ಕೇರಳವೆಂದರೇ ಅದು" ದೇವರು ಸೃಷ್ಟಿಸಿದ ನಾಡು" ಎಂಬ ಹೇಳಿಕೆಯನ್ನು ಈಗ ನಾವೀಗ ಬದಲಿಸಬೇಕಿದೆ. ಕೇರಳವನ್ಷ್ರು ಅಭಿವೃದ್ಧಿಯ ಹೆಸರಿನಲ್ಲಿ ಸೃಷ್ಟಿ ಮಾಡಿರುವ ನರಕ ಎಂದು ನಿಸ್ಸಂಕೋಚವಾಗಿ ಕರೆಯಬಹುದು. ಮಳೆಯ ದೃಶ್ಯ ವೈಭವವನ್ನು ನೋಡಬೇಕಿದ್ದರೆ, ಕೇರಳಕ್ಕೆ ಹೋಗಬೇಕಾದ ಕಾಲವೊಂದಿತ್ತು. ಇದೀಗ ಕೇರಳದಲ್ಲಿ ಅನಾವೃಷ್ಟಿ ಆವರಿಸಿಕೊಂಡಿದೆ. ಕುಡಿಯುವ ನೀರಿಗಾಗಿ ಪರಿತಪಿಸುವ ಸ್ವಾಥಿತಿ ಬಂದದೊದಗಿದೆ.ಕೇರಳದಲ್ಲಿ ವಾರ್ಷಿಕ ವಾಗಿ 3ಸಾವಿರ ಮಿಲಿಮೀಟರ್ ಮಳೆಯಾಗುತ್ತಿತ್ತು.. ಇತ್ತೀಚೆಗೆ ವಾರ್ಷಿಕವಾಗಿ ಶೇಕಡ 30ರಿಂದ 40 ರಷ್ಟು ಕಡಿಮೆಯಾಗಿದೆ.
ಇಡೀ ಕೇರಳದಲ್ಲಿ ಎಲ್ಲೇ ಹೋದರೂ ಭತ್ತದ ಗದ್ದೆಗಳು ಮತ್ತು ತೆಂಗು ಕಣ್ಣಿಗೆ ಕಂಗೊಳಿಸುತ್ತಿದ್ದವು. ಆದರೆ. ಕಳೆದ ಒಂದು ದಶಕದ ಅವಧಿಯಲ್ಲಿ ಅಲ್ಲಿನ ಭತ್ತದ ಗದ್ದೆಗಳು, ಮಾಲ್ ಸೆಂಟರ್ ಗಳಾಗಿ, ಐ.ಟಿ. ಪಾರ್ಕ್ ಗಳಾಗಿ, ಹೋಟೇಲ್ ಗಳಾಗಿ , ಬೃಹತ್ ಉದ್ದಿಮೆಗಳಾಗಿ ಪರಿವರ್ತನೆ ಹೊಂದಿವೆ. ಕೇರಳದ ಕೊಚ್ಚಿನ್, ಎರ್ನಾಕುಲಮ್, ಕ್ಯಾಲಿಕಟ್ , ತಿರುವನಂತಪುರಂ, ನಗರಗಳ ಹೊರಭಾಗದಲ್ಲಿ ತಲೆ ಎತ್ತಿ ನಿಂತಿರುವ ಬೃಹತ್ ಅಪಾರ್ಟ್ ಮೆಂಟ್ ಗಳು, ಐ.ಟಿ ಪಾರ್ಕ್ ಗಳು ಭತ್ತದ ಗದ್ದೆಗಳನ್ನು ನುಂಗಿ ನೀರು ಕುಡಿದಿವೆ.
ಅಲ್ಲಿನ ಪ್ರಮುಖ ಆಹಾರವಾದ ಅಕ್ಕಿಯನ್ನು ಹೊರ ರಾಜ್ಯಗಳಿಂದ ಆಮದು ಮಾಡಿಕೊಳ್ಳುವ ಪರಿಸ್ಥಿತಿ ಉದ್ಭವವಾಗಿದೆ. ಇದೀಗ ಪ್ರಮುಖ ನಗರಗಳಲ್ಲಿ ಪ್ರವಾಸೋದ್ಯವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಕೇರಳ ಸರ್ಕಾರ ಕೈ ಹಾಕಿದೆ. ವಿಮಾನ ನಿಲ್ದಾಣಗಳಿಗಾಗಿ ಲಕ್ಷಾಂತರ ಎಕರೆ ಭತ್ತ ಬೆಳೆಯುವ ಕೃಷಿ ಭೂಮಿ ಬಳಕೆಯಾಗುತ್ತಿದೆ. ಈ ಸಂಗತಿ, ಅಲ್ಲಿನ ಬರಹಗಾರರನ್ನು ಮತ್ತು ಪರಿಸರವಾದಿಗಳನ್ನು ಆತಂಕಕ್ಕೆ ದೂಡಿದೆ. ಈ ಕಾರಣಕ್ಕಾಗಿ ಕಳೆದ ಮಾರ್ಚಿ 22ರಂದು ವಿಶ್ವ ಜಲ ದಿನಾಚರಣೆಯಂದು ಕೇರಳದ ರಾಜಧಾನಿ ತಿರುವನಂತಪುರದಲ್ಲಿ ಸಭೆ ಸೇರಿದ ಅಲ್ಲಿನ ಎಲ್ಲಾ ಪ್ರಜ್ಞಾವಂತರು " ನಮ್ಮ ಭತ್ತದ ಗದ್ದೆಗಳ ಮೇಲೆ ಹಕ್ಕಿಗಳು ಹಾರಾಡಬೇಕೇ ಹೊರತು, ವಿಮಾನಗಳಲ್ಲ' ಎಂಬ ನಿರ್ಣಯ ತೆಗೆದುಕೊಂಡಿದ್ದಾರೆ.
ಇಂತಹ ಪ್ರಜ್ಞೆ ಈಗ ಎಲ್ಲೆಡೆ ಮೂಡಿ ಬರಬೇಕಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ