Tuesday, 10 December 2013

ಕೇಳದೆ ಉಳಿದ ಒಂದು ಸ್ವರ ಮಾಧುರ್ಯ



2012 ಡಿಸಂಬರ್ 12ನೆಯ ದಿನಾಂಕ  ಒಂದು ಸ್ಮರಣೀಯ ದಿನ. 12-12-12 ಸಂಖ್ಯೆಯನ್ನು ನಾವು ಜೀವಿತದಲ್ಲಿ ಮತ್ತೊಮ್ಮೆ ನೋಡಲಾರದ ದಿನವಾಗಿ ನೆನಪಲ್ಲಿ  ಉಳಿದುಹೋಯಿತು. ಅದೇ ದಿನ ಭಾರತೀಯರಿಗೆ ಇನ್ನೊಂದು ರೀತಿಯ ನೆನಪಿನಲ್ಲಿ ಉಳಿಯುವಂತೆ ಮಾಡಿತು. ಭಾರತೀಯ ಸಂಗೀತಲೋಕದ ಮೇರು ಶಿಖರಗಳಲ್ಲಿ ಒಬ್ಬರಾದ ಸಿತಾರ್ ಮಾಂತ್ರಿಕ ಪಂಡಿತ್ ರವಿಶಂಕರ್ ದೂರದ ಅಮೇರಿಕಾದ ಕ್ಯಾಲಿಪೋರ್ನಿಯಾ ನಗರದಲ್ಲಿ ಅಸ್ತಂಗತರಾಗುವ ಮೂಲಕ ಸಂಗೀತ ಪ್ರೇಮಿಗಳ ಹೃದಯದಲ್ಲಿ ಅಳಿಸಲಾಗದ ನೆನಪಾಗಿ ದಾಖಲಾದರು.
ಸಿತಾರ್ ವಾದನವೆಂದರೆ, ಪಂಡಿತ್ ರವಿಶಂಕರ್ ಎಂದು ಜಾಗತಿಕ ಮಟ್ಟದಲ್ಲಿ ಗುರುತಿಸುವಷ್ಟು ಎತ್ತರಕ್ಕೆ ಬೆಳೆದ ಪಂಡಿತ್ ರವಿಶಂಕರ್ ಭಾರತೀಯ ಸಂಗೀತವನ್ನು ಜಗತ್ತಿಗೆ ಪರಿಚಯಿಸಿ, ಎಲ್ಲರೂ ಭಾರತದತ್ತ ತಿರುಗಿ ನೋಡುವಂತೆ ಮಾಡಿದವರಲ್ಲಿ ಪ್ರಮುಖರು
ತಮ್ಮ ತೊಂಬತ್ತು ವರ್ಷಗಳ ಸುಧೀರ್ಘ ಬದುಕಿನಲ್ಲಿ ಸತತ ಏಳು ದಶಕಗಳ ಕಾಲ ಸಿತಾರ್ ವಾದನವನ್ನು ಉಸಿರಾಗಿಸಿಕೊಂಡು ಬದುಕಿದ ಅನನ್ಯ ಪ್ರತಿಭೆ ಅವರದು. ಇಂತಹ ಮಹಾನ್ ವ್ಯಕ್ತಿಯ ಸಾಧನೆಯ ಹಿಂದೆ ಒಬ್ಬ ಹೆಣ್ಣು ಮಗಳ ಸಂಗೀತ ಮತ್ತು ಬದುಕಿನ ತ್ಯಾಗ ಅಡಗಿದೆ ಎಂಬ ಕಠೋರ ಸತ್ಯ ಮಾತ್ರ ಹೊರಜಗತ್ತಿಗೆ ಇವತ್ತಿಗೂ ಅಪರಿಚಿತವಾಗಿ ಉಳಿದುಹೋಯಿತು. ಏಕೆಂದರೆ, ರವಿಶಂಕರ್ ಸಾಧನೆಗೆ ಅಡ್ಡಿಯಾಗಬಾರದೆಂಬ ಏಕೈಕ ನಿಲುವಿನಿಂದ ಕಳೆದ ಅರ್ಧಶತಮಾನದಿಂದ ಮೌನಕ್ಕೆ ಶರಣಕ್ಕಾಗಿ, ಹೊರ ಜಗತ್ತಿನೊಂದಿಗೆ ಸಂಪರ್ಕ ಕಳೆದುಕೊಂಡಿರುವ ಅನ್ನಪೂರ್ಣದೇವಿ ಎಂಬ ರವಿಶಂಕರ್ರವರ ಮೊದಲ ಪತ್ನಿಯೂ ಹಾಗೂ ಅವರ ಗುರು ಬಾಬಾ ಅಲ್ಲಾವುದ್ದೀನ್ ಖಾನ್ರವರ ಪುತ್ರಿಯೂ ಆದ ಮಹಾತಾಯಿಯೊಬ್ಬಳ  ಸಾಧನೆ ಮತ್ತು ಪರಿತ್ಯಕ್ತ ಬದುಕು ಇವೆಲ್ಲವೂ ಶಬ್ಧಗಳಲ್ಲಿ ಹಿಡಿದಿಡಲಾಗದ ಸಂಕಟಗಳು.


ಮುಂಬೈ ನಗರದ ವಾರ್ಡನ್ ರಸ್ತೆಯಲ್ಲಿ ಸಮುದ್ರಕ್ಕೆ ಎದುರಾಗಿ ನಿಂತಿರುವ ಆಕಾಶ್ಗಂಗ ಎಂಬ ವಸತಿ ಸಂಕೀರ್ಣದ ಆರನೆಯ ಮಹಡಿಯಲ್ಲಿ ನಾಲ್ಕು ಗೋಡೆಯ ಮಧ್ಯದ ವಾಸಕ್ಕೆ ತಮ್ಮ ಬದುಕನ್ನು ಸೀಮೀತಗೊಳಿಸಿಕೊಂಡ ಭಾರತೀಯ ಸಂಗೀತದ ಇನ್ನೊಂದು ಅನನ್ಯ ಮೇರು ಪ್ರತಿಭೆ ಅನ್ನಪೂರ್ಣದೇವಿ.
ನಾವು ವಾಸಿಸುತ್ತಿರುವ ಕಟ್ಟಡದಲ್ಲಿ ಭಾರತೀಯ ಸಂಗೀತಲೋಕದ ಹಿರಿಯ ಜೀವವೊಂದು ಬದುಕಿದೆ ಎಂಬ ಸುಳಿವನ್ನೂ ಸಹ ನೆರೆಹೊರೆಯವರಿಗೆ ನೀಡದೆ ಬದುಕಿರುವ ಅನ್ನಪೂರ್ಣದೇವಿ, ಎಂದೂ ಹೊರಜಗತ್ತಿಗೆ ಮುಖ ತೋರಿಸಿದವರಲ್ಲ ಅಥವಾ ಮಾತನಾಡಿದವರಲ್ಲ. ಒಂದು ಘೋರ ಕಠಿಣ ತಪಸ್ಸಿನಂತೆ, ವ್ರತದಂತೆ ನಿಯಮವನ್ನು ಪಾಲಿಸಿಕೊಂಡು ಬಂದಿರುವ ಅವರ ನಿರ್ಧಾರದ ಹಿಂದೆ ಹೇಳಿಕೊಳ್ಳಲಾಗದ ನೋವುಗಳಿವೆ, ದುಖಃ ದುಮ್ಮಾನಗಳಿವೆ. ಆದರೆ, ಇವೆಲ್ಲವನ್ನೂನಾನು ನನ್ನೊಂದಿಗೆ ಸಮಾಧಿಗೆ ಕೊಂಡೊಯ್ಯುತ್ತೇನೆಎಂದು ಪತ್ರಕರ್ತರÀ ಪ್ರಶ್ನೆಗಳಿಗೆ ಕಾಗದದ ಮೂಲಕ ಉತ್ತರಿಸಿದ್ದಾರೆ.
ಇವರ ಬಳಿ ಸಂಗೀತ ಸಾಧನೆ ಮಾಡಿದ ಶಿಷ್ಯ ಸ್ವಪನ್ಕುಮಾರ್ ಬಂಡೋಪಾಧ್ಯಾಯ ಎಂಬವರುAn Unherd Melodyಎನ್ನುವ ಕೃತಿಯನ್ನು ಬರೆಯದಿದ್ದರೆ, ಇವರ ಬದುಕಿನತ್ಯಾಗ, ಸಂಗೀತಸಾಧನೆ, ಇವೆಲ್ಲವೂ ಇತಿಹಾಸದ ಕಾಲ ಗರ್ಭದಲ್ಲಿ ಹೂತು ಹೋಗುತ್ತಿದ್ದವು. ಭಾರತದ ಸಂಗೀತ ಕ್ಷೇತ್ರದಲ್ಲಿರುವ ಎಲ್ಲಾ ಪ್ರಶಸ್ತಿಗಳು, ಗೌರವ ಡಾಕ್ಟರೇಟ್ ಪದವಿಗಳು ಇವರ ಮನೆ ಬಾಗಿಲ ಬಳಿ ಹೋಗಿ ತಮ್ಮ ಹಿರಿಮೆಯನ್ನು ಹೆಚ್ಚಿಸಿಕೊಂಡಿವೆ. 1977ರಲ್ಲಿ ಭಾರತ ಸರ್ಕಾರ ನೀಡಿದ ಪದ್ಮಭೂಷಣ ಪ್ರಶಸ್ತಿಯನ್ನು ಸಹ ಇವರ ಮನೆಗೆ ಕೊಡೊಯ್ದು ಅರ್ಪಿಸಲಾಯಿತು.

ಪತಿಗೆ ಕೊಟ್ಟ ವಚನದಂತೆ ಸಾರ್ವಜನಿಕ ಸಂಗೀತ ಪ್ರದರ್ಶನಕ್ಕೆ  ತಮ್ಮ ಮೇಲೆ ಮಿತಿ ಹೇರಿಕೊಂಡಿದ್ದರೂ ಸಹ ಜೀವನ ನಿರ್ವಹಣೆಗಾಗಿ ಆಯ್ಕೆ ಮಾಡಿಕೊಂಡ ಶಿಕ್ಷಕ ವೃತ್ತಿಯಿಂದಾಗಿ ಸಂಗೀತವನ್ನು ಶಿಷ್ಯರಿಗೆ ಧಾರೆಯೆರೆಯುವ ಮೂಲಕ ಅನ್ನಪೂರ್ಣದೇವಿಯವರು ಭಾರತದ ಶ್ರೇಷ್ಠ ಸಂಗೀತ ಗುರುಗಳಲ್ಲಿ ಒಬ್ಬರಾಗಿದ್ದಾರೆ. ಇವರ ಬಳಿ ಶಿಷ್ಯ ವೃತ್ತಿ ಕೈಗೊಂಡ ಕೊಳಲು ವಾದನದ ಮಾಂತ್ರಿಕ ಹರಿ ಪ್ರಸಾದ್ ಚೌರಾಸಿಯ, ಸಿತಾರ್ವಾದಕ ನಿಖಿಲ್ಬ್ಯಾನರ್ಜಿ, ಪಂಡಿತ್ ನಿತ್ಯಾನಂದ್, ಸುಧೀರ್ ಪಡ್ಕೆ,  ಹೀಗೆ ಪ್ರತಿಭೆಗಳ ಪಟ್ಟಿಯೇ ಮುಂದವರಿಯುತ್ತದೆ.
1942 ರಲ್ಲಿ ರವಿಶಂಕರ್ ಜೊತೆ ನಡೆದ ವಿವಾಹ ಮತ್ತು ಇಪ್ಪತ್ತು ವರ್ಷಗಳ ದಾಂಪತ್ಯ ಜೀವನದ ನಂತರ  1962 ರಲ್ಲಿ ವಿವಾಹ ವಿಚ್ಚೇಧನದ ಮೂಲಕ ಅಂತ್ಯಗೊಂಡು ಅವರೊಂದಿಗಿನ ಸಂಬಂಧ ಕಡಿದು ಹೋಗಿದ್ದರೂ ಕೊಟ್ಟ ಮಾತಿನಂತೆ ಸಂಗೀತ ಪ್ರದರ್ಶನದಿಂದ ದೂರ ಉಳಿದು, ರವಿಶಂಕರ್ರವರ ಖ್ಯಾತಿಗೆ ತನ್ನ ಕಾಯವನ್ನು, ಜೀವನವನ್ನು ಕರ್ಪೂರದ ಹಾಗೆ ಉರಿಸಿಕೊಂಡವರು ಮಹಾತಾಯಿ.
ಪಂಡಿತ್ ರವಿಶಂಕರ್ ಮತ್ತು ಅನ್ನಪೂರ್ಣ ದೇವಿಯವರ ಬಾಲ್ಯದ ಬದುಕು, ಸಂಗೀತದ ಸಾಧನೆಯನ್ನು ಕಣ್ಣಾರೆ ನೋಡಿದವರ ಪ್ರಕಾರ, ಅನ್ನಪೂರ್ಣರವರ ಸಿತಾರ್ವಾದನ ರವಿಶಂಕರ್ ಸಾಧನೆಯನ್ನು, ಪ್ರತಿಭೆಯನ್ನು ಮೀರಿಸುವಂತಹದ್ದು. ಪ್ರದರ್ಶನದ ವೇದಿಕೆಗಳಲ್ಲಿ ತನಗಿಂತ ಹೆಚ್ಚು ಪ್ರಶಂಸೆ ಗಿಟ್ಟುಸುತ್ತಿದ್ದ ಪತ್ನಿಯ ಬಗ್ಗೆ ರವಿಶಂಕರ್ರವರಿಗೆ ಅಸಮಾಧಾನವಿತ್ತು.
ಸಂಗೀತ ಸಾಧನೆಯ ವಿಷಯದಲ್ಲಿ ಇಬ್ಬರದೂ ವಿಭಿನ್ನ ದಾರಿಯಾಗಿತ್ತು. ಅಂತಿಮವಾಗಿ ಸಂಗೀತ ಇಬ್ಬರೂ ಬೇರ್ಪಡಲು ಕಾರಣವಾದದ್ದು ಮಾತ್ರ ದುರಂತ. ಪಂಡಿತ್ ರವಿಶಂಕರ್ ಜಗತ್ ಪ್ರಸಿದ್ಧ ಸಂಗೀತ ಸಾಧಕರಾಗಿದ್ದರೂ ಕೂಡ ಅವರೊಳಗೆ ಇದ್ದ ಹೆಣ್ಣುಬಾಕತನದ ಪ್ರವೃತ್ತಿ ಅವರಿಂದ ಅನ್ನಪೂರ್ಣದೇವಿ ದೂರವಾಗಲು ಪ್ರಮುಖ ಕಾರಣವಾಯಿತು. ಪಾಶ್ಚಿಮಾತ್ಯ ಸಂಸ್ಕøತಿಯಲ್ಲಿ ಬೆಳೆದ ರವಿಶಂಕರ್ಗೂ, ಮುಸ್ಲಿಂ ಕುಟುಂಬದಲ್ಲಿ ಜನಿಸಿದರೂ ಅಪ್ಪಟ ಭಾರತೀಯ ಸಂಸ್ಕøತಿಯನ್ನು ಮೈಗೂಡಿಸಿಕೊಂಡಿದ್ದ ಅನ್ನಪೂರ್ಣದೇವಿಯವರಿಗೂ ಆಚಾರ ವಿಚಾರ ಮತ್ತು ಆಲೋಚನೆಗಳಲ್ಲಿ ಕಂದಕವೇರ್ಪಟ್ಟಿತ್ತು.

ರವಿಶಂಕರ್ರವರ ತಂದೆ ಶ್ಯಾಮ್ಶಂಕರ್ ಬಂಗಾಳಿ ಬ್ರಾಹ್ಮಣರಾಗಿದ್ದು ಕಾಲಕ್ಕೆ ಬ್ಯಾರಿಸ್ಟರ್ ಪದವಿ ಪಡೆದು ರಾಜಸ್ಥಾನದ ಜಾರ್ವಾರ್ ಸಂಸ್ಥಾನದಲ್ಲಿ ದಿವಾನರಾಗಿದ್ದರು. ವಾರಣಾಸಿಯಲ್ಲಿ ಅವರ ಕುಟುಂಬವಿದ್ದ ಕಾರಣ ಮೊದಲ ಹತ್ತುವರ್ಷಗಳ ಬಾಲ್ಯವನ್ನು ರವಿಶಂಕರ್ ವಾರಣಾಸಿಯಲ್ಲಿ ಕಳೆದಿದ್ದರು. ನಂತರ ಅವರ ತಂದೆ ಜಿನಿವಾ ವಿ.ವಿ.ಯಿಂದ ಡಾಕ್ಟರೇಟ್ ಪದವಿ ಪಡೆದು ವಕೀಲಿ ವೃತ್ತಿಗಾಗಿ ನ್ಯೂಯಾರ್ಕ್ ನಗರಕ್ಕೆ ತೆರಳಿದಾಗ, ತಮ್ಮ ಕುಟುಂಬವನ್ನು ಜೊತೆಗೆ  ಕೊಂಡೊಯ್ದರು. ಒಡ ಹುಟ್ಟಿದ ಏಳು ಜನ ಸಹೋದರರ ಪೈಕಿ ಹಿರಿಯ ಸಹೋದರ ಉದಯ ಶಂಕರ್ ಕಾಲಕ್ಕೆ ಪ್ರಖ್ಯಾತ ನೃತ್ಯ ಪಟುವಾಗಿ ಪ್ರಸಿದ್ಧಿಯಾಗಿ ತಮ್ಮದೇ ನೃತ್ಯತಂಡವೊಂದನ್ನು ಕಟ್ಟಿಕೊಂಡು ಅಮೇರಿಕಾ, ಕೆನಡಾ ಸೇರಿದಂತೆ ಯುರೊಪ್ ರಾಷ್ಟ್ರಗಳಲ್ಲಿ ಪ್ರದರ್ಶನ ನೀಡುತ್ತಿದ್ದರು. ರವಿಶಂಕರ್ ಕೂಡ ಆರಂಭದಲ್ಲಿ ನೃತ್ಯಪಟುವಾಗಿ ಅಣ್ಣನ ತಂಡದಲ್ಲಿ ತೊಡಗಿಸಿಕೊಂಡಿದ್ದರು.
1934 ರಲ್ಲಿ ಕೊಲ್ಕತ್ತ ನಗರದಲ್ಲಿ ನಡೆದ ಸಂಗೀತ ಉತ್ಸವದಲ್ಲಿ ಪಾಲ್ಗೊಂಡಿದ್ದ ಉದಯಶಂಕರ್, ಮಧ್ಯಪ್ರದೇಶದ ಮಯಹಾರ್ ಎಂಬ ಸಂಸ್ಥಾನದಲ್ಲಿ ಗಾಯಕರಾಗಿದ್ದ ಬಾಬಾ ಅಲ್ಲಾವುದ್ದೀನ್ಖಾನ್ ಸಿತಾರ್ ಗಾಯನವನ್ನು ಕೇಳಿ ಅದಕ್ಕೆ  ಮಾರು ಹೋಗಿದ್ದರು. ಮಯಹಾರ್ ಸಂಸ್ಥಾನದ ಮಹಾರಾಜನ ಅನುಮತಿ ಪಡೆದು ಅಲ್ಲಾವುದ್ದೀನ್ ಖಾನರನ್ನು  1935 ರಲ್ಲಿ ತಮ್ಮ ನೃತ್ಯ ತಂಡಕ್ಕೆ ¸ಸಂಗೀತ ನೀಡಲು  ಲಂಡನ್ಗೆ ಆಹ್ವಾನಿಸಿದ್ದರು. ಲಂಡನ್ ಪ್ಯಾರಿಸ್, ರೋಮ್ ನಗರ ಒಳಗೊಂಡಂತೆ ಹಲವು ನಗರಗಳಲ್ಲಿ ನಡೆದ ನೃತ್ಯನಾಟಕ ಪ್ರದರ್ಶನಗಳಲ್ಲಿ ಅಲ್ಲಾವುದ್ದೀನ್ಖಾನ್ ಸಿತಾರ್ ನುಡಿಸಿದ್ದರು. ಇವರ ಸಿತಾರ್ ವಾದನಕ್ಕೆ ಮನಸೋತ ರವಿಶಂಕರ್ ತಮ್ಮ ಹದಿನೆಂಟನೆಯ ವಯಸ್ಸಿನಲ್ಲಿ ನೃತ್ಯವನ್ನು ತ್ಯಜಿಸಿ, 1938 ರಲ್ಲಿ ಮಯಹಾರ್ಗೆ ಬಂದು ಅಲ್ಲಾವುದ್ದೀನ್ ಅವರ ಬಳಿ ಶಿಷ್ಯತ್ವವನ್ನು ಸ್ವೀಕರಿಸಿದರು. ಅವರ ಮನೆಯಲ್ಲಿ ಉಳಿದುಕೊಂಡು ಗುರುಕುಲ ಪದ್ಧತಿಯಲ್ಲಿ ಸಿತಾರ್ ವಾದನ ಕಲಿಯತೊಡಗಿದರು.



ಅನ್ನಪೂರ್ಣದೇವಿಯ ಮೂಲ ಹೆಸರು ರೋಷನಾರ. ಅವರು  ಚೈತ್ರ ಹುಣ್ಣಿಮೆಯ ದಿನ ಜನಿಸಿದ್ದರಿಂದ ಮಯಹಾರದ ( ಈಗಿನ ಜಬಲ್ಪುರ ನಗರದ ಸಮೀಪ ಇರುವ ಪಟ್ಟಣ) ಮಹರಾಜ ಬ್ರಿಜನಾಥ ಸಿಂಗ್  ಅನ್ನಪೂರ್ಣ ಎಂದು ರೋಷನಾರಳಿಗೆ ಪುನರ್ ನಾಮಕರಣ ಮಾಡಿದ್ದ. ಇದಕ್ಕೆ ಅವರ ತಂದೆ ಯಾವ ವಿರೋಧವನ್ನು ವ್ಯಕ್ತಪಡಿಸಲಿಲ್ಲ. ಏಕೆಂದರೆ ಪ್ರತಿ ನಿತ್ಯ ಐದು ಬಾರಿ ನಮಾಜು ಮಾಡುವುದರ ಜೊತೆಗೆ ಶಾರದದೇವಿಯನ್ನು ಪೂಜಿಸಿ ಆರಾಧಿಸುತಿದ್ದ ಅಲ್ಲಾವುದ್ದೀನ್ ಅಂದಿನ ದಿನಗಳಲ್ಲಿ ಹಿಂದು-ಮುಸ್ಲಿಂ ಧರ್ಮಗಳ ಐಕ್ಯತೆಯ ಸಂಕೇತದಂತೆ ಜೀವಿಸಿದ್ದರು.
ಕಾಲದ ಹಿಂದೂಸ್ಥಾನಿ ಸಂಗೀತದಲ್ಲಿ ಮಯಹಾರ ಘರಾನ ಎಂಬ ಪ್ರತ್ಯೇಕ ಹಿಂದೂಸ್ಥಾನಿ ಸಂಗೀತದ ಪ್ರಕಾರವನ್ನು ಹುಟ್ಟುಹಾಕಿದ್ದ ಅಲ್ಲಾವುದ್ದೀನರು ಭಾರತದ ಪ್ರಸಿದ್ದ ಸುರ್ಬಹಾರ್ ಮತ್ತು ಸಿತಾರ್ ವಾದಕರಾಗಿದ್ದರು. ಸುರ್ಬಹಾರ್ ಎನ್ನುವುದು ಸಿತಾರ್ ಮೂಲ ವಾದ್ಯದ ಒಂದು ರೂಪ. ವೀಣೆಯಲ್ಲಿ ರುದ್ರ ವೀಣೆ ಇರುವ ಹಾಗೆ ಅತಿ ತೂಕ ಮತ್ತು ಎತ್ತರ ಇದ್ದ ಸುರ್ಬಹಾರ್ ಅನ್ನು ನುಡಿಸಲು ಏಕಾಗ್ರತೆ ಮತ್ತು ಧ್ಯಾನಸ್ಥ ಮನಸ್ಸು ಬೇಕಾಗಿರುತ್ತಿತ್ತು. ಅಲ್ಲಾವುದ್ದೀನ್ಖಾನ್ ತಮ್ಮ ಪುತ್ರ ಅಲಿ ಅಕ್ಬರ್ಖಾನ್ಗೆ ಮನೆಯಲ್ಲಿ  ಸಂಗೀತ ವಿದ್ಯೆ ಕಲಿಸುತ್ತಿದ್ದರು( ಆಲಿ ಅಕ್ಬರ್ ಖಾನ್ ನಮ್ಮ ಕನ್ನಡದ ಸೀತಾರ್ ವಾದಕರಾದ ಪಂಡಿತ್ ರಾಜೀವ್ ತಾರಾನಾಥ್ ಅವರ ಗುರುಗಳು)  ಮನೆಯೊಳಗೆ ಇದ್ದುಕೊಂಡು ಇವೆಲ್ಲವನ್ನು ಗಮನಿಸುತ್ತಿದ್ದ ಅನ್ನಪೂರ್ಣದೇವಿ ಏಕಲವ್ಯನಂತೆ ಹಿಂದೂಸ್ತಾನಿ ಸಂಗೀತದ ಜೊತೆಗೆ ಸಿತಾರ್ ವಾದನವನ್ನು ಕರಗತ ಮಾಡಿಕೊಳ್ಳುತ್ತಿದ್ದರು. ಒಮ್ಮೆ ಅಲ್ಲಾವುದ್ದೀನರು ಮಗನಿಗೆ ಅಭ್ಯಾಸ ಮಾಡಲು ಹೇಳಿ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಅಣ್ಣ ತಪ್ಪಾಗಿ ಶೃತಿ ನುಡಿಸಿದ್ದನ್ನು ಕೇಳಿಸಿಕೊಂಡ ಅನ್ನಪೂರ್ಣದೇವಿ, ಅಣ್ಣನ ಶೃತಿಯನ್ನು ತಿದ್ದುತ್ತಾ ಸೀತಾರ್ ನುಡಿಸುತ್ತಿದ್ದರು. ಮನೆಗೆ ಬಂದ  ಅಲ್ಲಾವುದ್ದೀನ್ ಮಗಳಿಗೆ ಗೊತ್ತಾಗದಂತೆ ಬಾಗಿಲ ಬಳಿ ನಿಂತು ಆಕೆಯ ಪ್ರತಿಭೆಯನ್ನು ಗಮನಿಸಿ ಭಾವುಕರಾಗಿದ್ದರು. ಮಾರನೆಯ ದಿನದಿಂದ ಮಕ್ಕಳಿಬ್ಬರಿಗೂ ಸಂಗೀತದ ವಿದ್ಯಾಭ್ಯಾಸ ಮುಂದುವರಿಯಿತು. ಅನ್ನಪೂರ್ಣರವರು ತಂದೆಯಂತೆ ಸಿತಾರ್ ಜೊತೆಗೆ ಸುರ್ ಬಹಾರ್ ನುಡಿಸುವಲ್ಲಿ ನೈಪುಣ್ಯತೆ ಸಾಧಿಸಿದ್ದರು.(ಸಧ್ಯ ಭಾರತದಲ್ಲಿ ಸುರ್ ಬಹಾರ್ ವಾದನ ನುಡಿಸುವ ಏಕೈಕ ಜೀವ ಅನ್ನಪೂರ್ಣ ದೇವಿ ಮಾತ್ರ.)ಚಿಕ್ಕ ವಯಸ್ಸಿನಲ್ಲಿ ಅವರು ಸಂಗೀತದಲ್ಲಿ ಮಾಡಿದ ಸಾಧನೆ ಮುಂದಿನ ದಿನಗಳಲ್ಲಿ ಅವರ ಪಾಲಿಗೆ ಶಾಪವಾಗಿ ಪರಿಣಮಿಸಿತು.


ಸಂಗೀತ ಎಂಬುದು ಕೇವಲ ಹವ್ಯಾಸ ಅಥವಾ ವೃತ್ತಿಯಲ್ಲ, ಅದೊಂದು ಧ್ಯಾನ, ದೇವರನ್ನು ಓಲೈಸುವ ಪರಿ, ಆಧ್ಯಾತ್ಮದತ್ತ ತೆರಳುವ ಮಾರ್ಗಇದು ಅಲ್ಲಾವುದ್ದೀನ್ ಅಚಲ ನಂಬಿಕೆಯಾಗಿತ್ತು. ತಂದೆಯಿಂದ ಸಂಗೀತದ ಜೊತೆಗೆ ಇಂತಹ ಬದ್ಧತೆಯನ್ನು ಅನ್ನಪೂರ್ಣದೇವಿ ತಮ್ಮದಾಗಿಸಿಕೊಂಡಿದ್ದರು. ಅಲ್ಲಾವುದ್ದೀನ್ ತಮ್ಮ ಮಕ್ಕಳಾದ ಅನ್ನಪೂರ್ಣ, ಅಲಿ ಅಕ್ಬರ್ ಖಾನ್ ಮತ್ತು ಶಿಷ್ಯ ರವಿಶಂಕರ್ರವರಿಗೆ ಸಂಗೀತವನ್ನು ಧಾರೆಯೆರೆಯುತ್ತಿದ್ದ ಸಂದರ್ಭದಲ್ಲಿ ರವಿಶಂಕರ್ ಅಣ್ಣ ಉದಯಶಂಕರ್ ಅನ್ನಪೂರ್ಣರವರನ್ನು ತನ್ನ ತಮ್ಮ ರವಿಶಂಕರ್ಗೆ ವಿವಾಹ ಮಾಡಿಕೊಳ್ಳುವ ಪ್ರಸ್ತಾಪವನ್ನು ಗುರುವಿನ ಮುಂದಿಟ್ಟರು. ತೆರೆದ ಮನಸ್ಸಿನ ಅಲ್ಲಾವುದ್ದೀನ್ ಖಾನ್ ಆಹ್ವಾನವನ್ನು ನಿರಾಕರಿಸಲಿಲ್ಲ, ಒಪ್ಪಿಗೆ ಸೂಚಿಸಿದರು. 1942 ರಲ್ಲಿ ಹಿಂದೂ ಪದ್ಧತಿಯಂತೆ ರವಿಶಂಕರ್ ಮತ್ತು ಅನ್ನಪೂರ್ಣರವರ ವಿವಾಹ ಹಿಮಾಲಯ ತಪ್ಪಲಿನ ನೈನಿತಾಲ್ ಗಿರಿಧಾಮದ ಸಮೀಪದ ಅಲ್ಮೊರದಲ್ಲಿ ನೆರೆವೇರಿತು. ಅದು ಕಾಲಕ್ಕೆ ಅಂತರ್ಧರ್ಮ ಮತ್ತು ಜಾತಿಯ ಅಪೂರ್ವ ವಿವಾಹವಾಗುವುದರ ಮೂಲಕ ಸಂಗೀತಕ್ಕೆ ಭಾಷೆ, ಜಾತಿ, ಧರ್ಮದ ಹಂಗಿಲ್ಲ ಎಂಬುದನ್ನು ನಿರೂಪಿಸಿತ್ತು.
ಗುರುಗಳ ಬಳಿ ನಾಲ್ಕು ವರ್ಷಗಳ ಕಾಲ ವಿದ್ಯಾಭ್ಯಾಸ ಮುಗಿಸಿದ ರವಿಶಂಕರ್ ಆಕಾಶವಾಣಿ ಕಲಾವಿದರಾಗಿ ಮತ್ತು  ಸತ್ಯಜಿತ್ ರಾಯ್ ಸಿನಿಮಾಗಳ ಸಂಗೀತ ನಿರ್ದೆಶಕರಾಗಿ ತೊಡಗಿಕೊಂಡು ಸಂಗೀತದಲ್ಲಿ ಹಲವು ಪ್ರಯೋಗಗಳನ್ನು ಕೈಗೊಳ್ಳುತ್ತಾ ನಡೆದರು. ಅವರು ಅಲೆಕ್ಷಾಂಡರನಂತೆ ಜಗತ್ತನ್ನು ಗೆಲ್ಲುವ ಮಹತ್ವಾಕಾಂಕ್ಷಿಯಾಗಿದ್ದರು. ಆದರೆ ಅನ್ನಪೂರ್ಣದೇವಿ ಪಂಡಿತ್ ರವಿಶಂಕರ್ಗಿಂತ ಭಿನ್ನವಾಗಿ ಆಲೋಚಿಸುತ್ತಾ ತಾವು ಇರುವ ಸ್ಥಳದಲ್ಲಿ ಜಗತ್ತನ್ನು ಸೃಷ್ಟಿಸಿಕೊಳ್ಳಬಲ್ಲವರಾಗಿದ್ದರು. ಅವರಿಗೆ ಸಂಗೀತವೆಂಬುದು ಪ್ರದರ್ಶನದ ಅಥವಾ ಆಡಂಬರದ ಪ್ರಕಾರವಾಗಿರಲಿಲ್ಲ, ಅದು ತನ್ನನ್ನು ತಾನು ಅರಿಯುವ, ಬೆಳೆಯುವ ಹಾದಿ ಎಂದು ನಂಬಿದ್ದರು. ಇಂತಹ ಒಂದು ನಂಬಿಕೆ ಅವರನ್ನು ಕಾಲದಲ್ಲಿ ಅದ್ವಿತೀಯ ಕಲಾವಿದೆಯನ್ನಾಗಿ ರೂಪಿಸಿತ್ತು. ರವಿಶಂಕರ್ ಅನ್ನಪೂರ್ಣದೇವಿ ಜೊತೆಯಾಗಿ ಹಲವಾರು ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದರು. ರವಿಶಂಕರ್ರವರ ಸಿತಾರ್ ವಾದನದಲ್ಲಿ ಹುಚ್ಚು ಹೊಳೆಯ ವೇಗ, ಮತ್ತು ರಭಸವಿದ್ದರೆ, ಅನ್ನಪೂರ್ಣ ನುಡಿಸುತ್ತಿದ್ದ ಸಿತಾರ್ ವಾದನದಲ್ಲಿ ನಿರ್ಜನ ಅರಣ್ಯದಲ್ಲಿ ನಿಶ್ಯಬ್ಧದಿಂದ ತಂತಾನೆ ಜುಳು ಜುಳು ಹರಿಯುವ ನದಿಯ ನಿನಾದವಿತ್ತು. ತನ್ನ ಪತ್ನಿಯ ಪ್ರತಿಭೆ ತನ್ನ ಭವಿಷ್ಯಕ್ಕೆ ಅಡ್ಡಿಯಾಗುವ ಸೂಚನೆಯಿಂದ ಕಸಿವಿಸಿಗೊಂಡ  ರವಿಶಂಕರ್, ಅನ್ನಪೂರ್ಣ ಅವರನ್ನು ತೆರೆಯ ಹಿಂದಕ್ಕೆ ಸರಿಸಿ, ತಾವು ವೇದಿಕೆಯಲ್ಲಿ ಪ್ರತಿಷ್ಟಾಪನೆಗೊಂಡರು. ವೇಳೆಗಾಲೆ ಅವರಿಗೆ ಒಬ್ಬ ಪುತ್ರ ಜನಿಸಿದ್ದರಿಂದ ಪತಿಯ ಏಳಿಗೆಗಾಗಿ ಸಾರ್ವಜನಿಕ ಸಂಗೀತ ಕಾರ್ಯಕ್ರಮವನ್ನು ತ್ಯಜಿಸಿದ ಅನ್ನಪೂರ್ಣ ತಮ್ಮಳಗಿದ್ದ ಪ್ರತಿಭೆಯನ್ನು ಪುತ್ರ ಶುಭೇಂದ್ರನಿಗೆ ಧಾರೆಯರೆಯತೊಡಗಿದರು.
ಭಾರತೀಯ ಸಂಗೀತ ಲೋಕ ಕೂಡ ರವಿಶಂಕರ್ರವರ ಸಿತಾರ್ ನಾದದ ಮಾಧುರ್ಯಕ್ಕೆ ತಲೆತೂಗುತ್ತಾ ಅನ್ನ ಪೂರ್ಣದೇವಿಯವರನ್ನು ಮರೆಯತೊಡಗಿತು. ಇದು ಜಗದ ನಿಯಮವೂ ಹೌದು. ಮೆರವಣಿಗೆಯಲ್ಲಿ ಮದುಮಗನ ಮುಖ ಕಾಣಲಿ ಎಂದು ತಲೆಯ ಮೇಲೆ ಮೇಲೆ ಉರಿಯುವ ದೀಪ ಹೊತ್ತು ಸಾಗುವ ಅನಾಮಿಕರನ್ನು ಯಾರೂ ಗಮನಿಸುವುದಿಲ್ಲ. ಎಲ್ಲರ ಗಮನ  ಮದುಮಗನ ಮೇಲೆ ಮಾತ್ರವೇ ಹೊರತು, ಕತ್ತಲೆಯಲ್ಲಿ ಮುಖ ಹುದುಗಿಸಿಕೊಂಡವರದಲ್ಲ, ಅನ್ನಪೂರ್ಣದೇವಿಯವರದು ಇದೇ ಸ್ಥಿತಿಯಾಯಿತು.
ರವಿಶಂಕರ್ರವರ ಸಂಗೀತ ಸಾಧನೆಗೆ ಅಡ್ಡಿಯಾಗದೆ ಅವರ ಜೊತೆ ಸುಧೀರ್ಘ ಇಪ್ಪತ್ತು ವರ್ಷ ದಾಂಪತ್ಯ ಜೀವನ ನಡೆಸಿದ ಅನ್ನಪೂರ್ಣರವರಿಗೆ ಕೊನೆಗೆ ಅವರ ಜೊತೆ ಸಂಬಂಧ ಕಡಿದುಕೊಳ್ಳಬೇಕಾದ ಅನಿವಾರ್ಯತೆ ಒದಗಿ ಬಂತು. ರವಿಶಂಕರ್ರವರ ಪರ ಸ್ತ್ರೀ ವ್ಯಾಮೋಹದ ಪ್ರವೃತ್ತಿ ಹಾಗೂ ದಾಂಪತ್ಯದಾಚೆಗಿನ ಸಂಬಂಧ ಕುರಿತು ಮೊದಲಿನಿಂದಲೂ ಹಲವಾರು ಮಾತುಗಳನ್ನು ಕೇಳಿಸಿಕೊಂಡದ್ದ ಅವರಿಗೆ ಕೊನೆಗೊಮ್ಮೆ ಅದು ಸಾಭೀತಾಯಿತು. ತನ್ನ ಅಣ್ಣ ಅಲಿ ಅಕ್ಬರ್ ಖಾನ್ರವರ ನಾದಿನಿ ಕಮಲ ಜೊತೆ ತನಗಿರುವ ಸಂಬಂಧವನ್ನು ರವಿಶಂಕರ್ ಸ್ವತಃ ಒಪ್ಪಿಕೊಂಡ ಮೇಲೆ 1962 ರಲ್ಲಿ ಅವರಿಂದ ಬೇರ್ಪಟ್ಟರು. ರವಿಶಂಕರ್ ತಮ್ಮ ಸಂಗೀತದ ಚೈತ್ರಯಾತ್ರೆಯಂತೆ ಹೆಣ್ಣುಗಳ ಶಿಕಾರಿಯನ್ನು ಬದುಕಿನುದ್ದಕ್ಕೂ ಮುಂದುವರಿಸಿದರು. ಅವರ ಪಾಲಿಗೆ ಹೆಣ್ಣೆಂದರೆ ಕ್ಷಣಕ್ಕೆ ತೃಪ್ತಿ ನೀಡಬಲ್ಲ ಒಂದು ಭೋಗದ ವಸ್ತು. ಕಾರಣಕ್ಕಾಗಿ ಹೆಣ್ಣಿನ ವಯಸ್ಸಿನ ಬಗ್ಗೆಯಾಗಲಿ, ಆಕೆ ಇನ್ನೊಬ್ಬರ ಪತ್ನಿ ಎಂಬ ನೈತಿಕತೆಯಾಗಲಿ ಅವರನ್ನು ಎಂದೂ ಕಾಡಲಿಲ್ಲ. ಇದಕ್ಕೆ ಅವರು ಬಾಲ್ಯದಿಂದ ಮೈಗೂಡಿಸಿಕೊಂಡಿದ್ದ ಪಾಶ್ಚಿಮಾತ್ಯ ಜಗತ್ತಿನ ಭೋಗ ಸಂಸ್ಕøತಿ ಸಹ ಪರೋಕ್ಷವಾಗಿ ಕಾರಣವಾಗಿತ್ತು.





1969 ರಲ್ಲಿ ಅವರು ಭಾರತ ತೊರೆದು ಜಗತ್ತಿನಾದ್ಯಂತ ಸಂಗೀತ ಪ್ರದರ್ಶನ ನೀಡಲು ಹೊರಟಾಗ ಅವರ ಪುತ್ರ ಶುಭೇಂದ್ರ ಕೂಡ ಅವರ ಜೊತೆಯಾಗಿದ್ದುಕೊಂಡು ಅವರ ಪ್ರದರ್ಶನಗಳಲ್ಲಿ ಸಾಥಿಯಾಗಿ ಕಾರ್ಯನಿರ್ವಹಿಸಿದ. ಸಂಗೀತ ಕುರಿತಂತೆ ತಾಯಿಯ ಏಕಾಗ್ರತೆ ಮತ್ತು ಮೌನ ಮತ್ತು ತಂದೆಯ ಪ್ರಯೋಗಶೀಲತೆ ಮತ್ತು ಚಂಚಲತೆ ಇವುಗಳ ನಡುವೆ ಅವನು ತಂದೆಯನ್ನು ಆರಿಸಿಕೊಂಡಿದ್ದ.
ಇತ್ತ ಮುಂಬೈ ನಗರದಲ್ಲಿ ಅನ್ನಪೂರ್ಣ ದೇವಿ ಅಜ್ಞಾತವಾಸದಲ್ಲಿ ಅನಾಮಿಕಳಂತೆ ಬದುಕುತ್ತಿದ್ದಾಗ ವಾಪಸ್ ತವರಿಗೆ ಮರಳುವಂತೆ ಆಕೆಯ ಕುಟುಂಬದವರು ಒತ್ತಾಯ ಹೇರಿದಾಗ ವಾಪಸ್ ಮಯಹಾರ್ಗೆ ಹೋಗಲು ನಿರಾಕರಿಸಿದರು. ತಂದೆ ಬಳುವಳಿಯಾಗಿ ನೀಡಿದ್ದ ಸಂಗೀತವನ್ನು ಗುರುವಾಗಿದ್ದುಕೊಂಡು ಶಿಷ್ಯರಿಗೆ ಧಾರೆಯೆರೆಯಲು ನಿರ್ಧರಿಸಿದರು. ಏಕೆಂದರೆ, ಅವರೊಳಗೆ ಒಬ್ಬ ಶಿಲ್ಪಿಗೆ ಇರಬಹುದಾದ ಕುಶಲತೆ ಮತ್ತು ಕೈಚಳಕ ಎರಡೂ ಇತ್ತು. ಶಿಲ್ಪಿಯ ಕೈಗೆ ಸಿಕ್ಕ ಕಾಡುಗಲ್ಲು ಮೋಹಕ ಮೂರ್ತಿಯಾಗಿ ಮೈದಾಳುವಂತೆ ಅವರಿಂದ ಸಂಗೀತದ ಶಿಕ್ಷಣ ಪಡೆದ ಎಲ್ಲರೂ ಭಾರತದ ಸಂಗೀತ ಲೋಕದ ಮುಕುಟಮಣಿಗಳಾದರು.
ಇಂತಹ ಏಕಾಂಗಿ ಜೀವನ ನಡೆಸುತ್ತಿದ್ದ ಅವರ ಬದುಕಿನಲ್ಲಿ 1982 ಒಂದು ದಿನ ಒಂದು ಆಕಸ್ಮಿಕ ಘಟನೆಯೂ ನಡೆದು ಹೋಯಿತು. ಅಮೇರಿಕಾದಲ್ಲಿದ್ದ ಅವರ ಸಹೋದರ ಅಲಿ ಅಕ್ಬರ್ ಖಾನ್ರವರು ತಮ್ಮ ಬಳಿ ಬಳಿ ಶಿಷ್ಯ ವೃತ್ತಿ ಸ್ವೀಕರಿಸಿ ಸಿತಾರ್ ಕಲಿಯುತ್ತಿದ್ದ ಋಷಿಕುಮಾರ್ ಪಾಂಡೆ ಎಂಬುವರಿಗೆ ಅನಾರೋಗ್ಯದ ನಿಮಿತ್ತ ಸಂಗೀತ ಕಲಿಸಲಾರದೆ, ಮುಂಬೈ ನಗರಕ್ಕೆ ಸಹೋದರಿಯ ಬಳಿಗೆ ಕಳಿಸಿಕೊಟ್ಟಿದ್ದರು. ಮುಂಬೈ ನಗರಕ್ಕೆ ಬಂದ ಪಾಂಡೆ ಅನ್ನಪೂರ್ಣ ದೇವಿ ಮನೆಯಲ್ಲಿ ಇದ್ದುಕೊಂಡು ಎಂಟು ವರ್ಷಗಳ ಕಾಲ ಸಂಗೀತಾಭ್ಯಾಸ ಮಾಡಿದರು. ಅನ್ನಪೂರ್ಣದೇವಿಯವರ  ಏಕಾಂಗಿ ಬದುಕು, ಅಜ್ಞಾತವಾಸ ಎಲ್ಲವನ್ನೂ ನೋಡಿ, ಅವರಿಗಿಂತ 14 ವರ್ಷ ಚಿಕ್ಕವರಾದರೂ ಸಹ, ಪಾಂಡೆ ಒಂದು ದಿನ  ವಿವಾಹವಾಗುವ ಪ್ರಸ್ತಾಪವನ್ನು ಅವರ ಮುಂದಿಟ್ಟರು. ಅನಿರೀಕ್ಷಿತ ಆಹ್ವಾನವನ್ನು ಅನ್ನಪೂರ್ಣದೇವಿಗೆ ಜೀರ್ಣಿಸಿಕೊಳ್ಳಲಾರದ ಸ್ಥಿತಿ. ನಾಲ್ಕು ದಿನಗಳ ಕಾಲ ಯೋಚಿಸಿ, ಅಂತಿಮವಾಗಿ ತಮ್ಮ ಕೊನೆಯ ಕಾಲದಲ್ಲಿ ಆರೈಕೆಗೆ ಒಂದು ಜೀವ ಇರಲಿ ಎಂದು ಋಷಿಕುಮಾರ್ ಪಾಂಡೆಯನ್ನು ಸಂಗಾತಿಯಾಗಿ ಸ್ವೀಕರಿಸಿದರು.
ಸ್ವತಃ ಪಾಂಡೆಯವರು,  ಅನ್ನಪೂರ್ಣದೇವಿ ಲೋಕದ ಕಣ್ಣಲ್ಲಿ ನನಗೆ ಪತ್ನಿಯಾದರೂ, ಅದಕ್ಕಿಂತ ಹೆಚ್ಚಾಗಿ ಅವರು ನನಗೆ ಗುರುಎಂದಿದ್ದಾರೆ. ಪತ್ರಕರ್ತೆಗೆ ನೀಡಿರುವ ಉತ್ತರದಲ್ಲಿ ಅನ್ನಪೂರ್ಣದೇವಿ ಸಹ ನಾನು ಎಂಬತ್ಮೂರನೇ ವಯಸ್ಸಿನಲ್ಲಿ ಆರೋಗ್ಯವಾಗಿರಲು ಪಾಂಡೆಯವರ ಕಾಳಜಿ ಕಾರಣ ಎಂದು ಹೇಳಿಕೊಂಡಿದ್ದಾರೆ.

1962 ರಲ್ಲಿ ರವಿಶಂಕರ್ ಜೊತೆ ವಿಚ್ಛೇಧನ ಪಡೆದ ನಂತರ ಇಬ್ಬರ ಮನಸ್ಸಿನಲ್ಲಿ ಯಾವುದೇ ದ್ವೇಷ ಅಥವಾ ಕಹಿಭಾವನೆ ಉಳಿದಿರಲಿಲ್ಲ. 1980ರಲ್ಲಿ ರಿಚರ್ಡ್ ಆಟನ್ಬರೊ ಅವರ ಗಾಂಧಿ ಚಿತ್ರಕ್ಕೆ ಸಂಗೀತ ಸಂಯೋಜಿಸಲು ಮುಂಬೈ ನಗರಕ್ಕೆ  ಬಂದಿದ್ದ ರವಿಶಂಕರ್ ಅನ್ನಪೂರ್ಣರವರ ಮನೆಗೆ ಹೋಗಿ ಭೇಟಿ ನೀಡಿ ಯೋಗ ಕ್ಷೇಮ ವಿಚಾರಿಸಿ ಬಂದಿದ್ದರು. ಅದನ್ನು ಹೊರತು ಪಡಿಸಿದರೆ ತಮ್ಮ ಬದುಕಿನ ಐವತ್ತು ವರ್ಷಗಳ ಕಾಲ ಅವರ ಮುಖ ನೋಡದ, ಮಾತನಾಡದ ವ್ಯಕ್ತಿತ್ವ ಅನ್ನಪೂರ್ಣರವರದು.

ಕಳೆದ ಡಿಸಂಬರ್ 12 ರಂದು ತಮ್ಮ ತೊಂಬತ್ತನೆಯ ವಯಸ್ಸಿನಲ್ಲಿ ತೀರಿಹೋದ ಪಂಡಿತ್ ರವಿಶಂಕರ್ ನಿಧನ ವಾರ್ತೆ ಅನ್ನಪೂರ್ಣದೇವಿಯವರಿಗೆ ಅವರ ಎರಡನೆಯ ಪತಿ ಪಾಂಡೆ  ಮೂಲಕ ತಿಳಿದಾಗ, ಕಣ್ಣೀರು ಮತ್ತು ಭಾವನೆಗಳೆಲ್ಲವನ್ನು ಅದುಮಿಟ್ಟುಕೊಂಡು ಮೌನಕ್ಕೆ  ಮೊರೆಹೋದರು. ಮಾರನೆಯ ದಿನ ಕೊಲ್ಕತ್ತ ನಗರದ ಟೆಲಿಗ್ರಾಫ್ಇಂಗ್ಲೀಷ್ ದಿನಪತ್ರಿಕೆಗೆ ದೂರವಾಣಿಯಲ್ಲಿ ಮೊಟ್ಟ ಮೊದಲ ಹೇಳಿಕೆಯನ್ನು ಅವರು ಕೊಟ್ಟರು.
ಅನ್ನಪೂರ್ಣದೇವಿಯವರ ಹೇಳಿಕೆ ಹೀಗಿತ್ತುಪಂಡಿತ್ಜಿರವರ ಸಂಗೀತ ಕುರಿತಂತೆ ಅವರಲ್ಲಿದ್ದ ತ್ಯಾಗಮನೋಬಾವ, ಮತ್ತು ಎಲ್ಲಾ ಸಂಗೀತದ ಪ್ರಕಾರಗಳ ಕುರಿತು ಅವರಿಗಿದ್ದ ಆಸಕ್ತಿ ಮಕ್ಕಳಿಗೆ ಇರುವ ಕುತೂಹಲದಂತೆ ಇರುತ್ತಿತ್ತು. ಅವರಿಗಿದ್ದ ಹಾಸ್ಯ ಪ್ರವತ್ತಿ ಮತ್ತ್ರು ಅವರ ಗುರುಗಳು ಹಾಗೂ ನನ್ನ ತಂದೆಯವರಾದ ಬಾಬಾ ಅಲಿಖಾನ್ ಬಗ್ಗೆ ಇದ್ದ ಪೂಜ್ಯಭಾವನೆಗಳನ್ನು ಮರೆಯಲಾಗದು, ಅವರ ಇಂತಹ ಗುಣಗಳು ನನ್ನ ಬದುಕಿಗೆ ಪ್ರೇರಣೆಯಾಗಿವೆ. ಇದಕ್ಕಾಗಿ ನಾನು ಅವರಿಗೆ ಕೃತಜ್ಞಳಾಗಿದ್ದೀನಿ.”




ಮುಂಬೈ ನಗರದ ಆರನೆಯ ಅಂತಸ್ತಿನ ಅನ್ನಪೂರ್ಣರವರ ಮನೆಯ ಬಾಗಿಲಿಗೆ ಒಂದು ನಾಮಫಲಕವನ್ನು ತೂಗುಹಾಕಲಾಗಿದೆ. “ದಯಮಾಡಿ ಮೂರುಬಾರಿ ಮಾತ್ರ ಕಾಲಿಂಗ್ ಬೆಲ್ ಒತ್ತಿರಿ. ಬಾಗಿಲು ತೆರೆಯದಿದ್ದರೆ, ತಡಮಾಡದೆ  ಹಿಂತಿರುಗಿರಿ. ತೊಂದರೆಗಾಗಿ ವಿಷಾಧಿಸುತ್ತೇನೆ
ಬೆಳಿಗ್ಗೆ ಮೂರು ಗಂಟೆಗೆಯಿಂದ ಆರಂಭವಾಗುವ ಅವರ ದಿನಚರಿ ಅವರ ಮೆಚ್ಚಿನ ಕೌಶಿಕಿ ರಾಗವನ್ನು ಸಿತಾರ್ ವಾದನದೊಂದಿಗೆ ನುಡಿಸುವುದರೊಂದಿಗೆ ಆರು ಗಂಟೆಗೆ ಮುಕ್ತಾಯವಾಗುತ್ತದೆ. ಅದರ ನಿನಾದ ಕೂಡ ನಮ್ಮ ಮಲ್ಲಿಗೆಯ ಕವಿ ಕೆ.ಎಸ್. ನರಸಿಂಹ ಸ್ವಾಮಿ ಹೇಳುವ ಹಾಗೆ ನೀರೊಳಗೆ ವೀಣೆ ಮಿಡಿದಂತೆ ಇರುತ್ತದೆ. ಸಣ್ಣನೆಯ ಅಲೆಯೊಂದಿಗೆ ತೇಲಿಬರುವ ಸ್ವರ ಮಾಧುರ್ಯ ಮನೆಯೆದುರುಗಿನ ಸಮುದ್ರದ ಗಾಳಿಯೊಂದಿಗೆ ಮಿಳಿತವಾಗುವುದರ ಮೂಲಕ ಲೀನವಾಗುತ್ತದೆ. ನೆರೆಹೊರೆಯವರು ಏಳುವ ಮುನ್ನವೆ, ಮನೆಯ ತಾರಸಿಗೆ ಹೋಗಿ ಪಾರಿವಾಳಗಳಿಗೆ ಒಂದಿಷ್ಟು ಕಾಳು ಹಾಕಿ ಮನೆಗೆ ಬಂದು ಬಾಗಿಲು ಹಾಕಿಕೊಂಡರೆ ಅವರ ಅಂದಿನ ದಿನಚರಿ ಮುಗಿಯಿತು. ಅವರು, ಅವರ ಏಕಾಂತ, ಮೌನ ಮತ್ತು ಆಯ್ದ ಶಿಷ್ಯರಿಗೆ ಒಂದಿಷ್ಟು ಹಿಂದೂಸ್ಥಾನಿ ಸಂಗೀತದ ಪಾಠ. ಇವಿಷ್ಟೇ ಅವರ ಲೋಕ. ವಾರಕ್ಕೆ ಎರಡು ದಿನ ಮೌನ ಮತ್ತು ಏಕಾಂತ.



ಅನ್ನಪೂರ್ಣ ದೇವಿಯವರ ಕಠೋರ ನಿಲುವಿನಿಂದಾಗಿ ಭಾರತದ ಸಂಗೀತ ರಸಿಕರ ಲೋಕವೊಂದು ಅವರ ಸ್ವರ ಮಾಧುರ್ಯದಿಂದ ವಂಚಿತವಾಗಿದೆ. 1960 ದಶಕದಲ್ಲಿ ಅವರು ನುಡಿಸಿದ ಸಿತಾತ್ ವಾದನದ ತುಣುಕುಗಳು ಯೂ ಟ್ಯೂಬ್ನಲ್ಲಿ  ಇಂದಿಗೂ ಹರಿದಾಡುತ್ತಿವೆ. ಅದನ್ನು ಆಲಿಸಿದಾಗ ನಾದದಿಂದ ವಂಚಿತರಾದ ನಾವು ನತದೃಷ್ಟರು ಎಂಬ ವಿಷಾಧದ ಛಾಯೆ ಮನಸ್ಸನ್ನು ಆವರಿಸಿಕೊಳ್ಳುತ್ತದೆ.

4 comments:

 1. Wah! Wonderful writing. Like the playing of Annapurna Deviji. Thanks for the touching piece of art sir!

  Raag Yaman on Surbahar by Vidushi Annapurna Devi
  http://www.youtube.com/watch?v=u_uyl4P8AjM

  ReplyDelete
 2. ಪಂಡಿತ್ ರವಿಶಂಕರ್ ಅವರ ನಿಧನದ ನಂತರ ಕೆಲವು ಪತ್ರಿಕೆಗಳಲ್ಲಿ ಅಲ್ಪಸ್ವಲ್ಪ ಓದಿದ್ದೆ. ಈಗ ಅನ್ನಪೂರ್ಣದೇವಿ ಅವರ ಬಗ್ಗೆ ಮತ್ತಷ್ಟು ಮಾಹಿತಿ ನಿಮ್ಮ ಲೇಖನ ನೀಡಿದೆ. ಧನ್ಯವಾದಗಳು ಸರ್

  ReplyDelete
 3. ಅನ್ನಪೂರ್ಣರವರ ಸ೦ಗೀತ ಲೋಕದ ಉತ್ತು೦ಗ ಸಾಧನೆಯ ಹಾಗೂ ಎಲೆ ಮರೆಯ ಮಾಗಿದ ಫಲದ೦ತೆ ಬದುಕುತ್ತಿರುವ ಜೀವನ ವೈಖರಿಯ ಬಗ್ಗೆ ತಿಳಿಸಿದ ನಿಮಗೆ ಅನೇಕ ಧನ್ಯವಾದಗಳು. ಲೋಕದ ಕಣ್ಣಿಗೆ ಅಜ್ಞಾತ ರ೦ತಿದ್ದರೂ ಆಧ್ಯಾತ್ಮಿಕತೆಯಲ್ಲಿ ಸ೦ಗೀತದ ಮೂಲಕ ಪರಮೋನ್ನತ ಪದವಿಗೆ ಏರಿರುವ ಅವರಿಗೆ ನನ್ನ ಹೃತ್ಪೂರ್ವಕ
  ನಮನಗಳು.

  ReplyDelete
 4. ಓದಿ ಮನಸು ಮೂಕವಾಯಿತು... ಅನ್ನಪೂರ್ಣದೇವಿಯವರ ಕುರಿತು ತಿಳಿಸಿಕೊಟ್ಟಿದ್ದಕ್ಕಾಗಿ ನಿಮಗೆ ನೂರು ನಮನ.

  ReplyDelete