ಮಂಗಳವಾರ, ಡಿಸೆಂಬರ್ 31, 2013

ಅಣುಲೋಕದ ವಂಚನೆಯ ಜಗತ್ತು.



ಕಳೆದ ಎರಡು  ದಶಕಗಳಲ್ಲಿ ಭಾರತದಲ್ಲಿ ಬದಲಾದ  ಸಾಮಾಜಿಕ ಬದುಕಿನ ಪಲ್ಲಟಗಳಿಂದಾಗಿ, ಮತ್ತು ಮನುಷ್ಯ ಜೀವಿಯ ಖಾಸಾಗಿ ಮತ್ತು ಸಾಮಾಜಿಕ ಬದುಕಿನೊಂದಿಗೆ ತಳುಕು ಹಾಕಿಕೊಂಡ ಆಧುನಿಕತೆಯ  ತಂತ್ರಜ್ಞಾನದ ಫಲವಾಗಿ ವಿದ್ಯುತ್ ಕೂಡ ಈಗ ಆಹಾರ, ನೀರು ಮತ್ತು ಗಾಳಿಯಂತೆ ಮೂಲಭೂತ ಬೇಡಿಕೆಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ದೇಶದಲ್ಲಿ ಏರುತ್ತಿರುವ ವಿದ್ಯುತ್ ಬೇಡಿಕೆ, ಆಹಾರ ಪದಾರ್ಥಗಳ ಬೆಲೆಗಳ ಜೊತೆ ಪೈಪೊಟಿಗೆ ಬಿದ್ದಂತೆ ಕಾಣುತ್ತಿದೆ.
ಭಾರತದಲ್ಲಿ ವಿದ್ಯುತ್ ಬೇಡಿಕೆ ಪೂರೈಸಲು, ಜಲವಿದ್ಯುತ್, ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆ ಹಾಗೂ ನೈಸರ್ಗಿಕವಾಗಿ ದೊರೆಯುವ ಗಾಳಿ ಮತ್ತು ಸೂರ್ಯನ ಬೆಳಕಿನಿಂದ ವಿದ್ಯುತ್ ಉತ್ಪಾದಿಸಲಾಗುತ್ತಿದ್ದರೂ ಸಹ ಪ್ರತಿ ವರ್ಷ ಶೇಕಡ ಹದಿನೈದರಿಂದ ಇಪ್ಪತ್ತರಷ್ಟು ವಿದ್ಯುತ್ ಬೇಡಿಕೆಯ ಪ್ರಮಾಣ ಹೆಚ್ಚುತ್ತಿದೆ. ಈ ನಾಲ್ಕು ಸಾಂಪ್ರದಾಯಕ ಮೂಲಗಳಲ್ಲದೆ, ಭಾರತದಲ್ಲಿ ಇಪ್ಪತ್ತು ಅಣುವಿದ್ಯುತ್ ಸ್ಥಾವರಗಳಿಂದ  ಒಟ್ಟು 5800 ಮೆಗಾವ್ಯಾಟ್ ಉತ್ಪಾದಿಸಲಾಗುತ್ತಿದ್ದು, ಸದ್ಯದಲ್ಲಿ ಮತ್ತೇ ಆರು ಸ್ಥಾವರಗಳಿಂದ 5300 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಯೋಜನೆ ಹಾಕಿಕೊಳ್ಳಲಾಗಿದೆ
.
2030 ರ ವೇಳೆಗೆ ಅಣು ವಿದ್ಯುತ್ ಸ್ಥಾವರಗಳಿಂದ ಭಾರತದಲ್ಲಿ 63 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಗುರಿ ಹಾಕಿಕೊಳ್ಳಲಾಗಿದೆ. ಅತ್ಯಂತ ಅಪಾಯಕಾರಿ ಹಾಗೂ ಪರಿಸರ ಮತ್ತು ಜೀವಜಾಲಕ್ಕೆ ಮಾರಕ ಎನ್ನಲಾದ ಅಣುವಿದ್ಯುತ್ ತಂತ್ರಜ್ಞಾನವನ್ನು ಬಹುತೇಕ ಪಾಶ್ಚಿಮಾತ್ಯ ಜಗತ್ತಿನ ರಾಷ್ಟ್ರಗಳು ತಿರಸ್ಕರಿಸಿವೆ. ಆದರೆ, ತಾವು ಅಭಿವೃದ್ಧಿ ಪಡಿಸಿದ ಹಾಗೂ ಮನು ಕುಲಕ್ಕೆ ಎರವಾಗಬಲ್ಲ ಈ ತಂತ್ರಜ್ಞಾನವನ್ನು ಅಮೇರಿಕಾ, ಕೆನಡಾ, ಪ್ರಾನ್ಸ್, ಮತ್ತು ರಷ್ಯಾ ದೇಶಗಳು ತೃತೀಯ ಜಗತ್ತಿನ ರಾಷ್ಟ್ರಗಳಿಗೆ ಧಾರೆಯೆರೆಯುತ್ತಿವೆ, ಪಶ್ಚಿಮದಿಂದ ದೊರೆಯುವ ಎಲ್ಲವನ್ನೂ ಸ್ವೀಕರಿಸುವ ಕುರುಡು ಪ್ರಜ್ಞೆಯನ್ನು ಬೆಳಸಿಕೊಂಡಿರುವ ಭಾರತ ಕೂಡ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ.
ಕಳೆದ ನಾಲ್ಕು ದಶಕಗಳಿಂದ ಈ ಅಪಾಯಕಾರಿ ತಂತ್ರಜ್ಞಾನದ ಬಗ್ಗೆ ಭಾರತದಲ್ಲಿ ಅನೇಕ ಪ್ರಜ್ಞಾವಂತರು, ಪ್ರತಿಭಟನೆ ವ್ಯಕ್ತ ಪಡಿಸಿದರೂ ಸಹ ಅದು ಅರಣ್ಯ ರೋಧನವಾಗಿ ಉಳಿದುಬಂದಿತ್ತು. ಈ ತಂತ್ರಜ್ಞಾನದ ಬಗ್ಗೆಯಾಗಲಿ, ಅಥವಾ ಅಣುಸ್ಥಾವರಗಳಲ್ಲಿ ಸಂಭವಿಸುವ ಅವಘಡ ಕುರಿತಾಗಲಿ ಜನಸಾಮಾನ್ಯರಿಗೆ ಯಾವುದೆ ಮಾಹಿತಿ ದೊರಕುತ್ತಿರಲಿಲ್ಲ. ಅದೆಲ್ಲವನ್ನೂ ದೇಶದ ರಕ್ಷಣೆಯ ನೆಪದಲ್ಲಿ ಗೌಪ್ಯವಾಗಿ ಕಾಪಾಡಿಕೊಂಡು ಬರಲಾಗುತ್ತಿತ್ತು.  ಆದರೆ. 2011 ರಲ್ಲಿ ಜಪಾನ್ ದೇಶದಲ್ಲಿ ಸಂಭವಿಸಿದ ಸುನಾಮಿ ಪ್ರಕೃತಿ ವಿಕೋಪದಲ್ಲಿ ಅಲ್ಲಿನ ಪುಕೊಶಿಮ ಅಣು ವಿದ್ಯುತ್ ಸ್ಥಾವರ ಸ್ಪೋಟಗೊಂಡು ಅದರಿಂದ ಹೊರಸೂಸಿದ ಅಣುವಿಕಿರಣಗಳು ಮತ್ತು ಅದರ ಪ್ರಭಾವ ಹೊರ ಜಗತ್ತಿಗೆ ಅನಾವರಣಗೊಳ್ಳುತ್ತಿದ್ದಂತೆ ಏಷ್ಯಾದ ಎಲ್ಲೆಡೆ ಆತಂಕ ಸೃಷ್ಟಿಯಾಗತೊಡಗಿದೆ. ಭಾರತದಲ್ಲಿ ಜನಸಾಮಾನ್ಯರೂ ಸಹ ತಮ್ಮ ತಮ್ಮ ಪ್ರದೇಶಗಳಲ್ಲಿ ಅಣುವಿದ್ಯುತ್ ಸ್ಥಾವರಗಳ ಸ್ಥಾಪನೆಗೆ ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ
ಮಹಾರಾಷ್ಟ್ರದ ಜತಿಪುರ್ ಎಂಬಲ್ಲಿ ರಷ್ಯ ಸಹಯೋಗದಿಂದ ಆರಂಭವಾಗಬೇಕಿದ್ದ , 9900 ಮೆಗಾವ್ಯಾಟ್ ಅಣು ವಿದ್ಯುತ್ ಯೋಜನೆಗೆ ತಡೆ ಒಡ್ಡಲಾಗಿದೆ. ಪಶ್ಚಿಮ ಬಂಗಾಳದ ಹರಿಪುರ್ ಎಂಬಲ್ಲಿ 600 ಮೆಗಾವ್ಯಾಟ್ ಅಣು ಉತ್ಪಾದನೆ ಯೋಜನೆಗೆ ಪಶ್ಚಿಮ ಬಂಗಾಳ ಸರ್ಕಾರ ವಿರೋಧ ವ್ಯಕ್ತಪಡಿಸಿದೆ.  ಇತ್ತೀಚೆಗಿನ ದಿನಗಳಲ್ಲಿ ತಮಿಳುನಾಡಿನ ದಕ್ಷಿಣ ಭಾಗದ ಬಂಗಾಳ ಕೊಲ್ಲಿಯ ಸಮುದ್ರ ತೀರದ ಬಂದರು ಪಟ್ಟಣವಾದ ತೂತ್ತುಕುಡಿಯಲ್ಲಿ ( ಟೂಟುಕೋರಿನ್)  ರಷ್ಯಾ ಸಹಕಾರದಿಂದ ಎರಡು ಸಾವಿರ ಮೆಗಾವ್ಯಾಟ್ ಅಣು ವಿದ್ಯುತ್ ಯೋಜನೆಗೆ ಎದುರಾದ ಎಲ್ಲಾ ಅಡೆತಡೆಗಳನ್ನು ಬಗ್ಗು ಬಡಿದ ಕೇಂದ್ರ ಸರ್ಕಾರ,  ಸ್ಥಳಿಯ ಜನರ ಪ್ರತಿಭಟನೆಯನ್ನು ಲೆಕ್ಕಿಸದೆ,  ಒಂದು ಸಾವಿರ ಮೆಗಾವ್ಯಾಟ್ ಉತ್ಪಾದನೆಯ ಸ್ಥಾವರ ಕಾರ್ಯಾರಂಭಕ್ಕೆ ಅನುವು ಮಾಡಿಕೊಟ್ಟಿದೆ. ಎರಡನೆಯ ಸ್ಥಾವರದ ನಿರ್ಮಾಣ ಕಾರ್ಯ ಮುಂದುವರಿದಿದೆ. ಈ ಅಣುವಿದ್ಯುತ್ ಸ್ಥಾವರಕ್ಕೆ ಜನರನ್ನು ಸಂಘಟಿಸಿದ ಸ್ವಯಂ ಸೇವಾ ಕಾರ್ಯಕರ್ತರನ್ನು ಮತ್ತು ವಿದೇಶಿ ಪರಿಸರ ಹೋರಾಟಗಾರರು ಮತ್ತು ತಜ್ಞರನ್ನು ಸ್ಥಳಿಯ ಪ್ರದೇಶಕ್ಕೆ ಬೇಟಿ ನೀಡದಂತೆ ನಿರ್ಭಂದ ಹೇರಲಾಗಿದೆ. ಸ್ಥಳೀಯ ನಾಯಕ ಪರಪ್ಪರಾಯನ್ ಎಂಬಾತನಿಗೆ ಆತನ 
ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಪೊಲೀಸರು ಅನುಮತಿ ನಿರಾಕರಿಸಿದರು


.
ಇತ್ತೀಚೆಗಿನ ದಿನಗಳಲ್ಲಿ ನಮ್ಮನ್ನಾಳುವ ಜನಪ್ರತಿನಿಧಿಗಳು ಮತ್ತು ಆಳುವ ಸರ್ಕಾರಗಳು ಪರಿಸರ ಹೋರಾಟಗಾರರನ್ನು ಮತ್ತು ಪರಿಸರವಾದಿಗಳನ್ನು ಅಭಿವೃದ್ಧಿಯ ವಿರೋಧಿಗಳೆಂದು ಪ್ರತಿಬಿಂಬಿಸುತ್ತಾ ಬಂದಿದ್ದಾರೆ. ಮನುಕುಲಕ್ಕೆ ನೆರವಾಗುವ ಅಥವಾ ಬೆಳಕಾಗುವ ಯಾವುದೇ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ವಿರೋಧಿಸುವ ಸಿನಿಕತನವನ್ನು ಯಾವೊಬ್ಬ ಪರಿಸರವಾದಿ ಹೊಂದಿರುವುದಿಲ್ಲ. ಆದರೆ ಅದು ಯಾವುದೇ ವಿಜ್ಞಾನ, ಅಥವಾ ತಂತ್ರಜ್ಞಾನವಾಗಿರಲಿ, ಮನುಷ್ಯನಿಂದ ಅವಿಷ್ಕಾರಗೊಂಡ ಮೇಲೆ ಅದು ಅವನ ನಿಯಂತ್ರಣದಲ್ಲಿರಬೇಕು. ಆದರೆ, ಜೈವಿಕ ತಂತ್ರಜ್ಞಾನ ಕ್ರೇತ್ರದಲ್ಲಿ ಕ್ಷಿಪ್ರ ಗತಿಯಲ್ಲಿ ನಡೆಯುತ್ತಿರುವ ಬೆಳವಣಿಗೆ ಮತ್ತು ಅಣು ಲೋಕದ ವಿದ್ಯಾಮಾನಗಳು ಈಗಾಗಲೇ ಮನುಷ್ಯನ ನಿಯಂತ್ರಣವನ್ನು ಮೀರಿದ ರಂಗಗಳಾಗಿವೆ. ಇವುಗಳಿಂದ ಆಗುತ್ತಿರುವ ದುರಂತಕ್ಕೆ ನಾಗರೀಕ ಜಗತ್ತು ಮೂಕಸಾಕ್ಷಿಯಾಗಿದೆ. ಅಣ್ವಸ್ತ್ರಗಳು, ಅಣು ಬಾಂಬ್ ಗಳು, ಅಣು ವಿದ್ಯುತ್ ಸ್ಥಾವರಗಳ ದುರಂತಗಳು, ಆನಂತರ ಅಣುವಿಕಿರಣದ ಪ್ರಭಾವದಿಂದ ಮಾನವ ಮತ್ತು ಪ್ರಾಣಿ ಜಗತ್ತು ಹಾಗೂ ನೈಸರ್ಗಿಕ ಜಗತ್ತಿನಲ್ಲಾದ ಪರಿಣಾಮಗಳಲ್ಲದೆ, ಕುಲಾಂತರಿ ತಳಿಗಳ ಅಡ್ಡ ಪ್ರಯೋಗದಿಂದ ಸೃಷ್ಟಿಯಾದ ದೈತ್ಯ ಕಳೆಗಳು, ಎಂತಹ ವಿಷವನ್ನೂ ಜೀರ್ಣಿಸಿಕೊಳ್ಳುವ ಹೊಸ ಕೀಟಗಳು ಇವುಗಳಿಗೆ ನಾವು ಯಾರಿಂದ ಉತ್ತರ ನಿರೀಕ್ಷಿಸೋಣ?  ಕಣ್ಣೆದುರುಗಿನ ವಾಸ್ತವವನ್ನು ಅರ್ಥಮಾಡಿಕೊಳ್ಳಲಾಗದ ಅಭಿವೃದ್ಧಿ ಭ್ರಮೆಯ ಜಗತ್ತಿಗೆ ಪರಿಸರ ಪ್ರೇಮಿಗಳು ಸಿನಿಕರಂತೆ  ಕಾಣದೆ ಬೇರೆ ತರಹ ಕಾಣಲು ಸಾದ್ಯವೆ?

1986 ರ ಏಪ್ರಿಲ್ 25 ಮತ್ತು 26 ನಡುವಿನ ಮಧ್ಯರಾತ್ರಿ ರಷ್ಯಾದ ಚೆರ್ನೋಬಿಲ್ ಅಣುವಿದ್ಯುತ್ ಸ್ಥಾವರದ ಘಟನೆಗೆ ಸಾಕ್ಷಿಯಾದ ವ್ಲಾದಿಮಿರ್ ಚೆರ್ನೆಂಕೊ ಎಂಬ ಅಣುವಿಜ್ಞಾನಿ, ಕ್ಯಾನ್ಸರ್ ಪಿಡಿತನಾಗಿ 1993 ರಲ್ಲಿ ಅಮೇರಿಕಾ ದೇಶಕ್ಕೆ ಚಿಕಿತ್ಸೆಗಾಗಿ ಬಂದ ಸಂದರ್ಭದಲ್ಲಿ ತಾನು ಸಾಯುವ ಮುನ್ನ ಜಗತ್ತಿನೆದುರು ಬಿಚ್ಚಿಟ್ಟ ವಾಸ್ತವ ಸತ್ಯ ಇದು. ವ್ಲಾದಿಮೀರ್ ಚೆರ್ನೆಂಕೋ ರಷ್ಯಾದ ಅತ್ಯಂತ ಹಿರಿಯ ಅಣುವಿಜ್ಞಾನಿ. ಅಲ್ಲಿನ ಅಣ್ವಸ್ತ್ರಗಳು ಮತ್ತು ಅಣು ವಿದ್ಯುತ್ ಸ್ಥಾವರಗಳ ಅವಿಷ್ಕಾರದಲ್ಲಿ ಸತತ ಐವತ್ತು ವರ್ಷಗಳ ಕಾಲ ತೊಡಗಿಸಿಕೊಂಡಿದ್ದ ಈ ವಿಜ್ಞಾನಿ. ತಾನು ಸಾಯುವ ಕೆಲವೇ ದಿನಗಳ ಮುನ್ನ, ಅಮೇರಿಕಾದ ನ್ಯೂಯಾರ್ಕ್ ನಗರದಲ್ಲಿ ಜಗತ್ತಿನ ಮಾಧ್ಯಮಗಳ ಎದುರು ಅಣುಲೋಕದ ವಂಚನೆಗಳನ್ನು ವಿವರಿಸುತ್ತಾ, ಅಮೇರಿಕಾ ರಷ್ಯಾ ಸೇರಿದಂತೆ ಎಲ್ಲಾ ರಾಷ್ಟ್ರಗಳ ಮುಖವಾಡಗಳನ್ನು ಕಳಚಿ ಹಾಕಿದ. ಅವನ ಮಾತಿನ ವಿವರಗಳು ಹೀಗಿವೆ.
“ ಚರ್ನೋಬಿಲ್ ಅಣಸ್ಥಾವರದ ಸ್ಪೋಟ ಸಂಭವಿಸಿದ್ದು 1986 ರ ಏಪ್ರಿಲ್ 25 ಮತ್ತು 26 ರ ನಡುರಾತ್ರಿ. ತನ್ನ ಮಿತಿಮೀರಿದ ಶಾಖದಿಂದ ಸ್ಪೋಟಗೊಂಡ ಅಣುಸ್ಥಾವರ ನಿರಂತರ ಹದಿನಾರು ದಿನಗಳ ಕಾಲ ಅಣುವಿಕಿರಣಗಳನ್ನು ಹೊರ ಜಗತ್ತಿಗೆ ಸೂಸುತ್ತಾ, ಹತ್ತಿ ಉರಿದರೂ ರಷ್ಯಾ ಸರ್ಕಾರ ಏನೂ ಆಗಿಲ್ಲ ಎಂಬಂತೆ ತಣ್ಣಗೆ ಕುಳಿತಿತ್ತು. ಆ ವೇಳೆಗಾಗಲೆ ದುರಂತ ನಡೆದ ಸ್ಥಳದಿಂದ 40 ಕಿಲೊಮೀಟರ್ ವ್ಯಾಪ್ತಿಯೊಳಗೆ ಅಣುವಿಕಿರಣ ಮತ್ತು ವಿಷಾನಿಲ ಪರಿಸರದ ಮೇಲೆ ತಮ್ಮ ಪರಿಣಾವನ್ನು ತೋರಿದ್ದವು.  ರಷ್ಯಾ ಸರ್ಕಾರ ದುರಂತ ನಡೆದ ಸ್ಥಳದ ಸುತ್ತಾ ಸೇನಾ ತುಕಡಿಯನ್ನು ಪಹರೆಗೆ ಇರಿಸಿ, ಏನೂ ಆಗಿಲ್ಲವೆಂಬಂತೆ ಜಗತ್ತಿನೆದುರು ಮುಖವಾಡ ಧರಿಸಿ ಕುಳಿತಿತ್ತು

ಏಪ್ರಿಲ್ 28 ರ ಬೆಳಿಗ್ಗೆ ಅಂದಿನ ಅಧ್ಯಕ್ಷ ಗೋರ್ಬಚೇವ್ ನನ್ನನ್ನು ಕರೆಸಿ, ಈ ಅಣುಸ್ಥಾವರದ ದುರಂತ ಮತ್ತು ದುರಸ್ತಿಯ ಸಾಧ್ಯತೆಗಳ ಬಗ್ಗೆ ವರದಿ ಸಲ್ಲಿಸಲು ಕೇಳಿಕೊಂಡರು. ದುರಂತವೆಂದರೆ, ಅಣುವಿಕಿರಣದ ಪ್ರಮಾಣವನ್ನು ಅಳೆಯಲು ನಮ್ಮ ಬಳಿ ಇದ್ದ ಮಾಪನಗಳು ಕೇವಲ 400 ರೆಮ್ಸ್ ಮಾತ್ರ ಅಳೆಯಬಲ್ಲ ಸಾಧನಗಳಾಗಿದ್ದವು. ಆದರೆ, ಅಣುವಿಕಿರಣ ಇದರ ಗಡಿಯನ್ನು ದಾಟಿತ್ತು. ( 5 ರೆಮ್ಸ್ ವರೆಗಿನ ಅಣುವಿಕಿರಣ ಮನುಷ್ಯರಿಗೆ ಅಪಾಯವಿಲ್ಲ ಎಂಬುದು ಅಣು ತಜ್ಞರ ಹೇಳಿಕೆ) ಚರ್ನೋಬಿಲ್ ಸ್ಥಾವರದ ಶಾಖವನ್ನು ತಣಿಸಿ, ಅಲ್ಲಿನ ಅವಶೇಷಗಳನ್ನು ಸ್ವಚ್ಚ ಮಾಡಲು 18 ರಿಂದ 25 ವರ್ಷದ ಸೇನಾ ಯೋಧರನ್ನು ಸ್ಥಳಕ್ಕೆ ಕಳಿಸಲಾಯಿತು. ಯಾವೊಂದು ರಕ್ಷಣಾ ಕವಚ ಧರಿಸಿದೆ ದುರಂತ ಸ್ಥಳಕ್ಕೆ ಬೇಟಿ ನೀಡಿದ ಈ ಅಮಾಯಕ ಸೈನಿಕರು.ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪಿದ್ದರು. ದುರಂತ ಹಾಗೂ ಅದರ ಪರಿಣಾಮ ಹೆಚ್ಚಿನದಲ್ಲ ಎಂಬುದನ್ನು ಜಗತ್ತಿಗೆ ತೋರಿಸುವುದು ರಷ್ಯಾ ಸರ್ಕಾರದ ಹುನ್ನಾರವಾಗಿತ್ತು. ಆನಂತರ ಏಳು ಸಾವಿರ ಸೈನಿಕರ ಸಹಾಯ ಮತ್ತು ಹೆಲಿಕಾಪ್ಟರ್ ಗಳ ಮೂಲಕ ಅಣುಸ್ಥಾವರದ ಮೇಲೆ ಸಾವಿರಾರು ಟನ್ ಗಾಜಿನ ಚೂರು ಮತ್ತು ಕಾಂಕ್ರೀಟ್ ಸುರಿದು, ಅಣುಸ್ಥಾವರದ ಮೇಲೆ ಐವತ್ತು ಮೀಟರ್ ಎತ್ತರದ ಸಮಾಧಿ ಕಟ್ಟಲಾಯಿತು. ದುರಂತವೆಂದರೆ, ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಯಾವೊಬ್ಬ ಸೈನಿಕನೂ ನಂತರದ ದಿನಗಳಲ್ಲಿ ಬದುಕುಳಿಯಲಿಲ್ಲ.
ಅಧ್ಯಕ್ಷರ ಅಪ್ಪಣೆ ಮೇರೆಗೆ ನಾನು ಚರ್ನೋಬಿಲ್ ಅಣುಸ್ಥಾವರದ ದುರಂತದ ಬಗ್ಗೆ ಮೂರು ಸಂಪುಟಗಳ ವರದಿಯನ್ನು ಸಲ್ಲಿಸಿದೆ. ಕೂಡಲೆ ನನ್ನ ವರದಿ ರಷ್ಯಾ ಸರ್ಕಾರದ ರಹಸ್ಯ ಕಪಾಟಿನೊಳಕ್ಕೆ ಸೇರಿಕೊಂಡಿತು. ಆನಂತರ ಈ ವರದಿ ಕುರಿತು ರಷ್ಯಾ ಸರ್ಕಾರವಾಗಲಿ, ಅಂತರಾಷ್ಟ್ರೀಯ ಅಣು ಆಯೋಗವಾಗಲಿ ತುಟಿ ಬಿಚ್ಚಲಿಲ್ಲ. ಸರ್ಕಾರದ ಪ್ರಕಾರ ದುರಂತದಲ್ಲಿ ಸತ್ತವರ ಸಂಖ್ಯೆ ಕೇವಲ ಹದಿನಾರು ಮಾತ್ರ. ಆದರೆ ಕಾರ್ಯಾಚರಣೆ ವೇಳೆ ಸತ್ತವರ ಸೈನಿಕರ ಸಾವನ್ನು ಹೊರ ಜಗತ್ತಿನಿಂದ ಮರೆ ಮಾಚಲಾಗಿತ್ತು

ಕೀವ್ ಎಂಬ ನಲವತ್ತು ಲಕ್ಷ ಜನಸಂಖ್ಯೆಯುಳ್ಳ ನಗರ ಈ ದುರಂತದಿಂದಾಗಿ ತನ್ನೆಲ್ಲಾ ಲಕ್ಷಣಗಳನ್ನು ಕಳೆದುಕೊಂಡು ಸಾವಿನ ಮನೆಯಾಗಿ ಪರಿವರ್ತನೆಗೊಂಡಿತು. ನಾನು ಮೊದಲು ಅಣುಸ್ಥಾವರದ ದುರಂತದಿಂದ ಈ ನಗರದ ಮೇಲೆ ಕೇವಲ ಮೂರು ರೆಮ್ಸ್ ಪ್ರಮಾಣದ ಅಣುವಿಕಿರಣದ ಪ್ರಭಾವ ಬೀರಿರಬೇಕೆಂದು ಊಹಿಸಿದ್ದೆ, ಆದರೆ, ಅಲ್ಲಿ ಎಪ್ಪತ್ತು ರೆಮ್ಸ್ ನಷ್ಟು ಅಣುವಿಕಿರಣ ಹೊರಸೂಸಿತ್ತು.  ಒಟ್ಟಾರೆ, ಚರ್ನೋಬಿಲ್ ಅಣುವಿದ್ಯುತ್ ಸ್ಥಾವರದ ದುರಂತದಿಂದಾಗಿ ರಷ್ಯಾದ ಆರೂವರೆ ಕೊಟಿ ಜನ ಅಣುವಿಕಿರಣಗಳ ಪ್ರಭಾವದಿಂದ ನರಳುವಂತಾಯಿತು.ಇದರಿಂದ ಉಂಟಾದ ಹಾನಿಯ ಪ್ರಮಾಣ ಎರಡನೇಯ ಮಹಾಯುದ್ದದ ಪರಿಣಾಮವನ್ನು ಮೀರಿಸುವಂತಿತ್ತು. ರಷ್ಯಾದ ಆ ಪ್ರದೇಶದ ಸುತ್ತ ಮುತ್ತಲಿನ ಹಳ್ಳಿ ಮತ್ತು ನಗರ ಪ್ರದೇಶಗಳಲ್ಲಿ ಪ್ರತಿ ತಿಂಗಳೂ ಹೆಸರಿಸಲಾಗದಷ್ಟು ಅನೇಕ ಹೊಸ ಖಾಯಿಲೆಗಳು ಹುಟ್ಟಿಕೊಂಡವು, 



ಮನುಷ್ಯರ ದೈಹಿಕ ಪ್ರಕ್ರಿಯೆಯಲ್ಲಿ ಅನೇಕ ಬದಲಾವಣೆಗಳು ಉಂಟಾದ ಪರಿಣಾಮವಾಗಿ ಅಂಗವಿಕಲ ಮಕ್ಕಳ ಜನನ ಸಾಮಾನ್ಯವಾಯಿತು. ಪ್ರಾಣಿಗಳ ಬದುಕು ಸಹ ಮನುಷ್ಯರಿಂತ ಭಿನ್ನವಾಗಿರಲಿಲ್ಲ. ಚರ್ನೋಬಿಲ್ ಅಣುಸ್ಥಾವರ ಹತ್ತಿರವಿದ್ದ ಹಳ್ಳಿಗಳ ಸುಮಾರು ಹದಿನೈದು ಲಕ್ಷ ಜನತೆ ತೀವ್ರ ವಿಕಿರಣಕ್ಕೆ ತುತ್ತಾದರು.ಇದರ ಜೊತೆಗೆ ಯುರೋಪಿನ ಗೋಧಿಯ ಕಣಜವೆನಿಸಿದ್ದ ಉಕ್ರೇನಿನ ಫಲವತ್ತಾದ ಭೂಮಿ, ಮತ್ತು ಅಲ್ಲಿನ ನೆಲಮೂಲಗಳು ಅಣು ವಿಕಿರಣಕ್ಕೆ ತುತ್ತಾದವು. ಈ ಭೂಮಿಯಲ್ಲಿ ಬೆಳೆಯಲಾದ ಗೋಧಿ, ತರಕಾರಿ, ಹಣ್ಣುಗಳನ್ನು ಸೇವಿಸಿದ ಜನರ ಜಠರದಲ್ಲಿ ಹುಣ್ಣುಗಳಾದವು. ಅನಿಮಿಯಾ ಮತ್ತು ಕ್ಯಾನ್ಸರ್ ಕಾಯಿಲೆಗೆ ತುತ್ತಾದರು.
ದುರಂತದ ಸಂಗತಿಯೆಂದರೆ, ಈ ಮೊದಲು ರಷ್ಯಾದಲ್ಲಿ 104 ಅಣುಸ್ಥಾವರಗಳ ಸಣ್ಣ ಪುಟ್ಟ ದುರಂತಗಳು ಸಂಭವಿಸಿದ್ದವು. ಅವೆಲ್ಲವನ್ನೂ ಮಿಲಿಟರಿ ರಕ್ಷಣೆಯ ನೆಪದಲ್ಲಿ ಗೌಪ್ಯವಾಗಿಡಲಾಗಿತ್ತು. ರಷ್ಯಾದಲ್ಲಿ ಅಣು ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸುವ ಸಂದರ್ಭದಲ್ಲಿ ಮನುಷ್ಯ ನಿರ್ಮಿತ ತಪ್ಪಿನಿಂದಾಗಿ ಇನ್ನೂರಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದವು. ನಿಜ ಹೇಳಬೇಕೆಂದರೆ, ನನ್ನ ನೆಲವಾದ ರಷ್ಯಾದಲ್ಲಿ ಒಂದಿಂಚು ಭೂಮಿ ಅಣುವಿಕಿರಣದಿಂದ ಮುಕ್ತವಾಗಿಲ್ಲ. ಈ ಮೊದಲು ಅಣುಶಕ್ತಿ ಕೇಂದ್ರ ಮತ್ತು ಅಣುಸ್ಥಾವರಗಳಲ್ಲಿ ಸ್ಪೋಟ ಸಂಭವಿಸಿದಾಗ ಮಾತ್ರ ಅಪಾಯ  ಎಂದು ಅಂದಾಜಿಸಲಾಗಿತ್ತು. ಅದು ತಪ್ಪು ಊಹೆ ಎಂದು ನನಗೆ ಮನದಟ್ಟಾಯಿತು. ಅಣು ಸ್ಥಾವರಗಳ ಚಟುವಟಿಕೆ ನಡೆಯುವ ಪ್ರದೇಶಗಳ ಸುತ್ತ ಮುತ್ತಲಿನ ನೀರಿನ ಸೆಲೆಗಳು ಅಣುವಿಕಿರಣಕ್ಕೆ ಒಳಗಾಗಿರುವುದನ್ನು ನಾನು ನನ್ನ ದೇಶದ ಹತ್ತು ಅಣುಸ್ಥಾವರಗಳ ಪ್ರದೇಶದಲ್ಲಿ ದೃಢಪಡಿಸಿಕೊಂಡೆ. 1991 ರಿಂದ 1993 ರವರೆಗೆ ಕೇವಲ ಎರಡು ವರ್ಷಗಳಲ್ಲಿ ಅಮೇರಿಕಾ ಸೇರಿದಂತೆ ಹದಿನಾಲ್ಕು ರಾಷ್ಟ್ರಗಳ 152 ಅಣು ವಿದ್ಯುತ್ ಸ್ಥಾವರಗಳಲ್ಲಿ ಸ್ಪೋಟ ಸಂಭವಿಸಿದೆ. 1989 ರ ವರೆಗೆ ಜಗತ್ತಿನಾದ್ಯಂತ ಸುರಕ್ಷತೆಯ ದೃಷ್ಟಿಯಿಂದ 860 ಅಣು ಸ್ಥಾವರಗಳನ್ನು ಮುಚ್ಚಲಾಗಿದೆ.

ಇದು 1993 ರಲ್ಲಿ ರಷ್ಯಾ ಅಣುವಿಜ್ಞಾನಿ ಬಿಚ್ಚಿಟ್ಟ ಸತ್ಯ. ಈ ಘಟನೆಯ ನಂತರ ಇಪ್ಪತ್ತು ವರ್ಷಗಳಲ್ಲಿ ಜಗತ್ತಿನಾದ್ಯಂತ ಆಗಿರುವ ಪರಿಣಾಮಗಳನ್ನು ನೀವೆ ಊಹಿಸಿಕೊಳ್ಳಿ. 1952 ರಿಂದ 2012 ರ ವರೆಗೆ ಸಂಭವಿಸಿದ ಅಣು ವಿದ್ಯುತ್ ಸ್ಥಾವರಗಳ ದುರಂತದಲ್ಲಿ ಅಮೇರಿಕಾ ಮೊದಲ ಸ್ಥಾನದಲ್ಲಿದೆ. ಅಮೇರಿಕಾದಲ್ಲಿ ಒಟ್ಟು ನಲವತ್ತೈದು ದುರಂತಗಳು ಸಂಭವಿಸಿದ್ದು, 1979 ರಲ್ಲಿ ತ್ರೀ ಮೈಲ್ಸ್ ಐಸ್ ಲ್ಯಾಂಡ್ ಅಣುಸ್ಥಾವರದ ಸ್ಪೋಟ ಭೀಕರವಾದದ್ದು. ಕೆನಡಾದಲ್ಲಿ ಐದು, ಪಾಕಿಸ್ಥಾನದಲ್ಲಿ ಒಂದು, ಉಕ್ರೇನ್ ನಲ್ಲಿ ಒಂದು,  ಪ್ರಾನ್ಸ್ ನಲ್ಲಿ ಹನ್ನೆರೆಡು, ಜರ್ಮನಿಯಲ್ಲಿ ಮೂರು, ಭಾರತದಲ್ಲಿ ಏಳು, ಇಂಗ್ಲೇಂಡ್ ನಲ್ಲಿ ಮೂರು, ಅವಘಡಗಳು ಸಂಭವಿಸಿದ್ದು, ಇವುಗಳಲ್ಲಿ 1979 ರ ಅಮೇರಿಕಾದ ತ್ರೀ ಮೈಲ್ಸ್ ಐಸ್ ಲ್ಯಾಂಡ್, 1986 ರ ರಷ್ಯಾದ ಚರ್ನೋಬಿಲ್ ಮತ್ತು 2011 ರಲ್ಲಿ ಜಪಾನಿನಲ್ಲಿ ಸಂಭವಿಸಿದ ಪುಕೊಶಿಮಾ ಅಣುಸ್ಥಾವರದ ಸ್ಪೋಟದ ಘಟನೆಗಳು ಅಣು ಚರಿತ್ರೆಯ ಭೀಕರ ದುರಂತಗಳು ಎಂದು ದಾಖಲಾಗಿವೆ.

ಇದು ಅಣುಸ್ಥಾವರಗಳ ಸ್ಪೋಟಗಳ ದುರಂತದ ಕಥೆಯಾದರೆ, ಈಗ ಚಾಲ್ತಿಯಲ್ಲಿದ್ದು ಅಣು ವಿದ್ಯುತ್ ಉತ್ಪಾದಿಸುತ್ತಿರುವ  ಸ್ಥಾವರಗಳಿಂದ ಹೊರಬೀಳುತ್ತಿರುವ ಯುರೇನಿಯಂ ತ್ಯಾಜ್ಯ ಆಧುನಿಕ ಜಗತ್ತಿಗೆ ನುಂಗಲಾರದ ತುತ್ತಾಗಿದೆ. ಅಣು ವಿದ್ಯುತ್ ಉತ್ಪಾದನೆಗೆ ಸಂಸ್ಕರಿಸಿದ ಯುರೇನಿಯಂ ಅದಿರನ್ನು ಬಿಲ್ಲೆಗಳಾಗಿ ಪರಿವರ್ತಿಸಿ ಬಳಸಲಾಗುತ್ತಿದ್ದು, ಇದರಲ್ಲಿ ಹೊರಬೀಳುವ ತ್ಯಾಜ್ಯವನ್ನು ಆರು ಇಂಚು ದಪ್ಪದ ಉಕ್ಕಿನ ಪಿಪಾಯಿಗಳಲ್ಲಿ ತುಂಬಿಸಿ, ಭೂಮಿಯ ಕೆಳಗಡೆ ಅರವತ್ತು ಅಡಿ ಆಳದಲ್ಲಿ ಹೂಳಲಾಗುತ್ತಿದೆ. ( ಅಮೇರಿಕ, ಜಪಾನ್, ಇಂಗ್ಲೇಂಡ್, ಪ್ರಾನ್ಸ್ ದೇಶಗಳಲ್ಲಿ ಸಮುದ್ರದ ಅಡಿಯಲ್ಲಿ ಹೂಳಲಾಗುತ್ತಿದೆ.)
ಈ ಅಣು ತ್ಯಾಜ್ಯದಿಂದ ಸುಮಾರು ಇನ್ನೂರು ವರ್ಷಗಳಿಂದ ಹಿಡಿದು ನಾಲ್ಕುನೂರು ವರ್ಷಗಳ ವರೆಗೆ ಅಣುವಿಕಿರಣ ಹೊರಸೂಸುವ ಸಾಧ್ಯತೆಗಳಿದ್ದು ಈ ಕಾರಣದಿಂದಾಗಿ ಭೂಮಿಯಲ್ಲಿ ಹೂಳಲಾಗುತ್ತಿದೆ. ಭಾರತದಲ್ಲಿ ಸಧ್ಯ ವಾರ್ಷಿಕ 480 ಟನ್ ಯುರೇನಿಯಂ ಅದಿರನ್ನು ಅಣುವಿದ್ಯುತ್ ಉತ್ಪಾದನಗೆ  ಬಳಸಲಾಗುತ್ತಿದ್ದು, ಇದರಲ್ಲಿ ಶೇಕಡ ಹತ್ತರಷ್ಟು ತ್ಯಾಜ್ಯ ಲೆಕ್ಕ ಹಾಕಿದರೆ, ಪ್ರತಿ ವರ್ಷ 48 ಟನ್ ವಿಷವನ್ನು ಭೂಮಿಗೆ ಉಣಬಡಿಸಲಾಗುತ್ತಿದೆ. ಇಡೀ ಅಣುಲೋಕದ ವಿದ್ಯಾಮಾನಗಳನ್ನು ಗಮನಿಸುತ್ತಿದ್ದರೆ, ಅಧುನಿಕ ಜಗತ್ತಿನ ಮನುಷ್ಯನನ್ನು ನಾವು ಮೋಹಿನಿ ಭಸ್ಮಾಸೂರನಿಗೆ ಹೋಲಿಸಬಹುದು.
ಕೊನೆಯ ಮಾತು- ಅಣು ಲೋಕದ ದುರಂತಗಳ ಬಗ್ಗೆ ಆಸಕ್ತಿ ಇರುವ ಓದುಗರು ಈ ಕೆಳಗಿನ ಕೃತಿಗಳನ್ನು ಗಮನಿಸಬಹುದು..
http://bits.wikimedia.org/static-1.23wmf7/skins/common/images/magnify-clip.png
http://bits.wikimedia.org/static-1.23wmf7/skins/common/images/magnify-clip.pngಅಣು ವಿದ್ಯುತ್ ಸ್ಥಾವರ ಮತ್ತು ಅಣುಲೋಕದ ವಿವರ ನೀಡುವ ಕೃತಿಗಳ ಪಟ್ಟಿ
·         Britain, Australia and the Bomb (2006)
·         Carbon-Free and Nuclear-Free (2007)
·         Chernobyl. Vengeance of peaceful atom. (2006)
·         Contesting the Future of Nuclear Power (2011)
·         Fallout: An American Nuclear Tragedy (2004)
·         Fallout Protection (1961)
·         Hiroshima (1946)
·         Los Alamos Primer (1992)
·         Megawatts and Megatons (2001)
·         My Australian Story: Atomic Testing (2009)
·         Nuclear Politics in America (1997)
·         Nuclear Power and the Environment (1976)
·         Nuclear War Survival Skills (1979)
·         Nuclear Weapons: The Road to Zero (1998)
·         On Nuclear Terrorism (2007)
·         Our Friend the Atom (1957)
·         Plutopia (2013)
·         Protect and Survive (1980)
·         Smyth Report (1945)
·         Survival Under Atomic Attack (1950)
·         The Atom Besieged: Extraparliamentary Dissent in France and Germany (1981)
·         The Bells of Nagasaki (1949)
·         The Day of the Bomb (1961)
·         The Fate of the Earth (1982)
·         The Four Faces of Nuclear Terrorism (2004)
·         The Fourth Protocol (1984)
·         The Hundredth Monkey (1982)
·         The Last Train From Hiroshima (2010)
·         The Making of the Atomic Bomb (1988)
·         The Navajo People and Uranium Mining (2006)
·         The Nuclear Power Controversy (1976)
·         The People of Three Mile Island (1980)
·         The Plutonium Files: America's Secret Medical Experiments in the Cold War (1999)
·         The Psychology of Nuclear Proliferation (2006)
·         The Truth About Chernobyl (1991)
·         The Unfinished Twentieth Century (2001)
·         TORCH report (2006)
·         U.S. Nuclear Weapons: The Secret History (1988)
·         We Almost Lost Detroit (1975)
·         When Technology Fails (1994)


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ