ಮಂಗಳವಾರ, ಡಿಸೆಂಬರ್ 17, 2013

ಕೊಟ್ಟ ಕುದುರೆಯನೇರಲಾರದ ಕೇಜ್ರಿವಾಲ್




ಭಾರತದ ಭವಿಷ್ಯದ ದಿಕ್ಸೂಜಿ ಎಂದು ಭಾವಿಸಲಾಗಿದ್ದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಮಿಜೋರಾಂ ರಾಜ್ಯವೊಂದನ್ನು ಹೊರತುಪಡಿಸಿ,ಉಳಿದೆಡೆ ರಾಷ್ಟ್ರೀಯ ಕಾಂಗ್ರೇಸ್ ಪಕ್ಷ ನೆಲಕಚ್ಚಿರುವುದು, ಅನಿರೀಕ್ಷಿತ ಘಟನೆಯೇನಲ್ಲ. ತನ್ನ ದೂರದೃಷ್ಟಿಯ ಕೊರತೆ, ನಾಯಕತ್ವದ ಅರಾಜಕತೆ, ಇವೊತ್ತಿಗೂ ಪಕ್ಷದ ಸಂಘಟನೆಯೊಳಗೆ ತಳಮಟ್ಟದಲ್ಲಿ ಬೇರು ಬಿಟ್ಟಿರುವ ಗುಲಾಮಗಿರಿತನ ಮತ್ತು ವಂಶಪಾರಂಪರ್ಯ ಆಳ್ವಿಕೆಯಲ್ಲಿ ನಲುಗಿಹೋದ ಪಕ್ಷದ ರಾಜಕೀಯ ಚಟುವಟಿಕೆ ಮತ್ತು ಅಭ್ಯರ್ಥಿಯ ಆಯ್ಕೆ ಇವುಗಳಲ್ಲದೆ, ಪ್ರಧಾನಿ ಮನಮೋಹನ್ ಸಿಂಗರ ಕೊನೆಯ ಅವಧಿಯಲ್ಲಿ ಅನಾವರಣಗೊಂಡ ಅವರ ನಿಷ್ಕ್ರೀಯತೆ ಇವೆಲ್ಲವೂ ಕಾಂಗ್ರೇಸ್ ಪತನಕ್ಕೆ ಕಾರಣವಾದವು. ಇದರ ಲಾಭ ಪೂರ್ಣವಾಗಿ ಮತ್ತೊಂದು ಪ್ರಭಲ ರಾಷ್ಟ್ರೀಯ ಪಕ್ಷವಾದ ಬಿ.ಜೆ.ಪಿ. ಗೆ ದಕ್ಕಿತು. ಆದರೆ, ರಾಷ್ಟ್ರ ರಾಜಕಾರಣದ ಚದುರಂಗದ ಅಖಾಡ ಅಖಾಡ ಎಂದೇ ಬಿಂಬಿಸಲ್ಪಡುವ ದೆಹಲಿ ಚುನಾವಣಾ ಫಲಿತಾಂಶ ಮಾತ್ರ  ಕಾಂಗ್ರೇಸ್ ಮತ್ತು ಬಿ.ಜೆ.ಪಿ. ಹಾಗೂ ಪ್ರಾದೇಶಿಕ ಪಕ್ಷಗಳ ನೆಪದಲ್ಲಿ ವಂಶರಾಜಕಾರಣ ಮಾಡುತ್ತಿರುವ ಎಲ್ಲಾ ಹಿರಿಯ ರಾಜಕಾರಣಿಗಳಿಗೆ , ಮುಂದಿನ ದಿನಗಳಲ್ಲಿ ನಿಮ್ಮ ಅಡಿಪಾಯ ಕುಸಿಯಲಿದೆ ಎಂಬ ಸಂದೇಶವನ್ನು ರವಾನಿಸಿದೆ.


ಕಳೆದ ಎರಡು ದಶಕಗಳಿಂದ ದೇಶಾದ್ಯಂತ  ಚಲಾವಣೆಯಲ್ಲಿದ್ದ ನೈತಿಕತೆಯಿಲ್ಲದ ರಾಜಕಾರಣದಿಂದಾಗಿ ಭಾರತದ ಬಹುತೇಕ ಪ್ರಜ್ಙಾವಂತರು  ದೇಶದ ರಾಜಕೀಯದ ಬಗ್ಗೆ ನಂಬಿಕೆ ಕಳೆದುಕೊಂಡಿದ್ದರು. ಇದಕ್ಕೆ ಪೂರಕವಾಗಿ ದೇಶದ ಬಹುತೇಕ ಸಾಮಾಜಿಕ ಹೋರಾಟಗಳೂ ಸಹ ಸಂಘಟನೆಗಳ ನಾಯಕರ ವೈಯಕ್ತಿಕ ಹಿತಾಸಕ್ತಿಗೆ ಬಲಿಯಾಗಿ ಕಣ್ಣೆದುರು ಕರಗಿಹೋದವು.  ಬಹುತೇಕ ಸಾಮಾಜಿಕ ಹೋರಾಟಗಳು ನೆಲಕಚ್ಚುತ್ತಿದ್ದಂತೆ, ಈ ದೇಶದಲ್ಲಿ ರೂಪುಗೊಳ್ಳುವ ಕಾನೂನುಗಳಾಗಲಿ, ಅಥವಾ ಮಸೂದೆಗಳಾಗಲಿ, ಇವೆಲ್ಲವೂ, ಭಾರತದ ಸಂವಿಧಾನಕ್ಕೆ ಮತ್ತು ನಾಗರೀಕರ ಹಕ್ಕುಗಳಿಗೆ ಪೂರಕವಾಗಿ ಇರುವ ಬದಲು, ಭ್ರಷ್ಟ ರಾಜಕಾರಣಿಗಳಿಗೆ ಮತ್ತು ತಮ್ಮ ಹಣ ಹಾಗೂ ತೋಳ್ಬಲದಿಂದ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳನ್ನು ನಿಯಂತ್ರಿಸುತ್ತಿರುವ ಬಂಡವಾಳಶಾಹಿಗಳಿಗೆ ಕಾಲೊರಸುಗಳಾಗಿ (Foot Rug) ರೂಪುಗೊಂಡವು. ಇಂತಹ ನಿರಾಸೆಯ ವಾತಾವರಣದಲ್ಲಿ ಮಹಾರಾಷ್ಟ್ರದ ಅಹಮದಾಬಾದ್ ಜಿಲ್ಲೆಯ  ರಾವಳ್ಗಾಂವ್ ಸಿದ್ಧಿ ಎಂಬ ಪುಟ್ಟ ಗ್ರಾಮದಿಂದ ಎದ್ದು ಬಂದ ಗಾಂಧಿವಾಧಿ ಅಣ್ಣಾ ಹಜಾರೆ ಎಂಬ ಸಾಮಾನ್ಯ ಮನುಷ್ಯ ಭ್ರಹ್ಮಾಂಡ ಭ್ರಷ್ಟಾಚಾರದ ನಿಯಂತ್ರಣಕ್ಕಾಗಿ ಲೋಕ್ ಪಾಲ್ ಮಸೂದೆಯನ್ನು ಜಾರಿಗೆ ತರಬೇಕೆಂದು ಹುಟ್ಟು ಹಾಕಿದ ಹೋರಾಟ ದೇಶದಲ್ಲಿ, ವಿಶೇಷವಾಗಿ ವಿದ್ಯಾವಂತರು ಮತ್ತು ಯುವ ಜನರಲ್ಲಿ ಹೊಸ ಸಂಚಲನವನ್ನುಂಟು ಮಾಡಿತು

ಅಣ್ಣಾ ಹಜಾರೆ ಹುಟ್ಟು ಹಾಕಿದ ಈ ಕ್ರಾಂತಿಯಲ್ಲಿ ಉದಯಿಸಿದ ಮತ್ತೊಂದು ಪ್ರತಿಭೆ ಅರವಿಂದ್ ಕೇಜ್ರಿವಾಲ್. ಮೂಲತಃ ಕೇಂದ್ರ ಸರ್ಕಾರದಲ್ಲಿ ಕಂದಾಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಇವರು ವ್ಯವಸ್ಥೆಯ ಲೋಪದೋಷಗಳನ್ನು ತಿದ್ದಲಾಗದ ಅಸಹಾಯಕತೆಯಿಂದ ತಮ್ಮ  ಹುದ್ದೆ ತೊರೆದು ಬಂದರು. ದೆಹಲಿಯಲ್ಲಿ ತನ್ನದೇ ಆದ ಒಂದು ಸ್ವಯಂ ಸೇವಾ ಸಂಘಟನೆಯನ್ನು ಕಟ್ಟಿಕೊಂಡು, ಮಾಹಿತಿ ಹಕ್ಕುಗಳ ಮೂಲಕ ದೆಹಲಿ ಆಢಳಿತ ಹುಳುಕುಗಳನ್ನು ಹೊರತೆಗೆದು, ಅಧಿಕಾರಿಶಾಹಿ ವ್ಯವಸ್ಥೆಗೆ ಮೈ ಚಳಿ ಬಿಡಿಸಿದರು. ಇವರ ಈ ಸಾಮಾಜಿಕ ಸೇವೆಗೆ ಪ್ರತಿಷ್ಟಿತ ಏಷ್ಯಾದ ಮ್ಯಾಗ್ಸಸೆ  ಪ್ರಶಸ್ತಿ ದೊರೆತಾಗ, ಅರವಿಂದ್ ಕೇಜ್ರಿವಾಲ್ ದೇಶದ ಗಮನ ಸೆಳೆದರು. ಅಣ್ಣಾ ಹಜಾರೆಯ ಹೋರಾಟ ತನ್ನ ಹಳ್ಳಿಯಿಂದ ದೆಹಲಿಗೆ ವರ್ಗಾವಣೆಗೊಂಡಾಗ, ಇಡೀ ಹೋರಾಟದ ರೂಪು ರೇಶೆಗಳ ಹೊಣೆ ಹೊತ್ತ ಅರವಿಂದ ಕೇಜ್ರಿವಾಲ್, ರಾಜಕೀಯ ವ್ಯವಸ್ಥೆಯ ಒಂದು ಭಾಗವೇ ಆಗಿ ಹೋಗಿದ್ದ  ಭ್ರಷ್ಠಾಚಾರಕ್ಕೆ ಅಣ್ಣಾ ಹಜಾರೆ ಮೂಲಕ ದೊಡ್ಡ ಪೆಟ್ಟುಕೊಟ್ಟರು. ಅಲ್ಲದೆ ರಾಜಕೀಯ ಪಕ್ಷಗಳ ಪಾಲಿಗೆ ನುಂಗಲಾರದ ತುತ್ತಾದರು.
ದೇಶಾದ್ಯಂತ ಲೋಕ ಪಾಲ್ ಮಸೂದೆ ಜಾರಿಗೆ ತರಬೇಕೆಂಬ ಅಣ್ಣಾ ಹಜಾರೆಯವರ ಹೋರಾಟ ತಾರ್ಕಿಕ ಅಂತ್ಯದ ಘಟ್ಟ ತಲುಪುವ ವೇಳೆಗೆ ಭ್ರಷ್ಟ ವ್ಯವಸ್ಥೆಯಿಂದ  ಮುಕ್ತವಾದ ಸಮಾಜದ  ಮತ್ತು ರಾಜ್ಯ ನಿರ್ಮಾಣದ ಕನಸು ಹೊತ್ತ ಅರವಿಂದ ಕೇಜ್ರಿವಾಲ್ ‘ ಅಮ್ ಆದ್ಮಿ “ ಎಂಬ ಪಕ್ಷ ಕಟ್ಟಿದಾಗ, ಪಕ್ಷ ರಾಜಕಾರಣದಿಂದ ದೂರವಿರುವ ತಮ್ಮ ನಿರ್ಧಾರಕ್ಕೆ ಅಂಟಿಕೊಂಡ ಅಣ್ಣ ಹಜಾರೆ, ಸಹಜವಾಗಿ ಕೇಜ್ರಿವಾಲ್ ಅವರಿಂದ ಮತ್ತು  ಅವರ ಅಮ್ ಆದ್ಮಿ ಪಕ್ಷದಿಂದ ತಮ್ಮ ಅಂತರ ಕಾಪಾಡಿಕೊಂಡರು

ದೆಹಲಿ ವಿಧಾನ ಸಭೆ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿ, ಕಳೆದ ಒಂದು ವರ್ಷದಿಂದ ಅಮ್ ಆದ್ಮಿ ಪಕ್ಷವನ್ನು ಕೇಜ್ರಿವಾಲ್ ತಮ್ಮ ತಂಡದ ಸದಸ್ಯರೊಂದಿಗೆ , ಜನಸಾಮಾನ್ಯರ ಬಳಿ ಕೊಂಡೊಯ್ದಾಗ ಮಾಧ್ಯಮ ಪಂಡಿತರು ಮತ್ತು ರಾಜಕೀಯ ಪಕ್ಷಗಳನ್ನು ಒಳಗೊಂಡಂತೆ ಯಾರೊಬ್ಬರೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ, ದೆಹಲಿಯ ಚುನಾವಣೆಯ ಫಲಿತಾಂಶ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ರಾಷ್ರೀಯ ಕಾಂಗ್ರೇಸ್ ಪಕ್ವವನ್ನು, ಮತ್ತು ಕಳೆದ ಮೂರು ಅವಧಿಗೆ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತರನ್ನು, ಅಮ್ ಆದ್ಮಿ ಪಕ್ದ ಚಿಹ್ನೆಯಾದ ಪೊರಕೆ ಗುಡಿಸಿ ಹಾಕಿತ್ತು. ಆದರೆ ಯಾರಿಗೂ ಸ್ಪೃಷ್ಟ ಬಹುಮತ ದೊರಕದೆ, ಅತಂತ್ರ ಸ್ಥಿತಿ ನಿರ್ಮಾಣವಾಯಿತು. ಮಾಧ್ಯಮಗಳ ಮೊರೆ ಹೋಗದೆ, ಸುದ್ಧಿ ಛಾನಲ್ ಗಳ ತೌಡು ಕುಟ್ಟುವ ಚರ್ಚೆಯಲ್ಲಿ ಭಾಗವಹಿಸದೆ, ನೇರವಾಗಿ ಕೂಲಿ ಕಾರ್ಮಿಕರು, ಆಟೋರಿಕ್ಷಾ ಚಾಲಕರು, ಮಧ್ಯಮ ವರ್ಗದ ಜನ ಮತ್ತು ಯುವಜನತೆಯ ಬಳಿ ಹೋಗಿ ತಮ್ಮ ಪಕ್ಷದ ಆಶಯ ಮತ್ತು ತಮ್ಮ ಕನಸುಗಳನ್ನು ಬಿಚ್ಚಿಟ್ಟರು. ಅವರ ಪ್ರಯತ್ನ ನಿರೀಕ್ಷೆಗೆ ಮೀರಿ ಯಶಸ್ಸು ತಂದುಕೊಟ್ಟಿತು
70 ಸ್ಥಾನಗಳ ದೆಹಲಿ ವಿಧಾನ ಸಭಾ ಕ್ಷೇತ್ರಗಳಲ್ಲಿ ಬಿ.ಜೆ.ಪಿ. 32 ಅಮ್ ಆದ್ಮಿ ಪಕ್ಷ 28 ಕಾಂಗ್ರೇಸ್ 8 ಸ್ಥಾನ ಗಳಿಸಿದರೆ,ಉಳಿದ 2 ಸ್ಥಾನಗಳು ಪಕ್ಷೇತರರ ಪಾಲಾದವು. ಸ್ಪೃಷ್ಟ ಬಹುಮತಕ್ಕೆ 36 ಸದಸ್ಯರ ಬಲದ  ಅವಶ್ಯಕತೆ ಇದ್ದ ಕಾರಣ ಬಿ.ಜೆ.ಪಿ. ಸರ್ಕಾರ ರಚಿಸುವ ಕ್ರಿಯೆಯಿಂದ ದೂರ ಉಳಿಯಿತು. ಈ ಸಂದರ್ಭದಲ್ಲಿ ಪಕ್ಷೇತತರು ಮತ್ತು ಕಾಂಗ್ರೇಸ್ ಪಕ್ಷ ಯಾವುದೇ ಪೂರ್ವ ಷರತ್ತುಗಳಿಲ್ಲದೆ, ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿರುವ  ಅಮ್ ಆದ್ಮಿ ಪಕ್ಷಕ್ಕೆ ಬೆಂಬಲ ಘೋಷಿಸಿದವು. ಆದರೆ, ಈ ಸಂದರ್ಭದಲ್ಲಿ ಅರವಿಂದ ಕೇಜ್ರಿವಾಲರ ನಡುವಳಿಕೆ ಅವರ  ಅಭಿಮಾನಿಗಳಿಗೆ ಮತ್ತು ಆಸೆಗಣ್ಣಿನಿಂದ ನೋಡುತ್ತಿದ್ದವರಿಗೆ ತೀವ್ರ ಬೇಸರ ಮತ್ತು ಜಿಗುಪ್ಸೆ ಮೂಡಿಸಿದವು.



ಆದರ್ಶಗಳು ಬೇರೆ, ವಾಸ್ತವಗಳು ಬೇರೆ. ನಾವು ಆದರ್ಶಗಳನ್ನು ವಾಸ್ತವದ ಒರೆಗಲ್ಲಿಗೆ ಹಚ್ಚಿದಾಗ ಮಾತ್ರ ನಿಜವಾದ ಫಲಿತಾಂಶಗಳು ದೊರೆಯುವುದು. ದಿಲ್ಲಿಯ ಜನತೆಯಿಂದ ಸಂಪೂರ್ಣ ಬೆಂಬಲ ಸಿಗದ ಹಿನ್ನಲೆಯಲ್ಲಿ ಜೊತೆಗೆ ಯಾವುದೇ ಷರತ್ತುಗಳಿಲ್ಲದೆ ಕಾಂಗ್ರೇಸ್ ಪಕ್ಷ, ಅಮ್ ಆದ್ಮಿ ಪಕ್ಷಕ್ಕೆ  ಬೆಂಬಲ ಘೊಷಿರುವಾಗ, ಅಧಿಕಾರದ ಚುಕ್ಕಾಣಿಯನ್ನು ಕೈಗೆ ತೆಗೆದುಕೊಂಡು, ತಾನು ಏನು ಕನಸು ಕಂಡಿದ್ದಾರೋ ಅದನ್ನು ಸಾಕಾರಗೊಳಿಸಬೇಕಾದ್ದು ಕೇಜ್ರಿವಾಲರ ನೈತಿಕ ಕರ್ತವ್ಯ,  ದಿಲ್ಲಿಯ ಜನತೆಯ ಮನಸ್ಸಿನಲ್ಲಿ ಸಂಪೂರ್ಣ ವಿಶ್ವಾಸ ಹುಟ್ಟಿಸುವ ಕೆಲಸ ಮಾಡುವುದನ್ನು ಬಿಟ್ಟು , ಮತ್ತೇ ಚುನಾವಣೆಯನ್ನು ಜನತೆಯ ಮೇಲೆ ಹೇರುವುದು ತರವಲ್ಲ. ಇದು ಭವಿಷ್ಯದಲ್ಲಿ ಪಕ್ಷದ ಕಾರ್ಯಕರ್ತರಲ್ಲಿ ನಿರಾಸಕ್ತಿ ಮೂಡಿಸಬಹುದು, ಏಕೆಂದರೆ, ದಿಲ್ಲಿಯ ನಗರದಲ್ಲಿ ಹಗಲಿರಳು ದುಡಿದ ಕಾರ್ಯಕರ್ತರು, ಕಾಂಗ್ರೇಸ್ ಅಥವಾ ಬಿ.ಜೆ.ಪಿ. ಪಕ್ಷಗಳ  ಬಾಡಿಗೆ ಕಾರ್ಯಕರ್ತರ ಹಾಗೆ ದಿನಗೂಲಿ ಲೆಕ್ಕದಲ್ಲಿ ಬಂದು ಘೋಷಣೆ ಕೂಗಿದವರಲ್ಲ. ವ್ಯವಸ್ಥೆಯ ವಿರುದ್ಧ, ರೋಸಿ ಹೋದ ಜನ ಸಾಮಾನ್ಯರು, ಬದಲಾವಣೆಗಾಗಿ ಮತ್ತು ರಾಜಕೀಯದಲ್ಲಿ ಹೊಸಗಾಳಿಗಾಗಿ ಆಸೆ ಕಣ್ಣುಗಳಿಂದ ಅರವಿಂದ್ ಕೇಜ್ರಿವಾಲರತ್ತ ನೋಡುತ್ತಾ ಅವರ ಜೊತೆ ಕೈಜೋಡಿಸಿದ್ದಾರೆ,


ಅತಿಯಾದರೆ, ಹಾಲು ಕೂಡ ವಿಷವಾಗುತ್ತೆ ಎಂಬ ಅಂಶವನ್ನು ಕೇಜ್ರಿವಾಲ್ ಮೊದಲು ಗ್ರಹಿಸಬೇಕಾಗಿದೆ. ಒಂದು ರಾತ್ರಿಯಲ್ಲಿ, ಒಂದು ದಿನದಲ್ಲಿ, ಅಥವಾ ಒಂದು ವಾರ, ತಿಂಗಳಳಗೆ ಸಮಾಜದಲ್ಲಿ  ಬದಲಾವಣೆ ತರಲು ಸಾಧ್ಯವಿಲ್ಲ. ಸಿಕ್ಕ ಅವಕಾಶದಲ್ಲಿ ಮೊದಲು ಅವರ ತಾಕತ್ತು, ಪ್ರತಿಭೆ, ಆಡಳಿತ ನಡೆಸುವ ಗುಣ ಇವುಗಳನ್ನು ದೆಹಲಿ ಜನತೆ ಎದುರು ಸಾಭೀತು ಪಡಿಸಬೇಕಿದೆ. ಒಬ್ಬ ನಾಯಕನಾದವನಿಗೆ ತನ್ನ ಸಹಚರ ಮತ್ತು ಸಮುದಾಯದ ಆಶೋತ್ತರಗಳಿಗೆ ಕಣ್ಣಾಗುವ, ಕಿವಿಯಾಗುವ ಹೃದಯವಿರಬೇಕು. ಎಲ್ಲಾ ವಿಷಯಗಳಲ್ಲಿ ತಾನು ನಂಬಿದ ತತ್ವಗಳನ್ನು ಹೇರಲು ಹೊರಟರೆ, ಅದು ನಾಯಕತ್ವದ ಗುಣ ಎನಿಸಿಕೊಳ್ಳುವುದಿಲ್ಲ,ಬದಲಾಗಿ ಸರ್ವಾಧಿಕಾರಿಯ ವ್ಯಕ್ತಿತ್ವವಾಗಿಬಿಡುವ ಅಪಾಯವಿರುತ್ತದೆ. ಈ ಸತ್ಯವನ್ನು ಅರವಿಂದ ಕೇಜ್ರಿವಾಲ್ ಅರಿಯದಿದ್ದರೆ, ಇವರು ಕೂಡ ಇತಿಹಾಸದ ಕಸದಬುಟ್ಟಿ ಸೇರುವ ದಿನ ದೂರವಿಲ್ಲ.

ಕೊನೆಯ ಮಾತು- ಇದನ್ನು ಬರೆಯುವ ವೇಳೆ ದೆಹಲಿಯಲ್ಲಿ ಪತ್ರಿಕಾ ಘೋಷ್ಠಿ ನಡೆಸಿದ ಅರವಿಂದ ಕೇಜ್ರಿವಾಲ್ 25 ಲಕ್ಷ ಕರಪತ್ರಗಳ ಮೂಲಕ ದೆಹಲಿ ಜನರ ಅಭಿಪ್ರಾಯ ಕೇಳಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ