ಶುಕ್ರವಾರ, ಡಿಸೆಂಬರ್ 6, 2013

ವಚನ ಪಿತಾಮಹಾ ಫ.ಗು. ಹಳಕಟ್ಟಿ. ಒಂದು ನೋವಿನ ನೆನಪು

ಅದೊಂದು ಧಾರವಾಡದ ಕಡು ಬೇಸಿಗೆಯ ದಿನ. ೧೯೫೫ರ ಕರ್ನಾಟಕ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ವಚನ ಸಾಹಿತ್ಯದ ಪಿತಾಮಹನೆಂಬ ಬಿರುದಿಗೆ ಪಾತ್ರರಾಗಿದ್ದ ಫ. ಗು. ಹಳಕಟ್ಟಿಯವರಿಗೆ ಗೌರವ ಡಾಕ್ಟರೇಟ್ ನೀಡಿದ ದಿನ. ಘಟಿಕೋತ್ಸವ ಕಾರ್ಯಕ್ರಮದ ನಂತರ ಅತಿಥಿಗಳಿಗೆ ವಿಶ್ವವಿದ್ಯಾಲಯದ ಅತಿಥಿಗೃಹದಲ್ಲಿ ಭೋಜನಕೂಟ ಏರ್ಪಡಿಸಲಾಗಿತ್ತು. ಡಾಕ್ಟರೇಟ್ ಪದವಿ ಸ್ವೀಕರಿಸಲು ಕೋಟು, ಕಚ್ಚೆ , ಪೇಟ ಧರಿಸಿ ಬಂದಿದ್ದ ಹಳಕಟ್ಟಿಯವರು ಔತಣಕೂಟದಲ್ಲಿ ಪಾಲ್ಗೊಂಡು ಊಟಕ್ಕೆ ಕುಳಿತರು. ಆಗ ವಿ.ವಿ.ಯ ರಿಜಿಸ್ಟ್ರಾರ್ ಆಗಿದ್ದ ಒಡೆಯರ್ ಹಳಕಟ್ಟಿಯವರನ್ನು ಉದ್ದೇಶಿಸಿ ‘ಸಾರ್ ಸೆಖೆ ಬಾಳಾ ಇದೆ. ಕೋಟ್ ತೆಗೆದು ಆರಾಮಾಗಿ ಊಟ ಮಾಡ್ರಲಾ’ ಎಂದರು. ಆಗ ಹಳಕಟ್ಟಿಯವರು ಒಡೆಯರ್‌ರವರನ್ನು ಹತ್ತಿರ ಕರೆದು ‘ತಮ್ಮಾ ಕೋಟಿನ ಒಳಗಾ ಅಂಗಿ ಪೂರಾ ಹರಿದು ಹೋಗದ, ಅದಕ್ಕ ನಾ ಕೋಟ್ ಹಾಕ್ಕಂಡಿದೀನಿ. ನಾನು ಸಖೆ ತಡಿತೀನಿ ತಮ್ಮಾ ಆದರ ಅವಮಾನ ತಡಿಯಾಂಗಿಲ್ಲ’ ಎಂದಾಗ ಒಡೆಯರ್ ಮೂಕ ವಿಸ್ಮಿತರಾಗಿ ನಿಂತರು.

೧೯೦೪ರಲ್ಲಿ ಮುಂಬೈನಲ್ಲಿ ವಕೀಲಿ ಶಿಕ್ಷಣ ಮುಗಿಸಿ, ಪದವಿಯೊಂದಿಗೆ ಬಿಜಾಪುರಕ್ಕೆ ಬಂದ ಹಳಕಟ್ಟಿಯವರು ಬಯಸಿದ್ದರೆ ವಕೀಲಿ ವೃತ್ತಿಯಲ್ಲೇ ಶ್ರೀಮಂತರಾಗುವ ಅವಕಾಶವಿತ್ತು. ಆದರೆ ಎಲ್ಲದಕ್ಕೂ ತಿಲಾಂಜಲಿ ಇತ್ತು, ಸಮಾಜಸೇವೆ, ವಚನ ಸಾಹಿತ್ಯದ ಸಂಗ್ರಹ ಮತ್ತು ಪ್ರಕಟಣೆಗಾಗಿ ತಮ್ಮ ಬದುಕನ್ನು ಮೀಸಲಾಗಿರಿಸಿ, ಗಂಧದ ಕೊರಡಿನಂತೆ ಜೀವ ತೆಯ್ದು ತಮ್ಮ ಕೊನೆಯ ದಿನಗಳಲ್ಲಿ ಬಡತನವನ್ನೇ ಹಾಸಿ-ಹೊದ್ದು ಬದುಕಿದ ಫ.ಗು. ಹಳಕಟ್ಟಿ ಎಂಬ ನಿಷ್ಕಳಂಕ ಕರ್ಮಯೋಗಿಯ ಕರುಣಾಜನಕ ಕಥನವಿದು.
ಹಳಕಟ್ಟಿಯವರ ಜನ್ಮಭೂಮಿ ಧಾರವಾಡ. ಆದರೆ ಕರ್ಮಭೂಮಿಯನ್ನಾಗಿ ಅವರು ಆರಿಸಿಕೊಂಡಿದ್ದು ಬಿಜಾಪುರವನ್ನು. ೧೮೬೦ರ ಜುಲೈ ೨ರಂದು ಧಾರವಾಡದಲ್ಲಿ ಗುರುಬಸಪ್ಪ, ದಾನಮ್ಮ ದಂಪತಿಗಳ ಪುತ್ರನಾಗಿ ಜನಿಸಿದ ಹಳಕಟ್ಟಿಯವರು ಪ್ರೌಢಶಾಲೆಯವರೆಗೆ ಧಾರವಾಡದಲ್ಲೆ ಓದಿದರು. ಆ ಕಾಲದಲ್ಲಿ ಅವರ ತಂದೆ ಗುರುಬಸಪ್ಪ ಧಾರವಾಡದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ಧಾರವಾಡದ ಲಿಂಗಾಯಿತ ವಿದ್ಯಾ ಅಭಿವೃದ್ಧಿ ಸಂಸ್ಥೆ ಹಾಗೂ ವಿದ್ಯಾವರ್ಧಕ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು.

ಮುಂಬೈ ನಗರದಲ್ಲಿ ಬಿ.ಎ. ಪದವಿ ಹಾಗೂ ಎಲ್.ಎಲ್.ಬಿ. ಪದವಿ ಪೂರೈಸಿ ವಕೀಲ ವೃತ್ತಿಗಾಗಿ ೧೯೦೪ರಲ್ಲಿ ಬಿಜಾಪುರಕ್ಕೆ ಬಂದ ಫ.ಗು. ಹಳಕಟ್ಟಿಯವರು ತಮ್ಮ ಕಡೆಯ ಉಸಿರಿರುವ ತನಕ ಬಿಜಾಪುರವನ್ನು ಕಾಯಕ ಭೂಮಿಯನ್ನಾಗಿಸಿಕೊಂಡರು.

ಇಪ್ಪತ್ತನೇ ಶತಮಾನದ ಪ್ರಾರಂಭದ ಆ ದಿನಗಳಲ್ಲಿ ಆಂಗ್ಲರ ಆಡಳಿತ ಹಾಗೂ ಅವರು ತಂದಿತ್ತ ಶಿಕ್ಷಣದ ಸುಧಾರಣೆಗಳಿಂದ ಸಮಾಜದಲ್ಲಿ ಎಚ್ಚರಿಕೆ ಮೂಡುತ್ತಿದ್ದ ಕಾಲವಾಗಿತ್ತು. ಆಧುನಿಕ ಶಿಕ್ಷಣ ಪಡೆದಿದ್ದ ಹಳಕಟ್ಟಿ ಮನಸ್ಸು ಮಾಡಿದ್ದರೆ ಸರ್ಕಾರದಲ್ಲಿ ಘನತರವಾದ ಹುದ್ದೆ ಪಡೆಯಬಹುದಿತ್ತು. ಇಲ್ಲವೆ ತಮ್ಮ ವಕೀಲಿ ವೃತ್ತಿಯಿಂದ ಶ್ರೀಮಂತಿಕೆ ದಕ್ಕಿಸಿಕೊಳ್ಳ ಬಹುದಿತ್ತು. ಆದರೆ ಬಿಜಾಪುರಕ್ಕೆ ಬಂದ ಅವರು ಅಲ್ಲಿ ತಾಂಡವವಾಡುತ್ತಿದ್ದ ಬಡತನ, ಅನಕ್ಷರತೆ, ರೈತರು ಕೃಷಿ ಉತ್ಪನ್ನ ಮಾರಾಟಕ್ಕೆ ಪರದಾಡುತ್ತಿದ್ದ ಪರಿ ಇವೆಲ್ಲವನ್ನು ಮನಗಂಡು ಸಮಾಜ ಸೇವೆಗೆ ತಮ್ಮ ಬದುಕನ್ನು ಮೀಸಲಾಗಿಸಿದರು.

ತಮ್ಮ ತಂದೆಯಂತೆ ಬಿಜಾಪುರದಲ್ಲಿ , ಬಿಜಾಪುರ ಲಿಂಗಾಯಿತ ವಿದ್ಯಾಭಿವೃದ್ಧಿ ಸಂಸ್ಥೆ ಹುಟ್ಟುಹಾಕಿದರಲ್ಲದೆ, ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ಸ್ಥಾಪಿಸಿದರು. ಸಮಾಜ ಸೇವೆಯ ಜೊತೆ ಜೊತೆಗೆ ಸಾಹಿತ್ಯದಲ್ಲಿ ಆಸಕ್ತಿ ಇದ್ದ ಹಳಕಟ್ಟಿ ಮೊದಲಿಗೆ ಬಸವಣ್ಣನವರ ವಚನಗಳನ್ನು ಇಂಗ್ಲೀಷ್‌ಗೆ ಅನುವಾದ ಮಾಡುವುದರ ಮೂಲಕ (೧೯೨೨) ವಚನ ಸಾಹಿತ್ಯ ಸಂಗ್ರಹಣೆ, ಪ್ರಕಟಣೆಗೆ ಕೈಹಾಕಿದರು. ಮುಂದೆ ಈ ಪ್ರವೃತ್ತಿಯೇ ಅವರಿಗೆ ಧ್ಯಾನವಾಯಿತು. ಹನ್ನೆರಡನೇ ಶತಮಾನದ ಶಿವಶರಣರ ವಚನಗಳನ್ನು ಸಂಗ್ರಹಿಸುವುದು ಅವುಗಳಲ್ಲಿ ಇರಬಹುದಾದ ಧಾರ್ಮಿಕ ಹಾಗೂ ವೈಚಾರಿಕ ಮಹತ್ವದ ಚಿಂತನೆಗಳನ್ನು ಸಾದರಪಡಿಸುವುದು ಇದು ಫ.ಗು. ಹಳಕಟ್ಟಿಯವರ ಜೀವನ ಮಂತ್ರವಾಯಿತು.

೧೯೧೦ರಲ್ಲಿ ಬಿ.ಎಲ್.ಡಿ.ಇ. ಸಂಸ್ಥೆ, ೧೯೧೨ರಲ್ಲಿ ಸಿದ್ದೇಶ್ವರ ಸಂಸ್ಥೆ, ೧೯೧೩ರಲ್ಲಿ ಸಹಕಾರಿ ಸಂಘ, ೧೯೧೪ರಲ್ಲಿ ಸಿದ್ದೇಶ್ವರ ಹೈಸ್ಕೂಲು ಸ್ಥಾಪಿಸಿ ೧೯೧೯ರಲ್ಲಿ ಬಿಜಾಪುರದ ನಗರಸಭಾ ಸದಸ್ಯರಾಗಿ, ೧೯೨೦ರಲ್ಲಿ ಮುಂಬೈ ವಿಧಾನಸಭಾ ಸದಸ್ಯರಾಗಿ ಹಳಕಟ್ಟಿಯವರು ಕಾರ್ಯ ನಿರ್ವಹಿಸಿದ್ದರೂ ಸಹ ಎಲ್ಲೆಡೆ ತಮ್ಮ ಶುದ್ಧ ಹಸ್ತ ಮತ್ತು ಪ್ರಾಮಾಣಿಕ ಹಾಗೂ ಪಾರದರ್ಶಕ ಬದುಕಿನೊಂದಿಗೆ ಗುರುತಿಸಿಕೊಂಡರು.

೧೯೨೩ರಲ್ಲಿ ‘ವಚನಶಾಸ್ತ್ರಸಾರ’ ಎಂಬ ಬೃಹತ್ ವಚನ ಸಂಕಲನವನ್ನು ಹೊರತರುವ ಮೂಲಕ ವಚನಗಳ ಸಂಗ್ರಹಕ್ಕೆ ಕೈಹಾಕಿದ ಹಳಕಟ್ಟಿಯವರು ಇವುಗಳ ಪ್ರಕಟಣೆಗಾಗಿ ೧೯೨೬ರಲ್ಲಿ ‘ಹಿತಚಿಂತಕ’ ಎಂಬ ಮುದ್ರಣಾಲಯ ಪ್ರಾರಂಭಿಸಿ ‘ಶಿವಾನುಭಾವ’ ಎಂಬ ಪತ್ರಿಕೆಯನ್ನೂ ಆರಂಭಿಸಿದರು.

೧೯೨೬ರಿಂದ ೧೯೬೧ರವರೆಗೆ ನಿರಂತರವಾಗಿ ಈ ಪತ್ರಿಕೆಯಲ್ಲಿ ವಚನಗಳ ಬಗ್ಗೆ, ಶಿವಶರಣರ ಬಗ್ಗೆ ಹಳಕಟ್ಟಿಯವರು ಬರೆದ ಲೇಖನಗಳ ಸಂಗ್ರಹಗಳು ಒಟ್ಟು ೭೨ ಕೃತಿಗಳಾಗಿ ಹೊರಹೊಮ್ಮಿವೆ. ಇವುಗಳ ಜೊತೆ ಅನ್ಯರ ಕೃತಿಗಳು ಸೇರಿ ೧೦೫ ಕೃತಿಗಳನ್ನು ಪ್ರಕಟಿಸಿದ್ದಾರೆ. ಎಂದೂ ವ್ಯವಸ್ಥೆಯೊಂದಿಗೆ ರಾಜಿಯಾಗದೆ ವಚನಗಳಲ್ಲಿ ಅಡಗಿರುವ ಶಿವಶರಣರ ತತ್ವ ಮತ್ತು ಚಿಂತನೆಗಳನ್ನು ಜನತೆಗೆ ತಿಳಿಸುವುದೇ ಜೀವನದ ಪರಮ ಗುರಿ ಎಂದು ನಂಬಿಕೊಂಡಿದ್ದ ಹಳಕಟ್ಟಿಯವರು ತಮ್ಮ ಜೀವಿತದ ಕೊನೆಯವರೆಗೂ ಬಿಜಾಪುರದಲ್ಲಿ ಸ್ವಂತ ಮನೆ ಮಾಡಿಕೊಳ್ಳದೆ ಫಕೀರನಂತೆ ಬದುಕಿಬಿಟ್ಟರು. ತುಂಬ ಕಷ್ಟದಲ್ಲಿ ನಡೆಯುತ್ತಿದ್ದ ಪತ್ರಿಕೆಗೆ ಯಾರಾದರು ೨ರೂ ಸಹಾಯಧನ ಮಾಡಿದರೆ ಅದನ್ನು ಅವರ ಹೆಸರಿನೊಂದಿಗೆ ಪ್ರಕಟಿಸಿ ಕೃತಜ್ಞತೆ ಅರ್ಪಿಸುತ್ತಿದ್ದರು.
ತಾವು ಈ ರೀತಿ ಕಷ್ಟಗಳ ಸರಮಾಲೆಯ ನಡುವೆ ಬದುಕಿದ್ದರ ಬಗ್ಗೆ ಅವರು ಎಂದೂ ವಿಷಾದ ಪಡಲಿಲ್ಲ. ತಮ್ಮ ‘ನನ್ನ ೭೫ ವರ್ಷಗಳು’ ಎಂಬ ಕೃತಿಯಲ್ಲಿ ತನ್ನ ಸಾಧನೆಯ ಹಿಂದೆ ಬೆನ್ನೆಲುಬಾಗಿ ನಿಂತ ತಂದೆ ಗುರುಬಸಪ್ಪ ಹಾಗೂ ಹೆಣ್ಣು ಕೊಟ್ಟ ಮಾವ ತಮ್ಮಣ್ಣಪ್ಪ ಇವರನ್ನು ಹಳಕಟ್ಟಿಯವರು ತುಂಬು ಹೃದಯದಿಂದ ಸ್ಮರಿಸಿದ್ದಾರೆ.
 

ಇವತ್ತಿನ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಲಭ್ಯವಾಗುತ್ತಿರುವ ಸಮಗ್ರ ವಚನ ಸಾಹಿತ್ಯದ ಹಿಂದೆ ಫ.ಗು. ಹಳಕಟ್ಟಯವರ ಅರ್ಧ ಶತಮಾನದ ಶ್ರಮವಿದೆ. ಈ ಕಾರಣಕ್ಕಾಗಿ ಕನ್ನಡ ನಾಡು ಅವರನ್ನು ‘ವಚನ ಪಿತಾಮಹ’ ಎಂಬ ಬಿರುದು ನೀಡಿ ಗೌರವಿಸಿದೆ.


ಹಳಕಟ್ಟಿಯವರು ಸ್ಥಾಪಿಸಿದ ಬಿ.ಎಲ್.ಡಿ.ಇ. ಸಂಸ್ಥೆ ಇಂದು ವೈದ್ಯಕೀಯ, ಇಂಜಿನಿಯರಿಂಗ್ ಕಾಲೇಜು, ಆಸ್ಪತ್ರೆ ಸೇರಿದಂತೆ ೧೦೮ ಶಿಕ್ಷಣ ಸಂಸ್ಥೆಗಳೊಂದಿಗೆ ಹೆಮ್ಮರವಾಗಿ ಬೆಳೆದು ನಿಂತಿದೆ. ಈ ಕಾರಣಕ್ಕಾಗಿ ಸಂಸ್ಥೆಯ ಆಡಳಿತ ಚುಕ್ಕಾಣಿ ಹಿಡಿದಿರುವ ಎಂ.ಬಿ. ಪಾಟೀಲರು ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಡಾ. ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರ ಸ್ಥಾಪಿಸಿ ಅವರ ಸಮಗ್ರ ಸಾಹಿತ್ಯವನ್ನು ಖ್ಯಾತ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ನೇತೃತ್ವದಲ್ಲಿ ೧೫ ಬೃಹತ್ ಸಂಪುಟಗಳಲ್ಲಿ ಹೊರತಂದಿದ್ದಾರೆ.
ಕಳೆದ ಹತ್ತು ವರ್ಷಗಳ ಹಿಂದೆ ಬಿಜಾಪುರ ನಗರ ಸಭೆ, ಅಲ್ಲಿನ ಒಂದು ರಸ್ತೆಗೆ ಹಳಕಟ್ಟಿಯವರ ಹೆಸರಿಡಲು ಸಭೆ ಸೇರಿ , ಅವರು ವಾಸವಾಗಿದ್ದ ಪ್ರದೇಶಗಳ ಬಗ್ಗೆ ಮಾಹಿತಿ ಕಲೆ ಹಾಕಿತು. ಫ.ಗು. ಹಳಕಟ್ಟಿಯವರು ಬಿಜಾಪುರದ ಎಲ್ಲಾ ಬಡಾವಣೆಗಳಲ್ಲೂ ಒಂದು ಅಥವಾ ಎರಡು ವರ್ಷ ವಾಸವಾಗಿದ್ದರು. ಮನೆಯ ಬಾಡಿಗೆ ಹೆಚ್ಚಾಗುತ್ತಿದ್ದಂತೆ, ತಮ್ಮ ವರಮಾನಕ್ಕೆ ತಕ್ಕಂತೆ ಬಾಡಿಗೆ ಮನೆ ಹುಡುಕಿ ಹೊರಡುತ್ತಿದ್ದರು. ಇಡೀ ಬಿಜಾಪುರದ ರಸ್ತೆಗಳಿಗೆ ಹಳಕಟ್ಟಿಯವರ  ಹೆಸರಿಡಬೇಕಾದ ಸಮಸ್ಯೆ ಎದುರಾಯಿತು. ಅಂತಿಮವಾಗಿ ರಸ್ತೆಗೆ ಹೆಸರಿಡುವ ಬದಲು, ಅಲ್ಲಿನ ಪ್ರಸಿದ್ಧ ಸಿದ್ದೇಶ್ವರ ಗುಡಿ ಎದುರು ಅವರ ಪ್ರತಿಮೆ ಸ್ಥಾಪಿಸಲು ನಿರ್ಧಾರವಾಯಿತು.
ಬಿಜಾಪುರದಲ್ಲಿ ಬಿ.ಎಲ್.ಡಿ. ಸಂಸ್ಥೆ ಸ್ಥಾಪಿಸಿರುವ  ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿ ಹಳಕಟ್ಟಿಯವರ ಜೀವನ ಸಾಧನೆಯನ್ನು ಗಮನಿಸಿದಾಗ ಒಬ್ಬ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಇಂತಹ ಸಾಧನೆ ಮಾಡಲು ಸಾಧ್ಯವೆ ಎಂಬ ವಿಸ್ಮಯ ಮೂಡುತ್ತದೆ. ಈ ಕಾರಣಕ್ಕಾಗಿ ಬಿಜಾಪುರ ನಗರಸಭೆ ಸಿದ್ದೇಶ್ವರ ಬ್ಯಾಂಕ್‌ನ ಎದುರು ಹಳಕಟ್ಟಿಯವರ ಆಳೆತ್ತರದ ಪ್ರತಿಮೆ ನಿಲ್ಲಿಸಿ ಗೌರವ ಸೂಚಿಸಿದೆ
ಮಾಹಿತಿ ಸೌಜನ್ಯ- ಡಾ. ಎಂ.ಎಂ. ಕಲ್ಬರ್ಗಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ