ಬುಧವಾರ, ಡಿಸೆಂಬರ್ 11, 2013

ಡಾ.ವಿವೇಕ್ ರೈ ಎಂಬ ಸಾಕ್ಷಿ ಪ್ರಜ್ಙೆಯ ನೆಪದಲ್ಲಿ ಕನ್ನಡದ ಪ್ರಶ್ನೆಗಳು




ಕನ್ನಡದ ಹಿರಿಯ ವಿಧ್ವಾಂಸ ಮತ್ತು ಸಾಕ್ಷಿ ಪ್ರಜ್ಙೆಯಂತಿರುವ ಡಾ.ವಿವೇಕ್ ರೈ ಈ ಬಾರಿಯ ಆಳ್ವಾಸ್ ಸಿರಿನುಡಿಯ ಆಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಹು ದೊಡ್ಡ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾಗಿರುವ ಮೋಹನ್ ಆಳ್ವ ಅವರು ಕಳೆದ ಒಂಬತ್ತು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಆಳ್ವಾಸ್ ಸಿರಿನುಡಿ ಕಾರ್ಯಕ್ರಮ ಈ ಬಾರಿ ದಶಮಾನೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ತಮ್ಮ ತುಳುನಾಡಿನವರೇ ಆದ ವಿವೇಕ್ ರೈ ಅವರನ್ನು ಈ ಬಾರಿಯ ಸಿರಿನುಡಿಗೆ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.
ದ್ರಾವಿಡ ಭಾಷೆಗಳ ಉಪಭಾಷೆಗಳಲ್ಲಿ ಒಂದಾದ ತುಳು ಭಾಷೆ ಮತ್ತು ಸಂಸ್ಕೃತಿ ಕುರಿತು ಅಪಾರ ಒಳನೋಟಗಳಿರುವ ವಿವೇಕ್ ರೈ ಕನ್ನಡದ ಹಿರಿಯ ಜಾನಪದ ವಿಧ್ವಾಂಸರು ಕೂಡ ಹೌದು. ತುಳುನಾಡಿನ ಗೋವಿಂದ ಪೈ,ಮತ್ತು ಕು.ಶಿ. ಹರಿದಾಸಭಟ್ಟರ ನಂತರ, ಕನ್ನಡನಾಡಿನ ( ತುಳುನಾಡು ಸೇರಿದಂತೆ) ಜಾನಪದ ಸಂಸ್ಕೃತಿಯನ್ನು ತಮ್ಮ ಅದ್ಯಯನದ ಉಸಿರಾಗಿಸಿಕೊಂಡವರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಬಂದ ಪ್ರಮುಖ ವಿಧ್ವಾಂಸರಲ್ಲಿ ಡಾ.ವಿವೇಕ್ ರೈ ಮತ್ತು ಡಾ.ಪುರುಷೋತ್ತಮ ಬಿಳಿಮಲೆ ಪ್ರಮುಖರು.
1970 ರ ದಶಕದಲ್ಲಿ ಮಂಗಳೂರಿನಲ್ಲಿ ವಿಶ್ವವಿದ್ಯಾನಿಲಯ ಆರಂಭಗೊಂಡಾಗ ಕನ್ನಡ ಉಪನ್ಯಾಸಕ ವೃತ್ತಿಯೊಂದಿಗೆ ನೆಲದ ಸಂಸ್ಕೃತಿಯ ಚಿಂತನೆಯನ್ನು  ಆರಂಭಿಸಿದ ವಿವೇಕ್ ರೈ ಅವರು ಆರಂಭದಿಂದಲೂ ಸಾಕ್ಷಿ ಪ್ರಜ್ಙೆಯಂತೆ ನಮ್ಮ ನಡುವೆ ಬದುಕಿದವರು. ಪುತ್ತೂರು ತಾಲ್ಲೂಕಿನ ಪುಣಜೆ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದ ವಿವೇಕ್ ರೈ ರವರ ತಂದೆ ಪುರಂಧರ ರೈ, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕ ಕಂಡ ಮತ್ತೊಬ್ಬ ದಿಗ್ಗಜ ಶಿವರಾಮ ಕಾರಂತರ ಪರಮ ಶಿಷ್ಯರು. ಹಾಗೂ ಆರಾಧಕರು. ಹಾಗಾಗಿ ಬಾಲ್ಯದಿಂದಲೂ ಕಾರಂತರ ಹೆಜ್ಜೆ ಗುರುತುಗಳನ್ನು ಅವಲೋಕಿಸುತ್ತಾ ಬಂದ ಇವರು, ತಮ್ಮ ಬದುಕಿನುದ್ದಕ್ಕೂ ಕಾರಂತರ ದೃಷ್ಟಿಕೋನವನ್ನು ಬೆಳಸಿಕೊಂಡವರು.
ನಲವತ್ತು ವರ್ಷಗಳ ಹಿಂದೆ ಮಂಗಳೂರಿನ ವಿ.ವಿಯ. ಪ್ರಥಮ ಎಂ.ಎ. ಬ್ಯಾಚಿನ ವಿದ್ಯಾರ್ಥಿಗಳಲ್ಲಿ ನನ್ನ ಮಂಡ್ಯದ ಆತ್ಮೀಯ ಗೆಳೆಯ ಹಾಗೂ ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ. ಬಿ.ಜಯಪ್ರಕಾಶಗೌಡ ಮತ್ತು ಲೇಖಕಿ ಸಂಧ್ಯಾರೆಡ್ಡಿ  ಇವರ ಶಿಷ್ಯರು. ಇವರಿಬ್ಬರ ಬಾಯಿಂದ ಸದಾ ವಿವೇಕ್ ರೈ ಅವರ ಗುಣಗಾನಗಳನ್ನು ಕೇಳುತ್ತಿದ್ದ ನಾನು, ದಶಕದ ಹಿಂದೆ ಮೇಲಿಂದ ಮೇಲೆ ಶಿಷ್ಯನ ಆಹ್ವಾನದ ಮಂಡ್ಯಕ್ಕೆ ಬರುತ್ತಿದ್ದ ಸಂದರ್ಭದಲ್ಲಿ  ಇವರ ಗುಣ,  ಮತ್ತು ಪ್ರತಿಭೆಯನ್ನು  ತೀರಾ ಹತ್ತಿರದಿಂದ ಪರಿಚಯ ಮಾಡಿಕೊಳ್ಳಲು ಸಾಧ್ಯವಾಯಿತು.
ಕಿರಿಯರು ಎಂಬ ಬೇಧ ಭಾವವಿಲ್ಲದೆ ಬೆರೆಯುವ ಇವರ ದೊಡ್ಡತನ ಮತ್ತು ಈ ನೆಲದ ಸಂಸ್ಕೃತಿಯ ಕುರಿತಂತೆ ಇವರಿಗಿದ್ದ  ಅಪಾರ ಒಳನೋಟಗಳ ಉಪನ್ಯಾಸಕ್ಕೆ  ನಾನು ಮತ್ತು ಜಯಪ್ರಕಾಶಗೌಡ ಬೆಳಗಿನ ಜಾವ ಎರಡು ಗಂಟೆಯ ವರೆಗೂ ಮೈಯನ್ನು ಕಿವಿಯಾಗಿಸಿಕೊಂಡು ಕೂರುತ್ತಿದ್ದೆವು.( ಕಳೆದ ಎಂಟು ವರ್ಷಗಳಿಂದ ಅವರನ್ನು ಬೇಟಿಯಾಗಲು, ಮಾತನಾಡಲು  ಸಾಧ್ಯವಾಗಿಲ್ಲ)
 2004 ರಿಂದ 2007 ರಲ್ಲಿ ಹಂಪಿಯ ಕನ್ನಡ ವಿಶ್ವ ವಿದ್ಯಾನಿಯದ ಉಪಕುಲಪತಿಗಳಾದ ಸಂದರ್ಭದಲ್ಲಿ . ವಿ.ವಿಯ ಆವರಣದೊಳಕ್ಕೆ ರೈತರ ಸಮಸ್ಯೆಯನ್ನು  ಪ್ರಪಥಮವಾಗಿ ಆಹ್ವಾನಿಸಿಕೊಂಡವರು. ಬೀಜ ಮೇಳವನ್ನು ಏರ್ಪಡಿಸಿ, ರೈತರ ನಡುವೆ ಬೇಸಾಯ ಕುರಿತ ಮಾಹಿತಿ ವಿನಿಮಯ ಮತ್ತು ಬೀಜ ವಿನಿಮಯಕ್ಕೆ ಅನುವು ಮಾಡಿಕೊಡುವುದರ ಮೂಲಕ ತಮ್ಮ ನೆಲದ ಸಂಸ್ಕೃತಿಯ ಕಾಳಜಿಯನ್ನು ಅನಾವರಣಗೊಳಿಸಿದರು. 2007 ರಲ್ಲಿ ಮೈಸೂರು ಮುಕ್ತ ವಿ.ವಿ.ಯ ಉಪಕುಲಪತಿ ಸ್ಥಾನ ಅಲಂಕರಿಸಿ, ಅವಧಿ ಮುಗಿಯುವ ಮುನ್ನವೇ ಜರ್ಮನಿಯ ವೂತ್ ಬರ್ಗ್ಸ್ ಎಂಬ ವಿ.ವಿಯ ಇಂಡಾಲಜಿ ವಿಭಾಗಕ್ಕೆ ಕನ್ನಡ ಪ್ರಾಧ್ಯಾಪಕರಾಗಿ ಹೊರಟರು. ವಿವೇಕ್ ರೈ ಅವರಿಗೆ ಒಂದು ಅತಿ ದೊಡ್ಡ ಮುಕ್ತ ವಿಶ್ವ ವಿದ್ಯಾನಿಲಯದ ಉಪಕುಲಪತಿ ಹುದ್ದೆಗಿಂತ, ಜರ್ಮನಿಯಲ್ಲಿ ವಿದೇಶಿಯರಿಗೆ ಕನ್ನಡ ಕಲಿಸುವ ಹುದ್ದೆ ಇಷ್ಟವಾಯಿತು. ಇದು ಅವರೊಳಗಿದ್ದ ಕನ್ನಡದ ಬಗೆಗಿನ  ಪ್ರೀತಿಗೆ ಸಾಕ್ಷಿ

.
ಇಂತಹ  ಹಲವು ಸಾಧನೆಗಳ ಸಾಧಕರಿಂತಿರುವ ಕನ್ನಡದ ಹಿರಿಯ ಈ ಹಿರಿಯ ಜೀವಕ್ಕೆ ಅಪರೂಪಕ್ಕೆ ತಾನಾಗಿಯ ಹುಡುಕಿಕೊಂಡು ಬಂದ  ಸಿರಿನುಡಿ ಹಬ್ಬದ ಅಧ್ಯಕ್ಷ ಪದವಿ ಈಗ ತೀರಾ ಬೇಸರ ಮತ್ತು ಜಿಜ್ಙಾಸೆಗೆ ದೂಡಿಬಿಟ್ಟಿದೆ. ತನ್ನದೇ ನೆಲದಲ್ಲಿ ಅತಾರ್ಕಿಕ ನೆಲೆಯಲ್ಲಿ ಹುಟ್ಟಿಕೊಂಡ ಅನಿರೀಕ್ಷಿತ ಪ್ರತಿರೋಧ, ನಾಡಿನ ಪ್ರಜ್ಙಾವಂತರಲ್ಲಿ ಹಲವು ಜಿಜ್ಙಾಸೆಗಳನ್ನು ಮತ್ತು ಪ್ರಶ್ನೆಗಳನ್ನು ಸಹ ಹುಟ್ಟು ಹಾಕಿದೆ. ಕಳೆದ ಒಂಬತ್ತು ವರ್ಷಗಳಲ್ಲಿ ಕಾಣದ ಪ್ರತಿಭಟನೆ ಈ ವರ್ಷ ಮಾತ್ರ ಏಕೆ? ಈವರೆಗೆ ಸಿರಿನುಡಿಗೆ ಹೋದ ಲೇಖಕರು, ಕವಿಗಳಾಗಲಿ, ಅಥವಾ ಹಿರಿಯ ಸಾಹಿತಿಗಳು ಯಾರು ಎಂಬ ಪ್ರಶ್ನೆಗಿಂತ, ಈಗ ಹೋಗದೆ ಉಳಿದುಕೊಂಡ ಮಹಾನುಭಾವರು ಯಾರು ಎಂಬ ಪ್ರಶ್ನೆ ಮುಖ್ಯವಾಗಿದೆ. ವಿವೇಕ್ ರೈ ನಿಯೋಜಿತರಾಗಿರುವ ಅಧ್ಯಕ್ಷತೆ ಪಟ್ಟದ ಬಗ್ಗೆಯಾಗಲಿ ಅಥವಾ ನೀವು ಪಲ್ಲಕ್ಕಿಯಲ್ಲಿ ಹೂಗುತ್ತೀರಾ ಎಂಬ ಅಸಂಬದ್ಧ ಪ್ರಶ್ನೆಗಳನ್ನು ಕೇಳುವ ಮೊದಲು ಈ ಪ್ರಶ್ನೆಗಳನ್ನು ಎತ್ತುತ್ತಿರುವವರು ಯಾರು? ಎಂಬುದನ್ನು  ಗಮನಿಸಿದಾಗ,  ಮನಸ್ಸಿಗೆ ತೀರಾ ನಿರಾಸೆಯಾಗುತ್ತದೆ.. ಯಾರು ಇವರನ್ನು ನೈತಿಕವಾಗಿ ಪ್ರಶ್ನಿಸುತ್ತಿದ್ದಾರೋ, ಅದೇ ವ್ಯಕ್ತಿಗಳು  ಆಳ್ವರ ಆಸ್ಥಾನದಲ್ಲಿ ಸಲಹೆಗಾರರಾಗಿ ಇದ್ದವರು, ಸಿರಿನುಡಿಯಲ್ಲಿ ಪಾಲ್ಗೊಂಡು, ಆಳ್ವರಿಂದ ತಾಂಬೂಲ, ಸಂಭಾವನೆ ಪಡೆದವರಾಗಿದ್ದಾರೆ. ಜೊತೆಗೆ  ಈಗ ತಾತ್ವಿಕವಾಗಿ ವಿರೋಧಿಸಿ ಮಂಗಳೂರಿನಲ್ಲಿ  ನಡೆಯುತ್ತಿರುವ ಜನನುಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು  ಮೇಜು ಕುಟ್ಟಿ ಮಾತನಾಡುವವರಿದ್ದಾರೆ.
ಆಳ್ವರ ಬಂಡವಾಳಶಾಹಿ ನೀತಿ ಅರಿಯಲು ಈ ಪ್ರಜ್ಙಾವಂತ ಸಮಾಜಕ್ಕೆ ಹತ್ತು ವರ್ಷ ಬೇಕಾಯಿತೆ? ಅಳ್ವರ ಶಿಕ್ಷಣ ಸಂಸ್ಥೆಯ ವ್ಯಾಪಾರೀಕರಣದ ಬಗ್ಗೆ ನಮಗೆ ಅಸಮಾಧಾನವಿದ್ದರೆ, ಅದನ್ನು ವಿರೋಧಿಸಲು ಪರ್ಯಾಯ ಮಾರ್ಗಗಳಿರಲಿಲ್ಲವೆ?
ಈ ದಿನ  ಆಳ್ವರ ಬಂಡವಾಳಶಾಹಿತನ ಕುರಿತು ಪ್ರಶ್ನಿಸುವ ಜರೂರಿಗಿಂತ, ಆದ್ಯತೆಗಳಿಗಳಿರುವ ಕನ್ನಡದ ಬಗೆಗಿನ ಪ್ರಶ್ನೆಗಳು ನಮ್ಮ ಅಂಗೈನ ಕೆಂಡದುಂಡೆಗಳಾಗಿವೆ. ಅಂತಹ ಪ್ರಶ್ನೆಗಳು ಏಕೆ ನಮ್ಮನ್ನು ಕಾಡುತ್ತಿಲ್ಲ? ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷೆಯ ಸ್ಥಾನ ದೊರೆತು, ಮೂರು ವರ್ಷಗಳಾದವು. ಕೇಂದ್ರ ಸರ್ಕಾರದ ಅನುದಾನ ಬಳಸಿಕೊಳ್ಳುವಲ್ಲಿ ನಾವು ಏನು ಮಾಡಿದ್ದೀವಿ? ನನ್ನ ಹಿರಿಯಣ್ಣನಂತಿದ್ದ ಲಿಂಗದೇವರು ಹಳೆಮನೆ ನಿಧನರಾದ ನಂತರ ಯಾವ ಕನ್ನಡ ಸಂಸ್ಕೃತಿ ಚಿಂತಕರು ಈ ಕುರಿತು ಯೋಚಿಸಿದ್ದಾರೆ? ಯೋಜನೆ ರೂಪಿಸಿದ್ದಾರೆ?  ಯಾವ ಯೋಜನೆಗಳು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾಗಿವೆ? ಯಾರಾದರೂ  ಈ ಬಗ್ಗೆ ಮಾಹಿತಿ ನೀಡಿದರೆ, ಅವರ ಪದತಲದಲ್ಲಿ ಕುಳಿತು ಮಾಹಿತಿ ಸ್ವೀಕರಿಸಬಲ್ಲೆ. ನಮ್ಮ ನೆರೆಯ ತಮಿಳುನಾಡು ಸರ್ಕಾರ  ಈವರೆಗೆ ಹದಿಮೂರು ಸಾವಿರ ಕೋಟಿ ರೂಪಾಯಿಗಳ ಕೇಂದ್ರ ಸರ್ಕಾರದ ಅನುದಾನವನ್ನು ತಮಿಳು ಭಾಷೆಗಾಗಿ, ತಂಜಾವೂರಿನ ತಮಿಳು ವಿ.ವಿ. ಮಧುರೈನ ಕಾಮರಾಜ್ ವಿ.ವಿ. ಮತ್ತು ನಮ್ಮ ಬಂಗಾರ ಪೇಟೆ ಸಮೀಪದ ಕುಪ್ಪಂ ನಲ್ಲಿ ( ಆಂಧ್ರ ಮಾಜಿ ಮುಖ್ಯ ಮಂತ್ರಿ ಚಂದ್ರ ಬಾಬು ನಾಯ್ಡು ಅವರ ವಿಧಾನಸಭಾ ಕ್ಷೇತ್ರ)ಸ್ಥಾಪಿಸಲಾಗಿರುವ ದ್ರಾವಿಡ ವಿಶ್ವ ವಿದ್ಯಾಲಯದಲ್ಲಿ ಹೇಗೆ ವಿನಿಯೋಗಿಸಿದೆ ಎಂಬುದನ್ನು ನಮ್ಮ ಕನ್ನಡದ ವಿಧ್ವಾಂಸರು ಒಮ್ಮೆ 
ನೋಡಿ ಬರುವುದು ಒಳಿತು.

ಯಾವುದೇ ಒಂದು ರಂಗದಲ್ಲಿ ಇಂತಹ ಆರೋಗ್ಯ ಚರ್ಚೆಗಳು ಅವಶ್ಯಕ ನಿಜ. ಆದರೆ, ಅವುಗಳಿಗೆ ತಾರ್ಕಿಕ ನೆಲೆಯ ಚೌಕಟ್ಟುಗಳಿದ್ದಾಗ, ಮಾತ್ರ ಅವುಗಳಿಗೆ  ಅರ್ಥ ಸಿಗಬಲ್ಲದು.  ನಮ್ಮ ಬಳ್ಳಾರಿ ಜಿಲ್ಲೆಯ ಹಿರಿಯ ನಾಟಕಕಾರ ಮತ್ತು ಕಲಾವಿದ ಜೋಳದ ರಾಶಿ ದೊಡ್ಡನಗೌಡರ ಸಮಗ್ರ ಸಾಹಿತ್ಯವನ್ನು ತಿರುಪತಿಯ ವೆಂಕೇಟೇಶ್ಚರ ವಿಶ್ವ ವಿದ್ಯಾನಿಲಯ ಕೊಂಡಯ್ದು ತೆಲುಗು ಭಾಷೆಗೆ ತರ್ಜುಮೆ ಮಾಡುತ್ತಿದೆ. ಇಂತಹ ಸತ್ಯಗಳ ಅರಿವಿಲ್ಲದ ನಾವು, ಕನ್ನಡ ಪರ ಸಂಘಟನೆಗಳ ಬೀದಿ ಬದಿಯ ಪ್ರತಿಭಟನೆಗಳ  ಮುಂದುವರಿದ ಮಾದರಿಯಂತೆ ಹೆಜ್ಜೆ ಹಾಕುತ್ತಿದ್ದೇವೆ.ಸಿರಿನುಡಿಯ ಕನ್ನಡದ ಹಬ್ಬ ಕುರಿತು ಚಕಾರವೆತ್ತುವ ನಮಗೆ  ಕನ್ನಡ ಸಾಹಿತ್ಯ ಪರಿಷತ್ತು ಭ್ರಷ್ಟ ರಾಜಕಾರಣಿಗಳ ಕೃಪಾಕಟಾಕ್ಷದಲ್ಲಿ ನಡೆಸುವ ಸಾಹಿತ್ಯ ಸಮ್ಮೇಳನವೆಂಬ ಎಲ್ಲಮ್ಮನ ಜಾತ್ರೆ ಎಂಬ  ಅಸಹನೆ ಏಕಿಲ್ಲ?  ಆಳ್ವಾ ಅಷ್ಟೇ ಅಲ್ಲ,  ಬೆಂಗಳೂರಿನಲ್ಲಿ ನಡೆಯುವ ಬೆಂಗಳೂರು ಹಬ್ಬದ ಬಗ್ಗೆ ನಾವು ಎಂದಾದರೂ ಈ ಪ್ರಶ್ನೆಗಳನ್ನು ಎತ್ತಿದ ಉದಾಹರಣೆಗಳುಂಟಾ? ಕಳೆದ ಏಳೆಂಟು ವರ್ಷಗಳಲ್ಲಿ ಕರ್ನಾಟಕದಲ್ಲಿ ನಡೆದಿರುವ ಸಾಹಿತ್ಯ ಸಮ್ಮೆಳನಗಳ ಮಾಹಿತಿಯನ್ನು ಇಲ್ಲಿ ಕೊಡಬಲ್ಲೆ. ಅದಕ್ಕೆ ಹಣ ಹಾಕಿದವರು ಯಾರು? ಹೈರಾಣಾದವರು ಯಾರು? ಎಂಬುದನ್ನು ಗಮನಿಸಿದಾಗ, ಇಡೀ ಕನ್ನಡದ ಮನಸ್ಸುಗಳು ಭ್ರಷ್ಟಗೊಂಡಿವೆ ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕಾ?
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ, ಉಪಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರ ನೇತೃತ್ವದಲ್ಲಿ ಶಿವಮೊಗ್ಗದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ( ನಿಸಾರ್ ಆಹಮದ್ ಅಧ್ಯಕ್ಷರು) ಯಡಿಯೂರಪ್ಪನವರು ವೈಯಕ್ತಿವಾಗಿ ಹೆಚ್ಚವರಿಯಾಗಿ ಭರಿಸಿದ ಮೊತ್ತ, ಎರಡು ಕೋಟಿ ತೊಂಬತ್ತು ಲಕ್ಷರೂಪಾಯಿಗಳು. ಆನಂತರ ಜಿ.ಎಸ್ ವೆಂಕಟಸುಬ್ಬಯ್ಯ ಅಧ್ಯಕ್ಷರಾಗಿ ಆಯ್ಕೆಯಾಗಿ ಬೆಂಗಳೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಹೆಚ್ಚವರಿ ನಾಲ್ಕೂವರೆ ಕೋಟಿ ರೂಪಾಯಿಗಳ ಸಾಲವನ್ನು ಆರ್.ಅಶೋಕ್ ಒಂದು ವರ್ಷಗಳ ಅವಧಿಯಲ್ಲಿ ತೀರಿಸಿದರು.ಯಡಿಯೂರಪ್ಪನವರ ಮಂತ್ರಿ ಮಂಡಲದಲ್ಲಿ ಗೃಹ ಸಚಿವ ಮತ್ತು ಸಾರಿಗೆ ಸಚಿವರಾಗಿದ್ದ ಅಶೋಕ್ ತಮ್ಮ ಮನೆಯಿಂದ ಹಣ ತಂದು ಸಾಲ ತೀರಿಸಿದರು ಎಂದು ನಾವು ನಂಬಲು ಸಾಧ್ಯವೆ? ಗದಗದಲ್ಲಿ ಗೀತಾ ನಾಗಭೂಷಣ್ ಅಧ್ಯಕ್ಷರಾಗಿದ್ದ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಗಣಿದಣಿ ರಾಮುಲು ; ಗೀತಾ ನಾಗಭೂಷಣ್  ಅವರಿಗೆ ಹನ್ನೊಂದು ಲಕ್ಷ ರೂಪಾಯಿ ದೇಣಿಗೆ ನೀಡಿದಾಗ ನಮಗ್ಯಾಕೆ ನೈತಿಕ ಪ್ರಜ್ಙೆ ಕಾಡಲಿಲ್ಲ? ರಾಮುಲು ಖರ್ಚು ಮಾಡಿದ ಏಳು ಕೋಟಿ ರೂಪಾಯಿ ಯಾವ ಮೂಲದಿಂದ ಬಂದಿದ್ದು ಎಂಬುದನ್ನು ತಿಳಿಯಲಾರದಷ್ಟು ಅಜ್ಙಾನ ನಮ್ಮನ್ನು ಆವರಿಸಿಕೊಂಡಿತ್ತೆ? ಮುಂದಿನ ಜನವರಿಯ ಮಡಕೇರಿಯ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರದಿಂದ ಬಿಡುಗಡೆಯಾದ ಹಣ ಕೇವಲ ಒಂದು ಕೋಟಿ ಮಾತ್ರ. ಇನ್ನುಳಿದ ಮೂರು ಕೋಟಿ ಹಣದ ಉಸ್ತುವಾರಿಯನ್ನು  ಈಗಿನ ಲೋಕೋಪಯೋಗಿ  ಸಚಿವ ಡಾ.ಮಹಾದೇವಪ್ಪ ಹೊತ್ತಿದ್ದಾರೆ. ಅವರು ಎಲ್ಲಿಂದ ಹಣ ತರುತ್ತಾರೆ? ಸಾಹಿತ್ಯ ಸಮ್ಮೇಳನಕ್ಕೆ ಹಣ ನೀಡುವ ಕಂಟ್ರಾಕ್ಟರುಗಳು, ಭ್ರಷ್ಟ ಇಂಜಿನೀಯರ್ ಗಳು, ಇವರೆಲ್ಲಾ  ಬಂಡವಾಳ ಶಾಹಿಯ ಪ್ರತಿನಿಧಿ ನಾವು ಆರೋಪ ಹೊರಿಸುತ್ತಿರುವ ಆಳ್ವರಿಗಿಂತ ಶ್ರೇಷ್ಟರೆ?

?
ಜನನುಡಿ ಪರಿವಾರ ಎತ್ತಿರುವ  ಪ್ರಶ್ನೆಗಳು ಸ್ವಸ್ಥ ಸಮಾಜದ ಪುನರ್ ನಿರ್ಮಾಣಕ್ಕೆ  ಪೂರಕವಾಗಿರುವಂತೆ ಕಂಡರೂ , ವಾಸ್ತವ ನೆಲೆಗಟ್ಟಿನಲ್ಲಿ ಗಮನಿಸಿದಾಗ, ಅಥವಾ  ಅವರದೇ ದೃಷ್ಟಿಕೋನದಲ್ಲಿ ಅವಲೋಕಿಸಿದಾಗ  ಇಡೀ ಕನ್ನಡದ ಸಾಹಿತ್ಯ ಜಗತ್ತಿನ  ಲೇಖಕರನ್ನು ನಾವು ತಿರಸ್ಕರಿಸಬೇಕಾಗುತ್ತೆ.  ಅದು ಸಾಧ್ಯವೆ? ಆಳ್ವರ ಪ್ರಶ್ನೆಗಿಂತ,ಮುಖ್ಯವಾಗಿ ಕನ್ನಡದ ಸಾಹಿತ್ಯ ಮತ್ತು ಸಾಂಸ್ಕೃತಿಕ ಜಗತ್ತನ್ನು ವ್ಯಾಪಾರೀಕರಣ ಮತ್ತು ಅದ್ದೂರಿನತನ ಹುಚ್ಚಿನಿಂದ ಬಿಡಿಸಬೇಕಿದೆ . ಆದರೆ, ಅವುಗಳ ಬಗ್ಗೆ ಪ್ರಶ್ನೆ ಎತ್ತುವ ವ್ಯಕ್ತಿಯ ನೈತಿಕತೆಯನ್ನೂ ಸಹ ನಮ್ಮ ಪ್ರಜ್ಙಾವಂತ ಓದುಗರ ಜಗತ್ತು ಅವಲೋಕಿಸುತ್ತಿದೆ ಎಂಬ ಎಚ್ಚರ ನಮ್ಮಲ್ಲಿರ ಬೇಕು. . ಯಾವುದೇ ಆತ್ಮ ಸಾಕ್ಷಿಯ ಪ್ರಜ್ಙೆಯಿಲ್ಲದೆ ಮಡೆ ಸ್ನಾನ ದಂತಹ ಅನಿಷ್ಟ ಪ್ರಕ್ರಿಯೆಯನ್ನು ಸಮರ್ಥಿಸಿಕೊಂಡ ವೈದೇಹಿಯವರ ಮಾತುಗಳನ್ನು ಸಹಿಸಿಕೊಳ್ಳುವುದರ ಜೊತೆಗೆ, ಅವರು 2010 ರಲ್ಲಿ ಆಳ್ವಾಸ್ ಸಿರಿನುಡಿಗೆ ಅಧ್ಯಕ್ಷರಾದಾಗ ಕಾಣದಿದ್ದ ಅಸಹನೆ, ದಿಡೀರನೆ  ಮಂಗಳೂರಿನಲ್ಲಿ ಈಗ ಹೇಗೆ ಹುಟ್ಟಿಕೊಂಡಿತು? ಯಾರದೋ ಹೆಗಲ ಮೇಲೆ, ಮತ್ಯಾರೋ ಬಂದೂಕವಿಟ್ಟು ಗುಂಡು ಹಾರಿಸುತ್ತಿರವ ಹುನ್ನಾರವೆ?     ಅನುಮಾನ ನನ್ನನ್ನು ತೀವ್ರವಾಗಿ ಕಾಡುತ್ತಿದೆ. ಏಕೆಂದರೆ, ಕಳೆದ ವರ್ಷ ಧಾರವಾಡದಲ್ಲಿ ನಡೆದ ಜನಸಾಹಿತ್ಯ ಸಮ್ಮೇಳನದಲ್ಲಿ ಹಲವರ ಹುನ್ನಾರಗಳಿಗೆ ಬಲಿಯಾಗಿ, ಹುಂಬನಂತೆ ಇಂತಹದ್ದೇ ಪ್ರಕ್ರಿಯೆಗೆ ಹೆಗಲು ಕೊಟ್ಟು   ಬಲಿಯಾದ ಉದಾಹರಣೆಗೆ ನಾನೇ ಸ್ವತಃ ಸಾಕ್ಷಿಯಾಗಿದ್ದೀನಿ. ಈ ಅನುಭವದಿಂದಾಗಿ “ನಮ್ಮ ಎದೆಯೊಳಗಿನ ವಿಷ ಮತ್ತು ತಲೆಯೊಳಗಿನ ಕಸ ಕಡಿಮೆಯಾದಾಗ ಮಾತ್ರ  ನಮ್ಮ ಚಿಂತನೆಗೆ ಒಂದಿಷ್ಟು ಸ್ಪೃಷ್ಟತೆ ಸಿಗಬಲ್ಲದು” ಎಂದು ನಂಬಿಕೊಂಡಿದ್ದೇನೆ.
(ಕೊನೆಯ ಮಾತು – ಇದು  ನನ್ನ ಆತ್ಮಕ್ಕೆ ನಾನೇ ಹಾಕಿಕೊಂಡ ಪ್ರಶ್ನೆಗಳು ಮತ್ತು ಕಂಡುಕೊಂಡ ಉತ್ತರಗಳು. ಹಾಗಾಗಿ ಇವು ವೈಯಕ್ತಿಕ ಅನಿಸಿಕೆ ಮಾತುಗಳು ಮಾತ್ರ.)


1 ಕಾಮೆಂಟ್‌: