪರಿಸರ ಪ್ರಜ್ಞೆಯು ಆಳವಾಗಿ ಬೇರೂರಿದೆ. ಜೊತೆಗೆ ನೂರಾರು ಪತ್ರಕರ್ತರು, ಲೇಖಕರು ಹುಟ್ಟಿಕೊಂಡಿದ್ದಾರೆ. ಹಾಗಾಗಿ ಕನ್ನಡದ ವಿಜ್ಞಾನ ಬರೆವಣಿಯ ಭೀಷ್ಮರಂತಿರುವ ನಾಗೇಶ್ ಹೆಗ್ಡೆಯವರಿಗೆ ಟಿ.ಎಸ್.ಆರ್. ಪ್ರಶಸ್ತಿ ಲಭಿಸಿರುವುದು ನ್ಯಾಯೋಚಿತವಾದ ಆಯ್ಕೆ ಎಂದು ಹೇಳಬಹುದು.
ಇನ್ನು ಮೊಹರೆ ಹನುಮಂತರರಾಯರು ಸ್ವಾತಂತ್ರ್ಯ ಪೂರ್ವದಿಂದಲ್ಲೂ ಓರ್ವ ಸ್ವಾತಂತ್ರ್ಯ ಹೋರಾಟಗಾರರಾಗಿ, ಪತ್ರಿಕೋದ್ಯಮಿಯಾಗಿ ಉತ್ತರ ರ್ನಾಟಕದಲ್ಲಿ ಮನೆ ಮಾತಾದವರು. ಸರ್ಕಾರ ಅಥವಾ ಪ್ರಭುತ್ವ ಮತ್ತು ಪ್ರಜೆಗಳ ನಡುವೆ ಸಂಹವನ ಸೇತುವೆಯಾಗಿ ಪತ್ರಿಕೆ ಇರಬೇಕೆಂದು  ಮನಗಂಡವರಲ್ಲಿ ಮೊಹರೆಯವರು ಪ್ರಮುಖರು. ಅವರು ಕಟ್ಟಿ ಬೆಳೆಸಿದ ಸಂಯುಕ್ತ ಕರ್ನಾಟಕ ದಿನಪತ್ರಿಕೆಯು ಕನ್ನಡದ ಹಿರಿಯ ಹಾಗೂ ಪ್ರತಿಷ್ಟಿತ ಕನ್ನಡದ ದಿನಪತ್ರಿಕೆಗಳಲ್ಲಿ ಒಂದಾಗಿದ್ದು ಈಗಲೂ ಸಹ ಉತ್ತರ ಕರ್ನಾಟಕದ ಜನರ ಅವಿಭಾಜ್ಯ ಅಂಗವಾಗಿದೆ. ಈ ಮಹನೀಯರ ನೆನಪಿನಲ್ಲಿ ಅವರ  ಹಾಗೆ ಪತ್ರಿಕೆಗಳನ್ನು ಕಟ್ಟಿ ಬೆಳೆಸಿ ಸಾಧನೆ ಮಾಡಿದ ಪತ್ರಕರ್ತರಿಗೆ ಮೊಹರೆ ಹನುಮಂತರಾಯರ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು. ಈ ಪ್ರಶಸ್ತಿಯು ಈ ವರ್ಷ  ಗಂಗಾಧರ ಹಿರೇಗುತ್ತಿಗೆ ಲಭ್ಯವಾಗಿದೆ. ಈಗಿನ ಕನ್ನಡದ ದಿನಪತ್ರಿಕೆಗಳ ಅಬ್ಬರಗಳ ನಡುವೆ ಜಲ್ಲಾ ಮಟ್ಟದ ದಿನಪತ್ರಿಕೆಗಳು ಒಂದೊಂದಾಗಿ ಕಣ್ಣುಮಚ್ಚುತ್ತಿರುವಾಗ, ಅಂತಹ ನಾಡಿನ ದಿನಪತ್ರಿಕೆಗಳಿಗೆ ಸೆಡ್ಡು ಹೊಡೆದು ಅವುಗಳ ಸಮಾನ ಎತ್ತರಕ್ಕೆ ಕರಾವಳಿ ಮುಂಜಾವು ದಿನಪತ್ರಿಕೆಯನ್ನು ಗಂಗಾಧರ್ ಬೆಳೆಸಿರುವುದನ್ನು ನಾನು ಪವಾಡ ಎಂದು ಕರೆಯುವುದಿಲ್ಲ. ಏಕೆಂದರೆ. ಪತ್ರಿಕೆಯನ್ನು ಆರಂಭದ ದಿನಗಳಿಂದಲೂ, (ಅದು ಕಪ್ಪು ಬಿಳುಪಿನ ಹಾಗೂ ಟಬ್ಲಾಯಡ್ ಪತ್ರಿಕೆ ಆಕಾರದಲ್ಲಿ ಪ್ರಕಟವಾಗುತ್ತಿದ್ದ ಕಾಲದಿಂದಲೂ) ನಾನು ಓದುತ್ತಾ ಬಂದಿದ್ದೇನೆ, ಒಬ್ಬ ಪತ್ರಕರ್ತನಿಗೆ ಇರಬೇಕಾದ ಛಲ, ನಿಷ್ಟೆ, ಹಾಗೂ ಪ್ರೀತಿ ಮತ್ತು ಧ್ವೇಷವಿಲ್ಲದ ನಿರ್ಭಾವುಕತನದ ವ್ಯೆಕ್ತಿತ್ವ ಇವುಗಳು ಗಂಗಾದರ ಹಿರೇಗುತ್ತಿಯಲ್ಲಿ ಇರುವುದರಿಂದಾಗಿ ಕರಾವಳಿ ಮುಂಜಾವು ಪತ್ರಿಕೆಯು ಉತ್ತರ ಕನ್ನಡ ಜಿಲ್ಲೆಯ ಜನರ ಬದುಕಿನ ಒಂದು ಭಾಗವಾಗಿ ಮಿಳಿತಗೊಂಡಿದೆ. ನಾನು ಮತ್ತು ಗಂಗಾಧರ ಹಿರೇಗುತ್ತಿ ಇಬ್ಬರೂ ವಡ್ಡರ್ಸೆ ರಘುರಾಮಶೆಟ್ಟರ “ನೈತಿಕತೆಯ ಪತ್ರಿಕೋದ್ಯಮ” ಎಂಬ ಅಗೋಚರ ಶಾಲೆಯ ವಿದ್ಯಾರ್ಥಿಗಳು ಎನ್ನುವುದು  ನನ್ನ ಪಾಲಿಗೆ ಹೆಮ್ಮೆಯ ಸಂಗತಿ.
1981 ರಲ್ಲಿ ಪ್ರಜಾವಾಣಿ ಪತ್ರಿಕೆಯ ಬಳಗಕ್ಕೆ  ನಾನು, ಜಾಹಿರಾತು ವಿಭಾಗದಲ್ಲಿ ಕೆಲಸ ಮಾಡುತ್ತಾ ಅಂದಿನ ಮದ್ರಾಸ್ ನಗರದಲ್ಲಿ ಕಳೆದು ಹೋಗಿದ್ದೆ.. ನನ್ನಲ್ಲಿದ್ದ ಬರೆವಣಿಗೆ ಮತ್ತು ಅನುವಾದ ಮಾಡುವ ಶಕ್ತಿಯನ್ನು ಗುರುತಿಸಿ, ಬಿ.ವಿ.ವೈಕುಂಠರಾಜುರವರ ಮೂಲಕ  ಬರೆವಣಿಗೆಗೆ ಹಚ್ಚಿದವರು ವಡ್ಡರ್ಸೆಯವರು. ಇದೇ ವಡ್ಡರ್ಸೆಯವರು 1984 ರಲ್ಲಿ ಪ್ರಜಾವಾಣಿ ತೊರೆದು ಮಂಗಳೂರಿನಲ್ಲಿ ಮುಂಗಾರು ದಿನಪತ್ರಿಕೆ ಆರಂಭಿಸಿದಾಗ ಆಗ ತಾನೆ ಪದವಿ ಮುಗಿಸಿದ್ದ ಗಂಗಾಧರ್  ಎಂಬ ಹಿರೇಗುತ್ತಿಯ    ಯುವಕ ಮುಂಗಾರು ದಿನಪತ್ರಿಕೆಗೆ  ವರದಿಗಾರನಾಗಿ ,ಜೊತೆಗೆ  ಪ್ರತಿನಿಧಿಯಾಗಿ ಪತ್ರಿಕೋಧ್ಯಮದ ಬದುಕು ಆರಂಭಿಸಿ , ಕಾರವಾರದ  ಬಿರು ಬಿಸಿಲಿನಲ್ಲಿ ಸೈಕಲ್ ತುಳಿದು ತನ್ನ ಮೈ ನೆತ್ತರನ್ನು ಬೆವರಾಗಿ ಹರಿಸಿ ಇಂದು ಇಷ್ಟು ಎತ್ತರಕ್ಕೆ ಬೆಳೆದು ನಿಂತಿದ್ದಾರೆ.

ಒಂದು ಜಾತಿ, ಸಮುದಾಯ ಅಥವಾ ಧರ್ಮ ಇಲ್ಲವೆ ರಾಜಕೀಯ ಪಕ್ಷಗಳಿಗೆ ತಮ್ಮ ನಿಷ್ಟೆಯನ್ನು ಒತ್ತೆ ಇಟ್ಟು ಸಮಾಜವನ್ನು ಒಡೆಯುತ್ತಿರುವ ಪತ್ರಕರ್ತರು ಮತ್ತು ಪತ್ರಿಕೆಗಳ ನಡುವೆ ಗಂಗಾಧರ ಹಿರೇಗುತ್ತಿ , ಏಕೆ ಇತರರಿಗಿಂತ ಭಿನ್ನವಾಗಿ ಕಾಣುತ್ತಾರೆ ಎಂಬುವುದಕ್ಕೆ ಅನೇಕ ಕಾರಣಗಳಿವೆ. ಅವರಲ್ಲಿರುವ ಮಾನವೀಯ ಮುಖವುಳ್ಳ ಸಂವೇದನೆ,, ಸದಾ ಬಡವರ ಪರವಾಗಿ ಇರುವ ಅಚಲವಾದ ಕಾಳಜಿ, ಮತ್ತು    ಸಮಾಜದ ಕಟ್ಟ ಕಡೆಯ ವ್ಯಕ್ತಿಯೊಬ್ಬನ  ಧ್ವನಿಯಾಗಬೇಕು ಎಂಬ ವೈಯಕ್ತಿಕ ಹಂಬಲ ಇವುಗಳು ಕೇವಲ ಹಿರೇಗುತ್ತಿಯವರ ಕಾಳಜಿ ಮಾತ್ರ ಆಗಿರದೆ, ಪತ್ರಿಕೆಯ ಕಾಳಜಿ ಕೂಡ ಆಗಿದೆ.ಇಂತಹ ಪತ್ರಿಕೆ ಮತ್ತು ಸಂಪಾದಕನಿಗಲ್ಲದೆ ಬೇರೆ ಯಾರಿಗೆ ತಾನೆ ಮೊಹರೆ ಪ್ರಶಸ್ತಿ ನೀಡಲು ಸಾಧ್ಯ? ನಿಜಕ್ಕೂ ಇದು ಪತ್ರಿಕೋದ್ಯಮ ಘನತೆಗೆ ಮಾತ್ರವಲ್ಲ, ಬದ್ಧತೆ ಮತ್ತು ಪ್ರಾಮಾಣಿಕತೆಗೆ ಸಂದ ಗೌರವ ಎಂದು ಹೇಳಬಹುದು.

( ಕರಾವಳಿ ಮುಂಜಾವು ಪತ್ರಿಕೆಯ “ಜಗದಗಲ” ಅಂಕಣಕ್ಕೆಬರೆದ ಲೇಖನ)

ಶುಕ್ರವಾರ, ಮೇ 12, 2017

ಇತಿಹಾಸದ ಕಸದ ಬುಟ್ಟಿ ಜಾರುತ್ತಿರುವ ಅಮ್ ಆದ್ಮಿ ಪಕ್ಷ




ಉತ್ತರಪ್ರದೇಶ, ಪಂಜಾಬ್ ಮತ್ತು ಗೋವಾ ರಾಜ್ಯಗಳಿಗೆ ಇತ್ತೀಚೆಗೆ ನಡೆದ ಚುನಾವಣೆಗಳೊಂದಿಗೆ ದೇಶದ ರಾಜಧಾನಿ ದೆಹಲಿಯ ಮಹಾನಗರ ಸಭಾ ಸ್ಥಾನಗಳಿಗೂ ಸಹ ಚುನಾವಣೆ ನಡೆಯಿತು. ದೆಹಲಿಯಲ್ಲಿ ಅಧಿಕಾರ ನಡೆಸುತ್ತಿರುವ ಅರವಿಂದ್ ಕೇಜ್ರಿವಾಲ್ ನೇತೃತ್ವದ ಅಮ್ ಆದ್ಮಿ ಪಕ್ಷ ಕಂಡ ಹೀನಾಯ ಸೋಲು ಭಾರತದ ಪ್ರಜ್ಞಾವಂತ ನಾಗರೀಕರ ಪಾಲಿಗೇನು ಅನಿರೀಕ್ಷಿತವಾಗಿರಲಿಲ್ಲ. ಏಕೆಂದರೆ, ಕಳೆದ ಕೆಲವು ತಿಂಗಳಿನಿಂದ ಈ ಪಕ್ಷದ ಆಂತರೀಕ ವಿದ್ಯಾಮಾನಗಳು ಎಲ್ಲರಲ್ಲೂ ಜಿಗುಪ್ಸೆ ಮೂಡಿಸಿದ್ದವು.  
2015 ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಪ್ರಬಲ ರಾಜಕೀಯ ಪಕ್ಷಗಳಾದ ಕಾಂಗ್ರೇಸ್ ಮತ್ತು ಭಾರತೀಯ ಜನತಾ ಪಕ್ಷ ಗಳನ್ನು ಮಣಿಸಿ ಅಧಿಕಾರದ ಗದ್ದುಗೆಗೆ ಏರಿದ್ದ ಅಮ್ ಆದ್ಮಿ ಪಕ್ಷದ ಗೆಲುವು ಕೇವಲ ಹೊಸದಾಗಿ ಜನಿಸಿದ ಒಂದು ಪಕ್ಷದ ಗೆಲುವು ಮಾತ್ರವಾಗಿರಲಿಲ್ಲ, ಅದು ಭಾರತದ ಶ್ರೀಸಾಮಾನ್ಯನ ಗೆಲುವಾಗಿತ್ತು ಜೊತೆಗೆ ಅವನ ಕನಸಿನ ಭಾರತದ ರಾಜಕಾರಣ ಹೇಗಿರಬೇಕೆಂಬ ಆಕಾಂಕ್ಷೆಯಿತ್ತು. . ಈ ಕಾರಣದಿಂದಾಗಿ ಈ ಚುನಾವಣೆಯ ಫಲಿತಾಂಶ ಭಾರತ ಮಾತ್ರವಲ್ಲದೆ ಜಗತ್ತಿನ ಸುದ್ದಿಮಾಧ್ಯಮಗಳ ಗಮನ ಸೆಳೆದು ಎಲ್ಲೆಡೆ ಚರ್ಚೆಯಾಗಿತ್ತು. ಆದರೆ ಈಗ  ಈ ಎಲ್ಲವೂ ಮಣ್ಣುಪಾಲಾಗಿದೆ.
ಉತ್ತರ ಭಾರತದ ದೆಹಲಿ ಮಾತ್ರವಲ್ಲದೆ, ನೆರೆಯ ಪಂಜಾಬ್, ಹರ್ಯಾಣ, ಉತ್ತರಪ್ರದೇಶ, ರಾಜಸ್ಥಾನ ಮುಂತಾದ ರಾಜ್ಯಗಳಿಗೆ ಅಮ್ ಆದ್ಮಿ ಪಕ್ಷ ವಿಸ್ತರಿಸುವ ಸೂಚನೆ ನೀಡಿದ್ದ ಈ ಪಕ್ಷವು.  ವೃತ್ತಿ ನಿರತರಾಜಕಾರಣಿಗಳನ್ನು ಮತ್ತು ಸಿದ್ಧಾಂತಗಳಿಗೆ ತುಕ್ಕು ಹಿಡಿಸಿಕೊಂಡಿರುವ ಗೊಡ್ಡು ರಾಜಕೀಯ ಪಕ್ಷಗಳನ್ನು ಹಾಗೂ  ಪ್ರಾದೇಶಿಕ ಪಕ್ಷಗಳ ಹೆಸರಿನಲ್ಲಿ ತಮ್ಮ ವಂಶರಾಜಕಾರಣ ಮಾಡುತ್ತಿರುವ ತುಂಡು ಪಾಳೆಗಾರರಂತೆ ಕಾಣುವ ಭ್ರಷ್ಟ ರಾಜಕಾರಣಿಗಳ ನಿದ್ದೆಗೆಡಿಸಿತ್ತು. ಇವರೆಲ್ಲರನ್ನು ಕಸದ ಬುಟ್ಟಿಗೆ ಗುಡಿಸಿಹಾಕಿ  ಭಾರತದ ರಾಜಕೀಯಕ್ಕೆ ಹೊಸ ಭಾಷ್ಯ ಬರೆಯುತ್ತದೆ ಎಂದು ನಂಬಿದ್ದ ಜನರಿಗೆ ಈ ಪಕ್ಷವು ಇದೀಗ ತನ್ನ ಚಿಹ್ನೆಯಾದ ಪೊರಕೆಯನ್ನು ಮತದಾರರ ಕೈಗೆ ಕೊಟ್ಟು ಅವರಿಂದ ಗುಡಿಸಿಕೊಂಡು ಇತಿಹಾಸದ ಕಸದ ಬುಟ್ಟಿಗೆ ಜಮೆಯಾಗುತ್ತಿದೆ.
ಅಮ್ ಆದ್ಮಿ ಪಕ್ಷದಲ್ಲಿ ಕಳೆದ ಹದಿನೈದು ದಿನಗಳಿಂದ ನಡೆಯುತ್ತಿರುವ ರಾಜಕೀಯ ಕ್ಷಿಪ್ರ ಬೆಳವಣಿಗೆಗಳು, ಆರೋಪ, ಪ್ರತ್ಯಾರೋಪಗಳು, ಇವೆಲ್ಲವೂ ಪ್ರಜ್ಞಾವಂತ ನಾಗರೀಕರಲ್ಲಿ ಧಿಗ್ಭ್ರಮೆ ಮತ್ತು ಜಿಗುಪ್ಸೆ ಮೂಡಿಸುವುದರ ಜೊತೆಗೆ ಇನ್ನೆಂದಿಗೂ ಭಾರತದ ಯಾವುದೇ ಪರ್ಯಾಯ ರಾಜಕಾರಣದ ಪ್ರಯೋಗಗಳನ್ನು ನಂಬದಂತೆ ಮಾಡಿದೆ. ನಾಲ್ಕು ವರ್ಷದ ಹಿಂದೆ ಭ್ರಷ್ಟಾಚಾರದ ವಿರುದ್ಧ ಗಾಂದಿವಾದಿ ಅಣ್ಣಾ ಹಜಾರೆ ಆರಂಭಿಸಿದ ಆಂಧೋಲನ ಪರ್ಯಾಯ ರಾಜಕಾರಣದ ಬಗ್ಗೆ ಹೊಸ ಆಸೆ ಮತ್ತು ಭರವಸೆಗಳನ್ನು ಮೂಡಿಸಿತ್ತು. ಅರವಿಂದ್ ಕೇಜ್ರಿವಾಲ್ ಎಂಬ ಸಾಮಾನ್ಯ ಹಿನ್ನಲೆಯಿಂದ ವ್ಯಕ್ತಿ  ಈ ದೇಶದಲ್ಲಿ ಸಾಮಾನ್ಯ ನಾಗರೀಕನೊಬ್ಬ ಮತದಾರರ ವಿಶ್ವಾಸ ಮತ್ತು ಬೆಂಬಲ ಪಡೆದು ರಾಜಕಾರಣದ ದಿಕ್ಕನ್ನು ಬದಲಿಸಬಲ್ಲ ಎಂಬುದನ್ನು ಅಮ್ ಆದ್ಮಿ ಪಕ್ಷದ ಮೂಲಕ ಇಡೀ ಜಗತ್ತಿಗೆ ತೋರಿಸಿಕೊಟ್ಟಿದ್ದರು. ಆದರೆ ಒಬ್ಬ ಜನನಾಯಕನಿಗೆ ಇರಬೇಕಾದ ತಾಳ್ಮೆ,, ಅಧಿಕಾರ ಚಲಾಯಿಸಲು ಇರಬೇಕಾದ ಮುತ್ಸದಿತನ ಇವುಗಳ ಕೊರತೆಯಿಂದಾಗಿ ಮತ್ತು ಪಕ್ಷದ ಸಂಸ್ಥಾಪಕ ಸದಸ್ಯರ ಜೊತೆ ನಡೆದುಕೊಂಡ ಸರ್ವಾಧಿಕಾರಿಯ ವರ್ತನೆಯಿಂದಾಗಿ  ಕೇಜ್ರಿವಾಲ್  ಇಡೀ ಪಕ್ಷವನ್ನು ಅಧಃಪತನದತ್ತ ಕೊಂಡೊಯ್ದು ನಿಲ್ಲಿಸಿದ್ದಾರೆ.. ತಮ್ಮ ತಾತ್ವಿಕ ಭಿನ್ನಾಭಿಪ್ರಾಯಗಳಿಂದ  ಪ್ರೊ. ಯೋಗೇಂದ್ರಯಾದವ್ ಮತ್ತು ಪ್ರಖ್ಯಾತ ವಕೀಲ ಪ್ರಶಾಂತ್ ಭೂಷಣ್ ಇವರುಗಳು ಅಮ್ ಆದ್ಮಿ ಪಕ್ಷದಿಂದ ಹೊರಬಂದ ನಂತರ  ಸ್ಥಾಪಿಸಿದ ಸ್ವರಾಜ್ ಇಂಡಿಯಾ ಎನ್ನುವ ನೂತನ ಪಕ್ಷವು ದೆಹಲಿ ಮಹಾನಗರ ಸಭೆಯ ಚುನಾವಣೆಯಲ್ಲಿ ಶೇಕಡ ಒಂದರಷ್ಟು ಮತವನ್ನು ಪಡೆಯಲು ವಿಫಲವಾಗಿದೆ. 

ಕೇವಲ ಎರಡು ವರ್ಷಗಳ ಹಿಂದೆ ದಿಲ್ಲಿಯ ಮತದಾರರು, ತಾವೇ ಸ್ವತಃ ಹಣ ಹಾಕಿಕೊಂಡು ಚುನಾವಣೆಯ ಪ್ರಚಾರದಲ್ಲಿ ಪಾಲ್ಗೊಂಡು   ಮನೆ ಮನೆಗೆ ಭೇಟಿ ನೀಡಿ ಅಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತ ನೀಡುವಂತೆ ಮತದಾರರಲ್ಲಿ ವಿನಂತಿಸಿಕೊಂಡಿದ್ದರು.ಇವರಲ್ಲಿ ವಿದ್ಯಾರ್ಥಿಗಳು, ಉದ್ಯೋಗಸ್ಥ ಯುವಕರು, ಗೃಹಣಿಯರು, ಪೌರಕಾರ್ಮಿಕರು, ಆಟೋರಿಕ್ಷಾ ಮತ್ತು ಸೈಕಲ್ ರಿಕ್ಷಾ ಚಾಲಕರು ಇದ್ದದ್ದು ವಿಶೇಷವಾಗಿತ್ತು. ಏಕೆಂದರೆ, ಅಮ್ ಆದ್ಮಿ ಪಕ್ಷವು ಜನಸಾಮಾನ್ಯರ ಪಕ್ಷ ಎಂಬ ವಿಶ್ವಾಸವನ್ನು ಮತ್ತು ಭರವಸೆಯನ್ನು ನಾಗರೀಕರಲ್ಲಿ ಮೂಡಿಸಿತ್ತು. ಇದೀಗ ಭ್ರಮನಿರಸನಗೊಂಡಿರುವ ಅದೇ ನಾಗರೀಕರು ಪಕ್ಷವನ್ನು ಬೇರು ಸಮೇತ ಕಿತ್ತೊಗೆಯಲು ಕಾಯುತ್ತಿದ್ದಾರೆ. ಇದು ಒಂದು ಪಕ್ಷದ ಸೋಲು ಮಾತ್ರವಾಗಿರದೆ, ಭಾರತದ ಪ್ರಜ್ಞಾವಂತ ನಾಗರೀಕರ ಪರ್ಯಾಯ ರಾಜಕಾರಣದ ಪ್ರಯೋಗದ ವಿಫಲತೆ ಕೂಡ ಆಗಿದೆ.
.ಅಧಿಕಾರಕ್ಕೆ ಬರುವ ಮುನ್ನ ಅರವಿಂದ ಕೇಜ್ರಿವಾಲರು ಯಾವ ಭ್ರಷ್ಟಾಚಾರದ ವಿರುದ್ಧ ಹೋರಾಡಿದ್ದರೋ, ಈಗ  ಅದೇ ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿ ನ್ಯಾಯಾಲಯದ ಕಟ ಕಟೆಗೆ ಏರುವ ಹಂತ ತಲುಪಿದ್ದಾರೆ.. ಅವರದೇ ಸಚಿವ ಸಂಪುಟದ ಸದಸ್ಯರಾಗಿದ್ದ ಕಪಿಲ್ ಮಿಶ್ರಾ ಎಂಬುವರು ಮುಂಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಭ್ರಷ್ಟಾಚಾರದ ದಾಖಲೆಗಳ ಸಮೇತ ಆರೋಪ ಹೊರಿಸಿ,  ನ್ಯಾಯಾಲಯಕ್ಕೆ ದೂರು ದಾಖಲಿಸಿದ್ದಾರೆ. ಆದರೆ ಈವರೆಗೆ ಕೇಜ್ರಿವಾಲ್ ಈ ಆರೋಪಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಿರಾಕರಿಸಿಲ್ಲ.  ಆದರೆ  ತಮ್ಮ ಸಹೋದ್ಯೋಗಿ ಹಾಗೂ ದೆಹಲಿಯ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಮೂಲಕ  ಆರೋಪವನ್ನು ಅಲ್ಲಗೆಳದಿದ್ದಾರೆ. ಇದರ ಜೊತೆಗೆ ತುರ್ತು ಸಭೆ ನಡೆಸಿ, ಕಪಿಲ್ ಮಿಶ್ರಾ ಅವರನ್ನು ಪಕ್ಷದಿಂದ ಅಮಾನತ್ತುಗೊಳಿಸಿದ್ದಾರೆ.
ದೆಹಲಿಯಲ್ಲಿ ಅಧಿಕಾರಕ್ಕೆ ಬರುವ ಮೊದಲು ಹಾಗೂ ಅಧಿಕಾರಕ್ಕೆ ಬಂದ ಪ್ರಥಮ ವರ್ಷದಲ್ಲಿ ಅರವಿಂದ್ ಕೇಜ್ರಿವಾಲರು ಭ್ರಷ್ಟಾಚಾರ ಕುರಿತಂತೆ ಹೇಳುತ್ತಿದ್ದ ಮಾತುಗಳಿಗೂ ಹಾಗೂ ಈಗಿನ ಅವರ ನಡುವಳಿಕೆಗೂ ಅಜಗಜಾಂತರ ವ್ಯತ್ಯಾಸಗಳು ಎದ್ದು ಕಾಣುತ್ತಿವೆ. ಅತ್ಯಧಿಕ ಸ್ಥಾನಗಳನ್ನು ಗಳಿಸುವುದರ ಮೂಲಕ ದಿಲ್ಲಿಯ ಅದಿಕಾರದ ಗದ್ದುಗೆಗೆ ಏರಿದ ಅಮ್ ಆದ್ಮಿಯ ಪಕ್ಷದ ಶಾಸಕರುಗಳಲ್ಲಿ ಹಲವರು ಒಬ್ಬೊಬ್ಬರಾಗಿ ವಿವಿಧ  ಹಗರಣಗಳಲ್ಲಿ ಸಿಲುಕಿ ಪಕ್ಷಕ್ಕೆ ಕೆಟ್ಟ ಹೆಸರು ತಂದರು. ಕೆಲವರು ಜೈಲು ಪಾಲಾದರೆ, ಇನ್ನು ಹಲವರು ತಮ್ಮ ಶಾಸಕ ಸ್ಥಾನಕ್ಕೆ ಕುತ್ತು ತಂದುಕೊಂಡರು. ಮುಂದಿನ ಸರದಿ ಅರವಿಂದ ಕೇಜ್ರಿವಾಲರದು ಎಂಬಂತಾಗಿದೆ. ಈಗಾಗಲೇ ಅವರ ವಿರುದ್ಧ  ಎಫ್.ಐ.ಆರ್. ದಾಖಲಾಗಿದ್ದು ಸಿ.ಬಿ.ಐ. ತನಿಖೆ ಆರಂಭಿಸಿದೆ. ಆರೋಪ ಸಾಬೀತಾದರೆ, ಅವರನ್ನು ಅಧಿಕಾರದಿಂದ ಕಿತ್ತೊಗೆಯಲು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಅಣ್ಣಾ ಹಜಾರ ಘೋಷಿಸಿದ್ದಾರೆ.
ನಾವು ಕನಸು ಕಾಣುವ ಆದರ್ಶ ಸಮಾಜಕ್ಕೂ ಮತ್ತು ವಾಸ್ತವದ ರಾಜಕಾರಣಕ್ಕೂ ಇರುವ ವ್ಯತ್ಯಾಸ ಇದೀಗ ಅರವಿಂದ ಕೇಜ್ರಿವಾಲರಿಗೆ ಅರ್ಥವಾಗತೊಡಗಿದೆ. ದೇಶದ ಹಲವು ರಾಜಕೀಯ ಪಕ್ಷಗಳಿಗೆ  ದೇಣಿಗೆ ರೂಪದಲ್ಲಿ  ಹರಿದು ಬಂದ ಕಪ್ಪು ಹಣದ ಬಗ್ಗೆ ದೇಶಾದ್ಯಂತ ಸಾರ್ವಜನಿಕ ಸಭೆಗಳಲ್ಲಿ ಧ್ವನಿ ಎತ್ತರಿಸಿ ಮಾತನಾಡಿದ ಅವರು,  ತಮ್ಮ ಅಮ್ ಆದ್ಮಿ ಪಕ್ಷಕ್ಕೆ ದೇಶ, ವಿದೇಶದಿಂದ ದೇಣಿಗೆ ರೂಪದಲ್ಲಿ ಎಷ್ಟು ಹಣ ಬಂದಿದೆ ಎಂಬುದನ್ನು ಈವರೆಗೆ ಬಹಿರಂಗಗೊಳಿಸಿಲ್ಲ. ಇನ್ನೊಬ್ಬರ  ನೈತಿಕತೆ ಕುರಿತು ಮಾತನಾಡುವ ಮುನ್ನ ತಮ್ಮ ವೈಯಕ್ತಿಕ ನೆಲೆಗಟ್ಟು  ನೈತಿಕವಾಗಿ ಎಷ್ಟರ ಮಟ್ಟಿಗೆ ಭದ್ರವಾಗಿದೆ ಎಂದು ಅರವಿಂದ್ ಕೇಜ್ರಿವಾಲ್  ಒಮ್ಮೆ ಪರೀಕ್ಷಿಸಿಕೊಳ್ಳಬೇಕಿತ್ತು.
ದಿಲ್ಲಿಯ ಜನರಿಗೆ ಕೈಗೆಟುಕುವ ದರದಲ್ಲಿ ನೀರು. ವಿದ್ಯುತ್ ಒದಗಿಸುವ ಆಶ್ವಾಸನೆ ನೀಡಿದ್ದರು. ಅಧಿಕಾರಕ್ಕೆ ಬಂದ  ಮೊದಲ ವರ್ಷ ಇಂತಹ ಪ್ರಯತ್ನ ನಡೆಯಿತಾದರೂ  ನಂತರ ಅದು ತಣ್ಣಗಾಯಿತು. ಜನಸಾಮಾನ್ಯರ ಜೊತೆ ಸಮಸ್ಯೆಗಳ ಕುರಿತಾಗಿ ನೇರ ಸಂವಾದ ನಡೆಸುತ್ತೇನೆ ಎಂದು ಬೀದಿಗಿಳಿದ ಅರವಿಂದ ಕೇಜ್ರಿವಾಲರಿಗೆ ಜನರ ಮುತ್ತಿಗೆ ಹಾಗೂ ಬೆಟ್ಟದಷ್ಟು ದೂರುಗಳು ಮತ್ತು ಅಹವಾಲುಗಳು  ಎದುರಾದಾಗ ಆ ಪ್ರಯೋಗವನ್ನು  ಕೈ ಬಿಟ್ಟರು. ಇದೀಗ  ಅವರು ದೆಹಲಿಯ ಲೆಪ್ಟಿನೆಂಟ್ ಗೌರ್ನರ್ ಮತ್ತು ಕೇಂದ್ರ ಸರ್ಕಾರದ ಜೊತೆ ನಿರಂತರ ಸಂಘರ್ಷಕ್ಕೆ ಇಳಿಯುವುದರ ಮೂಲಕ ತಮ್ಮ ರಾಜ್ಯದ ಸಮಸ್ಯೆಗಳು ಹಾಗೂ ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಿದ್ದಾರೆ. ರಾಜಕೀಯ ಪಕ್ಷಗಳ ನಡುವಿನ ತಾತ್ವಿಕ ಅಥವಾ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ನಡುವೆಯೂ ಅಭಿವೃದ್ಧಿಯ ದೃಷ್ಟಿಯಿಂದ ಕೆಲವೊಮ್ಮೆ ಸಹಕಾರ ಸಮನ್ವಯತೆ ಅನಿವಾರ್ಯ ಎಂಬುದನ್ನು ಕೇಜ್ರಿವಾಲ್ ಮನಗಾಣದೆ ಹೋದದ್ದು ಅವರ ರಾಜಕೀಯ ಅಪ್ರಬುದ್ಧತೆಯನ್ನು ಎತ್ತಿ ತೋರಿಸಿತು. ಈ ಎಲ್ಲಾ ಕಾರಣಗಳಿಂದಾಗಿ ಅಮ್ ಆದ್ಮಿ ಪಕ್ಷ ಕುರಿತಂತೆ ದಿಲ್ಲಿಯ ನಾಗರೀಕರೂ ಸೇರಿದಂತೆ ದೇಶದ ಪ್ರಜ್ಞಾವಂತರಲ್ಲಿ ಇದ್ದ ಆಸೆ, ಆಕಾಂಕ್ಷೆಗಳು ಕರಗಿ ಹೋದವು.
ಅಮ್ ಆದ್ಮಿ ಪಕ್ಷದ ವಿಫಲತೆ ಒಂದು ಪಕ್ಷದ ಸೋಲು ಮಾತ್ರ ಆಗಿರದೆ, ಈ ದೇಶದ ಪರ್ಯಾಯ ರಾಜಕಾರಣದ ಪ್ರಯೋಗದ ಸೋಲು ಕೂಡ ಆಗಿದೆ. ಕಳೆದ ಮೂರು ದಶಕಗಳಿಂದ ದೇಶದಲ್ಲಿ ನಿರಂತರವಾಗಿ ನೆಲಕಚ್ಚುತ್ತಿರುವ ಸಾಮಾಜಿಕ ಚಳುವಳಿಗಳ ಸೋಲಿನ ಪಟ್ಟಿಗೆ ಅಮ್ ಆದ್ಮಿ ಪಕ್ಷದ ಹೆಸರು ಸೇರ್ಪಡೆಯಾಗುವುದರ ಮೂಲಕ ಈ ದೇಶದ ಎಲ್ಲಾ ಹೋರಾಟಗಳನ್ನು ಮತ್ತು ಚಳುವಳಿಗಳನ್ನು ನಾಗರೀಕರು ಅನುಮಾನದಿಂದ ನೋಡುವಂತಾಗಿದೆ . ಇನ್ನು ಮುಂದೆ ಯಾರಾದರೂ  ಈ ದೇಶದಲ್ಲಿ  ಪರ್ಯಾಯ ರಾಜಕೀಯ ವ್ಯವಸ್ಥೆಯ ಕುರಿತು ಮಾತನಾಡಿದರೆ, ಅದು ಉಳ್ಳವರ ವ್ಯಸನವಾಗಬಲ್ಲದೇ ಹೊರತು, ಆಚರಣೆಗೆ ತರಬಹುದಾದ ವಾಸ್ತವದ ಮಾತಾಗಲಾರದು.
( ಕರಾವಳಿ ಮುಂಜಾವು ಪತ್ರಿಕೆಯ “ ಜಗದಗಲ” ಅಂಕಣಕ್ಕೆ ಬರೆದ ಲೇಖನ)


ಶುಕ್ರವಾರ, ಮೇ 5, 2017

ಕುಡಿಯುವ ನೀರಿಗೆ ಪರ್ಯಾಯ ವ್ಯೆವಸ್ಥೆ ಪಾತಾಳಗಂಗೆಯಲ್ಲ, ಪ್ರಾಚೀನ ಪುಷ್ಕರಣಿಗಳು ಮಾತ್ರ


ಕರ್ನಾಟಕದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಕುಡಿಯುವ ನೀರಿನ ಅಭಾವ ತಲೆದೋರಿದೆ. ಮಲೆನಾಡಿನ ಪ್ರದೇಶವವೂ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನೀರಿನ ಸೆಲೆಗಳು ಬತ್ತಿಹೋಗಿವೆ. ಜಲಮೂಲಗಳ ತಾಣಗಳಾದ ಕೆರೆ ಕಟ್ಟೆಗಳು ಹೂಳಿನಿಂದ ತುಂಬಿ ಬರಿದಾಗಿವೆ. ಕೊಳವೆ ಬಾವಿಗಳಲ್ಲಿ ಶೇಕಡ 80 ರಷ್ಟು ಭಾಗ ಒಣಗಿ ನಿಂತಿವೆ. ಗ್ರಾಮೀಣ ಪ್ರದೇಶಗಳಲ್ಲಿ ಜನರಷ್ಟೇ ಅಲ್ಲ, ಪಶು ಪ್ರಾಣಿಗಳು ಸಹ ನೀರಿಗಾಗಿ ಪರಿತಪಿಸುತ್ತಿವೆ. ಇಂತಹ ಸಂಕಷ್ಟದ ಸಮಯದಲ್ಲಿ ನಮ್ಮ ಕೆರೆ ಕಟ್ಟೆಗಳನ್ನು ಹಾಗೂ ಪ್ರಾಚೀನ ಕಾಲದ ಕಲ್ಯಾಣಿ ಅಥವಾ ಪುಷ್ಕರಣಿಗಳ  ಹೂಳೆತ್ತಿ ಅವುಗಳನ್ನು ಪುನಶ್ಚೇತನಗೊಳಿಸಬೇಕು ಎಂಬ ಪರಿಜ್ಞಾನ ನಮ್ಮ ಜನ ಸಮುದಾಯದಲ್ಲಿ  ನಿಧಾನವಾಗಿ ಮೂಡಿ ಬರುತ್ತಿದೆ.
ಇಂತಹ ಸಂಕಷ್ಟದ ಸಮಯದಲ್ಲಿ ಕನ್ನಡ ಚಿತ್ರರಂಗದ ನಟ ಯಶ್ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಹಳ್ಳಿಗಳಲ್ಲಿರುವ  ಕೆರೆ ಕಟ್ಟೆಗಳ ಹೂಳೆತ್ತಲು ಕೈ ಜೋಡಿಸಿದ್ದಾರೆ. ಇವುಗಳ ಜೊತೆಗೆ ಸರ್ಕಾರದ ನೆರವಿಗಾಗಿ ಕಾಯದೆ ಗ್ರಾಮಸ್ಥರು ತಾವೇ ಶ್ರಮದಾನದ ಮೂಲಕ ಕೆರೆ ಕಟ್ಟೆಗಳ ಹೂಳು ತೆಗೆದು ನೀರು ಸಂಗ್ರಹಿಸಲು ಮುಂದಾಗಿದ್ದಾರೆ. ಶಿರಸಿ ನಗರದ ಆನೆಹೊಂಡವನ್ನು ಅಲ್ಲಿನ ನಾಗರೀಕರು ಸ್ವಚ್ಛಗೊಳಿಸುವುದರ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಪ್ರಕೃತಿಯ ಕೊಡುಗೆಗಳಲ್ಲಿ ಅತ್ಯಮೂಲ್ಯವಾದ ಮಳೆ ನೀರನ್ನು ಸಂಗ್ರಹಿಸಲು ಉದಾಸೀನ ತೋರುವುದರ ಜೊತೆಗೆ, ನೀರಿನ ತಾಣಗಳನ್ನು ಸಂರಕ್ಷಿಸುವಲ್ಲಿ ನಾವು ತೋರಿದ ಸೋಮಾರಿತನ ಫಲವೆಂಬಂತೆ ಎಲ್ಲಡೆ ನೀರಿನ ಹಾಹಾಕಾರ ಎದ್ದಿದೆ. ಜೊತೆಗೆ ಇದೀಗ ನೀರಿನ ಮಹತ್ವ ಕೂಡ ಅರಿವಾಗಿದೆ.
ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಕುಡಿಯುವ ನೀರಿಗಾಗಿ ಭೂಮಿಯಿಂದ ಹತ್ತಾರು ಕಿಲೋಮೀಟರ್ ಕೆಳಗಿರುವ ಪಾತಾಳದ ನೀರನ್ನು ಮೇಲೆತ್ತಲು ಸರ್ಕಾರದ ವತಿಯಿಂದ ಯೋಜನೆ ರೂಪಿಸಲಾಗುತ್ತಿದೆ ಎಂಬ ಅವಿವೇಕದ ಮಾತನ್ನು ನಮ್ಮ ಗ್ರಾಮೀಣಾಭಿವೃದ್ಧಿ ಖಾತೆಯ ಸಚಿವ ಹೆಚ್.ಕೆ.ಪಾಟೀಲ್ ಹೇಳಿದ್ದಾರೆ. ಇದಕ್ಕೆ ನಾಡಿನಾದ್ಯಂತ ಪ್ರಜ್ಞಾವಂತರು ಹಾಗೂ ಇಲ್ಲಿನ ನೆಲ-ಜಲದ ಬಗ್ಗೆ ಕಾಳಜಿಯುಳ್ಳ ಪರಿಸರವಾದಿಗಳು ತೀವ್ರವಾದ ಪ್ರತಿಭಟನೆ ಸಲ್ಲಿಸಿದ್ದಾರೆ. ಅಮೇರಿಕಾದ ಸಂಸ್ಥೆಯೊಂದು ಇಂತಹ ಭೂಮಿಯ ಒಡಲು ಬಗೆಯುವ ಪ್ರಸ್ತಾವನೆಯನ್ನು ಕರ್ನಾಟಕದ ಮುಂದಿಟ್ಟು ಹಲವು ಕೋಟಿ ರೂಪಾಯಿಗಳ ಯೋಜನೆಯನ್ನು ಸಿದ್ಧಪಡಿಸಿದೆ. ಭೂಮಿಯ ಅಡಿಯಲ್ಲಿ ಸಾಗರೋಪಾದಿಯಲ್ಲಿ ನೀರು ಇರುವುದು ನಿಜ. ಆದರೆ ಈ ನೀರು ಕುಡಿಯಲು ಯೋಗ್ಯ ಎಂಬುದಕ್ಕೆ ಯಾವುದೇ ಖಾತ್ರಿಯಲ್ಲ.  ಈ ಹಿಂದೆ ಮೋಡಗಳಿಂದ ಮಳೆ ತರಿಸುವ ನೆಪದಲ್ಲಿ ದುಡ್ಡು ಎತ್ತುವ ಯೋಜನೆಯೊಂದನ್ನು ಕರ್ನಾಟಕದಲ್ಲಿ ಜಾರಿಗೆ ತರಲಾಗಿತ್ತು. ಈಗಿನ ರಾಜಕಾರಣಿಗಳಲ್ಲಿ ಸಭ್ಯ, ಸಜ್ಜನ ಮತ್ತು ಪ್ರಜ್ಞಾವಂತ ರಾಜಕಾರಣಿ ಎನಿಸಿರುವ ಹೆಚ್.ಕೆ. ಪಾಟೀಲರು ಇಂತಹ ಮೂರ್ಖ ಯೋಜನೆಗೆ ಅನುಮತಿ ನೀಡಲು ಹೊರಟಿರುವುದು ನಿಜಕ್ಕೂ ಆಶ್ಚರ್ಯಕರ ಸಂಗತಿ.
ಕುಡಿಯುವ ನೀರಿನ ಬರ ನೀಗಿಸಲು, ಅರಬ್ ಮತ್ತು ಇಸ್ರೇಲ್ ಮುಂತಾದ ರಾಷ್ಟ್ರಗಳಲ್ಲಿ ಸಮುದ್ರದ ಉಪ್ಪು ನೀರನ್ನು ಕುಡಿಯುವ ನೀರಾಗಿ ಪರಿವರ್ತಿಸುವ ಘಟಕಗಳು ಸ್ಥಾಪನೆಯಾಗಿರುವುದು ಸಚಿವರಿಗೆ ತಿಳಿದಂತೆ ಕಾಣುವುದಿಲ್ಲ. ನಮ್ಮ ನೆರೆಯ ತಮಿಳುನಾಡಿನ ರಾಜಧಾನಿ ಚೆನ್ನೈ ನಗರದಲ್ಲಿ ಇಂತಹ ಘಟಕಗಳು ಈಗಾಗಲೇ ಅಸ್ತಿತ್ವಕ್ಕೆ ಬಂದಿವೆ.ಸಮುದ್ರದ ನೀರನ್ನು ಸಂಸ್ಕರಿಸುವುದು ಕೊಂಚ ದುಬಾರಿ ಎನಿಸಿದರೂ ಸಹ ಪ್ರತಿ ವರ್ಷ ಪುಕ್ಕಟೆಯಾಗಿ ಧರೆಗೆ ಬಿದ್ದು ಹರಿದು ಹೋಗುವ ಮಳೆ ನೀರನ್ನು ಹಿಡಿದಿಡಲು ನಾವು ಏನು ಕ್ರಮ ಕೈಗೊಂಡಿದ್ದೀವಿ ಎಂಬುದರ ಕುರಿತು ಸಚಿವರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.
ಭಾರತದಲ್ಲಿ ಅತ್ಯಂತ ಕಡಿಮೆ ಮಳೆ ಬೀಳುವ ರಾಜ್ಯಗಳು ಎನಿಸಿಕೊಂಡಿರುವ ಗುಜರಾತ್ ಮತ್ತು ರಾಜಸ್ಥಾನದಲ್ಲಿ ಅಲ್ಲಿನ ಜನತೆ ಮಳೆ ನೀರು ಸಂಗ್ರಹಿಸಿಕೊಂಡು ಬದುಕು ಕಟ್ಟಿಕೊಂಡಿರುವ ಸಾಹಸಮಯ ಯಶೋಗಾಥೆ ಕರ್ನಾಟಕಕ್ಕೆ ಮಾತ್ರವಲ್ಲ, ಇಡೀ ಭಾರತ ದೇಶಕ್ಕೆ ಮಾದರಿಯಾಗುವಂತಹದ್ದು. ಇತ್ತೀಚೆಗಿನ ದಿನಗಳಲ್ಲಿ ಗ್ರಾಮಪಂಚಾಯಿತಿಗಳಿಂದ ಹಿಡಿದು, ತಾಲ್ಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಹಾಗೂ ವಿಧಾನಸಭೆಯ ಜನಪ್ರತಿನಿಧಿಗಳು ಅಧ್ಯಯನ ಪ್ರವಾಸದ ಹೆಸರಿನಲ್ಲಿ ಗೋವಾದಿಂದ ಹಿಡಿದು ಥಾಯ್ಲೆಂಡ್, ಬಾಂಕಾಕ್ ಹಾಗೂ ಮಲೇಷಿಯಾಗಳಿಗೆ ಪ್ರವಾಸ ಹೋಗಿ ಅಲ್ಲಿನ ಬಾರ್ ಗಳಲ್ಲಿ  ಕುಡಿದು ಕುಪ್ಪಳಿಸಿ ಬರುತ್ತಿದ್ದಾರೆ. ಇಂತಹ ಮಾನಗೆಟ್ಟ ಮೋಜಿನ ಪ್ರವಾಸಕ್ಕೆ ಕರ್ನಾಟಕ ಸರ್ಕಾರ ಕೊಟ್ಯಾಂತರ ರೂಪಾಯಿಗಳನ್ನು ವ್ಯಯ ಮಾಡುತ್ತಿದೆ. ಮೋಜಿಗಾಗಿ ಹಾತೊರೆಯುವ ಜನಪ್ರತಿನಿಧಿಗಳೆಂಬ ಅವಿವೇಕಿಗಳನ್ನು ಗುಜರಾತ್ ಮತ್ತು ರಾಜಸ್ಥಾನ ರಾಜ್ಯಗಳಿಗೆ ಪ್ರವಾಸ ಕಳಿಸಿದರೆ, ಅವರ ತಲೆಯಲ್ಲಿ ತುಂಭಿರುವ ಅಜ್ಞಾನವೆಂಬ ಹೂಳು  ಖಾಲಿಯಾಗಿ ಸರ್ಕಾರ ವ್ಯಯ ಮಾಡುವ ಹಣಕ್ಕೆ ಒಂದಿಷ್ಟು ಗೌರವ ಬರುತ್ತದೆ.
ಇಡೀ ಜಗತ್ತಿನಾದ್ಯಂತ ಎಲ್ಲಿ ಗಮನಿಸಿದರೂ ಸಹ ಮನುಷ್ಯನ ನಾಗರೀಕತೆ ಉಗಮವಾಗಿರುವುದು  ನದಿ ತೀರದಲ್ಲಿ ಎಂಬುದು ನಮಗೆ ಇತಿಹಾಸದ ಪಠ್ಯಗಳಿಂದ ತಿಳಿಯುತ್ತದೆ. ಮನುಷ್ಯನ ಮೂಲಭೂತ ಬೇಡಿಕೆಗಳಲ್ಲಿ ಆಹಾರದಷ್ಟೇ ಮಹತ್ವ ಪಡೆದಿದ್ದ ಕುಡಿಯುವ ನೀರಿನ ಕುರಿತು ನಮ್ಮ ಪೂರ್ವಿಕರಿಗೆ ಅಪಾರವಾದ ತಿಳುವಳಿಕೆಯಿತ್ತು. ಹಾಗಾಗಿ ಇಡೀ ಸಮುದಾಯಕ್ಕೆ ನೆರವಾಗುವ ದೃಷ್ಟಿಕೋನದಿಂದ ತಾವು ನಿರ್ಮಿಸುತ್ತಿದ್ದ ದೇವಾಲಯಗಳ ಬಳಿ ಬಾವಿಗಳನ್ನು ಮತ್ತು ಪುಷ್ಕರಣಿಗಳನ್ನು ನಿರ್ಮಿಸುತ್ತಿದ್ದರು. ಕ್ರಿ.ಶ. ಐದನೆಯ ಶತಮಾನದಿಂದ ಆಚರಣಗೆ ಬಂದ ಈ ಸಂಪ್ರದಾಯ ದೇಶಾದ್ಯಂತ ರಾಜ್ಯಗಳನ್ನಾಡಿದ ಅನೇಕ ರಾಜಮನೆತನಗಳ ಮೂಲಕವೂ ಮುಂದುವರಿಯಿತು. ಅತಿ ಕಡಿಮೆ ಬೀಳುವ ಉತ್ತರ ಭಾರತದ ಪೂರ್ವ ಭಾಗದ ರಾಜಸ್ಥಾನ, ಗುಜರಾತ್, ಮಧ್ಯಭಾರತದ ಮಧ್ಯಪ್ರದೇಶ ಮತ್ತು ಉತ್ತರದ ದೆಹಲಿ ನಗರಗಳು ಸೇರಿದಂತೆ ದಕ್ಷಿಣ ಭಾರತದ ಕರ್ನಾಟಕ, ಆಂಧ್ರ, ತಮಿಳುನಾಡು ಮತ್ತು ಕೇರಳದಲ್ಲಿ ಸಮುದಾಯಕ್ಕೆ ವರ್ಷಪೂರ್ತಿ ನೀರು ಒದಗಿಸುತ್ತಿದ್ದ ಪುಷ್ಕರಣಿಗಳು ಹಾಗೂ ನೂರಾರು ಮೆಟ್ಟಿಲುಗಳಿರುವ ತೆರದ ಬಾವಿಗಳನ್ನು ನಾವು ಕಾಣಬಹುದು. ಇವೆಲ್ಲವೂ ಮಳೆ ನೀರನ್ನು ಸಂಗ್ರಹಿಸಿ ಇಡುವ ಅಪೂರ್ವ ಜಲತಾಣಗಳಾಗಿದ್ದವು. ಜೊತೆಗೆ ಭೂಮಿಯ ಅಂತರ್ಜಲ ಹೆಚ್ಚಿಸುವಲ್ಲಿ ಸಹಕಾರಿಯಾಗಿದ್ದವು.
ಹಿಂದಿಯಲ್ಲಿ ಬಾವಲಿ, ಬಾವಡಿ, ಗುಜರಾತಿಯಲ್ಲಿ ವಾವ್, ಮರಾಠಿಯಲ್ಲಿ ಬರವ್ ಎಂತಲೂ ಕನ್ನಡದಲ್ಲಿ ಕಲ್ಯಾಣಿ ಅಥವಾ ಪುಷ್ಕರಣಿ ಎಂದು ಕರೆಸಿಕೊಳ್ಳುತ್ತಿದ್ದ ಇಂತಹ ನೂರಾರು ಜಲತಾಣಗಳನ್ನು ಇಂದಿಗೂ ಸಹ ನಾವು ಎಲ್ಲೆಡೆ ಕಾಣಬಹುದು. ರಾಜಸ್ಥಾನದಲ್ಲಿ ಪ್ರತಿಯೊಂದು ಹಳ್ಳಿಯಲ್ಲೂ ತಮ್ಮ ತಮ್ಮ ಮನೆಗಳ ಬಳಿ ವರ್ಷ ಪೂರ್ತಿ ಬಳಕೆಗೆ ಆಗುವಷ್ಟು ಮಳೆ ನೀರನ್ನು ಹಿಡಿದಿಟ್ಟು ಕಾಪಾಡಿಕೊಳ್ಳುವ ವ್ಯೆವಸ್ಥೆ ಜಾರಿಯಲ್ಲಿದೆ. ಇದಲ್ಲದೆ, ರೈತರು ತಮ್ಮ ಜಮೀನುಗಳು ಕಣಗಳ ಮಾದರಿಯಲ್ಲಿ ಜಮೀನನ್ನು ಸಮತಟ್ಟು ಮಾಡಿ, ಬಿದ್ದ ಮಳೆ ನೀರನ್ನು ನೆಲದ ಅಡಿ ನಿರ್ಮಿಸಿಲಾದ ಬೃಹತ್ ತೊಟ್ಟಿಗಳಲ್ಲಿ ಸಂಗ್ರಹಿಸಿ, ಈ ನೀರನ್ನು ಬೇಸಾಯಕ್ಕೆ ಬಳಸುತ್ತಾರೆ. ಇಂತಹ ಜ್ಞಾನ ಪರಂಪರೆಯನ್ನು ನಾವು ಇದೀಗ ಪುನರುಜ್ಜೀವನಗೊಳಿಸಬೇಕಿದೆ.
ರಾಜಸ್ಥಾನದ ಜೋದಪುರ ಮತ್ತು ಜೈಸಲ್ಮೇರ್ ಎಂಬ ಮರಳುಗಾಡಿನ ಎತ್ತರದ ದಿಬ್ಬದ ನಿರ್ಮಿಸಲಾಗಿರುವ ಕೋಟೆಗಳಲ್ಲಿ ಆಗಿನ ರಾಜ ಮಹಾರಾಜರು ಮಳೆ ನೀರು ಸಂಗ್ರಹಕ್ಕೆ ಮಾಡಿಕೊಂಡಿದ್ದ ವ್ಯವಸ್ಥೆ ಆಧುನಿಕ ತಂತ್ರಜ್ಞಾನಕ್ಕೆ ಸವಾಲು ಎಸೆಯುವಂತಿದೆ. ಹಿಂದೂ ರಾಜಮನೆತನಗಳು ನಿರ್ಮಿಸಿದ ಅರಮನೆಗಳು ಮತ್ತು ಪುಷ್ಕರಣಿಗಳನ್ನು, ನಂತರ ರಾಜ್ಯವಾಳಿದ ಮೊಗಲ್ ದೊರೆಗಳು ಸಹ ಅಭಿವೃದ್ಧಿ ಪಡಿಸಿದ್ದಾರೆ. ಕೆಲವು ಬೃಹತ್ ಪುಷ್ಕರಣಿಗಳು ವಿಶಾಲವಾಗಿದ್ದು, ಹಲವು ಹಂತಗಳಲ್ಲಿ ನಿರ್ಮಿಸಲಾಗಿದ್ದು, ಕೆಳಗಡೆ ರಾಜ ಮತ್ತು ರಾಣಿಯರು ಬಿರು ಬೇಸಿಗೆಯ ಕಾಲದಲ್ಲಿ ವಿಶ್ರಾಂತಿ ಪಡೆಯಲು ಕೊಠಡಿಗಳನ್ನು ಸಹ ನಿರ್ಮಿಸಲಾಗಿದೆ, ಇಂತಹ ಪುಷ್ಕರಣೆಯ ಒಳಗಡೆ ವಾತಾವಾರಣದ ಉಷ್ಣಾಂಶ ನೆಲದ ಮೇಲಿನ ಉಷ್ಣಾಂಶಕ್ಕಿಂತ ಐದರಿಂದ ಆರು ಡಿಗ್ರಿ ಸೆಲ್ಸಿಯಸ್ ಕಡಿಮೆ ಇರುತ್ತಿತ್ತು ಎಂದು ಹೇಳಲಾಗಿದೆ.
ಏಕಕಾಲಕ್ಕೆ ನೀರಿನ ವ್ಯವಸ್ಥೆ ಮತ್ತು ವಾತಾವರಣದ ಉಷ್ಣಾಂಶವನ್ನು ಕಾಪಾಡುತ್ತಿದ್ದ ಇಂತಹ ಜಲಮೂಲ ತಾಣಗಳು ಇಂದಿಗೂ ಸಹ ನಮ್ಮೆದುರು ಸಾಕ್ಷಿಯೆಂಬಂತೆ ಜೀವಂತವಾಗಿವೆ.. ಗುಜರಾತಿನ ರಾಣಿ ಕಿ ವಾವ್, ರೂಡಾಬಾಯಿ ವಾವ್, ರಾಜಸ್ಥಾನದ ಜೊಧಪುರದ ತೂರ್ ಜಿ ಭವನ್, ದೆಹಲಿಯ ಜಂತರ್ ಮಂತರ್ ಪ್ರದೇಶದಲ್ಲಿರುವ ಅಗ್ರಸೇನ್ ಬಾವಲಿ, ಕರ್ನಾಟಕದ ಹಂಪಿಯ ಮಹಾನವಮಿ ದಿಬ್ಬದ ಬಳಿ ಇರುವ ಪುಷ್ಕರಣಿ, ಲಕ್ಕುಂಡಿಯ ಬಳಿ ಇರುವ ಪುಷ್ಕರಣಿ, ಕನಕಗಿರಿಯ ವೆಂಕಟಪ್ಪನಾಯ್ಕನ ಕೊಳ, ಐಹೊಳೆಯ ಮಲ್ಲಿಕಾರ್ಜುನ ದೇಗುಲದ ಬಳಿ ಇರುವ ಪುಷ್ಕರಣಿ, ಮೇಲುಕೋಟೆಯ ಪುಷ್ಕರಣಿ ಹಾಗೂ ಅಕ್ಕ ತಂಗಿಯರ ಕೊಳ ಹಾಗೂ ಮೊಗಲ್ ಸಾಮ್ರಾಜ್ಯದ ಆಳ್ವಿಕೆಯಲ್ಲಿ ನಿರ್ಮಿತವಾದ  ದೆಹಲಿಯ ನಿಜಾಮುದ್ದೀನ್ ಪೂರ್ವ ಭಾಗದ ಹುಮಾಯುನ್ ಗುಮ್ಮಟದ ಬಳಿ ಇರುವ ಕೊಳ, ಆಗ್ರಾದ ತಾಜ್ ಮಹಲ್ ಬಳಿಯ ಮೆಹತಾಬ್ ಬಾಗ್ , ಶ್ರೀನಗರದ ಶಾಲಿಮಾರ್ ಬಾಗ್, ಅಹಮ್ಮದಾಬಾದಿನ ಖುಶ್ರು ಬಾಗ್ ಹೆಸರಿನ ಹೂ ದೋಟಗಳಿಗೆ ನೀರುಣಿಸಲು ನಿರ್ಮಿಸಿದ ಕೊಳಗಳು ನಮ್ಮೆದುರಿಗೆ ಸಾಕ್ಷಿಯಾಗಿವೆ.
ಇಂತಹ ಲಕ್ಷಾಂತರ ಜಲಮೂಲ ತಾಣಗಳು ನಮ್ಮ ಕಣ್ಣೆದುರಿಗೆ ಇದ್ದು, ಅವುಗಳು ಬಳಕೆಯಾಗದೆ, ಹೂಳು ಮತ್ತು ಕಸಕಡ್ಡಿಯಿಮದ ತುಂಬಿ ಹೋಗಿವೆ. ಎಲ್ಲೋ ಇರುವ ಪಾತಾಳ ಗಂಗೆಯ ಬಗ್ಗೆ ಯೋಚಿಸುವುದನ್ನು ಕೈ ಬಿಟ್ಟು, ಕಣ್ಣೆದುರುವ ಇರುವ ಜಲದ ತಾಣಗಳನ್ನು ಅಭಿವೃದ್ದಿಪಡಿಸಿದರೆ, ಕುಡಿಯುವ ನೀರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು.
(ಕರಾವಳಿ ಮುಂಜಾವು ದಿನಪತ್ರಿಕೆಯ "ಜಗದಗಲ" ಅಂಕಣಕ್ಕೆ ಬರೆದ ಲೇಖನ)