ಕನ್ನಡದ
ಸಾಂಸ್ಕೃತಿಕ ಮತ್ತು ಸೃಜನಶೀಲ ಕ್ಷೇತ್ರದಲ್ಲಿ ವಿಶೇಷವಾಗಿ ಇತ್ತೀಚೆಗಿನ ದಿನಗಳಲ್ಲಿ ಜರುಗುತ್ತಿರುವ ಅನೇಕ ಕ್ಷಿಪ್ರ ವಿದ್ಯಾಮಾನಗಳು,
ನಿಜಕ್ಕೂ ನಮ್ಮಲ್ಲಿ ಗಾಬರಿಯನ್ನು ಹುಟ್ಟಿಸುತ್ತಿವೆ. ಕನ್ನಡ ಸಾಹಿತ್ಯ ಚರಿತ್ರೆಯನ್ನು ಮುರಿದು
ಕಟ್ಟುವ ಸಂಪ್ರದಾಯ ಅಥವಾ ಇತಿಹಾಸ ಇಂದು ನಿನ್ನೆಯದಲ್ಲ. ಅದಕ್ಕೆ ಸಾವಿರ ವರ್ಷಗಳ ಇತಿಹಾಸವಿದೆ.
ಅರಕೇಸರಿಯ ಆಸ್ಥಾನದಲ್ಲಿ ಇದ್ದುಕೊಂಡು ಅರಸೊತ್ತಿಗೆಯ ಕ್ರೌರ್ಯವನ್ನು ಟೀಕಿಸುವ ಧೈರ್ಯ ಪಂಪ, ನಿಗಿತ್ತು.
ರನ್ನ ತನ್ನ ಗಧಾಯುದ್ಧದ ಮಹಾಕಾವ್ಯದ
‘”ದುರ್ಯೋಧನ ವಿಲಾಪಂ” ಭಾಗದಲ್ಲಿ ಮಹಾಭಾರತದ ದುರ್ಯೋಧನನನ್ನು ಬುದ್ಧನಿಗೆ ಸಾಸಿವೆ ತಂದ
ತಂಗಿಯೊಬ್ಬಳ ತಳಮಳಗಳು
ಹೊಸದಾಗಿ
ಚಿತ್ರಿಸುವುದರ ಮೂಲಕ ಸೃಜನಶೀಲತೆಯ ಪರಾಕಾಷ್ಟೆಯನ್ನು ಮುಟ್ಟಿದ. ಇದರ ಮುಂದುವರಿದ ಭಾಗವಾಗಿ ಶೂದ್ರ ತಪಸ್ವಿ ಎಂಬ ನಾಟಕ
ರಚನೆ ಮಾಡುವುದರ ಜೊತೆಗೆ ಶ್ರೀ ರಾಮಾಯಣ ದರ್ಶನಂ ಎಂಬ ಮಹಾಕಾವ್ಯದ ಮೂಲಕ ಮಂಥರೆ ಪಾತ್ರಕ್ಕೆ ಹೊಸ ಜೀವ ಮತ್ತು ರೂಪ ಕೊಟ್ಟ ಕುವೆಂಪು
ನಮ್ಮ ನಡುವೆ ಇದ್ದರು. ಇಂತಹ ಮಹಾನೀಯರು ತಮ್ಮ ಸೃಜನಶೀಲತೆಯ
ಮೂಲಕ ಚರಿತ್ರೆಯನ್ನು ಮುರಿದು ಕಟ್ಟುವುದರ ಮೂಲಕ ಹೊಸದೆಂಬಂತೆ ರೂಪಿಸಿದ ವೈಖರಿ ಕನ್ನಡ ಸಾಹಿತ್ಯದಲ್ಲಿ ಇವೊತ್ತಿಗೂ ಅಜರಾಮರವಾಗಿ ಉಳಿದಿದೆ.
ನಮ್ಮ
ಪುರಾಣ ಮಹಾ ಕಾವ್ಯಗಳಾದ ಮಹಾ ಭಾರತ ಮತ್ತು ರಾಮಾಯಣ ಕೃತಿಗಳು ಇತಿಹಾಸದುದ್ದಕ್ಕೂ ಆಯಾ
ಕಾಲಘಟ್ಟಕ್ಕೆ ಅನುಗುಣವಾಗಿ ಹಲವು ರೂಪಗಳಲ್ಲಿ
ಮೈದಾಳಿವೆ. ಎ.ಕೆ. ರಾಮಾನುಜನ್ ಸಂಪಾದಿಸಿರುವ “ ಮುನ್ನೂರು ರಾಮಾಯಣಗಳು” ಕೃತಿಯಲ್ಲಿ
ದಾಖಲಾಗಿರುವ ವಿಭಿನ್ನ ರಾಮಾಯಣದ ಕಥೆಗಳು ನಮ್ಮನ್ನು ದಂಗು ಬಡಿಸುತ್ತಿವೆ. ಇಂತಹ ಪರಂಪರೆಯ ಈ
ನೆಲದಲ್ಲಿ ಕ್ಯಾನ್ಸರ್ ಕಾಯಿಲೆಯ ವಿರುದ್ಧ ಹೋರಾಡುತ್ತಿರುವ ದಿಟ್ಟ ಹೆಣ್ಣು ಮಗಳೊಬ್ಬಳು (
ಬಿ.ವಿ.ಭಾರತಿ) ತನ್ನ ಹೋರಾಟದ ಕಥನವನ್ನು ಅಕ್ಷರ ರೂಪದಲ್ಲಿ ಹಿಡಿದಿಟ್ಟು, ತಮ್ಮ ಕೃತಿಗೆ ಅರ್ಥಪೂರ್ಣವಾದ ಹಾಗೂ ರೂಪಕ ಭಾಷೆಯಲ್ಲಿ “
ಬುದ್ಧನಿಗೆ ಸಾಸಿವೆ ತಂದವಳು” ಎಂಬ ಶಿರ್ಷಿಕೆ ನೀಡಿದ್ದರು. ಆದರೆ ಅದಕ್ಕೆ ಅಡಚಣೆ ಮತ್ತು
ಬೆದರಿಕೆಯ ಮಾತುಗಳು ಕೇಳಿಬಂದವು. ಈ ಬೆಳವಣಿಗೆ ತಾಲಿಬಾನ್ ಗಳು ಕೇವಲ ಆಪ್ಘಾನಿಸ್ಥಾನ, ಅಥವಾ
ಪಾಕಿಸ್ಥಾನದಲ್ಲಿ ಮಾತ್ರವಲ್ಲ, ಕರ್ನಾಟಕದಲ್ಲಿಯೂ ಇದ್ದಾರೆ ಎಂಬ ಅಪಾಯದ ಮುನ್ಸೂಚನೆ ನೀಡಿದಂತಿದೆ.
ದೇವರ
ಅಸ್ತಿತ್ವದ ಬಗ್ಗೆ ಮೌನ ತಾಳಿದ, ಮತ್ತು ಆಸೆಯೆಂಬುದು
ದುಃಖಕ್ಕೆ ಮೂಲ ಎಂಬ ಅರ್ಥಪೂರ್ಣ ಸಂದೇಶವನ್ನು
ಜಗತ್ತಿಗೆ ಸಾರಿದ ಬುದ್ಧ ಯಾವತ್ತಿಗೂ ಯಾರ
ಆಸ್ತಿಯಾಗಿರಲಿಲ್ಲ. ಅವನ ಚಿಂತನೆಗಳು, ಯಾವೊಂದು ಸಮುದಾಯದ ಅಥವಾ ವ್ಯಕ್ತಿಯೊಬ್ಬನ
ಸ್ವತ್ತಾಗಿರಲಿಲ್ಲ. ವಿವೇಕದ ಪ್ರಜ್ಙೆಯನ್ನು
ಕಳೆದುಕೊಂಡು, ಬುದ್ಧನ ಅಮಲನ್ನು ನೆತ್ತಿಗೇರಿಸಿಕೊಂಡವರು ಮಾತ್ರ ಈ ರೀತಿಯ ಪ್ರತಿರೋಧ
ತೋರಬಲ್ಲರು. ಸಾವು ಕುರಿತ ಕಟು ವಾಸ್ತವನ್ನು ಜಗತ್ತಿಗೆ ಪರಿಚಯಿಸಲು ಬುದ್ಧ, ಸಾವಿಲ್ಲದ ಮನೆಯಿಂದ
ಸಾಸಿವೆ ತರುವಂತೆ ಕಿಸಗೌತಮಿಗೆ ಹೇಳಿರುವುದು ಕೂಡ
ರೂಪಕದ ಭಾಷೆಯಲ್ಲಿ ಎಂಬುದನ್ನು ನಾವು ಮರೆಯಬಾರದು. ಅಂತಹದೇ ರೂಪಕವನ್ನು ಬಳಸಿರುವ ಲೇಖಕಿ ಭಾರತಿ
‘ ಸಾವಿನ ಹೊಸ್ತಿಲಲ್ಲಿ ತಲೆಇಟ್ಟು ಮಲಗಿದ್ದರೂ ಸಹ ತಮ್ಮ ಮನಸ್ಸಿನ ಇಚ್ಛಾಶಕ್ತಿಯಿಂದ ಕಾಯಿಲೆಯ ವಿರುದ್ಧ
ಹೋರಾಡಿ ಗೆದ್ದು ಬಂದಿರುವುದು ವಿಶೇಷ,. ಈ ಕಾರಣಕ್ಕಾಗಿ ಅವರು ತಮ್ಮ ಅನುಭವಕ್ಕೆ ಅರ್ಥ ಪೂರ್ಣ
ಶಿರ್ಷಿಕೆ ನೀಡಿದ್ದಾರೆ. ಹಾಗೆ ನೋಡಿದರೆ, ಲೇಖಕಿ ಭಾರತಿಯವರಾಗಲಿ, ಇದನ್ನು ಈ ಕ್ಷಣದಲ್ಲಿ
ಬರೆಯುತ್ತಿರುವ ನಾನಾಗಲಿ, ಓದುತ್ತಿರುವ ನೀವಾಗಲಿ ಯಾರೂ ಈ ಭೂಮಿಯ ಮೇಲೆ ಶಾಶ್ವತವಲ್ಲ. ಆದರೂ ನಾವುಗಳು
ನಮ್ಮ ಪುರಾಣದಲ್ಲಿ, ಇತಿಹಾಸದಲ್ಲಿ, ವರ್ತಮಾನದ ದೈನಂದಿನ ಬದುಕಿನಲ್ಲಿ ಬಳಕೆಯಲ್ಲಿರುವ “
ಸಾವಿಲ್ಲದವನು” ಅಥವಾ ಚಿರಂಜಿವಿ ಎಂಬ ಪದಗಳನ್ನು ಬಳಸಿದ್ದೇವೆ, ಬಳಸುತ್ತಿದ್ದೇವೆ, ಇವುಗಳನ್ನು
ನಮ್ಮ ಶಬ್ಧಕೋಶದಿಂದ ಅಳಿಸಿ ಹಾಕಲು ಸಾಧ್ಯವೆ?
ಕಳೆದ
ಶನಿವಾರ ರಾತ್ರಿ ಹತ್ತು ಗಂಟೆ ವೇಳೆಯಲ್ಲಿ ಊಟ ಮುಗಿಸಿ, ಆತ ತಾನೆ ರಾತ್ರಿಯ ಓದಿಗೆ ಪುಸ್ತಕ
ಕೈಗೆತ್ತಿಕೊಳ್ಳುತ್ತಿದ್ದಂತೆ, ಭಾರತಿಯವರ ದೂರವಾಣಿ ಬಂತು. ಅವರು ಶಿರ್ಷಿಕೆಯ ವಿವಾದವನ್ನು ನನಗೆ
ವಿವರಿಸಿದರು. ಯಾವ ಕಾರಣಕ್ಕೂ ಶಿರ್ಷಿಕೆ ಬದಲಾಯಿಸಬಾರದು, ಭಿನ್ನ ಆಲೋಚನೆಯ ಜನರ ಅಪಸ್ವರಗಳಿಗೆ
ಬೆಲೆಕೊಡಬಾರದು, ಎಂದು ಸಮಾಧಾನ ಹೇಳಿ, ನಾವು ಸಮಾನ ಮನಸ್ಕರು ನಿಮ್ಮೊಂದಿಗೆ ಇದ್ದೀವಿ ಎಂದು
ಭರವಸೆ ನೀಡಿದೆ. ಭಾನುವಾರ ಬೆಳಿಗ್ಗೆ ಕಛೇರಿಗೆ ಹೋದವನು ಮನಸ್ಸು ತಡೆಯಲಾರದೆ, ಮತ್ತೇ ಧೈರ್ಯ
ತುಂಬಲು ಅವರಿಗೆ ಕರೆ ಮಾಡಿದಾಗ. ಅವರಿಂದ ಬಂದ ಮಾತುಗಳು ನನ್ನನ್ನು ಮೌನಕ್ಕೆ ದೂಡಿಬಿಟ್ಟವು.
ತೀರಾ ಹತಾಶರಾಗಿ ಮಾತನಾಡಿದ ಅವರು, “ ಅಣ್ಣಾ, ನನಗೆ ಬೇಕಾಗಿರುವುದು, ನೆಮ್ಮದಿ ಮತ್ತು ನಿಶ್ಚಿಂತೆ
ಮಾತ್ರ. ಇವುಗಳಿಗಾಗಿ ಏನನ್ನೂ ತ್ಯಾಗ ಮಾಡಲು ಸಿದ್ಧಳಿದ್ದೀನಿ. ಎಂದೂ ದೇವರು, ಧರ್ಮ ಮತ್ತು
ಜಾತಿಯನ್ನು ಅತಿಯಾಗಿ ಹಚ್ಚಿಕೊಳ್ಳದೆ, ಬುದ್ಧನ ಪ್ರಶಾಂತ ನಗೆ ಮತ್ತು ಮೌನದ ಮೂರ್ತಿಯಂತಿರುವ ಅವನ ಪ್ರತಿಮೆಯಲ್ಲಿ ಒಂದಿಷ್ಟು ಸುಖ ಕಂಡಿದ್ದೆ. ಅದು ಕೆಲವರ ಪಾಲಿಗೆ ನೋವು ತರುವುದಿದ್ದರೆ, ಇಂದಿನಿಂದ
ನನಗೆ ಬುದ್ದನೂ ಬೇಡ, ಬಸವನೂ ಬೇಡ. ಬೇಕಿರುವುದು ನೆಮ್ಮದಿ
ಮಾತ್ರ ಎಂದರು. ಅವರ ಮನೆಗೆ, ಅವರ ಹತ್ತಿರದ ಗೆಳತಿಯರಿಗೆ, ಬಂಧುಗಳಿಗೆ ಫೋನ್ ಕರೆ ಮಾಡಿ ಬೆದರಿಕೆ ಹಾಕುವಂತಹ ತಪ್ಪನ್ನು ಈ ಅಮಾಯಕ
ಹೆಣ್ಣು ಮಗಳು ಮಾಡಿದ್ದಾದರೂ ಏನು? ಬುದ್ಧನಿಗೆ ಮಾಡಿದ ಅಪಮಾನವಾದರೂ ಏನು?
ಇಂತಹ
ಘಟನೆಗಳ ಕುರಿತಂತೆ ಆವೇಶದ ಪ್ರತಿಭಟನೆಗಳು, ವಿರೋಧಗಳು ಭಾರತದ ನೆಲದ ಸಂಸ್ಕೃತಿಗೆ ಹೊಸ
ಸಂಗತಿಗಳೇನಲ್ಲ. ಆದರೆ, ಇದರಿಂದ ನಮ್ಮ ಸಾಂಸ್ಕೃತಿಕ ಜಗತ್ತಿಗೆ ಆದ ನಷ್ಟ ಮಾತ್ರ ಅಗಣಿತವಾದುದು.
ಇಂತಹ ಅನೇಕ ಗಂಭೀರ ಸಂಗತಿಗಳು ನಮ್ಮ ಅರಿವಿಗೆ ಬಾರದಂತೆ ಸದ್ದಿಲ್ಲದೆ ಈ ಜಗತ್ತಿನಲ್ಲಿ ಜರುಗುತ್ತಿವೆ.
ಇದಕ್ಕೆ ಈ ಉದಾಹರಣೆ ಸಾಕು.
ಕೆಲ
ದಿನಗಳ ಹಿಂದೆ ಪಠ್ಯ ಪುಸ್ತಕವೊಂದರಲ್ಲಿ
ಅಂಬೇಡ್ಕರ್ ವ್ಯಂಗ್ಯ ಚಿತ್ರದ ಕುರಿತಾಗಿ ಎದ್ದ ಪ್ರತಿಭಟನೆಯ ಸಂದರ್ಭದಲ್ಲಿ ನಮ್ಮ ಕಣ್ಣಿಗೆ ಕಾಣದ
ವಾಸ್ತವ ಸಂಗತಿಯೊಂದನ್ನು ಸಮಾಜ ವಿಜ್ಙಾನಿ ಯೋಗೇಂದ್ರ ಯಾದವ್ ಚರ್ಚೆಯ ಸಂದರ್ಭದಲ್ಲಿ ಅಂಕಿ ಅಂಶಗಳ
ಮೂಲಕ ನಮ್ಮ ಮುಂದಿಟ್ಟರು. 1980 ರ ದಶಕದಲ್ಲಿ ಮಹಾರಾಷ್ಟದಲ್ಲಿ ಹುಟ್ಟಿಕೊಂಡ ದಲಿತ ಪ್ರಜ್ಙೆ ಇಡೀ
ದೇಶವನ್ನು ಆವರಿಸಿದ ಫಲವಾಗಿ ಅಂಬೇಡ್ಕರ್ ಮತ್ತು ಅವರ ಚಿಂತನೆಗಳು ಮುಂಚೂಣಿಗೆ ಬಂದವು. ಇವುಗಳ
ಜೊತೆ ಜೊತೆಯಲ್ಲಿ ಅಂಬೇಡ್ಕರ್ ಕುರಿತಂತೆ ಯಾವೊಂದು ಟೀಕೆಯನ್ನು ಸಹಿಸಿದ ದಲಿತರ ಪ್ರತಿಭಟನೆಗೆ
ಹೆದರಿದ ಮೇಲ್ವರ್ಗದ ಜನ ಭಾರತದ ಶಾಲಾ ಕಾಲೇಜು ಮತ್ತು ವಿಶ್ವ ವಿದ್ಯಾನಿಯಗಳಲ್ಲಿ ಅಂಬೇಡ್ಕರ್ ಅವರ
ಜೀವನ ಮತ್ತು ಚಿಂತನೆಗಳು ಪಠ್ಯವಾಗದಂತೆ ನೋಡಿಕೊಂಡರು. ಇದಕ್ಕೆ ಅವರು ನೀಡಿದ ಉತ್ತರ ದಲಿತರ
ಪ್ರತಿಭಟನೆಯಾಗಿತ್ತು ಅವರ ಉತ್ತರ ನಮಗೆ ಹುನ್ನಾರದಂತೆ ತೋಚಿದರೂ ಸಹ ಅದನ್ನು ನಾವು ಸಂಪೂರ್ಣ ನಿರಾಕರಿಸುವಂತಿಲ್ಲ.
ಸ್ವಾತಂತ್ರ್ಯಾ
ನಂತರದ ಭಾರತವನ್ನು ತನ್ನ ಪ್ರಖರ ವೈಚಾರಿಕತೆಯಿಂದ
ಎಚ್ಚರಿಸಿದ ಮತ್ತು ಪ್ರಭಾವಿಸಿದ ಹಾಗೂ ಗಾಂಧೀಜಿಯ ಪಾಲಿಗೆ ನೈತಿಕ ಪ್ರಜ್ಙೆಯಂತಿದ್ದ
ಅಂಬೇಡ್ಕರ್ ಕುರಿತಾಗಲಿ ಅವರ ಚಿಂತನೆಗಳ ಕುರಿತು ವಿಮರ್ಶಾತ್ಮಕ ಕೃತಿಗಳಾಗಲಿ, ಲೇಖನಗಳಾಗಲಿ ದಲಿತ
ಹಾಗೂ ಪ್ರಗತಿಪರ ಲೇಖಕರನ್ನು ಹೊರತು ಪಡಿಸಿ ಬೇರೆ ಲೇಖಕರಿಂದ ಹೊರ ಬರಲು ಸಾಧ್ಯವಾಗಿಲ್ಲ. ಅಂಬೇಡ್ಕರ್ ಎಂದರೆ, ದಲಿತರ ಸ್ವತ್ತು ಎಂಬ ಹುಸಿ ನಂಬಿಕೆಯೊಂದನ್ನು
ಸಮಾಜದಲ್ಲಿ ವ್ಯವಸ್ಥಿತವಾಗಿ ಬಿತ್ತಿಕೊಂಡು ಬರಲಾಯಿತು. ಜೊತೆಗೆ ಬಲಪಂಥೀಯರು, ಮತ್ತು ಮೇಲಗವರ್ಗದ
ಜನ ಅಂಬೇಡ್ಕರ್ ಅವರನ್ನು ವ್ಯವಸ್ತಿತ ವಾಗಿ ಮುಂಚೂಣಿಗೆ ಬರದಂತೆ ನೊಡಿಕೊಂಡರು. ಇದರಿಂದಾಗಿ
ಗಾಂಧೀಜಿ ಸಕಲ ಸಮುದಾಯಕ್ಕೆ ತಲುಪಿದ ಹಾಗೆ ಅಂಬೇಡ್ಕರ್ ಈವರೆಗೂ ಎಲ್ಲಾ ಸಮುದಾಯಗಳಿಗೆ ತಲುಪಲು
ಸಾದ್ಯವಾಗಲಿಲ್ಲ. ಇದಕ್ಕೆ ಪರೋಕ್ಷವಾಗಿ ಅಂಬೇಡ್ಕರ್ ಅಭಿಮಾನಿಗಳ ಆರಾಧನೆಯ ಮನೋಭಾವ ಕೂಡ ಕಾರಣವಾಯಿತು.
ಮಹಾನ್ ದಾರ್ಶನಿಕನ ವ್ಯಕ್ತಿತ್ವವನ್ನು ನಾವು ಧ್ಯಾನಿಸಬೇಕೇ
ಹೊರತು ಆರಾಧಿಸುವುದಲ್ಲ. ಆರಾಧನೆಗೂ, ಧ್ಯಾನಕ್ಕೂ ಅಜಗಜಾಂತರ ವೆತ್ಯಾಸವಿದೆ. ಆರಾಧನೆ ನಮ್ಮಲ್ಲಿ ಕುರುಡುತನವನ್ನು ಮಾತ್ರ ಬೆಳಸಬಲ್ಲದು.
ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಇವರುಗಳು ಆರಾಧಿಸುವ ವ್ಯಕ್ತಿಗಳಲ್ಲ, ಬದಲಾಗಿ ನಮ್ಮ
ಮನಸ್ಸಿನೊಳಕ್ಕೆ ಇಳಿಸಿಕೊಂಡು, ಧ್ಯಾನಿಸುವ ವ್ಯಕ್ತಿತ್ವಗಳು. ಇಂತಹ ಸಮಷ್ಟಿ ಪ್ರಜ್ಙೆಯನ್ನು
ನಾವು ಮರೆತ ಫಲವಾಗಿ ವರ್ತಮಾನದ ಜಗತ್ತಿನಲ್ಲಿ ಅನೇಕ ದುರಂತಗಳಿಗೆ ನಾವು
ಸಾಕ್ಷಿಯಾಗುತ್ತಿದ್ದೇವೆ.
ಭಾರತದ
ಬಹುತೇಕ ವಿಶ್ವ ವಿದ್ಯಾನಿಲಯಗಳ ಪಠ್ಯ ಪುಸ್ತಕ ಸಮಿತಿಗಳು, ವಿವಾದಕ್ಕೆ ಎಡೆಮಾಡಿಕೊಡುವುದು ಬೇಡ
ಎಂಬ ಕಾರಣಕ್ಕಾಗಿ ಅಂಬೇಡ್ಕರ್ ಅವರ ಚಿಂತನೆಗಳನ್ನು ದೂರವಿಡುತ್ತಿದ್ದಾರೆ. ಈ ಅವಕಾಶಗಳನ್ನು
ಸದುಪಯೋಗಪಡಿಸಿಕೊಂಡ ಬಲಪಂಥೀಯ ಮನಸ್ಸುಗಳು, ತಮ್ಮ ಮರೆ ಮಾಚಿದ ಅಜೆಂಡಾಗಳನ್ನುಸದ್ದು ಮತ್ತು
ಸುದ್ಧಿ ಮಾಡದೆ ಜಾರಿಗೆ ತರುತ್ತಿದ್ದಾರೆ, ಕಳೆದ
ವರ್ಷ ದೆಹಲಿಯ ವಿಶ್ವ ವಿದ್ಯಾನಿಲಯ ವ್ಯಾಪ್ತಿಯ ಪದವಿ ಕಾಲೇಜುಗಳಿಗೆ ಪಠ್ಯವಾಗಿದ್ದ ಎ.ಕೆ. ರಾಮಾನುಜನ್
ಅವರ “ ಮುನ್ನೂರು ರಾಮಾಯಣಗಳು” ಕೃತಿಯನ್ನು ನಿಷೇಧಿಸುವಲ್ಲಿ ಅವರು ಯಶಸ್ವಿಯಾದರು.
ಯಾವುದನ್ನೂ
ಹಿಂದೆ ಮುಂದೆ ಯೋಚಿಸದೆ, ಅತಾರ್ಕಿಕ ನೆಲೆಯಲ್ಲಿ ಸಾಗುವ ನಾವು ಅರಿಯಬೇಕಾದ ಇನ್ನೊಂದು
ಸಂಗತಿಯೊಂದಿದೆ. ನಮ್ಮ ಕಣ್ಣೆದುರು, ಅಂಬೇಡ್ಕರ್ ಮತ್ತು ಗಾಂಧಿಯನ್ನು ಮುಖಾ ಮುಖಿಯಾಗಿಸಿ, ಪರಸ್ಪರ
ನಿಂದಿಸುವಲ್ಲಿ ತಮ್ಮ ಆಯಸ್ಸನ್ನು ಸೆವೆಸಿ ಮಣ್ಣಾದವರ ಕಥನ ಇನ್ನೂ ಜೀವಂತವಾಗಿದೆ. ಗಾಂಧಿ ಮತ್ತು
ಅಂಬೇಡ್ಕರ್ ವಿಭಿನ್ನ ಸಂಸ್ಕೃತಿ ಮತ್ತು ನೆಲೆಗಳಿಂದ ಬಂದ ಕಾರಣಕ್ಕಾಗಿ, ಇಬ್ಬರ ಗುರಿ ಒಂದೇ
ಆಗಿದ್ದರೂ ಅವರ ಆಲೋಚನಾ ಕ್ರಮಗಳು ಬೇರೆ ಬೆರೆಯಾಗಿದ್ದವು.
ಬಡವರ
ಮೈ ಮೇಲೆ ಬಟ್ಟೆ ಬರುವವರೆಗೂ ಅರಬೆತ್ತಲೆಯಾಗಿರಲು ಗಾಂಧೀಜಿ ನಿರ್ಧರಿಸಿದರೆ, ಮೈ ತುಂಬಾ ಬಟ್ಟೆ
ಧರಿಸುವುದು, ಸ್ವಾಭಿಮಾನದ ಸಂಕೇತ ಎಂದು ಅಂಬೇಡ್ಕರ್ ಭಾವಿಸಿದರು. ಅಂತಿಮವಾಗಿ ತಮ್ಮ ಕೊನೆಯ
ದಿನಗಳಲ್ಲಿ ಈ ಇಬ್ಬರು ನಾಯಕರೂ ಬುದ್ದ ತೋರಿದ ಪಥದಲ್ಲಿ ಸಾಗಿದರು. ಇಬ್ಬರ ಕೈಯಲ್ಲಿ . ಅದೇ ಊರುಗುಲು, ಮತ್ತು ಮೈ ಮೇಲೆ
ಅದೇ ತುಂಡು ಉಡುಗೆ ಮಾತ್ರ. ಇದು ಬುದ್ದನ ಬದುಕಿನ
ಶೈಲಿ, ಬುದ್ಧನ ಚಿಂತನೆಯ ಮಾದರಿ. ಇಂತಹ ಸೂಕ್ಷ್ಮತೆಗಳನ್ನು ನಾವು ಗಮನಿಸದಿದ್ದರೆ, ಮುಂದಿನ
ದಿನಗಳಲ್ಲಿ ನಮ್ಮ ನಡುವಿನ ಬುದ್ದ, ಬಸವ, ಗಾಂಧಿ, ಅಂಬೇಡ್ಕರ್,ಮುಂತಾದ ದಾರ್ಶನಿಕರು ವಿಕ್ಷಿಪ್ತ ಮನಸ್ಸುಗಳ ಆಸ್ತಿಯಾಗುವ ಅಪಾಯವುಂಟು.
ಕೊನೆಯ
ಮಾತು- ಲೇಖಕಿ, ಬಿ.ವಿ. ಭಾರತಿಯವರು ಹಲವರ ಬೆದರಿಕೆಗೆ
ಮಣಿದು, ತಮ್ಮ ಕೃತಿಯ ಶಿರ್ಷಿಕೆಯನ್ನು ‘ ಸಾಸಿವೆ
ತಂದವಳು” ಎಂದು ಬದಲಾಯಿಸಿದ್ದಾರೆ. ಜೊತೆಗೆ ಕಳೆದ
ಎರಡೂವರೆ ವರ್ಷಗಳಿಂದ ಫೇಸ್ ಬುಕ್ ನಲ್ಲಿ ಸಕ್ರಿಯಾಗಿದ್ದ ಅವರು, ನಿನ್ನೆಯಿಂದ ತಮ್ಮ ಅಕೌಂಟ್ ಮುಚ್ಚಿಹಾಕಿದ್ದಾರೆ.
ಮುಂದಿನ ಭಾನುವಾರ ಬೆಂಗಳೂರಿನಲ್ಲಿ. ಶಿವಮೊಗ್ಗದ ಅಹರ್ನಿಶಿ ಪ್ರಕಾಶನದಿಂದ ಬಿಡುಗಡೆಯಾಗುವ ಭಾರತಿಯವರ
ಕೃತಿ ಬಿಡುಗಡೆ ಸಮಾರಂಭದಲ್ಲಿ ನಾವೆಲ್ಲರೂ ಭಾಗವಹಿಸಿ, ತನ್ನ ಒಡಲಿನಲ್ಲಿ ಸಾವಿನ
ಕರೆಗಂಟೆಯೊಂದನ್ನು ಇಟ್ಟುಕೊಂಡು ಓಡಾಡುತ್ತಿರುವ ಈ ಹೆಣ್ಣು ಮಗಳಿಗೆ ನೈತಿಕ ಸ್ಥೈರ್ಯ
ತುಂಬಬೇಕಾಗಿದೆ.ಈ ಸಹೋದರಿಯರ ಜೊತೆ ನೀವಿರುತ್ತೀರಿ ಎಂದು ನಾನು ಭಾವಿಸಿದ್ದೇನೆ,
Very sad dat we are still left with such narrow minded fanatics who donot read between d lines.My sympathies 2 dear Bharathi
ಪ್ರತ್ಯುತ್ತರಅಳಿಸಿReally sorry dat we are still left with fanatics in our community who fail 2 read between d lines.My sympathies to dear Bharathi
ಪ್ರತ್ಯುತ್ತರಅಳಿಸಿನಿಜಕ್ಕೂ ಇದೊಂದು ಆಘಾತಕಾರಿ ಬೆಳವಣಿಗೆ! ನಮ್ಮ ಮನೆ ತುಂಬಾ ಚಂದಚಂದದ ಬುದ್ಧನ ವಿಗ್ರಹಗಳಿವೆ! ಬುದ್ದ ನಮಗೆಲ್ಲಾ ಗಾಂಧಿಯಷ್ಟೇ ಇಷ್ಟವಾಗುವ ವ್ಯಕ್ತಿತ್ವ! ಹಾಗಿದ್ದರೂ, ನಾನು ಇತ್ತೀಚೆಗೆ ನಡೆದ ಲೇಖಕಿಯರ ಸಮ್ಮೇಳನದಲ್ಲಿ ಬುದ್ದನನ್ನು ಟೀಕಿಸಿ ಬರೆದ ಲೇಖನ ಓದಿದ್ದೆ! ಫೇಸ್ ಬುಕ್ ನ ನಮ್ಮ ಅಂತಃಪುರದಲ್ಲೂ ಹಾಕಿದ್ದೆ! ಅದು ಮಯೂರ ಪತ್ರಿಕೆಯಲ್ಲೂ ಪ್ರಕಟವಾಗಿತ್ತು.... ಬಹುತೇಕ ಮಹಿಳೆಯರು ಅಕ್ಕಮಹಾದೇವಿಯನ್ನು ಬಳಸಿಕೊಂಡಂತೆ , ತಮ್ಮ ಸಾಹಿತ್ಯಿಕ ಅಭಿವ್ಯಕ್ತಿಯಲ್ಲಿ ಬುದ್ದನನ್ನು ಬಳಸಿಕೊಳ್ಳುವುದು ಸರ್ವೇಸಾಮಾನ್ಯ! ದಾರ್ಷನಿಕರಾದವರನ್ನು ಗಮನಿಸಿದಷ್ಟೂ ಅನೇಕ ಆಯಾಮಗಳಲ್ಲಿ ಅವರ ದರ್ಶನವಾಗುತ್ತದೆ! ಹಾಗೆ ಅವರವರ ಭಾವಕ್ಕೆ ತಕ್ಕಂತೆ ಅವರನ್ನು ಭಾವಿಸಲು ಅಭಿವ್ಯಕ್ತಿ ಸ್ವಾತಂತ್ರ್ಯವಿಲ್ಲವೆಂದರೆ..... ಇದೆಂತಹಾ ಅಸ್ವಾಸ್ಥ್ಯ-ಇರುಸು/ಮುರುಸಿನ ವಾತಾವರಣ ತಲೆಯೆತ್ತುತ್ತಿದೆ! ನಿಜಕ್ಕೂ ಇದಾಗಬಾರದು.....
ಪ್ರತ್ಯುತ್ತರಅಳಿಸಿಮಹಾನ್ ದಾರ್ಶನಿಕನ ವ್ಯಕ್ತಿತ್ವವನ್ನು ನಾವು ಧ್ಯಾನಿಸಬೇಕೇ ಹೊರತು ಆರಾಧಿಸುವುದಲ್ಲ. ಆರಾಧನೆಗೂ, ಧ್ಯಾನಕ್ಕೂ ಅಜಗಜಾಂತರ ವೆತ್ಯಾಸವಿದೆ. ಆರಾಧನೆ ನಮ್ಮಲ್ಲಿ ಕುರುಡುತನವನ್ನು ಮಾತ್ರ ಬೆಳಸಬಲ್ಲದು. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಇವರುಗಳು ಆರಾಧಿಸುವ ವ್ಯಕ್ತಿಗಳಲ್ಲ, >>>>
ಪ್ರತ್ಯುತ್ತರಅಳಿಸಿತುಂಬಾ ಚೆನ್ನಾಗಿ ಬರೆದಿದ್ದೀರಾ ಸರ್. ಇನ್ನೊಬ್ಬರ ನೋವಿಗೆ ಶಮನಕೊಡಲಾಗದಿದ್ದರೂ ಸರಿ, ಅವರ ಯಾತನೆಯನ್ನು ಹೆಚ್ಚಿಸಬಾರದು. ಇದೇ ಮನುಷ್ಯತ್ವ. ಇದನ್ನು ಮರೆತಾಗ ಇಂತಹ ಅಧ್ವಾನಗಳಾಗುತ್ತವೆ!
ತುಂಬ ಒಳ್ಳೆಯ ಲೇಖನ. ಸರಿಯಾದ ಸಮಯದಲ್ಲಿ ತುಂಬ ಸೂಕ್ತವಾಗಿ ಬರೆದಿದ್ದೀರಿ. ನಾನು ಕೆಲವೊಮ್ಮೆ ಫೇಸ್ ಬುಕ್ ನಿಂದ ದೂರ ಇರುವ ಕಾರಣ ಈ ಬೆಳವಣಿಗೆ ನನಗೆ ಗೊತ್ತಾಗಿರಲಿಲ್ಲ.ಭಾರತಿ ಮೊನ್ನೆ ಫೋನು ಮಾಡಿದಾಗಲೇ ನನಗೆ ತಿಳಿದದ್ದು ಎಷ್ಟೋ ನೋವುಗಳನ್ನು ಗೆದ್ದು ಬಂದ ಭಾರತಿಗೆ ತುಂಬಾ ನೋವಾಗಿದೆಯೆಂದು.ಮನಸಿಗೆ ನೋವಾಯಿತು. ಬೇಸರ ಬೇಡ ಭಾರತಿ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಇಂತ ಹುನ್ನಾರಗಳು ನಡೆಯುತ್ತಲೇ ಇರುತ್ತವೆ. ಹುಳುಕು ಹುಡುಕುವ ಕೆಟ್ಟ ಮನಸುಗಳು ಹೆಚ್ಚುತ್ತಿವೆ.ಯಾಕೆ ಹೀಗೆ ಎನ್ನುವುದೇ ಅರ್ಥವಾಗುತ್ತಿಲ್ಲ. ಕೆಲಸವಿಲ್ಲದ ಆಚಾರಿ ಮಕ್ಕಳ ಕುಂಡೆ ಕೆತ್ತಿದನಂತೆ. ಹಾಗಿದೆ ಇದು.ಯಾರೋ ಕೆಲಸವಿಲ್ಲದವರು ಹಚ್ಚಿದ ಕಿಡಿಗೆ ಹೆದರುವುದು ಬೇಡ ಭಾರತಿ. ನಾವೆಲ್ಲ ನಿಮ್ಮೊಡನಿದ್ದೇವೆ. ನಾನು ಗುರುತಿಸಿದಂತೆ ಭಾರತಿ ಇತ್ತೀಚಿಗಿನ ಬರಹಗಾರ್ತಿಯರಲ್ಲಿ ಒಬ್ಬ ಒಳ್ಳೆಯ ಲೇಖಕಿ. ಧೈರ್ಯವಂತೆ, ಸಾವನ್ನು ಗೆದ್ದು ಬಂದವಳು. ಎಲ್ಲದಕ್ಕಿಂತಲೂ ಮುಖ್ಯವಾಗಿ ಮಕ್ಕಳಷ್ಟೇ ಮುಗ್ಧ ಮನಸಿನವಳು. ನಾವೆಲ್ಲಾ ಭಾರತಿ ಜೊತೆಗಿದ್ದೇವೆ.
ಪ್ರತ್ಯುತ್ತರಅಳಿಸಿಜಗದೀಶ್ ಕೊಪ್ಪ ಸರ್ ಮತ್ತು ಉಳಿದ ಎಲ್ಲರಿಗೂ ಅನಂತ ವಂದನೆಗಳು. ನಿಮ್ಮ ಪ್ರೀತಿ ಮತ್ತು ವಿಶ್ವಾಸ ಸದಾ ನನ್ನ ಮೇಲಿರಲಿ ...
ಪ್ರತ್ಯುತ್ತರಅಳಿಸಿso moving sir. I like your insights on certain issues as well. Jayashree
ಪ್ರತ್ಯುತ್ತರಅಳಿಸಿ