Thursday, 30 November 2017

ದೇಶ ಭಕ್ತರ ದಶಾವತಾರಗಳು ಮತ್ತು ಸಾಧು ಸಂತರ ಸೋಗಲಾಡಿತನಗಳು
ವೇದಶಾಸ್ತ್ರ ಪಂಚಾಂಗವ ಓದಿಕೊಂಡು ಅನ್ಯರಿಗೆ
ಬೋಧನೆಯ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
ಚಂಡಭಟರಾಗಿ ನಡೆದು ಕತ್ತಿ ಢಾಲು ಕೈಲಿ ಹಿಡಿದು
ಖಂಡ ತುಂಡ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
ಅಂಗಡಿ ಮುಂಗಟ್ಟಿನೂಡಿ ವ್ಯಂಗ್ಯ ಮಾತುಗಳನ್ನಾಡಿ
ಭಂಗ ಬಿದ್ದು ಗಳಿಸುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ.
ಸನ್ಯಾಸಿ, ಜಂಗಮ, ಜೋಗಿ, ಜಟ್ಟಿ, ಮೊಂಡಭೈರಾಗಿಯ
ನಾನಾ ವೇಷಗಳೆಲ್ಲಾ ಹೊಟ್ಟೆಗಾಗಿ  ಗೇಣು ಬಟ್ಟೆಗಾಗಿ
                -ಕನಕದಾಸರು
ಕಳೆದ ನಾಲ್ಕು ದಶಕಗಳ ನನ್ನ ಸಾರ್ವಜನಿಕ ಬದುಕಿನಲ್ಲಿ ಎಂದೂ ಕೇಳರಿಯದ ಮಾತುಗಳನ್ನು ಕಳೆದ ಒಂದು ತಿಂಗಳಿನಿಂದ ದೇಶದಲ್ಲಿ ಕೇಳುತ್ತಿರುವ ಹಿನ್ನಲೆಯಲ್ಲಿ ಹಾಗೂ ಅವರ ಆವೇಶ ಭರಿತ ಮಾತುಗಳು ಮತ್ತು ವರ್ತನೆಯನ್ನು ನೋಡುತ್ತಿರುವಾಗ ನನಗೆ ಕನಕದಾಸರ ಮೇಲಿನ ಕೀರ್ತನೆಯೊಂದು ನೆನಪಾಯಿತು. ಹಿಂದೂ ಧರ್ಮದ ಗುತ್ತಿಗೆ ಹಿಡಿದಂತೆ ಮಾತನಾಡುವ ದೇಶಭಕ್ತರೆಂಬ ಸಾಂಸ್ಕøತಿಕ ಗೂಂಡಗಳು, ರಾಜಕೀಯ ಮುಖವಾಡ ತೊಟ್ಟ ರೌಡಿಗಳು, ಖಾವಿ ತೊಟ್ಟು ಕೊಲ್ಲುವ, ಕಡಿಯುವ ಮಾತನಾಡುತ್ತಿರುವ ನೀಚರು ಇತ್ತೀಚೆಗೆ ದೇಶದ ಸಂವಿಧಾನವನ್ನು ಪುನರ್ರಚನೆ ಮಾಡುವ ಕುರಿತು ಆಲೋಚಿಸುತ್ತಿದ್ದಾರೆಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವ್ಯದರಿಂದ ಹಿಡಿದು; ದೇಶದ ಧರ್ಮ ಮತ್ತು ಸಂಸ್ಕøತಿ ಕುರಿತು ಮಾತನಾಡತೊಡಗಿದ್ದಾರೆ. ಬಹುತ್ವದ ಭಾರತದ ಮೂಲಗುಣವಾದದಯವೇ ಧರ್ಮದ ಮೂಲವಯ್ಯಎಂಬುದಾಗಿದೆ. ಇದು ಅಲಿಖಿತ ಕಾನೂನಿನಂತೆ ಎಲ್ಲರ ಎದೆಯೊಳಗೆ ಗುಪ್ತಗಾಮಿಯಾಗಿ ಹರಿದ ಮಾನವಧರ್ಮದ ಜೀವನದಿಯಾಗಿರುವುದನ್ನು ಅವಿವೇಕಿಗಳು ಮರೆತಿದ್ದಾರೆ. ಜೊತೆಗೆ ದೇಶಕ್ಕೊಂದು ಸಂವಿಧಾನ, ಸರ್ವೋಚ್ಛ ನ್ಯಾಯಾಲಯವಿದ್ದು ಇವೆಲ್ಲವೆನ್ನು ಮೀರಿದ ಅತೀತರಂತೆ ಇವರು ವರ್ತಿಸತೊಡಗಿದ್ದಾರೆ. ಮಂದಿರ ವಿವಾದ ಸುಪ್ರೀಕೋರ್ಟ್ ಅಂಗಳದಲ್ಲಿರುವಾಗ, ರಾಮಮಂದಿರ ನಿರ್ಮಾಣ ಮಾಡಿಯೇ ತೀರುತ್ತೇವೆ ಎನ್ನುವ ಇವರ ಮಾತುಗಳು ದೇಶವನ್ನು ಎತ್ತ ಕೊಂಡೊಯ್ಯುತ್ತಿವೆ ಎಂಬುದರ ಕುರಿತು ನಾವೀಗ ಯೋಚಿಸಬೇಕಿದೆ.
ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಖಾವಿ ಮತ್ತು ಖಾದಿಗಳ ನಡುವೆ ಇದ್ದ ಗಡಿರೇಖೆ ಈಗ ಸಂಪೂರ್ಣ ಅಳಿಸಿಹೋಗಿದೆ. ಖಾವಿ ತೊಟ್ಟವರು ದೇಶವನ್ನಾಳುವ ಮಾತುಗಳನ್ನಾಡುತ್ತಿದ್ದಾರೆ, ಖಾದಿಯ ವೇಷ ತೊಟ್ಟವರು ಧರ್ಮವನ್ನಾಳುವ ಮಾತನಾಡುತ್ತಿದ್ದಾರೆ. ದೇವರು, ಧರ್ಮ, ಜಾತಿ ಇವುಗಳ ನೆಲೆಗಳಾಚೆ ಭಾರತದಲ್ಲಿ ಬಹುದೊಡ್ಡ ಆಧ್ಯಾತ್ಮ, ಅನುಭಾವದ ಜಗತ್ತೊಂದು ಅಸ್ತಿತ್ವದಲ್ಲಿದ್ದು ಅದು ಈಗಲೂ ಇಲ್ಲಿನ ಸಮುದಾಯಗಳನ್ನು ಮಾನವ ಧರ್ಮದ ಪರಿಕಲ್ಪನೆಯಡಿ ಮುನ್ನಡೆಸಿಕೊಂಡು ಹೋಗುತ್ತಿದೆ ಎಂಬುದನ್ನು ಅಜ್ಞಾನಿಗಳು ಮರೆತಿದ್ದಾರೆ. ಉದ್ಧತಟನದ ಮಾತನ್ನಾಡುತ್ತಿರುವ ಇಂತಹವರನ್ನು ಪ್ರಶ್ನಿಸಿದೆ, ಇವರಾಡುವ ಮಾತುಗಳನ್ನು ನಮ್ಮ ಮಾಧ್ಯಮಗಳು ಗಿಳಿಪಾಠದಂತೆ ಒಪ್ಪಿಸುತ್ತಿವೆ.
ಸಂದರ್ಭದಲ್ಲಿ ನಾಡಿನ ಹಿರಿಯ ಕಾದಂಬರಿಗಾರರಲ್ಲಿ ಒಬ್ಬರಾಗಿರುವ ರಾಘವೇಂದ್ರಪಾಟೀಲರುಸಮಾಹಿತಎಂಬ ಸಾಹಿತ್ಯ ದ್ವೈಮಾಸಿಕ ಪತ್ರಿಕೆಯಲ್ಲಿ ಸಂಪಾದಕೀಯ ಮಾತುಗಳ ರೂಪದಲ್ಲಿ ಬಹಳ ತೂಕದ ಮಾತುಗಳನ್ನು ಬರೆದಿದ್ದಾರೆ. ಅವುಗಳು ನೆಲದ ಎಲ್ಲರ ಅಂತರಂಗಕ್ಕೆ ತಟ್ಟುವಂತಿವೆ ಜೊತೆಗೆ ನಮ್ಮ ಆತ್ಮಸಾಕ್ಷಿಯನ್ನು ಕೆಣಕುವಂತಿವೆ. ರಾಘವೇಂದ್ರ ಪಾಟೀಲು ಹೀಗೆ ಬರೆಯುತ್ತಾರೆ. “ ಸಮಾಜವನ್ನು ಮಾನುಷ ಧರ್ಮದ- ಲೌಕಿಕ ಅಧ್ಯಾತ್ಮಗಳು ಒಂದನ್ನೊಂದು ಕಳೆದುಕೊಳ್ಳದಂತಹ ದಾರಿಯಲ್ಲಿ ಮುನ್ನೆಡೆಸಬೇಕಾದ  ಮಠಗಳೆಂಬ ಧಾರ್ಮಿಕ ಸಂಸ್ಥೆಗಳು ಇಂದು ರಕ್ತಪಾತದ ಮಾತುಗಳನ್ನಾಡುತ್ತಿವೆ. ಮತ್ತೊಂದು ನಂಬಿಕೆಯ ಬಗೆಗೆ ಆಡಬಾರದ ಅಸಾಂಸ್ಕತಿಕ ಮಾತುಗಳನ್ನು ಉಗ್ಗಡಿಸುತ್ತಿವೆ. ನಮ್ಮ ವಾದಗಳನ್ನು ಪ್ರತಿಪಾದಿಸಲು ನಾವು ಬಳಸುವ ಭಾಷೆ ಮತ್ತು ತರ್ಕ ಇತ್ಯಾತ್ಮಕತೆಗಳನ್ನು ಆಧರಿಸುವ ಬದಲು ನ್ಭೆತ್ಯಾತ್ಮಕತೆಯನ್ನೇ ನಂಬಿಕೊಳ್ಳುತ್ತಿರುವುದು ಅತ್ಯಂತ ಅಘಾತಕಾರಿಯಾದ ಸಂಗತಿಯಾಗಿದೆ. ನಮ್ಮ ನಂಬಿಕೆಯ ಹಿನ್ನಲೆಯಲ್ಲಿ ಇಂತಿಂತಹ ವಾಸ್ತವಗಳಿವೆ ಎಂದು ಹೇಳುವುದು ಉಚಿತವಾದ ಸಂಗತಿಯಾಗಿದೆ. ಬಗೆಗಿನ ಕುರಿತು  ತಮ್ಮ ಸಂದೇಹ, ಸಂಶಯಗಳನ್ನು ಹೇಳಲಿ, ಚರ್ಚೆ ನಡೆಯಬೇಕಾದ್ದು ರೀತಿಯಲ್ಲಿ. ಭಾರತೀಯ ಆಧುನಿಕ ಸಮಾಜವು ಧರ್ಮ ಎಂಬ ಪರಿಕಲ್ಪನೆಯನ್ನು ಸಂಪೂರ್ಣವಾಗಿ ವಿಕೃತಗೊಳಿಸಿಬಿಟ್ಟಿದೆ. ಭಾರತೀಯ ನಂಬಿಕೆಯಂತೆ ಧರ್ಮ ಎನ್ನುವುದು ಅತ್ಯನ್ನತ ಆದರ್ಶದ ನೆಲೆಯಲ್ಲಿ, ಮಾನಸ ಲೋಕದ, ಅಂತಃಕರಣದ ಸ್ಥಿತಿ.ಬಿದ್ದವರನ್ನು ಎತ್ತಿನಿಲ್ಲಿಸುವ, ನಡೆಯ ಕಲಿಸುವ ಎಲ್ಲರನ್ನೂ ಅಪ್ಪಿಕೊಳ್ಳುವ ಮಾನಸಿಕ ಸ್ಥಿತಿಯ ನಿರೂಪಣೆ ಅದು.’

ರಾಘವೇಂದ್ರ ಪಾಟೀಲರ ಮೇಲಿನ ಮಾತುಗಳನ್ನು ಆಧಾರವಾಗಿ ಇಟ್ಟುಕೊಂಡು, ಚಿತ್ರ ನಟಿಯೊಬ್ಬಳ ಮೂಗು ಕತ್ತರಿಸಿದವರಿಗೆ ಅಥವಾ ನಿರ್ದೇಶಕನ ತಲೆ ಕಡಿದವರಿಗೆ ಕೋಟಿ ಗಟ್ಟಲೆ ಬಹುಮಾನ ಘೋಷಿಸುವ ಹರ್ಯಾಣದ ಬಿ.ಜೆ.ಪಿ. ಮುಖ್ಯಸ್ಥನ ಮಾತುಗಳಾಗಲಿ, ನರೇಂದ್ರ ಮೋದಿಯವರ ವಿರುದ್ಧ ಮಾತನಾಡಿದವರಿಗೆ ಅಥವಾ ಕೈ ಎತ್ತಿದವರಿಗೆ ಕೈ ಕತ್ತರಿಸುತ್ತೇವೆ ಎನ್ನುವ ಮಾತುಗಳಾಗಲಿ ಹಾಗೂ ನನ್ನ ತಂದೆಯ ಜೀವಕ್ಕೆ ಅಪಾಯವಾದರೆ ನರೇಂದ್ರ  ಮೋದಿಯವರ ಚರ್ಮ ಸುಲಿಯುತ್ತೇನೆ ಎನ್ನುವ ಲಾಲು ಪ್ರಸಾದ್ ಯಾದವ್ ಪುತ್ರನ ಆಕ್ರೋಶಭರಿತ ಅವಿವೇಕದ ಮಾತುಗಳನ್ನು ಯಾವ ನೆಲೆಯಲ್ಲಿ ನಾವು ಗ್ರಹಿಸಬೇಕುಭಾರತದ ಹಿಂದೂ ಧರ್ಮ ಮತ್ತು ಸಂಸ್ಸøತಿಯ ರಕ್ಷಣೆಗೆ ಕಟಿಬದ್ಧರಾಗಿರುವ ರಾಜಕೀಯ ಪಕ್ಷಗಳ ಕಾರ್ಯಕರ್ತರಿಗೆ ಅಥವಾ ಅವುಗಳ ನೇತಾರರಿಗೆ ಇವುಗಳು ಶೋಭೆ ತರುವಂತಹ ಮಾತುಗಳಲ್ಲ. ಇನ್ನು ಖಾವಿ ತೊಟ್ಟು ಅನ್ಯಧರ್ಮಗಳ ಮೇಲೆ ಕತ್ತಿ ಜಳಪಿಸುವ, ತಲೆಕಡಿಯುವ ಅಸಂಸ್ಕø ಮಾತಗಳನ್ನಾಡುವ ಸಾಧು- ಸಂತರೆಂಬ ಮತಿಹೀನರು ಧರ್ಮ ಸಂಸದ್ ಎಂಬ ತುಂಬಿದ ಸಭೆಯಲ್ಲಿ ಮಾತನಾಡುವಾಗ ಅಂತಹವರ ಕಿವಿ ಹಿಂಡಲಾರದೆ, ತಮ್ಮ ನವರಂದ್ರಗಳನ್ನು ಮುಚ್ಚಿಕೊಂಡು, ಕಿವುಡರಂತೆ, ಕುರುಡರಂತೆ ಕುಳಿತು ಸಾಕ್ಷಿಯಾದ ನಮ್ಮ ಧರ್ಮಧಿಕಾರಿಗಳು ಹಾಗೂ  ಮಠ-ಮಾನ್ಯಗಳ ಮುಖ್ಯಸ್ಥರು ಮತ್ತು ಮಠಾಧೀಶರು ಒಮ್ಮೆ ತಮ್ಮ ಅಂತರಂಗವನ್ನು ತೆರೆದುಕೊಂಡು ತಮ್ಮೊಳಗೆ ಮನೆ ಮಾಡಿರುವುದು  ದೆವ್ವವೊ? ಅಥವಾ ದೇವರೊ? ಎಂದು ಪರೀಕ್ಷಿಸಿಕೊಳ್ಳುವುದು ಒಳಿತು. ಇಂತಹ ಎಡಬಿಡಂಗಿಯ, ಆತ್ಮವಂಚನೆಯ ಧಾರ್ಮಿಕ ಮುಖಂಡರಿಗೋಸ್ಕರ ನನ್ನ ಮಿತ್ರ ನಟರಾಜ ಬೂದಾಳರು ಸಂಪಾದಿಸಿರುವ ತತ್ವ ಪದಕಾರರ ಕೃತಿಗಳಲ್ಲಿ ಒಬ್ಬ ಅಜ್ಞಾತ ತತ್ವ ಪದಕಾರ ಹಾಡಿರುವ ಕೆಳಗಿನ ಪದವನ್ನು ನಾವೆಲ್ಲರೂ ಸೇರಿ ಮಠಾಧೀಶರಿಗೆ  ತಲುಪಿಸಬೇಕಿದೆ.
ಬಲ್ಲರೆ ಯೋಗಿಯಾಗಿ; ಇನಿ
ತಿಲ್ಲದಿದ್ದರೆ ಭೋಗಿಯಾಗಿರಯ್ಯ.
ಎವೆಯಲುಗದೆ ಲಿಂಗವ ನೋಡಿ; ನೋಡದಿರೆ
ನವಯವ್ವನೆಯ ಭಾವವಿರಲಿ ತವೆಯದೆ.
ಶಿವ ಮಂತ್ರವ ಕೇಳಿ; ಕೇಳದಿರೆ
ನವರಸ ಲಲ್ಲೆದೈನ್ಯವ ಕೇಳಿರಯ್ಯ.
ಅಲಸದೆ ಲಿಂಗಪೂಜೆಯ ಮಾಡಿ; ಇಲ್ಲದಿದ್ದರೆ
ಮೊಲೆಯ ಮೇಲಣ ಕೈಯ ತೆಗೆಯದಿರಿ.
ಒಲಿದೊಲಿದು ಲಿಂಗ ಪ್ರಸಾದವ ಕೊಳ್ಳಿ; ಕೊಳ್ಳದಿರೆ
ಚೆಲ್ವೆ ಚೆಂದುಟಿಯಾಮೃತ್ವವನ್ನುಣ್ಣಿರಯ್ಯಾ.
ತತ್ವ ಪದವು ಇಂದಿನ ಭಾರತದ ನೀತಿಗೆಟ್ಟ ದೇಶ ಭಕ್ತರಿಗೆ ಮತ್ತು ಸೋಗಲಾಡಿತನದ ಸಾದು-ಸಂತರು ಹಾಗೂ ಮಠಾಧಿಶರಿಗಾಗಿ ಬರೆದ ನಾಡಗೀತೆಯಂತಿದೆ.

( ಕರಾವಳಿ ಮುಂಜಾವು ಪತ್ರಿಕೆಯ “ ಜಗದಗಲಅಂಕಣ ಬರಹ)