ಶುಕ್ರವಾರ, ಡಿಸೆಂಬರ್ 20, 2013

ಮಣಿಪುರ ಮಾನಿನಿಯರ ನೋವಿನ ಕಥನ



ಸಲಿಂಗ ಕಾಮ ಅಪರಾಧ ಎಂಬ ತೀರ್ಪು ಸರ್ವೋಚ್ಚ ನ್ಯಾಯಾಲಯದಿಂದ ಹೊರಬಿದ್ದ ಮೇಲೆ ಕಳೆದ ಹದಿನೈದು ದಿನಗಳಿಂದ ದೇಶಾದ್ಯಂತ ನಡೆಯುತ್ತಿರುವ ಚರ್ಚೆ ಮತ್ತು ಪ್ರತಿಭಟನೆ ಹಾಗೂ ಈ ತೀರ್ಪಿಗೆ ಪರ್ಯಾಯ ಕಂಡುಕೊಳ್ಳುವಲ್ಲಿ ನಡೆಸುತ್ತಿರುವ ಕೇಂದ್ರ ಸರ್ಕಾರದ ಗಂಭೀರ ಚಿಂತನೆಗಳನ್ನು ನೀವೆಲ್ಲಾ ಗಮನಿಸುತ್ತಿದ್ದೀರಿ, ಈಗಾಗಲೇ  ತೀರ್ಪು ಮರಿಪರಿಶೀಲಗೆಗಾಗಿ ಸರ್ಕಾರ, ನ್ಯಾಯಾಲಯಕ್ಕೆ  ಅರ್ಜಿ ಸಲ್ಲಿಸಿದೆ
ಮನುಷ್ಯನೊಬ್ಬನ ವಿಕೃತಿಯ ಪರಮಾವಧಿಯ ಹಂತ ಎನ್ನ ಬಹುದಾದ ಈ ಅಸಹಜ ಕ್ರಿಯೆಗೆ ದೇವಾಲಯದ ಶಿಲ್ಪಗಳನ್ನು ಮತ್ತು ಪುರಾಣ, ಇತಿಹಾಸದ ಸಂಗತಿಗಳನ್ನು ಆಧಾರವಾಗಿಟ್ಟು ಸಮರ್ಥನೆ ಮಾಡುತ್ತಿರುವವರ ನಡೆವಳಿಕೆಗಳನ್ನು ಗಮನಿಸಿದರೆ, ನಾವು ಎತ್ತ ಸಾಗುತ್ತಿದ್ದೇವೆ ಎಂಬುದು ಅರ್ಥವಾಗುವುದಿಲ್ಲ. ಇತ್ತೀಚೆಗೆ ತಮಿಳುನಾಡಿನ ದೇವಾಲಯದ ಗೋಡೆಗಳಲ್ಲಿ ಯೋಧನೊಬ್ಬ ತನ್ನ ಕುದುರೆಯೊಂದಿಗೆ ಮೈಥುನದಲ್ಲಿ ತೊಡಗಿರುಕೊಂಡಿರುವ ಶಿಲ್ಪವನ್ನು ಗಮನಿಸಿದೆ. ರಾಜನೊಬ್ಬನ ಯುದ್ಧದ ದಾಹಕ್ಕೆ ಹಲವಾರು ದಿನಗಳ ಕಾಲ ಮನೆ ತೊರೆದು ಬಂದು ಯುದ್ಧ ಭೂಮಿಯಲ್ಲಿ ಹೋರಾಡುವ ಸೈನಿಕನೊಬ್ಬನ ಕಾಮದ ವಾಂಚೆ ಮತ್ತು ದುರಂತ ಇದೆಂದು ನನಗೆ ಆ ಶಿಲ್ಪ ತೋರಿತು.
ಇವೊತ್ತು ಪ್ರಗತಿಪರ ಚಿಂತಕರು ಎನಿಸಿಕೊಳ್ಳಬೇಕಾದರೆ, ಲಿಂಗ ತಾರಾತಮ್ಯ ಹೋಗಲಾಡಿಸುವುದರ ಜೊತೆಗೆ, ಸಲಿಂಗ ಕಾಮವನ್ನು ಸಮರ್ಥಿಸಿಕೊಳ್ಳಬೇಕು ಎಂಬ ಭಾವನೆ ದಟ್ಟವಾಗಿ ಸಮಾಜದಲ್ಲಿ ಬೇರೂರುತ್ತಿದೆ. ಮದುವೆಯಾದ ಗಂಡು ಹೆಣ್ಣು ಒಟ್ಟಿಗೆ ಬಾಳಿ ಬದುಕಲಾಗದೆ ದಾಂಪತ್ಯ ವಿಚ್ಛೇಧನಕ್ಕೆ ಅರ್ಜಿ ಸಲ್ಲಿಸುವವರ ಪ್ರಮಾಣ ದಿನದಿಂದ ದಿನಕ್ಕೆ ಏರುತ್ತಿರುವ ಸಂಗತಿ ಒಂದು ಕಡೆಯಾದರೆ, ಈ ವಿಕೃತ ಕಾಮಿಗಳು ಇನ್ನೊಂದು ಕಡೆ.  ಸಲಿಂಗ ಕಾಮದ ಬಗ್ಗೆ ಯಾರ ಒಲವು ಏನೇ ಆಗಿರಲಿ, ನಾನು ಆ ಕುರಿತು ಯೋಚಿಸುವುದು ಸಹ ಅಸಹ್ಯಕರ ಸಂಗತಿ ಮತ್ತು ಅದೊಂದು  ಅನೈಸರ್ಗಿಕ ಕ್ರಿಯೆ  ಎಂಬುದು ನನ್ನ ವೈಯಕ್ತಿಕ ನಿಲುವು. ಇಲ್ಲಿ ಆ ಕುರಿತು ಚರ್ಚೆ ಅನಾವಶ್ಯಕ.
ಭಾರತದ ಬಡತನ, ಹಸಿವು, ಅನಕ್ಷರತೆಯಷ್ಟೇ ಸಮನಾಗಿ ಸಲಿಂಗಕಾಮ ಕೂಡ  ಒಂದು ಜ್ವಲಂತ ಸಮಸ್ಯೆ ಎಂದು ಪರಿಗಣಿಸಿರುವ  ಈ ಸಮಾಜಕ್ಕೆ  ನನ್ನದೊಂದಿಷ್ಟು ಪ್ರಶ್ನೆಗಳಿವೆ. ಈ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ  ಈಶಾನ್ಯ ರಾಜ್ಯಗಳ ಸಮಸ್ಯೆಗಳೇನು ಅಥವಾ  ಅಲ್ಲಿನ ಜನ ಅನುಭವಿಸುತ್ತಿರುವ ನೋವು ನಲಿವುಗಳೇನು ಎಂಬುದರ ಕುರಿತು ಚರ್ಚೆಗಳಾಗಿವೆಯೆ? ಮಣಿಪುರದ ಮಾನಿನಿಯರು ಅನುಭವಿಸುತ್ತಿರುವ ಅಪಮಾನ, ಅತ್ಯಾಚಾರ, ಹಿಂಸೆ ಮತ್ತು ಸಾವುಗಳಿಗಿಂತ  ಈ ಸಲಿಂಗ ಕಾಮ ಆದ್ಯತೆಯ ವಿಚಾರವೆ? ಅಲ್ಲಿನ ಮಹಿಳೆಯರ ಮೇಲೆ ಭಾರತದ ಮಿಲಿಟರಿ ಪಡೆಯಿಂದ  ನಡೆಯುತ್ತಿರುವ  ದೌರ್ಜನ್ಯ , ಕೊಲೆ , ಅತ್ಯಾಚಾರ ಪ್ರತಿಭಟಿಸಿ, ಕಳೆದ ಹದಿಮೂರು  ವರ್ಷಗಳಿಂದ ( 2 -11- 2000) ಅನ್ನ, ನೀರು ತ್ಯಜಿಸಿ, ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಮಣಿಪುರದ ಇವೊನ್ ಶರ್ಮಿಳಾ ಎಂಬ ಹೋರಾಟಗಾರ್ತಿಯ ನೋವು, ಸಂಕಟ ನಮ್ಮಗಳ ಎದೆಯ ಕದವೆನ್ನೇಕೆ ತಟ್ಟುತ್ತಿಲ್ಲ.?
ಈಶಾನ್ಯ ರಾಜ್ಯಗಳಾದ ಅಸ್ಸಾಂ , ಅರುಣಾಚಲಂ, ಮಣಿಪುರ, ನಾಗಲ್ಯಾಂಡ್, ಮಿಜೋರಾಂ,ರಾಜ್ಯಗಳ ಸಮಸ್ಯೆಗೆ ಹಲವು ಆಯಾಮಗಳಿವೆ. ಆದರೆ, ಅಲ್ಲಿನ ಬುಡಕಟ್ಟು ಜನಾಂಗಗಳ ಹಿಂಸೆ, ಸಂಘರ್ಷ ಮತ್ತು ಪ್ರತಿಭಟನೆಯ ಹುಟ್ಟಡಗಿಸಲು ಕೇಂದ್ರ ಸರ್ಕಾರ, 1952 ರ ಮೇ 22 ರಂದು ವಿಶೇಷ ಕಾನೂನನ್ನು ಜಾರಿಗೆ ತಂದಿತು, ಇದರ ಅನ್ವಯ ಜಮ್ಮು ಕಾಶ್ಮಿರ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಭಾರತೀಯ ಸೇನೆಗೆ ನೀಡಿದ ವಿಶೇಷ ಪರಮಾಧಿಕಾರ ( Armed forces Special powers Act)  ( AFSPA)  ಈಶಾನ್ಯ ರಾಜ್ಯಗಳ ಮಾನಿನಿಯರ ಮಾನ ಮತ್ತು ಪ್ರಾಣ ಹತ್ಯೆಗೆ ಕಾರಣವಾಗಿದೆ. ಆದರೆ, ನಮ್ಮನ್ನಾಳಿದ ಕೇಂದ್ರ ಸರ್ಕಾರಗಳು ಈಶಾನ್ಯ ರಾಜ್ಯಗಳು ಭಾರತದ ಅವಿಭಾಜ್ಯ ಅಂಗ ಎಂಬ ಅಂಶವನ್ನು ಮರೆತು ಎಷ್ಟೋ ವರ್ಷಗಳಾಗಿವೆ. ಈ ಪ್ರದೇಶಗಳು ನೆನಪಾಗುವುದು, ಚೀನಾ ಅರುಣಾಚಲ ಪ್ರದೇಶವನ್ನು ಆಕ್ರಮಿಸಿಕೊಂಡಾಗ ಮಾತ್ರ.

ಇಡೀ ನಾಗರೀಕ ಜಗತ್ತು ಬೆಚ್ಚಿ ಬೀಳುವಂತೆ 2004 ರಲ್ಲಿ ಮಣಿಪುರದ ರಾಜಧಾನಿ ಇಂಪಾಲ್ ನಗರದಲ್ಲಿ ಹನ್ನೆರೆಡು ಮಂದಿ ಮಧ್ಯ ವಯಸ್ಸಿನ ಮಹಿಳೆಯರು ಸಂಪೂರ್ಣವಾಗಿ ಬೆತ್ತಲಾಗಿ  ಭಾರತ ಸೇನಾ ಪಡೆಯ ಅಂಗವಾದ ಅಸ್ಸಾಂ ರೈಫಲ್ ತುಕುಡಿಯ ಕಛೇರಿ ಪ್ರದರ್ಶನ ನಡೆಸಿದರು. ಮಹಿಳೆಯರ  ಸಿಟ್ಟು, ಮತ್ತು ಆಕ್ರೋಶ ಅವರನ್ನು ಬೆತ್ತಲಾಗುವವರೆಗೆ ಕೊಂಡೊಯ್ದ ಅಂಶಗಳನ್ನು ಗಮನಿಸಿ, ವಿವೇಚಿಸಿದಾಗ ಮನಸ್ಸು ಮೌನವನ್ನು ಅಪ್ಪಿಕೊಳ್ಳುತ್ತದೆ. ಮಣಿಪುರದ ಒಂದೊಂದು ಮನೆ ಮತ್ತು ಊರಿನಲ್ಲಿ ಈ ವರೆಗೆ ಹೊರಜಗತ್ತಿಗೆ ಕಾಣಿಸದೆ ಉಳಿದುಕೊಂಡಿರುವ ಕ್ರೌರ್ಯಗಳು ಅನಾವರಣಗೊಳ್ಳುತ್ತವೆ. ಇವು ನಮ್ಮ ಸಾಮಾಜಿಕ ಚಳುವಳಿಗಳ ಪೊಳ್ಳತನ ಮತ್ತು ಹುಸಿ ಹೋರಾಟಗಾರರ ಮುಖವಾಡಗಳನ್ನು ಸಹ ಕಳಚಿಡುತ್ತವೆ.
ಈಶಾನ್ಯ ರಾಜ್ಯಗಳಲ್ಲಿ ತಲೆ ಎತ್ತಿರುವ ಹಿಂಸಾಚಾರ ಮತ್ತು ಜನಾಂಗೀಯ ಘರ್ಷಣೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೇನಾಪಡೆಗೆ ನೀಡಿದ ಪರಮಾಧಿಕಾರ. ಅನೇಕ  ಅಮಾಯಕ ಹೆಣ್ಣು ಮಕ್ಕಳ ಅತ್ಯಾಚಾರ ಮತ್ತು ಕೊಲೆಗೆ ಕಾರಣವಾಗಿವೆ. ಯಾವುದೇ ಅನುಮತಿಯಿಲ್ಲದೆ, ಯಾರನ್ನು ಬೇಕಾದರೂ ಬಂಧಿಸಬಹುದು, ಯಾರ ಮನೆಯನ್ನಾದರೂ ಪ್ರವೇಶಿಸಬಹುದು, ವಿಚಾರಣೆ ನಡೆಸಬಹುದು, ಬಂಧಿಸಿದ ವ್ಯಕ್ತಿ ಅಪಾಯಕಾರಿ ಎನಿಸಿದರೆ, ಗುಂಡಿಟ್ಟು ಕೊಲ್ಲಬಹುದು ಇಂತಹ ಅಧಿಕಾರ ಈಶಾನ್ಯ ರಾಜ್ಯಗಳ ಹೆಣ್ಣು ಮಕ್ಕಳ ಶೀಲಗಳ ಹರಣಕ್ಕೆ ರಹದಾರಿಯಾಗಿದೆ.
2004 ರಲ್ಲಿ ಇಮಪಾಲ್ ನಗರದ ಕೋಟೆ ಪ್ರದೇಶದ ಮನೆಯಲ್ಲಿದ್ದ ಮನೋರಮಾ ಎಂಬ ಮಹಿಳೆಯನ್ನು ಆಕೆಯ ಮನೆಗೆ ನುಗ್ಗಿ ಸಹೋದರ ಮತ್ತು ತಾಯಿಯ ಎದುರು ಮಿಲಿಟರಿ ಕ್ಯಾಂಪಿಗೆ ಎಳೆದೊಯ್ದ ಸೈನಿಕರು, ಆನಂತರ  ಅವಳ ಶವವನ್ನು ರಸ್ತೆ ಬದಿ ಬಿಸಾಡಿದ್ದರು. ಆಕೆಯನ್ನು ಗುಂಡಿಟ್ಟು ಕೊಲ್ಲುವ ಮುನ್ನ ಆಕೆಯ ಮೇಲೆ ಅನೇಕರು ಅತ್ಯಾಚಾರ ನಡೆಸಿರುವ ಸಂಗತಿ ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿತು. ಆದರೆ. ಈ ವಿಚಾರವಾಗಿ ಯಾವುದೇ ಕಾನೂನು ಕ್ರಮ ಕೈಗೊಳ್ಳುವಂತೆ ಪ್ರಶ್ನಿಸುವ  ಅಥವಾ ನ್ಯಾಯಾಲಯದ ಮೆಟ್ಟಿಲೇರುವ ಅವಕಾಶ ಅಲ್ಲಿನ ನಾಗರೀಕರಿಗೆ ಇಲ್ಲ.( ಮನೋರಮಾ ದುರಂತ ಕುರಿತು, 2012 ರ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ  ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಿಸುವ ‘ಇಂಡಿಯನ್ ಲಿಟರೇಚರ್” ದ್ವೈಮಾಸಿಕ ಪತ್ರಿಕೆಯಲ್ಲಿ ವಿಶೇಷ ಲೇಖನ ಪ್ರಕಟವಾಗಿದೆ) 



ಈ ಘಟನೆಗೂ ಮುನ್ನ, ಶರ್ಮಿಳಾ ನಡೆಸುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ಕಾರಣವಾದ ಘಟನೆ ಕೂಡ ನಾಗರೀಕ ಜಗತ್ತು ತಲೆ ತಗ್ಗಿಸುವಂತಹದ್ದು. 1987 ರಲ್ಲಿ ಮಣಿಪುರದಲ್ಲಿ ನಡೆದ ಬಾಂಬ್ ಸ್ಪೋಟದ ಸಂದರ್ಭದಲ್ಲಿ ತನ್ನ ಜೀವವನ್ನು ಲೆಕ್ಕಿಸದೆ. ಸ್ಥಳದಲ್ಲಿ ಹಲವರ ಪ್ರಾಣ ಉಳಿಸಿದ ಬಾಲಕಿ ಚಂದ್ರಮಣಿ ಎಂಬಾಕೆಗೆ 1988 ರಲ್ಲಿ ಬಾಲಕ-ಬಾಲಕಿಯರಿಗೆ ನೀಡುವ ಶೌರ್ಯ ಪ್ರಶಸ್ತಿಯನ್ನು ನೀಡಿದ ಕೇಂದ್ರ ಸರ್ಕಾರ, ಆಕೆಯನ್ನು ಜನವರಿ 26 ರ ಗಣರಾಜ್ಯೋತ್ಸವ ಸಂದರ್ಭದಲ್ಲಿ ದೆಹಲಿಯಲ್ಲಿ ಆನೆಯ ಮೇಲೆ ಕೂರಿಸಿ ಮೆರವಣಿಗೆ ಮಾಡಿತ್ತು. ಸದಾ ತನ್ನೊಂದಿಗೆ ಸರ್ಕಾರ ನೀಡಿದ್ದ ಶೌರ್ಯ ಪ್ರಶಸ್ತಿಯೊಂದಿಗೆ ಓಡಾಡುತ್ತಿದ್ದ ಈ ಅಮಾಯಕಕ ಬಾಲಕಿ 2000 ದಲ್ಲಿ  ಸೈನಿಕರ ಗುಂಡಿಗೆ ಬಲಿಯಾದಳು. 
ಈ ಯುವತಿಯ ಸಾವು ಶರ್ಮಿಳಾ ಅವರನ್ನು ಉಪವಾಸ ಸತ್ಯಾಗ್ರಹಕ್ಕೆ ನೂಕಿತು. ಇದಲ್ಲದೆ, ನೂರಾರು ಅಮಾಯಕ ನಾಗರೀಕರ ಮತ್ತು ಸರ್ಕಾರಿ ನೌಕರರ ಹತ್ಯೆಗೆ ಮಣಿಪುರದಲ್ಲಿ ಲೆಕ್ಕವಿಟ್ಟವರಿಲ್ಲ. ಈ ಕಾರಣದಿಂದಾಗಿ ಸತತ  ಐನೂರಕ್ಕೂ ಹೆಚ್ಚು ವಾರಗಳ ಕಾಲ ಅನ್ನ, ನೀರು ತ್ಯೆಜಿಸಿ, ಅಲ್ಲಿನ ಹೆಣ್ಣು ಮಕ್ಕಳ ನೆಮ್ಮದಿಯ ಬದುಕಿಗಾಗಿ ಹೋರಾಡುತ್ತಾ ಉಕ್ಕಿನ ಮಹಿಳೆ ಎಂಬ ಬಿರುದಿಗೆ ಪಾತ್ರರಾಗಿರುವ ಶರ್ಮಿಳಾ ಅವರ ಒಡಲಾಳದ ಕಿಚ್ಚು ನಮ್ಮ ನಾಗರೀಕ ಸಮಾಜಕ್ಕೆ ತಾಗಲೇ ಇಲ್ಲ. ಒಬ್ಬ ನಿಷ್ಣಾವಂತ ಅಮಾಯಕ ಹೆಣ್ಣು ಮಗಳು. ತನ್ನ ಜೀವವನ್ನು ಪಣಕ್ಕಿಟ್ಟು. ಹೋರಾಟ ಮಾಡುತ್ತಿರುವಾಗ, ಈಕೆಯ ಮೇಲೆ ಸತತವಾಗಿ ಆತ್ಮಹತ್ಯೆ ಪ್ರಯತ್ನ ಎಂಬ ಆರೋಪದಡಿ ಐ.ಪಿ.ಸಿ. ಸೆಕ್ಷನ್ 309 ರ ಅಡಿ ಮೊಕೊದ್ದಮೆ ದಾಖಲಿಸಿ ಹಲವಾರು ಬಾರಿ ಜೈಲಿಗೆ ತಳ್ಳಲಾಗಿದೆ. (2011 ರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ನ್ಯಾಯಲಯ ಈಕೆಗೆ ಮೊನ್ನೆ ಡಿಸಂಬರ್ 19 ರಂದು ನೋಟೀಸ್ ಜಾರಿ ಮಾಡಿದೆ)


ಈಶಾನ್ಯ ರಾಜ್ಯಗಳ ನಿಸರ್ಗ, ಅಲ್ಲಿನ ಪ್ರಾಕೃತಿಕ ಸೊಬಗು, ಹಸಿರು, ಜಲಪಾತ ಇವೆಲ್ಲವೂ ನೆಲದ ಮೇಲಿನ ಸ್ವರ್ಗ ಎಂಬ ಭಾವನೆ ಮೂಡಿಸುತ್ತಿದ್ದ ಕಾಲ ಒಂದಿತ್ತು. ಈಗ ಈಶಾನ್ಯ ಭಾರತ ನೆಲದ ಮೇಲಿನ ನರಕವೆಂಬಂತಾಗಿದೆ. ಅಸ್ಸಾಂ ರಾಜ್ಯದಲ್ಲಿ ಬೇರೆ ರಾಜ್ಯಗಳಿಂದ ವಲಸೆ ಬಂದ (ವಿಶೇಷವಾಗಿ ಬಿಹಾರ) ಸ್ಥಳಿಯರ ಉದ್ಯೋಗದ ಅವಕಾಶ ಕಿತ್ತುಕೊಳ್ಳುತ್ತಿದ್ದಾರೆ ಎಂಬ ಆಕ್ರೋಶ, ನಾಗಾಲ್ಯಾಂಡ್ ನಲ್ಲಿ ನಾಗ ಬುಡಕಟ್ಟು ಜನರ ಸಂಘರ್ಷ. ಅರುಣಾಚಲ ಪ್ರದೇಶ ಮಿಜೋರಾ ರಾಜ್ಯಗಳಲ್ಲಿ ಬಂಗ್ಲಾದಿಂದ ವಲಸೆ ಬಂದ ಚಕ್ಮಾ ನಿರಾಶ್ರಿತರ ಸಮಸ್ಯೆ, ಮಣಿಪುರದಲ್ಲಿ ಮಾನಿನಿಯರ ಮಾನ ಪ್ರಾಣ ದ ಹರಣಗಳ ಸಮಸ್ಯೆ ಇವುಗಳ ಕುರಿತು ನಮ್ಮ ಜನಪ್ರತಿನಿದಿಗಳು, ಅಥವಾ ಕೇಂಧ್ರ ಸರ್ಕಾರ ಇಲ್ಲವೆ, ಸಚಿವರು ಗಂಭೀರವಾಗಿ ಮಾತನಾಡಿದ್ದನ್ನು, ವಿಷಯ ಪ್ರಸ್ತಾಪಿಸಿದ್ದನ್ನು ನಾವು ನೊಡಲು ಸಾಧ್ಯವಾಗಲೇ ಇಲ್ಲ, ಏಕೆಂದರೆ, ನಮ್ಮ ಘನ ಕೇಂದ್ರ ಸರ್ಕಾರ ಈಶಾನ್ಯ ಭಾರತವನ್ನು ಭಾರತದ ಅವಿಭಾಜ್ಯ ಭಾಜ್ಯ ಅಂಗ ಎಂದು ಪರಿಗಣಿಸಿದಂತೆ ಕಾಣುವುದಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ